ಪದ-ಶ್ರಾವ್ಯ

ಈಗ ಆಡಿಯೋ ಟಚ್!

19
Feb 2011
Gratitude is being grateful
Posted in DefaultTag by sjoshi at 11:57 am

ದಿನಾಂಕ  20 ಫೆಬ್ರವರಿ 2011ರ ಸಂಚಿಕೆ...

ಅಟ್ಟ ಹತ್ತಿದ ಮೇಲೆಯೂ ಏಣಿ ಮರೆಯದವರು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ದನ್ನು ಮೊನ್ನೆ ಒಂದು ‘ಮುಂದರಿದ ಮಿಂಚಂಚೆ’ (ಇಮೇಲ್ ಫಾರ್ವರ್ಡ್)ನಲ್ಲಿ ಓದಿದೆ- ಝವೇರಿ ಪೂನಾವಾಲಾ ಎಂಬ ಪುಣೆಯ ಉದ್ಯಮಿಯೋರ್ವರು ಮಾನವೀಯತೆ ಮೆರೆದ ಕಥೆ. ಪೂನಾವಾಲಾ ಅವರ ಬಳಿ ಒಂದು ಲಿಮೊಸಿನ್ ಕಾರು. ಅದನ್ನವರು ಓಶೊ ರಜನೀಶರಿಂದ ಕೊಂಡುಕೊಂಡದ್ದಂತೆ. ಗಂಗಾದತ್ತ ಎಂಬುವವ ಅದರ ಚಾಲಕ. ಕಳೆದ ಮೂವತ್ತು ವರ್ಷಗಳಿಂದಲೂ ಆತ ಪೂನಾವಾಲಾರ ನಂಬಿಗಸ್ಥ ನೌಕರ. ಅನಾರೋಗ್ಯದಿಂದಲೋ ಏನೋ ಗಂಗಾದತ್ತ ಇತ್ತೀಚೆಗೆ ಅಸುನೀಗಿದ. ಪೂನಾವಾಲಾ ಆದಿನ ಯಾವುದೋ ತುರ್ತು ಕೆಲಸದ ಮೇಲೆ ಮುಂಬಯಿಗೆ ಹೋಗಿದ್ದರು. ಗಂಗಾದತ್ತ ತೀರಿಹೋದನೆಂಬ ಸುದ್ದಿ ಕೇಳಿದ ತತ್‌ಕ್ಷಣವೇ ಅವರು ಅವತ್ತಿನ ಮೀಟಿಂಗ್‌ಗಳನ್ನೆಲ್ಲ ರದ್ದುಪಡಿಸಿದರು. ತಾನು ಪುಣೆಗೆ ವಾಪಸಾಗುವವರೆಗೂ ಗಂಗಾದತ್ತನ ಅಂತ್ಯಕ್ರಿಯೆ ನಡೆಸದಿರುವಂತೆ ಅವನ ಕುಟುಂಬದವರನ್ನು ಕೇಳಿಕೊಂಡರು. ಹೆಲಿಕಾಪ್ಟರ್‌ನಲ್ಲಿ ಪುಣೆಗೆ ಧಾವಿಸಿದರು. ಅಲ್ಲಿ ಅದೇ ಲಿಮೊಸಿನ್ ಕಾರನ್ನು ಹೂವುಗಳಿಂದ ಸಿಂಗರಿಸಲಾಯಿತು. ಅದರೊಳಗೆ ಗಂಗಾದತ್ತನ ಶವವನ್ನಿರಿಸಿ ರುದ್ರಭೂಮಿಗೆ ಒಯ್ಯುವ ಏರ್ಪಾಡು ಮಾಡಲಾಯಿತು. ಚಾಲಕನ ಸ್ಥಾನದಲ್ಲಿ ಸ್ವತಃ ಪೂನಾವಾಲಾ. ಮೂವತ್ತು ವರ್ಷಗಳ ಕಾಲ ವಾಹನಚಾಲಕನಾಗಿ ಸೇವೆ ಸಲ್ಲಿಸಿದವನ ಅಂತಿಮಯಾತ್ರೆಗೆ ಒಡೆಯನೇ ಚಾಲಕ. ಅವು ಹೃದಯಸ್ಪರ್ಶಿ ಕ್ಷಣಗಳು. ಗದ್ಗದಿತರಾಗಿದ್ದ ಪೂನಾವಾಲಾ ಗಂಗಾದತ್ತನ ಗುಣಗಾನ ಮಾಡಿದರು. ಬಡತನದಿಂದ ಬಂದ ಆತ ನಿಷ್ಠೆಯಿಂದ ದುಡಿದು ಮಗಳನ್ನು ಚಾರ್ಟರ್ಡ್ ಎಕೌಂಟೆಂಟ್‌ಳನ್ನಾಗಿ ಬೆಳೆಸಿದ ಸಾಹಸವನ್ನು ಕೊಂಡಾಡಿದರು. ಗಂಗಾದತ್ತನ ಬಂಧುಬಳಗವನ್ನು ಸಮಾಧಾನಪಡಿಸಿ ಅಲ್ಲಿ ನೆರೆದಿದ್ದವರನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನೂ ಆಡಿದರು. “ದುಡ್ಡು-ದೌಲತ್ತು ಕೀರ್ತಿ ಅಧಿಕಾರಗಳನ್ನು ಯಾರಾದರೂ ಸಂಪಾದಿಸಬಹುದು. ಅದೇನೂ ದೊಡ್ಡ ಸಂಗತಿಯಲ್ಲ. ಆದರೆ ಮುನ್ನಡೆಗೆ ಊರುಗೋಲಾದವರನ್ನು, ಯಶಸ್ಸಿಗೆ ಕೊಡುಗೆಯಿತ್ತವರನ್ನು ಸದಾ ನೆನಪಿಟ್ಟುಕೊಳ್ಳುವುದು, ಅವರಿಗೆ ಕೃತಜ್ಞರಾಗಿರುವುದು, ಅವರನ್ನು ಗೌರವಿಸುವುದು ನಾವು ಮಾಡಬಹುದಾದ, ಮಾಡಬೇಕಾದ ಕನಿಷ್ಠ ಕೆಲಸ. ಅಂತಹದೊಂದು ಸಂಸ್ಕಾರದಲ್ಲಿ ಬೆಳೆದುಬಂದವನಾದ್ದರಿಂದಲೇ ನಾನಿದನ್ನು ಮಾಡಿದೆ. ಅಷ್ಟೇ.”

ಪೂನಾವಾಲಾ ಹೇಳಿದ ಮಾತುಗಳು ಎಷ್ಟು ಅರ್ಥಪೂರ್ಣ ಮತ್ತು ಅನುಸರಣೀಯವಾಗಿವೆ ಅಲ್ಲವೇ? ಈ ಜೀವನವೆಂದರೆ ಒಂದು ಸಮುದ್ರಯಾನವಿದ್ದಂತೆ. ಏರಿಳಿಯುವ ಅಲೆಗಳ ಮೇಲೆ ನಿರಂತರ ಪಯಣ. ಗಳಿಸಿದ ಸುಖವೈಭೋಗಗಳು ಬಹುಕಾಲ ಉಳಿಯುವುದಿಲ್ಲ. ಅವು ಶಾಶ್ವತವಲ್ಲ. ಉಳಿಯುವುದೇನಿದ್ದರೂ ಅಲೆಗಳಂತೆ ನಮ್ಮ ಜೀವ ಸ್ಪರ್ಶ ಮಾಡುವ ಕೆಲವರ ನೆನಪುಗಳು ಮಾತ್ರ. ಎಷ್ಟೋಸಲ ಆ ಕೆಲವರು ಬರೀ ‘ಕೇವಲ’ರೇ ಆಗಿರುತ್ತಾರೆ. ಆದರೆ ನಮ್ಮ ಬಾಳನ್ನು ರೂಪಿಸುವುದರಲ್ಲಿ, ಬಾಳಿಗೊಂದು ಬೆಳಕನ್ನು ತೋರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಝವೇರಿ ಪೂನಾವಾಲಾ ಯಾರೆಂದು ನನಗೆ ಗೊತ್ತಿಲ್ಲ. ಅವರ ಭಾಷಣ ಕೇಳಿ ನಾನಿದನ್ನು ವರದಿ ಮಾಡಿರುವುದೂ ಅಲ್ಲ. ಇಮೇಲ್‌ಫಾರ್ವರ್ಡ್‌ನಲ್ಲಿ ಓದಿ ತಿಳಿದುಕೊಂಡೆನೇ ಹೊರತು ಆ ಘಟನೆ ನಿಜವೋ ಕಲ್ಪನೆಯೋ ಎನ್ನುವುದಕ್ಕೆ ಪುರಾವೆ ಕೂಡ ನನ್ನಲ್ಲಿಲ್ಲ. ಆದರೆ, ಪೂನಾವಾಲಾ ಹೇಳಿದ್ದೆನ್ನಲಾದ ಮಾತುಗಳಿಂದ ಹೇಗೆ ನಮಗೆ ಒಂದು ರೀತಿಯ ಹಿತಾನುಭವ ಆಗಿದೆಯೋ, ಅಂತಃಕರಣವನ್ನು ಮೃದುವಾಗಿ ತಟ್ಟಿದಂತಾಗಿದೆಯೋ, ಅದೇ ರೀತಿಯ ವಿಶಿಷ್ಟ ಅನುಭವ ಕಳೆದ ವರ್ಷ ಒಂದು ಸಂದರ್ಭದಲ್ಲಿ ನನಗೆ ಆಗಿತ್ತು. ಅದನ್ನು ನಿಮ್ಮೊಡನೆ ಹಂಚಿಕೊಳ್ಳಬೇಕು ಎಂದು ಯೋಜಿಸಿದ್ದೂ ಇತ್ತು; ಇವತ್ತು ಅದಕ್ಕೆ ಸಮಯ ಒದಗಿ ಬಂತು.

