Episodes

Saturday Jan 15, 2011
Golden Voice of Homeless Man
Saturday Jan 15, 2011
Saturday Jan 15, 2011
ದಿನಾಂಕ 16 ಜನವರಿ 2011ರ ಸಂಚಿಕೆ...
ಟೆಡ್ಡ್ ವಿಲಿಯಮ್ಸ್ ಸ್ವರ್ಣಕಂಠಕ್ಕೆ ದುಡ್ಡು ಮಿಲಿಯನ್ಸ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] ಅಮೆರಿಕದಲ್ಲಿದ್ದುಕೊಂಡು ಕರ್ನಾಟಕದ ಕನ್ನಡ ಪತ್ರಿಕೆಗೆ ವಾರವಾರ ಅಂಕಣ ಬರೆಯುವುದೆಂದರೆ- ಒಂದು ರೀತಿಯಲ್ಲಿ ಸುಲಭ; ಇನ್ನೊಂದು ರೀತಿಯಲ್ಲಿ ಸವಾಲೂ ಹೌದು. ಸುಲಭ ಏಕೆಂದರೆ, ಅಲ್ಲಿಯ ಇಲ್ಲಿಯ (ಮತ್ತು ಎಲ್ಲೆಲ್ಲಿಯ) ವಿಷಯಗಳನ್ನು ಇಚ್ಛೆಬಂದಂತೆ ಎತ್ತಿಕೊಳ್ಳಬಹುದು; ಅಲ್ಲಿಂದ ದೂರವಿರುವುದರಿಂದ ಮತ್ತು ಇಲ್ಲಿ ಹೇಗೂ ಪರಕೀಯರಾದ್ದರಿಂದ ಯಾವುದನ್ನೂ ತೀರಾ ಹಚ್ಚಿಕೊಳ್ಳದೆ ಒಂಥರದ ನಿರ್ಲಿಪ್ತತೆಯಿಂದ ಬರೆಯಬಹುದು. ಮಾತ್ರವಲ್ಲ, ಗ್ಲೋಬಲ್ ಪರ್ಸ್ಪೆಕ್ಟಿವ್ ಎಂಬ ಬಣ್ಣದ ಕನ್ನಡಕವಿಟ್ಟು ವಿಶಾಲ ದೃಷ್ಟಿಕೋನದಿಂದ ಬರೆಯಬಹುದು. ಇನ್ನು, ಸವಾಲು ಯಾವ ರೀತಿ ಅಂತಲೂ ಹೇಳುತ್ತೇನೆ. ವಿಜಯ ಕರ್ನಾಟಕ ಪತ್ರಿಕೆಯ ಇ-ಪೇಪರ್ ಆವೃತ್ತಿಯನ್ನು ಓದುವ ಅನಿವಾಸಿ ಕನ್ನಡಿಗರಿದ್ದಾರೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಅವರಿಗೆ ಅಮೆರಿಕದ ಸಂಗತಿಗಳ ಬಗ್ಗೆ ಬರೆದರೆ ಅಷ್ಟೇನೂ ಹಿಡಿಸುವುದಿಲ್ಲ. ಅದಕ್ಕಿಂತ ತಾಯ್ನಾಡಿನಲ್ಲಿ ಕಳೆದ ತಮ್ಮ ಬಾಲ್ಯವನ್ನು ನೆನಪಿಸುವ ವಿಚಾರ ಲಹರಿಗಳಿದ್ದರೆ ಓದುವಾಗ ತುಂಬಾ ಹಿತಾನುಭವ ಆಗುತ್ತದೆ. ಕೆಲದಿನಗಳ ಹಿಂದೆ ಲಂಡನ್ನಿಂದ ಡಾ. ಪ್ರವೀಣ ಕುಮಾರ್ ನನಗೊಂದು ಪತ್ರ ಬರೆದಿದ್ದರು. ಅದರಲ್ಲಿ “ದಯವಿಟ್ಟು ಅಮೆರಿಕಾದ ಬಗ್ಗೆ ತುಂಬಾ ಬರೆಯಬೇಡಿ. ವಿದೇಶದಲ್ಲೇ ಇರುವ ನಮಗೆ ಈ ಬರಹಗಳು ರುಚಿ ಅನ್ಸಲ್ಲ. ಅಲ್ಲದೇ ಕರ್ನಾಟಕದಲ್ಲೂ ಗ್ರಾಮೀಣ ಪ್ರದೇಶದ ಓದುಗರಿಗೆ ಅಮೆರಿಕಾದ ಬಗ್ಗೆ ಯಾವ ಆಸಕ್ತಿ ಇರುತ್ತೆ ಹೇಳಿ? ನಮಗೆ ಹಳ್ಳಿಗಾಡಿನ, ಗ್ರಾಮೀಣ ಜೀವನದ ಸೊಗಸನ್ನು ಮೆಲುಕು ಹಾಕುವಂತೆ ಮಾಡುವ ನಿಮ್ಮ ಲೇಖನಗಳು ಬಹಳ ಇಷ್ಟವಾಗುತ್ತೆ. ಅಂಥವನ್ನೇ ಬರೀರಿ” ಎಂದು ಪ್ರೀತಿಯ ಆದೇಶ ನೀಡಿದ್ದರು. ಒಬ್ಬ ಅನಿವಾಸಿ ಕನ್ನಡಿಗನಾಗಿ ಪ್ರವೀಣ ಕುಮಾರ್ ಅವರ ಮನದಿಂಗಿತ ನನಗೆ ಅರ್ಥವಾಗುತ್ತದೆ. ಹಾಗೆಯೇ ಕರ್ನಾಟಕದ ಒಬ್ಬ ಜನಸಾಮಾನ್ಯ ಓದುಗನಿಗೆ ಅಮೆರಿಕದ ವಿಚಾರಗಳು ಒಂದೊಮ್ಮೆ ಕುತೂಹಲಕರ ಎನಿಸಿದರೂ ಕೊನೆಗೂ ತನಗದು ಏನೂ ರೆಲವೆಂಟ್ ಅಲ್ಲ, ತಾನು ರಿಲೇಟ್ ಮಾಡಿಕೊಳ್ಳುವಂಥದ್ದು ಅದರಲ್ಲೇನೂ ಇಲ್ಲ ಅಂತನ್ನಿಸುವುದೇ ಹೆಚ್ಚು. ಆ ಅರಿವು ಕೂಡ ನನಗಿದೆ. ಆದರೆ, ಇನ್ನೊಂದು ವರ್ಗವೂ ಇದೆ. ಅಮೆರಿಕದಲ್ಲಿ ಕುಳಿತುಕೊಂಡು ನೀವು ಹಲಸಿನ ಹಪ್ಪಳದ ಬಗ್ಗೆ, ವಟಸಾವಿತ್ರಿ ವ್ರತದ ಬಗ್ಗೆ, ಹಳಗನ್ನಡ ಕಾವ್ಯದ ಬಗ್ಗೆ ಯಾಕೆ ಬ(ಕೊ)ರಿತೀರಿ? ಅದನ್ನು ಮಾಡಲಿಕ್ಕೆ ಇಲ್ಲಿನವರು ಇದ್ದಾರೆ. ನಮಗೆ ಅಮೆರಿಕದ ವಿಚಾರಗಳನ್ನು, ಅಲ್ಲಿನ ಜನಜೀವನ ಕುರಿತಾದ್ದನ್ನು ಕನ್ನಡದಲ್ಲಿ ತಿಳಿಸಿ ಎನ್ನುವವರು. ಬೆಂಗಳೂರಿನ ಜಿ.ಆರ್. ಅರವಿಂದ ಎಂಬ ಓದುಗಮಿತ್ರರ ಪತ್ರವನ್ನೇ ತೆಗೆದುಕೊಳ್ಳಿ. ಅವರೆನ್ನುತ್ತಾರೆ, “ಗೋರೂರು ರಾಮಸ್ವಾಮಿ ಐಯಂಗಾರರ ಪ್ರವಾಸಕಥನದಿಂದ, ನಾಗತಿಹಳ್ಳಿಯವರ ಸಿನೆಮಾಗಳಿಂದ ಆ ದೂರದ ದೇಶದ ಬಗ್ಗೆ ತಿಳಿದ ಮೇಲೂ ಕುತೂಹಲ ಇನ್ನೂ ಇದೆ. ಅಲ್ಲಿ ತೀರಾ ನಗರಪ್ರದೇಶದಿಂದ ದೂರವಿರುವ ಗ್ರಾಮೀಣ ಜನರ ನಾಡಿಮಿಡಿತ ಹೇಗಿರುತ್ತೆ? ದೇವೇಗೌಡ, ಸಾಧುಕೋಕಿಲ ಮುಂತಾದವರನ್ನು ಹೋಲುವ, ಅಥವಾ ತಮ್ಮ ವೃತ್ತಿಯಿಂದಲೇ ‘ನಿತ್ಯಾನಂದ’ ಪಡೆವವರು-ಕೊಡುವವರು ಅಲ್ಲೂ ಇದ್ದಾರೆಯೇ? ಹೇಗಿದ್ದಾರೆ? ‘ಬುದ್ಧಿಜೀವಿಗಳು’ ಆ ಲೋಕದಲ್ಲೂ ಇದ್ದಾರಾ? ಅವರ ವರ್ತನೆ ಹೇಗಿರುತ್ತದೆ? ತೀರಾ ಚಂದನ ಥರದ ಟಿವಿ ಚಾನಲ್ ಅಲ್ಲೂ ಇದೆಯಾ?...” ಅರವಿಂದ್ ಅವರ ಪ್ರಶ್ನೆಗಳನ್ನು ಒಂದೊಂದಾಗಿ ಉತ್ತರಿಸುತ್ತ ಒಂದು ಸ್ವಾರಸ್ಯಕರ ಲೇಖನವನ್ನೇ ಬರೆಯಬಹುದು. ಅದನ್ನು ಮುಂದೆ ಯಾವಾಗಾದರೂ ಮಾಡುತ್ತೇನೆ. ಇವತ್ತು ಅಮೆರಿಕದ ಟೆಡ್ಡ್ ವಿಲಿಯಮ್ಸ್ ಎಂಬೊಬ್ಬ ನಿರಾಶ್ರಿತ ಭಿಕ್ಷುಕ ಕೆಲದಿನಗಳ ಹಿಂದೆ ರಾತೋರಾತ್ರಿ ಎಂಬಂತೆ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಸುದ್ದಿಯನ್ನು ಯಥಾಯೋಗ್ಯವಾಗಿ ಇಲ್ಲಿ ಸ್ಪರ್ಶಿಸುತ್ತೇನೆ. ಅಷ್ಟು ಹೇಳಿದಾಗಲೇ ನಿಮ್ಮಲ್ಲಿ ಕೆಲವರಿಗೆ ಇದ್ದಿರಬಹುದಾದ ಒಂದು ಪ್ರಶ್ನೆಯನ್ನು ಉತ್ತರಿಸಿದಂತಾಯ್ತು. ಅಮೆರಿಕದಲ್ಲೂ ಭಿಕ್ಷುಕರಿದ್ದಾರೆಯೇ? ಹೌದು, ಇದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ದೇಶವೇ ಒಂದು ದೊಡ್ಡ ಭಿಕ್ಷುಕನಿದ್ದಂತೆ ಎಂದು ಕೆಲವು ಸಿನಿಕರು ಹೇಳಬಹುದು. ಅಷ್ಟೇಕೆ, ಪ್ರಪಂಚದ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಒಂದು ವಿಧದಲ್ಲಿ ಒಂದಲ್ಲಒಂದು ಸಂದರ್ಭದಲ್ಲಿ ಭಿಕ್ಷುಕನೇ ಎಂಬ ತತ್ತ್ವಜ್ಞಾನದ ಮಾತನಾಡಬಹುದು ಇನ್ನು ಕೆಲವರು. ಅವರನ್ನೆಲ್ಲ ಸದ್ಯಕ್ಕೆ ದೂರವಿಟ್ಟು ನಮ್ಮ-ನಿಮ್ಮ ಪರಿಕಲ್ಪನೆಯಲ್ಲಿ ಭಿಕ್ಷುಕ ಎಂಬ ಪದದ ಸಾಮಾನ್ಯ ಅರ್ಥವನ್ನು ತೆಗೆದುಕೊಂಡರೆ ಅಮೆರಿಕದಲ್ಲೂ ಭಿಕ್ಷುಕರಿದ್ದಾರೆ. ಅಂಥವನೊಬ್ಬ ಟೆಡ್ಡ್ ವಿಲಿಯಮ್ಸ್. ಕಳೆದ ಹದಿನೇಳು ವರ್ಷಗಳೂ ಅವನು ಭಿಕ್ಷೆ ಬೇಡಿಕೊಂಡೇ ಬದುಕಿದ್ದವನು.
ಹಿಂದಿ ಭಾಷೆಯಲ್ಲಿ ಒಂದು ಜನಜನಿತ ಮಾತಿದೆ- ‘ಭಗವಾನ್ ಜಬ್ಭೀ ದೇತಾ ಹೈ ತೊ ಛಪ್ಪರ್ ಫಾಡ್ಕೆ ದೇತಾ ಹೈ’ (ಭಗವಂತ ಕೊಟ್ಟಾಗೆಲ್ಲ ಸೂರು ಹರಿದುಹೋಗುವಂತೆ ಸುರಿಯುತ್ತಾನೆ) ಎಂದು. ದೇವರು ನಮ್ಮನ್ನು ಕಷ್ಟಗಳಿಗೆ ಸಿಲುಕಿಸುವ ವಿಷಯದಲ್ಲೂ ಸಕಲಸೌಭಾಗ್ಯವನ್ನು ಒದಗಿಸುವ ವಿಷಯದಲ್ಲೂ ಈ ಮಾತು ಏಕಪ್ರಕಾರವಾಗಿ ಸರಿಹೋಗುತ್ತದೆ. ಕಳೆದವಾರ ಟೆಡ್ಡ್ ವಿಲಿಯಮ್ಸ್ ಬದುಕಿನಲ್ಲಿ ಭಗವಂತ ದಯಪಾಲಿಸಿದ್ದು ‘ಛಪ್ಪರ್ ಫಾಡ್ಕೆ’ಗಿಂತಲೂ ಹೆಚ್ಚಿನ ರೀತಿಯಲ್ಲಿ ಎಂದರೆ ತಪ್ಪಲ್ಲ. ಆ ದಿನವೂ ವಿಲಿಯಮ್ಸ್ ಎಂದಿನಂತೆಯೇ ಒಹಯೋ ರಾಜ್ಯದ ಕೊಲಂಬಸ್ ಪಟ್ಟಣದ ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ಕೈಯಲ್ಲೊಂದು ಬೋರ್ಡ್. “ನನಗೆ ದೈವದತ್ತವಾದ ಕಂಠಸಿರಿಯಿದೆ. ಹಿಂದೆ ನಾನೊಬ್ಬ ರೇಡಿಯೊ ಅನೌನ್ಸರ್ ಆಗಿದ್ದೆ, ಆದರೆ ಕಷ್ಟದ ದಿನಗಳಿಗೆ ಗುರಿಯಾದೆ. ದಯವಿಟ್ಟು ಸಹಾಯ ಮಾಡಿ. ನಿಮ್ಮ ನೆರವನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತೇನೆ. ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ.” ಕೊಲಂಬಸ್ ಪಟ್ಟಣದ ‘ಕೊಲಂಬಸ್ ಡಿಸ್ಪ್ಯಾಚ್’ ಪತ್ರಿಕೆಯ ವರದಿಗಾರ ಡೊರಲ್ ಚಿನೊವೆತ್ನಿಗೆ ಅವತ್ತು ನಿರಾಶ್ರಿತ ಭಿಕ್ಷುಕರ ಬಗ್ಗೆ ಒಂದು ರಿಪೋರ್ಟ್ ತಯಾರಿಸುವ ಅಸೈನ್ಮೆಂಟ್ ಇತ್ತು. ಕಾರಿನಲ್ಲಿ ಆ ರಸ್ತೆಯಾಗಿಯೇ ಹೋಗುತ್ತಿದ್ದವನಿಗೆ ಟ್ರಾಫಿಕ್ಸಿಗ್ನಲ್ ಬಳಿ ವಿಲಿಯಮ್ಸ್ ಎದುರಾದ. ಕುತೂಹಲದಿಂದ ಕಾರಿನ ಕಿಟಕಿಗಾಜು ಕೆಳಸರಿಸಿ ವಿಲಿಯಮ್ಸ್ನ ಕೈಯಲ್ಲಿದ್ದ ಬೋರ್ಡ್ ಓದಿದ. ಏನಿವನ ಕಂಠಸಿರಿ ನೋಡಿಯೇಬಿಡೋಣ ಎಂದು ತನ್ನಲ್ಲಿದ್ದ ವಿಡಿಯೊಕೆಮರಾದಲ್ಲಿ ವಿಲಿಯಮ್ಸ್ ಮಾತನ್ನು ರೆಕಾರ್ಡ್ ಮಾಡಿದ. ನಿಜಕ್ಕೂ ರೇಡಿಯೊ ಅನೌನ್ಸರ್ಗೆ ಹೇಳಿಮಾಡಿಸಿದ ಧ್ವನಿ ಎಂದು ಅಚ್ಚರಿಗೊಂಡ ಚಿನೊವೆತ್ ಆ ವಿಡಿಯೋ ತುಣುಕನ್ನು ಇಂಟರ್ನೆಟ್ನಲ್ಲಿ ತೇಲಿಬಿಟ್ಟ.
