ಪದ-ಶ್ರಾವ್ಯ

ಈಗ ಆಡಿಯೋ ಟಚ್!

23
Apr 2011
One Zero One Zero One Zero…
Posted in DefaultTag by sjoshi at 4:08 pm

ದಿನಾಂಕ  24 ಏಪ್ರಿಲ್ 2011ರ ಸಂಚಿಕೆ...

ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ...

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

10101010.gif

ಮೆರಿಕದಲ್ಲಿ ನಾನು ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಅಕ್ಷರ ಕಲಿಕೆಗಿಂತಲೂ ಮೊದಲು pattern recognition ಕಲಿಸುತ್ತಾರೆ. ಒಂದು ಚಿತ್ರಸರಣಿ ಇರಬಹುದು, ವಿವಿಧ ಆಕೃತಿಗಳ ಜೋಡಣೆಯಿರಬಹುದು, ಬೇರೆಬೇರೆ ಬಣ್ಣದ ಪಟ್ಟೆಗಳಿರಬಹುದು, ಅದರಲ್ಲಿ ಏನಾದರೂ ಪ್ಯಾಟರ್ನ್ ಅಂದರೆ ನಿರ್ದಿಷ್ಟ ಮಾದರಿ ಕಾಣಿಸುತ್ತಿದೆಯೇ - ಉದಾಹರಣೆಗೆ ಪ್ರತೀ ಮೂರು ಕೆಂಪುಪಟ್ಟೆಗಳ ನಂತರ ಒಂದು ಹಳದಿಬಣ್ಣದ ಪಟ್ಟೆ ಇದೆಯೇ - ಎಂದೆಲ್ಲ ಗುರುತಿಸುವುದನ್ನು ಮಗು ಕಲಿತುಕೊಳ್ಳಬೇಕು. ಬುದ್ಧಿ ಬೆಳೆಯುವುದಕ್ಕೆ ಇದು ತುಂಬಾ ಒಳ್ಳೆಯದಂತೆ. ಮುಂದೆ ಅಂಕೆ-ಅಕ್ಷರಗಳನ್ನು ಕಲಿಯುವಾಗಲೂ pattern recognition ಅಭ್ಯಾಸಗಳನ್ನು ಮಾಡಿಸುತ್ತಾರೆ. ಅದರಿಂದ ಬರೀ ಕಲಿಕೆಯಷ್ಟೇ ಅಲ್ಲ, ಮನರಂಜನೆ ಮತ್ತು ಮೆದುಳಿಗೆ ವ್ಯಾಯಾಮ ಸಿಗುತ್ತದೆ ಎಂಬ ಕಾರಣಕ್ಕೆ. ಕಣ್ಮುಂದೆಯೇ ಇದ್ದರೂ ಸುಲಭದಲ್ಲಿ ಕಾಣಿಸಿಕೊಳ್ಳದ ಪ್ಯಾಟರ್ನ್‌ಅನ್ನು ಕೊನೆಗೂ ಕಂಡುಕೊಂಡಾಗ ಮಗು ಖುಶಿಪಡುತ್ತದೆ. ಅದೇರೀತಿಯ ಮಾದರಿಗಳನ್ನು ಇನ್ನಷ್ಟು ಹುಡುಕುವ, ಸ್ವತಃ ರಚಿಸುವ ಹುಮ್ಮಸ್ಸು ಪಡೆಯುತ್ತದೆ.

