ಪದ-ಶ್ರಾವ್ಯ

ಈಗ ಆಡಿಯೋ ಟಚ್!

31
Mar 2012
Midukuvudu Endarenu
Posted in DefaultTag by sjoshi at 11:32 am

ದಿನಾಂಕ  1 ಎಪ್ರಿಲ್ 2012ರ ಸಂಚಿಕೆ...

ಮಿಡುಕುವುದು ಎಂದರೇನು?

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಅರ್ಘ್ಯವ ಕೊಡುತಿಹ ಸಮಯವ ನೋಡಿ ಗಣಪತಿ ಕರೆದನು ರಾವಣನ... ಬರಲಾಗದೆ ರಾವಣ ಮಿಡುಕಿದನು... ಲಿಂಗವು ಧರೆಯನು ಸೇರಿತು...

ನೀವು ಗೋಕರ್ಣದ ಪುರಾಣ ಕಥನವನ್ನು ಆಲಿಸಿ ಜೀವನ ಪಾವನಗೊಳಿಸಿದ್ದೀರಾದರೆ ನಿಮಗೆ ಈ ಸಾಲುಗಳು ನೆನಪಿರುತ್ತವೆ. ಎಪ್ಪತ್ತು-ಎಂಬತ್ತರ ದಶಕದಲ್ಲಿ ಬಂದ ಇವೆಲ್ಲ ಕೆಲವು ಎವರ್‌ಗ್ರೀನ್ ಭಕ್ತಿಗೀತೆಗಳು, ಲಾವಣಿಯ ರೂಪದಲ್ಲಿ ಕಥೆ ಹೇಳುವಂಥವು, ಆವಾಗಿನ ಚಿತ್ರಗೀತೆಗಳಂತೆಯೇ ಪ್ರಸಿದ್ಧವಾಗಿ ಜನಮಾನಸದಲ್ಲಿ ನೆಲೆನಿಂತವುಗಳು. ಮೇಲೆ ಉಲ್ಲೇಖಿಸಿದ ಗೋಕರ್ಣ ಪುರಾಣ ಕಥನ, ವಿನಾಯಕ ಚೌತಿಯಂದು ಕೇಳಿಬರುವ ಸ್ಯಮಂತಕೋಪಾಖ್ಯಾನ ಗೀತೆ, ಅದೇಥರದ ಮತ್ತೂ ಕೆಲವಾರು ಒಳ್ಳೊಳ್ಳೆಯ ಹಾಡುಗಳು. ಅವೆಲ್ಲವನ್ನು ಅಜರಾಮರವಾಗಿಸಿದ್ದು ರೇಡಿಯೊ. ಅದಕ್ಕಿಂತಲೂ ಹೆಚ್ಚಾಗಿ ದೇವಸ್ಥಾನಗಳಲ್ಲಿ, ಸಿನೆಮಾ ಟೆಂಟ್‌ಗಳಲ್ಲಿ ಮತ್ತು ಸಮಾರಂಭಗಳ ಚಪ್ಪರಗಳಲ್ಲಿ ಮೊಳಗುವ ಲೌಡ್‌ಸ್ಪೀಕರ್‌ಗಳು. ಈಗಲೂ ಇಂಥ ಹಾಡುಗಳನ್ನು ಕೇಳುವುದೆಂದರೆ, ಜೊತೆಯಲ್ಲೇ ಗುನುಗುವುದೆಂದರೆ, ಹಾಯೆನಿಸುವ ವಿಶಿಷ್ಟ ಅನುಭವ. ಒಂಥರದ ನೊಸ್ಟಾಲ್ಜಿಕ್ ರೋಮಾಂಚನ. ಅದಕ್ಕೋಸ್ಕರವೇ ನನ್ನ ಐಫೋನ್‌ನ ಸಂಗೀತ ಉಗ್ರಾಣದಲ್ಲೂ ಇವಕ್ಕೆ ಒಂದಿಷ್ಟು ಗಿಗಾಬೈಟ್‌ಗಳ ಮೀಸಲು ಸ್ಥಾನ.

