ಪದ-ಶ್ರಾವ್ಯ

ಈಗ ಆಡಿಯೋ ಟಚ್!

24
Sep 2011
Self Reference Swaarasya
Posted in DefaultTag by sjoshi at 1:23 pm

ದಿನಾಂಕ  25 ಸೆಪ್ಟೆಂಬರ್ 2011ರ ಸಂಚಿಕೆ...

ಇದರಲ್ಲಿ ಒಟ್ಟು ಹದಿನಾರು ಅಕ್ಷರಗಳಿವೆ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಹುಶಃ ನನ್ನ ಮೇಲೆ ನಿಮಗೆ ನಂಬಿಕೆಯಿಲ್ಲ. ಪರವಾಗಿಲ್ಲ. ಆದರೆ ನಿಮ್ಮ ಕಣ್ಣುಗಳ ಮೇಲಾದರೂ ನಂಬಿಕೆ ಬೇಡವೇ? ಬರೋಬ್ಬರಿ ಹದಿನಾರೇ ಅಕ್ಷರಗಳಿರುವ ಶೀರ್ಷಿಕೆಯನ್ನು ಓದಿದ ಮೇಲೂ ಮತ್ತೆ ಒಂದೊಂದಾಗಿ ಅಕ್ಷರಗಳನ್ನು ಎಣಿಸಿ ಕನ್‌ಫರ್ಮ್ ಮಾಡ್ಕೊಂಡ್ರಿ. ಅಲ್ವಾ?

ಹೋಗಲಿಬಿಡಿ, ಅಂಕಣದ ಶೀರ್ಷಿಕೆಯಲ್ಲಿ ಎಷ್ಟು ಅಕ್ಷರಗಳಿವೆ ಎನ್ನುವುದರಿಂದ ನಿಮಗೇನೂ ಆಗಬೇಕಾದ್ದಿಲ್ಲ. ಆದರೆ ನನಗೆ ಅದು ಮುಖ್ಯವಾಗುತ್ತದೆ. ನನಗಿಂತಲೂ ಹೆಚ್ಚಾಗಿ ಪತ್ರಿಕೆಯ ಪುಟ ವಿನ್ಯಾಸ ಮಾಡುವವರಿಗೆ ಮತ್ತೂ ಮುಖ್ಯವಾಗುತ್ತದೆ. ಕಳೆದವಾರ ಹಾಗೇ ಆಯ್ತು. ಹೇನುಪುರಾಣದ ಲೇಖನಕ್ಕೆ ನಾನು ‘ಹೇನು ಹೆಕ್ಕೋ ಹೆಂಗಸಿಗೆ ಡಿಮಾಂಡಪ್ಪೋ ಡಿಮಾಂಡು’ ಎಂದು ಶೀರ್ಷಿಕೆ ಕೊಟ್ಟಿದ್ದೆ. ಕಾಶಿನಾಥ್ ಅಭಿನಯದ ಒಂದು ಜನಪ್ರಿಯ ಚಿತ್ರಗೀತೆ ಇದೆಯಲ್ಲ ಅದರ ಧಾಟಿಯಲ್ಲಿ ಎಂಬಂತೆ ಆ ಶೀರ್ಷಿಕೆ. ಆದರೆ ಅಂಕಣದ ಸ್ಥಳಾವಕಾಶಕ್ಕೆ ಅದು ಸ್ವಲ್ಪ ಉದ್ದ ಆಯ್ತು. ಒಟ್ಟು ಅಕ್ಷರಗಳು ಹದಿನೈದೇ ಆದರೂ ಅವುಗಳಲ್ಲಿ ಸುಮಾರೆಲ್ಲ ಕೊಂಬು ದೀರ್ಘ ಸೊನ್ನೆ ಇತ್ಯಾದಿ ಇದ್ದಂಥವಾದ್ದರಿಂದ ಜಾಗದ ಸಮಸ್ಯೆಯಾಯ್ತು. ಅಕ್ಷರಗಳನ್ನು ಸಪೂರವಾಗಿಸಿ ಒಂಚೂರು ಅಡ್ಜಸ್ಟ್ ಮಾಡಬಹುದಿತ್ತೇನೋ. ಆದರೆ ಅದು ಚಂದ ಕಾಣುವುದಿಲ್ಲವೆಂದು ವಿನ್ಯಾಸಕಾರರು ‘ಡಿಮಾಂಡಪ್ಪೋ’ ಪದವನ್ನಷ್ಟೇ ತೆಗೆದುಹಾಕಿ ಒಪ್ಪವಾದ ಅರ್ಥಪೂರ್ಣ ಶೀರ್ಷಿಕೆ ಮಾಡಿದರು. ಅದರಿಂದ ನನಗೇನೂ ಬೇಸರವಾಗಲಿಲ್ಲ. ನಿಮಗಂತೂ ಗೊತ್ತೇ ಆಗಲಿಲ್ಲ. ಈವಾರ ಅವೆಲ್ಲ ಕಷ್ಟವೇ ಬೇಡವೆಂದು ಶೀರ್ಷಿಕೆಯ ಸೈಜ್ ಎಷ್ಟಿದೆಯಂತ ಸುಲಭದಲ್ಲೇ ತಿಳಿಯುವಂತೆ ಈ ಪ್ಲಾನು!

