ಪದ-ಶ್ರಾವ್ಯ

ಈಗ ಆಡಿಯೋ ಟಚ್!

7
Jan 2012
Talkativeness and Gender Difference
Posted in DefaultTag by sjoshi at 3:51 pm

ದಿನಾಂಕ  8 ಜನವರಿ 2012ರ ಸಂಚಿಕೆ...

ವಾಚಾಳಿತನ ಮತ್ತು ಲಿಂಗಭೇದ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ವಾಗರ್ಥಾವಿವ ಸಂಪ್ರಕ್ತೌ ವಾಗರ್ಥ ಪ್ರತಿಪತ್ತಯೇ | ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ ||

ಕವಿರತ್ನ ಕಾಳಿದಾಸ ಬರೆದ ರಘುವಂಶ ಮಹಾಕಾವ್ಯದ ಮೊಟ್ಟಮೊದಲ ಶ್ಲೋಕ. ಇದರಲ್ಲಿ ಕಾಳಿದಾಸ ಇನ್‌ಡೈರೆಕ್ಟ್ ಆಗಿ ಏನನ್ನೋ ಸೂಚಿಸಿದ್ದಾನೆಯೇ? ‘ವಾಕ್’ ಎಂದರೆ ಮಾತನ್ನು ಪಾರ್ವತಿಗೂ, ಅರ್ಥವನ್ನು ಪರಮೇಶ್ವರನಿಗೂ ಹೋಲಿಸಿರುವುದನ್ನು ನೋಡಿದರೆ- ಮಾತು ಏನಿದ್ದರೂ ಪಾರ್ವತಿಯದೇ, ಅದನ್ನು ಅರ್ಥ ಮಾಡಿಕೊಂಡು ಬದುಕಬೇಕಾದವನು ಬಡಪಾಯಿ ಈಶ್ವರ ಎನ್ನುವುದು ಕವಿಯ ಇಂಗಿತವೇ? ಹೆಂಗಸರು ಗಂಡಸರಿಗಿಂತ ಹೆಚ್ಚು ವಾಚಾಳಿಗಳು ಎಂಬ ಲೋಕರೂಢಿಯ ಮಾತಿಗೆ ಕಾಳಿದಾಸ ಕೂಡ ಅನುಮೋದನೆಯ ಮೊಹರು ಒತ್ತಿದ್ದಾನೆಯೇ? ಶತಮಾನಗಳಷ್ಟು ಹಿಂದಿನ ಕಾಲದಿಂದಲೂ ಇದೇ ಪರಿಸ್ಥಿತಿ ಮುಂದುವರಿದಿದೆ ಎಂದು ನಾವು ತಿಳಿದುಕೊಳ್ಳಬೇಕೇ?

ಹಾಗೇನಿಲ್ಲ. ಒಂದನೆಯದಾಗಿ, ಕಾಳಿದಾಸನ ಶ್ಲೋಕಕ್ಕೆ ಈರೀತಿಯ ವ್ಯಾಖ್ಯಾನವನ್ನು ಯಾವ ವಿದ್ವಾಂಸರಾಗಲೀ ವಿಮರ್ಶಕರಾಗಲೀ ಕೊಟ್ಟಂತಿಲ್ಲ. ನಾನೇ ಈ ಲೇಖನದ ಪೀಠಿಕೆಗಾಗಿಯಷ್ಟೇ ಹೀಗೊಂದು ತರ್ಕವನ್ನು ರೂಪಿಸಿದ್ದು. ಎರಡನೆಯದಾಗಿ, ಹೆಂಗಸರು ಗಂಡಸರಿಗಿಂತ ಹೆಚ್ಚು ವಾಚಾಳಿಗಳು ಎನ್ನುವುದೂ ಬರಿ ಲೋಕರೂಢಿಯ ಮಾತೇ ಹೊರತು ಅದಕ್ಕೆ ವೈಜ್ಞಾನಿಕ ತಳಹದಿಯೇನಿಲ್ಲ. ಆದರೂ ಈಬಗ್ಗೆ ಚರ್ಚೆಯಾದಾಗಲೆಲ್ಲ ಒಬ್ಬೊಬ್ಬರೂ ಒಂದೊಂದು ರೀತಿಯ ವಾದ ಮಂಡಿಸಿ ವಾಚಾಳಿತನದಲ್ಲಿ ಲಿಂಗಭೇದ ಇರುವುದನ್ನು ಪ್ರತಿಪಾದಿಸುತ್ತಾರೆ. ಮಾತಿನ ಚಟ ಹೆಂಗಸರಿಗೆ ಹೆಚ್ಚು ಎಂದು ಬಿಂಬಿಸುವ ಜೋಕ್‌ಗಳು ವ್ಯಂಗ್ಯಚಿತ್ರಗಳು ವಕ್ರತುಂಡೋಕ್ತಿಗಳು ಹೆಚ್ಚು ಪ್ರಸಿದ್ಧವಾಗಿರುವುದೂ ಇದಕ್ಕೊಂದು ಕಾರಣ.

