ಪದ-ಶ್ರಾವ್ಯ

ಈಗ ಆಡಿಯೋ ಟಚ್!

26
Feb 2011
Marvellous Metaphors
Posted in DefaultTag by sjoshi at 11:01 am

ದಿನಾಂಕ  27 ಫೆಬ್ರವರಿ 2011ರ ಸಂಚಿಕೆ...

ಅಣೋರಣೀಯ ಮಹತೋಮಹೀಯ ಅಪ್ರಮೇಯ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಅಣುವಿನ ಪ್ರತಿಕೃತಿ ಹೇಗಿರಬಹುದೆಂದು ಯೋಚಿಸಿದ್ದೀರಾ? ಇದೊಳ್ಳೇ ‘ಹೋಮ್‌ವರ್ಕ್ ಮಾಡಿದ್ದೀರಾ’ ಎಂದು ಮೇಷ್ಟ್ರು ಮಕ್ಕಳನ್ನು ಕೇಳಿದಹಾಗಾಯ್ತು ಎನ್ನಬೇಡಿ. ಉದ್ದೇಶ ಅದಲ್ಲ, ಆದರೂ ಕೇಳುತ್ತಿದ್ದೇನೆ. ನಿಮಗೆ ಆಶ್ಚರ್ಯವಾಗಬಹುದು- ಪ್ರಮಾಣಗಳನ್ನು ಯಥಾವತ್ ಹಿಗ್ಗಿಸಿ ಅಣುಪ್ರತಿಕೃತಿ ರಚಿಸುವುದು ನಾವು ಅಂದುಕೊಂಡಷ್ಟು ಸುಲಭವಿಲ್ಲ! ಯಾಕಿಲ್ಲ? ಜಲಜನಕದ ಅಣುವಿನಲ್ಲಿರೋದು ಮಧ್ಯದಲ್ಲೊಂದು ಧನಾತ್ಮಕ ಪ್ರೋಟಾನು, ಅದನ್ನು ಸುತ್ತುವ ಒಂದು ಋಣಾತ್ಮಕ ಎಲೆಕ್ಟ್ರಾನು. ಸೂರ್ಯ ಮತ್ತು ಭೂಮಿ ಇದ್ದಂತೆ. ಅಥವಾ, ಭೂಮಿ ಮತ್ತು ಚಂದ್ರನಿದ್ದಂತೆ. ಒಂದು ಚೆಂಡಿನ ಸುತ್ತ ಇನ್ನೊಂದು ಚೆಂಡನ್ನೋ ಪುಟ್ಟ ಗೋಲಿಯನ್ನೋ ಸುತ್ತುತ್ತಿರುವಂತೆ ಮಾಡಿದರಾಯ್ತು ಮಾಡೆಲ್ ರೆಡಿ ಎಂದು ನೀವೆನ್ನಬಹುದು. ಊಹುಂ. ಅದು ‘ಸ್ಕೇಲ್ ಅಪ್ ಮಾಡೆಲ್’ ಆಗುವುದಿಲ್ಲ. ಅಣುವಿನ ನಿಜವಾದ ಅಗಾಧತೆಯನ್ನು, ಅದ್ಭುತವಾದ ರಚನೆಯನ್ನು ಅಂಥ ಮಾಡೆಲ್ ಸಮರ್ಥವಾಗಿ ಚಿತ್ರಿಸುವುದಿಲ್ಲ.

