ಪದ-ಶ್ರಾವ್ಯ

ಈಗ ಆಡಿಯೋ ಟಚ್!

29
Jan 2011
Perfect Punctuation
Posted in DefaultTag by sjoshi at 11:18 am

ದಿನಾಂಕ 30 ಜನವರಿ 2011ರ ಸಂಚಿಕೆ...

ವಿರಾಮ ಚಿಹ್ನೆಗಳದೊಂದು ಲೋಕಾಭಿರಾಮ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು]

ವಿರಾಮ ಚಿಹ್ನೆಗಳಿಗೂ ವಿರಾಮ ಬೇಡವೇ? ಅಕ್ಷರಗಳೊಂದಿಗೆ ಅವಿರತವಾಗಿ ದುಡಿಯುವ ಅವುಗಳಿಗೂ ದಣಿವಾಗುವುದಿಲ್ಲವೇ? ಅಂಥದೊಂದು ಆಲೋಚನೆಯಿಂದಲೇ ಕಳೆದವಾರದ ಅಂಕಣದಲ್ಲಿ ನಾನು ಪೂರ್ಣವಿರಾಮವೊಂದನ್ನು ಬಿಟ್ಟು ಮಿಕ್ಕೆಲ್ಲ ವಿರಾಮ ಚಿಹ್ನೆಗಳಿಗೆ ವಿರಾಮ ಘೋಷಿಸಿದ್ದೆ (ಪೂರ್ಣವಿರಾಮವನ್ನು ಮಾತ್ರ ಉಳಿಸಿಕೊಂಡದ್ದು, ಕರ್ಫ್ಯೂ/ಬಂದ್ ಸಂದರ್ಭದಲ್ಲಿ ಹಾಲು, ಪತ್ರಿಕೆ ಮುಂತಾಗಿ essential servicesಗೆ ಮಾತ್ರ ವಿನಾಯತಿ ಇರುವ ಹಾಗೆ). ಅದನ್ನೇ ಕ್ವಿಜ್ ಪ್ರಶ್ನೆಯಾಗಿಸಿ ‘ಈ ಲೇಖನದಲ್ಲಿ ಸ್ವಲ್ಪ ಅಸಾಮಾನ್ಯವೆನಿಸುವ ಅಂಶವೊಂದನ್ನು ಅಳವಡಿಸಲಾಗಿದೆ, ಅಥವಾ ಅಳವಡಿಸಿಕೊಂಡಿಲ್ಲ. ಏನದು?’ ಎಂದು ಕೇಳಿದ್ದೆ. ನೂರಾರು ಪತ್ರಗಳು ಬಂದಿವೆಯಾದರೂ ಸರಿಯುತ್ತರ ಬರೆದು ತಿಳಿಸಿದವರು ನಾಲ್ಕು ಮಂದಿ: ಹಿಡಕಲ್‌ಡ್ಯಾಮ್‌ನಿಂದ ಕಾಡೇಶ ಕರಗುಪ್ಪಿ, ಕ್ಯಾಲಿಫೋರ್ನಿಯಾದಿಂದ ಸುದತ್ತ ಗೌತಮ್, ಇಂಡಿಯಾನಾದಿಂದ ವೆಂಕಟಪ್ರಸಾದ ಭಟ್ ಮತ್ತು ಮೇರಿಲ್ಯಾಂಡ್‌ನಿಂದ ಮಧುಶಾಲಿನಿ ಭಾಸ್ಕರ್. ಇವರೆಲ್ಲರಿಗೆ ಸಾಂಪ್ರದಾಯಿಕವಾಗಿ ಅಭಿನಂದನೆ ಸಲ್ಲಿಸೋಣ. ಆದರೆ, ಸ್ವಲ್ಪ ತಾಳಿ. “ಅಯ್ಯೋ... ನಮಗೆ ಗೊತ್ತೇ ಆಗಲಿಲ್ಲವಲ್ಲ!” ಎಂದು ನೀವು ಚಡಪಡಿಸಬೇಕಾಗಿಲ್ಲ. ಏಕೆಂದರೆ ಆ ಕ್ವಿಜ್ ಕೂಡ ಸ್ವಲ್ಪ ಅಸಾಮಾನ್ಯವೇ. ಅದರ ಸರಿಯುತ್ತರ ಗೊತ್ತಾಗದಿದ್ದರೇನೇ ಒಳ್ಳೆಯದು- ಯಾಕಂತೀರಾ? ನೀವು ವಿರಾಮ ಚಿಹ್ನೆಗಳ ಹೆಚ್ಚುವರಿ ಸಹಾಯವಿಲ್ಲದೆಯೇ ಲೇಖನವನ್ನು ಪರ್ಫೆಕ್ಟಾಗಿ ಓದಿದಿರಿ; ಓದಿ ಅರ್ಥ ಮಾಡಿಕೊಂಡಿರಿ. ನಿಮಗೆ ಅಸಾಮಾನ್ಯವೇನೂ ಅನಿಸಲಿಲ್ಲ ಅಂತಾಯ್ತು. ಅಲ್ಲವೇ?

