ಪದ-ಶ್ರಾವ್ಯ

ಈಗ ಆಡಿಯೋ ಟಚ್!

Archive for March 2011


Preventing Dementia

Saturday, March 26th, 2011
DefaultTag | Comments

ದಿನಾಂಕ  27 ಮಾರ್ಚ್ 2011ರ ಸಂಚಿಕೆ...

ಅರಳುಮರುಳನ್ನು ಸರಳವಾಗಿ ಉರುಳಿಸಬಹುದು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ರವತ್ತರ ಅರಳುಮರುಳು ಎನ್ನುತ್ತದೆ ಪ್ರಸಿದ್ಧ ನುಡಿಗಟ್ಟು. ಹಾಗಂತ ಎಲ್ಲರಿಗೂ ಅದು ಅನ್ವಯಿಸುತ್ತದೆ ಎಂದೇನಿಲ್ಲ. ಕೆಲವರು ಅರವತ್ತಾದರೂ ಶಾರೀರಿಕವಾಗಿ, ಮಾನಸಿಕವಾಗಿ ನವತರುಣರಂತೆ ಲವಲವಿಕೆಯಿಂದ ಇರುತ್ತಾರೆ. ಅವರಲ್ಲಿ ಜೀವನೋತ್ಸಾಹ ತುಂಬಿ ತುಳುಕುತ್ತಿರುತ್ತದೆ. ಮತ್ತೆ ಕೆಲವರಿಗೆ ಅರವತ್ತಾಗುವುದಕ್ಕೆ ಮೊದಲೇ ವೃದ್ಧಾಪ್ಯ ಆವರಿಸುವುದೂ ಇದೆ. ಆದರೂ ಒಟ್ಟಾರೆಯಾಗಿ ವ್ಯಕ್ತಿಯ ಜೀವನದಲ್ಲಿ ಅರವತ್ತು ವಯಸ್ಸೆಂದರೆ ಒಂದು ಹಂತ. ಬದುಕಿನ ಸಂಕ್ರಮಣ ಘಟ್ಟ. ಅದು ನಿವೃತ್ತಿಯ ವಯಸ್ಸೂ ಆಗಿರುವುದು, ಅಥವಾ ಒಂದು ಸಂವತ್ಸರಚಕ್ರ ಅಷ್ಟೊತ್ತಿಗೆ ಮುಗಿಯುವುದು ಅಂಥದೊಂದು ಸಾರ್ವತ್ರಿಕ ದೃಷ್ಟಿಕೋನಕ್ಕೆ ಕಾರಣವಿರಬಹುದು. ಸರಿಯಾಗಿ ಅರವತ್ತಕ್ಕೇ ಅಂತಲ್ಲದಿದ್ದರೂ ಅರಳುಮರುಳಿನ ಲಕ್ಷಣಗಳು ಅಷ್ಟಿಷ್ಟಾದರೂ ಕಂಡುಬರುವುದು ಸಹಜವೇ. ಕಾರಣವೇನೆಂದರೆ ವಯಸ್ಸಾದಂತೆಲ್ಲ ನಮ್ಮ ಮೆದುಳಿನ ಕ್ರಿಯಾಶೀಲತೆ ಕ್ಷೀಣಿಸುತ್ತದೆ. ಕೆಲವರಲ್ಲಿ ಅಲ್ಪಸ್ವಲ್ಪ, ಇನ್ನುಳಿದವರಲ್ಲಿ ತುಸು ಹೆಚ್ಚು. ಮತ್ತೂ ಅಧಿಕವಾದರೆ ಅದು ಡಿಮೆನ್ಷಾ (Dementia) ಅಂತಲೂ, ತೀರಾ ಗಂಭೀರ ಪರಿಸ್ಥಿತಿಯಾದರೆ ಆಲ್‌ಝೈಮರ್ಸ್ (Alzheimer's) ಕಾಯಿಲೆ ಎಂದೂ ಗುರುತಿಸಲ್ಪಡುತ್ತದೆ.

ಹೆಚ್ಚಾಗಿ ‘ಬೆಂಕಿ ಬಿದ್ದಮೇಲೆ ಬಾವಿ ತೋಡುವ’ ಜಾಯಮಾನ ನಮ್ಮೆಲ್ಲರದು. ಆದರೆ ಡಿಮೆನ್ಷಾ, ಆಲ್‌ಝೈಮರ್ಸ್ ಮುಂತಾದ ಕಾಯಿಲೆಗಳ ವಿಷಯದಲ್ಲಿ ಹಾಗೆ ಮಾಡುವುದು ಸರ್ವಥಾ ಸಾಧುವಲ್ಲ ಎನ್ನುತ್ತಾರೆ ವಿಜ್ಞಾನಿಗಳು ಮತ್ತು ವೈದ್ಯರು. ಮೂವತ್ತು ಅಥವಾ ನಲ್ವತ್ತರ ವಯಸ್ಸಿನಿಂದಲೇ ಸರಳವಾದ ಕೆಲವು ಜೀವನವಿಧಾನಗಳನ್ನು ಅಳವಡಿಸಿಕೊಂಡರೆ ಮೆದುಳಿನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಕಾಪಾಡಿಕೊಳ್ಳಬಹುದಂತೆ. ಅಮೆರಿಕದ ಪಿಟ್ಸ್‌ಬರ್ಗ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ನ್ಯೂರೊಸೈಕಾಲಜಿಸ್ಟ್ ಆಗಿರುವ ಡಾ. ಪೌಲ್ ನಸ್‌ಬೌಮ್ ಹೇಳುವಂತೆ ಇಪ್ಪತ್ತು ಅಂಶಗಳನ್ನು ಜೀವನದಲ್ಲಿ ಆದಷ್ಟು ಬೇಗ ಅಳವಡಿಸಿಕೊಂಡರೆ ಅರಳುಮರುಳನ್ನಷ್ಟೇ ಅಲ್ಲ, ಡಿಮೆನ್ಷಾದಂಥ ಕಾಯಿಲೆಗಳನ್ನೂ ಸರಳವಾಗಿ ಉರುಳಿಸಿಬಿಡಬಹುದಂತೆ!

ಯಾವುವು ಆ ಇಪ್ಪತ್ತಂಶಗಳು? ಡಾ.ನಸ್‌ಬೌಮ್ ಅವರದೇ ಮಾತುಗಳಲ್ಲಿ ತಿಳಿದುಕೊಳ್ಳೋಣ (ವೈಯಕ್ತಿಕವಾಗಿ ನಾನು “ಹಾಗೆ ಮಾಡಿ ಹೀಗೆ ಮಾಡಿ... ಅದನ್ನು ಮಾಡಿ, ಇದನ್ನು ಮಾಡಬೇಡಿ...” ರೀತಿಯ ಆದೇಶ/ಉಪದೇಶ ಧಾಟಿಯಲ್ಲಿ ಅಂಕಣ ಬರೆಯುವುದನ್ನು ಇಷ್ಟಪಡುವುದಿಲ್ಲ. ಆದರೆ ಇವು ತಜ್ಞರ ಸಲಹೆಯ ಮಾತುಗಳಾದ್ದರಿಂದ ಪರಿಣಾಮಕಾರಿಯಾಗಿರಬೇಕು ಎಂಬ ದೃಷ್ಟಿಯಿಂದ ಆ ಧಾಟಿಯನ್ನು ಉಳಿಸಿಕೊಂಡಿದ್ದೇನೆ).

1. ಸಂಘಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ಸೇರಿಕೊಳ್ಳಿ. ಈಗಿನಿಂದಲೇ ಸ್ವಯಂಸೇವಕರಾಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಮುಂದೆ ನಿವೃತ್ತಿಯಾದಾಗ ನಿಷ್ಪ್ರಯೋಜಕ ವ್ಯಕ್ತಿ ಎಂದೆನಿಸಿಕೊಳ್ಳುವುದು ತಪ್ಪುತ್ತದೆ.

2. ಒಂದೆರಡು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮೆದುಳನ್ನು ಚುರುಕಾಗಿಟ್ಟುಕೊಳ್ಳುವುದಕ್ಕೆ ಹವ್ಯಾಸಗಳು ತುಂಬಾ ನೆರವಾಗುತ್ತವೆ.

3. ದಿನಕ್ಕೆ ಒಂದಿಷ್ಟು ನಿಮಿಷಗಳವರೆಗಾದರೂ ಸರಿ, ನಿಮ್ಮ ಎಡಗೈಯಿಂದ (ನೀವು ಮೂಲತಃ ಎಡಚರಾದರೆ ಬಲಗೈಯಿಂದ) ಬರೆಯುವ ಅಭ್ಯಾಸ ಶುರುಹಚ್ಚಿ. ಇದರಿಂದ ನಿಮ್ಮ ಮೆದುಳಿನ ಉಳಿದರ್ಧ ಭಾಗದ ಕೋಶಗಳು ಜಾಗ್ರತವಾಗುವುದಕ್ಕೆ ಅನುಕೂಲವಾಗುತ್ತದೆ.

4. ಸಾಧ್ಯವಿದ್ದರೆ ಯಾವುದಾದರೂ ಡ್ಯಾನ್ಸ್ ತರಗತಿಗಳಿಗೆ ಸೇರಿಕೊಳ್ಳಿ. ಡ್ಯಾನ್ಸ್‌ನಿಂದ ದೈಹಿಕ ವ್ಯಾಯಾಮವೂ ಆಗುತ್ತದೆ, ಮೆದುಳಿಗೂ ಕೆಲಸ ಸಿಗುತ್ತದೆ. ಐನೂರು ಮಂದಿಯನ್ನೊಳಗೊಂಡಿದ್ದ ಒಂದು ಅಧ್ಯಯನದಲ್ಲಿ, ವಾರಕ್ಕೆ ಮೂರು ಅಥವಾ ನಾಲ್ಕು ಸಲ ಡ್ಯಾನ್ಸ್ ಮಾಡುವವರಿಗೆ ಡಿಮೆನ್ಷಾ ರೋಗ ತಗಲುವ ಸಾಧ್ಯತೆಯು ಉಳಿದವರಿಗಿಂತ 75 ಶೇಕಡಾದಷ್ಟು ಕಡಿಮೆ ಎಂದು ಕಂಡುಬಂದಿದೆ.

5. ಹೂತೋಟ ಬೆಳೆಸುವುದು (ಗಾರ್ಡನಿಂಗ್) ಒಂದು ಒಳ್ಳೆಯ ಹವ್ಯಾಸ. ಇದು ದಣಿವನ್ನು ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವುದಷ್ಟೇ ಅಲ್ಲ, ಹೂಗಿಡಗಳ ಪಾತಿಗಳನ್ನು ಹೇಗೆ ವಿನ್ಯಾಸಗೊಳಿಸಬೇಕು ಅಂತೆಲ್ಲ ಮೆದುಳಿಗೂ ಕೆಲಸ ಇರುವುದರಿಂದ ತುಂಬ ಸಹಕಾರಿ. ನ್ಯೂಜಿಲೇಂಡ್‌ನಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಗಾರ್ಡನಿಂಗ್ ಅಭ್ಯಾಸವುಳ್ಳವರಿಗೆ ಡಿಮೆನ್ಷಾ ಬರುವ ಸಂಭವನೀಯತೆ ಕಡಿಮೆ.

6. ದಿನಕ್ಕೆ ಹತ್ತುಸಾವಿರ ಹೆಜ್ಜೆಗಳಾದರೂ ನಡೆಯಿರಿ. ಇದರಿಂದ ಮೆದುಳಿಗೆ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಡಿಮೆನ್ಷಾ ರಿಸ್ಕ್ ಕಡಿಮೆಯಾಗುತ್ತದೆ.

