Episodes

Wednesday Jul 06, 2011
Double Decker Airbus A380
Wednesday Jul 06, 2011
Wednesday Jul 06, 2011
ದಿನಾಂಕ 3 ಜುಲೈ 2011ರ ಸಂಚಿಕೆ...
ಎರಡಂತಸ್ತಿನ ಆ ವಿಮಾನದ್ದೇ ಒಂದು ಗತ್ತು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಏರ್ಬಸ್ ಎ-380. ಶಾರ್ಟ್ ಆಗಿ ‘ಎ-ತ್ರೀಎಯ್ಟಿ’. ನಮಗೆಲ್ಲ ಬಿಡಿ, ವಿಮಾನಗಳನ್ನು ಸಿಟಿಬಸ್ಸುಗಳಂತೆ ನೋಡುವ/ಬಳಸುವ ಅಮೆರಿಕನ್ನರಿಗೂ ಅದೊಂದು ಅದ್ಭುತವೆನಿಸುವ ಅಚ್ಚರಿ. ನೋಡಿದೊಡನೆಯೇ ನಿಬ್ಬೆರಗಾಗಿ ವಾಹ್ ಎಂದು ಉದ್ಗಾರ ತರಿಸುವಂಥ ದೈತ್ಯ ವಿಮಾನ. ಈಗ ಪ್ರಪಂಚದ ಅತಿದೊಡ್ಡ ‘ಪ್ಯಾಸೆಂಜರ್ ಫ್ಲೈಟ್’ ಎಂಬ ಹೆಗ್ಗಳಿಕೆ ಅದರದು. ದೊಡ್ಡದೆಂದರೆ ಅಷ್ಟಿಷ್ಟಲ್ಲ, ಒಂದು ಸರಾಸರಿ ಸಾಮಾನ್ಯ ಗಾತ್ರದ ವಿಮಾನಕ್ಕಿಂತ ನಾಲ್ಕು ಪಟ್ಟು ದೊಡ್ಡದು! ರಟ್ಟೆಯ ಬಲದಲ್ಲಿ ಭೀಮನಂಥದು. ಹೊಟ್ಟೆಯೊಳಗೆ ತುಂಬಿಸಿಕೊಳ್ಳುವ ವಿಚಾರದಲ್ಲಿ ಬಕಾಸುರನಂಥದು. ಮಿಕ್ಕೆಲ್ಲ ವಿಮಾನಗಳು ಈ ಗಿಡುಗನೆದುರಿಗೆ ಪುಟ್ಟ ಗುಬ್ಬಚ್ಚಿಗಳಂತೆ ಕಾಣುತ್ತವೆ. ಅಂತಹ ಏರ್ಬಸ್ ಎ-380 ವಿಮಾನದಲ್ಲಿ ಮೊನ್ನೆ ವಾಷಿಂಗ್ಟನ್ನಿಂದ ಪ್ಯಾರಿಸ್ವರೆಗೆ ಪ್ರಯಾಣ ಮಾಡಿದ ಪುಳಕ ನನ್ನದಾಯಿತು. ಅದಿನ್ನೂ ತಾಜಾ ಇರುವಾಗಲೇ ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಇವತ್ತಿನ ಅಂಕಣ ಏರ್ಬಸ್ ಎ-380 ಸ್ಪೆಷಲ್!
‘ಎರಡಂತಸ್ತಿನ...’ ಎಂದೆನಲ್ಲಾ, ಹಾಗೆ ನೋಡಿದರೆ ಬೋಯಿಂಗ್ ೭೪೭-೪೦೦ ಜಂಬೋ ಜೆಟ್ (ಏರ್ಬಸ್ ಎ-380 ಆವಿಷ್ಕಾರವಾಗುವ ಮೊದಲು ನಾಲ್ಕೈದು ದಶಕಗಳ ಕಾಲ ಅತಿದೊಡ್ಡ ವಿಮಾನ ಎಂಬ ಖ್ಯಾತಿ ಹೊಂದಿದ್ದದ್ದು) ಕೂಡ ಡಬ್ಬಲ್ಡೆಕ್ಕರ್ ವಿಮಾನವೇ. ಆದರೆ ಅದರಲ್ಲಿ ಮುಂಭಾಗವಷ್ಟೇ ಎರಡು ಅಂತಸ್ತುಗಳು. ಏರ್ಬಸ್ನಲ್ಲಿ ಹಾಗಲ್ಲ, ವಿಮಾನದ ಅಷ್ಟೂ ಉದ್ದವೂ ಎರಡು ಡೆಕ್ಗಳು. ಜಂಬೋ ಜೆಟ್ನ ಕೆಪ್ಯಾಸಿಟಿ ಸುಮಾರು ನಾಲ್ನೂರು ಪ್ರಯಾಣಿಕರು ಅಷ್ಟೇ. ಏರ್ಬಸ್ ಎ-380 ಒಮ್ಮೆಗೇ 555 ಪ್ರಯಾಣಿಕರನ್ನು ಹೊತ್ತುಕೊಂಡು ಹಾರಬಲ್ಲದು! ಅದೂ ಮೂರು ಬೇರೆಬೇರೆ ಶ್ರೇಣಿಗಳ ಆಸನವ್ಯವಸ್ಥೆ ಆದ್ದರಿಂದ ಅಷ್ಟು, ಒಂದುವೇಳೆ ಎಲ್ಲವೂ ‘ಎಕಾನಮಿ ಕ್ಲಾಸ್’ ಅಂತಿದ್ದರೆ ಸುಮಾರು 850 ಸೀಟ್ಗಳು! ಜತೆಯಲ್ಲಿ ಅವರೆಲ್ಲರ ಲಗೇಜ್. ಊಟೋಪಚಾರ ಮತ್ತಿತರ ಸೇವೆಗಳಿಗೆ ಬೇಕಾಗುವ ಸಾಮಗ್ರಿ. ಸಾವಿರಾರು ಮೈಲು ಕ್ರಮಿಸಲು ಬೇಕಾಗುವಷ್ಟು ಇಂಧನವನ್ನೂ ಟ್ಯಾಂಕ್ ತುಂಬ ತುಂಬಿಸಿಕೊಂಡು ಹೊರಡಬೇಕು. ಅಂದರೆ ಟೇಕ್ಆಫ್ ಆಗುವಾಗ ಈ ದೈತ್ಯವಿಮಾನದ ತೂಕ ಎಷ್ಟಿರಬಹುದೆಂದು ಅಂದಾಜಿಸಿ! ಅದಕ್ಕೋಸ್ಕರವೇ ಮಾಮೂಲಿ ವಿಮಾನಗಳಿಗಿಂತ ಆರು ಪಟ್ಟು ಹೆಚ್ಚು ಸಾಮರ್ಥ್ಯದ ಎಂಜಿನ್ಗಳು ಇದರವು.
ಅಷ್ಟು ದೊಡ್ಡ ವಿಮಾನ ಇಳಿಯುವುದಕ್ಕೆ ರನ್ವೇ ಕೂಡ ದೊಡ್ಡದಾಗಿಯೇ ಇರಬೇಕಲ್ಲ? ಹೌದು, ಆದರೆ ರನ್ವೇಯಷ್ಟೇ ಸಾಲದು, ವಿಮಾನ ನಿಲ್ದಾಣದ ಟರ್ಮಿನಲ್ಗಳು ಮತ್ತು ಗೇಟ್ಗಳು ಕೂಡ ವಿಶೇಷ ಸಾಮರ್ಥ್ಯದವಾಗಿರಬೇಕು. ವಿಮಾನದಲ್ಲಿ ಪ್ರಯಾಣಿಕರು ಹತ್ತಿ-ಇಳಿಯುವುದಕ್ಕೆ ಬಳಸುವ ‘ಏರೋಬ್ರಿಡ್ಜ್’ಗಳು ಎರಡು ಅಂತಸ್ತುಗಳ ಬಾಗಿಲುಗಳಿಗೆ ಅಟ್ಯಾಚ್ ಆಗುವಂತೆ ಇರಬೇಕು. ಲಂಡನ್, ನ್ಯೂಯಾರ್ಕ್ನಂಥ ದಟ್ಟ ಸಂಚಾರದ ಏರ್ಪೋರ್ಟ್ಗಳಲ್ಲಿ ಕೆಲವೊಮ್ಮೆ ವಿಮಾನ ನಿಲ್ಲಿಸಲು ಒಂದು ಗೇಟ್ ಸಿಗುವುದೇ ಕಷ್ಟವಿರುವಾಗ ಏರ್ಬಸ್ ಎ-380ಗೆ ಅಕ್ಕಪಕ್ಕದ ಎರಡು ಗೇಟ್ಗಳು ಖಾಲಿ ಸಿಗಬೇಕು! ಅಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರಿರುವಾಗ ಅವರ ಭದ್ರತಾ ತಪಾಸಣೆ, ಕಸ್ಟಮ್ಸ್ ಕ್ಲಿಯರೆನ್ಸ್ ಮುಂತಾದ ಮಾಮೂಲಿ ವಿಧಿವಿಧಾನಗಳೆಲ್ಲ ಬೇಗಬೇಗ ಆಗಬೇಕು. ಸದ್ಯಕ್ಕೆ ಪ್ರಪಂಚದಲ್ಲಿ ಕೇವಲ 20 ವಿಮಾನ ನಿಲ್ದಾಣಗಳಲ್ಲಿ ಮಾತ್ರ ಏರ್ಬಸ್ ಎ-380ಯನ್ನು ನಿಭಾಯಿಸುವ ಸಾಮರ್ಥ್ಯ-ಸೌಕರ್ಯ ಇರುವುದು. ನಮ್ಮ ವಾಷಿಂಗ್ಟನ್ ವಿಮಾನನಿಲ್ದಾಣವೂ ಇತ್ತೀಚೆಗಷ್ಟೇ ಅಪ್ಗ್ರೇಡ್ ಆಗಿ ಈ ಸಾಮರ್ಥ್ಯವನ್ನು ಪಡಕೊಂಡದ್ದು. ಜಸ್ಟ್ ಹದಿನೈದು ದಿನಗಳ ಹಿಂದೆಯಷ್ಟೇ ಏರ್ಫ್ರಾನ್ಸ್ನ ವಾಷಿಂಗ್ಟನ್-ಪ್ಯಾರಿಸ್ ವಿಮಾನಯಾನದ ಎ-380 ಸರ್ವೀಸ್ ಶುರುವಾದದ್ದು. ಹಾಗಾಗಿಯೇ ಮೊನ್ನೆ ನಾನು ಪ್ರಯಾಣಿಸುವಾಗ ವಾಷಿಂಗ್ಟನ್ ಏರ್ಪೋರ್ಟ್ನ ಟರ್ಮಿನಲ್ನಲ್ಲೂ, ವಿಮಾನದಲ್ಲೂ ಎಲ್ಲವೂ ಹೊಸತು ಹೊಸತು!
