ಪದ-ಶ್ರಾವ್ಯ

ಈಗ ಆಡಿಯೋ ಟಚ್!

27
Sep 2012
Amruthadantha Abheri
Posted in DefaultTag by sjoshi at 8:50 pm

ದಿನಾಂಕ  28 ಸೆಪ್ಟೆಂಬರ್ 2012

ಅಮೃತಕ್ಕಿಂತಲೂ ರುಚಿ ‘ಅಭೇರಿ’

* ಶ್ರೀವತ್ಸ ಜೋಶಿ

ಶಿವರಂಜನಿ, ಕಲ್ಯಾಣಿ, ಮೋಹನ, ಮಧ್ಯಮಾವತಿ,... ಒಂದಕ್ಕಿಂತ ಒಂದು ಜನಪ್ರಿಯ ರಾಗಗಳ ರಸಾಯನ ಸವಿದೆವು. ಮುಂದಿನದು ಯಾವುದೆಂಬ ಕುತೂಹಲ, ನಿಮಗೂ ನನಗೂ! ಜನಪ್ರಿಯತೆಯಲ್ಲಿ, ಪ್ರಖ್ಯಾತಿಯಲ್ಲಿ ಆ ನಾಲ್ಕು ರಾಗಗಳಿಗೆ ಯಾವುದೇ ರೀತಿಯಲ್ಲಿ ಕಮ್ಮಿಯಿಲ್ಲದ್ದು ‘ಅಭೇರಿ’. ಇದು ದೈವಿಕ ರಾಗ, ದೇವರೇ ಸೃಷ್ಟಿಸಿದ್ದಂತೆ, ಅಂದಮೇಲೆ ದೇವರಿಗೆ ಇಷ್ಟದ್ದೂ ಆಗಿರಬೇಕು. ಮುತ್ತುಸ್ವಾಮಿ ದೀಕ್ಷಿತರು ಇದನ್ನು ’ದೇವಗಾಂಧಾರಂ’ ಎಂದೇ ಕರೆದಿದ್ದರಂತೆ.  ಶಾಸ್ತ್ರೀಯ ಸಂಗೀತ ಪಠ್ಯಪುಸ್ತಕಗಳಲ್ಲಿ ಕರ್ನಾಟಕದೇವಗಾಂಧಾರಿ ಎಂಬ ಹೆಸರೂ ಈ ರಾಗಕ್ಕಿದೆ. ಅಂತೂ ದೇವರಿಗೆ ಹತ್ತಿರವಾದದ್ದಂತೂ ಹೌದು.

22ನೇ ಮೇಳಕರ್ತ ರಾಗ ‘ಖರಹರಪ್ರಿಯ’ದಿಂದ ಜನ್ಯ ರಾಗ ಇದು. ಆರೋಹಣದಲ್ಲಿ  ಐದೇ ಸ್ವರಗಳು ("ಸ ಗ2 ಮ1 ಪ ನಿ2 ಸ") ; ಅವರೋಹಣದಲ್ಲಿ  ಏಳೂ ಸ್ವರಗಳು (ಸ ನಿ2 ದ2 ಪ ಮ1 ಗ2 ರಿ2 ಸ) ಬಳಕೆಯಾಗುತ್ತವೆ. ಇಂಥವನ್ನು ಔಡವ-ಸಂಪೂರ್ಣ ರಾಗಗಳು ಎನ್ನುತ್ತಾರೆ (ಔಡವ ಎಂದರೆ ಐದು ಸ್ವರಗಳ, ಸಂಪೂರ್ಣ ಎಂದರೆ ಎಲ್ಲ ಏಳು ಸ್ವರಗಳ ಬಳಕೆ).

ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಅಭೇರಿ ರಾಗಕ್ಕೆ ಸರಿಸುಮಾರಾಗಿ ಹತ್ತಿರವಾದದ್ದು ‘ಭೀಮ್‌‌ಪಲಾಸ್’ ಎಂಬ ರಾಗ. ಅದನ್ನು ’ಭೀಮ್‌‍ಪಲಾಸಿ’ ಎಂದೂ ಕರೆಯುತ್ತಾರೆ. ಹಿಂದುಸ್ಥಾನೀ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಸಂಗೀತದಲ್ಲಿ, ಹಿಂದಿ ಚಿತ್ರಗೀತೆಗಳಲ್ಲೂ ಭೀಮ್‌ಪಲಾಸ್ ರಾಗ ಪ್ರಮುಖ ಸ್ಥಾನ ಗಳಿಸಿದೆ.

ಅಷ್ಟು ಕಿರುಪರಿಚಯ ಸಾಕು, ಈಗಿನ್ನು ರಾಗರಸಾಯನದ ಅಮೃತಪಾನ!

* * *

ತಿರುವಿಳ ಜಯಶಂಕರ್ ಅವರ ನಾದಸ್ವರ ವಾದನದಿಂದ ಈ ಕಾರ್ಯಕ್ರಮವನ್ನು ಆರಂಭಿಸೋಣ. ಅಭೇರಿ ರಾಗದಲ್ಲಿ "ಭಜರೇ ಮಾನಸ" ಎಂಬ ಕೃತಿ. ಮೈಸೂರು ವಾಸುದೇವಾಚಾರ್ಯರ ರಚನೆ.

[ಯೂಟ್ಯೂಬ್ ಲಿಮಿಟೇಶನ್‍ನಿಂದಾಗಿ ಕೃತಿಯ ಪೂರ್ವಾರ್ಧವಷ್ಟೇ ಈ ವಿಡಿಯೋದಲ್ಲಿರುವುದು. ಉತ್ತರಾರ್ಧವನ್ನು ಕೇಳಲಿಚ್ಛಿಸುವವರು ಇಲ್ಲಿ ಕ್ಲಿಕ್ಕಿಸಬಹುದು.]

