ಪದ-ಶ್ರಾವ್ಯ

ಈಗ ಆಡಿಯೋ ಟಚ್!

10
Dec 2011
Bus Drivers Special Dispatch Part2
Posted in DefaultTag by sjoshi at 2:57 pm

ದಿನಾಂಕ  11 ಡಿಸೆಂಬರ್  2011ರ ಸಂಚಿಕೆ...

ಮತ್ತಷ್ಟು ಡ್ರೈವರೋಪಾಖ್ಯಾನ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಪ್ರಯಾಣಿಕರ ರಷ್ ಹೆಚ್ಚಾದಾಗ- ವಿಶೇಷವಾಗಿ ಜಾತ್ರೆ, ಹಬ್ಬಹರಿದಿನ, ಸಮ್ಮೇಳನ ಮುಂತಾದ ಸಂದರ್ಭಗಳಲ್ಲಿ- ಹೆಚ್ಚುವರಿ ಬಸ್ಸುಗಳನ್ನು ಹೊರಡಿಸುತ್ತಾರೆ. ರೆಗ್ಯುಲರ್ ಬಸ್‌ಗಳಲ್ಲೂ ಜಾತ್ರೆಯ ಜನರೇ ತುಂಬಿಕೊಳ್ಳುತ್ತಾರೆ. ಕಿಕ್ಕಿರಿದ ಜನಸಂದಣಿಯಲ್ಲೂ ವಿಶೇಷ ಸಂಭ್ರಮ ತರುವ ಆ ವಾತಾವರಣ ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಆದರೆ, ಡ್ರೈವರ್‌ಗಳ ರಷ್ ಹೆಚ್ಚಾದದ್ದಕ್ಕೆ ವಿಶೇಷ ಬಸ್ ಹೊರಡಿಸಿದ್ದನ್ನು ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ಲವಾದರೆ ಇವತ್ತು ಕೇಳಿ. ಇದೇ ಆ ಡ್ರೈವರ್ ಸ್ಪೆಷಲ್ ಬಸ್ಸು!

ಕಳೆದ ವಾರದ ‘ಬಸ್ ಡ್ರೈವರರ ಗುಣಗಾನ’ಕ್ಕೆ ಸಿಕ್ಕಾಪಟ್ಟೆ ಪತ್ರಗಳು ಬಂದಿವೆ. ಇನ್ನೂ ಬರುತ್ತಲೇ ಇವೆ. ನನಗೆ ತುಂಬಾ ಖುಷಿ ತಂದ ವಿಚಾರ ಏನು ಗೊತ್ತೇ? ಜಾಸ್ತಿ ಪ್ರತಿಕ್ರಿಯೆಗಳು ಬಂದವು ಅಂತಲ್ಲ. ಲೇಖನ ಚೆನ್ನಾಗಿತ್ತೆಂದು ಎಲ್ಲರೂ ಹೇಳಿದರಂತನೂ ಅಲ್ಲ. ಆರ್.ಕೆ.ನಾರಾಯಣ್ ಕಾದಂಬರಿಗಳ ಪಾತ್ರಗಳಂತೆ ಬಸ್‌ಡ್ರೈವರರನ್ನು ಚಿತ್ರಿಸಬೇಕು ಎಂದು ನಾನೇನು ಅಂದುಕೊಂಡಿದ್ದೆನೋ ಅದನ್ನು ನನಗಿಂತ ಚೆನ್ನಾಗಿ ಓದುಗರು ತಮ್ಮ ಪತ್ರಗಳಲ್ಲಿ ಮಾಡಿದ್ದಾರೆ. ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ, ಸಾಮಾನ್ಯರಲ್ಲಿ ಅತಿಸಾಮಾನ್ಯರೆನಿಸಿದ ಬಸ್‌ಡ್ರೈವರರನ್ನು ನೆನೆಸಿಕೊಳ್ಳುವುದೂ ಪುಳಕ ಕೊಡುವ ಸಂಗತಿ ಎಂದು ಸಂಭ್ರಮಿಸಿದ್ದಾರೆ. ನನ್ನ ಬರಹದ ಮೂಲಕಲ್ಪನೆ ಸಾಕಾರಗೊಂಡದ್ದು ಮತ್ತು ಸಾರ್ಥಕವಾದದ್ದು ಅಲ್ಲೇ. ಅಂಥ ಸುಂದರ ಪತ್ರಗಳಲ್ಲಿ ಕೆಲವನ್ನಾದರೂ ನಿಮ್ಮೆಲ್ಲರೊಡನೆ ಹಂಚಿಕೊಳ್ಳಬೇಕೆಂಬ ಆಸೆ ನನ್ನದು. ಅದಕ್ಕಾಗಿ ಈವಾರಕ್ಕೆ ಯೋಜಿಸಿಕೊಂಡಿದ್ದ ವಿಷಯವನ್ನು ಮುಂದೂಡಿ ಡ್ರೈವರೋಪಾಖ್ಯಾನವನ್ನೇ ಮುಂದುವರಿಸಿದ್ದೇನೆ. ರೈಟ್... ಇದೀಗ ಬಸ್ಸು ಹೊರಡುತ್ತಿದೆ.