ನಾನು ಬರವಣಿಗೆಯಲ್ಲಿ ವಿರಾಮ ಚಿಹ್ನೆಗಳನ್ನು ಬಳಸುವುದು ಹೆಚ್ಚು. ಕೆಲವೊಮ್ಮೆ ಅಗತ್ಯಕ್ಕಿಂತಲೂ ಹೆಚ್ಚು ಎನ್ನುವಷ್ಟು. ‘ಚಿತ್ರಾನ್ನದಲ್ಲಿ ಅನ್ನಕ್ಕಿಂತ ಒಗ್ಗರಣೆ ಸಾಮಗ್ರಿಯೇ ಜಾಸ್ತಿ’ ಎಂದು ಅದನ್ನು ನಾನು ಹೋಲಿಸುತ್ತೇನೆ. ಇವತ್ತಿನ ಲೇಖನದ ಮೊದಲ ಪ್ಯಾರಾಗ್ರಾಫನ್ನು ನೋಡಿದರೆ ನಿಮಗೆ ತಿಳಿಯುತ್ತದೆ- ಅದರಲ್ಲಿ ಸುಮಾರಾಗಿ ಎಲ್ಲ ವಿಧದ ಪಂಕ್ಚುವೇಶನ್ ಮಾರ್ಕ್‌ಗಳು ಒಮ್ಮೆಯಾದರೂ ಬಳಕೆಯಾಗಿವೆ. ಹಾಗಿರುವಾಗ ಇಡೀ ಲೇಖನವನ್ನು ಫುಲ್‌ಸ್ಟಾಪ್ ಒಂದನ್ನೇ ಇಟ್ಟುಕೊಂಡು ಬರೆಯಬೇಕೆಂದರೆ ಸ್ವಲ್ಪ ಕಷ್ಟವೇ ಇದೆ. ಆದರೂ ವೈವಿಧ್ಯವಿರಲಿ ಮತ್ತು ಅಷ್ಟಿಷ್ಟು ಚಮತ್ಕಾರವಿರಲಿ ಎಂದು ಇಂಥ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಮೂರು ವರ್ಷಗಳ ಹಿಂದೊಮ್ಮೆ ಈ ಅಂಕಣದಲ್ಲಿ ‘ಯಾರಿಟ್ಟರೀ ಚುಕ್ಕಿ... ಯಾಕಿಟ್ಟರೀ ಚುಕ್ಕಿ...’ ಶೀರ್ಷಿಕೆಯ ಲೇಖನದಲ್ಲೂ ಇದೇ ಪ್ರಯೋಗ ಮಾಡಿದ್ದೆ. ಚುಕ್ಕಿಯ ಬಗ್ಗೆಯೇ ಲೇಖನವಾದ್ದರಿಂದ ಚುಕ್ಕಿಯನ್ನು ಮಾತ್ರ ಬಳಸಿದ್ದೆ. ಕಳೆದವಾರ ‘ತಿನ್ನುವ’ ವಿಷಯವಿತ್ತಾದ್ದರಿಂದ ವಿರಾಮ ಚಿಹ್ನೆಗಳನ್ನು ಗುಳುಂ ಸ್ವಾಹಾ ಮಾಡಲು ಸೂಕ್ತ ಸಂದರ್ಭ ಎಂದು ಹಾಗೆ ಮಾಡಿದೆ.

