ಪದ-ಶ್ರಾವ್ಯ

ಈಗ ಆಡಿಯೋ ಟಚ್!

12
Nov 2011
Towering Tower Clocks
Posted in DefaultTag by sjoshi at 7:56 am

ದಿನಾಂಕ  13 ನವೆಂಬರ್ 2011ರ ಸಂಚಿಕೆ...

ಗೌರವಾರ್ಹ ಗಡಿಯಾರಗಳು

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ಅದೊಂದು ಹಳೇಕಾಲದ ಚರ್ಚು. ನೂರು ವರ್ಷಗಳಿಗೂ ಹಳೆಯದೇನೊ. ಆ ಚರ್ಚಿನ ಪಾದ್ರಿಗೆ ವಯಸ್ಸಾಗುತ್ತ ಬಂದದ್ದರಿಂದ ಹೊಸ ತರುಣ ಪಾದ್ರಿಯೊಬ್ಬರನ್ನು ನೇಮಿಸಲಾಯ್ತು. ಅಧಿಕಾರ ವಹಿಸಿಕೊಂಡ ಹೊಸ ಪಾದ್ರಿ ಮೊದಲು ಚರ್ಚಿನ ಜೀರ್ಣೋದ್ಧಾರ ಕೈಗೊಂಡರು. ಗೋಡೆಗಳಿಗೆ ಸುಣ್ಣಬಣ್ಣ ಬಳಿಯಲಾಯ್ತು. ನೆಲದ ಹಾಸು ಹೊಸದಾಯ್ತು. ಚಾವಣಿಯ ಮರಮಟ್ಟುಗಳನ್ನೂ ನವೀಕರಿಸಲಾಯ್ತು. ಚರ್ಚಿನ ಗೋಪುರದಲ್ಲೊಂದು ದೊಡ್ಡ ಗಡಿಯಾರ ಇತ್ತು. ಹಳೇ ಕಾಲದ್ದು, ಶಿಥಿಲಗೊಂಡಿತ್ತು. ಆದರೂ ಅದರ ಟಿಕ್ ಟಿಕ್ ಶಬ್ದ ಸ್ಪಷ್ಟವಾಗಿ ಕೇಳಿಸುವಂತಿತ್ತು. ಗಂಟೆಗೊಂದಾವರ್ತಿ ಘಂಟಾನಾದವೂ ಸುಶ್ರಾವ್ಯವಾಗಿಯೇ ಇತ್ತು. ಪಾದ್ರಿ ಅದನ್ನೂ ಬದಲಾಯಿಸಲು ನಿರ್ಧರಿಸಿದರು. ಹೊಸ ಎಲೆಕ್ಟ್ರಾನಿಕ್ ಗಡಿಯಾರ ಬಂತು. ಆದರೆ ಊರಿನ ಹಳಬರಿಗೆಲ್ಲ ಹಳೆ ಗಡಿಯಾರದೊಂದಿಗೆ ಒಂಥರದ ಭಾವುಕ ಬೆಸುಗೆಯಿತ್ತು ಎನ್ನುವುದು ಪಾದ್ರಿಗೂ ಗೊತ್ತಿದ್ದದ್ದರಿಂದ ಕೆಲ ದಿನಗಳವರೆಗೆ ಎರಡೂ ಗಡಿಯಾರಗಳನ್ನು ಒಂದರ ಪಕ್ಕ ಒಂದು ಇಡುವ ಏರ್ಪಾಡಾಯ್ತು.