ಮಂಗಳೂರಿನಿಂದ ವಿದ್ಯಾಲಕ್ಷ್ಮಿ ಬರೆಯುತ್ತಾರೆ- “ನಾನು ಶಾಲೆಗೆ ಹೋಗುತ್ತಿದ್ದದ್ದು ಹನುಮಾನ್ ಬಸ್ಸಿನಲ್ಲಿ. ಅದರ ಡ್ರೈವರ್ ಹೆಸರು ‘ನಂದು’. ಎಲ್ಲರೂ ಪ್ರೀತಿಯಿಂದ ನಂದಣ್ಣ ಅಂತಲೇ ಕರೆಯೋರು. ಅವರಿಗೆ ಮಕ್ಕಳ ಜೊತೆಯಂತೂ ತುಂಬಾ ಸ್ನೇಹ. ಒಮ್ಮೆ ನಾನೂ ನನ್ನ ಗೆಳತಿ ಏನೋ ಕಾರಣಕ್ಕೆ ಜಗಳವಾಡಿ ಕೋಪದಲ್ಲಿ ಮಾತು ಬಿಟ್ಟು ಒಂದಷ್ಟುದಿನ ಬೇರೆಬೇರೆ ಸೀಟಲ್ಲಿ ಕುಳಿತು ಪ್ರಯಾಣಿಸುತ್ತಿದ್ದೆವು. ಅದನ್ನು ಗಮನಿಸಿದ ನಂದಣ್ಣ ಒಮ್ಮೆ ದಾರಿಮಧ್ಯ ಬಸ್ ನಿಲ್ಲಿಸಿ ನಮ್ಮ ಹತ್ತಿರ ಬಂದು ಒಂದೇ ಸೀಟಲ್ಲಿ ಕುಳಿತುಕೊಳ್ಳಲು ಹೇಳಿ, ಶೇಕ್‌ಹ್ಯಾಂಡ್ ಕೊಡಿಸಿ ರಾಜಿ ಮಾಡಿಸಿದ್ದರು. ಆ ಘಟನೆ ನನಗಿನ್ನೂ ಚೆನ್ನಾಗಿ ನೆನಪಿದೆ. ಹಾಗೆಯೇ ದೂರದ ಊರುಗಳಲ್ಲಿದ್ದ ನನ್ನ ಅಮ್ಮ, ಚಿಕ್ಕಮ್ಮರ ಮಧ್ಯೆ ಅಂಚೆಯಣ್ಣನಾಗಿ, ಕೊರಿಯರ್ ವಾಹಕನಾಗಿಯೂ ನಂದಣ್ಣ ತುಂಬಾ ವರ್ಷ ಸೇವೆ ಸಲ್ಲಿಸಿದ್ದಾರೆ. ಈಗ ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಆದರೆ ಈ ಮೂಲಕ ಅವರಿಗೆ ನನ್ನ ನಮನಗಳು.”

