ಪದ-ಶ್ರಾವ್ಯ

ಈಗ ಆಡಿಯೋ ಟಚ್!

25
Jun 2011
Names and Nice Memories
Posted in DefaultTag by sjoshi at 8:16 am

ದಿನಾಂಕ  26 ಜೂನ್ 2011ರ ಸಂಚಿಕೆ...

ಹೆಸರಿನ ಹಿಂದೆ ಒಂದು ಹಸಿರು ನೆನಪು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

“ಅಮೆರಿಕದ ಸಸ್ಯೋದ್ಯಾನದಲ್ಲಿ ಅಶೋಕ ವೃಕ್ಷವನ್ನು ನೋಡಿದಾಗ ಅದರ ಕೆಳಗೆ ಸೀತಾಮಾತೆ ಕುಳಿತ ಚಿತ್ರ ಕಣ್ಮುಂದೆ ಬಂದುಹೋಯಿತು ಎಂದು ನಿಮ್ಮ ಸ್ನೇಹಿತರೊಬ್ಬರ ಅನುಭವವನ್ನು ಬಣ್ಣಿಸಿದ್ದೀರಷ್ಟೇ? ಅದನ್ನು ಓದಿದಾಗಿನಿಂದ ನನಗೊಂದು ಸಂದೇಹ ಕಾಡುತ್ತಿದೆ. ರಾಮಾಯಣದ ಕಥೆಯಲ್ಲಿ, ರಾವಣನಿಂದ ಅಪಹರಿಸಲ್ಪಟ್ಟ ಸೀತೆ ಲಂಕೆಯಲ್ಲಿ ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಕೆಳಗೆ ಕುಳಿತು ದಿನಕಳೆಯುತ್ತಿದ್ದಳು ಎಂದು ವಿವರಣೆಯಿದೆ. ಅಂದರೆ ವನದ ಹೆಸರು ಅಶೋಕವೇ ಆದರೂ ಸೀತಾಮಾತೆಗೆ ನೆರಳು ನೀಡಿದ್ದ ವೃಕ್ಷದ ಹೆಸರು ಶಿಂಶುಪ ಅಲ್ಲವೇ? ಇದನ್ನು ನಾನು ಚಂದಮಾಮ ಕಥೆಗಳಲ್ಲಿ ಓದಿದ್ದೆ. ಇಷ್ಟು ಚೆನ್ನಾಗಿ ಹೇಗೆ ನನ್ನ ನೆನಪಿನಲ್ಲಿ ಉಳಿದಿದೆ ಎಂಬುದನ್ನೂ ವಿವರಿಸುತ್ತೇನೆ. ಚಂದಮಾಮದಲ್ಲಿ ಆ ಕಥೆಗಳನ್ನು ಓದುತ್ತಿದ್ದ ದಿನಗಳಲ್ಲಿ ನಾನು ಚೊಚ್ಚಲ ಬಸುರಿ. ಸೀತೆಯ ಕಷ್ಟಕಾಲದಲ್ಲಿ ಅವಳಿಗೆ  ನೆರಳಿತ್ತ ಶಿಂಶುಪ ವೃಕ್ಷದ ಬಗ್ಗೆ ನನಗೆ ಅಪಾರ ಗೌರವ ಮೂಡಿತ್ತು. ನನಗೇನಾದರೂ ಹೆಣ್ಣು ಮಗುವಾದರೆ ಶಿಂಶುಪಾ ಎಂದೇ ಹೆಸರಿಡುತ್ತೇನೆ ಎಂದು ಆಗಲೇ ಅಂದುಕೊಂಡಿದ್ದೆ. ಅದರಂತೆ ನನಗೆ ಹೆಣ್ಣುಮಗುವೇ ಹುಟ್ಟಿತು. ಶಿಂಶುಪಾ ಎಂದೇ ಹೆಸರಿಟ್ಟೆವು. ಈಗ ಅವಳು ದೊಡ್ಡವಳಾಗಿ ಮದುವೆಯೂ ಆಗಿ ಗಂಡನ ಮನೆ ಸೇರಿದ್ದಾಳೆ...”

