ಪದ-ಶ್ರಾವ್ಯ

ಈಗ ಆಡಿಯೋ ಟಚ್!

28
May 2011
Midnight Mysurpak
Posted in DefaultTag by sjoshi at 9:08 am

ದಿನಾಂಕ  29 ಮೇ 2011ರ ಸಂಚಿಕೆ...

ಮಧ್ಯರಾತ್ರಿಯಲಿ ಮೈಸೂರ್‌ಪಾಕ್ ಮೆಲ್ಲುವಾಸೆ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ದೇನಿದು ಬಸುರಿಯ ಬಯಕೆ ಇದ್ದಹಾಗಿದೆ ಅಂದ್ಕೊಳ್ಳಬೇಡಿ! ಈಗ ಅಮೆರಿಕದಲ್ಲಿ ಭಾರತೀಯ ಪದಾರ್ಥಗಳೆಲ್ಲ ಎಷ್ಟು ಸುಲಭವಾಗಿ ಸಿಗುತ್ತವೆ ಅನ್ನೋದನ್ನು ಅಮೆರಿಕನ್ನಡಿಗ ಮಿತ್ರರೊಬ್ಬರು ಬಣ್ಣಿಸಿದ್ದು ಹೀಗೆ. ನ್ಯೂಯಾರ್ಕ್‌ನ ಯೂನಿವರ್ಸಿಟಿಯಲ್ಲಿ ಪ್ರೊಫೆಸರರಾಗಿರುವ ಮಹಾದೇವ ರಾವ್ ಹೇಳ್ತಾರೆ, “ನಮ್ಮಲ್ಲಿ ವೆಗ್‌ಮನ್ಸ್ ಎಂಬ ಅಮೆರಿಕನ್ ಗ್ರೋಸರಿ ಸ್ಟೋರ್ ಇದೆ. ದಿನದ 24ಗಂಟೆಯೂ ತೆರೆದಿರುವ ಬೃಹತ್ ಅಂಗಡಿ. ಅಲ್ಲಿ ಭಾರತೀಯ ಪದಾರ್ಥಗಳೂ ಸಿಗುತ್ತವೆ. ನಿಮಗೆ ಮಧ್ಯರಾತ್ರಿಯಲ್ಲಿ ಮೈಸೂರ್‌ಪಾಕ್ ತಿನ್ನಬೇಕೆಂಬ ಬಯಕೆಯಾದರೆ, ವೆಗ್‌ಮನ್ಸ್‌ಗೆ ಹೋಗಿ. ಅಲ್ಲಿ ಮೈಸೂರ್‌ಪಾಕ್ ಸಿಗಲಿಕ್ಕಿಲ್ಲವಾದರೂ ಕಡ್ಲೆಹಿಟ್ಟು, ಸಕ್ಕರೆ, ದೇಸೀತುಪ್ಪ ಎಲ್ಲ ಸಿಗುತ್ತದೆ. ತಂದು ಮನೆಯಲ್ಲಿ ಮೈಸೂರ್‌ಪಾಕ್ ಮಾಡಿ ತಿನ್ನಬಹುದು. ಇದನ್ನು ಕರ್ನಾಟಕದಲ್ಲಿ ಮಾಡಬಲ್ಲಿರಾ? ಮಧ್ಯರಾತ್ರಿಯಲ್ಲಿ ಮಂಡಿಪೇಟೆ ಸೆಟ್ಟರ ಮನೆಬಾಗಿಲು ತಟ್ಟಿ ಕಡ್ಲೆಹಿಟ್ಟು ಬೇಕಾಗಿತ್ತು ಎನ್ನೋಕಾಗುತ್ತ್ಯೇ? ನಿಮಗೇನ್ ತಲೆಕೆಟ್ಟಿದೆಯೇನ್ರಿ ಈ ಅಪರಾತ್ರಿಯಲ್ಲಿ ಬಂದು ನಿದ್ದೆಗೆಡಿಸ್ತಿದ್ದೀರಲ್ಲ ಎಂದು ಬೈಗುಳ ತಿನ್ನಬೇಕು ಅಷ್ಟೇ!”

mysurpaku.jpg

ಕಳೆದವಾರ ‘ಬಾರ್ಸಿಲೊನಾದಲ್ಲಿ ಕರಿಬೇವು...’ ಬರೆಯುವಾಗ ಅಮೆರಿಕದ ವಿವಿಧೆಡೆಗಳಲ್ಲಿ ಮತ್ತು ವಿದೇಶಗಳಲ್ಲಿ ನೆಲೆಸಿರುವ ಕೆಲವು ಓದುಗಮಿತ್ರರನ್ನು ಸಂಪರ್ಕಿಸಿದ್ದೆ; ಯಾವ ವಸ್ತು ಯಾರನ್ನು ಹೇಗೆ ಭಾವಪರವಶವಾಗಿಸಿದೆಯೆಂಬ ಅನುಭವ-ಅನಿಸಿಕೆಗಳನ್ನು ಕಲೆಹಾಕಿದ್ದೆ. ಅವುಗಳಲ್ಲಿ ಕೆಲವನ್ನು ಇವತ್ತಿನ ಅಂಕಣದಲ್ಲಿ ಅಳವಡಿಸಿಕೊಂಡಿದ್ದೇನೆ. ಆದರೆ ಇದು ಭಾವೋದ್ವೇಗ ಪ್ರದರ್ಶನವಲ್ಲ. ಬದಲಿಗೆ, ಅಮೆರಿಕದಲ್ಲಿ/ವಿದೇಶಗಳಲ್ಲಿ ‘ಮಣ್ಣಿನ ವಾಸನೆಯನ್ನು ಹಿತವಾಗಿ ಕೊಡುವ’ ಯಾವುದೆಲ್ಲ ವಸ್ತುಗಳು ಈಗೀಗ ಸಿಗತೊಡಗಿವೆ ಎಂಬ ಒಂದು ಸ್ಥೂಲ ಚಿತ್ರಣ ಅಷ್ಟೇ.

ಪ್ರೊ.ರಾವ್ ಸ್ವಲ್ಪ ವ್ಯಂಗ್ಯ ಮತ್ತು ಉತ್ಪ್ರೇಕ್ಷೆ ಸೇರಿಸಿ ಹೇಳಿದರೆಂದ ಮಾತ್ರಕ್ಕೆ ಅಮೆರಿಕದ ಎಲ್ಲ ಊರುಗಳಲ್ಲೂ ಎಲ್ಲವೂ ಎಲ್ಲ ಕಾಲದಲ್ಲೂ ಸಿಗುತ್ತದೆಂದೇನಿಲ್ಲ ಬಿಡಿ. ಉದಾಹರಣೆಗೆ, “ಮದುವೆಯಾಗಿ ಅಮೆರಿಕಾ ದೇಶಕ್ಕೆ ಬಂದುಬಿದ್ದದ್ದು ಬ್ಲ್ಯಾಕ್ಸ್‌ಬರ್ಗ್ ಎಂಬ ಚಿಕ್ಕ ಊರಿಗೆ. ಅಲ್ಲಿ ಬದನೆಕಾಯಿ, ಆಲುಗೆಡ್ಡೆ, ಟೊಮೆಟೊ ಬಿಟ್ಟರೆ ಇನ್ನ್ಯಾವ ತರಕಾರಿ ಮೂಸಿನೋಡಲೂ ಸಿಗ್ತಿರ್ಲಿಲ್ಲ. ಹಣ್ಣುಗಳೆಂದರೆ ಬಾಳೆ, ಕಿತ್ತಳೆ, ಸೇಬು, ದ್ರಾಕ್ಷಿ ಅಷ್ಟೇ. ಅಮೆರಿಕಾ ದೇಶವೇ ಹೀಗೇನು? ಯಾಕಾದ್ರೂ ಇಲ್ಲಿಗೆ ಬಂದ್ವಿ ಎಂದು ನನ್ನ ನಸೀಬನ್ನು ಹಳಿದುಕೊಂಡಿದ್ದೆ...” ಎನ್ನುತ್ತಾರೆ ಅನು ನಿತಿನ್. ಆದರೆ ಮುಂದುವರಿಸುತ್ತ, “ವರ್ಷದಲ್ಲೇ ಯಜಮಾನ್ರ ಓದು ಮುಗಿದು ಶಿಕಾಗೊ ನಗರಕ್ಕೆ ಬಂದಾಗ ಇಲ್ಲಿ ಇಂಟರ್‌ನ್ಯಾಶನಲ್ ಮಾರ್ಕೆಟ್ ಇರೋದು ಗೊತ್ತಾಯ್ತು. ಮೊದಲಸರ್ತಿ ಆ ಅಂಗಡೀಲಿ ಕಾಲಿಟ್ಟಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.  ತೊಂಡೆ, ಬೆಂಡೆ, ಹೀರೆಕಾಯಿ, ಹಾಗಲಕಾಯಿ, ಗೋರಿಕಾಯಿ, ಮೂಲಂಗಿ, ಸಬ್ಬಸಿಗೆಸೊಪ್ಪು, ಕೊತ್ತಂಬರಿ... ಆಹಾ! ಚಿನ್ನದ ರಾಶಿ ಕಂಡರೂ ಅಷ್ಟು ಖುಷಿ ಆಗ್ತಿರ್ಲಿಲ್ಲವೇನೋ. ಜತೆಯಲ್ಲೇ ನನ್ನಿಷ್ಟದ ಸೀಬೆ, ಮಾವು, ದಾಳಿಂಬೆ ಹಣ್ಣುಗಳು! ಎರಡು ಕಾರ್ಟ್ ತುಂಬ ಪೇರಿಸಿಕೊಂಡು ಮನೆಗೊಯ್ದಿದ್ದೆ. ನಿಜಕ್ಕೂ ಅವತ್ತು ಕಣ್ಣಿಗೆ ಹಬ್ಬವಾಗಿತ್ತು. ಮನಸ್ಸು ಅರಳಿತ್ತು. ನನ್ನ ಬಾಲ್ಯದಿನಗಳನ್ನು ನೆನಪಿಸುವ ಹಣ್ಣುತರಕಾರಿಗಳು ನನಗೆ ಮತ್ತೆ ದೊರಕಿದ್ದವು!” ಎಂದು ಪುಳಕಗೊಳ್ಳುತ್ತಾರೆ. ಹೆಚ್ಚೂಕಡಿಮೆ ಇದೇ ಅನುಭವ ರಿಚ್ಮಂಡ್‌ನಲ್ಲಿರುವ ಶ್ರೀನಾಥ ಭಲ್ಲೆಯವರದೂ. ಈ ದೇಶಕ್ಕೆ ಬಂದು ಆರೇಳು ತಿಂಗಳ ನಂತರ ಇಂಡಿಯನ್ ಗ್ರೋಸರಿಸ್ಟೋರ್‌ನಲ್ಲಿ ಮೊದಲಬಾರಿ ಬೂದುಗುಂಬಳ, ಸೋರೆಕಾಯಿ, ದಂಟಿನಸೊಪ್ಪು ಇತ್ಯಾದಿಯನ್ನು ಕಂಡು ಆನಂದಬಾಷ್ಪ ಸುರಿಸಿದವರೇ ಅವರೂ.

