ಪದ-ಶ್ರಾವ್ಯ

ಈಗ ಆಡಿಯೋ ಟಚ್!

14
Jul 2012
Shivaranjini Raagarasaayana
Posted in DefaultTag by sjoshi at 5:04 pm

ದಿನಾಂಕ  14 ಜುಲೈ 2012

ಶಿವರಂಜನಿ ರಾಗರಸಾಯನ

* ಶ್ರೀವತ್ಸ ಜೋಶಿ

ನನಗೆ ಶಾಸ್ತ್ರೀಯ ಸಂಗೀತದ ಅರಿವಿಲ್ಲ. ಆದರೇನಂತೆ, "ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣೀ" ಎಂದಿದ್ದಾರೆ ಪ್ರಾಜ್ಞರು. ಸಂಗೀತದಲ್ಲಿನ ಮಾಧುರ್ಯವನ್ನು ಶಿಶುಗಳು, ಪಶುಗಳು ಅಷ್ಟೇ ಏಕೆ ಹಾವುಗಳೂ ಆನಂದಿಸುತ್ತವಂತೆ. ಅಂತೆಯೇ ನಮ್ಮಂಥವರೂ!

ಶಾಸ್ತ್ರೀಯ ಸಂಗೀತದ ಅರಿವು ಇರದಿದ್ದರೂ ಕೇಳಿ ಆನಂದಿಸುವ ಆಸಕ್ತಿಯಂತೂ ತುಂಬ ಇದೆ. ನನಗೆ ಹಿಂದುಸ್ಥಾನಿ ಸಂಗೀತವೂ ಇಷ್ಟ, ಆದರೂ ಕರ್ನಾಟಕ ಶಾಸ್ತ್ರೀಯ ಸಂಗೀತವೆಂದರೆ ಹೆಚ್ಚು ಒಲವು. ಅದರಲ್ಲೂ ವಾದ್ಯಸಂಗೀತ (instrumental) ಮತ್ತೂ ಇಷ್ಟ. ನನ್ನ audio collectionನಲ್ಲಿ ಹೆಚ್ಚಾಗಿ ಇರುವುದು Carnatic instrumental music.

ಶಾಸ್ತ್ರೀಯ ಸಂಗೀತದ ಅರಿವಿಲ್ಲವೆಂದು ಹೇಳಿದೆನಾದರೂ ಸಂಗೀತವನ್ನು ಇಷ್ಟಪಟ್ಟು, ಕೇಳಿ ಕೇಳಿ, ಕೆಲವೇಕೆಲವು ರಾಗಗಳ ಪರಿಚಯ ಮಾಡಿಕೊಂಡಿದ್ದೇನೆ. ಯಾವುದೇ ಕೀರ್ತನೆಯಾದರೂ ಪದ್ಯವಾದರೂ ಇಂಥ ರಾಗದಲ್ಲಿದೆ ಎಂದು ಗುರುತಿಸುವಷ್ಟು ಅಲ್ಲ, ಆದರೆ ನನಗೆ ಗೊತ್ತಿರುವ ಬೆರಳೆಣಿಕೆಯ ಸಂಖ್ಯೆಯ ರಾಗಗಳಲ್ಲಿ ಕೀರ್ತನೆ/ಪದ್ಯ ಇದ್ದರೆ ಸುಲಭವಾಗಿ ಗುರುತುಹಿಡಿಯುವಷ್ಟು.

ಅಂಥದೊಂದು ರಾಗ, ‘ಶಿವರಂಜನಿ’. ಇದು, ನನ್ನ ತಿಳುವಳಿಕೆಯಂತೆ, ಕರುಣಾರಸಭರಿತವಾದದ್ದು. ವಿಷಾದದ ಛಾಯೆಯುಳ್ಳದ್ದು. ಈ ರಾಗದಲ್ಲಿರುವ ಕೃತಿಗಳು ಒಂದುರೀತಿಯಲ್ಲಿ ಆರ್ತನಾದ ಎನಿಸುವಂಥವು. ಕೇಳುತ್ತಕೇಳುತ್ತ ತನ್ಮಯವಾದರೆ ಕಣ್ಣಲ್ಲಿ ನೀರು ಬರಿಸುವಂಥವು. ಆದರೂ ಕೇಳಲಿಕ್ಕೆ ಕರ್ಣಾನಂದಕರ ಎನ್ನುವುದರಲ್ಲಿ ಸಂಶಯವಿಲ್ಲ.