ಇದು, ಮೇ ೨೨ರ ಅಂಕಣದಲ್ಲಿ ಪ್ರಕಟವಾಗಿದ್ದ ‘ಬಾರ್ಸಿಲೋನಾದಲ್ಲಿ ಕರಿಬೇವು ಸಿಕ್ಕ ಸಂತಸ’ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬಂದ ಒಂದು ಪತ್ರ. ಬರೆದವರು ಮಡಿಕೇರಿಯಿಂದ ಗೀತಾ ಶ್ರೀಧರ ಎಂಬುವರು. ಇದೇ ಮೊದಲ ಸಲ ಅವರು ನನಗೆ ಪತ್ರ ಬರೆದಿರುವುದು. ಅವರೆನ್ನುವುದು ನಿಜ. ಲಂಕೆಯಲ್ಲಿ ಸೀತೆ ಕುಳಿತುಕೊಂಡಿದ್ದದ್ದು ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಅಡಿಯಲ್ಲಿ. ಶಿಂಶುಪ ವೃಕ್ಷಕ್ಕೆ ಕನ್ನಡದಲ್ಲಿ ಏನಂತಾರೆ, ಅದರ ಸಸ್ಯಶಾಸ್ತ್ರೀಯ ಹೆಸರೇನು, ಅಶೋಕ ವೃಕ್ಷಕ್ಕಿಂತ ಅದು ಹೇಗೆ ಭಿನ್ನ ಎಂಬೆಲ್ಲ ವಿವರಗಳು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಸುಂದರಕಾಂಡದಲ್ಲಿ ‘ಶಿಂಶುಪ ವೃಕ್ಷವನೇರಿ ಕುಳಿತನವ ಸೀತೆಯ ಹುಡುಕಲು ಹನುಮಂತ... ಮಾಸಿದ ಸೀರೆಯ ಮ್ಲಾನವದನೆಯನು ಕಂಡು ಮರುಗಿದನು ಗುಣವಂತ...’ ಎಂದು ಕೇಳಿದ್ದು ನೆನಪಿದೆ. ನಿಖರವಾದ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ, ಅದಕ್ಕಿಂತಲೂ ಹೆಚ್ಚಾಗಿ ಹೆಸರಿನ ಹಿಂದಿನ ಹಸಿರು ನೆನಪನ್ನು ಹಂಚಿಕೊಂಡದ್ದಕ್ಕಾಗಿ ಗೀತಾ ಅವರಿಗೆ ವಿಶೇಷ ಧನ್ಯವಾದಗಳು.

