ಪದ-ಶ್ರಾವ್ಯ

ಈಗ ಆಡಿಯೋ ಟಚ್!

8
Oct 2011
An Affectionate Obituary to Matturu Krishnamurthy
Posted in DefaultTag by sjoshi at 10:03 am

ದಿನಾಂಕ  9 ಅಕ್ಟೋಬರ್ 2011ರ ಸಂಚಿಕೆ...

ಮತ್ತೂಮತ್ತೂ ಮನಸ್ಸಲ್ಲುಳಿವ ಮತ್ತೂರಜ್ಜ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದಂತೆ. ಮಹಾಭಾರತ ಕಣ್ಣಲಿ ಕುಣಿಯುವುದಂತೆ. ಮೈಯಲಿ ಮಿಂಚಿನ ಹೊಳೆ ತುಳುಕಾಡುವುದಂತೆ. ಅಂತಹ ಕುಮಾರವ್ಯಾಸನನ್ನು ಮತ್ತವನ ಕಾವ್ಯವನ್ನು ಮತ್ತೂರು ಕೃಷ್ಣಮೂರ್ತಿಯವರು ರಸವತ್ತಾಗಿ ಬಣ್ಣಿಸಿದರೆಂದರೆ? ಆಗಲೂ ಅಷ್ಟೇ. ಅದ್ಭುತವಾದ ಅನುಭವ! ‘ತಿಳಿಯಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂದದಿ’ ಎನ್ನುತ್ತಾನೆ ಕುಮಾರವ್ಯಾಸ. ಮತ್ತೂರರ ಪ್ರವಚನವಾದರೋ ಜಾಣರಿಗಷ್ಟೇ ಅಲ್ಲ, ನಮ್ಮಂಥ ಪರಮ ಪಾಮರರಿಗೂ ಸುಲಭದಲ್ಲಿ ಅರ್ಥವಾಗುವಂಥ ದ್ರಾಕ್ಷಾಪಾಕ. ಕಣ್ಮುಂದೆ ತೆರೆದುಕೊಳ್ಳುವ ದೇವ ದಾನವ ಯಕ್ಷ ಗಂಧರ್ವ ಕಿನ್ನರ ಲೋಕ. ಕಥೆಯಲ್ಲಿನ ಒಂದೊಂದು ಪಾತ್ರಕ್ಕೂ ಜೀವ ತುಂಬಿ ತಾವೇ ಆ ಪಾತ್ರವೇನೋ ಎಂಬ ಭಾವಾಭಿವ್ಯಕ್ತಿಯಿಂದ ಬಣ್ಣಿಸುವ ಅಸಾಮಾನ್ಯ ಚಳಕ. ಮೈಯೆಲ್ಲ ಕಿವಿಯಾಗಿ  ಕೇಳುತ್ತಿದ್ದರೆ ನಮ್ಮ ಮನೆಯ ಅಜ್ಜನೇ ಕಥೆ ಹೇಳುತ್ತಿದ್ದಾನೇನೋ ಅನ್ನಿಸುವ ಆಪ್ತತೆಯ ಪುಳಕ.

