ಪದ-ಶ್ರಾವ್ಯ

ಈಗ ಆಡಿಯೋ ಟಚ್!

11
Dec 2010
Clothes Washing Ton
Posted in DefaultTag by sjoshi at 5:44 pm

ದಿನಾಂಕ 12 ಡಿಸೆಂಬರ್ 2010ರ ಸಂಚಿಕೆಯಲ್ಲಿ...

ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ!

dhobismall.gif

ಗಸ. ನಿಸ್ಸಂದೇಹವಾಗಿ ಒಬ್ಬ ಫಸ್ಟ್ ಕ್ಲಾಸ್ ಸಿಟಿಜನ್. ಪ್ರಥಮ ದರ್ಜೆಯ ಪ್ರಜೆ. ಯಾಕ್‌ಹೇಳಿ? ಒಂದನೇ ತರಗತಿಯಲ್ಲಿ ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ಮೊಟ್ಟಮೊದಲ ಪದವಾಗಿ, ಮೊದಲ ಪಾಠವಾಗಿ, ನಮಗೆ ಪರಿಚಯವಾದವನೇ ಅಗಸ! ಆಮೇಲೆ ನೀತಿಕಥೆಗಳಲ್ಲೂ, ಗಾದೆಮಾತುಗಳಲ್ಲೂ ಆಗಾಗ್ಗೆ ಭೇಟಿಯಾಗುತ್ತಿದ್ದವನು. ಸಮಾಜದ ಕೊಳೆ ತೊಳೆಯುವ ಅನುಭಾವಿ ಸಂತನಲ್ಲದಿದ್ದರೂ ಸಮಾಜದ ಜನರು ಉಡುವ ಬಟ್ಟೆಬರೆಗಳ ಕೊಳೆ ತೊಳೆದು ಒಳ್ಳೆಯ ಕೆಲಸ ಮಾಡಿದವನು, ಮಾಡುತ್ತಿರುವವನು. ಪ್ರಾಚೀನ ಭಾರತದಲ್ಲಿ ಅಗಸನನ್ನು (ಮತ್ತು ಬಡಗಿ, ನೇಕಾರ, ಕ್ಷೌರಿಕ, ಚಮ್ಮಾರ- ಈ ನಾಲ್ಕು ಕಸಬುದಾರರನ್ನೂ) ಕೆಲಸಗಾರ ವರ್ಗದಲ್ಲೇ ಶ್ರೇಷ್ಠ, ಗೌರವಾನ್ವಿತ ಎಂದು ಪರಿಗಣಿಸಲಾಗುತ್ತಿತ್ತು. ಅಗಸ ಮಾಡುವ ಕೆಲಸ ಪವಿತ್ರವಾದುದು, ಪರಿಶುದ್ಧವಾದುದು ಎಂಬ ಸದ್ಭಾವನೆಯಿತ್ತು. ಹಾಗೆಂದು ಹೇಳುತ್ತವೆ ಮನುಸ್ಮೃತಿ, ಯಾಜ್ಞವಲ್ಕ್ಯಸ್ಮೃತಿ ಮುಂತಾದ ಉದ್ಗ್ರಂಥಗಳು. ಆದ್ದರಿಂದಲೇ ಇರಬೇಕು, ಮರ್ಯಾದಾ ಪುರುಶೋತ್ತಮನಾದ ಶ್ರೀರಾಮಚಂದ್ರನೂ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದ ಅಗಸನನ್ನು ಯಃಕಶ್ಚಿತ್ ಎಂದು ಅಲಕ್ಷಿಸದೆ ಅವನ ಮಾತಿಗೆ ಬೆಲೆ ಕೊಟ್ಟನು; ರಾಮಾಯಣವು ಉತ್ತರಕಾಂಡವಾಗಿ ಬೆಳೆಯುವುದಕ್ಕೆ ಆ ಅಗಸನೇ ಪರೋಕ್ಷ ಕಾರಣನಾದನು.