ಜಲಜನಕದ ಅಣುವಿನ ಮೂಲರೂಪದ ಅಳತೆ ಎಷ್ಟು ಗೊತ್ತೇ? ಒಂದು ಮಿಲಿಮೀಟರ್‌ಅನ್ನು ಕೋಟಿ ಭಾಗಗಳಾಗಿಸಿ ಅದರಲ್ಲೊಂದರಷ್ಟು! ಅಂಥ ಮಹಾನ್ ಅಣುವಿನ ಒಟ್ಟು ಗಾತ್ರದ ಲಕ್ಷದಲ್ಲೊಂದು ಭಾಗದಷ್ಟು ಚಿಕ್ಕದು ನಡುವಿನಲ್ಲಿರುವ ಪ್ರೋಟಾನ್. ಇನ್ನು ಆ ಪ್ರೋಟಾನ್‌ನ ಸಾವಿರದೊಂದು ಭಾಗದಷ್ಟು ಚಿಕ್ಕದಿರುವುದು ಎಲೆಕ್ಟ್ರಾನ್. ಅಂದರೆ, ಇಡೀ ಅಣುವಿನಲ್ಲಿ ಬಹುತೇಕ ಭಾಗ ಬರೀ ಟೊಳ್ಳು! ಸ್ಕೇಲ್ ಆಪ್ ಮಾಡೆಲ್ ಕಠಿಣವಾಗುವುದು ಅದೇ ಕಾರಣಕ್ಕೆ. ಪ್ರೋಟಾನ್ ಮತ್ತು ಎಲೆಕ್ಟ್ರಾನ್‌ಗಳ ಗಾತ್ರವನ್ನೇನೋ ಕೋಟಿಗಟ್ಟಲೆ ಹಿಗ್ಗಿಸಿ ಅನುಕ್ರಮವಾಗಿ ಒಂದು ಕುಂಬಳಕಾಯಿ ಮತ್ತೊಂದು ನೆಲ್ಲಿಕಾಯಿಯಷ್ಟು ದೊಡ್ಡವನ್ನಾಗಿ ತೋರಿಸಬಹುದು. ಆದರೆ ಅನುಪಾತವನ್ನು ಕಾಯ್ದುಕೊಳ್ಳಲು ಅವುಗಳ ನಡುವಿನ ದೂರವನ್ನೂ ಅಷ್ಟೇ ಪ್ರಮಾಣದಲ್ಲಿ ಹಿಗ್ಗಿಸಬೇಕಲ್ಲ? ಹಾಗೆ ಹಿಗ್ಗಿಸಿದ್ದೇ ಆದರೆ ಜನಾರ್ಧನಸ್ವಾಮಿ ಚಿತ್ರದುರ್ಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಣುಪ್ರತಿಕೃತಿಯಲ್ಲಿ ಪ್ರೋಟಾನ್ ಮಾತ್ರ ಚಿತ್ರದುರ್ಗದ ಪೇಟೆಯಲ್ಲಿ ಇರುತ್ತದೆ, ಎಲೆಕ್ಟ್ರಾನ್ ಕನಿಷ್ಠ ಹತ್ತಿಪ್ಪತ್ತು ಕಿ.ಮೀ ದೂರದ ಒಂದು ಹಳ್ಳಿಯಲ್ಲಿರಬೇಕಾಗುತ್ತದೆ! ಪ್ರೋಟಾನ್ ನೋಡಿ ಆಯ್ತಲ್ಲ ಇನ್ನು ಎಲೆಕ್ಟ್ರಾನ್ ತೋರಿಸುತ್ತೇವೆ ಎಂದು ಪ್ರವಾಸಿಗರನ್ನು ಅಲ್ಲಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ. ಬಸ್ಸು ತಲುಪುವ ಹೊತ್ತಿಗೆ ಎಲೆಕ್ಟ್ರಾನ್ ಅಲ್ಲಿಂದ ಮುನ್ನಡೆದಿದ್ದರೆ ಪ್ರವಾಸ ಮತ್ತೂ ರೋಚಕವಾಗುತ್ತದೆ!