ಕಾಳ್ಗಿಚ್ಚಿನಂತೆ, ಕಂಪ್ಯೂಟರ್ ವೈರಸ್ನಂತೆ ಹರಡಿತು ಆ ‘ಗೋಲ್ಡನ್ ವಾಯ್ಸ್ ಆಫ್ ಹೋಮ್ಲೆಸ್ ಮ್ಯಾನ್’ ವಿಡಿಯೋ ತುಣುಕು. ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನ ಅದನ್ನು ನೋಡಿದರು. ಸಿಎನ್ಎನ್ ಸೇರಿದಂತೆ ಅಮೆರಿಕದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಯ್ತು (ಭಾರತದ ಟಿವಿ ಚಾನಲ್ಗಳ ಭಾಷೆಯಲ್ಲಾದರೆ ‘ಬ್ರೇಕಿಂಗ್ ನ್ಯೂಸ್’). ನ್ಯೂಯಾರ್ಕ್ನ ಎನ್ಬಿಸಿ ಟೆಲಿವಿಷನ್ ನೆಟ್ವರ್ಕ್ ತನ್ನ ಬೆಳಗ್ಗಿನ ಪ್ರಸಾರದ ‘ಟುಡೇ’ ಶೋಗೆ ವಿಲಿಯಮ್ಸ್ನನ್ನು ಅತಿಥಿಯಾಗಿ ಕರೆಸಿ ಸಂದರ್ಶನ ನಡೆಸಿತು. ಇದೆಲ್ಲ ನಿಜವೇ, ಕನಸಿನಲ್ಲಿ ಆಗುತ್ತಿದೆಯೇ ಎಂದು ನಂಬದಾದ ವಿಲಿಯಮ್ಸ್ ತನ್ನೆಲ್ಲ ಕಥೆಯನ್ನು ಆ ಸಂದರ್ಶನದಲ್ಲಿ ಬಿಚ್ಚಿಟ್ಟ. ಹದಿನಾಲ್ಕು ವರ್ಷದ ಬಾಲಕನಾಗಿದ್ದಾಗಲೇ ತನಗೆ ರೇಡಿಯೊ ಅನೌನ್ಸರ್ ಆಗಬೇಕೆಂಬ ಬಯಕೆಯಿದ್ದದ್ದು, ಅದಕ್ಕಾಗಿ ತರಬೇತಿ ಪಡೆದು ತಾನು ರೇಡಿಯೊ ಅನೌನ್ಸರ್ ಆದದ್ದು, ಆದರೆ ಆಮೇಲೆ ಕುಡಿತ, ಡ್ರಗ್ಸ್ ಮುಂತಾಗಿ ದುಶ್ಚಟಗಳಿಗೆ ಬಲಿಯಾಗಿ ಜೀವನದಲ್ಲಿ ಅಧೋಗತಿಯತ್ತ ಸಾಗತೊಡಗಿದ್ದು, ಈನಡುವೆ ಮದುವೆಯಾಗಿ ಒಂಬತ್ತು ಮಕ್ಕಳ ತಂದೆಯಾದದ್ದು, ದುರ್ವ್ಯಸನಗಳು ಹೆಚ್ಚಿದಂತೆಲ್ಲ ಒಂದುದಿನ ಮನೆಯಿಂದ ಹೊರದಬ್ಬಲ್ಪಟ್ಟು ಬೀದಿಪಾಲಾದದ್ದು, ಬದುಕಿಗೋಸ್ಕರ ಭಿಕ್ಷೆ, ಕಳ್ಳತನ, ದರೋಡೆ, ಜೈಲುವಾಸ ಇತ್ಯಾದಿ ಏನೇನೆಲ್ಲ ಮಾಡಿದ್ದು, ಕಳೆದೆರಡು ವರ್ಷಗಳಿಂದ ದುಶ್ಚಟಗಳನ್ನೆಲ್ಲ ಬಿಟ್ಟು ದೇವರ ಮೇಲೆ ಭಾರ ಹಾಕಿ ದಿನದೂಡತೊಡಗಿದ್ದು, ೨೦೧೦ ಕೂಡ ವ್ಯರ್ಥ ವರ್ಷವಾಯ್ತಲ್ಲ ಎಂದುಕೊಳ್ಳುತ್ತಿದ್ದಾಗಲೇ ಈ ಪವಾಡ ಸಂಭವಿಸಿದ್ದು... ಕಥೆ ಹೇಳುವೇ ನನ್ನ ಕಥೆ ಹೇಳುವೆ ಎಂದು ನಾಗರಹಾವು ಸಿನೆಮಾದಲ್ಲಿ ಅಲಮೇಲು (ಆರತಿ) ಹೇಳುವಂತೆ ವಿಲಿಯಮ್ಸ್ ಹೇಳುತ್ತ ಹೋದ. ನಡುನಡುವೆ ಭಾವುಕನಾಗುತ್ತಿದ್ದ. ೯೨ ವರ್ಷಗಳ ತನ್ನ ಅಮ್ಮ ಬದುಕಿರುವಾಗಲೇ ಅವಳಿಂದ “ಮಗ ಸರಿದಾರಿಗೆ ಬಂದ, ಬೇಡುವುದನ್ನು ನಿಲ್ಲಿಸಿ ಕೆಲಸಕ್ಕೆ ತೊಡಗಿದ” ಎನ್ನಿಸಿಕೊಳ್ಳಬೇಕೆಂದು ತನ್ನ ಆಸೆಯಿರುವುದು ಎನ್ನುವಾಗಂತೂ ಗಳಗಳನೆ ಕಣ್ಣೀರಿಟ್ಟ. ಸಂದರ್ಶನದ ಕೊನೆಯಲ್ಲಿ ತನ್ನ ಎಲ್ಲ ಒಂಬತ್ತು ಮಕ್ಕಳ ಹೆಸರುಗಳನ್ನೂ ಉಚ್ಚರಿಸಿ ಅವರ ಪ್ರೀತಿ ಮತ್ತೆ ತನಗೆ ಬೇಕೆಂದು ಗೋಗರೆದ.
ವಿಲಿಯಮ್ಸ್ನ ಕಂಠಸಿರಿ ಮತ್ತು ಅದ್ಭುತವಾದ ಆತ್ಮವಿಶ್ವಾಸವನ್ನು ಗಮನಿಸಿದ ಕ್ಲೀವ್ಲ್ಯಾಂಡ್ (ಒಹಯೊ ರಾಜ್ಯದ ಮತ್ತೊಂದು ಪಟ್ಟಣ)ದ ‘ಕೆವೆಲಿಯರ್ಸ್’ ಬಾಸ್ಕೆಟ್ಬಾಲ್ ತಂಡದ ಮಾಲೀಕತ್ವದ ಕಂಪನಿಯು ವಿಲಿಯಮ್ಸ್ನಿಗೆ ಉದ್ಯೋಗ ನೀಡಲು ಮುಂದಾಯಿತು. ಬಾಸ್ಕೆಟ್ಬಾಲ್ ಪಂದ್ಯಗಳು ನಡೆಯುವ ‘ಅರೆನಾ’ದಲ್ಲಿ ಉದ್ಘೋಷಣೆ, ತಂಡದ ಜಾಹೀರಾತುಗಳಿಗೆ ವಾಯ್ಸ್ಒವರ್ ಮಾಡುವ ಕೆಲಸ. ಕೈತುಂಬ ಸಂಬಳವಷ್ಟೇ ಅಲ್ಲ, ವಾಸಿಸುವುದಕ್ಕೊಂದು ಮನೆಯನ್ನೂ ಕೊಡುವುದಾಗಿ ಘೋಷಿಸಿತು. ಅದೂ ಹೇಗೆಂದರೆ ಒಂದು ರೇಡಿಯೋ ಸ್ಟೇಷನ್ನಲ್ಲಿ ವಿಲಿಯಮ್ಸ್ನ ಸಂದರ್ಶನ ನಡೆಯುತ್ತಿದ್ದಾಗಲೇ ಫೋನ್ ಮಾಡಿ ಆಫರ್ ಕೊಟ್ಟಿತು ಆ ಕಂಪನಿ! ಅದುವರೆಗೆ ವಿಲಿಯಮ್ಸ್ ಅಪರಾಧಗಳನ್ನು ಮಾಡಿ ಸಿಕ್ಕಿಬಿದ್ದಾಗೆಲ್ಲ ಪೊಲೀಸರು ಅರೆಸ್ಟ್ ರೆಕಾರ್ಡ್ನಲ್ಲಿ ಅವನ ಮಾಹಿತಿಯನ್ನು ಬರೆದುಕೊಳ್ಳುವಾಗ ‘ವಿಳಾಸ: ಕೊಲಂಬಸ್ ಪಟ್ಟಣದ ಬೀದಿಗಳು’ ಎಂದೇ ಬರೆಯುತ್ತಿದ್ದರು! ಉದ್ಯೋಗಕ್ಕೆ ಅರ್ಜಿ ಗುಜರಾಯಿಸಬೇಕೆಂದರೂ ಅವನಿಗೊಂದು ಐಡೆಂಟಿಟಿ ಆಗಲೀ, ಅಡ್ರೆಸ್ ಆಗಲೀ ಏನಿತ್ತು? ಈಗ ಇಷ್ಟೆಲ್ಲ ಪ್ರಸಿದ್ಧನಾದ ಮೇಲೆ ಒಹಯೋ ರಾಜ್ಯದ್ದೇ ಒಂದು ಬ್ಯಾಂಕ್ ತನ್ನ ಜಾಹೀರಾತಿಗೆ ವಿಲಿಯಮ್ಸ್ನಿಂದ ಕಂಠದಾನ ಕಾಂಟ್ರಾಕ್ಟ್ಗೆ ಸಹಿ ಹಾಕಿಸಿ, ಅವನಿಗೆ ಹತ್ತುಸಾವಿರ ಡಾಲರ್ ಮುಂಗಡ ಪಾವತಿಸಿದೆ. ಶಿಕಾಗೋದ ಕಂಪನಿಯೊಂದು ತನ್ನ ಚೀಸ್ ಉತ್ಪನ್ನಗಳ ಜಾಹೀರಾತಿಗೆ ವಿಲಿಯಮ್ಸ್ನ ಕಂಠ ಬೇಕೆಂದು ಬೇಡಿಕೆ ಸೂಚಿಸಿದೆ. ಒಂದು ವಾರದ ಹಿಂದೆಯಷ್ಟೇ ‘ಭೂಮಿಯೇ ಹಾಸಿಗೆ ಗಗನವೇ ಹೊದಿಕೆ ತೋಳೇ ತಲೆಕೆಳಗೆ...’ ಎನ್ನುವಂತಿದ್ದ ವಿಲಿಯಮ್ಸ್ ಈಗ ವಿಮಾನದಲ್ಲಿ ಅತ್ತಿಂದಿತ್ತ ಸಂಚರಿಸುತ್ತಾನೆ. ಲಾಸ್ಏಂಜಲೀಸ್ವರೆಗೂ ಪಾದಬೆಳೆಸಿ ಅಲ್ಲಿನ ಹಾಲಿವುಡ್ ಹೊಟೇಲ್ನಲ್ಲಿ ಉಳಕೊಳ್ಳುತ್ತಾನೆ. ಭಿಕ್ಷಾಟನೆ ಮಾಡುತ್ತಿದ್ದಾಗಿನ ಕೆದರಿದ ಕೂದಲೆಲ್ಲ ಚೆನ್ನಾಗಿ ಟ್ರಿಮ್ ಆಗಿ ಈಗ ಹ್ಯಾಂಡ್ಸಮ್ ಹೀರೋ ಆಗಿದ್ದಾನೆ. ಇದೆಲ್ಲವೂ ಸಾಧ್ಯವಾದದ್ದು ‘ರೈಟ್ ಪ್ಲೇಸ್ ರೈಟ್ ಮೊಮೆಂಟ್’ ಎಂಬಂತೆ ಅವತ್ತು ಅವನು ರಸ್ತೆಬದಿಯಲ್ಲಿ ಬೋರ್ಡ್ ಹಿಡಿದುಕೊಂಡು ಆ ಜಾಗದಲ್ಲಿ ನಿಂತುಕೊಂಡಿದ್ದರಿಂದ ಮತ್ತು ರಿಪೋರ್ಟರ್ ಮಹಾಶಯ ಅದೇ ಜಾಗದಲ್ಲಿ ಕಾರು ನಿಲ್ಲಿಸಿ ಇವನತ್ತ ದೃಷ್ಟಿ ಹಾಯಿಸಿದ್ದರಿಂದ! ‘ಸಮಯಾಸಮಯವುಂಟೇ ಭಕ್ತವತ್ಸಲ ನಿನಗೆ?’ ಎನ್ನುತ್ತಿದ್ದಾನೆ ಈಗ ದೇವರಲ್ಲಿ ಸಂಪೂರ್ಣ ನಂಬಿಕೆ ಚಿಗುರಿಕೊಂಡಿರುವ ಟೆಡ್ಡ್ ವಿಲಿಯಮ್ಸ್. ಭಿಕಾರಿಯೊಬ್ಬ ಬಿಲಿಯನೇರ್ ಆಗಹೊರಟಿರುವ ಸತ್ಯಕಥೆ ಇದು. ಬೇಡಾ, ಬಿಲಿಯನೇರ್ ಆಗಹೊರಟವ ಎನ್ನುವುದಕ್ಕಿಂತ, ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದವ ಎನ್ನೋಣ. ಈ ಇನ್ನಿಂಗ್ಸ್ನಲ್ಲಾದರೂ ಅವನ ಬದುಕು ಬಂಗಾರವಾಯ್ತು ಎನ್ನುವಂತಾಗಲೆಂದು ಹಾರೈಸೋಣ.
ಮತ್ತೆ ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೆ ಹಿಂದಿರುಗುವುದಾದರೆ, ಪರಾಗ ಸ್ಪರ್ಶ ಅಂಕಣದ ಓದುಗರಾಗಿ ನಿಮಗೆ ಇಲ್ಲಿ ಯಾವ ರೀತಿಯ ವಿಷಯಗಳು ಇಷ್ಟವಾಗುತ್ತವೆ? ಯಾವ ವಿಷಯಗಳನ್ನು ನೀವು ಅಪೇಕ್ಷಿಸುತ್ತೀರಿ, ನಿರೀಕ್ಷಿಸುತ್ತೀರಿ? ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ‘ಓದುಗರನ್ನು ಓಲೈಸುವುದಕ್ಕಾಗಿಯೇ ನಾನು ಬರೆಯುತ್ತೇನೆ’ ಎಂಬ ತುದಿಗೂ ಹೋಗದೆ, ‘ಯಾರು ಓದಲೆಂದೂ ನಾನು ಬರೆಯುವುದಲ್ಲ, ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂಬ ಇನ್ನೊಂದು ತುದಿಗೂ ಹೋಗದೆ, ನನಗೆ-ನಿಮಗೆ ಹಿತವಾಗುವಂಥದ್ದು, ಉಪಯೋಗವಾಗುವಂಥದ್ದು ಈ ಅಂಕಣದಲ್ಲಿ ಹೆಚ್ಚುಹೆಚ್ಚು ಬರಲಿ ಎಂಬ ಧ್ಯೇಯೋದ್ದೇಶದಿಂದ ಈ ಪ್ರಶ್ನೆಯನ್ನು ನಾನು ನಿಮ್ಮಲ್ಲಿ ಕೇಳುತ್ತಿರುವುದು. ನಿಮ್ಮ ಪ್ರಾಮಾಣಿಕ ಅಭಿಪ್ರಾಯ ತಿಳಿಸಿದರೆ ತುಂಬ ಸಂತೋಷ. ನಿನ್ನೆಯಷ್ಟೇ ಹೇಳಿಕೊಂಡೆವಲ್ಲ ‘ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆಯ ಮಾತನಾಡೋಣ’ ಅಂತ? ಮಾತಿನಂತೆ ಕೃತಿಯೂ ಒಳ್ಳೆಯದಾಗಿಯೇ ಇರಲಿ ಎನ್ನುವುದು ಒಟ್ಟಾರೆ ಆಶಯ.
* * *
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Jan 08, 2011
Abhyaasabala Pradarshana
Saturday Jan 08, 2011
Saturday Jan 08, 2011
ದಿನಾಂಕ 9 ಜನವರಿ 2011ರ ಸಂಚಿಕೆ...
