ಪದ-ಶ್ರಾವ್ಯ

ಈಗ ಆಡಿಯೋ ಟಚ್!

13
Sep 2012
Madhura Madhyamavathi
Posted in DefaultTag by sjoshi at 9:55 pm

ದಿನಾಂಕ  14 ಸೆಪ್ಟೆಂಬರ್ 2012

ಮಧುರ ‘ಮಧ್ಯಮಾವತಿ’

* ಶ್ರೀವತ್ಸ ಜೋಶಿ

ರಾಗರಸಾಯನ ಸರಣಿಯನ್ನು ಮುಂದುವರಿಸುತ್ತ ಇವತ್ತು ‘ಮಧ್ಯಮಾವತಿ’ ರಾಗವನ್ನು ಸವಿಯುವವರಿದ್ದೇವೆ.

ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಮುಖ ರಾಗಗಳಲ್ಲೊಂದು ಮಧ್ಯಮಾವತಿ. ಈ ರಾಗಕ್ಕೆ ಸಂದಿರುವ ವಿಶೇಷ ಗೌರವವೆಂದರೆ ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಕಾರ್ಯಕ್ರಮವನ್ನು ಮಧ್ಯಮಾವತಿ ರಾಗದ ಕೀರ್ತನೆಯೊಂದಿಗೆ, ಅಥವಾ ಕಡೇಪಕ್ಷ ಆ ರಚನೆ ಬೇರೆ ರಾಗದಲ್ಲಿದ್ದರೂ ಕೊನೆಯ ಚರಣವನ್ನು ಮಧ್ಯಮಾವತಿಯಲ್ಲಿ ಹಾಡಿ ಮುಗಿಸಬೇಕು.  ಅಂದರೆ ಸಂಗೀತ ಕಛೇರಿಗೆ ಮಂಗಲವೀಯುವ ರಾಗ ಮಧ್ಯಮಾವತಿ. ಈ ಸಂಪ್ರದಾಯದ ಹಿಂದೆ ಒಂದು ನಂಬಿಕೆಯೂ ಇದೆ, ಅದೇನೆಂದರೆ ಸಂಗೀತಕಛೇರಿಯ ವೇಳೆ ಯಾವುದೇ ತಪ್ಪು ಸ್ವರಾಲಾಪನೆ ಆಗಿದ್ದರೆ, ಅಪಸ್ವರ ಮೂಡಿದ್ದರೆ, ತಾಳ ತಪ್ಪಿದ್ದರೆ - ಆ ಎಲ್ಲದಕ್ಕೂ ಒಂದೇ ಪರಿಹಾರವೆಂದರೆ ಕೊನೆಯಲ್ಲಿ ಮಧ್ಯಮಾವತಿ ರಾಗವನ್ನು ಹಾಡುವುದು. ಆಗ ತಪ್ಪುಗಳನ್ನೆಲ್ಲ ಗಾನದೇವತೆ ಮನ್ನಿಸುತ್ತಾಳೆಂಬ ನಂಬಿಕೆ!

ಮಧ್ಯಮಾವತಿ ಕೂಡ ಪಂಚಸ್ವರಗಳ ರಾಗ. ಗಾಂಧಾರ (ಗ) ಮತ್ತು ಧೈವತ (ಧ) ಸ್ವರಗಳ ಬಳಕೆ ಇದರಲ್ಲಿಲ್ಲ. “ಸ ರಿ2 ಮ1 ಪ ನಿ2 ಸ" ಆರೋಹಣವಾದರೆ “ಸ ನಿ2 ಪ ಮ1 ರಿ2 ಸ" ಅವರೋಹಣ. 22ನೇ ಮೇಳಕರ್ತ ಖರಹರಪ್ರಿಯ ರಾಗದಿಂದ ಜನ್ಯವಾದ ರಾಗವಿದು. ಹಾರ್ಮೋನಿಯಂ/ಕೀಬೋರ್ಡ್‌ನಲ್ಲಿ ಕಪ್ಪು ಬಣ್ಣದ ಕೀಲಿಯಿಂದ ಶ್ರುತಿ ಹಿಡಿದರೆ ಮಧ್ಯಮಾವತಿ ರಾಗವನ್ನು ಕಪ್ಪುಬಣ್ಣದ ಕೀಲಿಗಳನ್ನಷ್ಟೇ ಬಳಸಿ ನುಡಿಸುವುದು ಸಾಧ್ಯ!

ಮಧ್ಯಮಾವತಿಯಲ್ಲಿ ಚತುಶ್ರುತಿ ರಿಷಭ ಸ್ವರ ಬಳಕೆಯಾಗುತ್ತದೆ, ಅದರ ಬದಲು ಶುದ್ಧ ರಿಷಭ ಸ್ವರವನ್ನು ಬಳಸಿದರೆ ಆಗ ‘ರೇವತಿ’ ರಾಗವಾಗುತ್ತದೆ. ಪಂಚಸ್ವರಗಳ ರಾಗಗಳೆಲ್ಲ (ಮೋಹನ, ಹಿಂದೋಳ, ಉದಯಚಂದ್ರಿಕಾ ಮುಂತಾದುವು) ಹೆಚ್ಚಾಗಿ ಪರಸ್ಪರ ಕೇವಲ ಒಂದೊಂದು ಸ್ವರದ ವ್ಯತ್ಯಾಸದಿಂದ ಬೇರೆಯಾಗಿರುವಂಥವು, ಆದರೂ ವ್ಯತ್ಯಾಸಕ್ಕೆ ಅದೊಂದೇ ಸ್ವರ ಸಾಕು, ಇಡೀ ರಾಗವೇ ಬದಲಾಗುತ್ತದೆ. ಅದೇ ಸಂಗೀತದ ಹಿರಿಮೆ.

ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತದಲ್ಲಿ ಮಧ್ಯಮಾವತಿ ರಾಗಕ್ಕೆ ಸಮಾನವಾದದ್ದು ‘ಮಧುಮದ್ ಸಾರಂಗ್’ ಎಂಬ ರಾಗ. ಅಲ್ಲೂ ಅಷ್ಟೇ, ವೃಂದಾವನ್ ಸಾರಂಗ್, ಜಲಧರ ಸಾರಂಗ್, ಮಿಯಾಕೀ ಸಾರಂಗ್ ಮುಂತಾಗಿ ಸಾಮ್ಯವಿರುವ ಸಾರಂಗ್ ರಾಗಗಳ ಗುಂಪೇ ಇದೆ. ಶಾಸ್ತ್ರೀಯ ಸಂಗೀತವನ್ನು ಆಳವಾಗಿ ಅಭ್ಯಸಿಸಿದವರಿಗೆ ಆ ವ್ಯತ್ಯಾಸಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ನಮ್ಮಂಥ ಅಜ್ಞಾನಿ/ಅಲ್ಪಜ್ಞಾನಿಗಳಿಗೆ 10000 ಅಡಿ ಎತ್ತರದಲ್ಲಿ ವಿಮಾನದಿಂದ ಭೂಮಿ ಮೇಲಿನ ವಸ್ತುಗಳು ಒಂದೇರೀತಿ  (ಉದಾ: ಎಲ್ಲ ವಾಹನಗಳೂ, ಮನೆಗಳೂ ಬೆಂಕಿಪೆಟ್ಟಿಗೆಯಂತೆ) ಕಾಣುತ್ತವೋ ಹಾಗೆಯೇ ಸಂಗೀತದಲ್ಲಿ ಈ ರಾಗಗಳೂ.

ಸರಿ, ಅದಷ್ಟು ಪೀಠಿಕೆಯ ನಂತರ ಈಗ ಮಧ್ಯಮಾವತಿ ರಾಗದ ರಸಧಾರೆ...

* * *

ಮೊದಲಿಗೆ, ಎಂ.ಎಸ್.ಸುಬ್ಬಲಕ್ಷ್ಮೀ ಅವರು ಹಾಡಿರುವ "ವಿನಾಯಕುನಿ ವಲೆನು" ಎಂಬ ಕೃತಿ. ತ್ಯಾಗರಾಜರ ರಚನೆ.

*** *** *** *** *** *** ***

ಉತ್ತುಕ್ಕಾಡ್ ವೆಂಕಟಸುಬ್ಬೈಯರ್ ಎಂಬುವರು ತಮಿಳಿನಲ್ಲಿ  ಶ್ರೀಕೃಷ್ಣನ ಕುರಿತು ರಚಿಸಿರುವ ಕೃತಿಗಳು ಕರ್ನಾಟಕ ಶಾಸ್ತ್ರೀಯ ಸಂಗೀತವಲಯದಲ್ಲಿ ತುಂಬ ಪ್ರಸಿದ್ಧ. "ಆಡಾದ್ ಅಸಂಗಾದ್ ವಾ ಕಣ್ಣಾ ..." ಎಂಬ ಕೃತಿ ಅವುಗಳಲ್ಲೊಂದು. ಗೋಪಿಕೆಯರು ಕೃಷ್ಣನನ್ನು ವಿಧವಿಧ ರೂಪದಲ್ಲಿ ಕರೆಯುವ ಪರಿ. ಭರತನಾಟ್ಯ ಅರಂಗೇಟ್ರಂ‌ಗಳಲ್ಲಿ ಹೆಚ್ಚಾಗಿ ಈ ಕೃತಿಗೆ ನೃತ್ಯವನ್ನು ಅಳವಡಿಸಿಕೊಳ್ಳುತ್ತಾರೆ. ಇದು ಮಧ್ಯಮಾವತಿ ರಾಗದಲ್ಲಿದೆ.  ಈಗ ಕುನ್ನಕ್ಕುಡಿ ವೈದ್ಯನಾಥನ್ ಅವರ ವಯಲಿನ್ ವಾದನದಲ್ಲಿ “ಆಡಾದ್ ಅಸಂಗಾದ್ ವಾ ಕಣ್ಣಾ..." ಆನಂದಿಸೋಣ.

*** *** *** *** *** *** ***

ಶಾಸ್ತ್ರೀಯ ಸಂಗೀತದ ಝಲಕ್ ಬಳಿಕ ಈಗ ಸ್ವಲ್ಪ ಲಘು ಶಾಸ್ತ್ರೀಯ ಪ್ರಕಾರಕ್ಕೆ ಬರೋಣ. ಪುಟ್ಟ ಬಾಲೆಯೊಬ್ಬಳು ಕೃಷ್ಣನನ್ನು ಕುರಿತು ಮಧುರವಾಗಿ ಹಾಡಿರುವ “ಜಯಜನಾರ್ದನ ಕೃಷ್ಣ ರಾಧಿಕಾಪತೇ" ಭಕ್ತಿಗೀತೆಯನ್ನು ಕೇಳೋಣ. ಮಧ್ಯಮಾವತಿ ರಾಗದಲ್ಲಿರುವ ಈ ಹಾಡಿನಂತೆಯೇ ಇನ್ನೊಂದು ಜನಪ್ರಿಯ ಕೃತಿಯೂ ಇದೆಯಲ್ಲ ಎಂದು ನಿಮಗೆ ನೆನಪಾಗಲೂಬಹುದು. ಅದನ್ನೂ ಆಮೇಲೆ ಕೇಳುವವರಿದ್ದೇವೆ. ಈಗ “ಜಯ ಜನಾರ್ದನ..."  ಕೇಳುತ್ತಿರುವಾಗ ನಿಮಗರಿವಿಲ್ಲದಂತೆಯೇ  ತಲೆದೂಗಿ ನಿಮ್ಮ ಕೈಗಳು ತಾಳ ಹಾಕತೊಡಗಬಹುದು, ಅಷ್ಟು ಮಧುರವಾಗಿದೆ ಇದು!

*** *** *** *** *** *** ***

ಮಾಸ್ಟರ್ ಶಶಾಂಕ್ ಅವರ ಕೊಳಲು ಮತ್ತು ವಿಶ್ವಮೋಹನ ಭಟ್ ಅವರ ಮೋಹನವೀಣೆ ಜುಗಲ್‌ಬಂದಿಯಲ್ಲಿ ಮಧ್ಯಮಾವತಿ ರಾಗದ ಒಂದು ಪ್ರಸ್ತುತಿ-

*** *** *** *** *** *** ***

ರಾಗರಸಾಯನ ಮಾಲಿಕೆಯ ಒಂದು ಉದ್ದೇಶವೆಂದರೆ ಅತ್ಯಂತ ಜನಪ್ರಿಯ, ಚಿರಪರಿಚಿತ ಹಾಡುಗಳ ಮೂಲಕ ರಾಗ ಗುರುತಿಸುವಿಕೆ ಮತ್ತು ಕಲಿತುಕೊಳ್ಳುವಿಕೆಯನ್ನು ಉತ್ತೇಜಿಸುವುದು. ಮಧ್ಯಮಾವತಿ ರಾಗಕ್ಕೆ ಅಂಥದೊಂದು ಹೇಳಿಮಾಡಿಸಿದ ಉದಾಹರಣೆಯೆಂದರೆ ಕನ್ನಡಿಗರಿಗೆಲ್ಲ ಚಿರಪರಿಚಿತ "ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ" ಜನಪದಗೀತೆ! ಹೆಂಗಸರಿಗೆ ಬಳೆ ಮತ್ತು ತವರು ಎಂಬ ಎರಡು ಪದಗಳು ಅದೆಷ್ಟು ರೋಮಾಂಚನ ತರಬಲ್ಲವೋ ಈ ಹಾಡನ್ನು ಕೇಳಿದಾಗ ಎಲ್ಲರಿಗೂ ಅಷ್ಟೇ ರೋಮಾಂಚನವಾಗುತ್ತದೆ. ಯೂಟ್ಯೂಬ್‌ನಲ್ಲಿ ಈ ಹಾಡಿನ ವಿಡಿಯೋ ಹುಡುಕುತ್ತಿದ್ದಾಗ ಚೆನ್ನಾಗಿರುವಂಥದ್ದು ಒಂದೂ ಸಿಗಲಿಲ್ಲ. ಬಳೆಗಾರ ಮತ್ತು ಬಳೆಗಳ ಚಿತ್ರಣವಿರುವಂಥದ್ದು ಒಂದಿರಬೇಕು ಎಂಬ ದೃಷ್ಟಿಯಿಂದ ನಾನೇ ಒಂದಿಷ್ಟು ಚಿತ್ರಗಳನ್ನು ಸಂಗ್ರಹಿಸಿ ಅದಕ್ಕೆ ನನ್ನಲ್ಲಿದ್ದ mp3 ಜೋಡಿಸಿ ಈ ವಿಡಿಯೋ ಏರಿಸಿದ್ದೇನೆ. ಬಳೆಗಳೆಂದಾಗ ನನಗೆ ಜಯಂತಕಾಯ್ಕಿಣಿ ಅವರದೊಂದು ಸಿಹಿಮಾತು ಕೂಡ ನೆನಪಾಗುತ್ತಿದೆ. ಮೂರು ವರ್ಷಗಳ ಹಿಂದೆ ಅಮೆರಿಕ ಭೇಟಿಯ ವೇಳೆ ಇಲ್ಲಿನ ಕನ್ನಡಿಗರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರು, ಕೈತುಂಬಾ ಬಳೆಗಳನ್ನು ತೊಟ್ಟುಕೊಂಡಿದ್ದ ಓರ್ವ ಅಮೆರಿಕನ್ನಡತಿಯನ್ನು "ಇದೇನು ಬಳೆ-ಸ್ಟ್ಯಾಂಡಾ?" ಎಂದು ತನ್ನ ಎಂದಿನ ಮುಗ್ಧನಗುವಿನೊಂದಿಗೆ ಕೇಳಿದ್ದರು. ಈಗ ಆನಂದಿಸೋಣ, ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ... ಹಾಡಿದವರು ಬಿ.ಆರ್.ಛಾಯಾ ಮತ್ತು ಶಶಿಧರ ಕೋಟೆ. ಸಂಗೀತ ನಿರ್ದೇಶನ ಬಿ.ವಿ.ಶ್ರೀನಿವಾಸ.

