ಪದ-ಶ್ರಾವ್ಯ

ಈಗ ಆಡಿಯೋ ಟಚ್!

20
Aug 2011
Worry dolls take away your worries
Posted in DefaultTag by sjoshi at 7:06 am

ದಿನಾಂಕ  21 ಆಗಸ್ಟ್ 2011ರ ಸಂಚಿಕೆ...

ಚಿಂತ್ಯಾಕೆ ಮಾಡುತ್ತಿದ್ದಿ ‘ಚಿಂತೆಗೊಂಬೆ’ಗಳಿದ್ದಾವೆ...

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ನಿಮಗೆ ನಂಬಿಕೆಗಳಲ್ಲಿ ನಂಬಿಕೆ ಇದೆಯೇ? ನಕ್ಷತ್ರ ಬೀಳ್ತಾ ಇರೋದನ್ನು ನೋಡುವಾಗ ಮನಸ್ಸಿನಲ್ಲೇ ಏನನ್ನಾದ್ರೂ ಹಾರೈಸಿದ್ರೆ ಅದು ನೆರವೇರುತ್ತೆ..., ಮಗುವಿನ ಹಾಲುಹಲ್ಲು ಕಳಚಿ ಬಿದ್ದಾಗ ಅದನ್ನು ತುಳಸಿದಳದಲ್ಲಿ ಮಡಚಿಟ್ಟು ಬಿಸಾಡಿದರೆ ಮಗು ಬೆಳೆದು ಪ್ರಸಿದ್ಧ ವ್ಯಕ್ತಿಯಾಗುತ್ತಾನೆ..., ನದಿ-ಕೆರೆ ಜಲಾಶಯಗಳನ್ನು ಮೊದಲಬಾರಿ ಕಂಡಾಗ ಆ ನೀರಿನೊಳಗೆ ನಾಣ್ಯ ಬಿಸಾಡಿದರೆ ಬಯಸಿದ ಕಾರ್ಯ ಕೈಗೂಡುತ್ತದೆ..., ಎಲೆ‌ಅಡಕೆ ಜಗಿಯುವಾಗ ನಾಲಿಗೆ ಕಡುಕೆಂಪಾದರೆ ಬಾಳಸಂಗಾತಿ ತುಂಬಾ ಪ್ರೀತಿಸುತ್ತಾನೆ/ಳೆ ಎಂದರ್ಥ... - ಈ ಥರದ ನಂಬಿಕೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ಅಂತ ನಾನು ಕೇಳಿದ್ದು.

ನನ್ನನ್ನು ಕೇಳಿದರೆ, ‘ನಂಬಿಕೆ ಇದೆ ಅಥವಾ ಇಲ್ಲ’ ಎನ್ನುವುದಕ್ಕಿಂತಲೂ ಇಂಥ ನಂಬಿಕೆಗಳ ಬಗ್ಗೆ ನನಗೆ ಗೌರವ ಇದೆ, ಆಸಕ್ತಿ ಇದೆ, ಅವುಗಳ ಹಿನ್ನೆಲೆ ತಿಳಿದುಕೊಳ್ಳುವುದು ತುಂಬ ಖುಷಿಯೆನಿಸುತ್ತದೆ ಎನ್ನುತ್ತೇನೆ. ಅದಕ್ಕೆ ಮುಖ್ಯ ಕಾರಣವೆಂದರೆ, ಕೆಲವೊಂದು ಚಂದದ ನಂಬಿಕೆಗಳಿವೆ ಅವುಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡದೇ ಇರಲಿಕ್ಕೆ ಸಾಧ್ಯವೇ‌ಇಲ್ಲ. ಉದಾಹರಣೆಗೆ, ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಮಗು ನಿದ್ದೆಯಲ್ಲೇ ನಕ್ಕರೆ (ಎಷ್ಟೋ ಸಲ ನಗುವುದೂ ಇದೆ!) ‘ದೇವರು ಬಂದು ಮಗುವನ್ನು ಮಾತನಾಡಿಸಿ ನಗಿಸುತ್ತಿದ್ದಾನೆ’ ಎಂಬ ನಂಬಿಕೆ ನಮ್ಮಲ್ಲಿದೆ. ಪರಮನಾಸ್ತಿಕರಿಗೂ ಈ ನಂಬಿಕೆಯ ಮೇಲೆ ಪ್ರೀತಿ ಬರುವ ಹಾಗಿದೆ ಇದು. ನಮ್ಮ ಕರಾವಳಿಯಲ್ಲಿ ಕುಟುಂಬದೈವಗಳು (ಭೂತಗಳು) ರಾತ್ರಿಹೊತ್ತು ಮಗುವಿನ ತೊಟ್ಟಿಲು ತೂಗುತ್ತವೆ ಎಂದೂ ನಂಬುತ್ತಾರೆ. ಅವೆಲ್ಲ ಹಳ್ಳಿಗುಗ್ಗುಗಳ ಕಥೆ ಅಂತ ಮೂಗುಮುರೀಬೇಡಿ! ಮೂರ್ನಾಲ್ಕು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ಅಮೆರಿಕದಲ್ಲಿ ತುಂಬ ಚಾಲ್ತಿಯಲ್ಲಿರುವ ಒಂದು ನಂಬಿಕೆ ‘ಗ್ರೌಂಡ್‌ಹಾಗ್ ಪ್ರಾಣಿ ಹೇಳುವ ಚಳಿಭವಿಷ್ಯ’ ಕುರಿತು ಬರೆದಿದ್ದೆ.

