ಪದ-ಶ್ರಾವ್ಯ

ಈಗ ಆಡಿಯೋ ಟಚ್!

23
Apr 2012
Amin Sayani Email Kahani
Posted in DefaultTag by sjoshi at 4:54 am

ದಿನಾಂಕ  22 ಎಪ್ರಿಲ್ 2012ರ ಸಂಚಿಕೆ...

ಅಮಿನ್ ಸಯಾನಿ ಇಮೇಲ್‌ ಕಹಾನಿ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಇಲ್ಲ, ಇದು ಕಹಾನಿ ಎನ್ನುವಷ್ಟು ದೊಡ್ಡ ಕಥೆಯೇನಲ್ಲ. ಸಯಾನಿ-ಕಹಾನಿ ಪ್ರಾಸ ಚೆನ್ನಾಗಿರುತ್ತೆ ಅಂತ ಹಾಗೆ ಟೈಟಲ್ ಕೊಟ್ಟಿದ್ದೇನೆ ಅಷ್ಟೇ. ಆದರೂ, ಅಮಿನ್ ಸಯಾನಿ ಅವರಿಂದ ಇಮೇಲ್ ಬಂದಿರುವುದಂತೂ ಹೌದು. ನನಗಲ್ಲ, ನನ್ನ ಸೋದರಮಾವನಿಗೆ. ದಶಕಗಳ ಹಿಂದೆ ಅಮಿನ್ ಸಯಾನಿಯ ಬಿನಾಕಾ ಗೀತ್‌ಮಾಲಾ ಮೋಡಿಗೆ ಪರವಶರಾಗಿದ್ದ ಕೋಟ್ಯಂತರ ಅಭಿಮಾನಿಗಳಲ್ಲಿ ಅವರು ‘ಊಪರ್‌ವಾಲೀ ಪೈದಾನ್’ನವರು. ಇವತ್ತಿಗೂ ಒಬ್ಬ ರೇಡಿಯೊ-ಬಫ್. ಇವತ್ತಿಗೂ ಅದೇ ಅಭಿಮಾನ. ಹಾಗಾಗಿ ಅಮಿನ್ ಸಯಾನಿಯ ಇಮೇಲ್‌ನಿಂದ ಏಕ್‌ದಂ ಖುಷಿ ಪಟ್ಟಿದ್ದಾರೆ. ನನಗೂ ಫಾರ್ವರ್ಡ್ ಮಾಡಿ ಖುಷಿಯನ್ನು ಹೆಚ್ಚಿಸಿದ್ದಾರೆ. ನಾನೀಗ ಅದೇ ಖುಷಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. Share your joys ಅಂದರೆ ಹೀಗೆಯೇ ಅಲ್ವಾ?