ಅಗಸನ ಕುರಿತಾಗಿಯೇ ಈ ಹರಟೆಯನ್ನು ಮುಂದುವರಿಸುವುದಾಗಿದ್ದರೆ- ತಮಾಷೆಗೋಸ್ಕರ ಅಮೆರಿಕದ ಊರುಗಳ ಹೆಸರುಗಳನ್ನು ಕನ್ನಡೀಕರಿಸಿದಾಗ ಕನೆಕ್ಟಿಕಟ್ ಕನಕನಕಟ್ಟೆ ಆಗುತ್ತದೆಂದೂ, ನಮ್ಮ ‘ವಾಷಿಂಗ್’ಟನ್ ಅಗಸನಕಟ್ಟೆ ಆಗುತ್ತದೆಂದೂ ಬರೆಯಬಹುದಿತ್ತು; ಅಗಸನ ಕಟ್ಟೆಯೋ ಅಗಸನ ಕತ್ತೆಯೋ ಎನ್ನುತ್ತ ಅಗಸ ಮತ್ತು ಅವನ ಕತ್ತೆಯ ಕುರಿತ ಬಗೆಬಗೆಯ ಕಥೆಗಳನ್ನು ಇಲ್ಲಿ ಸೇರಿಸಬಹುದಿತ್ತು; ಕಾರ್ನಾಡರ ತುಘಲಕ್ ನಾಟಕದ ಅಗಸನ ಚಾಣಾಕ್ಷತನವನ್ನು ಕೊಂಡಾಡಬಹುದಿತ್ತು. ‘ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತಿ‌ಎತ್ತಿ ಒಗೆದಿದ್ದ...’ ಎನ್ನುವ ಗಾದೆಯನ್ನು ಸೋದಾಹರಣವಾಗಿ ವಿಶ್ಲೇಷಿಸಬಹುದಿತ್ತು; ‘ಊರ ಸೀರೆಗೆ ಅಗಸ ತಡಬಡಗೊಂಬಂತೆ...’ ಎಂಬ ಅಕ್ಕಮಹಾದೇವಿಯ ವಚನದ ವ್ಯಾಖ್ಯಾನವನ್ನು ಮಾಡಬಹುದಿತ್ತು. ಮತ್ತೂ ಸ್ವಲ್ಪ ಅಧ್ಯಾತ್ಮದ ಟಚ್ ಬೇಕಿದ್ದರೆ ‘ಗುರ ಧೋಬೀ ಸಿಖ ಕಪ್ಡಾ ಸಾಬೂ ಸಿರಜನ ಹಾರ್/ ಸುರತಿ ಸಿಲಾ ಪರ್ ಧೋ‌ಇಯೇ ನಿಕಸೆ ಜ್ಯೋತಿ ಅಪಾರ್’ ಎಂದು ಕಬೀರನ ಒಂದು ದೋಹಾವನ್ನೂ ಉಲ್ಲೇಖಿಸಿ “ಗುರು ಎಂದರೆ ಒಬ್ಬ ಅಗಸನಿದ್ದಂತೆ, ಶಿಷ್ಯ ಬಟ್ಟೆ ಇದ್ದಂತೆ. ದೈವಸ್ತುತಿಯೇ ಸಾಬೂನು. ಅಚಲವಾದ ಮನಸ್ಸೆಂಬ ಕಲ್ಲಿನ ಮೇಲೆ ಒಗೆದಾಗ ಅಂತರಂಗವೆಲ್ಲ ಶುದ್ಧಿಗೊಂಡು ಸತ್ಯಾರ್ಥ ಜ್ಯೋತಿಯಾಗಿ ಫಳಫಳನೆ ಪ್ರಕಾಶಿಸುತ್ತದೆ” ಎಂದು ತತ್ತ್ವಜ್ಞಾನ ಉಪದೇಶದ ಧಾಟಿಯಲ್ಲಿ ವಿವರಿಸಬಹುದಾಗಿತ್ತು. ಕೆಲ ವರ್ಷಗಳ ಹಿಂದೆ ಇಲ್ಲಿ ಅಮೆರಿಕದಲ್ಲಿ ಸುದ್ದಿಯಾದ, ಸಾಮಾನ್ಯ ಪ್ರಜೆಯಾಗಿದ್ದೂ ಮಾನವೀಯತೆ ಮೆರೆದು ಪ್ರಖ್ಯಾತಳಾದ ಅಗಸಿ (ಟೆನ್ನಿಸ್ ಆಟಗಾರ ಆಂಡ್ರೆ ಅಗಾಸಿ ಅಲ್ಲ; ವೃತ್ತಿಸೂಚಕ ಶಬ್ದಕ್ಕೆ ಪುಲ್ಲಿಂಗ ಸ್ತ್ರೀಲಿಂಗ ಭೇದವಿಲ್ಲವಾದರೂ ಅಗಸ ಎಂಬ ಪದದ ಸ್ತ್ರೀಲಿಂಗ ‘ಅಗಸಿ’ ಎಂದು ನಾನೇ ಕಲ್ಪಿಸಿದ್ದು) ಓಸಿಯೋಲಾ ಮೆಕ್‌ಕಾರ್ಟಿ ಎಂಬವಳ ಜೀವನಗಾಥೆಯನ್ನು ಬಣ್ಣಿಸಬಹುದಿತ್ತು. ಈಕೆ ಬದುಕಿನುದ್ದಕ್ಕೂ ಬಟ್ಟೆ ತೊಳೆದು ಇಸ್ತ್ರಿ ಹಾಕಿ ಸಂಪಾದನೆ ಮಾಡಿದ ದುಡ್ಡನ್ನೆಲ್ಲ ಮಿಸ್ಸಿಸ್ಸಿಪ್ಪಿ ವಿಶ್ವವಿದ್ಯಾಲಯದ ಅರ್ಹ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನಿಧಿಯಾಗಿಟ್ಟು ಮರಣಪತ್ರ ಬರೆದುಕೊಟ್ಟವಳು. ಅಂಥದೊಂದು ಅನನ್ಯ ಔದಾರ್ಯಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದದ್ದಷ್ಟೇ ಅಲ್ಲದೆ ವಿಶ್ವಸಂಸ್ಥೆಯಿಂದಲೂ ಸನ್ಮಾನಗೊಂಡವಳು.