ವಾಕಿಂಗ್ನಲ್ಲೂ ಅಭ್ಯಾಸ‘ಬಲ’ಗೈಯಿಂದ ಸಿಗ್ನಲ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] ಹತ್ತು ತಿಂಗಳ ಪುಟ್ಟ ಮಗು. ತೊದಲುಮಾತನ್ನೂ ಆಡತೊಡಗಿಲ್ಲ. ಇವತ್ತಿನ ನಮ್ಮ ‘ಅಭ್ಯಾಸಬಲ ಪ್ರದರ್ಶನ’ದ ಉದ್ಘಾಟನೆಯ ಗೌರವ ಈ ಪುಟ್ಟ ಪಾಪುವಿನದು! ಅಜ್ಜಿ ದಿನಾ ಊಟ ಮಾಡಿಸುವಾಗ ಶ್ರೀರಾಮನಾಮ ಹೇಳ್ತಾರೆ; ಮಗು ಹಿಗ್ಗಿನಿಂದ ಚಪ್ಪಾಳೆ ತಟ್ಟುತ್ತಾ ಊಟ ಮಾಡುತ್ತೆ. ಮಗುವಿಗೆ ಅದು ಎಷ್ಟು ಅಭ್ಯಾಸವಾಗಿಹೋಗಿದೆಯೆಂದರೆ ಈಗ ಅಜ್ಜಿ ರಾಮನಾಮ ಹೇಳಿಲ್ಲ ಅಂದ್ರೂ ತಾನೇ ಚಪ್ಪಾಳೆ ತಟ್ಟಿ ನೆನಪಿಸುತ್ತದೆ! ಇದು ಅಭ್ಯಾಸಬಲದ ಆಭಾಸ ಅಲ್ಲ, ಮುಗ್ಧಹಾಸ. ಬರೆದುಕಳಿಸಿದವರು ಮಗುವಿನ ಅಜ್ಜಿ ಭದ್ರಾವತಿಯಿಂದ ಮಮತಾ ನಾಗರಾಜ. ಕಳೆದವಾರ ಅಭ್ಯಾಸಬಲದ ಅನುಭವಗಳನ್ನು ಹಂಚಿಕೊಳ್ಳುವಂತೆ ಕೇಳಿದ್ದೆನಷ್ಟೆ? ಇಂತಹ ಪತ್ರಾಹ್ವಾನ ಈ ಅಂಕಣದಲ್ಲಿ ಹೊಸತೇನಲ್ಲ. ಈ ಹಿಂದೆಯೂ ಷಟ್ಪದಿ ರಚನೆ, ಲೆಕ್ಕ ಬಿಡಿಸುವಿಕೆ, ನೆಮೊನಿಕ್ಸ್ ಸಂಗ್ರಹ, ಸಿಂಪಲ್ ರಸಪ್ರಶ್ನೆ ಇತ್ಯಾದಿ ವಿವಿಧ ಚಟುವಟಿಕೆಗಳಾಗಿವೆ. ಆದರೆ ಇವತ್ತಿನದು ಅವೆಲ್ಲಕ್ಕಿಂತ ಭಿನ್ನವಾದ ಪ್ರದರ್ಶನ. ಇದು ಸ್ವಾನುಭವಗಳ ಸೊಗಸಾದ ಕಥನ. ಒಂದೊಂದು ಪತ್ರದಲ್ಲೂ ಬರೆದವರೇ ಬಂದು ಮಾತನಾಡಿದಂಥ ರೋಮಾಂಚನ. ಕಣ್ಮುಂದೆ ಸುಳಿದು ಮಂದಹಾಸ ಮೂಡಿಸುವ ಚಿತ್ರಣ. ಇದೋ ಇಲ್ಲಿದೆ ಅಭ್ಯಾಸಬಲ ಕುರಿತಂತೆ ಓದುಗರ ಸ್ಪಂದನದ ಸಂಕಲನ. ‘ಬರೆದಾತನೇ ಮಾತನಾಡಿದ...’ ಎಂದೆನಲ್ಲಾ, ಬೆಂಗಳೂರಿನ ರೋಹಿತ್ ಚಕ್ರತೀರ್ಥ ಅದನ್ನೇ ಮಾಡಿದ್ದಾರೆ. ಅಭ್ಯಾಸಬಲದ ಬಗ್ಗೆ ಅಂದವಾದೊಂದು ಲೇಖನ ಬರೆದು ಸ್ವತಃ ಓದಿ ಧ್ವನಿಮುದ್ರಣ ಮಾಡಿ ‘ಸ್ವರಪತ್ರ’ವಾಗಿ ನನಗೆ ಇಮೇಲ್ ಮಾಡಿದ್ದಾರೆ! ಅವರು ಬರೆದ ಹಲವಾರು ‘ಅಬ’ (ಅಭ್ಯಾಸಬಲ)ಗಳ ಪೈಕಿ ಜಸ್ಟ್ ಒಂದು- ನಮ್ಮಲ್ಲಿ ಎಷ್ಟೋ ಜನರಿಗೆ ಬೆಳಗ್ಗೆ ಪ್ರಕೃತಿಯ ಕರೆಗೆ ಓಗೊಡಲು ಕಣ್ಣನ್ದೇವರ ಅನುಗ್ರಹ ಬೇಕಾಗುತ್ತದೆ. ಹೌದು, ಬೆಳಗಾವಿಯ ನಿತ್ಯಾನಂದ ಭಟ್ರಂಥವರಿಗೆ ಆಗ ಕೈಯಲ್ಲೊಂದು ಪುಸ್ತಕವೋ ಪತ್ರಿಕೆಯೋ ಬೇಕಾಗುತ್ತದೆ. ಇಲ್ಲದಿದ್ದರೆ ‘ಆಗುವುದೇ’ ಇಲ್ಲ. ಕಾರ್ಕಳದ ದರ್ಶನ್ ಜೈನ್ ಅವರಿಗೆ ಊಟ ಮಾಡುವಾಗಲೂ ಕೈಯಲ್ಲಿ ಪುಸ್ತಕ ಅಥವಾ ಪತ್ರಿಕೆ ಬೇಕು, ಕನಿಷ್ಠ ಮೊಬೈಲ್ನಲ್ಲಿ ಮೆಸೇಜುಗಳ ಪಠಣವಾದರೂ ಆಗಬೇಕು. ಹೈಸ್ಕೂಲ್ಗೆ ಹೋಗಲು ಆಶ್ರಮದಲ್ಲಿದ್ದಾಗ ಅಲ್ಲಿ ಊಟದವೇಳೆ ಮಂತ್ರಗಳ ಪುಸ್ತಕ ಹಿಡಿದುಕೊಳ್ಳುತ್ತಿದ್ದಾಗಿನ ಅಬ ಇದು ಎನ್ನುತ್ತಾರವರು. ಊಟವಾದ ಮೇಲೆ ತಟ್ಟೆಯಲ್ಲೇ ಕೈತೊಳೆಯುವ ಅಬ ಬೆಂಗಳೂರಿನ ಜಿ.ಕೃಪಾ ಅವರಿಗೆ. ಹೊಟೇಲುಗಳಲ್ಲಾದರೆ ‘ತಟ್ಟೆಯಲ್ಲಿ ಕೈ ತೊಳೆಯಬೇಡಿ’ ಬೋರ್ಡ್ ಇರುತ್ತೆ, ಮನೆಗಳಲ್ಲಿ ಇರುವುದಿಲ್ಲ. ಮದುವೆಯಾದ ಹೊಸತರಲ್ಲಿ ಅವರೊಮ್ಮೆ ಮಡಿವಂತ ನೆಂಟರಲ್ಲಿಗೆ ಹೋಗಿದ್ದಾಗ ಅಲ್ಲೂ ತಟ್ಟೆಯಲ್ಲೇ ಕೈ ತೊಳೆದು ಆಭಾಸಕ್ಕೊಳಗಾಗಿದ್ದರಂತೆ. ಇನ್ನೊಂದು ತಮಾಷೆಯ ಅನುಭವ, ಶ್ರೀವರ ಮೈಸೂರು ಅವರಿಂದ- “ನನ್ನ ಸ್ನೇಹಿತೆಯ ಪತಿಯ ಹೆಸರು ವೇದ್. ಅವರಿಗೆ Ve ಎಂದು ಟೈಪಿಸಿದ ನಂತರ d ಅಕ್ಷರ ತನ್ನಿಂತಾನೇ ಬರುತ್ತದೆ. ಒಮ್ಮೆ ನನ್ನನ್ನು ಡಿನ್ನರ್ಗೆ ಕರೆದು ಅದಕ್ಕೆಮೊದಲು ಕಂಪ್ಯೂಟರ್ ಚಾಟ್ನಲ್ಲೇ `Deciding the menu. will you have Ved biryani?' ಎಂದು ಕೇಳಿ ಗಾಬರಿಪಡಿಸಿದ್ದರು!” ಫೋನ್ ಮಾಡುವಾಗಿನ ಅಬ ಅವಾಂತರಗಳನ್ನು ಕೆಲವರು ಬರೆದಿದ್ದಾರೆ. “ನಮ್ಮನೆಯಲ್ಲಿ ಫೋನಿನ ಪಕ್ಕ ಯಾವಾಗಲೂ ಒಂದು ಕುರ್ಚಿಯಿರುತ್ತದೆ. ಆದಿನ ಮಕ್ಕಳು ಅದನ್ನೆಲ್ಲೋ ಬೇರೆಡೆ ಇಟ್ಟಿದ್ದರು. ರಾತ್ರಿ ಫೋನ್ ಬಂತು. ಬೆಳಕಿರಲಿಲ್ಲ. ಅಭ್ಯಾಸದಂತೆ ಹಲೋ ಹೇಳಿಕೊಂಡು ಕುಳಿತೆ. ಆಮೇಲೇನಾಯ್ತು ನೀವೇ ಊಹಿಸಿ. ಮನೆಯಲ್ಲಿದ್ದವರೆಲ್ಲ ಎದ್ದುಬಂದಿದ್ದರು ನಾನು ಕಿರುಚಿದ್ದು ಕೇಳಿ! ಫೋನಿನಲ್ಲಿ ಇದ್ದವರೂ ಗಾಬರಿಯಾಗಿ ರಾಂಗ್ನಂಬರ್ ಅಂತ ಕೆಳಗಿಟ್ಟರು”- ವೀಣಾ ಅನಂತ ಭಟ್, ಬೆಂಗಳೂರು. ಪ್ರೀತಿಸಿ ಈಗ ಮದುವೆ ನಿಶ್ಚಯದವರೆಗೂ ಆಗಿರುವ ಪ್ರಿಯತಮೆಯೊಂದಿಗೆ ಮಾತಾಡಲೆಂದು ಫೋನಾಯಿಸಿದಾಗ ಆಕೆಯ ಅಪ್ಪ/ಅಮ್ಮ ಫೋನೆತ್ತುತ್ತಾರೆಂಬ ಕಲ್ಪನೆಯೂ ಇಲ್ಲದೆ ಹುಡುಗಿಗೆ ಪ್ರೀತಿಯಿಂದ ದಬಾಯಿಸುವ ಮಾತುಗಳನ್ನಾಡಿದ್ದನ್ನೋ ಪಿಸುಮಾತಿನಲ್ಲಿ ಪ್ರೇಮಸೂಚಿಸಿದ್ದನ್ನೋ ನೆನೆದುಕೊಂಡಿದ್ದಾರೆ ಚನ್ನಪಟ್ಟಣದ ರಾಮು ಬೇವೂರ್. “ನನ್ನ ಶ್ರೀಮತಿಗೆ ಯಾರಾದರೂ ಫೋನ್ನಲ್ಲಿ ಹಬ್ಬಹರಿದಿನಗಳ ಕುರಿತು ಮಾತಾಡಿದರೆ ‘ಜೋರಾಯ್ತಲ್ಲ!’ ಎಂದು ಸಂತೋಷದ ಉದ್ಗಾರ ಬರುತ್ತದೆ. ಮೊನ್ನೆ ವೈಕುಂಠಏಕಾದಶಿ ದಿವಸ ದೂರದ ಸಂಬಂಧಿಕರೊಬ್ಬರು ವೈಕುಂಠವಾಸಿಗಳಾದರು ಎಂದು ಮಿತ್ರರು ಫೋನ್ನಲ್ಲಿ ಹೇಳುತ್ತಿದ್ದಂತೆಯೇ, ಇವಳು ‘ಹೌದೆ? ಜೋರಾಯ್ತಲ್ಲ!’ ಎನ್ನಬೇಕೇ!” ಎಂದು ಬರೆದಿದ್ದಾರೆ ಬೆಳಗಾವಿಯ, ಸದ್ಯ ಅಮೆರಿಕದ ಒಹಯೋದಲ್ಲಿರುವ, ಶ್ರೀನಿವಾಸ ಕಟ್ಟಿ. ವೈಕುಂಠಏಕಾದಶಿಯಂದು ಮಂದಿರದಲ್ಲಿ ವೈಕುಂಠ ದ್ವಾರದರ್ಶನ ಇದೆಯಂತ ಆಟೋರಿಕ್ಷಾ ಮೇಲೆ ಲೌಡ್ಸ್ಪೀಕರ್ ಕಟ್ಟಿ ನಗರದಲ್ಲೆಲ್ಲ ಎನೌನ್ಸ್ ಮಾಡಲು ಒಬ್ಬ ಹುಡುಗನನ್ನು ನೇಮಿಸಿದರೆ ಅವನು ರಾಯರಮಠದಲ್ಲಿ ಆರಾಧನೆ ವೇಳೆ ಕೆಲ್ಸ ಮಾಡಿದ ತನ್ನ ಅನುಭವದಿಂದ ‘ನಾಳೆ ವೈಕುಂಠ ಸಮಾರಾಧನೆ ಎಲ್ಲರೂ ಬನ್ನಿ...’ ಎಂದು ಉದ್ಘೋಷಿಸಿದ್ದನ್ನು ನೆನೆಸಿಕೊಂಡಿದ್ದಾರೆ ಬೆಂಗಳೂರಿನ ವೆಂಕಟೇಶಮೂರ್ತಿ ಗಂಜೂರು. ತೀರ್ಥಹಳ್ಳಿಯ ತಮ್ಮಮನೆಯಲ್ಲಿ ಅತ್ತೆ ತೀರಿಹೋದ ಮಾರನೆದಿನ ಬೆಳಿಗ್ಗೆ ಕಸಗುಡಿಸುವಾಗ, ಅವರು ಇನ್ನೇನು ಪ್ರಾತರ್ವಿಧಿಗಳಿಗಾಗಿ ಆ ದಾರಿಯಾಗಿ ನಡೆದುಕೊಂಡು ಹೋಗುತ್ತಾರಂತ ತಾನು ಪಕ್ಕಕ್ಕೆ ಸರಿದು ನಿಂತುಕೊಂಡ, ಕೆಲ ದಿನಗಳಾದ ಮೇಲೂ ಊಟಕ್ಕೆ ಅವರು ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಅವರಿಗೂ ತಟ್ಟೆ ಇಡುತ್ತಿದ್ದ ಭಾವುಕ ಕ್ಷಣಗಳ ನೆನಪು ಬೆಂಗಳೂರಿನ ಮಾಲತಿ ಶೆಣೈ ಅವರಿಗೆ. “ನಾನು ಕಾಲೇಜಿಗೆ ಹೋಗುವಾಗಲೂ ‘ಅಮ್ಮ ಶಾಲೆಗೆ ಹೋಗಿಬರ್ತೇನೆ’ ಎಂದೇ ಹೇಳುತ್ತಿದ್ದೆ. ಒಮ್ಮೆ ಅಮ್ಮ ಮನೆಯಲ್ಲಿರಲಿಲ್ಲ, ನಾನೇ ಬಾಗಿಲಿಗೆ ಬೀಗವನ್ನೂ ಹಾಕಿ ಹೊರಡುವಾಗ ‘ಅಮ್ಮ ಶಾಲೆಗೆ ಹೋಗಿಬರ್ತೇನೆ’ ಎಂದಿದ್ದೆ, ಉತ್ತರ ಬಾರದೆ ಪೆಚ್ಚಾಗಿದ್ದೆ” - ಉಡುಪಿಯ ನೀರಜಾ ಹೊಳ್ಳ ನಿವೇದನೆ. ಜಗವೇ ನಾಟಕರಂಗ ಎಂದುಕೊಂಡರೆ ಅಲ್ಲೂ ಆಭಾಸಗಳಾಗುವುದಿದೆ. ನಾಟಕದ ಡೈಲಾಗ್ಸ್ ಅಭ್ಯಾಸ ಮಾಡಿಮಾಡಿ ಸ್ವಂತ ಹೆಂಡತಿಯನ್ನೇ ನಾಟಕದಲ್ಲಿನ ಹೆಂಡತಿಯ ಪಾತ್ರದ ಹೆಸರಿನಿಂದ ಕರೆದು ಪೇಚಿಗೆ ಸಿಲುಕಿದ್ದ, ಪೌರಾಣಿಕ ನಾಟಕದ ಗುಂಗಿನಲ್ಲಿ ಭಲೇಭಲೇ, ಅಗ್ರಜನೇ, ದೇವಾ, ಪರಮಾತ್ಮಾ ಎಂದು ಗುನುಗುತ್ತಿದ್ದ ಮಿತ್ರನ ಬಗ್ಗೆ ಬರೆದಿದ್ದಾರೆ ಚನ್ನಪಟ್ಟಣದ ಆನಂದ ಆಣಿಗೆರೆ. “ದ್ರೌಪದೀಪರಿಣಯ ನಾಟಕದಲ್ಲಿ ದ್ರೌಪದಿ ಪಾತ್ರ ಮಾಡಿದವ ನನ್ನೊಬ್ಬ ಸಹಪಾಠಿ. ಯಾವ ಕ್ಷತ್ರಿಯನನ್ನೂ ಒಲ್ಲದೆ ದ್ರೌಪದಿ ನಾಚಿ ನಿಲ್ಲುವ ಸಂದರ್ಭದಲ್ಲಿ ಅವನ ಅಬ ಕೈಕೊಟ್ಟೇಬಿಟ್ಟಿತು. ದ್ರೌಪದಿ ಉಟ್ಟಿದ್ದ ಪಟ್ಟೆಸೀರೆಯನ್ನು ವೇಸ್ಟಿ ಮೇಲೆತ್ತಿ ಕಟ್ಟಿದಂತೆ ಕಟ್ಟಿ ರಾಜಸಭೆಯಲ್ಲಿ ನಾಚುತ್ತಾ ನಿಂತಳು! ಆಗ ನಮ್ಮದು ಮುಗಿಲುಮುಟ್ಟುವ ಕರತಾಡನ! ವುಲ್ಫ್ ವಿಶಲ್! ದ್ರೌಪದಿ ಹೌಹಾರಿ ನೇಪಥ್ಯಕ್ಕೆ ಸರಿದುಬಿಟ್ಟಳು. ಅಂದಿನ ದ್ರೌಪದೀಪರಿಣಯ ನಮಗೆ ಕಾಮಿಡಿ ಆಯಿತು” ಎಂದು ನೆನಪಿಸಿಕೊಂಡಿದ್ದಾರೆ ಬೆಂಗಳೂರಿನ ಎಸ್.