Episodes

Thursday Oct 11, 2012
Hindola Highlights
Thursday Oct 11, 2012
Thursday Oct 11, 2012
ದಿನಾಂಕ 12 ಅಕ್ಟೋಬರ್ 2012
‘ಹಿಂದೋಳ’ ಕಲ್ಪ- ಇದು ಹಂಸತೂಲಿಕಾತಲ್ಪ!
* ಶ್ರೀವತ್ಸ ಜೋಶಿ
ಸಂಗೀತವನ್ನು ಕೇಳುತ್ತ ಕೇಳುತ್ತ ಅದರಲ್ಲಿನ ರಾಗವನ್ನು ಗುರುತಿಸುವುದು, ಅದರ ಮೂಲಕ ಕಲಿಕೆಯನ್ನು ಸುಲಭವಾಗಿಸುವುದು ಈ ರಾಗರಸಾಯನ ಮಾಲಿಕೆಯ ಉದ್ದೇಶ. ರಾಗವನ್ನು ಗುರುತಿಸುವುದು ಎಂದರೆ ರಾಗವನ್ನು ಕಣ್ಮುಂದೆ ತಂದುಕೊಳ್ಳಲಿಕ್ಕಾಗುತ್ತದೆಯೇ? ಅದಕ್ಕೆ ಅಂದದ ಹುಡುಗಿಯ ರೂಪವೋ, ಹಸನ್ಮುಖಿ ಪುರುಷನ ಆಕರ್ಷಕ ಮೈಕಟ್ಟೋ ಇರುತ್ತದೆಯೇ? ಬಹುಶಃ ಯಾವುದೇ ಒಂದು ರಾಗದ ಜಾಡನ್ನೇ ಹಿಡಿದು ಅದರದೇ ಧ್ಯಾನದಲ್ಲಿದ್ದರೆ ಒಂದೊಮ್ಮೆ ಆ ರಾಗ‘ಪುರುಷ’ (ಅಥವಾ ರಾಗ‘ಕನ್ಯೆ’) ರೂಪ ನಮ್ಮ ಮನಸ್ಸಿನಲ್ಲಿ ಮೂಡಲೂಬಹುದು. ನಮ್ಮಂಥ ಸಾಮಾನ್ಯರಿಗಲ್ಲದಿದ್ದರೂ ಸಂಗೀತದಲ್ಲಿ ಸಾಧನೆಗೈದ ಕಲಾವಿದರಿಗಂತೂ ಇಂತಹ ಸಾಕ್ಷಾತ್ಕಾರ ಖಂಡಿತ ಆಗಬಹುದು. ಇವತ್ತು ರಾಗರಸಾಯನ ಮಾಲಿಕೆಯಲ್ಲಿ ‘ಹಿಂದೋಳ’ರಾಗವನ್ನು ಎತ್ತಿಕೊಂಡಾಗ ಹೀಗೊಂದು ಯೋಚನೆ ಬಂತು. ಹಿಂದೋಳ ರಾಗಕ್ಕೆ ಯಾವ ರೂಪವಿರಬಹುದು? ಇಷ್ಟು ಮಧುರವಾದ, ಕೇಳಿದಷ್ಟೂ ಮತ್ತಷ್ಟು ಕೇಳಬೇಕೆನಿಸುವ ರಾಗ ನಮ್ಮ ಮೇಲೆ ಇಷ್ಟೊಂದು ಮೋಡಿ ಮಾಡಬೇಕಿದ್ದರೆ ಅದೆಷ್ಟು ಸ್ಫುರದ್ರೂಪಿಯಿರಬಹುದು? ಇರಲಿ, ‘ಹಿಂದೋಳ’ದ ಕಿರುಪರಿಚಯ ಮಾಡಿಕೊಳ್ಳುವುದಾದರೆ, ಇದು ಪಂಚಸ್ವರಗಳ ರಾಗ. ಇದರಲ್ಲಿರುವ ಸ್ವರಗಳು: ಷಡ್ಜ, ಸಾಧಾರಣ ಗಾಂಧಾರ, ಶುದ್ಧ ಮಧ್ಯಮ, ಶುದ್ಧ ಧೈವತ, ಕೈಷಿಕಿ ನಿಷಾಧ. ಇದರಲ್ಲಿ ಮಧ್ಯಮವು ಈ ರಾಗಕ್ಕೆ ಸೊಬಗನ್ನು ನೀಡುವ ಸ್ವರವಾದರೆ ಧೈವತ ಮತ್ತು ನಿಷಾಧಗಳು ಈ ರಾಗದ ‘ಜೀವಸ್ವರ’ಗಳಂತೆ. “ಗೌರೀ ಹಿಂದೋಳ ದ್ಯುತಿ ಹೀರ ಮಣಿಮಯ ಆಭರಣೇ..." ಎಂದಿದ್ದಾರೆ ದೀಕ್ಷಿತರು ‘ನೀರಜಾಕ್ಷಿ ಕಾಮಾಕ್ಷಿ...’ ಎಂಬ ಕೃತಿಯಲ್ಲಿ. ಹಿಂದೋಳ ರಾಗವನ್ನು ಆಲಿಸುತ್ತಿದ್ದರೆ ಉಯ್ಯಾಲೆಯಲ್ಲಿ ತೂಗಿದಂಥ ಅನುಭವವಾಗುತ್ತದಂತೆ ರಸಹೃದಯದ ಶ್ರೋತೃಗಳಿಗೆ. ಅದರಿಂದಾಗಿಯೇ (ಹಿಂದೋಳ ಪದಮೂಲ- ‘ಡೋಲ’ ಧಾತು - ತೂಗು ಎಂಬ ಅರ್ಥ) ರಾಗಕ್ಕೆ ಆ ಹೆಸರು ಬಂದಿರುವುದು ಎನ್ನುತ್ತಾರೆ ಸಂಗೀತವಿದ್ವಾಂಸರು. ತೊಟ್ಟಿಲಲ್ಲಿ ತೂಗಿದಾಗ ನಿದ್ದೆ ಬರುವಂತೆ ಈ ರಾಗ ಕೇಳಿದರೆ ನಿದ್ದೆ ಬರುತ್ತದೆಂದು ಅರ್ಥವಲ್ಲ. ಉಯ್ಯಾಲೆಯಲ್ಲಿ ಜೀಕಿದಂತೆ ರಾಗದ ಸ್ವರಸಂಚಾರ. ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಹಿಂದೋಳ ರಾಗಕ್ಕೆ ಸಮಾನವಾದದ್ದು ‘ಮಾಲಕೌಂಸ್’ ರಾಗ (ಹಿಂದುಸ್ಥಾನಿಯಲ್ಲಿ ‘ಹಿಂದೋಳ್’ ಎಂಬ ಹೆಸರಿನದೇ ಬೇರೆಯೇ ಒಂದು ರಾಗ ಇದೆಯಾದರೂ ಅದಕ್ಕೂ ಮಾಲಕೌಂಸ್/ಹಿಂದೋಳ ರಾಗಗಳಿಗೂ ಯಾವ ಸಂಬಂಧವೂ ಇಲ್ಲ). ಹಿಂದೋಳ/ಮಾಲಕೌಂಸ್ಗಳ ಆರೋಹಣ ಮತ್ತು ಅವರೋಹಣ ಸಮಮಿತಿ(symmetrical) ಆಗಿರುವುದರಿಂದ ರಾಗಕ್ಕೆ ಮತ್ತಷ್ಟು ಸೌಂದರ್ಯ.