ಕಳೆದವಾರ ಅಣುಪ್ರತಿಕೃತಿ ವಿಷಯವನ್ನು ಪ್ರಸ್ತಾಪಿಸಿದ್ದು ಓದುಗರ ‘ಅಗೆವ ಬುದ್ಧಿಗೆ ಅನಂತ ಅವಕಾಶ’ ಮಾಡಿಕೊಟ್ಟಿದೆ. ಕನ್ನಡಪ್ರಭದಲ್ಲಿ ವಿಜ್ಞಾನವಿಶೇಷ ಅಂಕಣ ಬರೆಯುವ ಕೊಳ್ಳೇಗಾಲ ಶರ್ಮಾ ಅವರು ಅಣುಸಂರಚನೆ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇಮೇಲ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಜಾವಾಣಿಯ ವಿಜ್ಞಾನವಿಶೇಷ ಅಂಕಣಕಾರ ನಾಗೇಶ ಹೆಗಡೆಯವರು ಮತ್ತಷ್ಟು ವಿಸ್ಮಯದ ವಿಚಾರಗಳನ್ನು ತಿಳಿಸಿದ್ದಾರೆ. ಅವರೆನ್ನುತ್ತಾರೆ, “ಎಲೆಕ್ಟ್ರಾನನ್ನು ಚೆಂಡಿನಂತೆ/ಗೋಲಿಯಂತೆ ತೋರಿಸುವುದೇ ತಪ್ಪು. ಅದು ಅಲೆಯಂತೆ, ಮೋಡದಂತೆಯೂ ವರ್ತಿಸುವುದರಿಂದ ಪ್ರೋಟಾನ್‌ನಿಂದ ಹೊರಡುವ ಪ್ರಭೆ ಆಗಾಗ ಚಿಮ್ಮುವಂತೆ ಮಾಡುವುದೇ ಸತ್ಯಕ್ಕೆ ತುಸು ಸಮೀಪವಾಗಬಹುದು. ಫುಟ್‌ಬಾಲ್ ಗಾತ್ರದ ಪ್ರೋಟಾನ್ ಮಾದರಿಯಿಂದ ಹತ್ತಿಪ್ಪತ್ತು ಕಿ.ಮೀ ದೂರದಲ್ಲಿ ಗೋಲಿ ಗಾತ್ರದ ಎಲೆಕ್ಟ್ರಾನನ್ನು ಇಡುವುದು ಸ್ವಾರಸ್ಯವೇನೊ ಹೌದು. ಆದರೆ ಪರಮಾಣು ರಂಗದಲ್ಲಿ ಇನ್ನೂ ಅನೇಕ ವೈಚಿತ್ರ್ಯಗಳಿವೆ. ಒಂದೇ ಎಲೆಕ್ಟ್ರಾನ್ ಏಕಕಾಲದಲ್ಲಿ ಎರಡು ಕಡೆ ಇರಲು ಸಾಧ್ಯವಿದೆ. ಮತ್ತೆ ಕ್ವಾಂಟಮ್ ಫಿಸಿಕ್ಸ್ ಜಗತ್ತಿಗೆ ಬಂದರೆ, ಎಲೆಕ್ಟ್ರಾನನ್ನು ನೋಡುವ ಕ್ರಿಯೆಯೇ ಅದನ್ನು ಅಲ್ಲಿಂದ ಮಾಯ ಮಾಡುವ ಸಾಧ್ಯತೆಯೂ ಇದೆ! ಆದ್ದರಿಂದ, ದೂರದ ಬೆಟ್ಟದ ಮೇಲೆ ಗಾಜಿನ ಪೆಟ್ಟಿಗೆಯೊಳಗೆ ಸ್ಥಿರವಾಗಿ ಎಲೆಕ್ಟ್ರಾನ್ ಮಾದರಿಯನ್ನಿಡುವುದು ತರವಲ್ಲ. ಹಾಗಂತ ಸುಮ್ಮನೇ ತೆರೆದಿಟ್ಟರೆ ಅದು ಅಲ್ಲಿಂದ ಮಾಯವಾಗುತ್ತದೆ. ಅದನ್ನಲ್ಲಿ ಮತ್ತೆಮತ್ತೆ ಸ್ಥಾಪನೆ ಮಾಡುವವರು ಯಾರು?”