matturu.jpg

ಮತ್ತೂರು ಕೃಷ್ಣಮೂರ್ತಿ ವಿಧಿವಶರಾದರೆಂಬ ಸುದ್ದಿ ಬಂದಾಗ ನಂಬಲಿಕ್ಕೇ ಆಗಲಿಲ್ಲ. ಅರ್ರೆ! ನಿನ್ನೆ ಬೆಳಿಗ್ಗೆ ಬಂದಿದ್ದರು ನಮ್ಮನೆಗೆ. ಮೊನ್ನೆಯೂ ಬಂದಿದ್ರು. ದಿನಾ ಬೆಳಿಗ್ಗೆ ಏಳು ಗಂಟೆಗೆ ತಪ್ಪದೇ ಬರುತ್ತಿದ್ದವರು ಇನ್ನುಮುಂದೆ ಬರೋದೇ ಇಲ್ಲ ಕಾಣಸಿಗುವುದೇ ಇಲ್ಲ ಎಂದರೆ ನಂಬುವುದಾದರೂ ಹೇಗೆ? ಆ ಆಘಾತಕರ ಸುದ್ದಿಯನ್ನು ಅರಗಿಸಿಕೊಳ್ಳುವುದಾದರೂ ಹೇಗೆ? ಉದಯ ಟಿವಿಯಲ್ಲಿ ಅವರು ಇನ್ನೊಬ್ಬ ವಿದ್ವಾಂಸ ಹೊಸಹಳ್ಳಿ ಕೇಶವಮೂರ್ತಿಯವರ ಜೊತೆಗೂಡಿ ನಡೆಸಿಕೊಡುತ್ತಿದ್ದ ಪ್ರಭಾತಸಮಯ ಪುರಾಣ ಪ್ರವಚನ ಕಾರ್ಯಕ್ರಮವನ್ನು ನಿತ್ಯಪ್ರಾರ್ಥನೆಯೆಂಬಂತೆ ವೀಕ್ಷಿಸಿ ಪುನೀತರಾದವರಿಗೆಲ್ಲ ಬಹುಶಃ ಹಾಗೆಯೇ ಅನಿಸಿದೆ. ಸಾವಿನ ಸುದ್ದಿಯಿಂದ ಗರಬಡಿದಿದೆ. ಕುಟುಂಬದ ಹಿರಿಯರೊಬ್ಬರು ದೈವಾಧೀನರಾದಾಗಿನ ವಿಷಾದ, ವ್ಯಾಕುಲತೆ ಮತ್ತು ಅನಾಥಪ್ರಜ್ಞೆ ಕಾಡಿದೆ.

೨೦೦೮ರಲ್ಲಿ ಶಿಕಾಗೋದಲ್ಲಿ ನಡೆದ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಮತ್ತೂರು ಕೃಷ್ಣಮೂರ್ತಿಯವರೂ ಬಂದಿದ್ದರು. ಅವರ ಉಪಸ್ಥಿತಿ ಸಮ್ಮೇಳನಕ್ಕೊಂದು ಅರ್ಥಪೂರ್ಣ ಮೆರುಗನ್ನು ತಂದಿತ್ತು. ಉದಯ ಟಿವಿಯಿಂದಾಗಿ ಅದಾಗಲೇ ಬಹಳಷ್ಟು ಅಮೆರಿಕನ್ನಡಿಗರಿಗೆ ಮತ್ತೂರರ ಪರಿಚಯವಾಗಿದ್ದರೂ ಸಮ್ಮೇಳನದಲ್ಲಿ ಮುಖತಃ ಭೇಟಿಯಾಗುವ ಅವಕಾಶ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದ್ದರು. ಅವರದು ಎಷ್ಟು ಆತ್ಮೀಯ ವ್ಯಕ್ತಿತ್ವವೆಂದರೆ ಇದೇ ಮೊದಲಸಲ ಅವರನ್ನು ನೋಡಿದವರಿಗೂ ತಮ್ಮ ತಾತನನ್ನೋ ದೊಡ್ಡಪ್ಪನನ್ನೋ ಕಂಡಂಥ ಹಿಗ್ಗು. ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕಿಯರಲ್ಲೊಬ್ಬರಾಗಿ ಅತ್ತಿಂದಿತ್ತ ಓಡಾಡಿಕೊಂಡಿದ್ದ ಅನುಪಮಾ ಅವರಿಗೆ ಹಾಗೇ‌ಆಯ್ತು. ಮತ್ತೂರರ ಕಾಲುಮುಟ್ಟಿ ನಮಸ್ಕರಿಸಿದಾಗ ‘ತುಂಬ ಲಕ್ಷಣವಾಗಿ ಕಾಣ್ತಿದ್ದಿಯಮ್ಮಾ ಚೆನ್ನಾಗಿ ನಿರೂಪಣೆ ಮಾಡ್ತಿದ್ದೀ!’ ಎಂದು ನೆಟಿಕೆ ಮುರಿದು ಹರಸಿದ್ದರು. ಸವಿತಾ ರವಿಶಂಕರ್ ಅವರದು ಅದಕ್ಕಿಂತಲೂ ಹೃದಯಸ್ಪರ್ಶಿ ಅನುಭವ. ಮೊನ್ನೆ ಮತ್ತೂರರ ನಿಧನವಾರ್ತೆ ಕೇಳಿದೊಡನೆ ಅವರು ಮತ್ತೆಮತ್ತೆ ನೆನಪಿಸಿಕೊಂಡದ್ದು ಅದನ್ನೇ. ‘ಅಕ್ಕ’ ಸಮ್ಮೇಳನಕ್ಕೆ ಸವಿತಾ ಮೈಸೂರಿನಿಂದ ತನ್ನ ತಂದೆ-ತಾಯಿಯರನ್ನೂ ಕರೆಸಿದ್ದರು. ಅವರ ತಾಯಿಗೆ ಅದೇನೋ ಅನಾರೋಗ್ಯದಿಂದ ಓಡಾಡುವ ಶಕ್ತಿ ಇರಲಿಲ್ಲವಾಗಿ ವ್ಹೀಲ್‌ಚೇರ್‌ನಲ್ಲೇ ಎಲ್ಲಕಡೆಗೂ ಕರಕೊಂಡು ಹೋಗ್ತಿದ್ರು ಸವಿತಾ. ಜತೆಯಲ್ಲೇ ಅವರ ಇಬ್ಬರು ಹೆಣ್ಮಕ್ಕಳೂ ಇರ್ತಿದ್ರು. ಹಾಗೆ ಅವರೆಲ್ಲ ಒಟ್ಟೊಟ್ಟಿಗೇ ಇರುತ್ತಿದ್ದುದನ್ನು ಗಮನಿಸಿದ ಮತ್ತೂರರು ಸವಿತಾ ಬಳಿ ಹೇಳಿದ್ದರಂತೆ- “ಪರವಾ‌ಇಲ್ವೇ! ಮುಂದೆ ನಿನ್ನ ಮಕ್ಕಳೂ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳೋದನ್ನು ಈಗಲೇ ಗ್ಯಾರಂಟಿ ಮಾಡಿಟ್ಟಿದ್ದೀಯಾ. ಒಳ್ಳೆಯದಾಗಲಿ ನಿನಗೂ ನಿನ್ನ ಮಕ್ಕಳಿಗೂ!” ಆಮೇಲೆ ಮಾರನೆವರ್ಷ ಮೈಸೂರಿನಲ್ಲಿ ಯಾವುದೋ ಪ್ರವಚನಮಾಲೆಯಲ್ಲಿ ಸವಿತಾ ಭೇಟಿಯಾದಾಗ “ಓಹ್ ನೀವು ವ್ಹೀಲ್‌ಚೇರ್ ಸೇವೆಯವರಲ್ವಾ?” ಎಂದು ಪರಿಚಯ ನೆನಪಿಟ್ಟುಕೊಂಡಿದ್ದರಂತೆ!