ಹಾಂ, ಕೊಂಚ ತಾಳಿ. ‘ಇದರಲ್ಲಿ ಒಟ್ಟು ಹದಿನಾರು ಅಕ್ಷರಗಳಿವೆ’ ಎಂಬ ವಾಕ್ಯವನ್ನು ಮತ್ತೊಮ್ಮೆ ಗಮನವಿಟ್ಟು ನೋಡಿ. ಏನಾದರೂ ವಿಶೇಷ ಕಾಣಿಸಿತೇ? ಈ ವಾಕ್ಯ ತನ್ನ ಬಗ್ಗೆ ತಾನೇ ಹೇಳಿಕೊಳ್ಳುತ್ತಿದೆ ಅಂತ ಅನಿಸಿತೇ? ಹೌದೆಂದಾದರೆ ಇವತ್ತಿನ ವ್ಯಾಖ್ಯಾನಕ್ಕೆ ಆಯ್ದುಕೊಂಡ self reference ಎಂಬ ವಿಷಯಗ್ರಹಣಕ್ಕೆ ನೀವು ಸಿದ್ಧರಾಗಿದ್ದೀರಿ ಎಂದರ್ಥ. ಇಲ್ಲವಾದರೂ ಚಿಂತಿಲ್ಲ. ಇದು ಗಣಿತದ ಕಬ್ಬಿಣದಕಡಲೆ ಏನಲ್ಲ, ವ್ಯಾಕರಣಶಾಸ್ತ್ರದ ತಲೆನೋವಂತೂ ಮೊದಲೇ ಅಲ್ಲ. ಯಥಾಪ್ರಕಾರ ಮನರಂಜನೆಯ ಜತೆಜತೆಗೇ ಮೆದುಳಿಗೆ ಮೇವು ಅಷ್ಟೇ. ಹೀಗೇ ಸುಮ್ಮನೆ ಓದಿಕೊಂಡು ಹೋಗಿ.

ತನ್ನನ್ನು ತಾನೇ ಬಣ್ಣಿಸಿಕೊಳ್ಳುವ ರಚನೆಗಳು ಇಂಗ್ಲಿಷ್‌ನಲ್ಲಿ ಬೇಕಾದಷ್ಟಿವೆ. ಅವುಗಳಿಗೆ autograms  ಎಂಬ ಹೆಸರೂ ಇದೆ. ಸರಳವಾದ ಉದಾಹರಣೆಯೆಂದರೆ `This sentence has five words' ಎಂಬ ವಾಕ್ಯ. ಅದಕ್ಕಿಂತ ಹೆಚ್ಚು ಮಜಾ ಎನಿಸುವ ಉದಾಹರಣೆ ಬೇಕಾದರೆ- "In this sentence the word 'and' occurs twice, the word 'eight' occurs twice, the word 'four' occurs twice, the word 'fourteen' occurs four times, the word 'in' occurs twice, the word 'occurs' occurs fourteen times, the word 'sentence' occurs twice, the word 'seven' occurs twice, the word 'the' occurs fourteen times, the word 'this' occurs twice, the word 'times' occurs seven times, the word 'twice' occurs eight times, and the word 'word' occurs fourteen times!" ಬೇಕಿದ್ದರೆ ಎಲ್ಲವನ್ನೂ ಲೆಕ್ಕ ಮಾಡಿನೋಡಿ.

