ಪದ-ಶ್ರಾವ್ಯ

ಈಗ ಆಡಿಯೋ ಟಚ್!

4
Feb 2012
Agnimeele Purohitam
Posted in DefaultTag by sjoshi at 5:02 pm

ದಿನಾಂಕ  05 ಫೆಬ್ರವರಿ 2012ರ ಸಂಚಿಕೆ...

ಅಗ್ನಿಮೀಳೇ ಪುರೋಹಿತಂ...

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ತ್ತೊಂಬತ್ತನೆಯ ಶತಮಾನದಲ್ಲಿ ಮಹತ್ವದ ಸಂಶೋಧನೆಗಳಿಂದ ಮನುಕುಲದ ಯಶೋಗಾಥೆಗೆ ಹೊಸ ಅಧ್ಯಾಯಗಳನ್ನು ಸೇರಿಸಿದ ವಿಜ್ಞಾನಿಗಳಲ್ಲಿ ಥಾಮಸ್ ಆಲ್ವಾ ಎಡಿಸನ್ ಅತಿ ಪ್ರಮುಖ ಹೆಸರು. ಸಾವಿರಕ್ಕೂ ಹೆಚ್ಚು ಪೇಟಂಟ್‌ಗಳ ಸರದಾರ. ಇವತ್ತು ನಾವು ವಿದ್ಯುದ್ದೀಪದ ಸ್ವಿಚ್ ಆನ್ ಮಾಡಿದಾಗಲೆಲ್ಲ ಎಡಿಸನ್ ಸ್ಮರಣೆ ನಮಗರಿವಿಲ್ಲದಂತೆಯೇ ಆಗಿರುತ್ತದೆ. ಚಲನಚಿತ್ರ ಬಿಂಬಗ್ರಾಹಿ (ಮೋಷನ್ ಪಿಕ್ಚರ್ ಕ್ಯಾಮೆರಾ) ಸಹ ಎಡಿಸನ್‌ನದೇ ಕೊಡುಗೆ. ಹಾಗೆಯೇ ಧ್ವನಿಮುದ್ರಕ ಯಂತ್ರ (ಫೋನೊಗ್ರಾಫ್) ಕೂಡ. 1877ರಲ್ಲಿ ಅದರ ಆವಿಷ್ಕಾರವಾದಾಗಂತೂ ಜನ ಎಷ್ಟು ನಿಬ್ಬೆರಗಾಗಿದ್ದರೆಂದರೆ ಎಡಿಸನ್ ಒಬ್ಬ ಮಾಂತ್ರಿಕ ಶಕ್ತಿಯುಳ್ಳ ವ್ಯಕ್ತಿ ಎಂದೇ ನಂಬಲಾಗಿತ್ತು.

gphone.jpg

ಆರಂಭದ ಆವೃತ್ತಿಯಲ್ಲಿ ಎಡಿಸನ್‌ನ ಫೋನೊಗ್ರಾಫ್ ಯಂತ್ರವು ಸಿಲಿಂಡರ್ ಆಕೃತಿಯ ರಚನೆಯನ್ನು ಹೊಂದಿತ್ತು. ಆಮೇಲಷ್ಟೇ ತಟ್ಟೆ(ಡಿಸ್ಕ್)ಗಳ ಮೇಲೆ ಧ್ವನಿಮುದ್ರಣ ಶುರುವಾದದ್ದು. ಎಡಿಸನ್ ಮೊಟ್ಟಮೊದಲಿಗೆ ರೆಕಾರ್ಡ್ ಮಾಡಿದ್ದು ತನ್ನದೇ ಧ್ವನಿಯಲ್ಲಿ ‘ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್...’ ನರ್ಸರಿ ರೈಮ್ ಅಥವಾ ಶಿಶುಗೀತೆಯ ಸಾಲುಗಳನ್ನು. ಅದೇನಿದ್ದರೂ ಪ್ರಯೋಗಕ್ಕಷ್ಟೇ. ಏಕೆಂದರೆ ಫೋನೊಗ್ರಾಫ್ ಆವಿಷ್ಕಾರದ ಹಿಂದೆ ಎಡಿಸನ್‌ಗಿದ್ದ ಮುಖ್ಯ ಉದ್ದೇಶ ಮನರಂಜನೆಯದಲ್ಲ. ಬದಲಿಗೆ ಆ ಕಾಲದ ಪ್ರಾಜ್ಞರ, ಪ್ರಖ್ಯಾತರ, ಸಮಾಜದ ಗಣ್ಯರ ಧ್ವನಿಯನ್ನು ಮುದ್ರಿಸಿಟ್ಟುಕೊಂಡು ಅದು ಮುಂದಿನ ತಲೆಮಾರಿಗೂ ಸುಲಭವಾಗಿ ಸಿಗುವಂತೆ ಮಾಡುವುದು.