ಹನುಮಾನ್ ಬಸ್ಸಿನ ನಂದಣ್ಣನಷ್ಟೇ ಫೇಮಸ್ಸು ಸಾಗರ-ಉಡುಪಿ ಗಜಾನನ ಬಸ್ಸಿನ ಡ್ರೈವರ್ ದುರ್ಗಪ್ಪ. ಸಾಗರದಿಂದ ಮಹೇಶ ಹೆಗಡೆ ಬರೆದಿದ್ದಾರೆ- “ನಮಗೆಲ್ಲ ಅದು ಗಜಾನನ ಬಸ್ಸು ಅಥವಾ ಸಾಗರ-ಉಡುಪಿ ಬಸ್ಸು ಅನ್ನೋದಕ್ಕಿಂತಲೂ ‘ದುರ್ಗಪ್ಪನ ಗಾಡಿ’ ಎಂದೇ ಚಿರಪರಿಚಿತ. ಉಡುಪಿ ಅಥವಾ ದಾರಿಯಲ್ಲಿ ಸಿಗುವ ಊರುಗಳಲ್ಲಿನ ಬಂಧುಮಿತ್ರರಿಗೆ ಸಣ್ಣಪುಟ್ಟ ಪಾರ್ಸೆಲ್ ತಲುಪಿಸುವುದಿದ್ದರೆ ಸಾಗರ ಬಸ್‌ಸ್ಟಾಂಡ್‌ಗೆ ಬೆಳಿಗ್ಗೆ ಎಂಟಕ್ಕೆ ಹೋಗಿ ದುರ್ಗಪ್ಪನ ವಶ ಒಪ್ಪಿಸಿದರಾಯ್ತು. ಅದು ಸುಸೂತ್ರವಾಗಿ ತಲುಪಿತೆಂದೇ ಲೆಕ್ಕ. ದುರ್ಗಪ್ಪ ಅತ್ಯಂತ ದಕ್ಷ ಡ್ರೈವರ್. ಸ್ನೇಹಜೀವಿ ಕೂಡ. ಆದರೆ ‘ಧೂಮಪಾನ ನಿಷೇಧಿಸಿದೆ’ ವಿಷಯದಲ್ಲಿ ವೆರಿ ಸ್ಟ್ರಿಕ್ಟ್. ಬಸ್ಸಿನೊಳಗೆ ಯಾರಾದರೂ ಬೀಡಿಸಿಗರೇಟು ಹೊತ್ತಿಸಿದರೆ ತತ್‌ಕ್ಷಣ ಅಲ್ಲೇ ಬಸ್ ನಿಲ್ಲಿಸಿ, ಚಂದದ ಮಾತುಗಳಲ್ಲೇ ಅವರ ಜನ್ಮ ಜಾಲಾಡಿಸಿಬಿಡೋರು.”

ಬೆಂಗಳೂರಿನಿಂದ ಜ್ಯೋತಿ ಕಡ್ಲಾಡಿ ಹಳೆಕಾಲದ ಬಿಟಿ‌ಎಸ್ ಬಸ್ಸಿನ ಒಬ್ಬ ಮುಸ್ಲಿಂ ಡ್ರೈವರ್‌ನನ್ನು ನೆನೆದಿದ್ದಾರೆ. “ನಾನಾಗ ಚೊಚ್ಚಲ ಗರ್ಭಿಣಿ. ನಮ್ಮ ಆಫೀಸು ಆರ್‌ಬಿ‌ಐ ಬಿಲ್ಡ್ಂಗ್‌ನ ಮೂರನೇ ಮಹಡಿಯಲ್ಲಿತ್ತು. ಸಂಜೆ ೫.೩೦ಕ್ಕೆ ಸರಿಯಾಗಿ ಆಫೀಸು ಮುಗೀತಾ ಇದ್ದಹಾಗೆ ಬಿಲ್ಡಿಂಗ್‌ನ ಬ್ಯಾಕ್‌ಗೇಟ್ ಪಕ್ಕ ಒಂದು ಬಸ್ ಬರ್ತಾ ಇತ್ತು. ನಾನು ಬಸ್ ಹಿಡಿಯಲು ಓಡೋಡಿ ಬರುತ್ತಿದ್ದರೆ ಡ್ರೈವರ್ ಹೇಳ್ತಾ ಇದ್ದರು ‘ಸಿಸ್ಟರ್, ಆಪ್ ಹಲ್ಲೂಹಲ್ಲೂ ಆನೇಕಾ. ಹಮ್ ಆಪ್‌ಕೇ ಲಿಯೆ ವೈಟ್ ಕರೇಂಗೆ.’ ಅಷ್ಟೇ‌ಅಲ್ಲ ನಿಜವಾಗ್ಲೂ ವೈಟ್ ಮಾಡ್ತಿದ್ರು. ನಾನು ಆರಾಮಾಗಿ ಬಸ್ ಹತ್ತಿ ಸೀಟಲ್ಲಿ ಕುಳಿತಮೇಲೇನೇ ಸ್ಟಾರ್ಟ್ ಮಾಡ್ತಿದ್ರು. ಈಗೆಲ್ಲಿದ್ದಾರೋ ಗೊತ್ತಿಲ್ಲ, ಆ ಮನುಷ್ಯನ ಹೊಟ್ಟೆ ತಣ್ಣಗಿರಲಿ ಅಂತ ಮನಸಾರೆ ಹಾರೈಸುತ್ತೇನೆ.”