ಸರಿ, ವಾಕ್ಯಗಳೇನೋ ಅರ್ಥಬದ್ಧವಾಗಿಯೇ ಇವೆ. ಆದರೆ ಇದರಿಂದ ಉಪಯೋಗವೇನಾದರೂ ಇದೆಯೇ? ಇದೆ! ಇಂಗ್ಲಿಷ್‌ಗಿಂತ ಸಂಸ್ಕೃತ ಅಥವಾ ಕನ್ನಡದಲ್ಲಿನ ಅಂಥ ಒಂದೆರಡು ರಚನೆಗಳನ್ನು ಉದಾಹರಿಸಿದರೆ ಮನದಟ್ಟಾಗುತ್ತದೆ. ತತ್‌ಕ್ಷಣಕ್ಕೆ ನೆನಪಿಗೆ ಬರುವುದೆಂದರೆ ಸಂಸ್ಕೃತದಲ್ಲಿ ಅನುಷ್ಟುಪ್ ಛಂದಸ್ಸಿನ ನಿಯಮವನ್ನು ತಿಳಿಸುವ ಶ್ಲೋಕ. “ಪಂಚಮಂ ಲಘು ಸರ್ವತ್ರ| ಸಪ್ತಮಂ ದ್ವಿಚತುರ್ಥಯೋಃ| ಗುರು ಷಷ್ಠಂ ಚ ಪಾದಾನಾಂ| ಚತುರ್ಣಾಂಸ್ಯಾದನುಷ್ಟುಭಿಃ||” ಸ್ವಾರಸ್ಯವೇನೆಂದರೆ ಈ ಶ್ಲೋಕವೂ ಅನುಷ್ಟುಪ್ ಛಂದಸ್ಸಿನಲ್ಲೇ ಇರುವುದು! ಶ್ಲೋಕ ಏನು ಹೇಳುತ್ತಿದೆಯೆಂದರೆ ಅನುಷ್ಟುಪ್ ಛಂದಸ್ಸಿನ ಪದ್ಯದಲ್ಲಿ ತಲಾ ಎಂಟು ಅಕ್ಷರಗಳ ಒಟ್ಟು ನಾಲ್ಕು ಪಾದಗಳು ಇರುತ್ತವೆ. ಪ್ರತಿಯೊಂದು ಪಾದದ ಐದನೇ ಅಕ್ಷರ ಲಘು. ಎರಡನೇ ಮತ್ತು ನಾಲ್ಕನೇ ಪಾದಗಳ ಏಳನೇ ಅಕ್ಷರಗಳೂ ಲಘು. ನಾಲ್ಕೂ ಪಾದಗಳ ಆರನೇ ಅಕ್ಷರ ಗುರು. ಮೇಲಿನ ‘ನಿಯಮಶ್ಲೋಕ’ದಲ್ಲಿಯೂ ಈ ನಿಯಮ ಚಾಚೂತಪ್ಪದೆ ಪಾಲನೆಯಾಗಿದೆ. ಸಂಸ್ಕೃತದ ಬಹುತೇಕ ನಿಯಮಗಳೆಲ್ಲ ಈರೀತಿ ಆಟೋಗ್ರಾಮ್ ಮಾದರಿಯವೇ ಆಗಿದ್ದು ನೆನಪಿಟ್ಟುಕೊಳ್ಳುವುದಕ್ಕೆ ಸುಲಭವಾಗಿರುವುದು ಮೆಚ್ಚಬೇಕಾದ ಅಂಶ. ಒಂದು ವಸ್ತು ಅಥವಾ ವಿಷಯವನ್ನು ಕಲಿಯಬೇಕಿದ್ದರೆ ಅದನ್ನೇ ಸಂವಹನಸಾಧನ (ಕಲಿಕೆಯ ಮಾಧ್ಯಮ) ಆಗಿಸಿದರೆ ಅತ್ಯಂತ ಪರಿಣಾಮಕಾರಿಯಾಗುತ್ತದೆ ಎಂದು ನಮ್ಮ ಹಿರಿಯರು ಆಗಲೇ ಕಂಡುಕೊಂಡಿದ್ದರಲ್ಲ ನಿಜಕ್ಕೂ ತಲೆದೂಗಬೇಕು ಅವರ ಜಾಣತನಕ್ಕೆ.