*** *** *** *** *** *** ***

‘ಜಯ ಜನಾರ್ದನ ಕೃಷ್ಣ ರಾಧಿಕಾಪತೇ...’ ಗೀತೆಯ ಬಗ್ಗೆ ಹೇಳುವಾಗ ಅದೇ ಧಾಟಿಯ ಇನ್ನೊಂದು ಗೀತೆ ನೆನಪಾಗಬಹುದು ಎಂದಿದ್ದೆನಲ್ಲ? ಇಲ್ಲಿದೆ ನೋಡಿ, “ಹರಿವರಾಸನಂ ವಿಶ್ವಮೋಹನಂ..." ಕೆ.ಜೆ.ಯೇಸುದಾಸ್ ಅವರ ಸುಮಧುರ ಕಂಠದಲ್ಲಿ ಇದನ್ನು ಕೇಳಿದರೆ ಸಾಕ್ಷಾತ್ ಅಯ್ಯಪ್ಪಸ್ವಾಮಿಯೇ ಅರೆಕ್ಷಣ ಭಾವಪರವಶನಾಗಬಹುದು! ಹರಿವರಾಸನಂ... ಹಾಡು ಬೇರೆಬೇರೆ ಆವೃತ್ತಿಗಳದು ನಿಮಗೆ ಸಿಗಬಹುದು, ಆದರೆ ಈಗ ನಾವು ಕೇಳಲಿರುವ ಆವೃತ್ತಿ ಶಬರಿಮಲೈ ದೇವಸ್ಥಾನದಲ್ಲಿ ಪ್ರತಿದಿನವೂ ಮೊಳಗುವಂಥದು.

*** *** *** *** *** *** ***

ಮಧ್ಯಮಾವತಿ ರಾಗವನ್ನು ಆಧರಿಸಿದ ಚಿತ್ರಗೀತೆಗಳು ಕನ್ನಡದಲ್ಲೂ, ಬೇರೆ ಭಾಷೆಗಳಲ್ಲೂ ಸಾಕಷ್ಟು ಇವೆ. ಅವೆಲ್ಲ ಜನಪ್ರಿಯವೂ ಆಗಿವೆ. ‘ಬದುಕು ಬಂಗಾರವಾಯ್ತು’ ಚಿತ್ರದ ಹಾಡು “ಜಗದೀಶ ಸರ್ವೇಶ ಮಲ್ಲೇಶ ಗೌರೀಶ ನೂರಾರು ಹೆಸರು ಶಿವನಿಗೆ..." ಕೇಳಿ ಆನಂದಿಸದವರಾರು? ಎಂ.ರಂಗರಾವ್ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಹಾಡಿರುವ ಚಿ.ಉದಯಶಂಕರ್ ರಚನೆ. ಹಳ್ಳಿಪರಿಸರದ ಮುಗ್ಧ ಹುಡುಗಿಯಾಗಿ ಮಂಜುಳಾ ಅಭಿನಯ. ಹಳ್ಳಿ ಬದುಕಿನಲ್ಲಿ ಮುಂಜಾನೆಯ ದೃಶ್ಯಾವಳಿ ಹೇಗಿರುತ್ತದೆ ಎಂಬ ಸುಂದರ ಚಿತ್ರಣ.

*** *** *** *** *** *** ***

ಇನ್ನೊಂದು ಅಷ್ಟೇ ಜನಪ್ರಿಯವಾದ ಹಾಡು ‘ಆಲೆಮನೆ’ ಚಿತ್ರದ "ನಮ್ಮೂರ ಮಂದಾರ ಹೂವೆ..." ಡಾ.ದೊಡ್ಡರಂಗೇಗೌಡ ಅವರ ಲೇಖನಿಯಿಂದ ಮೂಡಿಬಂದ ಚಂದದ ಗೀತೆ, ಅಶ್ವತ್ಥ-ವೈದಿ ಸಂಗೀತ ನಿರ್ದೇಶನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವುದು. ಯಾವುದೋ ಒಂದು ಸಂದರ್ಶನದಲ್ಲಿ ಎಸ್.ಪಿ.ಬಾಲು ಈ ಹಾಡಿನ ಬಗ್ಗೆ ಹೇಳಿದ ನೆನಪು- ಮೊದಲು ಸಂಗೀತದ ಟ್ರ್ಯಾಕ್‌ಗಳನ್ನು ಧ್ವನಿಮುದ್ರಿಸಿಕೊಂಡು ಅದರಮೇಲೆ ಗಾಯಕನ ಧ್ವನಿಯನ್ನು over impose ಮಾಡಿ ಮುದ್ರಿಸಿಕೊಳ್ಳುವ ತಂತ್ರಜ್ಞಾನ ಬಳಸಿದ ಕನ್ನಡದ ಮೊದಲ ಚಿತ್ರಗೀತೆ ಇದಂತೆ (ಈಗಿನ ಕಾಲದಲ್ಲಿ ಈ ತಂತ್ರಜ್ಞಾನ ಬಹಳವೇ ಉಪಯೋಗವಾಗುತ್ತಿದೆ, ಆದರೆ ಎರಡು-ಮೂರು ದಶಕಗಳ ಹಿಂದೆ ಇಂಥ ಪ್ರಯೋಗ ವಿರಳವಾಗಿತ್ತು).

*** *** *** *** *** *** ***

ಮತ್ತೊಂದು ಸುಂದರವಾದ ಹಾಡು, ‘ಬೆಳ್ಳಿಮೋಡಗಳು’ ಚಿತ್ರದಲ್ಲಿ ಉಪೇಂದ್ರಕುಮಾರ್ ಸಂಗೀತ ನಿರ್ದೇಶನದಲ್ಲಿ ಎಸ್.ಜಾನಕಿ ಮತ್ತು ಮನೋ ಹಾಡಿರುವ ಕೆ.ವಿ.ರಾಜು ಅವರ ರಚನೆ "ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೇ ನಾ..."

