ಪದ-ಶ್ರಾವ್ಯ

ಈಗ ಆಡಿಯೋ ಟಚ್!

10
Mar 2012
Nicety of Nicknames
Posted in DefaultTag by sjoshi at 12:01 pm

ದಿನಾಂಕ  11 ಮಾರ್ಚ್ 2012ರ ಸಂಚಿಕೆ...

ನಿಕ್‌ನೇಮ್ ನಾಮಾವಳಿ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ | ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||

ಇದು ರಾಮರಕ್ಷಾ ಸ್ತೋತ್ರದ ಒಂದು ಶ್ಲೋಕ. ಭದ್ರಗಿರಿ ಅಚ್ಯುತದಾಸರು ಹರಿಕಥೆಯಲ್ಲಿ ಇದನ್ನು ಬಹಳ ಸ್ವಾರಸ್ಯಕರವಾಗಿ ವರ್ಣಿಸುತ್ತಾರೆ. ಶ್ರೀರಾಮನನ್ನು ಯಾರ್ಯಾರು ಯಾವ್ಯಾವ ಹೆಸರಿನಿಂದ ಕರೆಯುತ್ತಾರೆ ಎಂದು ತಿಳಿಸುತ್ತದೆ ಈ ಶ್ಲೋಕ. ಕೌಸಲ್ಯೆ ಮಾತೃವಾತ್ಸಲ್ಯದಿಂದ ಮಗನನ್ನು ರಾಮ ಎಂದು ಕರೆಯುವಳು. ತನ್ನ ವಂಶವನ್ನು ಭದ್ರಗೊಳಿಸಲು ಜನಿಸಿದವನೆಂಬ ಹೆಮ್ಮೆಯಿಂದ ದಶರಥ ಅವನಿಗೆ ರಾಮಭದ್ರ ಎನ್ನುತ್ತಾನೆ. ಮೂವರು ಸೋದರರ ಪಾಲಿಗೆ ಆತ ರಾಮಚಂದ್ರ. ವಸಿಷ್ಠಾದಿ ಋಷಿಮುನಿಗಳು ಅವನನ್ನು ವೇಧಸ್ ಎನ್ನುವರು, ವಿದ್ಯೆಯಲ್ಲಿ ಪಳಗಿದವ ಎಂಬರ್ಥದಲ್ಲಿ. ಅಯೋಧ್ಯೆಯ ಪ್ರಜೆಗಳಿಗೆ ಅವನು ರಘುನಾಥ- ರಘುವಂಶದ ಒಡೆಯ. ಸೀತೆಯಾದರೋ ಗಂಡನ ಹೆಸರುಹೇಳಿ ಕೂಗುವಂತಿಲ್ಲವಲ್ಲ? ಅವಳು ನಾಥ ಎಂದು ಕರೆಯುವಳು. ಇನ್ನು ಮಿಥಿಲೆಯ ಜನರಿಗೆ ಅವನೇನಿದ್ದರೂ ‘ನಮ್ಮಸೀತಮ್ಮನ್‌ಗಂಡ’ ಆದ್ದರಿಂದ ಅವರೆಲ್ಲ ಸೀತಾಪತಿ ಎಂದೇ ಕರೆಯುವರು!

