ಪದ-ಶ್ರಾವ್ಯ

ಈಗ ಆಡಿಯೋ ಟಚ್!

13
Aug 2011
Ganesha Idol Sculpting Workshop in Washington
Posted in DefaultTag by sjoshi at 9:55 am

ದಿನಾಂಕ  14 ಆಗಸ್ಟ್ 2011ರ ಸಂಚಿಕೆ...

ಅಮೆರಿಕದಲ್ಲಿ ಚೌತಿಯ ಗಣಪ ಆಗಲೇ ರೆಡಿ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಭಿಲಾಷ್, ಅಮೂಲ್ಯ, ಆರುಷಿ, ತನ್ಯಾ, ಮಿಲನ್, ರೋಹಿತ್, ಲಾಸ್ಯಾ, ವರ್ಷಾ, ವಿನಮ್ರ, ವಿಪ್ರ, ವಿಷ್ಣು, ವೇದಾ, ಸಿದ್ಧಾರ್ಥ... ಇವರೆಲ್ಲರೂ ನಮ್ಮ ವಾಷಿಂಗ್ಟನ್‌ನಲ್ಲಿರುವ ಅಮೆರಿಕನ್ನಡಿಗ ಪುಟಾಣಿಗಳು. ಇನ್ನೂ ಎರಡಂಕಿಯ ವಯಸ್ಸು ತಲುಪದ ಚಿಲ್ಟಾರಿಗಳು. ಇಲ್ಲಿನ ಕಾವೇರಿ ಕನ್ನಡ ಸಂಘದ ಸದಸ್ಯರ ಮಕ್ಕಳು. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ಚಾಚಾ ನೆಹರು ಮಾತಿನಂತೆ ಇವರನ್ನೆಲ್ಲ ‘ನಾಳಿನ ಭವ್ಯ ಜಗತ್ತನ್ನು ಕಟ್ಟಲಿರುವ ಶಿಲ್ಪಿಗಳು’ ಎಂದೂ ಬಣ್ಣಿಸಬಹುದಿತ್ತು. ಬೇಡ ಬಿಡಿ. ಅಂಥ ದೊಡ್ಡ ಜವಾಬ್ದಾರಿಯನ್ನು ಇವಿಷ್ಟೇ ಮಕ್ಕಳ ಮೇಲೆ ಹೊರಿಸುವುದು ಸರಿಯಲ್ಲ. ಹಾಗೆನೋಡಿದರೆ, ತನ್ನ ಭವಿಷ್ಯವನ್ನು ತಾನೇ ನಿರ್ಮಾಣ ಮಾಡಿಕೊಳ್ಳುವ ಪ್ರತಿಯೊಂದು ಮಗುವೂ ಓರ್ವ ಶಿಲ್ಪಿಯೇ. ಆದರೆ ಮೇಲೆ ಹೆಸರಿಸಿದ ಈ ಚಿಣ್ಣರಿದ್ದಾರಲ್ಲ, ಇವರು ನಿಜವಾಗಿಯೂ ಶಿಲ್ಪಿಗಳು. ಕಳೆದ ಶನಿವಾರ ಕನ್ನಡ ಸಂಘದ ವಾರ್ಷಿಕ ವನಭೋಜನ (ಪಿಕ್‌ನಿಕ್) ಅಂಗವಾಗಿ ಹಮ್ಮಿಕೊಂಡಿದ್ದ ‘ಮಣ್ಣಿನಿಂದ ಗಣಪನನ್ನು ಮಾಡಲು ಕಲಿಯಿರಿ’ ಕಾರ್ಯಾಗಾರದಲ್ಲಿ, ಕೇವಲ ಎರಡು-ಎರಡೂವರೆ ತಾಸುಗಳ ಅವಧಿಯಲ್ಲಿ, ಅಂದವಾಗಿ ಅಚ್ಚುಕಟ್ಟಾಗಿ ಗಣೇಶ ವಿಗ್ರಹಗಳನ್ನು ರಚಿಸಿದ ಶಿಲ್ಪಿಗಳು!

ಇವರಿಗೆಲ್ಲ ‘ಗುರು ಶಿಲ್ಪಿ’ ಯಾರು? ಇಂಥದೊಂದು ಕಾರ್ಯಾಗಾರ ನಡೆಸುವ ಐಡಿಯಾ ಬಂದದ್ದು ಯಾರಿಗೆ? ಈ ಪ್ರಶ್ನೆಗೆ ಉತ್ತರವಾಗಿ ಓರ್ವ ಹವ್ಯಾಸಿ ಕಲಾಕಾರ, ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಾಗಿ ವಿವಿಧ ಕಲಾಪ್ರಕಾರಗಳಲ್ಲಿ ಕೈಯಾಡಿಸುವ ಕ್ರಿಯಾಶೀಲ ವ್ಯಕ್ತಿ, ನಮ್ಮ ಕಾವೇರಿ ಕನ್ನಡ ಸಂಘದಲ್ಲಿ ‘ಆಸ್ಥಾನ ಕಲಾವಿದ’ ಎಂದು ಎಲ್ಲರಿಂದ ಪ್ರೀತಿಯ ಉಪಾಧಿ ಪಡಕೊಂಡಿರುವ ಹರಿದಾಸ್ ಲಹರಿ (laharidas@gmail.com) ಎಂಬ ಉತ್ಸಾಹಿ ತರುಣನನ್ನು ಪರಿಚಯಿಸಬೇಕಾಗುತ್ತದೆ.

ಉಡುಪಿ ಮೂಲದ ಹರಿದಾಸ್ ಚಿಕ್ಕಮಗಳೂರಿನಲ್ಲಿ ಎಂಜಿನಿಯರಿಂಗ್ ಕಲಿತವರು. ಕಳೆದೊಂದು ದಶಕದಿಂದ ವಾಷಿಂಗ್ಟನ್‌ನಿವಾಸಿ. ಇಲ್ಲಿ ಅವರ ಪ್ರತಿಭೆ ಮೊದಲಿಗೆ ಪ್ರಕಾಶಿಸಿದ್ದು 2006ರಲ್ಲಿ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನ ನಡೆದಾಗ. ಸಮ್ಮೇಳನದ ಲಾಂಛನ ರಚನೆಯಿಂದ ಹಿಡಿದು ಆಕರ್ಷಕವಾದ ವೇದಿಕೆಯ ಅಲಂಕಾರದವರೆಗೂ ಇವರದೇ ಕಲಾಸ್ಪರ್ಶ. ಮರುವರ್ಷ ಕಾವೇರಿ ಕಾರ್ಯಕಾರಿ ಸಮಿತಿಯನ್ನೂ ಸೇರಿಕೊಂಡರು. ಸಂಘದ ಅಂತರ್ಜಾಲ ತಾಣಕ್ಕೆ, ವಾರ್ತಾಪತ್ರಗಳಿಗೆ ಹೊಸ ಅಂದ ಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡೆಕೊರೇಷನ್ ಕಮಿಟಿ ಎಂದರೆ ಹರಿದಾಸ್ ಎನ್ನುವಷ್ಟು ಜನಜನಿತರಾದರು. ಜತೆಯಲ್ಲೇ ಫೊಟೊಗ್ರಾಫಿ ಹುಚ್ಚು; ಇದೀಗ ಆರ್ಕೆಸ್ಟ್ರಾ ತಂಡ ಕಟ್ಟಿ ಹಾಡುವುದನ್ನೂ ಹಚ್ಚಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಈ ಲೇಖನದಲ್ಲಿ ತನ್ನ ಬಗ್ಗೆ ಏನೂ ಬರೆಯಬಾರದೆಂದು ತಾಕೀತು ಮಾಡಿರುವ ಪುಣ್ಯಾತ್ಮ.

