ಪದ-ಶ್ರಾವ್ಯ

ಈಗ ಆಡಿಯೋ ಟಚ್!

14
Jan 2012
Akshathe and Aasheervaada
Posted in DefaultTag by sjoshi at 1:02 pm

ದಿನಾಂಕ  15 ಜನವರಿ 2012ರ ಸಂಚಿಕೆ...

ಆರತಕ್ಷತೆಯ ಅರ್ಥಪೂರ್ಣತೆ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ತ್ತೀಚೆಗೆ ಮದುವೆ ಕರೆಯೋಲೆಗಳಲ್ಲಿ ‘ಆರತಕ್ಷತೆ’ ಎಂಬ ಪದ ಕಾಣಿಸಿಕೊಳ್ಳುವುದು ಕಡಿಮೆ. ಆರತಕ್ಷತೆಯ ಸ್ಥಾನವನ್ನು ರಿಸೆಪ್ಷನ್ ಆಕ್ರಮಿಸಿಕೊಂಡಿರುವುದು ಬಹುಶಃ ಇದಕ್ಕೆ ಕಾರಣ. ಲಗ್ನಪತ್ರಿಕೆ ಇಂಗ್ಲಿಷ್‌ನಲ್ಲಿದ್ದರೆ ಬಿಡಿ, ಕನ್ನಡದಲ್ಲಿದ್ದರೂ ‘ಮುಹೂರ್ತಮ್’, ‘ರಿಸೆಪ್ಷನ್’ಗಳೇ ರಾರಾಜಿಸುತ್ತವೆ. ಆರತಕ್ಷತೆಯಂಥ ಆತ್ಮೀಯ ಪದ ಅಲ್ಲಿ ನಮಗೆ ಕಾಣಸಿಗುವುದಿಲ್ಲ. ಆರತಕ್ಷತೆಯ ಕ್ರಮವೇ ಇರುವುದಿಲ್ಲವೆಂದ ಮೇಲೆ ಕರೆಯೋಲೆಯಲ್ಲಾದರೂ ಏಕಿರಬೇಕು? ವಧು-ವರರನ್ನು ಹಸೆಮಣೆಯ ಮೇಲೆ ಕೂರಿಸಿ ಸುಮಂಗಲಿಯರು ಆರತಿ ಬೆಳಗಿ ಸೋಬಾನೆ ಪದ ಹಾಡಿ ಅಕ್ಷತೆ ಕಾಳು ಹಾಕಿ ಶುಭಾಶೀರ್ವಚನ ಮಾಡುವ ಪದ್ಧತಿ ಈಗ ಹಳೇಕಾಲದ್ದೆನಿಸುತ್ತದೆ. ಅದಕ್ಕಿಂತ, ಸೂಟು-ಬೂಟು ತೊಟ್ಟ ವರ ಮತ್ತು ಸಿನೆಮಾ ತಾರೆಯನ್ನು ನಾಚಿಸುವಷ್ಟು ಮೇಕಪ್‌ಗೊಂಡ ವಧು ಸಿಂಹಾಸನದಂತಿರುವ ಎರಡು ಕುರ್ಚಿಗಳ ಮುಂದೆ ನಿಂತು, ಇಷ್ಟಮಿತ್ರ ಬಂಧುಬಾಂಧವರೆಲ್ಲ ಸರತಿಯ ಸಾಲಿನಲ್ಲಿ ವೇದಿಕೆಯ ಮೇಲೆ ಬಂದು ಅವರ ಕೈಕುಲುಕಿ ಒಂದಿಷ್ಟು ಕೃತಕವೇ ಎನಿಸುವಂಥ ನಗು ಬೀರಿ ಫೋಟೊ ಕ್ಲಿಕ್ಕಿಸಿಕೊಳ್ಳುವ ಯಾಂತ್ರಿಕ ಕ್ರಮವೇ ನಮಗೆಲ್ಲ ಅಭ್ಯಾಸವಾಗಿಹೋಗಿದೆ. ಏತನ್ಮಧ್ಯೆ ಆರತಕ್ಷತೆಯಲ್ಲಿ ಗಾಢವಾಗಿರುತ್ತಿದ್ದ ಆತ್ಮೀಯತೆಯು ರಿಸೆಪ್ಷನ್ ಎಂಬ ಆಡಂಬರದ ಕಣ್ಣುಕುಕ್ಕುವ ‘ಶೋ’ಬಾಜಿಯಲ್ಲಿ ಕಳೆದುಹೋಗಿದೆ.