ಭಾಗ-1 : ಭಜನಾವಳಿ
ಪುರಂದರ ದಾಸರ ಒಂದು ಜನಪ್ರಿಯ ಕೀರ್ತನೆ "ಯಾರೇ ರಂಗನ ಯಾರೇ ಕೃಷ್ಣನ ಕರೆಯಬಂದವರು..." ಶ್ರೀಮತಿ ಸುಂದರವಲ್ಲಿ ಅವರ ಧ್ವನಿಯಲ್ಲಿ. ಇದು ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮದಿಂದ ಆಯ್ದುಕೊಂಡಿರುವ ಭಾಗ. [youtube=http://www.youtube.com/watch?v=1cL3sG8ap6o] *** *** *** *** *** *** *** ಬೆಳ್ಳೂರು ಸಹೋದರಿಯರು ಹಾಡಿರುವ ಭಕ್ತಿಗೀತೆ, “ಹರಿ ಸರ್ವೋತ್ತಮ ವಾಯು ಜೀವೋತ್ತಮ..." ರಾಜ ಎಸ್ ಗುರುರಾಜಾಚಾರ್ಯ ಅವರ ರಚನೆಯನ್ನು ಸಂಗೀತಕ್ಕೆ ಅಳವಡಿಸಿದವರು ಎಂ.ರಂಗರಾವ್ [youtube=http://www.youtube.com/watch?v=UubhZaJ_Ty4] *** *** *** *** *** *** *** ಮುಂದಿನ ಭಕ್ತಿಗೀತೆ ವಿದ್ಯಾಭೂಷಣ ಅವರ ಅತ್ಯಂತ ಜನಪ್ರಿಯ ಧ್ವನಿಸುರುಳಿಯಿಂದ ಆಯ್ದುಕೊಂಡಿರುವ "ಮಧುಕರ ವೃತ್ತಿ ಎನ್ನದು ಬಲು ಚೆನ್ನದು..." ಪುರಂದರದಾಸರ ರಚನೆ, ಎಚ್.ಕೆ.ನಾರಾಯಣ ಅವರ ಸಂಗೀತನಿರ್ದೇಶನ. ಅಲ್ಲಿಇಲ್ಲಿ ಸಿಗುವ ಮಾಹಿತಿಯನ್ನು ಸಂಗ್ರಹಿಸಿ ಅದಕ್ಕೊಂದು ರೂಪುಕೊಡುವ ಈ ರಾಗರಸಾಯನವೂ ಒಂಥರದಲ್ಲಿ ’ಮಧುಕರ ವೃತ್ತಿ’ಯೆಂದೇ ನಾನಂದುಕೊಂಡಿದ್ದೇನೆ. [youtube=http://www.youtube.com/watch?v=TQqN_ttdV0c] *** *** *** *** *** *** *** ಪುತ್ತೂರು ನರಸಿಂಹ ನಾಯಕ್ ಅವರ ಧ್ವನಿಯಲ್ಲಿ ದಾಸರ ಕೃತಿ “ಅನುದಿನ ನಿನ್ನ ನೆನೆದು ಮನವೂ..." [youtube=http://www.youtube.com/watch?v=TQE9aUm40Fg] *** *** *** *** *** *** *** ಕಾರ್ಯಕ್ರಮದ ಈ ಭಾಗದ ಕೊನೆಯಲ್ಲಿ ಪಂಡಿತ್ ಭೀಮಸೇನ ಜೋಶಿ ಅವರು ಹಾಡಿರುವ ಮರಾಠಿ ಅಭಂಗ, ಸಂತ ತುಕಾರಾಮ ವಿರಚಿತ “ಅಣುರೇಣು ಯಾ ಥೋಕಡಾ ತುಕ ಆಕಾಶಾರೇವಢಾ..." [youtube=http://www.youtube.com/watch?v=MjEPzIj73QQ] *** *** *** *** *** *** *** ಮುಖಪುಟಕ್ಕೆಭಾಗ-2 : ಕನ್ನಡ ಚಿತ್ರಗೀತೆಗಳು
ಮೊದಲಿಗೆ ಕೇಳೋಣ ‘ಭಕ್ತಕುಂಬಾರ’ ಚಿತ್ರದ ಜನಪ್ರಿಯ ಗೀತೆಗಳಲ್ಲೊಂದಾದ “ಮಾನವ ಮೂಳೆ ಮಾಂಸದ ತಡಿಕೆ..." ಹುಣಸೂರು ಕೃಷ್ಣಮೂರ್ತಿಯವರ ಸಾಹಿತ್ಯಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ. ಡಾ.ರಾಜಕುಮಾರ್ ’ಶರೀರ’ಕ್ಕೆ ಡಾ.ಪಿ.ಬಿ.ಶ್ರೀನಿವಾಸ್ ’ಶಾರೀರ’- “ಪರತತ್ತ್ವವನು ಬಲ್ಲ ಪಂಡಿತನು ನಾನಲ್ಲ... ಹರಿನಾಮವೊಂದುಳಿದು ನನಗೇನೂ ತಿಳಿದಿಲ್ಲ..." [youtube=http://www.youtube.com/watch?v=jykgDmcLQw8] *** *** *** *** *** *** *** ಎರಡನೆಯದು ಇನ್ನೂಸ್ವಲ್ಪ ಹಳೆಯ ಚಿತ್ರಗೀತೆ, ಕಪ್ಪುಬಿಳುವು ಚಿತ್ರಗಳ ಜಮಾನಾದ್ದು. ‘ನಾಂದಿ’ ಚಿತ್ರದ “ಚಂದ್ರಮುಖಿ ಪ್ರಾಣಸಖೀ ಚತುರೇ ನೀ ಕೇಳೇ" ಆರ್. ಎನ್.ಜಯಗೋಪಾಲ್ ಅವರ ರಚನೆಯನ್ನು ವಿಜಯಭಾಸ್ಕರ್ ಸಂಗೀತನಿರ್ದೇಶನದಲ್ಲಿ ಹಾಡಿದವರು ಎಸ್.ಜಾನಕಿ ಮತ್ತು ಬೆಂಗಳೂರು ಲತಾ. ಹೆಣ್ಣಿನ ಶ್ರೇಷ್ಠತೆಯನ್ನು ಸರಳ ಶಬ್ದಗಳಲ್ಲಿ ಮನಮುಟ್ಟುವಂತೆ ಬಣ್ಣಿಸಿರುವ ಈ ಹಾಡು ಚಿರಕಾಲ ನೆನಪುಳಿವ ಕನ್ನಡ ಚಿತ್ರಗೀತೆಗಳ ಸಾಲಿನದು. ದುರ್ದೈವವೆಂದರೆ ಇದರ ಒಬ್ಬ ಗಾಯಕಿ ಬೆಂಗಳೂರು ಲತಾ ಹೆಚ್ಚು ಅವಕಾಶಗಳನ್ನು ಗಳಿಸಲೇ ಇಲ್ಲ, ಮಾತ್ರವಲ್ಲ ಈಗ ಅವರು ಈ ಲೋಕದಲ್ಲಿಯೇ ಇಲ್ಲ. [youtube=http://www.youtube.com/watch?v=4zvCXGCp2aE] *** *** *** *** *** *** *** ಶ್ರಾವಣ ಬಂತು ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ವಾಣಿ ಜಯರಾಂ ಹಾಡಿರುವ “ಬಾನಿನ ಅಂಚಿಂದ ಬಂದೆ..." ಹಿಂದೋಳ ರಾಗವನ್ನು ಆಧರಿಸಿದ ಒಂದು ಸುಂದರ ಗೀತೆ. ಚಿ.