*** *** *** *** *** *** ***

ಒಂದು ಜನಪ್ರಿಯ ಕನ್ನಡ ಭಕ್ತಿಗೀತೆ, ಶೃಂಗೇರಿ ಶಾರದೆಯನ್ನು ಸ್ತುತಿಸುವ "ಇವಳೇ ವೀಣಾಪಾಣಿ ವಾಣಿ ತುಂಗಾತೀರವಿಹಾರಿಣಿ...".  ಇದು ಆರ್.ಎನ್.ಜಯಗೋಪಾಲ್ ಅವರ ರಚನೆ, ಎಂ.ರಂಗರಾವ್ ಅವರ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಹಾಡಿದ್ದಾರೆ. ಅಭೇರಿ ರಾಗಕ್ಕೆ ಒಳ್ಳೆಯ ಉದಾಹರಣೆ ಎನ್ನುತ್ತಾರೆ ಅಷ್ಟಿಷ್ಟು ಸಂಗೀತ ಬಲ್ಲವರು.

*** *** *** *** *** *** ***

ಎಲ್.ಶಂಕರ್ ಹೆಸರು ನೀವು ಕೇಳಿರಬಹುದು. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ವಯಲಿನ್ ವಾದಕ. ಏಳರ ಹುಡುಗನಾಗಿದ್ದಾಗಲೇ ಮೊತ್ತಮೊದಲ ಪೂರ್ಣಪ್ರಮಾಣದ ಸಂಗೀತಕಛೇರಿ ಕೊಟ್ಟವರು! ಎಲ್.ಶಂಕರ್, ಎಲ್.ಸುಬ್ರಹ್ಮಣ್ಯಮ್, ಮತ್ತು ಎಲ್.ವೈದ್ಯನಾಥನ್- ಇವರು ಮೂವರೂ ಒಡಹುಟ್ಟಿದವರು.  ಮೊದಲ ಇಬ್ಬರು ವಯಲಿನ್ ವಾದನದಲ್ಲೂ, ಮೂರನೆಯವರು ಚಲನಚಿತ್ರಸಂಗೀತ ಕ್ಷೇತ್ರದಲ್ಲೂ ಕೀರ್ತಿಶಿಖರವೇರಿದವರು.  ಎಲ್.ಶಂಕರ್ 1995ರಲ್ಲಿ ಬಿಡುಗಡೆ ಮಾಡಿದ "Raga Abheri- Music Of The World" ಸಿ.ಡಿಯಿಂದ ಅಭೇರಿ ರಾಗದ ಆಲಾಪನೆಯ track ಇಲ್ಲಿದೆ. ಡಬಲ್ ವಯಲಿಲ್‌ನಲ್ಲಿ ನುಡಿಸಿರುವ ಇದು Grammy awardsಗೆ ಸಹ ಆಯ್ಕೆಯಾಗಿತ್ತು.

[ಸುಮಾರು 40 ನಿಮಿಷಗಳಷ್ಟು ಅವಧಿಯ ಆಲಾಪನೆ ಮತ್ತು ಸ್ವರಪ್ರಸ್ತಾರದ ಮೊದಲ ಭಾಗವನ್ನು ಕೇಳಲಿಚ್ಛಿಸುವವರು ಇಲ್ಲಿ ಕ್ಲಿಕ್ಕಿಸಬಹುದು. ]

*** *** *** *** *** *** ***

ಅಭೇರಿ ರಾಗಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ "the example" ಎಂದರೆ ತ್ಯಾಗರಾಜರ ‘ನಗುಮೋಮು  ಗನಲೇನಿ...’ ಅತ್ಯಂತ ಜನಪ್ರಿಯವಾಗಿರುವ ಕೃತಿ.  ದೊಡ್ಡದೊಡ್ಡ ಸಂಗೀತವಿದ್ವಾಂಸರಿಂದ ಹಿಡಿದು ಅರುಣಪ್ರತಿಭೆಗಳೂ ಸಂಗೀತಕಛೇರಿಗೆ ಕಳೆಕಟ್ಟಲು ಹಾಡುವ ಕೃತಿ. ಅಂದಮೇಲೆ ಅಭೇರಿ ರಾಗರಸಾಯನದಲ್ಲಿ ಅದಿಲ್ಲದಿರಲು ಸಾಧ್ಯವೇ? ಯಾವ ಕಲಾವಿದರು ಹಾಡಿದ್ದನ್ನು / ನುಡಿಸಿದ್ದನ್ನು ಆಯ್ದುಕೊಳ್ಳುವುದು ಎಂಬುದೇ ಸಮಸ್ಯೆ. ಎಂ.ಬಾಲಮುರಳಿಕೃಷ್ಣ ಅವರ ಗಾಯನದಲ್ಲಿರುವುದಂತೂ ಸಾರ್ವಕಾಲಿಕ ಶ್ರೇಷ್ಠವಾದುದು. ಅದನ್ನು ಆಮೇಲೆ ಕೇಳುವವರಿದ್ದೇವೆ, ಈಗ ಮ್ಯಾಂಡೋಲಿನ್ ವಾದನದಲ್ಲಿ ’ನಗುಮೊಮು...’. ನುಡಿಸಿರುವ ಕಲಾವಿದ ವಿಕಾಸ್ ರಾಮದಾಸ್. ಈತ ಮ್ಯಾಂಡೋಲಿನ್ ಯು.ಶ್ರೀನಿವಾಸ್ ಅವರ ಶಿಷ್ಯ. ಗುರುವಿಗೆ ಸರಿಸಾಟಿಯೆನಿಸುವ ಪ್ರತಿಭೆ!

