ಪದ-ಶ್ರಾವ್ಯ

ಈಗ ಆಡಿಯೋ ಟಚ್!

19
Nov 2011
DC Central Kitchenalli Kannadigaru
Posted in DefaultTag by sjoshi at 12:28 pm

ದಿನಾಂಕ  20 ನವೆಂಬರ್ 2011ರ ಸಂಚಿಕೆ...

ಅನಾಥರಿಗೆ ಅಡುಗೆ ಮಾಡಿದೆವು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಟೂ ಮೆನಿ ಕುಕ್ಸ್ ಸೇರಿದರೆ ಅಡುಗೆ ಹಾಳಾಗಿ ಹೋಗುತ್ತದಂತೆ- ಇಂಗ್ಲಿಷ್ ಗಾದೆ ಪ್ರಕಾರ. ಇರಬಹುದು, ಅದು ಇಂಗ್ಲಿಷ್ ಗಾದೆ. ಇಂಗ್ಲಿಷ್ ಕುಕ್ಕುಗಳಿಗೆ ಸರಿಹೊಂದುವಂಥದು. ಆದರೆ ನಾವು ಅವತ್ತು ಸುಮಾರು ನಲ್ವತ್ತು ಮಂದಿ ಕನ್ನಡಿಗರು ಸೇರಿ ಅಡುಗೆ ಮಾಡಿದೆವು, ಅದೂ ಹೇಗೆಂದರೆ ಪಕ್ಕಾ ಇಂಗ್ಲಿಷ್ ಕಿಚನ್‌ನಲ್ಲಿ. ನಮ್ಮ ಅಡುಗೆ ಕೆಟ್ಟದಾಗೋದು ಬಿಡಿ, ಯಾರಾದರೂ ರುಚಿ ನೋಡಿರುತ್ತಿದ್ದರೆ ಅಮೃತ ಸಮಾನ ಎಂದು ಶಭಾಷ್‌ಗಿರಿ ಕೊಡುತ್ತಿದ್ದರು. ನಲ್ವತ್ತು ಮಂದಿಯಲ್ಲಿ ಎಲ್ಲರೂ ಗಂಡಸರೇ ಹಾಗಾಗಿ ನಮ್ಮದು ನಳಪಾಕ ಎಂದು ಜಂಬ ಕೊಚ್ಚಿಕೊಳ್ಳಲು ಹೀಗೆನ್ನುತ್ತಿರುವುದಲ್ಲ. ನಮ್ಮ ತಂಡದಲ್ಲಿ ಹೆಂಗಸರೂ ಇದ್ದರು. ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳೂ ಇದ್ದರು. ಅಷ್ಟಕ್ಕೂ ನಾವು ಅಡುಗೆ ತಯಾರಿಸಿದ್ದು ಶ್ವೇತಭವನದಲ್ಲಿ ಒಬಾಮಾ ಮತ್ತಿತರ ಗಣ್ಯರ ಊಟೋಪಚಾರಕ್ಕೇನೂ ಅಲ್ಲ. ವಾಷಿಂಗ್ಟನ್ ನಗರದ ಸುತ್ತಮುತ್ತಲಿನ ಅನಾಥಾಶ್ರಮಗಳಿಗೆ ಸರಬರಾಜು ಮಾಡುವುದಕ್ಕೆ. ಅಲ್ಲಿರುವ ಹಸಿದ ಹೊಟ್ಟೆಗಳಿಗೆ ಒಪ್ಪೊತ್ತಿನ ಊಟವಾಗಿ ಬಡಿಸುವುದಕ್ಕೆ. ಅದು ಆಡಂಬರದ ಅಡುಗೆ ಪ್ರದರ್ಶನವಲ್ಲ, ಆರ್ದ್ರ ಹೃದಯಗಳ ಅನುರಾಗದ ರಂಧನ.