ಶ್ರೀರಾಮನ ನಿಕ್‌ನೇಮ್‌ಗಳ ಪಟ್ಟಿ ಏಕಶ್ಲೋಕದಲ್ಲಿ ಎಷ್ಟು ಚೆನ್ನಾಗಿ ಬಂದಿದೆಯಲ್ಲವೇ? ಅದು ರಾಮನಾಮಾವಳಿಯ ವಿಚಾರವಾಯ್ತು. ಬೇರೆ ದೇವರುಗಳ ನೂರೆಂಟು ನಾಮಾವಳಿ, ಸಹಸ್ರನಾಮ ಸ್ತೋತ್ರಗಳೂ ಇವೆ. ಹಾಗೆಯೇ ಮನುಷ್ಯಲೋಕದಲ್ಲೂ ನಾಮಧೇಯಗಳ ನುಲಿದಾಟ, ಅಂದರೆ ನಿಕ್‌ನೇಮ್‌ಗಳ ನಲಿದಾಟ ತುಂಬಾ ಸ್ವಾರಸ್ಯಕರವಾಗಿರುತ್ತದೆ. ನಾನಿಲ್ಲಿ ಹೇಳುತ್ತಿರುವುದು, ಪುಟ್ಟು ಪಿಂಕಿ ಚಿನ್ನು ಬಂಗಾರಿಗಳಂಥ ಮುದ್ದಿನ ಹೆಸರುಗಳ ಕುರಿತಷ್ಟೇ ಅಲ್ಲ. ಮನೆಯ ನಾಲ್ಕು ಗೋಡೆಗಳಾಚೆ, ಸ್ನೇಹಿತರ ಬಳಗದಲ್ಲಿ ಅಥವಾ ಮತ್ತೂ ವಿಸ್ತಾರವಾಗಿ ಸಾರ್ವಜನಿಕ ವಲಯದಲ್ಲೂ ಬಳಕೆಯಾಗುವ ಅಡ್ಡಹೆಸರುಗಳು, ಉಪನಾಮಧೇಯಗಳು. ಅವುಗಳನ್ನೆಲ್ಲ ನಿಕ್‌ನೇಮ್ ಎಂಬ ಒಂದೇ ಹೆಸರಿನಿಂದ ಗುರುತಿಸೋಣ. ನಿಕ್‌ನೇಮ್ ನಾಮಾವಳಿಯತ್ತ ಒಂದು ನವಿರುನೋಟ ಬೀರೋಣ.

ಮೊದಲಿಗೆ ನಿಕ್‌ನೇಮ್ ಪದ ಎಲ್ಲಿಂದ ಬಂತೆಂದು ತಿಳಿದುಕೊಳ್ಳಬೇಕು. ೧೩ನೇ ಶತಮಾನದ ಇಂಗ್ಲಿಷ್‌ನಲ್ಲಿ ಅದು ekename ಅಂತ ಇತ್ತಂತೆ. eke ಎಂದರೆ ಎಡಿಷನಲ್, ಒಂದಕ್ಕಿಂತ ಹೆಚ್ಚಿನ ಎಂದರ್ಥ. ಉಚ್ಚಾರಕ್ಕೋಸ್ಕರ ಅದು nekename ಆಯ್ತಂತೆ, ಆಮೇಲೆ ಸ್ಪೆಲ್ಲಿಂಗ್ ಮತ್ತಷ್ಟು ಬದಲಾಗಿ nickname ಆಯ್ತು. ಈ ಪದಮೂಲ/ಪದಾರ್ಥ ನಮಗಿಲ್ಲಿ ಮುಖ್ಯವಾಗುತ್ತದೆ. ಏಕೆಂದರೆ ನಿಕ್‌ನೇಮ್ ಎಂದರೆ ಮುದ್ದಿನ ಹೆಸರು ಎಂದಷ್ಟೇ ಅರ್ಥೈಸಬೇಕಾಗಿಲ್ಲ. ಹೆಚ್ಚುವರಿಯಾಗಿ ಬಂದಿರುವ ಯಾವುದೇ ಹೆಸರು ಕೂಡ ನಿಕ್‌ನೇಮ್ ಆಗುತ್ತದೆ. ಸಂಸ್ಕೃತದಲ್ಲಿ ಹೆಚ್ಚೂಕಡಿಮೆ ಅದೇ ಅರ್ಥ ಅದೇ ಉಚ್ಚಾರ ಇಟ್ಟುಕೊಂಡು ‘ನೇಕನಾಮ’ (ಒಂದನೆಯದಕ್ಕಿಂತ ಹೆಚ್ಚುವರಿ ಹೆಸರು) ಎನ್ನಬಹುದೇನೊ.

