ಪದ-ಶ್ರಾವ್ಯ

ಈಗ ಆಡಿಯೋ ಟಚ್!

12
Feb 2011
And the songs saga continues
Posted in DefaultTag by sjoshi at 11:57 am

ದಿನಾಂಕ  13 ಫೆಬ್ರವರಿ 2011ರ ಸಂಚಿಕೆ...

ಫ್ಯಾಶನ್, ಫಿಲಂ ಮತ್ತು ಫುಡ್ - ಮೂರು ‘ಎಫ್’ಗಳು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಚಿತ್ರಗೀತೆಗಳು ಮಾಡುವ ಮೋಡಿಯೇ ಅಂಥದು! ಹಾಡುಗಳ ಗುಂಗಿನಿಂದ ಹೊರಬರುವುದೇ ಕಷ್ಟವಾಗಿದೆಯಂತೆ ಮಂಗಳೂರಿನ ಬ್ಯಾಂಕ್ ಉದ್ಯೋಗಿ ಸು.ನಾಗರಾಜ ಅವರಿಗೆ. ‘ಸವಿ ಸವಿ ನೆನಪು ಸಾವಿರ ನೆನಪು...’ ಅಂತೊಂದು ಚಿತ್ರಗೀತೆಯೇ ಹೇಳುವಂತೆ ಹಲವಾರು ಮಧುರ ಹಾಡುಗಳು ಇನ್ನೂ ನೆನಪಿನಂಗಳದಲ್ಲಿ ಸುಳಿದಾಡುತ್ತಿವೆಯಂತೆ ಬೆಂಗಳೂರಿನ ಗೃಹಿಣಿ ಶೈಲಜಾ ಚಿಪಳೂಣಕರ್ ಅವರಿಗೆ. “ಕೌಂಟ್‌ಡೌನ್‌ನ ಅಮಲೇರಿದೆ, ನೆನಪಾದ ಹಾಡುಗಳಲ್ಲೆಲ್ಲ ಸಂಖ್ಯೆ ಇದೆಯೇ ಎಂದು ಹುಡುಕುವುದೇ ಆಗಿದೆ” ಎನ್ನುತ್ತಾರೆ ಪುಣೆಯಲ್ಲಿರುವ ಸಾಫ್ಟ್‌ವೇರ್ ಎಂಜಿನಿಯರ್ ವಿಜಾಪುರ ಮೂಲದ ಗುರುರಾಜ ಆಶ್ರೀತ.

ಕಳೆದವಾರದ ಅಂಕಣದಲ್ಲಿದ್ದ ‘ಕನ್ನಡ ಚಿತ್ರಗೀತೆಗಳ ಕೌಂಟ್‌ಡೌನ್’ ಲೇಖನಕ್ಕೆ ಸಿಕ್ಕಾಪಟ್ಟೆ ಪತ್ರಗಳು, ಪ್ರತಿಕ್ರಿಯೆಗಳು. ದಟ್ಸ್‌ಕನ್ನಡ ಡಾಟ್ ಕಾಮ್ ಸಂಪಾದಕ ಶಾಮಸುಂದರ್ ಒಮ್ಮೆ ಹೀಗೇ ಏನೋ ಲೇಖನಕಲೆಯ ವಸ್ತು ವೈವಿಧ್ಯ ವಿಚಾರದಲ್ಲಿ ಹೇಳಿದ್ದು ನೆನಪಾಗುತ್ತಿದೆ: ಫ್ಯಾಶನ್, ಫಿಲಂ ಮತ್ತು ಫುಡ್- ಈ ಮೂರು ‘ಎಫ್’ಗಳಿಗೆ ಅದೊಂದು ಅದ್ಭುತ ಸಮ್ಮೋಹನಶಕ್ತಿ ಇರುತ್ತದೆ. ಬರಹಕ್ಕೆ ಅಂಥದೇನೂ ಸಾಹಿತ್ಯಿಕ ತೂಕ ಇಲ್ಲದಿದ್ದರೂ ವಿಷಯ ಈ ಮೂರರಲ್ಲೊಂದಾಗಿದ್ದರೆ ಅದು ನೇರವಾಗಿ ಓದುಗರ ಹೃದಯಕ್ಕೇ ಲಗ್ಗೆಯಿಡುತ್ತದೆ. ಹದಿನಾರಾಣೆ ಸತ್ಯದ ಮಾತು. ಏಕೆಂದರೆ ನನಗೂ ಈಗ ಅದೇ ಆಗಿದೆ! ಸಂಖ್ಯಾಗೀತೆಗಳ ಉದ್ದುದ್ದ ಪಟ್ಟಿಗಳನ್ನೇ ಹೊತ್ತ ಪತ್ರಗಳನ್ನು ಓದಿಮುಗಿಸಿದಾಗ ‘ಎಲ್ಲೆಲ್ಲೂ ನೋಡಲೀ ನಿನ್ನನ್ನೇ ಕಾಣುವೆ...’ ಎಂಬಂತೆ ಚಿತ್ರಗೀತೆಗಳ ಸಾಲುಗಳನ್ನೇ ಕಾಣುವುದಾಗಿದೆ. ನಾನು ಬರೆದ ಲೇಖನದಲ್ಲಿ ಸುಮಾರು ಮೂವತ್ತು-ಮೂವತ್ತೈದು ಹಾಡುಗಳಿದ್ದವೋ ಏನೋ. ನನಗೆ ಬಂದ ಪತ್ರಗಳಲ್ಲಿರುವ ಹಾಡುಗಳ ಒಟ್ಟು ಲೆಕ್ಕ ಮಾಡಿದರೆ ಅದರ ಮೂರ್ನಾಲ್ಕು ಪಟ್ಟು ಆದೀತು. ಲೆಕ್ಕಾಚಾರ ಸಮತೋಲವಾಗಬೇಕಾದರೆ ಬಹುಶಃ ಈವಾರದ ಅಂಕಣದಲ್ಲಿ ನಾನು ಇನ್ನೂ ಕೆಲವು ಹಾಡುಗಳನ್ನು ಗುನುಗುನಿಸಿ ನಿಮಗೆ ದಾಟಿಸಬೇಕಾಗುತ್ತದೆ. ಅದನ್ನೇ ಮಾಡುತ್ತೇನೆ. ಆದರೆ ಇವತ್ತು ಕೌಂಟ್‌ಡೌನ್ ಇಲ್ಲ. ಬದಲಿಗೆ ಓದುಗರ ಓಲೆಗಳನ್ನೂ ಅಳವಡಿಸಿಕೊಂಡು, ಜತೆಯಲ್ಲಿ ಸ್ವಲ್ಪ ಕಾಡುಹರಟೆಯನ್ನೂ ನೇಯ್ದುಕೊಂಡು, ಹೀಗೇಸುಮ್ಮನೆ ಒಂದಿಷ್ಟು ಹಾಡುಗಳ ಮೆಲುಕು. ಹೃದಯಕ್ಕೆ ಲಗ್ಗೆಯಿಡುವ ಮಧುರಗೀತೆಗಳ ಪಲುಕು.

ಮೊದಲಿಗೆ ಕ್ವಿಜ್‌ನ ವಿಲೇವಾರಿ. ಸರಿಯುತ್ತರ ‘ಚಂದ್ರಮುಖಿ ಪ್ರಾಣಸಖಿ’ ಚಿತ್ರದ ಹಾಡು ‘ಅರಳೊ ಹುಣ್ಣಿಮೆ ನೀ ಅರಳು ಮರುಳು ಮಾಡೊ ಹುಣ್ಣಿಮೆ...’ ಅದರ ಪಲ್ಲವಿಯಲ್ಲೇ ‘ಯೌವನ ನಿನ್ನ ನೆರಳಿನಲ್ಲಿದೆ ಆಕರ್ಷಣೆ ತುದಿ ಬೆರಳಿನಲ್ಲಿದೆ ನಿನ್ನ ಮುಂದೆ ಸೊನ್ನೆ ಹುಣ್ಣಿಮೆ’ ಎಂದು ಬರುತ್ತದೆ. ಸರಿಯುತ್ತರ ಬರೆದುಕಳಿಸಿದ ಮೈಸೂರಿನ ಸುಮಾ ಕೃಷ್ಣ, ಬೆಂಗಳೂರಿನ ಮನೋಹರ ಕೆ.