Episodes
Thursday Sep 26, 2013
Are You You?
Thursday Sep 26, 2013
Thursday Sep 26, 2013
ದಿನಾಂಕ 22 ಸೆಪ್ಟೆಂಬರ್ 2013
ನೀನು ನೀನೇನಾ?
[ವಿಜಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿ ‘ವಿಜಯವಿಹಾರ’ದಲ್ಲಿ ಪ್ರಕಟವಾದ ಲೇಖನ ]* ಶ್ರೀವತ್ಸ ಜೋಶಿ
ಅದು, ಕೆಲ ದಿನಗಳ ಹಿಂದೆ ನನಗೆ ಬಂದಿದ್ದ ಒಂದು ಮಿಂಚಂಚೆಯ ವಿಷಯಸಾಲು (ಸಬ್ಜೆಕ್ಟ್ ಲೈನ್). ನಾನು ಚಂದಾದಾರನಾಗಿರುವ ಇಲ್ಲಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಇ-ಸುದ್ದಿಪತ್ರ ವಿಭಾಗದವರು ಕಳಿಸಿದ ಮಿಂಚಂಚೆಯದು. “Are you, you?” ಎಂದು ಅವರ ಪ್ರಶ್ನೆ. ನಾನು ನಾನೇ (ಅಂದರೆ ಅವರ ದೃಷ್ಟಿಕೋನದಿಂದಾದರೆ ನೀನು ನೀನೇ) ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಪ್ರಶ್ನೆ. ಹಾಗೆ ಕೇಳುತ್ತಿರುವುದಕ್ಕೆ ಕಾರಣವನ್ನೂ ಮಿಂಚಂಚೆಯಲ್ಲಿ ವಿವರಿಸಿದ್ದರು. ಇ-ಸುದ್ದಿಪತ್ರ ಪಡೆಯಲು ಯಾರೆಲ್ಲ ಯಾಹೂ ಇಮೇಲ್ ವಿಳಾಸ ಬಳಸುತ್ತಾರೋ ಅವರಿಗೆಲ್ಲ ಆ ಪ್ರಶ್ನೆ ಕೇಳಿದ್ದಾರಂತೆ. ಬೇನಾಮಿ ಇಮೇಲ್ ಐಡಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಯಾಹೂ ಕಂಪನಿ ಇತ್ತೀಚೆಗೆ ಪ್ರಕಟಣೆ ಹೊರಡಿಸಿದೆ; ನಿಮ್ಮ ಯಾಹೂ ಐಡಿ ಬೇನಾಮಿ ಅಲ್ಲ ತಾನೆ? ನೀವು ಈಗಲೂ ಅದನ್ನು ಬಳಸುತ್ತೀರಿ ತಾನೆ? ಅದೇ ಯಾಹೂ ವಿಳಾಸಕ್ಕೆ ನಾವು ಕಳಿಸುವ ಇ-ಸುದ್ದಿಪತ್ರ ನಿಮಗೆ ನಿಯಮಿತವಾಗಿ ತಲುಪುತ್ತಿದೆ ತಾನೆ? ಎಂದು ಮುಂತಾದ ಉಭಯಕುಶಲೋಪರಿ ವಿಚಾರಣೆ ಅವರ ಉದ್ದೇಶ. ಅಷ್ಟೇಅಲ್ಲ, ನೀನು ನೀನೇ ಹೌದು ಅಂತಾದರೆ ಈ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂಬ ಒಕ್ಕಣೆಯೂ ಆ ಮಿಂಚಂಚೆಯಲ್ಲಿತ್ತು.ನನ್ನ ಯಾಹೂ ವಿಳಾಸ ಬೇನಾಮಿ ಏನಲ್ಲ. ನಾನದನ್ನು ದಿನಾ ಬಳಸುತ್ತೇನೆ. ವಾಷಿಂಗ್ಟನ್ ಪೋಸ್ಟ್ನ ಇ-ಸುದ್ದಿಪತ್ರ ಸಹ ನನ್ನ ಯಾಹೂ ಡಬ್ಬಕ್ಕೆ ಪ್ರತಿದಿನವೂ ಸುಸೂತ್ರವಾಗಿ ಬಂದು ಬೀಳುತ್ತದೆ. ಹಾಗಾಗಿ ಆ ಮಿಂಚಂಚೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಾದ್ದೇನಿಲ್ಲ. ಪರಂತು "Are you, you?" ಎಂಬ ಪ್ರಶ್ನೆ ಮಾತ್ರ ನನಗೆ ಮೊದಲು ಒಂಚೂರು ತಮಾಷೆಯಾಗಿ, ಆಮೇಲೆ ಸ್ವಲ್ಪ ಕೆಣಕು-ತಿಣುಕಾಗಿ, ಮತ್ತೂ ಯೋಚಿಸಿದರೆ ಜಿಜ್ಞಾಸೆಯಾಗಿ, ಆಳಕ್ಕಿಳಿದಂತೆಲ್ಲ ತತ್ತ್ವಜ್ಞಾನದ ಸವಾಲಾಗಿ ಕಂಡುಬಂತು! ಒಮ್ಮೆ ನೀವೂ ಯೋಚಿಸಿ ನೋಡಿ- "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ತತ್ಕ್ಷಣದ ಉತ್ತರ?