ಒಬ್ಬ ವ್ಯಕ್ತಿಗೆ ನಿಕ್‌ನೇಮ್ ಇರುವುದಕ್ಕೆ ಬೇರೆಬೇರೆ ಕಾರಣಗಳಿರಬಹುದು. ಮನೆಯಲ್ಲಿ ಮುದ್ದಿಗೆಂದು ಇಟ್ಟ ಹೆಸರೇ ಸಾರ್ವಜನಿಕವಾಗಿಯೂ ಬಳಕೆಯಾಗಬಹುದು; ಗೇಲಿ ಅಥವಾ ಕುಹಕದ ರೂಪದಲ್ಲೂ ನಿಕ್‌ನೇಮ್ ಬರಬಹುದು (ಅಂಥವನ್ನು ಸಹಜವಾಗಿ ಮನೆಮಂದಿ ಬಳಸುವುದಿಲ್ಲ). ಕೆಲವೊಮ್ಮೆ ವ್ಯಕ್ತಿ ತಾನೇ ಒಂದು ನಿಕ್‌ನೇಮ್ (ಕಾವ್ಯನಾಮ ಇದ್ದಂತೆ) ಇಟ್ಟುಕೊಳ್ಳಬಹುದು. ಅಂತೂ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ವ್ಯಕ್ತಿಯ ನಿಜನಾಮಧೇಯಕ್ಕಿಂತ ನಿಕ್‌ನೇಮ್‌ಗೆ ಭಾವನೆಗಳ ಲೇಪ ಹೆಚ್ಚು. ಅದು ಪ್ರೀತಿಯಾದರೂ ಇರಲಿ, ತಾತ್ಸಾರವಾದರೂ ಆಗಿರಲಿ. ವ್ಯಕ್ತಿಯ ಬಗ್ಗೆ ತಟಸ್ಥ ನಿಷ್ಪಕ್ಷಪಾತ ಉಲ್ಲೇಖ ಮಾಡುವುದಿದ್ದರೆ ನಿಜನಾಮಧೇಯ; ಸಲುಗೆಯಿಂದ ಪ್ರೀತಿ ತೋರಿಸುವುದಿದ್ದರೆ, ಕಾಲೆಳೆದು ಕಿಚಾಯಿಸುವುದಿದ್ದರೆ, ಅಥವಾ ಕೋಪ-ಹತಾಶೆಗಳಿಂದ ಮಾತಿನಲ್ಲೇ ಚಚ್ಚುವುದಿದ್ದರೆ ನಿಕ್‌ನೇಮ್.

ಗೋಪ್ಯತೆಗಾಗಿಯೂ ನಿಕ್‌ನೇಮ್ ಬಳಕೆಯಾಗುವುದಿದೆ. ಇಂಟರ್‌ನೆಟ್, ಕಂಪ್ಯೂಟರ್ ಜಗತ್ತಿನಲ್ಲಿ ಎಷ್ಟೋಸರ್ತಿ ಯೂಸರ್‌ಐಡಿ ಮತ್ತು ಪ್ರೊಫೈಲ್ ಹೆಸರುಗಳು ನಿಕ್‌ನೇಮ್ ರೂಪದಲ್ಲಿರುತ್ತವೆ. ಕೆಲವು ಒಳ್ಳೆಯ ಉದ್ದೇಶಕ್ಕಾಗಿ, ಮತ್ತೆ ಕೆಲವು ವಿಧ್ವಂಸಕ ಕೃತ್ಯಗಳಿಗಾಗಿ. ಮಿಲಿಟರಿಯಲ್ಲೂ ಗೋಪ್ಯ ನಿಕ್‌ನೇಮ್ಸ್ ಬೇಕಾಗುತ್ತವೆ. ಕಳೆದವರ್ಷ ಒಸಾಮನನ್ನು ಮಟಾಶ್ ಮಾಡಲು ಅಮೆರಿಕ ನೌಕಾಸೇನೆಯ ಸೀಲ್ಸ್ ತುಕಡಿ ಕೈಗೊಂಡ ಕಾರ್ಯಾಚರಣೆಗೆ ಇಟ್ಟಿದ್ದ ನಿಕ್‌ನೇಮ್ ‘ಜೆರೊನಿಮೊ’ ಎಂದು. ಅದೇ ಹೆಸರಿನ ವ್ಯಕ್ತಿ ಅಮೆರಿಕದ ಮೂಲನಿವಾಸಿಗಳ ನಾಯಕನೊಬ್ಬನಿದ್ದ, ಹಾಗಾಗಿ ಒಸಾಮಹತ್ಯೆಯ ಕಾರ್ಯಾಚರಣೆಗೆ ಆ ಹೆಸರು ಇಡಬಾರದಿತ್ತೆಂದು ಸ್ವಲ್ಪ ಗಲಾಟೆಯೂ ಆಗಿತ್ತು. ಪ್ರಪಂಚಯುದ್ಧಗಳ ಸಮಯದಲ್ಲಿ ಬಹುಶಃ ನಿಕ್‌ನೇಮ್ ಬಳಕೆ ವ್ಯಾಪಕವಾಗಿತ್ತು. ಕೆಲವು ಗೋಪ್ಯತೆಗಾಗಿ ಶುರುವಾದದ್ದಾದರೂ ಆಮೇಲೆ ಆ ವ್ಯಕ್ತಿ ನಿಕ್‌ನೇಮ್‌ನಿಂದಲೇ ಪ್ರಖ್ಯಾತನಾದದ್ದೂ ಇದೆ. ಉದಾಹರಣೆಗೆ ಸೋವಿಯತ್ ಸಾರ್ವಭೌಮ ‘ಸ್ಟಾಲಿನ್’ ನಮಗೆಲ್ಲ ಆ ಹೆಸರಿನಿಂದಲೇ ಗೊತ್ತು. ಅವನ ನಿಜನಾಮಧೇಯವಿದ್ದದ್ದು ಜೋಸೆಫ್ ಡ್ಜುಗಾಶ್‌ವಿಲ್ ಎಂದು.

