ಪದ-ಶ್ರಾವ್ಯ

ಈಗ ಆಡಿಯೋ ಟಚ್!

16
Apr 2011
Poetry is like a Jackfruit
Posted in DefaultTag by sjoshi at 11:52 am

ದಿನಾಂಕ  17 ಏಪ್ರಿಲ್ 2011ರ ಸಂಚಿಕೆ...

ಹಲಸಿನ ಹಣ್ಣಿನಂತೆಯೇ ಕಾವ್ಯದ ರುಚಿಯೂ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

“ಆ ಕೀರ್ತನಲೋನಿ ಪ್ರತಿ ಅಕ್ಷರಂ ವೆನುಕ ಆರ್ದ್ರತ ನಿಂಡಿ‌ಉಂದಿ ದಾಸು..." ಶಂಕರಾಭರಣಂ ಸಿನೆಮಾದಲ್ಲಿ ಶಂಕರಶಾಸ್ತ್ರಿಗಳು ಹೇಳುತ್ತಾರೆ. ಬ್ರೋಚೇವಾರೆವರುರಾ ಕೀರ್ತನೆಯನ್ನು ಅದರ ಅರ್ಥವಾಗಲೀ ಭಾವವಾಗಲೀ ಗೊತ್ತಿಲ್ಲದೆ ಹಿಗ್ಗಾಮುಗ್ಗಾ ತಿರುಚಿ ವಿಚಿತ್ರವಾಗಿ ಹಾಡುತ್ತಿರುತ್ತಾನೆ ಅರೆಬೆಂದ ಸಂಗೀತಪಂಡಿತ ದಾಸು. ಮೇಲಾಗಿ ತನ್ನ ಶಿಷ್ಯಂದಿರಿಗೂ ಅದೇರೀತಿ ಹೇಳಿಕೊಡುತ್ತಾನೆ. ಅವನನ್ನು ಗದರಿಸುತ್ತ ಶಾಸ್ತ್ರಿಗಳು ಹೇಳುವ ಮಾತು. “ಆ ಕೀರ್ತನೆಯ ಒಂದೊಂದು ಅಕ್ಷರವೂ ಆರ್ದ್ರಭಾವದಲ್ಲಿ ಅದ್ದಿ ತೆಗೆದಿರುವಂಥದು. ಭಗವಂತನ ಆಸರೆಯ ಬಾಯಾರಿಕೆಯಿಂದ ಬಳಲಿ ಬೆಂಡಾದ ಭಕ್ತನ ಎದೆಯಾಳದಲ್ಲಿ ತನ್ನಿಂತಾನೇ ಗಂಗಾಜಲವಾಗಿ ಹೊರಹೊಮ್ಮಿದ ಗೀತೆಯದು, ರಾಗವದು. ಅಮೃತದಂಥ ಆ ಸಂಗೀತವನ್ನು ಅಪಭ್ರಂಶ ಮಾಡಬೇಡ!" ಅವಮಾನಕ್ಕೊಳಗಾದ ದಾಸು ಇದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಆದರೆ ಸಿನೆಮಾ ನೋಡುವ ನಮಗೆ ಶಾಸ್ತ್ರಿಗಳ ಮೇಲೆ ಗೌರವ ಮೂಡುತ್ತದೆ. ಅದಕ್ಕಿಂತ ಹೆಚ್ಚಾಗಿ ಆ ಕೀರ್ತನೆಯ ಬಗ್ಗೆ, ಅದನ್ನು ರಚಿಸಿದ ಕವಿಯ ಬಗ್ಗೆ ಆಸಕ್ತಿ ಹುಟ್ಟುತ್ತದೆ.