ಆದರೆ, ಇವತ್ತು ನಾನು ಬರೆಯಬೇಕೆಂದಿರುವುದು ಅಗಸನ ಬಗ್ಗೆಯಲ್ಲ. ಅಗಸನ ಕೆಲಸವಾದ ಬಟ್ಟೆ ಒಗೆಯುವುದರ ಬಗ್ಗೆ. ಅಗಸನಂತೆಯೇ ನಾವೂ ನೀವೂ ಬಟ್ಟೆ ಒಗೆಯುತ್ತೇವಲ್ಲ, ಅದರ ಬಗ್ಗೆ. ನನಗೆ ಗೊತ್ತು, ಬಟ್ಟೆ ಒಗೆಯುವುದೆಂದರೇನೇ ಮಹಾ ಬೋರು; ಅಂಥಾದ್ರಲ್ಲಿ ಅದರ ಮೇಲೆ ಲೇಖನ ಬೇರೆ ಓದಬೇಕಾ ಎಂದುಕೊಳ್ಳುವವರೂ ಇರುತ್ತಾರೆ. ಅಂಥವರಿಗೋಸ್ಕರ ಮೊದಲಿಗೆ ‘ಪುಷ್ಪಕ ವಿಮಾನ’ ಮೂಕಚಿತ್ರದಲ್ಲಿ ಕಮಲಹಾಸನ್ ತನ್ನ ಶರ್ಟ್ ಒಗೆದುಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಳ್ಳೋಣ. ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹ್ಯಾಂಗರ್‌ಗೆ ನೇತಾಡಿಸಿಟ್ಟ ಶರ್ಟ್. ಅದು ನೀರು ಕಂಡು ಎಷ್ಟು ದಿನಗಳಾಗಿತ್ತೋ. ಕಮಲಹಾಸನ್ ಕೈಯಲ್ಲಿ ಒಂದು ಮಗ್. ಅದರಲ್ಲಿ ಸಾಬೂನಿನ ನೊರೆ ನೀರು. ಒಂದು ಹನಿಯೂ ವೇಸ್ಟ್ ಆಗದಂತೆ ಸ್ವಲ್ಪಸ್ವಲ್ಪವೇ ನೀರನ್ನು ತೆಗೆದುಕೊಂಡು ಶರ್ಟಿನ ಕಂಕುಳದ ಭಾಗಗಳಿಗಷ್ಟೇ ಲೇಪನ. ಬೆವರಿನಿಂದಾದ ಕೊಳೆ ಹಂತಹಂತವಾಗಿ ಹೋಗತೊಡಗಿದಾಗ ಮುಖದಲ್ಲಿ ಸಂತೋಷ ಪ್ರಕಟ. ವಾಹ್ ಕ್ಯಾ ಸೀನ್ ಹೈ! ಕಮಲಹಾಸನ್ ಬಿಟ್ಟರೆ ಬೇರಾರಿಗೂ ಅದನ್ನು ಅಷ್ಟು ನ್ಯಾಚುರಲ್ ಆಗಿ, ಪರಿಣಾಮಕಾರಿಯಾಗಿ ಅಭಿನಯಿಸಲಿಕ್ಕೆ ಸಾಧ್ಯವಿಲ್ಲವೇನೊ.