*** *** *** *** *** *** ***

ಭಕ್ತಿಗೀತೆಯೂ ಚಿತ್ರಗೀತೆಯೂ ( ಚಿತ್ರ: ಭಾಗ್ಯವಂತ) ಆಗಿ ಜನಪ್ರಿಯಗೊಂಡ "ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ..." ಸಹ ಮಧ್ಯಮಾವತಿ ರಾಗವನ್ನು ಆಧರಿಸಿದೆ. ಚಿ.ಉದಯಶಂಕರ್ ರಚನೆ, ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ. ಭಕ್ತಿರಸದಲ್ಲಿ ಅದ್ದಿತೆಗೆದಂತಿರುವ ಧ್ವನಿ ಡಾ.ರಾಜಕುಮಾರ್ ಅವರದು.

*** *** *** *** *** *** ***

ಈಗ ಒಂದು ಫ್ಯೂಷನ್ ಪ್ರಯೋಗವನ್ನು ಆನಂದಿಸುವ ಸಮಯ. ಭಗವದ್ಗೀತೆಯ  "ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ..." ಶ್ಲೋಕವನ್ನು ಮಧ್ಯಮಾವತಿ ರಾಗ ಆಧಾರಿಸಿ ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತವಾದ್ಯಗಳ ಹಿನ್ನೆಲೆಯೊಂದಿಗೆ ಹಾಡಿದ್ದಾರೆ ಗೋವಿಂದ ಬಾಲಸುಬ್ರಹ್ಮಣ್ಯಂ ಎಂಬುವರು. ಇಂಥ ‘ಪ್ರಯೋಗ’ಗಳು ಶುದ್ಧ ಶಾಸ್ತ್ರೀಯ ಸಂಗೀತವನ್ನಷ್ಟೇ ಬಯಸುವವರಿಗೆ ಇಷ್ಟವಾಗಲಿಕ್ಕಿಲ್ಲ,  ಕೆಲವೆಡೆ ಉಚ್ಚಾರ ಸರಿಯಿಲ್ಲದೆ  ತಪ್ಪುಗಳೂ ನುಸುಳಿವೆ, ಆವನ್ನೆಲ್ಲ ಮನ್ನಿಸಿ ಇದನ್ನು ಆನಂದಿಸಿದರೆ ಚೆನ್ನಾಗಿಯೇ ಇದೆ ಅಂತನಿಸುತ್ತದೆ. ನೀವೂ ಕೇಳಿನೋಡಿ.

*** *** *** *** *** *** ***

ಮಧ್ಯಮಾವತಿ ರಾಗವನ್ನು ಆಧರಿಸಿದ ತೆಲುಗು ಚಿತ್ರಗೀತೆಗಳೂ ಬೇಕಷ್ಟಿವೆ. ಇಲ್ಲಿ ಒಂದೆರಡನ್ನು ಆಯ್ದುಕೊಂಡಿದ್ದೇನೆ, ಇವು ತೆಲುಗೇತರ ಜನರ ಮನಸ್ಸನ್ನೂ ಗೆದ್ದಿವೆ ಎಂಬ ಕಾರಣಕ್ಕಾಗಿ. ಮೊದಲನೆಯದು ‘ಅನ್ನಮಯ್ಯ’ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಅನ್ನಮಾಚಾರ್ಯರ ರಚನೆ “ಅದಿವೋ ಅಲ್ಲದಿವೋ ಶ್ರೀಹರಿ ವಾಸಮು..." ಸಂಗೀತ ನಿರ್ದೇಶನ- ಎಂ.ಎಂ.ಕೀರವಾಣಿ.

*** *** *** *** *** *** ***

ಇನ್ನೊಂದು ಚಿರಪರಿಚಿತ ಹಾಡು, ಸ್ವಾತಿಮುತ್ಯಂ ಚಿತ್ರದ “ಸುವ್ವಿ ಸುವ್ವಿ ಸುವ್ವಾಲಮ್ಮ ಸೀತಾಲಮ್ಮ..." ಕಮಲಹಾಸನ್ ಅಭಿನಯ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ, ಇಳೆಯರಾಜಾ ಸಂಗೀತನಿರ್ದೇಶನ, ಸಿ.ನಾರಾಯಣ ರೆಡ್ಡಿ ಸಾಹಿತ್ಯ - ಆಯಾಯ ಕ್ಷೇತ್ರಗಳ ದಿಗ್ಗಜರನ್ನು ಒಟ್ಟುಗೂಡಿಸಿ ಅದ್ಭುತವನ್ನೇ ಸೃಷ್ಟಿಸುವ ಕಲೆ ಚಿತ್ರನಿರ್ದೇಶಕ ಕೆ.ವಿಶ್ವನಾಥ್ ಅವರದು! ಅಂದಹಾಗೆ ಸ್ವಾತಿಮುತ್ಯಂ ಚಿತ್ರ ತಮಿಳು ಮತ್ತು ಮಲಯಾಳಂಗೆ ಡಬ್ ಆಗಿ, ಕನ್ನಡದಲ್ಲಿ ಸುದೀಪ್ ಅಭಿನಯದ ‘ಸ್ವಾತಿಮುತ್ತು’ ಎಂಬ ರಿಮೇಕ್ ಆಗಿ ಜನಪ್ರಿಯವಾಯಿತು. ಕನ್ನಡ ಆವೃತ್ತಿಯಲ್ಲೂ ‘ಸುವ್ವಿ ಸುವ್ವಿ' ಹಾಡನ್ನು ಅದೇ ಧಾಟಿಯಲ್ಲಿ ಅಳವಡಿಸಿಕೊಳ್ಳಲಾಯಿತು. ಆದರೂ ನಾವೀಗ ಆನಂದಿಸಲಿರುವುದು ತೆಲುಗಿನ ಒರಿಜಿನಲ್.