ಅಮೆರಿಕದಲ್ಲಿ ಹೆಸರುಗಳು ಹೃಸ್ವಗೊಂಡು ನಿಕ್‌ನೇಮ್ ಆಗುವ ಒಂದು ಪರಿಪಾಟವೇ ಇದೆ. ಇಲ್ಲಿ ವಿಲಿಯಮ್ ಇದ್ದವನು ‘ಬಿಲ್’ ಆಗುತ್ತಾನೆ. ರಿಚಾರ್ಡ್ ‘ರಿಕ್’ ಆಗುತ್ತಾನೆ, ಚಾರ್ಲ್ಸ್ ‘ಚಕ್’ ಆಗುತ್ತಾನೆ, ಎಡ್ವರ್ಡ್ ‘ಟೆಡ್’ ಆಗುತ್ತಾನೆ. ಮಾರ್ಗರೇಟ್ ‘ಮೆಗ್ಗಿ’ ಅಥವಾ ‘ಪೆಗ್ಗಿ’ ಆಗುತ್ತಾಳೆ; ಎಲಿಜಬೆತ್ ‘ಬೆಟ್ಸಿ’ಯೂ, ಸಾರಾ ‘ಸಾಲ್ಲಿ’ಯೂ ಆಗುತ್ತಾರೆ. ಈ ಪದ್ಧತಿ ರಾಷ್ಟ್ರಾಧ್ಯಕ್ಷರನ್ನೂ ಬಿಡುವುದಿಲ್ಲ. ಅಮೆರಿಕದ ಕೆಲ ಪ್ರೆಸಿಡೆಂಟ್‌ಗಳಂತೂ ನಿಕ್‌ನೇಮ್‌ನಿಂದಲೇ ಪ್ರಸಿದ್ಧರು. ಜಿಮ್ಮಿ ಕಾರ್ಟರ್ (ನಿಜನಾಮಧೇಯ ಜೇಮ್ಸ್ ಅರ್ಲ್ ಕಾರ್ಟರ್) ಪ್ರಮಾಣವಚನ ಸ್ವೀಕರಿಸಿದ್ದೂ ನಿಕ್‌ನೇಮ್‌ನಲ್ಲೇ! ಜಾನ್ ಎಫ್ ಕೆನಡಿಯಂಥವರಿಗೆ ಇನಿಶಿಯಲ್‌ಗಳೇ (ಜೆ‌ಎಫ್‌ಕೆ- ನ್ಯೂಯಾರ್ಕ್‌ನ ವಿಮಾನನಿಲ್ದಾಣಕ್ಕೆ ಇದು ಮೂರಕ್ಷರದ ಸಂಕೇತವೂ ಆಗಿದೆ) ನಿಕ್‌ನೇಮ್. ನಿಕಟಪೂರ್ವ ಅಧ್ಯಕ್ಷ ಬುಷ್ ಮಹಾಶಯನಿಗೆ ಹೆಸರಿನಲ್ಲಿ ನಡುವಿನ ಡಬ್ಲ್ಯೂ ಅಕ್ಷರದ ಅಪಭ್ರಂಶರೂಪವೇ ನಿಕ್‌ನೇಮ್! ಟೆಕ್ಸಾಸ್ ಕೌಬಾಯ್‌ಗಳು ಡಬ್ಲ್ಯೂ ಅಕ್ಷರವನ್ನು ‘ಡುಬ್ಯಾ’ ಎಂದು ಉಚ್ಚರಿಸುತ್ತಾರಂತೆ. ಟೆಕ್ಸಾಸ್ ಮೂಲದ ಬುಷ್ ಮಹಾಶಯ ಕಾರ್ಟೂನಿಸ್ಟ್‌ಗಳಿಗೆ ನೆಚ್ಚಿನ ‘ಡುಬ್ಯಾ’ ಆದ. ಅದೊಂಥರ ನಮ್ಮ ಉತ್ತರಕರ್ನಾಟಕದ ಕೆಂಚ್ಯಾ ಬಸ್ಯಾ ಸಂಗ್ಯಾ ಬಾಳ್ಯಾಗಳಂತೆ ಭಾಸವಾಗುವುದಿಲ್ಲವೇ? ಅಂದಹಾಗೆ ಹೆಸರಿನ ಇನಿಶಿಯಲ್‌ಗಳು ನಿಕ್‌ನೇಮ್ ಆಗುವುದು ಬಹುಶಃ ಶಾಲಾಕಾಲೇಜುಗಳಲ್ಲಿನ ಶಿಕ್ಷಕವರ್ಗಕ್ಕೆ ಚೆನ್ನಾಗಿ ಅನ್ವಯವಾಗುತ್ತದೆ. ಕೆಲವೊಮ್ಮೆ ವಿದ್ಯಾರ್ಥಿಗಳಲ್ಲಿ ಪುಂಡಪೋಕರಿ ಮುಂದಾಳುತನ ವಹಿಸುವವರೂ ಇನಿಶಿಯಲ್ಸ್ ನಿಕ್‌ನೇಮ್‌ಧಾರಿಗಳಾಗುತ್ತಾರೆ. ಗಂಡನ ಹೆಸರು ಹೇಳಬಾರದೆಂದು ಇನಿಶಿಯಲ್ಸನ್ನೇ ನಿಕ್‌ನೇಮಾಗಿಸುವ ಹೆಂಗಳೆಯರೂ ನನಗೆ ಗೊತ್ತು.