ಇಂತಿರುವ ಹರಿದಾಸ್, 2007ರಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಸುಂದರವಾದೊಂದು ಗಣೇಶ ವಿಗ್ರಹವನ್ನು ಅಮೆರಿಕದ ಮಣ್ಣಿನಿಂದಲೇ ನಿರ್ಮಿಸಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಆಮೇಲೆ ಪ್ರತಿವರ್ಷವೂ ಕಾವೇರಿ ಸಂಘದ ಗಣೇಶೋತ್ಸವಕ್ಕೆ ಹರಿದಾಸ್ ನಿರ್ಮಿತ ಮೂರ್ತಿ ಎಂಬ ಸಂಪ್ರದಾಯವೇ ಆಗಿಹೋಯ್ತು. ಶಂಖ ತಾಳ ಜಾಗಟೆಯೊಂದಿಗೆ ಮೆರವಣಿಗೆಯಲ್ಲಿ ಗಣೇಶನನ್ನು ತೆಗೆದುಕೊಂಡು ಬರುವುದೇನು, ವೇದೋಕ್ತ ಮಂತ್ರಸಹಿತ ಪೂಜೆಯೇನು, ಬಳಿಕ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ನೀರಿನ ದೊಡ್ಡ ಹಂಡೆಯಲ್ಲಿ ಅದರ ವಿಧ್ಯುಕ್ತ ವಿಸರ್ಜನೆಯೇನು... ಗಣೇಶಹಬ್ಬಕ್ಕೆ ವಿಶಿಷ್ಟವಾದ, ನೈಜತೆಯ ಕಳೆ ಬಂತು. ತವರುಮನೆಯಲ್ಲಿ ಚೌತಿಗೆ ಅಪ್ಪಯ್ಯನೇ ಮಣ್ಣಿನ ಗಣಪತಿ ಮಾಡುವುದನ್ನು ನೆನೆಸಿಕೊಂಡು ಪುಳಕಗೊಂಡ ಹೆಂಗಳೆಯರಂತೂ ಮೂರ್ತಿ ರಚನೆಯ ವಿದ್ಯೆಯನ್ನು ನಮಗೂ ಕಲಿಸಿಕೊಡುತ್ತೀರಾ ಎಂದು ಹರಿದಾಸ್‌ಗೆ ದುಂಬಾಲುಬಿದ್ದರು.

ganesha07a.jpg

ಹರಿದಾಸ್ ಹೇಳುತ್ತಾರೆ- “ಅತ್ಯಲ್ಪ ಪ್ರಯತ್ನ ಮತ್ತು ಕೌಶಲ್ಯದಿಂದ ಸುಲಭವಾಗಿ ಗಣಪನನ್ನು ತಯಾರಿಸಬಹುದು. ಬರೀ ಆವೆಮಣ್ಣಿನಿಂದಲೇ ಮಾಡುವುದರಿಂದ ನೀರಿನಲ್ಲಿ ವಿಸರ್ಜಿಸುವುದೂ ಸುಲಭ. ಪರಿಸರಸ್ನೇಹಿ ಗಣೇಶನನ್ನು ಆರಾಧಿಸಿದ ತೃಪ್ತಿಯೂ ಸಿಗುತ್ತದೆ. ಭಾರತದಿಂದ ತರಿಸಿದ ವಿಗ್ರಹಗಳಲ್ಲಿ ಏನಾಗುತ್ತದೆಂದರೆ ಸಾಗಾಟದ ಸಮಯದಲ್ಲಿ ತುಂಡಾಗಬಾರದೆಂದು ಗಟ್ಟಿ ಪದಾರ್ಥಗಳಿಂದ ಅವುಗಳನ್ನು ಮಾಡಿರುತ್ತಾರೆ. ನೀರಿನಲ್ಲಿ ಕರಗದ ಮೂರ್ತಿಯ ಅವಶೇಷಗಳನ್ನು ನೋಡುವಾಗ ವೇದನೆಯಾಗುತ್ತದೆ. ಅದಕ್ಕಿಂತ ಇಲ್ಲಿಯೇ ವಿಗ್ರಹ ಮಾಡುವುದು ತುಂಬ ಒಳ್ಳೆಯದು. ಈಗ ಹೇಗೂ ಇಲ್ಲಿ ಮಕ್ಕಳಿಗೆ ಬೇಸಿಗೆರಜೆ. ಇನ್ನೇನು ಒಂದೆರಡು ವಾರಗಳಲ್ಲಿ ಚೌತಿ ಬರುತ್ತೆ. ಅದಕ್ಕೋಸ್ಕರ ಕಾವೇರಿ ಪಿಕ್‌ನಿಕ್‌ನಲ್ಲಿ ಹೀಗೊಂದು Ganesha idol sculpting workshop ನಡೆಸುವ ಐಡಿಯಾ ಬಂತು. ಸಂಘದ ಪ್ರಸಕ್ತ ಅಧ್ಯಕ್ಷೆ ಜಯಶ್ರೀ ಜಗದೀಶ ಅವರಿಂದ ಒಳ್ಳೆಯ ಪ್ರೋತ್ಸಾಹವೂ ಸಿಕ್ಕಿತು. ಕಾರ್ಯಾಗಾರದ ಬಗ್ಗೆ ಹೊರಡಿಸಿದ ಪ್ರಕಟಣೆಗೆ ಮಕ್ಕಳಿಂದ ಮತ್ತು ಹೆತ್ತವರಿಂದ ಬಂದ ಪ್ರತಿಕ್ರಿಯೆಯೂ ಚೆನ್ನಾಗಿತ್ತು. ಒಟ್ಟಿನಲ್ಲಿ ವರ್ಕ್‌ಶಾಪ್ ಸೂಪರ್ ಹಿಟ್ ಆಯ್ತು!”