*** *** *** *** *** *** ***

ಇನ್ನು ಒಂದಿಷ್ಟು ಕನ್ನಡ ಚಿತ್ರಗೀತೆಗಳನ್ನು ಸವಿಯಬೇಕು. ಅಭೇರಿ (ಅಥವಾ ಭೀಮ್‌ಪಲಾಸ್) ರಾಗವನ್ನು ಆಧರಿಸಿದ ಚಿತ್ರಗೀತೆಗಳು ತುಂಬಾ ಇವೆ. ಅವೆಲ್ಲವೂ ಜನಪ್ರಿಯ ಚಿತ್ರಗೀತೆಗಳೇ ಆಗಿವೆ. ಬಹುಶಃ ಚಿತ್ರಸಂಗೀತಕ್ಕೆ ಚೆನ್ನಾಗಿ ಒಪ್ಪುವ ರಾಗ ಅಭೇರಿ.  ಇಲ್ಲಿ ಖ್ಯಾತ ಕೊಳಲುವಾದಕ ಪ್ರವೀಣ ಗೋಡಖಿಂಡಿ ಅವರ "ರಾಗಿಣಿ"  (ನನ್ನ ನೆಚ್ಚಿನ ಸಿ.ಡಿಗಳಲ್ಲೊಂದು) ಆಲ್ಬಮ್‌‍‌ನಿಂದ ಎತ್ತಿಕೊಂಡಿರುವ ಒಂದು ಟ್ರ್ಯಾಕ್ ಇದೆ. ಭೀಮ್‌‍ಪಲಾಸ್ ರಾಗ ಆಧರಿಸಿದ ಕನ್ನಡ ಚಿತ್ರಗೀತೆಗಳ medley. ಇದರಲ್ಲಿರುವ ಮೂರು ಅತ್ಯಂತ ಜನಪ್ರಿಯ ಹಾಡುಗಳು ಯಾವುವೆಂದು ನೀವೇ ಕಂಡುಕೊಳ್ಳುವಿರಂತೆ.

[ಈ flute-medleyಯಲ್ಲಿರುವ ಹಾಡುಗಳನ್ನು ಪ್ರತ್ಯೇಕವಾಗಿ ಸವಿಯಲಿಚ್ಛಿಸುವವರು ಇಲ್ಲಿ, ಇಲ್ಲಿ, ಮತ್ತು ಇಲ್ಲಿ ಕ್ಲಿಕ್ಕಿಸಬಹುದು.]

*** *** *** *** *** *** ***

ದೇವರ ಕಣ್ಣು ಚಿತ್ರದ "ನಿನ್ನ ನೀನು ಮರೆತರೇನು ಸುಖವಿದೆ" ಅಭೇರಿಗೊಂದು ಉದಾಹರಣೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಆವೃತ್ತಿಯೂ ಇದೆ, ಪಿ.ಸುಶೀಲಾ (ಸ್ವಲ್ಪ ‘ಅನುನಾಸಿಕ’ವಾಗಿ) ಹಾಡಿದ್ದೂ ಇದೆ. ನಾವೀಗ ಕೇಳಲಿರುವುದು ಅದೇ.   ಚಿ.ಉದಯಶಂಕರ್ ರಚನೆ, ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ.

*** *** *** *** *** *** ***

ಹೊಸಬೆಳಕು’ ಚಿತ್ರದಲ್ಲಿ ಡಾ.ರಾಜಕುಮಾರ್ ಹಾಡಿರುವ “ಚೆಲುವೆಯೇ ನಿನ್ನ ನೋಡಲು... ಮಾತುಗಳು ಬರದವನು..."  ಸಹ ಅಭೇರಿ ರಾಗ ಆಧಾರಿತ ಎಂದು ನನ್ನೊಬ್ಬ ಸಂಗೀತಜ್ಞ ಸ್ನೇಹಿತರ ಬ್ಲಾಗ್‌‌ನಿಂದ ತಿಳಿದುಕೊಂಡಿದ್ದೇನೆ. ಇದು ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ಚಿ.ಉದಯಶಂಕರ್ ರಚನೆ. ಈ ವಿಡಿಯೋ ಗುಣಮಟ್ಟ ಅಷ್ಟೇನೂ ಚೆನ್ನಾಗಿಲ್ಲದಿರುವುದಕ್ಕೆ ಕ್ಷಮೆಯಿರಲಿ.

*** *** *** *** *** *** ***

ರಾಗ ಆಧಾರಿತ ಚಿತ್ರಗೀತೆಗಳ ಪ್ರಸ್ತಾಪ ಮಾಡುವಾಗ ಕಡ್ಡಾಯವಾಗಿ ನೆನಪಲ್ಲಿಟ್ಟುಕೊಳ್ಳಬೇಕಾದ್ದೆಂದರೆ ಚಿತ್ರಗೀತೆ ಪೂರ್ಣವಾಗಿ ಒಂದೇ ರಾಗದಲ್ಲಿ ಇರುವುದಿಲ್ಲ. ಪಲ್ಲವಿ ಅಥವಾ ಚರಣದ ಯಾವುದೋ ಒಂದು ಸಾಲು ಅಥವಾ interlude musicನಲ್ಲಷ್ಟೇ ರಾಗದ ಛಾಯೆ ಕಂಡುಬರುವುದೂ ಇದೆ. ಆ ಹಾಡು ಇಂಥ ರಾಗದಲ್ಲಿದೆ ಎಂದು ಹೇಳಲಿಕ್ಕೆ ಅದು ಎಷ್ಟು ಸಬಲ ಪುರಾವೆ ಎನ್ನುವುದು ಅವರವರ ಸಂಗೀತಜ್ಞಾನಕ್ಕೆ ಬಿಟ್ಟದ್ದು.  ಹಾಗೆ ನೋಡಿದರೆ,  'ಬಂಗಾರದ ಮನುಷ್ಯ’ ಚಿತ್ರ ಆರಂಭವಾಗುವ ‘ನಗುನಗುತಾ ನಲಿ ನಲಿ...’ ಹಾಡಿನಲ್ಲೂ ಅಭೇರಿ ಇದೆ ಎನ್ನುತ್ತಾರೆ ಕೆಲವರು. ಇರಲಿ, ಅಷ್ಟು ಸಾಕು ನಮ್ಮ ರಾಗರಸಾಯನದಲ್ಲಿ ಆ ಅತ್ಯುತ್ತಮ ಹಾಡು ಸೇರಿಕೊಳ್ಳಲು! ಹುಣಸೂರು ಕೃಷ್ಣಮೂರ್ತಿ ರಚನೆ, ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಡಾ.ಪಿ.ಬಿ.ಶ್ರೀನಿವಾಸ್ ಹಾಡಿರುವ ಗೀತೆ-

