Episodes

Saturday Oct 22, 2011
Naarada Also Uses Deodorant
Saturday Oct 22, 2011
Saturday Oct 22, 2011
ದಿನಾಂಕ 23 ಅಕ್ಟೋಬರ್ 2011ರ ಸಂಚಿಕೆ...
ನಾರದ ಮುನಿ ಪರಿಮಳಕ್ಕೆ ಅತ್ತರು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವರು ತ್ರಿಲೋಕಸಂಚಾರಿ. ತಂಬೂರಿ ಹಿಡಕೊಂಡು ಹೊರಟರೆಂದರೆ ತಿರುಗಾಟದಲ್ಲೇ ಬಿಜಿಯಾಗುತ್ತಾರೆ. ಒಮ್ಮೆ ಅನಂತನಾಗ್ ರೂಪದಲ್ಲಿ ಭೂಲೋಕಕ್ಕೂ ಬಂದಿದ್ರಲ್ಲ? “ಇದು ಎಂಥಾ ಲೋಕವಯ್ಯಾ...” ಎಂದು ಹಾಡಿಕೊಳ್ಳುತ್ತ ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಮೇಲೆ ಓಡಾಡಿದ್ರಲ್ಲ? (ಈಗಾದ್ರೆ ಮೆಟ್ರೊ ರೈಲ್ನಲ್ಲೂ ಕಾಣಿಸಿಕೊಳ್ತಿದ್ರೋ ಏನೊ). ಇಂತಿರ್ಪ ನಾರದ ಮಹರ್ಷಿಗಳ ಒಂದು ಖಾಸಗಿ ವಿಚಾರ ಮಾತ್ರ ನಿಮಗೆ ಗೊತ್ತಿಲ್ಲ ಎಂದುಕೊಳ್ಳುತ್ತೇನೆ. ಯಾವ ಪುರಾಣದಲ್ಲೂ ಉಲ್ಲೇಖಗೊಂಡಿರದ ವಿಚಾರವಿದು. ಏನಪ್ಪಾ ಅಂತಂದ್ರೆ ನಾರದ ಮಹರ್ಷಿಗಳದು ಒಂದು ರೀತಿಯ ವಿಶಿಷ್ಟ ಭೌತಿಕಲಕ್ಷಣ. ಅವರ ಮೈಕೈ ಬೆವರುವುದಿಲ್ಲ. ಮೈಗೆ ಕೊಳೆ ಅಂಟುವುದಿಲ್ಲ. ಹಾಗಾಗಿ ದಿನಾ ಸ್ನಾನ ಮಾಡಬೇಕಂತಲೂ ಇಲ್ಲ (ಟೂರ್ನಲ್ಲಿ ಇರುವಾಗ ಟೈಮೂ ಸಿಗಲಿಕ್ಕಿಲ್ಲ, ಕೆಲವೊಮ್ಮೆ ಅನುಕೂಲವೂ ಆಗಲಿಕ್ಕಿಲ್ಲ ಎನ್ನಿ). ಯಾವಾಗ ನೋಡಿದರೂ ತಾಜಾ ಮೈ ಕಾಂತಿ. ಕೊಳೆತು ನಾರುವ ಚಾನ್ಸೇ ಇಲ್ಲ. ಅದಕ್ಕೇ ಅವರಿಗೆ ‘ನಾರದ’ ಮಹರ್ಷಿ ಎಂದು ಹೆಸರು!


Saturday Oct 08, 2011
An Affectionate Obituary to Matturu Krishnamurthy
Saturday Oct 08, 2011
Saturday Oct 08, 2011
ದಿನಾಂಕ 9 ಅಕ್ಟೋಬರ್ 2011ರ ಸಂಚಿಕೆ...