ಎನ್, ಪರೇಶ ಕಲ್ಯಾಣ್, ಜ್ಯೋತಿ ಕಾರಂತ್ ಹಾಗೂ ಅಮೆರಿಕನ್ನಡಿಗರಾದ ಗಣಪತಿ ಪಂಡಿತ್, ವಿನಾಯಕ ಕುರುವೇರಿ, ಮತ್ತು ಜ್ಯೋತಿ ಭಟ್ ಇವರೆಲ್ಲರಿಗೂ ಅಭಿನಂದನೆಗಳು. ನಿಜಹೇಳಬೇಕೆಂದರೆ ಕಳೆದವಾರ ಆ ಕೌಂಟ್‌ಡೌನ್ ಸಿದ್ಧಪಡಿಸುವಾಗ ನಾನು ‘ಸೊನ್ನೆ’ ಇರುವ ಹಾಡುಗಳನ್ನು ಹುಡುಕಿರಲೇ ಇಲ್ಲ. ಸುಲಭದಲ್ಲಿ ಅವು ನನಗೆ ನೆನಪಾಗಿರಲೂ ಇಲ್ಲ. ಸಿಕ್ಕಿದ್ದ ಒಂದು ಹಾಡನ್ನೇ ಕ್ವಿಜ್ ಪ್ರಶ್ನೆಯಾಗಿಸಿ ನಿಮ್ಮಕಡೆಗೆ ಎಸೆದಿದ್ದೆ. ಬಹುಶಃ ಅದೊಂದೇ ಹಾಡು ಇರುವುದಿರಬಹುದು ಎಂದುಕೊಂಡಿದ್ದರೆ ನಾನೂ ‘ಲೆಕ್ಕದಿ ಬರಿ ಸೊನ್ನೆ’ ಆಗುತ್ತಿದ್ದೆ! ಹೌದಲ್ವಾ, ಶುಭಮಂಗಳ ಚಿತ್ರದ ‘ಸ್ನೇಹದ ಕಡಲಲ್ಲಿ...’ ಹಾಡಿನ ಆ ಸಾಲನ್ನು ನೆನಪಿಸಿಕೊಂಡು ತುಂಬಾ ಮಂದಿ ಪತ್ರಿಸಿದ್ದಾರೆ. ಹಾಗೆಯೇ ‘ಶೂನ್ಯ’ ಇರುವ ಹಾಡುಗಳನ್ನು ಸೂಚಿಸಿ ಸುಮಾರಷ್ಟು ಪತ್ರಗಳು ಬಂದಿವೆ. ಪ್ರೇಮಲೋಕದಲ್ಲಿ ‘ಮೋಸಗಾರನಾ ಹೃದಯಶೂನ್ಯನಾ...’, ಮಾನಸ ಸರೋವರದಲ್ಲಿ ‘ವೇದಾಂತಿ ಹೇಳಿದನು ಈ ಬದುಕು ಶೂನ್ಯ ಶೂನ್ಯ...’, ದೇವರದುಡ್ಡು ಚಿತ್ರದಲ್ಲಿನ ಹಾಡು- ಶಿವರಂಜಿನಿ ರಾಗ ಆಧಾರಿತ ‘ನಾನೇ ಎಂಬ ಭಾವ ನಾಶವಾಯಿತು...’ ಪಿ.ಬಿ.ಶ್ರೀನಿವಾಸ್ ಹಾಡಿದ ಮಾಸ್ಟರ್‌ಪೀಸ್. ಅದರ ಚರಣದಲ್ಲಿ ‘ಎಲ್ಲ ಶೂನ್ಯ ಎಲ್ಲವೂ ಶೂನ್ಯ ಉಳಿಯುವುದೊಂದೇ ದಾನಧರ್ಮ ತಂದ ಪುಣ್ಯ...’ ಸಾಲುಗಳು. ಬಹಳ ಒಳ್ಳೆಯ ಅರ್ಥಗರ್ಭಿತ ಹಾಡು.