ಅಮಿನ್ ಸಯಾನಿ ಯಾಕೆ ನನ್ನ ಸೋದರಮಾವನಿಗೆ ಇಮೇಲ್ ಬರೆದರು? ಹಾಗಲ್ಲ, ‘ಸೋದರಮಾವ ಬರೆದಿದ್ದ ಇಮೇಲ್‌ಗೆ ಅಮಿನ್ ಸಯಾನಿ ಉತ್ತರಿಸಿದರು’ ಎಂದು ಹೇಳಿದರೆ ಸರಿಯಾಗುತ್ತದೆ. ಅಷ್ಟಕ್ಕೂ ನನ್ನ ಸೋದರಮಾವ ಆಗಲೀ, ಅವರು ಅಮಿನ್ ಸಯಾನಿಗೆ ಇಮೇಲ್ ಬರೆದದ್ದೇ ಆಗಲೀ ಇಲ್ಲಿ ಮುಖ್ಯವಲ್ಲ. ಕೋಟ್ಯಂತರ ಜನ ಕೇಳುಗರ ಪೈಕಿ ಯಃಕಶ್ಚಿತ್ ಒಬ್ಬರು ಆತ್ಮೀಯವಾಗಿ ಇಮೇಲ್ ಬರೆದದ್ದಕ್ಕೆ ಅಷ್ಟೇ ಆತ್ಮೀಯತೆಯಿಂದ ಅಮಿನ್ ಭಾಯಿ ಉತ್ತರಿಸಿದರಲ್ಲ ಅದೇ ಗ್ರೇಟ್‌ನೆಸ್ಸು. ಅದೂ‌ಏನು, ಹೊಗಳಿ ಅಟ್ಟಕ್ಕೇರಿಸಿದ್ದ ಪತ್ರವಲ್ಲ, ಯಾವುದೋ ಒಂದು ಹಳೇ ಚಿತ್ರಗೀತೆಯನ್ನು ಅವರ ನೆನಪಿಗೆ ತರುವ ಉದ್ದೇಶದಿಂದ ಬರೆದಿದ್ದ ಒಂದು ಸಾಮಾನ್ಯ ಪತ್ರ. ಅದನ್ನು ಸ್ವೀಕರಿಸಿ ಪ್ರಾಮಾಣಿಕವಾಗಿ ಪ್ರೀತಿಯಿಂದ ಉತ್ತರ ಬರೆದ ಅಮಿನ್ ಸಯಾನಿ ಎಂಬ ಗ್ರೇಟ್ ವ್ಯಕ್ತಿಗೆ, ಆ ಉತ್ತರದಲ್ಲಿ ಪ್ರಕಟಗೊಂಡ ಅವರ ಡೌನ್-ಟು-ಅರ್ತ್ ವ್ಯಕ್ತಿತ್ವಕ್ಕೆ ತಲೆಬಾಗಲೇಬೇಕು. ಪತ್ರ ಅಥವಾ ಉತ್ತರ ಯಾರು ಬೇಕಾದರೂ ಬರೆಯಬಹುದು. ಆದರೆ ದೊಡ್ಡಸ್ತಿಕೆಯ ಸೋಗು ತೋರದೆ ಅಪರಿಚಿತರನ್ನೂ ಆತ್ಮೀಯತೆಯಿಂದ ನೋಡುವುದು ಕೆಲವರಷ್ಟೇ. ಅಮಿನ್ ಭಾಯಿ ಅಂಥವಲ್ಲೊಬ್ಬರು ಎಂದು ಸಾಬೀತಾದದ್ದು ಈ ಇಮೇಲ್ ವಿನಿಮಯದ ಸಾರಾಂಶ.

ನನ್ನ ಸೋದರಮಾವ ಬರೆದ ಇಮೇಲ್ ಹೀಗಿತ್ತು (ಹಿಂದಿಯಲ್ಲಿ ಬರೆದಿದ್ದರು, ಇಲ್ಲಿ ಕನ್ನಡ ಅನುವಾದ ಕೊಡುತ್ತಿದ್ದೇನೆ): ‘ಅಮಿನ್ ಸಯಾನಿಜೀ, ಮೊನ್ನೆ ಸಂಗೀತ್‌ಕೆ ಸಿತಾರೋಂಕಿ ಮೆಹಫಿಲ್ ಕಾರ್ಯಕ್ರಮ ಖ್ಯಾತ ಚಿತ್ರಸಾಹಿತಿ ಎಸ್.ಎಚ್.ಬಿಹಾರಿ ಮೇಲೆ ಪ್ರಸ್ತುತಪಡಿಸಿದ್ದಿರಷ್ಟೆ? ಚೆನ್ನಾಗಿತ್ತು. ಎಸ್.ಎಚ್.ಬಿಹಾರಿಯವರು ಕೊನೇ ದಿನಗಳಲ್ಲಿ ಸಂಗೀತ ನಿರ್ದೇಶಕ ಜೋಡಿ ಶಂಕರ್-ಜೈಕಿಶನ್‌ಗೂ ಹಾಡುಗಳನ್ನು ಬರೆಯುತ್ತಿದ್ದರು. ಜಾನೆ ಅನ್‌ಜಾನೆ ಚಿತ್ರದ ಛಮ್ ಛಮ್ ಬಾಜೆರೇ ಪಾಯಲಿಯಾ ತುಂಬ ಜನಪ್ರಿಯವಾಗಿತ್ತು. ಇಂತು ನಿಮ್ಮ ಅಭಿಮಾನಿ- ಚಿದಂಬರ ಕಾಕತ್ಕರ್; ಮಂಗಳೂರು, ಕರ್ನಾಟಕ.’

