Episodes

Sep 3, 2011
Beautiful Beliefs
Sep 3, 2011
Sep 3, 2011
ದಿನಾಂಕ 04 ಸೆಪ್ಟೆಂಬರ್ 2011ರ ಸಂಚಿಕೆ...
‘ಕೆರೆಯ ನೀರನು ಕೆರೆಗೆ ಚೆಲ್ಲಿ...’ ಎಂಬಂತೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಸತತ ಮೂರು ವಾರಗಳಿಂದ ನಂಬಿಕೆಗಳದ್ದೇ ಪಾರಾಯಣ (ಓದುಗರೊಬ್ಬರು ಇಟ್ಟ ಹೆಸರು ‘ನಂಬಿಕಾಯಣ’). ನೀವು ಗಮನಿಸಿದ್ದೀರೊ ಇಲ್ಲವೋ ಮೂರು ವಾರವೂ ತಲೆಬರಹದಲ್ಲಿ ದಾಸವಾಣಿಯ ಮೂಲಕ ಭಗವನ್ನಾಮಸ್ಮರಣ. ‘ಚಿಂತ್ಯಾಕೆ ಮಾಡುತ್ತಿದ್ದಿ ಚಿನ್ಮಯನಿದ್ದಾನೆ...’, ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ...’ ಮತ್ತು ಇವತ್ತಿನ ‘ಕೆರೆಯ ನೀರನು ಕೆರೆಗೆ ಚೆಲ್ಲಿ...’ - ಇವೆಲ್ಲವೂ ಪುರಂದರದಾಸರ ಜನಪ್ರಿಯ ರಚನೆಗಳು. ಈರೀತಿ ಯಾವುದಾದರೂ ಹಾಡಿನ ಸಾಲನ್ನು (ಚಿತ್ರಗೀತೆ ಭಾವಗೀತೆ ಭಕ್ತಿಗೀತೆ ಯಾವುದೂ ಆಗುತ್ತೆ) ಲೇಖನಕ್ಕೆ ಶೀರ್ಷಿಕೆಯಾಗಿಸುವುದು ನನಗೆ ತುಂಬಾ ಇಷ್ಟ. ಓದುಗರ ಗಮನ ಸೆಳೆಯಲು ಅದೊಂದು ತಂತ್ರವೂ ಹೌದೆನ್ನಿ. ಅಲ್ಲದೇ ಅಂಕಣಕ್ಕೊಂದು ಅನೌಪಚಾರಿಕ ಆಪ್ತತೆ ಅದರಿಂದ ಬರುತ್ತದೆಂದು ನನ್ನ ನಂಬಿಕೆ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಈ ಪ್ರಯೋಗ ಮಾಡುತ್ತೇನೆ. ಪ್ರಸ್ತುತ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಶೀರ್ಷಿಕೆಗೆ ಎರಡು ಕಾರಣಗಳಿವೆ: ಓದುಗರ ನಂಬಿಕೆಗಳ ಪತ್ರಗಳು