*** *** *** *** *** *** ***

ಡಾ.ರಾಜಕುಮಾರ್ ಅವರದೇ ಇನ್ನೊಂದು ಚಿತ್ರರತ್ನ ‘ಸಾಕ್ಷಾತ್ಕಾರ’. ಇದರಲ್ಲಿನ ಶೀರ್ಷಿಕೆಗೀತೆ "ಒಲವೇ ಜೀವನ ಸಾಕ್ಷಾತ್ಕಾರ..." ಕೇಳುತ್ತಿದ್ದರೆ ಎಂಥ ಶುಷ್ಕಹೃದಯಿಗಳಿಗೂ ತಂಪೆರೆದು ಒಲವು ಚಿಗುರಬಲ್ಲದು! ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ ದುಂಬಿಯ ಹಾಡಿನ ಝೇಂಕಾರದಲ್ಲೂ ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ... ತುಂಬಿದೆ ಒಲವಿನ ಸಾಕ್ಷಾತ್ಕಾರ. ಈ ಹಾಡಿನಲ್ಲೂ ಅಲ್ಲಲ್ಲಿ ಅಭೇರಿ ರಾಗ ಇಣುಕಿದೆ ಎನ್ನುತ್ತಾರೆ ಸಂಗೀತ ಬಲ್ಲವರು. One of the all time favorites ಎಂದು ಅದೆಷ್ಟು ಜನ ಈ ಹಾಡನ್ನು ಮೆಚ್ಚಿಕೊಂಡಿದ್ದಾರೋ! ಕಣಗಾಲ್ ಪ್ರಭಾಕರ ಶಾಸ್ತ್ರಿ ರಚನೆ, ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಡಾ.ಪಿ.ಬಿ.ಶ್ರೀನಿವಾಸ್ ಹಾಡಿದ್ದಾರೆ. ಪಿ.ಸುಶೀಲಾ ಹಾಡಿದ ಆವೃತ್ತಿಯೂ ಇದೆ. ಇಬ್ಬರೂ ಯುಗಳಗೀತೆಯಾಗಿ ಹಾಡಿದ್ದೂ ಇದೆ.

*** *** *** *** *** *** ***

ರಾಗರಸಾಯನದಲ್ಲಿ ನಾನು ಹೆಚ್ಚಾಗಿ ಕನ್ನಡ ಮತ್ತು ಹಿಂದಿ ಅಷ್ಟೇ ಅಲ್ಲದೇ ತೆಲುಗು ಮಲಯಾಳಂ ಮುಂತಾದ ಭಾಷೆಗಳ ಚಿತ್ರಗೀತೆಗಳನ್ನೂ ವೈವಿಧ್ಯಕ್ಕೋಸ್ಕರ ಬೆರೆಸುತ್ತೇನೆ. ಅವು ಎಲ್ಲರಿಗೂ ಅರ್ಥವಾಗದಿದ್ದರೂ ಕೇಳಲು ಮಧುರವಾಗಿರುತ್ತವೆ ಎಂಬ ಕಾರಣಕ್ಕಾಗಿ. ಇವತ್ತಿನ ‘ಅಭೇರಿ’ಯ ಮಟ್ಟಿಗೆ ಇದೊಂದು ತಮಿಳು ಚಿತ್ರಗೀತೆಯನ್ನು ಸೇರಿಸದಿದ್ದರೆ ರಸಾಯನದ ರುಚಿ ಪರಿಪೂರ್ಣವೆನಿಸದು. ಏಕೆಂದರೆ ಅಭೇರಿ ರಾಗಕ್ಕೆ ಅಪ್ಪಟ ಉದಾಹರಣೆ ಈ ಹಾಡು. ‘ಕೊಂಜುಂ ಸಲಂಗೈ’ ಚಿತ್ರದ “ಸಿಂಗಾರವೇಲನೇ ದೇವಾ..." ಇದನ್ನು ಎಸ್.ಜಾನಕಿ ಅವರ ಕಂಠದಲ್ಲಿ ಧ್ವನಿಮುದ್ರಿಸಿಕೊಂಡಮೇಲೆ ಕಾರೈಕುರುಚ್ಚಿ ಪಿ.ಅರುಣಾಚಲಂ ಅವರ ನಾದಸ್ವರ ಧ್ವನಿಯನ್ನು ಸೇರಿಸಿದ್ದಂತೆ. ಆದರೆ ಹಾಡುಗಾರಿಕೆ ಮತ್ತು ನಾದಸ್ವರ ಜುಗಲ್‌ಬಂದಿಯೋ ಎಂಬಂತೆ ಅದ್ಭುತವಾಗಿ ಮೂಡಿಬಂದಿದೆ. ಆ ಕಾಲದಲ್ಲಿ ಎಚ್‌ಎಂವಿ ಸಂಸ್ಥೆ 78rpm ಧ್ವನಿತಟ್ಟೆಗಳಲ್ಲಿ ಹಾಡುಗಳನ್ನು ಮುದ್ರಿಸುತ್ತಿದ್ದಾಗ ಈ ಹಾಡಿನ ಡಿಸ್ಕ್ ದಾಖಲೆ ಸಂಖ್ಯೆಯಲ್ಲಿ ಮಾರಾಟವಾಗಿತ್ತಂತೆ.