ಐದಾರು ವರ್ಷಗಳ ಹಿಂದೆ ಎ-380 ವಿಮಾನಗಳ ಉತ್ಪಾದನೆ ಶುರುವಾದಾಗಿನಿಂದಲೂ ಅದರ ಬಗ್ಗೆ ತುಂಬಾ ಪ್ರಚಾರ ಇತ್ತು. ಅಮೆರಿಕದ ಬೋಯಿಂಗ್ ಕಂಪನಿಗೆ ಪ್ರತಿಸ್ಪರ್ಧಿಯಾಗಿ ಫ್ರಾನ್ಸ್ನ ಏರ್ಬಸ್ ಕಂಪನಿಯು ಈ ಗಜಗಾತ್ರದ ವಿಮಾನಗಳ ತಯಾರಿ, ಪ್ರಯೋಗಾರ್ಥ ಹಾರಾಟ ಮತ್ತು ಕಮರ್ಷಿಯಲ್ ಏರ್ಲೈನ್ಗಳಿಗೆ ಮಾರಾಟವನ್ನು ಆರಂಭಿಸಿದ್ದಾದ್ದರಿಂದ ಒಂದು ರೀತಿಯ ಪೈಪೋಟಿಯ ವಾತಾವರಣವೂ ಇತ್ತು. ಬೋಯಿಂಗ್ನ ಹಳತಾದ ಮಾಡೆಲ್ಗಳನ್ನು ನೋಡಿನೋಡಿ ಬೇಸತ್ತಿದ್ದ ಜನರಲ್ಲಿ ಎ-380 ಬಗ್ಗೆ ಸಾಕಷ್ಟು ಎಕ್ಸೈಟ್ಮೆಂಟ್ ಇತ್ತು. ಟಿವಿ ಡಾಕ್ಯುಮೆಂಟರಿಗಳಲ್ಲಿ, ಪತ್ರಿಕೆಗಳಲ್ಲಿ, ಕೊನೆಗೆ ಇಮೇಲ್ಫಾರ್ವರ್ಡ್ಗಳಲ್ಲೂ ಎ-380 ಅಚ್ಚರಿಗಳ ಗುಣಗಾನ ನಡೆದಿತ್ತು. ಯುರೋಪ್ನ ವಿವಿಧ ದೇಶಗಳಲ್ಲಿ ಅದರ ಬಿಡಿಭಾಗಗಳು ತಯಾರಾಗಿ ಫ್ರಾನ್ಸ್ನ ಟೌಲೌಸ್ ಎಂಬಲ್ಲಿ ಅಸೆಂಬ್ಲಿಯಾಗುವ ದೃಶ್ಯಗಳಲ್ಲೇ ಒಂದು ರೋಮಾಂಚನವಿತ್ತು. ಎ-380 ಎಂದರೆ ಅದೊಂದು ಬರೀ ವಿಮಾನವಲ್ಲ; ಬಾರ್, ಕ್ಯಾಸಿನೊ, ಬ್ಯೂಟಿ-ಸಲೂನ್, ಡ್ಯೂಟಿ-ಫ್ರೀ ಮಳಿಗೆಗಳು ಇತ್ಯಾದಿ ಲಕ್ಷುರಿಗಳೂ ಸೇರಿಕೊಂಡ ಒಂದು ಐಷಾರಾಮಿ ಗಗನನೌಕೆ ಎಂಬ ಚಿತ್ರಣವಿತ್ತು.
ನಿಜಕ್ಕೂ ಅವೆಲ್ಲ ಇರುವುದು ಹೌದಾ ಎಂಬ ಕುತೂಹಲ ನನಗೂ ಇತ್ತು. ನಾನು ಪ್ರಯಾಣಿಸಿದ್ದು ಏರ್ಫ್ರಾನ್ಸ್ನ ಎ-380 ವಿಮಾನದ ಎಕಾನಮಿ ಕ್ಲಾಸ್ನಲ್ಲಿ. ಅದರಲ್ಲಿ ಹೇಳಿಕೊಳ್ಳುವಂಥ ಸ್ಪೆಷಲ್ ಫೀಚರ್ಗಳೇನೂ ಕಾಣಲಿಲ್ಲ. ಅವೇ ಇಕ್ಕಟ್ಟಾದ ಸೀಟ್ಗಳು. ಕಾಲು ಚಾಚಲಿಕ್ಕೂ ಹೆಚ್ಚೇನೂ ಜಾಗವಿಲ್ಲ. ನನ್ನ ಸೀಟ್ ಇದ್ದದ್ದು ಕೆಳಗಿನ ಸ್ತರದಲ್ಲಿ. ಮೇಲಿನ ಡೆಕ್ ಹೇಗಿರುತ್ತದೆ ನೋಡಿಕೊಂಡು ಬರಬಹುದೇ ಎಂದು ಗಗನಸಖಿಯೊಬ್ಬಳನ್ನು ಪುಸಲಾಯಿಸಿದಾಗ ಅಲ್ಲಿನ ಎಕಾನಮಿ ಕ್ಲಾಸ್ಗೆ ಮಾತ್ರ ಹೋಗಿಬರುವ ಪರ್ಮಿಷನ್ ಸಿಕ್ಕಿತು. ಹೇಳಿಕೇಳಿ ಏರ್ಫ್ರಾನ್ಸ್ನ ವಿಮಾನ. ಏರ್ಫ್ರಾನ್ಸ್ ‘ನಗುಮೊಗ’ದ ಸೇವೆಗಿಂತ ‘ಬಿಗುಮೊಗ’ದ ಸೇವೆಗೇ ಪ್ರಸಿದ್ಧ. ಆಫ್ಕೋರ್ಸ್, ವಿಮಾನವೆಲ್ಲ ಸುತ್ತಾಡಿ ನೋಡಿಬರುತ್ತೇನೆ ಎಂದು ನನ್ನಹಾಗೆ ಎಲ್ಲರೂ ಕೇಳಿದರೆ ಅದೇನೂ ಮ್ಯೂಸಿಯಂ ಅಲ್ಲವಲ್ಲ. ‘ಎ-380ಯಲ್ಲಿ ನಾನೂ ಪ್ರಯಾಣಿಸಿದ್ದೇನೆ ಎಂಬ ಬಿಂಕವೇ ಹೆಚ್ಚಿನದು’ ಎಂದುಕೊಂಡು ಸುಮ್ಮನಾದೆ. ಇನ್ಫ್ಲೈಟ್ ಎಂಟರ್ಟೇನ್ಮೆಂಟ್ ಸಿಸ್ಟಂ (ಪ್ರತಿ ಸೀಟ್ಗೂ ಅಳವಡಿಸಿರುವ ಬಹುಮಾಧ್ಯಮ ಮನರಂಜನೆಯ ವ್ಯವಸ್ಥೆ) ಮಾತ್ರ ತುಂಬಾ ಚೆನ್ನಾಗಿತ್ತು. ಅದರಲ್ಲೂ ವಿಮಾನದ ಟೇಲ್ಪೀಸ್ಗೆ ಅಳವಡಿಸಿದ ಕ್ಯಾಮೆರಾದಿಂದ ಟೇಕ್ಆಫ್ ಮತ್ತು ಲ್ಯಾಂಡಿಂಗ್ ವೇಳೆಯಲ್ಲಿ ಮೂಡಿಬರುವ ಲೈವ್ ಚಿತ್ರಗಳನ್ನು ನಾನು ಇದೇ ಮೊದಲಸಲ ನೋಡಿದ್ದು. ವಿಮಾನದ ಟಾಪ್ ಮೇಲೆ ಕುಳಿತು ನೋಡಿದರೆ ಹೇಗೆ ಕಾಣುತ್ತದೆ ಎಂದು ತೋರಿಸುವ ಚಿತ್ರಗಳು. ಸೂಪರ್!
ವಾಷಿಂಗ್ಟನ್ನಿಂದ ಪ್ಯಾರಿಸ್ ವಿಮಾನಯಾನಕ್ಕೆ ಸುಮಾರು ಆರು ಗಂಟೆ ತಗಲುತ್ತದೆ (ದಶಕಗಳ ಹಿಂದೆ ಇದೇ ಏರ್ಫ್ರಾನ್ಸ್ ಸಂಸ್ಥೆಯ ಛಿoಟಿಛಿoಡಿಜ ಪ್ಯಾಸೆಂಜರ್ ವಿಮಾನಗಳು ಶಬ್ದದ ವೇಗದಲ್ಲಿ ಚಲಿಸಿ ಪ್ಯಾರಿಸ್-ನ್ಯೂಯಾರ್ಕ್ ದೂರವನ್ನು ಒಂದೆರಡು ಗಂಟೆಗಳಲ್ಲಿ ಕ್ರಮಿಸುತ್ತಿದ್ದವು. ಒಂದು ಭೀಕರ ಅಪಘಾತದ ನಂತರ ಈಗ ಕಾನ್ಕಾರ್ಡ್ ವಿಮಾನಗಳ ಹಾರಾಟ ನಿಂತಿದೆ). ಆರು ತಾಸಿನ ಐಷಾರಾಮ ಯಾನ ಎನ್ನುತ್ತದೆ ಏರ್ಫ್ರಾನ್ಸ್ನ ಜಾಹೀರಾತು. ಐಷಾರಾಮ ಅವರವರ ಭಾವಕ್ಕೆ ಅವರವರ ಅಭಿರುಚಿಗೆ ಮತ್ತು ಕಿಸೆ-ಸಾಮರ್ಥ್ಯಕ್ಕೆ ಬಿಟ್ಟದ್ದು. ಆದರೆ ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಎ-380 ವಿಮಾನಗಳಿಂದ ಪ್ರಯೋಜನಗಳೂ ಇವೆ. ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಒಂದೇ ವಿಮಾನವು ಏಕಕಾಲಕ್ಕೆ ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ಒಯ್ಯುವಂತಾದರೆ ಒಳ್ಳೆಯದೇ. ಇಲ್ಲಿಯವರೆಗೆ ಏರ್ಫ್ರಾನ್ಸ್, ಲುಫ್ತಾನ್ಸಾ, ಎಮಿರೇಟ್ಸ್, ಸಿಂಗಾಪುರ್, ಕೋರಿಯನ್, ಮತ್ತು ಕ್ವಾಂಟಾಸ್ ಏರ್ಲೈನ್ಗಳಷ್ಟೇ ಎ-380 ವಿಮಾನಗಳನ್ನು ಬಳಸುತ್ತಿರುವುದು. ಇನ್ನು ಸದ್ಯದಲ್ಲಿಯೇ ಬೆಂಗಳೂರು ಸೇರಿದಂತೆ ಭಾರತದ ಕೆಲವು ವಿಮಾನ ನಿಲ್ದಾಣಗಳೂ ಎ-380 ಕಂಪಾಟಿಬಲ್ ಆಗಲಿವೆ. ವಿಜಯ್ ಮಲ್ಯ ಮಾಲೀಕತ್ವದ ಕಿಂಗ್ಫಿಶರ್ ಸಂಸ್ಥೆ ಆಗಲೇ ಐದು ಎ-380 ವಿಮಾನಗಳಿಗೆ ಆರ್ಡರ್ ಸಲ್ಲಿಸಿದೆಯಂತೆ. ಮೊದಲಿಗೆ ಮುಂಬಯಿಯಿಂದ ಎ-380 ಸರ್ವೀಸ್ ಆರಂಭಿಸುತ್ತದೆಯಂತೆ. ನಾಲ್ಕೈದು ವರ್ಷಗಳ ನಂತರ ಒಂದುವೇಳೆ ನಾನು ಹೀಗೆ ‘ಎ-380 ಎರಡಂತಸ್ತಿನ ವಿಮಾನದ ಗತ್ತು’ ಎಂದು ಲೇಖನ ಬರೆದರೆ ಆಗ ನೀವು ‘ಹೌದ್ರೀ ಅದು ನಮಗೂ ಗೊತ್ತು’ ಎನ್ನುತ್ತೀರಿ!