ನಮ್ಮ ಪಾಕಪ್ರಯೋಗವನ್ನು ವ್ಯಾಖ್ಯಾನಿಸುವ ಮೊದಲು ನಿಮಗೆ ‘ಡಿ.ಸಿ ಸೆಂಟ್ರಲ್ ಕಿಚನ್’ನ ಕಿರುಪರಿಚಯ ಮಾಡಿ ಕೊಡಬೇಕು. ಇದು, ವಾಷಿಂಗ್ಟನ್ ನಗರದ ಹೃದಯಭಾಗದಲ್ಲಿ ಇರುವ ಒಂದು ಬೃಹತ್ ಪಾಕಶಾಲೆ. ವಾಷಿಂಗ್ಟನ್‌ನ ಪ್ರಧಾನ ಆಕರ್ಷಣೆಗಳಾದ ವೈಟ್‌ಹೌಸ್, ಕ್ಯಾಪಿಟೊಲ್ ಮುಂತಾದುವುಗಳಿಗೆ ಕೂಗಳತೆಯ ದೂರದಲ್ಲಿರುವ ಒಂದು ಸಾಮಾನ್ಯ ಮಟ್ಟದ ಕಟ್ಟಡ. ಎಷ್ಟು ವ್ಯತ್ಯಾಸ ನೋಡಿ- ವೈಟ್‌ಹೌಸ್ ಕ್ಯಾಪಿಟೊಲ್‌ಗಳೆಲ್ಲ ಸಿರಿವಂತಿಕೆಯ, ಪ್ರಪಂಚದ ಮೇಲೆ ಪ್ರಭಾವ ಬೀರುವ ಅಧಿಕಾರಶಾಹಿಯ ಆಡುಂಬೊಲಗಳಾದರೆ ಡಿ.ಸಿ ಸೆಂಟ್ರಲ್ ಕಿಚನ್ ಅನ್ನೋದು ನಿರ್ಗತಿಕರಿಗೆ, ಬಡಬಗ್ಗರಿಗೆ ಆಹಾರ ತಯಾರಾಗುವ ಅಡುಗೆಮನೆ. ಅಲ್ಲಿ ಮೆರೆಯುವುದು ಅಧಿಕಾರದ ದರ್ಪವಲ್ಲ, ಅನುಕಂಪದ ಮಾನವೀಯತೆ.

ಹಾಗೆ ನೋಡಿದರೆ ಡಿ.ಸಿ ಸೆಂಟ್ರಲ್ ಕಿಚನ್ ಬರಿ ಒಂದು ಅಡುಗೆಮನೆಯಷ್ಟೇ ಅಲ್ಲ. ಅದೊಂದು ಸೇವಾನಿರತ ಸಂಸ್ಥೆ. ಅದರ ಚಟುವಟಿಕೆಗಳ ಹರಹು ದೊಡ್ಡದು. ವರ್ಷದ ೩೬೫ ದಿನಗಳಲ್ಲೂ ಅನಾಥಾಶ್ರಮಗಳಿಗೆ ಊಟ ಸರಬರಾಜು ಮಾಡುವುದು ಮುಖ್ಯ ಉದ್ದೇಶ ಹೌದಾದರೂ ಆಹಾರ ಎನ್ನುವ ಮೂಲಭೂತ ಅವಶ್ಯಕತೆಯನ್ನೇ ಸಮಾಜಸೇವೆಯ ಬಹುರೂಪಗಳಿಗೆ ಒಂದು ಸಾಧನವಾಗಿ ಬಳಸಿರುವುದು ಡಿ.ಸಿ ಸೆಂಟ್ರಲ್ ಕಿಚನ್‌ನ ವಿಶಿಷ್ಟತೆ. ಅದು ಪಾಕಶಾಸ್ತ್ರ ವಿದ್ಯಾರ್ಥಿಗಳಿಗೆ ಕಲಿಕೆಯ ತಾಣವೂ ಹೌದು. ರೆಸ್ಟೊರೆಂಟ್‌ಗಳು, ಔತಣಕೂಟಗಳು ಮುಂತಾಗಿ ವಿವಿಧೆಡೆಗಳಲ್ಲಿ ತಿಂದುಂಡು ಮಿಕ್ಕುಳಿದ, ವೃಥಾ ಪೋಲಾಗುವ ಆಹಾರವನ್ನು ಸಂಗ್ರಹಿಸಿ ಅದನ್ನು ಊಟದ ಪೊಟ್ಟಣಗಳನ್ನಾಗಿಸುವ ಫುಡ್-ರೀಸೈಕ್ಲಿಂಗ್ ಫ್ಯಾಕ್ಟರಿಯೂ ಹೌದು. ತಾತ್ಕಾಲಿಕವಾಗಿ ನಿರುದ್ಯೋಗಿಗಳಾದವರಿಗೆ ಸ್ವಯಂಸೇವಕರಾಗಿ ಅಥವಾ ಅಲ್ಪ ಸಂಬಳಕ್ಕಾಗಿ ದುಡಿಯಲು ಸೌಲಭ್ಯವೀಯುವ ಉದ್ಯಮವೂ ಹೌದು. ಈ ದೇಶದಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ವರ್ಷಕ್ಕೆ ಇಂತಿಷ್ಟು ಗಂಟೆಗಳ ‘ಸಮಾಜಸೇವೆ’ ದಾಖಲಿಸಲೇಬೇಕು ಎಂದು ನಿಯಮವಿರುವ ಹಿನ್ನೆಲೆಯಲ್ಲಿ ಅಂಥವರಿಗೆ, ಸಂಚಾರಿ ನಿಯಮ ಉಲ್ಲಂಘನೆ ಅಥವಾ ಸಣ್ಣಪುಟ್ಟ ಅಪರಾಧಗಳ ಶಿಕ್ಷೆಯ ರೂಪದಲ್ಲಿ ಇಂತಿಷ್ಟು ದಿನ ಸಮಾಜಸೇವೆ ಮಾಡಬೇಕೆಂಬ ಆಜ್ಞೆ ಪಡೆದವರಿಗೆ, ಸಮಾಜಸೇವೆಯ ಅವಕಾಶ ಕಲ್ಪಿಸುವ ತಾಣವೂ ಹೌದು.