ಐಫೋನ್/ಐಪಾಡ್ ಅಥವಾ ಈಗ ಸ್ವಲ್ಪ ಹಳೇ ಫ್ಯಾಷನ್ ಎನಿಸಿರುವ ವಾಕ್‌ಮನ್ನೇ ಆಗಲಿ, ‘ತಲೆಯಾಲಿಕೆ’ (ಹೆಡ್‌ಫೋನ್ಸ್) ಸಿಕ್ಕಿಸಿಕೊಂಡು ಹಾಡು ಕೇಳಿದರೆ ಒಂದು ವಿಶೇಷ ಫಾಯಿದೆ ಇದೆ. ಅದೇನೆಂದರೆ ಹಾಡಿನ ಸಾಹಿತ್ಯದ ಒಂದೊಂದು ಪದ, ಒಂದೊಂದು ಅಕ್ಷರವೂ ಸ್ಪಷ್ಟವಾಗಿ ತಲೆಯೊಳಗೆ ಹೊಕ್ಕುತ್ತದೆ. ಕೆಲವೊಮ್ಮೆ ಯಾವುದೋ ಒಂದು ಪದ ತಲೆಯೊಳಗೆ ಹೊಕ್ಕಿದ್ದು ಅಲ್ಲಿಯೇ ಗುಂಗಿಹುಳ ಆಗಿಬಿಡುತ್ತದೆ. ಮೊನ್ನೆ ಒಂದುದಿನ ಅದೇ ಆಯ್ತು. ಹೆಡ್‌ಫೋನ್ಸ್ ಹಾಕ್ಕೊಂಡು ‘ಇದು ಗೋಕರ್ಣದ ಪುರಾಣ ಕಥನ... ಆಲಿಸೆ ಜೀವನ ಪಾವನ...’ ಆಲಿಸ್ತಾ ಇದ್ದೆನಾ, ಜೀವನವೇನೋ ಪಾವನವಾಯ್ತು ಆದರೆ ಹಾಡಿನಲ್ಲಿದ್ದ ‘ಮಿಡುಕಿದನು’ ಎಂಬ ಪದ ಮಾತ್ರ ಜೀವಸಮೇತ ತಲೆಯಲ್ಲುಳಿಯಿತು! ಅರ್ಥಾತ್ ಯಾಕೋ ವಿಶೇಷವಾಗಿ ಕಂಡಿತು. ಹಾಡಿನಲ್ಲಿ ಅದೇನೂ ಅರ್ಥವಾಗದಂಥ ಪದವಲ್ಲ. ಸಂದರ್ಭ ಸನ್ನಿವೇಶದಿಂದಲೇ ಅರ್ಥ ಮಾಡಿಕೊಳ್ಳಬಹುದು. ವಟುರೂಪಿ ಗಣಪನ ಕೈಯಲ್ಲಿ ಆತ್ಮಲಿಂಗವನ್ನು ಕೊಟ್ಟಿಟ್ಟು ರಾವಣೇಶ್ವರ ಸಂಧ್ಯಾವಂದನೆಗೆ ಕೂತಿದ್ದಾನೆ. ಗಾಯತ್ರೀಮಂತ್ರ ಉಚ್ಚರಿಸುತ್ತ ಅರ್ಘ್ಯವನ್ನು ಸಮರ್ಪಿಸುವ ವೇಳೆಗೆ ಸರಿಯಾಗಿ ಗಣಪ ಅವನನ್ನು ಕರೆದಿದ್ದಾನೆ. ಆಫ್‌ಕೋರ್ಸ್, ಗಣಪನದು ಪೂರ್ವನಿಯೋಜಿತ ಕೃತ್ಯ, ಆದರೆ ರಾವಣ ತಬ್ಬಿಬ್ಬು. ಸಂಧ್ಯಾವಂದನೆ ಅರ್ಧದಲ್ಲಿ ಬಿಟ್ಟುಬರುವಂತಿಲ್ಲ, ಬರದೇ ಇದ್ದರೆ ಕಿಲಾಡಿ ಗಣಪ ಆತ್ಮಲಿಂಗವನ್ನು ನೆಲದ ಮೇಲಿಡದೆ ಬಿಡುವುದಿಲ್ಲ. ಅಂಥದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ರಾವಣ ‘ಮಿಡುಕಿದನು’! ಅಂದರೆ, ಚಡಪಡಿಸಿದನು, ಪೇಚಾಡಿದನು, ಕೈಕೈ ಹಿಸುಕಿಕೊಂಡನು ಎಂದು ಅರ್ಥೈಸಬಹುದು. ನಾವಾಗಿದ್ರೆ ‘ಅಯ್ಯೋ ರಾಮಾ’ ಎಂದೂ ಹೇಳುತ್ತಿದ್ದೆವೋ ಏನೋ ಆದರೆ ರಾವಣ ಹಾಗೆ ಹೇಳಿರಲಿಕ್ಕಿಲ್ಲ ಎಂದುಕೊಳ್ಳೋಣ. ಆಗಿನ್ನೂ ಅವನಿಗೆ ರಾಮನ ಪರಿಚಯವೂ ಆಗಿರಲಿಲ್ಲವಲ್ಲ!