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
Saturday Jun 25, 2011
Names and Nice Memories
Saturday Jun 25, 2011
Saturday Jun 25, 2011
ದಿನಾಂಕ 26 ಜೂನ್ 2011ರ ಸಂಚಿಕೆ...
ಹೆಸರಿನ ಹಿಂದೆ ಒಂದು ಹಸಿರು ನೆನಪು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಅಮೆರಿಕದ ಸಸ್ಯೋದ್ಯಾನದಲ್ಲಿ ಅಶೋಕ ವೃಕ್ಷವನ್ನು ನೋಡಿದಾಗ ಅದರ ಕೆಳಗೆ ಸೀತಾಮಾತೆ ಕುಳಿತ ಚಿತ್ರ ಕಣ್ಮುಂದೆ ಬಂದುಹೋಯಿತು ಎಂದು ನಿಮ್ಮ ಸ್ನೇಹಿತರೊಬ್ಬರ ಅನುಭವವನ್ನು ಬಣ್ಣಿಸಿದ್ದೀರಷ್ಟೇ? ಅದನ್ನು ಓದಿದಾಗಿನಿಂದ ನನಗೊಂದು ಸಂದೇಹ ಕಾಡುತ್ತಿದೆ. ರಾಮಾಯಣದ ಕಥೆಯಲ್ಲಿ, ರಾವಣನಿಂದ ಅಪಹರಿಸಲ್ಪಟ್ಟ ಸೀತೆ ಲಂಕೆಯಲ್ಲಿ ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಕೆಳಗೆ ಕುಳಿತು ದಿನಕಳೆಯುತ್ತಿದ್ದಳು ಎಂದು ವಿವರಣೆಯಿದೆ. ಅಂದರೆ ವನದ ಹೆಸರು ಅಶೋಕವೇ ಆದರೂ ಸೀತಾಮಾತೆಗೆ ನೆರಳು ನೀಡಿದ್ದ ವೃಕ್ಷದ ಹೆಸರು ಶಿಂಶುಪ ಅಲ್ಲವೇ? ಇದನ್ನು ನಾನು ಚಂದಮಾಮ ಕಥೆಗಳಲ್ಲಿ ಓದಿದ್ದೆ. ಇಷ್ಟು ಚೆನ್ನಾಗಿ ಹೇಗೆ ನನ್ನ ನೆನಪಿನಲ್ಲಿ ಉಳಿದಿದೆ ಎಂಬುದನ್ನೂ ವಿವರಿಸುತ್ತೇನೆ. ಚಂದಮಾಮದಲ್ಲಿ ಆ ಕಥೆಗಳನ್ನು ಓದುತ್ತಿದ್ದ ದಿನಗಳಲ್ಲಿ ನಾನು ಚೊಚ್ಚಲ ಬಸುರಿ. ಸೀತೆಯ ಕಷ್ಟಕಾಲದಲ್ಲಿ ಅವಳಿಗೆ ನೆರಳಿತ್ತ ಶಿಂಶುಪ ವೃಕ್ಷದ ಬಗ್ಗೆ ನನಗೆ ಅಪಾರ ಗೌರವ ಮೂಡಿತ್ತು. ನನಗೇನಾದರೂ ಹೆಣ್ಣು ಮಗುವಾದರೆ ಶಿಂಶುಪಾ ಎಂದೇ ಹೆಸರಿಡುತ್ತೇನೆ ಎಂದು ಆಗಲೇ ಅಂದುಕೊಂಡಿದ್ದೆ. ಅದರಂತೆ ನನಗೆ ಹೆಣ್ಣುಮಗುವೇ ಹುಟ್ಟಿತು. ಶಿಂಶುಪಾ ಎಂದೇ ಹೆಸರಿಟ್ಟೆವು. ಈಗ ಅವಳು ದೊಡ್ಡವಳಾಗಿ ಮದುವೆಯೂ ಆಗಿ ಗಂಡನ ಮನೆ ಸೇರಿದ್ದಾಳೆ...” ಇದು, ಮೇ ೨೨ರ ಅಂಕಣದಲ್ಲಿ ಪ್ರಕಟವಾಗಿದ್ದ ‘ಬಾರ್ಸಿಲೋನಾದಲ್ಲಿ ಕರಿಬೇವು ಸಿಕ್ಕ ಸಂತಸ’ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬಂದ ಒಂದು ಪತ್ರ. ಬರೆದವರು ಮಡಿಕೇರಿಯಿಂದ ಗೀತಾ ಶ್ರೀಧರ ಎಂಬುವರು. ಇದೇ ಮೊದಲ ಸಲ ಅವರು ನನಗೆ ಪತ್ರ ಬರೆದಿರುವುದು. ಅವರೆನ್ನುವುದು ನಿಜ. ಲಂಕೆಯಲ್ಲಿ ಸೀತೆ ಕುಳಿತುಕೊಂಡಿದ್ದದ್ದು ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಅಡಿಯಲ್ಲಿ. ಶಿಂಶುಪ ವೃಕ್ಷಕ್ಕೆ ಕನ್ನಡದಲ್ಲಿ ಏನಂತಾರೆ, ಅದರ ಸಸ್ಯಶಾಸ್ತ್ರೀಯ ಹೆಸರೇನು, ಅಶೋಕ ವೃಕ್ಷಕ್ಕಿಂತ ಅದು ಹೇಗೆ ಭಿನ್ನ ಎಂಬೆಲ್ಲ ವಿವರಗಳು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಸುಂದರಕಾಂಡದಲ್ಲಿ ‘ಶಿಂಶುಪ ವೃಕ್ಷವನೇರಿ ಕುಳಿತನವ ಸೀತೆಯ ಹುಡುಕಲು ಹನುಮಂತ... ಮಾಸಿದ ಸೀರೆಯ ಮ್ಲಾನವದನೆಯನು ಕಂಡು ಮರುಗಿದನು ಗುಣವಂತ...’ ಎಂದು ಕೇಳಿದ್ದು ನೆನಪಿದೆ. ನಿಖರವಾದ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ, ಅದಕ್ಕಿಂತಲೂ ಹೆಚ್ಚಾಗಿ ಹೆಸರಿನ ಹಿಂದಿನ ಹಸಿರು ನೆನಪನ್ನು ಹಂಚಿಕೊಂಡದ್ದಕ್ಕಾಗಿ ಗೀತಾ ಅವರಿಗೆ ವಿಶೇಷ ಧನ್ಯವಾದಗಳು. ಟಿವಿ ರಾಮಾಯಣದಲ್ಲಿ ಸೀತೆಯ ಪಾತ್ರ ಮಾಡಿದ್ದ ನಟಿ ನಿಮಗೆ ನೆನಪಿದ್ದಾಳೆಯೇ? ಆಕೆಯ ಹೆಸರು ದೀಪಿಕಾ. ಕೆಲ ದಿನಗಳ ಹಿಂದೆ ನನಗೆ ದ್ವೀಪಿಕಾ ದೇಸಾಯಿ ಎಂಬುವರಿಂದ ಒಂದು ಫೇಸ್ಬುಕ್ ಫ್ರೆಂಡ್ರಿಕ್ವೆಸ್ಟ್ ಬಂದಿತ್ತು. ಅವರ ಹೆಸರು ನೋಡಿ ಕನ್ನಡದವರಲ್ಲವೇನೊ ಎಂದುಕೊಂಡಿದ್ದೆ ನಾನು. ಪರಿಚಯ ತಿಳಿಸುತ್ತೀರಾ ಎಂದು ಅವರಿಗೆ ಬರೆದು ಕೇಳಿದ್ದೆ. ಅದಕ್ಕೆ ಕನ್ನಡದಲ್ಲೇ ಉತ್ತರಿಸಿದ ದ್ವೀಪಿಕಾ, ತಾನು ಕ್ಯಾಲಿಫೋರ್ನಿಯಾದಲ್ಲಿರುವ ಓರ್ವ ಕನ್ನಡತಿ ಗೃಹಿಣಿಯೆಂದೂ ಈಗ ಅಮ್ಮ-ಅಪ್ಪ ತನ್ನನ್ನು ಭೇಟಿಯಾಗಲು ಅಮೆರಿಕೆಗೆ ಬಂದಿದ್ದಾರೆಂದೂ, ಅಮ್ಮ ಪರಾಗಸ್ಪರ್ಶ ಅಂಕಣದ ರೆಗ್ಯುಲರ್ ಓದುಗರೆಂದೂ, ಅಮೆರಿಕದಿಂದ ಹಿಂದಿರುಗುವುದರೊಳಗೆ ನನ್ನೊಡನೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಲು ಬಯಸುತ್ತಾರೆಂದೂ ಬರೆದಿದ್ದರು. ನನ್ನ ಫೋನ್ ನಂಬರ್ ತಿಳಿಸಿದ ಮೇಲೆ ಅವರಮ್ಮನೊಡನೆ ಟೆಲಿಮಾತುಕತೆ ಆಯಿತು. ತಮಾಷೆಗಾಗಿಯೇ ನಾನು ಅವರಲ್ಲಿ “ನಿಮ್ಮ ಮಗಳ ಹೆಸರು ನಿಜವಾಗಿಯೂ ದ್ವೀಪಿಕಾ ಅಂತಲೇ ಇರುವುದಾ ಅಥವಾ ದೀಪಿಕಾ ಅಂತಿದ್ದದ್ದು ಬರೆಯುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ನಡುವೆ ಡಬ್ಲ್ಯೂ ಸೇರಿಕೊಂಡದ್ದಾ?” ಎಂದು ಕೇಳಿಯೇಬಿಟ್ಟೆ. ಅದಕ್ಕೆ ಅವರ ಉತ್ತರ ಹೀಗಿತ್ತು- “ದ್ವೀಪಿಕಾ ಅಂತಲೇ ಹೆಸರು. ಅವಳ ಅಪ್ಪ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರು ಈಗ ನಿವೃತ್ತರಾಗಿದ್ದಾರೆ. ಅವರಿಗೆ ಕೆಲಸದಲ್ಲಿ ಬೇರೆಬೇರೆ ಊರುಗಳಿಗೆ ಟ್ರಾನ್ಸ್ಫರ್ ಆಗುತ್ತಿತ್ತು. ಮಗಳು ಹುಟ್ಟುವಾಗ ನಮ್ಮವರ ಉದ್ಯೋಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿತ್ತು. ಆ ನೆನಪಿಗಾಗಿ ದ್ವೀಪಿಕಾ ಎಂದು ಹೆಸರಿಟ್ಟೆವು. ಎಲ್ಲರೂ ಅದೇ ಪ್ರಶ್ನೆ ಕೇಳೋದು- ದೀಪಿಕಾ ಎನ್ನುವ ಹೆಸರು ಸಾಮಾನ್ಯವಾಗಿ ಗೊತ್ತಿರುತ್ತೆ. ಇದೇನಿದು ದ್ವೀಪಿಕಾ ಎಂಬ ಹೆಸರು? ಅವರೆಲ್ಲರಿಗೆ ವಿವರಿಸುವಾಗ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪವಾಸದ ದಿನಗಳನ್ನು ನೆನೆದು ಖುಷಿಪಡುತ್ತೇವೆ.” ರಾಮಾಯಣದಲ್ಲಿ ಸೀತೆಯ ಅಪಹರಣಕ್ಕೆ ಕಾರಣವಾದದ್ದು ಏನು ಹೇಳಿ? ಮಾರೀಚ ಬಂಗಾರದ ಜಿಂಕೆಯಾಗಿ ಸೀತೆಯ ಕಣ್ಮುಂದೆ ಸುಳಿದಾಡಿದ್ದು. ಹಿಂದೊಮ್ಮೆ ನಾನು ಅಮೆರಿಕದ ರಸ್ತೆಗಳಲ್ಲಿ ಜಿಂಕೆಗಳು ಓಡಾಡುವುದರ ಕುರಿತು ‘ಪಬ್ಲಿಕ್ ರೋಡಿನಲಿ ಜಿಂಕೆ ಬಂದೈತಲ್ಲೋ...’ ಎಂಬ ಲೇಖನ ಬರೆದಿದ್ದೆ. ಅದರಲ್ಲಿ ‘ಕೆಲವೊಮ್ಮೆ ಈ ಜಿಂಕೆಗಳು ಎಚ್ಚರಿಕೆ ಫಲಕಗಳಿರುವಲ್ಲಿಯೇ ರಸ್ತೆ ದಾಟುವ ಸುಭಗತನವನ್ನು ಪ್ರದರ್ಶಿಸುವುದೂ ಇದೆ’ ಎಂದು ಬರೆದಿದ್ದೆ. ಅಮೆರಿಕದ ನಾರ್ತ್ಕೆರೊಲಿನಾದಲ್ಲಿರುವ ಮಲ್ಲಿಕಾ ರಾಜೀವ್ ಎಂಬುವರು ಅದನ್ನೋದಿ, “ನೀವು ಲೇಖನದಲ್ಲಿ ಒಂದುಕಡೆ ಸುಭಗತನ ಎಂಬ ಪದ ಬಳಿಸಿದ್ದೀರಲ್ಲಾ ಅದರ ಅರ್ಥವೇನು? ಏಕೆ ಕೇಳುತ್ತಿದ್ದೇನೆಂದರೆ ನನ್ನ ಮಗನ ಹೆಸರು ಸುಭಗ ಅಂತಲೇ ಇರುವುದು. ಹೆಸರಿನ ನಿಜಾರ್ಥ ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸುತ್ತೀರಾ?” ಎಂದು ಪತ್ರ ಬರೆದು ಕೇಳಿದ್ದರು. ಸುಭಗ ಎನ್ನುವುದು ಗಣಪತಿಯ ಹೆಸರುಗಳಲ್ಲೊಂದು. ಸುಭಗ ಎಂಬ ಪದದ ವಾಚ್ಯಾರ್ಥವು ಜಾಣ ಅಥವಾ ಬುದ್ಧಿವಂತ (ಇಂಗ್ಲಿಷ್ನಲ್ಲಾದರೆ smart) ಎಂದು. ಇದನ್ನು ಅವರಿಗೆ ವಿವರಿಸಿದ್ದೆ. ಹೌದು ತನ್ನ ಮಗ ನಿಜಕ್ಕೂ ಜಾಣ ಎಂದು ಅವರು ಹೆಮ್ಮೆಪಟ್ಟುಕೊಂಡಿದ್ದರು. ಈ ಮೇಲಿನ ಮೂರು ಹೆಸರಾಯಣಗಳನ್ನು ಒಂದು ಸಾಮಾನ್ಯ ಅಂಶದಿಂದ ಪೋಣಿಸಿರುವುದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಇಲ್ಲವಾದರೂ ನಾನೇ ತಿಳಿಸುತ್ತೇನೆ- ಮೂರಕ್ಕೂ ಪೀಠಿಕೆಯಲ್ಲಿ ಸೀತಾಮಾತೆ ಬರುತ್ತಾಳೆ!
ಈರೀತಿ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳನ್ನು ಯಾವುದೋ ಒಂದು ಸ್ವಾರಸ್ಯಕರ ಎಳೆಯಿಂದ ಪೋಣಿಸುವುದು ಅಥವಾ ಸರಪಳಿಯಂತೆ ಜೋಡಿಸುವುದು ನನಗೆ ಇಷ್ಟದ ಕೆಲಸ. ಕೆಲ ವಾರಗಳ ಹಿಂದೆ, ಅಭ್ಯಾಸಬಲದ ಅನುಭವಗಳು ಮತ್ತು ಆಭಾಸಗಳ ಬಗ್ಗೆ ಓದುಗರ ಪ್ರತಿಕ್ರಿಯೆಗಳನ್ನು ಪೋಣಿಸಿ ಒಂದು ಅಂಕಣದಲ್ಲಿ ಪ್ರಸ್ತುತಪಡಿಸಿದ್ದು, ಅಭ್ಯಾಸಬಲ ಪ್ರದರ್ಶನದ ಉದ್ಘಾಟನೆಯನ್ನು ಹತ್ತು ತಿಂಗಳ ಪುಟ್ಟ ಪಾಪುವಿನಿಂದ ಮಾಡಿಸಿದ್ದು ನಿಮಗೆ ನೆನಪಿರಬಹುದು (ವಾಕಿಂಗ್ನಲ್ಲೂ ಅಭ್ಯಾಸಬಲಗೈಯಿಂದ ಸಿಗ್ನಲ್ : 9 ಜನವರಿ 2011). ಅವತ್ತಿನ ಅಂಕಣವನ್ನು ಬರೆಯುವಾಗ ನನಗೆ ಆ ಮಗುವಿನ ಹೆಸರು ಗೊತ್ತಿರಲಿಲ್ಲ. ಮಗುವಿನ ಅಜ್ಜಿ, ಭದ್ರಾವತಿಯ ಮಮತಾ ನಾಗರಾಜ ಅವರು ‘ಮುದ್ದಿನ ಮೊಮ್ಮಗಳು’ ಎಂದು ಬರೆದಿದ್ದರೇ ಹೊರತು ಹೆಸರೇನೆಂದು ತಿಳಿಸಿರಲಿಲ್ಲ. ಅಂಕಣ ಪ್ರಕಟವಾದ ಮೇಲೆ ಅವರೇ ಪತ್ರ ಬರೆದು ಮೊಮ್ಮಗುವಿನ ಹೆಸರು ‘ಶೃಂಖಲಾ’ ಎಂದು ತಿಳಿಸಿದರು. ಶೃಂಖಲಾ ಎಂದರೆ ಸಂಸ್ಕೃತದಲ್ಲಿ ಸರಪಳಿ ಎಂದರ್ಥ. ಓದುಗರ ಅನುಭವಗಳನ್ನು ನಾನು ಸರಪಳಿಯಿಂದ ಜೋಡಿಸಿದ್ದನ್ನು ಶೃಂಖಲಾ ಉದ್ಘಾಟಿಸಿದ್ದಳು!
ಸ್ನೇಹಸ್ಪರ್ಶ: ಮುಂದಿನ ಭಾನುವಾರ ಜುಲೈ 3ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಒಂದು ಅನೌಪಚಾರಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪರಾಗಸ್ಪರ್ಶ ಅಂಕಣದ ಓದುಗಬಳಗದ ಸ್ನೇಹಸಮಾವೇಶ. ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶ. ಇದೇ ಸಂದರ್ಭದಲ್ಲಿ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು (‘ಗೆಲುವಿನ ಟಚ್!’ ಮತ್ತು ‘ಚೆಲುವಿನ ಟಚ್!’ - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ ‘ಹನಿ’ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಓದುಗಮಿತ್ರರೆಲ್ಲರಿಗೂ ಆತ್ಮೀಯ ಸ್ವಾಗತ.
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Jun 18, 2011
Four Colors For Map
Saturday Jun 18, 2011
Saturday Jun 18, 2011
ದಿನಾಂಕ 19 ಜೂನ್ 2011ರ ಸಂಚಿಕೆ...