ಬ್ರೋಚೇವಾ... ಕೀರ್ತನೆ ಮೈಸೂರು ವಾಸುದೇವಾಚಾರ್ಯರ ರಚನೆ. ಅವರು ಒಡೆಯರ ಕಾಲದ ಆಸ್ಥಾನವಿದ್ವಾಂಸರು. ಸಂಸ್ಕೃತ ಮತ್ತು ತೆಲುಗಿನಲ್ಲಿ ಕೃತಿಗಳನ್ನು ರಚಿಸಿದವರು. ಬ್ರೋಚೇವಾರು ಎವರುರಾ ಎಂದರೆ ತೆಲುಗಿನಲ್ಲಿ ‘ಕಾಪಾಡುವವರು ಯಾರಯ್ಯಾ? ಎಂದರ್ಥ. ಶ್ರೀರಾಮನ ಪರಮಭಕ್ತರಾಗಿದ್ದ ವಾಸುದೇವಾಚಾರ್ಯರು ನಿಜವಾಗಿಯೂ ಕಷ್ಟಕಾಲದಲ್ಲಿದ್ದಾಗ ದೇವರಲ್ಲಿ ಮೊರೆಯಿಡುತ್ತ ಇದನ್ನು ಬರೆದರೇ ಗೊತ್ತಿಲ್ಲ. ಆದರೂ ಕವಿ ಎಂದಮೇಲೆ ಹಾಸಿಹೊದೆಯುವಷ್ಟು ಕಷ್ಟಗಳಿದ್ದವರು ಎಂದರೂ ಆಶ್ಚರ್ಯವೇನಿಲ್ಲ. ತ್ಯಾಗರಾಜರು ಪಂಚರತ್ನ ಕೃತಿಗಳನ್ನು ರಚಿಸಿದ್ದು ತಮ್ಮ ಬಾಳಿನ ಅತ್ಯಂತ ಕಷ್ಟದ ದಿನಗಳಲ್ಲಿ ಎಂದು ಎಲ್ಲಿಯೋ ಓದಿದ ನೆನಪು. ಹಾಗೆ ನೋಡಿದರೆ ಹೆಚ್ಚಿನೆಲ್ಲ ಕವಿಗಳ ಬದುಕೇ ಅಂಥದು. ಕನಕ-ಪುರಂದರರು, ಸರ್ವಜ್ಞ-ಅಲ್ಲಮರು, ಕೊನೆಗೆ ಬೇಂದ್ರೆಯವರಾದರೂ ಅಷ್ಟೇ, ನರಸಿಂಹ ಸ್ವಾಮಿಗಳಾದರೂ ಅಷ್ಟೇ. ಅಜರಾಮರವಾದ ಅವರ ಕೃತಿಗಳೆಲ್ಲ ಸುಖದ ಸುಪ್ಪತ್ತಿಗೆಯಿಂದ ಬಂದವಲ್ಲ. ಕಷ್ಟಗಳ ಕುಲುಮೆಯಲ್ಲಿ ನಳನಳಿಸಿದ ರತ್ನಗಳು. ಆದ್ದರಿಂದಲೇ ‘ಹಿಂಡಿದರೂ ಸಿಹಿ ಕೊಡುವ ಕಬ್ಬು, ತೇಯ್ದರೂ ಪರಿಮಳ ಬೀರುವ ಗಂಧ, ಉರಿದರೂ ಬೆಳಕು ಚೆಲ್ಲುವ ದೀಪ...’ ಎಂಬ ಬಣ್ಣನೆ ಇವರಿಗೆಲ್ಲ ಏಕಪ್ರಕಾರವಾಗಿ ಸರಿಹೊಂದುತ್ತದೆ.

ಕವಿಗಳ ಬದುಕಿನ ಕಥೆ-ವ್ಯಥೆಗಳನ್ನು ಅರಿತುಕೊಂಡಾಗ ನಮಗೆ ಅವರ ಕಾವ್ಯ ಇನ್ನಷ್ಟು ಹಿಡಿಸುತ್ತದೆ. ಅಬ್ಬಾ ಎಂಥ ಕಷ್ಟಕಾರ್ಪಣ್ಯದಲ್ಲೂ ಇಷ್ಟೊಂದು ಮಧುರವಾದ, ಅರ್ಥವತ್ತಾದ, ಹೃದಯಂಗಮವಾದ ಕೃತಿಗಳನ್ನು ರಚಿಸಿದರಲ್ಲಾ ಎಂದು ಮನಮಿಡಿಯುತ್ತದೆ. ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ...' ಕವಿತೆಯನ್ನೇ ತೆಗೆದುಕೊಳ್ಳಿ. ಅದನ್ನು ಹಾಗೇಸುಮ್ಮನೆ ಕೇಳಿಸಿಕೊಳ್ಳುವುದೇ ಬೇರೆ, ಎಂಥ ಸನ್ನಿವೇಶದಲ್ಲಿ ಬೇಂದ್ರೆ ಅದನ್ನು ಬರೆದರು ಎಂದು ತಿಳಿದುಕೊಂಡಮೇಲೆ ಕೇಳುವಾಗಿನ ಪರಿಣಾಮವೇ ಬೇರೆ! ಕೆಲವರ್ಷಗಳ ಹಿಂದೆ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟರು ಅಮೆರಿಕ ಪ್ರವಾಸದಲ್ಲಿದ್ದಾಗ ಇಲ್ಲಿ ಹಲವೆಡೆಗಳಲ್ಲಿ ಬೇಂದ್ರೆಯವರ ಬಗ್ಗೆ ಉಪನ್ಯಾಸಗಳನ್ನು ಕೊಟ್ಟಿದ್ದರು. ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಅವತ್ತು ‘ನೀ ಹೀಂಗ ನೋಡಬ್ಯಾಡ’ ಕವಿತೆಯ ಕುರಿತು ಹೇಳುವಾಗಂತೂ ಭಟ್ಟರ ಕಂಠ ಗದ್ಗದಿತವಾಗಿತ್ತು. ಸಭಿಕರೆಲ್ಲರ ಕಣ್ಣಾಲಿಗಳು ಒದ್ದೆಯಾಗಿದ್ದವು. ಇತ್ತೀಚೆಗೆ ಕೆಲ ವಾರಗಳ ಹಿಂದೆ ಈ-ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಬೇಂದ್ರೆ ಸ್ಪೆಷಲ್ (ಹಾಗೆಯೇ ನರಸಿಂಹಸ್ವಾಮಿ ಸ್ಪೆಷಲ್) ‘ಎಂದೂ ಮರೆಯದ ಹಾಡು’ ಕಾರ್ಯಕ್ರಮ ಕೂಡ ನೇರಾನೇರ ಹೃದಯವನ್ನೇ ತಟ್ಟಿತು ಅಂತನಿಸಿದ್ದು ಅದೇ ಕಾರಣಕ್ಕೆ. ಜನಪ್ರಿಯ ಗಾಯಕ-ಗಾಯಕಿಯರಿಂದ ಕವಿಯ ಕೃತಿಗಳ ಸೊಗಸಾದ ಗಾಯನ. ಜತೆಯಲ್ಲಿ ರವಿಯ (ರವಿ ಬೆಳಗೆರೆಯವರ) ಮನೋಜ್ಞ ನಿರೂಪಣೆಯ ರಸಾಯನ. ಒಟ್ಟು ಪರಿಣಾಮ- ಅದ್ಭುತವಾದೊಂದು ಅನುಭವ!

