Episodes
Saturday Jul 28, 2012
Maththakokila Melody
Saturday Jul 28, 2012
Saturday Jul 28, 2012
ದಿನಾಂಕ 29 ಜುಲೈ 2012
ಹುದುಗಿ ಹಾಡುವ ಮತ್ತಕೋಕಿಲ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ವಾಣಿ ಪತ್ರಿಕೆಯ ‘ವಿಜಯ ವಿಹಾರ’ ಸಾಪ್ತಾಹಿಕ ಪುರವಣಿಯಲ್ಲಿಯೂ ಭಾಗ-1 ಮತ್ತು ಭಾಗ-2 ಓದಬಹುದು.] * * * ರಸಋಷಿ ಕುವೆಂಪು ಬರೆದ ‘ದೋಣಿ ಗೀತೆ’ ಯಾರಿಗೆ ತಾನೆ ಗೊತ್ತಿಲ್ಲ? ಕನ್ನಡದ ಅತ್ಯುತ್ತಮ ಭಾವಗೀತೆಗಳಲ್ಲಿ ಒಂದಾಗಿ, ಸಿನೆಮಾದಲ್ಲಿ ಅಳವಡಿಸಲಾದ ಭಾವಗೀತೆಗಳ ಪೈಕಿ ಸರ್ವಶ್ರೇಷ್ಠ ದರ್ಜೆಯದಾಗಿ, ಜನಮಾನಸದಲ್ಲಿ ಹಚ್ಚಹಸುರಾಗಿ ನಿಂತಿರುವ ಅದ್ಭುತ ಗೀತೆ. ದೋಣಿಯ ಚಲನೆಯ ಲಯವೇ ಈ ಪದ್ಯದ ಲಯ ಕೂಡ. ಸುಂದರ ಮುಂಜಾವು, ಸೂರ್ಯೋದಯದ ಸೊಬಗು, ವಿಶಾಲವಾದ ಕೆರೆಯಲ್ಲಿ ದೋಣಿ ಯಾತ್ರೆ. ಗಾನರೂಪದಲ್ಲಿ ಪ್ರಕೃತಿಸೌಂದರ್ಯದ ವರ್ಣನೆಯ ಜತೆಯಲ್ಲೇ ಬದುಕು ಅನಂತವೆಂಬ ಸಂದೇಶ. ಆಹಾ! ಕಾವ್ಯದ ರಸಘಟ್ಟಿಯನ್ನೇ ನಮಗಿತ್ತಿದ್ದಾರೆ ಕುವೆಂಪು. ಈ ಗೀತೆಯ ಎರಡನೇ ಚರಣವನ್ನು ನೀವೊಮ್ಮೆ ವಿಶೇಷವಾಗಿ ಗಮನಿಸಬೇಕು. ಅದರಲ್ಲೂ ನಾಲ್ಕನೆಯ ಸಾಲು. ತತ್ರಾಪಿ ಮೂರನೇ ಪದ. ‘ಮತ್ತಕೋಕಿಲ’! ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ ಮಿಂಚುತೀರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿದೆ ಹುದುಗಿ ಹಾಡುವ ಮತ್ತಕೋಕಿಲ ಮಧುರವಾಣಿಯ ತರುತಿದೆ ಏನಿದು ಮತ್ತಕೋಕಿಲ? ಮಿಸ್ ಲೀಲಾವತಿ ಚಿತ್ರದ ‘ದೋಣಿ ಸಾಗಲಿ ಮುಂದೆ ಹೋಗಲಿ...’ಯನ್ನು ನೀವೇನಾದರೂ ಇಂಗ್ಲಿಷ್ ಸಬ್ಟೈಟಲ್ಗಳೊಂದಿಗೆ ನೋಡಿದರೆ ಅಲ್ಲಿ ಮತ್ತಕೋಕಿಲ ಮಧುರವಾಣಿಯನ್ನು the excited cuckoo's melody ಎಂದೇ ಅನುವಾದಿಸಿದ್ದಾರೆ. ಹುದುಗಿ ಹಾಡುವ ಎಂದರೆ ಮರೆಯಲ್ಲಿ ಅಡಗಿಕೊಂಡು ಹಾಡುವ ಎಂದರ್ಥ. ಸಂತಸದಿಂದ ಉನ್ಮತ್ತಗೊಂಡ ಕೋಗಿಲೆ ಇಂಪಾಗಿ ಹಾಡುತ್ತದಂತೆ. ಈ ಹಾಡಿನಲ್ಲಿ ಪ್ರಕೃತಿವರ್ಣನೆ ಇದೆ ನಿಜ, ಆದರೆ ಅದು ವಸಂತ ಋತುವಿನ ದೃಶ್ಯ ಅಂತೇನೂ ಕವಿ ಬಣ್ಣಿಸಿಲ್ಲ. ಉನ್ಮತ್ತ ಕೋಗಿಲೆ ಮಧುರವಾಗಿ ಉಲಿಯುತ್ತಿದೆ ಎನ್ನುವ ಅಂಶವೊಂದನ್ನು ಬಿಟ್ಟರೆ ದೋಣಿ ಹಾಡು ನಮಗೆ ಶರದೃತುವಿನಲ್ಲೂ ಹೇಮಂತ ಋತುವಿನಲ್ಲೂ ಅದೇ ಪ್ರಮಾಣದ ರೋಮಾಂಚನ ನೀಡಬಲ್ಲದು. ಅಂದಮೇಲೆ ಯಾವುದೋ ನಿರ್ದಿಷ್ಟ ಕಾರಣಕ್ಕಾಗಿ ‘ಮತ್ತಕೋಕಿಲ’ ಪದಪ್ರಯೋಗ ಮಾಡಿದ್ದಾರೆ ಕುವೆಂಪು. ಇರಲಿ, ಸದ್ಯಕ್ಕೆ ಆ ಪದವನ್ನಷ್ಟೇ ನೆನಪಿನಲ್ಲಿಟ್ಟುಕೊಳ್ಳೋಣ. ಈಗ ನಿಮಗೊಂದು ಪ್ರಶ್ನೆ. ದೋಣಿ ಗೀತೆಯಂತೆಯೇ ಜನಮನದಲ್ಲಿ ಅಚ್ಚಳಿಯದೆ ನಿಂತಿರುವ ಇನ್ನೂ ಕೆಲವು ಹಾಡುಗಳನ್ನು ಉಲ್ಲೇಖಿಸಿದರೆ ಅವುಗಳೆಲ್ಲದರಲ್ಲೂ ಇರುವ ಒಂದು ಸಾಮಾನ್ಯ ಅಂಶ ಏನೆಂಬುದನ್ನು ಗುರುತಿಸುವುದು ನಿಮಗೆ ಸಾಧ್ಯವಾಗಬಹುದೇ? ಮೊದಲನೆಯದು ‘ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಅಳವಡಿಸಿಕೊಂಡ, ಸೋಸಲೆ ಅಯ್ಯಾಶಾಸ್ತ್ರಿಗಳು ಬರೆದ, ಶಾಲೆಗಳಲ್ಲಿ ಪ್ರಾರ್ಥನಾಗೀತೆಯಾಗಿ ಜನಪ್ರಿಯವಾದ ಹಾಡು- ‘ಸ್ವಾಮಿದೇವನೆ ಲೋಕಪಾಲನೆ ತೇನಮೋಸ್ತುನಮೋಸ್ತುತೇ’. ಎರಡನೆಯದು, ಗೋಪಾಲಕೃಷ್ಣ ಅಡಿಗರ ಪ್ರಖ್ಯಾತ ಕವಿತೆ, ‘ಅಮೆರಿಕಾ ಅಮೆರಿಕಾ’ ಚಿತ್ರದಲ್ಲಿ ಅಳವಡಿಸಿಕೊಂಡ ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’. ಇನ್ನೊಂದು, ಅಷ್ಟೇನೂ ಜನಪ್ರಿಯವಾಗದ ಆದರೆ ತುಂಬ ಚಂದದ ಪದ್ಯ ವಿ.ಸೀತಾರಾಮಯ್ಯನವರ ರಚನೆ ‘ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು’. ಪಿ.ಸುಶೀಲಾ ಧ್ವನಿಯಲ್ಲಿ ಇದನ್ನು ‘ಮಹಾತ್ಯಾಗ’ ಚಿತ್ರದಲ್ಲಿ ಸೇರಿಸಿಕೊಳ್ಳಲಾಗಿತ್ತು. ಇವಿಷ್ಟೇ ಆಗಿದ್ದರೆ, ಭಾವಗೀತೆಯೆಂದು ರಚಿತವಾಗಿ ಕನ್ನಡ ಚಿತ್ರಗೀತೆಗಳಾದ ಪದ್ಯಗಳು- ಎಂಬುದೇ ಸಾಮಾನ್ಯ ಅಂಶ ಎನ್ನಬಹುದಿತ್ತು. ಅದು ಸಮಂಜಸವೂ ಆಗುತ್ತಿತ್ತು. ಆದರೆ ಇನ್ನೂ ಒಂದಿಷ್ಟು ಪದ್ಯಗಳನ್ನು ಇದೇ ಗುಂಪಿಗೆ ಸೇರಿಸಿದರೆ? ಕುವೆಂಪು ಅವರದೇ ಮತ್ತೊಂದು ರಚನೆ ‘ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೇ’- ಏಳನೇ ತರಗತಿಯಲ್ಲಿ ಕನ್ನಡಭಾರತಿ ಪಠ್ಯಪುಸ್ತಕದಲ್ಲಿತ್ತು. ಇನ್ನೊಂದು, ಕರಾವಳಿಯ ಶಾಲೆಗಳಲ್ಲಿ ಪ್ರಾರ್ಥನೆಪದ್ಯವಾಗಿ ಜನಪ್ರಿಯವಾದ, ಮುಂಡಾಜೆ ರಾಮಚಂದ್ರ ಭಟ್ಟರು ಬರೆದ ‘ಶಾರದಾಂಬೆಯೆ ವಿಧಿಯ ರಾಣಿಯೆ ನಿನಗೆ ನಾ ವಂದಿಸುವೆನು/ ದಾರಿ ಕಾಣದೆ ಬಳಲುತಿರುವೆನು ತೋರಿಸೈ ಸತ್ಪಥವನು’.ಇತ್ತೀಚೆಗೆ ನಿಧನ ಹೊಂದಿದ ಶಂ.ಗು.ಬಿರಾದಾರರನ್ನು ನೆನಪು ಮಾಡಿಕೊಂಡು ‘ನಾವು ಎಳೆಯರು ನಾವು ಗೆಳೆಯರು ಹೃದಯ ಹೂವಿನ ಹಂದರ/ ನಾಳೆ ನಾವೇ ನಾಡ ಹಿರಿಯರು ನಮ್ಮ ಕನಸದು ಸುಂದರ’ ಸಹ ಇರಲಿ. ಬರಿ ಕನ್ನಡ ಪದ್ಯಗಳಷ್ಟೇ ಏಕೆ, ಇಲ್ಲೊಂದು ತುಳಸೀದಾಸ ಭಜನೆ- ‘ರಾಮಚಂದ್ರ ಕೃಪಾಳು ಭಜಮನ ಹರಣ ಭವಭಯದಾರುಣಂ/ ಕಂಜಲೋಚನ ಕಂಜಮುಖಕರ ಕಂಜ ಪದಕಂಜಾರುಣಂ’. ಹಾಗೆಯೇ ಒಂದು ಹಿಂದಿ ಚಿತ್ರಗೀತೆ- ‘ಆಪ್ಕೀ ನಜರೋನೇ ಸಮ್ಝಾ ಪ್ಯಾರ್ಕೇ ಕಾಬಿಲ್ ಮುಝೇ’ (ರಾಜಾ ಮೆಹದೀ ಆಲೀಖಾನ್ ರಚನೆ ‘ಅನ್ಪಢ್’ ಚಿತ್ರದ್ದು). ಅದಾದಮೇಲೆ ವಾದಿರಾಜರ ಕೃಷ್ಣಾಷ್ಟಕದ ಸಾಲುಗಳು- ‘ಪಾಲಯಾಚ್ಯುತ ಪಾಲಯಾಜಿತ ಪಾಲಯಾ ಕಮಲಾಲಯ/ ಲೀಲಯಾಧೃತ ಭೂಧರಾಂಬುರುಹೋದರ ಸ್ವಜನೋದರ’. ಒಂದು ಜನಪದಗೀತೆಯನ್ನೂ ಸೇರಿಸಿ ಗೀತಗುಚ್ಛವನ್ನು ಹಿಗ್ಗಿಸೋಣ. ಇದು ತುಳುನಾಡಿನಲ್ಲಿ ಬದುಕಿದ್ದನೆನ್ನಲಾದ ಅಗೋಳಿ ಮಂಜಣ್ಣ ಎಂಬ ಐತಿಹಾಸಿಕ ಪುರುಷನ ಕತೆ ಹೇಳುವ ತುಳು ಪಾಡ್ದನ: ಕಡಲ ಕರೆಟೊಪು ನಮ್ಮ ಈ ತುಳುನಾಡ ಗದ್ದೆನ್ ತೂವೊಡು ಗುತ್ತು ಬರ್ಕೆಡ್ ಇತ್ತಿ ಬಂಟೆರ್ ಬಾರಗೆರೆ ಕತೆ ಕೇಣೊಡು ಇಷ್ಟೆಲ್ಲ ವಿಭಿನ್ನವೆನಿಸುವ ಹಾಡುಗಳಲ್ಲಿ ನಿಜಕ್ಕೂ ಏನಿರಬಹುದು ಸಾಮಾನ್ಯ ಅಂಶ? ಒಂದೇ ರಾಗ ಆಧಾರಿತ ಹಾಡುಗಳಿರಬಹುದೇ? ಇಲ್ಲವಲ್ಲ! ‘ದೋಣಿ ಸಾಗಲಿ...’ಯನ್ನು ಪಹಾಡಿ ರಾಗದಲ್ಲಿ ಹಾಡುತ್ತಾರೆ. ‘ಯಾವ ಮೋಹನ ಮುರಳಿ...’ ರತ್ನಮಾಲಾ ಪ್ರಕಾಶ್ ಹಾಡಿರುವುದು ದೇಶ್ ರಾಗದಲ್ಲಿ. ಅಮೆರಿಕಾ ಅಮೆರಿಕಾ ಚಿತ್ರದಲ್ಲಿರುವ ಆವೃತ್ತಿ ಬೇರೆ ಯಾವುದೋ ರಾಗದಲ್ಲಿ ಹಾಡಿದ್ದು. ಇನ್ನು ‘ಆಪ್ಕೀ ನಜರೋಂನೆ ಸಮ್ಝಾ...’ ಅಠಾಣ ರಾಗ. ಹಾಗಾಗಿ ರಾಗವಂತೂ ಸಾಮಾನ್ಯ ಅಂಶವಾಗಿಲ್ಲ. ಮತ್ತೇನು? ಮತ್ತಕೋಕಿಲ! ಹೌದು. ಮೇಲೆ ಉಲ್ಲೇಖಿಸಿದ ಎಲ್ಲ ಕೃತಿಗಳೂ ‘ಮತ್ತಕೋಕಿಲ’ ಎಂಬ ಛಂದಸ್ಸಿಗೆ ಬದ್ಧವಾಗಿರುವಂಥವು. ಮಂದಾಕ್ರಾಂತಾ, ಮತ್ತೇಭವಿಕ್ರೀಡಿತ, ಚಂಪಕಮಾಲಾ, ಉತ್ಪಲಮಾಲಾ ಅಂತೆಲ್ಲ ಛಂದೋವೃತ್ತಗಳ ಹೆಸರನ್ನು ನೀವು ಕೇಳಿರಬಹುದು. ಅವುಗಳಂತೆಯೇ ಇದೂ ಒಂದು, ಮತ್ತಕೋಕಿಲ. ‘ತಾನ ತಾನನ ತಾನ ತಾನನ ತಾನ ತಾನನ ತಾನ ತಾ’ ಎಂದು ಗುಣುಗುಣಿಸಿದರೆ ಹೇಗಿರುತ್ತದೋ ಹಾಗೆ ಇದರ ಲಯ. ‘ಮತ್ತಕೋಕಿಲ ಮತ್ತಕೋಕಿಲ ಮತ್ತಕೋಕಿಲ ಕೋಕಿಲಾ’ ಎಂದೂ ನೆನಪಿಟ್ಟುಕೊಳ್ಳಬಹುದು. ಪ್ರತಿಯೊಂದು ಪಾದದಲ್ಲೂ 3, 4, 3, 4, 3, 4, 3 ಮತ್ತೊಂದು ಗುರು- ಥೇಟ್ ಅಲೆಗಳ ಮೇಲೆ ದೋಣಿ ಸಾಗಿದಂತೆ. ಅದಕ್ಕಿಂತಲೂ ಶೃಂಗಾರಮಯವಾಗಿ ಹೇಳುವುದಾದರೆ ‘ಮನ್ಮನೊ ಮನ್ಮನೊಪ್ಯೇಷಃ ಮತ್ತಕೊಕಿಲ ನಿಸ್ವನಃ’- ಶಯ್ಯಾಗೃಹದಲ್ಲಿ ಪ್ರಿಯತಮೆ ಮತ್ತು ಪ್ರಿಯಕರನ ಪಿಸುಮಾತುಗಳು (ಮನ್ಮನೊ ಎಂದರೆ ಮುಣುಮುಣು ಎಂದು ಮೆಲುದನಿಯ ಮಾತು) ಪರಸ್ಪರ ಪ್ರೀತಿವಿಶ್ವಾಸಪೂರ್ವಕವಾದುವು ವಿನಿಮಯವಾಗುವಾಗ ಆ ಸಂವಾದ ಮತ್ತಕೋಕಿಲ ವೃತ್ತದಂತಿರುತ್ತದಂತೆ! ಮತ್ತಕೋಕಿಲ ಎನ್ನುವುದು ತೆಲುಗು ಹೆಸರು. ಕನ್ನಡ ಛಂದಸ್ಸಿನಲ್ಲಿ ಇದು ‘ಮಲ್ಲಿಕಾಮಾಲೆ’. ನಾಗವರ್ಮನ ಛಂದೋಂಬುಧಿ ಗ್ರಂಥದಲ್ಲಿ* ಇದರ ವ್ಯಾಖ್ಯೆ ಬರುತ್ತದೆ- ಜ್ವಾಲಿ ವಾಯು ದಿನೇಶಯುಗ್ಮ ಶಶಾಂಕ ಪಾವಕರೆಂಬಿವರ್ ಲೀಲೆಯಿಂ ಬರೆ ವಿಶ್ರಮಂ ವಸುಸಂಖ್ಯೆಯೊಳ್ ನಿಲೆ ಭಾಮಿನೀ ನೀಲಲೋಲ ಸಹಸ್ರಕುಂತಳೆ ಸಂದುದಿಂತಿದು ಮಲ್ಲಿಕಾ- ಮಾಲೆ ಯೆಂಬುದು ನಿಶ್ಚಯಂ ಕವಿರಾಜಹಂಸವಿನಿರ್ಮಿತಂ ಆದರೆ ಕನ್ನಡದ ಕವಿಗಳೂ ಇದನ್ನು ಮತ್ತಕೋಕಿಲ ಎಂದೇ ಗುರುತಿಸಲು ಇಷ್ಟಪಡುತ್ತಾರೆ. ಅದಕ್ಕೆ ಕಾರಣವೂ ಇದೆ. ಮಲ್ಲಿಕಾಮಾಲೆ ಎಂಬ ಪದವನ್ನು ಇದೇ ಛಂದಸ್ಸಿನಲ್ಲಿರುವ ಪದ್ಯದಲ್ಲಿ ಒಂದೇ ಪಾದದಲ್ಲಿ ಬರೆಯಲಿಕ್ಕಾಗುವುದಿಲ್ಲ. ಮಾತ್ರೆಗಳ ಲೆಕ್ಕ ತಪ್ಪುತ್ತದೆ. ಮೇಲಿನ ಪದ್ಯದಲ್ಲಿರುವಂತೆ ಪಾದಗಳ ಮಧ್ಯೆ ವಿಂಗಡಿಸಿ ಬರೆಯಬೇಕಾಗುತ್ತದೆ. ಆದರೆ ಮತ್ತಕೋಕಿಲ ಪದ ಹಾಗಲ್ಲ. ಮಾತ್ರೆಗಳ ಲೆಕ್ಕಾಚಾರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ನಂದೀಛಂದಸ್ಸು ಗ್ರಂಥದ* ಈ ಕೆಳಗಿನ ಪದ್ಯವನ್ನು ಗಮನಿಸಿ: ಪಾವಕಾನಿಲ ಪದ್ಮಬಾಂಧವ ಭಾನುಚಂದ್ರ ಕೃಶಾನುಗಳ್ ಮಾವರಾಪ್ತ ವಿರಾಮಮುಂ ಬರೆ ಮತ್ತಕೋಕಿಲ ಮೆಂಬುದೇಂ ಭಾವಜಾರಿಯ ಭಕ್ತಸಂಕುಲ ಭುಕ್ತಿ ಮುಕ್ತಿ ವಿಧಾಯಿನೀ ಸಾವಧಾನದೆ ಕೇಳು ಸರ್ವರ ಸಮ್ಮತಂ ತಿರಿಲೋಕದೊಳ್ ಮತ್ತಕೋಕಿಲ ಎಂಬ ಪದವನ್ನು ಮೊತ್ತಮೊದಲಿಗೆ ಬಳಸಿದವನು ನನ್ನೆಚೋಡನೆಂಬ ತೆಲುಗು ಕವಿ ಎನ್ನುತ್ತಾರೆ ವಿದ್ವಾಂಸರು. ಈತನ ‘ಕುಮಾರಸಂಭವಮು’ ಕಾವ್ಯದಲ್ಲಿನ* ಒಂದು ಪದ್ಯ ಹೀಗಿದೆ. ಮುಂಜಾನೆ ಉದ್ಯಾನದಲ್ಲಿ ಕುಳಿರ್ಗಾಳಿ ಬೀಸುತ್ತಿದ್ದಾಗ ಕೋಗಿಲೆಗಳು ಗಾಳಿಗೆ ಹೇಳುತ್ತವಂತೆ: ‘ಎಲೈ ಪವನನೇ, ನೀನೇನೋ ಮೆಲ್ಲಗೆ ಬೀಸುತ್ತಿದ್ದಿ. ಮನ್ಮಥನು ನಿನ್ನ ಮೇಲೆ ದಂಡೆತ್ತಿ ಬರುವ ಮೊದಲು ನೀನಾಗಿಯೇ ಅವನ ಮೇಲೆರಗು. ಇಲ್ಲದಿದ್ದರೆ ಈ ವಸಂತ ನಿನ್ನನ್ನು ಮುಗಿಸಿಬಿಡಬಹುದು, ಎಚ್ಚರ!’ ಮೆತ್ತಮೆತ್ತನ ಕ್ರಾಲು ದೀವು ಸಮೀರಣುಂಡ ಮನೋಭವುಂ ಡೆತ್ತಕುಂಡಗ ವೇಗಕೂಡಗ ನೆತ್ತುಮೆತ್ತಕ ತಕ್ಕಿನನ್ ಜತ್ತು ಸುಮ್ಮು ವಸಂತುಚೇನನಿ ಚಾಟುನಟ್ಲು ಚೆಲಂಗೆನಾ ಮತ್ತಕೋಕಿಲ ಲಾರಮಿಂಗಡು ಮಾಸರಂಬಗು ನಾಮನಿನ್ ಮತ್ತಕೋಕಿಲದ ಸೊಬಗೇನೆಂದರೆ ಇದಕ್ಕೆ ಉದಾಹರಣೆಯಾಗಿ ಹಳಗನ್ನಡದ ಜಟಿಲ ಕಾವ್ಯಭಾಗಗಳೇ ಆಗಬೇಕಂತಿಲ್ಲ. ‘ತಾನ ತಾನನ ತಾನ ತಾನನ ತಾನ ತಾನನ ತಾನ ತಾ’ ಲಯದಲ್ಲಿ ಏನನ್ನೇ ಗುಣುಗುಣಿಸಿದರೂ ಅದು ಮತ್ತಕೋಕಿಲವಾಗುತ್ತದೆ! ಶತಾವಧಾನಿ ಡಾ.ಆರ್.ಗಣೇಶ್ ನಿರ್ವಹಿಸುವ ‘ಪದ್ಯಪಾನ’ ಅಂತರಜಾಲ ವೇದಿಕೆಯಲ್ಲಿ ಸದಸ್ಯ ಕೆ.ಎಸ್.ಮಂಜುನಾಥ ಒಮ್ಮೆ ಬರೆದಿದ್ದರು: “ನನ್ನ ಮಗ ಆರು ವರ್ಷದ ಪೋರ ಒಂದುದಿನ ‘ಊಟ ಮಾಡುವ ಟೈಮು ಬಂದಿತು ಬೇಗ ಬನ್ನಿರಿ ಎಲ್ಲರೂ’ ಎಂದು ರಾಗವಾಗಿ, ಲಯಬದ್ಧವಾಗಿ ಕೂಗುತ್ತಾ ಊಟಕ್ಕೆ ಓಡಿದ್ದ! ಒಂದಿನಿತೂ ಎಡರುತೊಡರಿಲ್ಲ, ಬೇಡದ ಎಳೆತವಿಲ್ಲ, ಮಾತ್ರಾಲೋಪವಿಲ್ಲ. ಇನ್ನೂ ಕನ್ನಡವನ್ನೇ ಅಕ್ಷರ ಕೂಡಿಸಿಕೊಂಡು