ಪದ-ಶ್ರಾವ್ಯ

ಈಗ ಆಡಿಯೋ ಟಚ್!

13
Feb 2016
parody songs in kannada
Posted in Humor by sjoshi at 7:59 pm

ಇದೇ ಅಣಕು ಹಾಡು... ಹದದಿ ಕೆಣಕೊ ಹಾಡು...
[ ವಿಶ್ವವಾಣಿ ಪತ್ರಿಕೆಯ ’ತಿಳಿರುತೋರಣ’ ಅಂಕಣದಲ್ಲಿ 14Feb2016ರಂದು ಪ್ರಕಟವಾದ ಲೇಖನದ ವಿಸ್ತೃತ ರೂಪ ]

* ಶ್ರೀವತ್ಸ ಜೋಶಿ

ಅಣಕವಾಡು ಅಥವಾ ಅಣಕು ಹಾಡು ಅಂದರೆ ಸುಪ್ರಸಿದ್ಧವಾದ ಮೂಲ ಹಾಡುಗಳನ್ನು ಅನುಕರಿಸಿ ಅಣಕಿಸುವ ಪದ್ಯರಚನೆ. ಇಡೀ ಹಾಡಿನ ಪ್ರತಿರೂಪ ಇರಬೇಕಂತೇನಿಲ್ಲ. ಪಲ್ಲವಿ ಅಥವಾ ಬರೀ ಒಂದು ಸಾಲು ಸಾಕು, ಪದ ಬದಲಿಸಿಕೊಂಡ ಪರ್ಯಾಯ ಪದ್ಯ ನಗೆಯುಕ್ಕಿಸುತ್ತದೆ, ಕಚಗುಳಿ ಇಡುತ್ತದೆ. ಕೊರವಂಜಿ, ಅಪರಂಜಿ ಮುಂತಾದ ಹಾಸ್ಯಮಾಸಿಕಗಳಲ್ಲಿ, ಸುಧಾ ಹಾಸ್ಯಸಂಚಿಕೆಗಳಲ್ಲಿ ಮತ್ತು ಇತ್ತೀಚೆಗೆ ಸ್ಟಾಂಡ್‌ಅಪ್ ಕಾಮಿಡಿಗಳಲ್ಲಿ ಈ ಸಾಹಿತ್ಯಪ್ರಕಾರವು ಕನ್ನಡಿಗರನ್ನು ರಂಜಿಸಿದೆ. ಕೆಲವು ಅಣಕಗಳಂತೂ ಮೂಲ ಹಾಡಿಗಿಂತಲೂ ಹೆಚ್ಚು ಫೇಮಸ್ಸಾದದ್ದೂ ಇದೆ. ಅಣಕವಾಡನ್ನು ರಚಿಸಲಿಕ್ಕೆ ಪ್ರತಿಭೆ ಮತ್ತು ಕವಿತ್ವ ಬೇಕು, ಅದಕ್ಕಿಂತ ಮುಖ್ಯವಾಗಿ ಉತ್ತಮ ಹಾಸ್ಯಪ್ರಜ್ಞೆ ಬೇಕು. ಅಣಕವಾಡನ್ನು ಸವಿಯುವುದಕ್ಕೂ ಅಷ್ಟೇ ಹಾಸ್ಯಪ್ರಜ್ಞೆ ಇರಬೇಕು. ನಿಮ್ಮಲ್ಲಿ ಅದು ಇದೆ ಎಂಬ ವಿಶ್ವಾಸದಿಂದ ಇವತ್ತು ಒಂದಿಷ್ಟು ಅಣಕವಾಡುಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ನಿಮ್ಮ ಬತ್ತಳಿಕೆಯಲ್ಲೂ ಇಂಥವು ಕೆಲವು ಇರಬಹುದು. ಏಕೆಂದರೆ ಸಾಮಾನ್ಯವಾಗಿ ಜೋಕುಗಳಂತೆಯೇ ಅಣಕವಾಡುಗಳೂ ಒಮ್ಮೆ ಪ್ರಕಟವಾದೊಡನೆ ಲೋಕದ ಸೊತ್ತು ಆಗಿಹೋಗುತ್ತವೆ. ಜನಪದ ಗೀತೆಗಳಂತೆ ಬಾಯಿಂದ ಬಾಯಿಗೆ ಹರಿದಾಡುತ್ತವೆ. ಎಂದರೋ ಅಣಕವಾಡು ರಚಯಿತಲು/ರಸಿಕುಲು ಅಂದರಿಕಿ ವಂದನಮು.

ಮೊದಲಿಗೆ ಗಣೇಶಸ್ತುತಿ. ಇದು ನನ್ನ ಫೇವರಿಟ್‌ಗಳಲ್ಲೊಂದು. 2002ರಲ್ಲಿ ನಾನು ವಿಚಿತ್ರಾನ್ನ ಅಂಕಣ ಆರಂಭಿಸಿದಾಗ ಮೊದಲ ಲೇಖನದ ಮೊದಲ ಸಾಲುಗಳು ಇವು:

ಗಜಮುಖನೆ ಗಣಪತಿಯೆ ನಿನಗೆ ಒಂದಾಣೆ...
ಬಾಕಿ ಉಳಿದ ನಾಲ್ಕಾಣೆ ನಾಳೆ ಕೊಡ್ತೇನೆ...

ದೇವರುಗಳ ಪೈಕಿ ಅತಿಹೆಚ್ಚು ಸೆನ್ಸ್ ಆಫ್ ಹ್ಯೂಮರ್ ಇರುವುದು ಗಣೇಶನಿಗಂತೆ. ಹಾಗಾಗಿ ನಮ್ಮ ಅಣಕವಾಡಿನಿಂದಾಗಲೀ, ಒಂದಾಣೆ ಮಾತ್ರ ಕೊಟ್ಟಿದ್ದಕ್ಕಾಗಲೀ ಗಣೇಶ ಮುನಿಸಿಕೊಳ್ಳುವುದಿಲ್ಲ ಎಂಬ ಭರವಸೆಯಿದೆ.