punctuationteacher.gif

ಬರವಣಿಗೆಯಲ್ಲಿ ವಿರಾಮ ಚಿಹ್ನೆಗಳ ಅಗತ್ಯ ಮತ್ತು ಮಹತ್ವ ನಮಗೆಲ್ಲ ಗೊತ್ತೇ ಇದೆ. ವಿರಾಮ ಚಿಹ್ನೆಗಳೇ ಇಲ್ಲದ ಬರಹವನ್ನು ಊಹಿಸುವುದೂ ಕಷ್ಟ. ಇಲ್ಲಿ ಅಮೆರಿಕದಲ್ಲಿ ಶಾಲಾಮಕ್ಕಳಿಗೆ ಪಂಕ್ಚುವೇಶನ್ ಮಹತ್ವ ತಿಳಿಸಲು Punctuation takes a vacation ಎಂಬ ಒಂದು ಸಚಿತ್ರಕಥೆಪುಸ್ತಕ ಓದಲು ಸಲಹಿಸುತ್ತಾರೆ. ರಾಬಿನ್ ಪಲ್ವರ್ ಬರೆದ ಆ ಪುಸ್ತಕ ತುಂಬಾ ಚೆನ್ನಾಗಿದೆ. ಮಿಸ್ಟರ್ ರೈಟ್ ಎಂಬ ಹೆಸರಿನ ಶಿಕ್ಷಕ ಮೂರನೇ ತರಗತಿಯ ಮಕ್ಕಳಿಗೆ ವಿರಾಮ ಚಿಹ್ನೆಗಳನ್ನು ಕಲಿಸುತ್ತಿರುತ್ತಾರೆ. ದಿನಾ ಬೋರ್ಡ್ ಮೇಲೆ, ಮಕ್ಕಳ ಹೋಮ್‌ವರ್ಕ್ ಪುಸ್ತಕದಲ್ಲಿ ಅವು ಪ್ರತ್ಯಕ್ಷವಾಗುತ್ತವೆ. ಕೆಲವು ತಪ್ಪಾಗಿ, ಕೆಲವು ಸರಿಯಾಗಿ. ಎರೇಸರ್‌ನಿಂದ ಅಳಿಸಲ್ಪಡುವವು ಕೆಲವಾದರೆ ಉಪಾಧ್ಯಾಯರ ಕೆಂಪುಶಾಯಿಗೆ ಗುರಿಯಾಗುವವು ಇನ್ನು ಕೆಲವು. ಒಂದುದಿನ ಮಿಸ್ಟರ್ ರೈಟ್ ಹೇಳುತ್ತಾರೆ- “ವಿರಾಮ ಚಿಹ್ನೆಗಳಿಗೆ ಒಮ್ಮೆ ರಜೆ ಕೊಡೋಣ!” ಹಾಗೆಂದದ್ದೇ ತಡ, ಚಿಹ್ನೆಗಳೆಲ್ಲ ತರಗತಿಯಿಂದ ಹೊರಟೇಬಿಡುತ್ತವೆ. ದೂರದ ದ್ವೀಪವೊಂದಕ್ಕೆ ಪ್ರವಾಸ ಹೋಗುತ್ತವೆ. ಮಕ್ಕಳಿಗೋ ಅವಿಲ್ಲದೆ ಬಿಕೋ ಅನಿಸುತ್ತದೆ. ಬರೆದದ್ದರಲ್ಲಿ ವಿರಾಮ ಚಿಹ್ನೆಗಳಿಲ್ಲದೆ ಏನೂ ಅರ್ಥವೇ ಬರುವುದಿಲ್ಲ. ಪ್ರವಾಸೀದ್ವೀಪದಿಂದ ವಿರಾಮ ಚಿಹ್ನೆಗಳು ಮಕ್ಕಳಿಗೆ ಪೋಸ್ಟ್‌ಕಾರ್ಡ್ಸ್ ಕಳಿಸುತ್ತವೆ. ಒಂದೊಂದು ಕಾರ್ಡ್‌ನಲ್ಲೂ ಬರೆದಿರುವುದನ್ನು ಓದಿ ಅದು ಯಾವ ಚಿಹ್ನೆ ಕಳಿಸಿದ ಕಾರ್ಡ್ ಇರಬಹುದು ಎಂದು ಮಕ್ಕಳು ಊಹಿಸಬೇಕು. ಚಿಹ್ನೆಗಳಿಲ್ಲದೆ ಬೋರಾಗುತ್ತಿದೆಯೆಂದು ಮಕ್ಕಳೂ ಓಲೆ ಬರೆಯುತ್ತಾರೆ. ಆದರೆ ವಿರಾಮ ಚಿಹ್ನೆ ಬಳಸುವಂತಿಲ್ಲವಲ್ಲ? ಪಕ್ಕದ ತರಗತಿಯಿಂದ ಎರವಲು ಪಡೆಯುತ್ತಾರೆ. ಕೊನೆಗೂ ಪ್ರವಾಸದಿಂದ ಚಿಹ್ನೆಗಳು ಮರಳಿದ ಮೇಲೆ ಮಿಸ್ಟರ್ ರೈಟ್ ಕ್ಲಾಸ್‌ನಲ್ಲಿ ಎಲ್ಲವೂ ಸೆಟ್ ರೈಟ್ ಆಗುತ್ತದೆ. Greedy Apostrophe: A Cautionary Tale ಎಂಬ ಇನ್ನೊಂದು ಪುಸ್ತಕವಿದೆ, ಇಂಗ್ಲಿಷ್‌ನಲ್ಲಿ (ಪುಣ್ಯಕ್ಕೆ ಕನ್ನಡದಲ್ಲಿ ಆ ಚಿಹ್ನೆಯ ಬಳಕೆ ಇಲ್ಲ) ಸಾಕಷ್ಟು ದಾಂಧಲೆಯೆಬ್ಬಿಸುವ ಎಪೊಸ್ಟ್ರೊಫಿ ಚಿಹ್ನೆ ಬಗ್ಗೆ. ಅದೂ ಸಹ ತುಂಬ ತಮಾಷೆಯಾಗಿ ಇದೆ. No Dog’s allowed - ಒಂದು ಪಾರ್ಕ್‌ನಲ್ಲಿ ಕಂಡುಬಂದ ಈ ಸೂಚನಾಫಲಕ, ಎಪೊಸ್ಟ್ರೊಫಿ ದಾಂಧಲೆಯ ಜಸ್ಟ್ ಒಂದು ಸ್ಯಾಂಪಲ್. Its ಮತ್ತು it’s ನಡುವಿನ ಗೊಂದಲವಂತೂ ಯೂನಿವರ್ಸಲ್.

ಪಂಕ್ಚುವೇಶನ್ ವಿಚಾರ ಬಂದಾಗೆಲ್ಲ ಪ್ರಸ್ತಾಪಗೊಳ್ಳುವ ಇನ್ನೊಂದು ಪುಸ್ತಕವೆಂದರೆ “Eats, Shoots and Leaves". ಇದು ಲಿನ್ನ್ ಟ್ರಸ್ಸ್ ಎಂಬಾಕೆ ಬರೆದದ್ದು. ಕರಡಿಯನ್ನು ಹೋಲುವ ಆದರೆ ಕರಡಿಗಿಂತಲೂ ಮುದ್ದಾದ ಪಾಂಡಾ ಪ್ರಾಣಿ ಗೊತ್ತಲ್ಲ? ಒಂದು ಎನ್‌ಸೈಕ್ಲೊಪಿಡಿಯಾದಲ್ಲಿ ಪಾಂಡಾ ಚಿತ್ರದ ಪಕ್ಕ ವಿವರಣೆಯಲ್ಲಿ Eats shoots and leaves ಅಂತ ಇತ್ತು. ಪಾಂಡಾ ಚಿಗುರೆಲೆಗಳನ್ನು ತಿನ್ನುತ್ತದೆ ಎಂದು ಅದರ ಅರ್ಥ. ಪಾಂಡಾ ಒಮ್ಮೆ ಒಂದು ರೆಸ್ಟೋರೆಂಟ್‌ಗೆ ಹೋಯಿತಂತೆ. ಗಡದ್ದಾಗಿ ತಿಂದಾದ ಮೇಲೆ ಕೈಯಲ್ಲಿದ್ದ ಪಿಸ್ತೂಲಿನಿಂದ ಢಂ ಢಂ ಎಂದು ಗುಂಡು ಹಾರಿಸಿ, ದುಡ್ಡು ಕೂಡ ಕೊಡದೆ ಅಲ್ಲಿಂದ ಕಾಲ್ಕಿತ್ತಿತು. ಯಾಕೆ ಏನಾಯಿತು ಎಂದು ತಬ್ಬಿಬ್ಬಾಗಿ ನೋಡುತ್ತಿದ್ದ ಜನರಿಗೆ ಪಾಂಡಾ ಹೇಳಿದ್ದು- ಎನ್‌ಸೈಕ್ಲೊಪಿಡಿಯಾದಲ್ಲಿರುವ ವಿವರಣೆಯಂತೆಯೇ ತಾನು ಮಾಡಿದ್ದೇನೆ ಎಂದು. ಇದಕ್ಕೆಲ್ಲ ಕಾರಣ ಎನ್‌ಸೈಕ್ಲೊಪಿಡಿಯಾ ವಿವರಣೆಯಲ್ಲಿ ಮೊದಲ ಪದದ ನಂತರ ಯಾರೋ ಒಂದು ಅಲ್ಪವಿರಾಮ ಸೇರಿಸಿದ್ದರು. ಆಗ ಅರ್ಥ ಏನಾಯ್ತು? ಪಾಂಡಾ: ತಿನ್ನುತ್ತದೆ, ಗುಂಡು ಹಾರಿಸುತ್ತದೆ ಮತ್ತು ಹೊರನಡೆಯುತ್ತದೆ ಎಂದು! ಈ ಒಂದು ಕಪೋಲಕಲ್ಪಿತ ಪ್ರಸಂಗವನ್ನಿಟ್ಟುಕೊಂಡು ಪುಸ್ತಕದ ತುಂಬ ತಮಾಷೆ ತುಂಬಿಸಿದ್ದಾಳೆ ಲಿನ್ನ್ ಟ್ರಸ್ಸ್.

ಅಲ್ಪವಿರಾಮದಿಂದ ಅರ್ಥವ್ಯತ್ಯಾಸವಾಗುವುದಕ್ಕೆ ಇಂಗ್ಲಿಷ್‌ನಲ್ಲಿ ಬೇಕಷ್ಟು ಉದಾಹರಣೆಗಳು ಸಿಗುತ್ತವೆ. “Let's eat, Mummy" ಎನ್ನುತ್ತದೆ ಮಗು. ಅಲ್ಲಿ ಅಲ್ಪವಿರಾಮ ತಿಂದುಹಾಕಿದರೆ ಅಮ್ಮನನ್ನೇ ತಿನ್ನಲುಹೊರಟಂತೆ! ಕಾಲೇಜಿನಲ್ಲಿ ಒಬ್ಬ ಲೆಕ್ಚರರ್ ಒಮ್ಮೆ "A woman without her man is nothing" ಎಂದು ವಿದ್ಯಾರ್ಥಿಗಳಿಂದ ಬರೆಯಿಸಿ ಅದಕ್ಕೆ ಸೂಕ್ತವಾಗಿ ಪಂಕ್ಚುವೇಶನ್ ಹಾಕುವಂತೆ ಹೇಳಿದರಂತೆ. ಹುಡುಗರೆಲ್ಲ "A woman, without her man, is nothing!" ಎಂದು ಬರೆದರೆ ಹುಡುಗಿಯರು "A woman: without her, man is nothing!" ಎಂದು ಬರೆದರು. ಬರ್ತ್‌ಡೇ ಅಥವಾ ಅಂಥ ಪಾರ್ಟಿಗಳಲ್ಲಿ ಕೇಕ್ ಮೇಲೆ ಬರೆದದ್ದರಲ್ಲಿ ಪಂಕ್ಚುವೇಶನ್ ಆಭಾಸಗಳನ್ನು ಪಟ್ಟಿ ಮಾಡಿದ್ದಾಳೆ ಫ್ಲೊರಿಡಾದ ಓರ್ವ ಬ್ಲಾಗುಗಾರ್ತಿ. ಇದು ಬಹುಶಃ ಯಾವುದೋ ಲೇಡಿಸ್ ಹಾಸ್ಟೆಲ್‌ನಲ್ಲಿ ನಡೆದದ್ದು. ಮೂರ್ನಾಲ್ಕು ಹುಡುಗಿಯರ ಬರ್ತ್‌ಡೇಯನ್ನು ಎಲ್ಲ ಒಟ್ಟಾಗಿ ಒಂದೇ ಕೇಕ್ ಮೂಲಕ ಸೆಲೆಬ್ರೇಟ್ ಮಾಡಿದರು. ಕೇಕ್ ಮೇಲೆ Happy Birthday ಎಂದು ಒಂದು ಸಾಲು, ಅದರ ಕೆಳಗೆ (all girls) ಎಂದು ಇನ್ನೊಂದು ಸಾಲು. ಆದರೆ ಕೇಕ್ ಮೇಲಿನ ಬರಹವಾದ್ದರಿಂದ ಆ ಓಪನಿಂಗ್ ಕಂಸ (ಆವರಣ) ಇಂಗ್ಲಿಷ್ ಅಕ್ಷರ C ಯಂತೆ ಕಾಣಿಸಿ ಆಭಾಸವಾಗಿತ್ತು!