ಉದಯಶಂಕರ್ ಅವರ ಸಾಹಿತ್ಯಕ್ಕೆ ಎಂ.ರಂಗರಾವ್ ಸಂಗೀತ. [youtube=http://www.youtube.com/watch?v=15cQsPmdVFo] *** *** *** *** *** *** *** ಇನ್ನೊಂದು ವಿಶಿಷ್ಟ ಚಿತ್ರಗೀತೆ, ಹಿಂದೋಳ ರಾಗರಸಾಯನದಲ್ಲಿ ಸೇರಲೇಬೇಕಾದ್ದು ಇದೆ, “ಗಡಿಬಿಡಿ ಗಂಡ" ಚಿತ್ರದಲ್ಲಿ ಶಾಸ್ತ್ರೀಯ ಸಂಗೀತದ ಪೈಪೋಟಿ ಸನ್ನಿವೇಶದ “ನೀನು ನೀನೇ ಇಲ್ಲಿ ನಾನು ನಾನೇ..." ತಾಯ್ ನಾಗೇಶ್ ಅಭಿನಯದ ಸಂಗೀತವಿದ್ವಾಂಸನೊಬ್ಬನಿಗೆ ರವಿಚಂದ್ರನ್ ಚ್ಯಾಲೆಂಜ್ ಹಾಕಿ ಶಾಸ್ತ್ರಬದ್ಧವಾಗಿ ಹಾಡಿ ಅವನನ್ನು ಸೋಲಿಸುವ ದೃಶ್ಯ. ಹಿಂದೋಳ ರಾಗದಲ್ಲಿ ಆರಂಭವಾಗುವ ಹಾಡು ಆಮೇಲೆ ಉದಯರವಿಚಂದ್ರಿಕಾ, ಮಧ್ಯಮಾವತಿ, ಮೋಹನ ಮುಂತಾಗಿ ವಿವಿಧ ರಾಗಗಳಲ್ಲಿ ಸಂಚರಿಸುತ್ತದೆ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಗಾಯನಪ್ರತಿಭೆ ಪ್ರಜ್ವಲಿಸಿದ ಮತ್ತೊಂದು ಉದಾಹರಣೆ. ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಅವರದು. [youtube=http://www.youtube.com/watch?v=HrVZxmzsiUE] *** *** *** *** *** *** *** ಗಾಳಿಮಾತು ಚಿತ್ರಕ್ಕಾಗಿ ಎಸ್.ಜಾನಕಿ ಹಾಡಿರುವ “ನಗಿಸಲು ನೀನು ನಗುವೆನು ನಾನು...". ಚಿ.ಉದಯಶಂಕರ್ ರಚನೆಗೆ ಸ್ವರಸಂಯೋಜನೆ ರಾಜನ್-ನಾಗೇಂದ್ರ ಅವರಿಂದ. [youtube=http://www.youtube.com/watch?v=O2p-JI85Tao] *** *** *** *** *** *** *** ಸಂಗೀತ ಪ್ರಧಾನ ಚಿತ್ರ ಮಲಯ ಮಾರುತ ದಲ್ಲಿ ಹೆಚ್ಚೂಕಡಿಮೆ ಎಲ್ಲ ಹಾಡುಗಳೂ ಶಾಸ್ತ್ರೀಯ ಸಂಗೀತದ ಗಾಢತೆಯನ್ನು ಹೊಂದಿರುವಂಥವು. ಅವುಗಳ ಪೈಕಿ “ನಟನ ವಿಶಾರದ ನಟಶೇಖರ..." ಹಾಡು ಹಿಂದೋಳ ರಾಗ ಆಧಾರಿತ. ವಿಜಯಭಾಸ್ಕರ್ ಸಂಗೀತನಿರ್ದೇಶನದಲ್ಲಿ ಹಾಡಿದವರು ಕೆ.ಜೆ.ಯೇಸುದಾಸ್. ಇದು ಕಣಗಾಲ್ ಪ್ರಭಾಕರ ಶಾಸ್ತ್ರಿಯವರ ರಚನೆ. [youtube=http://www.youtube.com/watch?v=4yiIV6Fd3gQ] *** *** *** *** *** *** *** ಮುಖಪುಟಕ್ಕೆಭಾಗ-3 : ಇತರ ಭಾಷೆಗಳ ಚಿತ್ರಗೀತೆಗಳು
ಹಿಂದೋಳದ ಹಿಂದುಸ್ಥಾನಿ ರೂಪವಾದ ಮಾಲಕೌಂಸ್ ರಾಗ ಆಧರಿಸಿದ all time great ಎನಿಸಿಕೊಂಡ ಹಿಂದಿ ಚಿತ್ರಗೀತೆಗಳು ಒಂದೆರಡಿವೆ. ಮೊದಲನೆಯದು ‘ನವರಂಗ್’ ಚಿತ್ರಕ್ಕಾಗಿ ಆಶಾ ಭೋಂಸ್ಲೆ ಮತ್ತು ಮಹೇಂದ್ರಕಪೂರ್ ಹಾಡಿರುವ “ಆಧಾ ಹೈ ಚಂದ್ರಮಾ ರಾತ್ ಆಧೀ..." ಭರತ್ ವ್ಯಾಸ್ ಅವರ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಸಿ.ರಾಮಚಂದ್ರ. ಇದೇ ಹಾಡಿನ ಧಾಟಿಯಲ್ಲಿ “ಶಾರದಾ ದೇವಿಗೆ ವಂದಿಸುವೆವು ವಿದ್ಯಾಧಿದೇವತೆಗೆ ವಂದಿಸುವೆವು ನಾವು ವಂದಿಸುವೆವು..." ಎಂಬ ಭಜನೆಹಾಡನ್ನು ನಾವು ಪ್ರಾಥಮಿಕ ಶಾಲೆಯಲ್ಲಿ ಹೇಳುತ್ತಿದ್ದೆವು. [youtube=http://www.youtube.com/watch?v=aasw1WDNhgY] *** *** *** *** *** *** *** ಎರಡನೆಯದು, ಬೈಜುಬಾವ್ರಾ ಚಿತ್ರದ ಹೃದಯಸ್ಪರ್ಶಿ ಗೀತೆ, “ಮನ ತಡಪತ್ ಹರಿದರ್ಶನ ಕೋ ಆಜ್...". ಹಿಂದಿ ಚಿತ್ರಸಂಗೀತದಲ್ಲಿ ಅದೆಷ್ಟೋ ಭಜನೆ/ಭಕ್ತಿಗೀತೆಗಳು ಬಂದಿವೆ, ಆದರೆ ಈ ಹಾಡಿನ ವೈಶಿಷ್ಟ್ಯದವು ಖಂಡಿತ ಬೇರೊಂದಿಲ್ಲ. ಇದರ ಸಾಹಿತ್ಯ ಶಕೀಲ್ ಬದಾಯುನಿ. ಸಂಗೀತ ಸಂಯೋಜನೆ ನೌಷಾದ್ ಅವರದು. ಹಾಡಿದವರು ಮಹಮ್ಮದ್ ರಫಿ ಅಲ್ಲದೆ ಮತ್ತ್ಯಾರೂ ಅಲ್ಲ! ಇದೊಂದು ಅಂಶವನ್ನು ಗಮನಿಸಿದಿರಾ? ಗೀತರಚನಕಾರ ಮುಸ್ಲಿಂ; ಸಂಗೀತ ನಿರ್ದೇಶಕ ಮುಸ್ಲಿಂ; ಗಾಯಕ ಮುಸ್ಲಿಂ. ಹಾಡು ಶ್ರೀಹರಿಯ ಭಜನೆ! ಮನುಜಮತ ವಿಶ್ವಪಥ ಎಂದರೆ ಇದೇ! ಇನ್ನೂ ಒಂದು ಸ್ವಾರಸ್ಯಕರ ಸಂಗತಿಯೆಂದರೆ ಈ ಭಕ್ತಿಪರ ಗೀತೆಯನ್ನು ಹಾಡಿದ್ದಕ್ಕೆ ಒಂದು ನಯಾಪೈಸೆಯೂ ಸಂಭಾವನೆ ತೆಗೆದುಕೊಳ್ಳಲು ಮಹಮ್ಮದ್ ರಫಿ ನಿರಾಕರಿಸಿದ್ದರಂತೆ! [youtube=http://www.youtube.com/watch?v=OyLdgQinxpY] [ಖ್ಯಾತ ಹಿಂದುಸ್ಥಾನೀ ಸಂಗೀತ ಕಲಾವಿದ ರೋನು ಮುಜುಂದಾರ್ ಅವರ ಬಾನ್ಸುರಿ ವಾದನಗಲ್ಲಿ ಈ ಹಾಡನ್ನು ಇಲ್ಲಿ ಕೇಳಬಹುದು.] *** *** *** *** *** *** *** ಸೂಪರ್ಹಿಟ್ ತೆಲುಗು ಚಿತ್ರ ‘ಸಾಗರ ಸಂಗಮಂ’ ಮತ್ತು ಅದರ ಹಾಡುಗಳು ತೆಲುಗು ಬಾರದ ಸಂಗೀತರಸಿಕರನ್ನೂ ಭಾವಪರವಶವಾಗಿಸಿವೆಯೆಂದರೆ ತಪ್ಪಾಗಲಾರದು. ಸಾಗರಸಂಗಮಂ ಚಿತ್ರದಲ್ಲಿ ಎಸ್.ಜಾನಕಿ ಹಾಡಿರುವ "ಓಂ ನಮಃ ಶಿವಾಯ ಚಂದ್ರಕಳಾಧರ ಸಹೃದಯ..." ಗೀತೆ ಹಿಂದೋಳ ರಾಗಾಧಾರಿತ ಚಿತ್ರಗೀತೆಗೆ ಒಳ್ಳೆಯ ಉದಾಹರಣೆ. ವೇಟೂರಿ ಸುಂದರರಾಮಮೂರ್ತಿ ಸಾಹಿತ್ಯ, ಇಳಯರಾಜಾ ಸಂಗೀತ. ಬಹುಶಃ ಇದನ್ನು ಎಸ್.ಜಾನಕಿ ಅಲ್ಲದೇ ಬೇರೆ ಯಾರೇ ಹಾಡಿದ್ದರೂ ಇಷ್ಟು ಚೆನ್ನಾಗಿ, ಅದ್ಭುತವಾಗಿ ಮೂಡಿಬರುತ್ತಿರಲಿಲ್ಲವೋ ಏನೋ. ’ಎದೆ ತುಂಬಿ ಹಾಡಿದೆನು’ ಕಾರ್ಯಕ್ರಮದಲ್ಲಿ ಎಸ್ಪಿಬಿ ಆಗಾಗ ಹೇಳುತ್ತಿರುತ್ತಾರಲ್ಲ "ಜಾನಕಮ್ಮನ ದೈತ್ಯಪ್ರತಿಭೆಯೆದುರು ನಾವೆಲ್ಲ ಪುಟಗೋಸಿಗಳು" ಅಂತ? ಜಾನಕಮ್ಮನ ಆ ದೈತ್ಯಪ್ರತಿಭೆ ಪೂರ್ಣವಾಗಿ ಪ್ರಕಾಶಿಸುವುದು ಇಂಥ ಹಾಡುಗಳಲ್ಲೇ. ಹಾಡಿನಲ್ಲಿ ಬರುವ “ನೀ ಮೌನಮೇ... ಎಂಬ ಸಾಲನ್ನು ಗಮನಿಸಿದರೆ ಜಾನಕಮ್ಮನ ದ್ವನಿ ಸ್ವರಸಪ್ತಕದ ಒಂದು ತುದಿಯಿಂದ ಇನ್ನೊಂದು ತುದಿವರೆಗೂ ಅದುಹೇಗೆ ಲೀಲಾಜಾಲವಾಗಿ ತೂಗುತ್ತದೆ ಎಂದು ಆಶ್ಚರ್ಯವಾಗುತ್ತದೆ. ಹೌದು, ಹಿಂದೋಳ ಎಂದಮೇಲೆ ತೂಗಲೇಬೇಕು, ತೂಗಿದಂತೆ ನಮಗೆ ಭಾಸವಾಗಲೇಬೇಕು! [youtube=http://www.youtube.com/watch?v=GW7ujCbbPec] [ಈ ಚಿತ್ರದಲ್ಲಿ ನೃತ್ಯಕಲಾವಿದೆ ‘ಶೈಲಜಾ’ ಆಗಿ ಅಭಿನಯಿಸಿದವರು ಎಸ್.ಪಿ.ಶೈಲಜಾ (ಎಸ್.ಪಿ. ಬಾಲಸುಬ್ರಹ್ಮಣ್ಯಂರವರ ತಂಗಿ). ನೃತ್ಯ ಅದ್ಭುತವಾಗಿದೆ ಎಂದು ಪ್ರೇಕ್ಷಕರು ಚಪ್ಪಾಳೆತಟ್ಟುತ್ತಾರೆ, ಬೇರೆಲ್ಲ ಪತ್ರಿಕೆಗಳೂ ನಾಟ್ಯಮಯೂರಿ ಎಂದೆಲ್ಲ ಹೊಗಳಿ ಬರೆಯುತ್ತವೆ. ಬಾಲು ಎಂಬೊಬ್ಬ ವಿಮರ್ಶಕ (ಕಮಲಹಾಸನ್) ಮಾತ್ರ ಆ ನಾಟ್ಯ ತಪ್ಪುತಪ್ಪಾಗಿತ್ತು ಎಂದು ಬರೆಯುತ್ತಾನಷ್ಟೇ ಅಲ್ಲ, ಎಲ್ಲಿ ತಪ್ಪಿತ್ತು ಎಂದು ತಾನೇ ನೃತ್ಯ ಮಾಡಿ ತೋರಿಸಿ ಶೈಲಜಾ ಮುಖ ಕಪ್ಪಿಡುವಂತೆ ಮಾಡುತ್ತಾನೆ. ವಾಹ್ ಕಮಲಹಾಸನ್ ಅಂದರೆ ಏಕಮೇವಾದ್ವಿತೀಯ ಕಮಲಹಾಸನ್! ಇದೊಂದು ದೃಶ್ಯವನ್ನು ನೀವು ನೋಡಲೇಬೇಕು!] *** *** *** *** *** *** *** ಈಗ ಒಂದು ಮಧುರವಾದ ಮಲಯಾಳಂ ಚಿತ್ರಗೀತೆ.ಋತುಭೇದಮ್ ಚಿತ್ರಕ್ಕಾಗಿ ಕೆ.ಜೆ.ಯೇಸುದಾಸ್ ಹಾಡಿರುವ “ಋತು ಸಂಕ್ರಮ ಪಕ್ಷಿ ಪಾಡಿ..." ಇದು ತಕ್ಕಳಿ ಶಂಕರನಾರಾಯಣ್ ರಚನೆ, ಶ್ಯಾಮ್ ಸಂಗೀತನಿರ್ದೇಶನ. [youtube=http://www.youtube.com/watch?v=fbOeZK-fpZE] *** *** *** *** *** *** *** ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಒಂದು fast pace ತಮಿಳು ಚಿತ್ರಗೀತೆ, ಗಾಡ್ಫಾದರ್ ಚಿತ್ರಕ್ಕಾಗಿ ನರೇಶ್ ಐಯರ್, ಮಹತಿ ಮತ್ತು ಸಂಗಡಿಗರು ಹಾಡಿರುವ “ಇನ್ನಿಸೈ ವರಲರು..." [youtube=http://www.youtube.com/watch?v=3sa0ZLPspTM] *** *** *** *** *** *** *** ಮುಖಪುಟಕ್ಕೆಭಾಗ-4 : ಸಾಮಜವರಗಮನ ಸ್ಪೆಷಲ್
