ಪದ-ಶ್ರಾವ್ಯ

ಈಗ ಆಡಿಯೋ ಟಚ್!

31
Mar 2013
Desh Raaga - Delicious Dish
Posted in DefaultTag by sjoshi at 6:31 pm

ದಿನಾಂಕ  6 ಎಪ್ರಿಲ್ 2013

ದೇಶ-ಭಾಷೆಗಳನ್ನು ಮೀರಿನಿಲ್ಲುವ ರಾಗ "ದೇಶ್"

* ಶ್ರೀವತ್ಸ ಜೋಶಿ

ರಾಗದ ಹೆಸರೇ ದೇಶ್ ಎಂದು. ಅದೆಷ್ಟು ಜನಪ್ರಿಯ, ಜನಾನುರಾಗಿ ರಾಗವೆಂದರೆ ದೇಶ-ಭಾಷೆಗಳ ಸೀಮೆಗಳನ್ನೆಲ್ಲ ದಾಟಿ ವಿಶ್ವವ್ಯಾಪ್ತಿ ಹೊಂದಿರುವಂಥದು. ರಾಗರಸಧಾರೆಯ ಜತೆಗೆ ವರ್ಷಧಾರೆಯನ್ನೂ ಸುರಿಸಬಲ್ಲ ಶಕ್ತಿಯುಳ್ಳದ್ದು. ದೇಶಭಕ್ತಿ ಮತ್ತು ದೈವಭಕ್ತಿ ಎರಡಕ್ಕೂ ಹೇಳಿಮಾಡಿಸಿದಂಥ ರಾಗವೆಂದರೆ ದೇಶ್. ರಾತ್ರಿಯ ಮೊದಲ ಪ್ರಹರ ಈ ರಾಗವನ್ನು ಹಾಡಲು ಅತ್ಯಂತ ಸೂಕ್ತವಾದದ್ದಂತೆ.

ಈ ರಾಗದ ಶಾಸ್ತ್ರೀಯ ಲಕ್ಷಣಗಳನ್ನು  ಸ್ಥೂಲವಾಗಿ ಪರಿಚಯಿಸುವುದಾದರೆ ಇದೊಂದು ಔಡವ-ಸಂಪೂರ್ಣ ರಾಗ. ಅಂದರೆ ಆರೋಹಣದಲ್ಲಿ ಐದು ಸ್ವರಗಳು (ಸ, ರಿ, ಮ, ಪ, ನಿ, ಸ) ಬಳಕೆಯಾದರೆ ಅವರೋಹಣದಲ್ಲಿ ಎಲ್ಲ ಏಳೂ ಸ್ವರಗಳು (ಸ, ನಿ1, ಧ, ಪ, ಮ, ಗ, ರಿ, ಗ, ನಿ, ಸ) ಬಳಕೆಯಾಗುತ್ತವೆ. ಅವರೋಹಣದಲ್ಲಿನ ಮೊದಲ ‘ನಿ’ ಕೋಮಲನಿಷಾಧ ಎನ್ನುವುದನ್ನು ಬಿಟ್ಟರೆ ಮಿಕ್ಕೆಲ್ಲವೂ ಶುದ್ಧ ಸ್ವರಗಳು. ಹಾಗಾಗಿ ಹೊಸದಾಗಿ ಸಂಗೀತ ಕಲಿಯುವವರಿಗೆ, ಮತ್ತು ಸಂಗೀತಜ್ಞಾನವಿಲ್ಲದವರಿಗೂ ಸುಲಭವಾಗಿ ಗುರುತಾಗುವ, ಗ್ರಾಹ್ಯವಾಗುವ ರಾಗ. ಅದರ ವಿಶ್ವವ್ಯಾಪ್ತಿ ಅಥವಾ universal appealಗೂ ಅದೇ ಮುಖ್ಯ ಕಾರಣ. ದೇಶಭಕ್ತಿ-ದೈವಭಕ್ತಿಗಳ ಜತೆಜತೆಯಲ್ಲೇ ಬೇಕಿದ್ದರೆ ಕರುಣಾರಸವನ್ನೂ, ಶೃಂಗಾರರಸವನ್ನೂ ಸ್ಫುರಿಸಬಲ್ಲ ಶಕ್ತಿಯೂ ಈ ರಾಗಕ್ಕಿದೆ.