ಹೌದು, ಪರಮಾಣು ಪ್ರತಿಕೃತಿ ರಚನೆ ನಿಜಕ್ಕೂ ಚಾಲೆಂಜಿಂಗ್. ಪರಮಾಣುವಿಗೂ ಪರಮಾತ್ಮನಿಗೂ ಹೋಲಿಕೆ ಹುಟ್ಟಿಕೊಳ್ಳುವುದೇ ಅಲ್ಲಿ! ವಿಜ್ಞಾನ ಮತ್ತು ತತ್ತ್ವಜ್ಞಾನ ಒಂದರೊಳಗೊಂದು ಮಿಳಿತವಾಗುವುದೂ ಅಲ್ಲಿಯೇ! ನಾಗೇಶ ಹೆಗಡೆಯವರ ವಿವರಣೆಯನ್ನು ಇನ್ನೊಮ್ಮೆ ಗಮನಿಸಿ. ಅವರು ಹೇಳುತ್ತಿರುವುದು ಎಲೆಕ್ಟ್ರಾನ್‌ನ ಬಗ್ಗೆ. ಎಲೆಕ್ಟ್ರಾನ್ ಅಂತಿರುವಲ್ಲೆಲ್ಲ ಪರಮಾತ್ಮ ಎಂದು ಬದಲಾಯಿಸಿ ಓದಿದರೆ ‘ದೇವರು ಹೇಗಿರುತ್ತಾನೆ?’ ಎಂಬ ಪ್ರಶ್ನೆಗೆ ತತ್ತ್ವಜ್ಞಾನಿಯ ಉತ್ತರದಂತೆ ಭಾಸವಾಗುವುದಿಲ್ಲವೇ? ನಾವು ಪರಮಾತ್ಮನನ್ನು ಅಣೋರಣೀಯ ಮಹತೋಮಹೀಯ ಅಪ್ರಮೇಯ ಎಂದು ಬಣ್ಣಿಸುತ್ತೇವೆ. ನಮ್ಮ ತೃಪ್ತಿಗೋಸ್ಕರ, ನಮ್ಮ ನಂಬಿಕೆಗಳಿಗೋಸ್ಕರ ಪರಮಾತ್ಮನಿಗೆ ವಿಧವಿಧ ರೂಪಗಳನ್ನೂ ಕೊಡುತ್ತೇವೆ. ಕೊನೆಗೂ ಪರಮಾಣು ಬೇರೆ ಅಲ್ಲ, ಪರಮಾತ್ಮ ಬೇರೆ ಅಲ್ಲ. ಕಲ್ಪಿಸಿಕೊಂಡರೆ ಅದರಂಥ ವಿಸ್ಮಯ ಇನ್ನೊಂದಿಲ್ಲ!

ಸರಿ, ಈಗ ವಿಜ್ಞಾನ-ತತ್ತ್ವಜ್ಞಾನಗಳ ಸೀರಿಯಸ್‌ನೆಸ್‌ನಿಂದ ಸ್ವಲ್ಪ ಲೈಟಾದ ಪ್ರಪಂಚಕ್ಕೆ ಬರೋಣ. ನಾವೇಕೆ ಪ್ರತಿಕೃತಿಗಳನ್ನು, ಪ್ರತಿಮೆಗಳನ್ನು ಬಳಸುತ್ತೇವೆ, ಅವುಗಳಿಂದೇನು ಉಪಯೋಗ ಎಂದು ನೋಡೋಣ. ನಾನು ಹೇಳುತ್ತಿರುವುದು ಪರಮಾಣುವಿನ ಪ್ರತಿಕೃತಿಯಂಥದ್ದಲ್ಲ. ಭುವನೇಶ್ವರಿ ದೇವಿಯ ಪ್ರತಿಮೆಯಂಥದ್ದೂ ಅಲ್ಲ. ಭೌತಿಕ ರೂಪವಿಲ್ಲದೆ ಮಾತಿನಲ್ಲಿ, ಬರಹದಲ್ಲಿ ನಾವು ಪ್ರತಿಮೆಗಳನ್ನು ಕಟ್ಟುತ್ತೇವಲ್ಲ ಅಂಥವು. ಎಷ್ಟೋಸರ್ತಿ ಒಣ ಅಂಕಿ‌ಅಂಶಗಳನ್ನು ಬಳಸಿದ ವಿವರಣೆಗಿಂತ ಈರೀತಿಯ ಪ್ರತಿಮೆಗಳೇ ಹೆಚ್ಚು ಪರಿಣಾಮಕಾರಿಯಾಗುತ್ತವೆ. ಸತ್ಯಹರಿಶ್ಚಂದ್ರನ ಕಥೆಯಲ್ಲಿ ‘ವಿಶ್ವಾಮಿತ್ರ ಮಹರ್ಷಿ ರಾಜಾಹರಿಶ್ಚಂದ್ರನ ಬಳಿ ಐವತ್ತು ಲಕ್ಷ ಸುವರ್ಣನಾಣ್ಯಗಳನ್ನು ಕೇಳಿದ’ ಅಂತಿದ್ದರೆ ಆ ಕಥನ ತೀರಾ ಸಪ್ಪೆಯಾಗುತ್ತಿತ್ತು. ‘ಒಬ್ಬ ಹುಡುಗ ಆನೆಯ ಮೇಲೆ ನಿಂತು ಕವಡೆಯನ್ನು ಮೇಲಕ್ಕೆಸೆದಾಗ ಅದು ಎಷ್ಟು ಎತ್ತರಕ್ಕೆ ಚಿಮ್ಮುತ್ತದೋ ಅಷ್ಟೆತ್ತರ ರಾಶಿಯಷ್ಟು ಬಂಗಾರದ ನಾಣ್ಯಗಳನ್ನು ಕೊಡಬೇಕೆಂದು ವಿಶ್ವಾಮಿತ್ರ ಬೇಡಿಕೆಯಿಟ್ಟ’ ಎನ್ನುವಾಗ ಅದರ ಎಫೆಕ್ಟೇ ಬೇರೆ! ಹನುಮಂತ ಸಾಗರೋಲ್ಲಂಘನಕ್ಕೆ ಎದ್ದುನಿಂತಾಗ ಅಲ್ಲಿ ಸೇರಿದ್ದ ಕಪಿಗಳ ಕೂಗು ನೂರು ಯೋಜನಗಳಷ್ಟು ದೂರ ಕೇಳಿತು ಅಂತ ಹೇಳಿದರೆ ಅದು ಒಣ ಮಾಹಿತಿ. ‘ತಂದೆ ವಾಯುವನು ವಂದಿಸಿ ನಿಂದನು ಸಾಗರ ದಾಟಲು ಹನುಮಂತ... ವಾನರಸೇನೆಯ ಕೂಗಿನ ಆರ್ಭಟ ಕೇಳಿತು ಲಂಕೆಯ ಪರ್ಯಂತ’ ಅಂತಂದರೆ ಅಲ್ಲಿ ಅದ್ಭುತ ರೋಮಾಂಚನ! ಮೇಘದೂತ ಕಾವ್ಯದಲ್ಲಿ ಕಾಳಿದಾಸ ಉಜ್ಜಯಿನಿ ನಗರದ ಬಣ್ಣನೆ ಮಾಡುತ್ತಾನೆ. ಅಲ್ಲಿನ ಕಟ್ಟಡಗಳು ಇಂತಿಷ್ಟು ಎತ್ತರ ಇದ್ದವು ಅಂತ ಅಂಕಿ‌ಅಂಶಗಳನ್ನೇನೂ ಹೇಳುವುದಿಲ್ಲ ಆತ. ಅವು ಗಗನಚುಂಬಿ ಕಟ್ಟಡಗಳು, ಅವುಗಳ ಮೇಲುಪ್ಪರಿಗೆಗಳು ಮೋಡಗಳಿಗೆ ತಾಕುವಷ್ಟು ಎತ್ತರದಲ್ಲಿದ್ದವು ಎಂಬ ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುವಂತೆ ಬಹಳ ಸುಂದರವಾಗಿ ಬಣ್ಣಿಸುತ್ತಾನೆ.