*** *** *** *** *** *** ***

ಒಂದು ಸಾಲದೆಂಬಂತೆ ಇನ್ನೊಂದು ತಮಿಳು ಚಿತ್ರಗೀತೆ, ಇದು ಎ.ಆರ್.ರೆಹಮಾನ್ ಸಂಗೀತನಿರ್ದೇಶನದ ‘ಜೀನ್ಸ್’ ಚಿತ್ರದಲ್ಲಿ ನಿತ್ಯಶ್ರೀ ಮಹಾದೇವನ್ ಹಾಡಿರುವ “ ಕಣ್ಣೋಡು ಕಾಣ್ಬದೆಲ್ಲ ತಲೈವಾ ಕಣ್ಗಳಿಕ್ಕ್..."  ಹಾಡು. ಎ.ಆರ್.ರೆಹಮಾನ್ ಸಂಗೀತ ಇದರ ಜನಪ್ರಿಯತೆಗೆ ಎಷ್ಟು ಕಾರಣವಾಯ್ತು ಅಷ್ಟೇ ಕಾರಣ ಐಶ್ವರ್ಯಾ ರೈಯ ಅಭಿನಯ ಮತು ನರ್ತನ ಕೂಡ!

*** *** *** *** *** *** ***

ಇನ್ನೊಂದು ಮಲಯಾಳಂ ಚಿತ್ರಗೀತೆ. 2009ರಲ್ಲಿ ಬಿಡುಗಡೆಯಾದ, ಪ್ರಶಸ್ತಿಗಳ ಕೊಳ್ಳೆಹೊಡೆದ  ‘ಪಳಸ್ಸಿರಾಜಾ’ ಮಲಯಾಳಂ ಚಿತ್ರಕ್ಕಾಗಿ ಇಳಯರಾಜ ಸಂಗೀತ ನಿರ್ದೇಶನದಲ್ಲಿ ಕೆ.ಎಸ್.ಚಿತ್ರಾ ಹಾಡಿರುವ “ಕುಞತ್ತೆ ಕೊನ್ನಕ್ಕುಮ್..." ಈ ಹಾಡಿನ ವಿಡಿಯೋ ನೋಡಿದರೆ ಇಡೀ ಸಿನೆಮಾವನ್ನೇ ನೋಡಬೇಕೆನ್ನಿಸುವುದು ಸುಳ್ಳಲ್ಲ.

*** *** *** *** *** *** ***

ಈಗ ಒಂದು ತೆಲುಗು ಚಿತ್ರಗೀತೆ. ‘ಅಭಿನಂದನ’ ಚಿತ್ರದಲ್ಲಿ ಇಳಯರಾಜಾ ಸಂಗೀತ ನಿರ್ದೇಶನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ಹಾಡಿರುವ "ಮಂಚು ಕುರಿಸೇ ವೇಳಲೋ..." ಇದು ಕೂಡ ಸುಮಾರಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಚಿತ್ರ.

*** *** *** *** *** *** ***

ಪ್ರಾದೇಶಿಕ ಭಾಷೆಯ ಚಿತ್ರಗೀತೆಗಳ ನಂತರ ಈಗ ಕೆಲವು ಹಿಂದಿ ಚಿತ್ರಗೀತೆಗಳನ್ನು ಸವಿಯೋಣ. ಭೀಮ್‌ಪಲಾಸ್ ರಾಗ ಆಧರಿಸಿದ ಇವೆಲ್ಲವೂ ಜನಪ್ರಿಯ ಗೀತೆಗಳು. ಮೊದಲಿಗೆ "ಮೇರಾ ಸಾಯಾ" ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿರುವ “ನೈನೋ ಮೇಂ ಬದರಾ ಛಾಯೇ." ಇದರ ಸಾಹಿತ್ಯ ರಾಜಾ ಮೆಹದೀ ಅಲಿಖಾನ್ ಅವರದು, ಸಂಗೀತ ನಿರ್ದೇಶನ ಮದನ್ ಮೋಹನ್.

*** *** *** *** *** *** ***

‘ಯಾದೇಂ’ ಚಿತ್ರಕ್ಕಾಗಿ ಅನು ಮಲ್ಲಿಕ್ ಸಂಗೀತ ನಿರ್ದೇಶನದಲ್ಲಿ ಕವಿತಾ ಕೃಷ್ಣಮೂರ್ತಿ, ಅಲ್ಕಾ ಯಾಗ್ನಿಕ್, ಹೇಮಾ ಸರ್‌ದೇಸಾಯ್ ಮತ್ತು ಉದಿತ್ ನಾರಾಯಣ್ ಹಾಡಿರುವ "ಏಲೀ ರೇ ಏಲೀ ಕ್ಯಾ ಹೇ ಯೇ ಪಹೇಲಿ..."  ಆನಂದ್ ಬಕ್ಷಿ ಅವರ ಸಾಹಿತ್ಯ.

*** *** *** *** *** *** ***

ಶಶಿಕಪೂರ್ ಅಭಿನಯದಲ್ಲಿ ಎಷ್ಟು ತಾಜಾತನವೋ ಅಷ್ಟೇ ತಾಜಾತನ ಕಿಶೋರ್ ಕುಮಾರ್ ಹಿನ್ನೆಲೆಗಾಯನದಲ್ಲಿ. ಅರಳುವ ಹೂವುಗಳ ಉಪಮೆ ಎಂದಮೇಲೆ ಕೇಳಬೇಕೇ, ಮತ್ತಷ್ಟು ತಾಜಾತನ. ಅಂಥ ಸೂಪರ್ ಫ್ರೆಶ್ ಹಾಡು ಇವತ್ತಿಗೂ ತಾಜಾ ಅನಿಸುವಂಥದು "ಶರ್ಮೀಲೀ" ಚಿತ್ರದ “ಖಿಲ್‌ತೆ ಹೈಂ ಗುಲ್ ಯಹಾಂ..." ಇದು ನೀರಜ್ ಅವರ ರಚನೆ,  ಸಂಗೀತಕ್ಕೆ ಅಳವಡಿಸಿದವರು ಎಸ್.ಡಿ.ಬರ್ಮನ್.