ಕಂಸದಿಂದ ಆಭಾಸ ಎಂದಾಗ ನೆನಪಾಯ್ತು. ಮೊನ್ನೆಯಷ್ಟೇ ಅಭ್ಯಾಸಬಲ ಪ್ರದರ್ಶನ ನೋಡಿದೆವಷ್ಟೆ? ಅಬ ಆಭಾಸಗಳ ಪತ್ರಗಳು ಈಗಲೂ ಬರುತ್ತಲೇ ಇವೆ. ಅದರ ಪೈಕಿ ಯಲ್ಲಾಪುರದ ವೆಂಕಟರಮಣ ಹೆಗಡೆ ಬರೆದಿರುವುದು ಸಖತ್ ಮಜಾ ಇದೆ. ಇದು ಅಬ ಆಭಾಸ ಎನ್ನುವುದಕ್ಕಿಂತಲೂ ವಿರಾಮ ಚಿಹ್ನೆಗಳ ಆಭಾಸ ಎನ್ನಬಹುದು. ಶಾಲಾ ವಾರ್ಷಿಕೋತ್ಸವಕ್ಕೆ ನಾಟಕದಲ್ಲಿ ಪಾತ್ರ ಇದ್ದ ಒಬ್ಬ ಹುಡುಗ ಚೆನ್ನಾಗಿ ಪ್ರಾಕ್ಟೀಸ್ ಮಾಡಿದ್ದ. ಡಯಲಾಗ್ಸ್ ಎಲ್ಲ ಉರುಹೊಡೆದಿದ್ದ. ನಾಟಕದ ದಿನ ಬಂದೇಬಿಡ್ತು. ತುಂಬ ಉತ್ಸಾಹದಿಂದಲೇ ಸ್ಟೇಜ್ ಮೇಲೆ ಬಂದ ಹುಡುಗ ಶುರುಮಾಡಿದ. “ಕೌರವ ಕಂಸದಲ್ಲಿ ಮೀಸೆ ತಿರುವುತ್ತ ಹಹ್ಹಹ್ಹಾ...!” ಅಲ್ಲಿ ಆಗಿದ್ದೇನೆಂದರೆ ನಾಟಕ ನಿರ್ದೇಶಿಸಿದ್ದ ಮೇಷ್ಟ್ರು ಅವನ ಪಾತ್ರದ ಸಂಭಾಷಣೆಯನ್ನು- ಕೌರವ (ಮೀಸೆ ತಿರುವುತ್ತ) : “ಹಹ್ಹಹ್ಹಾ...!” ಎಂದು ಬರೆಸಿದ್ದರು. ಹುಡುಗ ವಿರಾಮ ಚಿಹ್ನೆಗಳನ್ನು ಕಡೆಗಣಿಸಿ ಓದಿ ಅಭ್ಯಾಸಮಾಡಿಕೊಂಡಿದ್ದ. ನಾಟಕದ ಪ್ರೇಕ್ಷಕರಿಗೆ, ಸ್ಟೇಜ್ ಮೇಲೆ ಬಂದವ ಕೌರವನೋ ಅಥವಾ ಕಂಸನೋ ಅಂತ ಕನ್‌ಫ್ಯೂಷನ್.