ಹಾಗಂತ ಕೆಲವೊಮ್ಮೆ ಸಂಖ್ಯೆ ಬಳಸಿದ ವಿವರಣೆಯೇ ರೋಚಕವಾಗುವುದೂ ಇದೆ. “ಇವತ್ತಿನ ಕಾರ್ಯಕ್ರಮ ಅದ್ಭುತವಾಗಿತ್ತು. ಪ್ರೇಕ್ಷಕರು ಅದೆಷ್ಟು ಚಪ್ಪಾಳೆ ತಟ್ಟಿದರೆಂದರೆ ನಮ್ಮೂರಿನಲ್ಲಾಗಿದ್ದರೆ ಇದೇ ಚಪ್ಪಾಳೆಗಳಿಂದ ಸಾವಿರ ರೊಟ್ಟಿ ತಟ್ಟಬಹುದಿತ್ತು!” ಎಂದಿದ್ದರು ನನ್ನ ಅಮೆರಿಕನ್ನಡಿಗ ಮಿತ್ರ ಅನಿಲ್ ದೇಶಪಾಂಡೆ, ಇಲ್ಲಿನ ಒಂದು ಸಭಾಕಾರ್ಯಕ್ರಮದ ವಂದನಾರ್ಪಣೆಯಲ್ಲಿ. ಉತ್ತರ ಕರ್ನಾಟಕ ಮೂಲದ ದೇಶಪಾಂಡೆ ಸಾಹೇಬರಿಗೆ ಖಡಕ್ ರೊಟ್ಟಿಯ ನೆನಪು ಬಾಯಲ್ಲಿ ನೀರೂರಿಸುವುದಷ್ಟೇ ಅಲ್ಲ ರೊಟ್ಟಿ ತಟ್ಟುವಾಗಿನ ಶಬ್ದ ಕಿವಿಯಲ್ಲಿ ಗುಂಯ್‌ಗುಡುವಂತೆ ಮಾಡುತ್ತದೆ. ನನಗೆ ಸಖತ್ ತಮಾಷೆಯಾಗಿ ಕಂಡುಬಂತು ಈ ರೊಟ್ಟಿ ಪ್ರತಿಮೆ. ಚಪ್ಪಾಳೆ ಪ್ರಮಾಣ ಮತ್ತು ರೊಟ್ಟಿಗಳ ಸಂಖ್ಯೆಯಿಂದ ಯಾವುದೇ ಸಮಾರಂಭದ ಯಶಸ್ಸನ್ನಾದರೂ ಅಳೆಯಬಹುದು!

ನಿಖರತೆ ಬೇಕಂತಿಲ್ಲ, ವಾಸ್ತವದಲ್ಲಿ ಸಾಧ್ಯವೇ ಎಂಬುದೂ ಮುಖ್ಯವಲ್ಲ. ಆದರೂ ಅರ್ಥಮಾಡುವುದಕ್ಕೆ, ಅರ್ಥಮಾಡಿಸುವುದಕ್ಕೆ ಪ್ರತಿಮೆಗಳ ಬಳಕೆ ಬಹಳ ಚೆನ್ನಾಗಿರುತ್ತದೆ. ಅದರಲ್ಲೇ ಕವಿಕಲ್ಪನೆಯೂ ಸೇರಿಕೊಂಡರಂತೂ ಕೇಳುವುದೇ ಬೇಡ. ‘ಚಂದಿರನ ತಟ್ಟೆಯಲ್ಲಿ ಸೇರಿ ತಿನಬೇಕು...’ ಎಂಬ ಚಿತ್ರಗೀತೆಯ ಸಾಲು. (ಹೌದು, ಅದೇ ‘ಮೊಗ್ಗಿನ ಮನಸ್ಸು’ ಸಿನೆಮಾದ ಹಾಡು. ನನಗೆ ‘ಚಟ್ನಿಯಲ್ಲಿ’, ‘ಕಡ್ಡಿಯಲ್ಲಿ’, ‘ಚಡ್ಡಿಯಲ್ಲಿ’ ಅಂತೆಲ್ಲ ಕೇಳಿಸುತ್ತದೆ ಎಂದಿದ್ದೆನಲ್ಲ, ನಿಜವಾಗಿ ಅದು ‘ತಟ್ಟೆ’ಯಲ್ಲಿ ಅಂತಿರೋದೆಂದು ಆಮೇಲೆ ಗೊತ್ತಾಯಿತು.) ಎಂಥ ಸುಂದರ ಕಲ್ಪನೆ! ಆದರೆ ಪ್ರಾಕ್ಟಿಕಲೀ ಅದು ಸಾಧ್ಯವೇ? ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿಲೋ ಮೀಟರ್‌ಗಳಷ್ಟು ದೂರದಲ್ಲಿದ್ದಾನೆ ಚಂದ್ರ. ಇಲ್ಲಿಂದ ನಮಗೆ ತಟ್ಟೆಯಂತೆ ಕಾಣುತ್ತಾನಾದರೂ ಅಪೋಲೊ ನೌಕೆಯಲ್ಲಿ ಹೋಗಿಬಂದವರಿಗೆ ತಿಳಿದಿದೆ ಚಂದ್ರನೆಂದರೆ ತಟ್ಟೆಯಲ್ಲ, ಭೂಮಿಯಂತೆಯೇ ಗೋಲಾಕೃತಿ. ಸರಿಸುಮಾರು ಭೂಮಿಯ ಮೂರನೇ ಒಂದರಷ್ಟು ಗಾತ್ರ. ಒಂದುವೇಳೆ ತಟ್ಟೆಯೇ ಅಂತಂದುಕೊಂಡರೂ ಅಷ್ಟು ದೊಡ್ಡ ತಟ್ಟೆಯಲ್ಲಿ ಒಂದೆರಡು ಇಡ್ಲಿ ಅಥವಾ ಪೂರಿ ಬಡಿಸಿಟ್ಟರೆ ಹೇಗೆ ಕಾಣಬಹುದು? ಅಥವಾ, ನಾವು ಭೂಮಿಯಲ್ಲಿದ್ದುಕೊಂಡೇ ಚಂದ್ರ ನಮ್ಮ ಊಟದ ತಟ್ಟೆ ಎಂದುಕೊಂಡರೆ ಅದರಿಂದ ತಿನ್ನಲು ನಮ್ಮ ಕೈಯನ್ನು ನಾಲ್ಕು ಲಕ್ಷ ಕಿಲೋಮೀಟರ್‌ನಷ್ಟು ಚಾಚಬೇಕು, ಅಥವಾ ಅಷ್ಟುದ್ದದ ಚಮಚ ಬೇಕು!

ನಾಲ್ಕು ಲಕ್ಷದ ಸಂಗತಿ ಬಿಡಿ. ಎಪ್ಪತ್ತೈದು ಲಕ್ಷ ಕೋಟಿ ಎಂಬ ಒಂದು ಸಂಖ್ಯೆಯ ವಿಚಾರ ತಿಳಿಸುತ್ತೇನೆ ಈಗ. ಈ ಸಂಖ್ಯೆಯನ್ನು ಬರೆಯಲು 75ರ ಬಲಗಡೆಯಲ್ಲಿ ಹನ್ನೆರಡು ಸೊನ್ನೆಗಳು ಬೇಕು. 75 ಲಕ್ಷ ಕೋಟಿ ಏನು ಗೊತ್ತೇ? ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹೆಸರಿನಲ್ಲಿರುವ ಕಪ್ಪುಹಣ ರೂಪಾಯಿಗಳಲ್ಲಿ! ಬಹುಶಃ ಸಂಖ್ಯೆಯ ರೂಪದಲ್ಲಿ ಅಂಥ ದೊಡ್ಡ ಮೊತ್ತವೆಂದೇನೂ ಅನಿಸುವುದಿಲ್ಲ. 2ಜಿ ಸ್ಪೆಕ್ಟ್ರಂ ಹಗರಣದ ಮೊತ್ತ ಸುಮಾರು 2 ಲಕ್ಷ ಕೋಟಿ ರೂಪಾಯಿಗಳು ಎಂದು ಓದಿದ ನೆನಪು. ಅದರ ಮೂವತ್ತೇಳುವರೆ ಪಟ್ಟು ಇದೆ ಈ ಮೊತ್ತ. ಸರಿ, ಈಗ ಇದಕ್ಕೆ ಒಂದು ಪ್ರತಿಮೆ ಕಟ್ಟೋಣ. ನಿಜಕ್ಕೂ ಎಷ್ಟೊಂದು ದೊಡ್ಡ ಮೊತ್ತವಿದು ಎಂದು ಮನದಟ್ಟಾಗುವಂತಿರಬೇಕು ಪ್ರತಿಮೆ. 