ಪದ-ಶ್ರಾವ್ಯ

ಈಗ ಆಡಿಯೋ ಟಚ್!

7
May 2011
Mother’s Day Special
Posted in DefaultTag by sjoshi at 7:54 am

ದಿನಾಂಕ  8 ಮೇ 2011ರ ಸಂಚಿಕೆ...

ತೂಗು ಬಾ ತೊಟ್ಟಿಲನು ತಾಯೇ...

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

ಎಷ್ಟು ಚಂದದ ಕಲ್ಪನೆ! ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಮಗು, ತೂಗು ಬಾ ತೊಟ್ಟಿಲನು ಎಂದು ಅಮ್ಮನನ್ನು ಕರೆಯುತ್ತಿದೆ! ಚಂದವಷ್ಟೇ ಅಲ್ಲ ಈ ಕವಿಕಲ್ಪನೆಯಲ್ಲಿ ಒಂದು ಅನನ್ಯತೆಯಿದೆ, ಆಕರ್ಷಣೆಯಿದೆ. ಇವತ್ತಿನ ಅಂಕಣಕ್ಕೆ ವಸ್ತುವಾಗಬಲ್ಲ ಅರ್ಹತೆಯಂತೂ ಖಂಡಿತ ಇದೆ. ಬನ್ನಿ, ಅಮ್ಮಂದಿರ ದಿನದ ವಿಶೇಷವಾಗಿ ಇಂದು ಸವಿಯೋಣ ಒಂದು ಸುಂದರ ಭಾವಗೀತೆ ‘ತೂಗು ಬಾ ತೊಟ್ಟಿಲನು ತಾಯೇ...’

ಕಂದನ ಸಿಹಿನಿದ್ದೆಗೆ ಅಮ್ಮನ ಲಾಲಿಹಾಡು, ಜೋಜೋ ಜೋಗುಳ- ಇದು ಸರ್ವೇಸಾಮಾನ್ಯ. ಜನಪದಗೀತೆ, ಭಾವಗೀತೆ, ಭಕ್ತಿಗೀತೆ, ಕೊನೆಗೆ ಚಿತ್ರಗೀತೆಗಳಲ್ಲೂ ಲೆಕ್ಕವಿಲ್ಲದಷ್ಟಿವೆ ಲಾಲಿಹಾಡುಗಳು. ‘ಯಾಕಳತೀ ನನ್ನ ಕಂದಾ ಬೇಕಾದ್ದು ನಿನಗುಂಟು ನಾಕೆಮ್ಮೆ ಕರೆದ ನೊರೆಹಾಲು...’, ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು...’, ‘ಮಲಗು ಮಲಗೆನ್ನ ಮರಿಯೇ ಬಣ್ಣದ ನವಿಲಿನ ಗರಿಯೇ...’, ‘ಜೋಜೋ ಶ್ರೀಕೃಷ್ಣ ಪರಮಾನಂದ...’, ‘ತೂಗಿರೇ ರಂಗನ ತೂಗಿರೇ ಕೃಷ್ಣನ...’, ‘ಜೋಜೋ ಲಾಲಿ ನಾ ಹಾಡುವೆ...’, ‘ಶ್ರೀಚಕ್ರಧಾರಿಗೆ ಶಿರಬಾಗಿ ಲಾಲಿ...’ - ನೆನಪಿಸಿಕೊಳ್ಳಲು ತಡವರಿಸುವುದೇ ಬೇಡ, ಒಂದರ ಹಿಂದೊಂದು ಒತ್ತರಿಸಿ ಬರುತ್ತವೆ. ಸಿಹಿನೆನಪುಗಳಂತೆ. ಇವೆಲ್ಲ ನಮ್ಮ ಕಿವಿಗಳಲ್ಲಿ ಎಂದೆಂದಿಗೂ ಗುಂಯ್‌ಗುಡುತ್ತಲೇ ಇರುವ ಗೀತೆಗಳು. ನಾವೇ ಮಗುವಾಗಿದ್ದಾಗ ಕೇಳಿದ್ದಾದರೂ ಸರಿ, ನಮ್ಮದೇ ಮಗುವಿಗಾಗಿ ಹಾಡಿದ್ದಾದರೂ ಸರಿ. ನಾವುನೀವು ಬಿಡಿ, ಬಾನಿನಲ್ಲಿರುವ ಚಂದ್ರಮನೂ ಲಾಲಿಹಾಡು ಕೇಳಿದವನೇ. ತಿಳಿಮುಗಿಲ ತೊಟ್ಟಿಲಲಿ ಮಲಗಿರುವ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು! ಅದು ಎಸ್ವಿ ಪರಮೇಶ್ವರ ಭಟ್ಟರ ರಮ್ಯಕಲ್ಪನೆ. ಇನ್ನು, ವಾಸ್ತವಿಕತೆಯ ತುಣುಕು ಬೇಕೇ? ಮಲ್ಲಿಗೆಕವಿ ಬರೆದ ಮಾರ್ಮಿಕ ಸಾಲುಗಳನ್ನು ನೋಡಿ- “ಕೀಲಿಗೆಣ್ಣೆಯ ಬಿಟ್ಟು ಎಷ್ಟು ದಿನವಾಯಿತೋ ತೊಟ್ಟಿಲಿನ ಕಿರಿಚು ಅಲ್ಲಿಂದಿಲ್ಲಿಗೆ... ಅದೆ ತಾಯ ದನಿಯೆಂದು ಯಾರಿದಕೆ ಹೇಳಿದರೊ ಕಣ್ಣ ಚಾವಣಿ ಬಿತ್ತು ನಿದ್ದೆ ಮಳೆಗೆ...” - ತೂಗುವುದ ನಿಲ್ಲಿಸಿ ಅಮ್ಮ ನಡೆದಿದ್ದಾಳೆ ಮನೆಗೆಲಸಕ್ಕೆ; ಇನ್ನೂ ತೂಗುತ್ತಲೇ ಇರುವ ತೊಟ್ಟಿಲಿನ ಲಯಬದ್ಧತೆಗೆ ಮಗು ಜಾರಿದೆ ನಿದ್ರಾಲೋಕಕ್ಕೆ.

ಇರಲಿ, ನಾನು ಹೇಳಹೊರಟಿರುವುದು ಲಾಲಿಹಾಡುಗಳ ಬಗೆಗಲ್ಲ. ಮಗುವೇ ಅಮ್ಮನಿಗಾಗಿ ಹಾಡುತ್ತಿರುವ ಹಾಡಿನ ಬಗ್ಗೆ. ಇದು ಡಿ.ಎಸ್.ಕರ್ಕಿ ಅವರು ರಚಿಸಿದ ಒಂದು ಅದ್ಭುತವಾದ ಭಾವಗೀತೆ. ಭಾವೋದ್ದೀಪನ ಶಕ್ತಿಯಲ್ಲಿ ಕರ್ಕಿಯವರದೇ ಬಹುಪ್ರಖ್ಯಾತ ‘ಹಚ್ಚೇವು ಕನ್ನಡದ ದೀಪ’ಕ್ಕೆ ಕಮ್ಮಿಯದೇನಲ್ಲ. ಆದರೆ ಪ್ರಖ್ಯಾತಿಯಿರಲಿ ಬಹುಮಂದಿಗೆ ಪರಿಚಯವೂ ಇಲ್ಲ. ನನಗೂ ಇರಲಿಲ್ಲ. ಕಳೆದವರ್ಷ ಆಗಸ್ಟ್‌ನಲ್ಲಿ ನನಗೊಂದು ಇಮೇಲ್ ಆಹ್ವಾನಪತ್ರ ಬಂತು. ಕಳಿಸಿದವರು ಬೆಂಗಳೂರಿನಿಂದ ಚಿದಂಬರ ಕಾಳಮಂಜಿ ಎಂಬುವರು. ಪರಾಗಸ್ಪರ್ಶ ಅಂಕಣದ ಓದುಗರೆಂದು ಅವರೇ ಪರಿಚಯ ತಿಳಿಸಿ, ತಾನೊಬ್ಬ ಹವ್ಯಾಸಿ ಸಂಗೀತೋಪಾಸಕನೆಂದೂ, ತಾನು ಸ್ವರಸಂಯೋಜನೆ ಮಾಡಿರುವ ಚೊಚ್ಚಲ ಧ್ವನಿಸುರುಳಿ ‘ತೂಗು ಬಾ’ ಬಿಡುಗಡೆ ಸಮಾರಂಭಕ್ಕೆ ಆಮಂತ್ರಿಸುತ್ತಿರುವುದಾಗಿಯೂ ಬರೆದಿದ್ದರು. ಬೆಂಗಳೂರಿನ ಪಿ‌ಇ‌ಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕ ವೃತ್ತಿ; ಜತೆಯಲ್ಲಿ ಸುಗಮಸಂಗೀತ ಪೋಷಣೆ, ಕೊಳಲುವಾದನ; ಸಂಗೀತದ ಪ್ರಣತಿಯನ್ನು ಪಸರಿಸಬೇಕೆಂಬ ಕನಸುಗಳು, ಹಂಬಲಗಳು, ಯೋಜನೆಗಳು... ಆಹ್ವಾನಪತ್ರಿಕೆಯೊಂದಿಗೆ ಅವರು ಕಳಿಸಿದ್ದ ಇನ್ನೊಂದು ಕಡತದಲ್ಲಿ ಆ‌ಎಲ್ಲ ವಿವರಗಳೂ ಇದ್ದವು. ನಾನಾದರೋ ಆಗ ಅವರಿಗೆ ಇಮೇಲ್‌ನಲ್ಲಿಯೇ ಶುಭ ಹಾರೈಸಿ ಸುಮ್ಮನಾಗಿದ್ದೆ.