ನಮ್ಮ ಜೀವನಕ್ಕೊಂದಿಷ್ಟು ಸ್ವಾರಸ್ಯವನ್ನು ತಂದುಕೊಡುವ, ಸ್ವಲ್ಪ ಮಟ್ಟಿಗೆ ಅದನ್ನು ರಹಸ್ಯವನ್ನಾಗಿಸುವ ಈ ನಂಬಿಕೆಗಳು ಬಹಳ ಚಂದವೇ. ಎಲ್ಲಿಯವರೆಗೆ ಅವು ನಿರುಪದ್ರವಿಯಾಗಿ ವೈಯಕ್ತಿಕ ಮಟ್ಟದಲ್ಲಿ ಮಾತ್ರ ಇರುತ್ತವೋ ಅಲ್ಲಿವರೆಗೆ ಒಳ್ಳೆಯದೇ. ಯಾವಾಗ ಅಡ್ಡಕಸುಬಿ ಟಿವಿ-ಜ್ಯೋತಿಷಿಗಳು ಮಾಡುವಂತೆ ಮುಗ್ಧ ಜನರನ್ನು ಮೌಢ್ಯಕ್ಕೆ ದೂಡುತ್ತವೋ ಆಗ ನಂಬಿಕೆಗಳ ಮೇಲಿನ ಗೌರವ ಆಸಕ್ತಿಗಳು ಹೊರಟುಹೋಗುತ್ತವೆ.

ಇರಲಿ, ಇವತ್ತು ಒಂದು ಚಂದದ ನಂಬಿಕೆಯಿಂದ ಪರಾಗ ಸ್ಪರ್ಶಿಸೋಣವೇ? ನಿಮಗಿದು ಇಷ್ಟ ಆಗೇ‌ಆಗುತ್ತದೆ ಎಂಬ ನಂಬಿಕೆ ನನ್ನದು!

‘ಗ್ವಾಟೆಮಾಲ’ ಹೆಸರು ಕೇಳಿರಬಹುದು ನೀವು. ಇದು, ಲ್ಯಾಟಿನ್ ಅಮೆರಿಕ ಪ್ರಾಂತ್ಯದ ಒಂದು ಪುಟ್ಟ ದೇಶ. ಮರಗಳ ನಾಡು ಎಂದು ಅರ್ಥವಂತೆ ಗ್ವಾಟೆಮಾಲ ಎಂಬ ಪದಕ್ಕೆ, ಅಲ್ಲಿನ ಮಾಯಟೊಲ್ಟೆಕ್ ಭಾಷೆಯಲ್ಲಿ. ಪ್ರಾಚೀನ ‘ಮಾಯನ್’ ಸಂಸ್ಕೃತಿಯ ಕಾಲದಿಂದಲೂ ನೇಯ್ಗೆ ಆ ದೇಶದ ಜನರ ಮುಖ್ಯ ಕಸುಬು. ಬಟ್ಟೆ ನೇಯುವುದು ಮತ್ತು ಹೊಲಿಯುವುದು ಎಂದಮೇಲೆ ಅಲ್ಲಿ ಚಿಂದಿ ಬಟ್ಟೆ ಜಮೆಯಾಗುವುದು ಇದ್ದೇ‌ಇದೆಯಲ್ಲ? ಚಿಂದಿಯನ್ನೆಲ್ಲ ಜೋಡಿಸಿ ದುಪ್ಪಟ್ಟಿ, ಚೀಲ ಇತ್ಯಾದಿಗಳನ್ನು ತಯಾರಿಸುವುದು ಸರ್ವೇಸಾಮಾನ್ಯ. ಆದರೆ ಗ್ವಾಟೆಮಾಲ ದೇಶದಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಅಲ್ಲಿ ಚಿಕ್ಕಚಿಕ್ಕ ಕಡ್ಡಿಚೂರುಗಳಿಗೆ ಚಿಂದಿಬಟ್ಟೆ ತೊಡಿಸಿ ಬಣ್ಣಬಣ್ಣದ ಗೊಂಬೆಗಳನ್ನು ಮಾಡುತ್ತಾರೆ. ನಮ್ಮ ಕೈಬೆರಳುಗಳಷ್ಟೇ ಪುಟ್ಟ ಗಾತ್ರದ ಗೊಂಬೆಗಳು. ತಲಾ ಆರು ಗೊಂಬೆಗಳನ್ನು ಪುಟ್ಟ ಸಂಚಿಯಲ್ಲಿ ಅಥವಾ ಮರದ ಪೆಟ್ಟಿಗೆಯಲ್ಲಿಟ್ಟು ಮಾರುತ್ತಾರೆ. ಆ ಗೊಂಬೆಗಳಿಗೆ ವಿಶೇಷವಾದ ಮಾಂತ್ರಿಕ ಶಕ್ತಿ ಇರುತ್ತದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಅವುಗಳನ್ನು magical dolls ಅಥವಾ worry dolls ಎಂದೂ ಕರೆಯುತ್ತಾರೆ.