ಹೊಸ ಗಡಿಯಾರ ಬಿಸಿ ರಕ್ತದ ತರುಣನಂತೆ ಹಮ್ಮುಬಿಮ್ಮಿನಿಂದ ಟಿಕ್ ಟಿಕ್ ಟಿಕ್ಕಿಸುತ್ತಿದ್ದರೆ ಹಳೇ ಗಡಿಯಾರ ತನ್ನ ಸವೆದ ಭಾಗಗಳ ಕೀರಲು ದನಿಯೊಂದಿಗೆ ಏದುಸಿರು ಬಿಡುತ್ತ ಹೆಜ್ಜೆಯಿಕ್ಕುತ್ತಿತ್ತು. ಮೊದಮೊದಲು ಹೊಸ ಗಡಿಯಾರ ಜಂಭದಿಂದಲೋ ಏನೋ ಹಳೆ ಗಡಿಯಾರದ ಕಡೆ ಮುಖ ತಿರುಗಿಸಿಯೂ ನೋಡುತ್ತಿರಲಿಲ್ಲ. ಮಾತೂ ಆಡುತ್ತಿರಲಿಲ್ಲ. ಆದರೆ ಕ್ರಮೇಣ ಅದಕ್ಕೂ ಬೋರೆನ್ನಿಸತೊಡಗಿತು, ಉಭಯಕುಶಲೋಪರಿ ಮಾತಿಗೆ ತೊಡಗಿತು. ಇಲ್ಲಿ ಎಷ್ಟು ವರ್ಷಗಳಿಂದ ಇದ್ದೀಯಾ? ಎಂದು ಹಳೆ ಗಡಿಯಾರವನ್ನು ಕೇಳಿತು. ಸರಿಸುಮಾರು ನೂರು ವರ್ಷಗಳಿಂದ ಎಂದಿತು ಹ.ಗ. ಅದನ್ನು ಕೇಳಿ ಹೊ.ಗಕ್ಕೆ ಅಚ್ಚರಿ. ಜತೆಯಲ್ಲೇ ಚಿಂತೆ. ಅಬ್ಬಾ! ನೂರು ವರ್ಷ ಪೂರೈಸಲು ತಾನು ಅದೆಷ್ಟು ಟಿಕ್‌ಗಳನ್ನು ಮಾಡಬೇಕು ಎಂದು ಲೆಕ್ಕಹಾಕತೊಡಗಿತು. ನಿಮಿಷಕ್ಕೆ 60. ಗಂಟೆಗೆ 3,600. ದಿನಕ್ಕೆ 86,400. ತಿಂಗಳಿಗೆ 25,92,000. ಒಂದು ವರ್ಷಕ್ಕೆ... ನೂರು ವರ್ಷಗಳಿಗೆ... ಓ ದೇವಾ!

ಚಿಂತೆಯಲ್ಲಿ ಹೊ.ಗ ಮುಖ ಸಣ್ಣದಾಯ್ತು. ಚಲನೆ ನಿಂತೇಹೋಯ್ತು. ಅದನ್ನು ಗಮನಿಸಿದ ಹ.ಗ, ಯಾಕಪ್ಪಾ ಏನಾಯ್ತು? ಯಾಕೆ ನಿಂತುಬಿಟ್ಟೆ? ಎಂದು ಕೇಳಿತು. ಗಾಬರಿಯಲ್ಲೇ ಇದ್ದ ಹೊ.ಗ ‘ಏನಿಲ್ಲ, ನೂರು ವರ್ಷಗಳೆಂದರೆ ಎಷ್ಟು ಟಿಕ್‌ಗಳು ಅಂತ ಲೆಕ್ಕ ಹಾಕ್ತಿದ್ದೆ. ನೀನು ನೂರು ವರ್ಷಗಳಲ್ಲಿ ಕೋಟಿಗಟ್ಟಲೆ ಟಿಕ್ಕಿಸಿದ್ದೀ. ನನ್ನಿಂದ ಆಗೋಲ್ಲಪ್ಪ. ಅಷ್ಟು ದೊಡ್ಡ ಸಂಖ್ಯೆ ಎಣಿಸಿಕೊಂಡರೇ ನನ್ನ ಮೈ ನಡುಗುತ್ತೆ. ನನ್ನಿಂದ ಇನ್ನು ಒಂದು ಸೆಕೆಂಡು ಟಿಕ್ಕಿಸುವುದೂ ಆಗದು’ ಎಂದು ಕೈಚೆಲ್ಲಿ ಕೂತಿತು. ಅದರ ಅವಸ್ಥೆ ನೋಡಲಾರದೆ ಹ.ಗ ಕೇಳಿತು- ‘ಸರಿ, ಅಷ್ಟು ದೊಡ್ಡ ಸಂಖ್ಯೆ ಬಗ್ಗೆ ಯೋಚಿಸಬೇಡ. ನೀನು ಸದ್ಯಕ್ಕೆ ಒಂದು ಸೆಕೆಂಡ್ ಟಿಕ್ ಮಾಡಬಲ್ಲೆಯಾ ಹೇಳು?’ ಹೊ.ಗ ಮುಖ ಅರಳಿತು. ಓಹೊ ಅದಕ್ಕೇನಂತೆ ತುಂಬಾ ಸುಲಭ ಎಂದು ಬೀಗಿತು. ಹಾಗಿದ್ದರೆ ಅದನ್ನೇ ಮಾಡು ಎಂದಿತು ಹ.ಗ. ಮುಂದುವರೆಸುತ್ತ “ಒಮ್ಮೆಗೆ ಒಂದು ಸೆಕೆಂಡಿನ ಬಗ್ಗೆ ಮಾತ್ರ ಯೋಚಿಸು. ವರ್ಷಗಳ ಉಸಾಬರಿಗೆ ಹೋಗಬೇಡ. ಸಲೀಸಾಗಿ ನಡೆಯುತ್ತಿ, ನೋಡ್ತಿರು” ಎಂದು ಕಿವಿಮಾತನ್ನೂ ಸೇರಿಸಿತು. ಹೊಸ ಗಡಿಯಾರ ಇದೀಗ ತುಂಬಾ ಖುಷಿಯಿಂದ, ಆತ್ಮವಿಶ್ವಾಸದಿಂದ ನಡಿಗೆ ಆರಂಭಿಸಿತು.