ಚಿತ್ರದುರ್ಗದ ಹಾಲಿ ಸಂಸದ ಜನಾರ್ಧನ ಸ್ವಾಮಿಯ ಹೆಸರನ್ನು ನೀವು ಕೇಳಿಯೇ ಇರುತ್ತೀರಿ ಎಂದುಕೊಳ್ಳುತ್ತೇನೆ. ಸ್ವಾಮಿ ಮತ್ತು ನಾನು ದಾವಣಗೆರೆಯಲ್ಲಿ ಎಂಜಿನಿಯರಿಂಗ್ ವ್ಯಾಸಂಗದಲ್ಲಿ ಸಹಪಾಠಿಗಳು. ಆಗಲೂ ಆಮೇಲೂ ಸ್ನೇಹಿತರು. ಅಮೆರಿಕದಲ್ಲಿ ಸಾಫ್ಟ್‌ವೇರ್ ಉದ್ಯೋಗವನ್ನು ಬಿಟ್ಟು ತಾಯ್ನಾಡಿಗೆ ಮರಳಿ ಸಕ್ರಿಯ ರಾಜಕಾರಣದಲ್ಲಿ ತೊಡಗಿ ಲೋಕಸಭಾ ಚುನಾವಣೆ ಅಖಾಡದಲ್ಲಿ ಸ್ವಾಮಿ ಸ್ಪರ್ಧೆಗಿಳಿದಾಗ ನಮಗೆಲ್ಲ ಸಿಕ್ಕಾಪಟ್ಟೆ ಅಚ್ಚರಿ-ಅಭಿಮಾನ ಒಟ್ಟೊಟ್ಟಿಗೇ ಆಗಿತ್ತು. ‘ಜನಸೇವೆಗೆ ಹೊರಟಿಹ ಜನಾರ್ಧನ ಸ್ವಾಮಿಗೆ ಜೈ ಹೋ!’ ಎಂಬ ತಲೆಬರಹ ಕೊಟ್ಟು ಇದೇ ಅಂಕಣದಲ್ಲಿ ನಾನೊಂದು ಲೇಖನವನ್ನೂ ಬರೆದಿದ್ದೆ. ಚುನಾವಣಾ ಫಲಿತಾಂಶ ಪ್ರಕಟವಾಗಿ ಸ್ವಾಮಿ ಜಯಭೇರಿ ಬಾರಿಸಿದಾಗಂತೂ ನಮ್ಮೆಲ್ಲರ ಹರ್ಷೋಲ್ಲಾಸಕ್ಕೆ ಪಾರವೇ ಇರಲಿಲ್ಲ. ಸ್ವಾಮಿ ಸಂಸತ್ತು ಪ್ರವೇಶಿಸಿದರು. ಕಿರಿವಯಸ್ಸಿನ, ಸ್ನಾತಕೋತ್ತರ ವಿದ್ಯಾರ್ಹತೆಯುಳ್ಳ ಕೆಲವೇಕೆಲವು ಸಂಸತ್ಸದಸ್ಯರ ಪೈಕಿ ಒಬ್ಬರಾದರು. ವಿರೋಧಪಕ್ಷದಲ್ಲಿದ್ದರೂ ಉನ್ನತ ಮಟ್ಟದ ಸಮಿತಿಗಳ, ಸಂಸದೀಯ ನಿಯೋಗಗಳ ಸದಸ್ಯರಾದರು. ಅಂತಹ ಒಂದು ಪಾರ್ಲಿಮೆಂಟರಿ ಡೆಲಿಗೇಶನ್‌ನ ಭಾಗವಾಗಿ ಜನಾರ್ಧನ ಸ್ವಾಮಿ ಕಳೆದವರ್ಷ ಜೂನ್-ಜುಲೈಯಲ್ಲಿ ಅಮೆರಿಕ ದೇಶಕ್ಕೆ ಭೇಟಿಯಿತ್ತಿದ್ದರು. ಇಲ್ಲಿನ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದಲ್ಲಿ ಆರ್ಥಿಕತಜ್ಞರು, ನೊಬೆಲ್ ಪ್ರಶಸ್ತಿ ವಿಜೇತರು, ಅಮೆರಿಕ ಸರಕಾರದ ಪ್ರತಿನಿಧಿಗಳೂ ಸೇರಿದಂತೆ ಹಲವಾರು ಹಿರಿತಲೆಗಳೆಲ್ಲ ಒಂದೆಡೆ ಸೇರಿದ ಸಮಾವೇಶದಲ್ಲಿ ಭಾಗವಹಿಸಿದ್ದರು. ಉನ್ನತ ಮಟ್ಟದ ಸಭೆಗಳಲ್ಲಿ ತನ್ನ ಪ್ರಖರ ಹಾಗೂ ಪುರೋಗಾಮಿ ಚಿಂತನೆಗಳಿಂದ ಯಾವೊಂದು ಅಳುಕೂ ಇಲ್ಲದೆ ಪ್ರಸ್ತುತಗೊಂಡಿದ್ದರು. ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್, ಪೆಂಟಗಾನ್‌ನಲ್ಲಿ ಅಮೆರಿಕದ ರಕ್ಷಣಾ ಸಚಿವಾಲಯ, ಎಫ್‌ಬಿ‌ಐ ಕಾರ್ಯಾಲಯ, ನಿವೃತ್ತ ಸಿ‌ಐ‌ಎ ಚೀಫ್ - ಹೀಗೆ ಎಲ್ಲವೂ ಹೈ-ಪ್ರೊಫೈಲ್ ಭೇಟಿಗಳು, ಸಂದರ್ಶನಗಳು. ಉಭಯದೇಶಗಳ ವಿದೇಶಾಂಗ ವ್ಯವಹಾರಗಳ ಕುರಿತು, ತಂತ್ರಜ್ಞಾನ ವಿನಿಮಯ ಕುರಿತು ಸಮಾಲೋಚನೆಗಳು. ಜನಾರ್ಧನ ಸ್ವಾಮಿಗೆ ಒದಗಿಬಂದ ಆ ಲೆವೆಲೇ ಬೇರೆ. ನನ್ನ-ನಿಮ್ಮ ಊಹೆಗೂ ಅದು ನಿಲುಕದು.

ಆ ಪ್ರವಾಸದ ಅಫೀಶಿಯಲ್ ಭಾಗ ಮುಗಿದಮೇಲೆ ಪರ್ಸನಲ್ ಟ್ರಿಪ್ ಎಂದು ಮತ್ತೂ ಒಂದಿಷ್ಟು ದಿನ ಅಮೆರಿಕದಲ್ಲಿದ್ದ ಜನಾರ್ಧನ ಸ್ವಾಮಿ ವಾಷಿಂಗ್ಟನ್‌ನಲ್ಲಿ ನಮ್ಮನೆಗೂ ಸೌಹಾರ್ದ ಭೇಟಿ ಕೊಟ್ಟಿದ್ದರು. ಒಂದೆರಡು ದಿನ ನಮ್ಮಲ್ಲಿಯೇ ಉಳಕೊಂಡಿದ್ದರು. ಇಲ್ಲಿನ ಕನ್ನಡಿಗ ಸ್ನೇಹಿತರೂ ಸೇರಿ ಆತ್ಮೀಯ ಮಾತು-ಹರಟೆಗಳಿಗೆ ಸಿಕ್ಕಿದ್ದರು.  ರಾಜಕೀಯಕ್ಕೆ ಧುಮುಕಬೇಕು ಎಂಬ ಆಲೋಚನೆ ಬಂದಾಗಿನಿಂದ ಹಿಡಿದು ಅದುವರೆಗಿನ ಅವಧಿಯಲ್ಲಿ ನಡೆದ ವಿದ್ಯಮಾನಗಳು, ಎದುರಾದ ಸವಾಲುಗಳು, ಸತ್ವಪರೀಕ್ಷೆಗಳು ಎಲ್ಲದರ ಸಣ್ಣಪುಟ್ಟ ವಿವರಗಳನ್ನೂ ಬಿಡದೆ ಸ್ವಾಮಿ ನಮ್ಮೊಂದಿಗೆ ಹಂಚಿಕೊಂಡರು. ಹಾಗೆಯೇ ಚಿತ್ರದುರ್ಗ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು, ಕುಡಿಯುವ ನೀರು ಪೂರೈಕೆಯಂತಹ ಮೂಲಭೂತ ಸೌಕರ್ಯಗಳಿಂದ ಹಿಡಿದು ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಕೇಂದ್ರಗಳು, ಪ್ರಯೋಗಾಲಯಗಳು, ಶಿಕ್ಷಣಸಂಸ್ಥೆಗಳ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿ ಹೀಗೆ ಹಮ್ಮಿಕೊಂಡಿರುವ ಹತ್ತುಹಲವು ಯೋಜನೆಗಳ ನೀಲಿನಕ್ಷೆಯನ್ನು ವಿವರಿಸಿದರು. ಕೆಲವು ಯೋಜನೆಗಳಿಗೆ ಆಗಲೇ ಚಾಲನೆ ದೊರೆತಿದ್ದು ಬದಲಾವಣೆಯ ಹೊಸ ಗಾಳಿ ಚಿತ್ರದುರ್ಗದ ಜನತೆಗೆ ತಾಕತೊಡಗಿದೆಯೆಂದು ಧನ್ಯತಾಭಾವದಿಂದ ಹೇಳಿಕೊಂಡರು. ಅಬ್ಬಾ! ಎಂಜಿನಿಯರಿಂಗ್ ಕಾಲೇಜಿನಲ್ಲಿರುತ್ತ ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದುಕೊಂಡು, ಅಸಾಮಾನ್ಯ ಪ್ರತಿಭೆಯಿಂದ, ಛಲ ಬಿಡದ ಪ್ರಯತ್ನದಿಂದ, ಅದಕ್ಕೆ ಎರಕ ಹೊಯ್ದಂತೆ ಅದ್ಭುತ ಆತ್ಮವಿಶ್ವಾಸದಿಂದ ಯಶಸ್ಸಿನ ಒಂದೊಂದೇ ಮೆಟ್ಟಿಲನ್ನೇರುತ್ತ ಇವತ್ತು ಈ ಸ್ಥಾನದಲ್ಲಿರುವ ಜನಾರ್ಧನ ಸ್ವಾಮಿ! ಯಾರಿಗೇ ಆದರೂ ಹೆಮ್ಮೆಯೆನಿಸಲೇಬೇಕು.

ವಾಷಿಂಗ್ಟನ್‌ನ ನಂತರ ಕ್ಯಾಲಿಫೋರ್ನಿಯಾಕ್ಕೆ ಹೋಗುವ ಕಾರ್ಯಕ್ರಮವಿತ್ತಾದ್ದರಿಂದ ಜನಾರ್ಧನ ಸ್ವಾಮಿಯನ್ನು ನನ್ನ ಕಾರ್‌ನಲ್ಲಿ ಏರ್‌ಪೋರ್ಟ್‌ಗೆ ಕರಕೊಂಡುಹೋಗಿ ಬಿಟ್ಟುಬಂದಿದ್ದೆ. ನಮ್ಮನೆಯಿಂದ ಸುಮಾರು ಅರ್ಧ-ಮುಕ್ಕಾಲು ಗಂಟೆ ಡ್ರೈವಿಂಗ್‌ನಷ್ಟು ದೂರದಲ್ಲಿದೆ ಆ ವಿಮಾನನಿಲ್ದಾಣ. ಅವತ್ತು ಕಾರಿನಲ್ಲಿ ಹೋಗುತ್ತ ಜನಾರ್ಧನ ಸ್ವಾಮಿ ನನ್ನ ಬಳಿ ಮಾತನಾಡಿದ್ದಿದೆಯಲ್ಲ ಬಹುಶಃ ಅಂತರಂಗದ ಮಾತುಗಳು ಅಥವಾ ಅಂತಃಕರಣವನ್ನು ತಟ್ಟುವ ಮಾತುಗಳು ಎನ್ನುವುದು ಅದನ್ನೇ. ಅದೊಂಥರ ಮೊನೊಲಾಗ್ ಎಂದರೂ ತಪ್ಪಲ್ಲ, ಏಕೆಂದರೆ ಸ್ವಾಮಿ ಹೇಳುತ್ತಲೇ ಇದ್ದರು ನಾನು ಕೇಳಿಸಿಕೊಳ್ಳುತ್ತಲೇ ಇದ್ದೆ. ನಿರಕ್ಷರಕುಕ್ಷಿಯಾಗಿ ಕುರಿಕಾಯುವ ಕಸುಬಿನಲ್ಲಿದ್ದ ತನ್ನ ತಂದೆಯವರನ್ನು ಅದ್ಯಾರೋ ಮಹಾನುಭಾವರು ಅಕ್ಷರ ಕಲಿಕೆಗೆ ಒಡ್ಡಿದ್ದು, ನಾಲ್ಕಕ್ಷರ ಕಲಿತ ತಂದೆ ಚಿತ್ರದುರ್ಗದ ಆ ಕುಗ್ರಾಮದಲ್ಲಿ ಶಾಲಾಶಿಕ್ಷಕನಾಗಿ ರೂಪುಗೊಂಡಿದ್ದು, ತಂದೆ-ತಾಯಿ ಮದುವೆಯಾಗಿ ೧೮ ವರ್ಷಗಳ ನಂತರ ತಾನು ಹುಟ್ಟಿದ್ದು, ತಂದೆಯೇ ಗುರುವಾಗಿ ತನಗೆ ಅಕ್ಷರಗಳನ್ನಷ್ಟೇ ಅಲ್ಲದೆ ಬದುಕಿನ ಸಕಲ ವಿದ್ಯೆಗಳನ್ನೂ ಕಲಿಸಿದ್ದು, ತಂದೆಯ ಸ್ನೇಹಿತರಾಗಿದ್ದ ರಮೇಶ ಎಂಬುವರೊಬ್ಬರು ತನ್ನ ಹಿತೈಷಿಯಾಗಿ ಹಿತಚಿಂತಕನಾಗಿ ಒದಗಿಬಂದದ್ದು, ಮಂಜುನಾಥಪ್ಪ ಎಂಬ ಶಾಲಾಶಿಕ್ಷಕರು ಸ್ವತಃ ವಿಜ್ಞಾನ ಕಲಿತವರಲ್ಲವಾದರೂ ವಿಜ್ಞಾನದ ಬಗ್ಗೆ ತನ್ನಲ್ಲಿ ಆಸಕ್ತಿ ಮೊಳಕೆಯೊಡೆಯುವಂತೆ ಮಾಡಿದ್ದು, ಹೈಸ್ಕೂಲ್ ಶಿಕ್ಷಕರಾಗಿದ್ದ ಉಜ್ಜಿನಪ್ಪ ಅವರಿಂದಾಗಿ ಗಣಿತವನ್ನು ತಲೆಗೆ ಹತ್ತಿಸಿಕೊಂಡದ್ದು... ಸ್ವಾಮಿ ತನ್ನ ಬಾಲ್ಯದ ಪುಟಗಳನ್ನು ಒಂದೊಂದಾಗಿ ತೆರೆದು ಆ ಅಧ್ಯಾಯಗಳ ಹೀರೋಗಳನ್ನು ನನಗೆ ಪರಿಚಯಿಸುತ್ತಿದ್ದಾರೇನೊ ಅಂತನಿಸುತ್ತಿತ್ತು. ದಾವಣಗೆರೆಯಲ್ಲಿ ಕಾಲೇಜುವಿದ್ಯಾರ್ಥಿಯಾಗಿ ಮತ್ತು ಆನಂತರ ಒಬ್ಬ ಪ್ರತಿಭಾನ್ವಿತ ಎಂಜಿನಿಯರ್ ಆಗಿ ಸ್ವಾಮಿ ಗೊತ್ತಿದ್ದನಷ್ಟೇ ಹೊರತು ಅವನ ಬಾಲ್ಯದ ಈ ಎಲ್ಲ ವಿವರಗಳು ನನಗೆಲ್ಲಿ ತಿಳಿದಿದ್ದವು? ಏರ್‌ಪೋರ್ಟ್ ತಲುಪುವ ಹೊತ್ತಿಗೆ ನನ್ನ ಕಣ್ಣುಗಳು ಮಂಜಾಗಿದ್ದವು. ಏನೋ ಅವ್ಯಕ್ತ ಭಾವ. ಒಬ್ಬ ವ್ಯಕ್ತಿಯ/ವ್ಯಕ್ತಿತ್ವದ ನಿರ್ಮಾಣದಲ್ಲಿ ಎಂತೆಂಥ ಮಹಾನ್ ಆತ್ಮಗಳ ಕೊಡುಗೆಗಳಿರುತ್ತವೆ! ಅವರನ್ನೆಲ್ಲ ಪ್ರಾತಃಸ್ಮರಣೀಯರಾಗಿ ನಿತ್ಯವೂ ನೆನೆಯುವ ವ್ಯಕ್ತಿ ಹೇಗೆ ತನ್ನಿಂತಾನೇ ಮಹಾನ್ ಅನಿಸಿಕೊಳ್ಳುತ್ತಾನೆ!