ಇಲ್ಲಿ ಶಿವರಂಜನಿ ರಾಗ ಆಧಾರಿತ ಕೆಲವು ಚಿತ್ರಗೀತೆಗಳ (ಕನ್ನಡ, ಹಿಂದಿ, ತೆಲುಗು, ತಮಿಳು ಎಲ್ಲ ಇವೆ) ಯೂಟ್ಯೂಬ್ ಲಿಂಕ್‌ಗಳನ್ನು ಒಟ್ಟುಹಾಕಿದ್ದೇನೆ. ಜತೆಯಲ್ಲೇ ಕೆಲವು ಚಲನಚಿತ್ರೇತರ ಸಂಗೀತದ ತುಣುಕುಗಳೂ ಇವೆ. ನಿಮಗೆ ಶಾಸ್ತ್ರೀಯ ಸಂಗೀತವನ್ನು ಆಲಿಸುವ ಆಸಕ್ತಿಯಿದ್ದರೆ, ಬಿಡುವಿದ್ದರೆ ನೀವೂ ಇವುಗಳನ್ನು ಆನಂದಿಸಬಹುದು.

[ಸೂಚನೆ: ಒಂದು ತುಣುಕನ್ನು ಆಲಿಸತೊಡಗಿದರೆ ಅದನ್ನು stop ಅಥವಾ pause ಮಾಡಿದಮೇಲಷ್ಟೇ ಇನ್ನೊಂದನ್ನು play ಮಾಡಿ. ಇಲ್ಲವಾದರೆ ಕರ್ಣಾನಂದಕರ ರಸಾಯನ ಇದ್ದದ್ದು ಕರ್ಕಶಸಂಗೀತ ಸಕಲಗುಂಡಿತೀರ್ಥದಂತಾಗಬಹುದು!]

* * *

ನೀವು ಆಕಾಶವಾಣಿಯ signature tune ಕೇಳಿಯೇ ಇರುತ್ತೀರಿ. ಅದು ಶಿವರಂಜನಿ ರಾಗದಲ್ಲೇ ಇರುವುದು! ಈ ರಾಗರಸಾಯನವನ್ನು ಬಹುಶಃ ಆಕಾಶವಾಣಿ ಸಿಗ್ನೇಚರ್‌ಟ್ಯೂನ್‍ನಿಂದಲೇ ಆರಂಭಿಸಿದರೆ ಈ ಕಾರ್ಯಕ್ರಮದ ಆರಂಭಕ್ಕೆ ಒಳ್ಳೆಯ ಇಫೆಕ್ಟ್ ಬರಬಹುದು ಎಂದು ನನ್ನ  ಭಾವನೆ.

*** *** *** *** *** *** ***

ಆಕಾಶವಾಣಿಯ ಸಿಗ್ನೇಚರ್‌ಟ್ಯೂನ್‌ನ ನಂತರ ಈಗ ಒಂದು ಭಕ್ತಿಗೀತೆ ಕೇಳೋಣ, "ರಂಜಿನಿ ಶಿವರಂಜನಿ..." ಎಂದು ಹಾಡಿನ ಸಾಹಿತ್ಯದಲ್ಲೇ ರಾಗದ ಹೆಸರೂ ಬರುವ ಈ ಗೀತೆ ಮಲಯಾಳಂ ಭಾಷೆಯಲ್ಲಿದೆ, ಆದರೆ ಸಂಗೀತವನ್ನು ಆಲಿಸಲಿಕ್ಕೆ ನಿಮಗೆ ಭಾಷೆ ತೊಡಕಾಗುವುದಿಲ್ಲ. ಕೇರಳದ ದೇವಸ್ಥಾನದ ದೃಶ್ಯಗಳೂ ಇವೆಯಲ್ಲ ನೋಡಿ ಪುಳಕಗೊಳ್ಳುವುದಕ್ಕೆ!

*** *** *** *** *** *** ***

ಮಲಯಾಳಂ ಭಕ್ತಿಗೀತೆಯ ನಂತರ, ಎಂ.ಎಸ್.ಸುಬ್ಬಲಕ್ಷ್ಮಿಯವರ ಅದ್ಭುತಕಂಠಸಿರಿಯಲ್ಲಿ ಪ್ರಖ್ಯಾತ ತಮಿಳು ಭಕ್ತಿಗೀತೆ, ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ)ಯವರು ಬರೆದ “ಕುರೈಒಂಡ್ರುಮ್ ಇಲ್ಲೈ..."ಯನ್ನೂ ನಾವು ಕೇಳಬೇಕು. ಇದರ ಮೊದಲ ಚರಣವು ಶಿವರಂಜನಿ ರಾಗದಲ್ಲಿದೆ.