ಬೇಂದ್ರೆಯವರಂಥ ವರಕವಿಯೇ ಅಣಕವಾಡುಗಳನ್ನು ರಚಿಸಿದ್ದಾರೆ ಮತ್ತು ಸವಿದಿದ್ದಾರೆ ಎಂದಮೇಲೆ ನಮ್ಮಂಥ ಶ್ರೀಸಾಮಾನ್ಯರು ಯಾವ ಅಳುಕು-ಅಂಜಿಕೆಗಳಿಲ್ಲದೆ ಅಣಕವಾಡುಗಳನ್ನು ಆನಂದಿಸಬಹುದು. ಬೇಂದ್ರೆಯವರ ಸುಪ್ರಸಿದ್ಧ ‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆಗೆ ಅನೇಕ ಅಣಕಗಳು ಅವರ ಕಾಲದಲ್ಲೇ ಹುಟ್ಟಿದ್ದವು. ಅಣಕಿಸುವವರಿಗೆ ಉತ್ತರವಾಗಿ ಬೇಂದ್ರೆಯವರೇ ಅಣಕವಾಡು ಅಂದರೆ ಹೇಗಿರಬೇಕೆಂದು ತೋರಿಸಲು ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಗೀತೆಯನ್ನು, ಮೂಲ ಪದ್ಯದ ಏಳೂ ಚರಣಗಳಿಗೆ ಪರ್ಯಾಯವಾಗಿ ಬರೆದಿದ್ದರು. ಪದ್ಯಕ್ಕೆ ಸಂಭಾವನೆಯೆಂದು ಬಂದ ಚೆಕ್ ಬೌನ್ಸ್ ಆಗಿದ್ದರೆ ‘ಚೆಕ್ಕು ಹಾರುತಿದೆ ನೋಡಿದಿರಾ’ ಎಂದು ಹಾಡಬೇಕಾದ ಪರಿಸ್ಥಿತಿ ಕವಿಯದು!

ಬೆಕ್ಕು ಹಾರುತಿದೆ ನೋಡಿದಿರಾ....

ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||

ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||

ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||

ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||

ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||

ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||

ಅಣಕವಾಡುಗಳಿಂದಲೇ ಪ್ರಸಿದ್ಧರಾದ, ತನ್ನ ಹೆಸರಿನಲ್ಲೇ ಅಣಕು ಎಂದು ಸೇರಿಸಿಕೊಂಡಿರುವ ಅಣಕು ರಾಮನಾಥ್ ಅವರು ‘ಕೊಚ್ಚೇವು ಕನ್ನಡದ shapeಅ ಪದಪದದ shapeಅ ವಾಕ್ಯಗಳ shapeಅ ಕೊಚ್ಚುತ್ತ ಭಾಷೆಯು ಕುರೂಪ...’ ಎಂಬ ಅಣಕುಗೀತೆ ರಚಿಸಿದ್ದಾರೆ. ಅಸಡ್ಡೆ-ಉಡಾಫೆಗಳಿಂದ ವ್ಯವಸ್ಥಿತವಾಗಿ ಕನ್ನಡದ ಕೊಲೆ ಮಾಡಿಕೊಂಡು ಬಂದಿರುವ ಸುದ್ದಿವಾಹಿನಿಗಳ ಹುದ್ಘೋಷಕ/ಕಿ ವಾಗ್ದೇವತೆಗಳಿಗೆ ಅದನ್ನು ಸಮರ್ಪಣೆ ಮಾಡಿದ್ದಾರೆ.

ಕೊಚ್ಚೇವು ಕನ್ನಡದ shapeಅ ಪದಪದದ shapeಅ ವಾಕ್ಯಗಳ shapeಅ
ಕೊಚ್ಚುತ್ತ ಭಾಷೆಯು ಕುರೂಪ ಕೊಚ್ಚೇವು ಕನ್ನಡದ shapeಅ ||

ಬಲು ದಿನಗಳಿಂದ ವಾಹಿನಿಗಳಿಂದ ಕನ್ನಡವ ಕೊಚ್ಚೇ ಸಾಗೇವು
ಎಲ್ಲೆಲ್ಲಿ ’ಅ’ಇರಲು ಅಲ್ಲಲ್ಲಿ ’ಹ’ ವೇ... ಎಲ್ಲೆಲ್ಲಿ ’ಹ’ ವೋ ಅಲ್ಲಿಯೇ ’ಅ’...
ದ ಎಂದು ಇರಲಿ, ಧ ಎಂದು ಇರಲಿ ನಮಗೆಲ್ಲ ಒಂದೇ ಹುಚ್ಚಾರ
ಕೊಚ್ಚೇವು ಬರಹ ಕೊಚ್ಚೇವು ನುಡಿಯ ಕೊಚ್ಚೇವು ನಿಮ್ಮ ಸಿಹಿನುಡಿಯ
ನಮ್ಮ ನಾಲ್ಗೆ ಸೀಳಿ ಉಪ್ಹಾಕಿದ್ರೂನೂ ಕೊಚ್ಚೇವು ಕನ್ನಡದ shapeಅ ||

blur ಆದ ಚಿತ್ರ scrolling ವಿಚಿತ್ರ ಅರ್ಥ ಅನರ್ಥಗಳ ಬೀರೇವು
ಕೊಚ್ಚಿರುವ ರೂಪದಲಿ ತಾಯ್ನುಡಿಯನು ಅಚ್ಚಳಿಯದಂತೆ ತೋರೇವು
ಒಡಲೊಳಲ ಕೊಚ್ಚೆಯ ಕಿಡಿಗಳನ್ನು ನಿಮ್ಮ ಬೆಡ್‌ರೂಮಿಗೇ ತೂರೇವು
ಏರಿರಲು ಟಿಆರ್ಪಿ ಎಲ್ಲಿಹುದು ಭೀತಿ ನಮಗಿರಲಿ ನಿಮ್ಮ ಹಿಡಿಶಾಪ
ಮನೆಮನೆಗಳಲ್ಲಿ ಮನಮನಗಳಲ್ಲಿ ಕೊಚ್ಚೇವು ಕನ್ನಡದ shapeಅ ||

ನಮ್ಮವರು ಕಟ್ಟಿದ ಚಾನೆಲ್‌ಉಳಿಸಲು ಹೆಲ್ಲಾರೂ ಹೊಂದುಗೂಡೇವು
ನಿಮ್ಮೆದೆಯು ನಡುಗುವೀ ಮಾತಿನಲ್ಲಿ ಮಾತುಗಳ ಪೂಜೆ ಮಾಡೇವು
ನಮ್ಮುಸಿರು ಟಿಆರ್‌ಪಿ ಎಂಬುದೊಂದೇ ಮಂಗಗಳಗೀತ ಹಾಡೇವು
ತೊರೆದೇವು ಬಾಲ ಕಡೆದೇವು ಕೊಂಬ ಪಡೆದೇವು ಅಕ್ಷರಕೆ ಹೊಸರೂಪ
ಕರುಳನ್ನು ಕಿವುಚಿ ಕೊರಳನ್ನು ತಿರುಚಿ ಕೊಚ್ಚೇವು ಕನ್ನಡದ shapeಅ ||