7. ಪ್ರತಿದಿನವೂ ಸ್ವಲ್ಪ ಹೊತ್ತನ್ನು ಓದು ಮತ್ತು ಬರಹಕ್ಕೆ ಮೀಸಲಾಗಿಡಿ. ಓದುವ ಕ್ರಿಯೆಯಲ್ಲಿ ಮೆದುಳಿಗೆ ಸಂಸ್ಕರಣ ಮತ್ತು ಸಂಗ್ರಹಣೆಯ ಕೆಲಸವಾಗುವುದರಿಂದ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಬರವಣಿಗೆಯೂ ಅಷ್ಟೇ. ಕಾಪಿಬರೆಯುವಂತೆ ಬರೆಯುವುದಕ್ಕಿಂತ ಯೋಚಿಸಿ ಬರೆದರೆ ಮತ್ತೂ ಒಳ್ಳೆಯದು.

8. ಹೆಣಿಗೆ (knitting) ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಅದರಲ್ಲಿ ಎರಡೂ ಕೈಗಳಿಗೆ ಕೆಲಸವಾದ್ದರಿಂದ ಮೆದುಳಿನ ಎರಡೂ ಭಾಗಗಳು ಜಾಗ್ರತವಾಗುತ್ತವೆ. ಹೆಣಿಗೆ ಅಥವಾ ಕಸೂತಿಯಿಂದಾದ ರಚನೆಗಳು ಮನಸ್ಸಿಗೆ ಸಂತೋಷವನ್ನೂ ಕೊಡುತ್ತವೆ.

9. ಹೊಸ ಭಾಷೆಯೊಂದನ್ನು ಕಲಿತುಕೊಳ್ಳಿ. ನಿಮ್ಮ ಭಾಷೆಗೂ ಅದಕ್ಕೂ ಹೋಲಿಕೆ ವ್ಯತ್ಯಾಸಗಳನ್ನು ಗುರುತಿಸುವ ಕೆಲಸ ಮೆದುಳಿಗೆ ಒಳ್ಳೆಯದಾಗಿ ಪರಿಣಮಿಸುತ್ತದೆ. ಸಂಜ್ಞೆಗಳ ಭಾಷೆ (sign language) ಕಲಿಕೆ ಮತ್ತಷ್ಟು ಒಳ್ಳೆಯದು. ಹೆಚ್ಚುಹೆಚ್ಚು ಭಾಷೆಗಳನ್ನು ಕಲಿತಷ್ಟೂ ವ್ಯಕ್ತಿಯ ಐ.ಕ್ಯೂ ಹೆಚ್ಚುತ್ತದೆಯೆಂದು ತಿಳಿದುಬಂದಿದೆ.

10. ಚೆಸ್, ಮೊನೊಪಾಲಿ, ಸ್ಕ್ರಾಬಲ್‌ನಂಥ ಬೋರ್ಡ್‌ಗೇಮ್ಸ್ ಆಡಿ. ಇದರಿಂದ ಮೆದುಳಿಗೂ ಕೆಲಸ, ಇನ್ನೊಬ್ಬರ ಒಡನಾಟ ಸಿಕ್ಕಿದಂತೆಯೂ ಆಗುತ್ತದೆ.

11. ಯಾವುದಾದರೂ ಹೊಸ ಕೋರ್ಸ್ ಅಥವಾ ತರಬೇತಿ ಪಡೆದುಕೊಳ್ಳಿ. ಕಲಿಕೆಯಿಂದ ಮೆದುಳಿನಲ್ಲಿ ಚೋದಕಗಳ ಸ್ರಾವ ಹೆಚ್ಚುತ್ತದೆ; ಮತ್ತೆ, ಶಿಕ್ಷಣವೆಂದ ಮೇಲೆ ಜೀವನದಲ್ಲಿ ಒಂದಲ್ಲ ಒಂದು ವೇಳೆಯಲ್ಲಿ ಉಪಯೋಗಕ್ಕೂ ಬರುತ್ತದೆ.

12. ಸಂಗೀತ ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಮೆಲುದನಿಯ ಶಾಸ್ತ್ರೀಯ ಸಂಗೀತ ಮತ್ತೂ ಚೆನ್ನ. ಮೆದುಳಿನ ಎರಡೂ ಭಾಗಗಳಿಗೆ ತಾಳಮೇಳ ಮೂಡಿಸುವುದಕ್ಕೆ ಸಂಗೀತಶ್ರವಣ ತುಂಬ ಒಳ್ಳೆಯದು.

13. ಯಾವುದಾದರೂ ಸಂಗೀತವಾದ್ಯ ನುಡಿಸುವುದನ್ನು ಕಲಿಯಿರಿ. ಬಾಲ್ಯದಲ್ಲಾದಷ್ಟು ಸುಲಭವೆನಿಸದಿದ್ದರೂ ಮೆದುಳಿನ ಜಡತ್ವ ನಿವಾರಣೆಗೆ ಒಳ್ಳೆಯ ಉಪಾಯ.

14. ಪ್ರವಾಸ ಮಾಡಿ. ಅದೇನೂ ದೂರದ ಊರು ಅಥವಾ ವಿದೇಶಕ್ಕೇ ಆಗಬೇಕಂತಿಲ್ಲ, ನಿಮ್ಮೂರಿನ ಆಸುಪಾಸಿನಲ್ಲೇ ಹೊಸಹೊಸ ಜಾಗಗಳಿಗೆ ಭೇಟಿಕೊಟ್ಟರೂ ಆಗುತ್ತದೆ. ಅಂತೂ ಮೆದುಳಿಗೆ ಕೆಲಸ ಇರಬೇಕು. ಲಂಡನ್‌ನ ಟ್ಯಾಕ್ಸಿ ಡ್ರೈವರ್‌ಗಳ ಮೆದುಳು ಹೆಚ್ಚು ಆರೋಗ್ಯಕರವಾಗಿರುವುದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಬೇರೆಬೇರೆ ಜಾಗಗಳ ಮಾಹಿತಿಯನ್ನು ಸಂಗ್ರಹಿಸಿ ಉಪಯೋಗಿಸುವ ಕೆಲಸ ನಿರಂತರ ನಡೆಯುವುದರಿಂದ ಅದು ಅವರ ಮೆದುಳನ್ನು ಸುಪರ್ದಿಯಲ್ಲಿಟ್ಟಿರುತ್ತದೆ.

15. ದೈನಂದಿನ ಪ್ರಾರ್ಥನೆಗೆ ಸ್ವಲ್ಪ ಸಮಯವನ್ನಾದರೂ ಮೀಸಲಿಡಿ. ಮನಸ್ಸಿಗೆ ಶಾಂತಿ ಮತ್ತು ಸಮತೋಲನ, ತನ್ಮೂಲಕ ಆನಂದ ಮತ್ತು ಆರೋಗ್ಯಭಾಗ್ಯ. ಇದಕ್ಕೆ ಪ್ರಾರ್ಥನೆಯಂಥ ಸುಲಭಮಾರ್ಗ ಬೇರೆ ಇಲ್ಲ.

16. ಧ್ಯಾನ (ಮೆಡಿಟೇಷನ್) ಸಹ ಅತ್ಯಗತ್ಯ. ಪ್ರಾಪಂಚಿಕ ಜಂಜಡಗಳಿಂದ ಮನಸ್ಸಿಗೆ ಕಿಂಚಿತ್ತಾದರೂ ಮುಕ್ತಿ ಸಿಗುತ್ತದೆ.

17. ಯಥಾಯೋಗ್ಯ ಪ್ರಮಾಣದಲ್ಲಿ ನಿದ್ದೆ ಮಾಡಿ. ನಿದ್ರಾಹೀನತೆಯು ಡಿಮೆನ್ಷಾ ಸೇರಿದಂತೆ ಹಲವು ರೋಗಗಳ ಕಾರಣವೂ ಹೌದು ಲಕ್ಷಣವೂ ಹೌದು.

18. ಬಾದಾಮಿ ಮತ್ತು ಅಕ್ರೂಟ್‌ನಂಥ ಪೌಷ್ಟಿಕ ಬೀಜಗಳ ಸೇವನೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಮೀನು ಮತ್ತಿತರ ಸಾಗರೋತ್ಪನ್ನಗಳ ಸೇವನೆಯೂ ಮೆದುಳನ್ನು ಗಟ್ಟಿಮುಟ್ಟಾಗಿ ಇಡುತ್ತದೆ.

19. ಹಣ್ಣು-ತರಕಾರಿಗಳನ್ನು ಯಥೇಚ್ಛ ಸೇವಿಸಿ. ಇದರಿಂದ ಮೆದುಳಿನ ಕೋಶಗಳು ಸವೆಯುವುದು ಮತ್ತು ನಾಶವಾಗುವುದು ಕಡಿಮೆಯಾಗುತ್ತದೆ.

20. ದಿನದಲ್ಲಿ ಒಂದುಹೊತ್ತಾದರೂ ಮನೆಮಂದಿಯೊಟ್ಟಿಗೆ ಅಥವಾ ಸ್ನೇಹಿತರ ಒಟ್ಟಿಗೆ ಸೇರಿ ಊಟ ಮಾಡಿ. ಇದರಿಂದ ನೀವು ಸಾವಕಾಶವಾಗಿ, ಪರಸ್ಪರ ಆತ್ಮೀಯ ಭಾವನೆಯಲ್ಲಿ, ಆರೋಗ್ಯಕರವಾಗಿ ಉಣ್ಣುವುದು ಸಾಧ್ಯವಾಗುತ್ತದೆ. ಮೆದುಳು ಲವಲವಿಕೆಯಿಂದ ಇರುವಂತಾಗುತ್ತದೆ.

ಡಾ. ನಸ್‌ಬೌಮ್ ಉಪದೇಶದ ಇವಿಷ್ಟೂ ಸೂತ್ರಗಳು ಸುಲಭವಾಗಿಯೇ ಇವೆ ಅಂತನಿಸುವುದಿಲ್ಲವೇ? ಇವುಗಳನ್ನು ಪಾಲಿಸಿದರೆ ಆಗುವುದಿದ್ದರೆ ಏನಾದರೂ ಒಳಿತೇ ಹೊರತು ಕೆಟ್ಟದೇನೂ ಅಲ್ಲ. ಅಂದಮೇಲೆ ಅಳವಡಿಸಿಕೊಳ್ಳುವುದಕ್ಕೆ ಹಿಂದೆಮುಂದೆ ನೋಡಬೇಕಾದ್ದಿಲ್ಲ. ಇಪ್ಪತ್ತರಲ್ಲಿ ಹತ್ತನ್ನಾದರೂ ಇವತ್ತಿನಿಂದಲೇ ಶುರುಹಚ್ಚಿಕೊಳ್ಳೋಣ. ಏನಂತೀರಿ?

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Angushtha Saahithya and Thumb Impression

Saturday, March 19th, 2011
DefaultTag | Comments

ದಿನಾಂಕ  20 ಮಾರ್ಚ್ 2011ರ ಸಂಚಿಕೆ...