ಅದಾದಮೇಲೆ ಮೂರ್ನಾಲ್ಕು ತಿಂಗಳು ಕಳೆದಿರಬಹುದು. ಒಂದುದಿನ ಕಾಳಮಂಜಿಯವರಿಂದ ಮತ್ತೆ ಇಮೇಲ್. ಈಬಾರಿ ಧ್ವನಿಸುರುಳಿಯ ಶೀರ್ಷಿಕೆಗೀತೆ ‘ತೂಗು ಬಾ ತೊಟ್ಟಿಲನು...’ ಹಾಡಿನ mp3 ಫೈಲ್ ಸಹ ಲಗತ್ತಿಸಿದ್ದರು. ಕುತೂಹಲದಿಂದ ಅದನ್ನು ಪ್ಲೇ ಮಾಡಿದೆ. First impression is best impression ಅಂತಾರಲ್ಲಾ, ಇದು ಬೆಸ್ಟ್‌ಗಿಂತಲೂ ಬೆಸ್ಟ್ ಇದೆ ಅನಿಸಿತು. ನನಗೆ ಮಾತ್ರ ಹಾಗನಿಸಿತೋ ಅಥವಾ ನಿಜಕ್ಕೂ ಬೆಸ್ಟ್ ಆಗಿದೆಯೋ ಎಂದು ತಿಳಿದುಕೊಳ್ಳಲು ಸುಗಮಸಂಗೀತ ರಸಾಸ್ವಾದನೆ ಮಾಡಬಲ್ಲ ಒಂದಿಷ್ಟು ಆಪ್ತಸ್ನೇಹಿತರಿಗೆ ಇಮೇಲ್ ಫಾರ್ವರ್ಡ್ ಮಾಡಿದೆ. ಹಾಡನ್ನು ಕೇಳಿಸಿಕೊಂಡ ಪ್ರತಿಯೊಬ್ಬರಿಂದಲೂ ಒಳ್ಳೆಯ ಪ್ರತಿಕ್ರಿಯೆ. ಸುಂದರ ಸಾಹಿತ್ಯಕ್ಕೆ ಸುಮಧುರ ಸಂಗೀತ ಎಂದು ಮನತುಂಬಿ ಪ್ರಶಂಸೆ. ಅವನ್ನೆಲ್ಲ ಒಟ್ಟುಸೇರಿಸಿ ಇಮೇಲ್‌ನಲ್ಲಿ ಕಾಳಮಂಜಿಯವರಿಗೆ ತಲುಪಿಸಿದೆ. ಒಬ್ಬ ಕಲಾವಿದನ ಪ್ರಾಮಾಣಿಕ ಪ್ರಯತ್ನವನ್ನು ನಾಲ್ಕುಮಂದಿಗೆ ಪರಿಚಯಿಸಿದ, ಅವರ ಮೆಚ್ಚುಗೆಯನ್ನು ಕಲಾವಿದನಿಗೆ ತಲುಪಿಸಿದ ತೃಪ್ತಿ ನನ್ನದು. ಆಮೇಲೆ ಎಷ್ಟುಸರ್ತಿ ಈ ಹಾಡನ್ನು ಕೇಳಿದ್ದೇನೋ ಲೆಕ್ಕವಿಲ್ಲ. ಪ್ರತಿಸಲವೂ ಅದೇ ರೋಮಾಂಚನ. ಸ್ವರ-ಲಯ-ರಾಗ ಸಮ್ಮಿಲನದಿಂದ ಅವರ್ಣನೀಯ ಆನಂದ. ಹಾಗೆ ನೋಡಿದರೆ ಇದನ್ನು ಹಾಡಿದ ರಕ್ಷಾ ಆತ್ರೇಯಸ್ ಮತ್ತು ನಮ್ರತಾ ಪ್ರಸಾದ್ ಅವರೇನೂ ಪ್ರಖ್ಯಾತರಲ್ಲ. ಸಂಗೀತ ನಿರ್ದೇಶಕ ಪ್ರವೀಣ ಡಿ. ರಾವ್ ಸಹ ಕೀರ್ತಿಶಿಖರವೇರಿದವರಲ್ಲ. ಕಾಳಮಂಜಿಯವರ ಸಂಗೀತ ಖಯಾಲಿಯಂತೂ ಪಿ‌ಇ‌ಎಸ್ ಕಾಲೇಜಿನ ವಿದ್ಯಾರ್ಥಿಗಳಿಗೇ ಗೊತ್ತಿದೆಯೋ ಇಲ್ಲವೋ. ಆದರೆ, ವನಸುಮಗಳನ್ನು ಸೇರಿಸಿ ಹೂಗುಚ್ಛ ಕಟ್ಟಿದಾಗ ಅದರ ಸೌಂದರ್ಯ-ಸುಗಂಧಗಳಿಗೆ ಎಣೆಯೆಲ್ಲಿ?