*** *** *** *** *** *** ***

ಅನಿಲ್ ಕಪೂರ್, ಮಾಧುರಿ ದೀಕ್ಷಿತ್ ಅಭಿನಯದ ‘ಪುಕಾರ್’ ಚಿತ್ರದಲ್ಲಿ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಅನುರಾಧಾ ಪೌಡ್ವಾಲ್ ಮತ್ತು ಸೋನು ನಿಗಮ್ ಹಾಡಿರುವ "ಕಿಸ್ಮತ್ ಸೇ ತುಮ್ ಹಮ್ಕೊ ಮಿಲೇ ಹೋ...." ನನಗೆ ತುಂಬ ಇಷ್ಟದ್ದು. ಈ ಹಾಡಿನ ಸಾಹಿತ್ಯ ಜಾವೇದ್ ಅಖ್ತರ್ ಅವರದು.

*** *** *** *** *** *** ***

ಶಾಸ್ತ್ರೀಯ ರಾಗ ಆಧಾರಿತ ಹಾಡುಗಳೆಂದರೆ ಸ್ವಲ್ಪ ಗಂಭೀರವಾಗಿ, ಕಿವಿಗಳಿಗೂ ಹೃದಯಕ್ಕೂ ಮನಸ್ಸಿಗೂ ತಂಪನೆರೆಯುವಂತೆ ಜುಳುಜುಳು ನದಿ ಹರಿಯುವಂತೆ ಇರುತ್ತವೆಂದು ತಿಳಿದುಕೊಳ್ಳುತ್ತೇವೆ. ಆದರೆ ಇಲ್ಲೊಂದು ಅಭೇರಿ/ಭೀಮ್‌‍ಪಲಾಸ್ ಉದಾಹರಣೆಯನ್ನು ನೋಡಿದರೆ ಆ ನಂಬಿಕೆ ತಲೆಕೆಳಗಾಗಬಹುದು! ಮೊಹ್ರಾ ಚಿತ್ರದ, ವಿಜು ಶಾ ಸಂಗೀತ ನಿರ್ದೇಶನದ ‘ತೂ ಚೀಜ್ ಬಡೀ ಹೈ ಮಸ್ತ್ ಮಸ್ತ್...’ ಹಾಡು ಭೀಮ್‌‍ಪಲಾಸ್ ರಾಗದ ಗಾಢ ಛಾಯೆ ಹೊಂದಿದೆ ಎಂದರೆ ನಂಬಲಿಕ್ಕೇ ಆಗುವುದಿಲ್ಲ. ಆದರೂ ನಿಜ. ಪ್ರವೀಣ್ ಗೋಡಿಖಿಂಡಿಯವರು ಒಮ್ಮೆ ಇಲ್ಲಿ ವಾಷಿಂಗ್ಟನ್‌‍ನಲ್ಲಿ ಒಂದು ಕಾರ್ಯಕ್ರಮ ನಡೆಸಿದ್ದಾಗ ಈ ಹಾಡನ್ನು ಅಭೇರಿ ರಾಗದ ಪ್ರಾತ್ಯಕ್ಷಿಕೆ ರೂಪದಲ್ಲಿ ಪ್ರಸ್ತುತಪಡಿಸಿದ್ದರು.

*** *** *** *** *** *** ***

ಈಗ ಒಂದು ಫ್ಯೂಷನ್ ಪ್ರಯೋಗವನ್ನು ನೋಡೋಣ. Listen To The Colour ಆಲ್ಬಮ್‌‌ನಿಂದ ಭೀಮ್‌‌ಪಲಾಸ್ ರಾಗದ ಒಂದು ‘ಖಿಚಡಿ’. ಕೀಬೋರ್ಶ್, ರಿದಂ‌ಪ್ಯಾಡ್ಸ್, ಗಿಟಾರ್, ಸಂತೂರ್ ಮತ್ತಿತರ ವಾದ್ಯಗಳೆಲ್ಲ ಇದರಲ್ಲಿ ಕೇಳಿಸುತ್ತವೆ. ಅದಕ್ಕೇ ಖಿಚಡಿ ಎಂದದ್ದು,  ಚೆನ್ನಾಗಿದೆ!

*** *** *** *** *** *** ***

ನಾರಾಯಣ ಮಣಿ ಅವರ ವೀಣೆ ಮತ್ತು ಉಲ್ಲಾಸ್ ಬಾಪಟ್ ಅವರ ಸಂತೂರ್ ವಾದನ ಜುಗಲ್‌ಬಂದಿಯಲ್ಲಿ ರಾಗ ಭೀಮ್‌ಪಲಾಸ್. ಇದು, Conversations- A Musical Integration Of Veena & Santoor ಎಂಬ ಆಲ್ಬಮ್‌‌‌ನಿಂದ ಆಯ್ದುಕೊಂಡಿರುವುದು. ಎಂಜಿನಿಯರಿಂಗ್ ಮುಗಿಸಿ ನಾನು ದೆಹಲಿಯಲ್ಲಿ ಟ್ರೈನಿಯಾಗಿ ಉದ್ಯೋಗಕ್ಕೆ ಸೇರಿದ್ದಾಗ ಮೊದಲ ಸಂಬಳದ ಸದ್ವಿನಿಯೋಗದಲ್ಲಿ ಕೆಲವು ಮ್ಯೂಸಿಕ್ ಸಿ.ಡಿಗಳನ್ನು ಖರೀದಿಸಿದ್ದೆ, ಅವುಗಳ ಪೈಕಿ ಇದೂ ಒಂದು. ಆ ಮಟ್ಟಿಗೆ ನನಗೆ ಸ್ವಲ್ಪ ಸ್ಪೆಷಲ್. ಆದರೆ ಇದನ್ನು ಕೇಳಿದರೆ ನೀವೂ ಖಂಡಿತ ಇಷ್ಟಪಡುತ್ತೀರಿ. ’ಗಂಡು’ಧ್ವನಿಯಂತಿರುವ ವೀಣೆ,  ಕಚಗುಳಿಯಿಡುವ ಚಂದದ ಹೆಣ್ಣಿನಂಥ ಸಂತೂರ್‌ನೊಂದಿಗೆ ಸಂಗೀತರೂಪದಲ್ಲಿ ಸಂಭಾಷಿಸುತ್ತಿದೆಯೋ ಎಂಬ ಅನುಭವ!