ಇರಲಿ, ಪುಷ್ಪಕವಿಮಾನದ ಕಮಲಹಾಸನ್ ಅಷ್ಟರ ಮಟ್ಟಿಗಾದರೂ ಶರ್ಟ್ ತೊಳೆದುಕೊಳ್ಳುತ್ತಿದ್ದರೆ ನಮ್ಮ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಅದಕ್ಕಿಂತಲೂ ಹೆಚ್ಚಿನ ಸೋಂಬೇರಿಗಳಿರುತ್ತಿದ್ದರು. ವಾರವಿಡೀ ಅದೇ ಪ್ಯಾಂಟ್ ಶರ್ಟ್ ಧರಿಸಿ ಓಡಾಡುವವರು. ಯಾರಾದರೂ ಗಮನಿಸಿ ಕೇಳಿದರೆ, “ಹೌದು, ಸತತ ನಾಲ್ಕನೇ ದೇಖಾವೆ! ಆನ್ ಪಬ್ಲಿಕ್ ಡಿಮ್ಯಾಂಡ್!” ಎಂದು ಸಮಜಾಯಿಶಿ ಕೊಡುತ್ತಿದ್ದ ಏಕವಸ್ತ್ರಭೂಪರು. ಬೇರೆ ಪ್ಯಾಂಟ್-ಶರ್ಟ್ ಇರುತ್ತಿರಲಿಲ್ಲವೆಂದಲ್ಲ, ಒಗೆದದ್ದಿರುತ್ತಿರಲಿಲ್ಲ ಅಷ್ಟೇ. ಬಹುಶಃ ಅಂಥವರಿಗೆಂದೇ ಪುರಂದರದಾಸರು ಹೇಳಿದ್ದು ‘ಲಂಗೋಟಿ ಬಲು ಒಳ್ಳೇದಣ್ಣಾ, ಒಬ್ರ ಹಂಗಿಲ್ಲದೇ ಮಡಿಗೆ ಒದಗುವುದಣ್ಣಾ...’ ಎಂದು. ಲಂಗೋಟಿ ‘ಮಡಿವಾಳರಿಗೆ ಶತ್ರು, ಮಠದಯ್ಯಗಳ ಮಿತ್ರ’ ಎನ್ನುತ್ತಾರೆ ದಾಸರು. ‘ಆಲಸಿಗರ ಮಿತ್ರ’ ಎಂದೂ ಹೇಳಬೇಕಿತ್ತು. ಜಸ್ಟ್ ಇಮ್ಯಾಜಿನ್. ಬಟ್ಟೆ ಒಗೆಯುವುದೆಂದರೆ ಬೋರ್ ಎನ್ನುವವರೆಲ್ಲ ಬೇರ್ ಮಿನಿಮಮ್ ಲಂಗೋಟಿಯನ್ನಷ್ಟೇ ಧರಿಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ವಜ್ಞರಾಗುವುದು... ವಾಹ್ ಕ್ಯಾ ಸೀನ್ ಹೈ!

