Episodes
Wednesday Sep 25, 2013
Hasigodeyalli Haralu
Wednesday Sep 25, 2013
Wednesday Sep 25, 2013
ದಿನಾಂಕ 15 ಎಪ್ರಿಲ್ 2012ರ ಸಂಚಿಕೆ...
ಹಸಿ ಗೋಡೆಯಲಿ ನೆಟ್ಟ ಹರಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ‘ಹಳಗನ್ನಡ ಕಾವ್ಯದ ಪದ್ಯಭಾಗಗಳು ನಿಮ್ಮ ಸಂಗ್ರಹದಲ್ಲಿ ಯಾವುದಾದರೂ ಇವೆಯೇ, ಅಂತರ್ಜಾಲದಲ್ಲಿ ಸಿಕ್ಕಿದ್ದೂ ಆಗುತ್ತದೆ, ಅಥವಾ ನಿಮ್ಮ ಬಳಿ ಹಳೆಯ ಗ್ರಂಥಗಳಾವುದಾದರೂ ಇದ್ದರೆ ಅದರ ಒಂದೆರಡು ಪುಟಗಳನ್ನು ಸ್ಕ್ಯಾನ್ ಮಾಡಿದ್ದೂ ಆದೀತು. ಅರ್ಥಸಹಿತ ವಿವರಣೆಯಿದ್ದರೆ ಮತ್ತೂ ಒಳ್ಳೆಯದು. ಕಳಿಸಿಕೊಡಲಿಕ್ಕಾಗುತ್ತದೆಯೇ?’ - ಎಂಬ ಒಕ್ಕಣೆಯ ಪತ್ರವನ್ನು ಅಮೆರಿಕನ್ನಡಿಗ ಸ್ನೇಹಿತರೊಬ್ಬರು ಒಮ್ಮೆ ನನಗೆ ಬರೆದಿದ್ದರು. ಅವರಿರುವ ಊರಿನ ಕನ್ನಡಸಂಘದಲ್ಲಿ ಸಾಹಿತ್ಯಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದರಂತೆ. ಹೆಚ್ಚುಹೆಚ್ಚು ಜನ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು ಎಲ್ಲರನ್ನೂ ಉತ್ತೇಜಿಸಿದ್ದರಂತೆ (ಪ್ರೀತಿಯಿಂದ ಒತ್ತಾಯಿಸಿದ್ದರು ಅಂತಿಟ್ಕೊಳ್ಳಿ). ಅದಕ್ಕೆ ನನ್ನ ಸ್ನೇಹಿತ ಭರ್ಜರಿ ತಯಾರಿ ನಡೆಸಿದ್ದರು. ‘ಹಳಗನ್ನಡದ ಕಾವ್ಯವಾಚನ ಮಾಡಬೇಕೆಂಬ ಉಮೇದು ಬಂದಿದೆ. ನಿಮ್ಮಿಂದ ನೆರವು ಸಿಗಬಹುದೆಂದು ಊಹಿಸಿ ನಾನೂ ಹೆಸರು ಕೊಟ್ಟಿದ್ದೇನೆ’ ಎಂದು ಪತ್ರದಲ್ಲಿ ಸೇರಿಸಿದ್ದರು. ನನ್ನತ್ರ ಹಳಗನ್ನಡ ಕಾವ್ಯ ಸಿಕ್ಕೀತೆಂದು ಅವರಿಗೇಕೆ ಅನಿಸಿತೋ. ನಿಜಕ್ಕೂ ನನ್ನ ಬಳಿ ಅಂಥ ಪುಸ್ತಕಗಳಾವುವೂ ಇಲ್ಲ. ಆದರೆ ಅವರ ಉತ್ಸಾಹಭಂಗ ಮಾಡುವ ಮನಸ್ಸಾಗಲಿಲ್ಲ. ‘ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ಇದ್ದ ಕೆಲವು ಪದ್ಯಗಳು ಬಹುಶಃ ಹಳಗನ್ನಡ ಕ್ಯಾಟೆಗರಿಗೆ ಸೇರುವಂಥವು; ಅವುಗಳ ಸಾಲುಗಳೇನಾದ್ರೂ ಸರಿಯಾಗಿ ನೆನಪಿಗೆ ಬಂದರೆ, ಅಥವಾ ಇಂಟರ್ನೆಟ್ನಲ್ಲಿ ಸಿಕ್ಕಿದ್ರೆ ಇಮೇಲ್ ಮಾಡ್ತೇನೆ’ ಎಂದು ಉತ್ತರ ಬರೆದೆ. ತತ್ಕ್ಷಣಕ್ಕೆ ಹೊಳೆದದ್ದು ಸೋಮೇಶ್ವರ ಶತಕದಿಂದಾಯ್ದ ಪದ್ಯಗಳು. ಹಾಗೆಯೇ ‘ಲೋಹಿತಾಶ್ವನ ಸಾವು’ ಎಂಬ ಪದ್ಯ. ಅವೆರಡೂ ನಮಗೆ ಐದನೇ ತರಗತಿಯ ಪಠ್ಯದಲ್ಲಿ ಇದ್ದವು. ಸೋಮೇಶ್ವರ ಶತಕದ ಪದ್ಯಗಳು ಇಂಟರ್ನೆಟ್ನಲ್ಲಿ ಸುಲಭವಾಗೇ ಸಿಕ್ಕಿದವು. ‘ಪ್ರಜೆಯಂ ಪಾಲಿಸಬಲ್ಲೊಡಾತನರಸಂ...’, ‘ಉಡುರಾಜಂ ಕಳೆಗುಂದಿ ಪೆರ್ಚದಿಹನೆ...’, ಮತ್ತು ‘ರವಿಯಾಕಾಶಕೆ ಭೂಷಣಂ...’ ಮುಂತಾದ ಚೌಪದಿಗಳಿಗಂತೂ ಪ್ರತಿಯೊಂದು ಪದದ ಅರ್ಥವಿವರಣೆಯೂ ಇತ್ತು. ಕಾವ್ಯವಾಚನ ಕಾರ್ಯಕ್ರಮಕ್ಕೆ ಇದು ಧಾರಾಳವಾಯ್ತು. ಅಲ್ಲದೇ ಸೋಮೇಶ್ವರ ಶತಕ ಬರೆದ ಕವಿಯ ಬಗ್ಗೆಯೂ ನನ್ನ ಸ್ನೇಹಿತರಿಗೆ ಹೆಮ್ಮೆಯಿಂದ ತಿಳಿಸಬಹುದು ಎಂದುಕೊಂಡೆ. ‘ಸದ್ಯಕ್ಕೆ ಇದನ್ನು ನೋಡಿಟ್ಟುಕೊಳ್ಳಿ. ನಿಮಗೆ ವಾಚನಕ್ಕೆ ಸರಳವಾಗಿ ಅನುಕೂಲಕರವಾಗಿ ಇದೆ. ಅರ್ಥವಿವರಣೆಯೂ ಇದೆ. ಆದರೂ, ಲೋಹಿತಾಶ್ವನ ಸಾವು ಪದ್ಯವನ್ನು ಹೇಗಾದರೂ ಸಂಗ್ರಹಿಸಿ ನಿಮಗೆ ಕಳಿಸಿಕೊಡಬೇಕೆಂದೇ ನನಗೆ ಆಸೆ ಇರುವುದು. ನಿಮ್ಮ ಕಾರ್ಯಕ್ರಮದಲ್ಲಿ ನೀವು ಅದನ್ನೇನಾದ್ರೂ ವಾಚಿಸಿ ವ್ಯಾಖ್ಯಾನಿಸಿದ್ದೇ ಆದರೆ ಭಾರೀ ಮೆಚ್ಚುಗೆ ಗಳಿಸ್ತೀರಿ. ಒಂದೆರಡು ದಿನ ಕಾಲಾವಕಾಶ ಕೊಡಿ, ಹುಡುಕುತ್ತೇನೆ’ ಎಂದು ಅವರಿಗೆ ಪತ್ರಿಸಿದೆ. ‘ಲೋಹಿತಾಶ್ವನ ಸಾವು’ ಒಂದು ಅವಿಸ್ಮರಣೀಯ ಪದ್ಯ. ಕರುಳು ಕಿತ್ತುಬರುವಂತೆ ವಿಷಾದ ಮಡುಗಟ್ಟುವ ಪದ್ಯ. ನಾನು ಕಲಿತ ಏಕೋಪಾಧ್ಯಾಯ ಏಕಕೊಠಡಿಯ ಪ್ರಾಥಮಿಕ ಶಾಲೆಯಲ್ಲಿ, ಇಡೀ ಶಾಲೆಯೇ ಬಳಬಳನೆ ಕಣ್ಣೀರುಗರೆಯುತ್ತಿದ್ದ ಪದ್ಯಗಳೆಂದರೆ ಮೂರನೇ ತರಗತಿಯ ಪಠ್ಯದಲ್ಲಿದ್ದ ‘ಪುಣ್ಯಕೋಟಿ’ ಮತ್ತು ಐದನೇ ತರಗತಿಯ ಪಠ್ಯದಲ್ಲಿದ್ದ ‘ಲೋಹಿತಾಶ್ವನ ಸಾವು’. ಏಕೋಪಾಧ್ಯಾಯ ಏಕಕೊಠಡಿಯ ಶಾಲೆಯಾದ್ದರಿಂದ, ಆ ಪದ್ಯಗಳನ್ನು ಮಾಸ್ತರರು ಕಥೆಯಂತೆ ಬಣ್ಣಿಸುತ್ತಿದ್ದದ್ದನ್ನು ನಾವೆಲ್ಲ ಐದೈದು ವರ್ಷ ಕೇಳಿಸಿಕೊಂಡು ಕಣ್ಣೀರು ಸುರಿಸಿದ್ದೇವೆ. ಪುಣ್ಯಕೋಟಿಯದಾದರೂ ಸುಖಾಂತ್ಯ, ಆದರೆ ಲೋಹಿತಾಶ್ವ ಸತ್ತಾಗಿನ ಚಂದ್ರಮತಿಯ ಸಂಕಟವಂತೂ ವರ್ಣನಾತೀತ. ಈಗಲೂ ನೆನೆಸಿಕೊಂಡರೆ ಮನಸ್ಸು ಮಮ್ಮಲಮರುಗುತ್ತದೆ. ‘ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ...’ ಎಂದು ಶುರುವಾಗುವ ಸಾಲುಗಳಿಂದ ಮೈಝುಮ್ಮೆನ್ನುತ್ತದೆ. ಅದು ನೆನಪುಳಿಯುವುದಕ್ಕೆ ಇನ್ನೊಂದು ಕಾರಣವೂ ಇದೆ. ಚಿಕ್ಕಂದಿನಲ್ಲಿ ಅಂತ್ಯಾಕ್ಷರಿ ಆಡುವಾಗ ನಾವು ಚಿತ್ರೇತರ ಗೀತೆಗಳನ್ನೂ ಸೇರಿಸಿಕೊಳ್ತಿದ್ವಿ. ‘ತ’ ಅಕ್ಷರ ಬಂದಾಗ ಮೊದಲು ನೆನಪಾಗ್ತಿದ್ದದ್ದು ಅದೇ ಪದ್ಯ. ಎಷ್ಟೆಂದರೂ ಶಾಲೆಯಲ್ಲಿ ಕಂಠಪಾಠ ಮಾಡಿದ್ದಲ್ವಾ? ಆದರೆ ಈಗ ಸರಿಯಾಗಿ ನೆನಪಿಗೆ ಬರ್ತಾ ಇಲ್ಲ! ಅರ್ಧಂಬರ್ಧವಾಗಿ, ತಪ್ಪುತಪ್ಪಾಗಿ ಬರೆದು ಕಳಿಸಿಕೊಡೋದು ತರವಲ್ಲ. ಅದು ಪದ್ಯಕ್ಕೆ, ಕವಿಗೆ ಅವಮಾನ. ಏನು ಮಾಡಲಿ? ಪದ್ಯದ ಸರಿಯಾದ ಸಾಹಿತ್ಯ ದೊರಕಿಸಿಕೊಳ್ಳುವ ಬಗೆಯೆಂತು? ಆಗ ನೆನಪಾದವರೇ ಜೆ.ಕೆ.ಮೋಹನ್ ರಾವ್ ಎಂಬೊಬ್ಬ ಹಿರಿಯ ಅಮೆರಿಕನ್ನಡಿಗರು. ಅವರು ಇಲ್ಲೇ ವಾಷಿಂಗ್ಟನ್ ಪ್ರದೇಶದಲ್ಲಿರುವವರು. ಒಂದೆರಡು ಸರ್ತಿ ಕನ್ನಡಸಂಘದಲ್ಲಿ ಭೇಟಿಯಾಗಿದ್ದೇನೆ. ಅವರೊಬ್ಬ ಕನ್ನಡ ಸಾಹಿತ್ಯದ ಹೈ-ಟೆಕ್ ಅಭಿಮಾನಿ ಎಂದೂ ಕೇಳ್ಪಟ್ಟಿದ್ದೇನೆ. ಹೈ-ಟೆಕ್ ಏಕೆಂದರೆ ಕನ್ನಡದ ಕೆಲವು ಹಳೆಯ ಗ್ರಂಥಗಳನ್ನು ಅವರು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಅವರತ್ರ ‘ಲೋಹಿತಾಶ್ವನ ಸಾವು’ ಸಿಕ್ಕರೂ ಸಿಗಬಹುದು. ಒಮ್ಮೆ ಫೋನಾಯಿಸಿ ಕೇಳಲಿಕ್ಕೇನೂ ಅಡ್ಡಿಯಿಲ್ಲವಲ್ಲ. ಆ ಪದ್ಯವು ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಕೃತಿಯಲ್ಲಿ ಬರುತ್ತದೆ ಎನ್ನುವ ಪ್ರಾಥಮಿಕ ಮಾಹಿತಿಯನ್ನು ಆಗಲೇ ಗುರುತುಮಾಡಿಟ್ಟಿದ್ದೆ. ಸ್ವಲ್ಪ ಅಳುಕುತ್ತಲೇ ದೂರವಾಣಿ ಕರೆಮಾಡಿ ‘ರಾಘವಾಂಕನ ಹರಿಶ್ಚಂದ್ರ ಕಾವ್ಯದ ಡಿಜಿಟಲ್ ಪ್ರತಿ ನಿಮ್ಮ ಸಂಗ್ರಹದಲ್ಲಿ ಇದೆಯೇ?’ ಎಂದು ಕೇಳಿದೆ. ‘ಖಂಡಿತವಾಗಿಯೂ ಇದೆ, ಈಗಲೇ ಕಳಿಸಿಕೊಡ್ತೇನೆ’ ಮೋಹನರಾಯರ ಉತ್ತರ. ಅದಾದ ಒಂದು ನಿಮಿಷದೊಳಗೆ ನನ್ನ ಇಮೇಲ್ ಇನ್ಬಾಕ್ಸ್ನಲ್ಲಿ ಹರಿಶ್ಚಂದ್ರ ಕಾವ್ಯ ಪಿಡಿಎಫ್ ಕಡತ ಪ್ರತ್ಯಕ್ಷ. ಇಂಟರ್ನೆಟ್ಟನ್ನು ಇನ್ವೆಂಟಿಸಿದ ಟಿಮ್ ಬರ್ನರ್ಸ್ಗೆ ಜೈ ಹೋ! ಖುಷಿಯಿಂದಲೇ ಪಿಡಿಎಫ್ ತೆರೆದೆ. ಸುಮಾರು ೨೦೦ ಪುಟಗಳ ಗ್ರಂಥ. ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೩೧ರಲ್ಲಿ ಪ್ರಕಟವಾದದ್ದು. ಬಿ.ಎಂ.ಶ್ರೀಕಂಠಯ್ಯನವರ ಪ್ರಧಾನ ಸಂಪಾದಕತ್ವದಲ್ಲಿ ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳು ಸಂಪಾದಿಸಿದ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಸಂಗ್ರಹ. ಮೊದಲ ಐವತ್ತು ಪುಟಗಳಲ್ಲಿ ಪೀಠಿಕೆ, ಕವಿ-ಕಾವ್ಯ ಪರಿಚಯ, ರಾಘವಾಂಕನ ಗುಣಗಾನ ಇತ್ಯಾದಿ. ರಸವತ್ತಾದ ಕಥನಕ್ರಮ, ಸ್ಫುಟವಾದ ಪಾತ್ರಪ್ರದರ್ಶನ, ಸಹಜತೆಯುಳ್ಳ ಸಂಭಾಷಣೆ, ಭಾವಪ್ರಪಂಚ ಬಾಹ್ಯಪ್ರಪಂಚಗಳ ಖಚಿತವಾದ ವರ್ಣನೆಗಳು ಹೇಗೆ ಈ ಕಾವ್ಯವನ್ನು ಕನ್ನಡದ ಮೇರುಕೃತಿಗಳ ಸಾಲಲ್ಲಿ ನಿಲ್ಲಿಸಿವೆಯೆಂಬ ಸೋದಾಹರಣ ವಿವರಗಳು. ಅದಾದಮೇಲೆ ಒಂಬತ್ತು ಕಾಂಡಗಳಿರುವ ಹರಿಶ್ಚಂದ್ರ ಕಾವ್ಯ ಶುರುವಾಗುತ್ತದೆ, ‘ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು...’ ಎಂದು ರಾಘವಾಂಕ ತನ್ನ ಅಧಿದೇವತೆ ಹಂಪೆಯ ವಿರೂಪಾಕ್ಷನನ್ನು ಸ್ತುತಿಸುವುದರ ಮೂಲಕ. ಒಂದೊಂದೇ ಪುಟವನ್ನು ತಿರುವುತ್ತ ಹೋದೆ. ಎಂಟನೇ ಕಾಂಡದಲ್ಲಿ ಸಿಕ್ತು ನೋಡಿ ನಿಧಿ! ‘ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದಿದೇಕೆ ತಳುವಿದನೆನ್ನ ಕಂದನೆಂದೆನುತ ಸುಯ್ಯುತ್ತ ಮರುಗುತ್ತ ಬಸಿರಂ ಹೊಸೆದು ಕೊನೆವೆರಳ ಮುರಿದುಕೊಳುತ...’ ಹೌದು ಇವೇ ನಮ್ಮ ಪಠ್ಯದಲ್ಲಿದ್ದ ಸಾಲುಗಳು! ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಓದುತ್ತಿದ್ದಂತೆ ಕಾಲಚಕ್ರದಲ್ಲಿ ಹಿಂದಕ್ಕೆ ಸರಿದು ಐದನೇ ತರಗತಿಯಲ್ಲಿ ಮಾಸ್ತರರ ವರ್ಣನೆ ಕೇಳುತ್ತ ಕುಳಿತ ಅನುಭವ. ಕಣ್ಣುಗಳಲ್ಲಿ ಪಸೆ. ಮುಂದೆ- ‘ಅಡವಿಯೊಳು ಹೊಲಬುಗೆಟ್ಟನೊ ಗಿಡುವಿನೊಳಗೆ ಹುಲಿ ಹಿಡಿದುದೋ ಕಳ್ಳರೊಯ್ದರೊ ಭೂತಸಂಕುಲಂ ಹೊಡೆದುವೋ ನೀರೊಳದ್ದನೊ ಮರದ ಕೊಂಬೇರಿ ಬಿದ್ದನೋ ಫಣಿ ತಿಂದುದೋ ಕಡುಹಸಿದು ನಡೆಗೆಟ್ಟು ನಿಂದನೋ...’ ಮಗನಿಗೆ ಏನಾಗಿರಬಹುದೆಂದು ಪರಿಪರಿಯ ಯೋಚನೆ ಚಂದ್ರಮತಿಗೆ. ‘ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು ನಿಂದರಂ ಲೋಹಿತಾಶ್ವಾ ಎಂದು ಗಾಳಿಗಿರಿಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗರುವಿನಂತೆ’ ಚಿಂತೆಯಿಂದ ಅವಳಿಗೆ ಹುಚ್ಚು ಹಿಡಿದಂತಾಗಿದೆ. ಅಷ್ಟೊತ್ತಿಗೆ ಒಬ್ಬ ಹುಡುಗ ಬಂದು ‘ನಿನ್ನ ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು’ ಹೇಳುತ್ತಾನೆ. ‘ಏಕೆ ಕಚ್ಚಿತ್ತಾವ ಕಡೆ ಯಾವ ಹೊಲನಕ್ಕಟಾ ಕುಮಾರಂ...’ ಹುಲ್ಲು ತರಲಿಕ್ಕೆ ಬೇರೆ ಹುಡುಗರೂ ಹೋಗಿದ್ರು, ಆದರೂ ತನ್ನ ಮಗನಿಗೇ ಏಕೆ ಹಾವು ಕಚ್ಚಬೇಕು? ಚಂದ್ರಮತಿಯ ಪ್ರಶ್ನೆ. ‘ಮರದ ಕೆಲದ ಹುತ್ತಿನ ಹುಲ್ಲ ಕೊಯ್ಯೆ ಕೈಯ ನೂಕಿ ಫಣಿಯಗಿಯೆ ಕೆಡೆದಂ’ ಎನ್ನುತ್ತಾನೆ ಆ ಹುಡುಗ. ‘ಬೇಕಾದಡೀಗ ಹೋಗಲ್ಲದಿರ್ದಡೆ ಬಳಿಕ ನೇಕ ಭಲ್ಲುಕ ಜಂಬುಕಂ ಘೂಕ ವೃಕಗಳೆಳೆಯದೆ ಬಿಡವು’ ಎಂದು ಎಚ್ಚರಿಸುತ್ತಾನೆ. ಅಬ್ಬಾ ಎಂಥ ದಾರುಣ ಸ್ಥಿತಿ ಚಂದ್ರಮತಿಯದು! ‘ಲೋಹಿತಾಶ್ವನ ಸಾವು’ ಪದ್ಯದ ಪೂರ್ಣಸಾಹಿತ್ಯವೇನೋ ನನಗೆ ಸಿಕ್ಕಿತು. ಆದರೆ ಜತೆಯಲ್ಲಿ ಒಂದು ಅದ್ಭುತ ಸತ್ಯವೂ ನನಗವತ್ತು ಮನವರಿಕೆಯಾಯ್ತು. ಅದರಿಂದ ಸ್ವಲ್ಪ ದಿಗಿಲೂ ಆಯ್ತು. ಅದೇನು ಗೊತ್ತೇ? ನಮಗೆ ಪಠ್ಯದಲ್ಲಿ ಇದ್ದದ್ದು ಅಲ್ಲಿನ ನಾಲ್ಕು ಷಟ್ಪದಿಗಳು ಮಾತ್ರ. ಇಡೀ ಪುಸ್ತಕದಲ್ಲಿ ನನಗೆ ಅವು ಮಾತ್ರ ಧೂಳೊರೆಸಿದ ಗಾಜಿನಂತೆ ಸುಸ್ಪಷ್ಟವಾಗಿ ಕಂಡುಬಂದದ್ದು. ಒಂದೊಂದು ಪದವನ್ನೂ ಅರ್ಥೈಸಬಲ್ಲೆ ಎಂಬ ವಿಶ್ವಾಸ ಮೂಡಿದ್ದು. ಮಿಕ್ಕ ಭಾಗವನ್ನು ಓದಿ ಅರಗಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಆಗಲೇ ಇಲ್ಲ. ತುಂಬಾ ಕಷ್ಟವಿದೆ ಅನ್ನಿಸ್ತು. ಅಷ್ಟು ಕಷ್ಟದ ಪದ್ಯಗಳನ್ನು ಅರ್ಥೈಸುವುದು ಐದನೇ ತರಗತಿಯಲ್ಲಿ ಸಾಧ್ಯವಾದದ್ದು ಈಗ ಆಗುತ್ತಿಲ್ಲ! ‘ಹಸಿ ಗೋಡೆಯಲ್ಲಿ ಹರಳು ನೆಟ್ಟಂತೆ’ ಎಂಬ ನಾಣ್ಣುಡಿ ಎಷ್ಟು ಸತ್ಯ ಅಲ್ಲವೇ? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20240731
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.