ಪದ-ಶ್ರಾವ್ಯ

ಈಗ ಆಡಿಯೋ ಟಚ್!

19
May 2012
Cough in Filmsongs
Posted in DefaultTag by sjoshi at 7:20 am

ದಿನಾಂಕ   20 ಮೇ  2012ರ ಸಂಚಿಕೆ...

ಚಿತ್ರಗೀತೆಗಳಲ್ಲಿ ವಿಚಿತ್ರ ಕೆಮ್ಮು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಅಂಕಣಬರಹಕ್ಕೆ ನಿಮಗೆ ವಿಷಯ ಹೇಗೆ ಹೊಳೆಯುತ್ತದೆ? ಪೂರಕ ಮಾಹಿತಿಯನ್ನು ಎಲ್ಲಿಂದ ಸಂಗ್ರಹಿಸುತ್ತೀರಿ? ಮೊದಲಿಂದ ಕೊನೆವರೆಗೂ ಓದಿಸಿಕೊಳ್ಳುವಂತೆ ವಿಷಯಗಳನ್ನು ಹೇಗೆ ಪೋಣಿಸುತ್ತೀರಿ? ಇದಕ್ಕೆಲ್ಲ ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ? ನಮಗೂ ಸ್ವಲ್ಪ ಹೇಳಿಕೊಡ್ತೀರಾ? - ಪರಾಗಸ್ಪರ್ಶ ಓದುಗಮಿತ್ರರಲ್ಲಿ ಹಲವರು ಈ ಪ್ರಶ್ನೆಗಳನ್ನು ನನಗೆ ಈಗಾಗಲೇ ಕೇಳಿದ್ದಿದೆ. ಅವರಿಗೆಲ್ಲ ನಾನು ಪ್ರಾಮಾಣಿಕವಾಗಿ ಉತ್ತರಿಸಿದ್ದೂ ಇದೆ. ಪರಿಚಯವಾಗಿ ಮುಖತಾ ಭೇಟಿಯಾದಾಗ, ಅಥವಾ ಮಿಂಚಂಚೆಯಲ್ಲಿ ಈ ಪ್ರಶ್ನೋತ್ತರ ನಡೆಯುತ್ತಲೇ ಇರುತ್ತದೆ. ಇನ್ನೂ ಭೇಟಿಯಾಗದ ಮತ್ತು ಇದುವರೆಗೂ ಪತ್ರ ಬರೆಯದ ಅನೇಕರ ಮನಸ್ಸಿನಲ್ಲಿಯೂ ಬಹುಶಃ ಇದೇ/ಇಂಥದೇ ಪ್ರಶ್ನೆಗಳಿವೆ ಎಂದು ನನ್ನೆಣಿಕೆ. ಇವತ್ತು ನನಗೊಂದು ಐಡಿಯಾ ಬಂದಿದೆ, ಏನ್‌ಗೊತ್ತಾ? ಈ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ಇಂದಿನ ಅಂಕಣವನ್ನು ಪ್ರಸ್ತುತಪಡಿಸುವುದು! ಆದರೆ ಇದು ಶುಷ್ಕ ವಿವರಣೆಯ ಥಿಯರಿ ಅಲ್ಲ, ಪ್ರಾಕ್ಟಿಕಲ್ ಎಕ್ಸಾಂಪಲ್. ‘ಫ್ರೀಕ್ವೆಂಟ್ಲಿ ಆಸ್ಕ್‌ಡ್ ಕ್ವೆಶ್ಚನ್’ಗಳಿಗೆ ಉತ್ತರಗಳ ಜತೆಯಲ್ಲೇ ಈ ವಾರದ ಅಂಕಣವೂ ತಯಾರು. ಪ್ರಶ್ನೆಗಳಿಗೆ ಅಂಕಣವೇ ಉತ್ತರವೂ, ಉದಾಹರಣೆಯೂ. ಟೂ-ಇನ್-ವನ್. ಓದಿ ನೋಡಿ. ಇಷ್ಟವಾದರೆ ವಾಟೆನ್ ಐಡಿಯಾ ಸರ್‌ಜೀ!