guatemalan-worry-dolls.jpg

‘ಚಿಂತೆ ಗೊಂಬೆಗಳು’ ಎನ್ನುವ ಹೆಸರೇ ಈ ಗೊಂಬೆಗಳ ಕುರಿತ ನಂಬಿಕೆಯನ್ನು ಕುತೂಹಲಕಾರಿಯಾಗಿಸುತ್ತದೆ. ಗ್ವಾಟೆಮಾಲದಲ್ಲಿ ಚಿಕ್ಕ ಮಕ್ಕಳು ಭಯಭೀತರಾದರೆ, ಯಾವುದೇ ಕಾರಣದಿಂದ ಆತಂಕಕ್ಕೊಳಗಾದರೆ ಮತ್ತು ನಿದ್ರೆ ಮಾಡದಂತಾದರೆ, ಆರು ಗೊಂಬೆಗಳಿರುವ ಚೀಲ ಅಥವಾ ಪೆಟ್ಟಿಗೆಯನ್ನು ಮಗುವಿಗೆ ಕೊಡುತ್ತಾರೆ. ಒಂದೊಂದು ರಾತ್ರಿಗೆ ಒಂದೊಂದು ಗೊಂಬೆಯಂತೆ ಆರು ರಾತ್ರಿಗಳೂ ಮಗು ಮಲಗುವ ಮುನ್ನ ಗೊಂಬೆಯ ಬಳಿ ತನ್ನೆಲ್ಲ ವ್ಯಥೆ ನೋವು ಆತಂಕಗಳನ್ನು ಹೇಳಿಕೊಳ್ಳಬೇಕು. ಆಮೇಲೆ ಆ ಗೊಂಬೆಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು. ಮಾರನೆದಿನ ಎದ್ದಾಗ ಗೊಂಬೆಯೂ ಇರುವುದಿಲ್ಲ, ಚಿಂತೆಯೂ ಇರುವುದಿಲ್ಲ! ಮಗು ಮಲಗಿದ ಮೇಲೆ ಹೆತ್ತವರೇ ಗೊಂಬೆಯನ್ನು ದಿಂಬಿನ ಕೆಳಗಿಂದ ತೆಗೆದು ಬೇರೆಡೆ ಇಡುವುದು ಹೌದಾದರೂ, ಒಂದೊಮ್ಮೆಗೆ ತನ್ನೆಲ್ಲ ಹೆದರಿಕೆ-ನೋವು-ಚಿಂತೆಗಳೂ ಗೊಂಬೆಗೆ ವರ್ಗಾವಣೆಯಾಗಿವೆ ತಾನಿನ್ನು ಆರಾಮಾಗಿ ಮಲಗಬಹುದು ಎಂದು ಮಗುವಿನ ಮನಸ್ಸಿನ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ ಈ ನಂಬಿಕೆ.