ನಕ್ಷೆ ಬಿಡಿಸಲು ಸಾಕು ಬಣ್ಣ ಬರಿ ನಾಲ್ಕು?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಬರೆಯಲಿಕ್ಕೆ ಹೊರಟಿರುವುದು ನಕಾಶೆಗಳ ಕುರಿತಾದರೂ ಕಳೆದವಾರದ ‘ಕೌದಿ’ ಮತ್ತೆ ನೆನಪಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಬೇರೆಬೇರೆ ಬಣ್ಣದ ಬಟ್ಟೆತುಂಡುಗಳನ್ನು ಜೋಡಿಸಿ ಹೊಲಿದ ದುಪ್ಪಟ್ಟಿಯನ್ನು ಕೌದಿ ಎನ್ನುತ್ತಾರಷ್ಟೇ? ಹಾಗೆಯೇ ಪ್ರತ್ಯೇಕ ಭೂಭಾಗಗಳನ್ನು ವಿಭಿನ್ನ ಬಣ್ಣಗಳಲ್ಲಿ ತೋರಿಸುವ ನಕಾಶೆಯೂ ಒಂಥರದಲ್ಲಿ ಕೌದಿಯಂತೆ ಕಾಣಿಸುವುದಿಲ್ಲವೇ? ಅದರಲ್ಲೂ ಅಮೆರಿಕ ದೇಶದ ಭೂಪಟವನ್ನು ನೀವು ನೋಡಬೇಕು. ಇಲ್ಲಿ ಸುಮಾರಷ್ಟು ಸಂಸ್ಥಾನಗಳ ಗಡಿಗಳು ಸರಳರೇಖೆಯಲ್ಲಿವೆ. ಕೊಲರಾಡೊ, ವ್ಯೋಮಿಂಗ್, ಕ್ಯಾನ್ಸಸ್ ಮುಂತಾದ ಸಂಸ್ಥಾನಗಳಂತೂ ನೀಟಾಗಿ ಹಲ್ವಾ ಕತ್ತರಿಸಿದಂತೆ ಚತುರ್ಭುಜ ಆಕೃತಿಯಲ್ಲಿವೆ (ಅಲ್ಲಿನ ಎಲಿಮೆಂಟರಿ ಶಾಲೆಯ ಮಕ್ಕಳಿಗೆ ಜಿಯಾಗ್ರಫಿ ಪರೀಕ್ಷೆಯಲ್ಲಿ ‘ನಿಮ್ಮ ರಾಜ್ಯದ ನಕ್ಷೆ ಬರೆಯಿರಿ’ ಪ್ರಶ್ನೆ ತುಂಬ ಸುಲಭ. ಒಂದು ಆಯತ ಬಿಡಿಸಿ ಇದು ನಮ್ಮ ರಾಜ್ಯ ಎಂದರಾಯಿತು). ಹಾಗಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಕೌದಿಯ ಬಟ್ಟೆತುಂಡುಗಳಿಗೆ ಹೋಲಿಸಿದ ನನ್ನ ಕಲ್ಪನೆ ನಿಮಗೆ ವಿಚಿತ್ರ ಅನಿಸಲಿಕ್ಕಿಲ್ಲ ಎಂದುಕೊಂಡಿದ್ದೇನೆ. ಅಮೆರಿಕ ಮತ್ತು ಕೌದಿಯನ್ನು ಬಿಟ್ಟು ಈಗ ಕಲರಿಂಗ್ ವಿಷಯಕ್ಕೆ ಬರೋಣ. ಏಕೆಂದರೆ ನಕಾಶೆಗೂ ಕಲರಿಂಗ್ಗೂ ಎಲ್ಲಿಲ್ಲದ ನಂಟು. ಪ್ರಪಂಚದ ನಕಾಶೆಯಲ್ಲಿ ದೇಶಗಳು, ದೇಶದ ನಕಾಶೆಯಲ್ಲಿ ರಾಜ್ಯಗಳು, ರಾಜ್ಯದ ನಕಾಶೆಯಲ್ಲಿ ಜಿಲ್ಲೆಗಳು, ಜಿಲ್ಲೆಯದರಲ್ಲಿ ತಾಲೂಕುಗಳು- ಬೇರೆಬೇರೆ ಬಣ್ಣದಲ್ಲಿರುವುದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಪ್ರಾಥಮಿಕ ಶಾಲೆಯ ಸಮಾಜಪರಿಚಯ ಪಾಠದ ಅಭ್ಯಾಸ ಚಟುವಟಿಕೆಯಾಗಿ ನಾವೇ ನಮ್ಮ ರಾಜ್ಯದ/ಜಿಲ್ಲೆಯ ನಕಾಶೆ ಬರೆದಿದ್ದೇವೆ. ಜಿಲ್ಲೆ/ತಾಲೂಕುಗಳನ್ನು ಬೇರೆಬೇರೆ ಬಣ್ಣಗಳಿಂದ ಗುರುತಿಸಿದ್ದೇವೆ. ಒಂದೇ ವ್ಯತ್ಯಾಸವೆಂದರೆ ಆಗ ಕರ್ನಾಟಕದಲ್ಲಿ ಹದಿನೆಂಟೋ ಇಪ್ಪತ್ತೋ ಜಿಲ್ಲೆಗಳಿದ್ದವು; ಈಗ ಒಟ್ಟು ಮೂವತ್ತು ಆಗಿವೆ. ನಕಾಶೆಯಲ್ಲಿ ಬಣ್ಣಗಳ ಪಾತ್ರ ಮಹತ್ವದ್ದು. ಯಾವ ಪ್ರದೇಶಕ್ಕೆ ಯಾವ ಬಣ್ಣ ಎನ್ನುವುದು ಮುಖ್ಯವಲ್ಲ; ಆದರೆ ಅಕ್ಕಪಕ್ಕದ ರಾಜ್ಯ/ಜಿಲ್ಲೆ/ತಾಲೂಕುಗಳು ಒಂದೇ ಬಣ್ಣದಲ್ಲಿದ್ದರೆ ಅವುಗಳ ಗಡಿ ಯಾವುದಂತ ಗೊತ್ತಾಗುವುದಾದರೂ ಹೇಗೆ? ಆದ್ದರಿಂದ, ನಕಾಶೆ ಪರಿಣಾಮಕಾರಿಯಾಗಿ ಇರಬೇಕಾದರೆ ಒಂದಕ್ಕಿಂತ ಹೆಚ್ಚು ಬಣ್ಣಗಳು ಅವಶ್ಯ. ಬರಿ ಒಂದು ದ್ವೀಪದ (ಅದರೊಳಗೆ ಯಾವುದೇ ಉಪವಿಭಾಗಗಳು ಇಲ್ಲ ಎಂದುಕೊಳ್ಳೋಣ) ನಕಾಶೆ ಬಿಡಿಸುವುದಿದ್ದರೂ ಎರಡು ಬಣ್ಣಗಳು ಬೇಕು. ಇಡೀ ದ್ವೀಪಕ್ಕೆ ಒಂದು ಬಣ್ಣ, ಸುತ್ತಲಿನ ಸಮುದ್ರಕ್ಕೆ ಇನ್ನೊಂದು ಬಣ್ಣ. ಒಂದುವೇಳೆ ಆ ದ್ವೀಪವು ರಾಜಕೀಯವಾಗಿ ಎರಡು ಭಿನ್ನ ಪ್ರದೇಶಗಳಾಗಿ ವಿಭಜಿಸಲ್ಪಟ್ಟಿದ್ದರೆ? ಉದಾಹರಣೆಗೆ ಯುರೋಪ್ ಖಂಡದ ಐರ್ಲ್ಯಾಂಡ್ ದ್ವೀಪರಾಷ್ಟ್ರದಲ್ಲಿ ಉತ್ತರ ಭಾಗವು ಗ್ರೇಟ್ ಬ್ರಿಟನ್ಗೆ ಸೇರಿದೆ; ದಕ್ಷಿಣದ ಭಾಗ ಸ್ವತಂತ್ರ ಐರ್ಲ್ಯಾಂಡ್ ದೇಶವಾಗಿದೆ. ಹಾಗಾಗಿ ಐರ್ಲ್ಯಾಂಡ್ ನಕಾಶೆಗೆ ಮೂರು ಬಣ್ಣಗಳು ಬೇಕು. ಇದೇ ತರ್ಕವನ್ನು ಮುಂದುವರಿಸುತ್ತ ಕರ್ನಾಟಕದ ನಕಾಶೆಗೆ ಬಣ್ಣ ತುಂಬಿಸುವುದಾದರೆ ಒಟ್ಟು 31 ಬಣ್ಣಗಳು ಬೇಕು (30 ಜಿಲ್ಲೆಗಳಿಗೆ ಒಂದೊಂದು ಮತ್ತು ಅರಬಿಸಮುದ್ರಕ್ಕೆ ನೀಲಿ ಬಣ್ಣ) ಎಂಬ ತೀರ್ಮಾನಕ್ಕೆ ಬರಬಹುದೇ? ಧಾರಾಳವಾಗಿ! ಆದರೆ ತುಸು ಯೋಚಿಸಿ. ಜಿಲ್ಲೆಗಳಿಗೆ ಬಣ್ಣ ಬಳಿಯುವುದು ಅವು ಒಂದರಿಂದೊಂದು ಪ್ರತ್ಯೇಕವಾಗಿ ಕಾಣಬೇಕೆಂದೇ ಹೊರತು ಇಡೀ ನಕಾಶೆಯು ಕಲರ್ಫುಲ್ ಆಗಿರಬೇಕು ಅಥವಾ ಹೆಚ್ಚು ಕಲರ್ಗಳಿದ್ದಷ್ಟೂ ಹೆಚ್ಚು ಬ್ಯೂಟಿಫುಲ್ ಅಂತೇನಲ್ಲ. ಅಸಲಿಗೆ ಬಣ್ಣಗಳ ಸಂಖ್ಯೆ ಹೆಚ್ಚಿದಂತೆಲ್ಲ ನಕಾಶೆ ತಯಾರಿಕೆಯ ವೆಚ್ಚವೂ ಹೆಚ್ಚುತ್ತದೆ. ನಕಾಶೆ ಮುದ್ರಕರು (Cartographers) ಆದಷ್ಟು ಕಡಿಮೆ ಸಂಖ್ಯೆಯ ಬಣ್ಣಗಳನ್ನು ಬಳಸಲಿಕ್ಕಾಗುತ್ತದೆಯೇ ಎಂದು ಲೆಕ್ಕಹಾಕುತ್ತಾರೆ. ಹಾಂ! ‘ಲೆಕ್ಕ ಹಾಕುವುದು’ ಎಂದಾಗ ಈ ಲೇಖನದ ತಿರುಳಿಗೇ ಬಂದಂತಾಯಿತು. ನಿಮಗೆ ಆಶ್ಚರ್ಯವಾಗಬಹುದು, ನಕಾಶೆಯಲ್ಲಿ ಬಣ್ಣ ತುಂಬುವುದರ ಹಿಂದೆ ಅದ್ಭುತವಾದ ಗಣಿತ ಇದೆ! ಯಾವುದೇ ನಕಾಶೆಯಾದರೂ ಸರಿ ಹೆಚ್ಚೆಂದರೆ ನಾಲ್ಕು ಬೇರೆಬೇರೆ ಬಣ್ಣಗಳು ಸಾಕು ಎನ್ನುತ್ತದೆ ಆ ಗಣಿತ. ಯಾವುದೇ ನಕಾಶೆ ಎಂದರೆ ಯಾವ ದೇಶ/ರಾಜ್ಯ/ಜಿಲ್ಲೆಯದಾದರೂ ಆಗುತ್ತದೆ. ಆದರೆ ನಾವು ನಮ್ಮ ಕರ್ನಾಟಕದ ನಕಾಶೆಯನ್ನೇ ಉದಾಹರಣೆಯಾಗಿಟ್ಟು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.
ಮೊದಲಿಗೆ ಶಿವಮೊಗ್ಗ (ಯಾಕೆ ಅದನ್ನೇ ಆಯ್ದುಕೊಂಡದ್ದೆಂದು ಕೇಳಬೇಡಿ) ಜಿಲ್ಲೆಯನ್ನು ತೆಗೆದುಕೊಳ್ಳೋಣ. ಅದಕ್ಕೆ ನೇರಳೆ ಬಣ್ಣ ಹಚ್ಚೋಣ. ಈಗಿನ್ನು ಶಿವಮೊಗ್ಗದ ಸುತ್ತಲಿನ ಜಿಲ್ಲೆಗಳಿಗೆ ಬಣ್ಣ ತುಂಬಬೇಕು. ಉಡುಪಿಗೆ ಹಳದಿ ಬಣ್ಣ ಕೊಡೋಣ. ಉತ್ತರಕನ್ನಡಕ್ಕೆ- ನೇರಳೆ ಮತ್ತು ಹಳದಿ ಬಿಟ್ಟು ಬೇರೆ ಬಣ್ಣ ಕೊಡಬೇಕಾಗುತ್ತದೆ, ಆದ್ದರಿಂದ ಹಸಿರು ಬಣ್ಣವಿರಲಿ. ಆಮೇಲೆ ಹಾವೇರಿಗೆ ಹಳದಿ ಹಚ್ಚಬಹುದು. ಅದೇರೀತಿ ದಾವಣಗೆರೆಗೆ ಹಸಿರು. ನೆನಪಿರಲಿ, ಇದುವರೆಗೆ ಮೂರೇ ಬಣ್ಣಗಳನ್ನು ಬಳಸಿದ್ದು. ಆದರೆ ಕೊನೆಯದಾಗಿ ಚಿಕ್ಕಮಗಳೂರಿಗೆ ಬಣ್ಣ ಬಳಿಯುವಾಗ ನೇರಳೆ, ಹಳದಿ ಮತ್ತು ಹಸಿರು ಈ ಮೂರನ್ನೂ ಬಳಸಲಿಕ್ಕಾಗುವುದಿಲ್ಲ, ಅಲ್ಲಿ ನಾಲ್ಕನೇ ಬಣ್ಣವಾಗಿ ಕೆಂಪು ಬೇಕಾಗುತ್ತದೆ. ಅಂತೂ ನಾಲ್ಕೇ ಬಣ್ಣಗಳಲ್ಲಿ ಶಿವಮೊಗ್ಗ ಮತ್ತು ಸುತ್ತಲಿನ ಜಿಲ್ಲೆಗಳು ಪ್ರತ್ಯೇಕವಾಗಿ ಕಾಣುವಂತೆ ಬಣ್ಣಕೊಟ್ಟದ್ದಾಯಿತು. ಇದೇ ಮಾದರಿಯನ್ನು ಮುಂದುವರಿಸಿ ಎಲ್ಲ ೩೦ ಜಿಲ್ಲೆಗಳನ್ನೂ ನಾಲ್ಕೇ ಬಣ್ಣಗಳಿಂದ ನಿಭಾಯಿಸಬಹುದು. ಹಾಗೆನೋಡಿದರೆ ಅರಬಿಸಮುದ್ರಕ್ಕೂ ಐದನೆಯ ಪ್ರತ್ಯೇಕ ಬಣ್ಣ ಬೇಕಂತಿಲ್ಲ. ಉತ್ತರಕನ್ನಡ, ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಗೆ ಕೊಟ್ಟ ಬಣ್ಣಗಳಿಗಿಂತ ಬೇರೆ ಇದ್ದರಾಯಿತು. ಒಟ್ಟಿನಲ್ಲಿ ನಾಲ್ಕೇ ಬಣ್ಣಗಳಿಂದ ಕರ್ನಾಟಕ ನಕಾಶೆ ಸಿದ್ಧ!
ಗಣಿತ ಕ್ಷೇತ್ರದಲ್ಲಿ ಇದು ‘ನಾಲ್ಕು ಬಣ್ಣಗಳ ಪ್ರಮೇಯ’ ಎಂದು ಪ್ರಸಿದ್ಧ. 1850ರಲ್ಲಿ ಲಂಡನ್ನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದ ಫ್ರಾನ್ಸಿಸ್ ಗತ್ರೀ ಎಂಬಾತ ಮೊಟ್ಟಮೊದಲ ಬಾರಿಗೆ ಇದನ್ನು ಮಂಡಿಸಿದ. ಇಂಗ್ಲೇಂಡ್ ದೇಶದ ನಕಾಶೆಯಲ್ಲಿ ‘ಕೌಂಟಿ’ಗಳಿಗೆ ಬಣ್ಣ ತುಂಬುವಾಗ ಅವನಿಗೆ ಇದರ ಅರಿವಾಯಿತು. ಆದರೆ ಗಣಿತರೀತ್ಯಾ ಸಾಧಿಸಿತೋರಿಸುವುದು ಅವನಿಂದಾಗಲಿಲ್ಲ. ಮುಂದೆ 1879ರಲ್ಲಿ ಲಂಡನ್ನವನೇ ಆದ ಆಲ್ಫ್ರೆಡ್ ಕೆಂಪ್ ಎಂಬಾತ ಈ ಪ್ರಮೇಯಕ್ಕೊಂದು ಸಾಧನೆಯನ್ನೂ ನಿರೂಪಿಸಿದ. ವಿಶ್ವಾದ್ಯಂತ ಗಣಿತಜ್ಞರನ್ನು ಅದು ಆಕರ್ಷಿಸಿತು. ಕೆಂಪ್ನ ಸಾಧನೆ ಅಮೆರಿಕನ್ ಜರ್ನಲ್ ಆಫ್ ಮ್ಯಾಥಮೆಟಿಕ್ಸ್ನಲ್ಲಿ ಪ್ರಕಟವಾಯಿತು; ರಾಯಲ್ ಸೊಸೈಟಿಯ ಸದಸ್ಯತ್ವವೂ ಅವನಿಗೆ ಸಿಕ್ಕಿತು. ಅದಾದಮೇಲೆ ಪರ್ಸಿ ಹೂವುಡ್ ಎಂಬ ಗಣಿತಜ್ಞ ಈ ಪ್ರಮೇಯವನ್ನು ಮತ್ತಷ್ಟು ಸಂಸ್ಕರಣಗೊಳಿಸಿದ. 1976ರಲ್ಲಿ ಅಮೆರಿಕದ ಏಪೆಲ್ ಮತ್ತು ಹೇಕನ್ ಎಂಬ ವಿದ್ಯಾರ್ಥಿಗಳಿಬ್ಬರು ಕಂಪ್ಯೂಟರ್ ಬಳಸಿ ಪ್ರಮೇಯದ ಸಾಧನೆಯನ್ನು ನಿರೂಪಿಸಿದರು. ಅದು ಸಾವಿರ ಪುಟಗಳಷ್ಟಿತ್ತಂತೆ. ಸುಮಾರು 10000 ಚಿತ್ರಗಳಿದ್ದುವಂತೆ. ಅವರು ಬರೆದ ಕಂಪ್ಯೂಟರ್ ಪ್ರೊಗ್ರಾಮ್ನ ಪ್ರಿಂಟ್ಔಟ್ ತೆಗೆದಾಗ ಅದು ನಾಲ್ಕಡಿ ಎತ್ತರದ ಅಟ್ಟೆಯಾಗಿತ್ತಂತೆ!
ಏನಿದು, ನಕಾಶೆಗೆ ಬಣ್ಣ ತುಂಬಿಸುವ ವಿಚಾರದಲ್ಲಿ ಅಷ್ಟೊಂದು ತಲೆಕೆಡಿಸ್ಕೊಳ್ಳಬೇಕಾ ಎಂದು ನೀವೆನ್ನಬಹುದು. ಅದೇ ಶುದ್ಧ ಗಣಿತಕ್ಕೂ ಅನ್ವಯಿತ ಗಣಿತಕ್ಕೂ (applied mathematics) ಇರುವ ವ್ಯತ್ಯಾಸ. ಗಣಿತರೀತ್ಯಾ ನಾಲ್ಕೇ ಬಣ್ಣ ಸಾಕು ಎಂದು ಸಾಧಿಸುವುದು ತಲೆನೋವೇ ಇರಬಹುದು. ಆದರೆ ನಾಲ್ಕೇ ಸಾಕು ಎಂಬ ಸಿದ್ಧಾಂತವಿದೆಯಲ್ಲಾ, ಅದರ ಉಪಯೋಗಗಳು ಬಹಳ ಇವೆ. ಆಗಲೇ ಹೇಳಿದಂತೆ ನಕಾಶೆ ತಯಾರಕರಿಗೆ ವೆಚ್ಚ ತಗ್ಗಿಸಲು ಇದು ಮುಖ್ಯವಾಗುತ್ತದೆ. ಸೆಲ್ಫೋನ್ ಕಂಪನಿಗಳ ಎಂಜಿನಿಯರ್ಗಳೂ ಈ ಪ್ರಮೇಯವನ್ನು ಬಳಸುತ್ತಾರೆ. ಸೆಲ್ಫೋನ್ ಸಿಗ್ನಲ್ಗಳಲ್ಲಿ ಇಂಟರ್ಫೆರೆನ್ಸ್ ಬಾರದಂತೆ, ಪ್ರಸಾರವ್ಯಾಪ್ತಿ ಹೆಚ್ಚುವಂತೆ, ಅತಿ ಕಡಿಮೆ ಸಂಖ್ಯೆಯ ಚಾನೆಲ್ಗಳನ್ನು ಬಳಸುವಂತೆ ಟ್ರಾನ್ಸ್ಮಿಟರ್ಗಳ ಸ್ಥಾಪನೆಯ ವಿನ್ಯಾಸ ಮಾಡುವಾಗ ಅವರಿಗೆ ನೆರವಾಗುವುದು ನಕಾಶೆಯಲ್ಲಿ ಬಣ್ಣ ತುಂಬುವ ಸಿದ್ಧಾಂತವೇ.
ನೋಡಿದಿರಾ? ಸಮಾಜ, ಗಣಿತ, ವಿಜ್ಞಾನ ಎಲ್ಲವೂ ಹೇಗೆ ಒಂದಕ್ಕೊಂದು ಹೊಂದಿಕೊಂಡಿವೆ! ಅದೇ ಒಂದು ಕೌತುಕದ ಕೌದಿ!
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Jun 11, 2011
Blankets of Love and Affection
Saturday Jun 11, 2011
Saturday Jun 11, 2011
ದಿನಾಂಕ 12 ಜೂನ್ 2011ರ ಸಂಚಿಕೆ...