‘ಡಬ್ಬದಿಂದ ಆಚೆಗೂ ಯೋಚಿಸು’ ಎಂಬ ಪದಪುಂಜವನ್ನು ಹಿಂದೊಮ್ಮೆ ಬಳಸಿದ್ದೆ, ನೀವು ಗಮನಿಸಿರಬಹುದು. ಅದು think outside the box ಎನ್ನುವುದಕ್ಕೆ ನನ್ನ ಕನ್ನಡ ತರ್ಜುಮೆ. ನಮ್ಮ ಆಲೋಚನೆಗಳು ಸೀಮಿತ ಚೌಕಟ್ಟಿನೊಳಕ್ಕೇ ಸುತ್ತುತ್ತಿರಬಾರದು, ಅದರಾಚೆಗೂ ವಿಸ್ತರಿಸಿಕೊಳ್ಳಬೇಕು, ಹೊಸ ಸಾಧ್ಯಾಸಾಧ್ಯತೆಗಳನ್ನು ಕಂಡುಕೊಳ್ಳಬೇಕು ಎಂಬ ಒಳ್ಳೆಯ ಅರ್ಥ-ಆಶಯ ಈ ನುಡಿಗಟ್ಟಿಗಿದೆ. ನಿಜಕ್ಕಾದರೆ ಇದನ್ನು ಬಳಸುವುದು ದೈನಂದಿನ ಬದುಕಿನಲ್ಲಿ ಸವಾಲುಗಳನ್ನು ಎದುರಿಸಬೇಕಾದ ಸಂದರ್ಭದಲ್ಲಿ. ಸಮಸ್ಯೆ ಪರಿಹಾರಕ್ಕೆ ಸುಲಭೋಪಾಯಗಳ ಹುಡುಕಾಟದಲ್ಲಿ. ಆದರೆ ನಾನು ಅಂಕಣಕ್ಕೆ ವಿಷಯ ಆರಿಸುವಾಗಲೂ ಡಬ್ಬದಿಂದ ಆಚೆಗೆ ಯೋಚಿಸುವುದುಂಟು. ವಿಷಯ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂಥದ್ದೇ ಇದ್ದರೂ ಅದರಲ್ಲಿ ವೈಶಿಷ್ಟ್ಯದ ಏನೋ ಒಂದು ಹೊಳಹನ್ನು ಹುಡುಕುವುದುಂಟು. ಅದು ಅಂಕಣದ ತಲೆಬರಹದಲ್ಲೇ ವ್ಯಕ್ತವಾದರೆ ಮತ್ತೂ ಒಳ್ಳೆಯದು. ಇವತ್ತಿನ ತಲೆಬರಹವನ್ನೇ ತೆಗೆದುಕೊಳ್ಳಿ. ಚಿತ್ರಗೀತೆಗಳೆಂದರೆ ಎಲ್ಲರಿಗೂ ಗೊತ್ತಿರುವ, ಎಲ್ಲರಿಗೂ ಇಷ್ಟವಾಗುವ ವಿಷಯ. ಆದರೆ ಚಿತ್ರಗೀತೆಗಳಲ್ಲಿ ಕೆಮ್ಮು? ಅದೂ ವಿಚಿತ್ರ ಕೆಮ್ಮು? ಇದೆಂಥದಪ್ಪಾ ಹೊಸ ವಿಚಾರ ಎಂದು ಓದುಗರಿಗೆ ಅಚ್ಚರಿ. ಇಡೀ ಲೇಖನವನ್ನು ಓದುವಂತೆ ತಲೆಬರಹದಿಂದಲೇ ಪ್ರೇರಣೆ.