talkativegender.jpg

ಒಬ್ಬ ಹೆಂಗಸು ಸರಾಸರಿಯಾಗಿ ಒಂದು ದಿನಕ್ಕೆ 20,000 ಪದಗಳಷ್ಟು ಮಾತಾಡುತ್ತಾಳೆ. ಒಬ್ಬ ಗಂಡಸು ದಿನಕ್ಕೆ 7,000 ಪದಗಳಷ್ಟು ಮಾತಾಡುತ್ತಾನೆ - ಇಂಥದೊಂದು ಅಂಕಿ‌ಅಂಶವನ್ನು ಯಾರೋ ಮೆಟ್ರಿಕ್‌ಪಾಸ್ ಮನಃಶಾಸ್ತ್ರಜ್ಞನೊಬ್ಬ ಯಾವುದೋ ಮ್ಯಾಗಜಿನ್‌ನಲ್ಲೋ, ಟಿ.ವಿ ಸಂದರ್ಶನದಲ್ಲೋ ತೇಲಿಬಿಟ್ಟಿದ್ದಾನೆ. ಅದನ್ನೇ ಆಧರಿಸಿ ಈಗ ಇದ್ದಬಿದ್ದ ಪಂಡಿತರೆಲ್ಲ ವಾಚಾಳಿತನದಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ಎಂಬ ತಂತಮ್ಮ ವಾದವನ್ನು ಪುಷ್ಟೀಕರಿಸುತ್ತಿದ್ದಾರೆ. ಕೆಲವರು ಈ ಸಂಖ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತಾರೆ: ಹೆಂಗಸು ದಿನಕ್ಕೆ ಸರಾಸರಿ 30,000 ಪದಗಳನ್ನು ಮಾತಾಡಿದರೆ ಗಂಡಸು ಸರಾಸರಿ 12,000 ಪದಗಳಷ್ಟು ಮಾತಾಡುತ್ತಾನೆ ಎನ್ನುತ್ತಾರೆ. ಲೌನ್ ಬ್ರಿಜೆಂಡೈನ್ ಎಂಬ ಅಮೆರಿಕನ್ ಮನಃಶಾಸ್ತ್ರಜ್ಞೆ 2006ರಲ್ಲಿ ಪ್ರಕಟಿಸಿದ ‘ದಿ ಫಿಮೇಲ್ ಬ್ರೈನ್’ ಪುಸ್ತಕದಲ್ಲಿ ಹೀಗೆ ಉತ್ಪ್ರೇಕ್ಷಿತ ಅಂಕಿ‌ಅಂಶಗಳನ್ನು ಬಳಸಿದ್ದಳು. ಆಮೇಲೆ ವಿಜ್ಞಾನಕ್ಷೇತ್ರದ ವಿಶ್ವಸನೀಯ ಪತ್ರಿಕೆ ‘ನೇಚರ್’ನಲ್ಲಿ ಆ ಪುಸ್ತಕದ ವಿಮರ್ಶೆಯಾದಾಗ ಬ್ರಿಜೆಂಡೈನ್‌ಳ ಅಂಕಿ‌ಅಂಶಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸಲಾಯಿತು. ತಾನು ಅವರಿವರಿಂದ ಕೇಳಿದ್ದನ್ನೇ ನಂಬಿ ಆ ಅಂಕಿ‌ಅಂಶಗಳನ್ನು ಬರೆದಿದ್ದೆ, ಪುಸ್ತಕದ ಮುಂದಿನ ಆವೃತ್ತಿಗಳಲ್ಲಿ ಅದನ್ನು ಸರಿಪಡಿಸುತ್ತೇನೆ ಎಂದು ಆಕೆ ಒಪ್ಪಿಕೊಂಡಳು.