ಹೀಗೆ ನುಡಿಮುತ್ತುಗಳಿಗಾಗಿ, ಉಪದೇಶಾಮೃತಗಳಿಗಾಗಿ ವಿದ್ವಾಂಸರ ಹುಡುಕಾಟದಲ್ಲಿದ್ದಾಗ ಎಡಿಸನ್‌ಗೆ ನೆನಪಾದವರೇ ಜರ್ಮನಿಯ ಪ್ರಖ್ಯಾತ ವಿದ್ವಾಂಸ ಮ್ಯಾಕ್ಸ್‌ಮುಲ್ಲರ್. ಹತ್ತೊಂಬತ್ತನೆಯ ಶತಮಾನದಲ್ಲಿ ಯುರೋಪ್‌ನಲ್ಲಿ ಬಾಳಿದ ಪ್ರಖರ ವರ್ಚಸ್ಸಿನ ಪ್ರಕಾಂಡ ಪಂಡಿತ. ಅವರಿಗೆ ಎಡಿಸನ್ ಪತ್ರ ಬರೆದು ತನ್ನ ಫೋನೊಗ್ರಾಫ್ ಆವಿಷ್ಕಾರದ ಬಗ್ಗೆ ವಿವರಿಸಿ, ತಾನು ಅವರನ್ನು ಒಮ್ಮೆ ಭೇಟಿಯಾಗಲು ಇಚ್ಛಿಸುವುದಾಗಿ ಕೋರಿಕೆ ಸಲ್ಲಿಸಿದ. ಎಡಿಸನ್ ಬಗ್ಗೆ ಆಗಲೇ ಸಾಕಷ್ಟು ತಿಳಿದುಕೊಂಡಿದ್ದ ಮ್ಯಾಕ್ಸ್‌ಮುಲ್ಲರ್ ಸಂತೋಷದಿಂದ ಒಪ್ಪಿದರು. ಅದೇ ವರ್ಷ ಲಂಡನ್‌ನಲ್ಲಿ ವಿದ್ವಾಂಸರ ಸಭೆಯೊಂದರಲ್ಲಿ ತಾನು ಭಾಗವಹಿಸುತ್ತಿದ್ದು ಅಲ್ಲಿಗೆ ಬಂದು ಭೇಟಿಯಾಗುವಂತೆ ಎಡಿಸನ್‌ಗೆ ತಿಳಿಸಿದರು.