raavana_midukidanu.jpg

ಸರಿ, ಮಿಡುಕಿದನು ಪದ ಗುಂಗಿಹುಳವಾಗಿ ತಲೆಯೊಳಗೆ ತಳವೂರಿತು ಎಂದೆನಲ್ಲಾ, ಅದನ್ನು ಅಲ್ಲಿಂದ ಹೊರದಬ್ಬುವುದು ಹೇಗೆ? ಸೂಕ್ತವಾಗಿ ಸನ್ಮಾನಿಸಿ ಬೀಳ್ಕೊಡುವುದು ಹೇಗೆ? ಈ ವಿಧೇಯ ನಿಮ್ಮವ (ಯುವರ್ಸ್ ಟ್ರೂಲಿ) ಅದಕ್ಕೇನು ಮಾಡಿದನೆಂದರೆ ನಿಘಂಟಿನಲ್ಲಿ ಅರ್ಥ ಹುಡುಕಿದನು! ಹಾಗೆ ಮಾಡುವಾಗ ಸ್ವಲ್ಪ ದುಡುಕಿದನು? ಇಲ್ಲ, ಸುಮ್ನೆ ಹೇಳ್ದೆ. ಮಿಡುಕಿದನು ಪದಕ್ಕೆ ಪ್ರಾಸಜೋಡಿಯಾಗಿ ಪರಿಚಿತ ಪದಗಳು ಇವೆಯಂತ ತಿಳಿಸಲಿಕ್ಕೆ ಅಷ್ಟೇ.

ಜಿ.ವೆಂಕಟಸುಬ್ಬಯ್ಯನವರ ಪ್ರಿಸಂ ಕನ್ನಡ ನಿಘಂಟು ಈಗ ಅಂತರ್ಜಾಲ ಆವೃತ್ತಿಯಲ್ಲೂ ಇದೆ, ಥ್ಯಾಂಕ್ಸ್ ಟು ‘ಬರಹ’ ಶೇಷಾದ್ರಿವಾಸು. ಅದರಲ್ಲಿ ಮಿಡುಕು ಎಂಬ ಪದಕ್ಕೆ ಅರ್ಥ ಹುಡುಕಿದಾಗ ಒಂದೆರಡಲ್ಲ ಬರೋಬ್ಬರಿ ಇಪ್ಪತ್ತೆಂಟು ಅರ್ಥ(ಸಮಾನಾರ್ಥಕ ಪದ)ಗಳನ್ನು ಕೊಟ್ಟಿದ್ದಾರೆ! ಅಲುಗು, ಕದಲು, ಮಿಸುಕು, ಕಂಪಿಸು, ನಡುಗು, ಬೆಚ್ಚಿಬೀಳು, ಚಂಚಲವಾಗು, ಅಸ್ಥಿರಗೊಳ್ಳು, ಆತುರಪಡು, ತವಕಿಸು, ಕೊರಗು, ಪರಿತಪಿಸು, ಚಡಪಡಿಸು, ಒದ್ದಾಡು, ಪೇಚಾಡು, ಪಶ್ಚಾತ್ತಾಪಪಡು... ವಗೈರಾವಗೈರಾ. ಇವೆಲ್ಲ ನಮಗೆ ಪರಿಚಿತ ಪದಗಳೇ. ನಮ್ಮ ಮಾತಿನಲ್ಲಿ ಬರಹದಲ್ಲಿ ವಿಪುಲವಾಗಿ ಬಳಕೆಯಾಗುವಂಥವೇ. ಹಾಗೆ ನೋಡಿದರೆ ಇವೆಲ್ಲಕ್ಕಿಂತ ಮಿಡುಕು ಪದವೇ ಬಹಳ ಅಪರೂಪದ್ದು. ಎಲ್ಲೋ ಸಾಹಿತ್ಯಿಕವಾಗಿ ಕಂಡುಬಂದೀತೇ ಹೊರತು ಆಡುಮಾತಿನಲ್ಲಿ ಯಾರೂ ಬಳಸುವುದಿಲ್ಲ.