ಹೆಂಗಸರಿಗೆ ವಾಚಾಳಿತನ ಹೆಚ್ಚು ಎಂದು ವಾದ ಮಾಡುವವರು ಮಂಡಿಸುವ ಕೆಲವು ಥಿಯರಿಗಳು ಸ್ವಾರಸ್ಯಕರವಾಗಿರುತ್ತವೆ. ಅಂಥ ಒಂದು ಥಿಯರಿ ಹೀಗಿದೆ- ಆದಿಮಾನವ  ಗುಹೆಗಳಲ್ಲಿ ವಾಸಿಸುತ್ತಿದ್ದಾಗ ಗಂಡಸರು ಬೇಟೆಯಾಡಿ ಮಾಂಸ ಸಂಗ್ರಹಿಸಲು ಹೊರಗೆ ಹೋಗುತ್ತಿದ್ದರು. ಹೆಂಗಸರೆಲ್ಲ ಗುಹೆಗಳಲ್ಲೇ ಇರುತ್ತಿದ್ದರು ಅಥವಾ ಹತ್ತಿರದಲ್ಲೇ ಹಣ್ಣುಹಂಪಲುಗಳ ಸಂಗ್ರಹಕ್ಕೆ ಹೊರಡುತ್ತಿದ್ದರು. ಬೇಟೆಯ ವೇಳೆ ಪ್ರಾಣಿಗಾಗಿ ಗಂಟೆಗಟ್ಟಲೆ ಸದ್ದಿಲ್ಲದಂತೆ ನಿಂತು ಕಾಯಬೇಕಲ್ಲ? ಅದೇ ರೂಢಿ ಆಗಿ ಗಂಡಸರ ಮಾತು ಕಡಿಮೆ ಆಯ್ತು. ಹೆಂಗಸರಿಗೆ ಆರೀತಿಯ ಮೌನ ಅನಿವಾರ್ಯವಾಗಲಿಲ್ಲ. ಹಣ್ಣುಹಂಪಲುಗಳನ್ನು ಹೆಕ್ಕುವಾಗ ಅವರೆಲ್ಲ ಹರಟೆ ಹೊಡೆದರು. ಮಕ್ಕಳು ಮರಿಗಳ ಲಾಲನೆ ಪಾಲನೆ ವಿಚಾರ ಮಾತಾಡಿದರು. ‘ಅವಳ ಗಂಡ ಹಾಗೆ ಇವಳ ಗಂಡ ಹೀಗೆ ನಿನ್ನ ಗಂಡ ಹೇಗೆ?’ ಮುಂತಾಗಿ ಬಾವಿಕಟ್ಟೆ ಪುರಾಣಗಳನ್ನು ಪರಸ್ಪರ ವಿನಿಮಯಿಸಿಕೊಂಡರು. ಕಾಲಕ್ರಮೇಣ ಹೆಂಗಸರೆಲ್ಲ ಮಾತಿನಮಲ್ಲಿಯರಾದರು.