ಎಂ.ಪೆಜತ್ತಾಯ. ಕಳೆದ ವಾರದ ಲೇಖನದಲ್ಲಿ ಇಸವಿ ಬದಲಾಗುವಾಗಿನ ಅಬ ಕುರಿತು ಓದಿದ ಮೇಲೂ ಅಪಾರ್ಟ್ಮೆಂಟ್ನ ಬಾಡಿಗೆ ಕೊಡಲು ಚೆಕ್ನಲ್ಲಿ 2010 ಎಂದೇ ಬರೆದು ಚೆಕ್ ಪಡೆದುಕೊಳ್ಳುವವರು ನೆನಪಿಸಬೇಕಾಗಿ ಬಂದದ್ದನ್ನು ಪ್ರಾಮಾಣಿಕವಾಗಿ ತಿಳಿಸಿದ್ದಾರೆ ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್. ಲೇಖನದ ಪರಿಣಾಮವೋ ಎಂಬಂತೆ ಈಸಲ ಜನವರಿ ಮೊದಲವಾರದಲ್ಲಿ ಬ್ಯಾಂಕಿಗೆ ಹೋದಾಗ ಚೆಕ್ ಮೇಲೆ 2011 ಎಂದು ಪ್ರಜ್ಞಾಪೂರ್ವಕವಾಗಿ ಬರೆದಿದ್ದೇನೆಂದಿದ್ದಾರೆ ಹೈದರಾಬಾದ್ನಿಂದ ಅಚ್ಯುತಮೂರ್ತಿ. ನಿವೃತ್ತ ಬ್ಯಾಂಕ್ ಉದ್ಯೋಗಿ ಬೆಂಗಳೂರಿನ ಡಿ.ಬಿ. ಪ್ರಾಣೇಶ ರಾವ್ ಹೇಳುತ್ತಾರೆ- “ಬ್ಯಾಂಕುಗಳ ಲೆಕ್ಕಪತ್ರಗಳಲ್ಲಿ ಅಂಕೆಗಳನ್ನು ಚಿತ್ತುಮಾಡುವುದು, ತಿದ್ದುವುದು, ಹೊಡೆದುಹಾಕುವುದು ಮಾಡಬಾರದು. ಅಕಸ್ಮಾತ್ ಮಾಡಿದರೂ ಅಲ್ಲೇ ಪಕ್ಕ ಇನಿಶಿಯಲ್ಸ್ ಹಾಕಬೇಕು. ಕೆಲವೊಮ್ಮೆ ಮೇಲಧಿಕಾರಿಯಿಂದ ಹಾಕಿಸಬೇಕು. ಬ್ಯಾಂಕಿಗರಾಗಿ ನಮಗೆ ಅದು ಎಷ್ಟು ಅಬ ಎಂದರೆ ಮಿತ್ರರಿಗೆ ಸಂಬಂಧಿಕರಿಗೆ ಖಾಸಗಿ ಪತ್ರ ಬರೆವಾಗ ಚಿತ್ತಾದರೂ ಅಲ್ಲೇಪಕ್ಕ ಇನಿಶಿಯಲ್ಸ್ ಹಾಕ್ತೇವೆ!” ಇಪ್ಪತ್ತೈದು ವರ್ಷಗಳ ಹಿಂದೆ ತಮ್ಮ ಬ್ಯಾಂಕಿನ ಸೈಂಟ್ಜಾನ್ಸ್ ಮೆಡಿಕಲ್ ಕಾಲೇಜ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ವಾಟರ್ಟ್ಯಾಂಕ್ ಹತ್ತಿರದ ಗೇಟಿನ ಶಾರ್ಟ್ಕಟ್ ಮೂಲಕ ಹೋಗುತ್ತಿದ್ದುದನ್ನೂ, ಒಮ್ಮೆ ಆ ಗೇಟ್ ರಿಪೇರಿಗೆಂದು ದೀರ್ಘಾವಧಿ ಕ್ಲೋಸ್ ಮಾಡಿದ್ದಾಗ ಪಕ್ಕದಲ್ಲೇ ಗೋಡೆ ಮೇಲಿಂದ ಜಂಪ್ ಮಾಡಿ ಹೋಗುತ್ತಿದ್ದುದನ್ನೂ, ಕಾಲಾನುಕ್ರಮದಲ್ಲಿ ಗೇಟ್ ರಿಪೇರಿ ಆಗಿ ತೆರೆದುಕೊಂಡಿದ್ದರೂ ಎಲ್ಲರೆದುರೇ ತಾನು ಗೋಡೆ ಜಂಪ್ ಮಾಡಿ ಮುಜುಗರಕ್ಕೊಳಗಾದದ್ದನ್ನೂ ನೆನೆಸಿಕೊಂಡಿದ್ದಾರೆ ಬೆಂಗಳೂರಿನ ಲಕ್ಷ್ಮೀನಾರಾಯಣ ಹೊಳ್ಳ. ಟೂವ್ಹೀಲರ್ ಮೇಲೆ ಓಡಾಡಿಯೇ ಅಭ್ಯಾಸವಾಗಿ ಈಗ ಕಾಲ್ನಡಿಗೆಯಲ್ಲಿ ಹೋಗುವಾಗಲೂ ಎಡಕ್ಕೆ ಅಥವಾ ಬಲಕ್ಕೆ ಟರ್ನ್ ತೆಗೆದುಕೊಳ್ಳುವುದಿದ್ದರೆ ಬಲಗೈ ತನ್ನಿಂತಾನೇ ಬೀಸತೊಡಗಿ ಸಿಗ್ನಲ್ ಮಾಡುತ್ತದೆಯಂತೆ ಬೆಂಗಳೂರಿನ ಆಯುರ್ವೇದ ವೈದ್ಯ ವಾಸುಕೀಶಯನ ಅವರಿಗೆ. ಧಾರವಾಡದ ಗೌರಿ ಹಿರೇಮಠ ಕಾಲ್ನಡಿಗೆಯಲ್ಲಿ ಹೋಗುವಾಗ ಲೆಫ್ಟ್ ಅಥವಾ ರೈಟ್ ಟರ್ನ್ ಮಾಡುವ ಮೊದಲು ಸೈಡ್ ಮಿರರ್ ನೋಡುವ ವಿಫಲ ಯತ್ನ ಮಾಡುತ್ತಾರಂತೆ! ಗಿಯರ್ ಇರುವ ಕಾರು (ಅಮೆರಿಕದಲ್ಲಿ ‘ಸ್ಟಿಕ್ಶಿಫ್ಟ್’ ಅಂತಾರೆ) ಚಲಾಯಿಸಿಯೇ ಅಭ್ಯಾಸವಾಗಿ ಆಮೇಲೆ ಆಟೊಟ್ರಾನ್ಸ್ಮಿಷನ್ ಕಾರನ್ನು ಡ್ರೈವ್ ಮಾಡುವಾಗ ಗಿಯರ್ಚೇಂಜ್ ಮಾಡಲಿಕ್ಕಂತ ಹೋಗಿ ಕಾರು ನ್ಯೂಟ್ರಲ್ಗೆ ಬಂದು ನಡುರಸ್ತೆಯಲ್ಲಿ ನಿಂತು ಪೇಚಾಟವಾಗಿದೆ ಟೆಕ್ಸಾಸ್ನ ಮೀನಾ ಭಾರದ್ವಾಜ್ ಅವರಿಗೆ. ಮೈಸೂರಿನ ಸುಮಾ ಕೃಷ್ಣ ಅವರಿಗೆ ಇನ್ನೊಂಥರದ ಪಜೀತಿ ಎದುರಾಗಿತ್ತಂತೆ. ಅವರು ಹೊಸ ಕಾರು ಡ್ರೈವ್ ಮಾಡಿಕೊಂಡು ಶಾಪಿಂಗ್ಗೆ ಹೋಗಿದ್ದಾರೆ. ಶಾಪಿಂಗ್ ಮುಗಿಸಿ ಹೊರಬಂದಾಗ ಅದಾಗಲೇ ಮಾರಿದ್ದ ಹಳೇಕಾರನ್ನು ಕೊಂಡವರೂ ಅಲ್ಲೆಲ್ಲೋ ಆ ಕಾರು ಪಾರ್ಕ್ ಮಾಡಿದ್ದಾರೆ. ಇವರು ಹೊಸ ಕಾರಿನ ಬೀಗದಕೈಯಿಂದ ಹಳೇ ಕಾರಿನ ಬಾಗಿಲು ತೆರೆಯಲು ಒದ್ದಾಟ ನಡೆಸಿದ್ದಾರೆ. ಸುತ್ತಲಿದ್ದವರು ಇವರನ್ನು ಕಾರ್ ಕಳ್ಳಿ ಎಂದುಕೊಳ್ಳುವ ಪರಿಸ್ಥಿತಿ ಬಂದಿದೆ. ಆಮೇಲಷ್ಟೇ ಅವರಿಗೆ ಇದು ಅಬ ಅವಾಂತರ ಅಂತ ಗೊತ್ತಾಗಿದೆ. ಇನ್ನು, ಆಫೀಸಿನಲ್ಲಿ ಸೆಕ್ಯುರಿಟಿಗೋಸ್ಕರ ಆಕ್ಸೆಸ್ಕಾರ್ಡ್ ಮೂಲಕವೇ ಬಾಗಿಲು ತೆರೆಯುವ ವ್ಯವಸ್ಥೆಗೆ ಒಗ್ಗಿಕೊಂಡು ಈಗ ಮನೆಯಲ್ಲಿ ಅಥವಾ ಅಂಗಡಿಯಲ್ಲಿ ಬಾಗಿಲು ಮುಚ್ಚಿದ್ದರೆ ತೆರೆಯಲು ಕೊರಳಲ್ಲಿ ನೇತಾಡುವ ಆಕ್ಸೆಸ್ಕಾರ್ಡ್ನಿಂದ ಟ್ರೈ ಮಾಡಿದ ಸಂದರ್ಭಗಳಿವೆ ಎನ್ನುತ್ತಾರೆ ಮೈಸೂರಿನಿಂದ ಸುಧೀಂದ್ರ ಮುಕ್ಕೂರು. ಡಿವಿಡಿಯಲ್ಲಿ ಸಿನೆಮಾ ನೋಡುವಾಗ ಹಾಡು ಬಂದಲ್ಲೆಲ್ಲ ಫಾಸ್ಟ್ಫಾರ್ವರ್ಡ್ ಮಾಡಿ ಅಭ್ಯಾಸವಾಗಿ ಸಿನೆಮಾಥಿಯೇಟರ್ನಲ್ಲೂ ಹಾಡುಬಂದಾಗ “ಲೇ ಮುಂದೆ ಓಡ್ಸಲೇ” ಎಂದು ಕಿರುಚಿದ್ದಿದೆ ಎನ್ನುತ್ತಾರೆ ಗಂಗಾವತಿಯ ಲಿಂಗರಾಜ ಜನಾದ್ರಿ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಂತರ ಈಗ ಲಿನಕ್ಸ್ ಬಳಸುವಾಗ ಹಳೇಚಾಳಿಯಿಂದ ಮೌಸ್ ರೈಟ್ಕ್ಲಿಕ್ ಮಾಡಿ ಸ್ಕ್ರೀನ್ ರಿಫ್ರೆಶ್ ಮಾಡಲು ನೊಡುತ್ತೇನೆನ್ನುತ್ತಾರೆ ಹುಬ್ಬಳ್ಳಿಯ ಅರವಿಂದ ಚಕ್ರವರ್ತಿ. ಇದೆಲ್ಲ ಯಾಂತ್ರೀಕೃತ ಬದುಕಿನ ಅಬ ಎನ್ನೋಣವೇ? ಉಡುಪಿಯ ಸುಧೀರ್ ಶೆಣೈ ದೇವಸ್ಥಾನದಲ್ಲಿ ತೀರ್ಥ ತಗೊಂಡು ತಲೆಮೇಲೆ ಕೈ ನೇವರಿಸುವ ಅಭ್ಯಾಸವಾಗಿ ಪಂಚಾಮೃತ ತಗೊಂಡಮೇಲೂ ಹಾಗೆಮಾಡಿದ್ದಿದೆಯಂತೆ. ಆಫ್ರಿಕಾದ ಟಾಂಜಾನಿಯಾದಲ್ಲಿರುವ ಗಣೇಶ ಹತ್ವಾರ್ ಮದುವೆಗೆ ಮುನ್ನ ಆಗೊಮ್ಮೆ ಈಗೊಮ್ಮೆ ಲೈನ್ ಹೊಡೆವ ಅಭ್ಯಾಸವಿದ್ದವರು ಮದುವೆ ಆದಮೇಲೆ ಹೆಂಡತಿಯ ಜತೆ ವಾಕ್ ಹೋಗುವಾಗ ಎದುರಿಗೆ ಬಂದ ತರುಣಿಯನ್ನು ಗಮನಿಸಿ ‘ವಾಹ್ ಎಂಥ ಫಿಗರ್!’ ಎಂದದ್ದಿದೆಯಂತೆ. ಒಟ್ಟಿನಲ್ಲಿ ಅಬ್ಬಾ ಎನ್ನುವಷ್ಟಿದೆ ಅಬ ಅವಾಂತರಗಳ ಹರವು. ಸ್ಥಳಾಭಾವದಿಂದ ಕೆಲವು ಪತ್ರಗಳನ್ನು ಕೈಬಿಡಬೇಕಾಗಿ ಬಂದಿದೆ. ಆದರೂ ಇದೊಂದು ಲೇಟೆಸ್ಟ್ ಅಬ ಆಭಾಸವನ್ನು ಉಲ್ಲೇಖಿಸಲೇಬೇಕು. ಬೆಂಗಳೂರಿನ ಉಷಾ ಉಮೇಶ್ ಬರೆದುಕಳಿಸಿದ್ದಾರೆ. ಮಗಳನ್ನು ಕೆಲವೊಮ್ಮೆ ಪ್ರೀತಿಯಿಂದ ‘ರಾಜಾ’ ಎಂದು ಕರೆಯುವ ಅವರ ಅಭ್ಯಾಸ ಈಗ ೨ಜಿ ಸ್ಪೆಕ್ಟ್ರಂ ಹಗರಣದ ನಂತರ ತೀವ್ರ ಮುಜುಗರದ ವಿಚಾರವಾಗಿದೆಯಂತೆ, ಅಮ್ಮ-ಮಗಳು ಇಬ್ಬರಿಗೂ! ಅಭ್ಯಾಸಬಲ ಪ್ರದರ್ಶನ ಇಲ್ಲಿಗೆ ಮುಗಿದುದು. ಭಾಗವಹಿಸಿದವರಿಗೆಲ್ಲ ಧನ್ಯವಾದಗಳು. ======== [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Jan 01, 2011
Mistakes by Habit
Saturday Jan 01, 2011
Saturday Jan 01, 2011
ದಿನಾಂಕ 2 ಜನವರಿ 2011ರ ಸಂಚಿಕೆ...