*** *** *** *** *** *** ***

'ಶಂಕರಾಭರಣಂ’ ಚಿತ್ರ. ಕೆ.ವಿಶ್ವನಾಥ್ ನಿರ್ದೇಶನ. ವೇಟೂರಿ ಸುಂದರರಾಮಮೂರ್ತಿ ಸಾಹಿತ್ಯ.  ಕೆ.ವಿ.ಮಹಾದೇವನ್ ಸಂಗೀತ. ಸೋಮಯಾಜುಲು ಅಭಿನಯ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯನ. "ಶಂಕರಾ ನಾದಶರೀರಾಪರಾ..." ಹಾಡು. ಕ್ಷಮಿಸಿ, ಬಣ್ಣಿಸಲಿಕ್ಕೆ ನನ್ನಲ್ಲಿ ಪದಗಳಿಲ್ಲ!

*** *** *** *** *** *** ***

ಒಂದು ಸಿಹಿಸಿಹಿಯಾದ ಮಲಯಾಳಂ ಚಿತ್ರಗೀತೆ, ‘ನೋಟ್ಟಮ್’ ಚಿತ್ರಕ್ಕಾಗಿ ಜಯಚಂದ್ರನ್ ತಾನೇ ಸಂಗೀತ ನಿರ್ದೇಶಿಸಿ ಹಾಡಿರುವ "ಮೆಲ್ಲೇ ಮೆಲ್ಲೇ...". ಜಯಚಂದ್ರನ್ ಅವರಿಗೆ ಈ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ರಿ ಬಂದಿದೆ.

*** *** *** *** *** *** ***

ಮಧ್ಯಮಾವತಿಯ ಹಿಂದುಸ್ಥಾನಿ ರೂಪ ‘ಮಧುಮದ್ ಸಾರಂಗ್’ ಎಂದು ಆಗಲೇ ಹೇಳಿದ್ದೆನಷ್ಟೆ? ಇಲ್ಲೊಂದು ‘Suspended Pentatonic- Improvisation' ಎಂಬ ಚಿಕ್ಕ ವಿಡಿಯೋ ತುಣುಕು ಇದೆ. ಕೀಬೋರ್ಡ್‌ನಲ್ಲಿ ನುಡಿಸಿದ ಮಧುಮದ್ ಸಾರಂಗ್ ರಾಗದ ಒಂದು ಝಲಕ್.

*** *** *** *** *** *** ***

ಇನ್ನು ಒಂದೆರಡು ಹಿಂದಿ ಚಿತ್ರಗೀತೆಗಳನ್ನು ಕೇಳೋಣ. ಮಧುಮದ್ ಸಾರಂಗ್ ರಾಗವನ್ನು ಆಧರಿಸಿದ ಗೀತೆಗಳು. ಮೊದಲನೆಯದು ‘ರಾಣಿ ರೂಪಮತಿ’ ಚಿತ್ರದಲ್ಲಿ ಮುಖೇಶ್ ಹಾಡಿರುವ “ಆ ಲೌಟ್‌ಕೇ ಆಜಾ ಮೇರೇ ಮೀತ್". ಭರತ್ ವ್ಯಾಸ್ ಅವರ ಸಾಹಿತ್ಯಕ್ಕೆ ಎಸ್.ಎನ್.ತ್ರಿಪಾಠಿ ಅವರಿಂದ ಸಂಗೀತ ನಿರ್ದೇಶನ. ಹಿತಮಿತವಾದ ವಾದ್ಯಬಳಕೆಯೊಂದಿಗೆ ಆ ಕಾಲದ ಹಾಡುಗಳು ಎಷ್ಟು ಮಧುರವಾಗಿರುತ್ತಿದ್ದವು! ಅಜರಾಮರವಾಗಿ ಉಳಿಯುವ ಶಕ್ತಿ ಆ ಹಾಡುಗಳದು!

*** *** *** *** *** *** ***

ಮನ್ನಾಡೇ ಮತ್ತು ಲತಾ ಮಂಗೇಶ್ಕರ್ ಹಾಡಿರುವ "ದಯ್ಯಾರೆ ದಯ್ಯಾರೆ ಚಡ್ ಗಯೋ ಪಾಪಿ ಬಿಛುವಾ...." ಹಾಡು, 1958ರಲ್ಲಿ ಬಿಡುಗಡೆಗೊಂಡ ‘ಮಧುಮತಿ’ ಚಿತ್ರದಿಂದ. ಶೈಲೇಂದ್ರ ಅವರ ರಚನೆಗೆ ಸಲಿಲ್ ಚೌಧರಿ ಸಂಗೀತ ನಿರ್ದೇಶನ. ‘ಮಧುಮತಿ’ ಚಿತ್ರವು ಪ್ರಶಸ್ತಿಗಳ ಕೊಳ್ಳೆಹೊಡೆದದ್ದಷ್ಟೇ ಅಲ್ಲ, ಮುಂದೆ ಅಂತಹ ಅನೇಕ ಚಿತ್ರಗಳಿಗೆ ಸ್ಫೂರ್ತಿಯೂ ಆಯಿತು. ಈ "ಚಡ್ ಗಯೋ ಪಾಪಿ ಬಿಛುವಾ" ಹಾಡು ಇವತ್ತಿಗೂ ಎಲ್ಲರಿಗೂ ಇಷ್ಟವಾಗುವುದು ಹೆಣ್ಣಿನ ಸೌಂದರ್ಯ ಮತ್ತು ಮಾದಕತೆಯನ್ನು  ಅಶ್ಲೀಲತೆಯ ಯಾವುದೊಂದು ಸೋಂಕಿಲ್ಲದೆ, ಜನಪದ ಸೊಗಡಿನಲ್ಲಿ ಚಿತ್ರಿಸಿಟ್ಟ ಗೀತೆ ಎಂಬುದಕ್ಕಾಗಿ.

