ಪದ-ಶ್ರಾವ್ಯ

ಈಗ ಆಡಿಯೋ ಟಚ್!

15
Oct 2011
Double Entendres Decent Ones
Posted in DefaultTag by sjoshi at 2:48 pm

ದಿನಾಂಕ  16 ಅಕ್ಟೋಬರ್ 2011ರ ಸಂಚಿಕೆ...

ದ್ವಂದ್ವಾರ್ಥವೆಂದರೆ ಅಶ್ಲೀಲವೇ ಅಂತೇನಿಲ್ಲ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಅದೊಂದು ಮಿಥ್ಯೆ. ಡಬಲ್ ಮೀನಿಂಗ್ ಎಂದರೆ ಪೋಲಿ, ಅಶ್ಲೀಲ, ಸಭ್ಯತೆಯ ಚೌಕಟ್ಟು ಮೀರಿದ ಅಂತಲೇ ಆಗಿಹೋಗಿದೆ. ಆ ಮಿಥ್ಯೆಯನ್ನು ಹೋಗಲಾಡಿಸಬೇಕಾದರೆ ಅಶ್ಲೀಲವೆನಿಸದ ಸುಂದರ ಸ್ವಾರಸ್ಯಕರ ದ್ವಂದ್ವಾರ್ಥ ಪ್ರಯೋಗಗಳನ್ನು ನಾವು ಹೆಚ್ಚುಹೆಚ್ಚು ಗುರುತಿಸಬೇಕು. ಅಂಥ ರಚನೆಗಳನ್ನು ನಮ್ಮ ಮಾತಿನಲ್ಲಿ, ಬರಹದಲ್ಲಿ ಹೆಚ್ಚುಹೆಚ್ಚು ಅಳವಡಿಸಿಕೊಳ್ಳಬೇಕು. ಏಕೆಂದರೆ ದ್ವಂದ್ವಾರ್ಥವೂ ಸಾಹಿತ್ಯದ ಒಂದು ಪ್ರಮುಖ ಅಲಂಕಾರ. ಅದನ್ನು ಶ್ಲೇಷಾಲಂಕಾರ ಅಥವಾ ಶ್ಲೇಷೆ ಎನ್ನುತ್ತಾರೆ. ಭಾಷೆಯಲ್ಲಿ ಅಲಂಕಾರ ಇರುವುದೇ ಓದುಗನ/ಕೇಳುಗನ ಆಹ್ಲಾದ ಹೆಚ್ಚಿಸುವುದಕ್ಕೆ. ಶ್ಲೇಷೆಯು ಮನಸ್ಸಿಗೆ ಆಹ್ಲಾದಕರವಷ್ಟೇ ಅಲ್ಲ ಪುಟ್ಟದೊಂದು ಅಚ್ಚರಿಯನ್ನೂ ತಂದುಕೊಡುತ್ತದೆ. ತರ್ಕಬದ್ಧ ಯೋಚನೆಗೆ ಹಚ್ಚುತ್ತದೆ. ಮೆದುಳನ್ನು ಚುರುಕಾಗಿಸುತ್ತದೆ.

ಹೇಗೆ? ಇಲ್ಲಿದೆ ನೋಡಿ- ಇವತ್ತು ಅಂಕಣದ ಮೈತುಂಬ ಶ್ಲೇಷಾಲಂಕಾರ!

ಸ್ವಲ್ಪ ತರ್ಲೆ ರೀತಿಯ, ಆದರೂ ಭಲೇ ತಮಾಷೆ ಎನಿಸುವ ಒಂದೆರಡು ಉದಾಹರಣೆಗಳಿಂದ ಆರಂಭಿಸೋಣ. ದ್ವಂದ್ವಾರ್ಥವೆಂದರೆ ಹೀಗೂ ಉಂಟೇ ಎಂದು ನಿಮಗೆ ಅನಿಸಬೇಕೆಂದೇ ಇದನ್ನು ಆಯ್ದುಕೊಂಡಿದ್ದೇನೆ.