‘ಛಂದೋಮಿತ್ರ’ ಪುಸ್ತಕದಲ್ಲಿ ಪ್ರೊ.ಅ.ರಾ.ಮಿತ್ರ ಅವರು ಕನ್ನಡದ ಛಂದಸ್ಸಿನ ವಿವರಣೆಗೂ ಇದೇ ತಂತ್ರವನ್ನು ಬಳಸಿದ್ದಾರೆ. ಭಾಮಿನಿ ಷಟ್ಪದಿಯ ನಿಯಮವನ್ನು ಅವರು ಒಂದು ಭಾಮಿನಿ ಷಟ್ಪದಿಯ ಛಂದದ ಮೂಲಕವೇ ಚಂದವಾಗಿ ವಿವರಿಸುತ್ತಾರೆ: “ಇವಳು ಭಾಮಿನಿ ಷಟ್ಪದಿಯ ಮಧು/ ರವದ ಗಾಯಕಿ ಮೂರು ನಾಲ್ಕರ/ ಕ್ರಮದ ಭಂಗಿಯ ಸಪ್ತಪದಿಯಲಿ ಕೈಯ ಹಿಡಿದವಳು/ ನವರಸಾವಿಷ್ಕಾರ ಸಂಪದೆ/ ಭವ ನಿಮಜ್ಜನ ಚತುರ ಭಾಷಿಣಿ/ ಕವಿಯ ಸೇವಿಸಿ ಕೊನೆಗೆ ಗುರುವೇ ಆಗಿ ನಿಲ್ಲುವಳು.” ಇಪ್ಪತ್ತು ಅಕ್ಷರಗಳ ಉತ್ಪಲಮಾಲಾ ವೃತ್ತವನ್ನು “ಆದಿಯೊಳೊಂದು ಬಂತೆ ಗುರು ಉತ್ಪಲಮಾಲೆಯ ಲಕ್ಷ್ಯ ಕಾಣಿರೇ” ಎಂದು ನಿಯಮಬದ್ಧವಾಗಿ ವಿವರಿಸುತ್ತಲೇ “ಮೇಲಧಿಕಾರಿಗಿಂತಲು ಫಿಮೇಲಧಿಕಾರಿಯೇ ತಾಟಗಿತ್ತಿಯೋ” ಎಂಬ ಭಲೇ ಮೋಜಿನ ಉದಾಹರಣೆಯನ್ನೂ ಕೊಡುತ್ತಾರೆ.