ಅಂತರಜಾಲದಲ್ಲಿ, ಕಂಪ್ಯೂಟರ್ ಬಳಕೆಯಲ್ಲಿ ಈ ‘ನೀನು ನೀನೇನಾ?’ ಎನ್ನುವ ಪ್ರಶ್ನೆ ಯಾವಾಗಲೂ ಪ್ರಸ್ತುತವೇ. ಅದಕ್ಕೋಸ್ಕರವೇ ಪಾಸ್ವರ್ಡುಗಳು, ಕಂಪ್ಯೂಟರ್ ಬಳಕೆದಾರನ ಪರಿಚಯವನ್ನು ಸರಿಯಾಗಿ ತಿಳಿದುಕೊಳ್ಳಲು ಪರಿಪರಿಯ ಪರಿಕರಗಳು ವಿಧಾನಗಳೆಲ್ಲ ಇರುವುದು. ಕೆಲವು ಜಾಲತಾಣಗಳಲ್ಲಂತೂ "ನೀನೊಬ್ಬ ರೋಬಾಟ್ ಅಲ್ಲ, ಸಾಮಾನ್ಯ ಮನುಷ್ಯ ಎಂದು ದೃಢಪಡಿಸುವುದಕ್ಕಾಗಿ ಇಂಥದನ್ನು ಮಾಡಿತೋರಿಸು..." ಎಂದು ನಿರ್ದೇಶನವೂ ಇರುತ್ತದೆ! ಕಂಪ್ಯೂಟರ್ ವ್ಯವಸ್ಥೆಯನ್ನು ಅತ್ಯಂತ ಸುಭದ್ರಗೊಳಿಸಿದ್ದೇವೆ ಎಂದು ಯಾರು ಎಷ್ಟು ಹೆಮ್ಮೆಯಿಂದ ಹೇಳಿಕೊಂಡರೂ ರಂಗೋಲಿ ಕೆಳಗೆ ತೂರಬಲ್ಲ ಚೋರಚಾಣಾಕ್ಷರು ಇರುವುದರಿಂದ ಅವೆಲ್ಲ ಅನಿವಾರ್ಯವೂ ಹೌದು. ಮತ್ತೆ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯವರು ನನಗೆ ಮಿಂಚಂಚೆ ಬರೆದು ನೀನು ನೀನೇನಾ ಎಂದು ಕೇಳಿದ್ದಾದರೂ ಆ ದಿಸೆಯಲ್ಲೇ.
ನನಗೆ ತಮಾಷೆ ಅನಿಸಿದ್ದೇನೆಂದರೆ ಒಂದುವೇಳೆ ಆ ಪ್ರಶ್ನೆಗೆ ಕಡ್ಡಾಯವಾಗಿ (ಹೌದು ಅಂತಾದ್ರೂ, ಅಲ್ಲ ಅಂತಾದ್ರೂ) ಉತ್ತರಿಸಲೇಬೇಕು ಅಂತಿದ್ದಿದ್ದರೆ ಹೇಗೆ ಉತ್ತರಿಸುವುದು? ಪುರಾವೆ ಹೇಗೆ ಒದಗಿಸುವುದು? ನೆನಪಿರಲಿ- ಅವರು ಕೇಳಿದ್ದು ‘ನೀನು ಶ್ರೀವತ್ಸ ಜೋಶಿನಾ?’ ಅಂತಲ್ಲ. ಹಾಗೊಂದು ವೇಳೆ ಕೇಳಿದ್ದಿದ್ದರೆ ನಾನೇ ಶ್ರೀವತ್ಸ ಜೋಶಿ ಎಂದು ಸಾರುವ ಯಾವುದಾದರೂ ಗುರುತುಪತ್ರವನ್ನು- ಡ್ರೈವಿಂಗ್ಲೈಸೆನ್ಸೋ ಪಾಸ್ಪೋರ್ಟೋ ಇನ್ನೊಂದೋ ಮತ್ತೊಂದೋ ಏನನ್ನಾದರೂ ತೋರಿಸಬಹುದಾಗಿತ್ತು. ಭಾರತದಲ್ಲಾಗಿದ್ರೆ ‘ಆಧಾರ್’ ಕಾರ್ಡನ್ನೇ ಆಧಾರವಾಗಿ ತೋರಿಸಬಹುದಾಗಿತ್ತು ಎನ್ನಿ. ಆದರೆ ಸಮಸ್ಯೆ ಇರೋದು ನಾನು ನಾನೇ ಎಂದು, ಅಥವಾ ನಾನು ನಾನಲ್ಲ ಎಂದು ಉತ್ತರಿಸುವುದರಲ್ಲಿ!
ಸಮಸ್ಯೆಯ ವಿಶ್ಲೇಷಣೆಗೆ ಮೊದಲು, ಒಂದೆರಡು ಲಘು ಪ್ರಸಂಗಗಳನ್ನು ಮೆಲುಕುಹಾಕೋಣ.
ನಾನು ಪಿಯುಸಿ ಓದುತ್ತಿದ್ದಾಗ ನಮ್ಮ ತರಗತಿಯಲ್ಲಿ ನಂದಾ ಮತ್ತು ನೀನಾ ಎಂಬ ಹೆಸರಿನ ಇಬ್ಬರು ಹುಡುಗಿಯರಿದ್ದರು. ಹಾಜರಿಪಟ್ಟಿಯಲ್ಲಿ ಅವರಿಬ್ಬರ ಹೆಸರುಗಳು ಅನುಕ್ರಮದಲ್ಲಿದ್ದವು. ನಮ್ಮ ಕೆಮೆಸ್ಟ್ರಿ ಪ್ರೊಫೆಸರರು ಬೇಕಂತಲೇ "ನಂದಾ ನೀನಾ?" ಎಂದು ಪ್ರಶ್ನೆಕೇಳುವ ಧಾಟಿಯಲ್ಲಿ ಹಾಜರಿ ಕರೆಯೋರು. ನಂದಾ ಮತ್ತು ನೀನಾ ಇಬ್ಬರೂ ಒಟ್ಟೊಟ್ಟಿಗೇ ಯಸ್ ಸಾರ್ ಎನ್ನೋರು. "ನಾನು ಒಬ್ಬಳನ್ನೇ ಮಾತಾಡ್ಸಿದ್ದಮ್ಮಾ ಇಬ್ಬರೂ ಯಾಕೆ ಎದ್ದುನಿಂತ್ರಿ?" ಎಂದು ಪ್ರೊಫೆಸರ್ ಪ್ರಶ್ನೆ. ಆಮೇಲೆ ನಂದಾಳನ್ನುದ್ದೇಶಿಸಿ “ನಿನ್ನ ಹೆಸರೇನಮ್ಮಾ?" ಎಂದು ಕೇಳಿದರೆ ಆಕೆ ‘ನಂದಾ’ ಎಂದಾಗ "ಹೌದಮ್ಮ ನಿನ್ನದೇ ಹೆಸರು ಕೇಳಿದ್ದು" ಎನ್ನೋರು. ಅಂತೂ ಒಳ್ಳೇ ತಮಾಷೆ. ನಂದಾ-ನೀನಾಗಳಂತೆಯೇ ಹೆಸರುಗಳಲ್ಲೇ ತರ್ಕ ಹುಟ್ಟಿಸಬಹುದಾದ ಇನ್ನೊಂದು ಪ್ರಸಂಗವೆಂದರೆ(ಇದು ಕಾಲ್ಪನಿಕ)- ಹಿಂದಿ ಚಿತ್ರರಂಗದ ನಾನಾ ಪಾಟೇಕರ್ ಮತ್ತು ನೀನಾ ಗುಪ್ತಾ ಇವರಿಬ್ಬರೂ ಕನ್ನಡದಲ್ಲಿ, ಅದರಲ್ಲೂ ಪರಸ್ಪರ ಹೆಸರು ಕೂಗಿ ಮಾತಾಡಿದರೆ? "ನಾನಾ? ನೀನಾ?" ಎಂಬ ಸಂದೇಹ ನಿವಾರಣೆಯಲ್ಲೇ ಕಾಲ ಕಳೆದುಹೋಗಬಹುದು. ಅವರ ಜತೆ ಮಾಧುರಿ ದೀಕ್ಷಿತ್ ‘ನೇನೆ’ ತೆಲುಗಿನಲ್ಲಿ ಮಾತನಾಡುತ್ತ ಸೇರಿಕೊಂಡರೆ ಕಥೆ ಮುಗೀತು. ಹಿನ್ನೆಲೆಯಲ್ಲಿ ಗಡಿಬಿಡಿ ಗಂಡ ಚಿತ್ರದ ಹಾಡು. ಅದೇ- ರವಿಚಂದ್ರನ್ ಮತ್ತು ತಾಯ್ನಾಗೇಶ್ ಪರಸ್ಪರ ಚಾಲೆಂಜ್ ಹಾಕಿಕೊಳ್ತಾರಲ್ಲ ‘ನೀನು ನೀನೇ ಇಲ್ಲಿ ನಾನು ನಾನೇ... ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯ ದಾಸಾನುದಾಸ...’
ಕನ್ನಡ-ತೆಲುಗು ಅಷ್ಟೇಅಲ್ಲ. ಇಂಗ್ಲಿಷ್ನ ಮಜಾ ಕೇಳಿ. ಎಂಜಿನಿಯರಿಂಗ್ ಕಾಲೇಜಲ್ಲಿ ಯು.ಆರ್.ಸುಬ್ರಹ್ಮಣ್ಯ ಎಂಬ ಹೆಸರಿನ ಸಹಪಾಠಿಯೊಬ್ಬನಿದ್ದ. ಅವನನ್ನು ನಮ್ಮ ಲೆಕ್ಚರರ್ರು "ಆರ್ ಯೂ ಸುಬ್ರಹ್ಮಣ್ಯ?" ಎಂದು ಕೇಳಿದಾಗಲೆಲ್ಲ ಅವನು "ಯು.ಆರ್.ಸುಬ್ರಹ್ಮಣ್ಯ" ಎಂದು ಉತ್ತರಿಸುತ್ತಿದ್ದ, ತನ್ನ ಇನಿಶಿಯಲ್ಸನ್ನು ಆಚೀಚೆ ಮಾಡಿ ಕೇಳಿದ್ದಕ್ಕೆ ಮುನಿಸಿಕೊಂಡು. "ನನ್ನ ಹೆಸರು ಸುಬ್ರಹ್ಮಣ್ಯ ಅಲ್ಲಪ್ಪಾ, ನೀನು ಸುಬ್ರಹ್ಮಣ್ಯನಾ?" ಎಂದು ಕನ್ನಡದಲ್ಲಿ ಕೇಳಿ ಲೆಕ್ಚರರ್ ಗದರಿಸುತ್ತಿದ್ದರು ಹುಸಿಕೋಪದಿಂದ. "ಯು.ಆರ್" ಎಂಬ ಇನಿಶಿಯಲ್ಸ್ ಇರುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯವರಿಗೂ ಇಂಥದೇ ಸ್ವಾರಸ್ಯಕರ ಪೀಕಲಾಟಗಳು ಒಮ್ಮೆಯಾದರೂ ಎದುರಾಗಿವೆಯಿರಬಹುದು.