ಪೂನಾವಾಲಾ ಹೇಳಿದ್ದೂ ಅದನ್ನೇ- ಮುನ್ನಡೆಗೆ ಊರುಗೋಲಾದವರನ್ನು, ಯಶಸ್ಸಿಗೆ ಕೊಡುಗೆಯಿತ್ತವರನ್ನು ಸದಾ ನೆನಪಿಟ್ಟುಕೊಳ್ಳಬೇಕು, ಅವರಿಗೆ ಕೃತಜ್ಞರಾಗಿರಬೇಕು, ಅವರನ್ನು ಗೌರವಿಸಬೇಕು. ಅಟ್ಟ ಹತ್ತಿದ ಮೇಲೆಯೂ ಏಣಿಯನ್ನು ಮರೆಯದ ಜನಾರ್ಧನ ಸ್ವಾಮಿಯಂಥವರು ಅದನ್ನು ಚಾಚೂ ತಪ್ಪದೇ ಮಾಡುತ್ತಾರೆ. ನಾವುಗಳು ಅಟ್ಟ ಹತ್ತುವುದಿರಲಿ ಹತ್ತಿದೆವೆಂಬ ಭ್ರಮೆಯಲ್ಲೇ ಏಣಿಯನ್ನು ಒದ್ದು ಝಾಡಿಸುತ್ತೇವೆ!

ಮೊನ್ನೆ ನಾಲ್ಕೈದು ದಿನಗಳ ಹಿಂದೆಯಷ್ಟೇ ಜನಾರ್ಧನ ಸ್ವಾಮಿಯಿಂದ ಒಂದು ಇಮೇಲ್ ಬಂದಿದೆ. ಹಾಲ್ದೊಡ್ಡೇರಿ ಸುಧೀಂದ್ರರಿಗೆ ಬರೆದಿರುವ ಅದರ ಪ್ರತಿಯನ್ನು ಸ್ವಾಮಿ ನನಗೂ ಕಳಿಸಿದ್ದಾರೆ. ಇಮೇಲ್‌ನ ಒಕ್ಕಣೆ ಇಷ್ಟು- “ಪರಮಾಣುವಿನ ಸಂರಚನೆ ಹೇಗಿರುತ್ತದೆ ಎಂದು ತಿಳಿಸುವ ಸ್ಕೇಲ್-ಮಾಡೆಲ್ ಎಂದರೆ ವಿಸ್ತೃತಗಾತ್ರದ ಪ್ರತಿರೂಪವನ್ನು ಚಿತ್ರದುರ್ಗದಲ್ಲಿ ಸ್ಥಾಪಿಸಿ ಪ್ರದರ್ಶನಕ್ಕಿಡಬೇಕೆಂದಿದೆ. ಸುಮಾರು ಎರಡು ಸೆಂ.ಮೀ ವ್ಯಾಸದ ಗೋಲಿಯಷ್ಟು ದೊಡ್ಡ ಎಲೆಕ್ಟ್ರಾನ್ ಮತ್ತು ಅದಕ್ಕೆ ಸರಿಯಾದ ಅನುಪಾತದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳಿರುವ ಕೇಂದ್ರಭಾಗ. ಇದು ಮಕ್ಕಳಿಗೂ ದೊಡ್ಡವರಿಗೂ ಖಂಡಿತ ಆಸಕ್ತಿ ಹುಟ್ಟಿಸುವಂಥದ್ದಾಗುತ್ತದೆ. ಅಣುವಿನ ಪ್ರತ್ಯೇಕ ಭಾಗ (ನ್ಯೂಟ್ರಾನ್, ಪ್ರೋಟಾನ್ ಮತ್ತು ಎಲೆಕ್ಟ್ರಾನ್)ಗಳನ್ನು ಸ್ಕೇಲ್ ಅಪ್ ಮಾಡಿದಾಗ ಅವು ಒಂದಕ್ಕೊಂದು ಎಷ್ಟು ದೂರದಲ್ಲಿರುತ್ತವೆ, ನಡುವೆ ಎಷ್ಟು