ಮತ್ತೂರರ ಶೈಲಿಯಲ್ಲೇ ಹೇಳುವುದಾದರೆ- ಗಮನಿಸಬೇಕು... ಇದನ್ನು ನಾವು ಮುಖ್ಯವಾಗಿ ಗಮನಿಸಬೇಕು. ಸದ್ಗುಣಗಳನ್ನು, ಸದ್ವಿಚಾರಗಳನ್ನು ಅದೆಷ್ಟು ಸೂಕ್ಷ್ಮವಾಗಿ ಗಮನಿಸಿ ಪುರಸ್ಕರಿಸುವ ಪರಿಪಾಠ ಮತ್ತೂರರದು! ಅದಕ್ಕಿಂತಲೂ ಹೆಚ್ಚಾಗಿ, ಮುಂದಿನ ಪೀಳಿಗೆಗೂ ಈ ಜೀವನಮೌಲ್ಯಗಳ ಅರಿವಾಗಬೇಕು. ಅದೂ ಕೇವಲ ಒಣ ಉಪದೇಶಗಳಿಂದಲ್ಲ. ಒಳ್ಳೆಯ ಕೆಲಸವನ್ನು ಈರೀತಿ ಮಾಡಿ ತೋರಿಸುವುದರಿಂದ ಒಳ್ಳೆಯ ಪರಿಣಾಮವಾಗಬೇಕು. ಅದಕ್ಕೆ ಅತ್ಯಂತ ಸೂಕ್ತ ನಿದರ್ಶನವನ್ನು ಅವರು ಸವಿತಾ ಕುಟುಂಬದ ದೃಶ್ಯದಿಂದ ಹೇಗೆ ಸೆರೆಹಿಡಿದಿದ್ದರು ಎನ್ನುವುದನ್ನು ನಾವು ಗಮನಿಸಬೇಕು. ‘ಪರಗುಣ ಪರಮಾಣೂನ್ ಪರ್ವತೀಕೃತ್ಯನಿತ್ಯ ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ’ (ಇನ್ನೊಬ್ಬರ ಒಳ್ಳೆಯ ಗುಣವನ್ನೇ ದೊಡ್ಡದು ಮಾಡಿ ಸಂತೋಷಪಟ್ಟುಕೊಳ್ಳುವ ಸಂತರು ನಿಜಕ್ಕೂ ಎಷ್ಟು ಜನರಿದ್ದಾರೆ?) ಎಂಬ ಸಂಸ್ಕೃತ ಸುಭಾಷಿತ ಬಹುಶಃ ಮತ್ತೂರರಂಥ ಮಹಾತ್ಮರನ್ನೇ ಉದ್ದೇಶಿಸಿದ್ದಿರಬೇಕು.