dubya1.jpg

ವ್ಯಕ್ತಿಗಳಿಗಿದ್ದಂತೆ ಊರು-ರಾಜ್ಯ-ದೇಶಗಳಿಗೂ ನಿಕ್‌ನೇಮ್ ಇರುವುದುಂಟು. ಅಮೆರಿಕದ ಐವತ್ತೂ ಸಂಸ್ಥಾನಗಳಿಗೆ ನಿಕ್‌ನೇಮ್ಸ್ ಇವೆ. ನ್ಯೂಯಾರ್ಕ್ ‘ಎಂಪೈರ್ ಸ್ಟೇಟ್’ ಆದರೆ ನ್ಯೂಜೆರ್ಸಿ ‘ಗಾರ್ಡನ್ ಸ್ಟೇಟ್’. ಕ್ಯಾಲಿಫೋರ್ನಿಯಾ ‘ಗೋಲ್ಡನ್ ಸ್ಟೇಟ್’. ಮುಖ್ಯ ನಗರಗಳ ಪೈಕಿ ನ್ಯೂಯಾರ್ಕ್‌ಗೆ  ‘ಬಿಗ್ ಆಪಲ್’ ಎಂದು ನಿಕ್‌ನೇಮ್. ಶಿಕಾಗೊದಲ್ಲಿ ರಾಜಕೀಯದ ಗಾಳಿಯೂ ವಾತಾವರಣದ ಗಾಳಿಯೂ ಬೀಸುತ್ತಲೇ ಇರುವುದರಿಂದ ಅದು ‘ವಿಂಡಿ ಸಿಟಿ’. ಡೆಟ್ರಾಯಿಟ್ ಕಾರುಗಳ ಉತ್ಪಾದನೆಗೆ ಹೆಸರುವಾಸಿಯಾದ್ದರಿಂದ ‘ಮೋಟರ್ ಸಿಟಿ’. ಕ್ಯಾಸಿನೊಗಳಿಂದ ತುಂಬಿ ಜೂಜುಕೋರರ ಸ್ವರ್ಗವೆನಿಸಿದ ಲಾಸ್‌ವೇಗಾಸ್ ಪಾಪಿಷ್ಠನಗರಿ ‘ಸಿನ್ ಸಿಟಿ’. ಇಡಿ ಅಮೆರಿಕ ದೇಶವನ್ನು ಅಥವಾ ಇಲ್ಲಿನ ಕೇಂದ್ರಸರಕಾರವನ್ನು ‘ಅಂಕಲ್ ಸ್ಯಾಮ್’ ನಿಕ್‌ನೇಮ್‌ನಿಂದ ಕರೆಯುವುದು ರೂಢಿ. ಪ್ರಪಂಚದಲ್ಲಿ ಬೇರೆಬೇರೆ ಭೌಗೋಳಿಕ ಪ್ರದೇಶಗಳಿಗೆ ನಿಕ್‌ನೇಮ್ಸ್ ಇರುವುದನ್ನು ನಾವೆಲ್ಲ ಏಳನೇ ತರಗತಿಯಲ್ಲೇ ಓದಿದ್ದೆವಲ್ಲ? ಭೂಗೋಳ ಪರೀಕ್ಷೆಯಲ್ಲಿ ಹೊಂದಿಸಿ ಬರೆಯಿರಿ ಪ್ರಶ್ನೆಗೆ: ಜಗತ್ತಿನ ಸಕ್ಕರೆಪಾತ್ರೆ (ಕ್ಯೂಬಾ), ಉದಯರವಿಯ ನಾಡು (ಜಪಾನ್), ನೈಲ್ ನದಿಯ ವರಪ್ರಸಾದ (ಈಜಿಪ್ಟ್), ಕಗ್ಗತ್ತಲೆಯ ಖಂಡ (ಆಫ್ರಿಕಾ), ಕಣ್ಣೀರಿನ ನದಿ (ಚೀನಾದ ಹ್ವಾಂಗ್‌ಹೆ) - ಎಂದು ನಿಕ್‌ನೇಮ್‌ಗಳನ್ನು ನೆನಪಿಟ್ಟುಕೊಂಡು ಐದಂಕ ಬುಟ್ಟಿಗೆ ಹಾಕಿಕೊಂಡಿದ್ದೆವಲ್ಲ?