ಇರಲೂಬಹುದು ಅನಿಸುತ್ತದೆ ಇದನ್ನೋದುವಾಗ. ಆದರೆ ವಿಜ್ಞಾನಿಗಳು, ಮಾನವಶಾಸ್ತ್ರಜ್ಞರು ಈ ಥಿಯರಿಗೆ ಅಷ್ಟೇನೂ ಸೊಪ್ಪು ಹಾಕುವುದಿಲ್ಲ. ಬೇಟೆಯಾಡುವ ಮತ್ತು ಹಣ್ಣುಹಂಪಲು ಸಂಗ್ರಹಿಸುವ ಕೆಲಸವನ್ನು ಕ್ರಮವಾಗಿ ಗಂಡಸರು ಮತ್ತು ಹೆಂಗಸರೇ ಮಾಡುತ್ತಿದ್ದದ್ದು ಅಂತೇನಿಲ್ಲ. ಎಲ್ಲವನ್ನೂ ಎಲ್ಲರೂ ಮಾಡುತ್ತಿದ್ದರು. ಅಥವಾ ಪ್ರತ್ಯೇಕವಾಗಿ ಮಾಡುತ್ತಿದ್ದರೂ ಅದು ಸ್ವಲ್ಪ ಅವಧಿಗಷ್ಟೇ. ಆಹಾರ ಸೇವನೆ, ವಿರಾಮದ ವೇಳೆಯನ್ನೆಲ್ಲ ಎಲ್ಲರೂ ಒಟ್ಟಾಗಿಯೇ ಕಳೆಯುತ್ತಿದ್ದರು. ಹಾಗಾಗಿ ಹೆಂಗಸರಿಗಷ್ಟೇ ಮಾತಿನ ಕಲೆ ಕರಗತಗೊಂಡಿತು ಅನ್ನೋದು ತಪ್ಪು. ಆ ಮಿಥ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಸುಮಾರಷ್ಟು ಸಂಶೋಧನಾ ಪ್ರಬಂಧಗಳು, ಲೇಖನಗಳು, ಸಾಕ್ಷ್ಯಚಿತ್ರಗಳು ಬಂದವು. ಅಮೆರಿಕದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸೈಕಾಲಜಿಸ್ಟ್ ಆಗಿರುವ ಡಾ. ಜೆನೆಟ್ ಹೈಡ್ ಎಂಬಾಕೆ ‘ದಿ ಜೆಂಡರ್ ಸಿಮಿಲಾರಿಟೀಸ್ ಹೈಪೊಥಿಸಿಸ್’ ಎಂಬ ಪ್ರೌಢಪ್ರಬಂಧ ಮಂಡಿಸಿ ತಾನು ಕೈಗೊಂಡ 47 ಬೇರೆಬೇರೆ ಸಮೀಕ್ಷೆಗಳಿಂದ ಸಂಗ್ರಹಿಸಿದ ಫಲಿತಾಂಶಗಳನ್ನು ಕ್ರೋಡೀಕರಿಸಿದಳು. ಅವಳ ಅಂಕಿ‌ಅಂಶಗಳಿಂದ ತಿಳಿದು ಬಂದದ್ದೆಂದರೆ: ವಾಚಾಳಿತನದಲ್ಲಿ ಹೆಂಗಸರಿಗೂ ಗಂಡಸರಿಗೂ ಇರುವ ಅಂತರ 0.11 ಪ್ರತಿಶತ ಅಷ್ಟೇ. ಅದು ತೀರಾ ನಗಣ್ಯ ವ್ಯತ್ಯಾಸ. ಆದ್ದರಿಂದ ವ್ಯಕ್ತಿಯ ಲಿಂಗಕ್ಕೂ ವಾಚಾಳಿತನಕ್ಕೂ ಸಂಬಂಧವಿಲ್ಲ.

2007ರಲ್ಲಿ ಇನ್ನೂ ಒಂದು ಸಂಶೋಧನೆಯ ಫಲಿತಾಂಶ ಹೊರಬಂತು. 17ರಿಂದ 30 ವಯಸ್ಸಿನ ವಿದ್ಯಾರ್ಥಿಗಳ ಆರು ಪ್ರತ್ಯೇಕ ಗುಂಪುಗಳನ್ನು- ಟೆಕ್ಸಾಸ್‌ನಲ್ಲಿ ಐದು ಮತ್ತು ಮೆಕ್ಸಿಕೋದಲ್ಲಿ ಒಂದು- ಸಮೀಕ್ಷಾರ್ಥಿಗಳಾಗಿ ಗುರುತಿಸಲಾಯ್ತು. ಒಟ್ಟು 396 ವಿದ್ಯಾರ್ಥಿಗಳು. 210 ಹುಡುಗಿಯರು, 186 ಹುಡುಗರು. ರೇಡಿಯೊ ಕಾಲರ್ ಅಳವಡಿಸಿದಂತೆ ಅವರ ದೇಹಕ್ಕಂಟಿಸಿದ ಟೇಪ್‌ರೆಕಾರ್ಡರ್‌ಗಳಿಂದ ಅವರ ದೈನಂದಿನ ಚಟುವಟಿಕೆಗಳ ಸಮಯದ ಮಾತುಕತೆಯನ್ನು ಧ್ವನಿಮುದ್ರಿಸಿಕೊಳ್ಳಲಾಯ್ತು. ಇದನ್ನು ಒಂದು ವಾರದ ಅವಧಿಯಲ್ಲಿ ಮಾಡಲಾಯ್ತು. ಫಲಿತಾಂಶಗಳನ್ನು ತಾಳೆ ನೋಡಿದಾಗ ಹುಡುಗಿಯರು ದಿನಕ್ಕೆ ಸರಾಸರಿ 16,215 ಪದಗಳನ್ನಾಡಿದ್ದರೆ ಹುಡುಗರ ಸಂಖ್ಯೆ 15,669 ಪದಗಳು. ಅತಿಹೆಚ್ಚು ಮಾತಾಡಿದ್ದ ಮತ್ತು ಅತಿಕಡಿಮೆ ಮಾತಾಡಿದ್ದ ಹುಡುಗರ ಪದಗಳ ಸಂಖ್ಯೆಗೆ ಹೋಲಿಸಿದರೆ ಆ 500 ಚಿಲ್ರೆ ಪದಗಳ ವ್ಯತ್ಯಾಸ ನಗಣ್ಯ. ಅಷ್ಟೇ ಅಲ್ಲ ಅತ್ಯಂತ ವಾಚಾಳಿ ವಿದ್ಯಾರ್ಥಿ ಒಬ್ಬ ಹುಡುಗನೇ ಆಗಿದ್ದ, 47,000 ಪದಗಳ ಟ್ಯಾಲಿಯೊಂದಿಗೆ!