ಪ್ರತಿದಿನವೂ, ಪ್ರತಿ ಹೊತ್ತಿಗೂ ಸುಮಾರು ಐದು ಸಾವಿರ ಊಟಗಳು ಡಿ.ಸಿ ಸೆಂಟ್ರಲ್ ಕಿಚನ್‌ನಲ್ಲಿ ತಯಾರಾಗುತ್ತವೆ. ಅಲ್ಲಿ ಅದಕ್ಕಾಗಿಯೇ ಸುಮಾರು ನೂರಕ್ಕೂ ಹೆಚ್ಚು ಅಡುಗೆಯವರು, ಸಹಾಯಕರು, ನಿರ್ವಹಣಕಾರರು ಇತ್ಯಾದಿ ಸಿಬಂದಿಯಿದ್ದಾರೆ. ತಯಾರಾದ ಆಹಾರದ ಪೊಟ್ಟಣಗಳನ್ನು ಅನಾಥಾಶ್ರಮಗಳಿಗೆ ಸರಬರಾಜು ಮಾಡಲು ಡೆಲಿವರಿ-ಟ್ರಕ್‌ಗಳಿವೆ. ಕಚ್ಚಾ ಸಾಮಗ್ರಿಗಳು ಬಹುತೇಕವಾಗಿ ಸ್ಥಳೀಯ ರೈತರ ಬೆಳೆಗಳಿಂದಲೇ ಬರುತ್ತವೆ. ಖರ್ಚುವೆಚ್ಚಗಳಿಗೆ ಸರಕಾರದ ಅನುದಾನ ಇದೆಯಾದರೂ ಸಾಧ್ಯವಾದಷ್ಟು ಮಟ್ಟಿಗೆ ಸ್ವಯಂಸೇವಕರ, ಸೇವಾಸಂಸ್ಥೆಗಳ ನೆರವನ್ನು ಸೆಂಟ್ರಲ್ ಕಿಚನ್ ಕೃತಜ್ಞತಾಪೂರ್ವಕ ಸ್ವೀಕರಿಸುತ್ತದೆ. ಆಹಾರ ತಯಾರಿ ಮತ್ತು ಬಟವಾಡೆಯ ಒಂದು ದಿನದ ಖರ್ಚನ್ನು ಪ್ರಾಯೋಜಿಸುವುದಿರಬಹುದು, ಸೆಂಟ್ರಲ್ ಕಿಚನ್‌ಗೆ ಹೋಗಿ ಅಡುಗೆ ಕೆಲಸಕ್ಕೆ ನೆರವಾಗುವುದಿರಬಹುದು, ಅಥವಾ ಸೆಂಟ್ರಲ್ ಕಿಚನ್‌ನ ಯಾವುದೇ ಚಟುವಟಿಕೆಗಳಲ್ಲಿ ಯಾವುದೇ ತೆರನಾದ ಪಾಲ್ಗೊಳ್ಳುವಿಕೆಯಿರಬಹುದು ಒಟ್ಟಿನಲ್ಲಿ ಸಾರ್ವಜನಿಕರ ತನು-ಮನ-ಧನ ಸಹಾಯವೇ ಸೆಂಟ್ರಲ್ ಕಿಚನ್‌ನ ಜೀವನಾಡಿ.

ವಾಷಿಂಗ್ಟನ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರಷ್ಟು ಕನ್ನಡ ಕುಟುಂಬಗಳು ನೆಲೆಸಿವೆ. ತಂತಮ್ಮ ವೃತ್ತಿ-ಪ್ರವೃತ್ತಿಗಳಿಂದ ವಿವಿಧ ಕ್ಷೇತ್ರಗಳಲ್ಲಿ ಮಿಂಚಿರುವ ಕನ್ನಡಿಗರಿದ್ದಾರೆ. ಸುಮಾರು ೩೫ ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದ ‘ಕಾವೇರಿ’ ಕನ್ನಡ ಸಂಘವೂ ಇದೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ, ಸಾಕಷ್ಟು ಕ್ರಿಯಾಶೀಲವಾದ ಕನ್ನಡಸಂಘವೆಂದು ಹೆಸರನ್ನೂ ಗಳಿಸಿದೆ. ಕನ್ನಡ ನಾಡು-ನುಡಿಯ ಕೀರ್ತಿಯನ್ನು ಈ ದೇಶದಲ್ಲಿ ಪಸರಿಸುವ ಕೆಲಸವನ್ನು ಕನ್ನಡಿಗರು ವೈಯಕ್ತಿಕ ನೆಲೆಯಲ್ಲಿ, ಅಥವಾ ‘ಕಾವೇರಿ’ಯಂಥ ಕನ್ನಡಕೂಟಗಳ ರೂಪದಲ್ಲಿ ಹೇರಳವಾಗಿ ಮಾಡಿದ್ದಿದೆ. ಇಲ್ಲಿ ಸಂಪಾದನೆ ಮಾಡಿದ್ದರಲ್ಲಿ ಸ್ವಲ್ಪಾಂಶವಾದರೂ ಕರ್ನಾಟಕಕ್ಕೆ ವಿನಿಯೋಗವಾಗುವಂತೆ ವೈಯಕ್ತಿಕ ನೆಲೆಯಲ್ಲಿ, ಅಥವಾ ಕನ್ನಡಕೂಟಗಳ ಮುಖಾಂತರ ದಾನದತ್ತಿಯಲ್ಲಿ ವಿನಿಯೋಗಿಸಿದ್ದೂ ಸಾಕಷ್ಟಿದೆ (ಎರಡು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಮರುವಸತಿ ಯೋಜನೆಗೆ ಸಾವಿರಾರು ಡಾಲರ್ ಧನಸಂಗ್ರಹ ನಮ್ಮ ಕಾವೇರಿ ಕನ್ನಡ ಸಂಘದಲ್ಲಾದದ್ದು ಒಂದು ಚಿಕ್ಕ ಉದಾಹರಣೆ ಅಷ್ಟೇ).

ಇವೆರಡಕ್ಕಿಂತ ಭಿನ್ನವಾಗಿ ಇನ್ನೂ ಒಂದು ಆಯಾಮವನ್ನು ಪ್ರತಿಯೊಬ್ಬ ಅನಿವಾಸಿಯೂ ಯೋಚಿಸಬೇಕು ಎಂದು ನನಗನಿಸುತ್ತದೆ. ಅದೇನೆಂದರೆ, ‘ಅನ್ನಕ್ಕಾಗಿ ಈ ದೇಶಕ್ಕೆ ವಲಸೆ ಬಂದಿರುವ ನಾನು ಈ ದೇಶದಿಂದ ಏನೋ ಅಷ್ಟಿಷ್ಟನ್ನು ಪಡೆದೆ ನಿಜ; ಆದರೆ ಈ ದೇಶಕ್ಕೆ, ಈ ದೇಶದ ಜನತೆಗೆ ನಾನೇನು ಕೊಟ್ಟಿದ್ದೇನೆ?’ ಎಂಬ ಆತ್ಮಸಾಕ್ಷಿಯ ಪ್ರಶ್ನೆ. ಅಮೆರಿಕಾಧ್ಯಕ್ಷನಾಗಿದ್ದಾಗ ಜಾನ್ ಎಫ್ ಕೆನಡಿ ಹೇಳಿದ್ದ ಫೇಮಸ್ ಮಾತುಗಳು ಬಹುಶಃ ಈ ಸಂದರ್ಭದಲ್ಲಿ ಪ್ರಸ್ತುತವೆನಿಸುತ್ತವೆ.