ಶಿಕಾಗೋ ಸಮ್ಮೇಳನದಲ್ಲಿ ಮತ್ತೂರರನ್ನು ನಾನೂ ಭೇಟಿಯಾಗಿದ್ದೆ. ‘ಶ್ರೀವತ್ಸ ಜೋಶಿ ಅಂದ್ರೆ ನೀವೇ ಅಲ್ವಾ? ಪತ್ರಿಕೆಯಲ್ಲಿ ನಿಮ್ಮ ಬರಹಗಳನ್ನು ಓದ್ತಿರ್ತೇನೆ’ ಎಂದು ಅವರೇ ಹೇಳಿದಾಗಂತೂ ಮೂಕವಿಸ್ಮಿತನಾಗಿದ್ದೆ. ಆಮೇಲೆ ನನ್ನ ಪುಸ್ತಕಗಳ ಗೌರವಪ್ರತಿ ಕೊಟ್ಟು ಅವರಿಗೆ ನಮಸ್ಕರಿಸಿದ್ದೆ. ಉದಯ ಟಿವಿಯಲ್ಲಿ ಅವರ ಪ್ರವಚನವನ್ನು ನಮ್ಮನೆಯಲ್ಲೂ ನಾವು ತಪ್ಪದೇ ನೋಡುತ್ತೇವೆ. ಸುಶ್ರಾವ್ಯವಾಗಿ ಗಮಕ ವಾಚಿಸುವ ಕೇಶವಮೂರ್ತಿಯವರು; ಆಗಾಗ ಅವರ ಬೆನ್ನುತಟ್ಟಿ ಪ್ರಶಂಸಿಸುವ, ಉತ್ತೇಜಿಸುವ ಕೃಷ್ಣಮೂರ್ತಿಯವರು. ಇಬ್ಬರ ಮುಖದಲ್ಲೂ ಅದೆಂಥ ಬ್ರಹ್ಮತೇಜಸ್ಸು! ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ಅದೆಂಥ ವಿನೀತಭಾವ! ಈ ಜೋಡಿಯ ವಿದ್ವತ್ ವಿಶೇಷವನ್ನೇ ವಿಷಯವಾಗಿಸಿ ಒಂದು ಅಂಕಣ ಬರೆಯಬೇಕೆಂದು ನಾನು ಎಷ್ಟೋಸರ್ತಿ ಅಂದುಕೊಂಡದ್ದಿದೆ.