ಮುಖ್ಯವಾಗಿ ಹಿಂದುಸ್ಥಾನಿ ಶೈಲಿಯಲ್ಲಿ ‘ದೇಶ್’ ಎನ್ನುವ ಹೆಸರಾದರೂ ಕರ್ನಾಟಕಶೈಲಿಯಲ್ಲೂ ಅದೇ ಹೆಸರಿಂದ ಪ್ರಚಲಿತವಾಗಿದೆ. ಇವೆರಡೂ ಶೈಲಿಗಳ ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂಡಿರುವ ‘ಹಂಸಾನಂದಿ’ ರಾಮಪ್ರಸಾದ್ (ಕ್ಯಾಲಿಫೋರ್ನಿಯಾದಲ್ಲಿರುವ ನನ್ನೊಬ್ಬ ಮಿತ್ರ) ಹೀಗೆ ಬರೆಯುತ್ತಾರೆ: "ದೇಶ್ (ಅಥವಾ ದೇಸ್) ಎಂಬ ಹೆಸರಿನ ಹಿಂದೂಸ್ಥಾನಿ ರಾಗ ಈಗ ಕರ್ನಾಟಕ ಸಂಗೀತದಲ್ಲೂ ಪ್ರಚಲಿತವಾಗಿದೆ. ಹಿಂದೆ 14-15ನೇ ಶತಮಾನದಲ್ಲಿದ್ದ ದೇಶವಾಲ ಗೌಡವೆಂಬ ರಾಗವೇ ಇದರ ಮೂಲ. ಸಂಗೀತ ಎರಡು ಕವಲೊಡೆದಾಗ, ಉತ್ತರದಲ್ಲಿ ಅದು ದೇಶ್ ಆದರೆ, ದಕ್ಷಿಣದಲ್ಲಿ ಕೇದಾರಗೌಳ ವೆಂಬ ರಾಗವಾಗಿ ಬೆಳೆಯಿತು. ಕೆಲವು ಕಾಲ ಬೇರೆಬೇರೆ ದಾರಿಗಳಲ್ಲಿ ಹೊಮ್ಮಿದ ಈ ಎರಡು ರಾಗಗಳು ಹತ್ತೊಂಬತ್ತನೆ ಶತಮಾನದ ಕೊನೆಗೆ ಎರಡು ಬೇರೆ ಚಹರೆ ಹೊಂದಿದ ರಾಗಗಳಾಗಿ ಬದಲಾದವು. ಇಪ್ಪತ್ತನೆ ಶತಮಾನದಲ್ಲಿ, ಹಿಂದುಸ್ಥಾನಿಯ ದೇಶ್ ರಾಗವನ್ನು ಕರ್ನಾಟಕ ಸಂಗೀತದಲ್ಲೂ ದೇಶ್ ಅನ್ನುವ ಹೆಸರಿನಲ್ಲೇ ಮತ್ತೆ ಹಾಡುವ ಬಳಕೆಯೂ ಆರಂಭವಾಯಿತು. ಈಗ ಈ ರಾಗದಲ್ಲಿ ಕರ್ನಾಟಕ ಸಂಗೀತ ಶೈಲಿಯಲ್ಲಿ ಶ್ಲೋಕ, ರಾಗಮಾಲಿಕೆ, ದೇವರನಾಮ, ಭಜನೆ ಮೊದಲಾದ ಪ್ರಕಾರಗಳನ್ನು ಹಾಡುತ್ತಾರೆ..."

ಇದಿಷ್ಟು ಪೀಠಿಕೆ ಸಾಕು ಎಂದುಕೊಳ್ಳುತ್ತೇನೆ. ಈಗ ಅಣಿಯಾಗಿ, ದೇಶ್ ರಸಧಾರೆಯಿಂದ ಮನತಣಿಸಿಕೊಳ್ಳಲು. "ಕೋಶ ಓದಿನೋಡು, ದೇಶ ಸುತ್ತಿನೋಡು" ಅಂತೊಂದು ಗಾದೆ ಇದೆಯಷ್ಟೇ? ಅದಕ್ಕೆ "ದೇಶ್ ರಾಗ ಕೇಳಿನೋಡು" ಎಂದು ಸೇರಿಸಬಹುದೆಂದು ನನ್ನ ಅಂಬೋಣ. ನೀವೇನನ್ನುತ್ತೀರಾ ನೋಡೋಣವಂತೆ.

* * *

ರಾಗರಸಾಯನ ಸರಣಿಯ ಮೊತ್ತಮೊದಲ ಸಂಚಿಕೆ, ಶಿವರಂಜನಿ ರಾಗದಲ್ಲಿ, ಆಕಾಶವಾಣಿಯ ಸಹಿಸಂಗೀತ (signature tune) ಶಿವರಂಜನಿ ರಾಗದಲ್ಲಿ ಇರುವುದೆಂದು ಉಲ್ಲೇಖಿಸಿ ಅದರದೊಂದು ಧ್ವನಿತುಣುಕನ್ನು ಪ್ರಸ್ತುತಪಡಿಸಿದ್ದೆ. ಆಕಾಶವಾಣಿಯಲ್ಲಿ ಬೆಳಗಿನ ಪ್ರಸಾರ ಆರಂಭವಾಗುವಾಗ ಸಹಿಸಂಗೀತದ ಅನಂತರ ಮೊಳಗುವುದು "ವಂದೇ ಮಾತರಂ", ದೇಶ್ ರಾಗದಲ್ಲಿ! ಹೀಗೆ-

*** *** *** *** *** *** ***

1997ರಲ್ಲಿ ಭಾರತ ದೇಶದ ಸ್ವಾತಂತ್ರ್ಯಸ್ವರ್ಣಸಂಭ್ರಮಕ್ಕೆಂದು ಎ.ಆರ್.ರೆಹಮಾನ್  "ವಂದೇ ಮಾತರಂ" ಆಲ್ಬಮ್ ನಿರ್ಮಿಸಿದರು.  ಅದು  the largest selling Indian non-film album to date. ಈಗಿನ ಯುವಪೀಳಿಗೆಯಲ್ಲಿ ರಾಷ್ಟ್ರಭಕ್ತಿ ಉಕ್ಕುವಂತೆ ಮಾಡಿದ ಖ್ಯಾತಿ ಆ ಅಲ್ಬಮ್‌ನದು. ಇಲ್ಲಿ ಅದನ್ನು ‘ವಂದೇ ಮಾತರಂ’ ವಿಚಾರಕ್ಕೋಸ್ಕರವಷ್ಟೇ ಪ್ರಸ್ತಾಪಿಸಿದೆನೇ ಹೊರತು ಅದರಲ್ಲಿ ಎ.ಆರ್.ರೆಹಮಾನ್ ಹಾಡಿದ ವಂದೇಮಾತರಂ ‘ದೇಶ್’ರಾಗವೆಂದು ಅನಿಸುವುದಿಲ್ಲ.  ಹೆಚ್ಚೂಕಡಿಮೆ ಅದೇ ವರ್ಷ ನಮ್ಮ ಸುರಮಣಿ ಪ್ರವೀಣ ಗೋಡಖಿಂಡಿ ಮತ್ತು  ಡಾ.ಕದ್ರಿ ಗೋಪಾಲನಾಥ್ ಸೇರಿ  "ಯಾತ್ರಾ"  ಎಂಬ ಆಲ್ಬಂ ಹೊರತಂದರು. ಅದರಲ್ಲಿ ಪ್ರವೀಣ್ ಗೋಡಖಿಂಡಿ ಕೊಳಲಿನಲ್ಲಿ ಮತ್ತು ಕದ್ರಿ ಗೋಪಾಲನಾಥ್ ಸ್ಯಾಕ್ಸೊಫೋನ್‌ನಲ್ಲಿ ‘ವಂದೇ ಮಾತರಂ’ ಇದೆ. ದೇಶ್ ರಾಗದಲ್ಲೇ ಇದೆ. ಬಹಳ ಚೆನ್ನಾಗಿಯೂ ಇದೆ. ಈಗ ಅದನ್ನು ನಿಮಗೆ ಕೇಳಿಸುವುದೂ ಇದೆ! ದೇಶ್ ರಾಗದ ಈ ಸಂಗೀತ ಯಾತ್ರೆ ಇಲ್ಲಿಂದಲೇ ಆರಂಭವಾದರೆ ಒಳಿತಲ್ಲವೇ?