ಮನೆಯಲ್ಲಿ ರಚ್ಚೆಹಿಡಿಯುವ ಮಗುವಿಗಷ್ಟೇ ಅಲ್ಲ, ಆಸ್ಪತ್ರೆಗಳಲ್ಲಿ ನರಳಾಡುವ ಮುದ್ದುಕಂದಮ್ಮಗಳಿಗೂ ಚಿಂತೆಗೊಂಬೆಗಳನ್ನು ಕೊಡುವ ಪರಿಪಾಠ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿದೆಯಂತೆ. ಶಸ್ತ್ರಚಿಕಿತ್ಸೆ ಆಗಬೇಕಿರುವ ಮಕ್ಕಳು, ಕ್ಯಾನ್ಸರ್‌ನಂಥ ದೀರ್ಘಕಾಲಿಕ ಚಿಕಿತ್ಸೆ ಪಡೆಯುವ ಮಕ್ಕಳು ತಂತಮ್ಮ ನೋವನ್ನು ಚಿಂತೆಗೊಂಬೆಗಳಿಗೆ ವರ್ಗಾಯಿಸಿ ಸುಖನಿದ್ರೆ ಹೋಗುವುದನ್ನು ಆಸ್ಪತ್ರೆಯ ದಾದಿಯರು ಮತ್ತು ವೈದ್ಯರೂ ಗಮನಿಸಿದ್ದಾರಂತೆ. ಇದೊಂಥರ ಎಷ್ಟು ಪ್ರಭಾವಶಾಲಿಯೆಂದರೆ ನಿದ್ರಾಹೀನತೆ ಅಥವಾ ಖಿನ್ನತೆಯಿಂದ ಬಳಲುವ ವಯಸ್ಕರು ಕೂಡ ಚಿಂತೆಗೊಂಬೆಗಳಿಗೆ ಶರಣು ಹೋದದ್ದಿದೆ; ಅದರಿಂದ ಒಳ್ಳೆಯ ಪರಿಣಾಮವನ್ನು ಪಡೆದದ್ದೂ ಇದೆ. ಪುಟ್ಟ ಗೊಂಬೆಗಳು ಆರೇ‌ಆರು; ದುಗುಡದುಮ್ಮಾನಕ್ಕಾಯ್ತು ಗಡೀಪಾರು!