ಇದಿಷ್ಟನ್ನು ಹಿನ್ನೆಲೆಯಲ್ಲಿಟ್ಟು ಈಗ ಆದಿಶಂಕರಾಚಾರ್ಯ ವಿರಚಿತ ‘ಮಹಾಗಣೇಶ ಪಂಚರತ್ನಂ’ ಎಂಬ ಜನಪ್ರಿಯ ಸ್ತೋತ್ರವನ್ನು ನೆನಪಿಸಿಕೊಳ್ಳೋಣ. ಅದಕ್ಕೂ ಮುನ್ನ, ಬೆಂಗಳೂರಿನಿಂದ ಓದುಗಮಿತ್ರ ಡಿ.ಪಿ.ಸುಹಾಸ್ ಅವರದೊಂದು ಪತ್ರ ಓದೋಣ. ಎಲ್ಲಿಂದೆಲ್ಲಿಗೆ ವಿಷಯಾಂತರ ಎನ್ನಬೇಡಿ, ಇದರಲ್ಲೂ ಒಂದು ಪ್ಯಾಟರ್ನ್ ಇದೆ. ಸುಹಾಸ್ ಬರೆದಿದ್ದಾರೆ- “ಶೃಂಗೇರಿ ಶ್ರೀಗಳ ಕುರಿತು ಲೇಖನ ಓದಿದೆ. ಅವರು ರಚಿಸಿದ ಶ್ರೀ ಶಂಕರ ಭಗವತ್ಪಾದಾಚಾರ್ಯ ಸ್ತುತಿಯನ್ನು ಸ್ಕ್ಯಾನ್ ಮಾಡಿ ಕಳಿಸುತ್ತಿದ್ದೇನೆ. ಇದು ‘ಪ್ರಮಾಣಿಕಾ’ ವೃತ್ತ ಛಂದಸ್ಸಿನಲ್ಲಿರುವ ರಚನೆ. ಶಂಕರಾಚಾರ್ಯರೇ ಬರೆದ ಗಣೇಶಪಂಚರತ್ನಂ, ಯಮುನಾಷ್ಟಕಂ, ನರ್ಮದಾಷ್ಟಕಂ ಮುಂತಾದ ಸ್ತೋತ್ರಗಳೂ ಇದೇ ಛಂದಸ್ಸಿನವು. ಪ್ರಮಾಣಿಕಾ ಎಂದರೆ ಲಘು ಗುರು ಲಘು ಗುರು ಲಘು ಗುರು- ಹೀಗೆ ಆವರ್ತನವಾಗುತ್ತ ಹೋಗುತ್ತದೆ. ಅತಿಸರಳ ಆದರೆ ಅತ್ಯದ್ಭುತ ಎನಿಸುವ ರಚನೆ!"

ಗಣೇಶಪಂಚರತ್ನಂ ನಾನು ಬಾಲ್ಯದಲ್ಲೇ ಕಲಿತ, ಈಗಲೂ ಕಂಠಪಾಠವಿರುವ ಸ್ತೋತ್ರ. ಆದರೆ ಅದರಲ್ಲಿ ಪ್ರಮಾಣಿಕಾ ಎಂಬ ಪ್ಯಾಟರ್ನ್ ಇದೆಯಂತ ನನಗೆ ಗಣೇಶನಾಣೆಗೂ ಗೊತ್ತಿರಲಿಲ್ಲ. ಸುಹಾಸ್ ತಿಳಿಸಿದನಂತರ ನೋಡುತ್ತೇನಾದರೆ, ಹೌದಲ್ವಾ ‘ಮುದಾಕರಾತ್ತಮೋದಕಂ ಸದಾವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ...’ ವ್ಹಾರೆವಾಹ್! ಸ್ತೋತ್ರದುದ್ದಕ್ಕೂ ಲಘು-ಗುರು-ಲಘು-ಗುರು ಆವರ್ತನ ಎಷ್ಟು ಚಂದವಾಗಿ ಕಾಣಿಸುತ್ತಿದೆ! ಮಾರ್ಚ್‌ಪಾಸ್ಟ್ ಮಾಡುತ್ತಿರುವ ಸಿಪಾಯಿಗಳಂತೆ. ತಧಿಂ ತಧೀಂ ತಧೀಂ ತಧೀಂ ಮಟ್ಟುಗಳಿಗೆ ಹೆಜ್ಜೆಹಾಕುವ ನರ್ತಕಿಯಂತೆ. ಬ್ರೆಸ್ಟ್‌ಸ್ಟ್ರೋಕ್ ಈಜುಗಾರನಂತೆ. ತಲೆಯನ್ನು ತುಸುವಷ್ಟೇ ಎಡಕ್ಕೂ ಬಲಕ್ಕೂ ವಾಲಿಸುತ್ತ ಗಂಭೀರವಾಗಿ ನಡೆಯುವ ಆನೆಯಂತೆ! ಹೀಗೆ ಪ್ಯಾಟರ್ನ್ ಇದೆಯಂತ ಗೊತ್ತಾದದ್ದೇ ತಡ, ಆ ಸ್ತೋತ್ರದ ಮತ್ತು ಶಂಕರಾಚಾರ್ಯರ ಬಗೆಗಿನ ನನ್ನ ಅಭಿಮಾನಕ್ಕೆ ಹೊಸ ಮೆರುಗು ಬಂತು. ಇಷ್ಟು ಸುಲಭದ ‘ಪ್ರಮಾಣಿಕಾ’ವನ್ನು ಒಂದು ಕೈ ನೋಡೇಬಿಡುವಾ ಎಂಬ ಹುರುಪು ಬಂತು. ಶಂಕರರ ಅನುಗ್ರಹವಿದ್ದೇ ಇರುತ್ತದೆಂದು ಪ್ರಮಾಣಿಕಾ ವೃತ್ತದಲ್ಲಿ ಎರಡು ತರ್ಲೆಪದ್ಯಗಳ ರಚನೆಯೂ ಆಯ್ತು. ಅವೀಗ ನಿಮ್ಮ ಮುಂದೆ.

