ಪದ-ಶ್ರಾವ್ಯ

ಈಗ ಆಡಿಯೋ ಟಚ್!

29
Oct 2011
Waste Management
Posted in DefaultTag by sjoshi at 9:39 am

ದಿನಾಂಕ  30 ಅಕ್ಟೋಬರ್ 2011ರ ಸಂಚಿಕೆ...

ಗಣಿ, ಸಗಣಿ ಎಲ್ಲ ‘ವೇಸ್ಟ್ ಕೇಸ್’ಗಳೇ

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ರಸವಾರ್ತೆಯಂತೆ ಬಣ್ಣಿಸಲಿಕ್ಕೆ ಹೇಳಿಮಾಡಿಸಿದಂಥ ಸಂಗತಿ. ಮೊನ್ನೆ ಇಲ್ಲಿ ವಾಷಿಂಗ್ಟನ್‌ನ ಉಪನಗರವೊಂದರಲ್ಲಿ ನಡೆದದ್ದು. ಇಲ್ಲಿನ ಮಾಧ್ಯಮಗಳು ಇದನ್ನು ಸಾಕಷ್ಟು ರಸವತ್ತಾಗಿಯೇ ಕವರ್ ಮಾಡಿದ್ದವು. ನಿಮಗೆ ಕನ್ನಡದಲ್ಲಿ ವಿವರಿಸುವಾಗ ಮತ್ತಷ್ಟು ತಮಾಷೆಯಾಗಿಸಿ ಹೇಳಬೇಕೆನ್ನಿಸಿತು. ಅದಕ್ಕಾಗಿ ಜಿ.ಪಿ.ರಾಜರತ್ನಂ ಬರೆದ ನಾಯಿಮರಿ ಪದ್ಯಕ್ಕೆ ಒಂದು ವಿಚಿತ್ರ ಸಾಲಿನ ಸೇರ್ಪಡೆ ಮಾಡಿದ್ದೇನೆ- “ನಾಯಿಮರಿ ಇಶ್ಶಿ ಹಾಕಿದ್ರೇನು ಮಾಡುವೆ? ಕಾಲು ಕೆರೆದು ಜಗಳವಾಡಿ ಕೋರ್ಟಿಗ್ಹೋಗುವೆ!”

ಆದದ್ದಿಷ್ಟೇ: ಕಿಂಬರ್ಲಿ ಎಂಬ ಮಹಿಳೆ ತನ್ನ ಸ್ನೇಹಿತೆ ಪ್ರವಾಸದಲ್ಲಿದ್ದಾಗಲೆಲ್ಲ ಆಕೆಯ ನಾಯಿಮರಿಯನ್ನು ತಾತ್ಕಾಲಿಕವಾಗಿ ತನ್ನ ಮನೇಲಿಟ್ಟುಕೊಳ್ಳುತ್ತಾಳೆ. ಮುದ್ದಾದ ಬಿಳಿಬಣ್ಣದ ಮರಿ. ‘ಬಾಕ್ಸ್‌ಟರ್’ ಎಂದು ಹೆಸರು. ಕಿಂಬರ್ಲಿ ಅದನ್ನು ದಿನಾಲೂ ವಾಕಿಂಗ್‌ಗೆ ಕರಕೊಂಡು ಹೋಗುತ್ತಾಳೆ. ಈ ದೇಶದಲ್ಲಿ ಹೇಗಪ್ಪಾ ಅಂದ್ರೆ ನಾಯಿಯನ್ನು ವಾಕಿಂಗ್‌ಗೆ ಕರಕೊಂಡು ಹೋಗುವವರು ಎರಡು ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ಒಂದು, ನಾಯಿಗೆ ಸರಪಳಿ ಕಟ್ಟಿದ್ದಿರಬೇಕು; ಎರಡು, ಮಾಲೀಕನ ಬಳಿ ಖಾಲಿ ಪ್ಲಾಸ್ಟಿಕ್‌ಚೀಲಗಳಿರಬೇಕು. ನಾಯಿ ‘ಬಿಜಿನೆಸ್’ ಮಾಡಿದ್ರೆ (ನಿಮಗಿದನ್ನು ಓದುವಾಗ ವಾಕರಿಕೆ ಬರಬಾರದೆಂದು, ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಬಳಸಿದ ಪದವನ್ನೇ ನಾನೂ ಬಳಸಿದ್ದೇನೆ) ಮಾಲೀಕನೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕಸದತೊಟ್ಟಿಯಲ್ಲಿ ಬಿಸಾಡಬೇಕು. ಇಲ್ಲಿ ಬೆಕ್ಕು-ನಾಯಿಗಳನ್ನು ಮಕ್ಕಳಿಗಿಂತಲೂ ಮುದ್ದಾಗಿ ಸಾಕುವವರು ಈ ನಿಯಮಗಳನ್ನು ಯಾವೊಂದು ಬೇಸರವಿಲ್ಲದೆ ಪಾಲಿಸುತ್ತಾರೆ ಕೂಡ.

dogwalker.gif

ಕಿಂಬರ್ಲಿಯ ಪಕ್ಕದಮನೆಯಾಕೆ ಕಾರ್ನೆಲ್, ಸ್ವಲ್ಪ ಘಟವಾಣಿ ಹೆಂಗಸು. ಬೇಕಂತಲೇ ಕಿಂಬರ್ಲಿಗೆ ಆಗಾಗ ಕಿರುಕುಳ ಕೊಟ್ಟು ಸತಾಯಿಸುವವಳು. ಕಳೆದ ಏಪ್ರಿಲ್‌ನಲ್ಲಿ ಚುಮುಚುಮು ಚಳಿಯ ಒಂದು ಮುಂಜಾನೆ ಕಿಂಬರ್ಲಿ ಬಾಕ್ಸ್‌ಟರ್‌ನನ್ನು ವಾಕ್ ಕರಕೊಂಡು ಹೋಗುತ್ತಿದ್ದಾಗ ಅದು ತನ್ನ ಜಾಗೆಯಲ್ಲಿ ‘ಬಿಜಿನೆಸ್’ ಮಾಡ್ತು, ಮತ್ತು ಕಿಂಬರ್ಲಿ ಅದನ್ನು ತೆಗೆಯದೇ ಹಾಗೇ ಬಿಟ್ಟಳು ಎಂದು ಕಾರ್ನೆಲ್ ಕ್ಯಾತೆ ತೆಗೆದಳು. ನಾಯಿಯ ‘ಬಿಜಿನೆಸ್’ ರಾಶಿಯ ಫೋಟೊ ತೆಗೆದಿಟ್ಟಳು. ಕಿಂಬರ್ಲಿ ಆ ದೂರನ್ನು ಅಲ್ಲಗಳೆದಳು. ಕೆರಳಿದ ಕಾರ್ನೆಲ್ ತತ್‌ಕ್ಷಣವೇ ಪೊಲೀಸ್ ಕಂಪ್ಲೇಂಟ್ ಕೊಟ್ಟಳು. ಡಿಸ್ಟ್ರಿಕ್ಟ್ ಕೋರ್ಟ್‌ನಲ್ಲಿ ಕೇಸು ದಾಖಲಾಯಿತು. ಜೂನ್‌ನಲ್ಲೊಂದು ದಿನ ಕೇಸು ವಿಚಾರಣೆಗೂ ಬಂತು. ಕಿಂಬರ್ಲಿಗೆ ಅವತ್ತು ಕಾರಣಾಂತರದಿಂದ ಕೋರ್ಟಿಗೆ ಹಾಜರಾಗುವುದಕ್ಕಾಗಲಿಲ್ಲ. ಅದಕ್ಕಾಗಿ ಕೋರ್ಟು ಅವಳಿಗೆ 250 ಡಾಲರ್ ದಂಡ ವಿಧಿಸಿತು. ಅವಮಾನಗೊಂಡ ಆಕೆ ಸರ್ಕ್ಯೂಟ್ ಕೋರ್ಟ್‌ನ ಮೊರೆಹೊಕ್ಕಳು. ಮೊನ್ನೆ ಅಕ್ಟೋಬರ್ 25ರಂದು ಸರ್ಕ್ಯೂಟ್ ಕೋರ್ಟ್‌ನಲ್ಲಿ ನಾಲ್ಕೈದು ಗಂಟೆಗಳ ವಾಗ್ವಾದ ವಿಚಾರಣೆ ನಡೆಯಿತು. ನಾಯಿಯ ಅಸಲಿ ಮಾಲೀಕಳೂ ಕಿಂಬರ್ಲಿ ಪರವಾಗಿ ಸಾಕ್ಷಿ ಹೇಳಿದಳು. “ಬಾಕ್ಸ್‌ಟರ್‌ನ ‘ಬಿಜಿನೆಸ್’ನ ಸಾಮಾನ್ಯ ಗಾತ್ರ ರಚನೆ ಹೇಗಿರುತ್ತದೆಂದು ನಾನು ಬಲ್ಲೆ. ಇವತ್ತೂ ಸ್ವಲ್ಪ ಸ್ಯಾಂಪಲ್ ತಂದಿದ್ದೇನೆ, ನನ್ನ ಕಾರ್‌ನಲ್ಲಿದೆ. ಕಾರ್ನೆಲ್ ತೆಗೆದ ಫೋಟೊದಲ್ಲಿರುವುದು ಬಾಕ್ಸ್‌ಟರ್‌ನ ‘ಬಿಜಿನೆಸ್’ ಅಲ್ಲ. ಅಷ್ಟೂ ವಿಶ್ವಾಸವಿಲ್ಲದಿದ್ದರೆ ಕಾರ್ನೆಲ್ ಆ ‘ಬಿಜಿನೆಸ್’ಅನ್ನು ಡಿ‌ಎನ್‌ಎ ಪರೀಕ್ಷೆಗೆ ಗುರಿಪಡಿಸಬೇಕಿತ್ತು. ಆಗಲೂ ಅದು ನಮ್ಮ ಬಾಕ್ಸ್‌ಟರ್‌ನದಲ್ಲವೆಂದು ಸಾಬೀತಾಗುತ್ತಿತ್ತು”  ಎಂದು ಗುಡುಗಿದಳು. ನ್ಯಾಯಾಧೀಶರಿಗೆ ಮನವರಿಕೆಯಾಗಿ ಕಿಂಬರ್ಲಿಯನ್ನು ನಿರಪರಾಧಿ ಎಂದು ಘೋಷಿಸಿದರು. ಕೆಟ್ಟಬುದ್ಧಿಯ ಕಾರ್ನೆಲ್ ಇನ್ನುಮುಂದೆಯಾದರೂ ತನ್ನ ತಂಟೆಗೆ ಬರಲಾರಳಂತ ಕಿಂಬರ್ಲಿಯ ಆಶಯ.