ಕೆ‌ಎಸ್ಸಾರ್ಟಿಸಿ ಬಸ್ಸುಗಳನ್ನು ನೀವು ನೋಡೇ‌ಇರ್ತೀರಲ್ವಾ? ಅವುಗಳ ಮೇಲೆ (ಮೇಲೆ ಅಂದ್ರೆ ಹಿಂಭಾಗದಲ್ಲಿ, ಎರಡೂ ಸೈಡುಗಳಲ್ಲಿ) ‘ಕರ್ನಾಟಕ ಸಾರಿಗೆ’ ಅಂತ ಬರೆದಿರುವುದನ್ನೂ ನೋಡಿರ್ತೀರಿ. ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ’ ಎಂದು ಉದ್ದಕ್ಕೆ ಬರೆಯುವ ಬದಲು ‘ಕರ್ನಾಟಕ ಸಾರಿಗೆ’ ಎಂದು ಚಿಕ್ಕದಾಗಿ ಚೊಕ್ಕವಾಗಿ ಬರೆದಿರ್ತಾರೆ. ಹೌದು, ಅದ್ರಲ್ಲೇನು ವಿಶೇಷ? ನಿಮ್ಮವು ಸಾಮಾನ್ಯ ಕಣ್ಣುಗಳಾದರೆ ವಿಶೇಷ ಏನಿಲ್ಲ. ಆದರೆ ಸ್ವಾರಸ್ಯ ಹುಡುಕುವ ಕಣ್ಣುಗಳಾದರೆ ಅಲ್ಲಿ ನಿಮಗೊಂದು ವಿಶೇಷ ಕಾಣಿಸುತ್ತದೆ. ಏನದು? ‘ಕರ್ನಾಟಕ ಸಾರಿಗೆ’ ಎಂದಿರುವುದರ ಪಕ್ಕದಲ್ಲೇ ‘ತಮಿಳುನಾಡು ಸಾಂಬಾರಿಗೆ’ ಅಂತಿದೆಯೆಂದು ಊಹಿಸಿ. ಒಂದು ಕಿರುನಗು ಮಿನುಗುತ್ತದೆ ನಿಮ್ಮ ಮುಖದಲ್ಲಿ. ಅರ್ಥ ಆಗ್ಲಿಲ್ವಾ? ಹೋಗಲಿ, ‘ಸುರಕ್ಷತೆಯತ್ತ ಗಮನ: ಸಾರಿಗೆ ಸಚಿವರ ಭರವಸೆ’ ಎಂದು ಪತ್ರಿಕೆಯಲ್ಲಿ ಹೆಡ್ಡಿಂಗ್ ಓದ್ತೀರಿ. ಆಯ್ತು, ಸಾರಿಗೇನೋ ಭರವಸೆ ಸಿಕ್ತು; ಪಲ್ಯ, ತೊವ್ವೆ, ಹುಳಿ, ತಂಬುಳಿಗಳ ಗತಿಯೇನು? ನಿಮ್ಮಲ್ಲೇ ಪ್ರಶ್ನಿಸಿಕೊಳ್ಳಿ. ಇನ್ನೂ ಅರ್ಥ‌ಆಗಿಲ್ವಾ? ‘ಸಾರಿಗೆ ಬಸ್ಸು ಬಿದ್ದು ನಾಲ್ವರು ಜಖಂ’ ಎಂಬ ದಪ್ಪಕ್ಷರ ತಲೆಬರಹ. ಅರ್ರೆ! ಸಾರಿಗೆ ಬಸ್ಸು ಬಿದ್ದರೆ ಟೊಮೆಟೊ ಚಟ್ನಿ ಆದೀತೇ ಹೊರತು ಜನರಿಗೇಕೆ ಜಖಂ ಆಗಬೇಕು? ನೋಡಿದ್ರಾ, ‘ಸಾರಿಗೆ’ ಪದ ಹುಟ್ಟಿಸಿದ ದ್ವಂದ್ವಾರ್ಥದ ತಮಾಷೆ!