ಇನ್ನೊಂದು ಅಣಕವಾಡು ತತ್‌ಕ್ಷಣಕ್ಕೆ ನೆನಪಿಗೆ ಬರ್ತಿರೋದು ನನ್ನ ಫೇಸ್‌ಬುಕ್ ಸ್ನೇಹಿತ ಚಿಕ್ಕಮಗಳೂರಿನ ಮಧುಸೂದನ ರಾವ್ ರಚಿಸಿದ ‘ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು... ನಿತ್ಯದ ಹಾಗೇ ಊರಿಗೆಊರೇ ಕರೆಂಟ್ ಹೋಗಿತ್ತು ಎಲ್ಲೆಡೆ ಕತ್ತಲೆ ತುಂಬಿತ್ತು...’ ಸಿದ್ದನ ಕತ್ತಲೆರಾಜ್ಯದಲ್ಲಿ ರಾಯರ ಫಜೀತಿ ಎಂದು ಅದರ ಶೀರ್ಷಿಕೆ. ಕೆ.ಎಸ್.ನರಸಿಂಹಸ್ವಾಮಿಯವರ ಮೂಲ ರಚನೆಯ ಅಷ್ಟೂ ಚರಣಗಳನ್ನು ಬಳಸಿ ಸ್ವಾರಸ್ಯಕರವಾಗಿ ಅಣಕಿಸಿದ್ದ ಆ ಹಾಡು ಫೇಸ್‌ಬುಕ್ ವಾಟ್ಸಾಪ್‌ಗಳ ಮೂಲಕ ಜಗತ್ತಿನಾದ್ಯಂತ ಕನ್ನಡಿಗರನ್ನು ತಲುಪಿತು. ಕನ್ನಡದ ಕೆಲವು ಪತ್ರಿಕೆಗಳೂ ಅದನ್ನು ಪ್ರಕಟಿಸಿ ಓದುಗರ ಮನರಂಜಿಸಿದವು.

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ನಿತ್ಯದ ಹಾಗೆ ಊರಿಗೆ ಊರೇ ಕರೆಂಟು ಹೋಗಿತ್ತು | ಎಲ್ಲೆಡೆ ಕತ್ತಲೆ ತುಂಬಿತ್ತು

ಮಾವನ ಮನೆಯಲಿ ಸಣ್ಣಗೆ ಉರಿಯುವ ಚಿಮಣಿಯ ಬೆಳಕಿತ್ತು
ದೀಪದ ಹೊಗೆ ಘಮ್ಮನೆ ಘಮ ಬೀರುತ ಮೂಗಿಗೆ ಅಡರಿತ್ತು | ರಾಯರ ಸ್ವಾಗತ ಕೋರಿತ್ತು

ಟೊಯ್ಯೆನ್ನುತ ಮೊಬೈಲಿನ ಬಾಟರಿ ಚಾರ್ಜನು ಬಯಸಿತ್ತು
ತನ್ನಯ ಅಂತಿಮ ಕ್ಷಣಗಳ ಎಣಿಸುತ ರಾಯರ ಕರೆದಿತ್ತು | ನಾಲ್ಕೇ ಪರ್ಸೆಂಟ್ ಉಳಿದಿತ್ತು

ಯುಪಿಯಸ್ಸಿರೊ ಪಕ್ಕದ ಮನೆಯು ಜಗಮಗ ಎನುತಿತ್ತು
ಹಿಂದಿನ ಬೀದಿಯ ದೊಡ್ಮನೆಯಲ್ಲಿ ಸೋಲಾರ್ ಉರಿದಿತ್ತು | ಗಾಯಕೆ ಉಪ್ಪನು ಸವರಿತ್ತು

ಹತ್ತಕೆ ಕರೆಂಟು ಬರುವುದು ಎಂದರು ಮಾವನು ಗೊಣಗುತಲಿ
ಹತ್ತರ ಮೇಲೊಂದ್ಹೊಡೆದರು ಕೊನೆಗೂ ಕರೆಂಟು ಬರಲಿಲ್ಲ | ಕತ್ತಲೆ ಭಾಗ್ಯವು ತಪ್ಪಿಲ್ಲ

ಹಾಸಿಗೆಯಲಿ ಹೊರಳಾಡುತ ರಾಯರು ಸಿದ್ಧನ ಶಪಿಸುತ್ತಾ
ಫ್ಯಾನು ಇಲ್ಲದೆ ನಿದ್ದೆಯು ಬಾರದು ಸೆಕೆಯೋ ವಿಪರೀತ | ಜೊತೆಯಲಿ ಸೊಳ್ಳೆಯ ಸಂಗೀತ

ಅಂತೂ ಇಂತೂ ಕರೆಂಟು ಬಂತು ಬೆಳಗಿನ ಜಾವದಲಿ
ಮಿಕ್ಸಿಯು ಕೂಗಿತು ಟಿವಿಯು ಹಾಡಿತು ಮಾವನ ಮನೆಯಲ್ಲಿ | ನಕ್ಕರು ರಾಯರು ಹರುಷದಲಿ
ಕತ್ತಲೆ ಭಾಗ್ಯವ ಕೊನೆಮಾಡೆಂದರು ನಮಿಸುತ ದೇವರಲಿ | ವಿದ್ಯುದ್ದೀಪವ ಬೆಳಗುತಲಿ

ತೀರ್ಥಕ್ಷೇತ್ರಗಳು, ಅರ್ಥಾತ್ ಪಬ್ಬು-ಬಾರುಗಳು ಅಣಕವಾಡುಗಳಿಗೆ ಒಳ್ಳೆಯ ಬ್ರೀಡಿಂಗ್ ಗ್ರೌಂಡ್. ನಶೆ ಏರಿದಾಗ ಕವಿತ್ವ ಗರಿಗೆದರುವುದು ಅದಕ್ಕೆ ಕಾರಣ. ವೈಎನ್ಕೆ ಅವರ ರಚನೆಯೆನ್ನಲಾದ ‘ಕರುಣಾಳು ಬಾ ಬೆಳಕೆ ಮುಸುಕಿದೀ ಪಬ್ಬಿನಲಿ ಕೈಹಿಡಿದು ಕುಡಿಸೆನ್ನನು’ ಗುಂಡುಗಲಿಗಳ ಗಾಯತ್ರೀಮಂತ್ರ. ಕೃಷ್ಣೇಗೌಡರ ಜಗದ್ವಿಖ್ಯಾತ ‘ಕುಡುಕರ ಸುಪ್ರಭಾತ’ವನ್ನಂತೂ ಕೇಳದ ಕನ್ನಡಿಗರಿರಲಿಕ್ಕಿಲ್ಲ. ಸುಶೀಲ್ ಸಂದೀಪ್ ಎಂಬೊಬ್ಬ ಸುಸಂಸ್ಕೃತ ಸದಭಿರುಚಿಯ ಸ್ನೇಹಿತ, ಜಿ.ಎಸ್.ಶಿವರುದ್ರಪ್ಪನವರ ಜನಪ್ರಿಯ ಭಾವಗೀತೆಯನ್ನು ಅಣಕವಾಡಿದ ರೀತಿ ಬಲು ಸೊಗಸಿದೆ:

ಸಂಡೆ ಬಾರಿನಂಚಿನಲಿ ಬಿದ್ದ ಕುಡುಕ ಸುಂದರ...
ಮಲ್ಯತೀರ್ಥದಾಳದಲ್ಲಿ ಎಂಗೇಜ್‌ಮೆಂಟಿನುಂಗುರ...