ಆದರೆ ಮೊದಲೊಮ್ಮೆ ಗುರು-ಲಘು ವಿಚಾರ ಸ್ವಲ್ಪ ಬ್ರಶ್‌ಅಪ್ ಮಾಡುವುದು ಒಳ್ಳೆಯದು. ದೀರ್ಘಾಕ್ಷರಗಳೆಲ್ಲವೂ ಗುರು. ಅನುಸ್ವಾರ ಮತ್ತು ವಿಸರ್ಗ ಗುರು. ಒತ್ತಕ್ಷರದ ಮೊದಲು ಬರುವ ಅಕ್ಷರ ಗುರು. ಬೇರೆಲ್ಲವೂ ಲಘು- ಇದಿಷ್ಟನ್ನೇ ನೆನಪಿಟ್ಟುಕೊಂಡರಾಯ್ತು. ಉದಾಹರಣೆಗೆ ‘ಸದಾವಿಮುಕ್ತಿಸಾಧಕಂ’ ಎಂಬ ಸಾಲನ್ನು ತೆಗೆದುಕೊಳ್ಳಿ. ಇದರಲ್ಲಿ ದೀರ್ಘಾಕ್ಷರಗಳಾದ ‘ದಾ’ ಮತ್ತು ‘ಸಾ’ ಗುರು. ‘ಕ್ತಿ’ ಒತ್ತಕ್ಷರವಾದ್ದರಿಂದ ಅದರ ಮೊದಲು ಬರುವ ‘ಮು’ ಗುರು. ‘ಕಂ’ ಅನುಸ್ವಾರ ಆದ್ದರಿಂದ ಗುರು. ಮಿಕ್ಕೆಲ್ಲವೂ ಲಘು. ಲಘು-ಗುರುಗಳನ್ನು ಕ್ರಮವಾಗಿ 0 ಮತ್ತು 1 ಎಂದು ಕಂಪ್ಯೂಟರ್ ಅಂಕಿಗಳಂತೆ ಬರೆದರೆ ‘ಸದಾವಿಮುಕ್ತಿಸಾಧಕಂ’ ಸಾಲು 01010101 ಎಂದಾಗುತ್ತದೆ. ಇಡೀ ಸ್ತೋತ್ರವೇ ಸೊನ್ನೆ ಒಂದು ಸೊನ್ನೆ ಒಂದು... ಪ್ಯಾಟರ್ನ್‌ನಲ್ಲಿ ಮುಂದುವರಿಯುತ್ತದೆ.

ಈಗ ನನ್ನ ಪ್ರಮಾಣಿಕಾ ತರ್ಲೆಪದ್ಯಗಳತ್ತ ಕಣ್ಣುಹಾಯಿಸಿ. ನಿಮಗೆ ‘ಮುದಾಕರಾತ್ತಮೋದಕಂ’ ಧಾಟಿ ಗೊತ್ತಿದ್ದರೆ ಅದರಲ್ಲೇ ಇವನ್ನು ಹಾಡಲೂಬಹುದು. ಮೊದಲನೆಯದು ಕರೆಂಟ್‌ಅಫೇರ್- ಪ್ರಚಲಿತ ಭಾರತದ ಸ್ಥಿತಿಗತಿ. ಎರಡನೆಯದು ಉಂಡಾಡಿಗುಂಡನಿಗೆ ಒಂದು ಪ್ರಶ್ನೆ ಮತ್ತು ಅದಕ್ಕವನ ಉತ್ತರ. ನೆನಪಿಡಿ- ಪ್ರತಿಸಾಲಿನ ಕೊನೆಯಕ್ಷರ ಲಘುವಿದ್ದರೂ ಗುರುವೆಂದೇ ಪರಿಗಣನೆ. ಅದು ಛಂದಸ್ಸಿನ ನಿಯಮ. ಹಾಗಾಗಿ ಅದನ್ನು ದೀರ್ಘಸ್ವರದಲ್ಲೇ ನಮೂದಿಸಲಾಗಿದೆ.

* 1 *

ಪುಢಾರಿ ನೀನು ದುಡ್ಡು ತಿಂದು ದೇಶವನ್ನು ಕೊಲ್ಲುವೇ

ವಿನಾಶಕಾರಿ ಬುದ್ಧಿಯಿಂದ ಓಟು ಕಿತ್ತು ಗೆಲ್ಲುವೇ

ಹಜಾರೆ ನೀನು ಸಂಪು ಹೂಡಿ ನಮ್ಮ ಹೀರೊ ಆಗುವೇ

ಮಹಾತ್ಮಗಾಂಧಿ ಹೇಳಿದಂಥ ಸತ್ಯಮಾರ್ಗ ತೋರುವೇ

* 2 *

ಪ್ರಭಾತ ವೇಳೆಯಲ್ಲಿ ನೀನು ಯಾವ ತಿಂಡಿ ತಿನ್ನುವೇ

ಮಸಾಲೆದೋಸೆ ಪೂರಿ ಭಾಜಿ ಇಡ್ಲಿಚಟ್ನಿ ಮೆಲ್ಲುವೇ

ಹಜಾರದಲ್ಲಿ ಆಚೆ ಈಚೆ ನೂರು ಹೆಜ್ಜೆ ಹಾಕುವೇ

ಅದಾದಮೇಲೆ ಕೊಂಚ ಹೊತ್ತು ನಿದ್ದೆಯನ್ನು ಮಾಡುವೇ

ಅದಷ್ಟು ಪ್ರಮಾಣಿಕಾ ವಿಚಾರ. ಪ್ರಮಾಣಿಕಾ ವೃತ್ತಕ್ಕೆ ತದ್ವಿರುದ್ಧವಾದದ್ದೆಂದರೆ ‘ಸಮಾನಿಕಾ’ ಎಂಬ ವೃತ್ತ. ಇದರಲ್ಲಿ ಗುರು-ಲಘು-ಗುರು-ಲಘು ಆವರ್ತನವಾಗುತ್ತ ಹೋಗುತ್ತದೆ. ಕಂಪ್ಯೂಟರ್ ಭಾಷೆಯಲ್ಲಿ ಬರೆದರೆ 10101010 ರೀತಿಯಲ್ಲಿ ಒಂದು ಸೊನ್ನೆ ಒಂದು ಸೊನ್ನೆ ಪ್ಯಾಟರ್ನ್. ಇದಕ್ಕೂ ಶಂಕರಾಚಾರ್ಯರದೇ ಒಂದು ರಚನೆ ಒಳ್ಳೆಯ ಉದಾಹರಣೆ. ಕಾಲಭೈರವಾಷ್ಟಕಂ ಅಂತೊಂದು ಸ್ತೋತ್ರವಿದೆ. ‘ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ| ವ್ಯಾಲಯಜ್ಞ ಸೂತ್ರಮಿಂದುಶೇಖರಂ ಕೃಪಾಕರಂ’ ಎಂದು ಶುರುವಾಗುತ್ತದೆ. ಇದನ್ನು ಗಮನವಿಟ್ಟು ನೋಡಿ- ಗುರು ಲಘು ಗುರು ಲಘು... ಮತ್ತದೇ ಮಾರ್ಚ್‌ಪಾಸ್ಟ್. ಧೀಂತ ಧೀಂತ ಧೀಂತ ಧೀಂತ ನರ್ತನ. ಇನ್ನೊಂದು ಉದಾಹರಣೆ- ‘ಭಾಗ್ಯವಂತ’ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಅಭಿನಯಿಸಿ ಹಾಡಿದ್ದ ಗೀತೆಯ ಪಲ್ಲವಿ- ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ... ಮಿನುಗು ತಾರೆ ಅಂದ ನೋಡು ಎಂಥ ಚಂದ ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ’ ಇದರಲ್ಲಿ ಮಿನುಗು ಮತ್ತು ಮಲಗು ಎಂಬೆರಡು ಪದಗಳು ಮಾತ್ರ ಮೂರಕ್ಷರಗಳೂ ಲಘು ಆದ್ದರಿಂದ ಸರಿಹೊಂದುವುದಿಲ್ಲ. ಉಳಿದಂತೆ ಇಡೀ ಪಲ್ಲವಿ ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಪ್ಯಾಟರ್ನ್. ಅದೇ ಪುನೀತ್ ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಹಾಡಿರುವ ‘ಕಾಣದಂತೆ ಮಾಯವಾದನೂ’ ಸಾಲು ಕೂಡ ಹಾಗೆಯೇ!