ಮತ್ತೂಮತ್ತೂ ಮನಸ್ಸಲ್ಲುಳಿವ ಮತ್ತೂರಜ್ಜ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದಂತೆ. ಮಹಾಭಾರತ ಕಣ್ಣಲಿ ಕುಣಿಯುವುದಂತೆ. ಮೈಯಲಿ ಮಿಂಚಿನ ಹೊಳೆ ತುಳುಕಾಡುವುದಂತೆ. ಅಂತಹ ಕುಮಾರವ್ಯಾಸನನ್ನು ಮತ್ತವನ ಕಾವ್ಯವನ್ನು ಮತ್ತೂರು ಕೃಷ್ಣಮೂರ್ತಿಯವರು ರಸವತ್ತಾಗಿ ಬಣ್ಣಿಸಿದರೆಂದರೆ? ಆಗಲೂ ಅಷ್ಟೇ. ಅದ್ಭುತವಾದ ಅನುಭವ! ‘ತಿಳಿಯಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂದದಿ’ ಎನ್ನುತ್ತಾನೆ ಕುಮಾರವ್ಯಾಸ. ಮತ್ತೂರರ ಪ್ರವಚನವಾದರೋ ಜಾಣರಿಗಷ್ಟೇ ಅಲ್ಲ, ನಮ್ಮಂಥ ಪರಮ ಪಾಮರರಿಗೂ ಸುಲಭದಲ್ಲಿ ಅರ್ಥವಾಗುವಂಥ ದ್ರಾಕ್ಷಾಪಾಕ. ಕಣ್ಮುಂದೆ ತೆರೆದುಕೊಳ್ಳುವ ದೇವ ದಾನವ ಯಕ್ಷ ಗಂಧರ್ವ ಕಿನ್ನರ ಲೋಕ. ಕಥೆಯಲ್ಲಿನ ಒಂದೊಂದು ಪಾತ್ರಕ್ಕೂ ಜೀವ ತುಂಬಿ ತಾವೇ ಆ ಪಾತ್ರವೇನೋ ಎಂಬ ಭಾವಾಭಿವ್ಯಕ್ತಿಯಿಂದ ಬಣ್ಣಿಸುವ ಅಸಾಮಾನ್ಯ ಚಳಕ. ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದರೆ ನಮ್ಮ ಮನೆಯ ಅಜ್ಜನೇ ಕಥೆ ಹೇಳುತ್ತಿದ್ದಾನೇನೋ ಅನ್ನಿಸುವ ಆಪ್ತತೆಯ ಪುಳಕ.

Saturday Oct 01, 2011
Honesty under watchful eyes
Saturday Oct 01, 2011
Saturday Oct 01, 2011
ದಿನಾಂಕ 2 ಅಕ್ಟೋಬರ್ 2011ರ ಸಂಚಿಕೆ...
ಕನಕದಾಸರೇಕೆ ಬಾಳೆಹಣ್ಣು ತಿನ್ನಲಿಲ್ಲ?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ. ತುಂಡು ಬಟ್ಟೆ ಮಾನ ಮುಚ್ಚೋಕೆ. ಅಂಗೈಯಗಲದಷ್ಟು ಜಾಗ ಹಾಯಾಗಿ ಇರೋದಕ್ಕೆ. ಇವು ‘ಜಿಮ್ಮಿಗಲ್ಲು’ ವಿಷ್ಣುವರ್ಧನ್ಗಷ್ಟೇ ಅಲ್ಲ, ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಮೂಲಭೂತ ಅಗತ್ಯಗಳು. ಇದೇನೂ ನಿನ್ನೆಮೊನ್ನೆ ಕಂಡುಕೊಂಡ ಹೊಸ ಸಂಶೋಧನೆಯಲ್ಲ. ಆದರೆ, ಒಂದುವೇಳೆ ಪ್ರತಿಯೊಬ್ಬ ಮನುಷ್ಯನೂ ಕೇವಲ ಸ್ವಾರ್ಥಿಯಾಗಿ, ತನ್ನೊಬ್ಬನ ಉಳಿವು-ಅಳಿವಿನ ಬಗ್ಗೆಯಷ್ಟೇ ಚಿಂತಿಸುವವನಾಗಿದ್ದರೆ ಹೇಗಿರುತ್ತಿತ್ತು? ಪರಸ್ಪರ ವಿಶ್ವಾಸ, ಸಹಾಯ, ಸಹಕಾರ ಅಂತೆಲ್ಲ ಏನೂ ಇಲ್ಲ. ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಸನ್ನಿವೇಶ. ಪುಣ್ಯಕ್ಕೆ ಹಾಗೆ ಇಲ್ಲ ಪರಿಸ್ಥಿತಿ. ಎಷ್ಟೋ ಸಂದರ್ಭಗಳಲ್ಲಿ ನಮಗೆ ಗುರುತು-ಪರಿಚಯ ಇಲ್ಲದವರ ಬಗ್ಗೆ ಸಮೇತ ನಾವು ಉದಾರಿಗಳಾಗುತ್ತೇವೆ. ಮುಂದೆ ಅವರು ಭೇಟಿಯಾಗುತ್ತಾರೋ ಇಲ್ಲವೋ, ಮಾಡಿದ ಉಪಕಾರಕ್ಕೆ ಪ್ರತಿಫಲ ದೊರಕುತ್ತದೋ ಇಲ್ಲವೋ ಮುಂತಾಗಿ ಯಾವೊಂದು ಆಲೋಚನೆಯೂ ಇಲ್ಲದೆ ಆಕ್ಷಣಕ್ಕೆ ಏನು ಸಾಧ್ಯವಾಯ್ತೋ ಅಷ್ಟನ್ನು ಮಾಡುತ್ತೇವೆ. ಕಣ್ಣು ಕಾಣದ ಮುದುಕನನ್ನು ಕೈಹಿಡಿದು ರಸ್ತೆ ದಾಟಿಸುತ್ತೇವೆ. ಕಂಕುಳಲ್ಲಿ ಮಗು, ಕೈಯಲ್ಲೊಂದು ಭಾರದ ಚೀಲ ಹಿಡಿದುಕೊಂಡು ಬಸ್ ಹತ್ತುವ ಹೆಂಗಸಿಗೆ ಸೀಟ್ ಬಿಟ್ಟುಕೊಡುತ್ತೇವೆ. ನೆರೆ-ಬರ-ಭೂಕಂಪಗಳಿಂದ ತತ್ತರಿಸಿದವರ ಜಾತಿಮತ ಲೆಕ್ಕಿಸದೆ ಮನಮಿಡಿಯುತ್ತೇವೆ, ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬಂಥ ಸರಳ ಸಂದೇಶಗಳಿಂದಿರಬಹುದು, ಪರೋಪಕಾರಾರ್ಥಮಿದಂ ಶರೀರಂ ಎಂದುಕೊಂಡೇ ಗಂಧದ ಕೊರಡಿನಂತೆ ಬಾಳು ಸವೆಸುವವರನ್ನು ಆದರ್ಶವಾಗಿಟ್ಟುಕೊಂಡು ಇರಬಹುದು, ಸಂತರ ಸದ್ಬೋಧೆಯಿಂದಿರಬಹುದು ಅಂತೂ ಅನಾಮಧೇಯ ಒಳ್ಳೆತನ ಮತ್ತು ಔದಾರ್ಯಗಳು ಈ ಪ್ರಪಂಚದಲ್ಲಿ ಇನ್ನೂ ಜೀವಂತವಾಗಿಯೇ ಇವೆ ಎನ್ನುವುದು ಹದಿನಾರಾಣೆ ಸತ್ಯ. ಈಬಗ್ಗೆ ಮನಃಶಾಸ್ತ್ರಜ್ಞರು