ಆಯ್ತು, ಈಗ ಮುಖ್ಯ ವಿಷಯಕ್ಕೆ ಬರೋಣ. ಬಟ್ಟೆ ತೊಳೆಯುವುದೆಂದರೆ ವಾಷಿಂಗ್‌ಮೆಶಿನ್‌ನಲ್ಲಿ ಬಟ್ಟೆಗಳ ರಾಶಿಯನ್ನೂ ಡಿಟರ್ಜೆಂಟ್ ಪೌಡರನ್ನೂ ಹಾಕಿ ಸ್ವಿಚ್ ಅದುಮಿದರೆ ಸಾಕು "it washes... it rinses... it even dries the clothes... you are ready for the show!" ಎಂದಷ್ಟೇ ಗೊತ್ತಿರುವ ಒಂದು ತಲೆಮಾರು ಈಗ ನಗರಪ್ರದೇಶಗಳಲ್ಲಿ, ಮುಖ್ಯವಾಗಿ ‘ಹೈ-ಸೊಸೈಟಿ’ಗಳಲ್ಲಿ ಬೆಳೆಯುತ್ತಿದೆ. ಅಂಥವರು ಬಟ್ಟೆ ಒಗೆತದ ನೈಜ ಸೊಗಸಿನಿಂದ ವಂಚಿತರಾಗಿದ್ದಾರೆಂದೇ ಹೇಳಬೇಕು. ಆಧುನಿಕ ತಂತ್ರಜ್ಞಾನವು ಬಟ್ಟೆ ಒಗೆಯುವ ಕೆಲಸವನ್ನು ಶ್ರಮರಹಿತವನ್ನಾಗಿ ಮಾಡಿದೆಯೇನೊ ನಿಜ; ಹೊಸಹೊಸ ಫ್ಯಾಷನ್‌ನ ಬಟ್ಟೆಗಳನ್ನು ಡ್ರೈಕ್ಲೀನಿಂಗ್ ಮಾತ್ರ ಮಾಡಬೇಕು, ನೀರಿನಲ್ಲಿ ಒಗೆಯಬಾರದೆಂಬ ಸೂಚನೆಗಳಿರುತ್ತವೆ ಎನ್ನುವುದೂ ನಿಜ. ಆದರೆ ಕಲ್ಲಿನ ಮೇಲೆ ಬಟ್ಟೆ ಒಗೆಯುವ, ಒಗೆದಮೇಲೆ ನೀರನ್ನೆಲ್ಲ ಹಿಂಡಿ ಬಟ್ಟೆಗಳನ್ನು ತಂತಿಯ ಮೇಲೆ ಹರವಿ ಒಣಗಿಸುವ, ಅಂಗಳದಲ್ಲಿ ಅಥವಾ ಟೆರೇಸ್ ಮೇಲೆ ಬಟ್ಟೆ ಒಣಗುತ್ತಿರುವಾಗಲೇ ಮಳೆಹನಿ ಬೀಳಲಾರಂಭಿಸಿದರೆ ಓಡಿಹೋಗಿ ಅವನ್ನೆಲ್ಲ ಒಳಗೆ ತರುವ, ಬಿಸಿಲಲ್ಲಿ ಒಣಗಿದ ಬಟ್ಟೆಯ ಆ ಗರಿಗರಿತನ ಮತ್ತು ವಿಶೇಷ ಪರಿಮಳವನ್ನು ಆಸ್ವಾದಿಸುವ ಚಟುವಟಿಕೆಯಿದೆಯಲ್ಲ ಅದರಲ್ಲೊಂದು ವಿಶೇಷ ಸುಖವಿದೆ, ಸೊಗಸಿದೆ. ಅದನ್ನು ಯಾವ ಆಟೊಮೆಟಿಕ್ ವಾಷಿಂಗ್‌ಮೆಶಿನ್ ಅಥವಾ ಡ್ರೈಕ್ಲೀನಿಂಗ್ ಸಹ ಕೊಡಲಾರದು. ಅದರಲ್ಲೂ ಪಟ್ಟಣಪ್ರದೇಶಗಳಲ್ಲಿ ಗಡುಸಾದ ನಲ್ಲಿನೀರನ್ನು ಮಿತವಾಗಿ ಬಳಸಿ ಮಾಡಬೇಕಾದ ‘ಬಟ್ಟೆ ಒಗೆಯುವ ಶಾಸ್ತ್ರ’ಕ್ಕಿಂತ, ಗ್ರಾಮೀಣ ಪರಿಸರದಲ್ಲಿ ಯಥೇಚ್ಛ ಹರಿಯುವ ನೀರಿನಲ್ಲಿ ಬಟ್ಟೆ ಒಗೆದು ಅನುಭವಿಸಬೇಕು. ‘ಬಾತ್‌ರೂಮ್ ಸಿಂಗಿಂಗ್’ ಮಾದರಿಯಲ್ಲೇ ‘ಬಟ್ಟೆ ಒಗೆಯುತ್ತಿರುವಾಗಲೇ ಸಂಗೀತಕಚೇರಿ’ಯೂ ಇದ್ದರೆ ಮತ್ತೂ ಚೆನ್ನ. ಬಟ್ಟೆ ಒಗೆಯುವ ಶಿಲೆಗಳೂ ಸಂಗೀತವ ಹಾಡಿವೆ... ಆಗಬೇಕು. ಅದರ ಮಜಾನೇ ಬೇರೆ! ಇನ್ನೊಂದೆಂದರೆ, ಹರಿಯುವ ನೀರಿನಲ್ಲಿ ಅಂದರೆ ಕಾಲುವೆ-ತೋಡು-ನದಿಗಳ ನೀರಿನಲ್ಲಿ ಗಡಸುತನ ಇಲ್ಲದಿರುವುದರಿಂದ ಸ್ವಲ್ಪೇಸ್ವಲ್ಪ ಸೋಪ್ ಅಥವಾ ಡಿಟರ್ಜೆಂಟ್ ಬಳಸಿದರೂ (ಹಳ್ಳಿಗಳಲ್ಲಿ ಸೀಗೆಪುಡಿ ಅಥವಾ ‘ಅಂಟ್ವಾಳ’ ಎಂಬ ಕಾಯಿಯ ಪುಡಿ ಬಳಸುವುದೂ ಇದೆ) ಧಾರಾಳ ನೊರೆ ಬರುತ್ತದೆ. ಬಟ್ಟೆಗಳೂ ಥಳಥಳ ಶುಭ್ರವಾಗುತ್ತವೆ. ಬಟ್ಟೆ ಒಗೆತ ಮನಸ್ಸಿಗೆ ಕೊಡುವ ಖುಶಿ ಹೆಚ್ಚುತ್ತದೆ.