ksrtc-bus-ad-.jpg

ಸಾರಿಗೆಯಂತೆಯೇ ‘ಕಾಡಿಗೆ’ ಕೂಡ. ಅಂಗಡಿಯಿಂದ ಐ-ಬ್ರೋ ಪೆನ್ಸಿಲ್ಸ್ ತರಲಿಕ್ಕೆ ಹೊರಟಿದ್ದಾರೆ ಅಂದಗಾತಿ ಅಂಬುಜಮ್ಮ. ಶುದ್ಧಕನ್ನಡದಲ್ಲಿ ‘ಕಾಡಿಗೆ ತರಲಿಕ್ಕೆ ಹೊರಟಿದ್ದೀನಿ’ ಎಂದುತ್ತರಿಸುತ್ತಾರೆ ಎದುರುಸಿಕ್ಕಿದ ಮೀನಾಕ್ಷಮ್ಮನ ಪ್ರಶ್ನೆಗೆ. ಆಕೆಯಾದರೋ ಅರ್ಥವಾದ್ರೂ ಬೇಕಂತ್ಲೇ ಕೆಣಕುತ್ತಾರೆ, ‘ಏನ್ ತರ್ಲಿಕ್ಕೆ ಕಾಡಿಗೆ ಹೊರ್ಟಿದ್ದೀರಿ? ಕಾಡಿಗೆ ಹೋಗುವ ನಾರೀಮಣಿಯರು ವ್ಯಾನಿಟಿಬ್ಯಾಗ್ ಹಿಡ್ಕೊಂಡು ಹೋಗೋದಲ್ಲ, ಸೀತೆಯಂತೆ ನಾರುಡೆ ಉಡ್ಬೇಕಲ್ವಾ?’

ಹೀಗೆ ಒಂದು ಪದ ಬೇರೆಬೇರೆ ಅರ್ಥಗಳನ್ನು ಪಡೆದಾಗ ಅಲ್ಲಿ ಸ್ವಾರಸ್ಯ ಬಂದೇಬರುತ್ತೆ. ಉದಾಹರಣೆಗೆ, ‘ಮಾರಿ’ ಎಂದೊಡನೆ ಮೊದಲಿಗೆ ಕಣ್ಮುಂದೆ ಬರುವುದು ಭಯಾನಕ ಆಕೃತಿ; ಆದರೆ ಮಾರಿ ಎಂದರೆ ಮಾರಾಟಮಾಡಿ ಎಂದೂ ಅರ್ಥವಿದೆ. ‘ನಾರಿ ಮುನಿದರೆ ಮಾರಿ’ ಗಾದೆಮಾತಿನಲ್ಲಿ ಮಾರಿ ಪದ ಮೂಲ ಅರ್ಥದಲ್ಲಾದರೆ ನಿಜಕ್ಕೂ ಪರಿಸ್ಥಿತಿ ಗಂಭೀರ. ಮತ್ತೊಂದು ಅರ್ಥದಲ್ಲಾದರೆ ಬದುಕು ನಿರುಮ್ಮಳ (ಗಿರಾಕಿ ಸಿಗೋದು ಕಷ್ಟವೇ ಇದೆಯೆನ್ನಿ). ಇಲ್ಲಿ ಗಮನಿಸಬೇಕಾದ್ದೆಂದರೆ ಚಕಿತಗೊಳಿಸುವ, ಅನಿರೀಕ್ಷಿತ ಎನಿಸುವ ಶ್ಲೇಷೆ. ನಮ್ಮ ಯೋಚನಾಲಹರಿ ಸಾಮಾನ್ಯ ಧಾಟಿಯಲ್ಲಿ ಸಾಗುತ್ತಿರುವಾಗ ಹಠಾತ್ತಾಗಿ ಎದುರಾಗುವ ಸೋಜಿಗ. ಡುಂಡಿರಾಜರ ‘ಹನಿ’ಗಳಲ್ಲಿ ಇಂಥ ಶ್ಲೇಷೆಗಳು ನಮಗೆ ಪುಷ್ಕಳವಾಗಿ ಸಿಗುತ್ತವೆ. ಕ್ಲಾಸಿಕ್ ಉದಾಹರಣೆಯೆಂದರೆ-

ಕ್ಯಾಷ್ ಕೌಂಟರಿನ ಹುಡುಗಿಯರ ಮುಖದಲ್ಲಿ

ನಗು ಹುಡುಕಿದರೂ

ಸಿಗದು;

ಅದಕ್ಕೇ ಇರಬೇಕು

ಹಾಕಿದ್ದಾರೆ ಬೋರ್ಡು

‘ನಗದು’.