ತ್ಯಾಗರಾಜರು ರಚಿಸಿದ “ಸಾಮಜವರಗಮನ..." ಕೃತಿ ಹಿಂದೋಳ ರಾಗದ ಅತಿಜನಪ್ರಿಯ ಕೃತಿ ಎನ್ನುವುದರಲ್ಲಿ ಎರಡುಮಾತಿಲ್ಲ. ಇದು ಜನಸಾಮಾನ್ಯರನ್ನೂ ತಲುಪಿದ್ದು ‘ಶಂಕರಾಭರಣಂ’ ಸಿನೆಮಾದಲ್ಲಿ ಅಳವಡಿಸಿಕೊಂಡಿದ್ದರಿಂದ ಎನ್ನುವುದೂ ಒಪ್ಪತಕ್ಕ ಮಾತೇ. ಆದರೆ ಶಂಕರಾಭರಣಂ ಚಿತ್ರದ ಗೀತೆಯಲ್ಲಿ ಪಲ್ಲವಿ ಮಾತ್ರ ತ್ಯಾಗರಾಜರ ಮೂಲ ಕೃತಿಯದು, ಉಳಿದಂತೆ ಚರಣಗಳ ಸಾಹಿತ್ಯ ವೇಟೂರಿ ಸುಂದರರಾಮಮೂರ್ತಿ ಅವರದು. ತ್ಯಾಗರಾಜರ ಮೂಲ ಕೃತಿ ಸಂಪೂರ್ಣವಾಗಿ ಸಂಸ್ಕೃತದಲ್ಲಿಯೇ ಇದೆ, ಶಂಕರಾಭರಣಂ ಆವೃತ್ತಿಯಲ್ಲಿ ತೆಲುಗು ಭಾಷೆ ಇದೆ. ಆದರೂ ಹಿಂದೋಳ ರಾಗದಲ್ಲಿಯೇ ಇದೆ ಎಂಬುದು ಗಮನಾರ್ಹ. ಸಾಮಜವರಗಮನ ಕೃತಿಯ ಇನ್ನೊಂದು ವೈಶಿಷ್ಟ್ಯವೆಂದರೆ, ತ್ಯಾಗರಾಜರ ಹೆಚ್ಚಿನೆಲ್ಲ ಕೃತಿಗಳೂ ಶ್ರೀರಾಮಚಂದ್ರನ ಕುರಿತು ಇರುವಂಥವು, ಇದು ಮಾತ್ರ ಶ್ರೀಕೃಷ್ಣನನ್ನು ಬಣ್ಣಿಸುವ ಅಮೋಘ ರಚನೆ! ಹಿಂದೋಳ ರಾಗರಸಾಯನದ ‘ಸಾಮಜವರಗಮನ ಸ್ಪೆಷಲ್’ ವಿಭಾಗದಲ್ಲಿ ಮೊದಲಿಗೆ ಕೇಳೋಣ ಶಂಕರಾಭರಣಂ ಚಿತ್ರಗೀತೆಯಾಗಿ ಸಾಮಜವರಗಮನ ... [youtube=http://www.youtube.com/watch?v=YXUvCUpMOWg] *** *** *** *** *** *** *** ಈಗ, ಕೆ.ಜೆ.ಯೇಸುದಾಸ್ ಅವರ ’ಕಂಚಿನ ಕಂಠ’ದಲ್ಲಿ ಸಾಮಜವರಗಮನ... [youtube=http://www.youtube.com/watch?v=UZeS0zfr5EU] *** *** *** *** *** *** *** ಪಿಯಾನೊ, ಅಕೌಸ್ಟಿಕ್ ಮತ್ತು ಬಾಸ್ ಗಿಟಾರ್, ಸಿಂಥೆಸೈಜರ್ ಪ್ಯಾಡ್ಸ್ & ಬೆಲ್ಸ್, ಜತೆಯಲ್ಲಿ ಹಗುರಾದ ಡ್ರಮ್ ಬೀಟ್ಸ್ - ಇವಿಷ್ಟನ್ನು ಬಳಸಿ ನುಡಿಸಿದ, Enneume ಎಂಬ ಸಂಗೀತಾಭ್ಯಾಸಿಯ Ambient Instrumental ಆಲ್ಬಮ್ನಿಂದ ಆಯ್ದುಕೊಂಡಿರುವ ಒಂದು ಫ್ಯೂಷನ್ ಪ್ರಯೋಗದಲ್ಲಿ ಸಾಮಜವರಗಮನ... [youtube=http://www.youtube.com/watch?v=hT_kGqpT0wQ] *** *** *** *** *** *** *** ಯು.ಪಿ.ರಾಜು (ಯು.ಶ್ರೀನಿವಾಸ್ ಅವರ ಕಸಿನ್) ಮ್ಯಾಂಡೋಲಿನ್ ವಾದನದಲ್ಲಿ ಸಾಮಜವರಗಮನ... [youtube=http://www.youtube.com/watch?v=b909miHhf4k] *** *** *** *** *** *** *** ವೀಣಾವಾದಕ ರಾಜೇಶ್ ವೈದ್ಯ ಅವರು ಸಾಕಷ್ಟು ಆರ್ಕೆಸ್ಟ್ರಾ ಎಫೆಕ್ಟ್ಸ್ ಸೇರಿಸಿ ಟೊರಾಂಟೊ (ಕೆನಡಾ)ದಲ್ಲಿ ನಡೆಸಿದ್ದ ಕನ್ಸರ್ಟ್ನಿಂದ ಆಯ್ದುಕೊಂಡಿರುವ ಸಾಮಜವರಗಮನ... [youtube=http://www.youtube.com/watch?v=YZ-GB7W9mew] *** *** *** *** *** *** *** ಕೌಲಾಲಂಪುರದಲ್ಲಿ ISKCON ಪಂಥಕ್ಕೆ ಸೇರಿದ ಕೆಲ್ವಿನ್ ಜಯಕಾಂತ್ ಮತ್ತು ಶ್ರೀಕಾಂತ್ ಶೇಷಾದ್ರಿ ನಿರ್ಮಿಸಿದ ‘Raadhe' ಆಲ್ಬಮ್ನಿಂದ ಆಯ್ದ ಸಾಮಜವರಗಮನ... [youtube=http://www.youtube.com/watch?v=8_vmebdHp4M] *** *** *** *** *** *** *** ಆರು ವರ್ಷದ ಹುಡುಗಿ ಗಾಯತ್ರಿ, ತ್ಯಾಗರಾಜ ಆರಾಧನೆಯ ದಿನ ಕೀಬೋರ್ಡ್ನಲ್ಲಿ ನುಡಿಸಿದ ಸಾಮಜವರಗಮನ... [youtube=http://www.youtube.com/watch?v=UwzEyx5wQSc] *** *** *** *** *** *** *** Golden Krithis ಸರಣಿಯಲ್ಲಿ ಬಂದ, ತುಂಬ ಜನಪ್ರಿಯತೆ ಗಳಿಸಿದ, ‘Colours' ಆಲ್ಬಮ್ನಲ್ಲಿ ಕುನ್ನಕ್ಕುಡಿ ವೈದ್ಯನಾಥನ್ ಅವರ ವಯಲಿನ್ ವಾದನ ಮತ್ತು ಝಾಕಿರ್ ಹುಸೇನ್ ಅವರ ತಬಲಾ ವಾದನದ ಜುಗಲ್ಬಂದಿಯಲ್ಲಿ ಸಾಮಜವರಗಮನ... [youtube=http://www.youtube.com/watch?v=lFxsVA_Iurc] *** *** *** *** *** *** *** ಮುಖಪುಟಕ್ಕೆಭಾಗ-5 : ಹಿಂದೋಳ/ಮಾಲಕೌಂಸ್ heights & highlights