ಅಂಗುಷ್ಠ ಸಾಹಿತ್ಯವೂ ಹೆಬ್ಬೆಟ್ಟಿನ ಸಹಿಯೂ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಮೊಬೈಲ್ ಫೋನಿನ ಪುಟ್ಟಪುಟ್ಟ ಕೀಲಿಗಳ ಮೇಲೆ ಎರಡೂ ಕೈಗಳ ಹೆಬ್ಬೆರಳುಗಳನ್ನಷ್ಟೇ ಆಡಿಸಿ ಟಪಟಪ ಟೈಪಿಸಿ ಎಸ್ಸೆಮ್ಮೆಸ್ ಕಳಿಸ್ತೇವಲ್ಲಾ ಅದನ್ನೇ ನಾನು ಅಂಗುಷ್ಠಸಾಹಿತ್ಯ ಎಂದು ಕರೆದದ್ದು. ಕೆಲವರಿಗಂತೂ ಬೆಳಗಿನ ತಿಂಡಿಯ ಪ್ರವರದಿಂದ ಹಿಡಿದು, ಹೀಗೇ ಸುಮ್ಮನೆ ನಡೆದುಕೊಂಡು ಹೋಗುವಾಗ ಕಂಡ ದೃಶ್ಯ, ಥಟ್ಟನೆ ಹೊಳೆದ ಒಂದು ಐಡಿಯಾ, ತುಟಿಯಂಚಿನಲ್ಲಿ ನಗೆಮಿಂಚು ಮೂಡಿಸಿದ ಒಂದು ಜೋಕು, ಅಥವಾ ಉಮ್ಮಳಿಸಿ ಬಂದ ಒಂದು ಗಾಢ ಭಾವನೆ- ಏನನ್ನೇ ಆದರೂ ಸ್ನೇಹಿತರೊಡನೆ ಹಂಚಿಕೊಳ್ಳುವ ಮನಸ್ಸಾದರೆ ಮೊಬೈಲ್‌ಫೋನ್ ಮೇಲೆ ಹೆಬ್ಬೆರಳುಗಳ ನರ್ತನ ಶುರು. ಈಗೀಗಂತೂ ವೃತ್ತಪತ್ರಿಕೆಗಳು, ಟಿವಿ/ರೇಡಿಯೊ ವಾಹಿನಿಗಳು ಕೂಡ ಓದುಗ/ಕೇಳುಗರಿಂದ ಅಭಿಪ್ರಾಯ ಸಂಗ್ರಹಣೆ, ದೂರು ದಾಖಲು, ಕೋರಿಕೆ ಸಲ್ಲಿಕೆ ಮುಂತಾಗಿ ಎಲ್ಲದಕ್ಕೂ ಎಸ್ಸೆಮ್ಮೆಸ್ ವಿಧಾನವನ್ನೇ ಹೆಚ್ಚುಹೆಚ್ಚು ಬಳಸುವುದರಿಂದ ಅಲ್ಲೂ ಭರಪೂರವಾಗಿ ಅಂಗುಷ್ಠಸಾಹಿತ್ಯಕೃಷಿ. ನಿಜಕ್ಕೂ ಆಶ್ಚರ್ಯವಾಗುತ್ತದೆ, ‘ಹೆಬ್ಬೆಟ್ಟು’ ಎಂದರೆ ನಿರಕ್ಷರಕುಕ್ಷಿ ಎಂಬ ಅರ್ಥವಿದ್ದ ಕಾಲವೊಂದಿತ್ತು. ಈಗ ಅಕ್ಷರಸ್ಥರು ಅನಕ್ಷರಸ್ಥರು ಎನ್ನದೆ ಎಲ್ಲರ ಕೈಯಲ್ಲೂ ಮೊಬೈಲ್‌ಫೋನು. ಹೆಬ್ಬೆಟ್ಟಿಲ್ಲದೆ ಅದರ ಬಳಕೆ ಸಾಧ್ಯವಿಲ್ಲ. ಹಾಗಾಗಿ ಸಣ್ಣ-ದೊಡ್ಡ ಪ್ರಮಾಣದಲ್ಲಿ ಎಲ್ಲರೂ ಅಂಗುಷ್ಠ ಸಾಹಿತಿಗಳೇ.

ಹಾಗೆ ನೋಡಿದರೆ ಮೊಬೈಲ್‌ಫೋನ್ ಬಳಕೆ ಅಂತಷ್ಟೇ ಅಲ್ಲ ಹೆಬ್ಬೆರಳಿಲ್ಲದಿದ್ದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚಿನವನ್ನು ಮಾಡುವುದು ಸಾಧ್ಯವೇ ಇಲ್ಲ. ಯಾವಾಗಾದರೂ ಒಮ್ಮೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಾಗ ನಮಗೆ ಅದರ ಅರಿವಾಗುತ್ತದೆ. ಟಿವಿ ಮುಂದೆ ಕುಳಿತು ರಿಮೋಟ್ ಕಂಟ್ರೋಲ್‌ನ ಗುಂಡಿಗಳನ್ನು ಒತ್ತುವುದರಿಂದ ಹಿಡಿದು ಪದ್ಮಾಸನ ಹಾಕಿ ಜಪಮಾಲೆಯ ಮಣಿಗಳನ್ನು ಎಣಿಸುವುದರವರೆಗೂ ಹೆಬ್ಬೆರಳಿಲ್ಲದೆ ಏನೂ ನಡೆಯದು. ಹಾಗೆಯೇ ಬಿಲ್ಲಿಗೆ ಹೆದೆಯೇರಿಸಿ ಬಾಣ ಬಿಡುವುದಕ್ಕೂ ಸಹ ಹೆಬ್ಬೆರಳು ಬೇಕೇಬೇಕು ಎಂದು ದ್ರೋಣಾಚಾರ್ಯರಿಗೆ ಗೊತ್ತಿತ್ತು; ಅದರಿಂದಲೇ ಏಕಲವ್ಯನ ಹೆಬ್ಬೆರಳಿಗೆ ಬಂತು ಕುತ್ತು. ಆತ ಅಷ್ಟು ಕಷ್ಟಪಟ್ಟು ಕಲಿತ ಬಿಲ್ವಿದ್ಯೆಯನ್ನೆಲ್ಲ ಹೆಬ್ಬೆರಳಿನ ರೂಪದಲ್ಲಿ ಅವನಿಂದ ಕಸಿದುಕೊಳ್ಳಲಾಯ್ತು. ಹೆಬ್ಬೆರಳೊಂದಿಲ್ಲದೆ ಇಡೀ ಏಕಲವ್ಯನೇ ನಿಷ್ಪ್ರಯೋಜಕನಾಗಿ ಹೋದ!

ಮಿಕ್ಕೆಲ್ಲ ಜೀವಿಗಳಿಗಿಂತ ಮನುಷ್ಯ ಇಷ್ಟೊಂದು ಮುಂದುವರಿದಿದ್ದಾನೆಂದರೆ ಅದಕ್ಕೆ ಅವನ ಹೆಬ್ಬೆರಳೇ ಕಾರಣ. ಡಾರ್ವಿನ್ ವಿಕಾಸವಾದದಲ್ಲಿ ಅದರ ಪ್ರತಿಪಾದನೆಯಿದೆ. ಕೈಗಳಿಗೆ ಹೆಬ್ಬೆರಳು ಇಷ್ಟು ಪ್ರಬುದ್ಧವಾಗಿ ಬೆಳೆದಿರುವುದು ಮನುಷ್ಯ ಪ್ರಭೇದದಲ್ಲಿ ಮಾತ್ರ. ಆದ್ದರಿಂದ ಜೀವಸಂಕುಲದಲ್ಲಿ ಹೆಬ್ಬೆರಳೇ ಮನುಷ್ಯನ ಐಡೆಂಟಿಟಿ. ಅದು ಜೀವಶಾಸ್ತ್ರೀಯ ದೃಷ್ಟಿಯಾಯ್ತು. ಇನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೂ ಮನುಷ್ಯನ ಜೀವಾತ್ಮ ಎನ್ನುವುದು ಏನಿದೆಯೋ ಅದು ಅಂಗುಷ್ಠ ಗಾತ್ರದ್ದಿರುತ್ತದಂತೆ, ಅಂಗುಷ್ಠದಲ್ಲಿಯೇ ನೆಲೆಸಿರುತ್ತದಂತೆ. ತೈತ್ತಿರೀಯ ಉಪನಿಷತ್ತಿನಲ್ಲಿ ಬರುವ ಒಂದು ಮಂತ್ರ ಹೀಗೆನ್ನುತ್ತದೆ- ‘ಅಂಗುಷ್ಠಮಾತ್ರಃ ಪುರುಷೋಂಗುಷ್ಠಂ ಚ ಸಮಾಶ್ರಿತಃ| ಈಶಸ್ಸರ್ವಸ್ಯ ಜಗತಃ ಪ್ರಭುಃ ಪ್ರೀಣಾತಿ ವಿಶ್ವಭುಕ್||’ ಊಟದ ಕೊನೆಯಲ್ಲಿ ಬಲಗೈಯ ಹೆಬ್ಬೆರಳನ್ನು ನೆಲಕ್ಕೆ ಊರುತ್ತ ಹೇಳುವ ಮಂತ್ರವಿದು. ಅನ್ನ ಕೊಟ್ಟ ದೇವನಿಗೆ ಕೃತಜ್ಞತೆ ಸಲ್ಲಿಸುವ ಪರಿ. ಆಹಾರ ಸ್ವೀಕೃತಿಯ ಬಗ್ಗೆ ಹೆಬ್ಬೆಟ್ಟಿನ ಗುರುತಿನೊಂದಿಗೆ ಕೊಡುವ ರಸೀದಿ ಎಂದು ಹೇಳಿದರೂ ತಪ್ಪಲ್ಲ. ‘ಹೆಬ್ಬೆರಳನ್ನು ಆಶ್ರಯಿಸಿರುವ ಜೀವಾತ್ಮನು ಹೆಬ್ಬೆರಳಿನಷ್ಟು ಗಾತ್ರವನ್ನು ಹೊಂದಿದವನು. ಈತ ಪ್ರಪಂಚಕ್ಕೆಲ್ಲ ಒಡೆಯ. ಜಗತ್ತನ್ನೆಲ್ಲ ತನ್ನಲ್ಲಿ ಅಡಗಿಸಿಕೊಂಡಿರುವವನು. ಸರ್ವಸಮರ್ಥನಾಗಿ ಸಂತುಷ್ಟನಾಗುವವನು’ ಎಂದು ಮಂತ್ರದ ಅರ್ಥ.