ಹಳೇ ಲವ್ವರ್ರಿನ ಶಾಪವಿದೋ ಇರಿಯುತಿಹುದು ಸುತ್ತಲೂ...
ಉಂಡುದೆಲ್ಲ ಕಕ್ಕುತಿಹನು ಚಿಕ್ಕಕರುಳ ಶ್ರಮದೊಳು...

ಸ್ವಸಹಾಯಕ ಬಾರ್-ಬಳಗ ಕೆಂಗಣ್ಣೊಳು ಖಾರವ?
ರಾತ್ರಿಪಾಳಿ ಕರೆಯುತಿಹುದು,ಬಂದು ಕೊಡುವೆ ಲೆಕ್ಕವ

ಮದ್ಯಸೇವನೆಯಂಥ ಚಟಗಳು ಬೇರೆಯೂ ಇವೆ. ವಾಟ್ಸಾಪು ಫೇಸ್‌ಬುಕ್‌ಗಳ ಎಡಿಕ್ಷನ್ ಸಹ ಎಷ್ಟೋ ಜನರಿಗೆ ಚಟವೇ ಆಗಿಹೋಗಿದೆ. ಅನ್ನಾಹಾರ-ನಿದ್ರೆಯ ಪರಿವೆಯಿಲ್ಲದೆ ಫೇಸ್‌ಬುಕ್ಕಿನಲ್ಲಿ ಮುಳುಗಿಹೋಗುವ ಮನೆಮಂದಿಯನ್ನು ಊಟಕ್ಕೆ ಕರೆಯುವುದಕ್ಕೆ ಅಣಕವಾಡು ರಚಿಸಿದ್ದಾರೆ ಎಕ್ಸ್-ಅಮೆರಿಕನ್ನಡತಿ ಈಗ ಮಣಿಪಾಲದಲ್ಲಿ ಸೆಟ್ಲ್ ಆಗಿರುವ ಕವಯಿತ್ರಿ ಜ್ಯೋತಿ ಮಹಾದೇವ್.

ಊಟಕ್ಕೆ ಬನ್ನಿರಿ ನೀವು; -ನಿಮ್ಮ
ಲ್ಯಾಪ್-ಟಾಪು, ಸೆಲ್-ಫೋನುಗಳನಾಚೆಗಿಟ್ಟು - ಊಟಕ್ಕೆ
ಪಿ.ಡಿ.ಎ., ಬ್ಲ್ಯಾಕ್-ಬೆರ್ರಿ ಜೊತೆಗೆ, -ತಮ್ಮ
ಬೀಪರ್ರು, ಬ್ಲೂಟೂಥುಗಳ ಮೇಜಲಿಟ್ಟು - ಊಟಕ್ಕೆ

ಒಂದೇ ಮನೆಯೊಳಗಿದ್ದೂ, -ಮಂದಿ
ಒಬ್ಬೊಬ್ಬರೊಂದೊಂದು ದಿಕ್ಕನ್ನು ಹೊದ್ದು
ಅರೆನಿದ್ರೆ ಹೊತ್ತಲ್ಲಿ ಎದ್ದು, -ಬಂದು
ಮಬ್ಬಲ್ಲಿ ತಿಂದರೆ ಆರೋಗ್ಯಕೆ ಗುದ್ದು - ಊಟಕ್ಕೆ

ಟೀವಿಯ ಮುಂದಿರಬೇಡಿ, -ಒಮ್ಮೆ
ಅಡುಗೆ ಮನೆಯಲ್ಲೊಂದು ಮಣೆ ಹಾಕಿ ಕೂಡಿ
ನಗು ನಗುತಾ ಊಟವ ಮಾಡಿ, -ನಿಮ್ಮ
ಒಡನಾಡಿಗಳ ಜೊತೆಗೆ ಹರಟೆ ಮಾತಾಡಿ - ಊಟಕ್ಕೆ

ಸಿಹಿ-ಖಾರ, ಹುಳಿ-ಉಪ್ಪು ಇರಲಿ, -ಹಾಗೇ
ಶುಚಿಯ ಕಡೆಗೂ ನಿಮ್ಮ ಒಮ್ಮನವು ಹೊರಳಿ
ಮಾಡಿರುವ ಅಡುಗೆಯನು ಹೊಗಳಿ, -ತೇಗಿ
ರುಚಿ ಹಣ್ಣ ಸವಿಯುತ್ತ ಅಂಗಳಕೆ ತೆರಳಿ - ಊಟಕ್ಕೆ

ಆಧುನಿಕ ಸೌಕರ್ಯ ಬೇಕು, -ನಮಗೆ
ಬಾಳುವೆಯ ನಡೆಸಲು ಕೆಲಸವಿರಬೇಕು
ಆಧಾರವೀ ದೇಹ ಎದಕು, -ಅದನೆ
ಕಡೆಗಣಿಸಿ ಬದುಕಿದರೆ ನೋವುಣ್ಣಬೇಕು - ಊಟಕ್ಕೆ

ಹೊತ್ತು ಹೊತ್ತಿಗೆ ಊಟ-ತಿಂಡಿ, -ಹೆಚ್ಚು
ಹಣ್ಣು ತರಕಾರಿಗಳ ಮಿಶ್ರಣದ ಮೋಡಿ
ಬಲುಕಾಲ ಆರೋಗ್ಯ ನೋಡಿ, -ಮೆಚ್ಚು
ತನು-ದೇವರ ಸೇವೆ ಈ ರೀತಿ ಮಾಡಿ - ಊಟಕ್ಕೆ

ಇನ್ನೋರ್ವ ಪ್ರತಿಭಾವಂತ ಅಮೆರಿಕನ್ನಡಿಗ ಮಲ್ಲಿ ಸಣ್ಣಪ್ಪನವರ್ ‘ಲೈಫು ಇಷ್ಟೇನೇ’ ಧಾಟಿಯಲ್ಲಿ ರಚಿಸಿದ ಹಾಡು ಮಜಾ ಇದೆ:

ಹಲ್ಲು ತಿಕ್ಕದೇ ಮುಖಾನು ತೊಳಿದೇ ಬೆಳಿಗ್ಗೆ ಎದ್ದು ಲಾಗಿನ್ ಆಗಿ
ಎಲ್ಲರ ಸ್ಟೇಟಸ್ ಅಪ್ಡೇಟ್ ಮಾಡ್ಕೋ ಫೇಸ್‌ಬುಕ್ ಇಷ್ಟೇನೇ!