*** *** *** *** *** *** ***

ಕನ್ನಡದ ಶ್ರೇಷ್ಠ ಮತ್ತು ಜನಪ್ರಿಯ ಕವಿತೆ. ಬೌದ್ಧಿಕತೆಯ ಭಾರವಿಲ್ಲದೆ, ಅರ್ಥದ ಹಂಗೂ ಇಲ್ಲದೆ ಭಾವಗಳನ್ನು ನೇರವಾಗಿ ಮನಸ್ಸಿಗೆ ತಲುಪಿಸುವ ಶಕ್ತಿ ಇರುವ ರಚನೆ. ಯಾತನೆ ಮತ್ತು ಯಾಚನೆ, ಸಂಶಯ ಮತ್ತು ಆಶ್ಚರ್ಯ ಈ ಭಾವಗಳು ಸಂದುಕಾಣದಂತೆ ಬೆರೆತಿವೆ ಇದರಲ್ಲಿ. ಎಂ.ಗೋಪಾಲಕೃಷ್ಣ ಅಡಿಗರು ಬರೆದ ಅಜರಾಮರ ಕೃತಿ, ಕನ್ನಡಿಗರೆಲ್ಲರ all time favorite ಯಾವ ಮೋಹನ ಮುರಲಿ ಕರೆಯಿತು - ಖ್ಯಾತ ಸುಗಮಸಂಗೀತ ಕಲಾವಿದೆ ರತ್ನಮಾಲಾ ಪ್ರಕಾಶ್ ಧ್ವನಿಯಲ್ಲಿ.  ಈ ಗೀತೆ ಜನಮಾನಸವನ್ನು ಮುಟ್ಟಿ ತಟ್ಟುವಂತಾಗಲು ದೇಶ್ ರಾಗದ universal appeal ಸಹ ಕಾರಣವಾಗಿದೆ ಎಂದು ನನಗನಿಸುತ್ತದೆ.

*** *** *** *** *** *** ***

ರತ್ನಮಾಲಾ ಪ್ರಕಾಶ್ ಹಾಡಿದಷ್ಟೇ ಮಧುರವಾಗಿ ಕೊಳಲಿನಲ್ಲಿ ಯಾವ ಮೋಹನ ಮುರಲಿ ನುಡಿಸಿದ್ದಾರೆ ಸುರಮಣಿ ಪ್ರವೀಣ ಗೋಡಖಿಂಡಿ

*** *** *** *** *** *** ***

ದೇಶ್ ರಾಗದ universal appealಗೆ ಮತ್ತೂ ದೊಡ್ಡದೊಂದು ಉದಾಹರಣೆಯೆಂದರೆ ಮಂಗಳಾರತಿ ಪದ್ಯ "ಓಂ ಜೈ ಜಗದೀಶ ಹರೇ"! ಒಂದು ಭಕ್ತಿಪರ ಹಾಡು, ಲೆಕ್ಕವಿಡಲೂ ಊಹಿಸಲೂ ಸಾಧ್ಯವಿಲ್ಲದಷ್ಟು ಸರ್ತಿ ಈ ಬುವಿಯಲ್ಲಿ  ಮೊಳಗಿದೆಯಾದರೆ ಬಹುಶಃ ಆ ಕೀರ್ತಿ ನಿಸ್ಸಂಶಯವಾಗಿ "ಜೈಜಗದೀಶ ಹರೇ"ಗೇ ಸಲ್ಲುತ್ತದೆ. ನಮಗೆಲ್ಲ ಇದು ಉತ್ತರಭಾರತದ ‘ಮಂದಿರ’ಗಳಲ್ಲಿ ಆರತಿ ಪದ್ಯ ಅಂತ ಗೊತ್ತೇ ಹೊರತು ರಚಿಸಿದವರು ಯಾರು ಅಂತ ಗೊತ್ತಿರುವುದಿಲ್ಲ. ಪಂಜಾಬ್‌ನ ಪಂಡಿತ್ ಶಾರದಾರಾಮ್ ಫಿಲೌರಿ ಎಂಬುವರು ಸುಮಾರು 1870ರಲ್ಲಿ ಇದನ್ನು ರಚಿಸಿದರಂತೆ. ಜಯದೇವ ಕವಿಯ ಗೀತಗೋವಿಂದದಲ್ಲಿ ಬರುವ ದಶಾವತಾರ ಕೀರ್ತಿಧವಲಮ್ ಭಾಗವು ಈ ಪದ್ಯಕ್ಕೆ ಸ್ಫೂರ್ತಿ ಎನ್ನುತ್ತಾರೆ. ಆಮೇಲೆ ಪ್ರತಿಯೊಬ್ಬ ದೇವ-ದೇವಿಗೂ ಹೊಂದುವಂತೆ ಇದೇ ಧಾಟಿಯಲ್ಲಿ ಆರತಿ ಪದ್ಯಗಳು ತುಂಬಾ ಬಂದಿವೆ. ಚಲನಚಿತ್ರಗಳಲ್ಲೂ ಈ ಗೀತೆಯನ್ನು ಅಳವಡಿಸಿಕೊಂಡ ನಿದರ್ಶನಗಳಿವೆ. ಪೂರಬ್ ಔರ್ ಪಶ್ಚಿಮ್ ಚಿತ್ರದಲ್ಲಿ ಮಹೇಂದ್ರಕಪೂರ್ ಮತ್ತು ಸಂಗಡಿಗರು ಹಾಡಿರುವುದು ಇಲ್ಲಿದೆ-