*** *** *** *** *** *** ***

ಈಗಿನ್ನು ಕನ್ನಡ ಚಿತ್ರಗೀತೆಗಳತ್ತ ಹೊರಳೋಣ. ಭಕ್ತಿಗೀತೆಗಳಿಂದ ಚಿತ್ರಗೀತೆಗಳಿಗೆ ಶಿಫ್ಟ್ ಆಗುವಾಗ ಭಕ್ತಿಪರ ಚಿತ್ರಗೀತೆಯನ್ನೇ ಮೊದಲಿಗೆ ಕೇಳಿದರೆ ಒಳ್ಳೆಯದಲ್ಲವೇ? ‘ದೇವರ ದುಡ್ಡು’ ಚಿತ್ರದಲ್ಲಿ ಡಾ.ಪಿ.ಬಿ.ಶ್ರೀನಿವಾಸ ಹಾಡಿರುವ ಗೀತೆ- “ನಾನೇ ಎಂಬ ಭಾವ ನಾಶವಾಯಿತು..." ರಾಜೇಶ್ ಅಭಿನಯ ಚೆನ್ನಾಗಿದೆ. ಹಾಡಿನ ಸಾಹಿತ್ಯ, ಅದರೊಳಗಿನ ಅರ್ಥ ಮತ್ತೂ ಚೆನ್ನಾಗಿದೆ!

*** *** *** *** *** *** ***

‘ಅಪರಿಚಿತ’ ಚಿತ್ರದಲ್ಲಿ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನದಲ್ಲಿ ವಾಣಿ ಜಯರಾಂ ಹಾಡಿರುವ “ಸವಿನೆನಪುಗಳು ಬೇಕು ಸವಿಯಲೀ ಬದುಕು..."  ಶಿವರಂಜನಿ ರಾಗದಲ್ಲಿದೆ!

*** *** *** *** *** *** ***

ಮುಂದಿನ ಗೀತೆ, ‘ರಥಸಪ್ತಮಿ’ ಚಿತ್ರಕ್ಕಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ಹಾಡಿರುವ ಅತ್ಯಂತ ಜನಪ್ರಿಯವಾದ  “ಶಿಲೆಗಳು ಸಂಗೀತವ ಹಾಡಿವೆ..."

*** *** *** *** *** *** ***

ಅನಂತನಾಗ್ ಮತ್ತು ಆರತಿ ಅಭಿನಯದ ‘ಮುಳ್ಳಿನ ಗುಲಾಬಿ’ ಚಿತ್ರದ ಗೀತೆ, ಸತ್ಯಂ ಸಂಗೀತ ನಿರ್ದೇಶನದಲ್ಲಿ- “ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ..."  ಈ ಹಾಡು ಎಸ್.ಜಾನಕಿ ಹಾಡಿರುವ ಆವೃತ್ತಿಯೂ ಇದೆ. ಆದರೆ ನಾವು ನೋಡಲಿರುವುದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದು.

*** *** *** *** *** *** ***

ಅನಂತನಾಗ್ ಆದಮೇಲೆ ಶಂಕರನಾಗ್‌ರನ್ನೂ ನೆನಪಿಸಿಕೊಳ್ಳಬೇಡವೇ? ಅವರೂ ಗುಲಾಬಿಗೆ ಲಾಬಿ ಮಾಡಿದವರೇ!  ‘ಆಟೋ ರಾಜ’ ಚಿತ್ರದಲ್ಲಿ “ನಲಿವ ಗುಲಾಬಿ ಹೂವೇ... ಮುಗಿಲ ಮೇಲೇರಿ ನಲಿವೆ..."

*** *** *** *** *** *** ***

ಶಿವರಂಜನಿ "ರಾಗಕೆ ಸ್ವರವಾಗಿ ಸ್ವರಕೆ ಪದವಾಗಿ ಪದಗಳಿಗೆ ನಾ ಸ್ಫೂರ್ತಿಯಾಗಿ..." ಈ ಗೀತೆ ‘ಹೃದಯಪಲ್ಲವಿ’ ಚಿತ್ರದ್ದು. ವಾಣಿಜಯರಾಂ ಮತ್ತು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಿನ್ನೆಲೆಗಾಯನ.

*** *** *** *** *** *** ***

ಅದೋ ಬಂದ್ರು ನೋಡಿ ಅಣ್ಣಾವ್ರು ‘ಧ್ರುವತಾರೆ’ ಚಿತ್ರದಲ್ಲಿ “ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ..." ಎಂದು ಹಾಡುತ್ತ!

*** *** *** *** *** *** ***

ಈಗಿನ್ನು “ನೀ ಹೀಂಗ ನೋಡಬ್ಯಾಡ ನನ್ನ..." ದ.ರಾ.ಬೇಂದ್ರೆಯವರು ತಮ್ಮದೇ ಮಗು ತೀರಿದಾಗ ಬರೆದರೆನ್ನಲಾದ ಈ ಗೀತೆ ಉಂಟುಮಾಡುವ ವಿಷಾದ ಅಷ್ಟಿಷ್ಟಲ್ಲ. ‘ಪ್ರೇಮತರಂಗ’ ಚಿತ್ರಕ್ಕಾಗಿ ರಾಜಕುಮಾರ್ ಭಾರತಿ ಹಾಡಿದ್ದಾರೆ-

*** *** *** *** *** *** ***

ಖ್ಯಾತ ಕೊಳಲುವಾದಕ ಪ್ರವೀಣ ಗೋಡ್ಖಿಂಡಿ ಅವರು ‘ರಾಗಿಣಿ’ ಆಲ್ಬಮ್‌ನಲ್ಲಿ ‘ನೀ ಹೀಂಗ ನೋಡಬೇಡ ನನ್ನ’ ಹಾಡನ್ನು ಕೊಳಲಿನಲ್ಲಿ ಅದೆಷ್ಟು ಚೆನ್ನಾಗಿ ನುಡಿಸಿದ್ದಾರೆ ಗೊತ್ತೇ? ಇಲ್ಲೊಂದು ಸ್ವಾಮಿಬಾಬಾ ಉಪದೇಶಾಮೃತದ ವಿಡಿಯೋಕ್ಕೆ ಯಾರೋ ಪುಣ್ಯಾತ್ಮರು ಅದನ್ನೇ background music ಆಗಿ ಉಪಯೋಗಿಸಿದ್ದಾರೆ! ಕೇಳಿನೋಡಿ:

*** *** *** *** *** *** ***

ಮುಂದಿನ ಗೀತೆ ‘ನೀ ಬರೆದ ಕಾದಂಬರಿ’ ಚಿತ್ರದಲ್ಲಿ  ವಿಷ್ಣುವರ್ಧನ್ ಮತ್ತು ಭವ್ಯಾ ಅಭಿನಯದಲ್ಲಿ “ನೀ ಮೀಟಿದ ನೆನಪೆಲ್ಲವು ಎದೆ ತುಂಬಿ ಹಾಡಾಗಿದೆ..." ವಿಜಯಾನಂದ್ ಸಂಗೀತ ನಿರ್ದೇಶನದಲ್ಲಿ ಬಹಳ ಚಂದವಾಗಿ ಬಂದಿರುವ ಈ ಗೀತೆಯೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವುದು, ಎಸ್.ಜಾನಕಿ ಹಾಡಿರುವುದು, ಫಾಸ್ಟ್ ಪೇಸ್‌ನಲ್ಲಿ ಹಾಡಿರುವುದು, ಸ್ಲೋ ಪೇಸ್‌ನಲ್ಲಿ ಹಾಡಿರುವುದು ಮುಂತಾಗಿ ವಿವಿಧ ಆವೃತ್ತಿಗಳಿವೆ. ಎಲ್ಲವೂ ಶಿವರಂಜನಿ ರಾಗದವೇ. ಇಲ್ಲಿ ಈಗ ಒಂದು ಆವೃತ್ತಿಯನ್ನು ಆಲಿಸೋಣ.