ಬಣ್ಣಬಣ್ಣದ ಕೌದಿಯಲ್ಲಿ ಬೆಚ್ಚಗಿನ ಪ್ರೀತಿ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಮಗಳು ಸಿಂಧು ದಕ್ಷಿಣ ಆಫ್ರಿಕಾಕ್ಕೆ ರಿಸರ್ಚ್ ವರ್ಕ್ಗೋಸ್ಕರ ಹೇಗೂ ಹೋಗುವವಳಿದ್ದಳು. ಅವಳ ಲಗೇಜ್ನೊಂದಿಗೆ ಸುಮಾರು 60ಕ್ಕೂ ಹೆಚ್ಚು ಬ್ಲಾಂಕೆಟ್ಗಳನ್ನು ಕಳಿಸಿದೆವು. ‘ಪ್ರೊಜೆಕ್ಟ್ ಲೈನಸ್’ನ ನಮ್ಮ ನಾರ್ತ್ಕೆರೊಲಿನಾ ಶಾಖೆಯಲ್ಲಿ ಸಂಗ್ರಹವಾದ ಬ್ಲಾಂಕೆಟ್ಗಳು ಅವು. ಉಣ್ಣೆಯಿಂದ ಕೈಮಗ್ಗದಲ್ಲಿ ತಯಾರಿಸಿದವು, ಅಥವಾ ಕ್ರೋಷೆ ರೀತಿಯಲ್ಲಿ ಕೈಯಿಂದ ಹೆಣೆದು ಮಾಡಿದವು. ಸಿಂಧು ಅವುಗಳನ್ನು ಆಫ್ರಿಕಾದಲ್ಲಿ ತನ್ನ ಸಂಶೋಧನಾ ಕ್ಷೇತ್ರದಲ್ಲಿರುವ ಎಚ್ಐವಿ ಪೀಡಿತ ಬಡ ಮಕ್ಕಳಿಗೆ ಹಂಚುತ್ತಾಳೆ. ಅದೇರೀತಿ ಇನ್ನೊಂದಿಷ್ಟು ಬ್ಲಾಂಕೆಟ್ಗಳನ್ನು ನಮ್ಮದೇ ಶಾಖೆಯಿಂದ ಹಾಂಡುರಾಸ್ ದೇಶದ ಅನಾಥಾಶ್ರಮಗಳ ಮಕ್ಕಳಿಗೂ ಕಳಿಸಿಕೊಟ್ಟಿದ್ದೇವೆ. Project Linus ಎಂಬುದು ನಿಜಕ್ಕೂ ಒಂದು ಹೃದಯಸ್ಪರ್ಶಿ ಕಾನ್ಸೆಪ್ಟ್. ನೀವು ಅದರ ಬಗ್ಗೆ ಅಂಕಣದಲ್ಲಿ ಬರೆದು ಎಲ್ಲರಿಗೂ ಪರಿಚಯಿಸಬೇಕು...” ಎಂದರು ಸವಿತಾ ರವಿಶಂಕರ್, ಮೊನ್ನೆ ದೂರವಾಣಿಯಲ್ಲಿ ಉಭಯಕುಶಲೋಪರಿ ಮಾತನಾಡುತ್ತಿದ್ದಾಗ. ಸವಿತಾ ಮೂಲತಃ ಮೈಸೂರಿನವರು, ಈಗಿರುವುದು ಅಮೆರಿಕದ ನಾರ್ತ್ಕೆರೊಲಿನಾದಲ್ಲಿ. ಪತಿ ರವಿಶಂಕರ್ ಮತ್ತು ಇಬ್ಬರು ಹೆಣ್ಮಕ್ಕಳು ಸಿಂಧು-ಸೀಮಾ ಸೇರಿದ ಪುಟ್ಟ ಸಂಸಾರ. ವಿಶ್ವಜೀವನವೊಂದು ಪಾರವಿಲ್ಲದ ಸಿಂಧು ಎನ್ನುತ್ತ ಸೀಮಾತೀತವಾಗಿ ತನ್ನ ಕೈಲಾದಷ್ಟು ವಿಶ್ವಪ್ರಜೆಯಾಗಿ ಜೀವಿಸುವವರು ಸವಿತಾ. ದಸರೆಯಲ್ಲಿ ಮನೆತುಂಬ ಗೊಂಬೆಗಳನ್ನು ಕೂಡಿಸಿ ಭಾರತೀಯ ಸಂಸ್ಕೃತಿಯನ್ನು ಅಮೆರಿಕನ್ನರಿಗೆ ಪರಿಚಯಿಸುತ್ತಾರೆ; ಅಮೆರಿಕದ ಜೀವನದಿಂದ ಕಲಿತದ್ದನ್ನು, ಗಳಿಸಿದ್ದನ್ನು ಮೈಸೂರಿನಲ್ಲಿ ಬೇರೆಬೇರೆ ಶಾಲೆಗಳ ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾರೆ. ಅವರ ಇಂಥ ರಚನಾತ್ಮಕ ಚಿಂತನೆ-ಚಟುವಟಿಕೆಗಳ ಬಗ್ಗೆಯೇ ಒಮ್ಮೆ ಬರೆಯಬೇಕೆಂದಿದ್ದೇನೆ. ಇರಲಿ, ಇವತ್ತು ಪ್ರೊಜೆಕ್ಟ್ ಲೈನಸ್ ವಿಚಾರ ತಿಳಿದುಕೊಳ್ಳೋಣ. ಇದು ಸವಿತಾ ಅವರ ಕಲ್ಪನೆಯಲ್ಲ; ಅವರು ಇದರಲ್ಲೊಬ್ಬ ಸಹಭಾಗಿ, ಸ್ವಯಂಸೇವಕಿ ಅಷ್ಟೇ. 1995 ಡಿಸೆಂಬರ್ 24. ಕ್ರಿಸ್ಮಸ್ಈವ್ ಸಂಭ್ರಮದ ದಿನ. ಅವತ್ತು ‘ಪೆರೇಡ್’ (ಅಮೆರಿಕದಾದ್ಯಂತ ಭಾನುವಾರದ ವಾರ್ತಾಪತ್ರಿಕೆಗಳೊಂದಿಗೆ ಉಚಿತವಾಗಿ ವಿತರಣೆಯಾಗುವ ಮ್ಯಾಗಜಿನ್)ನಲ್ಲಿ Joy to the World ಎಂಬ ಒಂದು ವಿಶೇಷ ನುಡಿಚಿತ್ರ ಪ್ರಕಟವಾಯ್ತು. ಪುಲಿಟ್ಜರ್ ಪ್ರಶಸ್ತಿವಿಜೇತ ಫೋಟೊಜರ್ನಲಿಸ್ಟ್ ಎಡ್ಡಿ ಆಡಮ್ಸ್ ಬರೆದ ಲೇಖನವದು. ಅದರಲ್ಲಿ ಲೌರಾ ಎಂಬ ಪುಟ್ಟ ಹುಡುಗಿಯೊಬ್ಬಳ ಕಥಾನಕ. ಬಡಕಲು ದೇಹದ, ಬೋಳು ತಲೆಯ, ಕೈಯಲ್ಲೊಂದು ಬ್ಲಾಂಕೆಟ್ ಹಿಡಿದುಕೊಂಡಿದ್ದ ಅವಳ ಚಿತ್ರ. ಲೌರಾ ಎರಡು ವರ್ಷದವಳಿದ್ದಾಗಿಂದ ಲುಕೀಮಿಯಾ ರೋಗಬಾಧಿತೆ. ಕೆಮೊಥೆರಪಿಗಾಗಿ ಆಸ್ಪತ್ರೆಗೆ ಓಡಾಡುತ್ತಿದ್ದಳು. ಪ್ರತಿಸಲ ಆಸ್ಪತ್ರೆಗೆ ಹೋಗುವಾಗಲೂ ತನ್ನ ನೆಚ್ಚಿನ ಬ್ಲಾಂಕೆಟನ್ನು ಜತೆಯಲ್ಲಿ ಒಯ್ಯುತ್ತಿದ್ದಳು. ಅದು ಅವಳಿಗೆ ನೋವು ಮರೆಸಿ ಉಲ್ಲಾಸ ತಂದುಕೊಡುತ್ತಿತ್ತು. ಮಾನಸಿಕ ಧೈರ್ಯ ಹೆಚ್ಚಿಸುತ್ತಿತ್ತು, ಅವಳ ಕಾಯಿಲೆ ವಾಸಿಯಾಗುವುದರಲ್ಲಿ ಬ್ಲಾಂಕೆಟ್ನ ಪಾತ್ರವೂ ಪ್ರಮುಖವಾಗಿತ್ತು... ಅಂತೆಲ್ಲ ಮನಕಲಕುವ ಚಿತ್ರಣ ಆ ಲೇಖನದಲ್ಲಿತ್ತು.
ಡೆನ್ವರ್ ನಗರದ ಕರೆನ್ ಲೌಕ್ಸ್ ಎಂಬ ಓದುಗಳ ಮೇಲೆ ಪೆರೇಡ್ ಲೇಖನ ಗಾಢವಾದ ಪರಿಣಾಮ ಬೀರಿತು. ಲೌರಾಳ ಚಿತ್ರ, ಆಕೆಯ ಕೈಲಿದ್ದ ಬ್ಲಾಂಕೆಟ್, ಲೌರಾಗೆ ಅದರಿಂದಾದ ಉಪಯೋಗದ ವಿವರಗಳು ಕರೆನ್ ಮನಸ್ಸನ್ನು ಬಹಳವಾಗಿ ಕಾಡಿತು. ಲೌರಾಳಿಗಾದರೋ ಸ್ವಂತದ ಕಂಬಳಿ ಇತ್ತು, ಬೇರೆ ನತದೃಷ್ಟ ಮಕ್ಕಳ ಬಗ್ಗೆ ಕರೆನ್ ಯೋಚಿಸತೊಡಗಿದಳು. ಆಸ್ಪತ್ರೆಗಳಲ್ಲಿ ಅಂಥ ಎಷ್ಟು ಮಕ್ಕಳಿರುವುದಿಲ್ಲ, ರೋಗದ ಭಯಾನಕತೆಯನ್ನು ಮತ್ತಷ್ಟು ಹೆಚ್ಚಿಸುವ ಬಿಳಿಚಾದರ ಹೊದ್ದುಕೊಂಡಿರುವವರು? ಅವರ ಸ್ಥಿತಿಯನ್ನು ಊಹಿಸಿ ಮಮ್ಮಲಮರುಗಿದಳು. ಕರೆನ್ ಆಗಷ್ಟೇ ಉಣ್ಣೆಯಿಂದ ಕಂಬಳಿ ಹೆಣೆಯುವುದನ್ನು ಕಲಿತಿದ್ದಳು. ಹೊಸದಾಗಿ ನೇಯ್ದಿದ್ದ ಒಂದೆರಡು ಕಂಬಳಿಗಳನ್ನು ತೆಗೆದುಕೊಂಡು ಆಕೆ ಡೆನ್ವರ್ನ ಆಸ್ಪತ್ರೆಗೆ ಹೊರಟೇಬಿಟ್ಟಳು. ಅಲ್ಲಿನ ವೈದ್ಯರನ್ನು ಭೇಟಿಯಾಗಿ ನಿಮ್ಮಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಯಾರಾದರೂ ಬಡ ಮಕ್ಕಳಿದ್ದರೆ ಅವರಿಗೆ ಪ್ರೀತಿಯ ಉಡುಗೊರೆಯಾಗಿ ಇವನ್ನು ತಂದಿದ್ದೇನೆ ಎಂದಳು. ಅವಳ ಔದಾರ್ಯವನ್ನು ಅರ್ಥಮಾಡಿಕೊಂಡ ವೈದ್ಯರು ಸಂತೋಷದಿಂದ ಕಂಬಳಿಗಳನ್ನು ಸ್ವೀಕರಿಸಿ ಮಕ್ಕಳಿಗೆ ಕೊಟ್ಟರು. ಚಿಕಿತ್ಸೆಯಿಂದ ಬರದಿದ್ದ ಗೆಲುವು ಬಣ್ಣಬಣ್ಣದ ಕಂಬಳಿಯಿಂದ ಬಂದಿತ್ತು ಆ ಮಕ್ಕಳ ಮುಖದಲ್ಲಿ.