ಇನ್ನೂ ಪ್ರವಾಹದೋಪಾದಿಯಲ್ಲಿ ಬರುತ್ತಿದ್ದು ಅವುಗಳಲ್ಲಿನ ಸ್ವಾರಸ್ಯಕರ ಅಂಶಗಳನ್ನು ನಾನೊಬ್ಬನೇ ಸವಿಯುವುದು ಸರಿಯಲ್ಲ, ಅದಕ್ಕೋಸ್ಕರ ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಈ ವಾರವೂ ಓದುಗರ ಓಲೆಗಳದೇ ಟಚ್. ಎರಡನೆಯ ಕಾರಣ ಸ್ವಲ್ಪ ತಮಾಷೆಯದು; ಅದೇನೆಂದು ಲೇಖನವನ್ನು ಓದಿಮುಗಿಸಿದಾಗ ನೀವೇ ಕಂಡುಕೊಳ್ಳುವಿರಂತೆ. ಕಳೆದುಹೋದ ವಸ್ತು ಸಿಗಬೇಕಿದ್ದರೆ ಕಾರ್ತವೀರ್ಯಾರ್ಜುನನನ್ನು ಸ್ಮರಿಸಬೇಕೆಂಬ ನಂಬಿಕೆಯನ್ನು ಕಳೆದವಾರ ತಿಳಿದುಕೊಂಡೆವಷ್ಟೆ? ನಾನೆಲ್ಲೋ ಅದು ತಮಾಷೆಗೆಂದೇ ಸೃಷ್ಟಿಯಾದದ್ದಿರಬಹುದು ಎಂದುಕೊಂಡಿದ್ದೆ. ಮತ್ತೆ ನೋಡಿದರೆ ಅದಕ್ಕೊಂದು ಮಂತ್ರವೂ ಇದೆಯಂತೆ! ಹಾಸ್ಯಲೇಖಕ ಬೇಲೂರು ರಾಮಮೂರ್ತಿ ಪತ್ರದಲ್ಲಿ ಬರೆದಿದ್ದಾರೆ- “ನಾನು ಚಿಕ್ಕವನಿದ್ದಾಗ ಏನೇ ವಸ್ತುಗಳನ್ನು ಕಳೆದುಕೊಂಡರೂ ನಮ್ಮ ತಂದೆ ನನಗೆ ಕೈಕಾಲು ಮುಖ ತೊಳೆದುಕೊಂಡು ಬರುವಂತೆ ಹೇಳಿ ದೇವರಿಗೆ ಊದುಬತ್ತಿ ಹಚ್ಚಿಸಿ ನಮಸ್ಕಾರ ಮಾಡಿಸಿ ಆಮೇಲೆ, ಕಾರ್ತವೀರ್ಯಾರ್ಜುನೋನಾಮ ರಾಜಾಬಾಹುಸಹಸ್ರವಾನ್ | ತಸ್ಯಸ್ಮರಣ ಮಾತ್ರೇಣ ಹೃತಂ ನಷ್ಟಂ ಚ ಲಭ್ಯತೇ|| ಎಂಬ ಮಂತ್ರ ಹೇಳಿಕೊಡುತ್ತಿದ್ದರು. ನಾನದನ್ನು ಹೇಳಿದ್ದೂಹೇಳಿದ್ದೇ. ಕೆಲವೊಮ್ಮೆ ವಸ್ತು ಸಿಕ್ಕಿದ್ದೂ ಇದೆಯೆನ್ನಿ.” ರಾಮಮೂರ್ತಿಯವರ ಪತ್ರವನ್ನು ನಾನು ಚಿಟಿಕೆ ಉಪ್ಪಿನೊಂದಿಗೇ ಗ್ರಹಿಸಿದ್ದೆ. ಆ ಮಂತ್ರ ಅವರ ಕಿಸೆಯಿಂದಲೇ ಇದ್ದಿರಬಹುದು