ನಮ್ಮ ಜೀವನದಲ್ಲಾದರೂ ಅಷ್ಟೇ. ಈಗಿನ ಕ್ಷಣವನ್ನು ಯೋಚಿಸಿ ಅನುಭವಿಸಿ ಆನಂದಿಸಬೇಕು. ಮುಂದೆ ಬದುಕಿನಲ್ಲಿ ಪರ್ವತದಷ್ಟು ಕಷ್ಟಗಳಿವೆ ಎಂದು ಚಿಂತಿಸುತ್ತ ಕೂತರೆ ಪ್ರಯೋಜನವಿಲ್ಲ. ಒಂದೊಂದೇ ಹೆಜ್ಜೆ ಮುನ್ನಡೆದಂತೆಲ್ಲ ಗುರಿ ಹತ್ತಿರವಾಗುತ್ತದೆ. ನಿರಾಶರಾಗಬಾರದು, ಪ್ರಯತ್ನದಿಂದ ವಿಮುಖರಾಗಬಾರದು.

ಗಡಿಯಾರಗಳ ಸಂಭಾಷಣೆಯನ್ನು ನೀತಿಬೋಧನೆಗಾಗಿಯಷ್ಟೇ ಹೆಣೆದದ್ದೆಂದು ನಿಮಗೆ ಆಗಲೇ ಅಂದಾಜಾಗಿರುತ್ತದೆ. ಆದರೂ ಯೋಚಿಸಿ ನೋಡಿ. ಹೌದಲ್ವಾ? ಗಡಿಯಾರಗಳು ಹಿರಿಯರಿದ್ದಂತೆ. ಗೋಡೆ ಗಡಿಯಾರ ಮನೆಯ ಹಿರಿಯರಿಗೆ ಸಮಾನವಾದರೆ ಊರ ಬೀದಿಯಲ್ಲಿರುವ ಗೋಪುರದ ಗಡಿಯಾರ ಊರಿನ ಹಿರೀಕನಿಗೆ ಸಮ. ಒಂದೊಂದು ಗಡಿಯಾರವೂ ಇತಿಹಾಸದ ಜೀವಂತ ಸಾಕ್ಷಿ. ಒಂದೊಂದರದೂ ಅನನ್ಯ ರೀತಿಯ ಆತ್ಮಕಥನ. ಕಾಲಕ್ರಮದಲ್ಲಿ ಸಂದುಹೋದ ಘಟನೆಗಳನ್ನೆಲ್ಲ ಕಣ್ಣಾರೆ ಕಂಡು ನಿಂತಿರುವ ಗಡಿಯಾರಕ್ಕೂ ಆತ್ಮ ಅಂತ ಇರುತ್ತಿದ್ದರೆ, ಮಾತನಾಡುವ ಸಾಮರ್ಥ್ಯವಿರುತ್ತಿದ್ದರೆ ಎಂಥ ಅದ್ಭುತ ಅನುಭವಭಂಡಾರ! ಊರಿನ ಹೆಗ್ಗುರುತಾಗಿ ನಿಲ್ಲುವ ಗೋಪುರ ಗಡಿಯಾರದ ಬಗ್ಗೆ ನಮಗೆ ಗೌರವ ಅಭಿಮಾನಗಳು ಹುಟ್ಟಿಕೊಳ್ಳುವುದು ಬಹುಶಃ ಅದೇ ಕಾರಣಕ್ಕೆ.