ನಾವು ಬಟ್ಟೆ ಒಗೆಯುವುದು ಅಥವಾ ಬಟ್ಟೆ ತೊಳೆಯುವುದು ಅಂತ ಸಾಮಾನ್ಯವಾಗಿ ಹೇಳುತ್ತೇವೆ, ಆದರೆ ಅದರೊಳಗೇ ಎಷ್ಟು ವೈವಿಧ್ಯಮಯ ರೀತಿಯಲ್ಲಿ ನಮ್ಮ ಕೈಕರಣ ನಡೆದಿರುತ್ತದೆ ಎಂಬ ಸೂಕ್ಷ್ಮವನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ! ದೊಡ್ಡದೊಡ್ಡ ಬಟ್ಟೆಗಳನ್ನು ಅಥವಾ ಬೆಡ್‌ಶೀಟ್‌ಗಳನ್ನೆಲ್ಲ ಒಗೆಯುವಾಗ ಅವನ್ನು ಜೋರಾಗಿಯೇ ಕಲ್ಲಿಗೆ ಬಡಿಯಬೇಕು. ಪುಟ್ಟ ಮಗುವಿನ ಅಂಗಿ, ಟೋಪಿ, ಕಾಲ್ಚೀಲ ಮುಂತಾದವನ್ನು ಹಾಗೆ ಒಗೆಯಲಾಗದು. ಅವುಗಳನ್ನು ನಿಧಾನವಾಗಿ ಕಲ್ಲಿನ ಮೇಲೆ ಕುಕ್ಕಬೇಕು. ತೆಳುವಾದ ಬಟ್ಟೆಗಳಿದ್ದರೆ ಎರಡೂ ಕೈಗಳಿಂದ ಉಜ್ಜಬೇಕು ಹಿಚುಕಬೇಕು, ಸುರುಳಿ ಸುತ್ತಿ ಲಟ್ಟಿಸಿದಂತೆ ಮಾಡಬೇಕು. ನೀರು ತುಂಬಿದ ಬಾಲ್ದಿಯಲ್ಲೇ ಬಟ್ಟೆಯನ್ನು ಆಚೀಚೆ ಜಾಲಾಡಿಸಬೇಕು. ಆಗಲೇ ಕೊಳೆಯೆಲ್ಲ ಹೋಗುವುದು. ಸಕಲ‘ಕಲಾ’ವಲ್ಲಭ ಮಕ್ಕಳ ಬಟ್ಟೆಗಳಲ್ಲಿ ಕಲೆಗಳಿದ್ದದ್ದನ್ನು ತೆಗೆಯಲು ಒಗೆಯುವಾಗ ವಿಶೇಷ ಕ್ರಮ ಕೈಗೊಳ್ಳಬೇಕಾಗುತ್ತದೆ ಬಟ್ಟೆ ಹತ್ತಿಯದೇ ಸಿಂಥೆಟಿಕ್ ವಸ್ತುವಿನದೇ ಎಂಬುದನ್ನವಲಂಬಿಸಿ ಅದಕ್ಕೆ ಅನುಗುಣವಾಗಿ ತೊಳೆಯಬೇಕಾಗುತ್ತದೆ. ಇನ್ನು, ಗೋಣಿಚೀಲ ಗುಡಾರಗಳನ್ನೆಲ್ಲ ಒಗೆಯುವುದಾದರೆ ಕೈಗಳ ಬಲ ಎಲ್ಲಿಗೂ ಸಾಲದು. ಭಕ್ತಕುಂಬಾರ ‘ವಿಠಲಾ ಪಾಂಡುರಂಗ ವಿಠಲಾ’ ಎನ್ನುತ್ತ ಆವೆಮಣ್ಣನ್ನು ಹದಮಾಡಿದಂತೆ ಕಾಲುಗಳಿಂದಲೇ ತುಳಿಯಬೇಕಾಗುತ್ತದೆ. ಅದಕ್ಕೇ ಹೇಳಿದ್ದು ಬಟ್ಟೆ ಒಗೆಯುವುದರಲ್ಲೂ ಕಂಡಾಬಟ್ಟೆ ಸೊಬಗಿದೆ, ಸೊಗಸಿದೆ. ನಿಜಕ್ಕಾದರೆ ಯಾವ ಕೆಲಸವಾದರೂ ಹಾಗೆಯೇ ಅಲ್ಲವೇ? ಮನಸ್ಸಿಟ್ಟು ಮಾಡಿದರೆ ಶ್ರಮ ಗೊತ್ತಾಗುವುದಿಲ್ಲ, ಅಷ್ಟೇ‌ಅಲ್ಲ, ಸಂತೋಷ ಇಮ್ಮಡಿಯಾಗುತ್ತದೆ.