ಗಣೇಶನ ಮೂರ್ತಿ ಮಾಡಲು ಬೇಕಾಗುವ ಆವೆಮಣ್ಣನ್ನು ಇಂಟರ್‌ನೆಟ್‌ನಲ್ಲಿ ಆರ್ಡರ್ ಮಾಡಿ ತರಿಸಿಕೊಂಡಿದ್ದರು ಹರಿದಾಸ್. ಅಮೆರಿಕದಾದ್ಯಂತ ಇರುವ ‘ಮೈಕೇಲ್ಸ್’ ಮಳಿಗೆ(ಕರಕುಶಲ ಕಲೆಗಾರಿಕೆಗೆ ಬೇಕಾಗುವ ವಿವಿಧ ಪರಿಕರಗಳನ್ನು ಮಾರುವ ಸೂಪರ್‌ಸ್ಟೋರ್)ಗಳಲ್ಲೂ ಅದು ಸಿಗುತ್ತದೆ. Water based natural air dry clay ಎಂದು ಕೇಳಿದರಾಯ್ತು. ಹತ್ತು ಪೌಂಡ್ ತೂಕದ ಪೊಟ್ಟಣಕ್ಕೆ ಆರೇಳು ಡಾಲರ್ ಬೆಲೆ. ಕೆಂಪು, ಬೂದು, ಬಿಳಿ ಇತ್ಯಾದಿ ಬೇರೆಬೇರೆ ಶೇಡ್‌ಗಳನ್ನೂ ಆರಿಸಿಕೊಳ್ಳಬಹುದು. ಪೊಟ್ಟಣ ಬಿಚ್ಚಿ ಮಣ್ಣು ಮೆತ್ತಗಿರುವಾಗಲೇ ಬೇಕಾದ ಆಕಾರಗಳನ್ನು ಮಾಡಬೇಕು. ನೀರು ಹಾಕಿ ಕಲಸುವುದು ಇತ್ಯಾದಿ ಏನೂ ಬೇಕಿಲ್ಲ. ಚಕಚಕನೆ ಮೂರ್ತಿ ಮಾಡುತ್ತ ಹೋದರೆ ಒಂದೆರಡು ಗಂಟೆಗಳ ಕೆಲಸ.