‘ಊರಿನ ಜನರಿಗೆ ಹಳೆ ಗಡಿಯಾರದೊಂದಿಗೆ ಭಾವುಕ ಬೆಸುಗೆ ಉಂಟಾಗಿತ್ತು’ ಎಂದು ಆ ನೀತಿಕಥೆಯಲ್ಲಿತ್ತಷ್ಟೆ? ಸತ್ಯವೆನಿಸುವ ಮಾತು. ನಿಮಗೆ ಮೈಸೂರಿನವರು ಯಾರಾದರೂ ಸ್ನೇಹಿತರಿದ್ದರೆ ಅವರೆದುರು ‘ದೊಡ್ಡ ಗಡಿಯಾರ’ದ ಪ್ರಸ್ತಾಪ ಮಾಡಿನೋಡಿ. ತತ್‌ಕ್ಷಣವೇ ಮೈಸೂರಿನ ದೊಡ್ಡ ಗಡಿಯಾರದ ಪದತಲಕ್ಕೆ ಹೋಗಿ ನಿಲ್ಲುತ್ತದೆ ಅವರ ಮನೋಯಾತ್ರೆ. ದೊಡ್ಡ ಗಡಿಯಾರ ಸರ್ಕಲ್‌ನಲ್ಲಿ ಸಂಜೆಹೊತ್ತು ತಳ್ಳುಗಾಡಿಗಳವರು ಮಾರುವ ಚುರುಮುರಿ, ಭೇಲ್‌ಪುರಿ, ಕಳ್ಳೇಕಾಯಿ ತಿಂದದ್ದು... ಗೆಳೆಯ/ಗೆಳತಿಯರೊಂದಿಗೆ ಹರಟೆ ಹೊಡೆದದ್ದು... ನೆನಪುಗಳ ದಿಬ್ಬಣವೇ ಹೊರಡುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಹಿರೀಕ ಮೈಸೂರಿಗರಿದ್ದರಂತೂ ಒಡೆಯರ ಕಾಲದ ವೈಭವವನ್ನೂ ನೆನಪಿಸಿಕೊಳ್ಳುತ್ತಾರೆ. ನಾಲ್ಮಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಅರಮನೆಯ ಸಿಬ್ಬಂದಿಯೆಲ್ಲ ಸೇರಿ ದುಡ್ಡು ಹಾಕಿ ನಿರ್ಮಾಣಗೊಂಡ ಗೋಪುರ ಗಡಿಯಾರ ಅದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 1927ರಿಂದ ಇವತ್ತಿನವರೆಗೂ ಮೈಸೂರಿನಲ್ಲಾದ ಘಟನೆಗಳನ್ನೆಲ್ಲ ಕ್ಷಣಕ್ಷಣದ ವಿವರಣೆಯಂತೆ ಒಂದುವೇಳೆ ದೊಡ್ಡ ಗಡಿಯಾರ ಬಣ್ಣಿಸಿದರೆ ಹೇಗಿದ್ದೀತು!