ಇರಲಿ, ವ್ಯಾಕರಣದ ತಲೆನೋವಿಲ್ಲ ಎಂದು ಮೊದಲೇ ಹೇಳಿದ್ದೇನಾದ್ದರಿಂದ ಅದನ್ನು ಅಲ್ಲಿಗೇ ನಿಲ್ಲಿಸೋಣ. ಸೆಲ್ಫ್ ರೆಫರೆನ್ಸ್ ಅಥವಾ ‘ಸ್ವಪ್ರಸ್ತಾಪ’ದ ಸ್ವಾರಸ್ಯವು ಭಾಷೆಯ ಸೊಗಡಿನಲ್ಲಷ್ಟೇ ಇರುವುದೆಂದೇನಿಲ್ಲ. ಗಣಿತ, ಅಧ್ಯಾತ್ಮ, ಚಿತ್ರಕಲೆ, ಸಾಹಿತ್ಯ, ಸಂಗೀತ ಮುಂತಾಗಿ ವಿವಿಧ ಕ್ಷೇತ್ರಗಳಲ್ಲಿ ಅದು  ಇಣುಕುವುದಿದೆ. ಎಷ್ಟೋಸಲ ಇದರಿಂದಲೇ ಸ್ವಾರಸ್ಯಕರ ವಿರೋಧಾಭಾಸಗಳು ಹುಟ್ಟುವುದೂ ಇದೆ. ಸೆಲ್ಫ್ ರೆಫರೆನ್ಸ್ ಮತ್ತು ವಿರೋಧಾಭಾಸಗಳ ಕುರಿತಾಗಿ ಇದೇ ಅಂಕಣದಲ್ಲಿ ಈಹಿಂದೆಯೂ (13 ಜುಲೈ 2008 ಮತ್ತು 6 ಸೆಪ್ಟೆಂಬರ್ 2009) ಬರೆದಿದ್ದೇನೆ. ಬರ್ಟ್ರಾಂಡ್ ರಸೆಲ್ ಮಂಡಿಸಿದ ‘ಕ್ಷೌರಿಕನ ವಿರೋಧಾಭಾಸ’ದಿಂದ ಹಿಡಿದು ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಬರುವ recursive algorithmsವರೆಗೂ ವಿಶ್ಲೇಷಿಸಿದ್ದೇನೆ. ಮತ್ತಷ್ಟು ಸಂಗ್ರಹದಿಂದ ಆಯ್ದ ಒಂದೆರಡು ಸ್ವಾರಸ್ಯಕರ ಅಂಶಗಳನ್ನು ಈಗ ವಿವರಿಸುತ್ತೇನೆ.

ಒಮ್ಮೆ ನಾಲ್ವರು ಬೌದ್ಧಭಿಕ್ಷುಗಳು ಮೌನವ್ರತ ಆಚರಿಸುವ ನಿರ್ಧಾರ ಮಾಡುತ್ತಾರೆ. ಕನಿಷ್ಠ ಒಂದೆರಡು ವಾರಗಳಾದರೂ ಯಾವೊಂದು ಮಾತೂ ಇಲ್ಲದೆ ಧ್ಯಾನದಲ್ಲೇ ಕಳೆಯಬೇಕೆಂದು ಅವರ ಸಂಕಲ್ಪ. ಮೊದಲದಿನ ಸಂಜೆ ಹೊತ್ತು. ಕತ್ತಲೆಯಲ್ಲಿ ಬೆಳಕಿಗೆಂದು ಮೋಂಬತ್ತಿ ಹಚ್ಚಿಟ್ಟು ಸುತ್ತ ಕುಳಿತುಕೊಂಡಿದ್ದಾರೆ. ಗಾಳಿಗೋ ಅಥವಾ ಪತಂಗ ಬಂದೋ ಅಂತೂ ಮೋಂಬತ್ತಿಯ ಜ್ವಾಲೆ ಅಲುಗಾಡಿ ಕೊನೆಗೆ ಆರಿಹೋಗಿದೆ. ಮೊದಲ ಭಿಕ್ಷು ಮೌನವ್ರತವನ್ನು ಮರೆತು “ಅಯ್ಯೋ ಮೋಂಬತ್ತಿ ನಂದಿಹೋಯ್ತಲ್ಲ!” ಎನ್ನುತ್ತಾನೆ. ಆಗ ಎರಡನೇ ಭಿಕ್ಷು “ಅರ್ರೇ ನಾವು ಮಾತನಾಡಲಿಕ್ಕಿಲ್ಲ ಎಂದಲ್ವಾ ನಿರ್ಧರಿಸಿದ್ದು?” ಎಂದು ಉದ್ಗರಿಸುತ್ತಾನೆ. ಮೂರನೇಯವನು ಅವರಿಬ್ಬರನ್ನು ಗಮನಿಸಿ “ನೀವಿಬ್ಬರೇಕೆ ಮೌನವನ್ನು ಮುರಿದಿರಿ?” ಎನ್ನುತ್ತಾನೆ. ನಾಲ್ಕನೆಯವನಾದರೂ ಸುಮ್ಮನಿರಬೇಡವೇ? ಅವನು ಗಹಗಹಿಸಿ ನಕ್ಕು “ನೋಡಿದ್ರಾ? ನಾನೊಬ್ಬನೇ ಮಾತನಾಡದೇ ಇರುವವನು!” ಎಂದುಬಿಟ್ಟ. ಇಲ್ಲೇನಾಯ್ತು? ಭಿಕ್ಷುಗಳ ಮಾತನಾಡುವಿಕೆಯಲ್ಲೇ ಅವರ ಮೌನದ ಪ್ರಸ್ತಾಪವೂ ಆಯ್ತು, ಆದರೆ ಮಾತನಾಡಿದ್ದರಿಂದಾಗಿ ಅವರ ಮೌನಭಂಗವಾದಂತೆಯೂ ಆಯ್ತು. ಯೋಚಿಸಿದರೆ ಸರಳವಾದರೂ ಸಂಕೀರ್ಣ ಸನ್ನಿವೇಶ. ‘ಹನ್ನೆರಡು ಜನ ಬುದ್ಧಿವಂತರ’ ಕತೆಯನ್ನು ನೆನಪಿಸುವಂಥದು.