ಲೈಕ್ ಬಟನ್ ಒತ್ತು ಸ್ವಾಮಿ ಡಿಸ್‌ಲೈಕ್ ಬಟನ್ ಇಲ್ಲ ಸ್ವಾಮಿ
ಬೇಡಾದವ್ರನ್ ಹೈಡ್ ಮಾಡ್ಕೊ ಫೇಸ್‌ಬುಕ್ ಇಷ್ಟೇನೇ!

ಮಕ್ಕಳ ಜತೆಗೆ ಆಡೋದ್ ಬಿಟ್ಟು ಹೆಂಡ್ತಿ ಮುಖವ ನೋಡೋದ್ ಬಿಟ್ಟು
ಸಿಕ್ಕವ್ರ್ ವಿಡಿಯೋ ನೋಡ್ತಾ ಕುತ್ಕೋ ಫೇಸ್‌ಬುಕ್ ಇಷ್ಟೇನೇ!

ಯಾರ್ಯಾರ ಮನೇಲಿ ಏನೇನ್ ಅಡುಗೆ ಯಾರ್ಯಾರ ಮೈಮೇಲ್ ಏನೇನ್ ಉಡುಗೆ
ಬರೀ ಕಾಂಪ್ಲಿಮೆಂಟ್ಸು ಇಲ್ಲಿ ಕೊಡುಗೆ ಫೇಸ್‌ಬುಕ್ ಇಷ್ಟೇನೇ!

ಬೇಡಾದವ್ರಿಗು ಕಾಮೆಂಟ್ ಹಾಕು ಬೇಕಾದವ್ರಿಗು ಕಾಮೆಂಟ್ ಹಾಕು
ಕಾಮೆಂಟ್ ಹಾಕ್ತಾ ಖುಷಿಯಾಗಿರು ಫೇಸ್‌ಬುಕ್ ಇಷ್ಟೇನೇ... ಟಣ್‌ಟಣಾಟಣ್‌ಟಣ್!

ಹಾಗೆಯೇ, ಬೆಂಗಳೂರಿನ ಸಿ.ಆರ್.ಸತ್ಯ ಅವರ ಲೋಕಪ್ರಿಯ ರಚನೆ ‘ಆಚೆಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸ...’ ಹಾಡಿಗೆ ಯುವರ‍್ಸ್ ಟ್ರೂಲಿ ರಚಿಸಿದ ಅಣಕವಾಡನ್ನೂ ಇಲ್ಲಿ ಸ್ಮರಿಸಬಹುದು.

ಈಚೇಮನೆಯ ಸೂಸನ್ನಳಿಗೆ ಫೇಸ್‌ಬುಕ್ಕಿನಾ ಉಪವಾಸ |
ಎಲ್ಲೋ ಸ್ವಲ್ಪ ಕ್ಲಿಕ್‌ತಾಳಷ್ಟೇ ಅವರಿವರ್ ಹಾಕಿದ ಸ್ಟೇಟಸ ||
ಬೆಳಿಗ್ಗೆಯೊಮ್ಮೆ ಲಾಗಿನ್ ಆದ್ರೆ ಹೊಡೆಯುವಳ್ನಾಲ್ಕು ಲೈಕು |
ಒಂದೆರಡ್ ಪೋಸ್ಟಿಗೆ ಕಾಮೆಂಟು ಜಡಿದು ಕೀಬೋರ್ಡಲ್ಲೇ ಸ್ಟ್ರೈಕು ||
ಮಧ್ಯಾಹ್ನವಾದರೆ ಊಟದ ಜೊತೆಗೆ ಫೋಟೊಗಳನು ಶೇರು |
ಬೇಕೋಬೇಡ್ವೋ ಇದ್ದವ್ರನ್ನೆಲ್ಲಾ ಟ್ಯಾಗಿಸದಿದ್ರೇ ಬೋರು ||
ಸಂಜೀಮುಂದ ಹರಟುವ ಮನಸಿಗೆ ಮತ್ತದೇ ಫೇಸ್ಬುಕ್ ನೆನಪು |
ಗೋಡೆಗೆ ಒರಗಿ ಬಾಯ್ಬಿಟ್ಳೆಂದರೆ ಲೊಲ್‌ ಲೊಲ್ ಸ್ಮೈಲೀ ಒನಪು ||
ಸ್ಮಾರ್ಟ್‌ಫೋನಲ್ಲೂ ಟ್ಯಾಬ್ಲೆಟ್ಟಲ್ಲೂ ಫೇಸ್ಬುಕ್ ನೋಡುವ ಹುಚ್ಚು |
ಡಿಜಿಟಲ್ ಯುಗದ ಸೂಸನ್ ಕಥೆಯು ಸುಬ್ಬಮ್ಮನ್ಗಿಂತ್ಲೂ ಹೆಚ್ಚು ||

ನನ್ನೊಬ್ಬ ಸ್ನೇಹಿತ, ವಿಜಯರಾಜ್ ಕನ್ನಂತ್ ಎಂಬುವ ಪ್ರತಿಭಾವಂತ ಹುಡುಗನಿದ್ದ. ಮೂಲತಃ ಕುಂದಾಪುರದವನು, ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ. ಕನ್ನಡದ ಜನಪ್ರಿಯ ಚಿತ್ರಗೀತೆಗಳಿಗೆ ಅಣಕವಾಡು ರಚಿಸುತ್ತಿದ್ದ. ಮನಸಿನ ಮರ್ಮರ ಎಂಬ ಬ್ಲಾಗ್‌ನಲ್ಲಿ ಪ್ರಕಟಿಸುತ್ತಿದ್ದ. ಆತನ ಒಂದೆರಡು ರಚನೆಗಳನ್ನು ನೋಡಿ:

ಯಾವ ಸಾಫ್ಟ್‌ವೇರ್ ಕಂಪನಿ ಕರೆಯಿತು… ಬೆಂಗಳೂರಿಗೆ ನಿನ್ನನು
ಯಾವ ಸಂಬಳದಾಸೆ ಕುಕ್ಕಿತು… ನಿನ್ನ ಆಸೆಯ ಕಣ್ಣನು

ಫೋಮು ಹಾಸಿಗೆ ಟೀವಿ ಫ್ರಿಜ್ಜಿದೆ… ಏ.ಸಿ, ತಂಪಿನ ರೂಮಿದೆ
ಬರಿದೆ ತುಂಬಿಹೆ ಮನೆಯ ಒಳಗೆ ಆಫೀಸು ಅಲ್ಲವೆ ನಿಮ್ಮನೆ