doddagadiyara.jpg

ಮೈಸೂರಿನ ಗಡಿಯಾರದ ಕಥೆ ಅದಾದರೆ ಮುಂಬಯಿಯ ರಾಜಾಬಾಯಿ ಗೋಪುರ ಗಡಿಯಾರ ಇನ್ನೂ ಹಳೆಯದು. ಮುಂಬೈ ಸ್ಟಾಕ್ ಎಕ್ಸ್‌ಚೇಂಜ್‌ನ ಸ್ಥಾಪಕ ಪ್ರೇಮಚಂದ್ ರಾಯಚಂದ್ ಎಂಬುವರು ತಮ್ಮ ತಾಯಿಗೆ ಪ್ರೀತಿಯ ಕೊಡುಗೆಯಾಗಿ 1878ರಲ್ಲಿ ಇದನ್ನು ಕಟ್ಟಿಸಿದ್ದಂತೆ. ಲಂಡನ್‌ನಲ್ಲಿರುವ ಜಗದ್ವಿಖ್ಯಾತ ‘ಬಿಗ್ ಬೆನ್’ ಗೋಪುರ ಗಡಿಯಾರವೇ ಪ್ರೇಮಚಂದ್ ಅವರಿಗೆ ಸ್ಫೂರ್ತಿ ಕೊಟ್ಟದ್ದಂತೆ. ಮುಂಬಯಿ ಷಹರದಲ್ಲಿ ಕಳೆದ ಒಂದು ಶತಮಾನಕ್ಕಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ ಘಟಿಸಿದ್ದೆಲ್ಲ ರಾಜಾಬಾಯಿ ಗೋಪುರ ಗಡಿಯಾರದ ಸ್ಮೃತಿಚಕ್ರಗಳಲ್ಲಿ ದಾಖಲಾಗಿದೆ ಎಂದು ಊಹಿಸಿದರೆ ಅದೊಂದು ರೋಮಾಂಚಕ ಕಲ್ಪನೆ! ಇಲ್ಲಿ ವಾಷಿಂಗ್ಟನ್ ನಗರದ ಹೃದಯಭಾಗದಲ್ಲಿ ಒಂದು ಗೋಪುರ ಗಡಿಯಾರ ಇದೆ. ಅಮೆರಿಕಾಧ್ಯಕ್ಷ ಅಬ್ರಹಾಂ ಲಿಂಕನ್‌ನನ್ನು ಗುಂಡಿಕ್ಕಿ ಕೊಂದ ಹಂತಕ ಜಾನ್ ವಿಲ್ಕ್ಸ್ ಬೂತ್ ಅವತ್ತು ಸಂಜೆ ಆ ಗಡಿಯಾರದಲ್ಲಿ ಸಮಯ ತಿಳಿದುಕೊಂಡೇ ಫೋರ್ಡ್ ಥಿಯೇಟರಿನತ್ತ ಕಳ್ಳಹೆಜ್ಜೆಯಿಟ್ಟು ಮುಂದುವರೆದಿದ್ದಂತೆ. ಹಾಗೆಂದು ಟೂರಿಸ್ಟ್ ಗೈಡ್ ವಿವರಿಸುವಾಗ ಒಮ್ಮೆ ಮೈನವಿರೇಳುವುದು ಸುಳ್ಳಲ್ಲ. ಹಾಗೆ ನೋಡಿದರೆ ಈ ಗೋಪುರ ಗಡಿಯಾರಗಳೆಲ್ಲ ‘ಮೂಕಸಾಕ್ಷಿ’ ಎನ್ನುವಂತಿಲ್ಲ, ನಿರ್ಜೀವ ಸ್ಮಾರಕಗಳಿಗಿಂತಲೂ ಇವು ಮಿಗಿಲು. ಅವತ್ತಿಗೂ ಇವತ್ತಿಗೂ ನಿರಂತರ ಚಲನೆಯಲ್ಲಿದ್ದು ಚರಾಚರ ವಸ್ತುಗಳ ಚಲನವಲನಗಳನ್ನೆಲ್ಲ ನೋಡಿರತಕ್ಕಂಥವು.