ಕೆಲ ದಿನಗಳ ಹಿಂದಿನ ಒಂದು ಪ್ರವಚನದಲ್ಲಿ ಒಂದು ಸುಂದರವಾದ ಸಂಸ್ಕೃತ ಶ್ಲೋಕದ ವ್ಯಾಖ್ಯಾನ ನಡೆದಿತ್ತು. ಅದು, ಅಪ್ಪಯ್ಯ ದೀಕ್ಷಿತರ್ ಎಂಬ ಪುರಾತನ ಕವಿ ಶಿವವನ್ನು ಕುರಿತು ಬರೆದ ಶ್ಲೋಕ. ಅದನ್ನು ಅವತ್ತೇ ಗುರುತು ಹಾಕಿಟ್ಟುಕೊಂಡು ಅದರ ಅರ್ಥವನ್ನೂ ಸಂಗ್ರಹಿಸಿ ಶಿವರಾತ್ರಿಯ ಆಸುಪಾಸಿನಲ್ಲಿ ಅಂಕಣಕ್ಕೆ ಆಯ್ದುಕೊಂಡರೆ ಚೆನ್ನಾಗಿರುತ್ತೆ ಎಂದುಕೊಂಡಿದ್ದೆ.

ಮೌಳೌ ಗಂಗಾ ಶಶಾಂಕೌ ಕರಚರಣತಲೇ ಶೀತಲಾಂಗಾ ಭುಜಂಗಾಃ

ವಾಮೇ ಭಾಗೇ ದಯಾರ್ದ್ರಾ ಹಿಮಗಿರಿತನಯಾ ಚಂದನಂ ಸರ್ವಗಾತ್ರೇ

ಇತ್ಥಂ ಶೀತಂ ಪ್ರಭೂತಂ ತವ ಕನಕಸಭಾನಾಥ ಸೋಢುಂ ಕ್ವಶಕ್ತಿಃ

ಚಿತ್ತೇ ನಿರ್ವೇದ ತಪ್ತೇ ಯದಿ ಭವತಿ ನ ತೇ ನಿತ್ಯವಾಸೋ ಮದೀಯೇ

ಇದೇ ಆ ಶ್ಲೋಕ. ಕೇಶವಮೂರ್ತಿಯವರಿಂದ ಸೊಗಸಾಗಿ ರಾಗಬದ್ಧವಾಗಿ ಅದರ ವಾಚನ. ಕೃಷ್ಣಮೂರ್ತಿಯವರಿಂದ ಎಂದಿನಂತೆಯೇ ಅನನ್ಯ ಅಸದೃಶ ಶೈಲಿಯಲ್ಲಿ ವ್ಯಾಖ್ಯಾನ. ಶಿವಭಕ್ತನೊಬ್ಬ ಶಿವನಿಗೆ ಹೇಳುತ್ತಿದ್ದಾನೆ- “ನಿನ್ನ ಜಟೆಯಲ್ಲಿ ಜುಳುಜುಳು ಹರಿಯುವ ಗಂಗೆ ಮತ್ತು ತಣ್ಣಗಿನ ಚಂದಿರ; ನಿನ್ನ ಮೈಕೈ ಮೇಲೆ ತಣ್ಣಗಿನ ದೇಹವುಳ್ಳ ಸರ್ಪಗಳು; ಎಡಗಡೆಯಲ್ಲಿ ಹಿಮವಂತನ ಮಗಳು. ನಿನ್ನ ಸರ್ವಾಂಗಗಳಿಗೂ ತಣ್ಣನೆಯ ಚಂದನ ಲೇಪನ. ಅಲ್ಲಯ್ಯಾ, ಇಷ್ಟೆಲ್ಲ ತಣ್ಣನೆಯ ವಸ್ತುಗಳೊಡನೆ ಇರುವಾಗ ನಿನಗೆ ಚಳಿಯಾಗುವುದಿಲ್ಲವೇ? ಅದಕ್ಕಿಂತ ನನ್ನ ಎದೆಯೊಳಗೆ ಬಂದು ನೆಲೆಸು. ಇಲ್ಲಿರುವುದು ಚಳಿಯಲ್ಲ. ನಾ ಮಾಡಿದ ಪಾಪಫಲದ ಸುಡುಬಿಸಿ!” ಎಷ್ಟು ಮಾರ್ಮಿಕ ಅರ್ಥವುಳ್ಳ ಶ್ಲೋಕ! ಅಷ್ಟೇ ಸುಂದರವಾದ ವ್ಯಾಖ್ಯಾನ!