ಹಳೇ ಚಿತ್ರಗೀತೆಗಳ ವಿಚಾರಕ್ಕೆ ಬಂದರೆ ನನ್ನ ಸೋದರಮಾವ ಮಾಹಿತಿಯ ಕಣಜ. ನಿಖರ ಮಾಹಿತಿಯನ್ನು ಒದಗಿಸುವ ದೃಷ್ಟಿಯಿಂದಲೇ ಅವರು ಅಮಿನ್ ಸಯಾನಿಗೆ ಪತ್ರ ಬರೆದಿದ್ದರು. ಅದೇನೂ ಅಂಥ ಉತ್ತರಾಕಾಂಕ್ಷಿ ಪತ್ರ ಅಲ್ಲವೇ‌ಅಲ್ಲ. ಆದರೆ ಅಮಿನ್ ಸಯಾನಿ ಆಪ್ತತೆಯಿಂದ ಉತ್ತರಿಸಿದರು (ಅವರ ಹಿಂದಿ ಆವೃತ್ತಿಯನ್ನೂ, ನನ್ನ ಕನ್ನಡ ಅನುವಾದವನ್ನೂ ಕೊಡುತ್ತಿದ್ದೇನೆ): ‘ಚಿದಂಬರ್ ಭಾಯೀ, ಅರೆರೆ! ಛಮ್ ಛಮ್ ಬಾಜೆ ಪಾಯಲಿಯಾ ತೊ ಮೈಂ ಭೂಲ್‌ಹೀ ಗಯಾ! ಮಾಫ್ ಕರ್‌ನಾ. ಖೈರ್, ಇತ್‌ನೇ ಬಡೇ ಕಾಮ್‌ಮೇ ಕುಛ್ ಭೂಲೆ ತೊ ಹೋಹೀ ಜಾತೇ ಹೈಂ. ಅಬ್ ಮೈಂ 79 ಸಾಲ್‌ಕಾ ಹೋಗಯಾ ಹೂಂನ? - ಖುಷ್ ರಹೋ, ಅಮಿನ್ ಸಯಾನಿ.’ (ಅರೆರೆ! ಛಮ್ ಛಮ್ ಬಾಜೆ ಪಾಯಲಿಯಾ ಗೀತೆಯನ್ನು ನಾನು ಮರೆತೇಬಿಟ್ಟಿದ್ದೆ. ನನ್ನನ್ನು ಕ್ಷಮಿಸಿ. ಎಷ್ಟೆಂದರೂ ಇಂಥ ದೊಡ್ಡದೊಡ್ಡ ಕೆಲಸಗಳಲ್ಲಿ ಕೆಲವು ಮರೆವುಗಳು ಆಗೇ‌ಆಗುತ್ತವಲ್ಲ? ಅಲ್ಲದೇ ನನಗೂ ಈಗ 79 ವರ್ಷ ವಯಸ್ಸಾಗಿದೆ. ಇರಲಿ, ಖುಷಿಯಿಂದಿರಿ. ಅಮಿನ್ ಸಯಾನಿ).

ಬಿನಾಕಾ ಗೀತ್‌ಮಾಲಾದಲ್ಲಿ ಜೇನಿನಂಥ ಮಧುರ ಕಂಠದಿಂದ ‘ಬೆಹ್‌ನೋ ಔರ್ ಭಾಯಿಯೋಂ...’ ಎನ್ನುತ್ತಿದ್ದ ಅಮಿನ್ ಸಯಾನಿ ಆ ಮಾತನ್ನು ಆರ್ಟಿಫಿಶಿಯಲ್ ಆಗಿ ತೋರ್ಪಡಿಕೆಗಾಗಿ ಹೇಳುತ್ತಿದ್ದದ್ದಲ್ಲ ಎಂದಾಯ್ತಲ್ಲ! ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ವ್ಯಕ್ತಿ ಯಾವೊಂದು ಅಹಂ ಇಲ್ಲದೆ ಇಷ್ಟು ನಿಸ್ಪೃಹ ಮನಸ್ಸಿನಿಂದ, 79 ವರ್ಷ ವಯಸ್ಸಾಗಿದ್ದರೂ ಪುಟ್ಟ ಮಗುವಿನ ನಿರ್ಮಲ ಹೃದಯದಿಂದ, ಚಿರಪರಿಚಿತ ಚಡ್ಡಿದೋಸ್ತಿಯೊಬ್ಬ ಚಹ ಕುಡಿಯುತ್ತ ಎದುರು ಕುಳಿತು ಮಾತನಾಡುತ್ತಿದ್ದಾನೇನೋ ಎನಿಸುವಂತೆ, ಈರೀತಿ ಉತ್ತರ ಬರೆದರೆ ಯಾರಿಗೇ ಆದರೂ ಖುಷಿಯಾಗದೇ ಇದ್ದೀತೇ?