ಕಳೆದ ರವಿವಾರ ಅಂಥದೇ ಒಂದು ವಿಶಿಷ್ಟ ಅನುಭವ ದಕ್ಕಿತು. ಅದೂ ಹಾಗೆಯೇ, ಕವಿಯ ಕಾವ್ಯದ ಮೇಲೆ ರವಿಯ ಬೆಳಕು! ಇಲ್ಲಿ ವಾಷಿಂಗ್ಟನ್‌ನಲ್ಲಿ ಸಾಹಿತ್ಯಾಸಕ್ತ ಕನ್ನಡಿಗರೊಂದಿಷ್ಟು ಮಂದಿ ಸೇರಿ ಕಟ್ಟಿಕೊಂಡಿರುವ ‘ಭೂಮಿಕಾ’ ಚರ್ಚಾಚಾವಡಿಯಲ್ಲಿ ಅವತ್ತು ‘ಗಂಗಾಲಹರಿ’ ಮತ್ತು ‘ಗಂಗಾವತರಣ’ ಕೃತಿಗಳ ತುಲನಾತ್ಮಕ ಪರಿಚಯ ಮತ್ತು ಅನೌಪಚಾರಿಕ ಚರ್ಚೆ, ವಿಚಾರವಿನಿಮಯ. ನಡೆಸಿಕೊಟ್ಟವರು ಡಾ.ರವಿ ಹರಪ್ಪನಹಳ್ಳಿ. ಅವರು ವೃತ್ತಿಯಲ್ಲಿ ಜೀವವಿಜ್ಞಾನಿ, ಪ್ರವೃತ್ತಿಯಲ್ಲಿ ಓರ್ವ ಕಲಾವಿದ, ಸಾಹಿತ್ಯಾಸಕ್ತ. ಗಂಗಾವತರಣ ಎಂದರೆ ಅದೇ- ಬೇಂದ್ರೆಯವರ ಅತಿಪ್ರಸಿದ್ಧವಾದ ‘ಇಳಿದು ಬಾ ತಾಯಿ ಇಳಿದು ಬಾ’ ಕವಿತೆ. ಸ್ವತಃ ಬೇಂದ್ರೆಭಕ್ತರೂ ಆಗಿರುವ ರವಿ ಅದನ್ನು ಆಯ್ದುಕೊಂಡದ್ದು ಸಹಜವೇ. ಆದರೆ ಗಂಗಾಲಹರಿ ಕೃತಿಯ ವಿಚಾರ ನನಗೆ ಹೊಸದು. ಈಮೊದಲು ಕೇಳಿಯೇ ಇರಲಿಲ್ಲ. ಇದು ಬೇಂದ್ರೆಯವರದಲ್ಲ, ಬೇಂದ್ರೆಯವರ ಮೇಲೆ ಗಾಢ ಪರಿಣಾಮ ಬೀರಿದ್ದ ಜಗನ್ನಾಥ ಪಂಡಿತ ಎಂಬ ಮಹಾನ್ ಕವಿಯ ರಚನೆ. ೫೨ ಶ್ಲೋಕಗಳ ಒಂದು ಸಂಸ್ಕೃತ ಸ್ತೋತ್ರ. ಬೇಂದ್ರೆಯವರ ಗಂಗಾವತರಣಕ್ಕೆ ಸ್ಫೂರ್ತಿಯೂ ಹೌದು.