ಹೊಸೂರ್ ರೋಡಿನ ಆಚೆ ಎಲ್ಲೋ… ನಿನ್ನ ಕಂಪನಿ ಬೇಸಿದೆ
ಟ್ರಾಫಿಕ್ ಜಾಮಿನಲಿ ಸಿಲುಕಿಕೊಂಡಿಹ… ನಿನ್ನ ಬರುವಿಕೆ ಕಾದಿದೆ

ವಿವಶನಾದನು ಜಾಣ… ಹ್ಮಾ… ಪರದೇಶಿಯ ಜೀತ ಜೀವನ…
ಸೃಜನಶೀಲತೆಯ ಬಿಟ್ಟು ಕೆರಿಯರ-ಏಳಿಗೆ ದುಡಿಮೆಯೇ ಜೀವನಾ

ಇನ್ನೊಂದು,

ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ..ಯಾವತ್ತೂ ಹೋಗ್ಬಾರ್ದು ರೀ…
ಯೆತ್ಲಾಗೆ ನೀವ್ ಕರಿರಿ… ಅತ್ಲಾಗೆ ನಾವ್ ಬರಲ್ಲ…ಯಾವತ್ತೂ ಬರಲಾರ್ರು ರೀ…

ಹೊಸಬರಿಗೆ ಆಟೋಲಿ… ಕೆಂಪ್ನಾಮ ಗ್ಯಾರಂಟಿ
ಹಳಬರಿಗೂ ಒಮ್ಮೊಮ್ಮೆ… ಪಂಗನಾಮ ಗ್ಯಾರಂಟಿ

ಒಬ್ರೊಬ್ರೆ ಹೋಗುವಾಗ… ಹುಷಾರಾಗಿರಿ…
ಯಾವ್ದಕ್ಕೂ ಆಟೋ ನಂಬರ್… ಬರ್ಕೊಂಡಿರಿ…

ಯೆತ್ಲಾಗೆ ನೀವ್ ಕರಿರಿ… ಅತ್ಲಾಗೆ ನಾವ್ ಬರಲ್ಲ… ಯಾವತ್ತೂ ಬರಲಾರ್ರು ರೀ…
ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ ಯಾವತ್ತೂ ಹೋಗ್ಬಾರ್ದು..ರೀ…

ಆಟೋದವರ ಮೀಟರಲ್ಲಿ ಏನೇನಿದೆ… ತಿಳುಕೊಳ್ಳೊ ತಾಕತ್ತು ನಮಗೆಲ್ಲಿದೆ
ಎಡ್ಜೆಸ್ಟು ಇರದ… ಮೀಟ್ರೇನೆ ಇಲ್ಲ…
ಮೀಟರು ಓಡಬಹುದು ನಿಂತಲ್ಲಿಯೆ… ನಂಬೋಕೆ ಆಗಲ್ಲ ಡೌಟಿಲ್ಲದೆ…
ಅನುಮಾನ ಪಡದೆ… ಉಳಿಗಾಲ ಇಲ್ಲ…

ಮೀ…ಟ್ರನ್ನು ಎಡ್ಜೆಷ್ಟು ಮಾಡೋದು ಈಝಿ…
ಡಿಜಿ…ಟಲ್ಲು ಆದ್ ಮೇಲೆ ಹಿಂಗಾಯ್ತು ಸ್ವಾಮಿ

ಮೀಟ್ರಲ್ಲಿ ಜಂಪಿಂಗು ಕಂಪಲ್ಸರಿ… ಯಾವ್ದಕ್ಕೂ ಮೀಟ್ರನ್ನು ನೋಡ್ತಾ ಇರಿ…

ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ. ಯಾವತ್ತೂ ಹೋಗ್ಬಾರ್ದು..ರೀ…
ಯೆತ್ಲಾಗೆ ನೀವ್ ಕರಿರಿ… ಅತ್ಲಾಗೆ ನಾವ್ ಬರಲ್ಲ… ಯಾವತ್ತೂ ಬರಲಾರ್ರು ರೀ…

ಯಾವೇರ್ಯಾಗ್ ಹೋದ್ರೂನು ಹಿಂಗೆ ಕಣ್ರಿ… ಬಸ್ಸಲ್ಲಿ ಚೀಪ್-ನಲ್ಲಿ ಹೋಗ್ಬೋದುರೀ
ಆಟೋಗೆ ಸುಮ್ನೆ… ಕಾಯ್ಬಾರ್ದು ಕಣ್ರಿ
ಟೈಮ್ ಇದ್ರೆ ಒಂಚೂರು ನಿಂತ್ಕೊಂಡಿರಿ… ಪುಷ್ಪಕ್ಕು ಬರಬಹುದು ಕಾಯ್ತಾ ಇರಿ
ಆಟೋಗೆ ಕಾಸು… ಕೊಡಬಾರ್ದು ಕಣ್ರಿ

ಬೆನ್ನಲ್ಲಿ ಬಂತ್-ನೋಡಿ ಮೂರ್ಮೂರು ಬಸ್ಸು
ಯಾವ್ದಾದ್ರು ಒಂದಾದ್ರು ಸಿಗ್ಬೋದು ನೋಡಿ
ಎಲ್ಲಾರ್ನು ಬೈಯೋಕೆ ಹೋಗ್ಬಾರ್ದು ರೀ… ಕೆಲವ್ರಾದ್ರು ಒಳ್ಳೆಯವ್ರು ಇರಬೌದು ರೀ...

ಕತ್ಲಲ್ಲಿ ಬಾಡಿಗೆಗೆ… ಆಟೋವ ಕರೆಯೋಕೆ. ಯಾವತ್ತೂ ಹೋಗ್ಬಾರ್ದು..ರೀ…
ಆಟೋ ಸಮಾಚಾರ್… ಬೇಕಾದ್ರೆ ಹೇಳ್ತಿನಿ… ನನ್ನನ್ನು ಕೇಳ್ಕೊಂಬಿಡಿ…

ಹಾಗೆಯೇ, ಭಾರತದ ವಿರುದ್ಧ ಕ್ರಿಕೆಟ್‌ನಲ್ಲಿ ಹೀನಾಯ ಸೋಲುಂಡ ಆಸ್ಟ್ರೇಲಿಯಾ ತಂಡದ ಪರಿಸ್ಥಿತಿ-

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ
ಮಾನ್‌ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್‌ಗೆ ಹೋಗ್ಬಿಟೈತೆ

ಪಾಂಚ್ ದಿನ್ ಬೇಕಾಗಿಲ್ಲ… ನಮ್ದುಕೇ
ತೀನ್ ದಿನ್ ಖೇಲ್ತಾ ಇಲ್ಲ… ನಮ್ದುಕೇ
ಇಂಡಿಯಾನೇ ಸಾಕಾಗ್ಬಿಟ್ಟೈತೆ