ಆಗಿನ್ನೂ ಹತ್ತೊಂಬತ್ತನೇ ಶತಮಾನ. ವಿಮಾನಯಾನ ಆರಂಭವಾಗಿರಲಿಲ್ಲವಲ್ಲ? ವಿದೇಶಪ್ರಯಾಣ ಏನಿದ್ದರೂ ಹಡಗಿನ ಮೂಲಕವೇ. ಅಮೆರಿಕದಿಂದ ಯುರೋಪ್‌ಗೆ ಹೋಗುವ ಪ್ಯಾಸೆಂಜರ್ ಹಡಗಿನಲ್ಲಿ ಟಿಕೇಟ್ ಬುಕ್ ಮಾಡಿ ಎಡಿಸನ್ ತನ್ನ ಪ್ರವಾಸವನ್ನು ನಿಗದಿಪಡಿಸಿಕೊಂಡ. ಫೋನೊಗ್ರಾಫ್ ಮತ್ತಿತರ ಪ್ರಯೋಗ ಸಲಕರಣೆಗಳನ್ನು ಪೇರಿಸಿಕೊಂಡು ಹೊರಟ. ಇಂಗ್ಲೇಂಡ್‌ನಲ್ಲಿ ಅವನಿಗೆ ಭವ್ಯವಾದ ಸ್ವಾಗತ ಸಿಕ್ಕಿತು. ಮ್ಯಾಕ್ಸ್‌ಮುಲ್ಲರ್ ಹೇಳಿದ್ದ ವಿದ್ವತ್‌ಸಭೆ ನಡೆದದ್ದು ಲಂಡನ್‌ನಲ್ಲಿ ಫ್ರೆಡೆರಿಕ್ ಮೌಲ್ಟನ್ ಎಂಬಾತನ ನಿವಾಸದಲ್ಲಿ. ಅಲ್ಲಿಗೆ ಬಿಜಯಂಗೈದ ತರುಣ ವಿಜ್ಞಾನಿ ಎಡಿಸನ್. ವಿದ್ವತ್‌ಸಭೆಯಲ್ಲಿ ಅವನನ್ನು ಪರಿಚಯಿಸಲಾಯ್ತು. ಆಮೇಲೆ ಮ್ಯಾಕ್ಸ್‌ಮುಲ್ಲರ್‌ರನ್ನು ವೇದಿಕೆಯ ಮೇಲಕ್ಕೆ ಕರೆದ ಎಡಿಸನ್ ತನ್ನ ಫೋನೊಗ್ರಾಫ್ ಯಂತ್ರದ ಕಿವಿಯಲ್ಲಿ ಏನನ್ನಾದರೂ ಮಾತನಾಡುವಂತೆ ಅವರನ್ನು ಕೇಳಿಕೊಂಡ. ಮ್ಯಾಕ್ಸ್‌ಮುಲ್ಲರ್ ಹಾಗೆಯೇ ಮಾಡಿದರು. ಅದನ್ನು ರೆಕಾರ್ಡ್ ಮಾಡಿಕೊಂಡ ಎಡಿಸನ್ ಮಧ್ಯಾಹ್ನದ ನಂತರ ಸಭೆಯಲ್ಲಿ ಅದನ್ನು ಎಲ್ಲರಿಗೂ ಕೇಳಿಸುವುದಾಗಿ ತಿಳಿಸಿ ತನ್ನ ಸಂಚಾರಿ ಪ್ರಯೋಗಾಲಯಕ್ಕೆ ಹಿಂದಿರುಗಿದ. ಮ್ಯಾಕ್ಸ್‌ಮುಲ್ಲರ್ ಮಾತುಗಳು ಧ್ವನಿಮುದ್ರಿತವಾಗಿದ್ದ ಫೋನೋಗ್ರಾಫ್ ಯಂತ್ರದ ಸಿಲಿಂಡರ್‌ಅನ್ನು ಸಂಸ್ಕರಿಸಿದ. ಸಂಜೆ ಸಭೆಯಲ್ಲಿ ಆ ಧ್ವನಿಮುದ್ರಣವನ್ನು ಪ್ಲೇ ಮಾಡಲಾಯಿತು. ಸಭಿಕರೆಲ್ಲ ಅದೇಮೊದಲ ಬಾರಿಗೆ ಫೋನೊಗ್ರಾಫ್‌ನ ಕಾರ್ಯವೈಖರಿಯನ್ನು ನೋಡಿ ಬೆಕ್ಕಸಬೆರಗಾದರು. ಮ್ಯಾಕ್ಸ್‌ಮುಲ್ಲರ್‌ರಂಥ ವಿದ್ವಾಂಸರ ಧ್ವನಿ ಈರೀತಿ ಮುದ್ರಿತವಾಗಿ ಮುಂದಿನ ತಲೆಮಾರಿನವರೂ ಕೇಳುವಂತಾದ್ದನ್ನು ನೋಡಿ ತುಂಬಾ ಖುಷಿಪಟ್ಟರು. ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ವಿಜ್ಞಾನಿ ಎಡಿಸನ್‌ನ ಕಾರ್ಯಕೌಶಲ್ಯವನ್ನು ಕೊಂಡಾಡಿದರು.