ಹೆಸರಿನಿಂದಲೇ ಹುಟ್ಟಿಕೊಳ್ಳುವ ‘ಐಡೆಂಟಿಟಿ ಕ್ರೈಸಿಸ್’ ಅದು! ಆದರೂ ನಮ್ಮ ಐಡೆಂಟಿಟಿಗೆ ಮೊದಲನೆಯದಾಗಿ ಜೋಡಣೆಯಾಗುವುದು ನಮ್ಮ ಹೆಸರೇ. ಇಬ್ಬರು ವ್ಯಕ್ತಿಗಳಿಗೆ ಒಂದೇ ಹೆಸರಿದ್ದರೆ ಅಡ್ಡಹೆಸರು, ಊರಿನ ಹೆಸರು, ಇನಿಶಿಯಲ್ಸು ಇತ್ಯಾದಿ. ನಾಮದ ಬಲವೊಂದೇ ಸಾಕಾಗದಿದ್ದರೆ ಭಾವಚಿತ್ರ. ಹಾಗಾಗಿಯೇ "ಯಾವುದಾದರೂ ಫೋಟೊ ಐಡಿ ತೋರಿಸಲೇಬೇಕು" ಎನ್ನುವುದು ಜಾಗತಿಕವಾಗಿ ಒಂದು ರೂಢಿ ಎನ್ನುವುದಕ್ಕಿಂತಲೂ ನಿಯಮವೇ ಆಗಿಬಿಟ್ಟಿದೆ. ಭಾವಚಿತ್ರವೇ ಎಲ್ಲವನ್ನೂ ತಿಳಿಸಬಲ್ಲುದೇ? ನಿಮಗೆ ಒಂದು ಹಳೆಯ ಹಿಂದಿ ಸಿನೆಮಾಹಾಡು, ಕಿನಾರಾ ಚಿತ್ರದ್ದು, ನೆನಪಿರಬಹುದು- "ನಾಮ್ ಗುಮ್ ಜಾಯೇಗಾ... ಚೆಹರಾ ಯೇ ಬದಲ್ ಜಾಯೇಗಾ... ಮೇರೀ ಆವಾಜ್ ಹೀ ಪೆಹಚಾನ್ ಹೈ ಗರ್ ಯಾದ್ ರಹೇ..." ಅಂದರೆ, ಹೆಸರು ಮರೆತು ಹೋಗಬಹುದು; ಮುಖಚರ್ಯೆ ಬದಲಾಗಬಹುದು. ಆದರೆ ನನ್ನ ಧ್ವನಿಯನ್ನು ನೆನಪಿಟ್ಟುಕೊಂಡರೆ ಅದೇ ನನ್ನ ಪರಿಚಯದ ಗುರುತು ಎನ್ನುತ್ತಾಳೆ ಚಿತ್ರದ ನಾಯಕಿ!
ಹೆಸರು, ಮುಖಚರ್ಯೆ, ಧ್ವನಿ ಎಲ್ಲ ಪರಿಚಯವಾಗಿದ್ದರೂ ಶಕುಂತಲೆಯನ್ನು ಮರೆತೇಬಿಟ್ಟನಲ್ಲ ದುಷ್ಯಂತ ಮಹಾರಾಜ? ಅದಕ್ಕೇನನ್ನೋಣ? ಅವನು ಕೊಟ್ಟಿದ್ದ ಉಂಗುರವಾದರೂ ಪರಿಚಯಪ್ರಮಾಣ ಆಗಬಹುದೆಂದು ಆಕೆ ಬಗೆದರೆ ಅದೂ ಕಳೆದುಹೋಗಬೇಕೇ! ವಿಧಿವಿಪರೀತ ವಿಧಿಯಾ ಆಟ. ಮತ್ತದೇ ಪ್ರಶ್ನೆ. ನೀನು ನೀನೇನಾ ಎಂದು ಕೇಳಿದರೆ ಉತ್ತರಿಸುವುದೆಂತು? ನಾನು ನಾನೇ ಎನ್ನಲು ಆಧಾರವೆಂತು? ಈ ಪ್ರಪಂಚದಲ್ಲಿ ಒಬ್ಬೊಬ್ಬ ವ್ಯಕ್ತಿಯ ಬೆರಳಚ್ಚು ವಿನ್ಯಾಸ (ಫಿಂಗರ್ಪ್ರಿಂಟ್)ಗಳು ಅನನ್ಯವಾಗಿರುತ್ತವೆ ಎಂದು ವಿಜ್ಞಾನದಿಂದ ಕಂಡುಕೊಂಡಿದ್ದೇವೆ. ಅಕ್ಷರಸ್ಥರಾಗಿಯೂ ಹೆಬ್ಬೆಟ್ಟು ಒತ್ತುವ ಸಂದರ್ಭಗಳನ್ನು ನಿಯಮಗಳಿಗೋಸ್ಕರ ರೂಪಿಸಿಕೊಂಡಿದ್ದೇವೆ. ಅಮೆರಿಕದಲ್ಲಿ ವಿಮಾನನಿಲ್ದಾಣದಲ್ಲಿ ಇಳಿದೊಡನೆ ಊರಿನೊಳಗೆ ಪ್ರವೇಶಿಸುವ ಮೊದಲು ಫಿಂಗರ್ಪ್ರಿಂಟುಗಳ ತಪಾಸಣೆ ಆಗಲೇಬೇಕು. ಈಗ ಬೆರಳಚ್ಚುಗಳಷ್ಟೇ ಅಲ್ಲ, ಕಣ್ಣಿನ ಪಾಪೆ ಸಹ ಪ್ರತಿಯೊಬ್ಬ ವ್ಯಕ್ತಿಯದೂ ಅನನ್ಯ ವಿನ್ಯಾಸದ್ದಾಗಿರುತ್ತದೆಂದು ತಿಳಿದುಬಂದಿರುವುದರಿಂದ Iris identification ಅಂತಲೂ ಶುರುವಾಗಿದೆ. ಗುರುತಿನ ಅಗತ್ಯ ಮತ್ತಷ್ಟು ಗುರುತರವಾದರೆ ಡಿಎನ್ಎ ಟೆಸ್ಟಿಂಗ್ ಸಹ ಇದ್ದೇಇದೆಯಲ್ಲ?
ಆದರೆ ನನ್ನ ಜಿಜ್ಞಾಸೆಗೆ ಅದಾವುದೂ ಸಮರ್ಪಕವಾಗಿ ಉತ್ತರ ಕೊಡಲಾರದು. ಯಾಕೆ ಹೇಳಿ? ದೈಹಿಕ ಲಕ್ಷಣಗಳಿಂದ ನಾನು ನಾನೇ ಎಂದು ನಿರ್ಧರಿಸುವುದೇ ಆದಲ್ಲಿ ನನ್ನ ದೇಹದ ಒಂದೊಂದೇ ಅಂಗವನ್ನು ಬದಲಾಯಿಸುತ್ತಾ ಹೋದರೆ ನಾನು ನಾನಾಗಿಯೇ ಇರುತ್ತೇನೆಯೇ? ‘ಥೀಸಿಯಸ್ನ ಹಡಗಿನ ಕತೆ’ಯನ್ನು ನೀವು ಕೇಳಿರಬಹುದು/ಓದಿರಬಹುದು. ಮೊನ್ನೆಮೊನ್ನೆ ಅದೇ ಹೆಸರಿನ ಒಂದು ಸಿನೆಮಾ ಸಹ ಬಿಡುಗಡೆಯಾಗಿದೆಯಂತೆ. ಥೀಸಿಯಸ್ ಎಂಬ ನಾವಿಕ ಹಡಗಿನಲ್ಲಿ ಹೊರಟವನು ದಾರಿಯುದ್ದಕ್ಕೂ ತನ್ನ ಹಡಗಿನ ಒಂದೊಂದೇ ಭಾಗವನ್ನು ಬದಲಾಯಿಸುತ್ತ ಹೋಗಬೇಕಾಗುತ್ತದೆ. ಗಮ್ಯಸ್ಥಾನ ತಲುಪುವಾಗ ಅವನ ಹಡಗಿನ ಪ್ರತಿಯೊಂದು ಭಾಗವೂ ಹೊಸತು ಜೋಡಿಸಿದ್ದಾಗಿರುತ್ತದೆ. ಆದರೂ ಜನ ಅದನ್ನು ಥೀಸಿಯಸ್ನ ಹಡಗು ಎಂದೇ ಗುರುತಿಸುತ್ತಾರೆ. ಥೀಸಿಯಸ್ ಬಿಸಾಡಿದ ಭಾಗಗಳನ್ನೆಲ್ಲ ಸೇರಿಸಿ ಇನ್ನೊಂದು ಹಡಗನ್ನು ಒಬ್ಬಾತ ನಿರ್ಮಿಸುತ್ತಾನೆ. ಅಸಲಿಗೆ ಅದೇ ಥೀಸಿಯಸ್ನ ಒರಿಜಿನಲ್ ಹಡಗು ಅಲ್ಲವೇ? ಅದೇರೀತಿ ಒಂದುವೇಳೆ ನನ್ನ ದೇಹದ ಅಂಗಗಳನ್ನು (ನನಗೆ ಹೊಸದನ್ನು ಜೋಡಿಸುವಾಗ ಬಿಸಾಡಿದ ಹಳೆಯವನ್ನು) ಜೋಡಿಸಿ ಹೊಸದೊಂದು ವ್ಯಕ್ತಿಯಾದರೆ ಅದೂ ನಾನೇ ಆಗಿರುತ್ತೇನೆಯೇ? ಹಾಗಾದರೆ ನಾನು ಯಾರು? ಕನಕದಾಸರು ‘ನಾನು ಹೋದರೆ ಹೋದೇನು’ ಎಂದು ಹೇಳಿದಾಗಿನ ‘ನಾನು’ ನಾನೇ?