baxterwalk.jpg

ಹೀಗೂ ಉಂಟೇ ಎಂದು ನೀವೊಮ್ಮೆ ಹುಬ್ಬೇರಿಸಬಹುದು. ಅಥವಾ, ಅಮೆರಿಕ ಅಲ್ವೇ ಅಲ್ಲಿ ಇಂಥವೆಲ್ಲ ಮಾಮೂಲಿ ಎಂದೂ ಅಂದುಕೊಳ್ಳಬಹುದು. ಅಮೆರಿಕ ಏನು, ಮೊನ್ನೆ ಭಾರತದಲ್ಲಿಯೇ ಪುಣೆಯಲ್ಲಿ ಇಂಥದ್ದೇ ಒಂದು ಕೇಸ್ ಆಗಿತ್ತಂತೆ. ಉದಯವಾಣಿಯಲ್ಲಿ ಆ ಸುದ್ದಿ ಬಂದಿತ್ತು. ಗಣೇಶೋತ್ಸವದ ಮೆರವಣಿಗೆಯಲ್ಲಿ ಟ್ಯಾಬ್ಲೋಗೆ ಬಳಸಿದ್ದ ಗಾಡಿಯ ಎತ್ತು ‘ಸಂದೀಪ್’, ಪಟಾಕಿ ಮತ್ತು ಬ್ಯಾಂಡ್‌ವಾದ್ಯಗಳ ಗರ್ಜನೆಗೆ ಹೆದರಿ ಸಗಣಿ ಹಾಕಿತ್ತಂತೆ. ಭಕ್ತಾದಿಗಳೆಲ್ಲ ಅದರ ಮೇಲೆ ಕಾಲಿಟ್ಟು ಎಡವಟ್ಟು ಮಾಡ್ಕೊಂಡಿದ್ದರಂತೆ. ಎತ್ತಿನ ಮಾಲೀಕ ಬಾಲುಶೇಕ್‌ಗೆ ಪೊಲೀಸರು ಶೋಕಾಸ್ ನೋಟೀಸ್ ಕೊಟ್ಟಿದ್ದರಂತೆ. ಆಮೇಲೇನಾಯ್ತು ಅಂತ ವಿವರಗಳಿರಲಿಲ್ಲ. ಸೋ, ಅಮೆರಿಕದಲ್ಲಿ ನಾಯಿಮರಿ ‘ಬಿಜಿನೆಸ್’ನ ಕೇಸ್ ಆಗುವುದು ದೊಡ್ಡ ವಿಷಯವೇ ಅಲ್ಲ. ನಾನಾದರೂ ಅದನ್ನು ದೊಡ್ಡ ವಿಷಯವೆಂದು ಇವತ್ತಿನ ಅಂಕಣಕ್ಕೆ ಆಯ್ದುಕೊಂಡದ್ದೂ ಅಲ್ಲ. ಮತ್ತೇಕೆ? ಮೊನ್ನೆ ಕೇಸ್ ವಿಚಾರಣೆಯ ದಿನ ಮತ್ತು ಅದರ ಮಾರನೇ ದಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಮುಖಪುಟದಲ್ಲಿಯೇ ಈ ವ್ಯಾಜ್ಯದ ಸುದ್ದಿಯನ್ನು ಪ್ರಕಟಿಸಿತ್ತು, ಅದಕ್ಕೆ ‘ವೇಸ್ಟ್ ಕೇಸ್’ ಎಂದು ಪಕ್ಕಾ ಶ್ಲೇಷೆಯ ಶೀರ್ಷಿಕೆಯನ್ನೂ ಕೊಟ್ಟಿತ್ತು. ಆ ‘ವೇಸ್ಟ್ ಕೇಸ್’ ಎಂಬ ಪದಪ್ರಯೋಗವೇ ನನಗೆ ಅತ್ಯಂತ ಸ್ವಾರಸ್ಯಕರವಾಗಿ, ಪರಮಸತ್ಯದಂತೆ ಪ್ರಕಾಶಮಾನವಾಗಿ ಗೋಚರಿಸಿದ್ದು. ಹಾಗಾಗಿಯೇ ಇವತ್ತು ಅದನ್ನು ಪರಾಗಸ್ಪರ್ಶಕ್ಕೆ ವಿಷಯವಾಗಿಸಿದ್ದು!