*** *** *** *** *** *** ***

ಕನ್ನಡ ಚಿತ್ರಗೀತೆಗಳಾಯ್ತಲ್ಲ, ಈಗ ಒಂದು ಜನಪದ ಗೀತೆಯೂ ಬೇಕು! ಬಿ.ಆರ್.ಛಾಯಾ ಹಾಡಿರುವ “ತವರೂರ ಮನೆ ನೋಡ ಬಂದೆ ತಾಯ ನೆನಪಾಗಿ ಕಣ್ಣೀರ ತಂದೆ..."ಯನ್ನು ಕೇಳಿ. ಕೇಳುತ್ತಕೇಳುತ್ತ ನಿಮ್ಮ ಕಣ್ಣುಗಳೂ ಮಂಜಾದರೆ ನಾನು ಜವಾಬ್ದಾರನಲ್ಲ. ಮೊದಲೇ ಹೇಳಿದ್ದೇನೆ ಶಿವರಂಜನಿ ರಾಗ  ಕರುಣಾರಸವನ್ನು ಉಕ್ಕಿ ಹರಿಸುವಂಥದ್ದೆಂದು.

*** *** *** *** *** *** ***

ಕನ್ನಡದ ನಂತರ ಈಗಿನ್ನು ಹಿಂದಿ ಚಿತ್ರಗೀತೆಗಳ ಸಮಯ. ಶಿವರಂಜನಿ ರಾಗ ಆಧಾರಿತ ಚಿತ್ರಗೀತೆಗಳು ಹಿಂದಿಯಲ್ಲಿ ತುಂಬ ಇವೆ. ಇಲ್ಲಿ ನಾಲ್ಕೈದಷ್ಟನ್ನೇ ಆಯ್ದುಕೊಂಡಿದ್ದೇನೆ. ಮೊದಲಿಗೆ, ಕಮಲಹಾಸನ್-ರತಿಅಗ್ನಿಹೋತ್ರಿ ಅಭಿನಯದಲ್ಲಿ ‘ಏಕ್ ದೂಜೇ ಕೇ ಲಿಯೆ’ ಚಿತ್ರಕ್ಕಾಗಿ ಎಸ್.ಪ್.ಬಾಲಸುಬ್ರಹ್ಮಣ್ಯಂ ಮತ್ತು ಲತಾ ಮಂಗೇಶ್ಕರ್ ಹಾಡಿರುವ “ತೇರೆ ಮೇರೆ ಬೀಚ್ ಮೇ ಕೈಸಾ ಹೈ ಯೇ ಬಂಧನ್ ಅಂಜಾನಾ..."

*** *** *** *** *** *** ***

ಮುಂದಿನ ಗೀತೆ ‘ಮೆಹಬೂಬ’ ಚಿತ್ರದ ಅತ್ಯಂತ ಜನಪ್ರಿಯ ಗೀತೆ “ಮೇರೇ ನೈನಾ ಸಾವನ್ ಭಾದೋಂ..." ಇದೂ ಅಷ್ಟೇ, ಲತಾ ಮಂಗೇಶ್ಕರ್ ಹಾಡಿರುವುದೂ ಇದೆ, ಆದರೆ ಇಲ್ಲಿ ಪ್ರಸ್ತುತಪಡಿಸುತ್ತಿರುವುದು ಕಿಶೋರ್ ಕುಮಾರ್ ಹಾಡಿರುವುದು.

*** *** *** *** *** *** ***

ಬಹುಶಃ ಇಷ್ಟೊಂದು ಮಧುರವಾದ ಹಾಡುಗಳನ್ನು,ಚಿತ್ರಗೀತೆಗಳನ್ನು ಕೇಳುತ್ತ ನಿಮಗನಿಸುತ್ತಿರಬಹುದು. ಎಲ್ಲಿ ಹೋದವು ಆ ದಿನಗಳು? ಎಷ್ಟು ಒಳ್ಳೊಳ್ಳೆಯ ಹಾಡುಗಳು. ಈಗಂತೂ ಚಿತ್ರಗೀತೆಗಳೆಂದರೆ ಬಹುಮಟ್ಟಿಗೆ ಕಚಡಾ ಸರಕು. ನೆನಪಲ್ಲುಳಿಯುವಂಥದ್ದು ಒಂದೂ ಇಲ್ಲ. ನಿಜಕ್ಕೂ ಎಲ್ಲಿ ಹೋದವು ಆ ದಿನಗಳು? “ಜಾನೇ ಕಹಾಂ ಗಯೇ ವೋ ದಿನ್..."  ಮುಕೇಶ್ ಹಾಡಿರುವ ‘ಮೇರಾ ನಾಮ್ ಜೋಕರ್’ ಚಿತ್ರದ ಗೀತೆ, ರಾಜ್‌ಕಪೂರ್ ಅಭಿನಯ ಮರಯಲಾರದಂಥದ್ದು!