ಅಂಥದ್ದೇ ಇನ್ನೊಂದು-

ಬ್ಯಾಂಕ್ ಜೀವನದ ಏಕತಾನದಿಂದ ರೋಸಿ ಹೋಗಿ

ಎಲ್ಲ ಮರೆತು ಹಾಯಾಗಿ ಸುತ್ತಾಡಿ ಬರಲೆಂದು

ರೈಲು ಹತ್ತಿದರೆ ಅಲ್ಲೂ ಅದೇ ಸೊಲ್ಲು

ಚೆಕ್ ಬುಕ್ ಚೆಕ್ ಬುಕ್ ಚೆಕ್ ಬುಕ್!

ಶಬ್ದಗಾರುಡಿಗ ಬೇಂದ್ರೆಯವರೂ ಶ್ಲೇಷಾಲಂಕಾರಪ್ರಿಯರೇ. ಕವಿತೆ ಬರೆಯುವಾಗ ಭೃಂಗ, ಭ್ರಮರ, ಪಾತರಗಿತ್ತಿ, ದುಂಬಿ ಮುಂತಾಗಿ ಬೇರೆಬೇರೆ ಪದಗಳನ್ನು ಬಳಸಿದರೂ ‘ತುಂಬಿ’ ಎಂಬ ಪದಕ್ಕೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಬೇಂದ್ರೆ. ಕಾರಣ ಅದು ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಪದ. ತುಂ ತುಂ ತುಂ ತುಂ ತುಂಬಿ ಬಂದಿತ್ತಾ... ಎಂದು ಹಾಡುತ್ತ ದುಂಬಿಯಷ್ಟೇ ಬಂದದ್ದಲ್ಲ, ಹೊಳೆಯಲ್ಲಿ ನೀರು ತುಂಬಿ ಬಂತು; ಬಸವಣ್ಣನವರ ಜಲಸಮಾಧಿ ಕ್ಷಣಕ್ಕೆ ಕಾಲ ತುಂಬಿ ಬಂತು ಎಂಬ ಅರ್ಥವನ್ನೂ ಹೆಣೆದು ಅದ್ಭುತಕಾವ್ಯವಾಗಿಸುತ್ತಾರೆ. ಅದೇ ‘ತುಂಬಿ’ ಬೇಂದ್ರೆಯವರ ಗಂಗಾವತರಣ (‘ಇಳಿದು ಬಾ ತಾಯೇ ಇಳಿದು ಬಾ...’) ಕವಿತೆಯಲ್ಲೂ ಬರುತ್ತದೆ. ಹರಕೆ ಸಂದಂತೆ ಮಮತೆ ಮಿಂದಂತೆ ತುಂಬಿ ಬಂದಂತೆ... ಅಷ್ಟಾಗಿ ಈ ‘ತುಂಬಿ’ ಬೇಂದ್ರೆಯವರ ಬಳಿಗೆ ಬಂದದ್ದು ಬಸವಣ್ಣನವರ ಪ್ರಭಾವದಿಂದ ಎನ್ನುತ್ತಾರೆ ಕೆಲವು ವಿಮರ್ಶಕರು. ಏಕೆಂದರೆ ಬಸವಣ್ಣ ಸಹ ‘ತುಂಬಿ’ಪ್ರಿಯ.