*** *** *** *** *** *** ***

ಎಷ್ಟು ಸರ್ತಿ ಕೇಳಿದರೂ ಬೇಸರ ತರಿಸದ ಶ್ರೇಷ್ಠ ಭಕ್ತಿಗೀತೆಯಾದ್ದರಿಂದ ಮತ್ತೊಮ್ಮೆ ಕೇಳೋಣ, ಓಂ ಜೈ ಜಗದೀಶ ಹರೇ - ವಾದ್ಯಸಂಗೀತದಲ್ಲಿ...

*** *** *** *** *** *** ***

ಈಗ, ಹಿಂದುಸ್ಥಾನಿ ಶೈಲಿಯಲ್ಲಿ ಬೆಂಗಳೂರಿನ ಸಮೀರ್ ರಾವ್ ಅವರ ಬಾನ್ಸುರಿ ವಾದನದಲ್ಲಿ ದೇಶ್ ರಾಗದ ಒಂದು ತುಣುಕು. ಪಕ್ವವಾದ ಮಾವಿನಹಣ್ಣಿನ ಸಿಪ್ಪೆ ತೆಗೆದಾಗ ಅದರಿಂದ ಮಧುರ ರಸ ತೊಟ್ಟಿಕ್ಕುವಂತೆ ಈ ಕೃತಿಯನ್ನು ಕೇಳುತ್ತಿರುವಾಗ ದೇಶ್ ರಾಗರಸ ಹನಿಹನಿಯಾಗಿ ತೊಟ್ಟಿಕ್ಕುತ್ತಿದೆ ಎಂದು ಅನಿಸಿದರೆ ಅಶ್ಚರ್ಯವಿಲ್ಲ!

*** *** *** *** *** *** ***

ಮುಂದಿನ ಪ್ರಸ್ತುತಿ, ಕರ್ನಾಟಕ (ದಕ್ಷಿಣಾದಿ) ಸಂಗೀತಶೈಲಿಯಲ್ಲಿ ದೇಶ್ ರಾಗದಲ್ಲಿ ಒಂದು ತಿಲ್ಲಾನ. ಇದು ಖ್ಯಾತ ವಯಲಿನ್ ಕಲಾವಿದ ಲಾಲ್‌ಗುಡಿ ಜಿ.ಜಯರಾಮನ್ ಅವರ ರಚನೆ. ಅವರು ಹೊರತಂದಿರುವ Dance of Sound ಆಲ್ಬಮ್‌ನಲ್ಲಿ ಈ ಕೃತಿ ಇದೆ. ಇಲ್ಲಿರುವ ರೆಕಾರ್ಡಿಂಗ್, ಲಾಲ್‌ಗುಡಿ ಶ್ರೀಮತಿ ಬ್ರಹ್ಮಾನಂದನ್ ಅವರು ವಯಲಿನ್‌ನಲ್ಲಿ ನುಡಿಸಿರುವುದು. ಕೆನಡಾ ದೇಶದ ಮಾಂಟ್ರಿಯಲ್‌ನಲ್ಲಿ ನಡೆದ ಸಂಗೀತ ಕಛೇರಿ ಕಾರ್ಯಕ್ರಮದ್ದು. ತಿಲ್ಲಾನ ಸವಿಯುತ್ತಲೇ, ಚಿತ್ರಗಳಲ್ಲಿ ತಮಿಳುನಾಡು ರಾಜ್ಯದ ಸುಂದರ ದೃಶ್ಯಾವಳಿಯನ್ನುಕಣ್ತುಂಬ ನೋಡುವ ಅವಕಾಶ.

*** *** *** *** *** *** ***

ಈಗೊಂದು ಕನ್ನಡ ಚಿತ್ರಗೀತೆ. ಎರಡು ಕನಸು ಚಿತ್ರದಲ್ಲಿ ಪೂಜಿಸಲೆಂದೇ ಹೂಗಳ ತಂದೇ... ಡಾ.ರಾಜಕುಮಾರ್, ಕಲ್ಪನಾ, ಮಂಜುಳಾ ಅಭಿನಯದ ಮನೋಜ್ಞ ಚಿತ್ರ. ಚಿ.ಉದಯಶಂಕರ್ ಸಾಹಿತ್ಯ, ರಾಜನ್-ನಾಗೇಂದ್ರ ಸಂಗೀತ, ಎಸ್.ಜಾನಕಿ ಅವರ ಮಧುರ ಕಂಠ. ಈ ಹಾಡೂ ಅಷ್ಟೇ, ಕನ್ನಡ ಚಿತ್ರಗೀತೆಗಳಲ್ಲಿ ನಿತ್ಯಹರಿದ್ವರ್ಣವಾಗಿ, ಯಾವ ಹೊತ್ತಲ್ಲಿ ಕೇಳಿದರೂ ಕಿವಿಗಳಿಗೆ ಮನಸ್ಸಿಗೆ ತಂಪುಕೊಡುವ ಹಾಡುಗಳಲ್ಲೊಂದಾಗಿ ಕನ್ನಡಿಗರ ಮನೆಮನಗಳಲ್ಲಿ ನೆಲೆಸಿರುವಂಥದು.