ವಸ್ತು ಅಥವಾ ವ್ಯವಸ್ಥೆಗೂ ನಿಕ್‌ನೇಮ್? ಹೌದು! ಲಂಡನ್‌ನ ಭೂಗತ ರೈಲುಸಂಚಾರವ್ಯವಸ್ಥೆಗೆ ‘ದ ಟ್ಯೂಬ್’ ಅಂತ ನಿಕ್‌ನೇಮ್. ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಜಗತ್ತಿಗೆಲ್ಲ ಬಿಬಿಸಿ ಆದರೂ ಲಂಡನ್ನಿಗರಿಗದು ‘ದ ಬೀಬ್’. ಅಮೆರಿಕದಲ್ಲಿ ರಾತ್ರಿಹೊತ್ತು ಸಂಚರಿಸುವ (ನಮ್ಮೂರಲ್ಲಿ ನೈಟ್‌ಬಸ್‌ಗಳಿದ್ದಂತೆ) ವಿಮಾನಗಳಿಗೆ ‘ರೆಡ್ ಐ’ ಎಂದು ನಿಕ್‌ನೇಮ್. ಅಂತೆಯೇ ರೆಸ್ಟೋರೆಂಟ್‌ನಿಂದ ತಿಂಡಿ ಪಾರ್ಸೆಲ್ ತರುವ ಕ್ರಮಕ್ಕೆ ಇಲ್ಲಿ ಏನು ನಿಕ್‌ನೇಮ್ ಗೊತ್ತೇ? ‘ಟು ಗೋ’ ಎಂದು! ಕ್ಯಾನ್ ಯು ಪ್ಯಾಕ್ ಇಟ್ ಆಸ್ ಪಾರ್ಸೆಲ್? ಅಂತೆಲ್ಲ ಕೇಳಿದರೆ ಅಲ್ಲಿರುವವನಿಗೆ ಅರ್ಥವೂ ಆಗೋದಿಲ್ಲ. ‘ಟು ಗೋ’ ಎಂದರೆ ತಿಂಡಿಪೊಟ್ಟಣ ನಿಮ್ಮ ಕೈಗಿಡುತ್ತಾನೆ!

ಕೊನೆಯಲ್ಲೊಂದು ರಸಪ್ರಶ್ನೆ: ಜಂಬೊ, ಜಾಮ್ಮಿ ಮತ್ತು ಜಿಮ್ಮಿ- ಮೂವರು ಪ್ರಖ್ಯಾತ ಭಾರತೀಯ ಕ್ರಿಕೆಟಿಗರ (ಈಗ ಮಾಜಿಗಳು) ನಿಕ್‌ನೇಮ್‌ಗಳು. ಯಾರಿವರು? ಬರೆದು ತಿಳಿಸಿ. * * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can skip to the end and leave a response. Pinging is currently not allowed.
Podbean App

Play this podcast on Podbean App