ಬಟ್ಟೆ ಒಗೆಯುವುದಕ್ಕೆ ಸಂಬಂಧಿಸಿದಂತೆ, ಮುಖ್ಯವಾಗಿ ಅಗಸ ಒದಗಿಸುವ ಸೇವೆಗೆ ಸಂಬಂಧಿಸಿದಂತೆ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ನಿಯಮಗಳನ್ನು ಹೇಳಲಾಗಿದೆಯೆಂದರೆ ನಂಬುತ್ತೀರಾ? ಬಟ್ಟೆಗಳನ್ನು ಒಗೆಯುವಾಗ ಮರದ ದಿಮ್ಮಿ ಅಥವಾ ನುಣುಪಾದ ಕಲ್ಲಿಗಷ್ಟೇ ಬಡಿಯಬಹುದು. ಬಟ್ಟೆಗಳಿಗೆ ಹಾನಿಯಾಗುವಂತೆ ಒಗೆಯಬಾರದು. ಬೇರೆಬೇರೆ ಗಿರಾಕಿಗಳ ಬಟ್ಟೆಗಳನ್ನು ಮಿಕ್ಸ್‌ಅಪ್ ಮಾಡುವುದಾಗಲೀ, ಒಗೆಯಲಿಕ್ಕೆಂದು ಪಡೆದ ಬಟ್ಟೆಗಳನ್ನು ಉಪಯೋಗಿಸುವುದು, ಮಾರುವುದು ಇತ್ಯಾದಿ ಸಲ್ಲ. ಅದಕ್ಕೆ ನಿರ್ದಿಷ್ಟ ಪ್ರಮಾಣದ ಜುಲ್ಮಾನೆಯಿದೆ, ಶಿಕ್ಷೆಯಿದೆ. ಬಟ್ಟೆಗಳು ಯಾವ ಮಟ್ಟದಲ್ಲಿ ಶುಭ್ರವಾಗಬೇಕು ಎಂಬುದನ್ನವಲಂಬಿಸಿ ಎಷ್ಟು ದಿನಗಳೊಳಗೆ ಹಿಂದಿರುಗಿಸಬೇಕು ಎಂಬ ಪಟ್ಟಿ ಇದೆ. ಹೊಸ ಬಟ್ಟೆಯನ್ನು ಒಮ್ಮೆ ಒಗೆದರೆ ಅದರ ಬೆಲೆ ನಾಲ್ಕನೇ‌ಒಂದರಷ್ಟು, ಎರಡು ಸಲ ಒಗೆದರೆ ಐದನೇ ಒಂದರಷ್ಟು ಸವಕಳಿಯಾಗುತ್ತದೆ... ಹೀಗೆ ಸಾಗುತ್ತವೆ ಕೌಟಿಲ್ಯನ ನಿಯಮಗಳು. ನೋಡಿದಿರಾ? ಬಟ್ಟೆ ಒಗೆಯುವುದು ಎಂಬ ಸಿಲ್ಲಿ ವಿಷಯದ ಹಿಂದೆಯೂ ಎಷ್ಟು ಕೌತುಕಮಯ ವಿಚಾರಗಳಿರುತ್ತವೆ!