ಇಷ್ಟಾದರೂ ಲೋಕರೂಢಿಯ ಮಾತು ಹಾಗೆಯೇ ಉಳಿದಿದೆ. ಹೆಂಗಸರೇ ಹೆಚ್ಚು ವಾಚಾಳಿಗಳು ಎನ್ನುವುದೇ ದೃಢವಾಗಿಬಿಟ್ಟಿದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಹೆಂಗಸರೇ ಹೇಳುವ ಒಂದು ಪ್ರಬಲ ಕಾರಣವೆಂದರೆ “ಏನು ಮಾಡೋಣ? ನಾವು ಒಮ್ಮೆ ಹೇಳಿದರೆ ಈ ಗಂಡಸರಿಗೆ ಅರ್ಥವಾಗೋದೇ ಇಲ್ಲ!” ಅದನ್ನೇ ಗಂಡಸರು ಈರೀತಿ ಹೇಳುತ್ತಾರೆ- ಹೆಂಗಸರ ಮಾತುಗಳಲ್ಲಿ ಅರ್ಥವಿಲ್ಲದ್ದು, ಒಂದಕ್ಕೊಂದು ಸಂಬಂಧವಿಲ್ಲದ್ದೇ ಹೆಚ್ಚು. ಮನಸ್ಸಲ್ಲಿ ಏನೋ ಇರುತ್ತದೆ, ಮಾತಾಡುವುದು ಬೇರೆ ಇನ್ನೇನೋ! ಇನ್ನೊಂದು ಪಂಗಡದ ವಾದ- ನಾವು ಗಂಡಸರು ಮಾತಾಡುವ ಮೊದಲು ತಲೆ ಉಪಯೋಗಿಸುತ್ತೇವೆ ಹಾಗಾಗಿ ಕಡಿಮೆ ಮಾತು ಸಾಕಾಗುತ್ತದೆ. ಹೆಂಗಸರು ತಲೆ ಉಪಯೋಗಿಸುವುದಿರಲಿ ಅಂಥದೊಂದು ಅಂಗ ಇದೆ ಎನ್ನುವುದನ್ನೇ ಮರೆಯುತ್ತಾರೆ!

ಹೆಂಗಸರು ಮತ್ತು ಗಂಡಸರು ಒಟ್ಟಿಗೆ ಇರುವಾಗ (ಸೋಶಿಯಲ್ ಗ್ಯಾದರಿಂಗ್‌ಗಳಲ್ಲಿ, ಹಾಗೆಯೇ ಆಫೀಸ್ ಮೀಟಿಂಗ್‌ಗಳಲ್ಲಿ) ಗಂಡಸರೇ ಹೆಚ್ಚು ಮಾತಾಡುತ್ತಾರೆ ಎನ್ನುವ ವಾದವೂ ಇದೆ. ಮಾತಿನ ಪ್ರಮಾಣ ಅಲ್ಲದಿದ್ದರೂ ಮಾತಿನ ಸರಕಿನಲ್ಲಿ ವ್ಯತ್ಯಾಸ ಖಂಡಿತ ಇರುತ್ತದೆ. ಮದುವೆ-ಮುಂಜಿ ಮತ್ತಿತರ ಸಮಾರಂಭಗಳಲ್ಲಿ ಸೇರಿದಾಗ ಗಂಡಸರು ಲೋಕಾಭಿರಾಮ ಮಾತಾಡುತ್ತಾರೆ- ಹಣದುಬ್ಬರ, ರಿಯಲ್‌ಎಸ್ಟೇಟ್ ಬೆಲೆ, ಶೇರುಪೇಟೆ, ನಿರುದ್ಯೋಗ, ಭ್ರಷ್ಟಾಚಾರ ಮುಂತಾಗಿ ಅಮೂರ್ತ ವಿಚಾರಗಳ ಬಗ್ಗೆಯೇ ಗಂಡಸರ ಮಾತು. ಅಣ್ಣಾ ಹಜಾರೆ, ತೆಂಡುಲ್ಕರ್‌ರಂಥ ವ್ಯಕ್ತಿಗಳ ಪ್ರಸ್ತಾಪವೂ ಅಲ್ಲಿ ಬರಬಹುದಾದರೂ ಅದು ನಿರಶನ ಸತ್ಯಾಗ್ರಹ, ಸೆಂಚುರಿಗಾಗಿ ಪರದಾಟದಂಥ ಅಮೂರ್ತ ವಿಷಯಕ್ಕೆ ಸಂಬಂಧಿಸಿದಂತೆಯೇ. ಆದರೆ ಹೆಂಗಸರು ಹಾಗಲ್ಲ. ಅವರ ಮಾತು ಯಾವಾಗಲೂ ಜನರ ಬಗ್ಗೆಯೇ (ತಾನು, ತನ್ನವರು, ತನಗಾಗದವರು ವಗೈರಾ). ಅಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು. ಮತ್ತೆ, ಟಿ.ವಿ ಧಾರಾವಾಹಿಗಳಲ್ಲಿ ತೋರಿಸುವಂತೆ ಮನೆಹಾಳು ಮಾಡುವ, ಸಂಸಾರ ಮುರಿದು ಬೀಳಿಸುವ ಮಾತುಗಳೂ ಇರುತ್ತವೆನ್ನಿ. ಒಟ್ಟಿನಲ್ಲಿ ಮಾತಿನ ‘ಕ್ವಾಲಿಟಿ’ಯು ಸ್ವಲ್ಪಮಟ್ಟಿಗಾದರೂ ಮಾತಿನ ‘ಕ್ವಾಂಟಿಟಿ’ಯನ್ನು ನಿರ್ಧರಿಸುತ್ತದೆಂಬ ಅಂಶವನ್ನೂ ಅಲ್ಲಗಳೆಯುವಂತಿಲ್ಲ. ಇನ್ನೂ ಒಂದೆಂದರೆ ಪ್ರತಿಯೊಬ್ಬರೂ ತಂತಮ್ಮ ವೈಯಕ್ತಿಕ ಅನುಭವದಿಂದ ಹೇಳುತ್ತಾರೆ. ವೈಯಕ್ತಿಕ ಅನುಭವಗಳು ಒಟ್ಟು ಸಮುದಾಯದ, ಒಟ್ಟು ಜನಸಂಖ್ಯೆಯ ಸರಾಸರಿ ಮಟ್ಟದಲ್ಲಿ ಇರುತ್ತವೆಂದು ನಿರೀಕ್ಷಿಸಲೂಬಾರದು, ಅಪೇಕ್ಷಿಸಲೂಬಾರದು.

ಅದೆಲ್ಲ ಏನೇ ಇರಲಿ, ಯಾರ ಮಾತು ಹೆಚ್ಚು ಅಂತಾಗಲೀ ಯಾರದು ಹೆಚ್ಚು ಮಾತು ಅಂತಾಗಲೀ ಜಗಳವೇಕೆ? ಮಾತು ಬಲ್ಲವನಿ(ಳಿ)ಗೆ ಜಗಳವಿಲ್ಲ. ಸಂಕ್ರಾಂತಿ ಬೇರೆ ಬರುತ್ತಿದೆ, ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತುಗಳನ್ನೇ ಆಡುವುದನ್ನು ಅಭ್ಯಾಸಮಾಡಿಕೊಳ್ಳೋಣ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.