ಪ್ರಯಾಸದಿಂದ ಓದುವವ, ಮತ್ತಕೋಕಿಲ ವೃತ್ತದ ಒಂದಿಡೀ ಸಾಲನ್ನು ನಿರಾಯಾಸವಾಗಿ, ಸಮಯಸ್ಫೂರ್ತಿಯಿಂದ ಒದರಿದ್ದ! ಮತ್ತೆ ಮಲಗುವ ಸಮಯದಲ್ಲಿ ಮಾಮೂಲಿನಂತೆ ಕತೆ ಕೇಳಿದ ನಂತರ ಹೊರಳಿ ಮಲಗುತ್ತಾ ಮತ್ತೊಂದು ಸಾಲು- ಊಟವಾಯಿತು ನಿದ್ದೆ ಬಂದಿತು ಹೊದ್ದು ತಾಚಿಯ ಮಾಡುವೆ!” ಅಷ್ಟಾಗಿ ಕುವೆಂಪು ಆದರೂ ದೋಣಿ ಗೀತೆಯನ್ನು ಕಾಗದ ಪೆನ್ನು ಎತ್ತಿಕೊಂಡು ಈಗ ಕವಿತೆ ಬರೆಯುತ್ತೇನೆ ಎಂದು ಪಟ್ಟುಹಿಡಿದು ಕುಳಿತು ಪದಗಳಿಗಾಗಿ ತಡಕಾಡುತ್ತ ಬರೆದದ್ದಲ್ಲ. ಮೈಸೂರಿನಲ್ಲಿ ಒಂಟಿಕೊಪ್ಪಲಿನಿಂದ ಮಹಾರಾಜಾ ಕಾಲೇಜಿನ ಕಡೆಗೆ ಬರುವಾಗ ಕುಕ್ಕನಹಳ್ಳಿ ಕೆರೆಯನ್ನು ದೋಣಿ ಮೂಲಕ ದಾಟುತ್ತಿದ್ದ ಕಾಲವದು. ಅಂಥದೊಂದು ದೋಣಿಯಾತ್ರೆಯ ವೇಳೆ ಪಯಣಿಗನಾಗಿದ್ದ ಕುವೆಂಪು, ಹುಟ್ಟು ಹಾಕುತ್ತಿದ್ದವರ ಉತ್ಸಾಹವರ್ಧನೆಗಾಗಿ ದೋಣಿಯಲ್ಲಿ ಕುಳಿತಿದ್ದಾಗಲೇ ರಚಿಸಿ ಸ್ವತಃ ಹಾಡಿದ ಆಶುಕವಿತೆ ಅದು. ಎಂಥ ಚಂದ ಮತ್ತಕೋಕಿಲ ವೃತ್ತದ ಛಂದ! ಅಷ್ಟೇಅಲ್ಲ, ವೃತ್ತದ ಹೆಸರೂ ಪದ್ಯದಲ್ಲೇ ಬರುವಂತೆ ಮುದ್ರಾಲಂಕಾರ ಬಂಧ! ಕವಿಕೋಗಿಲೆ ಎನ್ನುವುದು ಅದಕ್ಕೇ ಅಲ್ಲವೇ? ಹುದುಗಿ ಹಾಡುವ ಮತ್ತಕೋಕಿಲ! * * * [* ಈ ಬರಹದಲ್ಲಿ ಉಲ್ಲೇಖಿಸಲಾದ ಹಳಗನ್ನಡ ಮತ್ತು ತೆಲುಗು ಪದ್ಯಗಳನ್ನು ವಾಷಿಂಗ್ಟನ್ನಲ್ಲಿರುವ ಹಿರಿಯ ಕನ್ನಡಿಗ ಜೆ.ಕೆ.ಮೋಹನ್ ರಾವ್ ಅವರ ಸಂಗ್ರಹದಿಂದ ಬಳಸಿಕೊಂಡಿದ್ದೇನೆ. ಅವರಿಗೆ ನನ್ನ ಕೃತಜ್ಞತೆಗಳು.]Version: 20240731
Comments (0)
To leave or reply to comments, please download free Podbean or
No Comments
To leave or reply to comments,
please download free Podbean App.