Episodes

Saturday Apr 07, 2012
Nadatarangini 25 Years
Saturday Apr 07, 2012
Saturday Apr 07, 2012
ದಿನಾಂಕ 8 ಎಪ್ರಿಲ್ 2012ರ ಸಂಚಿಕೆ...
ರಾಗರಸಧಾರೆಯ ರಜತಪರ್ವ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧವಯ್ಯಾ. ಎಲ್ಲವೂ ಋತುರಾಜ ವಸಂತನ ಇಂದ್ರಜಾಲ. ಅವನು ತರುಲತೆಗಳನ್ನಷ್ಟೇ ಅಲ್ಲ ಸಂಬಂಧಗಳನ್ನೂ ಚಿಗುರಿಸಬಲ್ಲವ. ಹೂವಿಗೂ ದುಂಬಿಗೂ ಚುಂಬನದ ಪ್ರೇರಣೆ ನೀಡಬಲ್ಲವ. ಮಾಮರಕ್ಕೂ ಕೋಗಿಲೆಗೂ ನಂಟುಹಾಕಿ ಪ್ರಕೃತಿಯನ್ನು ಗಂಧರ್ವಲೋಕವಾಗಿಸಬಲ್ಲವ. ಈಗ, ಇದನ್ನು ಕಲ್ಪಿಸಿ: ಎತ್ತಣ ಅಮೆರಿಕಾ ಎತ್ತಣ ಕರ್ನಾಟಕ ಶಾಸ್ತ್ರೀಯ ಸಂಗೀತೋತ್ಸವ ಎತ್ತಣಿಂದೆತ್ತ ಸಂಬಂಧವಯ್ಯಾ... ಋತುರಾಜನಿಂದ ಅದೂ ಸಾಧ್ಯ! ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ ‘ನಾದತರಂಗಿಣಿ’ ಸಂಸ್ಥೆಯು ಪ್ರತಿವರ್ಷ ವಸಂತಋತುವಿನಲ್ಲಿ ಹಮ್ಮಿಕೊಳ್ಳುವ ಪುರಂದರ-ತ್ಯಾಗರಾಜ ಸಂಗೀತೋತ್ಸವದ ವೈಭವವನ್ನೇನಾದರೂ ನೀವು ಆಸ್ವಾದಿಸಿದರೆ ಒಂದೊಮ್ಮೆ ಮೈಮರೆಯುತ್ತೀರಿ. ಅದು ನಿಮಗೆ ತಿರುವಯ್ಯಾರಿನ ತ್ಯಾಗರಾಜ ಆರಾಧನೆಯನ್ನು ನೆನಪಿಸಬಹುದು. ಮಾರ್ಗಶಿರದ ಚುಮುಚುಮು ಚಳಿಯಲ್ಲಿ ಚೆನ್ನೈಯಲ್ಲಿ ನಡೆಯುವ ಸಂಗೀತ ಕಚೇರಿಗಳು ನಿಮ್ಮ ಕಣ್ಮುಂದೆ ಸುಳಿದಾಡಬಹುದು. ಬೆಂಗಳೂರಿನ ರಾಮನವರಾತ್ರಿ ಸಂಗೀತ ಕಾರ್ಯಕ್ರಮಗಳು, ದಸರೆಯ ವೇಳೆ ಮೈಸೂರಿನಲ್ಲಿ ಮೇಳೈಸುವ ಸಂಗೀತಗೋಷ್ಠಿಗಳು ನಿಮ್ಮ ಮನದಲ್ಲಿ ಹಾದುಹೋಗಬಹುದು. ರಾಗರಸಧಾರೆಯ ನಿರಂತರ ಪ್ರವಾಹದಲ್ಲಿ ಇದೇನಿದು ಗಂಧರ್ವಲೋಕದಲ್ಲೇ ವಿಹರಿಸುತ್ತಿದ್ದೀವಾ ಎಂದೂ ನಿಮಗನಿಸಬಹುದು! ಇದು ಉತ್ಪ್ರೇಕ್ಷೆಯಲ್ಲ; ಒಬ್ಬ ಸಂಗೀತಾಭಿಮಾನಿ ಸಾಮಾನ್ಯ ಪ್ರೇಕ್ಷಕನಾಗಿ ನಾದತರಂಗಿಣಿಯ ಕಾರ್ಯಕ್ರಮಗಳನ್ನು ಕಳೆದ ಕೆಲ ವರ್ಷಗಳಿಂದಲೂ ಸವಿಯುತ್ತ ಬಂದಿರುವ ನನಗೆ, ಈವರ್ಷ ಬೆಳ್ಳಿಹಬ್ಬದ ಸಡಗರ ಹೇಗಿರಬಹುದೆಂದು ಊಹಿಸಿದಾಗ ನಿಲುಕಿದ ಅಭಿಮಾನಪೂರ್ವಕ ಅಂದಾಜು. ಮುಂದಿನ ವಾರಾಂತ್ಯದಲ್ಲಿ, ಅಂದರೆ ಏಪ್ರಿಲ್ ೧೩ರಿಂದ ೧೫ರವರೆಗೆ ಇಲ್ಲಿನ ಶಿವವಿಷ್ಣು ದೇವಸ್ಥಾನದ ಭವ್ಯ ಸಭಾಂಗಣದಲ್ಲಿ ನಾದತರಂಗಿಣಿ ವಾರ್ಷಿಕ ಸಂಗೀತೋತ್ಸವ. ಮೂರುದಿನ ಸೇರಿ ಸುಮಾರು ಮುನ್ನೂರಕ್ಕೂ ಹೆಚ್ಚು ಸಂಗೀತಗಾರರಿಂದ ನಾದಾಮೃತ ರಸದೌತಣ. ಇದು ಉತ್ಸವದ 25ನೇ ವರ್ಷ. ಆದ್ದರಿಂದ ಮತ್ತಷ್ಟು ಹುರುಪು, ಮತ್ತಷ್ಟು ಹರ್ಷ. ಈ ಕುರಿತೊಂದು ಕರ್ಟೇನ್ರೈಸರ್ ಮಾದರಿಯಲ್ಲಿ ಇವತ್ತಿನ ಪ‘ರಾಗ’ಸ್ಪರ್ಶ. ನಾದತರಂಗಿಣಿಯ ಕಿರುಪರಿಚಯ ಮಾಡುವಾಗ ‘ಇದು ವಾಷಿಂಗ್ಟನ್ ಪ್ರದೇಶದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಶಿಕ್ಷಣ ಒದಗಿಸುತ್ತಿರುವ ಒಂದು ಲಾಭರಹಿತ ಸಂಸ್ಥೆ. ಹಾಡುಗಾರಿಕೆ, ಪಕ್ಕವಾದ್ಯ ಮುಂತಾಗಿ ಸಂಗೀತದ ವಿವಿಧ ಪಲುಕು ಪ್ರಕಾರಗಳನ್ನು ಇಲ್ಲಿ ಕಲಿಸಲಾಗುತ್ತದೆ...’ ಅಂತೆಲ್ಲ ಔಪಚಾರಿಕವಾಗಿ ಹೇಳಿದರೆ ಸರಿಯಾಗಿ ಪರಿಚಯಿಸಿದಂತೆಯೇ ಆಗಲಿಕ್ಕಿಲ್ಲ. ಅಫೀಶಿಯಲ್ ರೆಕಾರ್ಡ್ಗಳಿಗಾಗಿ ಅದು ನೋಂದಾಯಿತ ಸಂಸ್ಥೆಯೇ ಇರಬಹುದು; ಆದರೆ ನಮ್ಮೆಲ್ಲರ ದೃಷ್ಟಿಯಲ್ಲಿ ಅದೊಂದು ಆತ್ಮೀಯ ಕುಟುಂಬವಿದ್ದಂತೆ. ನಾದತರಂಗಿಣಿಯೊಂದಿಗೆ ಒಡನಾಟವಿರುವ ವಿದ್ಯಾರ್ಥಿಗಳಿರಲಿ, ಸಂಗೀತಶಿಕ್ಷಕ/ಶಿಕ್ಷಕಿಯರಿರಲಿ, ಸ್ವಯಂಸೇವಕರಿರಲಿ, ಪೋಷಕರಿರಲಿ, ಅಥವಾ ನನ್ನಂಥ ಸಾಮಾನ್ಯ ಪ್ರೇಕ್ಷಕರಿರಲಿ ಎಲ್ಲರಿಗೂ ‘ಇದು ನಮ್ಮ ನಾದತರಂಗಿಣಿ’ ಎನ್ನುವ ಹೆಮ್ಮೆ. ಪ್ರತಿವರ್ಷ ಏಪ್ರಿಲ್ ಹೊತ್ತಿಗೆ ಜರುಗುವ ಪುರಂದರ-ತ್ಯಾಗರಾಜ ಸಂಗೀತೋತ್ಸವವಾಗಲಿ, ನವರಾತ್ರಿಯಲ್ಲಿ ನಡೆಯುವ ಸರಸ್ವತಿಪೂಜೆಯಾಗಲಿ, ಪ್ರತಿತಿಂಗಳೂ ಎನ್ನುವಮಟ್ಟಿಗೆ ಆಯೋಜಿತವಾಗುವ ಬೇರೆಬೇರೆ ಸಂಗೀತ ಕಾರ್ಯಕ್ರಮಗಳೇ ಆಗಲಿ- ಎಲ್ಲದರಲ್ಲೂ ಎದ್ದುಕಾಣುವ ಅಂಶವೆಂದರೆ ನಮ್ಮ ಮನೆಯದೇ ಸಮಾರಂಭವೇನೋ ಎನ್ನುವಂಥ ಆತ್ಮೀಯ ಸಂಭ್ರಮದ ವಾತಾವರಣ. ಬಹುಶಃ ಸಂಗೀತದ ಬಗ್ಗೆ ಅಲ್ಪಸ್ವಲ್ಪವಷ್ಟೇ ಅರಿವು-ಅಭಿಮಾನವಿರುವವರಿಗೂ ನಾದತರಂಗಿಣಿ ಅಪಾರವಾಗಿ ಹಿಡಿಸುವುದು ಅದೇಕಾರಣಕ್ಕೆ. ಇಲ್ಲಿ ವಾಷಿಂಗ್ಟನ್ ಸುತ್ತಮುತ್ತಲೂ ಎಂಥೆಂಥ ಅದ್ಭುತವಾದ ಅದ್ಧೂರಿಯ ಕಾರ್ಯಕ್ರಮಗಳು ನಾದತರಂಗಿಣಿ ಬ್ಯಾನರ್ನಡಿ ಪ್ರಸ್ತುತಗೊಂಡಿವೆಯೋ, ಇದುವರೆಗೂ ಯಾವ ಕಾರ್ಯಕ್ರಮಕ್ಕೂ ಪ್ರವೇಶಶುಲ್ಕ ಅಂತ ಇರಿಸಿದ್ದಿಲ್ಲ! ಸಂಗೀತಾಭಿಮಾನಿ ದಾನಿಗಳ ಔದಾರ್ಯ, ಉತ್ಸಾಹಿ ಸ್ವಯಂಸೇವಕರ ಸೇವಾಕಾರ್ಯ- ನಾದತರಂಗಿಣಿ ರಥದ ಮುಂದಿನೆರಡು ಗಾಲಿಗಳಿವು. ಮತ್ತೆ ಹಿಂದಿನೆರಡು ಗಾಲಿಗಳು? ವಿದುಷಿ ಉಷಾ ಚಾರ್ ಮತ್ತು ಅವರ ಪತಿ ಎ.ಆರ್.ಚಾರ್! ನಾದತರಂಗಿಣಿ ಬೇರೆಯಲ್ಲ, ಚಾರ್ ದಂಪತಿ ಬೇರೆಯಲ್ಲ. 1975ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ಉಷಾ ಚಾರ್, ಆಕಾಶವಾಣಿಯ ‘ಎ’ ದರ್ಜೆ ಕಲಾವಿದೆ. ಬೆಂಗಳೂರು ನಿಲಯದಲ್ಲಿ ಪ್ರೊಗ್ರಾಮ್ ಎಕ್ಸಿಕ್ಯೂಟಿವ್ ಆಗಿಯೂ ಸೇವೆಸಲ್ಲಿಸಿದವರು. ಅಮೆರಿಕಾ ದೇಶಕ್ಕೆ ಬಂದಮೇಲೆ ಸಂಗೀತೋಪಾಸನೆ ನಿಲ್ಲಿಸಬಾರದೆಂದು ನಾದತರಂಗಿಣಿಯನ್ನು ಆರಂಭಿಸಿದರು. ತನ್ನ ಸಂಗೀತಗುರು ಆನೂರು ಎಸ್.ರಾಮಕೃಷ್ಣ ಅವರೇ ಇದಕ್ಕೆ ಪ್ರೇರಣೆ ಎನ್ನುತ್ತಾರೆ ಉಷಾ. ವೈಯಕ್ತಿಕ ನೆಲೆಯಲ್ಲಿ ಒಬ್ಬ ಸಾಮಾನ್ಯ ಸಂಗೀತಶಿಕ್ಷಕಿಯಾಗಷ್ಟೇ ಉಳಿದು ಅವರು ನಿಂತನೀರಾಗಲಿಲ್ಲ. ಬದಲಿಗೆ, ನಾದತರಂಗಿಣಿಯನ್ನು ಒಂದು ಬೃಹತ್ ಕುಟುಂಬವಾಗಿ ಬೆಳೆಸಿದರು. ಅವರ ಬಳಿ ಸಂಗೀತ ಕಲಿತ ವಿದ್ಯಾರ್ಥಿಗಳು