ಅಭ್ಯಾಸಬಲದ ಅನುಭವಗಳೂ ಆಭಾಸಗಳೂ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಎರಡು ಸಾವಿರದ ಹತ್ತಕ್ಕೆ ಗುಡ್ಬೈ ಹೇಳಿ ಹನ್ನೊಂದನ್ನು ಭವ್ಯವಾಗಿ ಸ್ವಾಗತಿಸಿದ್ದಾಗಿದೆ. ಹ್ಯಾಪಿ ನ್ಯೂ ಇಯರ್ ಶುಭಾಶಯದ ಸಹಸ್ರನಾಮ- ಅಂದರೆ ವಿನಿಮಯ ಮೊನ್ನೆ ೩೧ರ ಮಧ್ಯರಾತ್ರೆ ಶುರುವಾದದ್ದು, ಇವತ್ತಿಗೆನ್ನುವಾಗ ಇಷ್ಟಮಿತ್ರಬಂಧುಬಾಂಧವರನ್ನೆಲ್ಲ ಒಂದು ರೌಂಡ್ ಕವರ್ ಮಾಡಿ ಆಗಿದೆ. ಗೋಡೆಯ ಮೇಲೆ ಹೊಸ ವರ್ಷದ ವರ್ಣರಂಜಿತ ಕ್ಯಾಲೆಂಡರ್ ಕಂಗೊಳಿಸುತ್ತಿದೆ. ಪಕ್ಕದಲ್ಲೇ ಕಾಲನಿರ್ಣಯವೋ ಬೆಂಗಳೂರುಪ್ರೆಸ್ನದೋ ಒಂದು ದಿನದರ್ಶಿಕೆಯೂ ತೂಗಾಡುತ್ತಿದೆ. ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ರಜಾದಿನಗಳನ್ನು ಕೆಂಪುಬಣ್ಣದಲ್ಲಿ ತೋರಿಸುತ್ತಿದೆ. ಡೈರಿ ಬರೆಯುವ ಅಭ್ಯಾಸವಿರುವವರ ಬಳಿ ಹೊಸ ಡೈರಿಯೂ ಬಂದಿದೆ. ಜನವರಿ ಒಂದನೇ ತಾರೀಕಿನದನ್ನು ಆಗಲೇ ಶಿಸ್ತಿನಿಂದ, ಅತ್ಯುತ್ಸಾಹದಿಂದ ಬರೆದದ್ದೂ ಆಗಿದೆ. ಒಟ್ಟಿನಲ್ಲಿ ವಾತಾವರಣದಲ್ಲೂ ಮನಸ್ಸಿನೊಳಗೂ ಏನೋ ಒಂದು ಹೊಸತನದ ಅನುಭವವಾಗಿದೆ. ಕಡೇಪಕ್ಷ ಹಾಗಂತ ಮನಸ್ಸು ಅಂದುಕೊಂಡಿದೆ. ಎಲ್ಲ ಸರಿಯೇ. ಆದರೆ ಇವತ್ತು-ನಾಳೆ ಅರ್ಜೆಂಟ್ನಲ್ಲಿ ಒಂದು ಚೆಕ್ ಬರೆದುಕೊಡುವ ಸಂದರ್ಭವೋ ಅಥವಾ ದಿನಾಂಕ ನಮೂದಿಸಬೇಕಾಗುವ ಅಂತಹ ಇನ್ನಾವುದೇ ಸನ್ನಿವೇಶ ಬಂತು ಅಂದ್ಕೊಳ್ಳಿ. ತಾರೀಕು ಮತ್ತು ತಿಂಗಳನ್ನು ಸರಿಯಾಗಿಯೇ ಬರೆಯುತ್ತೀರಿ, ಇಸವಿಯನ್ನು ಮಾತ್ರ 2010 ಎಂದು ಬರೆಯುವ ಸಾಧ್ಯತೆಗಳೇ ಹೆಚ್ಚು. ಒಂದುವೇಳೆ 2011 ಎಂದು ಬರೆದರೂ ಅದು ಅತಿಜಾಗ್ರತೆಯಿಂದ ಪ್ರಜ್ಞಾಪೂರ್ವಕವಾಗಿ ಬರೆದದ್ದಾಗಿರುತ್ತದೆ. ಹೌದು, ಕನಿಷ್ಠ ಒಂದೆರಡು ವಾರಗಳಾದರೂ ಬೇಕಾಗುತ್ತದೆ ಹೊಸ ಇಸವಿ ಶುರುವಾಗಿರುವುದು ನಮ್ಮ ಸಬ್ಕಾನ್ಷಿಯಸ್ ಮನಸ್ಸಿನಲ್ಲಿ ಸ್ಪಷ್ಟವಾಗಿ ಅಚ್ಚೊತ್ತಿಕೊಳ್ಳುವುದಕ್ಕೆ. ಅಲ್ಲಿಯವರೆಗೆ ‘ಅಭ್ಯಾಸಬಲ’ವೆಂಬ ಎಕ್ಸ್ಕ್ಯೂಸ್ ಇದ್ದೇಇರುತ್ತದೆ. ಇವತ್ತು ಅಭ್ಯಾಸಬಲದ ಬಗ್ಗೆಯೇ ಒಂದು ಸೋದಾಹರಣ ಹರಟೆ ಮಾಡೋಣವೆಂದುಕೊಂಡಿದ್ದೇನೆ. ಇಸವಿ ಬದಲಾವಣೆಯ ಪ್ರಸ್ತುತ ಸಂದರ್ಭ ಒಂದು ಒಳ್ಳೆಯ ಉದಾಹರಣೆಯಾದ್ದರಿಂದ ಅದನ್ನೇ ಇಂಟ್ರೊದಲ್ಲಿ ಬಳಸಿದ್ದೇನೆ. ‘ನಮ್ಮನೆಯ ಗೋಡೆಗಡಿಯಾರ ಮೊನ್ನೆ ಕೆಳಗೆಬಿದ್ದು ಒಡೆದುಹೋಯ್ತು. ಒಡೆದ ಗಾಜನ್ನು ನಾನೇ ಸ್ವತಃ ಸಾಕಷ್ಟು ಸಮಯ ವ್ಯಯ ಮಾಡಿ ತೆಗೆದು ಕಸದಬುಟ್ಟಿಗೆ ಹಾಕಿದ್ದೆ. ಆದರೆ ಈಗಲೂ ಟೈಮ್ ಎಷ್ಟಾಯ್ತು ಅನ್ಕೊಳ್ಳೋಹೊತ್ತಿಗೆ ದೃಷ್ಟಿ ಆ ಗಡಿಯಾರ ತಗಲುಹಾಕಿದ್ದ ಜಾಗದೆಡೆಗೇ ಹೋಗುತ್ತೆ. ನಿಮಗೂ ಹೀಗಾಗಿದ್ದಿದೆಯೇ?’ - ಹಿಂದೊಮ್ಮೆ sampada.net ನ ವಿಚಾರವಿನಿಮಯ ವೇದಿಕೆಯಲ್ಲಿ ಮಿತ್ರ ಹರಿಪ್ರಸಾದ್ ನಾಡಿಗ್ ಈರೀತಿ ಒಂದು ಪೋಸ್ಟ್ ಹಾಕಿದ್ದರು. ಆಗ ಅಭ್ಯಾಸಬಲದ ಅಂತಹ ಅನುಭವಗಳ ಬಗ್ಗೆ ನಾವು ಕೆಲವು ಸಂಪದ ಸದಸ್ಯರು ರಸವತ್ತಾಗಿ ಚರ್ಚಿಸಿದ್ದೆವು. ರಷ್ಯನ್ ವಿಜ್ಞಾನಿ ಐವಾನ್ ಪಾವ್ಲೊವ್ನ ಜಗದ್ವಿಖ್ಯಾತ ನಾಯಿ-ಗಂಟೆ-ಆಹಾರ ಪ್ರಯೋಗವೂ ಸೇರಿದಂತೆ ಸುಮಾರಷ್ಟು ವಿಚಾರಗಳು ಅಲ್ಲಿ ಬಂದಿದ್ದವು. ಎಸೋಸಿಯೇಟಿವ್ ಲರ್ನಿಂಗ್, ಕಂಡೀಷನ್ಡ್ ರಿಫ್ಲೆಕ್ಸಸ್ ಮುಂತಾಗಿ ಅಭ್ಯಾಸಬಲದ ಎಡಬಲಗಳನ್ನೆಲ್ಲ ಅಲ್ಲಿ ತಡಕಾಡಿದ್ದೆವು. ಇವತ್ತಿಲ್ಲಿ ಆ ಥಿಯರಿಗಳನ್ನೆಲ್ಲ ವಿವರಿಸುವುದಕ್ಕೆ ಹೋಗುವುದಿಲ್ಲ. ಆದರೆ ನಾಡಿಗ್ ಕೇಳಿದ್ದ ಪ್ರಶ್ನೆಯನ್ನೇ ನಾನು ನಿಮಗೆ ಕೇಳುತ್ತಿದ್ದೇನೆ. ನೀವೂ ನೆನಪಿಸಿಕೊಳ್ಳಿ ಅಭ್ಯಾಸಬಲದಿಂದ ನಿಮಗಾದ ಅನುಭವ ಆಭಾಸ ಇರುಸುಮುರುಸಿನ ಈರೀತಿಯ ಉದಾಹರಣೆಗಳನ್ನು. ಅಷ್ಟೊತ್ತಿಗೆ, ಪುರಾಣಗಳಲ್ಲಿ ನಮ್ಮ ಗಮನಕ್ಕೆ ಬರುವ ಒಂದೆರಡು ಪ್ರಸಂಗಗಳನ್ನು ನಾನಿಲ್ಲಿ ದಾಖಲಿಸುತ್ತೇನೆ. ಮಹಾಭಾರತದ ಕಥೆಯಲ್ಲಿ ಮತ್ಸ್ಯಯಂತ್ರವನ್ನು ಭೇದಿಸಿ ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದವನು ಪಾರ್ಥನೊಬ್ಬನೇ. ಆದರೆ ದ್ರೌಪದಿ ಪಂಚಪಾಂಡವರಿಗೂ ಧರ್ಮಪತ್ನಿ ಅಂತನಿಸಿಕೊಳ್ಳಬೇಕಾಗಿ ಬಂದದ್ದು ಕುಂತಿಯ ಅಭ್ಯಾಸಬಲದಿಂದಾದ ಎಡವಟ್ಟಿನಿಂದ! ಭಿಕ್ಷೆ ಬೇಡಿ ಬದುಕಿಕೊಂಡಿದ್ದ ಪಾಂಡವರು ಅವತ್ತು ಕೂಡ ಭಿಕ್ಷಾಟನೆಯಿಂದ ಮರಳುವಾಗ ಜತೆಯಲ್ಲಿ ದ್ರೌಪದಿಯನ್ನು ಕರೆದುಕೊಂಡು ಬಂದು ಗುಡಿಸಲಿನ ಹೊರಗಿನಿಂದಲೇ “ಅಮ್ಮಾ ನೋಡು ಇವತ್ತಿನ ನಮ್ಮ ಭಿಕ್ಷೆಯನ್ನು!” ಎಂದರು. ಕುಂತಿ ಮನೆಯೊಳಗಿನಿಂದಲೇ ತನ್ನ ಎಂದಿನ ಅಭ್ಯಾಸದಂತೆ “ಆಯ್ತಪ್ಪಾ ಎಲ್ಲರೂ ಹಂಚಿಕೊಳ್ಳಿ” ಎಂದುಬಿಟ್ಟಳು. ಆಮೇಲಿನದು ನಮಗೆಲ್ಲ ಗೊತ್ತೇ ಇರುವ ಕಥೆ. ರಾಮಾಯಣದಲ್ಲಿ ಒಂದು ತಮಾಷೆ ಪ್ರಸಂಗ ಬರುತ್ತದೆ. ಇದು ವಾಲ್ಮೀಕಿ ಬರೆದದ್ದರಲ್ಲಿ ಇಲ್ಲವಂತೆ, ಆದರೂ ತುಂಬ ಚೆನ್ನಾಗಿದೆ. ಮುಖ್ಯವಾಗಿ ಇದರ ಚಿತ್ರಣ ಸೊಗಸಾಗಿದೆ. ಓದಿ. ಲಂಕೆಯಿಂದ ಮರಳಿದ ನಂತರ ಶ್ರೀರಾಮಚಂದ್ರನ ಪಟ್ಟಾಭಿಷೇಕದ ತರುವಾಯ ಒಮ್ಮೆ ಜನಕಮಹಾರಾಜನು ರಾಮನ ಪರಿವಾರದವರನ್ನೆಲ್ಲ ಮಿಥಿಲೆಗೆ ಆಹ್ವಾನಿಸಿದನು. ಒಂದು ಔತಣಕೂಟ ಏರ್ಪಡಿಸಿ ಸಂಭ್ರಮಿಸುವುದು ಅವನ ಉದ್ದೇಶ. ರಾಮನ ಪರಿವಾರವೆಂದ ಮೇಲೆ ಅದರಲ್ಲಿ ವಾನರಸೇನೆಯೂ ಸೇರಿಕೊಂಡಿತ್ತು. ರಾಮ ಅವರಿಗೆಲ್ಲ “ನೋಡ್ರಪಾ ಅದು ಗೌರವಾನ್ವಿತರ, ಮರ್ಯಾದಸ್ಥರ ಸಭೆ. ಅಲ್ಲಿ ಕುಚೋದ್ಯಗಳನ್ನೆಲ್ಲ ಮಾಡಲಿಕ್ಕೆ ಹೋಗಬೇಡಿ. ಬಿಹೇವ್ ಪ್ರಾಪರ್ಲಿ. ಓಕೆ?” ಎಂದು ಮೊದಲೇ ಸಾಕಷ್ಟು ತರಬೇತುಗೊಳಿಸಿದ್ದ. ಸರಿ, ಮಿಥಿಲೆಯಲ್ಲಿ ಔತಣಕೂಟ ಶುರುವಾಯಿತು. ನೆಲದ ಮೇಲೆ ಸಾಲಾಗಿ ಬಾಳೆಎಲೆ ಹಾಕಿ ಎಲ್ಲರಿಗೂ ಪಂಕ್ತಿಭೋಜನ. ವಾನರರೆಲ್ಲ ಶಿಸ್ತಿನಿಂದಲೇ ಇದ್ದರು. ಪಂಚಭಕ್ಷ್ಯಗಳನ್ನೆಲ್ಲ ಸವಿದರು. ಇನ್ನೇನು ಊಟದ ಕೊನೆ. ಮಜ್ಜಿಗೆಯನ್ನಕ್ಕೆ ನೆಂಚಿಕೊಳ್ಳಲಿಕ್ಕೆಂದು ಉಪ್ಪಿನಕಾಯಿ ಬಡಿಸಲಾಯ್ತು. ಅದು, ಮಿಥಿಲೆಯಲ್ಲೇ ಬೆಳೆದ ಇಡೀ ಮಾವಿನಮಿಡಿಗಳ ರುಚಿರುಚಿಯಾದ ಉಪ್ಪಿನಕಾಯಿ. ಒಬ್ಬ ವಾನರ ಮಾವಿನಮಿಡಿಯನ್ನು ಕೈಯಲ್ಲಿ ಹಿಚುಕಿದಾಗ ಅದರೊಳಗಿದ್ದ ಸಣ್ಣ ಬೀಜ ಛಂಗನೆ ಜಿಗಿಯಿತು! ಅದನ್ನು ನೋಡಿದವನೇ “ಎಲಾಇವ್ನ! ಅಷ್ಟೆತ್ತರಕ್ಕೆ ಜಿಗಿಯುವುದಕ್ಕೆ ನನ್ನಿಂದ ಆಗೋದಿಲ್ಲ ಅಂದ್ಕೊಂಡಿಯಾ?” ಎನ್ನುತ್ತ ಅವನೂ ಅಲ್ಲಿಯೇ ಊಟಕ್ಕೆ ಕುಳಿತವನೇ ಒಮ್ಮೆ ಮೇಲಕ್ಕೆ ಜಿಗಿದ. ಅವನನ್ನು ನೋಡಿದ ಇತರ ವಾನರರೂ ಜಿಗಿಯತೊಡಗಿದರು. ಉಳಿದವರೆಲ್ಲ ಮಜ್ಜಿಗೆಯೂಟ ಅರ್ಧಕ್ಕೇ ಬಿಟ್ಟು ಇದೇನಿದು ಗಲಾಟೆ ಎಂದು ಗಾಬರಿಯಾದರು. ವಾನರರ ಅಭ್ಯಾಸಬಲದಿಂದಾಗಿ ಜನಕಮಹಾರಾಜನ ಡೈನಿಂಗ್ಹಾಲ್ ಹೇಗೆ ‘ಮೆಸ್’ ಆಗಿದ್ದಿರಬಹುದೆಂಬ ದೃಶ್ಯವನ್ನು ನೀವೇ ಊಹಿಸಿ. ಅದಿರಲಿ, ರಾಮ ವಾನರರೊಂದಿಗೆ ಮಾತನಾಡುವಾಗ ಇಂಗ್ಲೀಷ್ ಪದಗಳನ್ನೂ ಬಳಸಿದನೇ? ಯಾಕಾಗಬಾರದು? ಬಹುಶಃ ಅವನಿಗೂ ನಮ್ಮಂತೆಯೇ ಅಭ್ಯಾಸಬಲ. ಅಷ್ಟಕ್ಕೂ ‘ಬಿಹೇವ್ ಪ್ರಾಪರ್ಲಿ’ ಎಂದದ್ದೇ ವಾನರರ ಜಿಗಿತಕ್ಕೆ ಹೇತುವಾಯಿತೋ ಏನೊ. ಇನ್ನು, ಹಾಸ್ಯಪ್ರವೃತ್ತಿಯ ದೇವರೆಂದೇ ಖ್ಯಾತನಾದ ಗಣೇಶ ಮಾಡಿದ ಒಂದು ಕಿತಾಪತಿಯ ಪ್ರಸಂಗವೂ ಚೆನ್ನಾಗಿದೆ. ಕೈಲಾಸದ ಫ್ಯಾಮಿಲಿಫೊಟೊ ನೀವು ನೋಡೇಇರುತ್ತೀರಿ. ಅದನ್ನೊಮ್ಮೆ ನೆನಪಿಸಿಕೊಳ್ಳಿ. ಆಚೀಚೆ ಶಿವ-ಪಾರ್ವತಿ. ನಡುವೆ ಗಣೇಶ. ಅವರು ಕುಳಿತುಕೊಳ್ಳುತ್ತಿದ್ದದ್ದೇ ಹಾಗೆ. ಅಷ್ಟೇಅಲ್ಲ, ಗಣೇಶನಿಗೆ ಎಡಗೆನ್ನೆಗೆ ಪಾರ್ವತಿಯೂ ಬಲಗೆನ್ನೆಗೆ ಶಿವನೂ ಕಂಟಿನ್ಯುವಸ್ ಆಗಿ ಮುತ್ತು ಕೊಡುತ್ತಿದ್ದರು. ‘ಹೌದಾ ಇದೇ ನಿಮ್ಮ ಅಭ್ಯಾಸವಾ ಮಾಡ್ತೇನ್ ತಡೀರಿ ನಿಮಗೆ’ ಎಂದುಕೊಂಡ ಕಿಲಾಡಿ ಗಣೇಶ ಒಮ್ಮೆ ಏನುಮಾಡಿದನೆಂದರೆ ಆಕಡೆಯಿಂದ ಪಾರ್ವತಿಯೂ ಈಕಡೆಯಿಂದ ಈಶ್ವರನೂ ಮುತ್ತುಕೊಡಲು ಬಗ್ಗಿದಾಗ ತಾನು ಅಲ್ಲಿಂದ ಥಟ್ಟನೆ ಹಿಂದೆಸರಿದುಬಿಟ್ಟ! ಜಗತಃ ಪಿತರೌ ಪಾರ್ವತೀ-ಪರಮೇಶ್ವರೌ ಚುಂಬನದೃಶ್ಯದಲ್ಲಿ ಕಂಡುಬಂದ ಪರಿ ಇದು. ನಾನೇ ಹೆಣೆದದ್ದು ಅಂದ್ಕೊಳ್ಳಬೇಡಿ. ಸುಭಾಷಿತ ರತ್ನಭಾಂಡಾಗಾರಂ ಪುಸ್ತಕದಲ್ಲಿರುವ ಸಂಸ್ಕೃತ ಶ್ಲೋಕವನ್ನು ನಾನು ಅನುವಾದಿಸಿದ್ದು ಅಷ್ಟೇ. ಆಯ್ತು. ಪುರಾಣಗಳ, ದೇವ-ವಾನರರ ವಿಚಾರದ ನಂತರ ಈಗ ನರರ ವಿಷಯಕ್ಕೆ ಬರೋಣ. ದೂರವಾಣಿ ಸಂಭಾಷಣೆಯಲ್ಲಿ ಕೆಲವರ ಅಭ್ಯಾಸಬಲಗಳು ಪ್ರಕಟಗೊಳ್ಳುವುದಿದೆ. ಮಾತೆಲ್ಲ ಮುಗಿದಮೇಲೆ ‘ಇಡ್ಲಾ?’ ಎಂದುಹೇಳಿ ಕೊನೆಗೊಳಿಸುವುದು ಅಭ್ಯಾಸ. ಹಳೇಕಾಲದಲ್ಲಿ, ಅಥವಾ ಈಗಲೂ, ಲ್ಯಾಂಡ್ಲೈನ್ ಫೋನ್ನಲ್ಲಿ ಮಾತನಾಡಿ ಆದಮೇಲೆ ರಿಸೀವರನ್ನು ಅದರ ಬೇಸ್ಡಿವೈಸ್ಗೆ ಕ್ರೆಡಲ್ ಮಾಡಬೇಕು ತಾನೆ? ಹಾಗಾಗಿ ‘ಇಡ್ಲಾ?’ ಎಂಬ ಪ್ರಶ್ನೆ. ಈಗ ವಿವಿಧ ವಿನ್ಯಾಸಗಳ ಮೊಬೈಲ್ಫೋನ್ಗಳು ಬಂದಿರುವಾಗ ‘ಇಡುವುದು’ ಏನಿದ್ದರೂ ಜೇಬಿನಲ್ಲಿ/ಚೀಲದಲ್ಲಿ. ಇನ್ನು ಕೆಲವರಿಗೆ ಫೋನ್ ಸಂಭಾಷಣೆಯನ್ನು ‘ಬರ್ಲಾ?’ ಎಂದುಹೇಳಿ ಕೊನೆಗೊಳಿಸುವ ರೂಢಿ. ಅದರಲ್ಲೇನೂ ತಪ್ಪಿಲ್ಲ, ಆದರೆ ಆಭಾಸವೆನಿಸುವುದು “ಇಲ್ಲಪ್ಪಾ ಆಫೀಸ್ನಲ್ಲಿ ಸಿಕ್ಕಾಪಟ್ಟೆ ಕೆಲ್ಸ, ರಜೆ ಸಿಗೋಹಾಗಿಲ್ಲ. ಊರಿಗೆ ಬರೋದಕ್ಕೆ ಆಗೋದೇಇಲ್ಲ. ಬರೋದಿಲ್ಲ ನಾನು, ತಪ್ಪ್ತಿಳ್ಕೋಬೇಡಿ...” ಅಂತೆಲ್ಲ ಹೇಳಿ ಆಕಡೆಯ ಪಾರ್ಟಿಯವರನ್ನು ಕನ್ವಿನ್ಸ್ ಮಾಡಿ ಎಲ್ಲ ಮುಗಿದಾದಮೇಲೆ ‘ಬರ್ಲಾ?’ ಎಂದುಹೇಳಿ ಫೋನ್ ಇಟ್ಟಾಗ. ಅಭ್ಯಾಸಬಲ! ಬರವಣಿಗೆಯಲ್ಲೂ ಕೆಲವೊಮ್ಮೆ ಆಭಾಸಗಳಾಗುವುದಿದೆ. ಮೊನ್ನೆ ಒಂದು ಲೇಖನದಲ್ಲಿ ಗಮನಿಸಿದ ವಾಕ್ಯ. ‘ಇತ್ತೀಚೆಗೆ ನಿಧನರಾದ ಸೋಏಂಡ್ಸೋ ಅವರ ಶ್ರದ್ಧಾಂಜಲಿ ಸಭೆ ಅಭೂತಪೂರ್ವವಾಗಿ ನಡೆಯಿತು.’ ಬಹುಶಃ ಆ ಲೇಖಕರಿಗೆ ಅದ್ಧೂರಿ, ಅಭೂತಪೂರ್ವ, ವೈಭವೋಪೇತ ಅಂತೆಲ್ಲ ವಿಶೇಷಣಗಳನ್ನು ಬಳಸಿ ಅಭ್ಯಾಸ. ಶ್ರದ್ಧಾಂಜಲಿ ಸಭೆ ಎಷ್ಟೇ ಅದ್ಧೂರಿಯಿರಲಿ ಸಪ್ಪೆಯಿರಲಿ ಸತ್ತ ವ್ಯಕ್ತಿಯ ಮಟ್ಟಿಗೆ ಅಭೂತಪೂರ್ವವೇ ಆಗಿರುತ್ತದಲ್ಲ? ಇಲ್ಲಿ ನನಗೆ ಇನ್ನೊಂದು ಪ್ರಸಂಗ ನೆನಪಾಗುತ್ತಿದೆ. ಒಂದೆರಡು ವರ್ಷಗಳ ಹಿಂದೆ ಸ್ನೇಹಿತರೊಬ್ಬರ ಅಮ್ಮ ನಿಧನರಾದಾಗ ಆ ಸುದ್ದಿಯಿದ್ದ ಇಮೇಲ್ ನನಗೆ ಮತ್ತು ಸುಮಾರಷ್ಟು ಜನ ಕಾಮನ್ಫ್ರೆಂಡ್ಸ್ಗೆಲ್ಲ ಹೋಗಿತ್ತು. ಅದರಲ್ಲಿ ಕೆಲವರು ಶೋಕತಪ್ತ ಸ್ನೇಹಿತನಿಗಷ್ಟೇ ರಿಪ್ಲೈ ಕಳಿಸಿದರೆ ಮತ್ತೆ ಕೆಲವರು reply all ಬಟನ್ ಒತ್ತಿ ‘sad to hear. may your mother's soul rest in peace..’ ಎಂದು ಟೈಪಿಸಿ ಕಳಿಸಿದ್ದರು. ಇದ್ದಬಿದ್ದವರ ಅಮ್ಮಂದಿರನ್ನೆಲ್ಲ ಸುಮ್ಮನೆ ಸಾಯಿಸಿದ್ದರು. ಪರವಾಗಿಲ್ಲ, ಅದು ಶೋಕತಪ್ತ ಸ್ನೇಹಿತನನ್ನಷ್ಟೇ ಉದ್ದೇಶಿಸಿದ್ದೆಂದು ಸಾಂದರ್ಭಿಕವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ ಇಮೇಲ್ ಲಿಸ್ಟ್ನಲ್ಲಿದ್ದ ಒಬ್ಬಾಕೆ ‘ರಿಪ್ಲೈ ಆಲ್’ ಮಾಡಿದ್ದಷ್ಟೇ ಅಲ್ಲ, ಆಕೆಯ ಇಮೇಲ್ ಸಿಗ್ನೇಚರ್ನಲ್ಲಿ Don't worry, Be happy! ಎಂದು ಒಂದು ಸ್ಮೈಲಿ ಬೇರೆ! ಏನು ಮಾಡುವುದು, ಅಭ್ಯಾಸಬಲ. ಏನ್ರೀ ಹೊಸವರ್ಷದ ಖುಶಿಯಲ್ಲಿರುವಾಗ ಸಾವಿನ ಸುದ್ದಿ ಮಾತಾಡ್ತಿದ್ದೀರಲ್ಲಾ ಎಂದು ನೀವು ಅಸಮಾಧಾನ ವ್ಯಕ್ತಪಡಿಸುವ ಮೊದಲೇ ಅದನ್ನು ನಿಲ್ಲಿಸುತ್ತೇನೆ. ಅದಕ್ಕಿಂತ, ಅಭ್ಯಾಸಬಲದ ಈ ಜೋಕು ಇಂಟರ್ನೆಟ್ನಲ್ಲಿ ಸಿಕ್ಕಿದ್ದು, ಚೆನ್ನಾಗಿದೆ. ಓದಿನೋಡಿ. ಬಸ್ಡ್ರೈವರ್ ಆಗಿದ್ದ ಗುಂಡ, ಕಷ್ಟಪಟ್ಟು ಟ್ರೈನಿಂಗ್ ಮುಗಿಸಿ ಪೈಲಟ್ ಆಗೇಬಿಟ್ಟ. ಒಂದು ದಿನ ವಿಮಾನ ಓಡಿಸುತ್ತಿರುವಾಗ ಇದ್ದಕ್ಕಿದ್ದಹಾಗೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಕೂಡಲೇ ಅಭ್ಯಾಸಬಲದಂತೆ ಗುಂಡ ಹೇಳ್ದ, “ರೀ ಎಲ್ರೂ ಕೆಳಗೆ ಇಳಿದು ಗಾಡೀನ ಸ್ವಲ್ಪ ದೂರ ತಳ್ಳಿ. ಎಂಜಿನ್ ಆಫ್ ಆಗಿದೆ...” ಈ ಜೋಕ್ನಂತೆ ಅಲ್ಲವಾದರೂ ವಿಮಾನಯಾನಕ್ಕೆ ಸಂಬಂಧಿಸಿದಂತೆಯೇ ಮೊನ್ನೆ ನನಗೊಂದು ಅನುಭವ ಆಯ್ತು. ಇದರಲ್ಲಿ ಅಭ್ಯಾಸಬಲದ ಆಭಾಸ ಮಾಡಿದವನು ನಾನೇ. ಅದು ಹೀಗಾಯ್ತು- ವಿಮಾನನಿಲ್ದಾಣದಲ್ಲಿ ಚೆಕ್ಇನ್ ಎಲ್ಲ ಆದಮೇಲೆ ಅಲ್ಲಿನ ಸಿಬ್ಬಂದಿ(ಣಿ) ನನಗೆ ಬೋರ್ಡಿಂಗ್ಪಾಸ್ ಕೊಡುತ್ತ ‘ಹ್ಯಾವ್ ಎ ನೈಸ್ ಜರ್ನಿ’ ಎಂದಳು. ಯಾವ ಗುಂಗಿನಲ್ಲಿದ್ದೆನೋ ‘ಸೇಮ್ ಟು ಯೂ!’ ಎಂದೆ. ತತ್ಕ್ಷಣ ಅವಳು ನಸುನಕ್ಕು ‘ಓಹ್ ನೋ ಐ ಆಮ್ ನಾಟ್ ಫ್ಲೈಯಿಂಗ್!’ ಎಂದಳು. ನನ್ನ ಎಡವಟ್ಟಿನ ಅರಿವಾಗಿ ‘ದೆನ್ ಫೈನ್, ಹ್ಯಾವ್ ಎ ಗುಡ್ ಡೇ’ ಎಂದು ವಿಶ್ ಮಾಡಿ ಅಲ್ಲಿಂದ ಹೊರಟೆ. ಅಮೆರಿಕದಲ್ಲಿ ‘ಹ್ಯಾವ್ ಎ ಗುಡ್ ಡೇ’ ಅಥವಾ ‘ಹ್ಯಾವ್ ಎ ಗುಡ್ ವನ್’ ಎಂಬಂಥ ಅನುದಿನದ ಒಣಹಾರೈಕೆಗಳಿಗೆ ‘ಯೂ ಟೂ’ ಎಂದೋ ‘ಸೇಮ್ ಟು ಯೂ’ ಎಂದೋ ಹೇಳಿಹೇಳಿ ಅಭ್ಯಾಸವಾದ್ದರಿಂದ ಏರ್ಪೋರ್ಟ್ನಲ್ಲಿ ಆರೀತಿ ನನ್ನ ಅಭ್ಯಾಸಬಲಪ್ರದರ್ಶನ ಆಗಿತ್ತು. ಈಗ ನಿಮ್ಮ ಸರದಿ. ಅಭ್ಯಾಸಬಲ ನಿಮಗೆಷ್ಟು ಇದೆ ಎಂದು ಬರೆದು ತಿಳಿಸುತ್ತೀರಾ? ಆಯ್ದ ಅನುಭವಗಳನ್ನೆಲ್ಲ ಪೋಣಿಸಿ ಒಂದು ಪರಾಗ ಸ್ಪರ್ಶಿಸೋಣವಂತೆ! ======== [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!
Saturday Dec 25, 2010
Yearend Roundoff
Saturday Dec 25, 2010
Saturday Dec 25, 2010
ದಿನಾಂಕ 26 ಡಿಸೆಂಬರ್ 2010ರ ಸಂಚಿಕೆ...
ಬೊಮ್ಮ ನಿನ್ಗೆ ಜೋಡುಸ್ತೀನಿ ಸಂದ್ರ ಮುಟ್ಟಿದ್ ಕೈನ...