ವಿಷಯ ನಿಗದಿಪಡಿಸಿದ ಮೇಲೆ ಮತ್ತು ತಲೆಬರಹವನ್ನೂ ನಿರ್ಧರಿಸಿದ ಮೇಲೆ (ಕೆಲವೊಮ್ಮೆ ಲೇಖನ ಬರೆದಾದಮೇಲೆ ತಲೆಬರಹ ಕೊಡುವುದೂ ಇದೆ), ಲೇಖನದ ಆರಂಭ ಹೇಗಿರಬೇಕೆಂದು ಯೋಚಿಸುತ್ತೇನೆ. ಅಲ್ಲೂ ಅಷ್ಟೇ, ಸಾಂಪ್ರದಾಯಿಕ ಶೈಲಿಯಲ್ಲಿ ಸವಕಲು ಪದಗಳನ್ನು ಬಳಸಿ ಬರೆದರೆ ಚೆನ್ನಾಗಿರುವುದಿಲ್ಲ. ಒಳ್ಳೆಯ ಇಂಟ್ರೊ (ಪೀಠಿಕೆ) ಪರಿಣಾಮಕಾರಿಯಾಗಿ ಇರುವಂತೆ ಹೇಗೆ ಬರೆಯಬಹುದೆಂದು ಒಂದೆರಡು ನಮೂನೆಗಳನ್ನು ತೂಗಿನೋಡುತ್ತೇನೆ.  ‘ಚಿತ್ರಗೀತೆಗಳಲ್ಲಿ ಕೆಮ್ಮು’ ಎಂಬ ವಿಷಯವಿದ್ದ ಮಾತ್ರಕ್ಕೇ ಯಾವುದಾದರೂ ಚಿತ್ರಗೀತೆಯ ಸಾಲಿನಿಂದಲೋ, ಉಹ್ಹು ಉಹ್ಹು... ಎಂದು ಕೆಮ್ಮುತ್ತಲೋ ಆರಂಭಿಸಬೇಕೆಂದೇನಿಲ್ಲ. ಚಿತ್ರಗೀತೆಗಳನ್ನು (ಕನ್ನಡ ಅಥವಾ ಯಾವುದೇ ಭಾಷೆಯದಿರಲಿ) ಬರಿ ಹಾಡು ಎಂದುಕೊಳ್ಳದೆ ವಿಶೇಷ ಗಮನವಿಟ್ಟು ಕೇಳಿದರೆ ಅವುಗಳದ್ದೇ ವೈವಿಧ್ಯಮಯ ಲೋಕವೊಂದು ತೆರೆದುಕೊಳ್ಳುತ್ತದೆ. ಉದಾಹರಣೆಗೆ ನಡುವೆ ಸಂಭಾಷಣೆ ಸಾಲುಗಳು ಬರುವ ಚಿತ್ರಗೀತೆಗಳಿವೆ; ಗುರು ಹೇಳಿಕೊಟ್ಟದ್ದನ್ನು ಶಿಷ್ಯ/ಶಿಷ್ಯೆ ಪುನರುಚ್ಚರಿಸುವ ರೀತಿಯ ಚಿತ್ರಗೀತೆಗಳಿವೆ; ತಪ್ಪುತಪ್ಪಾಗಿ ಹೇಳಿದರೆ ಪ್ರೀತಿಯಿಂದ ತಿದ್ದುವ (‘ರಾಂಗೇನ ಹಾಲ್ಲಿಯಾಗೆ’ ಎಂದು ವಾಣಿಜಯರಾಂ ಹಾಡಿದಾಗ ‘ಹಾಲ್ಲಿಯಲ್ಲಮ್ಮ ಹಳ್ಳಿ ಹಳ್ಳಿ...’ ಎಂದು ಕಸ್ತೂರಿಶಂಕರ್ ತಿದ್ದಿಹೇಳುವ ‘ಬಿಳಿಹೆಂಡ್ತಿ’ ಚಿತ್ರದ ಗೀತೆ, ‘ಸಾವನ್‌ಕಾ ಮಹಿನಾ ಪವನ್ ಕರೇ ಶೋರ್...’ ಎಂದು ಲತಾ ಹಾಡಿದಾಗ ‘ಅರೇಬಾಬಾ ಶೋರ್ ನಹೀಂ ಸೋರ್ ಸೋರ್...’ ಎಂದು ಮುಕೇಶ್ ಅದನ್ನು ತಿದ್ದುವ ಹಾಡು), ಅಥವಾ ಸಿಟ್ಟಿನಿಂದ ಗದರಿಸುವ (‘ಶಂಕರಾಭರಣಂ’ ಚಿತ್ರದಲ್ಲಿ ‘ಗಪದಪದಪ ಗಪದಪದಪ’ ಎಂಬ ಸ್ವರಪಾಠವನ್ನು ವಿದ್ಯಾರ್ಥಿಯು ‘ಗಗಪದಪದ ಗಗಪದಪದ’ ಎಂದಾಗ ಶಂಕರಶಾಸ್ತ್ರಿಗಳು ‘ಊಂ’ ಎಂದು ಸಿಟ್ಟಾಗುವ) ಗೀತೆಗಳಿವೆ.

ಹೀಗೆ ಪೀಠಿಕೆಯಲ್ಲಿ ಕೆಮ್ಮಿನ ಬಗ್ಗೆ ಏನೂ ಹೇಳದೆ, ಒಟ್ಟಾರೆಯಾಗಿ ಚಿತ್ರಗೀತೆಗಳಲ್ಲಿ ಯಾವ ರೀತಿ ವಿಶೇಷಗಳನ್ನು ಗುರುತಿಸಬಹುದೆಂದು ಸೋದಾಹರಣವಾಗಿ ವಿವರಿಸುತ್ತೇನೆ. ಅಲ್ಲಿಗೆ ಲೇಖನದ ವಿಷಯಗ್ರಹಿಕೆಗೆ ಓದುಗರ ಮನಸ್ಸನ್ನು ಅಣಿಗೊಳಿಸಿದಂತೆ. ಇನ್ನು, ಚಿತ್ರಗೀತೆಗಳಲ್ಲಿ ಕೆಮ್ಮು ಎಂದು ಶೀರ್ಷಿಕೆ ಕೊಟ್ಟ ಮೇಲೆ ಕೆಮ್ಮಿರುವ ಕೆಲವಾದರೂ ಚಿತ್ರಗೀತೆಗಳನ್ನು ಉಲ್ಲೇಖಿಸಬೇಕಲ್ಲ? ಅವೇನು ಸುಲಭವಾಗಿ ಸಿಗುತ್ತವೆಯೇ? ಹುಡುಕಬೇಕು, ನೆನಪಿಸಿಕೊಳ್ಳಬೇಕು.  ಒಂದು ಸಂಗತಿಯನ್ನು ನೀವೂ ಗಮನಿಸಿರುತ್ತೀರಿ ಎಂದುಕೊಳ್ಳುತ್ತೇನೆ- ಚಿತ್ರಗೀತೆ ಬಿಡಿ, ಸಾಮಾನ್ಯವಾಗಿ ಸಿನೆಮಾಗಳಲ್ಲಿ ನಟನಟಿಯರಿಗೆ ಕೆಮ್ಮು ಸೀನು ಬಿಕ್ಕಳಿಕೆಗಳೆಲ್ಲ ಬರೋದೇ ಇಲ್ಲ! ಯಾವುದಾದರೂ ಪಾತ್ರ ಕೆಮ್ಮುತ್ತದೆಯೆಂದರೆ ಅದು ಮಾರಣಾಂತಿಕ ಸನ್ನಿವೇಶವೆಂದೇ ಅರ್ಥ. ಚಿತ್ರಗೀತೆಯಲ್ಲಿ ಕೆಮ್ಮು ಕೇಳಿಬರುವುದಂತೂ ದೂರದ ಮಾತು.