ವೈಶಿಷ್ಟ್ಯವಿರುವುದು ಗಂಗಾಲಹರಿ ಸ್ತೋತ್ರದಲ್ಲಲ್ಲ. ದೇವಾಧಿದೇವತೆಗಳ ಲಕ್ಷೋಪಲಕ್ಷ ಸ್ತೋತ್ರಗಳಿದ್ದಂತೆಯೇ ಅದೂ ಒಂದು. ಗಂಗಾನದಿಯ ವರ್ಣನೆ, ಸ್ತುತಿ ಅಷ್ಟೇ. ಆದರೆ ಜಗನ್ನಾಥ ಪಂಡಿತನ ಬದುಕಿನ ಕಥೆ ಬಹಳ ಸ್ವಾರಸ್ಯವಾದ್ದು. ಗಂಗಾಲಹರಿಯನ್ನು ಆತ ಹಾಡಿದ ಸನ್ನಿವೇಶ ಅತ್ಯಂತ ಹೃದಯಸ್ಪರ್ಶಿಯಾದ್ದು. ಅವತ್ತು ನಮ್ಮ ಚರ್ಚೆಗೆ ರಂಗೇರಿದ್ದೇ ಆ‌ಎಲ್ಲ ವಿವರಗಳಿಂದ. ಹದಿನೇಳನೇ ಶತಮಾನದಲ್ಲಿ ಬಾಳಿದ್ದ ಜಗನ್ನಾಥ ಪಂಡಿತ ಮೂಲತಃ ಆಂಧ್ರದವನು. ಅತಿಶಯ ಮೇಧಾವಿ, ಆದರೆ ಕಡುಬಡವ. ರಾಜಾಶ್ರಯ ಕೋರಿ ಉತ್ತರಭಾರತಕ್ಕೆ ವಲಸೆ ಹೋಗುತ್ತಾನೆ. ಮೊಘಲ್ ಚಕ್ರವರ್ತಿ ಷಹಜಹಾನನ ಆಸ್ಥಾನವನ್ನು ತಲುಪುತ್ತಾನೆ. ತನ್ನ ಪಾಂಡಿತ್ಯದಿಂದ ಅವನ ಮನಗೆಲ್ಲುತ್ತಾನೆ. ಚಕ್ರವರ್ತಿಯೊಡನೆ ಚದುರಂಗದಾಟ ಆಡುವಷ್ಟು ಸಖ್ಯ-ಸಲುಗೆ ಬೆಳೆಸುತ್ತಾನೆ. ಆಟದಲ್ಲಿ ಷಹಜಹಾನನನ್ನು ಸೋಲಿಸುತ್ತಾನೆ. ಪಣವಾಗಿ ಅಲ್ಲಿ ಸೇವಕಿಯಾಗಿದ್ದ ಸುರಸುಂದರಿ ದಾಸೀಪುತ್ರಿ ಲವಂಗಿಯನ್ನೇ ಕೊಡುವಂತೆ ಕೇಳುತ್ತಾನೆ. ಹಠಹಿಡಿದು ಅವಳನ್ನೇ ಮದುವೆಯಾಗುತ್ತಾನೆ, ಹಾಯಾಗಿರುತ್ತಾನೆ. ಮುಂದೆ ಔರಂಗಜೇಬ ತಂದೆ ಷಹಜಹಾನನನ್ನು ಬಂಧಿಸಿದಾಗ ಜಗನ್ನಾಥ ಪಂಡಿತ ಮತ್ತು ಲವಂಗಿ ಕೂಡ ರಾಜ್ಯದಿಂದ ಹೊರಬೀಳುತ್ತಾರೆ. ಕಾಶೀಕ್ಷೇತ್ರಕ್ಕೆ  ಹೋದಾಗ ಅಲ್ಲಿನ ಪಂಡಿತ ಸಮುದಾಯವು ಅವನನ್ನು ಜಾತಿಭ್ರಷ್ಟನೆಂಬ ಕಾರಣಕ್ಕೆ ದೂರವಿಡುತ್ತದೆ. ಬಾಲ್ಯದಿಂದಲೇ ಪ್ರತಿಭಾನ್ವಿತನಾದರೂ ಉದ್ಧಟತನದವನು ಎಂದೂ ಅವನ ಬಗ್ಗೆ ತಿರಸ್ಕಾರವಿರುತ್ತದೆ. ಅಂಥ ಹತಾಶ ಪರಿಸ್ಥಿತಿಯಲ್ಲಿಯೂ ಜಗನ್ನಾಥ ಪಂಡಿತ ಕೆಲವು ಅದ್ಭುತ ಕೃತಿಗಳನ್ನು ರಚಿಸುತ್ತಾನೆ. ಅವುಗಳಲ್ಲೊಂದು ಗಂಗಾಲಹರಿ. ಆದರೆ ಕೊನೆಗೂ ಬದುಕಿನಲ್ಲಿ ಸಾಕಷ್ಟು ರೋಸಿಹೋಗಿ ಪ್ರಾಯಶ್ಚಿತ್ತದ ರೂಪದಲ್ಲಿ ಮಡದಿಯೊಂದಿಗೆ ಜಲಸಮಾಧಿ ಮಾಡಿಕೊಳ್ಳಲು ನಿಶ್ಚಯಿಸುತ್ತಾನೆ. ಕಾಶಿಯಲ್ಲಿ ಗಂಗೆಯ ದಡದಲ್ಲಿ ಕುಳಿತು ಹಂಸಗೀತೆಯೆಂಬಂತೆ ಗಂಗಾಲಹರಿಯನ್ನು ಹಾಡುತ್ತಾನೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಿಲಿನಷ್ಟು ಏರುವ ಗಂಗೆ, ಐವತ್ತೆರಡನೇ ಶ್ಲೋಕವಾಗುವಾಗ ಅವರಿಬ್ಬರನ್ನೂ ಕೊಚ್ಚಿಕೊಂಡು ಹೋಗುತ್ತಾಳೆ!