*** *** *** *** *** *** ***

ಕಿಶೋರ್ ಕುಮಾರ್ ಆಯ್ತು,ಮುಕೇಶ್ ಆಯ್ತು, ಇನ್ನು ರಫಿ ಸಾಬ್ ಹಾಡು ಇಲ್ಲದಿದ್ದರೆ ಹೇಗೆ? ‘ಸೂರಜ್’ ಚಿತ್ರದ ಜನಪ್ರಿಯ ಗೀತೆ ‘ಬಹಾರೋಂ ಫೂಲ್ ಬರಸಾವೋ...’ ಮಹಮ್ಮದ್ ರಫಿ ಕಂಠಸಿರಿಯಲ್ಲಿ.

*** *** *** *** *** *** ***

ಅಂಥದ್ದೇನೂ ಜನಪ್ರಿಯವಲ್ಲದ ಒಂದು ಹಿಂದಿ ಚಿತ್ರಗೀತೆಯನ್ನೂ ನೋಡೋಣ. ಇದು ‘ಜಂಗಲ್ ಲವ್’ಚಿತ್ರದಲ್ಲಿ ಅನುರಾಧಾ ಪೌಡ್ವಾಲ್ “ಕೋಯಲಿಯಾಂ ಗಾತೀ ಹೈಂ..." ಹಾಡು. ಶಿವರಂಜನಿ ರಾಗದಲ್ಲಿದೆ ಎಂಬ ಕಾರಣಕ್ಕೆ ಇಲ್ಲಿ ಸೇರಿಸಿಕೊಂಡಿದ್ದೇನೆ.

*** *** *** *** *** *** ***

ಮುಂದೆ, ಆಮೀರ್ ಖಾನ್ ಅಭಿನಯದ ‘ದಿಲ್’ ಚಿತ್ರದ ಗೀತೆ, ಸುರೇಶ್ ವಾಡ್‌ಕರ್ ಮತ್ತು ಅನುರಾಧಾ ಪೌಡ್ವಾಲ್ ಹಾಡಿರುವ “ಓ ಪ್ರಿಯಾ ಪ್ರಿಯಾ...". ಇದು ತೆಲುಗಿನ ಸೂಪರ್‌ಹಿಟ್ ಚಿತ್ರ ‘ಗೀತಾಂಜಲಿ’ಯ ಹಾಡನ್ನೇ ಹಿಂದಿಗೆ ಭಟ್ಟಿಇಳಿಸಿದ್ದು. ಮೊದಲು ಹಿಂದಿ ಆವೃತ್ತಿ ಕೇಳೋಣ.

*** *** *** *** *** *** ***

ಈಗ ಒರಿಜಿನಲ್ “ಓ ಪ್ರಿಯಾ ಪ್ರಿಯಾ..." ತೆಲುಗಿನದು, ‘ಗೀತಾಂಜಲಿ’ ಚಿತ್ರದಲ್ಲಿ ಇಳಯರಾಜಾ ಸಂಗೀತ ನಿರ್ದೇಶನದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ್ದಾರೆ.

*** *** *** *** *** *** ***

ತೆಲುಗಿನದೇ ಇನ್ನೊಂದು ಗೀತೆ, ‘ತೂರ್ಪು-ಪಡಮರ’ ಚಿತ್ರದ “ಶಿವರಂಜನಿ ನವರಾಗಿಣಿ..." ಹಾಡಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಈಗೀತೆಯನ್ನು ಬರೆದ ಸಿ.ನಾರಾಯಣರೆಡ್ಡಿ ತೆಲುಗು ಚಿತ್ರರಂಗದಲ್ಲಿ ‘ಸಿನಾರೆ’ ಎಂದು ಎಲ್ಲರ ಪ್ರೀತಿಗೆ ಪಾತ್ರರಾದ ಜನಪ್ರಿಯ ಚಿತ್ರಸಾಹಿತಿ. ಈ ಹಾಡಿನಲ್ಲಿ ಶಿವರಂಜನಿ ರಾಗದ ವರ್ಣನೆ ಬಹಳ ಚೆನ್ನಾಗಿದೆ. ರಾಗಗಳ ಹೂಮಾಲೆಯಲ್ಲಿ ಶಿವರಂಜನಿ ಮಲ್ಲಿಗೆ ಹೂವು ಇದ್ದಂತೆ, ಆಕಾಶದಲ್ಲಿ ಕಾಮನಬಿಲ್ಲು ಇದ್ದಂತೆ ಮುಂತಾಗಿ ಶಿವರಂಜನಿ ರಾಗದ ಗುಣಗಾನ ಈ ಹಾಡಿನಲ್ಲಿದೆ.

