ಪದ-ಶ್ರಾವ್ಯ

ಈಗ ಆಡಿಯೋ ಟಚ್!

24
Dec 2011
Year end Misc 2011
Posted in DefaultTag by sjoshi at 4:59 pm

ದಿನಾಂಕ  25 ಡಿಸೆಂಬರ್  2011ರ ಸಂಚಿಕೆ...

ಇತ್ತಲೆ ಹಕ್ಕಿಯೇ ಇತ್ತಲ್ವೇ!

* ಶ್ರೀವತ್ಸ ಜೋಶಿ

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

* * *

ನಿಜವಾಗಿಯೂ ಅಂಥದೊಂದು ಪಕ್ಷಿ ಇತ್ತೋ‌ಇಲ್ವೋ ಗೊತ್ತಿಲ್ಲ. ಆದರೆ ಕಳೆದವಾರ ಅಂಕಣದ ಕೊನೆಯಲ್ಲಿ ಕೇಳಿದ್ದ ರಸಪ್ರಶ್ನೆಗೆ ಉತ್ತರವಂತೂ ಅದೇ ಆಗಿತ್ತು. ಕರ್ನಾಟಕ ಸರಕಾರದ ಲಾಂಛನದಲ್ಲಿ ಕೇಂದ್ರಬಿಂದುವಾಗಿ ರಾಜಮರ್ಯಾದೆ ಗಳಿಸಿರುವ, ಸರ್ಕಾರಿ ಬಸ್ಸುಗಳ ಮೇಲೆ ರಾರಾಜಿಸುತ್ತ ಕರ್ನಾಟಕದ ಉದ್ದಗಲಕ್ಕೂ ಚಿರಪರಿಚಿತವಿರುವ, ಗಂಡಭೇರುಂಡ ಚಿಹ್ನೆ ಕನ್ನಡಿಗರೆಲ್ಲರ ಹೆಮ್ಮೆ. ಹಾಗಾಗಿ ‘ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಬಿಂದುಪೂರ್ವಕ ಡಕಾರ: ಐದಕ್ಷರಗಳ ಪದ’ ಎಂಬುದಕ್ಕೆ ಗಂಡಭೇರುಂಡ ಅತ್ಯಂತ ಸೂಕ್ತ ಉತ್ತರ. ಬರೆದು ತಿಳಿಸಿದ ನೂರಾರು ಪತ್ರಮಿತ್ರರಿಗೆಲ್ಲ ಮೆಚ್ಚುಗೆ, ಅಭಿನಂದನೆ.