ವಾಷಿಂಗ್ಟನ್‌ನಲ್ಲಿ ಸಗಣಿ ಕೇಸ್ ಹೇಗೆ ‘ವೇಸ್ಟ್ ಕೇಸ್’ ಆಗುತ್ತದೆಯೋ ನಮ್ಮ ಕರ್ನಾಟಕದಲ್ಲಿ ಗಣಿ ಕೇಸ್ ಸಹ ಇದೀಗ ‘ವೇಸ್ಟ್ ಕೇಸ್’ ಆಗಿಹೋಗಿದೆ, ಲೋಕಾಯುಕ್ತ ವರದಿಯನ್ನು ವೇಸ್ಟ್ ಎನ್ನುವುದರ ಮೂಲಕ. ಇನ್ನೊಂದು ಅರ್ಥದಲ್ಲೂ ಅದು ಮಹಾ ‘ವೇಸ್ಟ್’ ಕೇಸೇ. ಕರ್ನಾಟಕ ಭೂಗರ್ಭದ ಅಪಾರ ಸಂಪತ್ತನ್ನು ದೋಚುತ್ತಿರುವ, ರಾಜ್ಯದ ಬೊಕ್ಕಸಕ್ಕೆ ಕೋಟಿಗಟ್ಟಲೆ ರೂಪಾಯಿಗಳನ್ನು ವೇಸ್ಟ್ ಮಾಡುತ್ತಿರುವ ಅಕ್ರಮ ಗಣಿಗಾರಿಕೆಯ ಕೇಸು ವೇಸ್ಟ್ ಕೇಸ್ ಅಲ್ಲದೆ ಮತ್ತಿನ್ನೇನು? ಅಸಲಿಗೆ ನಾವೀಗ ನೋಡುತ್ತಿರುವ ಒಂದೊಂದು ಕೇಸ್ ಕೂಡ ಟೋಟಲ್ ವೇಸ್ಟ್. ಅಂತ್ಯಕಾಣದ ಅವುಗಳ ವಿಲೇವಾರಿಗಾಗಿ ಎಷ್ಟೊಂದು ಸಂಪನ್ಮೂಲಗಳು ವೇಸ್ಟ್. ದಿನಾಬೆಳಿಗ್ಗೆ ಅವೇ ವೇಸ್ಟ್ ಕೇಸ್‌ಗಳ ಕೊಳಕು ಸುದ್ದಿಯನ್ನು ಜನರಿಗೆ ಮುಟ್ಟಿಸಲಿಕ್ಕಾಗಿ ಎಷ್ಟೊಂದು ನ್ಯೂಸ್‌ಪ್ರಿಂಟ್ ವೇಸ್ಟ್. ಇಪ್ಪತ್ತನಾಲ್ಕು ಗಂಟೆಗಳೂ ಅದೇ ಕೆಟ್ಟ ಮುಖಗಳನ್ನು ತೋರಿಸುತ್ತ ಬೊಬ್ಬಿರಿಯುವ ವಾರ್ತಾವಾಹಿನಿಗಳಿಂದಾಗಿ ಎಷ್ಟೊಂದು ಶಕ್ತಿ ವೇಸ್ಟ್.

ತುಸು ಯೋಚಿಸಿದರೆ ನಮಗೆ ಅರಿವಾಗುತ್ತದೆ, ನಮ್ಮ ಸುತ್ತಮುತ್ತಲೆಲ್ಲ ವೇಸ್ಟ್‌ಗೆ ಲೆಕ್ಕವೇ ಇಲ್ಲ. ರಾಜಕೀಯ, ಕೋರ್ಟುಖಟ್ಲೆ ಅಂತಷ್ಟೇ ಅಲ್ಲ, ಬೇರೆ ವಿಚಾರಗಳೂ ವೇಸ್ಟ್ ಕ್ಯಾಟಗರಿಯವೇ. ಒಂದೆರಡು ಉದಾಹರಣೆಗಳನ್ನು ಕೊಡುತ್ತೇನೆ- ಮೊನ್ನೆ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂತು. ಬಹಳ ಸಂತೋಷ. ಒಡನೆಯೇ ‘ಕಂಬಾರರು ಅನರ್ಹರು, ಬೈರಪ್ಪನವರಿಗೆ ಬರಬೇಕಿತ್ತು’ ಅಂತೊಂದು ವಾದ. ‘ಬೈರಪ್ಪನವರಿಗೆ ಬೇಕಿದ್ದರೆ ಮರಣೋತ್ತರವಾಗಿ ಬರಲಿ’ ಎಂದು ಮತ್ತೊಂದು ಗುಲ್ಲು. ಅದರ ಬಗ್ಗೆ ಕಾಸು ಉಪಯೋಗವಿಲ್ಲದ ಚರ್ಚೆಗಳು. ಪುಟಗಟ್ಟಲೆ ಲೇಖನಗಳು. ಕೊನೆಗೂ ಏನು ಪುರುಷಾರ್ಥ ಸಾಧನೆಯಾಯ್ತು? ಟೋಟಲ್ ವೇಸ್ಟ್. ಅಣ್ಣಾಹಜಾರೆಯವರ ಹೋರಾಟ. ಖಂಡಿತ ಅರ್ಥಪೂರ್ಣವೇ. ಆದರೆ ಅವರೊಂದಿಗೆ ಸಾಕಷ್ಟು ಸಂಖ್ಯೆಯ ಢೋಂಗಿಗಳೂ ಸೇರ್ಕೊಂಡ್ರಲ್ಲ, ಅವರಿಂದಾಗಿ ಆ ಇಡೀ ಚಳುವಳಿಯ ಮೌಲ್ಯವೇ ಮಾಯವಾಗಿ ಅದೂ ಟೋಟಲ್ ವೇಸ್ಟ್. ಅಡ್ವಾಣೀಜಿಯ ಜನಚೇತನ ರಥಯಾತ್ರೆ. ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಲ್ಲಿಯೂ ರಥದ ಚಕ್ರಗಳು ಹೊರಳುವವಂತೆ. ಅದಕ್ಕಿಂತ ದೊಡ್ಡ ವೇಸ್ಟ್ ಪ್ರಹಸನ ಬೇರೆ ಬೇಕೆ? ಟಿವಿಯಲ್ಲಿ ಎಲ್ಲ ವಾಹಿನಿಗಳಲ್ಲೂ ದಿನಾ ಬೆಳಿಗ್ಗೆ ವಕ್ಕರಿಸುವ ಅಡ್ಡಕಸುಬಿ ಜ್ಯೋತಿಷಿಗಳಿದ್ದಾರಲ್ಲಾ ಅವರಂತೂ ಒಬ್ಬೊಬ್ಬರೂ ಪರಮ ವೇಸ್ಟ್. ಜನರನ್ನು ಮೌಢ್ಯಕ್ಕೆ ತಳ್ಳುವ, ವಾಸ್ತು ಇನ್ನೊಂದು ಮತ್ತೊಂದೆಂಬ ಅಪದ್ಧ ಉಪದೇಶಗಳಿಂದ ಜನರನ್ನು ‘ವೇಸ್ಟ್ ಬಾಡಿ’ಗಳನ್ನಾಗಿಸುವ ಕಪಟ ಜ್ಯೋತಿಷಿಗಳನ್ನು ಕಂಡರೆ ಸಿಟ್ಟುಬರುತ್ತೆ. ಹೋಗಲಿ, ಅವರೆಂದಂತೆ ಮುತ್ತುರತ್ನ ಸ್ವರ್ಣಾಭರಣಗಳನ್ನು ಕೊಳ್ಳೋಣವೆಂದು ಜ್ಯುವೆಲ್ಲರಿ ಅಂಗಡಿಗೆ ಹೋದರೆ ಅಲ್ಲಿಯೂ ‘ವೇಸ್ಟೇಜ್ ಚಾರ್ಚ್’ ಟೋಪಿ!