ಮೊನ್ನೆ ನವೆಂಬರ್ ಮೊದಲ ಶನಿವಾರದಂದು ನಾವೊಂದಿಷ್ಟು ಮಂದಿ ‘ಕಾವೇರಿ’ ಕನ್ನಡಿಗರು ಒಟ್ಟುಗೂಡಿ ಡಿ.ಸಿ.ಸೆಂಟ್ರಲ್ ಕಿಚನ್‌ಗೆ ಹೋಗಿ ಐದು ಸಾವಿರ ಊಟದ ಪೊಟ್ಟಣಗಳಿಗಾಗುವಷ್ಟು ಅಡುಗೆ ತಯಾರಿಸಿದ್ದು, ಒಂದು ದಿನದ ಅಡುಗೆ/ಬಟವಾಡೆಗೆ ತಗಲುವ ಸಾಮಗ್ರಿ-ಸಾಗಾಟಗಳ ಖರ್ಚನ್ನು ವಂತಿಗೆ ರೂಪದಲ್ಲಿ ಸಂಗ್ರಹಿಸಿ ಸಲ್ಲಿಸಿದ್ದು ಈ ನಿಟ್ಟಿನಲ್ಲಿ ನಿಜಕ್ಕೂ ಹೆಮ್ಮೆಯೆನಿಸುವ ವಿಚಾರ. ಕಾವೇರಿಯ ಹಿರಿಯ ಸದಸ್ಯರಲ್ಲೊಬ್ಬರಾದ ಎಸ್.ಕೃಷ್ಣಮೂರ್ತಿ (ಕಾವೇರಿ ಕೃಷ್ಣಮೂರ್ತಿ ಎಂದೇ ಇಲ್ಲಿ ಎಲ್ಲರ ಪ್ರೀತಿಪಾತ್ರ) ಇಂಥದಕ್ಕೆಲ್ಲ ನಮ್ಮ ಮುಂದಾಳು. ನಿವೃತ್ತ ವಯಸ್ಸಿನಲ್ಲೂ ಪಾದರಸದಂತೆ ಅತ್ತಿಂದಿತ್ತ ಓಡಾಡಿ, ಜನರ ಮನ ಓಲೈಸಿ ಇಂಥ ಒಳ್ಳೇಕೆಲಸಗಳಿಗೆ ಸಾರಥಿಯಾಗುವವರು. ಕನ್ನಡ ರಾಜ್ಯೋತ್ಸವವನ್ನು ನೆನಪಿಸಿಕೊಂಡಂತೆಯೂ ಆಗುತ್ತದೆ, ನವೆಂಬರ್ ತಿಂಗಳಲ್ಲೇ ‘ಥ್ಯಾಂಕ್ಸ್‌ಗಿವಿಂಗ್’ ಅಮೆರಿಕನ್ ಹಬ್ಬವೂ ಇರುತ್ತದೆ, ಆದ್ದರಿಂದ ನವೆಂಬರ್ ತಿಂಗಳ ಮೊದಲ ವಾರಾಂತ್ಯದ ದಿನವನ್ನೇ ಈ ಶ್ರಮದಾನ ಚಟುವಟಿಕೆಗೆ ಸೂಕ್ತ ದಿನವೆಂದು ನಿಗದಿಪಡಿಸಿದವರೂ ಅವರೇ.