ಸೊನ್ನೆ ಅಂತ ಬರುವುದಷ್ಟೇ ಅಲ್ಲ, ಸೊನ್ನೆಯ ಬಗ್ಗೆಯೇ ಇರುವ ಹಾಡನ್ನು ಹುಡುಕಿಕೊಟ್ಟವರಿದ್ದಾರೆ. ೨೦೦೯ರಲ್ಲಿ ಬಿಡುಗಡೆಯಾದ ‘ಮೇಷ್ಟ್ರು’ ಚಿತ್ರದ ‘ಸೊನ್ನೆ ಅಂದ್ರೆ ಸುಮ್ನೆ ಅಲ್ಲ ಕಣ್ಲಾ...’ ಹಾಡು. ನನಗೆ ಇದುವರೆಗೂ ಗೊತ್ತೇ ಇರಲಿಲ್ಲ. ಕೇಳಿದರೆ ಒಳ್ಳೇ ಮಜಾ ಇದೆ ಆ ಹಾಡು. ‘ಮೇಷ್ಟ್ರು’ ಸಿನೆಮಾ ಅಷ್ಟೇನೂ ಯಶಸ್ವಿಯಾಗದ ಕಾರಣ ಹಾಡು ಜನಪ್ರಿಯವಾಗಲಿಲ್ಲವಂತೆ. ಅಂದಹಾಗೆ ನನಗೆ ಆ ಹಾಡಿನ ಇಂಟರ್‌ನೆಟ್ ಕೊಂಡಿಯನ್ನೂ ಸೇರಿಸಿ ಬರೆದು ತಿಳಿಸಿದವರು ಕ್ಯಾಲಿಫೋರ್ನಿಯಾದಲ್ಲಿರುವ ಸ್ನೇಹಿತ ಸುದತ್ತ ಗೌತಮ್. ಕನ್ನಡ ಚಿತ್ರರಂಗದ ಮೂಲಕವೇ ಪರಿಚಯ ಹೇಳುವುದಾದರೆ ಆತ ಚಿತ್ರಸಾಹಿತಿ ದಿ.ವಿಜಯನಾರಸಿಂಹ ಅವರ ಮೊಮ್ಮಗ (ಮಗಳ ಮಗ).

ಬೇರೆಬೇರೆ ಸಂಖ್ಯೆಗಳ ಹಾಡುಗಳನ್ನು ಮತ್ತು ಎಲ್ಲ ಪತ್ರಗಳನ್ನು ಇಲ್ಲಿ ಸೇರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಚಿತ್ರಗೀತೆಗಳನ್ನು ಜನ ಅದೆಷ್ಟು ಹಚ್ಚಿಕೊಳ್ಳುತ್ತಾರೆ, ಮನೆಮಂದಿಯೆಲ್ಲ ಸೇರಿ ಹೇಗೆ ಆನಂದಿಸುತ್ತಾರೆ ಎನ್ನುವುದಕ್ಕೆ ನಿದರ್ಶನವಾಗಿ ಒಂದೆರಡು ಪತ್ರಗಳನ್ನು ಉಲ್ಲೇಖಿಸುತ್ತೇನೆ. ಸಿಯಾಟಲ್‌ನಿಂದ ನಯನಾ ರಾವ್ ಬರೆದಿದ್ದಾರೆ- “ನಾನೂ ನನ್ನೆಜಮಾನ್ರೂ ಒಟ್ಟಿಗೇ ಕುಳಿತು ಬ್ಲಾಗ್‌ನಲ್ಲಿ ಧ್ವನಿಮಾಧ್ಯಮದಲ್ಲಿ ಕೌಂಟ್‌ಡೌನ್ ಕೇಳಿ ಆನಂದಿಸಿದೆವು. ತುಂಬ ಇಷ್ಟವಾಯಿತು. ಲೇಖನದಲ್ಲಿ ಬಂದ ಎಲ್ಲ ಹಾಡುಗಳ ಲಿಂಕ್ಸ್ ಸೇರಿಸಿ ಯೂಟ್ಯೂಬ್‌ನಲ್ಲಿ ಪ್ಲೇ-ಲಿಸ್ಟ್ ಮಾಡಿಟ್ಟೆವು”. ಶಿವಮೊಗ್ಗದಿಂದ ವಸುಮತಿ ಬಾಪಟ್ ಬರೆದಿದ್ದಾರೆ- “ಇದೊಂದು ರೋಚಕ ಅನುಭವ. ಮನೆ ಮಂದಿಯೆಲ್ಲಾ ಎಂಜಾಯ್ ಮಾಡಿದೆವು. ಪಂಚಮವೇದ ನನ್ನವರು ಯಾವಾಗಲೂ ಹಾಡುವ ಹಾಡು. ಹಾಗಾಗಿ ಆ ಸಾಲು ಅವರ ಮುಖದಲ್ಲಿ ಮಂದಹಾಸ ಮಿನುಗಿಸಿತು.” ಮೈಸೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ವಿನೊಲ್ ಡಿಸೋಜಾ: “ಮಂಗಳೂರಿನಲ್ಲಿರುವ ಅಮ್ಮ ನನಗೆ ಫೋನ್‌ನಲ್ಲಿ ಈ ಹಾಡುಗಳನ್ನು ತಿಳಿಸಿ ನಿಮಗೆ ಇಮೇಲ್ ಮಾಡಲು ಹೇಳಿದ್ದಾರೆ...” ಇವೆಲ್ಲಕ್ಕಿಂತ ಸ್ವಾರಸ್ಯದ ಪತ್ರವೆಂದರೆ ಬೆಂಗಳೂರಿನಿಂದ ಸರಸ್ವತಿ ಲಕ್ಷ್ಮಿನಾರಾಯಣ ಮತ್ತು ರಮ್ಯಾ ಸುಹಾಸ್ ಜಂಟಿಯಾಗಿ ಬರೆದಿರುವುದು. ಇವರು ಅತ್ತೆ-ಸೊಸೆ. ಹಾಗೆ ಪರಿಚಯ ತಿಳಿಸುತ್ತ ಇಬ್ಬರೂ ಸೇರಿ ಸಂಖ್ಯಾಗೀತೆಗಳನ್ನು ಕಲೆಹಾಕಿ ಅಂದವಾಗಿ ಬರೆದುಕಳಿಸಿದ್ದಾರೆ. ಹಾಡುಗಳ ಪಟ್ಟಿಗಿಂತಲೂ ಇವರ ಅನ್ಯೋನ್ಯತೆಗೆ ತಲೆದೂಗಬೇಕು. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತಾರಲ್ಲಾ, ಇಲ್ಲಿ ಅತ್ತೆಗೂ ಸೊಸೆಗೂ ಒಂದೇ ಕಾಲ(ಮ್)!

ಅದೆಲ್ಲಾ ಸರಿ, ಹಾಡುಗಳ ಕೌಂಟ್‌ಡೌನ್ ಎನ್ನುತ್ತ ನಾವು ಕೋಟಿ-ಲಕ್ಷಗಳಿಂದ ಹಿಡಿದು ಇಳಿಗಣನೆ ಮಾಡುತ್ತ ಸೊನ್ನೆಯವರೆಗೆ ತಲುಪಿದರೂ ಪೂರ್ಣಸಂಖ್ಯೆಗಳನ್ನು ಮಾತ್ರ ಪರಿಗಣಿಸಿದ್ದೆವಷ್ಟೆ? ಆದರೆ ದಶಮಾಂಶ ಅಥವಾ ಭಿನ್ನರಾಶಿ ಸಂಖ್ಯೆ ಇರುವ ಹಾಡೂ ಇದೆಯಂತ ಥಟ್ಟನೆ ಹೊಳೆದಿದೆ ದಕ್ಷಿಣಕನ್ನಡದ ಸುಳ್ಯ ಜಾಲ್ಸೂರಿನಲ್ಲಿ ಈಗಿನ್ನೂ ಎಸ್ಸೆಸ್ಸೆಲ್ಸಿ ಓದುತ್ತಿರುವ ಚರಣ್ ಎಸ್ ಭಟ್ ಎಂಬ ಹುಡುಗನಿಗೆ! ಇದಕ್ಕೆ ಹೇಳುವುದು ಲ್ಯಾಟರಲ್ ಥಿಂಕಿಂಗ್ ಅಂತ. ಭಿನ್ನರಾಶಿಯ ಆ ಹಾಡು ಯಾವುದಂತ ಅಂದ್ಕೊಂಡ್ರಿ? ಅದೇ, ಈಗ ಸೂಪರ್‌ಹಿಟ್ ಆಗಿದೆಯಲ್ಲಾ ‘ಜಾಕಿ’ ಚಿತ್ರದ ‘ಶಿವ ಅಂತ ಹೋಗುತ್ತಿದ್ದೆ ರೋಡಿನಲಿ...’ ಹಾಡು. ಅದರಲ್ಲಿ ‘1/2 ಟ್ಯಾಂಕು ಪೆಟ್ರೋಲ್ ಇತ್ತು ಬೈಕಿನಲಿ...’ ಸಾಲು. ವಾಹ್! ಹಾಡಿನ ಪಲ್ಲವಿಯಲ್ಲಿ ಸಂಖ್ಯೆಯನ್ನು ಗುರುತಿಸಿದ ಚರಣ! ಇನ್ನೊಂದು ಸ್ವಾರಸ್ಯವೂ ಇದೆ. ಇದನ್ನು ನಾನೇ ಗಮನಿಸಿದ್ದು. ಈ ಜಾಕಿ ಚಿತ್ರದ ಪ್ರತಿಯೊಂದು ಹಾಡಿನಲ್ಲೂ ಒಂದಲ್ಲ ಒಂದು ಸಂಖ್ಯೆ ಇದೆ. ‘ಶಿವ ಅಂತ ಹೋಗುತ್ತಿದ್ದೆ...’ ಹಾಡಿನಲ್ಲಿಯೇ ‘ಒಂದು ಕೇಜಿ ಅಕ್ಕಿ ರೇಟು ೩೦ ರೂಪಾಯಿ ಆಗಿಹೋಯ್ತು...’ ಅಂತ ಬರುತ್ತದೆ. ‘ಎಡವಟ್ಟಾಯ್ತು ತಲೆಕೆಟ್ಟೋಯ್ತು...’ ಹಾಡಿನಲ್ಲಿ ‘ಉಪ್ಪು ಖಾರ ತಿಂದ ಬಾಡಿಗ್ ೨೮ ಆಯ್ತು’ ಎಂದಿದೆ. ‘ಎಕ್ಕ ರಾಜ ರಾಣಿ...’ ಹಾಡಿನಲ್ಲಿ ‘ಒಂದೇ‌ಆಟ ಒಂದೇ‌ಆಟ ಎಂದುಕೊಂಡು...’ ಎಂಬ ಸಾಲಿದೆ, ಅದರಲ್ಲೇ ಮುಂದೆ ‘ದೇವ್ರವ್ನೇ ನೀ ನೈಂಟಿ (90) ಹೊಡಿ’ ಅಂತನೂ ಬರುತ್ತದೆ. ಕಡೆಗೆ ‘ಜಾಕಿ ಜಾಕಿ...’ ಟೈಟಲ್‌ಸಾಂಗ್‌ನಲ್ಲಿ ‘೬೪ ವಿದ್ಯೆಗೆಲ್ಲ ಇರೊದೊಬ್ರೇ ನಮ್ಮ ಬಾಸು’ ಎಂಬ ಸಾಲು. ಅಂತೂ ಜಾಕಿ ಏನೂ ಉಳಿಸಿಲ್ಲ ಬಾಕಿ.

ಕೌಂಟ್‌ಡೌನ್‌ನಲ್ಲಿ ನಂಬರ್ 1 ಸ್ಥಾನವನ್ನಲಂಕರಿಸಿದ್ದ ಮೂರು ಹಾಡುಗಳ ಪೈಕಿ ಪ್ರೇಮಲೋಕದ ಹಾಡಿನ ಸಾಲು ಬರೆದದ್ದರಲ್ಲಿ ಒಂದು ಚಿಕ್ಕ ತಪ್ಪು ನುಸುಳಿತ್ತು. ‘ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದ್ರೇ ಕೊಡ್ತೀಯಾ’ ಎಂದು ನಾನು ಬರೆದಿದ್ದೆ. ಅದು, ‘ಇಲ್ಲ ಅನ್ದೇ ಕೊಡ್ತೀಯಾ’ ಅಂತಿರಬೇಕಿತ್ತು. ಈ ಸೂಕ್ಷ್ಮವನ್ನು ಗಮನಿಸಿ ಬರೆದುತಿಳಿಸಿದ್ದಾರೆ ಮಡಿಕೇರಿಯಿಂದ ಸುಧಾ ಪ್ರಸಾದ್ ಮತ್ತು ಷಿಕಾಗೋದಿಂದ ತ್ರಿವೇಣಿ ಎಸ್ ರಾವ್. ಇಬ್ಬರಿಗೂ ಧನ್ಯವಾದಗಳು. ಒಳ್ಳೆಯದೇ ಆಯ್ತು, ಚಿತ್ರಗೀತೆಗಳಲ್ಲಿ ಕಂಡುಬರುವ ಅಥವಾ ಚಿತ್ರಗೀತೆ ಹಾಡುವಾಗ ಉಚ್ಚಾರ/ಅರ್ಥ ಅಥವಾ ಮೂಲ ಪದ ಏನೆಂಬ ಅರಿವಿಲ್ಲದೆ ತಪ್ಪಾಗಿ ಹಾಡುವ ಉದಾಹರಣೆಗಳದೇ ದೊಡ್ಡ ಪಟ್ಟಿ ಇದೆ ನನ್ನ ಬಳಿ. ಅದಕ್ಕೆ ಸೇರಿಸಬಹುದು. ‘ನಾ ಮೆಚ್ಚಿದ ಹುಡುಗ’ ಚಿತ್ರದ ಟೈಟಲ್‌ಸಾಂಗ್ ಚರಣದಲ್ಲಿ ‘ಪದಗಳು ತುಂಬಿದ ಕವನವಿದಲ್ಲ ಹೃದಯವೆ ಅಡಗಿದೆ ಇದಲಿ’ ಎನ್ನುವಲ್ಲಿ ‘ಇದಲಿ’ ಎಂದರೇನೆಂದು ನನಗೆ ಇವತ್ತಿನವರೆಗೂ ಅರ್ಥವಾಗಿಲ್ಲ. ಅದು ‘ಇರಲಿ’ ಆಗಬೇಕು, ಆಗ ಮುಂದಿನ ಸಾಲಿನಲ್ಲಿ ‘ಇದರ ಒಡೆತನ ನಿನದೇ ಎಲ್ಲ ಕೋಮಲ ಎಚ್ಚರವಿರಲಿ’ಗೆ ಪ್ರಾಸ ಹೊಂದುತ್ತದೆ ಎನ್ನುತ್ತಾರೆ ಕೆಲವರು. ಆದರೆ ಹೆಡ್‌ಫೋನ್ಸ್ ಹಾಕಿ ಕೇಳಿಸಿಕೊಂಡರೂ ನನಗದು ‘ಇದಲಿ’ ಎಂದೇ ಕೇಳಿಸುತ್ತದೆ. ಪ್ರೇಮಲೋಕದ ‘ಈ ನಿಂಬೆಹಣ್ಣಿನಂಥ ಹುಡುಗಿ ಬಂತು...’ ಹಾಡಿನಲ್ಲಿ ‘ತಲೆಯಿಂದ ಉಂಗುಷ್ಠದವರೆಗೆ ಎಲ್ಲ...’ ಅಂತಿದೆ. ಉಂಗುಷ್ಠ ಎಂಬ ಪದವೇ ಇಲ್ಲ, ಅದು ‘ಅಂಗುಷ್ಠ’ ಆಗಬೇಕು. ಬಬ್ರುವಾಹನದಲ್ಲಿ ‘ನಿನ್ನ ಕಣ್ಣ ನೋಟದಲ್ಲಿ...’ ಹಾಡಿನಲ್ಲಿ ‘ನಿನ್ನ ನಡೆಯ ಕಂಡ ಹಂಸೆ ನಾಚಿ ಓಡಿತು’ ಅಂತ ಬರುತ್ತದೆ. ಪಿ.ಬಿ.ಶ್ರೀನಿವಾಸ್ ಅನುನಾಸಿಕ ಕಂಠದಲ್ಲಿ ನನಗೆ ಹಂಸೆ ‘ಹಂಪೆ’ ಅಂತ ಕೇಳಿಸೋದು. ಹಂಪೆ ಯಾಕೆ ನಾಚಿ ಓಡ್ತದಪ್ಪಾ ಎಂದು ಅಚ್ಚರಿಪಡೋದು. ಅದಕ್ಕೆ ಕಾರಣ, ಹಂಸ ಎಂಬ ಪದದ ಪರಿಚಯ ಇದ್ದಷ್ಟು ಹಂಸೆ ಗೊತ್ತಿಲ್ಲದಿರುವುದು. ಅದೇ ಚಿತ್ರದ ‘ಆರಾಧಿಸುವೆ ಮದನಾರಿ...’ ಹಾಡಿನಲ್ಲಿ ‘ಆ ಮಾರನುರವಣೆ ಪರಿಹರಿಸು...’ ಎಂಬ ಸಾಲು ಬರುತ್ತದೆ. ಉರವಣೆ ಎಂದರೆ ಆತುರ, ಅವಸರ, ಸಂಭ್ರಮ, ಆಡಂಬರ, ರಭಸ, ಹೆಚ್ಚಳ ಎಂದು ಅರ್ಥ. ಇದು ಗೊತ್ತಾಗುವವರೆಗೂ ನಾನದನ್ನು ‘ಆಮಾರ ನೊಗವನೆ...’ ಎಂದೇ ಹೇಳುತ್ತಿದ್ದೆ! ಬಂಧನ ಚಿತ್ರದ ‘ಪ್ರೇಮದ ಕಾದಂಬರಿ...’ ಹಾಡನ್ನು ‘ಬರೆದೆನು ಕಣ್ಣೀರಲಿ...’ ಎಂದು ಉತ್ತಮಪುರುಷ ಧಾಟಿಯಲ್ಲಿ ಹಾಡುವವರು ಅನೇಕರಿದ್ದಾರೆ. ಅದು ‘ಬರೆದನು ಕಣ್ಣೀರಲಿ...’ ಆಗಬೇಕು. ಇಡೀಹಾಡು ಉತ್ತಮಪುರುಷದಲ್ಲಲ್ಲ ಪ್ರಥಮಪುರುಷದಲ್ಲಿ ಇರುವುದು ಎಂದು ‘ನನ್ನ ಕಥೆಗೆ ಅಂತ್ಯಬರೆದು ಕವಿಯು ಹರಸಿದ ನನ್ನನು...’ ಎಂಬ ಸಾಲಿನಲ್ಲಿ ಗೊತ್ತಾಗುತ್ತದೆ. ಸಾಕ್ಷಾತ್ಕಾರ ಚಿತ್ರದ ಟೈಟಲ್‌ಸಾಂಗ್ ಎರಡು ಆವೃತ್ತಿಗಳಿವೆ. ಪಿ.ಸುಶೀಲಾ ಮಾತ್ರ ಹೇಳಿರುವುದರಲ್ಲಿ ‘ಒಲವೇ ಮರಯದ ಮಮಕಾರ...’ ಎಂದು ಕೇಳಿಸುತ್ತದೆ. ಪಿ.ಬಿ.ಶ್ರೀನಿವಾಸ್ ಜತೆಗೂಡಿ ಹಾಡಿದ್ದರಲ್ಲಿ ‘ಒಲವೇ ಮರೆಯದ ಮಮಕಾರ...’ ಎಂದು ಸರಿಯಾಗಿಯೇ ಇದೆ. ‘ಮೊಗ್ಗಿನ ಮನಸ್ಸು’ ಚಿತ್ರದಲ್ಲಿ ‘ನನಗೂ ಒಬ್ಬ ಗೆಳೆಯ ಬೇಕು...’ ಅಂತ ಚಂದದ ಹಾಡೊಂದಿದೆ. ಜಯಂತ ಕಾಯ್ಕಿಣಿ ರಚನೆ. ಗಾಯಕಿಯರು ಕೆ.ಎಸ್.ಚಿತ್ರಾ ಮತ್ತು ಪ್ರಿಯಾ ಹಿಮೇಶ್. ಆ ಹಾಡಿನಲ್ಲಿ ‘ಚಂದಿರನ ಚಟ್ನಿಯಲ್ಲಿ ಸೇರಿ ತಿನಬೇಕು’ ಅಂತ ಒಂದು ಸಾಲು ಬರುತ್ತದೆ. ಒಂದನೆಯದಾಗಿ ಅದಕ್ಕೆ ಏನರ್ಥ ಅಂತ ನನಗೆ ದೇವರಾಣೆಗೂ ಗೊತ್ತಿಲ್ಲ. ದೋಸೆ ಅಥವಾ ಇಡ್ಲಿಯನ್ನು ಚಂದಿರನಿಗೆ ಹೋಲಿಸಿದ್ದೂ ಇರಬಹುದು. ಅದಕ್ಕಿಂತಲೂ ಆಭಾಸವೆಂದರೆ ಕನ್ನಡೇತರ ಗಾಯಕಿಯ ಧ್ವನಿಯಲ್ಲಿ ಚಟ್ನಿ ಎಂಬ ಪದ ಚಡ್ಡಿ ಎಂದು ಕೇಳಿಸುವುದು! ಆ ಹಾಡನ್ನು ನೀವೊಮ್ಮೆ ಕೇಳಲೇಬೇಕು.

ಇಲ್ಲಿಗೆ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಮತ್ತು ಕಾಡುಹರಟೆ ಮುಗಿಯಿತು. ಮುಂದಿನ ಕಾರ್ಯಕ್ರಮ ಕನ್ನಡದಲ್ಲಿ ವಾರ್ತೆಗಳು. ಪತ್ರಿಕೆಯ ಒಂದನೇ ಪುಟದಲ್ಲಿ ನೀವೇ ಓದಿಕೊಳ್ಳಿ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.
Podbean App

Play this podcast on Podbean App