ಇಷ್ಟದ ಹಣ್ಣು-ತರಕಾರಿ ಸಿಗುವುದು ಒಂದು ಖುಷಿಯಾದರೆ ಅದನ್ನು ನೋಡಿದಾಗ ಒತ್ತರಿಸಿ ಬರುವ ತಾಯ್ನೆಲದ ನೆನಪುಗಳು ಇನ್ನೊಂದು ಖುಷಿ. ವಾಷಿಂಗ್ಟನ್‌ನ ಸಸ್ಯೋದ್ಯಾನದಲ್ಲಿ ಒಂದೆಲಗ (ಬ್ರಾಹ್ಮಿ) ನೋಡಿ ಶೋಭಾ ಕಾರಣಿಕರಿಗೆ ಅಮ್ಮನಮನೆಯ ತೋಟದಲ್ಲಿ ಸುತ್ತಾಡಿದಂತೆ, ತವರುಮನೆಯವರನ್ನೆಲ್ಲ ಭೇಟಿಯಾದಂತೆ ಅನಿಸಿದ್ದು ಅದೇಕಾರಣಕ್ಕೆ. ಕ್ಯಾಲಿಫೋರ್ನಿಯಾದಲ್ಲಿ ಯಾರದೋ ಮನೆಯಲ್ಲಿ ಮೊದಲಬಾರಿ ತುಳಸಿಗಿಡ ನೋಡಿದಾಕ್ಷಣ ತನ್ನ ತವರುಮನೆಯ ಅಂಗಳದಲ್ಲಿ ತುಳಸಿಕಟ್ಟೆಯೆದುರು ನಿಂತಂಥ ಅನುಭವ ಕಾವ್ಯಾಭಟ್‌ಗೆ ಆದದ್ದೂ ಅದೇಕಾರಣಕ್ಕೆ.