*** *** *** *** *** *** ***

`ಸಿರಿವೆನ್ನಲ’ ಚಿತ್ರದ ಒಂದು ಸುಂದರ ಗೀತೆ- "ಈ ಗಾಲಿ ಈ ನೇಲ ಈ ಊರು ಸೆಲಯೇರು..." ಸುಹಾಸಿನಿ ಮತ್ತು ಸರ್ವದಮನ ಬ್ಯಾನರ್ಜಿ ಅದ್ಭುತ ಅಭಿನಯ. ಕೆ.ವಿ.ಮಹಾದೇವನ್ ಸಂಗೀತನಿರ್ದೇಶನದಲ್ಲಿ ಎಸ್.ಪ್.ಬಾಲಸುಬ್ರಹ್ಮಣ್ಯಂ ಗಾಯನ

*** *** *** *** *** *** ***

ಅದೆಲ್ಲ ಸರಿ, ಜನಪ್ರಿಯತೆಯಲ್ಲಿ ಇಳಯರಾಜಾರನ್ನೂ ಮೀರಿಸಿದ ಎ.ಅರ್.ರಹಮಾನ್ ಶಿವರಂಜನಿ ರಾಗದಲ್ಲಿ ಯಾವ ಹಾಡನ್ನೂ ನಿರ್ದೇಶಿಸಿಲ್ಲವೆ? ಯಾಕಿಲ್ಲ, ‘ತಿರುಡಾ ತಿರುಡಾ’ ಚಿತ್ರದಲ್ಲಿ ಮನೋ ಮತ್ತು ಸಂಗಡಿಗರು ಹಾಡಿರುವ “ಕಣ್ಣುಂ ಕಣ್ಣುಂ ಕೊಳ್ಳೆಯಡಿತ್ತಾಲ್..." ಹಾಡು ಇದೆಯಲ್ಲ!

*** *** *** *** *** *** ***

ಚಿತ್ರಗೀತೆಗಳು ಸಾಕು. ಈಗ ಇನ್ನೊಂದೆರಡು ಭಕ್ರಿಗೀತೆಗಳನ್ನು ಕೇಳೋಣ. ಕೆ.ಎಸ್.ಚೈತ್ರಾ ಹಾಡಿರುವ ಈ ಮಲಯಾಳಂ ಭಕ್ತಿಗೀತೆ ತುಂಬ ತುಂಬ ಮಧುರವಾಗಿದೆ. “ಅಷ್ಟಮಿ ರೋಹಿಣಿ ನಾಳಿಯೆನ್..." ನಿಮಗೆ ಖಂಡಿತ ಇಷ್ಟವಾಗುತ್ತದೆ, ನಿಮ್ಮ ಕಿವಿಗಳಲ್ಲಿ ಶಿವರಂಜನಿ ರಾಗ ದಿನವಿಡೀ ಗುಂಯ್‌ಗುಡುವಂತೆ ಮಾಡುತ್ತದೆ.

*** *** *** *** *** *** ***

ಮಲಯಾಳಂ ಭಕ್ತಿಗೀತೆಯ ನಂತರ ಒಂದು ಕನ್ನಡದ್ದೂ ಇರಲಿ. ಎಂ.ಎಲ್.ವಸಂತ ಕುಮಾರಿಯವರ ಸುಶ್ರಾವ್ಯ ಕಂಠದಲ್ಲಿ ಪುರಂದರ ದಾಸರ ರಚನೆ “ಯಮನೆಲ್ಲಿ ಕಾಣೆನೆಂದು ಹೇಳಬೇಡ..."