ಹೇಗೆ ಹುಟ್ಟಿಕೊಂಡಿರಬಹುದು ಈ ನಂಬಿಕೆ? ಅದಕ್ಕೊಂದು ಚಂದದ ಕಥೆಯಿದೆ. ಸಾವಿರಾರು ವರ್ಷಗಳ ಹಿಂದೆ ಗ್ವಾಟೆಮಾಲದ ಒಂದು ಹಳ್ಳಿಯಲ್ಲಿ ಒಬ್ಬ ಮುದುಕ ಇದ್ದನಂತೆ. ಅವನಿಗೊಬ್ಬ ಮಗಳು ಫ್ಲೋರಾ. ಇಬ್ಬರು ಮೊಮ್ಮಕ್ಕಳು ಮಾರಿಯಾ ಮತ್ತು ಡಿಯಾಗೊ. ಅವರದು ಕಡುಬಡತನದ ಬದುಕು. ಹರಕು ಗುಡಿಸಲಿನಲ್ಲಿ ವಾಸ. ಫ್ಲೋರಾ ಬಟ್ಟೆ ನೇಯ್ದು ಮಾರಿ ಬಂದ ಗಳಿಕೆಯಲ್ಲಿ ನಾಲ್ಕು ಬಾಯಿಗಳಿಗೆ ತುತ್ತು. ಕಷ್ಟ ಸಾಲದೆಂಬಂತೆ ಬರಗಾಲ ಬೇರೆ. ಆಹಾರಕ್ಕೂ ದುರ್ಭಿಕ್ಷ. ಆದರೂ ಅವರದು ಸುಖಿ-ಸಂತೃಪ್ತ ಕುಟುಂಬ. ಅಜ್ಜ ದಿನಾರಾತ್ರಿ ಮೊಮ್ಮಕ್ಕಳಿಗೆ ಕಥೆ ಹೇಳುವನು. ಫ್ಲೋರಾ ಬಟ್ಟೆ ನೇಯುತ್ತ ಮಧ್ಯರಾತ್ರಿಯವರೆಗೂ ಎಚ್ಚರವಿರುವಳು. ಒಮ್ಮೆ ಒಬ್ಬ ಕಳ್ಳ ಬಂದು ಫ್ಲೋರಾ ನೇಯ್ದಿಟ್ಟಿದ್ದ ಬಟ್ಟೆಗಳನ್ನೆಲ್ಲ ಕದ್ದೊಯ್ದ. ಮಾರನೆದಿನ ಸಂತೆಯಲ್ಲಿ ಮಾರಲಿಕ್ಕೆ ಬಟ್ಟೆಯಿಲ್ಲ. ಫ್ಲೋರಾ ದುಃಖ ಉಮ್ಮಳಿಸಿ ಜ್ವರದಿಂದ ಮಲಗಿದಳು. ಮುದುಕ ಅವಳ ಆರೈಕೆ ಮಾಡಿದ. ಮಾರಿಯಾ ಮತ್ತು ಡಿಯಾಗೊಗೆ ಅದೇನು ಹೊಳೆಯಿತೋ ಚಿಂದಿಬಟ್ಟೆಗಳನ್ನು ಆಯ್ದು ಪುಟ್ಟಪುಟ್ಟ ಗೊಂಬೆಗಳನ್ನು ಮಾಡಿದರು. ಅವುಗಳನ್ನೇ ಸಂತೆಯಲ್ಲಿ ಮಾರಿಬರುತ್ತೇವೆಂದು ಹೊರಟರು. ಸಂಜೆಯವರೆಗೂ ಸಂತೆಯಲ್ಲಿ ಯಾರೂ ಅವರ ಗೊಂಬೆಗಳನ್ನು ಕೊಳ್ಳಲೇ ಇಲ್ಲ. ನಿರಾಸೆಯಿಂದ ಇನ್ನೇನು ಮನೆಗೆ ಹೊರಡಬೇಕೆನ್ನುವಷ್ಟರಲ್ಲಿ ಒಬ್ಬ ಅಪರಿಚಿತ ಬಂದು ಚಿನ್ನದ ನಾಣ್ಯಗಳ ಥೈಲಿಯನ್ನೇ ಕೊಟ್ಟು ಅಷ್ಟೂ ಗೊಂಬೆಗಳನ್ನು ಖರೀದಿಸಿದ! ಮಕ್ಕಳು ಹಿಗ್ಗಿನಿಂದ ಮನೆಗೆ ಬಂದರು. ತಿನ್ನಲಿಕ್ಕೆ ಆಹಾರಪದಾರ್ಥಗಳನ್ನೂ ತಂದರು. ತಮ್ಮ ಚಿಂತೆಗಳೆಲ್ಲ ಗೊಂಬೆಗಳೊಂದಿಗೇ ಹೊರಟುಹೋದವು ಎಂದು ಸುಖನಿದ್ದೆ ಮಾಡಿದರು. ಮಾರನೆದಿನ ಬೆಳಿಗ್ಗೆ ಎದ್ದಾಗ ಅವೇ ಗೊಂಬೆಗಳು ಅಲ್ಲಿದ್ದವು, ಜತೆಗೆ ಒಂದು ಪುಟ್ಟ ಚೀಟಿ. “ಇವು ಮಾಂತ್ರಿಕ ಗೊಂಬೆಗಳು. ನಿಮಗೆ ಚಿಂತೆ ಕಾಡಿದಾಗಲೆಲ್ಲ ಅದನ್ನು ಈ ಗೊಂಬೆಗಳಿಗೇ ಬಿಟ್ಟುಬಿಡಿ!”

worrydolls1.jpg

ಚಿಂತೆಗೊಂಬೆಗಳ ಕಥೆ ಮತ್ತು ನಂಬಿಕೆ ಎಷ್ಟು ಸೊಗಸಾಗಿದೆ ಅಲ್ಲವೇ? ಆಯ್ತು, ಈಗಿನ್ನು ನಿಶ್ಚಿಂತರಾಗಿ ನೀವು ಮಾಡಬೇಕಾದ ಕೆಲಸವೆಂದರೆ ನಿಮಗೆ ಗೊತ್ತಿರುವ, ನೀವು ಇಷ್ಟಪಡುವ ಯಾವುದಾದರೂ ‘ನಂಬಿಕೆ’ ಇದ್ದರೆ ಚಿಕ್ಕದಾಗಿ ಚೊಕ್ಕವಾಗಿ ಬರೆದು ತಿಳಿಸುವುದು. ಚಂದಚಂದದ ನಂಬಿಕೆಗಳನ್ನೆಲ್ಲ ಪೋಣಿಸಿ ಒಂದು ಚಂದದ ಅಂಕಣ ಪ್ರಸ್ತುತಪಡಿಸೋಣವಂತೆ. ಆಗಬಹುದೇ?

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.