ನಿರಾಶೆಗೊಂಡು ಲೇಖನಕ್ಕೆ ಆ ವಿಷಯವೇ ಬೇಡವೆಂದು ಬಿಟ್ಟುಬಿಡುವುದೇ? ಖಂಡಿತ ಇಲ್ಲ! ಕೆಮ್ಮಿನ ಚಿತ್ರಗೀತೆಗಳಿಲ್ಲ ಎಂದವರಾರು? ಶಂಕರಾಭರಣಂ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ‘ದೊರಕುನಾ ಇಟುವಂಟಿ ಸೇವಾ...’ ಕೇಳಿದ್ದೀರಾ? ಅದರಲ್ಲಿ ಶಂಕರಶಾಸ್ತ್ರಿಗಳಿಗೆ ವಿಪರೀತ ಕೆಮ್ಮು ಬರಲಾರಂಭಿಸುತ್ತದೆ. ಮೊದಲ ಚರಣದಲ್ಲಿ ‘ನಾದಾತ್ಮ ಕುಡವೈ ನಾಲೋನ ಚೆಲಗಿ...’ ಸಾಲು ಮುಗಿದಾಕ್ಷಣ ಸಂಗೀತನಿರ್ದೇಶಕ ಕೆ.ವಿ.ಮಹಾದೇವನ್ ಒಂದು ಸಿಗ್ನಲ್ ನೋಟ್ ‘ಟೆಡೇಂ...’ ಎಂದು ಕೇಳುವಂತೆ ಮಾಡುತ್ತಾರೆ. ಅದು ಹಿನ್ನೆಲೆ ಕೆಮ್ಮು ಕಲಾವಿದನಿಗೆ ಸೂಚನೆ. ಅಲ್ಲಿಂದ ಏಕ್‌ದಂ ಕೆಮ್ಮು. ಹಾಡನ್ನು ಶಂಕರಶಾಸ್ತ್ರಿಗಳ ಶಿಷ್ಯ ಮುಂದುವರಿಸುತ್ತಾನೆ. ಹಾಡು ಮುಗಿದಾಗ ಶಾಸ್ತ್ರಿಗಳ (ಸೋಮಯಾಜುಲು) ಬದುಕಿನ ಹಾಡೂ ಮುಗಿಯುತ್ತದೆ. ಜತೆಯಲ್ಲೇ ಶಾರದೆ(ಮಂಜುಭಾರ್ಗವಿ)ಯದೂ. ‘ದೊರಕುನಾ ಇಟುವಂಟಿ ಸೇವಾ...’ ತೆಲುಗಿನಲ್ಲಿ ಎಸ್ಪಿಬಿ ಹಾಡಿದ್ದು ಮತ್ತು ಜತೆಗಿನ ಕೆಮ್ಮು ಅದೆಷ್ಟು ಪರ್ಫೆಕ್ಟಾಗಿ ಬಂದಿತ್ತೆಂದರೆ, ಶಂಕರಾಭರಣಂ ಚಿತ್ರ ಮಲಯಾಳಮ್‌ಗೆ ಡಬ್ ಆದಾಗ ಹಾಡಿನ ತೆಲುಗು ಆವೃತ್ತಿಯನ್ನೇ ಉಳಿಸಿಕೊಂಡಿದ್ದರಂತೆ.