ವಿಟ್ಲದ ಮೂರ್ತಿ ದೇರಾಜೆಯವರು ಸ್ಮರಿಸಿರುವುದು ಒಬ್ಬಿಬ್ಬರು ಡ್ರೈವರರನ್ನಲ್ಲ. ದೊಡ್ಡದೊಂದು ಪಟ್ಟಿಯನ್ನೇ ಮಾಡಿದ್ದಾರೆ. ಅವರ ಪತ್ರದ ಕೆಲವು ಸಾಲುಗಳು: “ಪುತ್ತೂರು-ಬೆಳ್ಳಾರೆ-ಸುಬ್ರಹ್ಮಣ್ಯಗಳ ನಡುವೆ ಓಡಾಡುತ್ತಿದ್ದ ಪಿ.ವಿ.ಮೋಟಾರ್ಸ್‌ನ ಡ್ರೈವರ್ ರಾಮಭಟ್ಟರು ಮುದುಕರಾಗಿದ್ದರೂ ಅವರ ತಲೆಯಲ್ಲಿ ಸದಾ ಇರುತ್ತಿದ್ದ ಖಾಕಿ ಬಣ್ಣದ ದೊಡ್ಡ ಮುಂಡಾಸು ಅವರನ್ನು ನಮ್ಮ ಹೀರೊ ಮಾಡಿತ್ತು. ನಮ್ಮ ಮಟ್ಟಿಗೆ ಅವರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರನಾಯಕರಿಗಿಂತ ಕಡಿಮೆ ಏನೂ ಆಗಿರಲಿಲ್ಲ. ಪಕ್ಕದ ಸೀಟಿನಲ್ಲಿ ಕುಳಿತವರೊಡನೆ ಅವರು ಊರಿನ ಎಲ್ಲಾ ಸುದ್ದಿಯನ್ನೂ ಮಾತಾಡುತ್ತಿದ್ದ ರೀತಿ ನೋಡಿ, ನಮಗೆ ಏನೂ ಅರ್ಥವಾಗದಿದ್ದರೂ ಅವರೊಬ್ಬ ಎಲ್ಲಾ ವಿಷಯಗಳ ತಜ್ಞ ಎಂದೇ ನಾವು ನಂಬಿದ್ದೆವು. ಶೆಟ್ಟಿ ಮೋಟಾರ್ಸ್‌ನ ಮಿಸ್ಕಿತ್ ಎಂಬುವರೂ ಒಬ್ಬ ದೊಡ್ಡ ಹೀರೊ. ಅವರದು ಮೆಳ್ಳೆಗಣ್ಣು ಆಗಿದ್ದರೂ ನಮಗೆಲ್ಲಾ ಅದು ಕೊರತೆ ಎಂದು ಅನಿಸಿದ್ದೇ ಇಲ್ಲ. ಮತ್ತೆ ಅವರು ಇಷ್ಟ ಯಾಕೆಂದರೆ ಬಸ್ಸು ಬರುತ್ತಿದ್ದಾಗ ದಾರಿಯಲ್ಲಿ ನಡೆಯುತ್ತಿದ್ದ ನಾವು ಕೈ ಎತ್ತಿ ವಿಷ್ ಮಾಡಿದರೆ ತಪ್ಪದೇ ವಿಷ್ ಮಾಡುತ್ತಿದ್ದರು. ತನ್ನನ್ನು ನೋಡಿಯೇ ವಿಷ್ ಮಾಡಿದ್ದು ಎಂದು ನಮ್ನಲ್ಲಿ ಪ್ರತಿಯೊಬ್ಬರಿಗೂ ಅನಿಸುತ್ತಿತ್ತು. ನಂದಗೋಕುಲದಲ್ಲಿ ಕೃಷ್ಣನನ್ನು ನೋಡಿ ಪ್ರತಿಯೊಬ್ಬ ಗೋಪಿಕೆಯೂ ಹೀಗೇ ಭಾವಿಸುತ್ತಿದ್ದಳಂತೆ ಅಲ್ಲವೇ? ಶಂಕರವಿಠಲ್ ಬಸ್ಸಿನ ಶಾಂತಾರಾಮ್ ಇನ್ನೊಬ್ಬ ಹೀರೊ. ಪುತ್ತೂರಿನ ಶಂಕರವಿಠಲ್ ಸಿಟಿಸರ್ವಿಸ್‌ನ ಬೇಬಿ ಮತ್ತು ಶಿವರಾಂ ಇವರು ಪುತ್ತೂರು ಟೀಮಿನ ಕ್ರಿಕೆಟ್ ಪ್ಲೇಯರ್ಸ್. ಪುತ್ತೂರು ಟೀಮಿನಲ್ಲಿ ಆಟಗಾರರ ಕೊರತೆ ಇದ್ದಾಗ ಮತ್ತು ಎದುರು ಟೀಮು ಸ್ವಲ್ಪ ಫಡ್ಪೋಶಿ ಆಗಿದ್ದಾಗ ಇವರಿಗೆ ಚಾನ್ಸ್ ಸಿಗುವುದಾಗಿದ್ದರೂ, ಬ್ಯಾಟು ಬೀಸಿ ಸಿಕ್ಸರ್ ಬಾರಿಸುತ್ತಿದ್ದುದರಿಂದ ಅವರು ನಮ್ಮ ಡಬಲ್ ಹೀರೋ. ಆದರೆ ಆ ಕಾಲದಲ್ಲಿ ನಮ್ಮ ದೊಡ್ಡ ಹೀರೊ ಅಂದರೆ ಪುತ್ತೂರಿನ ‘ಸ್ವಾಮಿ ಸಿಟಿ ಸರ್ವಿಸ್’ನ ಆಣ್ಣು ಎಂಬ ಡ್ರೈವರ್. ಅವರ ಹೆಸರು ಕೇಳಿದರೆ ಸಾಕು ನಮ್ಮ ಎದೆ ಖುಷಿಯಿಂದ ಕುಣಿಯುತ್ತಿತ್ತು. ಅವರ ಅದ್ಭುತ ಡ್ರೈವಿಂಗಿಗೆ ಎಷ್ಟೋಸಾರಿ ಚಪ್ಪಾಳೆ ಬಿದ್ದದ್ದು ನೆನಪಿದೆ. ನಾವು ‘ಬಸ್ ಆಟ’ ಆಡುತ್ತಿದ್ದಾಗ ತನ್ನದು ‘ಸ್ವಾಮಿ ಸಿಟಿಬಸ್’ ಎಂದು ಹೆಸರಿಟ್ಟುಕೊಳ್ಳಲು ನಮ್ಮಲ್ಲಿ ಜಗಳ. ಕೊನೆಗೆ ಚೀಟಿಯೆತ್ತಿ ಹೆಸರು ಕೊಡಲಾಗುತ್ತಿತ್ತು. ಆಣ್ಣು ಡ್ರೈವಿಂಗಿನ ಸ್ಟೈಲ್ ಅನುಕರಿಸಲೂ ನಮ್ಮಲ್ಲಿ ಸ್ಪರ್ಧೆ. ಆಣ್ಣು ಮತ್ತವನ ಸ್ವಾಮಿ ಬಸ್‌ನ ಮೇಲೆ ನಮಗೆ ಎಷ್ಟು ಅಭಿಮಾನ ಅಂದರೆ ಬಸ್ ಆಟದಲ್ಲಿ ಸ್ವಾಮಿ ಬಸ್ ಹೆಸರಿನವನು ಹಿಂದೆ ಬಿದ್ದರೆ, ಅಳು ಬರುತ್ತಿದ್ದರೂ ಸ್ವ‌ಇಚ್ಛೆಯಿಂದ ಸ್ವಾಮಿ ಬಸ್‌ನ ಹೆಸರನ್ನು ಗೆದ್ದವನಿಗೆ ಬಿಟ್ಟು ಕೊಡುತ್ತಿದ್ದೆವು. ಒಟ್ಟಿನಲ್ಲಿ ಆಣ್ಣುವಿನ ಸ್ವಾಮಿ ಬಸ್ ಸೋಲಬಾರದು."