*** *** *** *** *** *** ***

ಈಗ ಮಧುಮದ್ ಸಾರಂಗ್ ರಾಗದಲ್ಲಿ ಒಂದು ಗಝಲ್, ಗುಲಾಮ್ ಅಲಿ ಹಾಡಿರುವ "ಬಿನ್ ಬಾರಿಷ್ ಬರಸಾತ್ ನ ಹೋಗೀ..." ಇದು ಅವರ ‘ಸೆಹರ್ ಹೋ ರಹೀ ಹೈ’ ಆಲ್ಬಮ್‌ನಿಂದ ಆಯ್ದುಕೊಂಡಿರುವುದು.

*** *** *** *** *** *** ***

ಪಂಡಿತ್ ಜಸ್ರಾಜ್ ಧ್ವನಿಯಲ್ಲಿ ಮಧುಮದ್ ಸಾರಂಗ್ ರಾಗಕ್ಕೆ ಎಂತಹ ಮಾಧುರ್ಯ ಬರುತ್ತದೆಂದು ಈ "ರಸಿಕಾನಿ ರಾಧಾ..." ರಚನೆಯಿಂದ ತಿಳಿದುಕೊಳ್ಳಬಹುದು. ವೃಂದಾವನದ ದೃಶ್ಯಾವಳಿ ಕಣ್ಮುಂದೆ ಕಟ್ಟಿಕೊಡುವಂಥ ಗಾಯನ.

*** *** *** *** *** *** ***

‘ಶಿವಪುತ್ರ ಸಿದ್ಧರಾಮಯ್ಯ ಕೊಂಕಳಿಮಠ’ ಎಂದರೆ ಯಾರೆಂದು ನಿಮಗೆ ಗೊತ್ತಾಗಲಿಕ್ಕಿಲ್ಲ. ನಮ್ಮ ಕರ್ನಾಟಕ ರಾಜ್ಯದ ಬೆಳಗಾವಿಯಲ್ಲಿ ಹುಟ್ಟಿದವರು ಎಂದರೂ ಹೆಚ್ಚೇನೂ ಪರಿಚಯವಾಗಲಿಕ್ಕಿಲ್ಲ. ಅದೇ ಮಹಾನ್ ವ್ಯಕ್ತಿಯನ್ನು “ಕುಮಾರ ಗಂಧರ್ವ" ಹೆಸರಿನಿಂದ ಉಲ್ಲೇಖಿಸಿದರೆ!? ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಕೀರ್ತಿಶಿಖರ ಏರಿದ ಕಲಾವಿದನ ಚಿತ್ರ ಮನದಲ್ಲಿ ಮೂಡುತ್ತದೆ! ಅಂಥ ಮಹಾಕಲಾವಿದನ ಧ್ವನಿಯನ್ನು ಕೇಳುವುದೂ ಒಂದು ಪುಣ್ಯವೇ. ಕುಮಾರ ಗಂಧರ್ವ ಮಧುಮದ್ ಸಾರಂಗ್ ರಾಗದಲ್ಲಿ ಹಾಡಿರುವ ಒಂದು ಬಂದಿಷ್ "ರಂಗ್ ದೇ ರಂಗರೇಜವಾ..."

*** *** *** *** *** *** ***

ಮಧುಮದ್ ಸಾರಂಗ್‌ದಿಂದ ಮತ್ತೆ ಮಧ್ಯಮಾವತಿಗೆ ಮರಳುತ್ತ, ಒಂದು ಕನ್ನಡ ಭಕ್ತಿಗೀತೆ- ಮೌಲಿ ಶಾಸ್ತ್ರಿ ಎಂಬ ಗಾಯಕರ "ಸುಮಧುರ ಭಕ್ತಿ ಸುಧೆ" ಅಲ್ಬಮ್‌ನಿಂದ  "ಶ್ರೀ ಹನುಮ ಜೈ ಜೈ ಹನುಮ ಪಾವನ ನಿನ್ನಯ ಜನುಮ..."

*** *** *** *** *** *** ***

ಮಧ್ಯಮಾವತಿ ರಾಗದಲ್ಲಿರುವ ಪ್ರಖ್ಯಾತ ಕೃತಿಗಳಲ್ಲಿ ಪಾಪನಾಶಂ ಶಿವನ್ ಅವರ "ಕರ್ಪಗಮೇ ಕಡೈಕ್ಕನ್ ಪಾರೈ"ಸಹ ಒಂದು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರನೇಕರು ಇದನ್ನು ತಮ್ಮ ಕಾರ್ಯಕ್ರಮಗಳಲ್ಲಿ ಹಾಡುತ್ತಾರೆ.  ಪ್ರಸಿದ್ಧ ವೀಣಾವಾದಕಿ ಇ.ಗಾಯತ್ರಿ ಅವರ ವೀಣಾವಾದನದಲ್ಲಿ "ಕರ್ಪಗಮೇ ಕಡೈಕ್ಕನ್ ಪಾರೈ"