ದಿಲ್ಲಿ ಒಳ್ಗೆ ನೆಗ್ದು ಬಿದ್ದ… ನಮ್ಮ ಟೀಮ್ನ ಎಲ್ರೂ ಇಂದು… ಕ್ಯಾಕರ್ಸಿ… ಉಗಿತವ್ರೆ
ನಿಮ್ದುಕ್ಕೆ… ವೇಷ್ಟ್ ಫೆಲೋಸ್ ಅಂತಾ ಅವ್ರೆ

ಮೀಡ್ಯಾ-ಗೀಡ್ಯಾ ನಕ್ಕೋಜಿ ಸುಮ್ಕೆ ಪ್ಯಾಕ್ ಕರೋಜಿ
ನಮ್ದುಕ್ಕೆ ಪ್ಲೇನ್… ಮಿಸ್ಸ್ ಆಗ್ತಾ ಹೈ

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ

ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಧವನ್ ಮಾರ್ಕೇ ಮೆರ್ದುಬಿಡೋದೇ
ಸ್ಪಿನ್ನು ಗಿನ್ನು ಆಗ್-ಬಿಟ್ಟಿ… ಪೂರಾ ಮ್ಯಾಚು ಸೋತುಬಿಟ್ವಿ… ಅಶ್ವಿನ್ ಜಾದು ಮಾಡಿಬಿಡೋದೇ
ನಮ್ಮುಂದೆ… ಶಿಖರ್ ಧವನ್ ಮೆರ್ದುಬಿಡೋದೇ

ಮುರ್ಳಿ ಪುಜಾರ ಯಾಕ್ ಕೇಳ್ತೀ ನೆನೆದ್ರೆ ಜುಂ ಜುಂ… ಅಂತೈತಿ
ಜಡೇಜಾನೂ ಹೆಚ್ಕೊಂಡ್-ಬಿಡೋದೇ

ನಕ್ಕೋ… ನಕ್ಕೋ…

ಹಾರ್‌ಗೆ ಅಗ್ಬಿಟೈತೆ… ಓ ನಮ್ದುಕ್ಕೆ… ಹಾರ್‌ಗೆ ಅಗ್ಬಿಟೈತೆ
ಮಾನ್‌ಗೆ ಹೊಗ್ಬಿಟೈತೆ… ಓಯ್ ನಮ್ದುಕ್ಕೆ… ಮಾನ್‌ಗೆ ಹೋಗ್ಬಿಟೈತೆ

ಇಂತಹ ಸೃಜನಶೀಲ ವಿಜಯರಾಜ್ ಕ್ಯಾನ್ಸರ್‌ನ ಮಾರಿಗೆ ಬಲಿಯಾಗಿ ನಮ್ಮನ್ನೆಲ್ಲ ಬಿಟ್ಟುಹೋದ. ಸ್ವರ್ಗದಲ್ಲೀಗ ಯಾರಿಗೆ ಟಾಂಗ್ ಕೊಡುತ್ತ ಅಣಕವಾಡು ಕಟ್ಟುತ್ತಿದ್ದಾನೋ.

ಆಗಲೇ ಹೇಳಿದಂತೆ ಅಣಕವಾಡು ರಚನೆಗೆ ಮತ್ತು ಆಸ್ವಾದನೆಗೆ ಬೇಕಾದ್ದು ಭರಪೂರ ಹಾಸ್ಯಪ್ರಜ್ಞೆ. ಮಡಿವಂತರು ಇದರತ್ತ ಹೊರಳಲೂಬಾರದು. ಉದಾಹರಣೆಗೆ ಹುಬ್ಬಳ್ಳಿಯ ವಿನಾಯಕ ಕಾಮತ್ ಎಂಬ ಸ್ನೇಹಿತ, ರಸಾಯನಶಾಸ್ತ್ರ ಸಂಶೋಧನವಿದ್ಯಾರ್ಥಿ ರಚಿಸಿದ ಈ ಅಣಕವಾಡು ಕೆಲವರಿಗೆ ಛೀ ಥೂ ಅಂತನಿಸಬಹುದು. ಆದರೆ ಹಾಸ್ಯರಸ ದೃಷ್ಟಿಯಿಂದಷ್ಟೇ ನೋಡಿದರೆ ಬಹಳ ಚೆನ್ನಾಗಿದೆ. ಸ್ನೇಹಿತರ ಗುಂಪಿನಲ್ಲಿ ಅಕಸ್ಮಾತ್ತಾಗಿ ಯಾರಿಗಾದರೂ ಅಪಾನವಾಯು ಹೋದಾಗ, ಅದೂ ಮ್ಯೂಟ್ ಮೋಡ್‌ನಲ್ಲಿದ್ದರೆ, ಪರಸ್ಪರ ದೂರಿಕೊಳ್ಳುವ ಪರಿ-

ಅನಿಸುತಿದೆ ಯಾಕೋ ಇಂದು ನೀನೇನೆ ಹೂಸಿದೆ ಎಂದು
ಶಬ್ದದ ಅಂಜಿಕೆಯಿಂದ ತಡೆತಡೆದು ಬೀಸಿದೆ ಎಂದು
ಆಹಾ ಎಂಥ ಮಧುರ ವಾಸನೆ
ಕೊಲ್ಲಬೇಡ ಹೀಗೆ ನನ್ನ ಹೂಸಿ ಸುಮ್ಮನೆ

ಬೀಸುವ ಗಾಳಿಯು ಸೂಸಿದೆ ಹೂಸಿನ ಪರಿಮಳ
ಇನ್ಯಾರ ಹೂಸಿಗೂ ಆಗದು ಇಂತಹ ತಳಮಳ
ನಿನ್ನುಯ ಉದರವ ಖಾಲಿ ಮಾಡಿ ಬಾ
ಮತ್ತೆ ತಡೆಯೆನಾ ಒಂದು ಕ್ಷಣ
ನಾಕೈದೆ ಸಾಕಾಗ್ ಹೋಗಿದೆ
ಟಾಯ್ಲೆಟ್ ಗೆ ಹೋಗಿ ಬಾ ಒಮ್ಮೆ ಹಾಗೆ ಸುಮ್ಮನೆ

ನಿನ್ನಯ ಹೂಸಲಿ ಆಗದ ವಾಸನಾ ಕಹಿಯಿದೆ
ಹೋಗದೆ ಹಠದಲಿ ಆಚೆಗೆ ಇಲ್ಲಯೇ ಸಿಡಿಸಿದೆ
ಬಾಯಲಿ ಬಾರದೆ ವಾಂತಿಯ ಕೆಸರ
ಹೊಟ್ಟೇಲೆ ನಾನು ತಡೆದಿರುವೆ
ನಿನಗುಂಟೆ ಅದರ ಕಲ್ಪನೆ
ಚೆಂಬ ಹಿಡಿದು ಹೋಗೆ ಒಮ್ಮೆ ಹಾಗೇ ಸುಮ್ಮನೆ

ಇನ್ನು ಕೆಲವು ಅಣಕವಾಡುಗಳು ಸೊಂಟದ ಕೆಳಗಿನವು ಇರುತ್ತವೆ, ಸಮಯೋಚಿತವಾಗಿ ಸೆಲೆಕ್ಟಿವ್ ಶ್ರೋತೃವರ್ಗದಲ್ಲಿ ಅವೂ ಮಿಂಚುತ್ತವೆ.