ಗಂಗಾಲಹರಿ ಸ್ತೋತ್ರಕ್ಕೆ ಇಷ್ಟೊಂದು ರೋಮಾಂಚಕ ಹಿನ್ನೆಲೆ ಇದೆಯೆಂದು ಗೊತ್ತಾದ ಮೇಲೆ ಅದರ ಬಗ್ಗೆ ಅಂತರ್ಜಾಲದಲ್ಲೂ ವಿವರಗಳಿದ್ದೇ ಇರುತ್ತವೆ ಎಂದು ಶೋಧಕ್ಕೆ ತೊಡಗಿದೆ. ಸಿಕ್ಕೇಬಿಡ್ತು ಇನ್ನೊಬ್ಬ ಬೇಂದ್ರೆಭಕ್ತ ಹುಬ್ಬಳ್ಳಿನಿವಾಸಿ ಹಿರಿಯ ಮಿತ್ರ ಸುಧೀಂದ್ರ ದೇಶಪಾಂಡೆಯವರ ‘ಸಲ್ಲಾಪ' ಬ್ಲಾಗ್. ಅದರಲ್ಲಿ ಗಂಗಾಲಹರಿ, ಜಗನ್ನಾಥ ಪಂಡಿತ, ಬೇಂದ್ರೆಯವರ ಮೇಲಾದ ಪರಿಣಾಮ- ಇವೆಲ್ಲದರ ದೊಡ್ಡದೊಂದು ಪ್ರಬಂಧವೇ ಇದೆ. ಓದಿದೆ, ಬಹಳ ರುಚಿಸಿತು. ಅಂತೆಯೇ ಅನಿಸಿತು, ಕಾವ್ಯವೆಂದರೆ ಹೀಗೆಯೇ. ಹಲಸಿನಹಣ್ಣು ಇದ್ದಂತೆ. ಹಿತವಾದ ಪರಿಮಳ. ಆದರೆ ಬಿಡಿಸಿ ಒಳಗಿನ ಸಿಹಿಸಿಹಿ ತೊಳೆಗಳನ್ನು ತಿನ್ನಲಿಕ್ಕೆ ಕಷ್ಟವಿದೆ. ಒಂದೋ ನಾವೇ ಶ್ರಮಪಡಬೇಕು, ಇಲ್ಲ ಯಾರಾದರೂ ಅನುಭವಿಗಳು ಆ ಕೆಲಸ ಮಾಡಿಕೊಡಬೇಕು. ಆಗ, ಆಹಾ! ಏನು ಸವಿ ಏನು ಸೊಗಸು!

jackfruitpoetry.jpg

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.