ಟಿವಿ ರಾಮಾಯಣದಲ್ಲಿ ಸೀತೆಯ ಪಾತ್ರ ಮಾಡಿದ್ದ ನಟಿ ನಿಮಗೆ ನೆನಪಿದ್ದಾಳೆಯೇ? ಆಕೆಯ ಹೆಸರು ದೀಪಿಕಾ. ಕೆಲ ದಿನಗಳ ಹಿಂದೆ ನನಗೆ ದ್ವೀಪಿಕಾ ದೇಸಾಯಿ ಎಂಬುವರಿಂದ ಒಂದು ಫೇಸ್‌ಬುಕ್ ಫ್ರೆಂಡ್‌ರಿಕ್ವೆಸ್ಟ್ ಬಂದಿತ್ತು. ಅವರ ಹೆಸರು ನೋಡಿ ಕನ್ನಡದವರಲ್ಲವೇನೊ ಎಂದುಕೊಂಡಿದ್ದೆ ನಾನು. ಪರಿಚಯ ತಿಳಿಸುತ್ತೀರಾ ಎಂದು ಅವರಿಗೆ ಬರೆದು ಕೇಳಿದ್ದೆ. ಅದಕ್ಕೆ ಕನ್ನಡದಲ್ಲೇ ಉತ್ತರಿಸಿದ ದ್ವೀಪಿಕಾ, ತಾನು ಕ್ಯಾಲಿಫೋರ್ನಿಯಾದಲ್ಲಿರುವ ಓರ್ವ ಕನ್ನಡತಿ ಗೃಹಿಣಿಯೆಂದೂ ಈಗ ಅಮ್ಮ-ಅಪ್ಪ ತನ್ನನ್ನು ಭೇಟಿಯಾಗಲು ಅಮೆರಿಕೆಗೆ ಬಂದಿದ್ದಾರೆಂದೂ, ಅಮ್ಮ ಪರಾಗಸ್ಪರ್ಶ ಅಂಕಣದ ರೆಗ್ಯುಲರ್ ಓದುಗರೆಂದೂ, ಅಮೆರಿಕದಿಂದ ಹಿಂದಿರುಗುವುದರೊಳಗೆ ನನ್ನೊಡನೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಲು ಬಯಸುತ್ತಾರೆಂದೂ ಬರೆದಿದ್ದರು. ನನ್ನ ಫೋನ್ ನಂಬರ್ ತಿಳಿಸಿದ ಮೇಲೆ ಅವರಮ್ಮನೊಡನೆ ಟೆಲಿಮಾತುಕತೆ ಆಯಿತು. ತಮಾಷೆಗಾಗಿಯೇ ನಾನು ಅವರಲ್ಲಿ “ನಿಮ್ಮ ಮಗಳ ಹೆಸರು ನಿಜವಾಗಿಯೂ ದ್ವೀಪಿಕಾ ಅಂತಲೇ ಇರುವುದಾ ಅಥವಾ ದೀಪಿಕಾ ಅಂತಿದ್ದದ್ದು ಬರೆಯುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ನಡುವೆ ಡಬ್ಲ್ಯೂ ಸೇರಿಕೊಂಡದ್ದಾ?” ಎಂದು ಕೇಳಿಯೇಬಿಟ್ಟೆ. ಅದಕ್ಕೆ ಅವರ ಉತ್ತರ ಹೀಗಿತ್ತು- “ದ್ವೀಪಿಕಾ ಅಂತಲೇ ಹೆಸರು. ಅವಳ ಅಪ್ಪ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರು ಈಗ ನಿವೃತ್ತರಾಗಿದ್ದಾರೆ. ಅವರಿಗೆ ಕೆಲಸದಲ್ಲಿ ಬೇರೆಬೇರೆ ಊರುಗಳಿಗೆ ಟ್ರಾನ್ಸ್‌ಫರ್ ಆಗುತ್ತಿತ್ತು. ಮಗಳು ಹುಟ್ಟುವಾಗ ನಮ್ಮವರ ಉದ್ಯೋಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿತ್ತು. ಆ ನೆನಪಿಗಾಗಿ ದ್ವೀಪಿಕಾ ಎಂದು ಹೆಸರಿಟ್ಟೆವು. ಎಲ್ಲರೂ ಅದೇ ಪ್ರಶ್ನೆ ಕೇಳೋದು- ದೀಪಿಕಾ ಎನ್ನುವ ಹೆಸರು ಸಾಮಾನ್ಯವಾಗಿ ಗೊತ್ತಿರುತ್ತೆ. ಇದೇನಿದು ದ್ವೀಪಿಕಾ ಎಂಬ ಹೆಸರು? ಅವರೆಲ್ಲರಿಗೆ ವಿವರಿಸುವಾಗ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪವಾಸದ ದಿನಗಳನ್ನು ನೆನೆದು ಖುಷಿಪಡುತ್ತೇವೆ.”