*** *** *** *** *** *** ***

ಮುಂದಿನದು, Call of the Valley ಅಲ್ಬಂನಿಂದ ಒಂದು ಟ್ರ್ಯಾಕ್. ಈ Call of the Valley ಆಲ್ಬಂ‌ನ ಬಗ್ಗೆ ಒಂದೆರಡು ಮಾತು ಇಲ್ಲಿ ಉಲ್ಲೇಖನೀಯ. 1967ರಲ್ಲಿ EMI ಕಂಪನಿ ಬಿಡುಗಡೆಗೊಳಿಸಿದ ಈ ಆಲ್ಬಂ‍‌ನಲ್ಲಿ ಆಗತಾನೆ ಜನಪ್ರಿಯತೆಯ ಶಿಖರವೇರತೊಡಗಿದ್ದ ಬಾನ್ಸುರಿವಾದಕ ಹರಿಪ್ರಸಾದ್ ಚೌರಾಸಿಯಾ, ಸಂತೂರ್ ವಾದಕ ಶಿವಕುಮಾ ಶರ್ಮಾ ಮತ್ತು ಗಿಟಾರ್‌ವಾದಕ ಬ್ರಿಜ್‌ಭೂಷಣ್ ಕಾಬ್ರಾ - ಈ ಮೂವರ ಸಹಯೋಗದಲ್ಲಿ ಎಂಟು ಜನಪ್ರಿಯ ಹಿಂದುಸ್ಥಾನಿ ರಾಗಗಳ ತುಣುಕುಗಳನ್ನು ಪ್ರಸ್ತುತಪಡಿಸಿತು. ಕಾಶ್ಮೀರದ ಒಬ್ಬ ಕುರಿಕಾಯುವವನ ಬದುಕಿನ ಒಂದು ದಿನವನ್ನು ಎಂಟು ವಿವಿಧ ರಾಗಗಳಲ್ಲಿ ಚಿತ್ರಿಸಿದ ವಿಶಿಷ್ಟ ಪ್ರಯೋಗವಿದು. ಪಾಶ್ಚಾತ್ಯ ಜಗತ್ತಿಗೆ ಭಾರತೀಯ ಸಂಗೀತದ ಸವಿಯನ್ನುಣಿಸುವಲ್ಲಿ ಈ ಆಲ್ಬಂ ಬಹುಮುಖ್ಯ ಪಾತ್ರ ವಹಿಸಿತು.  ಜಾರ್ಜ್ ಹ್ಯಾರಿಸನ್, ಡೇವಿಡ್ ಕ್ರಾಸ್ಬಿ, ಪೌಲ್ ಮೆಕಾರ್ಟ್ನಿ, ಬಾಬ್ ಡೈಲಾನ್ ಮುಂತಾದ ಪಾಶ್ಚಾತ್ಯ ಸಂಗೀತಗಾರರೆಲ್ಲ ಈ ಆಲ್ಬಂ‌ಗೆ ತಲೆದೂಗಿದರು. ಇದರ ಜನಪ್ರಿಯತೆ ಎಷ್ಟೆಂದರೆ ಮ್ಯೂಸಿಕ್ ಅಂಗಡಿಗಳವರು ಹೇಳುತ್ತಾರೆ- " "If the newcomer buys only one Indian classical recording, it should be "Call of the Valley"!  ರಾಬರ್ಟ್ ಡೈನರಿ ಮತ್ತು ಮೈಕೇಲ್ ಲೈಡನ್ ಎಂಬಿಬ್ಬರು ಪಟ್ಟಿಮಾಡಿದ "1001 Albums You Must Hear Before You Die"ಯಲ್ಲೂ ಇದಕ್ಕೆ ಸ್ಥಾನ!

*** *** *** *** *** *** ***

ಮಲಯಾಳಂ ಚಿತ್ರಗೀತೆ ಇಲ್ಲದೆ ರಾಗರಸಾಯನ ಅಪೂರ್ಣ. ದೇಶ್ ರಾಗವೂ ಅದಕ್ಕೆ ಅಪವಾದವೇನಲ್ಲ. ಮಮ್ಮೂಟಿ ಮತ್ತು ನಮ್ರತಾ ಶಿರೋಡ್ಕರ್ ಅಭಿನಯದ ಏಳುಪುನ್ನತಾರಕನ್ ಚಿತ್ರದ ಗೀತೆ. ವಿದ್ಯಾಸಾಗರ್ ಸಂಗೀತನಿರ್ದೇಶನದಲ್ಲಿ ಕೆ.ಎಸ್.ಚಿತ್ರಾ ಹಾಡಿದ್ದಾರೆ. ಹಾಡು ಶುರುವಾಗುವ ಮುನ್ನ ಸಂಗಡಿಗರು humಇಸುವ ಧಾಟಿ ಓಂ ಜೈ ಜಗದೀಶ ಹರೇ... ಟ್ಯೂನ್‌ಅನ್ನು ನೆನಪಿಸುತ್ತದೆ.

*** *** *** *** *** *** ***

ಈಗ ಒಂದು ಹಿಂದಿ ಭಜನ್ ಕೈಸೇ ಬನ್ಸಿ ಬಜೀ ತೋರೀ... ಹಿನ್ನೆಲೆಗಾಯಕಿ ಕವಿತಾ ಕೃಷ್ಣಮೂರ್ತಿ ಧ್ವನಿಯಲ್ಲಿ, ಖ್ಯಾತ  ಬಾನ್ಸುರಿವಾದಕ  ರೋನು ಮುಜುಂದಾರ್ ಅವರ ಕೊಳಲದನಿಯೊಂದಿಗೆ.