ಹೀಗೇ ಕುತೂಹಲಕ್ಕಂತ ಗೂಗಲ್‌ನಲ್ಲಿ ‘ಮಿಡುಕಿದನು’ ಎಂದು ಟೈಪಿಸಿ ನೋಡಿದೆ. ಕೇವಲ ನಾಲ್ಕು ಲಿಂಕ್‌ಗಳು ಸಿಕ್ಕಿದವು. ಅದರಲ್ಲಿ ಎರಡಂತೂ ಇದೇ ಗೋಕರ್ಣ ಪುರಾಣ ಕಥನದ ಪೂರ್ಣಪಾಠವನ್ನು ಯಾರೋ ಪುಣ್ಯಾತ್ಮರು ನೀಟಾಗಿ ಕನ್ನಡದಲ್ಲಿ ಇಂಟರ್‌ನೆಟ್‌ಗೆ ಏರಿಸಿಟ್ಟಿದ್ದು. ಇನ್ನೊಂದು, ಪಂಡರೀನಾಥಾಚಾರ್ಯ ಗಲಗಲಿಯವರು ‘ಪೇಜಾವರ ಶ್ರೀಗಳವರಿಗೆ ಪರ್ಯಾಯಪುಷ್ಪ ಎಂಬ ಕವಿತೆಯ ರೂಪದ ಗೌರವಾರ್ಪಣೆಯಲ್ಲಿ “ಗೀತೆಯ ಪೇಳಿದ ಪೀತಾಂಬರಹರಿ ಅದರೀಗತಿಗೆ ಮಿಡುಕಿದನು; ಗೀತೆಯ ಸೊಲ್ಲನು ಎಲ್ಲೆಡೆ ಕೇಳಿಸಬಲ್ಲವನಾತನ ಹುಡುಕಿದನು ಎಂದಿರುವುದು. ಕೊನೆಯದು, ಕುಮಾರವ್ಯಾಸನ ಗದುಗಿನಭಾರತದಲ್ಲಿ ಸಭಾಪರ್ವದ ಒಂದು ಷಟ್ಪದಿ. “ವಾಯುಸಖನಲಿ ಸುಡುವೆನೀಗಳೆ/ ಬೀಯವಾಗಲಿ ದೇಹವಾಚಂ/ ದ್ರಾಯತವೆ ಎಂದೊಡನೊಡನೆ ಮಿಡುಕಿದನು ಕಲಿಭೀಮ ಎಂದು ಬರುತ್ತದೆ. ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನ ಹರಾಜಾಗುತ್ತಿರುವಾಗ ಬೇರೆಯವರೆಲ್ಲ ತಲೆತಗ್ಗಿಸಿ ಕೂತಿದ್ದಾರೆ. ಭೀಮ ಮಾತ್ರ ರೋಷದಿಂದ ಮಿಡುಕುತ್ತಿದ್ದಾನೆ ಎಂದು ಬಣ್ಣಿಸುತ್ತಾನೆ ಕುಮಾರವ್ಯಾಸ.

ತಣಿಯದ ಕುತೂಹಲದಿಂದ ‘ಮಿಡುಕಿದಳು’ ಪದವನ್ನೂ ಗೂಗಲೇಶ್ವರನಿಗೆ ಉಣಿಸಿದೆ. ಈಗ ಫಲಿತಾಂಶ ಪಟ್ಟಿಯಲ್ಲಿ ಲಿಂಕ್‌ಗಳ ಸಂಖ್ಯೆ ದ್ವಿಗುಣ! ಅಂದರೆ ಹೆಂಗಸರು ಗಂಡಸರಿಗಿಂತ ಹೆಚ್ಚು ಮಿಡುಕುತ್ತಾರೆಯೇ? ಗೊತ್ತಿಲ್ಲ. ‘ಮಿಟುಕಲಾಡಿ ಮೀನಾಕ್ಷಿ’ ಇದ್ದಂತೆ ‘ಮಿಡುಕುಮೋರೆ ಮಾರಮ್ಮ’ ಎನ್ನಬಹುದೇ? ಸಮಕಾಲೀನ ಸಾಹಿತ್ಯದಲ್ಲಿ, ಕಥೆ-ಕಾದಂಬರಿಗಳಲ್ಲಿ, ಯಕ್ಷಗಾನ ಪದ್ಯಗಳಲ್ಲಿ ‘ಮಿಡುಕಿದಳು’ ಪದ ಬಳಕೆಯಾಗಿರುವುದು ಕಂಡುಬರುತ್ತದೆ. ‘ಥಟ್ಟಂತ ಹೇಳಿ’ ಕ್ವಿಜ್ ಖ್ಯಾತಿಯ ಡಾ.ನಾ.ಸೋಮೇಶ್ವರ ಒಂದು ಚಂದದ ಕವಿತೆಯಲ್ಲಿ ಈ ಪದವನ್ನು ಬಳಸಿದ್ದಾರೆ. ಅದು, ಪಂಜಾಬಿನ ಕವಯತ್ರಿ ಅಮೃತಾ ಪ್ರೀತಮ್ ಬಗ್ಗೆ ಕವಿತೆ- “ಮೆಚ್ಚಿದವನು ಎದುರಿಗಿರಲು ತಲೆಯನೆತ್ತಿ/ ಮುಖವನ್ನು ನೋಡಲಾಗದೆ ಮೌನವಾದಳು/ ಮನದೊಳಗೆ ಮೂಡಿದ ಮಧುರ ಭಾವಗಳ/ ತುಟಿಯ ಮೇಲೆ ತರಲಾರದೆ ಮಿಡುಕಿದಳು. ಮತ್ತೆ, ಕುಮಾರವ್ಯಾಸನೂ ‘ಮಿಡುಕಿದಳು’ ಪದಪ್ರಯೋಗ ಮಾಡಿದ್ದಾನೆ. ಅರಣ್ಯಪರ್ವದಲ್ಲಿ ಅರ್ಜುನ ಮತ್ತು ಊರ್ವಶಿ ಮುಖಾಮುಖಿಯಾಗುವ ಸನ್ನಿವೇಶ. ಊರ್ವಶಿಯ ಚಲನವಲನಗಳು ಹೀಗಿದ್ದುವಂತೆ- “ನುಡಿಗೆ ಬೆರಗಾದಳು ಮನೋಜನ/ ಸಡಗರಕೆ ತೆಕ್ಕಿದಳು ಪಾರ್ಥನ/ ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ/ ಕಡುಗಿದಳು ಖಾತಿಯುಲಿ ಲಜ್ಜೆಯ/ ಬಿಡೆಯದಲಿ ಭಯಗೊಂಡಳಂಗನೆ/ ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ

ಆದರೆ ಸಾಹಿತ್ಯಿಕವಾಗಿಯಷ್ಟೇ ಮಿಡುಕಬೇಕು ಅಂತೇನಿಲ್ಲ. ಮಿಡುಕುವ ಸಂದರ್ಭಗಳು ನಮ್ಮೆಲ್ಲರ ಜೀವನದಲ್ಲೂ ಎಷ್ಟೋಸರ್ತಿ ಬಂದುಹೋಗುತ್ತವೆ. ಕೆಲವು ನಿಜಕ್ಕೂ ಗಂಡಾಂತರದವಾಗಿರಬಹುದು- ‘ಶೋಲೆ’ ಚಿತ್ರದಲ್ಲಿ ಅದೊಂದು ದೃಶ್ಯವಿತ್ತಲ್ವಾ, ಗಬ್ಬರ್‌ಸಿಂಗ್‌ನಿಂದಾಗಿ ಎರಡೂ ಕೈಗಳನ್ನು ಕಳಕೊಂಡಿದ್ದ ಬಲದೇವ್‌ಸಿಂಗ್ ಠಾಕೂರ್ (ಸಂಜೀವ್‌ಕುಮಾರ್) ಶಾಲುಹೊದ್ದು ನಿಂತಿದ್ದಾನೆ. ಕಾಲಿನಡಿಗೇ ಬಂದೂಕು ಬಂದುಬಿದ್ದಿದೆ. ಎತ್ತಿಕೊಳ್ಳುವಂತೆಯೂ ಇಲ್ಲ, ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಮಿಡುಕುವುದೊಂದೇ ದಾರಿ.