ಇದರಲ್ಲಿ ‘ಅಂಗುಷ್ಠ ಗಾತ್ರ’ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು. ಜೀವಾತ್ಮನನ್ನಷ್ಟೇ ಅಲ್ಲ, ಈ ಪ್ರಪಂಚದ ವಿವಿಧ ವಸ್ತುಗಳನ್ನೂ ಅಂಗುಷ್ಠದ ಮಾನದಲ್ಲಿ ಅಳೆಯುವ ಪದ್ಧತಿ ಹಿಂದಿನಿಂದಲೂ ಇದೆ. ಬಡಗಿಗಳು ಮರಮಟ್ಟುಗಳ ಅಳತೆಯನ್ನು ತಮ್ಮ ಹೆಬ್ಬೆರಳಿನಿಂದಲೇ ಮಾಡುತ್ತಿದ್ದರು. ಹೆಬ್ಬೆರಳಿನ ತುದಿಯಿಂದ ಮೊದಲ ಮಡಿಕೆ(ಫೋಲ್ಡ್)ಗೆ ಸರಿಸುಮಾರು ಒಂದು ಇಂಚು ಅಥವಾ ಅಂಗುಲ ಎಂಬ ಲೆಕ್ಕ. ‘ರೂಲ್ ಆಫ್ ಥಂಬ್’ ಎಂಬ ನುಡಿಗಟ್ಟಿನ ಮೂಲ ಅದೇ. ಅಳತೆಪಟ್ಟಿ ಇಲ್ಲದಿದ್ದಾಗ ಹೆಬ್ಬೆರಳನ್ನೇ ಹೇಗೆ ಅಂದಾಜಿನ ಅಳತೆಗೆ ಉಪಯೋಗಿಸುತ್ತೇವೆಯೋ ಹಾಗೆಯೇ ಇದಮಿತ್ಥಂ ಎಂದು ನಿರ್ದಿಷ್ಟವಾದ ಲಿಖಿತ ನಿಯಮಗಳಾಗಲೀ ವೈಜ್ಞಾನಿಕವಾಗಿ ಅನುಮೋದಿಸಲ್ಪಟ್ಟ ಸಿದ್ಧಾಂತಗಳಾಗಲೀ ಇಲ್ಲದಿದ್ದಾಗ ಅಂದಾಜಿನಿಂದ ಮುನ್ನಡೆಯುವುದಕ್ಕೆ ‘ರೂಲ್ ಆಫ್ ಥಂಬ್’ ಬಳಕೆಯಾಗುತ್ತದೆ. ಅಂದಹಾಗೆ ಈ ನುಡಿಗಟ್ಟಿನ ಬಗ್ಗೆ ಒಂದು ಸ್ವಾರಸ್ಯವಾದ ಆದರೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಒಂದು ದಂತಕತೆಯೂ ಇದೆ. ಅದೇನೆಂದರೆ, ೧೯ನೇ ಶತಮಾನದಲ್ಲಿ ಯುರೋಪ್‌ನಲ್ಲಿ ಒಂದು ವಿಚಿತ್ರ ಕಾನೂನು ಇತ್ತಂತೆ. ಗಂಡನಾದವನು ಹೆಂಡತಿಯನ್ನು ತನ್ನ ಅಂಗುಷ್ಠಕ್ಕಿಂತ ಹೆಚ್ಚು ದಪ್ಪದ ಕೋಲಿನಿಂದ ಹೊಡೆಯುವಂತಿಲ್ಲ. ಒಂದೊಮ್ಮೆ ಹೊಡೆದದ್ದೇ ಆದರೆ ‘ರೂಲ್ ಆಫ್ ಥಂಬ್’ ಪ್ರಕಾರ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹಾಗಾದರೆ, ಅಂಗುಷ್ಠದಷ್ಟು ಅಥವಾ ಅಥವಾ ಅದಕ್ಕಿಂತ ಕಡಿಮೆ ದಪ್ಪದ ಕೋಲಿನಿಂದ ಹೆಂಡತಿಯನ್ನು ಹೊಡೆಯಬಹುದೇ? ಕೋಲಿನಿಂದಲ್ಲದಿದ್ದರೆ ಮತ್ತ್ಯಾವುದೇ ಆಯುಧದಿಂದಲೇ ಆದರೂ ಒಟ್ಟಿನಲ್ಲಿ ಹೆಂಡತಿಯನ್ನು ಹೊಡೆಯಬಹುದೇ? ಆ ಅಧಿಕಾರ ಗಂಡನಿಗೆ ಇದೆಯೇ? ಅದೆಲ್ಲಿಂದ ಬಂತು? ಎಂದೆಲ್ಲ ಪ್ರಶ್ನೆಗಳು ಏಳುತ್ತವೆ. ಅವುಗಳಿಗೆ ಉತ್ತರ ಹುಡುಕಿದರೆ ಸಿಗಲಿಕ್ಕಿಲ್ಲ. ಹುಡುಕುವುದು ಸಮಂಜಸವೂ ಅಲ್ಲ. ಇದೊಂದು ಬರೀ ಜನಪದ ದಂತಕತೆ ಎಂದು ತಿಳಿದುಕೊಂಡು ಸುಮ್ಮನಾಗಬೇಕು. ಹದಿನೇಳನೇ ಶತಮಾನದ ಒಬ್ಬ ಕವಿ ‘ರೂಲ್ ಆಫ್ ಥಂಬ್’ ನುಡಿಗಟ್ಟನ್ನು ಬಳಸಿರುವುದು ಬೇರೆಯೇ ರೀತಿಯಲ್ಲಿ. ಅವನ ಪ್ರಕಾರ, ಗ್ರೀಕ್ ದೇವತೆ ಹರ್ಕ್ಯೂಲಿಸ್‌ನ ಪ್ರತಿಮೆಯ ಔನ್ನತ್ಯವನ್ನು ಅದರ ಹೆಬ್ಬೆರಳಿನ ಪ್ರಮಾಣದಿಂದ ಅಳೆಯಬಹುದು. ಹೆಬ್ಬೆರಳಿನದೇ ಅನುಪಾತದಲ್ಲಿ ಇತರ ಅಂಗಾಂಗಗಳೂ ಇರುತ್ತವೆಂದು ಊಹಿಸಬಹುದು. ರೋಮನ್ ದೇವತೆ ವೀನಸ್‌ಳ ಸೌಂದರ್ಯವನ್ನು ಹೇಗೆ ಅವಳ ಪಾದಗಳಿಂದಲೇ ಅಂದಾಜಿಸಬಹುದೋ ಹರ್ಕ್ಯೂಲಿಸ್‌ನ ದೇಹದಾರ್ಢ್ಯತೆಯನ್ನು ಅವನ ಹೆಬ್ಬೆರಳಿನಿಂದ ಅಂದಾಜಿಸಬಹುದು ಎಂದು ಕವಿಯ ಅಭಿಪ್ರಾಯ. ಹೆಬ್ಬೆರಳು ಮತ್ತು ಪ್ರತಿಮೆಗಳ ಸುದ್ದಿ ಬಂದಾಗ ನೆನಪಾಯ್ತು, ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್‌ನಲ್ಲಿ ಹೆಬ್ಬೆರಳಿನದೇ ಒಂದು ದೊಡ್ಡ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.

ರೂಲ್ ಆಫ್ ಥಂಬ್‌ನ ಕಥೆ ಅದಾದರೆ ತಂಪುಪಾನೀಯ ‘ಥಮ್ಸ್ ಅಪ್’ಗೆ ಆ ಹೆಸರು ಬಂದದ್ದು ಹೇಗೆ ಗೊತ್ತೇ? ಎಪ್ಪತ್ತರ ದಶಕದಲ್ಲಿ ಹುಟ್ಟಿಕೊಂಡ ಥಮ್ಸ್‌ಅಪ್, ಮುಂಬಯಿಯ ಪಾರ್ಲೆ ಕಂಪನಿಯ ಹೆಮ್ಮೆಯ ಉತ್ಪನ್ನವಾಗಿತ್ತು (ಈಗ ಕೋಕಾಕೋಲ ಕಂಪನಿಯ ಸ್ವತ್ತಾಗಿದೆ). ಮುಂಬಯಿಯ ಹತ್ತಿರ ‘ಮನ್ಮಾಡ್ ಹಿಲ್ಸ್’ ಅಂತೊಂದು ಬೆಟ್ಟವಿದೆ. ದೂರದಿಂದ ಅದು ಹೆಬ್ಬೆರಳನ್ನು ಮೇಲಕ್ಕೆತ್ತಿದ ಕೈಯ ಮುಷ್ಟಿಯಂತೆ ಕಾಣುತ್ತದೆ. ರೈಲಿನಲ್ಲಿ ಹೋಗುವಾಗ ಆ ನೋಟವನ್ನು ದಿನಾ ನೋಡುತ್ತಿದ್ದ ಪಾರ್ಲೆ ಕಂಪನಿ ಮಾಲೀಕ ತನ್ನ ಹೊಸ ಉತ್ಪನ್ನಕ್ಕೆ ಅದೇ ಹೆಸರನ್ನಿಟ್ಟು ಅದೇ ಆಕೃತಿಯನ್ನು ಲಾಂಛನವಾಗಿಸಿದ. ಥಮ್ಸ್ ಅಪ್ ಭಾರತೀಯ ಮಾರುಕಟ್ಟೆಯಲ್ಲಿ ತುಂಬ ಜನಪ್ರಿಯ ಪೇಯವಾಯ್ತು.

ಹೆಬ್ಬೆರಳಿಗೆ ಸಂಬಂಧಿಸಿದಂತೆಯೇ ಇನ್ನೊಂದು ಇಲ್ಲಿ ಉಲ್ಲೇಖಿಸಬಹುದಾದದ್ದೆಂದರೆ ಹೈದರಾಬಾದ್‌ನ ಕಂಪನಿಯೊಂದರ ಉತ್ಪನ್ನ ‘ಅಂಗುಷ್ಠ’ ಎಂಬ ಹೆಸರಿನ ಫಿಂಗರ್‌ಪ್ರಿಂಟ್ ಆಕ್ಸೆಸ್ ಕಂಟೋಲ್ ಮೆಷಿನ್. ಆಫೀಸಿನ ಪ್ರವೇಶದ್ವಾರಕ್ಕೆ ಅದನ್ನು ಅಳವಡಿಸಿದರೆ ಉದ್ಯೋಗಿಗಳು ಕಾರ್ಡ್ ಸ್ವೈಪ್ ಮಾಡಬೇಕಂತಿಲ್ಲ, ಬಟನ್ಸ್ ಒತ್ತಬೇಕಂತಿಲ್ಲ. ಥಮ್ಸ್‌ಅಪ್ ಭಂಗಿಯಲ್ಲಿ ಹೆಬ್ಬೆರಳನ್ನು ಯಂತ್ರಕ್ಕೆ ತೋರಿಸಿದರೆ ಸಾಕು, ಉದ್ಯೋಗಿಯನ್ನು ಸರಿಯಾಗಿ ಗುರುತಿಸುವ ಯಂತ್ರ ಬಾಗಿಲು ತೆರೆಯುತ್ತದೆ. ಹೈಟೆಕ್ ಯುಗದಲ್ಲಿಯೂ ಹೆಬ್ಬೆಟ್ಟಿನ ಸಹಿಯೇ ಬೇಕಾಗುವುದೆಂದರೆ ಹೀಗೆ!

ಇಲ್ಲಿಗೆ ಎರಡು ಕಂತುಗಳಲ್ಲಿ ಮೂಡಿಬಂದ ಅಂಗುಷ್ಠಪುರಾಣವು ಸಮಾಪ್ತವಾಯಿತು. ವಿಷಯಗಳು ಇನ್ನೂ ಇವೆಯಾದರೂ ಒಂದೇ ಟಾಪಿಕ್‌ನ ‘ಬೋರ್’ಗರೆತವಾದರೆ ಚೆನ್ನಾಗಿರುವುದಿಲ್ಲ. ನಿಮಗಿದು ಥಮ್ಸ್‌ಅಪ್ ಅನಿಸಿತೇ ಅಥವಾ ಥಂಬ್ಸ್‌ಡೌನ್ ಅನಿಸಿತೇ ಎಂದು ತಿಳಿಸಬಹುದು. ನಾನೀಗ ಬೆಂಗಳೂರಿನಿಂದ ಅಮೆರಿಕೆಗೆ ಮರಳಿರುವುದರಿಂದ ಅಂಗುಷ್ಠಸಾಹಿತ್ಯದ ಮೂಲಕ ಅಂದರೆ ಎಸ್ಸೆಮ್ಮೆಸ್ ಮೂಲಕ ಅನಿಸಿಕೆ ತಿಳಿಸುವುದಾಗದು. ಸದ್ಯಕ್ಕೆ ಮಿಂಚಂಚೆಯೊಂದೇ ಮಾರ್ಗ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

Vihswa Kannada Sammelana

Saturday, March 12th, 2011
DefaultTag | Comments

ದಿನಾಂಕ  13 ಮಾರ್ಚ್ 2011ರ ಸಂಚಿಕೆ...

ಬೆಳಗಿಹುದು ಭುವನಸಿರಿ ಬೆಳಗಾವಿಯಲಿ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಏನು ಬರೆಯಲಿ ಎಂಬ ಚಿಂತೆ ಕೆಲವೊಮ್ಮೆ ಕಾಡುವುದಿದೆ ನಿಯಮಿತವಾಗಿ ಬರೆಯಬೇಕಾಗಿ ಬರುವ ಅಂಕಣಕಾರರಿಗೆ. ಯಾವಾಗಾದರೂ ಒಮ್ಮೆ ಏನೂ ಸರಕು ಒದಗಿ ಬರದಿದ್ದಾಗ ಹಾಗಾಗುತ್ತದೆ. ಇದಕ್ಕೆ ನಾನೂ ಹೊರತೇನಲ್ಲ. ಆದರೆ ಈವಾರ ನನ್ನ ಪರಿಸ್ಥಿತಿ ಪೂರ್ಣ ತದ್ವಿರುದ್ಧ! ಏನನ್ನು ಬರೆಯದಿರಲಿ, ಅಂದರೆ ಯಾವುದನ್ನು ಬರೆಯದೆ ಬಿಟ್ಟುಬಿಡಲಿ ಎಂಬ ಸಮಸ್ಯೆ ಈಗ ನನ್ನದಾಗಿದೆ. ಕಳೆದವಾರದಿಂದ ಮುಂದುವರಿಸಬೇಕಿದ್ದ ‘ಅಂಗುಷ್ಠಪುರಾಣ’ವನ್ನೇ ಎತ್ತಿಕೊಳ್ಳಲೇ? ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ನುಡಿಹಬ್ಬದ ಕುರಿತು ಸಂಭ್ರಮಿಸಲೇ? ಅಥವಾ, ಉದಯರವಿಯ ನಾಡನ್ನು ಗಾಡಾಂಧಕಾರಕ್ಕೆ ತಳ್ಳಿದ ರಾಕ್ಷಸಿ ಸುನಾಮಿಯನ್ನು ಶಪಿಸುತ್ತ ಮರುಗಲೇ?

ಇಲ್ಲಾ. ಸಂದಿಗ್ಧತೆ ಬೇಡಾ. ಹೇಗೂ ದಿಢೀರ್ ಪ್ಲಾನ್ ಮಾಡಿ ಸಮ್ಮೇಳನದಲ್ಲಿ ಭಾಗವಹಿಸಲಿಕ್ಕೆಂದೇ ಬೆಳಗಾವಿಗೆ ಬಂದಿದ್ದೇನೆ; ಅಷ್ಟೇ‌ಅಲ್ಲ, ಇಂಥ ಸಮ್ಮೇಳನಗಳು ಅಮೆರಿಕದಲ್ಲಿ ನಡೆದಾಗೆಲ್ಲ ಸಮ್ಮೇಳನದ ಸ್ಥಳದಿಂದಲೇ ಅಂಕಣ ಬರೆದುಕಳಿಸಿದ ರೋಚಕ ಅನುಭವವಿದೆ; ಇಲ್ಲಿಯೂ ಆ ಸಾಹಸ ಮಾಡಬೇಕು ಎಂದು ಲ್ಯಾಪ್‌ಟಾಪ್ ತೆಗೆದುಕೊಂಡೇ ಬಂದಿದ್ದೇನೆ - ಆದ್ದರಿಂದ ಸಮ್ಮೇಳನದ ಕುರಿತೇ ಬರೆಯಬೇಕು ಎಂದು ನನ್ನೊಳಗೇ ಸಹಮತದ ನಿರ್ಧಾರ ಮಾಡಿದ್ದೇನೆ. ಸರಿ, ಅಲ್ಲಿಗೆ ನಿರುಮ್ಮಳನಾದೆನಾ? ಇದೀಗ ಈ ಸಮ್ಮೇಳನದ ಅಗಾಧತೆಯನ್ನು ನೋಡಿದಾಗ, ಇಲ್ಲಿ ಮುಗಿಲುಮುಟ್ಟಿರುವ ಕನ್ನಡ ಸಡಗರವನ್ನು ಕಣ್ಣಾರೆ ಕಂಡಾಗ, ಹೇಗಪ್ಪಾ ಈ ಪುಟ್ಟ ಅಂಕಣದಲ್ಲಿ ತುಂಬಿಸಲಿ ಎಂಬ ಪ್ರಶ್ನೆ! ಏಕೆಂದರೆ, ಇದನ್ನು ಬರೆಯುವಾಗಿನ್ನೂ ಸಮ್ಮೇಳನದ ಉದ್ಘಾಟನೆ ಮತ್ತು ಮೊದಲ ದಿನದ ವೈಭವವಷ್ಟೇ ಆಗಿರುವುದು. ಶನಿ-ಭಾನುವಾರಗಳಂದು ತೆರೆದುಕೊಳ್ಳಲಿರುವ ಸಾಂಸ್ಕೃತಿಕ ರಸದೌತಣ ಇನ್ನೂ ಬಾಕಿಯೇ ಇದೆ. ಅದನ್ನು ನೆನೆಸಿಕೊಂಡರೇನೇ ಪುಳಕವಾಗುತ್ತದೆ. ಪ್ರತ್ಯಕ್ಷ ಆಸ್ವಾದಿಸಿದಾಗಿನ ರೋಮಾಂಚನಕ್ಕಂತೂ ಪದಗಳೇ ಸಿಗಲಾರವೇನೋ.

ವಿಶ್ವ ಕನ್ನಡ ಸಮ್ಮೇಳನ. ಇದು ಬರೀ ಸಮ್ಮೇಳನವಲ್ಲ, ಸವಿಗನ್ನಡದ ಸಮ್ಮೋಹನ. ಇದರಲ್ಲಿ ಪಾಲ್ಗೊಳ್ಳಬೇಕು ಎಂಬ ಬಯಕೆ ಚಿಕ್ಕ ದೊಡ್ಡ ಪ್ರಮಾಣದಲ್ಲಿ ವಿಶ್ವದ ಪ್ರತಿಯೊಬ್ಬ ಕನ್ನಡಿಗನಿಗೂ ಇದ್ದೇ‌ಇರುತ್ತದೆ. ಆದರೆ ತಾಪತ್ರಯಗಳು ಅಂತ ಇರುತ್ತವಲ್ಲಾ ಅವು ಆ ಬಯಕೆಯನ್ನು ಅಷ್ಟೇ ಪ್ರಮಾಣದಲ್ಲಿ ಹತ್ತಿಕ್ಕುವುದೂ ನಡೆಯುತ್ತಲೇ ಇರುತ್ತದೆ. ಮಾನ್ಯ ಮುಖ್ಯಮಂತ್ರಿಗಳೇನೋ ಅನಿವಾಸಿ ಕನ್ನಡಿಗರಿಗೆಲ್ಲ ಸಮ್ಮೇಳನದಲ್ಲಿ ಭಾಗವಹಿಸಲು ಪ್ರೀತಿಯ ಆಮಂತ್ರಣ ಕಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಂತೂ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಅನಿವಾಸಿ ಕನ್ನಡಿಗರ ಪೈಕಿ ಒಂದಿಷ್ಟು ಹೆಸರುಗಳನ್ನು ಹೆಕ್ಕಿ ಆಹ್ವಾನಪತ್ರಿಕೆಯಲ್ಲಿ ಅಚ್ಚೂ ಮಾಡಿಬಿಟ್ಟಿದ್ದಾರೆ. ಸಮ್ಮೇಳನದ ವೇಳೆ ‘ಹೊರನಾಡು ಮತ್ತು ಹೊರದೇಶದ ಕನ್ನಡಿಗರು’ ಕಾರ್ಯಾಗಾರದಲ್ಲಿ ಉಪಸ್ಥಿತರಿರಬೇಕು ಎಂದು ಪ್ರೀತಿಯ ಆದೇಶ ಬೇರೆ. ನೋಡುತ್ತೇನಾದರೆ ಆ ಪಟ್ಟಿಯಲ್ಲಿ ನನ್ನಂಥ ನನ್ನ ಹೆಸರೂ ಸೇರಿಕೊಂಡಿದೆ! ಅಷ್ಟು ದೊಡ್ಡ ಅಮೇರಿಕಾ ದೇಶವನ್ನು ನಾನು ಪ್ರತಿನಿಧಿಸಬೇಕಂತೆ! ಭುವನೇಶ್ವರಿ ತಾಯಿಯಾಣೆಯಾಗಿ ಇನ್ನು ನೆಪ ಹೇಳುವುದು ಆಗದ ಮಾತು ಎಂದುಕೊಂಡು, ಆಫೀಸಿನಲ್ಲಿ ಒಂದು ವಾರದ ರಜೆಯನ್ನು ಹೇಗೋ ಹೊಂದಿಸಿಕೊಂಡು, ಸೂಟ್‌ಕೇಸಿನಲ್ಲಿ ಬಟ್ಟೆಗಳನ್ನು ತುರುಕಿಸಿಕೊಂಡು ಹೊರಟೇಬಿಟ್ಟೆ.

ಇದು ಪೀಕ್‌ಸೀಸನ್ ಅಲ್ಲವಾದ್ದರಿಂದ ವಾಷಿಂಗ್ಟನ್‌ನಿಂದ ಬೆಂಗಳೂರಿಗೆ ವಿಮಾನದ ಟಿಕೆಟ್ಸ್ ಸುಲಭದಲ್ಲೇ ಸಿಕ್ಕಿದವು. ಆದರೆ ಅಲ್ಲಿನ ಬುಧವಾರ ಸಂಜೆಹೊತ್ತು ವಾಷಿಂಗ್ಟನ್ ಬಿಟ್ಟರೂ ಬೆಂಗಳೂರು ತಲುಪಿದಾಗ ಇಲ್ಲಿ ಶುಕ್ರವಾರ ಮುಂಜಾನೆ. ಸಮ್ಮೇಳನ ಸ್ಪೆಷಲ್ ರೈಲು ಬೆಂಗಳೂರಿನಿಂದ ಬೆಳಗಾವಿಗೆ ಗುರುವಾರ ಸಂಜೆಯೇ ಹೊರಟಾಗಿರುತ್ತದೆ. ಬೇರೆ ರೆಗ್ಯುಲರ್ ಟ್ರೈನು-ಬಸ್ಸುಗಳಲ್ಲಿ ಸೀಟ್ ಸಿಗುವ ಪರಿ ಎಂತು? ಶುಕ್ರವಾರ ಸಂಜೆಯೊಳಗೆ ಬೆಳಗಾವಿ ತಲುಪುವುದೆಂತು? “ಚಿಂತೆಬೇಡ, ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಿಂದ ಬೆಳಗಾವಿಗೆ ವಿಶೇಷ ವಿಮಾನವೊಂದರ ವ್ಯವಸ್ಥೆಯಾಗಿದೆ, ಒಂದು ಸೀಟ್ ನಿಮಗೂ ಕಾಯ್ದಿರಿಸುತ್ತೇವೆ” ಎಂದು ಸಂಬಂಧಪಟ್ಟ ಅಧಿಕಾರಿಯಿಂದ ಭರವಸೆ. ಪುಣ್ಯಕ್ಕೆ ವಾಷಿಂಗ್ಟನ್-ಲಂಡನ್-ಬೆಂಗಳೂರು ವಿಮಾನ ಪ್ರಯಾಣದಲ್ಲಿ ಯಾವೊಂದೂ ಅಡಚಣೆಯಿಲ್ಲದೆ ಸರಿಯಾದ ಸಮಯಕ್ಕೆ ಬೆಂಗಳೂರು ವಿಮಾನನಿಲ್ದಾಣ ತಲುಪುವುದು ಸಾಧ್ಯವಾಯ್ತು. ಮನೆ ತಲುಪಿ ಸ್ನಾನ-ತಿಂಡಿ ಎಲ್ಲ ಮಾಡಿ ಮತ್ತೆ ಧಾವಾಧಾವಿಯಾಗಿ ವಿಮಾನನಿಲ್ದಾಣಕ್ಕೆ ನಿಗದಿತ ವೇಳೆಗೆ ಬರುವುದಕ್ಕಾಯ್ತು.