ರಾಮಾಯಣದಲ್ಲಿ ಸೀತೆಯ ಅಪಹರಣಕ್ಕೆ ಕಾರಣವಾದದ್ದು ಏನು ಹೇಳಿ? ಮಾರೀಚ ಬಂಗಾರದ ಜಿಂಕೆಯಾಗಿ ಸೀತೆಯ ಕಣ್ಮುಂದೆ ಸುಳಿದಾಡಿದ್ದು. ಹಿಂದೊಮ್ಮೆ ನಾನು ಅಮೆರಿಕದ ರಸ್ತೆಗಳಲ್ಲಿ ಜಿಂಕೆಗಳು ಓಡಾಡುವುದರ ಕುರಿತು ‘ಪಬ್ಲಿಕ್ ರೋಡಿನಲಿ ಜಿಂಕೆ ಬಂದೈತಲ್ಲೋ...’ ಎಂಬ ಲೇಖನ ಬರೆದಿದ್ದೆ. ಅದರಲ್ಲಿ ‘ಕೆಲವೊಮ್ಮೆ ಈ ಜಿಂಕೆಗಳು ಎಚ್ಚರಿಕೆ ಫಲಕಗಳಿರುವಲ್ಲಿಯೇ ರಸ್ತೆ ದಾಟುವ ಸುಭಗತನವನ್ನು ಪ್ರದರ್ಶಿಸುವುದೂ ಇದೆ’ ಎಂದು ಬರೆದಿದ್ದೆ. ಅಮೆರಿಕದ ನಾರ್ತ್‌ಕೆರೊಲಿನಾದಲ್ಲಿರುವ ಮಲ್ಲಿಕಾ ರಾಜೀವ್ ಎಂಬುವರು ಅದನ್ನೋದಿ, “ನೀವು ಲೇಖನದಲ್ಲಿ ಒಂದುಕಡೆ ಸುಭಗತನ ಎಂಬ ಪದ ಬಳಿಸಿದ್ದೀರಲ್ಲಾ ಅದರ ಅರ್ಥವೇನು? ಏಕೆ ಕೇಳುತ್ತಿದ್ದೇನೆಂದರೆ ನನ್ನ ಮಗನ ಹೆಸರು ಸುಭಗ ಅಂತಲೇ ಇರುವುದು. ಹೆಸರಿನ ನಿಜಾರ್ಥ ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸುತ್ತೀರಾ?” ಎಂದು ಪತ್ರ ಬರೆದು ಕೇಳಿದ್ದರು. ಸುಭಗ ಎನ್ನುವುದು ಗಣಪತಿಯ ಹೆಸರುಗಳಲ್ಲೊಂದು. ಸುಭಗ ಎಂಬ ಪದದ ವಾಚ್ಯಾರ್ಥವು ಜಾಣ ಅಥವಾ ಬುದ್ಧಿವಂತ (ಇಂಗ್ಲಿಷ್‌ನಲ್ಲಾದರೆ smart) ಎಂದು. ಇದನ್ನು ಅವರಿಗೆ ವಿವರಿಸಿದ್ದೆ. ಹೌದು ತನ್ನ ಮಗ ನಿಜಕ್ಕೂ ಜಾಣ ಎಂದು ಅವರು ಹೆಮ್ಮೆಪಟ್ಟುಕೊಂಡಿದ್ದರು.

ಈ ಮೇಲಿನ ಮೂರು ಹೆಸರಾಯಣಗಳನ್ನು ಒಂದು ಸಾಮಾನ್ಯ ಅಂಶದಿಂದ ಪೋಣಿಸಿರುವುದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಇಲ್ಲವಾದರೂ ನಾನೇ ತಿಳಿಸುತ್ತೇನೆ- ಮೂರಕ್ಕೂ ಪೀಠಿಕೆಯಲ್ಲಿ ಸೀತಾಮಾತೆ ಬರುತ್ತಾಳೆ!

Sita_in_Ashokavana.jpg

ಈರೀತಿ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದ ಸಂಗತಿಗಳನ್ನು ಯಾವುದೋ ಒಂದು ಸ್ವಾರಸ್ಯಕರ ಎಳೆಯಿಂದ ಪೋಣಿಸುವುದು ಅಥವಾ ಸರಪಳಿಯಂತೆ ಜೋಡಿಸುವುದು ನನಗೆ ಇಷ್ಟದ ಕೆಲಸ. ಕೆಲ ವಾರಗಳ ಹಿಂದೆ, ಅಭ್ಯಾಸಬಲದ ಅನುಭವಗಳು ಮತ್ತು ಆಭಾಸಗಳ ಬಗ್ಗೆ ಓದುಗರ ಪ್ರತಿಕ್ರಿಯೆಗಳನ್ನು ಪೋಣಿಸಿ ಒಂದು ಅಂಕಣದಲ್ಲಿ ಪ್ರಸ್ತುತಪಡಿಸಿದ್ದು, ಅಭ್ಯಾಸಬಲ ಪ್ರದರ್ಶನದ ಉದ್ಘಾಟನೆಯನ್ನು ಹತ್ತು ತಿಂಗಳ ಪುಟ್ಟ ಪಾಪುವಿನಿಂದ ಮಾಡಿಸಿದ್ದು ನಿಮಗೆ ನೆನಪಿರಬಹುದು (ವಾಕಿಂಗ್‌ನಲ್ಲೂ ಅಭ್ಯಾಸಬಲಗೈಯಿಂದ ಸಿಗ್ನಲ್ : 9 ಜನವರಿ 2011). ಅವತ್ತಿನ ಅಂಕಣವನ್ನು ಬರೆಯುವಾಗ ನನಗೆ ಆ ಮಗುವಿನ ಹೆಸರು ಗೊತ್ತಿರಲಿಲ್ಲ. ಮಗುವಿನ ಅಜ್ಜಿ, ಭದ್ರಾವತಿಯ ಮಮತಾ ನಾಗರಾಜ ಅವರು ‘ಮುದ್ದಿನ ಮೊಮ್ಮಗಳು’ ಎಂದು ಬರೆದಿದ್ದರೇ ಹೊರತು ಹೆಸರೇನೆಂದು ತಿಳಿಸಿರಲಿಲ್ಲ. ಅಂಕಣ ಪ್ರಕಟವಾದ ಮೇಲೆ ಅವರೇ ಪತ್ರ ಬರೆದು ಮೊಮ್ಮಗುವಿನ ಹೆಸರು ‘ಶೃಂಖಲಾ’ ಎಂದು ತಿಳಿಸಿದರು. ಶೃಂಖಲಾ ಎಂದರೆ ಸಂಸ್ಕೃತದಲ್ಲಿ ಸರಪಳಿ ಎಂದರ್ಥ. ಓದುಗರ ಅನುಭವಗಳನ್ನು ನಾನು ಸರಪಳಿಯಿಂದ ಜೋಡಿಸಿದ್ದನ್ನು ಶೃಂಖಲಾ ಉದ್ಘಾಟಿಸಿದ್ದಳು!

ಸ್ನೇಹಸ್ಪರ್ಶ: ಮುಂದಿನ ಭಾನುವಾರ ಜುಲೈ 3ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಒಂದು ಅನೌಪಚಾರಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪರಾಗಸ್ಪರ್ಶ ಅಂಕಣದ ಓದುಗಬಳಗದ ಸ್ನೇಹಸಮಾವೇಶ. ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶ. ಇದೇ ಸಂದರ್ಭದಲ್ಲಿ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು (‘ಗೆಲುವಿನ ಟಚ್!’ ಮತ್ತು ‘ಚೆಲುವಿನ ಟಚ್!’ - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ ‘ಹನಿ’ಸಾಹಿತಿ ಎಚ್.ಡುಂಡಿರಾಜ್ ಮತ್ತು ಪತ್ರಕರ್ತ ನಾಗೇಶ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಓದುಗಮಿತ್ರರೆಲ್ಲರಿಗೂ ಆತ್ಮೀಯ ಸ್ವಾಗತ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.
Podbean App

Play this podcast on Podbean App