emailresponsegraphic.jpg

ನನ್ನ ಸೋದರಮಾವನ ಬಳಿ ಇಂಥದೇ ಇನ್ನೂ ಒಂದು ಹೃದಯಸ್ಪರ್ಶಿ ಅನುಭವವೂ ಇದೆ. ಅದು, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗಿನ ಇಮೇಲ್ ವಿನಿಮಯ. ಅದೂ ಹೀಗೆಯೇ, ಹಳೇ ಚಿತ್ರಗೀತೆಗಳಿಗೆ ಸಂಬಂಧಿಸಿದಂತೆ ಕೆಲವು ನಿಖರ ಮಾಹಿತಿ ಬರೆದು ಕಳಿಸಿದ್ದಾಗ ಎಸ್ಪಿಬಿ ಅತ್ಯಂತ ವಿಧೇಯತೆಯಿಂದ ಉತ್ತರಿಸಿದ್ದ ರೀತಿ. ಆ ಪತ್ರವ್ಯವಹಾರದ ಸಾರಾಂಶವನ್ನೂ ಇಲ್ಲಿ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ (ಇಂಗ್ಲಿಷ್‌ನಲ್ಲಿದ್ದದ್ದನ್ನು ಕನ್ನಡೀಕರಿಸಿದ್ದೇನೆ): ‘ಮಾನ್ಯರೇ, ಎದೆ ತುಂಬಿ ಹಾಡಿದೆನು ಕಾರ್ಯಕ್ರಮದ ಲಕ್ಷೋಪಲಕ್ಷ ಅಭಿಮಾನಿಗಳಲ್ಲಿ ನಾನೂ ಒಬ್ಬ. ಇತ್ತೀಚಿನ ಸಂಚಿಕೆಗಳ ನಿರೂಪಣೆಯಲ್ಲಿ ನುಸುಳಿದ್ದ ಕೆಲವು ತಪ್ಪುಗಳನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. 1. ಮಲ್ಲಮ್ಮನ ಪವಾಡ ಚಿತ್ರಕ್ಕಾಗಿ ಶರಣೆಂಬೆ ನಾ ಶಶಿಭೂಷಣ ಹಾಡನ್ನು ಹಾಡಿದವರು ಪಿ.ಸುಶೀಲಾ. ನೀವೆಂದಂತೆ ಎಸ್.ಜಾನಕಿ ಅಲ್ಲ. 2. ಎಮ್ಮೆ ತಮ್ಮಣ್ಣ ಚಿತ್ರದಲ್ಲಿ ಕೊಳಲನೂದಿ ಕುಣಿವ ಪ್ರಿಯನೇ ಗೀತೆಯನ್ನು ಹಾಡಿದ್ದು ಪಿ.ಬಿ.ಶ್ರೀನಿವಾಸ್ ಮತ್ತು ಬೆಂಗಳೂರು ಲತಾ. ನೀವು ಪಿ.ಸುಶೀಲಾ ಎಂದಿದ್ರಿ. 3. ಈ ಚಂದದ ಮನೆಯಲ್ಲಿ ಶ್ರೀಗಂಧದ ಗುಡಿಯಲ್ಲಿ (ಚಿತ್ರ: ಕಪ್ಪು ಬಿಳುಪು) ಹಾಡಿದವರು ಬಿ.ವಸಂತಾ. ನೀವೆಂದಂತೆ ಪಿ.ಸುಶೀಲಾ ಅಲ್ಲ. ಇದನ್ನು ನಾನು ತಪ್ಪು ತೋರಿಸುವ ದೃಷ್ಟಿಯಿಂದಲ್ಲ ಹೇಳ್ತಿರೋದು. ಕಲಾವಿದರಿಗೆ ಕರೆಕ್ಟಾಗಿ ಕ್ರೆಡಿಟ್ ಸಲ್ಲಬೇಕು ಎಂದು ನನ್ನ ಅಭಿಪ್ರಾಯ. ಅದಕ್ಕೋಸ್ಕರ ತಿಳಿಸುತ್ತಿದ್ದೇನೆ’ ಎಂದು ನನ್ನ ಸೋದರಮಾವ ಬರೆದಿದ್ದರು. ಅವರ ಇಮೇಲ್‌ಅನ್ನು ಬ್ಲ್ಯಾಕ್‌ಬೆರ್ರಿಯಲ್ಲೇ ಓದಿ ತತ್‌ಕ್ಷಣ ಉತ್ತರಿಸಿದ್ದರು ಎಸ್ಪಿಬಿ. ಅವರ ಉತ್ತರ ಹೀಗಿತ್ತು: ‘ಸರ್, ತಪ್ಪೊಪ್ಪುಗಳಿಗಾಗಿ ಧನ್ಯವಾದಗಳು. ಎದೆ ತುಂಬಿ ಹಾಡಿದೆನು ಕಾರ್ಯಕ್ರಮ ನಿರ್ಮಾಣದಲ್ಲಿ ಮಾಹಿತಿ ಕ್ರೋಡೀಕರಿಸಲಿಕ್ಕೆಂದೇ ಒಂದು ವಿಭಾಗವಿದೆ. ನನಗೆ ಅಲ್ಲಿಂದ ಈ‌ಎಲ್ಲ ಮಾಹಿತಿ ಸರಬರಾಜಾಗುತ್ತದೆ. ನಿಮ್ಮ ಪತ್ರವನ್ನು ಅವರ ಗಮನಕ್ಕೆ ತರುತ್ತೇನೆ, ಮುಂದೆ ಈರೀತಿ ತಪ್ಪುಗಳಾಗದಂತೆ ನೋಡಿಕೊಳ್ಳುತ್ತೇವೆ. ನಿಮ್ಮ ಕಾಳಜಿಗಾಗಿ ಮತ್ತೊಮ್ಮೆ ಧನ್ಯವಾದಗಳು. -ಎಸ್ಪಿಬಿ.’