gandabherunda.jpg

ಸ್ವಾರಸ್ಯವೆಂದರೆ ಗಂಡಭೇರುಂಡ ಉತ್ತರ ಹೊಳೆಯದವರೂ ಐದಕ್ಷರದ ಬೇರೆ ಪದಗಳನ್ನು, ಬಿಂದುಪೂರ್ವಕ ಡಕಾರ ಇರುವಂಥವನ್ನು ಹುಡುಕಿಕೊಂಡಿದ್ದಾರೆ. ‘ಭಂಡಸರ್ಕಾರ’, ‘ಭೂಕರ್ಮಕಾಂಡ’, ‘ದಂಡಸಂಹಿತೆ’, ‘ಮಂತ್ರಿಮಂಡಲ’ ಮುಂತಾದುವೆಲ್ಲ ಒಂಥರದಲ್ಲಿ ಸರಿಯುತ್ತರಗಳೇ. ಅಂತೆಯೇ ‘ಹೆಂಡದಂಗಡಿ’ ಕೂಡ. ಮತ್ತೊಬ್ಬರು ‘ಭದ್ರಾಮೇಲ್ದಂಡೆ’ ಎಂದು ಬರೆದವರೂ ಇದ್ದಾರೆ, ಅಪ್ಪಟ ಕನ್ನಡ ಮಣ್ಣಿನ ಸೊಗಡನ್ನು ಸೂಸಿದವರು! ಒಟ್ಟಿನಲ್ಲಿ ರಸಪ್ರಶ್ನೆಯನ್ನು ಎಲ್ಲರೂ ಎಂಜಾಯ್ ಮಾಡಿದ್ದು ಹೌದು. ಉದ್ದೇಶವಾದರೂ ಅದೇ ಇದ್ದದ್ದು. ಕುಂದಾಪುರದಿಂದ ವಿಜಯಾ ಗಣೇಶ ಕಾಮತ್ ಬರೆದಿದ್ದಾರೆ- “ಉತ್ತರಕ್ಕಾಗಿ ತಲೆ ಕೆರೆದೂಕೆರೆದೂ ಕಡೆಗೆ ರಾತ್ರಿ ಮೂರು ಗಂಟೆಗೆ ನಿದ್ದೆಯಿಂದ ಒಮ್ಮೆಲೇ ಎಚ್ಚರವಾದಾಗ ಉತ್ತರ ಹೊಳೆಯಿತು!” ಅದಕ್ಕಿಂತಲೂ ವಿಶಿಷ್ಟವಾಗಿ ಖುಷಿಯೆನಿಸಿದ್ದು ಬೆಂಗಳೂರಿನ ಸುಧೀಂದ್ರ ರಾವ್ ಅವರ ಪತ್ರ. ಕಾರಣ ಅವರು ಕೆ‌ಎಸ್ಸಾರ್ಟಿಸಿಯಲ್ಲಿ ಸೇವೆಯಲ್ಲಿರುವ ಅಧಿಕಾರಿ! ಗಂಡಭೇರುಂಡ ಉತ್ತರ ಅವರಿಗೆ ತಿಳಿದಿರಲೇಬೇಕಲ್ಲ? ಆತ್ಮೀಯ ಧಾಟಿಯಲ್ಲಿ ಆರಂಭವಾಗುವ ಅವರ ಓಲೆ ‘ಉತ್ತರ ಸರಿಯಿದೆಯೇ ಎಂದು ದಯವಿಟ್ಟು ತಿಳಿಸುವುದು’ ಎಂಬ ವಾಕ್ಯದೊಂದಿಗೆ ಸರ್ಕಾರಿ ಸುತ್ತೋಲೆ (ಅಥವಾ ಬಸ್‌ನಿಲ್ದಾಣದಲ್ಲಿ ನಿಯಂತ್ರಣಾಧಿಕಾರಿಯ ಉದ್ಘೋಷಣೆ) ಶೈಲಿಯಲ್ಲಿ ಕೊನೆಗೊಳ್ಳುತ್ತದೆ. ಇರಲಿ, ಗೇಲಿಗಾಗಿ ಹೇಳಿದ್ದಲ್ಲ, ಜಸ್ಟ್ ಒಂದು ಅಬ್ಸರ್ವೇಶನ್ ಅಷ್ಟೇ.

ಇದು ಈ ಕ್ಯಾಲೆಂಡರ್ ವರ್ಷದ ಕೊನೆಯ ಭಾನುವಾರ. ವಾಡಿಕೆಯಂತೆ ‘ಮಿಸಲೇನಿಯಸ್ ಮಿಸಳ್‌ಭಾಜಿ’ ರೂಪದಲ್ಲಿ ಅಂಕಣವನ್ನು ಪ್ರಸ್ತುತಪಡಿಸಬೇಕೆಂದೇ ಯೋಜನೆಯಿದ್ದದ್ದು. ಅದಕ್ಕೆ ಸರಿಯಾಗಿ ಪತ್ರಪ್ರವಾಹವೂ ಬಂದಿರುವುದರಿಂದ ಒಂದಿಷ್ಟು ಪತ್ರಹರಿತ್ತನ್ನೇ ಲಹರಿಸೋಣವಾಗಲಿ. ಜತೆಯಲ್ಲೇ ಇತ್ತಲೆ (ಇತ್ತಲೆ = ಎರಡು ತಲೆ, ದ್ವಿಗುಸಮಾಸ; ಹಾಗಿದ್ರೆ ‘ಮುಕ್ಕಣ್ಣ = ಮೂರು ಕಣ್ಣಿನವ’ ತ್ರಿಗುಸಮಾಸವೇ ಎನ್ನಬೇಡಿ. ಸಂಖ್ಯಾಪೂರ್ವ ದ್ವಿಗು ಎಂದು ನಿಯಮ) ಪಕ್ಷಿಯ ಚಿತ್ರವೂ ಈವಾರಕ್ಕೆ ಎರಡು ರೀತಿಯಲ್ಲಿ- ರಸಪ್ರಶ್ನೆಯ ಉತ್ತರವಾಗಿ ಮತ್ತು ಮುಗಿಯುತ್ತಿರುವ ವರ್ಷವನ್ನು ಅವಲೋಕಿಸುತ್ತಲೇ ಹೊಸವರ್ಷವನ್ನು ಎದುರುನೋಡುತ್ತಿರುವ ಸಂದರ್ಭದಲ್ಲಿ- ದ್ವಂದ್ವಾರ್ಥಪೂರ್ಣವಾಗಿ ಹೊಂದಿಕೆಯಾಗುತ್ತಿದೆ (ಕೆಲ ವಾರಗಳ ಹಿಂದೆಯಷ್ಟೇ ದ್ವಂದ್ವಾರ್ಥದ ಡಬಲ್ ಧಮಾಕಾ ಈ ಅಂಕಣದಲ್ಲಿ ಪ್ರಕಟವಾದದ್ದು ನಿಮಗೆ ನೆನಪಿರಬಹುದು).