*** *** *** *** *** *** ***

The one and only ever popular "ಭಾಗ್ಯದ ಲಕ್ಷ್ಮೀ ಬಾರಮ್ಮ..." ಉಲ್ಲೇಖವಿಲ್ಲದೆ ಮಧ್ಯಮಾವತಿ ರಾಗದ ವಿವರಣೆ ಪೂರ್ಣಗೊಳ್ಳುವುದಾದರೂ ಹೇಗೆ!  ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ, ತಲೆತಲಾಂತರದ ಕಲಾವಿದರೆಲ್ಲರನ್ನೂ ಪರಿಗಣಿಸಿ, ಜಗದಗಲ ಹರಡಿರುವ  ಹವ್ಯಾಸಿ/ಅಭ್ಯಾಸಿ/ ವೃತ್ತಿಪರ ಸಂಗೀತಗಾರರೆಲ್ಲರನ್ನೂ ಸೇರಿಸಿ ’ಅತ್ಯಂತ ಹೆಚ್ಚು ಹಾಡಲ್ಪಟ್ಟ ಕೃತಿ ಯಾವುದು’ ಎಂಬೊಂದು survey ನಡೆಸಿದರೆ  ಬಹುಶಃ ಪ್ರಥಮಸ್ಥಾನ ಗಿಟ್ಟಿಸುವುದು "ಭಾಗ್ಯದ ಲಕ್ಷ್ಮಿ ಬಾರಮ್ಮ". ಸಂಗೀತ ಕಛೇರಿಯನ್ನು ಮಧ್ಯಮಾವತಿ ರಾಗದ ಕೀರ್ತನೆಯೊಂದಿಗೆ ಮುಕ್ತಾಯಗೊಳಿಸುವ ಸಂಪ್ರದಾಯವನ್ನು ಪಾಲಿಸಲು ಕಲಾವಿದರ ಕೈಗೆ ಕೂಡಲೆ ಸಿಗುವ ಕೃತಿ. ಪುರಂದರದಾಸರ ರಚನೆ. ಅದನ್ನು ಹಾಡುವುದರಿಂದಲೇ ಕಲಾವಿದನಿಗೆ ‘ಸಂಭಾವನೆ’ಯೆಂಬ ಲಕ್ಷ್ಮಿಯೂ ಒಲಿದುಬರುತ್ತಾಳೋ ಏನೋ! ಇರಲಿ, ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿನ ಯಾವ ಆವೃತ್ತಿಯನ್ನು (ಅಂದರೆ ಯಾವ ಕಲಾವಿದರು ಹಾಡಿದ್ದನ್ನು ಅಥವಾ ವಾದ್ಯದಲ್ಲಿ ನುಡಿಸಿದ್ದನ್ನು) ಇಲ್ಲಿ ರಾಗರಸಾಯನದಲ್ಲಿ ಆಯ್ದುಕೊಳ್ಳಬೇಕೆಂದು ಸಾಕಷ್ಟು ತಲೆಕೆಡಿಸಿಕೊಂಡೆ. ಪಟ್ಟಿ ತುಂಬಾ ದೊಡ್ಡದೇ ಇತ್ತು, ಯಾವುದನ್ನೂ ಬಿಡುವ ಮನಸ್ಸಿಲ್ಲ. ಕೊನೆಗೂ randomಆಗಿ ಒಂದನ್ನು ಆಯ್ದುಕೊಂಡಾಗ ಸಿಕ್ಕಿದ್ದು ಎಸ್.ಜಾನಕಿ ಹಾಡಿರುವ ಆವೃತ್ತಿ. ಇದಂತೂ ನನಗೆ ತುಂಬತುಂಬ ಇಷ್ಟ. ನೀವೂ ಕೇಳಿ ಆನಂದಿಸಿ.

*** *** *** *** *** *** ***

ಕೊನೆಯಲ್ಲೊಂದು ‘ಮಂಗಲ’ದ ತುಣುಕು. ಮಂಗಲಧ್ವನಿ ನಾದಸ್ವರದೊಂದಿಗೆ ಕೀಬೋರ್ಡ್! ಇದು ಕೆನಡಾದ ಮಾಂಟ್ರಿಯಲ್ ದೇವಸ್ಥಾನದಲ್ಲಿ ನಡೆದ ಸಂಗೀತಕಛೇರಿಯೊಂದರಿಂದ ಆಯ್ದ ವಿಡಿಯೋ.

*** *** *** *** *** *** ***

kalyaninotes.png

ಇಲ್ಲಿಗೆ ಮಧ್ಯಮಾವತಿ ರಾಗರಸಾಯನ ಮುಗಿಯಿತು. ಇದರಲ್ಲಿನ ಹೆಚ್ಚಿನೆಲ್ಲ ಹಾಡುಗಳು ನಿಮಗೆ ಆಗಲೇ ಪರಿಚಯವಿದ್ದಿರಬಹುದಾದರೂ ಅವೆಲ್ಲವನ್ನೂ ಮಧ್ಯಮಾವತಿ ರಾಗ ಎಂಬ ಸಾಮಾನ್ಯಸೂತ್ರದಲ್ಲಿ ಪೋಣಿಸಿ ಪ್ರಸ್ತುತಪಡಿಸಿದಾಗಿನ ಸಂತೋಷ ಬೇರೆ ರೀತಿಯದು. ಈಗಿನ್ನು ಈ ಹಾಡುಗಳು ಒಂದಿಷ್ಟು ದಿನ ಮನಸ್ಸಲ್ಲಿ ಗುಂಯ್‌ಗುಡುತ್ತಿರುತ್ತವೆ. ಒಂದರನಂತರ ಇನ್ನೊಂದರಂತೆ medley ರೂಪದಲ್ಲಿ ಇವನ್ನು ಗುನುಗುನಿಸಿದರೆ (humming) ಓಹ್ ಹೌದಲ್ವಾ ಇವೆಲ್ಲ ಒಂದನ್ನೊಂದು ಹೋಲುತ್ತಿವೆ ಎಂದು ಅರಿವಾಗುತ್ತದೆ. ‘ರಾಗರಸಾಯನ’ದ ಉದ್ದೇಶ ಈಡೇರಿದಂತಾಗುತ್ತದೆ!

ಎಂದಿನಂತೆ ನಿಮ್ಮ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿ...


You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App