school_bus_animation.gif

ಎಷ್ಟು ಚಂದದ ಚಿತ್ರಣ ಅಲ್ಲವೇ? ಬಾಲ್ಯ ಮರಳಿ ಸಿಗುವಂತಿರಬೇಕು ಎಂದು ಎಲ್ಲರೂ ಹಪಹಪಿಸುವುದು ಈ ರೀತಿಯ ಸಣ್ಣಸಣ್ಣ ಸಂತೋಷಗಳಿಗಾಗಿಯೇ. ಬಸ್ ಡ್ರೈವರ್ ನೆಪದಲ್ಲಿ ಎಲ್ಲರೂ ನೆನಪಿನಂಗಳಕ್ಕೆ ಜಾರಿದ್ದು ಕೂಡ ಇಂಥ ಸಡಗರಕ್ಕಾಗಿಯೇ. ವಾಷಿಂಗ್ಟನ್‌ನಿಂದ ಫಣೀಂದ್ರ ಮಂಕಾಳೆ, ಮಂಗಳೂರಿನಿಂದ ಸಂತೋಷ ರಾವ್, ದುಬಾಯ್‌ಯಿಂದ ಆರತಿ ಘಾಟೀಕರ್, ಹೈದರಾಬಾದ್‌ನಿಂದ ಅನುರಾಧಾ ಧವಲೆ, ಶಿಕಾಗೋದಿಂದ ಶಾರದಾ ಬೈಯಣ್ಣ, ವಿಜಾಪುರದಿಂದ ಡಿ.ಎಸ್.ಕೋರೆ, ಮಂಗಳೂರಿನಿಂದ ರಾಮಕೃಷ್ಣ ಹೊಸಬೆಟ್ಟು, ಮೈಸೂರಿನಿಂದ ಜಿ.ಕೆ.ಮೀನಾ, ಜರ್ಮನಿಯಿಂದ ಡಾ.ಅಮೃತ್ ಭಿಡೆ, ಅರ್ಕನ್ಸಾಸ್‌ನಿಂದ ಸುಕನ್ಯಾ ತೀರ್ಥಮತ್ತೂರು, ಮುಂಬಯಿಯಿಂದ ಲಕ್ಷ್ಮೀವೆಂಕಟೇಶ ಹೊಳಲ್ಕೆರೆ,  ಧಾರವಾಡದಿಂದ ಪವನ್ ಎಂ.ಎನ್, ಬೆಂಗಳೂರಿನಿಂದ ಶಾಂತಲಾ ಗುಣಪ್ರಕಾಶ್... ಪಟ್ಟಿ ಮಾಡುತ್ತ ಹೋದರೆ ‘ನಿಮ್ಮ ಮೆಚ್ಚಿನ ಚಿತ್ರಗೀತೆಗಳು’ ಕಾರ್ಯಕ್ರಮದಂತೆ ಭಾಸವಾದೀತು. ಇವರೆಲ್ಲರೂ ತಂತಮ್ಮ ನೆನಪಿನ ಬಸ್‌ಡ್ರೈವರರ ಗುಣಗಾನವನ್ನು ಆತ್ಮೀಯ ಧಾಟಿಯಲ್ಲಿ ಅಕ್ಷರಕ್ಕಿಳಿಸಿ ಸಂಭ್ರಮಿಸಿದವರೇ. ಹಾಗೆಯೇ ಗೋರೂರು ರಾಮಸ್ವಾಮಿ ಐಯಂಗಾರರ ‘ಭಟ್ಟನ ಬಸ್ ಸರ್ವೀಸ್’ ಲಲಿತಪ್ರಬಂಧದಲ್ಲಿನ ಡ್ರೈವರ್, ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್‌ನಲ್ಲಿ ಬರುವ ಡ್ರೈವರ್ - ಇವರೂ ಚಿರಸ್ಮರಣೀಯರು ಎಂದು ಜ್ಞಾಪಿಸಿಕೊಂಡವರೂ ಇದ್ದಾರೆ. ಒಟ್ಟಿನಲ್ಲಿ ‘ಸ್ಟಾಂಡಿಂಗ್ ಸೀಟ್’ ಆದರೂ ಸರಿ, ಅಷ್ಟೂ ಡ್ರೈವರ್‌ಗಳಿಗೆ ಜಾಗ ಮಾಡಿಕೊಂಡು ನೆನಪಿನ ಓಣಿಯಲ್ಲಿ ಸಾಗಿದೆ ನೊಸ್ಟಾಲ್ಜಿಯಾ ಎಕ್ಸ್‌ಪ್ರೆಸ್ ಬಸ್.

ಎಂದರೋ ಬಸ್ ಡ್ರೈವರ್ ಮಹಾನುಭಾವುಲು, ಅಂದರಿಕಿ ಪರಾಗಸ್ಪರ್ಶ ವಾಚಕವೃಂದದ ಪರವಾಗಿ ಮತ್ತೊಮ್ಮೆ ವಂದನಮುಲು.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.