ಬಿಂದುಪೂರ್ವಕ ಡಕಾರ ಲೇಖನವನ್ನೋದಿ ತಮಗೆ ನೆನಪಾದ ಡಕಾರ ವೈವಿಧ್ಯವನ್ನು ಬರೆದುಕಳಿಸಿದವರಿದ್ದಾರೆ. ಬೆಂಗಳೂರಿನ ಸುಧಾ ರಾಘವೇಂದ್ರ- “ನಾವೆಲ್ಲ ಚಿಕ್ಕವರಿದ್ದಾಗ ಹೇಳುತ್ತಿದ್ದ ಪದ್ಯ: ದದಧೋಂ ಧೋಂಡ/ ಬಾಳೇಕಾಯಿ ಬೋಂಡ/ ಬೋಂಡ ತಿಂದ ಗುಂಡ/ ಭಾಳ ತಿಂದ ಭಂಡ/ ಭಂಡ ಮಲಗಿಕೊಂಡ!” ಚೆನ್ನಾಗಿದೆ ಅಲ್ಲವೇ? ಶಂಕರಾಚಾರ್ಯರ ರಚನೆ ಶಿವಭುಜಂಗಂ ಸ್ತೋತ್ರದ “ಗಲದ್ದಾನಗಂಡಂ ಮಿಲದ್ಭೃಂಗಷಂಡಂ ಚಲಚ್ಚಾರುಶುಂಡಂ ಜಗತ್ತ್ರಾಣಶೌಂಡಮ್| ಕನದ್ದಂತಕಾಂಡಂ ವಿಪದ್ಭಂಗಚಂಡಂ ಶಿವಪ್ರೇಮಪಿಂಡಂ ಭಜೇವಕ್ರತುಂಡಂ||” ಭಾಗವನ್ನು ಇಮೇಲಿಸಿದ್ದಾರೆ ಬೆಂಗಳೂರಿನಿಂದ ಶ್ರೀಕಾಂತ ಹೆಗಡೆ. ಬೈಲಹೊಂಗಲದ ರೇಖಾ ಪಾಟೀಲ್‌ಗೆ ನೆನಪಾದದ್ದು ಅಣ್ಣಾವ್ರ ಹಾಡು ‘ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ?’ ಅದರಲ್ಲಿ ಮುಂದೆ ಗಂಡಾಗುಂಡಿ, ಬಂಡಿ, ಜೋಗದ್ಗುಂಡಿ ಅಂತೆಲ್ಲ ಬರುತ್ತದೆ. ಹಾಸನದ ಶಾಂತಾ ಗೋಪಾಲ್ ಅವರು ರಸಪ್ರಶ್ನೆಗೆ ರಸೋತ್ತರ ಬರೆದ ರೀತಿ ಹೀಗೆ- “ಬಳೇ ತೊಡ್ದೇ‌ಇರೋ ಹೆಂಗ್ಸಿನ ಮಾತ್ ಕೇಳಿಕೇಳಿ ಗಂಡ್ಸರೇ ಕಮ್ಮಿಯಾಗೋಗವ್ರೆ ನಮ್ಮ ಕೇಂದ್ರ ಸರ್ಕಾರದಾಗೆ. ನಮ್ಮ ಕರ್ನಾಟ್ಕವೇ ವಾಸಿಯಪ್ಪ, ಇನ್ನೂ ಗಂಡಭೇರುಂಡಾವ ಮಡಗ್ಕೊಂಡೈತೆ!” ಏತನ್ಮಧ್ಯೆ, “ಹೆಸರಿನಲ್ಲೇ ಬಿಂದುಪೂರ್ವಕ ಡಕಾರ ಇರುವ ಡುಂಡಿರಾಜರನ್ನು ಅದ್ಹೇಗೆ ಮರೆತಿರಿ?” ಎಂದು ವಾದಮಂಡಿಸಿದ್ದಾರೆ ಬೆಂಗಳೂರಿನಿಂದ ಗುರುಪಾದಸ್ವಾಮಿ. “ಎಲ್ಲ ಓಕೆ, ಕನ್ನಡ ಡಿಂಡಿಮ ಬಾರಿಸಿಲ್ಲ ಏಕೆ?” ಎಂದು ಕಿವಿಹಿಂಡಿದ್ದಾರೆ ಬಿಜಾಪುರದಲ್ಲಿ ಶಿಕ್ಷಕರಾಗಿರುವ ಭೀಮಶಂಕರ ಬುಗಡೆ.