ಇನ್ನು ಕೆಲವು ಪ್ರಾದೇಶಿಕ ಸೊಗಡಿನ ಸಂಭ್ರಮಗಳೂ ಇರುತ್ತವೆ. ಹಾಸನದ ಸ್ಪೆಷಾಲಿಟಿಯಾದ ಸಿಹಿಸೌತೆ, ಮಡುಹಾಗಲಕಾಯಿ ಅಮೆರಿಕದಲ್ಲೂ ಸಿಗುತ್ತವೆಯೆಂಬ ಖುಶಿ ಮೇರಿಲ್ಯಾಂಡ್‌ನ ಸೌಮ್ಯಾ ನಾಗಶಂಕರ್ ಅವರಿಗಾದರೆ ಮಂಗಳೂರಿನ ಸ್ಪೆಷಲ್ ದಿವಿಹಲಸು (ತುಳುವಿನಲ್ಲಿ ‘ಜೀಗುಜ್ಜೆ’) ಶಿಕಾಗೊದಲ್ಲಿ ಸಿಕ್ಕಿತೆಂದು ಹಿಗ್ಗಿದವರು ಶ್ವೇತಾ ಗರ್ಡೆ. ಬಾಸ್ಟನ್‌ನ ವೈಶಾಲಿ ಹೆಗಡೆ ಸ್ನೇಹಿತರೊಬ್ಬರ ಮನೆಯ ಹಿತ್ತಲಲ್ಲಿ ಬೆಳೆದ ಕನ್ನೆಕುಡಿ ಸೊಪ್ಪನ್ನು ಬಾಚಿಕೊಂಡು ಮನೆಗೆತಂದು ಸತತ ಮೂರುದಿನ ‘ಕಟ್ನೆ’ (ತಂಬ್ಳಿಯಂಥ ಪರಮರುಚಿಕರ ಪದಾರ್ಥ, ಹವ್ಯಕ ಸ್ಪೆಷಲ್) ಮಾಡಿ ಸವಿದಿದ್ದಾರಂತೆ. ವರ್ಜೀನಿಯಾದಲ್ಲಿ ಕೊರಿಯನ್ ಅಂಗಡಿಯಿಂದ ಆಮ್ಟೆಕಾಯಿ ತಂದು ತೊಕ್ಕು ಉಪ್ಪಿನಕಾಯಿ ಮಾಡಿ ತನ್ನ ಮಕ್ಕಳಿಗೂ ರುಚಿಹತ್ತಿಸಿದ್ದಾರೆ ಅನಿತಾ ರಾವ್. ಸ್ಯಾನ್‌ಹೋಸೆಯಲ್ಲಿ ಗೋಳಿಸೊಪ್ಪಿನ ಮುದ್ದಿಪಲ್ಯ ಮತ್ತು ಪಡವಲಕಾಯಿಯ ಬುರುಬುರಿ ಮಾಡಿ ಸವಿದದ್ದನ್ನು, ಹಸಿಶೇಂಗಾ ಚಪ್ಪರಿಸಿದ್ದನ್ನು ನೆನೆದಿದ್ದಾರೆ ಅನಿಲ್ ದೇಶಪಾಂಡೆ. ಬ್ರೆಝಿಲ್ ಮತ್ತು ಕೊಲಂಬಿಯಾ ದೇಶಗಳಿಂದ ಬರುವ ಕಾಫಿಹುಡಿಯದೇ ಅಭ್ಯಾಸವಾಗಿರುವಾಗ ಇಂಡಿಯನ್ ಸ್ಟೋರ್‌ನಲ್ಲಿ ಚಿಕ್ಕಮಗಳೂರಿನ ಕಾಫಿಹುಡಿ ಕಂಡಾಗಿನ ಸಂತಸ ಹಂಚಿಕೊಂಡಿದ್ದಾರೆ ಉಷಾ ಅಶ್ವತ್ಥ. ಒಟ್ಟಿನಲ್ಲಿ ಬಣ್ಣದಸೌತೆಯಿಂದ ಬ್ಯಾಡಗಿಮೆಣಸಿನವರೆಗೆ, ಬಾಳೆಹೂವಿನಿಂದ ಬೂದುಗುಂಬಳದವರೆಗೆ, ಕಳಲೆಯಿಂದ ಕೆಸುವಿನೆಲೆವರೆಗೆ ಕರ್ನಾಟಕದ ಉದ್ದಗಲದ ಶಾಕ-ಪಾಕ ವೈವಿಧ್ಯಗಳು ಇಲ್ಲಿನ ಅಂಗಡಿಗಳಲ್ಲಿ ರಾರಾಜಿಸಿವೆ; ವಲಸೆಬಂದವರನ್ನಷ್ಟೇ ಅಲ್ಲ, ಭಾರತದಿಂದ ಭೇಟಿಕೊಡುವ ತಂದೆತಾಯಿಗಳನ್ನೂ ಸಂಪ್ರೀತಗೊಳಿಸಿವೆ.