ಇನ್ನಷ್ಟು ಬೆಳಕು ಚೆಲ್ಲುತ್ತಾರೆ. ಮನುಷ್ಯನಲ್ಲಿ ಒಳ್ಳೆತನವೂ ಸುಖಾಸುಮ್ಮನೆ ಇರುವುದಿಲ್ಲ. ತನ್ನ ವಾಂಛೆಗಳಿಗಾಗಿ ಏನನ್ನೂ ಮಾಡಬಲ್ಲನಾದರೂ ‘ಸಮಾಜದ ದೃಷ್ಟಿ’ಯಲ್ಲಿ ತನ್ನ ಗೌರವಕ್ಕೆ ಚ್ಯುತಿ ಬರಬಾರದೆಂದು ಸಾಮಾನ್ಯವಾಗಿ ಪ್ರತಿಯೊಬ್ಬನಿಗೂ ಕಾಳಜಿ ಇರುತ್ತದೆ. ಸ್ವಾರ್ಥ, ಮೋಸ, ವಂಚನೆಗಳಲ್ಲಿ ತೊಡಗಿರುವವರು ಒಂದೊಮ್ಮೆ ಸಿರಿವಂತರಾದರೂ ಅದು ಶಾಶ್ವತವಲ್ಲ ಎಂದು ಇತಿಹಾಸದುದ್ದಕ್ಕೂ (ಇದೀಗ ತಿಹಾರ, ಪರಪ್ಪನ ಅಗ್ರಹಾರ, ಚಂಚಲಗೂಡ ಜೈಲುಗಳಲ್ಲೂ) ಸಾಕ್ಷಿಗಳೇ ಇವೆಯಲ್ಲ? ಹಾಗಾಗಿ ‘ಸಮಾಜದ ದೃಷ್ಟಿ’ ತನ್ನ ಮೇಲಿರುತ್ತದೆ ಎಂಬ ಹೆದರಿಕೆ, ಲಜ್ಜೆಗೆಟ್ಟ ದಗಾಕೋರರಿಗೆ ಇಲ್ಲದಿದ್ದರೂ ಸರಳ ಮನಸ್ಸಿನ ಶ್ರೀಸಾಮಾನ್ಯನಿಗೆ ಇದ್ದೇ ಇರುತ್ತದೆ. ಆ ಹೆದರಿಕೆಯೇ ಒಳ್ಳೆತನಕ್ಕೆ, ಸಹಕಾರಯುತ ಸಹಬಾಳ್ವೆಗೆ ಸಹಾಯಕವಾಗುತ್ತದೆ. ಯಾರಾದರೂ ತನ್ನನ್ನು ನೋಡುತ್ತಿದ್ದಾರೆ/ಗಮನಿಸುತ್ತಿದ್ದಾರೆ ಎಂಬ ಅರಿವು ಇದ್ದಾಗ ಮನುಷ್ಯನ ವರ್ತನೆಯ ಖದರೇ ಬೇರೆ. ಅದು ಎಲ್ಲಿಯವರೆಗೆಂದರೆ ಆ ‘ನೋಡುವ ಕಣ್ಣು’ಗಳು ನಿಜವೇ ಆಗಿರಬೇಕಾದ್ದಿಲ್ಲ. ಸರ್ವೈಲೆನ್ಸ್ ಕ್ಯಾಮರಾ/ ಕ್ಲೋಸ್ಸರ್ಕ್ಯೂಟ್ ಟಿವಿ ಕಣ್ಣುಗಳಾಗಿರಬೇಕಂತನೂ ಇಲ್ಲ. ಕಣ್ಣುಗಳನ್ನು ಹೋಲುವ ಚಿತ್ರವಿದ್ದರೂ ಸಾಕು, ಅದನ್ನು ನೋಡಿ ಮೆದುಳು ಜಾಗ್ರತವಾಗುತ್ತದಂತೆ. ಒಂದು ಪ್ರಯೋಗದಲ್ಲಿ, ಹಾಳೆ-ಪೆನ್ನಿನ ಬದಲು ಕಂಪ್ಯೂಟರ್ನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳು ಪರದೆಯ ಮೇಲೆ ಪುಟ್ಟದಾದ ಜೋಡಿಕಣ್ಣುಗಳ ಚಿತ್ರವಿದ್ದುದರಿಂದ ಹೆಚ್ಚಿನ ಪ್ರಾಮಾಣಿಕತೆ ತೋರಿದ್ದನ್ನು ಪರೀಕ್ಷಕರು ಗಮನಿಸಿದ್ದಾರಂತೆ.

Version: 20241125