ಕಾಕ್ಕೆ ತಕ್ಕ ಕೋಲ ಎಂದು ನಾವಿದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೂ ಆರತಕ್ಷತೆಯಂಥ ಸಂಪ್ರದಾಯಗಳು ಯಾಕೆ ಇರುತ್ತಿದ್ದವು, ಅವುಗಳ ಅರ್ಥ-ಆಶಯಗಳು ಏನಿದ್ದವು ಎಂದು ತಿಳಿದುಕೊಂಡರೆ ಹೆಮ್ಮೆಯೆನಿಸುತ್ತದೆ.

ಅಕ್ಷತ ಎಂದರೆ ಸಂಸ್ಕೃತ ಭಾಷೆಯಲ್ಲಿ ‘ತುಂಡಾಗದ’ (unbroken) ಎಂದರ್ಥ. ಕನ್ನಡದಲ್ಲಿ ಸ್ವಲ್ಪ ಅಪಭ್ರಂಶಗೊಂಡು ಅದು ‘ಅಕ್ಷತೆ’ ಆಗಿದೆ. ಅಕ್ಷತೆಯ ಒಂದೊಂದು ಅಕ್ಕಿ ಕಾಳು ಸಹ ಇಡಿಯದಾಗಿರಬೇಕು. ನುಚ್ಚಾಗಿರುವ ಅಕ್ಕಿಗೆ ಎಷ್ಟೇ ಅರಿಶಿನ ಕುಂಕುಮ ಹಚ್ಚಿದರೂ ಅದು ಅಕ್ಷತೆಯಾಗುವುದಿಲ್ಲ. ಅಕ್ಷತೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅದು ಪೂಜೆ ಪುನಸ್ಕಾರಗಳಲ್ಲಿ ದೇವರಿಗೆ ಅರ್ಪಿಸುವ ಪೂಜಾದ್ರವ್ಯವಾಗಿಯೂ ಬಳಕೆಯಾಗುತ್ತದೆ, ಹಾಗೆಯೇ ದೇವತಾನುಗ್ರಹಕ್ಕೆ ಅಥವಾ ಗುರುಹಿರಿಯರ ಆಶೀರ್ವಚನಕ್ಕೆ ವಸ್ತುರೂಪವಾಗಿಯೂ ಕಾರ್ಯವೆಸಗುತ್ತದೆ. ಅಂದರೆ ಅರ್ಪಣೆ ಮತ್ತು ಅನುಗ್ರಹಗಳ ದ್ವಿಮುಖ ಸಂವಹನವನ್ನು ಅಕ್ಷತೆ ನಿಭಾಯಿಸುತ್ತದೆ. ಅರ್ಪಣೆಯಾಗಿಯೂ ಅನುಗ್ರಹವಾಗಿಯೂ ಏಕಪಾತ್ರಾಭಿನಯ ಮಾಡುತ್ತದೆ. ಇನ್ನೂ ಆಧ್ಯಾತ್ಮಿಕವಾಗಿ ಹೇಳಬೇಕಿದ್ದರೆ ಅಕ್ಷತೆ ಫಲಾಪೇಕ್ಷೆಯ ಬೀಜವೂ ಹೌದು; ಬೀಜ ಮೊಳೆತು ಪಕ್ವವಾಗಿ ಸಿಗುವ ಫಲವೂ ಹೌದು!