ಆದರೆ, ಸೊಂಟದ ವಿಷ್ಯ ಬೇಡ ಶಿಷ್ಯ ಎಂದು ಮೂಗುಮುರಿಯಬೇಕಿಲ್ಲ. ಸೊಂಟಕ್ಕೆ ಕಟ್ಟಿಕೊಳ್ಳುವ ಪಂಚೆ ಈ ಅಣಕವಾಡಿನಲ್ಲಿ ಕೊಟ್ಟಿರುವ ಪಂಚ್, ಬಿಳಿ ಪಂಚೆಯಂತೆ ಎಷ್ಟು ಕ್ಲೀನಾಗಿದೆ ನೋಡಿ:

ನೀನಾರಿಗಾದೆಯೋ ಎಲೈ ಪ್ಯಾಂಟೇ
ಗರಿಗರಿ ಪಂಚೆ ನಾನು...
ಉಟ್ಟರೆ ಲುಂಗಿಯಾದೆ
ತೊಟ್ಟರೆ ಶಾಲಾದೆ
ಕಟ್ಟಿದರೆ ತಲೆಗೆ ರುಮಾಲವಾದೆ...
ಕಟ್ಟದೆ ಹಾಸಿದರೆ ಮೇಲುಹೊದ್ದಿಕೆಯಾದೆ...

ಇದರ ಮೂಲ ಹಾಡು ನಿಮಗೆ ಗೊತ್ತಿರಬಹುದು. ಮತ್ತೆ ಜಿ.ಪಿ.ರಾಜರತ್ನಂ ಅವರ ನಾಯಿಮರಿ ಪದ್ಯಕ್ಕೂ ಒಂದು ಅಣಕು ಇದೆ: ‘ಓ ಪುಢಾರಿ ಓ ಪುಢಾರಿ ಓಟು ಬೇಕೆ? ಓಟು ಬೇಕು ಸೀಟು ಬೇಕು ಎಲ್ಲ ಬೇಕು... ಓ ಪುಢಾರಿ ನಿನಗೆ ಸೀಟು ಏಕೆ ಬೇಕು... ಸೀಟಿನಲ್ಲಿ ಕೂತು ಹಣವ ಬಾಚಬೇಕು’ ಏಕೆಂದರೆ, ‘ಎಲ್ಲಾರು ಮಾಡುವುದು ವೋಟಿಗಾಗಿ... ಒಂದು ಸೀಟಿಗಾಗಿ ಬಿಡಿಎ ಸೈಟಿಗಾಗಿ...’ ಆಧುನಿಕ ಕಾಲದ ಬೇಕಾಬಿಟ್ಟಿ ಕವಿತೆಗಳ ಭರಾಟೆಗೆ ಬೆರಗಾಗಿ ಕವಿ ಬಿ.ಆರ್.ಲಕ್ಷ್ಮಣರಾವ್ ಒಂದು ಅಣಕವಾಡು ಬರೆದಿದ್ದಾರೆ: 

ಪದ್ಯವಂತರಿಗಿದು ಕಾಲವಲ್ಲ
ಸದ್ಯೋಜಾತರಿಗೆ ಸುಭಿಕ್ಷ ಕಾಲ॥
ಛಂದೋಬದ್ಧ ಕಾವ್ಯ ಎಂದೋ ಕಾಣೆಯಾಗಿ
ಇಂದೋ ಗದ್ಯವೇ ಪದ್ಯವಾದ ಕಾಲ

ಕಂದ ತ್ರಿಪದಿ ಷಟ್ಪದಿಯ ಮಾತಂತಿರಲಿ
ಭಾವಗೀತೆಗೂ ಇದು ಅಭಾವ ಕಾಲ॥
ಕೊಂಡಿಯಿಲ್ಲದ ಚೇಳಿನಂಥ ಹನಿಗವನಗಳು
ಧಂಡಿಧಂಡಿಯಾಗಿ ಪಿತಗುಡುವ ಕಾಲ

ಕುಂಡಿಯೂರಲು ವ್ಯವಧಾನವಿಲ್ಲದೆ ನಿಂತು
ಕೊಂಡೇ ಉಂಡೋಡುವ ಧಾವಂತ ಕಾಲ॥
ಫೇಸ್‌ಬುಕ್ಕಿನಲ್ಲಿ ಕಿಕ್ಕಿರಿದ ಚಿಳ್ಳೆಪಿಳ್ಳೆ
ನೀರ್ಗುಳ್ಳೆಪದ್ಯ ಕಾಲ

ಧ್ಯಾನಸ್ಥ ಮನಸ್ಸಿನ ಗಂಭೀರ ಕಾವ್ಯಕ್ಕೆ
ಇಂಬೇ ಇರದಂಥ ಹುಂಬ ಕಾಲ॥
ಪರಂಪರೆ ಯಾರಿಗೂ ಬೇಕಿರದ ಹೊರೆಯಾಗಿ
ಹಿರಿಯರೆಲ್ಲ ಮರೆಗೆ ಸರಿದ ಕಾಲ

ಗಾಳಿಯಲ್ಲೇ ಬೇರೂರಿ ಬೆಳೆವ ತುರುಸಿನ ಕಾಲ
ಗುರುವಿರದ ಗುರಿಯಿರದ ಅತಂತ್ರ ಕಾಲ

ಅಂದಹಾಗೆ ಇವತ್ತಿನ ಲೇಖನದ ಶೀರ್ಷಿಕೆ ಒಂದು ಹಳೆಯ ಕನ್ನಡ ಚಿತ್ರಗೀತೆಯ ಸಾಲನ್ನೇ ಅಣಕವಾಡಿದ್ದು. ಯಾವುದೆಂದು ನಿಮಗೆ ಗೊತ್ತಾಯಿತೇ?

* * *


You can follow any responses to this entry through the RSS 2.0 feed. Both comments and pings are currently closed.
Podbean App

Play this podcast on Podbean App