ನೋಡಿದ್ರಾ? ಸಮಾನಿಕಾ-ಪ್ರಮಾಣಿಕಾ ಎಂದರೆ ಕಷ್ಟವೇನಿಲ್ಲ. ಬಹುಶಃ ಈಗ ನಿಮಗೂ ಇದರ ನಶೆ ಏರತೊಡಗಿರಬಹುದು. ಅಂದಹಾಗೆ ಪದ್ಯವೇ ಆಗಬೇಕಂತಿಲ್ಲ, ಕಥೆ ಬರೆಯುತ್ತ ಹೋಗುವಾಗಲೂ ಒಂದು ಸೊನ್ನೆ ಒಂದು ಸೊನ್ನೆ ಎನ್ನುತ್ತ ಅಕ್ಷರಮಾಲೆ ಕಟ್ಟಬಹುದು- ರಾಮಚಂದ್ರ ಕಾಡಿನಲ್ಲಿ ಜಿಂಕೆಯನ್ನು ಕೊಂದ. ಲಂಕೆರಾಜ ಭಿಕ್ಷೆಗೆಂದು ಸೀಮೆ ದಾಟಿ ಬಂದ. ಸೀತೆಯನ್ನು ಕದ್ದುಕೊಂಡು ದೂರ ಹಾರಿ ಹೋದ. ಯುದ್ಧದಲ್ಲಿ ರಾಮ ಗೆದ್ದು ಸೀತೆಗೆಷ್ಟು ಚಂದ!

ಹಾಗಾಗಿ, ಅಮೆರಿಕದವರಿಗಷ್ಟೇ ಅಲ್ಲ pattern recognition ಗೊತ್ತಿರುವುದು. ಭಾರತೀಯರಿಗೆ ಆದಿಶಂಕರರ ಕಾಲದಿಂದಲೇ ಗೊತ್ತಿದೆ. ಬೇರೆಲ್ಲ ಬಿಡಿ, ‘ಎಂಥ ಅಂದ ಎಂಥ ಚಂದ ಶಾರದಮ್ಮ’ ಎಂಬ ಸಾಲಿಗಷ್ಟೇ ಗುರು-ಲಘು ಹಾಕಿನೋಡಿ. ಅಲ್ಲಿಯೂ ನಿಮಗೆ ಕಾಣುವುದು ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಕೊನೆಗೆ ಆ ‘ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ’ ಎಂಬುದಕ್ಕೇ ಗುರು-ಲಘು ಹಾಕಿ ನೋಡಿ. ಅಲ್ಲಿಯೂ ಅದೇ!

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು. ಅಲ್ಲಿ ಪ್ರಕಟವಾದ ಲೇಖನದಲ್ಲಿ ‘ಸಮಾನಿಕಾ’ ಮತ್ತು ’ಪ್ರಮಾಣಿಕಾ’ಹೆಸರುಗಳು ಅದಲುಬದಲಾಗಿದ್ದವು. ಆ ತಪ್ಪನ್ನು ಹಿರಿಯ ಓದುಗರೊಬ್ಬರು ನನ್ನ ಗಮನಕ್ಕೆ ತಂದ ನಂತರ ಇಲ್ಲಿ ಅದನ್ನು ಸರಿಪಡಿಸಿಕೊಂಡಿದ್ದೇನೆ.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.