ಈಗ ಸ್ವತಂತ್ರವಾಗಿ ಕಚೇರಿಗಳನ್ನು ಕೊಡುವಷ್ಟು, ಭಾರತದಿಂದ ಪ್ರವಾಸದಲ್ಲಿ ಬರುವ ದೊಡ್ಡದೊಡ್ಡ ಕಲಾವಿದರಿಗೆ ಸಮರ್ಥವಾಗಿ ಸಾಥ್ ಕೊಡುವಷ್ಟು ಪ್ರೌಢರಾಗಿದ್ದಾರೆ. ಉಷಾ ಚಾರ್ ಬಳಿ ಇನ್ನೂ ಸಂಗೀತ ಕಲಿಯುತ್ತಲೇ ತಾವೂ ಪುಟ್ಟಪುಟ್ಟ ಸಂಗೀತಶಾಲೆಗಳನ್ನು ಆರಂಭಿಸಿದ್ದಾರೆ. ಬೇರೆಲ್ಲ ಬಿಡಿ, ಅಮೆರಿಕನ್ ಮೂಲದ ಒಂದಷ್ಟು ವಿದ್ಯಾರ್ಥಿಗಳಿಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸಿ ಅವರಿಂದ ‘ಎಂದರೋ ಮಹಾನುಭಾವುಲು...’ ಪಂಚರತ್ನ ಕೃತಿ ಹಾಡಿಸಿದ ಹೆಮ್ಮೆ ಉಷಾ ಚಾರ್ ಅವರದು! ಇಷ್ಟಾದರೂ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ಸರಳ, ಸಹೃದಯ ವ್ಯಕ್ತಿತ್ವ. ಪ್ರತಿಯೊಬ್ಬ ಶಿಷ್ಯ/ಶಿಷ್ಯೆಯನ್ನೂ ತನ್ನ ಮಗುವಿನಂತೆ ಪ್ರೀತಿಸುವ ಅಪ್ರತಿಮ ಗುರು. ವಿದ್ಯಾರ್ಥಿಗಳಿಗಾದರೂ ಅಷ್ಟೇ, ಅವರು ಪ್ರೀತಿಯ ಉಷಾಆಂಟಿ, ಉಷಾಅತ್ತೆ. ಅಂದಹಾಗೆ ಚಾರ್ ದಂಪತಿಯ ಒಬ್ಬಳೇ ಮಗಳು ರಾಧಿಕಾ ಕೂಡ ಉಷಾ ಅವರಿಂದಲೇ ಸಂಗೀತ ಕಲಿತು, ಅಮೆರಿಕದಲ್ಲೂ ಭಾರತದಲ್ಲೂ ಕಚೇರಿಗಳನ್ನು ನಡೆಸುವಷ್ಟು ಪಳಗಿರುವ ವಯಲಿನ್ ಕಲಾವಿದೆ. ‘ಎಂದಿಗೂ ಅಸೂಯೆಪಡದಂಥ ಒಡಹುಟ್ಟಿದಾಕೆ ಈ ನಾದತರಂಗಿಣಿ’ ಎಂದು ನಸುನಗುತ್ತಾಳೆ ರಾಧಿಕಾ. ಸಂಗೀತ ಶಿಕ್ಷಣವೊಂದೇ ನಾದತರಂಗಿಣಿಯ ಚಟುವಟಿಕೆಯಲ್ಲ. ಭಾರತದಿಂದ ಬರುವ ಪ್ರವಾಸಿ ಕಲಾವಿದರ ಸಂಗೀತಕಚೇರಿಗಳನ್ನು ಏರ್ಪಡಿಸುವುದು, ಅಂಥವರಿಂದ ಇಲ್ಲಿನ ಆಸಕ್ತರಿಗಾಗಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುವುದು, ಬೇಸಿಗೆ ರಜೆಯಲ್ಲಿ ಇಲ್ಲಿಂದ ಮಕ್ಕಳು ಭಾರತಕ್ಕೆ ಹೋಗುವಾಗ ಅಲ್ಲಿ ಸಂಗೀತವಿದ್ವಾಂಸರೊಡನೆ ಸಂಪರ್ಕ ಕಲ್ಪಿಸಿ ಹೆಚ್ಚಿನ ಕಲಿಕೆಗೆ ಕೈಮರವಾಗುವುದು- ಇಂಥವನ್ನೂ ಅದು ಅಕ್ಕರಾಸ್ಥೆಯಿಂದ ಮಾಡುತ್ತದೆ. ಪ್ರವೀಣ್ ಗೋಡ್ಖಿಂಡಿ, ಎಂ.