ಲಕ್ಷಾಂತರ ವೀಕ್ಷಕರಲ್ಲಿ ಯ:ಕಶ್ಚಿತ್ ಒಬ್ಬನ ಇಮೇಲ್‌ಗೆ ಐದೇ ನಿಮಿಷಗಳೊಳಗೆ ಎಸ್ಪಿಬಿ ಸ್ಪಂದಿಸಿದ್ದರು. ಸರ್ ಎಂದು ಗೌರವದ ಸಂಬೋಧನೆ ಬೇರೆ! ಅದನ್ನು ತುಂಬಾ ಮೆಚ್ಚಿಕೊಂಡಿದ್ದ ನನ್ನ ಸೋದರಮಾವ ‘ಸರಳತೆ, ಪ್ರಾಮಾಣಿಕತೆ, ಬದ್ಧತೆಗಳ ಎಸ್ಪಿಬಿ’ ಎಂದು ಉದಯವಾಣಿಯಲ್ಲಿ ಒಂದು ಪ್ರಶಂಸಾಪತ್ರ ಪ್ರಕಟಿಸಿದ್ದರು.

ಮೂರನೆಯ ಉದಾಹರಣೆಯನ್ನು ಸೇರಿಸಿ ಮುಗಿಸುತ್ತೇನೆ. ೧೯೮೪ರ ಅಕ್ಟೋಬರ್ ೩೧ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಹಾಡುಹಗಲಲ್ಲೇ ಹಂತಕರ ಗುಂಡೇಟಿಗೆ ಬಲಿಯಾದರಷ್ಟೆ? ಆಮೇಲಿನ ದಿನಗಳಲ್ಲಿ (ಅವು ಇಮೇಲಿನ ದಿನಗಳಲ್ಲ) ರಾಜೀವ್ ಗಾಂಧಿ ಪ್ರಧಾನಿಯಾದರು. ಇಂದಿರಾ ಗಾಂಧಿಯವರ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತ ರಾಜೀವ ಗಾಂಧಿಯವರಿಗೆ ಸಾಂತ್ವನದ ಪತ್ರವೊಂದನ್ನು ನನ್ನ ಅಣ್ಣ ಬರೆದಿದ್ದರು. ನನ್ನಣ್ಣನೇನೂ ಕಾಂಗ್ರೆಸ್ ಕಾರ್ಯಕರ್ತನಲ್ಲ, ಪುಢಾರಿಯಲ್ಲ. ರಾಜಕೀಯದ ಸೋಂಕು ಇದ್ದವರೂ ಅಲ್ಲ. ಹೀಗೇ ಒಬ್ಬ ಸಾಮಾನ್ಯ ಭಾರತೀಯ ಪ್ರಜೆಯಾಗಿ ಪ್ರಧಾನಮಂತ್ರಿಗೆ ಸಾಂತ್ವನ ತಿಳಿಸುತ್ತ ಪತ್ರಿಸಿದ್ದರು. ಸುಮಾರು ಒಂದು ತಿಂಗಳು ಕಳೆದಿರಬಹುದೇನೊ, ಹೊಸದಿಲ್ಲಿಯ ಪ್ರಧಾನಿ ಕಚೇರಿಯಿಂದ ನಮ್ಮನೆಯ ವಿಳಾಸಕ್ಕೆ ಒಂದು