selfreferencecomic.jpg

ಅದೇರೀತಿ ಈ ಸೆಲ್ಫ್‌ರೆಫರೆನ್ಸ್ ಕಾಮಿಕ್ಸ್ ಚಿತ್ರವನ್ನೂ ನೀವು ಗಮನಿಸಬೇಕು. ಯಾವ ಕಾಮಿಕ್ಸ್ ಸರಣಿಯ ಬಗ್ಗೆ ಇದರಲ್ಲಿ ಪ್ರಸ್ತಾಪವಾಗಿದೆಯೋ ಇದು ಅದೇ ಆಗಿದೆ! ಅಥವಾ ಅದು ಇದೇ ಆಗಿದೆ. ನಮ್ಮ ಅಧ್ಯಾತ್ಮ ಚಿಂತನೆಯಲ್ಲೂ ಹಾಗೆಯೇ ಆಗುತ್ತದೆ. ಒಂದು ಹಂತದಲ್ಲಿ ಅದು-ಇದು, ಅವನು-ನಾನು, ಜೀವಾತ್ಮ-ಪರಮಾತ್ಮ ಎಂಬುದೆಲ್ಲ ಗೋಜಲು ಗೋಜಲಾಗುತ್ತ ಹೋಗುತ್ತದೆ. ತತ್ ತ್ವಮ್ ಅಸಿ ಎಂದು ಉಚ್ಚರಿಸುವ ಮನಸ್ಸೇ ಅಹಂ ಬ್ರಹ್ಮಾಸ್ಮಿ ಎಂದೂ ಹೇಳತೊಡಗುತ್ತದೆ.

“ಏನೋ ಗೊತ್ತಿಲ್ಲಪ್ಪ. ಕಳೆದವಾರ ತಲೆಮೇಲಿನ ಹೇನುಗಳಾಯ್ತು. ಈವಾರ ತಲೆಯೊಳಗೇ ಗುಂಗಿಹುಳ ಬಿಟ್ರಲ್ಲಾ” ಎಂದು ನೀವು ಹೇಳುವಂತಾಗುವುದಂತೂ ಸತ್ಯ ಎಂದುಕೊಂಡಿದ್ದೇನೆ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.