ನಿಜ, ವೇಸ್ಟ್ ಅನ್ನೋದಕ್ಕೂ ನ್ಯೂಟನ್ನನ ನಿಯಮ ಅನ್ವಯವಾಗುತ್ತದೆ. ಒಬ್ಬರಿಗೆ ವೇಸ್ಟ್ ಆದದ್ದು/ಅನಿಸಿದ್ದು ಇನ್ನೊಬ್ಬರಿಗೆ ಗೈನ್ ಆಗುತ್ತದೆ. ತದ್ವಿರುದ್ಧ ಕೂಡ ನಿಜವೇ. ಹಾಗೆನ್ನುವಾಗ ನನಗೊಂದು ವಿಷಯ ನೆನಪಾಗುತ್ತಿದೆ. ಕನ್ನಡ ಚಿತ್ರಗೀತೆಗಳನ್ನು ಆಧರಿಸಿ ಬರೆದಿದ್ದ, ಸಾಕಷ್ಟು ಮಂದಿ ಓದುಗರು ಆನಂದಿಸಿದ್ದ ಅಂಕಣಬರಹವೊಂದಕ್ಕೆ ಓದುಗಮಿತ್ರರೊಬ್ಬರು "Total waste article. Sorry for being blunt and rude" ಎಂದು ಪ್ರಾಮಾಣಿಕ ಅನಿಸಿಕೆ ವ್ಯಕ್ತಪಡಿಸಿದ್ದರು. ಅವರು ನನ್ನ ಹಿತೈಷಿಯೇ. ಬೇರೆ ಲೇಖನಗಳ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯಿಸಿ ಉತ್ತೇಜಿಸುವವರೇ. ಆ ಲೇಖನವೇಕೋ ಅವರಿಗೆ ಟೋಟಲ್ ವೇಸ್ಟ್ ಅನಿಸಿತು ಅಷ್ಟೇ. ಅವರಾದರೂ ಮುಲಾಜಿಲ್ಲದೆ ತಿಳಿಯಪಡಿಸಿ ಒಳ್ಳೇಕೆಲ್ಸ ಮಾಡಿದರು. ಬೇರೆಯವರಿಗೂ ಆ ಲೇಖನವಾಗಲೀ ಇತರ ಯಾವುದೇ ಲೇಖನವಾಗಲೀ ಕೊನೆಗೆ ಈ ಅಂಕಣವೇ ಆಗಲೀ ಟೋಟಲ್ ವೇಸ್ಟ್ ಅಂತ ಅನಿಸಬಾರದೆಂದೇನೂ ಇಲ್ಲವಲ್ಲ!?

baxterbsy.jpg

ಒಟ್ಟಿನಲ್ಲಿ ದಾಸರೆಂದಂತೆ ಲೊಳಲೊಟ್ಟೆ ಎಲ್ಲ ಲೊಳಲೊಟ್ಟೆ. ವೇಸ್ಟ್ ಅಂತಂದುಕೊಂಡರೆ ಎಲ್ಲವೂ ವೇಸ್ಟೇ. ಬಾಕ್ಸ್‌ಟರನ ‘ಬಿಜಿನೆಸ್ಸೂ’, ಬೂಕಿನಕೆರೆಯವನ ‘ಬೆರಳ ಸಂಕೇತ’ವೂ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


You can follow any responses to this entry through the RSS 2.0 feed. You can leave a response , or trackback from your own site.