ಭಕ್ತನಿಗೆ ಶಿವನಲ್ಲಿ ಭಕ್ತಿ-ಪ್ರೀತಿಗಳು ಬೆಳೆದೂ ಬೆಳೆದೂ ಒಂಥರದಲ್ಲಿ ಸಲುಗೆ ಬಂದುಬಿಟ್ಟಿದೆ. ಬೇರೆಡೆಯ ಕಷ್ಟಗಳಿಗಿಂತ ತನ್ನ ಮನಮಂದಿರದಲ್ಲೇ ಸದಾ ನೆಲೆಸುವಂತೆ ಶಿವನಿಗೆ ಆಹ್ವಾನ ಕೊಡುವಷ್ಟೂ ಸಲುಗೆ ಅದು. ಶಿವಭಕ್ತ ಶಿವನನ್ನು ಕೇಳಿಕೊಂಡಂತೆ ಬಹುಶಃ ನಾವೂ ಈಗ ಮತ್ತೂರರ ಆತ್ಮವನ್ನು ಕೇಳಿಕೊಳ್ಳುವುದರಲ್ಲಿ ಅರ್ಥವಿದೆ. ನಮ್ಮೆಲ್ಲರ ಮನಸ್ಸು ಹೃದಯಗಳಲ್ಲೇ ಅವರ ನೆನಪು ಚಿರಕಾಲ ನೆಲೆಸಬೇಕು; ನೆಲೆಸುತ್ತದೆ.

ಮೊನ್ನೆ ಫೇಸ್‌ಬುಕ್‌ನಲ್ಲ್ ಒಬ್ಬರು ಬರೆದಿದ್ರು- “ಸಾವು ಎಂಥ ಮಾಂತ್ರಿಕ ಅಲ್ವೇನ್ರಿ? ಮುಂದಿನ ನೂರು ವರ್ಷಗಳಿಗೆ ಬೇಕಾದ್ದನ್ನ ಕೊಟ್ಟ ಸ್ಟೀವ್ ಜಾಬ್ಸ್, ಹಿಂದಿನ ಸಾವಿರ ವರ್ಷಗಳ ಸಂಸ್ಕೃತಿ ಸಂಸ್ಕಾರ ಇವತ್ತಿಗೂ ಉಳಿಸಿ ಬೆಳೆಸುವುದಕ್ಕೆ ದುಡಿದ ಮತ್ತೂರು ಕೃಷ್ಣಮೂರ್ತಿ- ಇಬ್ಬರನ್ನೂ ಒಂದೇದಿನ ಮಾಯ ಮಾಡ್ಬಿಡ್ತು!” ಅದಕ್ಕಿಂತಲೂ ನನಗೆ ಅನಿಸುವುದೇನೆಂದರೆ ಮಹಾನ್ (ಸ್ವಾರ್ಥ) ಸಾಧನೆ ಮಾಡಿದ ರಾಜಕಾರಣಿಗಳು ಸತ್ತಾಗ ‘ತುಂಬಲಾರದ ನಷ್ಟ’ ಅಂತೇವಲ್ಲ ಅದು ಆ ಪದಪುಂಜಕ್ಕೆ ನಾವು ಮಾಡುವ ಅವಮಾನ. ನಿಜವಾದ ಅರ್ಥದಲ್ಲಿ ‘ತುಂಬಲಾರದ ನಷ್ಟ’ ಅನಿಸೋದು ಸ್ಟೀವ್ ಜಾಬ್ಸ್, ಮತ್ತೂರು ಕೃಷ್ಣಮೂರ್ತಿಯವರಂಥ ಸಂತರ ನಿಧನದಲ್ಲಿ. ಆದರೂ ಒಂದು ಮಾತು- ‘ತುಂಬಲಾರದ’ ಎಂದೇಕೆ ಅಂದುಕೊಳ್ಳಬೇಕು? ಅಂಥ ಮಹಾತ್ಮರ ಜೀವನವನ್ನೇ ಆದರ್ಶವಾಗಿಟ್ಟುಕೊಂಡು, ಮನಸ್ಸು-ಹೃದಯಗಳಲ್ಲಿ ಅವರ ಚಿಂತನೆಗಳನ್ನೇ ತುಂಬಿಸಿಕೊಂಡು ನಾವೆಲ್ಲರೂ ಮುನ್ನಡೆದರೆ ‘ತುಂಬಲಾರದ್ದು’ ತುಂಬಿಯೇ ತುಂಬುತ್ತದಲ್ಲ!? * * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.