*** *** *** *** *** *** ***

ಇನ್ನೊಂದು ಹಳೆಯ (ಬ್ಲ್ಯಾಕ್ ಏಂಡ್ ವೈಟ್) ಕನ್ನಡ ಸಿನೆಮಾಹಾಡು- ಸಿಐಡಿ ರಾಜಣ್ಣ ಚಿತ್ರಕ್ಕಾಗಿ  ಡಾ.ಪಿ.ಬಿ.ಶ್ರೀನಿವಾಸ್ ಹಾಡಿರುವ, ಬಸವಣ್ಣನವರ ವಚನ "ಕಳಬೇಡ ಕೊಲಬೇಡ..."

*** *** *** *** *** *** ***

ಮತ್ತೊಮ್ಮೆ ಹಿಂದುಸ್ಥಾನಿ ಸಂಗೀತದ ಒಂದು ತುಣುಕು- ಪಂಡಿತ್ ಶಿವಕುಮಾರ್ ಶರ್ಮಾ ಅವರಿಂದ ಸಂತೂರ್ ವಾದನದಲ್ಲಿ ದೇಶ್ ರಾಗದ ಒಂದು ಬಂದಿಶ್.

*** *** *** *** *** *** ***

ರೋಜಾ’! 1992ರಲ್ಲಿ ಮಣಿರತ್ನಂ ನಿರ್ದೇಶನದಲ್ಲಿ ಬಿಡುಗಡೆಯಾಡ ತಮಿಳು ಚಿತ್ರ ಯಾರಿಗೆ ತಾನೆ ಗೊತ್ತಿಲ್ಲ? ತಮಿಳಿನ ನಂತರ ಇದು ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲೂ ಬಂತು. ಪ್ರಶಸ್ತಿಗಳನ್ನೆಲ್ಲ ಬಾಚಿಕೊಂಡಿತು. ಚಿತ್ರ ಎಷ್ಟು ಜನಪ್ರಿಯವಾಯ್ತೋ ಅದಕ್ಕಿಂತಲೂ ಹೆಚ್ಚಾಗಿ ಎ.ಆರ್.ರೆಹಮಾನ್ ಎಂಬ ಸಂಗೀತ ನಿರ್ದೇಶಕನ ಉಗಮವಾಯಿತು. ಆತನ ಪರಿಚಯ  ಇಡೀ ಜಗತ್ತಿಗೆ ಆಯಿತು. ರೋಜಾ ಚಿತ್ರದ ಒಂದೊಂದು ಹಾಡು ಸಹ ಸೂಪರ್‌ಹಿಟ್ ಅನಿಸಿಕೊಂಡಿತು, ದೇಶ್ ರಾಗದಲ್ಲಿರುವ ಈ ಟೈಟಲ್ ಸಾಂಗ್ "ಕಾದಲ್ ರೋಜಾವೇ ಎಂಗೇ ನೀ ಎಂಗೇ..." ಸಹ! ವೈರಮುತ್ತು ರಚನೆಯನ್ನು ಹಾಡಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಸುಜಾತಾ. 2005ರಲ್ಲಿ ಅಮೆರಿಕದ TIME ಮ್ಯಾಗಜೀನ್ ಮಾಡಿದ "10 Best Soundtracks" of all time ಪಟ್ಟಿಯಲ್ಲಿ ಈ ಹಾಡು ಸ್ಥಾನಪಡೆದಿತ್ತು!

*** *** *** *** *** *** ***

ವೀಣಾವಿದ್ವಾನ್ ಆರ್.ಕೆ.ಮೂರ್ತಿ ಅವರ ವೀಣಾವಾದನದಲ್ಲಿ ದೇಶ್ ರಾಗದ ಒಂದು ತುಣುಕು.

*** *** *** *** *** *** ***

ಹಿಂದಿ ಚಲನಚಿತ್ರರಂಗ ಕಂಡ ಪ್ರತಿಭಾವಂತ ಸಂಗೀತನಿರ್ದೇಶಕ ಆರ್.ಡಿ.ಬರ್ಮನ್ ಅವರ ಕಟ್ಟಕಡೆಯ ಚಿತ್ರ, ವಿಧು ವಿನೋದ್ ಚೋಪ್ರಾ ನಿರ್ದೇಶನದಲ್ಲಿ ಬಂದ 1942 A Love Story. ಅನಿಲ್‌ಕಪೂರ್ ಮತ್ತು ಮನಿಷಾ ಕೊಯಿರಾಲಾ ಅಭಿನಯದ ಈ ಚಿತ್ರದ ಎಲ್ಲ ಹಾಡುಗಳೂ ಸೂಪರ್‌ಹಿಟ್. ಅದು ಆರ್.ಡಿ.ಬರ್ಮನ್ ಮ್ಯಾಜಿಕ್. ಕವಿತಾ ಕೃಷ್ಣಮೂರ್ತಿ ಹಾಡಿದ "ಮೈನೇ ಕಹಾ ಚುಪ್‌ಕೇ ಸೇ..." ಹಾಡಿಗಂತೂ ದೇಶ್ ರಾಗದ ಮೆರುಗು ಮತ್ತಷ್ಟು ಜನಪ್ರಿಯತೆ ಗಳಿಸಿಕೊಟ್ಟಿತು.

*** *** *** *** *** *** ***

ಇನ್ನೊಂದು ಸಂಗೀತತುಣುಕು, ತರುಣ ಕಲಾವಿದ ಸುವೇಂದು ಬ್ಯಾನರ್ಜಿ ನುಡಿಸಿದ ಹಾರ್ಮೋನಿಯಂನಲ್ಲಿ ದೇಶ್ ರಾಗದ ಒಂದು ರಚನೆ.