ಕರ್ನಾಟಕ (ದಕ್ಷಿಣಾದಿ) ಶಾಸ್ತ್ರೀಯ ಸಂಗೀತ ಪದ್ಧತಿಯ ’ಹಿಂದೋಳ’ರಾಗಕ್ಕೆ ಹಿಂದುಸ್ಥಾನಿ (ಉತ್ತರಾದಿ) ಶಾಸ್ತ್ರೀಯ ಸಂಗೀತ ಪದ್ದತಿಯಲ್ಲಿ ಸಮಾನವಾದದ್ದು ‘ಮಾಲಕೌಂಸ್’ ರಾಗ ಎಂದು ಆಗಲೇ ತಿಳಿದುಕೊಂಡೆವು. ಏನೀ ಸಮಾನತೆ ಎನ್ನುವುದು ಶ್ರೋತೃಗಳಾದ ನಮಗೆ ಚೆನ್ನಾಗಿ ಮನವರಿಕೆಯಾಗುವುದು ದಕ್ಷಿಣಾದಿ-ಉತ್ತರಾದಿ ಕಲಾವಿದರು ಸೇರಿ ಜುಗಲ್ಬಂದಿ ಸಂಗೀತಕಛೇರಿ ನಡೆಸಿಕೊಟ್ಟಾಗ. ಅಂಥದೊಂದು ವಿಶೇಷ ಕಾರ್ಯಕ್ರಮ South Meets North ಎಂಬ ಶೀರ್ಷಿಕೆಯಲ್ಲಿ ಕೆಲ ದಶಕಗಳ ಹಿಂದೆ ದಿಲ್ಲಿಯಲ್ಲಿ ನಡೆದಿತ್ತು. ಖ್ಯಾತ ಸರೋದ್ ವಾದಕ ಅಮ್ಜದ್ ಆಲಿ ಖಾನ್ ಮತ್ತು ಖ್ಯಾತ ವಯಲಿನ್ ವಾದಕ ಲಾಲ್ಗುಡಿ ಜಿ ಜಯರಾಮನ್ ಅವರ ಜುಗಲ್ಬಂದಿ ಕಾರ್ಯಕ್ರಮ. ಆಮೇಲೆ ಅದರ ಧ್ವನಿಮದ್ರಿಕೆಯೂ ಕ್ಯಾಸೆಟ್, ಸಿ.ಡಿ, ಎಲ್.ಪಿ ರೆಕಾರ್ಡ್ಸ್ ಹೀಗೆ ವಿಧವಿಧ ರೂಪಗಳಲ್ಲಿ ಬಿಡುಗಡೆಯಾಗಿ ಜನಪ್ರಿಯಗೊಂಡಿದೆ. ನನ್ನ ನೆಚ್ಚಿನ ಸಂಗೀತಸಂಗ್ರಹದಲ್ಲಿಯೂ ಸೇರಿಕೊಂಡಿದೆ. ಸಾವಿರಕ್ಕೂ ಹೆಚ್ಚುಬಾರಿ ಆ ಧ್ವನಿಮುದ್ರಿಕೆ ನನ್ನ ಮ್ಯೂಸಿಕ್ಸಿಸ್ಟಂನಲ್ಲಿ, ಕಾರ್ ಸ್ಟೀರಿಯೋದಲ್ಲಿ ಮೊಳಗಿದೆಯೋ ಏನೋ! South Meets North ಆಲ್ಬಮ್ನಿಂದ ಈಗ ಸವಿಯೋಣ- ಹಿಂದೋಳ/ಮಾಲಕೌಂಸ್ ಜುಗಲ್ಬಂದಿ! ಅದಕ್ಕೆ ಮೊದಲು, ಆಲ್ಬಮ್ನ inlay cardನಲ್ಲಿ ಬರೆದಿರುವ ಈ ಭಾಗವನ್ನೊಮ್ಮೆ ಓದಿಕೊಳ್ಳಿ: The two instruments laugh and whisper, quarrel and tease and traipse across the scale like two lovers in a timeless play of hide and seek. The Carnatic violin, tremulous from the touch of the Sarod's demanding passage, coyly recedes in a flurry of glissando, that wing the air with a shower of notes, that scatter weightlessly like snowflakes of spring. The Sarod tiptoeing behind the Violin, in pianissimos as gentle as the heartbeats of a sleeping child, and metaphorically hold hands under the table, for brief electric moments that are unforgettable in their musical tension. The two instruments feast together in a banquet of notes. The Sarod and the Violin are at one in their search of the Raga in its entirety. At one time they are cajoling with Gandhara and at another essaying on the Madhyama and finally rising up in their yearning to the Dhaiwat as two devotees climaxing in the fullness of their worship. [youtube=http://www.youtube.com/watch?v=aDGQ5dkIsHY] [South Meets North ಆಲ್ಬಮ್ನ ಎರಡು ಫುಲ್ ಟ್ರ್ಯಾಕ್ಗಳು: ಮೂವತ್ತು ನಿಮಿಷ ಅವಧಿಯ ಮೋಹನ/ಭೂಪಾಲಿ ಜುಗಲ್ಬಂದಿ ಮತ್ತು ಮೂವತ್ತು ನಿಮಿಷ ಅವಧಿಯ ಹಿಂದೋಳ/ಮಾಲಕೌಂಸ್ ಜುಗಲ್ಬಂದಿಯ mp3 file download ಮಾಡಿಕೊಳ್ಳಲಿಚ್ಛಿಸುವವರು ಅನುಕ್ರಮವಾಗಿ ಇಲ್ಲಿ ಮತ್ತು ಇಲ್ಲಿ ಕ್ಲಿಕ್ಕಿಸಬಹುದು.] *** *** *** *** *** *** *** ಧೀಂ ಧೀಂ ಧೀಂ ಧಿಮಿ ನಟನ ಶಿವ... ಎಂಬೊಂದು ಸಾಯಿಭಜನೆ ಕೇಳಿದ್ದೀರಾ? ಧನ್ಯಾ ಸುಬ್ರಹ್ಮಣ್ಯನ್ ಮತ್ತು ವಿಸ್ಮಯಾ ಗೋಪಾಲನ್ ಎಂಬ ಗುರು-ಶಿಷ್ಯೆಯರು ಹಿಂದೋಳ ರಾಗವನ್ನು ಆ ಭಜನೆಯನ್ನು ಮೂಲಕ ಅಭ್ಯಾಸ ಮಾಡುತ್ತಿರುವುದು ಹೀಗೆ- [youtube=http://www.youtube.com/watch?v=WN-wIqqvvS8] *** *** *** *** *** *** *** ಇದೊಂದು ತಮಿಳು ಕೃತಿ, ತೋಂಡರಡಿಪೊಡಿ ಆಳ್ವಾರರ ’ದಿವ್ಯಪ್ರಬಂಧಮ್’ ರಚನೆ, “ಪಚ್ಚೈ ಮಾಮಲೈಪೋಲ್" - ಇದರಲ್ಲಿ ಹಳಗನ್ನಡ ಕಾವ್ಯಗಳಂತೆ ದ್ವಿತೀಯಪ್ರಾಸ (ಪ್ರತಿಯೊಂದು ಸಾಲಿನ ಎರಡನೇ ಅಕ್ಷರವು ಒಂದೇ ವ್ಯಂಜನದಿಂದಾಗಿರುವುದು) ಇದೆ. ಖ್ಯಾತ ಕಲಾವಿದ ಉನ್ನಿಕೃಷ್ಣನ್ ಹಾಡಿದ್ದಾರೆ, ಹಿಂದೋಳ ರಾಗದಲ್ಲಿ ಕರ್ಣಾನಂದಕರವಾಗಿ! [youtube=http://www.youtube.com/watch?v=Vt2CwZdptXo] *** *** *** *** *** *** *** ತೆಲುಗಿನಲ್ಲಿ ಸಂತ ಅನ್ನಮಾಚಾರ್ಯರು ರಚಿಸಿದ ಕೃತಿಗಳಲ್ಲಿ “ಕೊಂಡಲಲೊ ನಿಲಕುನ್ನ ಕೋನೇಟಿರಾಯುಡುವಾಡು..." ಸಹ ಪ್ರಖ್ಯಾತವಾದುದು. ಇದನ್ನು ‘ಅನ್ನಮಯ್ಯ’ ಸಿನೆಮಾದಲ್ಲಿಯೂ ಅಳವಡಿಸಿಕೊಳ್ಳಲಾಗಿತ್ತು. ‘ಶ್ರೀಹರಿನಾಮಮು’ ಎಂಬ ಆಲ್ಬಮ್ನಲ್ಲಿ ಅನ್ನಮಾಚಾರ್ಯರ ಕೆಲವು ಜನಪ್ರಿಯ ಕೃತಿಗಳನ್ನು ವಾದ್ಯವೃಂದದವರು ನುಡಿಸಿದ್ದಾರೆ. ಸಂಗೀತನಿರ್ದೇಶನ ತೆಲುಗು ಚಿತ್ರರಂಗದಲ್ಲಿ ಇದೀಗ ಹೆಸರುಮಾಡುತ್ತಿರುವ ಕಮಲಾಕರ್ ಅವರಿಂದ. ಇದು ಹಿಂದೋಳ ರಾಗದಲ್ಲಿದೆ, ಮತ್ತು ಕೇಳಲಿಕ್ಕೆ ಇಂಪಾಗಿದೆ ಎಂಬ ಕಾರಣಕ್ಕೆ ಇಲ್ಲಿ ಸೇರಿಸಿಕೊಂಡಿದ್ದೇನೆ. [youtube=http://www.youtube.com/watch?v=EyYVDf25m64] *** *** *** *** *** *** *** ಈಗ ಒಂದು ಪಕ್ಕಾ ಹಿಂದುಸ್ಥಾನಿ ಶೈಲಿಯ ಗಾಯನ, ಮಾಲಕೌಂಸ್ ರಾಗದಲ್ಲಿ ಪಂಡಿತ್ ಮಿಲಿಂದ್ ಚಿತ್ತಳ್ ಹಾಡಿರುವ "ಮನ ಮಂದಿರ್ ಮೇ ಆನ್ಬಸ..." ಮಿಲಿಂದ್ ಚಿತ್ತಳ್ ಅವರು Discovery of India (ಶ್ಯಾಮ್ ಬೆನಗಲ್ ನಿರ್ದೇಶನದ ಟಿವಿ ಸರಣಿ)ಗೆ ಹಿನ್ನೆಲೆಗಾಯನ ಮಾಡಿದ್ದ ಕಲಾವಿದ. ಹಲವಾರು ಪ್ರಶಸ್ತಿ-ಸಮ್ಮಾನಗಳನ್ನು ಗಳಿಸಿದವರು. [youtube=http://www.youtube.com/watch?v=c_8AY3ZQh2w] *** *** *** *** *** *** *** ಇನ್ನೊಂದು ಚಿಕ್ಕ ಕ್ಲಿಪ್ಪಿಂಗ್, percussion instrumentಗಳಿಂದಲೇ (ಮುಖ್ಯವಾಗಿ ತಬಲಾ) ಮಾಲಕೌಂಸ್ ರಾಗವನ್ನು ನುಡಿಸಿರುವುದು. ನಮಗೆ ಗೊತ್ತಿರುವಂತೆ ತಾಳವಾದ್ಯಗಳಿರುವುದು ‘ಲಯ’ ಒದಗಿಸಲಿಕ್ಕೆ. ಆದರೆ "ತಬ್ಲಾ ತರಂಗ್" ಎಂಬ ಈ ಪ್ರಯೋಗದಲ್ಲಿ ಹದಿನಾರು ತಬಲಾಗಳನ್ನು ಹದಿನಾರು ವಿಧಧ ಶ್ರುತಿಗೇರಿಸಿ ಲಯದ ಜತೆಜತೆಗೇ ನಾದವನ್ನು ಹೊರಹೊಮ್ಮಿಸಿರುವುದು. [youtube=http://www.youtube.com/watch?v=RC7E3QY9-rA] *** *** *** *** *** *** *** ಇನ್ನೊಂದು rare combination of instruments- ವಯಲಿನ್ ಜತೆಗೆ ನಾದಸ್ವರ ಮತ್ತು ತವಿಲ್! ಜತೆಗೆ ಮೃದಂಗ, ಘಟ, ಮೋರ್ಚಿಂಗ್, ಕೀಬೋರ್ಡ್ ಮತ್ತು ಗಿಟಾರ್. ಸಾಮಾನ್ಯವಾಗಿ ತವಿಲ್ ಪಕ್ಕವಾದ್ಯವಾಗಿ ವಿಜೃಂಭಿಸುವುದು. ಆದರೆ ಇಲ್ಲಿ ಖ್ಯಾತ ತವಿಲ್ ವಾದಕ ಪದ್ಮಶ್ರೀ ಎ.