ಇನ್ನೂ ಒಂದು ಉಲ್ಲೇಖಾರ್ಹ ಪತ್ರ, ಮಡಿಕೇರಿಯಿಂದ ಡಾ.ಎಸ್.ವಿ.ನರಸಿಂಹನ್ ಬರೆದಿರುವುದು- “ಕೊಡವರಲ್ಲಿ ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಹೆಸರಿರುತ್ತದೆ. ಸುಮಾರು ೧೨೦೦ಕ್ಕೂ ಹೆಚ್ಚು ಇಂಥ ಕುಟುಂಬಗಳಿವೆ. ಇದು ಒಂಥರ ನಮ್ಮಲ್ಲಿ ಗೋತ್ರವಿದ್ದಂತೆ. ಇದನ್ನವರು ‘ಮನೆ-ಪೆದ’ (ಮನೆ ಹೆಸರು) ಎನ್ನುತ್ತಾರೆ. ಹೊಸಬರನ್ನು ಕಂಡಾಗ ಆತ ‘ಯಾರ’ ಮನೆಯವನು ಎಂದು ತಿಳಿದುಕೊಳ್ಳುವುದು ಅವರಿಗೆ ಅತಿಮುಖ್ಯ! ಒಂದು ಚಿಕ್ಕ ಮಗುವನ್ನು ‘ನೀ ದಾಡ’ (ನೀನು ಯಾರು?) ಎಂದು ಕೇಳಿದರೂ ಅದು ಹೆಮ್ಮೆಯಿಂದ ನಾ ಅಜ್ಜಿನಿಕಂಡ, ಅಮ್ಮುಣಿಚಂಡ, ಅಮ್ಮಣಕುಟ್ಟಂಡ, ಬಿದ್ದಂಡ, ಬಿದ್ದಾಟಂಡ, ಚೆರಿಯಪಂಡ, ಚೇಂದಂಡ, ಮನಿಯಪ್ಪಂಡ, ಮಂಡೆಪಂಡ, ಮಾದಂಡ, ನಾಯಕಂಡ, ಕೂತಂಡ, ಕೇಳಪ್ಪಂಡ, ಕುಜ್ಞಂಡ, ಕುಪ್ಪಂಡ, ಪಾಂಡಂಡ, ಪಂದಿಯಂಡ, ಪಳಂಗಂಡ, ಪೆಮ್ಮಂಡ, ಪಾಲೆಕಂಡ, ಶಿವಚಾಳಿಯಂಡ... ಹೀಗೆ ನಿರ್ದಿಷ್ಟವಾದೊಂದು ಮನೆತನದ ಹೆಸರನ್ನು ಹೇಳುತ್ತದೆ.” ನೋಡಿದಿರಾ, ಬಿಂದುಪೂರ್ವಕ ಡಕಾರದ ಬ್ರಹ್ಮಾಂಡ ಹೇಗಿದೆಯಂತ?