ವಿವಾಹ ಮಹೋತ್ಸವದಲ್ಲಿ ವಧು-ವರರನ್ನು ಆಶೀರ್ವದಿಸಿ ಅನುಗ್ರಹಿಸಲಿಕ್ಕೆ ಅಕ್ಷತೆಯನ್ನು ಉಪಯೋಗಿಸುತ್ತಾರಷ್ಟೆ? ಆರತಿ ಬೆಳಗಿ ಅಕ್ಷತೆ ಹಾಕುವುದರಿಂದ ಆರತಕ್ಷತೆ ಎಂಬ ಹೆಸರು ಬಂದದ್ದಿರಬಹುದು. ಕೆಲವು ಮದುವೆ ಸಮಾರಂಭಗಳಲ್ಲಿ ಆರತಕ್ಷತೆಯೆಂಬ ಪ್ರತ್ಯೇಕ ಕಾರ್ಯಕ್ರಮ ಇರದಿದ್ದರೂ ಮುಹೂರ್ತದ ವೇಳೆ ವಧು-ವರರು ಪರಸ್ಪರ ಮಾಲೆ ಹಾಕಿಕೊಂಡ ಮೇಲೆ ಗಟ್ಟಿಮೇಳ ಮೊಳಗುತ್ತಲೇ ಅತಿಥಿಗಳೆಲ್ಲ ಅಕ್ಷತೆಯ ಮೂಲಕ ಆಶೀರ್ವಾದದ ಮಳೆಗರೆಯುತ್ತಾರೆ. ಅಕ್ಷತೆಯ ರೂಪದಲ್ಲಷ್ಟೇ ಅಲ್ಲದೆ ಮದುವೆಯ ಇನ್ನಿತರ ವಿಧಿವಿಧಾನಗಳಲ್ಲೂ ಅಕ್ಕಿಯ ಪಾತ್ರ ದೊಡ್ಡದಿದೆ. ಅಂತಃಪಟ ಸರಿಯುವ ಮುನ್ನ ವಧು-ವರರು ಎದುರುಬದುರಾಗಿ ನಿಲ್ಲುವುದು ಅಕ್ಕಿರಾಶಿಯ ಮೇಲೆ. ಸಪ್ತಪದಿ ತುಳಿಯುವುದೂ ಅಕ್ಕಿಯಿಂದ ಮಾಡಿದ ಏಳು ರಾಶಿಗಳ ಮೇಲೆ ಹೆಜ್ಜೆಯಿಟ್ಟು (ಕೆಲವು ಕಡೆ ಬೇರೆ ರೀತಿಯೂ ಇರಬಹುದು). ಗಂಡನ ಮನೆಯನ್ನು ಪ್ರವೇಶಿಸುವ ವಧು ಮನೆಯ ಹೊಸ್ತಿಲಲ್ಲಿಟ್ಟ ಅಕ್ಕಿಪಾತ್ರೆಯನ್ನು ಕಾಲಿಂದ ಚೆಲ್ಲಿ ಒಳಬರುವುದು- ಅಕ್ಷರಶಃ ಧಾನ್ಯಲಕ್ಷ್ಮಿ ಮನೆಯೊಳಗೆ ಅಡಿಯಿಟ್ಟಳು ಎಂಬ ಸಂಕೇತವಾಗಿಯೇ.

WeddingAkshatheSmall.jpg

ಹೀಗೆ ಅಕ್ಷತೆ ಅಥವಾ ಅಕ್ಕಿಕಾಳಿನ ವೈಶಿಷ್ಟ್ಯ ಮತ್ತು ನಮ್ಮ ಭಾರತೀಯ ವಿವಾಹಪದ್ಧತಿಯಲ್ಲಿ ಅದಕ್ಕಿರುವ ಮಹತ್ವ ನಮಗೆಲ್ಲ ಗೊತ್ತಿರುವಂಥದ್ದೇ. ಅಚ್ಚರಿಯ ಅಂಶವೇನೆಂದರೆ, ವಧು-ವರರ ಮೇಲೆ ಅಕ್ಕಿಕಾಳು ಚೆಲ್ಲಿ ಆಶೀರ್ವದಿಸುವ ಕ್ರಮ ಪಾಶ್ಚಾತ್ಯ ಸಂಸ್ಕೃತಿಯಲ್ಲೂ ಇದೆ; ಮಾತ್ರವಲ್ಲ, ಅದರ ಹಿಂದೆ ಕುತೂಹಲಕರವಾದ ಚರಿತ್ರೆಯೂ ಇದೆ!

ಪ್ರಾಚೀನ ರೋಮನ್ ಕಾಲದಿಂದಲೂ ಯಾವುದಾದರೂ ಧಾನ್ಯವನ್ನು ಚೆಲ್ಲಿ ವಧು-ವರರನ್ನು ಆಶೀರ್ವದಿಸುವ ಪದ್ಧತಿ ಇತ್ತಂತೆ. ಮೊದಲೆಲ್ಲ ಬಹುತೇಕವಾಗಿ ಗೋಧಿಯ ಬಳಕೆಯಾಗುತ್ತಿತ್ತು. ಗೋಧಿ, ಅಕ್ಕಿ ಅಥವಾ ಇತರ ಯಾವುದೇ ಧಾನ್ಯವನ್ನು ಬಳಸಿದರೂ ಅದರ ಹಿಂದಿನ ಉದ್ದೇಶ ಫಲವತ್ತತೆ (fertility) ಮತ್ತು ಏಳಿಗೆ (prosperity)ಯನ್ನು ಸಂಕೇತಿಸುವುದೇ ಆಗಿತ್ತು. ಸಮೃದ್ಧಿ, ಸೌಭಾಗ್ಯಗಳ ಶ್ರೀಮಂತಿಕೆಯ ಪ್ರತೀಕವಾಗಿ ಧಾನ್ಯಕ್ಕಿಂತ ಸಮರ್ಥವಾದದ್ದು ಇನ್ನೇನು ತಾನೆ ಇದೆ? ಹಾಗಾಗಿಯೇ “ಸಂಪದ್ಭರಿತರಾಗಿ; ಸಂತಾನಪ್ರಾಪ್ತಿವಂತರಾಗಿ; ಸುಖಿಗಳಾಗಿ ಬಾಳಿರಿ...” ಎಂಬ ಶುಭಾಶಯ ರೂಪದಲ್ಲಿ ಗೋಧಿಕಾಳು ಅಕ್ಕಿಕಾಳು ಅಥವಾ ಇನ್ನಿತರ ಧಾನ್ಯವನ್ನು ಉದುರಿಸುವ ಸಂಪ್ರದಾಯ ಬಂತು.

ರೋಮನ್ನರ ಪ್ರಾಶಸ್ತ್ಯ ಅಕ್ಕಿಗಿಂತಲೂ ಗೋಧಿಯೇ ಆಗಿತ್ತು. ಸಂತಾನೋತ್ಪತ್ತಿಗೂ ಗೋಧಿಗೂ ಸಂಬಂಧವಿದೆಯೆಂದು ರೋಮನ್ನರು ನಂಬಿದ್ದರು. ಮದುವೆಯಾಗುವ ಕನ್ಯೆಯು ವಿವಾಹ ಸಮಾರಂಭದುದ್ದಕ್ಕೂ ಗೋಧಿ ತುಂಬಿದ ಒಂದು ಪಾತ್ರೆಯನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದಳು. ಗೋಧಿಕಾಳುಗಳ ಮಾಲೆಯನ್ನು ತಲೆಯಲ್ಲಿ ಧರಿಸುತ್ತಿದ್ದಳು. ಮದುವೆಗೆ ಆಗಮಿಸಿದ ಅತಿಥಿಗಳೂ ವಧುವಿನ ಮೇಲೆ ಗೋಧಿಕಾಳನ್ನು ಚೆಲ್ಲಿ ಆಶೀರ್ವಾದ ಮಾಡುತ್ತಿದ್ದರು. ಗುರುಹಿರಿಯರ ಆಶೀರ್ವಾದದ ಗೋಧಿಕಾಳುಗಳು ವಧುವಿನ ತಲೆಯ ಮೇಲೆ ಬಿದ್ದು ಅಲ್ಲಿಂದ ನೆಲಕ್ಕುದುರಿದರೆ ಇನ್ನೂ ಮದುವೆಯಾಗಿರದ ಹೆಣ್ಮಕ್ಕಳು ಅವುಗಳನ್ನು ಹೆಕ್ಕಿಕೊಳ್ಳಲು ದುಂಬಾಲು ಬೀಳುತ್ತಿದ್ದರು. ತಮಗೂ ಆ ರೀತಿಯ ಆಶೀರ್ವಾದ ಯೋಗ ಶೀಘ್ರದಲ್ಲೇ ಪ್ರಾಪ್ತಿಯಾಗಲೆಂದು ಅವರ ನಂಬಿಕೆ.

ಬ್ರಿಟಿಷ್ ರಾಣಿ ಒಂದನೇ ಎಲಿಜಬೆತ್‌ಳ ಆಡಳಿತಕಾಲಕ್ಕೆ, ವಧುವಿನ ಮೇಲೆ ಗೋಧಿಕಾಳು ಚೆಲ್ಲುವ ರಿವಾಜಿನಲ್ಲಿ ಒಂದು ಮಾರ್ಪಾಡು ಬಂತು. ಗೋಧಿಕಾಳನ್ನು ಚೆಲ್ಲುವ ಬದಲಿಗೆ ಅದರ ಕೇಕ್ ಮಾಡಿ ಕೇಕಿನ ಸಣ್ಣಸಣ್ಣ ತುಂಡುಗಳನ್ನು ವಧುವಿನ ಮೇಲೆ ಮಳೆಗರೆಯುವ ಕ್ರಮ ಶುರುವಾಯ್ತು. ಆದರೆ ರುಚಿಕರವಾದ ಕೇಕ್‌ಅನ್ನು ತುಂಡರಿಸಿ ಚೆಲ್ಲುವ ಬದಲು ಕಾಲಕ್ರಮೇಣ ಅದು ಮದುವೆ ಔತಣದಲ್ಲಿ ಒಂದು ಭಕ್ಷ್ಯವಾಯಿತು. ತಿಂದು ತೇಗುವ ಮೋಜಿಗೇನೊ ಕೇಕ್ ಸಿಕ್ಕಿತು, ಆದರೆ ನಿಜವಾಗಿಯೂ ವಧು-ವರರನ್ನು ಹರಸಲೆಂದೇ ಬರುವ ಹಿರಿಯ ಹಿತೈಷಿಗಳಿಗೆ ಆಶೀರ್ವಾದಕ್ಕೊಂದು ರೂಪ ಕೊಡಲಿಕ್ಕೆ ಏನಾದರೂ ವಸ್ತು ಬೇಕಲ್ಲ? ಆಗ ಶುರುವಾದದ್ದು ಅಕ್ಕಿಕಾಳಿನ ಬಳಕೆ. ಗೋಧಿಗಿಂತ ಸುಲಭವಾಗಿ ಮತ್ತು ಅಗ್ಗದಲ್ಲಿ ಸಿಗುತ್ತಿದ್ದ ಅಕ್ಕಿ ಸಹಜವಾಗಿಯೇ ಅಂಥ ಉಪಯೋಗಕ್ಕೆ ಯೋಗ್ಯವಾದ ಧಾನ್ಯ ಎನಿಸಿಕೊಂಡಿತು. ಅವತ್ತಿನಿಂದ ರೋಮನ್ ಕ್ಯಾಥೋಲಿಕ್ ಮದುವೆಗಳಲ್ಲಿ ವಧು-ವರರ ಮೇಲೆ ಅಕ್ಕಿಕಾಳು ಚೆಲ್ಲುವ ಪರಿಪಾಠ ಮುಂದುವರೆಯಿತು. ರೋಮನ್ ಯುಗಕ್ಕಿಂತಲೂ ಹಿಂದೆ, ಆದಿವಾಸಿಗಳ ಜೀವನಶೈಲಿಯಲ್ಲೂ ಅಕ್ಕಿಗೂ ಗಂಡು-ಹೆಣ್ಣಿನ ಸಹಬಾಳ್ವೆಗೂ ಸಂಬಂಧವಿತ್ತೆಂದು ತಿಳಿದುಬರುತ್ತದೆ. ಗಂಡು-ಹೆಣ್ಣು ಒಟ್ಟಾಗಿ ಅಕ್ಕಿ (ಅನ್ನ) ತಿಂದರೆ ಅವರ ಜೋಡಿಯಾದಂತೆ ಎಂಬ ನಂಬಿಕೆಯಿತ್ತು. ತಿನ್ನುವುದಕ್ಕಾಗಿಯೇ ಅಕ್ಕಿಯನ್ನು ಅವರಿಬ್ಬರ ಮೇಲೆ ಸುರಿಸುವ ಕ್ರಮವೂ ಇತ್ತು. ಇನ್ನು ಕೆಲವು ಪಂಗಡಗಳಲ್ಲಿ, ಬುಡಕಟ್ಟು ಜನಾಂಗಗಳಲ್ಲಿ ವಧು-ವರರ ಮೇಲೆ ಕೆಟ್ಟದೃಷ್ಟಿ ಬೀರುವ ಕ್ಷುದ್ರ ಶಕ್ತಿಗಳಿಗೆ ಬಲಿಯ ರೂಪದಲ್ಲಿ ಅಕ್ಕಿಕಾಳನ್ನು ಸಿಂಪಡಿಸುವ ಕ್ರಮವೂ ಇದ್ದಿರಬಹುದು. ಅಂತೂ ಮದುವೆಗೂ ಅಕ್ಕಿಕಾಳಿಗೂ ಅವಿನಾಭಾವ ಸಂಬಂಧ ಒಂದಲ್ಲ ಒಂದು ನಮೂನೆಯಲ್ಲಿ ವಿಶ್ವದೆಲ್ಲೆಡೆಗಳಲ್ಲೂ ಇದೆ.