ಮತ್ತೆ ಕೆಲವು ಮಿಡುಕಾಟಗಳು ಮೆಲುಕು ಹಾಕಿದಾಗ ಮೋಜೆನಿಸುವುದೂ ಇದೆ. ಟಿವಿಯಲ್ಲಿ ವಾರ್ತಾವಾಚಕಿ ಕ್ಯಾಮೆರಾ ಮುಂದೆ ಲೈವ್ ನ್ಯೂಸ್ ಓದುತ್ತಿರುವಾಗಲೇ ಕೆಮ್ಮು ಅಥವಾ ಸೀನು ಬಂದರೆ? ಅದನ್ನಾದರೂ ‘ಎಕ್ಸ್‌ಕ್ಯೂಸ್ ಮೀ’ ಎಂದೋ, ‘ಕ್ಷಮಿಸಿ’ ಎಂದೋ ಹೇಳಿ ನಿಭಾಯಿಸಬಹುದು, ನೊಣ ಬಂದು ಮೂಗಿನ ಮೇಲೆ ಕುಳಿತರೆ? ಮಿಡುಕದೆ ಬೇರೆ ದಾರಿಯಿಲ್ಲ. ಒಮ್ಮೆ ದೂರದರ್ಶನದ ವಾರ್ತಾವಾಚಕಿ ಸಲ್ಮಾಸುಲ್ತಾನ್‌ಗೆ ಹಾಗೇ ಆಗಿತ್ತಂತೆ. ಗಂಭೀರವಾದ ಸುದ್ದಿಯನ್ನು ಓದುತ್ತಿದ್ದಾಗ ನೊಣ ಬಂದು ಮೂಗಿಗೆ ಕಚಗುಳಿ ಇಟ್ಟಿತಂತೆ. ಮಿಡುಕದೆ ಇನ್ನೇನುತಾನೆ ಮಾಡಿಯೇನೆಂದು ದೂರದರ್ಶನದ 50ರ ಸಂಭ್ರಮದ ವೇಳೆ ಸಂದರ್ಶನವೊಂದರಲ್ಲಿ ಆಕೆ ಇದನ್ನು ನೆನಪಿಸಿಕೊಂಡಿದ್ದರು. ಮೊನ್ನೆಮೊನ್ನೆ ಇಲ್ಲಿ ಅಮೆರಿಕದಲ್ಲಿ ಒಂದು ವಾರ್ತಾವಾಹಿನಿಯ ವಾಷಿಂಗ್ಟನ್ ವರದಿಗಾರ್ತಿ ಶ್ವೇತಭವನದ ಎದುರಿನ ಹುಲ್ಲುಹಾಸಿನ ಮೇಲೆನಿಂತು ಲೈವ್ ರಿಪೋರ್ಟ್ ಮಾಡುತ್ತಿದ್ದಾಗ ಅವಳ ಹಿಂದಿನಿಂದ ಒಂದು ನಾಯಿ ಓಡಿಹೋಯ್ತು! ಅವಳಿಗಾದರೋ ಅದರ ಪರಿವೆಯೇ ಇಲ್ಲ. ಆದರೆ ಕ್ಯಾಮರಾಮ್ಯಾನ್ ಆದರೂ ಏನು ಮಾಡಬಲ್ಲ? ನಾಯಿ ಓಡಿದ್ದೂ ಲೈವ್ ನ್ಯೂಸ್‌ನಲ್ಲಿ ಬಂತು. ಅದೂ ಅಂತಿಂಥ ನಾಯಿ ಅಂದ್ಕೊಂಡ್ರಾ? ಸದ್ಯಕ್ಕೆ ಅಮೆರಿಕದ ಪ್ರಥಮಶ್ವಾನ ಪಟ್ಟದ ನಾಯಿ, ಪ್ರೆಸಿಡೆಂಟ್ ಒಬಾಮಾ ಸಾಕಿರುವ ‘ಬೌ’!

ನೋಡಿದಿರಾ, ಒಂದು ಪದದ ಬೆನ್ನತ್ತಿಹೋದರೆ ಸಿಗುವ ರಸಾನುಭವ? ಯಾವ ಮಿಡುಕುವಿಕೆಗಿಂತಲೂ ಮೂರುಪಟ್ಟು ಮೇಲ್ಮಟ್ಟದ್ದು!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App