ಕೆಲವೊಮ್ಮೆ ತಮಾಷೆಪ್ರಸಂಗಗಳೂ ನಡೆದದ್ದಿವೆ, ಕ್ಯಾಲಿಫೋರ್ನಿಯಾದಲ್ಲಿ ಸರಸ್ವತಿ ವಟ್ಟಮ್ ಅವರಿಗಾದಂತೆ. ಮೆಕ್ಸಿಕನ್ ಮಾರ್ಕೆಟ್‌ನಲ್ಲಿ ದೊಡ್ಡಸೈಜಿನ ಇಡೀ ಹಲಸಿನಹಣ್ಣನ್ನು ಖರೀದಿಸಿ ಶಾಪಿಂಗ್‌ಕಾರ್ಟ್‌ನಲ್ಲಿ ಇಡುತ್ತಿದ್ದಾಗ ಪಕ್ಕದಲ್ಲಿದ್ದ ಅಮೆರಿಕನ್ ಮಹಿಳೆ ಕೇಳಿದ್ದಳಂತೆ- “ಏನದು? ಹೇಗೆ ತಿನ್ನುತ್ತೀರಿ ಅದನ್ನು?” ಬಹುಶಃ ಸಿಪ್ಪೆಸಮೇತ ತಿನ್ನುತ್ತಾರಿರಬಹುದು ಎಂದುಕೊಂಡು ಇವರನ್ನೊಮ್ಮೆ ಆಪಾದಮಸ್ತಕ ನೋಡಿದಳಂತೆ. ಅವಳಿಗೆ ಎಲ್ಲ ವಿವರಿಸಿಹೇಳುವಾಗ ಸಾಕುಸಾಕಾಯ್ತು ಎನ್ನುತ್ತಾರೆ ಸರಸ್ವತಿ. “ಪೂರ್ತಿ ಹಣ್ಣಾಗುವುದನ್ನೇ ಕಾಯುತ್ತಿದ್ದೇನೆ. ಮೈಸೂರಿನಲ್ಲಾಗಿದ್ದರೆ ಹಲಸಿನ ಪರಿಮಳಕ್ಕೆ ಮನೆಹೊರಗೆ ದನಗಳು ಬಂದುನಿಲ್ಲುವುದಿದೆ, ಹಣ್ಣಾಗಿದೆ ಎಂದು ಆಗ ನಮಗೆ ಗೊತ್ತಾಗುತ್ತದೆ. ಆದರೆ ಏನ್ಮಾಡೋದು ಈ ಅಮೆರಿಕದ ಬೀದಿಗಳಲ್ಲಿ ದನಗಳೂ ಇಲ್ಲ ನಾಯಿಗಳೂ ಇಲ್ಲ..." ಎಂಬ ಅವರ ಮಾತಿನಲ್ಲಿ ಏನನ್ನೋ ಕಳಕೊಂಡಿದ್ದೇನೆಂಬ ನೋವೂ ಸೇರಿಕೊಳ್ಳುತ್ತದೆ. ಕನೆಕ್ಟಿಕಟ್‌ನಲ್ಲಿರುವ ಮಲ್ಲಿ ಸಣ್ಣಪ್ಪನವರ್ ಅದನ್ನೇ ತಮಾಷೆಯಾಗಿ ಹೇಳುತ್ತಾರೆ “ಇಲ್ಲಿ ಕಬ್ಬಿನಹಾಲು, ಭೇಲ್‌ಪುರಿ, ಇಡ್ಲಿದೋಸೆ ತಳ್ಳು‌ಅಂಗಡಿಗಳನ್ನು ಕಂಡಿದ್ದೇನೆ. ಯಾಕೋ ಅವು ತುಂಬ ಸೊಫೆಸ್ಟಿಕೇಟೆಡ್ ಅನ್ನಿಸುತ್ತವೆ. ನಮ್ಮೂರಿನ ಧೂಳು, ನೊಣಗಳು, ಬೆವರು ಎಲ್ಲ ಮಿಸ್ಸಿಂಗ್. ಅದಿಲ್ಲದೆ ರುಚಿಯಿಲ್ಲ...”