75 ಲಕ್ಷ ಕೋಟಿ ರೂಪಾಯಿಗಳು ಸ್ವಿಸ್ ಬ್ಯಾಂಕ್‌ನಿಂದ ಹೊರಬಂದು ಹಾರ್ಡ್ ಕ್ಯಾಷ್ ಆಗಿ ಭಾರತಕ್ಕೆ ಬಂತು ಅಂತಿಟ್ಕೊಳ್ಳೋಣ. ಸಾವಿರ ರೂಪಾಯಿಗಳ ಗರಿಗರಿ ನೋಟುಗಳು. ಒಂದು ನೋಟಿನ ಉದ್ದ 18 ಸೆ.ಮೀ, ಅಗಲ 8 ಸೆ.ಮೀ. ನೂರು ನೋಟುಗಳ ಕಟ್ಟು ಮಾಡಿದರೆ ಅದರ ದಪ್ಪ ಸುಮಾರು 1.7 ಸೆ.ಮೀ ಎಂದು ‘ನೋಟ್’ ಮಾಡಿಟ್ಟುಕೊಳ್ಳೋಣ. ಈಗ ಒಂದು ಲಾರ್ಜ್ ಸೈಜ್ ಸೂಟ್‌ಕೇಸಿನ ಅಳತೆಗಳನ್ನು ನೋಡೋಣ. 71 ಸೆ.ಮೀ ಉದ್ದ, 53 ಸೆ.ಮೀ ಅಗಲ, 24 ಸೆ.ಮೀ ಎತ್ತರ. ಒಂದು ಸೂಟ್‌ಕೇಸ್‌ನೊಳಗೆ ಒಟ್ಟು 360 ಕಟ್ಟುಗಳು ತುಂಬಿಕೊಳ್ಳುತ್ತವೆ. ಒಂದು ಕಟ್ಟಿನಲ್ಲಿ ಒಂದು ಲಕ್ಷ ರೂಪಾಯಿ, ಆದ್ದರಿಂದ ಒಂದು ಸೂಟ್‌ಕೇಸ್‌ನಲ್ಲಿ ಒಟ್ಟು 3.6 ಕೋಟಿ ರೂಪಾಯಿ. ಒಂದು ಅಂಬಾಸಿಡರ್ ಕಾರಿನ ಡಿಕ್ಕಿಯಲ್ಲಿ ನಾಲ್ಕು ಸೂಟ್‌ಕೇಸ್‌ಗಳು ಹಿಡಿಸುತ್ತವೆ ಅಂತಿರಲಿ. ಹಾಗಾಗಿ ಒಂದು ಕಾರಿನಲ್ಲಿ ಒಟ್ಟು 14.4 ಕೋಟಿ ರೂಪಾಯಿಗಳು. ಸ್ವಿಸ್ ಬ್ಯಾಂಕ್‌ನಿಂದ ಹೊರಬಂದ ಅಷ್ಟೂ ಮೊತ್ತವನ್ನು ತುಂಬಲು 520833 ಕಾರುಗಳು ಬೇಕು. ಒಂದು ಕಾರಿನ ಉದ್ದ ಸುಮಾರು ನಾಲ್ಕೂಕಾಲು ಮೀಟರ್ ಅಂತಿಟ್ಟುಕೊಳ್ಳೋಣ. ಒಂದರಹಿಂದೆ ಒಂದರಂತೆ ಈ ಎಲ್ಲ ಕಾರುಗಳು ಹೊರಟರೆ, ನಡುವೆ ತಲಾ ಅರ್ಧ ಮೀಟರ್ ಗ್ಯಾಪ್ ಅಂತಿಟ್ಟುಕೊಂಡರೂ ಮೆರವಣಿಗೆ ಸುಮಾರು 2500 ಕಿ.ಮೀ ಉದ್ದವಾಗುತ್ತದೆ. ಅಂದರೆ ದಿಲ್ಲಿಯಿಂದ ಕನ್ಯಾಕುಮಾರಿವರೆಗೆ ಸರಳರೇಖೆ ಎಳೆದರೆ ಅಷ್ಟು ಉದ್ದ!

ಏನು? “ಭಗವಂತಾ...” ಎಂದು ನಿಟ್ಟುಸಿರಿಟ್ಟಿರಾ? ಭಗವಂತ ಅಣೋರಣೀಯ, ಮಹತೋಮಹೀಯ ಮತ್ತು ಅಪ್ರಮೇಯ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.
Podbean App

Play this podcast on Podbean App