ಕೆ.ಪಳನಿವೇಲ್ ಅವರದೇ ಮುಖ್ಯಭೂಮಿಕೆ. ಅವರಿಗೆ ಪಕ್ಕವಾದ್ಯಗಾರರಾಗಿ ನಾದಸ್ವರಂ (ದುರೈ ಭಾರತೀದಾಸನ್) ಮತ್ತು ವಯಲಿನ್ (ಡಾ.ಜ್ಯೋತ್ಸ್ನಾ ಶ್ರೀಕಾಂತ್) ಜುಗಲ್ಬಂದಿ. ಹಿಂದೋಳ ರಾಗದ ಆಲಾಪನೆಗೆ ಲಯವಿನ್ಯಾಸ. ಇದು ಲಂಡನ್ನ ಶಿವ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಂಗೀತಕಛೇರಿಯಿಂದಾಯ್ದ ತುಣುಕು. [youtube=http://www.youtube.com/watch?v=fAZ_2JxG44c] *** *** *** *** *** *** *** ಈಗ ಹಿಂದೋಳ ರಾಗದಲ್ಲಿ ಒಂದು ಯಕ್ಷಗಾನ ಪದ್ಯ ಕೇಳೋಣ. ಭಾಗವತರು: ಸತ್ಯನಾರಾಯಣ ಪುಣಿಚಿತ್ತಾಯ. ಮದ್ದಳೆ: ಎನ್.ಜಿ.ಹೆಗಡೆ. ಭಾಗವತರ ಕಂಠಸಿರಿಯಷ್ಟೇ ಗಮನ ಸೆಳೆಯುತ್ತದೆ ಮದ್ದಳೆವಾದಕರ ಕರಾಮತ್ತು. ಸೂಕ್ಷ್ಮವಾಗಿ ಗಮನಿಸಿದರೆ ಅವರು ಬಾರಿಸುತ್ತಿರುವುದು ಒಂದೇ ಮದ್ದಳೆಯಲ್ಲ, ಒಂದೂವರೆ ಮದ್ದಳೆ! ಶ್ರುತಿ ಎಡ್ಜಸ್ಟ್ ಮಾಡಲಿಕ್ಕೆ ಬಳಸುವ ಸುತ್ತಿಗೆಯನ್ನೂ ಮದ್ದಳೆ ಬಾರಿಸಲಿಕ್ಕೆ ಉಪಯೋಗಿಸಿ ಹೊರಹೊಮ್ಮಿಸಿರುವ ಸ್ಪೆಷಲ್ ಎಫೆಕ್ಟ್ಗಳನ್ನು ವಿಶೇಷವಾಗಿ ಗಮನಿಸಬಹುದು! [youtube=http://www.youtube.com/watch?v=nM6qPGcvwtg] *** *** *** *** *** *** *** ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯ್ ವಾದನದಲ್ಲಿ ಮಾಲಕೌಂಸ್ ರಾಗ. ಬಿಸ್ಮಿಲ್ಲಾ ಖಾನ್ (1916-2006) ಭಾರತ ಕಂಡ ಅಸಾಮಾನ್ಯ ಅಗ್ರಗಣ್ಯ ಸಂಗೀತಕಲಾವಿದ. ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಮತ್ತು ಭಾರತರತ್ನ - ಈ ಎಲ್ಲ ಪ್ರಶಸ್ತಿಗಳನ್ನೂ (ಕ್ರಮವಾಗಿ 1961, 1968, 1980 ಮತ್ತು 2001ರಲ್ಲಿ) ಅತ್ಯಂತ ಅರ್ಹತೆಯಿಂದ ಪಡೆದುಕೊಂಡ ಏಕೈಕ ಸಂಗೀತಗಾರ. ಜತೆಯಲ್ಲೇ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್. ಕೋಟ್ಯಂತರ ಅಭಿಮಾನಿಗಳ ಪ್ರೀತಿಗೌರವ. ಆದರೇನಂತೆ, ಜೀವನದುದ್ದಕ್ಕೂ ಬಡತನದಿಂದ ಬೆಂದು, ಯಾವೊಂದು ಆಸ್ತಿಪಾಸ್ತಿ ಗಳಿಸದೆ, ಶುದ್ಧ ಸಂಗೀತವನ್ನಷ್ಟೇ ನಮ್ಮೆಲ್ಲರಿಗೂ ಮಹಾನ್ ಆಸ್ತಿಯಾಗಿ ಬಿಟ್ಟುಹೋದ ಸಂತ. ಬಿಸ್ಮಿಲ್ಲಾ ಖಾನ್ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿಯ ರೂಪದಲ್ಲಿ ಈ ವಿಡಿಯೋಕ್ಲಿಪ್ಪಿಂಗ್ ಇವತ್ತಿನ ರಾಗರಸಾಯನದಲ್ಲಿ ಸೇರಿಸಿದ್ದೇನೆ. [youtube=http://www.youtube.com/watch?v=so7yzog1xqw] *** *** *** *** *** *** *** ಕಾರ್ಯಕ್ರಮದ ಕೊನೆಯಲ್ಲಿ ಒಂದು ಭರತನಾಟ್ಯ ವಿಡಿಯೋ. ಹಿಂದೋಳ ರಾಗದ ತಿಲ್ಲಾನ, ವಿದ್ವಾನ್ ಮಧುರೈ ಎನ್.ಕೃಷ್ಣನ್ ಅವರ ರಚನೆ ಮತ್ತು ಸಂಗೀತನಿರ್ದೇಶನ. [youtube=http://www.youtube.com/watch?v=yYbIsv38Xto] *** *** *** *** *** *** *** ಇಲ್ಲಿಗೆ ಹಿಂದೋಳ(ಮಾಲಕೌಂಸ್) ರಾಗರಸಾಯನ ಮುಗಿಯಿತು. ಹಿಂದೋಳ ಸುಂದರ ಹೆಣ್ಣಿನಂತೆ ಇದೆಯೋ ಸ್ಫುರದ್ರೂಪಿ ಗಂಡಿನಂತೆ ಇದೆಯೋ ಗೊತ್ತಿಲ್ಲ. ಹಿಂದೋಳವನ್ನು ಕೇಳುತ್ತಲೇ ಇದ್ದರೆ ರಾಧಾ-ಕೃಷ್ಣರು ಜೋಕಾಲಿಯಲ್ಲಿ ಜೀಕುತ್ತಿರುವಂತೆಯೇ ನಮಗೂ ಜೀಕಿದ ಅನುಭವವಾಗುವುದಂತೂ ಹೌದು. ಇದು ನಿಮಗೆ ಇಷ್ಟವಾದರೆ, ನಿಮ್ಮ ಪ್ರತಿಕ್ರಿಯೆ ಅಥವಾ ಸಲಹೆ ಸೂಚನೆ ತಿದ್ದುಪಡಿ ಇತ್ಯಾದಿ ಇದ್ದರೆ ಖಂಡಿತ ತಿಳಿಸಿ.
Version: 20230822
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.