ಮಲ್ಲಿ ಹೇಳುವುದರಲ್ಲೂ ಅರ್ಥವಿದೆ. ಕೆಲವೊಂದು ವಸ್ತುಗಳನ್ನು ಆಸ್ವಾದಿಸಲು, ತಿಂಡಿತಿನಿಸನ್ನು ಸವಿಯಲು ಒಂದು ರೀತಿಯ ‘ವಾತಾವರಣ’ ಬೇಕಾಗುತ್ತದೆ. ಆಗಲೇ ಪರಮಾನಂದ. ಒಮ್ಮೊಮ್ಮೆ ಹೀಗೂ ಅನಿಸುತ್ತದೆ- ಪಿಜ್ಜಾಹಟ್, ಮೆಕ್‌ಡೊನಾಲ್ಡ್, ಸಬ್‌ವೇಗಳು ಈಗ ಪೂರ್ವಕ್ಕೆ ಪಸರಿಸಿವೆ. ಕಬ್ಬಿನಹಾಲು, ಭೇಲ್‌ಪುರಿ, ಮಸಾಲೆಮಜ್ಜಿಗೆ, ಸಮೋಸಾಗಳೂ, ಎಂಟಿ‌ಆರ್, ಹಲ್ದಿರಾಮ್, ಬೇಡೇಕರ್‌ಗಳೂ ಪಶ್ಚಿಮಕ್ಕೆ ಪಾದಾರ್ಪಣೆ ಮಾಡಿವೆ. ಆಹಾರಜಗತ್ತಿನ ಸಮತೋಲನ ಪ್ರಕ್ರಿಯೆ ಇರಬಹುದೇ?

ಅಂದಹಾಗೆ ‘ಬಸುರಿಯ ಬಯಕೆ’ ಪದಪ್ರಯೋಗದಿಂದ ಆರಂಭಿಸಿದ ಈ ಪಾಕಪುರಾಣವನ್ನು ಈಗ ಶ್ರುತಿ ಸತೀಶ್ ಎಂಬುವರ ಪತ್ರವನ್ನು ಉಲ್ಲೇಖಿಸಿ ಕೊನೆಗೊಳಿಸಿದರೆ ಸರಿಹೊಂದುತ್ತದೆ. ಅವರು ಬರೆದಿದ್ದಾರೆ- “ಹತ್ತು ವರ್ಷಗಳ ಹಿಂದೆ ನ್ಯೂಜೆರ್ಸಿಯಲ್ಲಿದ್ದಾಗಿನ ಸಂಗತಿ. ಆಗ ನಾನು ಬಸುರಿ. ‘ಪಡ್ಡು’ ತಿನ್ನಬೇಕೆಂದು ಸಿಕ್ಕಾಪಟ್ಟೆ ಕ್ರೇವಿಂಗ್ ಆಗ್ತಿತ್ತು. ಆದರೆ ಪಡ್ಡು ಮಾಡುವ ಕಾವಲಿ ಇಲ್ಲವಲ್ಲ! ನ್ಯೂಜೆರ್ಸಿಯ ಅಂಗಡಿಗಳಲ್ಲೆಲ್ಲ ಹುಡುಕಿದ್ದೇ ಹುಡುಕಿದ್ದು. ಕೊನೆಗೂ ಬಾಣಂತಿಯಾಗಲಿಕ್ಕೆ ಇನ್ನೇನು ವಾರವಿದೆಯೆನ್ನುವಾಗ ಕಾವಲಿ ಸಿಕ್ಕಿತು; ಪಡ್ಡು ಮಾಡಿ ತಿಂದೆ, ಬಸುರಿಯ ಬಯಕೆ ತೀರಿಸಿಕೊಂಡೆ!”

vkpic29may.jpg

ಮತ್ತೆ, ಮಧ್ಯರಾತ್ರಿಯಲಿ ಮೈಸೂರುಪಾಕ್ ಮೆಲ್ಲುವಾಸೆಯಾದರೆ? ಮಹಾದೇವರಾವ್ ಮಾತನ್ನು ಮನನ ಮಾಡಿದರಾಯ್ತು!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.