ಇದು ಡಿಜಿಟಲ್ ಯುಗ. ಈಗ ನಾವು ಸಮಯ ಎಷ್ಟೆಂದು ತಿಳಿದುಕೊಳ್ಳಲು ತಲೆಯೆತ್ತಿ ನೋಡಬೇಕಾದ್ದಿಲ್ಲ, ತಲೆತಗ್ಗಿಸಿ ನೋಡುತ್ತೇವೆ. ನಮ್ಮ ವಾಚುಗಳಲ್ಲಷ್ಟೇ ಅಲ್ಲ, ಮೊಬೈಲ್ ಫೋನು, ಐಪ್ಯಾಡು, ಲ್ಯಾಪ್‌ಟಾಪು, ಮ್ಯೂಸಿಕ್ ಸಿಸ್ಟಮ್ಮು, ಹೋಮ್ ಥಿಯೇಟರ್ರು, ಮೈಕ್ರೋವೇವ್, ಕಾಫಿ ಮೆಷಿನ್ - ಹೀಗೆ ನಮ್ಮ ಸುತ್ತ ಸೇವೆಗೆ ನಿಂತ (ನಮ್ಮನ್ನೇ ಅವುಗಳ ದಾಸರಾಗಿಸಿದ) ಯಂತ್ರಗಳಲ್ಲೆಲ್ಲ ಸಮಯ ತಿಳಿದುಕೊಳ್ಳುವ ವ್ಯವಸ್ಥೆ ಇದೆ. ಹಾಗಾಗಿ ಗೋಡೆ ಗಡಿಯಾರಗಳು, ಗೋಪುರ ಗಡಿಯಾರಗಳು ಈಗಾಗಲೇ ಮೂಲೆಗುಂಪಾಗಬೇಕಿತ್ತು. ಆದರೆ ಅಚ್ಚರಿಯ ಸಂಗತಿ ಏನು ಗೊತ್ತೇ? ಮೊನ್ನೆ ಎಲ್ಲೋ ಓದಿದೆ ಅಮೆರಿಕದ ಗೋಪುರ ಗಡಿಯಾರ ಉತ್ಪಾದಕ ಕಂಪನಿ ‘ವಾಲ್ಡಿನ್’ ಇಪ್ಪತ್ತು ವರ್ಷಗಳ ಹಿಂದೆ ವರ್ಷಕ್ಕೆ ಅಬ್ಬಬ್ಬಾ ಎಂದರೆ ಹತ್ತು ಹನ್ನೆರಡು ಗೋಪುರ ಗಡಿಯಾರಗಳನ್ನು ಉತ್ಪಾದಿಸುತ್ತಿದ್ದರೆ ಈಗ ವರ್ಷಕ್ಕೆ 200ರಿಂದ 300ರಷ್ಟು ಗಡಿಯಾರಗಳಿಗೆ ಬೇಡಿಕೆ ಪಡೆಯುತ್ತಿದೆಯಂತೆ! ಹತ್ತುಸಾವಿರದಿಂದ ಹಿಡಿದು ಐವತ್ತುಸಾವಿರ ಡಾಲರ್‌ವರೆಗೆ ಬೆಲೆ ತೆತ್ತರೂ ಸರಿಯೇ ಗೋಪುರ ಗಡಿಯಾರಗಳನ್ನು ಸ್ಥಾಪಿಸುವ ಉತ್ಸಾಹ ಈಗಿನ ಕಾಲದ ಉದ್ಯಮಿಗಳಿಗೆ, ಸಂಘಸಂಸ್ಥೆಗಳಿಗೆ, ಸಿರಿವಂತರಿಗೆ ಹೆಚ್ಚುತ್ತಲೇ ಇದೆಯಂತೆ!

ಟೈಮಿಲ್ಲ. ಒಂದೊಮ್ಮೆ ವಾಚು ಕಳೆದುಹೋದರೆ ಅದನ್ನು ಹುಡುಕಲಿಕ್ಕೂ ಸಮಯವಿಲ್ಲ ಎಂಬಂತೆ ನಾವೆಲ್ಲ ಧಾವಂತದ ಜೀವನದಲ್ಲಿ ಕಾಲಿಗೆ ಚಕ್ರ ಕಟ್ಟಿ ಓಡುತ್ತಿರುವವರು. ಆದರೂ ಹಳೆ ಗಡಿಯಾರಗಳದು ಅದೇನು ಮಾಯೆಯೋ. ನಮ್ಮ ನಾಗಾಲೋಟವನ್ನು ಅರೆಕ್ಷಣ ತಡೆದು ನಿಲ್ಲಿಸಬಲ್ಲವು. ನಿಶ್ಚೇಷ್ಟತೆಯನ್ನು ಹೋಗಲಾಡಿಸಿ ಸ್ಫೂರ್ತಿ ತುಂಬಬಲ್ಲವು. ಏನೋ ಒಂದು ಅದ್ಭುತ ಮಾಯಾಶಕ್ತಿ ಅವುಗಳಲ್ಲಿದೆ. ನಿಜಕ್ಕೂ ಅವು ಗೌರವಾರ್ಹ ಗಡಿಯಾರಗಳು.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.