ಪರಾಗಸ್ಪರ್ಶ ಅಂಕಣಬರಹಗಳಲ್ಲಿ ಆಗಾಗ ನುಸುಳುವ ತಪ್ಪುಗಳ ಪೈಕಿ ಗಮನಕ್ಕೆ ಬಂದವುಗಳಿಗೆ ಈಗಾಗಲೇ ತಪ್ಪು-ಒಪ್ಪು ವಿಭಾಗದಲ್ಲಿ ತಿದ್ದುಪಡಿ ಸೂಚಿಸಿದ್ದೇನಾದರೂ ಇನ್ನೂ ಒಂದಿಷ್ಟು ಉಳಿದುಕೊಂಡಿವೆ. ನವೆಂಬರ್ ೨೭ರ ‘ಲಡ್ಡುವಿನಲ್ಲಿ ಲವಂಗ ಇಲ್ಲ’ ಲೇಖನದಲ್ಲಿ ಮೂರು ತಪ್ಪುಗಳಿದ್ದವು. “ವೈ ದಿಸ್ ಕೊಲವೆರಿ ಡಿ... ಹಾಡಿನ ಮ್ಯೂಸಿಕ್ ಕಂಪೋಸ್ ಮಾಡಿದ್ದು ಧನುಷ್ ಅಂತ ಬರೆದಿದ್ದೀರಿ. ಈ ಹಾಡನ್ನು ಬರೆದು ಹಾಡಿ ನಟಿಸಿದವನು ಧನುಷ್. ಸಂಗೀತಸಂಯೋಜನೆ ಅನಿರುದ್ಧ್ ರವಿಚಂದರ್” ಎಂದು ಸರಿಯಾದ ಮಾಹಿತಿಯನ್ನು ಲೇಖನ ಪ್ರಕಟವಾದ ದಿನವೇ ಬರೆದುತಿಳಿಸಿದ್ದಾರೆ ಮೈಸೂರಿನಿಂದ ಅನಘಾ ಎಂ.ಟಿ. “ಬ್ರಿಟಿಷ್ ಇಂಗ್ಲಿಷ್‌ನಲ್ಲಿ ಬದನೆ ಬ್ರಿಂಜಾಲ್ ಅಲ್ಲ, ಔಬಜೀನ್ (ಚಿubeಡಿgiಟಿe) ಅಂತಾಗಬೇಕು” ಎಂದು ತಿಳಿಸಿದ್ದಾರೆ ಲಂಡನ್‌ನಿಂದ ಡಾ.ಕೇಶವ ಕುಲಕರ್ಣಿ. ಅದೇ ಲೇಖನದಲ್ಲಿ ‘ಹೂಗಳಿಲ್ಲದ ಹೂಮಾಲೆ- ವ್ಹಾಟ್ ಎ ಬ್ಯೂಟಿಫುಲ್ ರೂಪಕಾಲಂಕಾರ!’ ಅಂತಿತ್ತು. ಅದು ರೂಪಕಾಲಂಕಾರ ಆಗುವುದಿಲ್ಲ. ರೂಪಕ ಅಂತಷ್ಟೇ ಹೇಳಲಿಕ್ಕಡ್ಡಿಯಿಲ್ಲ ಎಂದಿದ್ದಾರೆ ಹೆಸರು ತಿಳಿಸಬಯಸದ ಭಾಷಾಶಾಸ್ತ್ರಜ್ಞರೊಬ್ಬರು. ತಪ್ಪುಗಳಿಗೆ ತಿದ್ದುಪಡಿ ತಿಳಿಸಿದವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ಇವತ್ತು ಡಿಸೆಂಬರ್ ೨೫, ಜಗತ್ತಿಗೆಲ್ಲ ಕ್ರಿಸ್ಮಸ್ ಹಬ್ಬದ ಝಗಮಗ. ಬೆಂಗಳೂರಿನಲ್ಲಂತೂ ಹಬ್ಬದ ಸಡಗರದಲ್ಲೇ ಮತ್ತೊಂದು ಹಬ್ಬ- ಹಾಸ್ಯೋತ್ಸವವೆಂಬ ನಗೆಹಬ್ಬ. ದಿನವಿಡೀ ಜೋಕು ಜೋಕಾಲಿಯಲ್ಲಿ ಜೀಕು. ನಗುವಿನ ಕಟ್ಟೆಯೊಡೆದು ಹಾಸ್ಯರಸವೆಲ್ಲ ಲೀಕೋಲೀಕು. ಕೊರವಂಜಿ ಅಪರಂಜಿ ಟ್ರಸ್ಟ್ ಪ್ರತಿವರ್ಷ ಡಿಸೆಂಬರ್ ೨೫ರಂದು ಆಯೋಜಿಸುವ ಈ ವಾರ್ಷಿಕ ನಗೆಹಬ್ಬಕ್ಕೀಗ ಹದಿನೇಳರ ಹರೆಯ. ಈ ಸಲದ ವಿಶೇಷ ‘ಬಹುಭಾಷಾ ವೈವಿಧ್ಯದ ಹಾಸ್ಯ’. ಕನ್ನಡವಷ್ಟೇ ಅಲ್ಲದೆ ಸೋದರ ಭಾಷೆಗಳಾದ ತೆಲುಗು, ತಮಿಳು, ಮಲಯಾಳಂ, ಮರಾಠಿ, ಮತ್ತು ಇವೆಲ್ಲ ಭಾಷೆಗಳಿಗೆ ಮಾತೃಸಮಾನ ಸಂಸ್ಕೃತ ಭಾಷೆಯಲ್ಲಿ ಹಾಸ್ಯವೈಖರಿ. ಆಧುನಿಕ ಕನ್ನಡ ಹಾಸ್ಯಲೋಕದ ಆಲದ ಮರದಂತಿರುವ ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಅವರಿಗೆ ಗೌರವ ಸಮರ್ಪಣೆ - ಹಾಗೆನ್ನುತ್ತಿದೆ ಮೊನ್ನೆ ಬೇಲೂರು ರಾಮಮೂರ್ತಿಯವರು ಇಮೇಲ್‌ನಲ್ಲಿ ಕಳಿಸಿರುವ ಕಲರ್‌ಫುಲ್ ಕರೆಯೋಲೆಯ ಒಕ್ಕಣೆ. ಬರಿ ಸ್ಟಾಂಡ್‌ಅಪ್ ಕಾಮಿಡಿಗಳೆಂದಾದರೆ ಇಲ್ಲಿಯೂ ನಮಗೆ ಸಿಗುತ್ತಿರುತ್ತವೆ. ರಿಪೀಟೆಡ್ ಜೋಕ್ಸ್ ಕೇಳಿಕೇಳಿ ಸಾಕುಸಾಕಾಗಿದೆ ಎನ್ನುವಷ್ಟು ಹೆಚ್ಚೇ ಸಿಗುತ್ತವೆ ಎಂದರೂ ತಪ್ಪಲ್ಲ. ಆದರೆ ಇಂಥ ವಿಶೇಷವಾದ ಮತ್ತು ಅನನ್ಯವಾದ ಕಾರ್ಯಕ್ರಮದ ಇನ್ವಿಟೇಷನ್ ನೋಡಿದಾಗ “ಛೇ! ಇದನ್ನು ಮಿಸ್‌ಮಾಡ್ಕೊಳ್ತಿದ್ದೇನಲ್ಲ” ಎಂದು ಹಪಹಪಿಸುವಂತಾಗ್ತದೆ. ಅದರಲ್ಲೂ ಬಹುಭಾಷಾ ಹಾಸ್ಯ ಎಂಬ ಕಲ್ಪನೆಯೇ ನನ್ನಂಥ ಭಾಷಾಬಫ್‌ಗಳಿಗೆ ಬಾದಾಮ್‌ಬರ್ಫಿ ಬಾಯೊಳಗಿಟ್ಟಂತೆ. ಇರಲಿ, ನನಗೆ ಹೇಗೂ ಭಾಗವಹಿಸಲಿಕ್ಕಾಗುತ್ತಿಲ್ಲ. ಅನುಕೂಲವಿರುವವರಿಗಾದರೂ ಉಪಯೋಗವಾಗಲಿ ಎಂದು ಇದನ್ನಿಲ್ಲಿ ಪ್ರಸ್ತಾಪಿಸಿದೆ- ಹಾಸ್ಯೋತ್ಸವದಲ್ಲಿ ಭಾಗವಹಿಸಿ ನನ್ನ ಪರವಾಗಿಯೂ ಬಿದ್ದುಬಿದ್ದು ನಕ್ಕು ಆಮೇಲೆ ನಿಮ್ಮ ಸಂತಸವನ್ನು ನನ್ನೊಂದಿಗೂ ಹಂಚಿಕೊಳ್ಳಿ ಎಂಬ ಪುಟ್ಟ ಕೋರಿಕೆಯೊಂದಿಗೆ.

ಮತ್ತೆ ಮುಂದಿನ ವರ್ಷ ಭೇಟಿಯಾಗೋಣ. ನಮಸ್ಕಾರ.

* * *

[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್‌ನಲ್ಲಿಯೂ ಓದಬಹುದು.]

"Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!


Download(Loading) You can follow any responses to this entry through the RSS 2.0 feed. You can leave a response , or trackback from your own site.