ಡಿ.ಪಲ್ಲವಿ, ಅರುಣಕುಮಾರ್, ಡಿ.ಬಾಲಕೃಷ್ಣ, ಟಿ.ಎಸ್.ಸತ್ಯವತಿ, ನರಸಿಂಹುಲು ವಡವಟ್ಟಿ, ಸುಮಾ ಸುಧೀಂದ್ರ ಮುಂತಾಗಿ ಹಲವಾರು ಖ್ಯಾತ ಕಲಾವಿದರು ಬೇರೆಬೇರೆ ಸಂದರ್ಭಗಳಲ್ಲಿ ಅಮೆರಿಕಕ್ಕೆ ಭೇಟಿಯಿತ್ತಾಗ ಇಲ್ಲಿ ನಾದತರಂಗಿಣಿ ವೇದಿಕೆಯಲ್ಲಿ ಕಚೇರಿಗಳನ್ನು ಕೊಟ್ಟಿದ್ದಾರೆ. ಆರ್.ಕೆ.ಶ್ರೀಕಂಠನ್, ಆನೂರು ದತ್ತಾತ್ರೇಯ ಶರ್ಮಾ, ಅನಂತಕೃಷ್ಣ ಶರ್ಮಾ(ಶಿವು) ಮುಂತಾದ ಸಂಗೀತಶ್ರೇಷ್ಠರು ತರಬೇತಿ ಕಾರ್ಯಾಗಾರಗಳನ್ನೂ ನಡೆಸಿದ್ದಾರೆ. ಇದಲ್ಲದೇ ಬೆಂಗಳೂರಿನ ಗಾನಕಲಾ ಪರಿಷತ್, ಗಾಯನಸಮಾಜ, ಎಂ.ಎಸ್.ಶೀಲಾ ಅವರ ಹಂಸಧ್ವನಿ ಕ್ರಿಯೇಶನ್ಸ್, ಮೈಸೂರಿನ ಜೆಎಸ್ಎಸ್ ಮಿಷನ್ ಮತ್ತು ನಾದಬ್ರಹ್ಮ ಮುಂತಾದ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಗೀತಪ್ರಸರಣ ಚಟುವಟಿಕೆಗಳಲ್ಲೂ ನಾದತರಂಗಿಣಿ ಭಾಗಿಯಾಗಿದೆ. ಜತೆಯಲ್ಲೇ ಇಲ್ಲಿನ ಕಾವೇರಿ ಕನ್ನಡ ಸಂಘವೂ ಸೇರಿದಂತೆ ಇತರ ಸಾಂಸ್ಕೃತಿಕ/ಕಲಾವೇದಿಕೆಗಳಲ್ಲಿ ಪ್ರಸ್ತುತಗೊಳ್ಳುವ ನೃತ್ಯನಾಟಕಗಳಿಗೆ, ಅಮೆರಿಕನ್ನರೂ ವೀಕ್ಷಿಸಿ ಆನಂದಿಸಿದ ‘ಶಾಂತಲಾ’, ‘ಏಕಲವ್ಯ’ ಮುಂತಾದ ಇಂಗ್ಲಿಷ್ ಡ್ಯಾನ್ಸ್ಡ್ರಾಮಾಗಳಿಗೂ- ಸಂಗೀತ ಸಂಯೋಜನೆ ಮಾಡಿದೆ. ಓಹಯೊ ಸ್ಟೇಟ್ ಆರ್ಟ್ ಕೌನ್ಸಿಲ್, ಮೇರಿಲ್ಯಾಂಡ್ ಸ್ಟೇಟ್ ಆರ್ಟ್ ಕೌನ್ಸಿಲ್ ಮುಂತಾದ ಕಲಾಪೋಷಕ ಅಮೆರಿಕನ್ ಸಂಘಸಂಸ್ಥೆಗಳು ಉಷಾ ಚಾರ್ ಪ್ರತಿಭೆಯನ್ನು ಗುರುತಿಸಿ ಅವರನ್ನು ಗೌರವಿಸಿವೆ. ಆ ದೃಷ್ಟಿಯಿಂದ ನಾದತರಂಗಿಣಿ ಮತ್ತು ಉಷಾ ಚಾರ್ ಇಂಡೋ-ಅಮೆರಿಕನ್ ಸಾಂಸ್ಕೃತಿಕ ವಿನಿಮಯದ ಸೇತುವೆಯಿದ್ದಂತೆ.
Version: 20241125
No comments yet. Be the first to say something!