*** *** *** *** *** *** ***

ಪಾಕಿಸ್ತಾನದ ಶ್ರೇಷ್ಠ ಗಾಯಕ, ಇತ್ತೀಚೆಗೆ ನಿಧನಹೊಂದಿದ ಮಹಾನ್ ಕಲಾವಿದ ಮೆಹದೀ ಹಸನ್ ಹಾಡಿರುವ ಒಂದು ಗಝಲ್- “ಜಿಂದಗೀ ಮೆ ತೊ ಸಭೀ..." ಇದರ ಕಿರುರೂಪವನ್ನು ‘ಅಜ್ಮತ್’ ಚಿತ್ರದಲ್ಲೂ ಅಳವಡಿಸಿಕೊಳ್ಳಲಾಗಿತ್ತು. ಇಲ್ಲಿರುವ ವಿಡಿಯೋ ಮೆಹದೀ ಹಸನ್ ಅವರ ಲೈವ್ ಕಾರ್ಯಕ್ರಮದ್ದು. ಇದರಲ್ಲಿ ಇನ್ನೊಬ್ಬ ಗಜಲ್ ಗಾಯಕ ಗುಲಾಂ ಅಲಿ ಸಹ ಒಬ್ಬ ಶ್ರೋತೃವಾಗಿ ಕಾಣಿಸಿಕೊಳ್ಳುತ್ತಾರೆ.

*** *** *** *** *** *** ***

ಗಝಲ್‌ನ ನಂತರ ಈಗೊಂದು ಶುದ್ಧ ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದ ಝಲಕ್. ಭೀಮ್‌ಪಲಾಸ್ ರಾಗದ ವಿವರಣೆ ಉಸ್ತಾದ್ ಶುಜಾತ್ ಖಾನ್ ಅವರಿಂದ, ಆಮೇಲೆ ಅಶ್ವಿನಿ ಭಿಡೆ ಅವರ ಗಾಯನದಲ್ಲಿ "ಜಾ ಜಾ ರೇ ಅಪ್‌ನೇ ಮಂದಿರ್‌ವಾ..."

*** *** *** *** *** *** ***

ಮತ್ತೆ ಅಭೇರಿಯತ್ತ ಮರಳಿದರೆ ಕನ್ನಡದ ಭಕ್ತಿಗೀತೆಗಳು ಮತ್ತು ಭಜನೆಗಳ ಸಾಲುಸಾಲೇ ಇದೆ. ಪುರಂದರ ದಾಸರ ರಚನೆ “ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ..."ಯನ್ನು ಅಭೇರಿ ರಾಗದಲ್ಲಿ ಹಾಡಿದ್ದಾರೆ ಪ್ರಿಯಾ ಸಹೋದರಿಯರು (ಷಣ್ಮುಖಪ್ರಿಯಾ ಮತು ಹರಿಪ್ರಿಯಾ).

*** *** *** *** *** *** ***

ಅದಕ್ಕಿಂತಲೂ ತುಂಬಾ ಜನಪ್ರಿಯ ಭಜನೆ ಎಂದರೆ ಪುರಂದರದಾಸರದೇ ರಚನೆ "ಅಂಬಿಗ ನಾ ನಿನ್ನ ನಂಬಿದೆ." ಇದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲೂ ಹಾಡಲಾಗುತ್ತದೆ. ಖ್ಯಾತ ಕಲಾವಿದರ ಧ್ವನಿಸುರುಳಿಗಳಲ್ಲೂ ಈ ಕೀರ್ತನೆ ಕಾಣಿಸಿಕೊಳ್ಳುತ್ತದೆ. ಆದರೆ ರಾಗರಸಾಯನಕ್ಕೆ ಯೂಟ್ಯೂಬ್ ವಿಡಿಯೋಗಳನ್ನು ಹುಡುಕುವಾಗ ನಾನು ಬೇಕಂತಲೇ ಈ ಹಾಡು ‘ಭಜನೆ’ರೂಪದಲ್ಲಿ ಇರುವುದನ್ನೇ ಆಯ್ದುಕೊಳ್ಳಬೇಕೆಂದುಕೊಂಡಿದ್ದೆ. ಅಮೆರಿಕದ ಸೌತ್ ಕೆರೊಲಿನಾ ಸಂಸ್ಥಾನದ ಕನ್ನಡಿಗರು ಕಳೆದ ವರ್ಷ ‘ಪುರಂದರದಾಸರ ಆರಾಧನೆ’ಯಲ್ಲಿ ’ಅಂಬಿಗ ನಾ ನಿನ್ನ ನಂಬಿದೆ...’ ಹಾಡಿದ್ದ ವಿಡಿಯೋ ಸಿಕ್ಕಿತು, ಅದನ್ನೇ ಸೇರಿಸಿಕೊಂಡಿದ್ದೇನೆ. ನೀವೂ ನೋಡಿ/ಕೇಳಿ ಆನಂದಿಸಿ.

*** *** *** *** *** *** ***

ಪುತ್ತೂರು ನರಸಿಂಹ ನಾಯಕ್ ಅವರು ಹಾಡಿರುವ “ಪವಮಾನ ಜಗದ ಪ್ರಾಣ..." ಕೀರ್ತನೆಯೂ ಬಹುತೇಕವಾಗಿ ಅಭೇರಿ ರಾಗದಲ್ಲೇ ಸಂಚರಿಸುತ್ತದೆ. ವಿಜಯವಿಟ್ಠಲ ದಾಸರ ರಚನೆ (ಕೊನೆಯಲ್ಲಿ ಅಂಕಿತವೂ ಇದೆ).