ಮಜಾ ಏನು ಗೊತ್ತಾ? ಆ ಬೆಂಗಳೂರು-ಬೆಳಗಾವಿ ವಿಶೇಷ ವಿಮಾನ ಯಶಸ್ವಿಯಾಗಿ ಹಾರುವುದಕ್ಕೆ ನನ್ನ ಕೊಡುಗೆಯೂ ಇತ್ತು! ಅದೇನು ಅಂತೀರಾ? ವಿಮಾನದಲ್ಲಿ ಅತ್ಯಂತ ‘ಹಗುರ’ದ ಪ್ರಯಾಣಿಕನೆಂದರೆ ನಾನೊಬ್ಬನೇ. ಮಿಕ್ಕವರೆಲ್ಲ ಮಹಾನ್ ‘ತೂಕ’ದ ವ್ಯಕ್ತಿಗಳು. ಬರೀ ಅವರೇ ಆಗಿದ್ದರೆ ಖಂಡಿತವಾಗಿಯೂ ವಿಮಾನ ಟೇಕ್‌ಆಫ್ ಆಗುವುದೂ ಕಠಿಣವಿತ್ತೇನೋ. ಕಂಬಾರ, ಜಿ.ಎಸ್. ಶಿವರುದ್ರಪ್ಪ, ನಿಸಾರ್ ಅಹಮದ್, ಅನಂತಮೂರ್ತಿಯವರಂಥ ಸಾಹಿತಿವರೇಣ್ಯರು, ಅಂಬರೀಶ್, ಜಯಂತಿ, ಭಾರತಿ, ಸರೋಜಾದೇವಿ, ಅನುಪ್ರಭಾಕರ್, ಜಯಮಾಲಾರಂಥ ಸಿನಿತಾರೆಯರು, ವಿಶ್ವೇಶ್ವರಭಟ್, ಜಯಶೀಲರಾವ್‌ರಂಥ ಹಿರಿಯ ಪತ್ರಕರ್ತರು, ಕ್ರಿಕೆಟಿಗ ಅನಿಲ್ ಕುಂಬ್ಳೆ, ಉದ್ಯಮಿ ಕ್ಯಾಪ್ಟನ್ ಗೋಪಿನಾಥ್, ಸುಧಾಮೂರ್ತಿ-ನಾರಾಯಣ ಮೂರ್ತಿ ದಂಪತಿಗಳು, ಸಿದ್ದರಾಮಯ್ಯ, ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ವಿ.ಎಸ್.ಆಚಾರ್ಯರಂಥ ರಾಜಕಾರಣಿಗಳು ಶಾಸಕರು ಮಂತ್ರಿಗಳು, ಮತ್ತು ಖುದ್ದಾಗಿ ಮಾನ್ಯ ಮುಖ್ಯಮಂತ್ರಿ ಯಡ್ಯೂರಪ್ಪನವರು! ಅವರೆಲ್ಲರ ಕೈಕುಲುಕಿ ಕುಶಲ ವಿಚಾರಿಸಿದ ಮೇಲೂ ಇದು ಕನಸಲ್ಲ ತಾನೇ ಎಂದು ನಾನೊಮ್ಮೆ ಮೈಚಿವುಟಿಕೊಂಡೆ. ಚಿಕ್ಕವನಿದ್ದಾಗ ಎರಡನೇ ತರಗತಿಯಲ್ಲಿ ‘ಹಣ್ಣು ಮಾರುವವನ ಹಾಡು’ ಕಲಿಯುತ್ತ ‘ಬೆಳಗಾವಿಯ ಸವಿ ಸಪ್ಪೋಟ... ದೇವನಹಳ್ಳಿಯ ಚಕ್ಕೋತ...’ ಎಂದು ಕಂಠಪಾಠ ಮಾಡಿದ್ದೇನೆಯೇ ಹೊರತು ದೇವನಹಳ್ಳಿಯಿಂದ ಬೆಳಗಾವಿಗೆ ಹೀಗೊಂದು ವಿಮಾನಯಾನ ಮಾಡುತ್ತೇನೆಂದು ಕನಸಲ್ಲೂ ಎಣಿಸಿರಲಿಲ್ಲ. ಇದಿನ್ನು ನೆನಪಿನ ಫ್ರೇಮ್‌ನಲ್ಲಿರಬೇಕು. ಅದಕ್ಕೋಸ್ಕರ ಏನುಮಾಡಿದ್ದೇನೆಂದರೆ ವಿಮಾನ ಪ್ರಯಾಣದ ವೇಳೆಯೇ ಅನುಪ್ರಭಾಕರ್ ಕೈಯಲ್ಲಿ ನನ್ನ ಕ್ಯಾಮೆರಾ ಕೊಟ್ಟು ನನ್ನ ಅಕ್ಕಪಕ್ಕದಲ್ಲಿ ವಿಶ್ವೇಶ್ವರಭಟ್ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರಿರುವ ಭಂಗಿಯಲ್ಲಿ ಒಂದು ಅಪೂರ್ವ ಫೊಟೋ ಕ್ಲಿಕ್ಕಿಸಿಕೊಂಡಿಟ್ಟಿದ್ದೇನೆ. ‘ಇಂಥದೊಂದು ಬಾನಯಾನ’ ಎಂದು ಅದನ್ನಿನ್ನು ನನ್ನ ಸ್ಮೃತಿಪಟಲದ ಮೇಲೆ (ಮತ್ತು ಫೇಸ್‌ಬುಕ್ ಗೋಡೆಯ ಮೇಲೆ) ಅಂಟಿಸುವವನಿದ್ದೇನೆ.

ನೋಡಿದ್ರಾ? ಕೊನೆಗೂ ನನಗೆ ಇವತ್ತಿನ ಅಂಕಣದಲ್ಲಿ ಸಮ್ಮೇಳನ ವಿವರಗಳನ್ನು ಬಣ್ಣಿಸುವುದು ಆಗಲೇ ಇಲ್ಲ. ಯಾವುದನ್ನಂತ ಬರೀಲಿ? ಸಮ್ಮೇಳನದ ಆರಂಭದಲ್ಲಿ ನನ್ನ ನೆಚ್ಚಿನ ಕದ್ರಿ ಗೋಪಾಲನಾಥ್ ಸ್ಯಾಕ್ಸೊಫೋನ್ ಮಂಗಳಧ್ವನಿ ಮೊಳಗಿಸುತ್ತ  ‘ಇಳಿದು ಬಾ ತಾಯೇ ಇಳಿದು ಬಾ...’ ಎಂದು ನಾದದ ಅಲೆ ಹೊಮ್ಮಿಸಿದ್ದನ್ನೇ? ‘ಆರು ತೆರೆಯ ನೋಡಂಬಿಗಾ ಅದು ಮೀರಿಬರುತಲಿದೆ ಅಂಬಿಗಾ...’ ಎಂದು ನುಡಿಸುತ್ತಿದ್ದಂತೆಯೇ ಕಿತ್ತೂರುಚೆನ್ನಮ್ಮ ಕ್ರೀಡಾಂಗಣದಲ್ಲಿ ಕನ್ನಡಿಗ ಜನಸ್ತೋಮ ಲಕ್ಷಲಕ್ಷ ಸಂಖ್ಯೆಯಲ್ಲಿ ಅಲೆ‌ಅಲೆಗಳಾಗಿ ಬಂದದ್ದನ್ನೇ? ‘ಹಚ್ಚೇವು ಕನ್ನಡದ ದೀಪ...’ ನೃತ್ಯದ ವೇಳೆ ಬೇಲೂರು-ಹಳೇಬೀಡುಗಳ ಶಿಲಾಬಾಲಿಕೆಯರೇ ನರ್ತಿಸಿದರೆನ್ನಿಸುವಂಥ ಪರಿಣಾಮವನ್ನು ಅದ್ಭುತವಾಗಿ ಮೂಡಿಸಿ ಗಂಧರ್ವಲೋಕ ಸೃಷ್ಟಿಸಿದ ನೃತ್ಯಸಂಯೋಜನೆಯನ್ನೇ? ಕೊಳಲ ಮಾಂತ್ರಿಕ ಗೋಡಖಿಂಡಿ ಇದಕ್ಕಿಂತಲೂ ಗೋಡ (ಮರಾಠಿಯಲ್ಲಿ ಸಿಹಿ) ಆಗಲು ಸಾಧ್ಯವೇ ಇಲ್ಲವೆಂಬಂತೆ ಮಧುರವಾಗಿ ಮುರಲೀನಾದದ ಮೋಡಿ ಮಾಡಿದ್ದನ್ನೇ? ಐಶ್ವರ್ಯಾ ರೈ ಬಂದಾಗ ‘ಕನ್ನಡದ ದೀಪ’ಕ್ಕಿಂತಲೂ ಹೆಚ್ಚಿನ ಜಗಮಗ ವೇದಿಕೆಯಲ್ಲಿ ಕೋರೈಸಿದ್ದನ್ನೇ? ಸಾಂಪ್ರದಾಯಿಕ ಹಣತೆಗಳು ಮತ್ತು ಭುವನಸುಂದರಿಯ ಜಗಮಗ ಸಾಲದೆಂಬಂತೆ ಅತ್ಯಾಧುನಿಕ ತಂತ್ರಜ್ಞಾನದ ‘ಲೇಸರ್ ಶೋ’ದಲ್ಲಿಯೂ ಕನ್ನಡದ ಕೋಲ್ಮಿಂಚು ಕಂಗೊಳಿಸಿದ್ದನ್ನೇ? ದೀಪ ಬೆಳಗಿಸಿ ಉದ್ಘಾಟನಾ ಭಾಷಣ ಮಾಡಿದ ನಾರಾಯಣ ಮೂರ್ತಿಯವರು ಅಚ್ಚಕನ್ನಡದಲ್ಲಿ ಸ್ವಚ್ಛಸುಂದರ ಸ್ಫೂರ್ತಿಯುತ ಮಾತುಗಳನ್ನಾಡಿ, ಬರೀ ವಿವಾದಗಳನ್ನೆಬ್ಬಿಸುವುದರಲ್ಲೇ ಖುಶಿ ಕಾಣುವವರ ಬಾಯ್ಮುಚ್ಚಿಸಿದ್ದನ್ನೇ?

ನನಗ್ಗೊತ್ತು, ಇದು ಮಹಾಸಾಗರದಿಂದ ಬಿಂದಿಗೆಯಲ್ಲಿ ನೀರು ತುಂಬಿಸಿಕೊಂಡು ತಂದಂತೆ. ಇಷ್ಟು ಮಾತ್ರ ಹೇಳಬಲ್ಲೆ- ‘ಕುಂದ’ದ ಸಿಹಿ ಬೆಳಗಾವಿಯದು; ಎಂದೆಂದಿಗೂ ಕುಂದದ ಕೀರ್ತಿ ನಮ್ಮ ಕನ್ನಡದ್ದು, ನಮ್ಮೆಲ್ಲರ ಕರ್ನಾಟಕದ್ದು! ಈ ರೀತಿಯ ವಿಶ್ವ ಕನ್ನಡ ಸಮ್ಮೇಳನಗಳು ಆಗುತ್ತಲೇ ಇರಲಿ. ವಿಶ್ವದಲ್ಲೆಲ್ಲ ಕನ್ನಡಿಗರು, ಕರ್ನಾಟಕ, ಮತ್ತು ಕನ್ನಡ ಮೇಳೈಸುತ್ತಲೇ ಇರಲಿ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

Angushta Puraana

Saturday, March 5th, 2011
DefaultTag | Comments

ದಿನಾಂಕ  6 ಮಾರ್ಚ್ 2011ರ ಸಂಚಿಕೆ...