ತರ್ಕ ಮಾಡುತ್ತ ಹೋದರೆ ಈ ಜಿಜ್ಞಾಸೆಯು ದೇಹ-ಆತ್ಮ, ಪ್ರಕೃತಿ-ಪುರುಷ, ದ್ವೈತ-ಅದ್ವೈತ ಸಿದ್ಧಾಂತಗಳನ್ನೆಲ್ಲ ದಾಟಿ ಅಹಂ ಬ್ರಹ್ಮಾಸ್ಮಿ ಎಂದುಕೊಂಡು ಪರಬ್ರಹ್ಮನ ಪದತಲದವರೆಗೂ ಹೋಗಬಹುದೇನೋ. ತತ್ತ್ವಮಸಿ (ತತ್ ತ್ವಮ್ ಅಸಿ = ಅದು ನೀನೇ ಆಗಿರುವಿ) ಎಂಬ ಛಾಂದೋಗ್ಯೋಪನಿಷತ್ತಿನ ಮಹಾವಾಕ್ಯದವರೆಗೂ ತಲುಪಬಹುದೇನೋ. ಅಣೋರಣೀಯನೂ ಮಹತೋಮಹೀಯನೂ ಅಪ್ರಮೇಯನೂ ನಿರಾಕಾರನೂ ಸರ್ವಾಂತರ್ಯಾಮಿಯೂ ಆದ ಪರಬ್ರಹ್ಮನಿಗೇ ನಾವು ತತ್ತ್ವಮಸಿ ಎಂದು ಗುರುತುಪತ್ರ ಕೊಡಬಲ್ಲೆವು, ಆದರೆ ನನಗೆ ನಿಮಗೆ ಸರಿಯಾದ ಗುರುತಿಲ್ಲವೆಂದರೆ ಆ ಪರಬ್ರಹ್ಮನಿಗೂ ನಗು ಬಂದೀತು!
ಅಬ್ಬಾ! ಒಂದು ಇಮೇಲ್ ಸಬ್ಜೆಕ್ಟ್ ಲೈನ್ ನಮ್ಮೆಲ್ಲ ಆಲೋಚನೆಗಳನ್ನು ಬುಡಮೇಲು ಮಾಡಿ ಇಷ್ಟು ಗಹನವಾದ ಸಬ್ಜೆಕ್ಟ್ ಆಗಿಬಿಟ್ಟಿತಲ್ಲ! ಪ್ರಶ್ನೆ ಇರೋದೇ ಸಬ್ಜೆಕ್ಟ್ ಯಾವುದು ಒಬ್ಜೆಕ್ಟ್ ಯಾವುದು ಎನ್ನುವುದಲ್ಲವೇ? ಈಗ ಹೇಳಿ, "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ಉತ್ತರ?
["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]
Version: 20240731
Comments (1)
To leave or reply to comments, please download free Podbean or
ತುಂಬಾ ಚೆನ್ನಾಗಿದೆ! ನಾನು ನಾನೇ!
Wednesday Nov 22, 2017
To leave or reply to comments,
please download free Podbean App.