ತೂಗು ಬಾ ತೊಟ್ಟಿಲನು ತಾಯೇ

ಮತ್ತೊಮ್ಮೆ ತೂಗು ತೊಟ್ಟಿಲನು ನೀನೇ || ಪ ||

ನಿನ್ನ ಒಲವದು ತಪ್ಪಿ ನಿಂತ ತೊಟ್ಟಿಲ ಮುಟ್ಟಿ

ಮತ್ತೆ ಮೆಲ್ಲನೇ ತಟ್ಟಿ ತೂಗು ಬಾ ತೊಟ್ಟಿಲನು ತಾಯೇ

ತೂಗಮ್ಮ ತುಳುಕುವೊಲು ಜೀವರಸ ತಾನೇತಾನೇ || 1 ||

ನೀನು ಮೆಲ್ಲನೆ ಸೋಕು ನೋಡು ತೊಟ್ಟಿಲ ಜೀಕು

ಬೇಕೇ ಬೇರೆಯಾ ಹಿಗ್ಗು ನಾದಲಯ ಜೀವನದ ಲೀಲೆ

ನಿನ್ನಿಂದ ಮಧುರವಾಗದೇ ಹೃದಯ ತಾನೇ || 2 ||

ಜೀವಸ್ಪರ್ಶವ ಸಲಿಸಿ ಜಗದೊಡಲ ಝುಮ್ಮೆನಿಸಿ

ಬಿಗಿದ ಬಂಧವ ಬಿಡಿಸಿ ತೂಗು ಬಾ ತೊಟ್ಟಿಲನು ತಾಯೇ

ಅನುಭವದ ಸುಳಿಗಾಳಿ ತೀಡುವೊಲು ತಾನೇತಾನೇ || 3 ||

ಕರ್ಕಿಯವರ ಕವಿಹೃದಯದ ಕಲ್ಪನೆಗಳತ್ತ ಕಣ್ಣಾಡಿಸಿ: ತೊಟ್ಟಿಲನ್ನು ತೂಗುವಾಗ ಜೀವರಸ ತುಳುಕುತ್ತದಂತೆ. ಜೀವರಸವೆಂದರೆ ತಾಯಿಯ ಪ್ರೀತಿಯ ಅಮೃತಧಾರೆ ಅಂತಾದರೂ ಅರ್ಥೈಸಿ, ಮಗುವಿನ ಬಾಯಿಯ ಜೊಲ್ಲು ಎಂದಾದರೂ ಅರ್ಥೈಸಿ, ಎಂಥ ಸುಂದರ ಚಿತ್ರಣ! ‘ಜೀವಸ್ಪರ್ಶವ ಸಲಿಸಿ ಜಗದೊಡಲ ಝುಮ್ಮೆನಿಸಿ’ ಎಂಬ ಒಂದೇ ಸಾಲು ಸಾಕು ಇಡೀ ಕವಿತೆಯಲ್ಲಿರುವ ರೋಮಾಂಚಕತೆಯನ್ನು ಹರಳುಗಟ್ಟಿಸಿ ಕೊಡಲು. ಮಾತೆಯ ಮಮತೆಯ ಸ್ಪರ್ಶ ಮಗುವಿಗೆ ಆಗುವುದೂ ಒಂದೇ, ದೈವಾನುಗ್ರಹದ ಸ್ಪರ್ಶ ನಮ್ಮ ಮನೋವ್ಯಾಪ್ತಿಯ ಅನುಭವಕ್ಕೆ ಬರುವುದೂ ಒಂದೇ. ಮಾತಿನಿಂದ, ಅಕ್ಷರಗಳಿಂದ ಅದರ ವರ್ಣನೆ ಸಾಧ್ಯವಿಲ್ಲ. ತಾಯಿ ತೊಟ್ಟಿಲು ತೂಗುತ್ತಿರುವಾಗ ಅಲ್ಲಿ ತೀಡುವ ಸುಳಿಗಾಳಿಯಿಂದ ಮಗುವಿಗೆ ಜೀವನಾನುಭವದ ಎರಕ. ಜನನಿ ತಾನೇ ಮೊದಲ ಗುರುವು... ಜನನಿಯಿಂದ ಪಾಠ ಕಲಿತ ಜನರು ಧನ್ಯರು! “ಮಾತು ಮಾತು ಮಥಿಸಿ ಬಂದ ನಾದದ ನವನೀತ... ಹಿಗ್ಗಬೀರಿ ಹಿಗ್ಗುತ್ತಿತ್ತು ತನ್ನ ತಾನೇ ಪ್ರೀತ... ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ” ಎಂದಿದ್ದರು ವರಕವಿ ಬೇಂದ್ರೆ. ಇರಬಹುದು, ಆದರೆ ‘ತೂಗು ಬಾ’ದಂಥ ಭಾವಗೀತವನ್ನು ಕೇಳಿದ ಯಾವ ತಾಯಿಯೂ ಇದರಲ್ಲಿ ಅರ್ಥವಿಲ್ಲ ಎನ್ನಲಾರಳು. ಇದು ತನ್ನ ಕರುಳಕುಡಿ ತನಗೆ ಹಾಡುತ್ತಿರುವುದು ಎಂದೇ ಅರ್ಥೈಸಲಾರದಷ್ಟು ಸ್ವಾರ್ಥವಿಲ್ಲದವಳೂ ಆಗಲಾರಳು. ಎಷ್ಟೆಂದರೂ ತಾಯಿ-ಮಗು ಸಂಬಂಧವೇ ಅಂಥದು.

mothersday.jpg

ಪರಾಗಸ್ಪರ್ಶ ಓದುಗ(ರ) ಅಮ್ಮಂದಿರಿಗೆಲ್ಲ ಇವತ್ತಿನ ವಿಶೇಷ ದಿನದ ವಿಶೇಷ ಶುಭಾಶಯಗಳು. ಈ ಆಡಿಯೋಬ್ಲಾಗ್‌ನಲ್ಲಿ ಲೇಖನವು ಧ್ವನಿರೂಪದಲ್ಲಿರುವುದರಿಂದ ನಿಮಗೆ ‘ತೂಗು ಬಾ...’ ಗೀತೆಯನ್ನೂ ಕೇಳಿ ಆನಂದಿಸಿ ಅನುಭವಿಸುವುದು ಸಾಧ್ಯವಾಯಿತು. ‘ತೂಗು ಬಾ’ ಧ್ವನಿಸುರುಳಿ ನಿಮ್ಮ ಸಂಗ್ರಹಕ್ಕೆ ಸೇರಿಕೊಳ್ಳಬೇಕು. ಅದಕ್ಕೆ ನೀವು ಚಿದಂಬರ ಕಾಳಮಂಜಿಯವರನ್ನು ಸಂಪರ್ಕಿಸಬೇಕು. ಸದಭಿರುಚಿಯ ಸಾಹಿತ್ಯ-ಸಂಗೀತ ಸಂಭ್ರಮ ನಿಮ್ಮದಾಗಿಸಬೇಕು. ಅವರ ದೂರವಾಣಿ ಸಂಖ್ಯೆ: 99017 20202. ಇಮೇಲ್ ವಿಳಾಸ- chidvijay at gmail dot com

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.