ವಚನದಲ್ಲಿ ನಾಮಾಮೃತ ತುಂಬಿ

ನಯನದಲ್ಲಿ ನಿಮ್ಮ ಮೂರುತಿ ತುಂಬಿ

ಮನದಲ್ಲಿ ನಿಮ್ಮ ನೆನಹು ತುಂಬಿ

ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ

ಕೂಡಲಸಂಗಮದೇವಾ ನಿಮ್ಮ ಚರಣಕಮಲದೊಳಗಾನು ತುಂಬಿ

ಇನ್ನೊಬ್ಬ ವಚನಕಾರ ಅಂಬಿಗರ ಚೌಡಯ್ಯ ‘ಹುಟ್ಟು’ ಎಂಬ ಪದವನ್ನು ತನ್ನ ವಚನದಲ್ಲಿ ಬಳಸಿಕೊಂಡ ರೀತಿ ಬಲುಸೊಗಸು. ‘ಅಂದಾದಿ ಬಿಂದುವಿನಲ್ಲಿ ಹೊಂದಿದ ಹುಟ್ಟು, ಆ ಹುಟ್ಟನೆ ಹಿಡಿದು ಅಂದಚಂದದಲಿ ತೊಳಲಾಡುತ್ತಿದ್ದಿತು ಜಗವೆಲ್ಲಾ...’ ಇಲ್ಲಿ ‘ಹುಟ್ಟು’ ಎಂದರೆ ಜನನ ಎಂಬರ್ಥವೂ ಬಂತು; ಅಂಬಿಗನ ಕುಲಕಸುಬಿನ ಕುರುಹಾದ ‘ಹುಟ್ಟು’ (ದೋಣಿ ನಡೆಸಲು ಬಳಸುವ ಸಾಧನ) ಎಂಬ ಅರ್ಥವೂ ಬಂತು.

ಇನ್ನು, ನಮ್ಮೆಲ್ಲರ ನೆಚ್ಚಿನ ಪುರಂದರದಾಸರೂ ಶ್ಲೇಷೆಯಲ್ಲಿ ಕಮ್ಮಿಯೇನಲ್ಲ. ‘ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ...’ ಕೀರ್ತನೆಯಲ್ಲಿ ರಾಗಿ ಎಂದರೆ ಧಾನ್ಯ ಎಂಬ ಅರ್ಥದಿಂದಲೇ ತೊಡಗಿದರೂ, ಮುಂದೆ ‘ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು...’ ಎನ್ನುವಾಗ ರಾಗಿ ಪದವನ್ನು ಅನಿರೀಕ್ಷಿತ ರೀತಿಯಲ್ಲಿ ಶ್ಲೇಷೆಯಾಗಿಸುತ್ತಾರೆ. ಪುರಂದರದಾಸರ ಮತ್ತೊಂದು ಜನಪ್ರಿಯ ಕೃತಿಯಾದ ‘ಡೊಂಕು ಬಾಲದ ನಾಯಕರೇ ನೀವೇನೂಟವ ಮಾಡಿದಿರಿ...’ ಕೀರ್ತನೆಯಲ್ಲೂ ಶ್ಲೇಷೆ ಇದೆಯೆನ್ನುತ್ತಾರೆ ವಿದ್ವಾಂಸರು. ಮೇಲ್ನೋಟಕ್ಕೆ ಅದು ನಾಯಿಯ ಚಿತ್ರಣ ಬರುವಂತೆ ರಚಿಸಿದ್ದಾದರೂ ಅದರಲ್ಲಿನ ‘ಡೊಂಕುಬಾಲದ ನಾಯಕ’ ಎಂದರೆ ಬೇರಾರೂ ಅಲ್ಲ, ಪುರಂದರರೇ ದಾಸರಾಗುವ ಮೊದಲು ಜಿಪುಣಾಗ್ರೇಸರ ‘ಶ್ರೀನಿವಾಸ ನಾಯಕ’ ಆಗಿದ್ದರಲ್ವಾ ಆ ವ್ಯಕ್ತಿ! ವಿಷಯಸುಖಗಳ ಬೆನ್ನಟ್ಟಿ ಸಾಗುತ್ತಿದ್ದ ತನ್ನ ಜೀವನ ಹೇಗಿತ್ತು ಎಂದು ಮರುಕಪಡುತ್ತ, ಇನ್ನುಮುಂದೆ ಹಾಗಾಗದಂತೆ ಎಚ್ಚರವಹಿಸುತ್ತ ತನಗೆತಾನೇ ಬೋಧನೆ ಮಾಡಿಕೊಳ್ಳುವ ರೀತಿಯಲ್ಲಿ ಪುರಂದರರು ಈ ಕೀರ್ತನೆ ರಚಿಸಿದ್ದಾರೆ ಎಂದು ವಿದ್ವಾಂಸರ ಅಭಿಪ್ರಾಯ. ಇದ್ದರೂ ಇರಬಹುದು, ಅಂತೂ ಶ್ಲೇಷೆ ಇರುವುದು ಸ್ಪಷ್ಟ.

ಸರಿ, ವಚನಸಾಹಿತ್ಯ ದಾಸಸಾಹಿತ್ಯ ಮುಂತಾದ ಗಂಭೀರ ಪ್ರಕಾರಗಳ ನಂತರ ಈಗ ಮತ್ತೊಂದಿಷ್ಟು ತರ್ಲೆ ಶ್ಲೇಷೆಗಳತ್ತ ಕಣ್ಣುಹಾಯಿಸೋಣ. ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ಅದೊಂದು ಚಂದದ ಹಾಡು- ‘ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ... ಹೂವಾದರೆ ನಾನು ಮೂಕಾಂಬೆಯ ಪಾದದಿ ಇರುವೆ...’ ಇದರಲ್ಲಿ ‘ಇರುವೆ’ ಪದಕ್ಕೆ ಇರುವೆ (ant) ಎಂಬ ಅರ್ಥವನ್ನು ಊಹಿಸಿಕೊಳ್ಳಿ. ಸಕ್ಕತ್ ತಮಾಷೆ! ಬೇಲೂರಿನ ಗುಡಿಯಲ್ಲಿ ಯಾರೋ ಪ್ರವಾಸಿಗರು ಪ್ರಸಾದದ ಪಂಚಕಜ್ಜಾಯ ಚೆಲ್ಲಿದ್ದಾರೆ. ಹಾಗಾಗಿ ಇರುವೆಗಳು ಬಂದಿವೆ. ಕೊಲ್ಲೂರಿನಲ್ಲೂ ಅದೇ ಕಥೆ. ಬಹುಶಃ ಪಂಚಾಮೃತ ಅಭಿಷೇಕದ ನಂತರ ಅರ್ಚಕರು ಸ್ವಚ್ಛ ಮಾಡಲು ಮರೆತಿದ್ದಾರೆ. ಮೂಕಾಂಬಿಕೆಯ ಪಾದಗಳಿಗೆ ಕಚ್ಚಿ ಕಚಗುಳಿ ಇಡುತ್ತಿವೆ ಇರುವೆಗಳು!

ಇನ್ನೊಂದು ಸನ್ನಿವೇಶ ಹೀಗೆ- ತರಗತಿಯಲ್ಲಿ ದಡ್ಡಾತಿದಡ್ಡ ಎನಿಸಿದ್ದ ಗುಂಡನನ್ನು ಕನ್ನಡಪಂಡಿತರು ಕೇಳ್ತಾರೆ: “ಗುಂಡಣ್ಣಾ ಎದ್ದೇಳೋ. ಲೋಪಸಂಧಿಗೆ ಒಂದು ಉದಾಹರಣೆ ಕೊಡು.” ಗುಂಡ ಯಥಾಪ್ರಕಾರ ತಲೆಕೆರೆದುಕೊಳ್ಳುತ್ತ ಕ್ಷೀಣದನಿಯಲ್ಲಿ ‘ಗೊತ್ತಿಲ್ಲ’ ಅಂತಾನೆ. ಗುರುಗಳು “ಭೇಷ್! ಇದೇ ಮೊದಲಸಲ ಸರಿ ಉತ್ತರ ಕೊಟ್ಟಿದ್ದೀಯಲ್ಲೋ! ಏನಾಗಿದೆ ನಿನಗೆ? ಇವತ್ತು ಸೂರ್ಯ ಪಶ್ಚಿಮದಲ್ಲಿ ಹುಟ್ಟಿದನೇನು?" ಎಂದಾಗ ಗುಂಡ ತಬ್ಬಿಬ್ಬು.

ಶ್ಲೇಷಸ್ಪರ್ಶ ಸಶೇಷ. ಮತ್ತಷ್ಟು ಮುಂದಿನವಾರ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.