ಡೆನ್ಮಾರ್ಕ್ ದೇಶದ ವಿಕ್ಟರ್ ಬೋರ್ಜೆ ಎಂಬ ಕಾಮೆಡಿಯನ್ ತನ್ನ ಕಾಮೆಡಿ ಶೋಗಳಲ್ಲಿ Phonetic punctuation ಅಂತೊಂದು ಐಟಂ ಪ್ರದರ್ಶಿಸುತ್ತಿದ್ದನಂತೆ. ಬರವಣಿಗೆಯಲ್ಲಿ ಬಳಕೆಯಾಗುವ ಪ್ರತಿಯೊಂದು ವಿರಾಮ ಚಿಹ್ನೆಗೂ ಅವನ ಬಳಿ ಪ್ರತ್ಯೇಕವಾದ ಶಬ್ದಸಹಿತ ಹಾವಭಾವ ಇರುತ್ತಿತ್ತು. ಸ್ಟೇಜ್ ಮೇಲೆ ವಿಕ್ಟರ್ ಒಂದು ಪುಸ್ತಕ ತೆರೆದು ಅದರಲ್ಲಿನ ಪ್ಯಾರಗ್ರಾಫ್ ಓದುತ್ತಿದ್ದ. ವಿರಾಮ ಚಿಹ್ನೆ ಬಂದಾಗೆಲ್ಲ ಆಯಾ ಚಿಹ್ನೆಯ ಧ್ವನಿಯನ್ನು ಹೊರಡಿಸುತ್ತಿದ್ದ. ಪ್ರೇಕ್ಷಕರಿಗೆ ಹೊಟ್ಟೆಹುಣ್ಣಾಗುವಷ್ಟು ನಗು. ವಿಕ್ಟರ್‌ನ ವಿಡಿಯೋಗಳು ಯುಟ್ಯೂಬ್‌ನಲ್ಲಿ ಸಿಗುತ್ತವೆ.

ಇನ್ನೊಬ್ಬ, ಟಿಮೊತಿ ಡೆಕ್ಸ್‌ಟರ್ ಎಂಬುವವನಿದ್ದ. ಈತ ಅಮೆರಿಕದವನು, ೧೮ನೇ ಶತಮಾನದಲ್ಲಿ ಬಾಳಿದವನು. ಶಾಲೆಗೆ ಹೋಗಿ ಓದುಬರಹ ಕಲಿತವನಲ್ಲ. ಇವನು A Pickle for the Knowing Ones ಎಂಬ ಆತ್ಮಚರಿತ್ರೆ ಬರೆದ. ಇಡೀ ಪುಸ್ತಕದಲ್ಲಿ ಒಂದೇ‌ಒಂದು ಪಂಕ್ಚುವೇಶನ್ ಮಾರ್ಕ್ ಬಳಸಲಿಲ್ಲ. ಸ್ಪೆಲ್ಲಿಂಗ್‌ಗಳ ಬಗ್ಗೆಯಂತೂ ಕೇಳುವುದೇ ಬೇಡ. ಹಾಗಿದ್ದರೂ ಪುಸ್ತಕ ತುಂಬ ಜನಪ್ರಿಯವಾಯಿತು. ಎಂಟು ಮುದ್ರಣಗಳನ್ನು ಕಂಡಿತು. ಪುಸ್ತಕದ ಎರಡನೆಯ ಆವೃತ್ತಿಯಲ್ಲಿ ಡೆಕ್ಸ್‌ಟರ್ ಇನ್ನೊಂದು ಗಿಮಿಕ್ ಮಾಡಿದ. ಈಸಲ ವಿರಾಮ ಚಿಹ್ನೆಗಳನ್ನೆಲ್ಲ ಬಳಸಿದ. ಆದರೆ ಬೇಕಾದ ಸ್ಥಾನದಲ್ಲಿ ಅಲ್ಲ. ಎಲ್ಲ ಚಿಹ್ನೆಗಳನ್ನು ಒಟ್ಟಿಗೆ ಒಂದು ಪುಟದಲ್ಲಿ ಮುದ್ರಿಸಿ ಅದನ್ನು ಪುಸ್ತಕದ ಅನುಬಂಧವಾಗಿ ಕೊಟ್ಟು ಜತೆಯಲ್ಲೇ ಓದುಗರಿಗೆ ಪುಟ್ಟ ಸಂದೇಶವನ್ನೂ ಮುದ್ರಿಸಿದ. ‘ಆಹಾರದ ಮೇಲೆ ಉಪ್ಪು ಮತ್ತು ಮೆಣಸಿನಪುಡಿ ಸಿಂಪಡಿಸಿಕೊಂಡಂತೆ ಬೇಕಾದಲ್ಲಿ ಸಿಂಪಡಿಸಿಕೊಳ್ಳಿ’ ಎಂದುಬಿಟ್ಟ. ಡೆಕ್ಸ್‌ಟರ್‌ನ ಕ್ರೇಜಿ ಪ್ರಯೋಗ ಜನರಿಗೆ ಇಷ್ಟವಾಯಿತು. ತಡೆಗುರುತುಗಳು ಎಂದರೇನೆಂದೇ ಗೊತ್ತಿರದಿದ್ದ ಕಾಲದ ಹೈರೊಗ್ಲಿಫ್ ಬರವಣಿಗೆಯನ್ನು ಬಹುಶಃ ಅದು ನೆನಪಿಸಿರಬೇಕು. ಟಿಮೊತಿ ಡೆಕ್ಸ್‌ಟರ್‌ನ ಕ್ರೇಜಿ ಐಡಿಯಾ ಅದಾದರೆ ಚೈನಾ ದೇಶದ ಹು-ವೆನ್-ಲಿಯಾಂಗ್ ಎಂಬುವನ ಸಂಗತಿಯೂ ಸ್ವಾರಸ್ಯಕರವಾಗಿದೆ. ಹು ಒಂದು ಕಾದಂಬರಿ ಬರೆದಿದ್ದಾನಂತೆ. ಅದರಲ್ಲಿ ಒಂದೇ‌ಒಂದು ಅಕ್ಷರವಿಲ್ಲ. ಒಟ್ಟು ಹದಿನಾಲ್ಕು ವಿರಾಮ ಚಿಹ್ನೆಗಳನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೂ ಅದೊಂದು ಹೃದಯಸ್ಪರ್ಶಿ ಪ್ರೇಮಕಥೆ ಮತ್ತು ಅದರಲ್ಲಿ ದೊಡ್ಡದೊಡ್ಡ ಕಾದಂಬರಿಗಳಲ್ಲಿ ಇರುವಂತೆ ಕತೆಯ ಥಿಕ್ ಪ್ಲಾಟ್ ಇದೆಯೆನ್ನುತ್ತಾನೆ ಹು. ಹದಿನಾಲ್ಕು ಚಿಹ್ನೆಗಳಿಂದಷ್ಟೇ ರಚನೆಯಾದ ಕಾದಂಬರಿಯನ್ನು ಸರಿಯಾಗಿ ಡಿಕೋಡ್ ಮಾಡಿದವರಿಗೆ ಚಿಹ್ನೆಯೊಂದಕ್ಕೆ ಹತ್ತುಸಾವಿರದಂತೆ ಒಟ್ಟು ಒಂದುಲಕ್ಷ ನಲ್ವತ್ತು ಸಾವಿರ ಯುವಾನ್‌ಗಳ ಆಕರ್ಷಕ ಬಹುಮಾನವನ್ನೂ ಹು ಘೋಷಿಸಿದ್ದಾನಂತೆ. ಹು ವಿಲ್ ವಿನ್ ದ ಪ್ರೈಜ್? ಇಫ್ ನೋವನ್ ವಿನ್ಸ್, ಹು ವಿಲ್ ಕೀಪ್ ದ ಪ್ರೈಜ್ ವಿದ್ ಹಿಮ್‌ಸೆಲ್ಫ್.

ವಿರಾಮ ಚಿಹ್ನೆಗಳೆಂದರೆ ಸಾಮಾನ್ಯವಲ್ಲ, ನಿಜಕ್ಕೂ ಅಸಾಮಾನ್ಯ ಅಂತ ಈಗ ಗೊತ್ತಾಯ್ತಲ್ಲ? ಅಂದಹಾಗೆ ಅಮೆರಿಕದಲ್ಲಿ ಈಗ್ಗೆ ಎಂಟು ವರ್ಷಗಳಿಂದ ಸೆಪ್ಟೆಂಬರ್ ತಿಂಗಳ ೨೪ರಂದು National Punctuation Day ಆಚರಣೆಯಾಗುತ್ತದೆ. nationalpunctuationday.com ವೆಬ್‌ಸೈಟ್‌ಗೆ ಭೇಟಿಕೊಟ್ಟರೆ ಅಲ್ಲಿ ವಿರಾಮ ಚಿಹ್ನೆಗಳದೊಂದು ಅದ್ಭುತ ಲೋಕ ತೆರೆದುಕೊಳ್ಳುತ್ತದೆ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲೂ ಓದಬಹುದು]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.