ಬೆಳಿಗ್ಗೆ ಎಂಟುವರೆಗೆಲ್ಲ ಸೆಂಟ್ರಲ್ ಕಿಚನ್‌ನಲ್ಲಿ ಸೇರಿದ ನಮ್ಮ ಟೀಮ್ ಮಧ್ಯಾಹ್ನ ಹನ್ನೆರಡಾಗುವಷ್ಟರಲ್ಲಿ ಅಡುಗೆ ಮಾಡಿ ಮುಗಿಸಿ ಡೆಲಿವರಿ ಟ್ರಕ್‌ಗಳವರು ಕೊಂಡೊಯ್ಯುವುದಕ್ಕೆ ಅನುಕೂಲವಾಗುವಂತೆ ಅದರ ಪ್ಯಾಕಿಂಗ್ ಸಹ ಮಾಡಿ ಆಗಿತ್ತು! ನಮ್ಮ ಮೆನುದಲ್ಲಿ ಎರಡೇ ಐಟಮ್‌ಗಳು. ಒಂದು ಅನ್ನ, ಇನ್ನೊಂದು ‘ಮಿಕ್ಸೆಡ್ ವೆಜಿಟೆಬಲ್ ಕರ್ರಿ’ ಎನ್ನಬಹುದಾಗಿದ್ದ ಒಂದು ಅತ್ಯಮೋಘ ಪದಾರ್ಥ. ಈರುಳ್ಳಿ, ಕ್ಯಾರೆಟ್, ಕಾಲಿಫ್ಲವರ್, ಸೌತೆಕಾಯಿ, ದೊಣ್ಣೆಮೆಣಸು ಮುಂತಾದ ತರಕಾರಿಗಳನ್ನು ಹೆಚ್ಚಿ ದೊಡ್ಡದೊಡ್ಡ ಸ್ಟೀಮ್ ಬಾಯ್ಲರ್‌ಗಳಲ್ಲಿ ಬೇಯಿಸಿ ತಯಾರಿಸಿದ್ದು. ಅಮೆರಿಕನ್ ಪದಾರ್ಥಗಳೊಂದಿಗೆ ಪಕ್ಕಾ ಕರ್ನಾಟಕ ಪಾಕಶೈಲಿಯಲ್ಲಿ ಅದಕ್ಕೊಂದಿಷ್ಟು ಮಸಾಲೆಪುಡಿಗಳನ್ನೂ ಬೆರೆಸಿದ್ದರಿಂದ ಒಂಥರ ಬಿಸಿಬೇಳೆಭಾತ್‌ನಂತೆಯೇ ಕಂಗೊಳಿಸುತ್ತಿತ್ತು. ಅದರಲ್ಲೇ ಕಡಲೆ ಮತ್ತು ರಾಜ್‌ಮಾ ಬೀಜಗಳನ್ನೂ ಸೇರಿಸಿದ್ದರಿಂದ ‘ರಾಜಮ್ಮಾ ಪಲ್ಯ’ ಎಂದು ಹೆಸರು ಬೇರೆ ಕೊಟ್ಟಿದ್ದೆವು.

ಅಂತೂ ಜೋಕುಗಳು, ತಮಾಷೆ, ಹರಟೆ, ನಗು, ಅಟ್ಟಹಾಸಗಳ ಖುಷಿಯನ್ನೂ ಸೇರಿಸಿ ರುಚಿರುಚಿಯಾದ ರಸಪಾಕ ಸಿದ್ಧವಾಗಿತ್ತು. ಟೀಮ್‌ವರ್ಕ್‌ನಿಂದಾಗಿ ಅಷ್ಟು ಕ್ಷಿಪ್ರಗತಿಯಲ್ಲಿ ಅದು ಸಾಧ್ಯವಾದದ್ದು ಎಲ್ಲರಿಗೂ ಖುಷಿ ತಂದಿತ್ತು. ಅನ್ನಬ್ರಹ್ಮನ ದೇಗುಲದಲ್ಲಿ ಪರಿಚಾರಿಕೆ ನಡೆಸಿಬಂದ ಧನ್ಯತಾಭಾವ ಎಲ್ಲರಲ್ಲೂ ಮೂಡಿತ್ತು. ವಾರಾಂತ್ಯದ ದಿನವನ್ನು ಒಂದು ಸತ್ಕಾರ್ಯದಲ್ಲಿ ತೊಡಗಿಸಿದ, ಅಮೆರಿಕನ್ ಅನಾಥಾಶ್ರಮವಾಸಿಗಳ ಅನ್ನದಾಸೋಹಕ್ಕೆ ನೆರವಾದ ತೃಪ್ತಿಯಂತೂ ಖಂಡಿತವಾಗಿಯೂ ಇತ್ತು.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.