ಮೊನ್ನೆಯ ಕಾರ್ಯಾಗಾರದಲ್ಲಿ ಹಾಗೇ ಆಯ್ತು. ‘ನೋಡಿ ತಿಳಿ ಮಾಡಿ ಕಲಿ’ಗೆ ಹೆಚ್ಚು ಒತ್ತು ಕೊಡುವ ಅಮೆರಿಕನ್ ಶಿಕ್ಷಣ ಪದ್ಧತಿಗೆ ಒಗ್ಗಿಕೊಂಡಿರುವ ಮಕ್ಕಳು ಹರಿದಾಸ್ ಕಲಿಸಿದ್ದನ್ನು ಸುಲಭದಲ್ಲೇ ಗ್ರಹಿಸಿ ಅನುಸರಿಸಿದರು. ಮಕ್ಕಳ ಹೆತ್ತವರೂ ಉತ್ಸಾಹದಿಂದ ಕೈಜೋಡಿಸಿದರು. ಮನೆಮಂದಿಯೆಲ್ಲ ಸೇರಿ ಆಚರಿಸುವ ಹಬ್ಬದ ತಯಾರಿಯನ್ನು ಮನೆಮಂದಿಯೆಲ್ಲ ಸೇರಿ ಮಾಡಿದ ಆ ದೃಶ್ಯ ಬಹಳ ಚಂದವಿತ್ತು. ನೋಡನೋಡುತ್ತಿದ್ದಂತೆ ಕಾರ್ಖಾನೆಯಲ್ಲಿ ಪ್ರೊಡಕ್ಷನ್ ಲೈನ್‌ನಿಂದ ಉತ್ಪನ್ನಗಳು ಹೊರಬರುವಂತೆ ಏಕಪ್ರಕಾರವಾದ ಸುಂದರ ಗಣೇಶ ಮೂರ್ತಿಗಳು ಮೈದಾಳಿದವು. ಪದ್ಮಾಸನ ಹಾಕಿ ಕುಳಿತ ಗಣೇಶ. ಹೆಗಲಮೇಲೆ ಉತ್ತರೀಯ ಮತ್ತು ಜನಿವಾರ. ಹೊಟ್ಟೆಗೆ ಹಾವಿನ ಬೆಲ್ಟ್. ಮೋದಕ ಹಿಡಿದ ಎಡಗೈ. ಅಭಯಪ್ರದಾನ ಮಾಡುತ್ತಿರುವ ಬಲಗೈ. ಪಕ್ಕದಲ್ಲಿ ಚಿಕ್ಕದೊಂದು ಇಲಿ. ಮಕ್ಕಳ ಖುಷಿಗೆ ಪಾರವೇ ಇಲ್ಲ.

ವರ್ಕ್‌ಶಾಪ್ ಶುರುವಾಗುವ ಮೊದಲು ‘ನೋಡೋಣ, ಗಣೇಶನ ಮೂರ್ತಿ ಮಾಡಹೋಗಿ ಅವನ ಅಪ್ಪನಂತಾಗುತ್ತೋ ಏನೋ’ ಎಂದು ಸಂದೇಹಿಸಿದ್ದ ಕೆಲ ಹಿರಿಯರೂ ಮೂಗಿನಮೇಲೆ ಬೆರಳಿಡುವಂತಾಯ್ತು. ವರ್ಕ್‌ಶಾಪ್‌ನ ಚಿತ್ರಸಂಪುಟವನ್ನು ಫೇಸ್‌ಬುಕ್ ಗೋಡೆಯ ಮೇಲೆ ನೋಡಿದವರು (ಕಾರಣಾಂತರಗಳಿಂದ ಪಿಕ್‌ನಿಕ್‌ಗೆ ಬಾರದಿದ್ದವರು) ಅಯ್ಯೋ ಇಂಥ ಒಳ್ಳೇ ಅವಕಾಶದಿಂದ ತಪ್ಪಿಸಿಕೊಂಡೆವಲ್ಲಾ, ನಮ್ಮ ಮಕ್ಕಳೂ ಭಾಗವಹಿಸಬಹುದಿತ್ತಲ್ವಾ ಎಂದು ಪರಿತಪಿಸುವಂತಾಯ್ತು; ಬೇರೆ ಊರುಗಳ ಕೆಲ ಅಮೆರಿಕನ್ನಡಿಗರು “ನಮ್ಮೂರಿಗೂ ಬಂದು ಇದೇ ರೀತಿ ವರ್ಕ್‌ಶಾಪ್ ನಡೆಸಿಕೊಡುತ್ತೀರಾ?” ಎಂದು ಹರಿದಾಸ್‌ರನ್ನು ಕೇಳಿಕೊಂಡದ್ದೂ ಆಯ್ತು!

ganesha_workshop.jpg

ಈಗಿನ್ನು ಹಬ್ಬ ಯಾವಾಗ ಬರುತ್ತದೆ, ಉಂಡೆ ಚಕ್ಕುಲಿ ಕಡಬು ಮೋದಕಗಳು ಮೆಲ್ಲಲು ಯಾವಾಗ ಸಿಗುತ್ತವೆ ಎಂದು ಕಾಯುತ್ತಿದ್ದಾರೆ ಮಕ್ಕಳು. ಮಕ್ಕಳಂತೆಯೇ ಮುದ್ದಾದ ಗಣಪನೂ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.