ಎಂದುಕೊಂಡಿದ್ದೆ. ಆದರೆ ಉಡುಪಿಯಿಂದ ನಂದಕಿಶೋರ ಅವರೂ ಅದೇ ಶ್ಲೋಕವನ್ನು ಉಲ್ಲೇಖಿಸಿ ಬರೆದಿದ್ದಾರೆ. ಕಾರ್ತವೀರ್ಯನಿಗೆ ಸಾವಿರ ಕೈಗಳಿದ್ದವು. ಕಳೆದುಹೋದ ವಸ್ತುವನ್ನು ಹುಡುಕುವುದು ಆತನಿಗೆ ಸುಲಭ ಎಂಬ ಕಾರಣಕ್ಕೆ ಅವನನ್ನು ನೆನಪಿಸಿಕೊಳ್ಳುವುದು ಎಂದು ತಾರ್ಕಿಕವಾಗಿ ವಿಶ್ಲೇಷಿಸಿದ್ದಾರೆ. ಒಟ್ಟಿನಲ್ಲಿ ಮರೆಗುಳಿಗಳಿಗೆ ಒಳ್ಳೆಯ ಗುಳಿಗೆ. ಜೈ ಕಾರ್ತವೀರ್ಯಾರ್ಜುನ! ಹಬ್ಬಕ್ಕೆಂದೋ ಮದುವೆ-ಮುಂಜಿ ಸಮಾರಂಭಕ್ಕೆಂದೋ ಮನೆಯಲ್ಲಿ ಹೋಳಿಗೆ ಮಾಡುವಾಗ ಒಂದು ಗಮ್ಮತ್ತಿನ ನಂಬಿಕೆ ಅನ್ವಯವಾಗುವುದಿದೆ. ಅದನ್ನು ಬೆಂಗಳೂರಿನ ಜ್ಯೋತಿ ಉಮೇಶ್ ಬರೆದುಕಳಿಸಿದ್ದಾರೆ- “ಹೋಳಿಗೆ ಮಾಡುವಾಗ ಸಾಮಗ್ರಿಗಳನ್ನ ಎಷ್ಟೇ ಪ್ರಮಾಣಪ್ರಕಾರ ತೆಗೆದ್ಕೊಂಡ್ರೂ ಕೊನೇಲಿ ಒಂದೋ ಹೂರಣ ಇಲ್ಲವೇ ಕಣಕ ಒಂಚೂರಾದ್ರೂ ಮಿಕ್ಕಿ ಉಳೀತದೆ. ಕುಟುಂಬದಲ್ಲಿ ಯಾರಾದ್ರೂ ಬಸುರಿ ಇದ್ದರೆ ಆಕೆಗೆ ಹುಟ್ಟಲಿರುವ ಮಗುವಿನ ಲಿಂಗನಿರ್ಧಾರ ಅದ್ರಿಂದ ಮಾಡ್ಲಿಕ್ಕಾಗ್ತದೆ! ಹೂರಣ ಉಳಿದ್ರೆ ಗಂಡು, ಕಣಕ ಉಳಿದ್ರೆ ಹೆಣ್ಣು. ಅದು ನಿಜವೇ ಆಗುತ್ತದೆ. ನನ್ನ ದೊಡ್ಡಮಗ ವಿಕ್ರಮ್ ಹುಟ್ಟುವ ಒಂದು ತಿಂಗಳು ಮುನ್ನ ನನ್ನ ತಮ್ಮನ ಮದುವೆಯಿದ್ದದ್ದು. ಅಡುಗೆಭಟ್ಟರು ಹೋಳಿಗೆ ಮಾಡಿ ಮುಗಿಸಿದ್ದೇ ತಡ ನನ್ನ ದೊಡ್ಡಪ್ಪ ಜೋರಾಗಿ ಕೂಗಿದ್ರು ‘ಜ್ಯೋತಿಗೆ ಗಂಡುಮಗು!’ ಅಂತ. ಅಲ್ಲೇ ಪಕ್ಕದ ರೂಮ್ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ನಾನು ಇದೇನಿದು ಡೆಲಿವರಿ ಆಗಿಹೋಯ್ತಾ!? ಎಂದು ಗಡಬಡಿಸಿ ಎದ್ದಿದ್ದೆ. ಒಂದು ತಿಂಗಳ ನಂತರ ಅದು ನಿಜವೇ ಆಯ್ತು! ಹಾಗಾಗಿ ಈ ನಂಬಿಕೆಯಲ್ಲಿ ನನಗೆ ಖಂಡಿತ ನಂಬಿಕೆಯಿದೆ.” ಬಾಲ್ಯದ ಮುಗ್ಧತೆಯನ್ನು ಪ್ರತಿಬಿಂಬಿಸುವ ಕೆಲ ನಂಬಿಕೆಗಳ ಸ್ಯಾಂಪಲ್ ನೋಡೋಣ. ಬೆಂಗಳೂರಿನಿಂದ ವೇದಾ ಸುದರ್ಶನ್ ಬರೆಯುತ್ತಾರೆ- “ಮಳೆಗಾಲದಲ್ಲಿ ಕಪ್ಪೆಗೆ ಅಂತ ಮರಳಲ್ಲಿ ಗೂಡು ಕಟ್ತಿದ್ವಿ. ಯಾರನ್ನಾದ್ರು ಕಾಡ್ಸಿ ಪೀಡ್ಸಿ ಚಿಲ್ರೆ ಕಾಸು ತಕ್ಕೊಂಡು ಆ ಗೂಡಿನಲ್ಲಿ ಇಡ್ತಿದ್ವಿ. ಮಾರನೆ ದಿನಕ್ಕೆ ಅದು ಡಬಲ್ ಆಗುತ್ತೆ ಅಂತ ತಾಳ್ಮೆಯಿಂದ ಕಾಯ್ತಿದ್ವಿ ಅದನ್ನ ನಮ್ಮಣ್ಣ ತತ್ಕ್ಷಣವೇ ಲಪ್ಟಾಯಿಸ್ತಿದ್ದದ್ದೂ ನಮ್ಮ ಗಮನಕ್ಕೆ ಬರ್ತಿರ್ಲಿಲ್ಲ. ನೆಕ್ಸ್ಟ್ ಡೇ ಏನಿರ್ತಿತ್ತು ಅಲ್ಲಿ ಮಣ್ಣು! ಬರೀ ಖಾಲಿ ಗೂಡು, ಕೆಲವು ಸರ್ತಿ ಅದೂ ಇಲ್ಲ!” ಇನ್ನೊಂದು, ಹೈದರಾಬಾದ್ನಿಂದ ಸಂಧ್ಯಾ ವಸಂತ್ ತಿಳಿಸಿರುವ ನಂಬಿಕೆ- “ವಾರ್ಷಿಕ ಪರೀಕ್ಷೆಯ ರಿಸಲ್ಟ್ಸ್ ಹತ್ರ ಬರ್ತಿದ್ದಹಾಗೆ ಕಪ್ಪುಇರುವೆ ಗೂಡಿನ ಪಕ್ಕ ಕೈ ಇಡೋದು. ಇರುವೆಗಳು ಮೊಣಕೈತನಕ ಬಂದ್ರೆ ಫರ್ಸ್ಟ್ಕ್ಲಾಸ್ ಪಾಸ್. ಅದಕ್ಕಿಂತಲೂ ಮೇಲೆ ಬಂದ್ರೆ ಡಿಸ್ಟಿಂಕ್ಷನ್. ಇರುವೆ ಎಲ್ಲಿವರೆಗೆ ಹತ್ತುತ್ತೆ ಅನ್ನೋದ್ರ ಮೇಲೆ ಅವ್ರವ್ರ ಮಾರ್ಕ್ಸ್ ಗ್ರೇಡ್ ನಿರ್ಧಾರ ಆಗ್ತಿತ್ತು. ಕೆಲವುಸರ್ತಿ ಏನು ಮಾಡಿದ್ರೂ ಇರುವೆ ಮೇಲೆ ಹತ್ತುತ್ತಾನೇ ಇರಲಿಲ್ಲ ಜಾರಿ ಬೀಳ್ತಿತ್ತು. ಬಳ್ಳಾರಿಯಲ್ಲಿರುತ್ತ ನಾನು, ವಸುಧೇಂದ್ರ ಮತ್ತು ಅವನ ಅಕ್ಕ ಇದನ್ನು ಬಹಳ ಮಾಡ್ತಿದ್ದೆವು.” ಕೆಂಬೂತ ಪಕ್ಷಿ ನೋಡಲಿಕ್ಕೆ ಸಿಕ್ಕರೆ ಅವತ್ತು ಏನೋ ಸಿಹಿ ತಿನ್ನುವ ಯೋಗವಿದೆ ಎಂಬ ನಂಬಿಕೆಯನ್ನು ನೆನಪಿಸಿಕೊಂಡವರು ಕಾರವಾರದ ಶಾರದಾ ಭಟ್- “ಸಿಹಿ ಸಿಗಬಹುದು ಸಿಗದೇ ಇರಬಹುದು. ಆದರೆ ಕೆಂಬೂತ ಕಂಡಾಕ್ಷಣ ಸಿಹಿ ತಿಂದಂತೆಯೇ ಮನಸ್ಸು ಮುದಗೊಳ್ಳುವುದಂತೂ ನಿಜ. ತುಂಬ ಸುಂದರ ಪಕ್ಷಿ. ಮನುಷ್ಯರ ಕಣ್ಣಿಗೆ ಕಾಣಿಸಿಕೊಳ್ಳುವುದೂ ಅಪರೂಪ. ಚಿಕ್ಕವಳಿದ್ದಾಗ ಕೆಂಬೂತವನ್ನು ನೋಡಿದ್ದೇನೆ ಎಂಬ ನೆಪ ಹೇಳಿ ಅಮ್ಮನಿಂದ ಬೆಲ್ಲ ಇಸ್ಕೊಂಡು ತಿಂದದ್ದೂ ಉಂಟು.” ಬಟ್ಟೆ ತೊಡುವಾಗ ಅಪ್ಪಿತಪ್ಪಿ ಉಲ್ಟಾ ತೊಟ್ಟುಕೊಂಡರೆ ಹೊಸಬಟ್ಟೆ ಸಿಗುತ್ತೆ ಎಂಬುದೊಂದು ನಂಬಿಕೆ. ಬೆಂಗಳೂರಿನ ಮಾಲತಿ ಶೆಣೈ ಅದನ್ನು ನೆನಪಿಸಿದ್ದೇ ಅಲ್ಲದೆ ಹೊಸ ಬಟ್ಟೆಗೆ ಸಂಬಂಧಿಸಿದಂತೆ ತಾವೇ ಒಂದು ನಂಬಿಕೆಯನ್ನು ತಯಾರಿಸಿದ್ದಾರೆ. “ಬಟ್ಟೆ ಮೇಲೆ ಕಾಗೆ ಹಿಕ್ಕೆ ಬಿದ್ರೆ ಹೊಸ ಬಟ್ಟೆ ಸಿಗುತ್ತೆ. ನಮ್ಮೆಜಮಾನ್ರ ಕೇಸ್ನಲ್ಲಿ ಇದು ಖಂಡಿತ ನಿಜವಾಗಿದೆ. ಒಮ್ಮೆ ಅವ್ರಿಗೆ ಕುಣಿಗಲ್ಗೆ ಹೋಗಲಿಕ್ಕಿತ್ತು. ಅಲ್ಲಿನ ನಮ್ಮ ಆಫೀಸಿಗೆ ಗಣ್ಯರು ಬರುವವರಿದ್ದರು. ಅವತ್ತು ನಮ್ಮವ್ರು ಕಪ್ಪು ಶರ್ಟ್ ಹಾಕ್ಕೊಂಡಿದ್ರು. ಅದರಮೇಲೆ ಕಾಗೆ ಇಶ್ಶಿ ಮಾಡ್ತು. ಆಫೀಸ್ ಜವಾನ ಅದನ್ನು ಒರೆಸುತ್ತೇನೆಂದವ ಇನ್ನಷ್ಟು ಗಲೀಜು ಮಾಡಿದ. ಆಮೇಲೆ ಬೇರೆ ಉಪಾಯವಿಲ್ಲದೆ ಕುಣಿಗಲ್ನ ಕ್ಲಾತ್ಶಾಪ್ನಲ್ಲಿ ಹೊಸ ಶರ್ಟ್ ಖರೀದಿ ಆಯ್ತು!” ಕನ್ಯಾಮಣಿಗಳು ಕಾಯಿತುರಿಯುವಾಗ ತಿಂದರೆ ಮದುವೆದಿನ ಮಳೆ ಬರುತ್ತೆ ಎಂದು ಹೆದರಿಸುವ ನಂಬಿಕೆ ಕಳೆದವಾರ ಪ್ರಸ್ತಾಪವಾಗಿತ್ತಲ್ಲ? ಅದನ್ನೋದಿ ಕ್ಯಾಲಿಫೋರ್ನಿಯಾದಿಂದ ಸರಸ್ವತಿ ವಟ್ಟಮ್ ಬರೆದಿದ್ದಾರೆ- “ಚಿಕ್ಕವಳಿದ್ದಾಗ ತುಂಬಾ ಅಕ್ಕಿ ತಿನ್ನುತ್ತಿದ್ದೆ. ಆಗ ನಮ್ಮಮ್ಮ ಗದರಿಸಿ ‘ಅಕ್ಕಿ ತಿಂದ್ರೆ, ನಿನ್ನ ಮದುವೆಯಲ್ಲಿ ಮಳೆ ಬರುತ್ತೆ’ ಅಂತಿದ್ರು. ಅದು ನಿಜವೂ ಆಯಿತು. ನನ್ನ ಮದುವೆಯಲ್ಲಿ ಬಹುಶಃ ಆಕಾಶ ತೂತಾಗಿತ್ತು ಅಂತ ಕಾಣಿಸುತ್ತೆ. ಕಲ್ಲು ಮಳೆ. ಆರತಕ್ಷತೆಯ ಗಲಾಟೆಯಲ್ಲೂ ಅಮ್ಮನ ನಂಬಿಕೆ ಸುಳ್ಳಾಗಲಿಲ್ಲ!” ಅದಕ್ಕಿಂತಲೂ ಮಜಾ ಎಂದರೆ ಪಡುಬಿದ್ರಿಯಿಂದ ಆಯುರ್ವೇದವೈದ್ಯ ಡಾ.ಗುರುಪ್ರಸಾದ್ ಬರೆದಿರುವ ಪತ್ರ. “ನಾವು ಈಜುವಾಗ ಕೆರೆಯಲ್ಲಿ ಮೂತ್ರ ಮಾಡಿದ್ರೆ ಮದುವೆ ದಿವಸ ಮಳೆಯಾಗುತ್ತ್ತೆ ಅಂತ ಹೇಳ್ತಿದ್ದರು. ನೋಡ್ಬೇಕು ಬರುವ ನವೆಂಬರ್ 3ಕ್ಕೆ ನನ್ನ ಮದುವೆ. ಆದಿನ ಮಳೆ ಬರುತ್ತೋ ಏನೋ ಗೊತ್ತಿಲ್ಲ!” ಇಲ್ಲ ಡಾಕ್ಟ್ರೇ ಮಳೆ ಬರಲಿಕ್ಕಿಲ್ಲ. ಆದರೆ ಶುಭಾಶೀರ್ವಾದಗಳ ಸುರಿಮಳೆ ಆಗ್ತದೆ ನೋಡ್ತಿರಿ! ಇಲ್ಲಿಗೆ ಮೂರು ಕಂತುಗಳಲ್ಲಿ ಮೂಡಿಬಂದ ನಂಬಿಕಾಯಣವು ಸಮಾಪ್ತವಾದುದು. ಸಮಸ್ತ ನಂಬಿಕಸ್ತರಿಗೂ ಮಸ್ತುಮಸ್ತಾಗಿ ತಥಾಸ್ತು ಆಗಲಿ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125


No comments yet. Be the first to say something!