ಅಂಗುಷ್ಠ, ಉಂಗುಟ, ಥಂಬ್ ಮತ್ತು ಟೋ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಕರಾರವಿಂದೇನ ಪದಾರವಿಂದಂ ಮುಖಾರವಿಂದೇ ವಿನಿವೇಶಯಂತಂ|

ವಟಸ್ಯ ಪತ್ರಸ್ಯ ಪುಟೇ ಶಯಾನಂ ಬಾಲಂ ಮುಕುಂದಂ ಮನಸಾ ಸ್ಮರಾಮಿ||

ಆಲದೆಲೆಯ ಮೇಲೆ ಮಲಗಿರುವ ಬಾಲಕೃಷ್ಣ ತನ್ನ ಕಾಲಿನ ಹೆಬ್ಬೆರಳನ್ನು ಚೀಪುತ್ತಿದ್ದಾನೆ. ಕ್ಯಾಲೆಂಡರ್‌ಗಳಲ್ಲಿ, ಪೇಂಟಿಂಗ್‌ಗಳಲ್ಲಿ ಈ ಸುಂದರ ದೃಶ್ಯವನ್ನು ನಾವೆಲ್ಲ ನೋಡಿಯೇ ಇರುತ್ತೇವೆ. ಪ್ರಳಯದಿಂದ ರಕ್ಷಿಸಲಿಕ್ಕಾಗಿ ಜಗತ್ತನ್ನು ತನ್ನ ಹೊಟ್ಟೆಯಲ್ಲಡಗಿಸಿಕೊಂಡ ಭಗವಂತ, ಮುಗ್ಧ ಮಗುವಾಗಿ ಈ ಲೀಲೆಯನ್ನಾಡುತ್ತಾನಂತೆ. ತನ್ನ ಪಾದಗಳನ್ನು ಸ್ಪರ್ಶಿಸಿದ ನೀರು ಅಮೃತಕ್ಕಿಂತಲೂ ಸಿಹಿಯೆಂದು ಭಕ್ತರು ತಿಳಿದುಕೊಳ್ಳುತ್ತಾರಲ್ಲ ನಿಜವಾಗಿಯೂ ಸಿಹಿಯಾಗಿರುವುದು ಹೌದೇ ಎಂದು ಸ್ವಯಂಪರೀಕ್ಷೆ ಮಾಡಿ ಕಂಡುಕೊಳ್ಳುವುದಕ್ಕಾಗಿ ಅಂಗುಷ್ಠ ಚೀಪುತ್ತಾನಂತೆ. ಹಾಗೆನ್ನುತ್ತವೆ ಪುರಾಣಗಳು.

ಅಂಗುಷ್ಠದ ಮಹಿಮೆ ಕೃಷ್ಣಕಥೆಯಲ್ಲಿ ಆಮೇಲೂ ಬರುತ್ತದೆ. ಮಹಾಭಾರತ ಯುದ್ಧದಲ್ಲಿ ಕರ್ಣಾರ್ಜುನರ ನಡುವೆ ಭೀಕರ ಕಾಳಗದ ಸಂದರ್ಭ. ಕರ್ಣ ಅರ್ಜುನನ ಕೊರಳಿಗೇ ಗುರಿಯಿಟ್ಟು ಸರ್ಪಾಸ್ತ್ರ ಪ್ರಯೋಗಿಸುತ್ತಾನೆ. ಆ ಕ್ಷಣದಲ್ಲಿ ಕೃಷ್ಣ ತನ್ನ ಕಾಲಿನ ಹೆಬ್ಬೆರಳಿನಿಂದ ರಥವನ್ನು ಅದುಮುತ್ತಾನೆ. ಕರ್ಣನ ಬಾಣ ಅರ್ಜುನನ ಕೊರಳಿಗೆ ತಾಗದೆ ಕಿರೀಟವನ್ನಷ್ಟೇ ಹಾರಿಸಿಕೊಂಡು ಹೋಗುವಂತೆ ಮಾಡುತ್ತಾನೆ. ಅರ್ಜುನನ ಪ್ರಾಣ ಉಳಿಸುತ್ತಾನೆ. ಯುದ್ಧಕ್ಕೆ ಮೊದಲು ವಿರಾಟಪರ್ವದಲ್ಲೂ ಒಂದು ಸನ್ನಿವೇಶ ಬರುತ್ತದೆ. ಕುಮಾರವ್ಯಾಸ ಅದನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾನೆ.

ಸೆಣಸು ಸೇರದ ದೇವನಿದಿರಲಿ

ಮಣಿಯದಾತನ ಕಾಣುತಲೆ ಧಾ

ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ

ಮಣಿಖಚಿತ ಕಾಂಚನದ ಪೀಠದ

ಗೊಣಸು ಮುರಿದುದು ಮೇಲೆ ಸುರ ಸಂ

ದಣಿಗಳಾ ಎನೆ ಕವಿದುಬಿದ್ದನು ಹರಿಯ ಚರಣದಲಿ

ಕೃಷ್ಣನು ವಿದುರನ ಮನೆಯಿಂದ ಕೌರವರ ಅರಮನೆಗೆ ಬಂದಿದ್ದಾನೆ. ಭೀಷ್ಮ, ದ್ರೋಣ ಮುಂತಾದವರೆಲ್ಲ ಎದ್ದುನಿಂತು ಅವನಿಗೆ ವಂದಿಸಿದ್ದಾರೆ. ದುರ್ಯೋಧನ ಮಾತ್ರ ದರ್ಪದಿಂದ ಸಿಂಹಾಸನಾರೂಢನಾಗಿಯೇ ಇದ್ದಾನೆ. ಅವನ ಗರ್ವಭಂಗ ಮಾಡಲೆಂದು ಕೃಷ್ಣ ತನ್ನ ಉಂಗುಟ ಅಂದರೆ ಕಾಲಿನ ಹೆಬ್ಬೆರಳನ್ನು ನೆಲಕ್ಕೆ ಒತ್ತುತ್ತಾನೆ. ಆ ರಭಸಕ್ಕೆ ಭೂಮಿ ನಡುಗಿ ಸಿಂಹಾಸನ ಅದುರುತ್ತದೆ. ದುರ್ಯೋಧನ ಕೆಳಗೆ ಬೀಳುತ್ತಾನೆ, ನೇರವಾಗಿ ಕೃಷ್ಣನ ಪದತಲಕ್ಕೆ! ವಿಧಿಲೀಲೆಯೆಂದರೆ ಅಂತಹ ಮಹಾಮಹಿಮ ಶ್ರೀಕೃಷ್ಣನ ಅವತಾರಾಂತ್ಯದಲ್ಲಿ ಮೊದಲು ಘಾಸಿಗೊಳ್ಳುವುದು ಅವನ ಅಂಗುಷ್ಠವೇ. ಕೊನೆಯ ದಿನಗಳಲ್ಲಿ ವನವಾಸಿಯಾಗಿದ್ದ ಕೃಷ್ಣ ಕಾಡಿನಲ್ಲಿ ಒಂದು ಮರದ ಕೆಳಗೆ ಒರಗಿ ಕಾಲುಚಾಚಿ ಕುಳಿತುಕೊಂಡಿರುತ್ತಾನೆ. ಕೃಷ್ಣನ ಕಾಲ್ಬೆರಳನ್ನು ಜಿಂಕೆಯ ಕಣ್ಣೆಂದು ಭಾವಿಸಿದ ಬೇಡ ಬಾಣ ಬಿಡುತ್ತಾನೆ. ಇಹಲೋಕದ ವಾಸ ಮುಗಿಸಿ ಕೃಷ್ಣ ವೈಕುಂಠಕ್ಕೆ ಮರಳುತ್ತಾನೆ.

ಕಾಲಿನ ಹೆಬ್ಬೆರಳು ಎಷ್ಟು ಪವರ್‌ಫುಲ್ ಎನ್ನುವುದಕ್ಕೆ ರಾಮಾಯಣ ಮತ್ತಿತರ ಕಥೆಗಳಲ್ಲೂ ವಿಸ್ಮಯದ ಚಿತ್ರಣಗಳು ನಮಗೆ ವಿಪುಲವಾಗಿ ಸಿಗುತ್ತವೆ. ವಾಲಿಯು ಬಿಸಾಡಿದ ದುಂದುಭಿ ಎಂಬ ರಾಕ್ಷಸನ ಪರ್ವತಾಕಾರದ ದೇಹವನ್ನು ಶ್ರೀರಾಮ ತನ್ನ ಕಾಲಿನ ಹೆಬ್ಬೆರಳಿನಿಂದಲೇ ದಶ ಯೋಜನ ದೂರಕ್ಕೆ ಝಾಡಿಸಿದ್ದನಂತೆ. ಹಾಗೆಯೇ ಪರಮೇಶ್ವರನು ತನ್ನ ಅಂಗುಷ್ಠದಿಂದ ಕೈಲಾಸ ಪರ್ವತವನ್ನು ಅದುಮಿಹಿಡಿದು ರಾವಣನ ಅಹಂಕಾರಕ್ಕೆ ಪೆಟ್ಟುಕೊಟ್ಟ  ಒಂದು ಪ್ರಸಂಗವೂ ಇದೆ. ಇನ್ನು, ಋಷಿ-ಮುನಿಗಳು ಮತ್ತು ಹಿರಣ್ಯಕಷಿಪುವಿನಂಥ ಮಹಾರಾಕ್ಷಸರು ಕಾಲಿನ ಹೆಬ್ಬೆರಳುಗಳ ಆಧಾರದಲ್ಲಿ ನಿಂತು ಘೋರ ತಪಸ್ಸನ್ನಾಚರಿಸಿದರು ಎಂಬ ರೀತಿಯ ವಿವರಣೆಗಳಂತೂ ಪುರಾಣಕಥೆಗಳಲ್ಲಿ ವೆರಿ ಕಾಮನ್. ಗುರುಹಿರಿಯರಿಗೆ ನಮಸ್ಕರಿಸುವಾಗ ನಾವು ಅವರ ಪಾದಗಳನ್ನು ಮುಟ್ಟುತ್ತೇವಲ್ಲ, ವಿಶೇಷವಾಗಿ ಆಗ ಅಂಗುಷ್ಠಗಳನ್ನು ಸ್ಪರ್ಶಿಸಬೇಕಂತೆ. ಏಕೆಂದರೆ ಹಿರಿಯರ ತಪಃಶಕ್ತಿ, ಪುಣ್ಯ ಮತ್ತು ಅನುಭವಾಮೃತಗಳೆಲ್ಲ ಆಶೀರ್ವಾದ ರೂಪದಲ್ಲಿ ಅಂಗುಷ್ಠಗಳ ಮೂಲಕ ನಮಗೆ ಹರಿದುಬರುತ್ತವಂತೆ. ಅಂಗುಷ್ಠ ಎಂದರೆ ಆಶೀರ್ವಾದಗಳು ಟ್ರಾನ್ಸ್‌ಮಿಷನ್ ಆಗುವ ಆಂಟೆನಾ ಎಂದು ನೆನಪಿಟ್ಟುಕೊಳ್ಳಬೇಕು.