*** *** *** *** *** *** ***

ಇನ್ನೂ ಒಂದು ಭಕ್ತಿಗೀತೆ, ಅನ್ನಮಾಚಾರ್ಯರ ರಚನೆ  "ಪಲುಕು ತೇನೆಲ ತಲ್ಲಿ ಪವಳಿಂಚೆನು..." ಇದನ್ನೂ ಪ್ರಿಯಾ ಸಹೋದರಿಯರೇ ಹಾಡಿದ್ದಾರೆ.

*** *** *** *** *** *** ***

ಈಗ, ಡಾ.ಎಂ. ಬಾಲಮುರಳಿ ಕೃಷ್ಣ ಅವರ ಕಂಠಸಿರಿಯಲ್ಲಿ “ನಗುಮೊಮು ಗನಲೇನಿ..." ಆನಂದಿಸುವ ಸಮಯ!

*** *** *** *** *** *** ***

ಚಂದ್ರಿಕಾ ಕೃಷ್ಣಮೂರ್ತಿ ಟಂಡನ್ ಭೀಮ‌ಪಲಾಸ್ ರಾಗದಲ್ಲಿ ಹಾಡಿರುವ ‘ನಮಃ ಶಿವಾಯ ನಮಃ ಶಿವಾಯ...’ ಧ್ಯಾನ ಭಜನ್, soul mantra ಎಂಬ ಆಲ್ಬಮ್‌ನಿಂದ-

*** *** *** *** *** *** ***

ಅಭೇರಿ ರಾಗರಸಾಯನಕ್ಕೆ ನಾನು ‘ಅಮೃತಕ್ಕಿಂತಲೂ ರುಚಿ ಅಭೇರಿ’ ಎಂದೇಕೆ ಶೀರ್ಷಿಕೆ ಕೊಟ್ಟಿದ್ದೇನೆ? ಅಮೃತ ಎನ್ನುವುದು ಎಷ್ಟು ರುಚಿಯಿರುತ್ತದೋ ನಮಗೆ ಗೊತ್ತಿಲ್ಲ ಆದರೆ ಮನಸ್ಸಿಗೆ ತಂಪನ್ನೆರೆಯುವ ಸಂಗೀತವೆಂದರೆ ಅಮೃತವೇ ಅಲ್ಲವೇ? ಅದರಲ್ಲೂ ಅಭೇರಿಯಂತಹ ದೈವಿಕ ರಾಗವಿದ್ದರಂತೂ ಮತ್ತೂಮತ್ತೂ ಕೇಳಬೇಕೆನಿಸುವಷ್ಟು ಮಧುರ. ಅಮೃತಕ್ಕಿಂತಲೂ ರುಚಿಯಾಗಿರುವುದು ಏನಾದರೂ ಇದ್ದರೆ ಅದು ಭಗವನ್ನಾಮಸ್ಮರಣೆ ಮಾತ್ರ! 13ನೆಯ ಶತಮಾನದಲ್ಲಿ ಬಾಳಿದ್ದ  ಸಂತ ನಾಮದೇವ ಮಹಾರಾಜ್ ರಚಿಸಿದ ಮರಾಠಿ ಅಭಂಗ "ಅಮೃತಾಹುನೀ ಗೋಡ ನಾಮ ತುಝೇ ದೇವಾ..." ಅದನ್ನೇ ಹೇಳುತ್ತದೆ. ಪದ್ಮಶ್ರೀ ಮಾಣಿಕ ವರ್ಮಾ ಹಾಡಿರುವ ಈ ಭಕ್ತಿಗೀತೆ ಮರಾಠಿ ಜನರೆಲ್ಲರ ನಾಲಿಗೆತುದಿಯಲ್ಲಿದೆಯೆನ್ನುವಷ್ಟು ಜನಪ್ರಿಯವಾದದ್ದು.

*** *** *** *** *** *** ***

‘ಅಮೃತಾಹುನೀ ಗೋಡ’ ಅಭಂಗವನ್ನು ಚಿ.ಸದಾಶಿವಯ್ಯ ಅವರು 'ಸಂತ ತುಕಾರಾಮ್’ ಚಿತ್ರಕ್ಕಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಜಯ ಭಾಸ್ಕರ್ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಅದನ್ನು ಹಾಡಿದ್ದಾರೆ. ಯುಟ್ಯೂಬ್‌ನಲ್ಲಿ ಚಿತ್ರದ ವಿಡಿಯೋ ಸಿಕ್ಕಿಲ್ಲವಾದ್ದರಿಂದ ನಾನೇ ಮಾಡಿರುವ ವಿಡಿಯೋ‌ಕ್ಲಿಪ್ಪಿಂಗ್‌ನಲ್ಲಿ ನಾಮದೇವರ ಚಿತ್ರವನ್ನೂ ಕನ್ನಡಲಿಪಿಯಲ್ಲಿ ಹಾಡಿನ ಸಾಲುಗಳನ್ನೂ ಸೇರಿಸಿದ್ದೇನೆ (ಹಾಡನ್ನು ಕಲಿತುಕೊಳ್ಳಬೇಕೆನ್ನುವವರಿಗೆ ಅನುಕೂಲವಾಗುವಂತೆ).

kalyaninotes.png

ಇಲ್ಲಿಗೆ ಅಭೇರಿ(ಭೀಮ್‌‍ಪಲಾಸ್) ರಾಗರಸಾಯನ ಮುಗಿಯಿತು. ಇದನ್ನು ನೀವು YouTube Playlist ರೀತಿಯಲ್ಲಿ ಕೇಳಲಿಚ್ಛಿಸುವಿರಾದರೆ ಇಲ್ಲಿ ಕ್ಲಿಕ್ಕಿಸಿ.

ನಿಮ್ಮ ಪ್ರತಿಕ್ರಿಯೆ ತಿಳಿಸುತ್ತೀರಲ್ಲ?


You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App