coughwhilesinging.jpg

ಶಂಕರಾಭರಣಂ ಹಾಡು ಕೆಮ್ಮಿನ ಚಿತ್ರಗೀತೆಗೆ ಉದಾಹರಣೆಯೇನೋ ಆಯ್ತು, ಆದರೆ ಕನ್ನಡ ಲೇಖನದಲ್ಲಿ ಕನ್ನಡ ಚಿತ್ರಗೀತೆಗಳದೇ ಉದಾಹರಣೆಗಳಿದ್ದರೆ ಒಳ್ಳೆಯದಲ್ಲವೇ? ಖಂಡಿತ. ‘ಸೀತಾ’ ಚಿತ್ರದ ಶುಭಾಶಯ ಹಾಡು!  ‘ಮದುವೆಯ ಈ ಬಂಧ ಅನುರಾಗದ ಅನುಬಂಧ...’ ಅದರ ರೇಡಿಯೊ ಆವೃತ್ತಿಯಲ್ಲಿ ಕೇಳಿಬರೋದು ಎರಡೇ ಚರಣಗಳು. ಸಿನೆಮಾ ಆವೃತ್ತಿಯಲ್ಲಿ ಮೂರನೇ ಚರಣವೂ ಇದೆ. ಮೂರನೇ ಚರಣಕ್ಕೆ ಮೊದಲು ಕೆಮ್ಮಿನಿಂದಾಗಿ ಹಾಡು ಒಮ್ಮೆ ನಿಂತು ಮತ್ತೆ ಶುರುವಾಗುತ್ತದೆ. ‘ಹಾಲು ಜೇನು’ ಚಿತ್ರದಲ್ಲಿ ಅಣ್ಣಾವ್ರು ಹಾಡಿರುವ ‘ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ...’ ಇದೆಯಲ್ಲ, ಅದರಲ್ಲಿ ಸರಿತಾ ‘ಏನ್ರೀ‌ಇದು ಗಂಡ್ಸಾಗ್‌ಹುಟ್ಟಿ ನೀವು ಅಡುಗೆ ಮಾಡೋದಾ?’ ಎಂದು ಕೇಳ್ತಾರೆ. ಡಾ.ರಾಜ್ ‘ಉಹ್ಹು ಉಹ್ಹು’ ಎಂದು ಹುಸಿಯಾಗಿ ಕೆಮ್ಮಿದಂತೆ ನಟಿಸಿ ‘ಭೀಮಸೇನ ನಳಮಹಾರಾಜರು ಗಂಡಸರಲ್ಲವೇ...’ ಎಂದು ಹಾಡು ಮುಂದುವರಿಸುತ್ತಾರೆ. ಕ್ಯಾನ್ಸರ್‌ನಿಂದ ಬಳಲುವ ಸರಿತಾ ಹಾಡಿನ ಕೊನೆಗೆ ನಿಜವಾಗಿಯೂ ಕೆಮ್ಮುತ್ತಾರೆ, ರಾಜ್ ಆಕೆಯನ್ನು ಹೂವಿನಂತೆ ಆರೈಕೆ ಮಾಡುತ್ತಾರೆ. ಮತ್ತೊಂದು ಹಾಡು ‘ಪರಮೇಶಿ ಪ್ರೇಮಪ್ರಸಂಗ’ ಚಿತ್ರದ್ದು- ‘ಉಪ್ಪಿಲ್ಲ ಮೆಣಸಿಲ್ಲ ತರಕಾರಿ ಏನಿಲ್ಲ...’ ಭಲೇ ತಮಾಷೆಯದು. ಅದರಲ್ಲಿ ವಿಚಿತ್ರವೆಂದರೆ ಒಗ್ಗರಣೆಯ ಹೊಗೆಗೆ ಮುಖವೊಡ್ಡಿದರೂ ರಮೇಶ್‌ಭಟ್ ಸ್ವಲ್ಪವೂ ಕೆಮ್ಮುವುದಿಲ್ಲ!