*** *** *** *** *** *** ***

ಕನ್ನಡಿಗರ ಎದೆಯೊಳಗೆ ನಾಡು-ನುಡಿಗಳ ಬಗ್ಗೆ ಭಕ್ತಿಯ ದೀಪ ಹಚ್ಚುವ ಗೀತೆ "ಹಚ್ಚೇವು ಕನ್ನಡದ ದೀಪ..." ಸಹ ದೇಶ್ ರಾಗದಲ್ಲಿದೆ ಎಂದಮೇಲೆ ಅದರ universal appealನ ರಹಸ್ಯ ಬಯಲಾಗುತ್ತದೆ. ಡಿ.ಎಸ್.ಕರ್ಕಿ ಅವರ ಈ ರಚನೆ ತಥಾಕಥಿತ "ನವೆಂಬರ್ ಕನ್ನಡಿಗ"ರಲ್ಲೂ ಕನ್ನಡಜ್ಯೋತಿಯನ್ನು ಬೆಳಗಿಸುವಲ್ಲಿ ಯಶಸ್ವಿಯಾಗುತ್ತದೆ. ಕನ್ನಡ ಸಾಹಿತ್ಯಪರಿಷತ್‍‌ನವರು 90ರ ದಶಕದಲ್ಲಿ ಹೊರತಂದ ಜನಪ್ರಿಯ ನಾಡಗೀತೆಗಳ ಧ್ವನಿಸುರುಳಿಗೆ ಈ ಗೀತೆಯದೇ ಹೆಸರನ್ನು ಕೊಡಲಾಗಿತ್ತು. ಸಿ.ಅಶ್ವತ್ಠ್ ಸಂಗೀತ ನಿರ್ದೇಶನದಲ್ಲಿ ಕನ್ನಡದ ಖ್ಯಾತಗಾಯಕಗಾಯಕಿಯರು ಈ ಹಾಡುಗಳನ್ನು ಹಾಡಿದ್ದಾರೆ. ನಿರೂಪಣೆ, ಬೆಂಗಳೂರು ಆಕಾಶವಾಣಿಯ ಚಿರಪರಿಚಿತ ಧ್ವನಿ ಮಾಲತಿ ಶರ್ಮಾ ಅವರಿಂದ.

*** *** *** *** *** *** ***

ಈಗೊಂದು ಜಾಹಿರಾತು. This part of the ರಾಗರಸಾಯನ ಕಾರ್ಯಕ್ರಮ is brought to you by "ಗಾರ್ಡನ್ ವರೇಲಿ" sarees... :-)

*** *** *** *** *** *** ***

ಜಾಹಿರಾತಿನ ನಂತರ ರಾಗರಸಾಯನವನ್ನು ಮುಂದುವರಿಸುತ್ತ ಈಗ Steve Gorn ಮತ್ತು Benjy Wertheimer ಎಂಬಿಬ್ಬರು ಪಾಶ್ಚಾತ್ಯ ಕಲಾವಿದರು ಹೊರತಂದ "Priyagitah- the Nightingale" ಆಲ್ಬಂನಿಂದ ದೇಶ್ ರಾಗದ ಒಂದು ಟ್ರ್ಯಾಕ್. ಕೊಳಲು ಮತ್ತು ಸಾರಂಗಿ ವಾದನ  ಕೇಳುತ್ತಿದ್ದರೆ ನುಡಿಸಿರುವವರು ಭಾರತೀಯ ಮಣ್ಣಿನಮಕ್ಕಳೇ ಇರಬೇಕು ಅಂತನಿಸುವಷ್ಟು ಆಪ್ಯಾಯಮಾನ!

*** *** *** *** *** *** ***

ಇಲ್ಲೊಬ್ಬ child prodigy. ಮಾಸ್ಟರ್ ಆಕಾಶ್. ನಮ್ಮ ಬೆಂಗಳೂರಿನವನು. SONY entertainment channelನ  ಐಡಿಯಾ ಜಲ್ಸಾ ನ್ಯಾಷನಲ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ವಿಜೇತ. ಈ ಹುಡುಗ ಬಾನ್ಸುರಿಯಲ್ಲಿ ನುಡಿಸಿರುವ ದೇಶ್ ರಾಗ-

*** *** *** *** *** *** ***

ಈಗೊಂದು ಯಕ್ಷಗಾನ ಪದ್ಯ, ಶೂರ್ಪನಖಾ ಮಾನಭಂಗ ಪ್ರಸಂಗದಿಂದ. ಭಾಗವತರು ರವಿಚಂದ್ರ ಕನ್ನಡಿಕಟ್ಟೆ. ಮದ್ದಳೆ ನುಡಿಸಿದವರು ಪದ್ಯಾಣ ಶಂಕರನಾರಾಯಣ ಭಟ್. ಇದು 22ಸಪ್ಟೆಂಬರ್2012ರಂದು ಮಂಗಳೂರಿನಲ್ಲಿ ನಡೆದ ತಾಳಮದ್ದಳೆ ಕಾರ್ಯಕ್ರಮದಿಂದ ಆಯ್ದ ವಿಡಿಯೋರೆಕಾರ್ಡಿಂಗ್. ಇದನ್ನಿಲ್ಲಿ ದೇಶ್ ರಾಗರಸಾಯನದಲ್ಲಿ ಸೇರಿಸಿಕೊಂಡದ್ದು, ನನ್ನ ಫೇಸ್‌ಬುಕ್ ಮಿತ್ರ (ಈ ವಿಡಿಯೋದ ನಿರ್ಮಾಪಕ) ರಾಮ್‌ನರೇಶ್ ಮಂಚಿ ಅವರಿಗೆ ಖುಷಿಯಾಗಬಹುದು.

*** *** *** *** *** *** ***

ಒಂದು  ತೆಲುಗು ದೇಶಭಕ್ತಿಗೀತೆ  ‘ಸ್ವತಂತ್ರ ಭಾರತ ಜನನಿ...’