*** *** *** *** *** *** ***

ಶಾಸ್ತ್ರೀಯ ಸಂಗೀತದ ಜತೆಯಲ್ಲಿ ಶಾಸ್ತ್ರೀಯ ನೃತ್ಯವೂ ಬೇಡವೇ? ಶಿವರಂಜನಿ ರಾಗದ ಒಂದು ಮಧುರ ತಿಲ್ಲಾನ, ಅದಕ್ಕೆ ಭರತನಾಟ್ಯದ ಹೆಜ್ಜೆಗಳು:

*** *** *** *** *** *** ***

ಹಾಗೆಯೇ ಒಂದು ಯಕ್ಷಗಾನದ ಪದ್ಯ ಶಿವರಂಜಿನಿ ರಾಗದಲ್ಲಿ- ಪದ್ಯಾಣ ಗೋಪಲಕೃಷ್ಣ ಭಟ್ ಭಾಗವತಿಕೆಯಲ್ಲಿ.

*** *** *** *** *** *** ***

ಪಾಶ್ಚಾತ್ಯ ಸಂಗೀತವಾದ್ಯಗಳನ್ನು ಬಳಸಿ ಆಫ್ರಿಕನ್, ದಕ್ಷಿಣ ಅಮೆರಿಕನ್ ಮತ್ತು ಭಾರತೀಯ ಸಂಗೀತವನ್ನೂ ನುಡಿಸುವ ಪೌಲೊ ಗಿಯಾರೊ, ತನ್ನ ಎಲೆಕ್ಟ್ರಿಕ್ ಗಿಟಾರ್ ವಾದ್ಯವೃಂದದಲ್ಲಿ ಶಿವರಂಜನಿ ರಾಗ ನುಡಿಸಿರುವ ವಿಡಿಯೋ ಇಲ್ಲಿದೆ!

*** *** *** *** *** *** ***

ಮತ್ತೊಂದು ಪ್ರಯೋಗ, ಸ್ಪಾನಿಷ್ ಗಿಟಾರ್ ವಾದ್ಯಸಂಗೀತದಲ್ಲೂ ರಾಗ ಶಿವರಂಜನಿ...

*** *** *** *** *** *** ***

ಉಸ್ತಾದ್ ಫತೇಹ್ ಅಲೀ ಖಾನ್ (ಬಿಸ್ಮಿಲ್ಲಾ ಖಾನ್‌ರ ಮೊಮ್ಮಗ) ಶಹನಾಯ್‌ಯಲ್ಲಿ ನುಡಿಸಿರುವ ರಾಗ ಶಿವರಂಜನಿ. ಶಹನಾಯ್ ಜತೆ ಹಾರ್ಮೋನಿಯಂ ಕೂಡ ಇರುವುದನ್ನು ಗಮನಿಸಿ.

*** *** *** *** *** *** ***

ಅಂತೂ ಶಿವರಂಜನಿ ರಾಗರಸಧಾರೆಯಲ್ಲಿ ಮುಳುಗಿಹೋದೆವಲ್ಲ! ಎಷ್ಟು ಹಾಯೆನಿಸುತ್ತಿದೆ! ಅಂಥ ಸ್ಥಿತಿಯಲ್ಲೇ ಇದೊಂದು ದಿವ್ಯವಾದ ಸಂಗೀತ ತುಣುಕನ್ನು ಆಲಿಸುವಾ. ಪ್ರಸಾದ್ ಭಂಡಾರ್ಕರ್  ಎಂಬ ಯುವಪ್ರತಿಭೆ, ಹಿಂದುಸ್ಥಾನಿ ಶೈಲಿಯಲ್ಲಿ ಬಾನ್ಸುರಿಯಲ್ಲಿ ನುಡಿಸಿರುವ ಶಿವರಂಜಿನಿ ರಾಗದ ಒಂದು ಧುನ್. ಇದಕ್ಕೆ ಯೂಟ್ಯೂಬ್‌‌ನಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು views count ಬಂದಿದೆಯೆಂದರೆ ಇದು ಎಷ್ಟು ಚೆನ್ನಾಗಿರಬಹುದು ಊಹಿಸಿ!

*** *** *** *** *** *** ***

ಇಲ್ಲಿಗೆ ಶಿವರಂಜನಿ ರಾಗರಸಾಯನ ಮುಗಿಯಿತು. ನಿಮ್ಮ ಪ್ರತಿಕ್ರಿಯೆ ತಿಳಿಸುತ್ತೀರಲ್ಲ?

shivaranjini-serial.jpg


You can follow any responses to this entry through the RSS 2.0 feed. You can skip to the end and leave a response. Pinging is currently not allowed.