ಕೆಮ್ಮು ಇರುವ ಇನ್ನೂ ಒಂದು ಸೂಪರ್‌ಹಿಟ್ ಕನ್ನಡ ಚಿತ್ರಗೀತೆ ನನಗೆ ನೆನಪಾಗುತ್ತದೆ. ಅದನ್ನು ನಾನು ಲೇಖನದಲ್ಲಿ ಬಳಸದೆ ಓದುಗರಿಗೆ ರಸಪ್ರಶ್ನೆಯಾಗಿ ಕೊಡುತ್ತೇನೆ. ಲೇಖನವು ಓದುಗರ ಮನಸ್ಸಿನಲ್ಲಿ ಹೆಚ್ಚು ಹೊತ್ತು ಗುಂಯ್‌ಗುಡುವಂತೆ ಮಾಡುವ ಉದ್ದೇಶ. ಆದರೆ ಲೇಖನಕ್ಕೊಂದು ತಾರ್ಕಿಕ ಅಂತ್ಯವೂ ಬೇಕಲ್ವಾ, ಅದಕ್ಕೋಸ್ಕರ ಒಂದು ತಮಾಷೆ ಪ್ಯಾರಗ್ರಾಫ್ ಹೆಣೆಯುತ್ತೇನೆ- “ಕೊನೆ ಕೆಮ್ಮು: ಸಾಮಾನ್ಯವಾಗಿ ಆಕಳಿಕೆ ಬಗ್ಗೆ ಓದುವಾಗ, ಆಕಳಿಸುತ್ತಿರುವವರನ್ನು ನೋಡಿದಾಗ, ನಮಗೂ ಆಕಳಿಕೆ ಬರುತ್ತದೆ. ಕೆಮ್ಮಿನ ವಿಚಾರ ಹಾಗಲ್ಲ. ಇದೀಗ ಇಷ್ಟೆಲ್ಲ ಕೆಮ್ಮೋಪಾಖ್ಯಾನವನ್ನು ಓದಿದರೂ ನಿಮಗೆ ಒಂಚೂರೂ ಕೆಮ್ಮು ಬಂದಿಲ್ಲವೆಂದೇ ನನ್ನ ಭಾವನೆ. ಹಾಗೂ ಒಂದುವೇಳೆ ಬಂದರೆ ‘ಕೆಮ್ಮಾರೊ ಕೆಮ್ಮ್... ಮಿಟ್‌ಜಾಯೇ ಕೆಮ್ಮ್...’ ಎಂದು ಹಾಡಿಕೊಂಡರಾಯ್ತು. ಅಷ್ಟೇ.”

ಪರಾಗಸ್ಪರ್ಶ ಅಂಕಣಬರಹ ರೂಪುಗೊಳ್ಳುವುದು ಹೇಗೆಂದು ನಿಮಗೀಗ ಅಂದಾಜಾಯ್ತಲ್ಲ? ಹಾಂ, ರಸಪ್ರಶ್ನೆ ಉಳಿದೇಬಿಟ್ಟಿತು! ವಿಷ್ಣುವರ್ಧನ್ ಅಭಿನಯದ ಅತ್ಯಂತ ಹೃದಯಸ್ಪರ್ಶಿ ಚಿತ್ರ, ಕೆಮ್ಮುತ್ತ ಕೆಮ್ಮುತ್ತ ರಕ್ತ ಕಾರಿಕೊಂಡು ಹಾಡು ಮುಗಿದಾಗ ವಿಷ್ಣು ಕೊನೆಯುಸಿರೆಳೆಯುತ್ತಾರೆ. ಯಾವ ಚಿತ್ರ? ಯಾವ ಹಾಡು? ಉತ್ತರ ಗೊತ್ತಾದರೆ ಬರೆದು ತಿಳಿಸಿ. ಹಾಗೆಯೇ, ಕೆಮ್ಮಿನ ಹಾಡು ಬೇರಾವುದಾದರೂ ನಿಮಗೆ ಗೊತ್ತಿದ್ದರೆ ಅದನ್ನೂ ಬರೆಯಿರಿ! * * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can skip to the end and leave a response. Pinging is currently not allowed.