ಪಾಶ್ಚಾತ್ಯ ದೇಶಗಳಲ್ಲಿ ಮದುವೆಯ ‘ಧಾರ್ಮಿಕ ಭಾಗ’ ಈಗಲೂ ಚರ್ಚ್‌ಗಳಲ್ಲೇ ನಡೆಯುತ್ತದೆ. ಧರ್ಮಗುರುಗಳ ಸಮಕ್ಷಮದಲ್ಲಿ ಗಂಡು-ಹೆಣ್ಣು ಪ್ರಮಾಣಪೂರ್ವಕವಾಗಿ ಸತಿಪತಿಗಳಾಗುತ್ತಾರೆ. ಗುರುಹಿರಿಯರು ಆಶೀರ್ವಾದ ರೂಪದಲ್ಲಿ ಅಕ್ಕಿಕಾಳನ್ನು ಚೆಲ್ಲುತ್ತಾರೆ. ಎಲ್ಲ ಕ್ರಮಗಳೂ ಚಾಚೂತಪ್ಪದೆ ನಡೆಯುತ್ತವೆ. ಆಮೇಲೆ ಆ ಮದುವೆಯ ಪವಿತ್ರಬಂಧ ಎಷ್ಟು ದಿನ/ತಿಂಗಳು/ವರ್ಷ ಉಳಿಯುತ್ತದೆ ಎನ್ನುವುದು ಬೇರೆ ಮಾತು. ಚರ್ಚ್ ಪ್ರಾಂಗಣದಲ್ಲಿ ಈ ರೀತಿ ಅಕ್ಕಿಕಾಳು ಚೆಲ್ಲುವುದು ಸಲ್ಲದು, ಹಕ್ಕಿಗಳು ಅದನ್ನು ತಿಂದರೆ ಅವುಗಳಿಗೆ ಅಪಾಯಕಾರಿ ಎಂಬ ಕೂಗು ಸಹ ಈಚೀಚೆಗೆ ಕೇಳಿಬಂದದ್ದಿದೆ. ಗೊಡ್ಡು ಸಂಪ್ರದಾಯಗಳ ಬಗ್ಗೆ ಅಗೌರವವಿರುವವರಿಂದಲೋ, ಪಕ್ಷಿಪ್ರೇಮಿಗಳಿಂದಲೋ ಅಥವಾ ಚರ್ಚ್ ನೈರ್ಮಲ್ಯ ಉಸ್ತುವಾರಿಯವರಿಂದಲೋ ಅಂತೂ ಪಾಶ್ಚಾತ್ಯ ಜಗತ್ತಿನಲ್ಲೂ ಮದುವೆಯಲ್ಲಿನ ಆಶೀರ್ವಚನದ ಅಕ್ಕಿಕಾಳಿಗೆ ಸಂಚಕಾರ ಬಂದಿದೆ!

ಪಾಶ್ಚಾತ್ಯರ ಸಂಗತಿ ಹಾಗಿರಲಿ. ಆಧುನಿಕತೆಯ ಸೋಗಿನಲ್ಲಿ ಆರತಕ್ಷತೆಯಂಥ ಆತ್ಮೀಯ ಆಚರಣೆಗಳಿಗೆ ನಾವುಗಳೂ ಅನಾದರ ತೋರುತ್ತೇವಲ್ಲ? ಇದಕ್ಕೇನನ್ನೋಣ?

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can skip to the end and leave a response. Pinging is currently not allowed.