ಜಾಗ ಖಾಲಿಯಿರುತ್ತದೆ ಎಂದು ಅರಿತಾಗ ಅಚ್ಚರಿಯಾಗುವಂತಿರುತ್ತದೆ! ಜಲಜನಕದ ಅಣುವನ್ನೇ ತೆಗೆದುಕೊಂಡರೆ, ಅದರಲ್ಲಿ  ಪ್ರೋಟಾನ್ , ನ್ಯೂಟ್ರಾನ್, ಎಲೆಕ್ಟ್ರಾನ್‌ಗಳ ಮೂಲ ಪ್ರಮಾಣಗಳು ಎಷ್ಟಿರುತ್ತವೆ, ಸ್ಕೇಲ್ ಅಪ್ ಮಾಡಿದಾಗ ಎಷ್ಟಾಗುತ್ತವೆ ಎಂದು ವಿವರಗಳನ್ನು ಕಲೆಹಾಕುವುದರಲ್ಲಿ ನೆರವಾಗುತ್ತೀರಾ?”

ನಮ್ಮ ಭಾರತದೇಶದಲ್ಲಿ, ನಮ್ಮದೇ ಕರ್ನಾಟಕ ರಾಜ್ಯದಲ್ಲಿ ಒಬ್ಬ ರಾಜಕಾರಣಿ, ಲೋಕಸಭಾ ಸದಸ್ಯ, ಈ ರೀತಿಯ ಚಿಂತನೆಗಳನ್ನೂ (ಇದನ್ನಷ್ಟೇ ಎಂದುಕೊಳ್ಳಬೇಡಿ) ಹೊಂದಿದ್ದಾನೆ, ಮಿಕ್ಕವರೆಲ್ಲ ಅಣುವಿನಷ್ಟೂ ಮಾನವಿಲ್ಲದವರಿರುವಾಗ ಈತ ಅಣುವಿಗೇ ಮಾನ ಕೊಡುವ ಪ್ರಯತ್ನ ಮಾಡುತ್ತಿದ್ದಾನೆ ಎಂದರೆ ನಿಜಕ್ಕೂ ಹೆಮ್ಮೆಯೆನಿಸುವುದಿಲ್ಲವೇ? ಅಂದಹಾಗೆ ಅಣುವಿನ ಸ್ಕೇಲ್-ಅಪ್ ಮಾಡೆಲ್ ಹೇಗಿರಬಹುದು? ಗೋಲಿಯಷ್ಟು ದೊಡ್ಡ ಎಲೆಕ್ಟ್ರಾನ್ ಕೇಂದ್ರಭಾಗದಿಂದ ಎಷ್ಟು ದೂರ ಇರಬಹುದು? ಒಂದಡಿ? ಒಂದು ಮೀಟರ್? ಹತ್ತು ಮೀಟರ್ ಅಥವಾ ಮತ್ತೂ ಹೆಚ್ಚು? ನೀವೂ ಯೋಚಿಸಿ!

[ಜನಾರ್ಧನ ಸ್ವಾಮಿಯವರ ವೆಬ್‌ಸೈಟ್ ಮತ್ತು ಅದರಲ್ಲಿ media ವಿಭಾಗ ಇಲ್ಲಿದೆ.  ಜನಾರ್ಧನ ಸ್ವಾಮಿ ಸಂಸದನಾಗಿ 1 ವರ್ಷ ಪೂರೈಸಿದ ಸಂದರ್ಭದಲ್ಲಿ ವಿಜಯಕರ್ನಾಟಕ ಚಿತ್ರದುರ್ಗ ಆವೃತ್ತಿಯಲ್ಲಿ ಪ್ರಕಟವಾಗಿದ್ದ ನಾಲ್ಕು ಪುಟಗಳ ವಿಶೇಷ ಪುರವಣಿ ಇಲ್ಲಿದೆ.]

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.
Podbean App

Play this podcast on Podbean App