ಕೊನೆಯಲ್ಲಿ, ನಿಮಗೊಂದು ರಸಪ್ರಶ್ನೆ. ಇದೊಂಥರದಲ್ಲಿ ಅಪ್ರಸ್ತುತ ಪ್ರಶ್ನೆ ಎನಿಸಿದರೂ ಇದರ ಉತ್ತರ ಇವತ್ತಿನ ಹರಟೆಗೆ ಲಿಂಕ್ ಇರುವಂಥದ್ದೇ ಆಗಿದೆ. ಪ್ರಶ್ನೆ ಹೀಗಿದೆ- ಬೆಂಗಳೂರಿನ ಒಂದು ಪಾಶ್ ಬಡಾವಣೆಯಾದ ‘ಬಿಟಿ‌ಎಂ ಲೇ‌ಔಟ್’ನ ಹೆಸರಿನಲ್ಲಿ ಬಿ ಎಂದರೆ ಬೈರಸಂದ್ರ; ಟಿ ಎಂದರೆ ತಾವರೆಕೆರೆ; ಮೂರನೇ ಅಕ್ಷರ ಎಂ ಎಂದರೇನು? ಬೆಂಗಳೂರಿಗರಿಗೆ ಇದರ ಉತ್ತರ ತತ್‌ಕ್ಷಣ ಗೊತ್ತಾಗಬಹುದಾದರೂ ಇತರರಿಗೆ ಸುಳಿವು ಬೇಕಾಗಬಹುದು. ಉತ್ತರ ಇದೇ ಲೇಖನದಲ್ಲೆಲ್ಲೋ ಯಾವುದೋ ವಾಕ್ಯದ ಭಾಗವಾಗಿ ಅಡಗಿಕುಳಿತಿದೆ. ಹುಡುಕಿ ತೆಗೆಯಿರಿ!

* * *

ನೀವು ಈ ಲೇಖನವನ್ನು ವಿಜಯಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.

"Listen Now" ಮೇಲೆ ಕ್ಲಿಕ್ಕಿಸಿದರೆ ಈ ಲೇಖನವನ್ನು ನೀವು ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.