ಅಂಚೆ ಲಕೋಟೆ ಬಂತು! ನನ್ನಣ್ಣ ಬರೆದಿದ್ದ ಸಾಂತ್ವನ ಪತ್ರಕ್ಕೆ ಕೃತಜ್ಞತಾಪೂರ್ವಕ ಉತ್ತರ, ರಾಜೀವ್ ಗಾಂಧಿಯವರ ಹಸ್ತಾಕ್ಷರದ ಸಹಿಯೊಂದಿಗೆ! ನನ್ನಣ್ಣ ಬರೆದಿದ್ದ ಪತ್ರವನ್ನು ರಾಜೀವ ಗಾಂಧಿಯವರೇ ಓದಿದರೋ, ಸಾಂತ್ವನ ತಿಳಿಸಿದವರಿಗೆಲ್ಲ ಕೃತಜ್ಞತೆಯ ಮುದ್ರಿತ ಪತ್ರಗಳನ್ನು ತಯಾರಿಸಿದ್ದರಲ್ಲಿ ನನ್ನಣ್ಣನಿಗೂ ಒಂದು ಪ್ರತಿಯನ್ನು ಪ್ರಧಾನಿ ಕಚೇರಿಯ ಸಿಬ್ಬಂದಿ ಕಳಿಸಿದರೋ ಗೊತ್ತಿಲ್ಲ. ಅಂತೂ ಅಲ್ಲೊಂದು ಪತ್ರೋತ್ತರ ಪ್ರಕ್ರಿಯೆ ಖಂಡಿತವಾಗಿಯೂ ಜರುಗಿತ್ತು.

ಈ ಮೂರು ಉದಾಹರಣೆಗಳನ್ನು ಆಯ್ದುಕೊಂಡದ್ದು, ಪತ್ರ ಬರೆದವರ ಗ್ರೇಟ್‌ನೆಸ್ಸನ್ನು ಗುರುತಿಸಲಿಕ್ಕಲ್ಲ. ಆ ಪತ್ರಗಳಲ್ಲಿ ಗಹನವಾದ ವಿಚಾರಗಳಿದ್ದವು ಎಂದು ಪ್ರತಿಪಾದಿಸಲಿಕ್ಕೂ ಅಲ್ಲ. ಪ್ರಾಮಾಣಿಕವಾಗಿ, ಆತ್ಮೀಯವಾಗಿ ಬರೆದ ಪತ್ರಕ್ಕೆ ಅಷ್ಟೇ ಆತ್ಮೀಯತೆಯಿಂದ ಸ್ಪಂದಿಸುವ ಪ್ರಕ್ರಿಯೆಯನ್ನು ಹೈಲೈಟ್ ಮಾಡುವುದಕ್ಕೆ. ಆದರೂ ಮನಸ್ಸಿನಲ್ಲಿ ಪಂಜೆ ಮಂಗೇಶರಾಯರ ‘ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು... ಏರಿದವನು ಚಿಕ್ಕವನಿರಬೇಕೆಲೆ ಎಂಬಾ ಮಾತನು ಸಾರುವನು...’ ಸಾಲುಗಳು ಗುಂಯ್‌ಗುಡುತ್ತಿರುವುದು ನಿಜ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App