* ಶ್ರೀವತ್ಸ ಜೋಶಿ
ಇದು ಈ ಕ್ಯಾಲೆಂಡರ್ ವರ್ಷದ ಕೊನೆಯ ಭಾನುವಾರ. ಅಂಕಣದ ಸಂಪ್ರದಾಯದಂತೆ ವನ್ ರೌಂಡ್ ಆಫ್ ಸ್ವಾರಸ್ಯಕರ ಸಿಂಹಾವಲೋಕನಕ್ಕೆ ಸುಸಂದರ್ಭ. ಹೊರಗಡೆ ಚಳಿ ಬೇರೆ ಜೋರಾಗಿರುವುದರಿಂದ ಇಂಥ ‘ಕುರ್ಲುಪಚ್ಚಡಿ’ಗೆ ಪ್ರಶಸ್ತ ಕಾಲ (ಕುರ್ಲುಪಚ್ಚಡಿ ಅಂದ್ರೇನಂತ ಗೊತ್ತಿಲ್ಲವಾದರೆ ಉತ್ತರಕರ್ನಾಟಕದ ಮಂದಿ ‘ಗಿರ್ಮಿಟ್’ಅನ್ನೂ, ಹಳೇಮೈಸೂರು ಪ್ರಾಂತ್ಯದವರು ‘ಚುರುಮುರಿ’ಯನ್ನೂ ನೆನಪಿಸಿಕೊಳ್ಳಿ). ಇವತ್ತು ಒಂದಿಷ್ಟು ತಮಾಷೆ ತರ್ಲೆ-ತರ್ಕಗಳ ಲೈಟ್ ಖಾರ, ಸಣ್ಣಪುಟ್ಟ ತಪ್ಪುಒಪ್ಪುಗಳ ಉಪ್ಪು-ಹುಳಿ, ಜೊತೆಗೆ ಓದುಗರ ಓಲೆಗಳ ಸಿಹಿ - ಎಲ್ಲ ಸೇರಿದ ಸಮ್ಮಿಶ್ರಣ. ಒಂಥರದ ಕಾಕ್ಟೈಲು ಅನ್ನಿ ಬೇಕಿದ್ದರೆ. ಎರಡು ವಾರಗಳ ಹಿಂದೆ ‘ಬಟ್ಟೆ ಒಗೆಯುವ ಕಂಡಾಬಟ್ಟೆ ಸೊಬಗಿನ’ ಹರಟೆಯ ಕೊನೆಯಲ್ಲಿ ಒಂದು ರಸಪ್ರಶ್ನೆ ಕೇಳಿದ್ದೆನಷ್ಟೆ? ಬಿಟಿಎಂ ಲೇಔಟ್ನ ಹೆಸರಿನಲ್ಲಿ ಎಂ ಎಂದರೇನು ಅಂತ. ಆ ಕ್ವಿಜ್ ಒಂದು ದಾಖಲೆಯನ್ನೇ ನಿರ್ಮಿಸಿತು. ಉತ್ತರಿಸಿದವರ ಸಂಖ್ಯೆಯೇ ಒಂದು ದಾಖಲೆಯಾದರೆ ಎಲ್ಲರೂ ‘ಮಡಿವಾಳ’ ಎಂಬ ಸರಿಯುತ್ತರವನ್ನೇ (ಕೆಲವರು ಲೇಖನದಲ್ಲಿದ್ದ ಮಕಾರ ಪದಗಳನ್ನೆಲ್ಲ ಪಟ್ಟಿಮಾಡಿ ಕಂಡುಕೊಂಡು) ಬರೆದು, ತಪ್ಪು ಉತ್ತರ ಒಂದೂ ಬರಲಿಲ್ಲ ಎನ್ನುವುದೂ ದಾಖಲೆ! ಅಲ್ಲಿ ಇನ್ನೊಂದು ಮೋಜಿನ ಪ್ರಸಂಗ ನಡೆಯಿತು. ಬಿಟಿಎಂನಲ್ಲಿ ಬಿ ಎಂದರೆ ಬೈರಸಂದ್ರ ಎಂದಿದ್ದೆ ನಾನು, ಪ್ರಶ್ನೆ ಕೇಳುವಾಗ. ಅದು ತಪ್ಪು, ಬಿ ಎಂದರೆ ಬೊಮ್ಮನಹಳ್ಳಿ ಆಗಬೇಕು ಎಂದು ಬರೆದು ತಿಳಿಸಿದರು ಕೆಲ ಓದುಗರು. ಬನ್ನೇರುಘಟ್ಟ ಎಂದರು ಇನ್ನು ಕೆಲವರು. ನನಗೇ ಕನ್ಫ್ಯೂಷನ್! ಸರಿ, ಬಿಟಿಎಂ ಲೇಔಟ್ನಲ್ಲಿ ಹತ್ತಾರು ವರ್ಷ ನೆಲೆಸಿದ್ದ ನಾಗೇಶ ಹೆಗಡೆ ಅವರನ್ನೇ ಕೇಳೋಣವೆಂದು ಅವರಿಗೆ ಇಮೇಲ್ ಬರೆದೆ. ಬೆಂಗಳೂರಿನಲ್ಲಿರುವ ಇತರ ಸ್ನೇಹಿತರು ಏನಂತಾರೆ ನೋಡೋಣ ಎಂದು ಹಾಲ್ದೊಡ್ಡೇರಿ ಸುಧೀಂದ್ರ, ಡಾ.ಪವನಜ, ಸೂರಿ ಹಾರ್ದಳ್ಳಿ, ಜೋಗಿ, ಶಾಮ್ ಮುಂತಾದವರಿಗೂ ಅದರ ಪ್ರತಿ ಕಳಿಸಿದೆ. ಶುರುವಾಯ್ತು ನೋಡಿ ಇಮೇಲ್ನಲ್ಲೇ ನಮ್ಮ ಚರ್ಚೆ! ನಾನು ವಿಕಿಪೀಡಿಯಾದಲ್ಲಿ ನೋಡಿ ಬೈರಸಂದ್ರ ಎಂದಿದ್ದೆ; ಬೈರಸಂದ್ರವೇ ಸರಿ ಎಂದರು ಸುಧೀಂದ್ರ ಮತ್ತು ಜೋಗಿ. ಅದು ‘ಬಿಳೇಕಹಳ್ಳಿ’ ಆಗಬೇಕೆಂದರು ಪವನಜ, ಒಂದು ಗೂಗಲ್ ಮ್ಯಾಪನ್ನೂ ತೋರಿಸುತ್ತ. ಅದ್ಯಾವುದೂ ಸರಿಯಲ್ಲ ‘ಬೇಗೂರು’ ಎಂದರು ಸೂರಿ. ಬೆಟ್ ಕಟ್ಟುವುದಕ್ಕೂ ಸಿದ್ಧ ಅದು ‘ಬೊಮ್ಮನಹಳ್ಳಿ’ ಎಂದು ನಾ.ಹೆ ಉವಾಚ. ಇದೊಳ್ಳೇ ಕಥೆಯಾಯ್ತಲ್ಲ! ಬಿಟಿಎಂನಲ್ಲಿ ಬಿ ಏನೂಂತ ಖುದ್ದಾಗಿ ಕೆಂಪೇಗೌಡನಿಗೂ ಗೊತ್ತಿಲ್ಲವೇನೊ. ಅಥವಾ, ಶೇಕ್ಸ್ಪಿಯರ್ನಂತೆ ಟು ಬಿ ಆರ್ ನಾಟ್ ಟು ಬಿ ಅಂತ ಡೌಟಿಸುತ್ತಲೇ ಇರಬೇಕೇ? ಅಷ್ಟೊತ್ತಿಗೆ ನನಗೆ ಬೆಂಗಳೂರಿನ ಜಯನಗರನಿವಾಸಿ ಡಿ.‘ಬಿ’. ಪ್ರಾಣೇಶರಾವ್ ಎಂಬ ಓದುಗಮಿತ್ರರಿಂದ ಇಮೇಲ್ ಬಂತು. ಅದರಲ್ಲಿ ‘ಬಿಟಿಎಂನಲ್ಲಿ ಬಿ ಎಂದರೆ ಬೊಮ್ಮಸಂದ್ರ’ ಅಂತ ಬರೆದಿದ್ದರು. ಅದನ್ನು ಚರ್ಚಾಪಟುಗಳಿಗೆ ತಿಳಿಸಿದೆ. ಏನು ಮಾಯೆಯೋ ಏನೋ ಎಲ್ಲರೂ ಮೌನಸಮ್ಮತಿಯಿತ್ತರು. ವಿವಾದ ಇತ್ಯರ್ಥ ಪುಣ್ಯಫಲದಲ್ಲಿ ಅರ್ಧಭಾಗ ತನಗೂ (‘ಬೊಮ್ಮ’ನಹಳ್ಳಿ ಎಂದದ್ದಕ್ಕೆ), ಉಳಿದರ್ಧ ಭಾಗ ಸುಧೀಂದ್ರಗೂ (ಬೈರ‘ಸಂದ್ರ’ ಎಂದದ್ದಕ್ಕೆ) ಸೇರಬೇಕು ಎಂದು ಷರಾ ಬರೆದರು ನಾಗೇಶ ಹೆಗಡೆ. ಜತೆಯಲ್ಲೇ ‘ಬೊಮ್ಮ ನಿಂಗೆ ಜೋಡುಸ್ತೀವಿ ಸಂದ್ರ ಮುಟ್ಟಿದ ಕೈನ...’ ಅಂತ ಒಂದು ಹೊಸ ರತ್ನನ್ ಪದ. ಇವತ್ತು ಅಂಕಣದ ತಲೆಬರಹವಾಗಿ ಅದು ರಾರಾಜಿಸಿರುವುದರ ಹಿಂದಿನ ಕಥೆ ಇದು. ಈಗ ನನ್ನ ಚಿಂತೆಯೇನೆಂದರೆ ನಾಳೆ ಎಂ.ಜಿ.ರೋಡ್ನ ಅವಸ್ಥೆಯೂ ಹೀಗೇ ಆದರೆ? ಎಂ ಅಂದರೆ ಮಹಾತ್ಮಾ ಅಲ್ಲ ‘ಮೇಡಂ’ ಅಂತ ಯಾರಾದ್ರೂ ಹೇಳಿದ್ರೆ!? ಹೇ ರಾಮ್! ಸಾಕಪ್ಪಾ ಈ ಇನಿಶಿಯಲ್ಸ್ ಸಹವಾಸ. ಕಳೆದವಾರ ‘ಚೆಲುವಗನ್ನಡದಲ್ಲಿ ಚಿತ್ರಕಾವ್ಯ’ ಕುರಿತು ಬರೆದಿದ್ದೆನಲ್ಲ? ಹಳಗನ್ನಡವಾದ್ದರಿಂದ ಸುಮಾರಷ್ಟು ಓದುಗರಿಗೆ ಅದನ್ನು ಅರ್ಥಮಾಡಿಕೊಂಡು ಆನಂದಿಸುವುದು ಕಷ್ಟವೇ ಆಗಿರಬಹುದು. ಆದರೆ ಅಮೆರಿಕದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ವಿನಾಯಕ ಕುರುವೇರಿ ಎಂಬ ಹುಡುಗನಿಗೆ ಹಾಗಾಗಲಿಲ್ಲ. ವಿಜಯಕರ್ನಾಟಕ ಇ-ಪೇಪರ್ ಆವೃತ್ತಿ ಪ್ರಕಟವಾಗಿ ಒಂದೆರಡು ತಾಸು ಕಳೆದಿಲ್ಲವೇನೊ ಈತ ಒಂದು ಅದ್ಭುತವಾದ ಕವನವನ್ನು ರಚಿಸಿ ನನಗೆ ಇಮೇಲ್ನಲ್ಲಿ ಕಳಿಸಿದ್ದಾನೆ! ಅದೂ ಅಂತಿಂಥ ರಚನೆಯಲ್ಲ, ಚಕ್ರಬಂಧ! ಸಂಸ್ಕೃತದ ಮಾಘಕವಿ ಮತ್ತು ಕನ್ನಡದ ಶ್ರೀಲಿಂಗರಾಜ ಮುಂತಾದವರಿಗೆ ಸೆಡ್ಡುಹೊಡೆದು ನಿಂತಿದ್ದಾನೆ. ಮೊದಲಿಗೆ ಕಳಿಸಿದ್ದರಲ್ಲಿ ಅಕ್ಷರಗಳ ಲೆಕ್ಕಾಚಾರ ಸ್ವಲ್ಪ ತಪ್ಪಿದ್ದರೂ ಅದನ್ನು ತೋರಿಸಿದಾಗ ತತ್ಕ್ಷಣದಲ್ಲೇ ರಿಪೇರಿಮಾಡಿ ಮತ್ತೆ ಕಳಿಸಿದ್ದಾನೆ ಮೇಧಾವಿ! ಕವನವನ್ನು ನೀವೂ ಒಮ್ಮೆ ಓದಿ: ಸಾಮವಿದುವೇ ಶಕ್ರನುಡಿ ಮಧುಭಾಮಿನೀ ಚಿತ್ತಕಮಗ ಕಾವ್ಯನಾಗರಿ ಸಂಬಂಧಸುಮಗಂಧದಂಕಿತದೂಂಕು ಮೋದ ಬಾಳಿಯದರಲಿ ಧರಣಿಮಣಿ ನುಡಿಚಂಚಲರುರ್ಕನು ನುಸಿದು ಸಾವಿರ ಕಾಲಕು ಬಾಳಲಿಂಗನ್ನಡದ ಹಾಲ್ಜೇನು. ಸರಳಗನ್ನಡದಲ್ಲಿ ಇದರ ಅರ್ಥ- “ಮಧು ಭಾಮಿನಿಯಂತಿರುವ, ಚಿತ್ತಕ್ಕೆ ಸಂಭ್ರಮ(ಅಮಗ) ಕೊಡುವ, ದೇವರ ನುಡಿಯಾದ(ಶಕ್ರನುಡಿ) ಇದುವೇ(ಕನ್ನಡವೇ) ನಮಗೆ ಸಾಮ(ಗುನುಗುನಿಸಲಾಗುವ ಸರಳ ವೇದ). ಸಂಸ್ಕೃತವು ದೇವನಾಗರಿ(ದೇವರ ನಗರಕ್ಕೆ ಸೀಮಿತವಾದದ್ದು) ಆದರೆ ನಮ್ಮದು ಅತ್ಯುಚ್ಚ ಕವಿಪರಂಪರೆ ಹೊಂದಿರುವ (‘ಏಳು ಜ್ಞಾನಪೀಠಗಳನ್ನು ಪಡೆದ’ ಎಂಬ ಕ್ಲೀಷೆಯ ಮಾತನ್ನೂ ಕಾಲರ್ ಎತ್ತಿ ಹೇಳೋಣವಂತೆ) ಕಾವ್ಯನಾಗರಿ. ಸಂಬಂಧಗಳೆಂಬ ಹೂವಿನ ಗಂಧ ಮೆತ್ತಿಕೊಂಡಿರುವ ಈ ಕನ್ನಡದ ಧ್ಯಾನವು(ಊಂಕು) ನಮಗೆ ಮೋದ(ಸಂತೋಷಕರ). ನುಡಿಚಂಚಲರ(ಕನ್ನಡಿಗರಾಗಿದ್ದೂ ಕನ್ನಡ ಮಾತಾಡದೆ, ಬಾರದ ಭಾಷೆಯ ಬಡಬಡಾಯಿಸುವವರ) ಜಂಭವನ್ನು(ಉರ್ಕನ್ನು) ತೂತುಮಾಡಿ(ನುಸಿದು), ಭೂಮಿಗೆ ಮಣಿಯಂತಿರುವ(ಧರಣಿಮಣಿ) ಇಂಪು ಕನ್ನಡದ(ಇಂಗನ್ನಡದ) ಹಾಲ್ಜೇನು ಸಾವಿರ ಕಾಲಕ್ಕೂ ಬಾಳಲಿ.” ಆಹಾ! ಎಂಥ ಸುಂದರ ಚಿಂತನೆ, ಎಷ್ಟು ಸೊಗಸಾದ ಬಣ್ಣನೆ! ಇದೊಂದು ಚಕ್ರಬಂಧ ರಚನೆ ಎಂದೆನಲ್ಲಾ, ಚಕ್ರದ ಒಳಚಕ್ರಗಳಲ್ಲಿ ಪ್ರದಕ್ಷಿಣಾಕಾರ ಸುರುಳಿಯಲ್ಲಿ ‘ವಿನಾಯಕ ಕುರುವೇರಿ ರಚಿತ ಚಕ್ರಬಂಧಮಿದಂಡಿ’ ಎಂಬ ೧೮ ಅಕ್ಷರಗಳ ವಾಕ್ಯ ಗೋಚರಿಸುತ್ತದೆ. ಇದೊಂದು ಭಾಷಾಚಿತ್ರ ಕೂಡ! ತ್ರಿಭಾಷಾ ಸಂಗಮ. ‘ವಿನಾಯಕ ಕುರುವೇರಿ ರಚಿತ ಚಕ್ರಬಂಧ’ ಎಂಬಲ್ಲಿಗೇ ನಿಲ್ಲಿಸಿದರೆ ಕನ್ನಡದ ವಾಕ್ಯ. ‘ಚಕ್ರಬಂಧಮಿದಂ’ ಎಂದರೆ ಸಂಸ್ಕೃತವಾಗುತ್ತದೆ. ‘ಚಕ್ರಬಂಧಮಿದಂಡಿ’ ಎಂದು ಓದಿದರೆ ಗೌರವದಿಂದ ತೆಲುಗಿನಲ್ಲಿ ಹೇಳಿದಂತಾಗುತ್ತದೆ! ಮಂಗಳೂರಿನ ಹುಡುಗ ವಿನಾಯಕ ಕುರುವೇರಿ ( vinayak dot kuruveri at gmail dot com ) , ಮೈಸೂರಲ್ಲಿ ಎಂಜಿನಿಯರಿಂಗ್ ಓದಿ, ಸ್ವಂತ ಇಚ್ಛೆಯಿಂದ ಕನ್ನಡ ಎಂ.