ಮತ್ತೆ ವೇದಿಕೆಗೆ ಬಂದ ಮ್ಯಾಕ್ಸ್‌ಮುಲ್ಲರ್ ಸಭೆಯನ್ನುದ್ದೇಶಿಸಿ ಹೇಳಿದರು- “ಬೆಳಿಗ್ಗೆ ನಾನು ಈ ಯಂತ್ರದ ಕಿವಿಯಲ್ಲಿ ಮಾತಾಡಿದ್ದನ್ನು ನೀವು ಕೇಳಿಸಿಕೊಂಡಿದ್ರಿ. ಈಗ ಅದು ನನ್ನ ಧ್ವನಿಯನ್ನು ಯಥಾವತ್ತಾಗಿ ಹೊರಗೆಡಹಿದ್ದನ್ನೂ ಕೇಳಿದಿರಿ. ಬೆಳಿಗ್ಗೆ ನಾನು ಹೇಳಿದ್ದಾಗಲೀ ಈಗ ಈ ಯಂತ್ರ ಹೇಳಿದ್ದಾಗಲೀ ನಿಮಗೇನಾದರೂ ಅರ್ಥವಾಯ್ತೇ?” ಸಭೆಯಲ್ಲಿ ನೀರವ ಮೌನ. ನಿಜಕ್ಕೂ ಮ್ಯಾಕ್ಸ್‌ಮುಲ್ಲರ್ ಏನು ಮಾತಾಡಿದ್ದರೆಂದು ಸಭಿಕರಿಗೆ ಅರ್ಥವಾಗಿರಲಿಲ್ಲ. ಎಡಿಸನ್‌ನ ಯಂತ್ರವೂ ಅದನ್ನೇ ಪುನರುಚ್ಚರಿಸಿದ್ದರಿಂದ ಅದೂ ಅರ್ಥವಾಗಿರಲಿಲ್ಲ ಬಿಡಿ. ಅವರಿಗೆಲ್ಲ ಅದು ಗ್ರೀಕ್ ಏಂಡ್ ಲ್ಯಾಟಿನ್ ಆದಂತಾಯ್ತು ಎನ್ನುವಂತೆಯೂ ಇರಲಿಲ್ಲ. ಏಕೆಂದರೆ ಯುರೋಪ್‌ನ ವಿವಿಧೆಡೆಗಳಿಂದ ಬಂದಿದ್ದ ಆ ವಿದ್ವಾಂಸರಲ್ಲಿ ಅನೇಕರಿಗೆ ಗ್ರೀಕ್ ಅಥವಾ ಲ್ಯಾಟಿನ್ ಭಾಷೆ ಗೊತ್ತಿತ್ತು. ಅಂಥವರೂ ಮ್ಯಾಕ್ಸ್‌ಮುಲ್ಲರ್ ಹೇಳಿದ್ದೇನೆಂದು ಅರಿಯದಾದರು. ಕೊನೆಗೆ ಮ್ಯಾಕ್ಸ್‌ಮುಲ್ಲರ್ ಮಾತು ಮುಂದುವರಿಸಿದರು- “ನಾನು ಆಗ ಮಾತಾಡಿದ್ದ ಭಾಷೆ ಸಂಸ್ಕೃತ! ನಾನು ಹೇಳಿದ್ದು ಋಗ್ವೇದದ ಮೊಟ್ಟಮೊದಲ ಶ್ಲೋಕ- ಅಗ್ನಿಮೀಳೇ ಪುರೋಹಿತಂ... ಯಜ್ಞಸ್ಯ ದೇವಂ ಋತ್ವಿಜಂ... ಹೋತಾರಂ ರತ್ನಧಾತಮಂ... ಇದು ಮನುಕುಲದ ಅತ್ಯಂತ ಪುರಾತನ ಪಠ್ಯವೆನಿಸಿರುವ ವೇದಗಳ ಪೈಕಿ ಮೊದಲನೆಯದಾದ ಋಗ್ವೇದದ ಮೊಟ್ಟಮೊದಲ ಸಾಲು. ಮನುಷ್ಯನ ಧ್ವನಿಯನ್ನು ಸಂಗ್ರಹಿಸಿಡಲು ಎಡಿಸನ್ ಆವಿಷ್ಕರಿಸಿರುವ ಯಂತ್ರದಲ್ಲಿ ನನ್ನ ಧ್ವನಿಯೂ ಮುದ್ರಿತವಾಗಬೇಕೆಂದಾದರೆ ಅದು ವೇದಪಾಠವೇ ಆಗಿರಲಿ ಎಂದುಕೊಂಡು ಉದ್ದೇಶಪೂರ್ವಕವಾಗಿ ಇದನ್ನು ಆಯ್ದುಕೊಂಡೆ!”