*** *** *** *** *** *** ***

ಹಾಗೆಯೇ ಒಂದು  ‘ರಬೀಂದ್ರ ಸಂಗೀತ’-ಆಶಾ ಭೋಂಸ್ಲೆಯವರು ಹಾಡಿದ ರವೀಂದ್ರನಾಥ ಟಾಗೋರ್ ಅವರ ರಚನೆ ‘ಎಶೊ ಶ್ಯಾಮಲೋ ಸುಂದರೋ...’

*** *** *** *** *** *** ***

ಒಂದು ಹಿಂದಿ ಚಿತ್ರಗೀತೆ-‘ಸೆಹರಾ’ ಚಿತ್ರಕ್ಕಗಿ ಮಹಮ್ಮದ್ ರಫಿ ಹಾಡಿರುವ ತಕ್‌ದೀರ್ ಕಾ ಫಸಾನಾ

*** *** *** *** *** *** ***

‘ಸ್ವದೇಶ್’ ಚಿತ್ರದ ಥೀಮ್ ಮ್ಯೂಸಿಕ್ - ಬಿಸ್ಮಿಲ್ಲಾಖಾನ್ ಅವರ ಶೆಹನಾಯ್‌ಯ ಗೂಂಜ್. ಇದು ಕಿವಿಗಳೊಳಗೆ ಇಳಿಯುವ ಮೊದಲೇ ನೇರವಾಗಿ ಎದೆಯನ್ನು ತಲುಪುವಂಥ, ಕಣ್ಣಂಚುಗಳನ್ನು ಒದ್ದೆಯಾಗಿಸುವಂಥ ವಿಶೇಷತೆಯುಳ್ಳದ್ದು. ಎ.ಆರ್.ರೆಹಮಾನ್ ಮ್ಯಾಜಿಕ್ ಎಂದು ಬೇರೆಹೇಳಬೇಕಿಲ್ಲವಲ್ಲ?

*** *** *** *** *** *** ***

ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಅವರ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಶಂಕರ ಮಹಾದೇವನ್ ಜೊತೆಗೆ 2750 ಸಹಗಾಯಕರು ಮತ್ತು ವಾದ್ಯವೃಂದದವರಿಂದ ‘ಅಂತರ್ನಾದ’ಗಾಯನ "ಹೋ ಯಹೀ ಗುಂಜನ್  ಸಾ ಮನ್‌ಮೇ..."

*** *** *** *** *** *** ***

ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ World music ಕೋರ್ಸ್‌ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನೂ ಕಲಿಸುತ್ತಾರೆ. ಸಮೂಹಗಾನದಲ್ಲಿ "Desh- an Indian Raga" ಸಹ ಸಿಲೆಬಸ್‌ನಲ್ಲಿ ಕಡ್ಡಾಯವಾಗಿ ಇರುತ್ತದೆ. Ethan Sperryಯವರಂಥ ಪ್ರಖ್ಯಾತ ಕೋರಸ್ ಕಲಾವಿದರು ಬೇರೆಬೇರೆ ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ’ದೇಶ್ ರಾಗ’ದ ಗಾಯನ ಕಲಿಸುತ್ತಾರೆ. ಇಲ್ಲಿರುವ ಈ ರೆಕಾರ್ಡಿಂಗ್ ಎರಡು ವರ್ಷಗಳ ಹಿಂದೆ ಶಿಕಾಗೋದ ಒಂದು ಮ್ಯೂಸಿಕ್ ಕಾಲೇಜಿನ ಕಾರ್ಯಕ್ರಮದ್ದು. World musicನಲ್ಲಿ ಬೇರೆಬೇರೆ ದೇಶಗಳ ಸಂಗೀತತುಣುಕುಗಳಿರುತ್ತವಾದರೂ ಭಾಗವಹಿಸುವವರಲ್ಲಿ ಮತ್ತು ಪ್ರೇಕ್ಷಕರದಲ್ಲಿ ಏಕಪ್ರಕಾರವಾಗಿ ರೋಮಾಂಚನದ ವಿದ್ಯುತ್‌ಸಂಚಾರ ಮಾಡಿಸುವುದು ಯಾವಾಗಲೂ ‘Desh- an Indian Raga' choir music. "ದೇಶಭಾಷೆಗಳನ್ನು ಮೀರಿನಿಲ್ಲುವ ರಾಗ ದೇಶ್" ಎಂದು ಈ ಸಂಚಿಕೆಗೆ ನಾನೇಕೆ ತಲೆಬರಹ ಕೊಟ್ಟಿದ್ದೇನೆಂದು ಬಹುಶಃ ಈಗ ನಿಮಗೆ ಅರ್ಥವಾಗಿರುತ್ತದೆ.

*** *** *** *** *** *** ***

ಈಗ, ಕಾಯಕ್ರಮದ Grand Finale- ಎಂಬತ್ತು/ತೊಂಬತ್ತರ ದಶಕಗಳಲ್ಲಿ ದೂರದರ್ಶನದಲ್ಲಿ ಪದೇಪದೆ ಪ್ರಸಾರಗೊಂಡು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲೂ  ದೇಶಭಕ್ತಿಯ ಸಿಂಚನ ಮಾಡಿದ "ಬಜೇ ಸರಗಮ್ ಹರ್ ತರಫ್ ಸೇ..."

*** *** *** *** *** *** ***

kalyaninotes.png

ದೇಶ್ ರಾಗರಸಾಯನ  ನಿಮಗೆ ಇಷ್ಟವಾದರೆ, ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆ ಸೂಚನೆ ತಿದ್ದುಪಡಿ ಇತ್ಯಾದಿ ಇದ್ದರೆ ಖಂಡಿತ ತಿಳಿಸುವಿರಲ್ಲ?

* * * *


You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App