ಕರೆನ್ ಅವತ್ತೇ ಸಂಕಲ್ಪ ಮಾಡಿದಳು. ರೋಗಪೀಡಿತ, ಅನಾಥ, ಪ್ರೀತಿವಂಚಿತ ಮಕ್ಕಳಿಗೆ ಬೆಚ್ಚಗಿನ ಕಂಬಳಿಗಳನ್ನು ಉಚಿತವಾಗಿ ಒದಗಿಸುವ ಯೋಜನೆಯೊಂದನ್ನು ತಯಾರಿಸಿದಳು. ಪ್ರೊಜೆಕ್ಟ್ ಲೈನಸ್ ಎಂದು ಅದಕ್ಕೆ ಹೆಸರಿಟ್ಟಳು. Linus ಎಂದರೆ ಚಾರ್ಲ್ಸ್ ಸ್ಕಲ್ಜ್ನ ಜಗದ್ವಿಖ್ಯಾತ Peanuts ಕಾಮಿಕ್ಸರಣಿಯ ಒಂದು ಕ್ಯಾರೆಕ್ಟರ್. ಮುಖ್ಯಪಾತ್ರವಾದ ಚಾರ್ಲಿ ಬ್ರೌನ್ನ ಚಡ್ಡಿದೋಸ್ತ್. ಬೆರಳು ಚೀಪುತ್ತಿರುವ ತುಂಟ ಹುಡುಗ. ಹೆಗಲಮೇಲೆ ಯಾವಾಗಲೂ ತನ್ನ ಪ್ರೀತಿಯ ತಿಳಿನೀಲಿ ಬ್ಲಾಂಕೆಟ್ ಹೊತ್ತುಕೊಂಡು ತಿರುಗುವವ. ಅದೇ ಅವನ ಗುರುತು. ಬ್ಲಾಂಕೆಟ್ ಬಟವಾಡೆಯ ಈ ಮಹಾಯೋಜನೆಗೆ ‘ಲೈನಸ್’ ಹೆಸರೇ ಅತಿಸೂಕ್ತವಾದುದು ಎಂದುಕೊಂಡಳು ಕರೆನ್. ಸ್ವಾರಸ್ಯವೆಂದರೆ ಪೀನಟ್ಸ್ ಕಾಮಿಕ್ ಸೃಷ್ಟಿಕರ್ತ ಸ್ಕಲ್ಜ್ನಿಗೂ ಪ್ರೊಜೆಕ್ಟ್ ಲೈನಸ್ ಬಗ್ಗೆ ಕೇಳಿ ಅಪಾರ ಸಂತಸವಾಗಿತ್ತು.
ಅದಾದಮೇಲೆ ಪ್ರೊಜೆಕ್ಟ್ ಲೈನಸ್ ಕುರಿತು ಪತ್ರಿಕೆಗಳು ಬರೆದವು. ಟೆಲಿವಿಷನ್ನಲ್ಲಿ ಕರೆನ್ಳ ಸಂದರ್ಶನ ಪ್ರಸಾರವಾಯಿತು. ಅಮೆರಿಕದ ಮೂಲೆಮೂಲೆಗಳಿಂದ ಹ್ಯಾಂಡ್ಮೇಡ್ ಬ್ಲಾಂಕೆಟ್ಗಳು, ಬಣ್ಣಬಣ್ಣದ ಕೌದಿ ಕಂಬಳಿಗಳು ಕರೆನ್ ಮನೆಗೆ ಬಂದುಬಿದ್ದವು. ಪ್ರೊಜೆಕ್ಟ್ ಲೈನಸ್ನಲ್ಲಿ ತಾವೂ ಭಾಗಿಯಾಗುತ್ತೇವೆಂದು ಜನ ಮುಂದೆಬಂದರು. ಎಷ್ಟೋಮಂದಿ ತಮ್ಮ ದೈನಂದಿನ ಕೆಲಸಗಳೆಲ್ಲ ಮುಗಿದಮೇಲೆ ತಡರಾತ್ರಿಯಾದರೂ ಸರಿ, ಸ್ವಲ್ಪಹೊತ್ತು ಉಣ್ಣೆ ಹೆಣಿಗೆ ಮಾಡಿಯೇ ಮಲಗುವ ಪರಿಪಾಠ ಬೆಳೆಸಿಕೊಂಡರು. ವಾರಕ್ಕೋ ತಿಂಗಳಿಗೋ ಒಂದೆರಡಾದರೂ ಬ್ಲಾಂಕೆಟ್ ತಯಾರಿಸುವ ಸ್ಪೀಡ್ ಗಳಿಸಿದರು. ಸಮಾನಮನಸ್ಕ ‘ಬ್ಲಾಂಕೆಟೀರ್ಸ್’ ಸ್ನೇಹಿತರಾದರು; ಹೆಣಿಗೆ, ಕ್ರೋಷೆ ಮತ್ತಿತರ ಕರಕೌಶಲ್ಯಗಳ ಹೊಸಹೊಸ ಐಡಿಯಾಗಳನ್ನು ವಿನಿಮಯ ಮಾಡಿಕೊಂಡರು. ನಾಲ್ಕೈದು ವರ್ಷಗಳಲ್ಲೇ ಅಮೆರಿಕದ ಐವತ್ತೂ ಸಂಸ್ಥಾನಗಳಲ್ಲಿ ಪ್ರೊಜೆಕ್ಟ್ ಲೈನಸ್ನ ಸ್ಥಳೀಯ ಶಾಖೆಗಳು ತೆರೆದುಕೊಂಡವು. ಇಲಿನಾಯ್ ಸಂಸ್ಥಾನದ ಬ್ಲೂಮಿಂಗ್ಟನ್ ಪಟ್ಟಣದಲ್ಲಿ ಪ್ರೊಜೆಕ್ಟ್ ಲೈನಸ್ ಹೆಡ್ಕ್ವಾರ್ಟರ್ಸ್ ಸ್ಥಾಪನೆಯಾಯಿತು. ಸ್ವಯಂಸೇವಕರು ಪ್ರೀತಿಯಿಂದ ಹೆಣೆದುಕೊಟ್ಟ ಬ್ಲಾಂಕೆಟ್ಗಳನ್ನು ಸಂಗ್ರಹಿಸಿ ದೇಶವಿದೇಶಗಳ ಆಸ್ಪತ್ರೆಗಳಿಗೆ, ಅನಾಥಾಶ್ರಮಗಳಿಗೆ ವಿತರಿಸುವ ವ್ಯವಸ್ಥೆಯಾಯಿತು. ಐಬಿಎಂ, ಲಾಕ್ಹೀಡ್ಮಾರ್ಟಿನ್, ಎಟಿಏಂಡ್ಟಿ, ಸ್ಟಾರ್ಬಕ್ಸ್ ಮುಂತಾದ ಕಂಪನಿಗಳು ಪ್ರಾಯೋಜಕತ್ವ ರೂಪದಲ್ಲಿ ನೆರವಾದವು. ಇದೀಗ 371 ಶಾಖೆಗಳಿಂದ ಒಟ್ಟು 38 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಬ್ಲಾಂಕೆಟ್ಗಳನ್ನು ಸಂಗ್ರಹಿಸಿ ವಿತರಿಸಲಾಗಿದೆ ಎನ್ನುತ್ತದೆ ಪ್ರೊಜೆಕ್ಟ್ ಲೈನಸ್ನ ವೆಬ್ಸೈಟು.
ಅಬ್ಬಾ! ಬರೀ ಒಂದು ಲೇಖನವು ಓದುಗಳೊಬ್ಬಳ ಮೇಲೆ ಇಷ್ಟು ಪರಿಣಾಮ ಬೀರಿ, ದೊಡ್ಡದೊಂದು ಆಂದೋಲನಕ್ಕೇ ಕಾರಣವಾಯಿತೆಂದರೆ ನಿಜಕ್ಕೂ ಅದ್ಭುತ ಎನಿಸುವುದಿಲ್ಲವೇ? ‘ಜಾಯ್ ಟು ದ ವರ್ಲ್ಡ್’ ಎಂದು ಶೀರ್ಷಿಕೆ ಕೊಡುವಾಗ ಲೇಖನವು ಇಷ್ಟೊಂದು ಸಂತಸವನ್ನು- ಕಂಬಳಿಗಳನ್ನು ಹೆಣೆಯುವವರಿಗೂ ಹೊದ್ದುಕೊಳ್ಳುವವರಿಗೂ- ಉಂಟುಮಾಡುತ್ತದೆಂದು ಖಂಡಿತ ಕಲ್ಪನೆ ಇದ್ದಿರಲಿಕ್ಕಿಲ್ಲ. ಕಾಣದ ಕೈಗಳ ಕರುಣೆಯ ಕೊಡುಗೆ ಎಂದರೆ ಇದೇ ಇರಬೇಕು. ಬ್ಲಾಂಕೆಟೀರ್ಸ್ ಸ್ವಯಂಸೇವಕರಿಗೆ ತಾವು ಹೆಣೆದ ಕಂಬಳಿ ಯಾವ ಮಗುವಿಗೆ ರಕ್ಷಣೆಯೊದಗಿಸುತ್ತದೆ ಎಂಬ ಕಲ್ಪನೆಯಿರುವುದಿಲ್ಲ. ಬೆಚ್ಚಗಿನ ಪ್ರೀತಿಯನ್ನು ಕಂಬಳಿಯಲ್ಲಿ ಪಡೆದುಕೊಂಡ ಮಗುವಿಗೆ ಅದನ್ನು ಹೆಣೆದು ತನಗೆ ಉಡುಗೊರೆ ಕೊಟ್ಟವರಾರು ಎಂದು ಗೊತ್ತಿರುವುದಿಲ್ಲ. ಇಲ್ಲಿ ಲಾಭ, ಕೀರ್ತಿಗಳ ಪ್ರಶ್ನೆಯೇ ಇಲ್ಲ. ಯಾರು ಎಷ್ಟು ದಾನ ಮಾಡಿದರು ಎಂಬ ಲೆಕ್ಕವಿಲ್ಲ, ತಾರತಮ್ಯವಿಲ್ಲ. ಭಾವುಕವಾಗಿ ಹೇಳುವುದಾದರೆ, ಒಂದೊಂದು ಕಂಬಳಿಯಲ್ಲೂ ಇರುವುದು ಉಣ್ಣೆಯ ಎಳೆಗಳೇ ಅಲ್ಲ! ಕರುಣೆ, ಮಮತೆ, ಆರೈಕೆ, ಹಾರೈಕೆ ಮತ್ತು ಎಲ್ಲ ರೀತಿಯಲ್ಲಿಯೂ ನಿರ್ಮಲವಾದ ಕಳಕಳಿಯ ಭಾವನೆಯುಳ್ಳ ಮೆತ್ತನೆಯ ಎಳೆಗಳು. ಪ್ಯಾರ್-ಕೇ-ಧಾಗೇ ಎಂದು ಹಿಂದಿಯಲ್ಲಿ ನುಡಿಗಟ್ಟು ಇದೆಯಲ್ಲಾ ಅಂತಹ ನಿಸ್ವಾರ್ಥ ಪ್ರೀತಿಯ ಅಕ್ಕರೆಯ ಎಳೆಗಳು.
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125