‘ದ ಲೈಫ್ ಏಂಡ್ ಲೆಟರ್ಸ್ ಆಫ್ ಮ್ಯಾಕ್ಸ್‌ಮುಲ್ಲರ್’ ಎಂಬ ಪುಸ್ತಕದಲ್ಲಿ ಈ ಘಟನೆಯ ವಿವರಣೆ ಬರುತ್ತದೆ. ಅವತ್ತಿನ ಸಭೆಯಲ್ಲಿ ಪಾಲ್ಗೊಂಡಿದ್ದ ವಿದ್ವಾಂಸ ಮಾನ್‌ಕ್ಯೂರ್ ಕಾನ್ವೆ ಎಂಬಾತನ ಪತ್ರವನ್ನು ಉಲ್ಲೇಖಿಸಿ ಪುಸ್ತಕದಲ್ಲಿ ಹೀಗೆ ಬರೆಯಲಾಗಿದೆ- “ಮ್ಯಾಕ್ಸ್‌ಮುಲ್ಲರ್ ಆ ಸಂಸ್ಕೃತ ಶ್ಲೋಕದ ಅರ್ಥವನ್ನು ಸಭಿಕರಿಗೆ ವಿವರಿಸಿದರು. ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾರವನ್ನು ಕರಗಿಸಿ ಬೆಳಗುವವನೇ ನಿನ್ನೆಡೆಗೆ ಅನುದಿನವೂ ಬರುತ್ತಿದ್ದೇವೆ, ಭಕ್ತಿಯಿಂದ ಮತ್ತು ಕೃತಜ್ಞತಾಭಾವದಿಂದ. ಯಜ್ಞದ ದೈವಿಕ ಪುರೋಹಿತನಾದ ನಿನಗಿದೋ ವಂದನೆ.’ ಮ್ಯಾಕ್ಸ್‌ಮುಲ್ಲರ್ ಮಾತುಗಳನ್ನು ಎಲ್ಲರೂ ತದೇಕಚಿತ್ತದಿಂದ ಕೇಳುತ್ತಿದ್ದರು. ಈ ಶ್ಲೋಕಗಳು ಭರತಭೂಮಿಯಲ್ಲಿ ಸಹಸ್ರಾರು ವರ್ಷಗಳಿಂದಲೂ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಅನೂಚಾನವಾಗಿ ವರ್ಗಾವಣೆಯಾಗುತ್ತ ಬಂದಿವೆ. ಇವತ್ತೀಗ ಎಡಿಸನ್‌ನ ಫೋನೊಗ್ರಾಫ್ ಯಂತ್ರ ಏನು ಚಮತ್ಕಾರವನ್ನು ತೋರಿಸಿದೆಯೋ ವೇದಾಧ್ಯಯನಗೈದ ಭಾರತೀಯರು ಅದನ್ನು, ಅಂದರೆ ಕೇಳಿಸಿಕೊಂಡದ್ದನ್ನು ಸ್ಮೃತಿಪಟಲದಲ್ಲಿ ಸಂಗ್ರಹಿಸಿಟ್ಟು ಬೇಕಾದಾಗ ಪುನರುಚ್ಚರಿಸುವುದನ್ನು, ಶ್ರದ್ಧೆ ಭಯಭಕ್ತಿಗಳಿಂದ ಒಂದು ಪರಂಪರೆಯಾಗಿ ಮಾಡಿಕೊಂಡು ಬಂದಿದ್ದಾರೆ. ವಿಶ್ವಕ್ಕೆಲ್ಲ ಅನ್ವಯವಾಗುವಂಥ ಅಧ್ಯಾತ್ಮ ತತ್ತ್ವಗಳನ್ನು ವೇದಗಳ ರೂಪದಲ್ಲಿ ನೀಡಿದ್ದಾರೆ... ಮ್ಯಾಕ್ಸ್‌ಮುಲ್ಲರ್ ವಿವರಣೆ ಸಾಗುತ್ತಿದ್ದಂತೆ ಸಭಿಕರಿಗೆಲ್ಲ ರೋಮಾಂಚನ. ಮ್ಯಾಕ್ಸ್‌ಮುಲ್ಲರ್ ಕೋರಿಕೆಯ ಮೇರೆಗೆ ‘ಅಗ್ನಿಮೀಳೇ ಪುರೋಹಿತಂ...’ ಧ್ವನಿಮುದ್ರಣವನ್ನು ಮತ್ತೊಮ್ಮೆ ಪ್ಲೇ ಮಾಡಲಾಯಿತು. ಈಗ ಎಡಿಸನ್ ಆದಿಯಾಗಿ ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದ್ದು ಮ್ಯಾಕ್ಸ್‌ಮುಲ್ಲರ್‌ನ ನಿರರ್ಗಳ ವಾಗ್ಝರಿಗೆ. ಅವರು ವಿವರಿಸಿದ ಸನಾತನ ಭಾರತೀಯ ಸಂಸ್ಕೃತಿಯ ಹಿರಿಮೆಗೆ.”

Rigveda.jpg

ಅಮೆರಿಕದ ವಿಜ್ಞಾನಿ ಎಡಿಸನ್ ರಚಿಸಿದ ಫೋನೊಗ್ರಾಫ್ ಯಂತ್ರದಲ್ಲಿ ಜರ್ಮನಿಯ ವಿದ್ವಾಂಸ ಮ್ಯಾಕ್ಸ್‌ಮುಲ್ಲರ್ ಭಾರತದ ವೇದಭಾಗವನ್ನು ಪಠಣ ಮಾಡಿದ ಸತ್ಯಕತೆ ಇದು. ಕೊಲ್ಕೊತ್ತಾದ ರಾಮಕೃಷ್ಣ ಮಿಷನ್‌ನ ಸ್ವಾಮಿ ರಂಗನಾಥಾನಂದರು 2000ದಲ್ಲಿ ಮ್ಯಾಕ್ಸ್‌ಮುಲ್ಲರ್ ಮತ್ತು ಸಮಕಾಲೀನರ ಕುರಿತ ವಿಚಾರಸಂಕಿರಣವೊಂದರಲ್ಲಿ ಮಾಡಿದ ಆಶಯ ಭಾಷಣದಲ್ಲಿಯೂ ಇದು ಪ್ರಸ್ತಾಪವಾಗಿತ್ತಂತೆ. ಹಾಗೆಯೇ ಎಚ್‌ಎಂವಿ ಕಂಪನಿಯು ಹಿಂದೊಮ್ಮೆ ಪ್ರಕಟಿಸಿದ್ದ ಗ್ರಾಮೊಫೋನ್ ರೆಕಾರ್ಡ್‌ಗಳ ಚರಿತ್ರೆಯನ್ನೊಳಗೊಂಡಿದ್ದ ಕರಪತ್ರಗಳಲ್ಲೂ.

ಮ್ಯಾಕ್ಸ್‌ಮುಲ್ಲರ್ ಸನಾತನ ಹಿಂದೂ ಸಂಸ್ಕೃತಿಯನ್ನು, ವೇದೋಪನಿಷತ್ತುಗಳ ಸಾರಸತ್ವವನ್ನು, ಭಗವದ್ಗೀತೆಯ ಭವ್ಯತೆಯನ್ನು, ಸಂಸ್ಕೃತ ಭಾಷೆಯ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾತ್ಮ. ಅವರ ಸಮಕಾಲೀನ ವಿದ್ವಾಂಸರೂ ವಿಜ್ಞಾನಿಗಳೂ ಅದನ್ನು ಸಾದರದಿಂದ ಸ್ವೀಕರಿಸಿದ್ದರು. ಉದಾಹರಣೆಗೆ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ಸ್‌ಟೈನ್ ಸಹ ಭಗವದ್ಗೀತೆಯನ್ನು, ಭಾರತೀಯ ಸಂಸ್ಕೃತಿಯು ಜಗತ್ತಿಗೆ ಹಂಚಿದ ಜ್ಞಾನಸುಧೆಯನ್ನು ಬಹಳವಾಗಿ ಗೌರವವಿಸಿದವನೇ.

ಅವರೆಲ್ಲ ಸನಾತನ ಹಿಂದೂ ಸಂಸ್ಕೃತಿಯನ್ನು ಮೆಚ್ಚಿದರು, ಗೌರವಿಸಿದರು, ಅದರಿಂದ ಪ್ರಭಾವಿತರಾದರು, ಪ್ರಯೋಜನ ಪಡಕೊಂಡರು. ಏಕೆಂದರೆ ಅವರು ಅದನ್ನು ಮನುಕುಲದ ಒಳಿತಿನ ವಿಶಾಲ ದೃಷ್ಟಿಯಿಂದ ನೋಡಿದರು; ಜಾತಿ-ಮತ-ಧರ್ಮಗಳ ರಾಜಕೀಯ ಬಣ್ಣದ ಕನ್ನಡಕದಿಂದಲ್ಲ. ಅವರು ಅದರಲ್ಲಿ ಸಾರ್ವತ್ರಿಕ ಸಾರ್ವಕಾಲಿಕ ಸತ್ಯವನ್ನು ಕಂಡುಕೊಂಡರು; ಸ್ವಾರ್ಥದ ಬೇಳೆಬೇಯಿಸಿಕೊಳ್ಳುವ ಸದವಕಾಶವನ್ನಲ್ಲ. ಆನೋ ಭದ್ರಾಃ ಕೃತವೋಯಂತು ವಿಶ್ವತಃ ಎಂಬುದನ್ನೇ ಅವರು ಪಾಲಿಸಿದರು; ನೈತಿಕ ದಿವಾಳಿತನದ ಢೋಂಗಿ ವಿಚಾರವಾದವನ್ನಲ್ಲ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App