ಎ ಕೂಡ ಮಾಡಿ, ಈಗ ಇನ್ಫೊಸಿಸ್ನಲ್ಲಿ ಉದ್ಯೋಗಿಯಾಗಿರುವ ಪ್ರತಿಭಾವಂತ. ದಯವಿಟ್ಟು ನೀವು ಒಮ್ಮೆ ಪೇಪರ್ ಕೆಳಗಿಟ್ಟು ಜೋರಾಗಿ ಚಪ್ಪಾಳೆತಟ್ಟಿ ಕುರುವೇರಿಯ ಕಾವ್ಯಶಕ್ತಿಯನ್ನು ಕೊಂಡಾಡಿ. (ಕೆಲವು ‘ಎಂಸಿ’ಗಳಿಗೆ ಅದೊಂದು ಚಟ, ಪ್ರೇಕ್ಷಕರಿಂದ ಪದೇಪದೆ ಚಪ್ಪಾಳೆ ಡಿಮ್ಯಾಂಡ್ ಮಾಡೋದು. ಹಾಗೆ ಮಾಡಿದೆನೇ ಇಲ್ಲಿ ನಾನೂ?) ಇನ್ನು, ಪರಾಗಸ್ಪರ್ಶದ ಈವರ್ಷದ ವಿವಿಧ ಲೇಖನಗಳಲ್ಲಿ ನುಸುಳಿದ್ದ ಕೆಲ ತಪ್ಪುಗಳು, ಅರೆಮಾಹಿತಿ, ಮತ್ತು ತಿದ್ದುಪಡಿಗಳು ಹೀಗಿವೆ. ‘ಅನುರಾಗದ ರಂಧನ...’ (ಜ.೧೦) ಲೇಖನದಲ್ಲಿ ಕುಂತಿ ಪಂಚಪಾಂಡವರಿಗೆ ಭಿಕ್ಷಾನ್ನ ಹಂಚಿಕೊಡುತ್ತಿದ್ದದ್ದು ವಿರಾಟ್ಪರ್ವದಲ್ಲಿ ಅಂತಿತ್ತು. ಅದು ಆದಿಪರ್ವದಲ್ಲಿ ಆಗಬೇಕು. ‘ಅಂಧಕಾರದ ಅಚ್ಚರಿ...’ (ಏ.೨೫)ಯಲ್ಲಿ ಕತ್ತಲೆಯ ಭಯ ಕ್ಲೌಸ್ಟ್ರೊಫೊಬಿಯಾ ಅಂತಿತ್ತು. ಅದು ನಿಕ್ಟೊಫೊಬಿಯಾ ಅಥವಾ ಲಿಗೊಫೊಬಿಯಾ ಆಗಬೇಕು. ಕ್ಲೌಸ್ಟ್ರೊಫೊಬಿಯಾ ಎಂದರೆ ಇಕ್ಕಟ್ಟಿನ ಸ್ಥಳಗಳ ಹೆದರಿಕೆ. ‘ಕಟಪಯ ಸೂತ್ರ’ದಲ್ಲಿ (ಆ.೮) ಸಂಯುಕ್ತಾಕ್ಷರದಲ್ಲಿ ಎರಡನೆಯ ವ್ಯಂಜನ (ಷ‘ಣ್ಮು’ಖದಲ್ಲಿ ಣ ಅಲ್ಲ ಮ)ಪರಿಗಣಿಸಬೇಕು ಅಂತಿತ್ತು. ನಿಜ, ಆದರೆ ಆ ಎರಡನೇ ವ್ಯಂಜನವು ‘ಯ’ವರ್ಗದಲ್ಲಿದ್ದರೆ (ಅಂದರೆ ಯ, ರ, ಲ, ವ, ಶ, ಷ, ಸ, ಹ ಪೈಕಿ ಆಗಿದ್ದರೆ) ಆಗ ಮೊದಲನೇ ವ್ಯಂಜನವನ್ನೇ (ಚ‘ಕ್ರ’ವಾಕದಲ್ಲಿ ರ ಅಲ್ಲ ಕ) ತೆಗೆದುಕೊಳ್ಳಬೇಕು. ‘ಉಪ್ಪು...’ ಹರಟೆಯಲ್ಲಿ (ಆ.೧೫) ಬೆಂಗಳೂರಿನ ಉಪ್ಪಾರಪೇಟೆಯ ಉಲ್ಲೇಖ ಬೇಡಾಗಿತ್ತು. ಅದಕ್ಕೂ ಉಪ್ಪಿಗೂ ಏನೂ ಸಂಬಂಧವಿಲ್ಲ. ‘ವಿಮಾನ ಎಳೆಯಿರಿ...’ (ಸೆ.೨೬)ದಲ್ಲಿ ‘ದೈಹಿಕ, ಮಾನಸಿಕ ನ್ಯೂನತೆಗಳುಳ್ಳ ಕ್ರೀಡಾಳುಗಳಿಗೋಸ್ಕರ ಸ್ಪೆಷಲ್ ಒಲಿಂಪಿಕ್ಸ್’ ಅಂತಿತ್ತು. ದೈಹಿಕ ನ್ಯೂನತೆಯುಳ್ಳವರಿಗೋಸ್ಕರ ನಡೆಯುವುದು ‘ಪಾರಾಲಿಂಪಿಕ್ಸ್’; ಮಾನಸಿಕ ಅಸ್ವಸ್ಥರಿಗಾಗಿ ನಡೆಯುವುದು ಸ್ಪೆಷಲ್ ಒಲಿಂಪಿಕ್ಸ್. ‘ಬಟ್ಟೆ ಒಗೆಯುವ ಸೊಬಗು...’ (ಡಿ.೧೨)ದಲ್ಲಿ ಆಂಡ್ರೆ ಅಗಾಸಿ ಅಮೆರಿಕದ ಖ್ಯಾತ ಟೆನ್ನಿಸ್ ಆಟಗಾರ್ತಿ ಅಂತಿತ್ತು. ಆಟಗಾರ ಎಂದಾಗಬೇಕು. ತಪ್ಪುಗಳನ್ನು ಹುಡುಕಿಕೊಟ್ಟವರಿಗೆ, ತಿದ್ದುಪಡಿಗಳನ್ನು ಸೂಚಿಸಿದವರಿಗೆ ಧನ್ಯವಾದಗಳು. ಅಂಕಣಕ್ಕೆ ಪ್ರತಿಕ್ರಿಯೆಯಾಗಿ ಬರುವ ಓಲೆಗಳಲ್ಲಿ ‘ಲೇಖನ ಚೆನ್ನಾಗಿತ್ತು...’ ಎಂಬ ಧಾಟಿಯವು ಬಹಳಷ್ಟಿರುತ್ತವೆ, ಒಳ್ಳೆಯದೇ. ಆದರೆ ಅದಕ್ಕಿಂತ ಮಿಗಿಲಾದ ಖುಶಿಯಂಶಗಳೂ ಆ ಪತ್ರಗಳಲ್ಲಿರುತ್ತವೆ. ಮೂರ್ನಾಲ್ಕು ಸಾಲುಗಳೇ ಆದರೂ ಅವು ಜೀವಂತಿಕೆ-ಜೀವನಪ್ರೀತಿಯ ಸೆಲೆಗಳಾಗಿರುತ್ತವೆ. ಅವು ಕಣ್ಮುಂದೆ ತರುವ ಚಿತ್ರಣಗಳು ಚಂದವಿರುತ್ತವೆ. ಒಂಥರ ರೀಡರ್ಸ್ ಡೈಜೆಸ್ಟ್ನ Life's like that ಅಂಕಣದ, ಕಸ್ತೂರಿಯ ‘ಇದುವೇ ಜೀವ ಇದು ಜೀವನ’ ಅಂಕಣದ ಛಾಯೆ ಆ ಪುಟ್ಟ ಬರಹಗಳಲ್ಲಿರುತ್ತದೆ. ಪಲ್ಸ್ ತಿಳಿಯಲು ಕೆಲವು ಸ್ಯಾಂಪಲ್ಸ್- ಗಸಗಸೆ ತಿಂದು ಅಮಲೇರಿ ಪೇಚಾಡಿದ ಸ್ವಾನುಭವ ಕಥನ (ಮೈಸೂರಿನಿಂದ ರೇಖಾ ಮೂಡಬಿದ್ರಿ), ಡ್ಯಾಶ್ಬೋರ್ಡ್ ಗಣಪನಿಗೆ ಲಂಚದ ಆಮಿಷ ತೋರಿಸಿ ಪೂಜೆ ಸಲ್ಲಿಸುವ ತನ್ನ ವಾರಗಿತ್ತಿಯ ವೈಖರಿ (ಧಾರವಾಡದಿಂದ ಗೌರಿ ಹಿರೇಮಠ), ಮಾಲ್ಗಳಿಗಿಂತ ತಳ್ಳುಗಾಡಿಯವನಿಂದಲೇ ಹಣ್ಣು-ತರಕಾರಿ ಕೊಳ್ಳುವುದರಲ್ಲಿನ ಮಾನವೀಯ ಅಂಶಗಳ ಬಣ್ಣನೆ (ಬೆಂಗಳೂರಿನಿಂದ ಜಯಶ್ರೀ ಟಿ ಎಸ್), ಅಮೆರಿಕದ ಸ್ಕೂಲ್ನಲ್ಲಿ ಪೇರೆಂಟ್ಸ್ ಮೀಟಿಂಗ್ನಲ್ಲಿ ಉದ್ದಿನವಡೆ ಹಂಚಿ ಮಿಂಚಿದ ಅನುಭವ (ಫ್ಲೋರಿಡಾದಿಂದ ಆಶಾ ಶೆಟ್ಟಿ), ಬಾಲ್ಕನಿಯಲ್ಲಿಟ್ಟ ಕಣಗಿಲೆ ಹೂವಿನ ಗಿಡಕ್ಕೆ ಬರುವ ಪುಟ್ಟ ನೀಲಿ ಹಕ್ಕಿಯ ಚಿಲಿಪಿಲಿ ಸೊಬಗು (ಹೈದರಾಬಾದ್ನಿಂದ ಭಾಗ್ಯ ಸುಭಾಶ್), ವಿದ್ಯುತ್ ತಂತಿಗೆ ಸಿಕ್ಕಿಬಿದ್ದು ವಿಲವಿಲ ಒದ್ದಾಡಿದ ಹಕ್ಕಿಯನ್ನು ಬದುಕಿಸಲಾಗದ ಬೇಸರ (ಉಡುಪಿಯಿಂದ ನೀರಜಾ ಹೊಳ್ಳ), ‘ಉಪ್ಪಿನ ಕುರಿತು ತಪ್ಪದೇ ಓದಿ ಒಪ್ಪವಾದ ಉತ್ತರ ಕೊಡದಿದ್ದರೆ ಪರಮಾತ್ಮ ಒ(ಅ)ಪ್ಪುವನೇ?’ ಎಂಬಂಥ ಶಬ್ದಸರಸ (ಶಿಕಾಗೊದಿಂದ ಅನುಪಮಾ ಮಂಗಳವೇಢೆ), ‘ಚಂದಮಾಮ ಹಳೇಸಂಚಿಕೆಗಳನ್ನು ಕಂಪ್ಯೂಟರ್ ಪರದೆಯ ಮೇಲೆ ನೋಡಿ ನಾನು ದಳದಳಾಂತ ಕಣ್ಣೀರು ಸುರಿಸಿದೆ’ ಎಂಬ ನಿ‘ವೇದನೆ’ (ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್), ‘ಪಾನಕದ ಲೋಟ ಟೀಪಾಯ್ ಮೇಲೆ ಇಡುತ್ತಿದ್ದೇನೆ ಅಂತ ಇಟ್ಟರೆ, ಅದು ತಪ್ಪಿ ಕೆಳಗೆ ಬಿದ್ದು ಅದರಲ್ಲಿದ್ದ ಪಾನಕದ ಹನಿಗಳು ರಕ್ತ ಬೀಜಾಸುರನ ವಂಶದವರಂತೆ ಸಾವಿರ ಹನಿಗಳಾಗಿ ಸಿಡಿದು ನೆಲದ ಮೇಲೆ ಮಾತ್ರವಲ್ಲದೆ ಹತ್ತಿರವಿದ್ದ ಕುರ್ಚಿ, ಪುಸ್ತಕ, ಒಳಗಿಡಬೇಕೆಂದು ಮಡಚಿ ಇಟ್ಟಿದ್ದ ಬಟ್ಟೆ, ಇನ್ನೂ ಎಲ್ಲಾ ಕಡೆ ತಾಗಿ... ಅಬ್ಬಬ್ಬಾ ಇದೆಲ್ಲ ಮರ್ಫಿ ಮಹಾನುಭಾವನದೇ ಕಾರ್ಬಾರು, ನನ್ನ ತಪ್ಪಿಲ್ಲ’ ಎಂಬ ನಿಟ್ಟುಸಿರು (ಮಂಗಳೂರಿನಿಂದ ಅನಿತಾ ನರೇಶ್), ‘ಬದನೆಜಡೆ ಕಟ್ಟಿ ಹಳದಿ ಫ್ರಾಕ್ ತೊಟ್ಟು ಪುಷ್ಪಳೊಡನೆ ಸೈಕಲ್ ಕಲಿತ, ಅಥವಾ, ಪಪ್ಪನ ನೇಣು ಪಿಡಿದು ಮಾರ್ಕೆಟ್ಟಿನ ಮುಂಭಾಗದಲ್ಲಿ ಅದುಬೇಕು ಇದುಬೇಕು ಎಂದು ಪೀಡಿಸಿದ ಕ್ಷಣಗಳ ಬಾಲ್ಯ ಮರಳಿ ಸಿಗಲಿ’ ಎಂಬ ತಹತಹ (ಬೆಂಗಳೂರಿನಿಂದ ಅಂಜಲಿ ರಾಮಣ್ಣ), ‘ಬೆಣ್ಣಿಹಳ್ಳದಾಗ ಬಟ್ಟಿ ಒಗದದ್ದು ನೆನ್ಪಾತು. ಅಲ್ಲಿ ಒಂದ ಮಜಾ ಅಂದ್ರ ಆ ಹಳ್ಳ ಊರಿಗ ಭಾಳ ಸಮೀಪ ಇತ್ತು. ಭಾಳ ಮಂದಿ ಬಟ್ಟಿ ಒಗ್ಯಾಕ ಬರ್ತಿದ್ರು. ಹಂಗಾಗಿ ಒಗೆಯುವ ಕಲ್ಲಿಗೆ ಪಾಳಿ ಇರ್ತಿತ್ತು. ಅದಕ್ಕ ನಾವು ಸಣ್ಣ ಒಗಿಯುವ ಕಲ್ಲನ್ನ ತಲೀಮ್ಯಾಲೆ ಹೊತಗೊಂಡು ಹೋಗಿ ಬಟ್ಟಿ ಒಕ್ಕೊಂಡು ಬರ್ತಿದ್ದೆವು...’ ಎಂಬ ಒದ್ದೆ ನೆನಪು (ಮಂಗಳೂರಿನಿಂದ ವಿಜಯಲಕ್ಷ್ಮೀ ಜಾಬಿ), ‘ಬಾಳಿನ ಸತ್ಯವ ಸಾರುವ ತತ್ತ್ವವ ಅನುದಿನ ನೀ ತಿಳಿ ನೀತಿಯಲಿ; ಸಕಲಾಭರಣದ ತೇಜವ ತರುವುದು ಉತ್ತಮ ನಡೆನುಡಿ ಬಾಳಿನಲಿ’ ಎಂಬ ಕಗ್ಗದಂಥ ಹಿತವಚನ (ನಾರ್ತ್ ಕೆರೊಲಿನಾದಿಂದ ಸವಿತಾ ರವಿಶಂಕರ್)- ಒಂದೊಂದೂ ಪತ್ರವೂ ಹೃದಯಸ್ಪರ್ಶಿ. ಥ್ಯಾಂಕ್ಯೂ ವೆರಿ ಮಚ್!
ಇದು, ಎರಡುಸಾವಿರದ ಹತ್ತು ಹೊರಳುವ ಹೊತ್ತು ಸ್ನೇಹದ ಚಿಪ್ಪಿನಲ್ಲರಳಿದ ಸ್ವಾತಿಮುತ್ತು. ಮುಂದೆ ಎರಡು ಸಾವಿರದ ಹನ್ನೊಂದು- ಶುರುವಾಗಲಿ ಅಕ್ಷರಸ್ನೇಹಗಾಥೆಯ ಅಧ್ಯಾಯ ಇನ್ನೊಂದು!
========
ಈ ಲೇಖನವನ್ನು ವಿಜಯ ಕರ್ನಾಟಕ ಇ-ಪೇಪರ್ನಲ್ಲಿ ನೀವು ಇಲ್ಲಿ ಓದಬಹುದು.
"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125