ಆಯ್ತು, ಆದರೆ ಅಂಗುಷ್ಠದ ವಿಚಾರ ಇವತ್ತೇಕೆ ಬಂತು ಎಂದು ನಿಮಗೀಗ ಅಚ್ಚರಿಯಾಗಿರಬಹುದು ಅಲ್ಲವೇ? ಹೇಳುತ್ತೇನೆ ಕೇಳಿ. ಅವತ್ತು ಕನ್ನಡ ಚಿತ್ರಗೀತೆಗಳಲ್ಲಿ ತಪ್ಪೊಪ್ಪುಗಳ ಬಗ್ಗೆ ಬರೆಯುತ್ತ ಪ್ರೇಮಲೋಕದ ಹಾಡಿನಲ್ಲಿ ‘ಅಂಗುಷ್ಠ’ವನ್ನು ತಪ್ಪಾಗಿ ‘ಉಂಗುಷ್ಠ’ ಎನ್ನಲಾಗಿದೆ ಎಂದು ಬರೆದಿದ್ದೆನಷ್ಟೆ. ಅದನ್ನು ಕೆಲವು ಭಾಷಾಸೂಕ್ಷ್ಮ ಓದುಗಮಿತ್ರರು ವಿಶೇಷವಾಗಿ ಗಮನಿಸಿದ್ದಾರೆ. ಉಂಗುಷ್ಠ ಎಂಬ ಪದವೂ ಕನ್ನಡದಲ್ಲಿ ಚಾಲ್ತಿಯಲ್ಲಿದೆಯಲ್ಲ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ರತ್ನಕೋಶ ನಿಘಂಟಿನ ೩೨ನೇ ಪುಟದಲ್ಲಿ ‘ಉಂಗುಷ್ಠ = ಕಾಲಿನ ಹೆಬ್ಬೆರಳು; ಎಕ್ಕಡದಲ್ಲಿ ಹೆಬ್ಬೆರಳನ್ನು ತೂರಿಸಲು ಮಾಡಿರುವ ಉಂಗುರದಂಥ ರಚನೆ’ ಎಂಬ ವಿವರಣೆಯಿದೆಯಲ್ಲ ಎಂದು ಪತ್ರ ಬರೆದು ತಿಳಿಸಿದ್ದಾರೆ. ಬೆಂಗಳೂರಿನ ಡಿ.ಪಿ.ಸುಹಾಸ್ ಎಂಬುವವರಂತೂ ಅಂಗುಷ್ಠ, ಉಂಗುಷ್ಠ, ಉಂಗುಟ ಈ ಎಲ್ಲ ಪದಗಳೂ ಕನ್ನಡದಲ್ಲಿ ವ್ಯಾಪಕವಾಗಿ ಬಳಕೆಯಾಗಿವೆ ಎಂದು ಸೋದಾಹರಣ ಮಾಹಿತಿಯನ್ನು ಆಸಕ್ತಿಕರವಾಗಿ ಪೋಣಿಸಿ ಎರಡು ಪುಟಗಳ ಪ್ರಬಂಧದಂತೆ ಬರೆದು ಕಳಿಸಿದ್ದಾರೆ. ಯಾರ ವಾದ ಸರಿ ಯಾರದು ತಪ್ಪು ಎಂದು ಹಠಕ್ಕೆ ಬೀಳದೆ ನಾನು ಮತ್ತು ಸುಹಾಸ್ ಒಂದಿಷ್ಟು ಇಂಟರೆಸ್ಟಿಂಗ್ ಇಮೇಲ್‌ಗಳ ವಿನಿಮಯ ಮಾಡಿಕೊಂಡಿದ್ದೇವೆ. ‘ಅಂಗುಷ್ಠಪುರಾಣ’ಕ್ಕೆ ಸೇರಬಹುದಾದ ಅಂಶಗಳ ಸ್ವಾರಸ್ಯಕರ ಪಟ್ಟಿ ತಯಾರಿಸಿದ್ದೇವೆ. ಮೂಲ ಸಂಸ್ಕೃತ ಪದ ‘ಅಂಗುಷ್ಠ’ ಅಂತಲೇ ಇರುವುದು; ಕೈ ಮತ್ತು ಕಾಲಿನ ಹೆಬ್ಬೆರಳುಗಳೆರಡಕ್ಕೂ ಅಂಗುಷ್ಠ ಎಂದೇ ಹೆಸರು. ಕನ್ನಡದಲ್ಲಿ ಅದು ‘ಅಂಗುಷ್ಠ’ ಎಂಬ ರೂಪದಲ್ಲಿ, ‘ಉಂಗುಟ’ ಎಂಬ ತದ್ಭವದ ರೂಪದಲ್ಲಿ (ಕುಮಾರವ್ಯಾಸನ ಕಾವ್ಯದಲ್ಲಿರುವಂತೆ), ಅಥವಾ ‘ಉಂಗುಷ್ಠ’ ಎಂಬ ಅಪಭ್ರಂಶದ ರೂಪದಲ್ಲಿಯೂ ಬಳಕೆಯಲ್ಲಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇವೆ.

ಆ ದೃಷ್ಟಿಯಿಂದ ನೋಡಿದರೆ ಪ್ರೇಮಲೋಕದ ಹಾಡಿನಲ್ಲಿ ಉಂಗುಷ್ಠ ಅಂತಿರುವುದು ಓಕೆ. ಹೇಗೂ ಅದು ಕನ್ನಡ ಚಿತ್ರಗೀತೆ. ಉಂಗುಷ್ಠ ಪದ ಕನ್ನಡ ನಿಘಂಟುಗಳಲ್ಲೂ ಸೇರಿಕೊಂಡಿರುವುದರಿಂದ ಮಾಫಿ ಮಾಡಬಹುದು. ಆದರೆ, ‘ಪ್ರೇಮಲೋಕ’ ಸಿನೆಮಾ ಒಂದು ವೇಳೆ ಸಂಸ್ಕೃತದಲ್ಲಿ ಬಂದಿದ್ದಿದ್ದರೆ!? ಆಗ ನಿಂಬೆಹಣ್ಣಿನಂಥ ಹುಡುಗಿಯ ಹಾಡೂ ಸಂಸ್ಕೃತದಲ್ಲಿರಬೇಕಾಗುತ್ತಿತ್ತು. ಅಂಗುಷ್ಠ ಪದ ಕೂಡ ಶುದ್ಧರೂಪದಲ್ಲಿಯೇ ಕಂಗೊಳಿಸುತ್ತಿತ್ತು. ಹೀಗೇ ಒಮ್ಮೆ ಯೋಚಿಸಿ.  ಅನುಷ್ಟುಪ್ ಛಂದದಲ್ಲಿ ಪ್ರೇಮಲೋಕಃ ಸಿನೆಮಾದ ಚಂದದ ಹಾಡು! ಹೀಗೆ-

ನಿಂಬೂಕಾಭಾ ಇಯಂ ಬಾಲಾ ಪಶ್ಯಂತ್ವೇನಾಮಿಹಾಗತಾಂ|

ಉತ್ತಮಾಂಗಂ ಸಮಾರಭ್ಯ ಅಂಗುಷ್ಠಾಂತಂ ಮನೋರಮಾ||

ಅರ್ಥವಾಗಲಿಲ್ಲವೇ? ತಾಳಿ, ಇದರ ಪ್ರತಿಪದಾರ್ಥ ಅಂದರೆ ಪದಪದಗಳಾಗಿ ಬಿಡಿಸಿದಾಗಿನ ಅರ್ಥ ಹೇಳುತ್ತೇನೆ- ನಿಂಬೂಕ ಆಭಾ (ನಿಂಬೆಹಣ್ಣಿನ ಕಾಂತಿಯುಳ್ಳ) ಇಯಂ ಬಾಲಾ (ಈ ಹುಡುಗಿ) ಇಹ ಆಗತಾಮ್ (ಇಲ್ಲಿಗೆ ಬಂದಿರುವವಳನ್ನು) ಪಶ್ಯಂತು (ನೋಡುವಂಥವರಾಗಿ). ಉತ್ತಮಾಂಗಂ (ತಲೆಯಿಂದ) ಸಮಾರಭ್ಯ (ಮೊದಲ್ಗೊಂಡು) ಅಂಗುಷ್ಠಾಂತಂ (ಕಾಲಿನ ಹೆಬ್ಬೆರಳಿನವರೆಗೂ) ಮನೋರಮಾ (ಮುದ ನೀಡುವ ಸೌಂದರ್ಯವುಳ್ಳವಳು, ಯಾವುದೇ ಕೊರತೆಯಿಲ್ಲದವಳು). ಆಹಾ! ಸಂಸ್ಕೃತ ಕಾವ್ಯ, ಅದರಲ್ಲೂ ಹೆಣ್ಣಿನ ಬಣ್ಣನೆಯೆಂದ ಮೇಲೆ ರಸಿಕತೆಯ ಮಹಾಪೂರ!

ಅದಿರಲಿ, ಅಂಗುಷ್ಠಪುರಾಣದಲ್ಲಿ ಸಂಗ್ರಹಿಸಲಾದ ಇನ್ನೂ ಕೆಲವು ವಿನೋದ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ. ಕಾಲಿನ ಹೆಬ್ಬೆರಳನ್ನಷ್ಟೇ ಇವತ್ತು ವ್ಯಾಖ್ಯಾನಿಸಿದ್ದು. ಕೈಯ ಹೆಬ್ಬೆರಳು ಕೂಡ ‘ಅಂಗುಷ್ಠ’ವೇ. ಅದಕ್ಕೆ ಸಂಬಂಧಿಸಿದ ಕಥೆಗಳೂ ಸ್ವಾರಸ್ಯಕರವಾಗಿವೆ. ಏಕಲವ್ಯನ ಕಥೆ ಇದೆ, ಥಮ್ಸ್‌ಅಪ್ ಪಾನೀಯದ ಪುರಾಣವಿದೆ, ರೂಲ್ ಆಫ್ ಥಂಬ್ ಎಂಬ ನುಡಿಗಟ್ಟಿನ ಚರಿತ್ರೆಯನ್ನು ಅರಿಯುವುದಿದೆ. ಹೆಬ್ಬೆಟ್ಟಿನ ಸಹಿ (ಅಂಗುಠಾಛಾಪ್) ಹಾಕುವ ಕ್ರಮ ಯಾವಾಗ ಎಲ್ಲಿ ಶುರುವಾಯ್ತು ಎಂದು ತಿಳಿಯುವುದಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ ‘ಅಂಗುಷ್ಠಸಾಹಿತ್ಯ’ ಎಂಬ ಅಲ್ಟ್ರಾಮಾಡರ್ನ್ ಸಾಹಿತ್ಯಪ್ರಕಾರವೊಂದನ್ನು ಪರಿಚಯ ಮಾಡಿಕೊಳ್ಳುವುದಿದೆ. ಸದ್ಯಕ್ಕೆ ಅವೆಲ್ಲ ನನ್ನ ಕಂಪ್ಯೂಟರ್‌ನ ‘ಥಂಬ್ ಡ್ರೈವ್’ನಲ್ಲಿವೆ. ನೆಕ್ಸ್ಟ್ ಸಂಡೇ ಅಂಕಣದಲ್ಲಿ ನೋಡೋಣ. ಅಲ್ಲಿಯವರೆಗೆ, ಅಂಗುಷ್ಠಸಾಹಿತ್ಯ ಅಂದರೆ ಏನಿರಬಹುದು ಎಂದು ಯೋಚಿಸಿ. ನೀವೂ ಓರ್ವ ಅಂಗುಷ್ಠಸಾಹಿತಿ ಆಗಿದ್ದರೆ ನಿಮಗೆ ಆಗಲೇ ಗೊತ್ತಾಗಿಹೋಯ್ತು ಎಂದುಕೊಳ್ಳುವೆ. ಸಿಗೋಣ, ಮುಂದಿನವಾರ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!

Podbean App

Play this podcast on Podbean App