Episodes

Saturday Aug 20, 2011
Worry dolls take away your worries
Saturday Aug 20, 2011
Saturday Aug 20, 2011
ದಿನಾಂಕ 21 ಆಗಸ್ಟ್ 2011ರ ಸಂಚಿಕೆ...
ಚಿಂತ್ಯಾಕೆ ಮಾಡುತ್ತಿದ್ದಿ ‘ಚಿಂತೆಗೊಂಬೆ’ಗಳಿದ್ದಾವೆ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ನಿಮಗೆ ನಂಬಿಕೆಗಳಲ್ಲಿ ನಂಬಿಕೆ ಇದೆಯೇ? ನಕ್ಷತ್ರ ಬೀಳ್ತಾ ಇರೋದನ್ನು ನೋಡುವಾಗ ಮನಸ್ಸಿನಲ್ಲೇ ಏನನ್ನಾದ್ರೂ ಹಾರೈಸಿದ್ರೆ ಅದು ನೆರವೇರುತ್ತೆ..., ಮಗುವಿನ ಹಾಲುಹಲ್ಲು ಕಳಚಿ ಬಿದ್ದಾಗ ಅದನ್ನು ತುಳಸಿದಳದಲ್ಲಿ ಮಡಚಿಟ್ಟು ಬಿಸಾಡಿದರೆ ಮಗು ಬೆಳೆದು ಪ್ರಸಿದ್ಧ ವ್ಯಕ್ತಿಯಾಗುತ್ತಾನೆ..., ನದಿ-ಕೆರೆ ಜಲಾಶಯಗಳನ್ನು ಮೊದಲಬಾರಿ ಕಂಡಾಗ ಆ ನೀರಿನೊಳಗೆ ನಾಣ್ಯ ಬಿಸಾಡಿದರೆ ಬಯಸಿದ ಕಾರ್ಯ ಕೈಗೂಡುತ್ತದೆ..., ಎಲೆಅಡಕೆ ಜಗಿಯುವಾಗ ನಾಲಿಗೆ ಕಡುಕೆಂಪಾದರೆ ಬಾಳಸಂಗಾತಿ ತುಂಬಾ ಪ್ರೀತಿಸುತ್ತಾನೆ/ಳೆ ಎಂದರ್ಥ... - ಈ ಥರದ ನಂಬಿಕೆಗಳಲ್ಲಿ ನಿಮಗೆ ನಂಬಿಕೆ ಇದೆಯೇ ಅಂತ ನಾನು ಕೇಳಿದ್ದು. ನನ್ನನ್ನು ಕೇಳಿದರೆ, ‘ನಂಬಿಕೆ ಇದೆ ಅಥವಾ ಇಲ್ಲ’ ಎನ್ನುವುದಕ್ಕಿಂತಲೂ ಇಂಥ ನಂಬಿಕೆಗಳ ಬಗ್ಗೆ ನನಗೆ ಗೌರವ ಇದೆ, ಆಸಕ್ತಿ ಇದೆ, ಅವುಗಳ ಹಿನ್ನೆಲೆ ತಿಳಿದುಕೊಳ್ಳುವುದು ತುಂಬ ಖುಷಿಯೆನಿಸುತ್ತದೆ ಎನ್ನುತ್ತೇನೆ. ಅದಕ್ಕೆ ಮುಖ್ಯ ಕಾರಣವೆಂದರೆ, ಕೆಲವೊಂದು ಚಂದದ ನಂಬಿಕೆಗಳಿವೆ ಅವುಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡದೇ ಇರಲಿಕ್ಕೆ ಸಾಧ್ಯವೇಇಲ್ಲ. ಉದಾಹರಣೆಗೆ, ತೊಟ್ಟಿಲಲ್ಲಿ ಮಲಗಿರುವ ಪುಟ್ಟ ಮಗು ನಿದ್ದೆಯಲ್ಲೇ ನಕ್ಕರೆ (ಎಷ್ಟೋ ಸಲ ನಗುವುದೂ ಇದೆ!) ‘ದೇವರು ಬಂದು ಮಗುವನ್ನು ಮಾತನಾಡಿಸಿ ನಗಿಸುತ್ತಿದ್ದಾನೆ’ ಎಂಬ ನಂಬಿಕೆ ನಮ್ಮಲ್ಲಿದೆ. ಪರಮನಾಸ್ತಿಕರಿಗೂ ಈ ನಂಬಿಕೆಯ ಮೇಲೆ ಪ್ರೀತಿ ಬರುವ ಹಾಗಿದೆ ಇದು. ನಮ್ಮ ಕರಾವಳಿಯಲ್ಲಿ ಕುಟುಂಬದೈವಗಳು (ಭೂತಗಳು) ರಾತ್ರಿಹೊತ್ತು ಮಗುವಿನ ತೊಟ್ಟಿಲು ತೂಗುತ್ತವೆ ಎಂದೂ ನಂಬುತ್ತಾರೆ. ಅವೆಲ್ಲ ಹಳ್ಳಿಗುಗ್ಗುಗಳ ಕಥೆ ಅಂತ ಮೂಗುಮುರೀಬೇಡಿ! ಮೂರ್ನಾಲ್ಕು ವರ್ಷಗಳ ಹಿಂದೆ ಇದೇ ಅಂಕಣದಲ್ಲಿ ಅಮೆರಿಕದಲ್ಲಿ ತುಂಬ ಚಾಲ್ತಿಯಲ್ಲಿರುವ ಒಂದು ನಂಬಿಕೆ ‘ಗ್ರೌಂಡ್ಹಾಗ್ ಪ್ರಾಣಿ ಹೇಳುವ ಚಳಿಭವಿಷ್ಯ’ ಕುರಿತು ಬರೆದಿದ್ದೆ. ನಮ್ಮ ಜೀವನಕ್ಕೊಂದಿಷ್ಟು ಸ್ವಾರಸ್ಯವನ್ನು ತಂದುಕೊಡುವ, ಸ್ವಲ್ಪ ಮಟ್ಟಿಗೆ ಅದನ್ನು ರಹಸ್ಯವನ್ನಾಗಿಸುವ ಈ ನಂಬಿಕೆಗಳು ಬಹಳ ಚಂದವೇ. ಎಲ್ಲಿಯವರೆಗೆ ಅವು ನಿರುಪದ್ರವಿಯಾಗಿ ವೈಯಕ್ತಿಕ ಮಟ್ಟದಲ್ಲಿ ಮಾತ್ರ ಇರುತ್ತವೋ ಅಲ್ಲಿವರೆಗೆ ಒಳ್ಳೆಯದೇ. ಯಾವಾಗ ಅಡ್ಡಕಸುಬಿ ಟಿವಿ-ಜ್ಯೋತಿಷಿಗಳು ಮಾಡುವಂತೆ ಮುಗ್ಧ ಜನರನ್ನು ಮೌಢ್ಯಕ್ಕೆ ದೂಡುತ್ತವೋ ಆಗ ನಂಬಿಕೆಗಳ ಮೇಲಿನ ಗೌರವ ಆಸಕ್ತಿಗಳು ಹೊರಟುಹೋಗುತ್ತವೆ. ಇರಲಿ, ಇವತ್ತು ಒಂದು ಚಂದದ ನಂಬಿಕೆಯಿಂದ ಪರಾಗ ಸ್ಪರ್ಶಿಸೋಣವೇ? ನಿಮಗಿದು ಇಷ್ಟ ಆಗೇಆಗುತ್ತದೆ ಎಂಬ ನಂಬಿಕೆ ನನ್ನದು! ‘ಗ್ವಾಟೆಮಾಲ’ ಹೆಸರು ಕೇಳಿರಬಹುದು ನೀವು. ಇದು, ಲ್ಯಾಟಿನ್ ಅಮೆರಿಕ ಪ್ರಾಂತ್ಯದ ಒಂದು ಪುಟ್ಟ ದೇಶ. ಮರಗಳ ನಾಡು ಎಂದು ಅರ್ಥವಂತೆ ಗ್ವಾಟೆಮಾಲ ಎಂಬ ಪದಕ್ಕೆ, ಅಲ್ಲಿನ ಮಾಯಟೊಲ್ಟೆಕ್ ಭಾಷೆಯಲ್ಲಿ. ಪ್ರಾಚೀನ ‘ಮಾಯನ್’ ಸಂಸ್ಕೃತಿಯ ಕಾಲದಿಂದಲೂ ನೇಯ್ಗೆ ಆ ದೇಶದ ಜನರ ಮುಖ್ಯ ಕಸುಬು. ಬಟ್ಟೆ ನೇಯುವುದು ಮತ್ತು ಹೊಲಿಯುವುದು ಎಂದಮೇಲೆ ಅಲ್ಲಿ ಚಿಂದಿ ಬಟ್ಟೆ ಜಮೆಯಾಗುವುದು ಇದ್ದೇಇದೆಯಲ್ಲ? ಚಿಂದಿಯನ್ನೆಲ್ಲ ಜೋಡಿಸಿ ದುಪ್ಪಟ್ಟಿ, ಚೀಲ ಇತ್ಯಾದಿಗಳನ್ನು ತಯಾರಿಸುವುದು ಸರ್ವೇಸಾಮಾನ್ಯ. ಆದರೆ ಗ್ವಾಟೆಮಾಲ ದೇಶದಲ್ಲಿ ಒಂದು ವಿಶಿಷ್ಟ ಸಂಪ್ರದಾಯವಿದೆ. ಅಲ್ಲಿ ಚಿಕ್ಕಚಿಕ್ಕ ಕಡ್ಡಿಚೂರುಗಳಿಗೆ ಚಿಂದಿಬಟ್ಟೆ ತೊಡಿಸಿ ಬಣ್ಣಬಣ್ಣದ ಗೊಂಬೆಗಳನ್ನು ಮಾಡುತ್ತಾರೆ. ನಮ್ಮ ಕೈಬೆರಳುಗಳಷ್ಟೇ ಪುಟ್ಟ ಗಾತ್ರದ ಗೊಂಬೆಗಳು. ತಲಾ ಆರು ಗೊಂಬೆಗಳನ್ನು ಪುಟ್ಟ ಸಂಚಿಯಲ್ಲಿ ಅಥವಾ ಮರದ ಪೆಟ್ಟಿಗೆಯಲ್ಲಿಟ್ಟು ಮಾರುತ್ತಾರೆ. ಆ ಗೊಂಬೆಗಳಿಗೆ ವಿಶೇಷವಾದ ಮಾಂತ್ರಿಕ ಶಕ್ತಿ ಇರುತ್ತದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಅವುಗಳನ್ನು magical dolls ಅಥವಾ worry dolls ಎಂದೂ ಕರೆಯುತ್ತಾರೆ.


Friday Aug 05, 2011
The Hairy Ball Theorem
Friday Aug 05, 2011
Friday Aug 05, 2011
ದಿನಾಂಕ 07 ಆಗಸ್ಟ್ 2011ರ ಸಂಚಿಕೆ...
ಬಾಚಿದ ಕೂದಲು ಮತ್ತು ಬೀಸುವ ತಂಗಾಳಿ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮಹಾತ್ಮ ಗಾಂಧಿಯವರ ಉಲ್ಲೇಖದಿಂದ ಇದನ್ನು ಆರಂಭಿಸಿದರೆ ನೀವು ಥಟ್ಟನೆ ಕೇಳಬಹುದು- “ಬಾಪೂಜಿ ಬೊಕ್ಕತಲೆಯವರು. ಅವರೆಲ್ಲಿ ಕೂದಲು ಬಾಚುತ್ತಾರೆ?” ಎಂದು. ನಿಮಗೆ ಆ ತರ್ಲೆ ಪ್ರಶ್ನೆಯೂ ನೆನಪಾಗಬಹುದು- ‘ಸೈಕಲ್ ಮೇಲೆ ಬಾಪೂಜಿ ಪೂರ್ವದಿಂದ ಪಶ್ಚಿಮದತ್ತ ವೇಗವಾಗಿ ಹೋಗುತ್ತಿದ್ದರೆ ಅವರ ಕೂದಲು ಯಾವ ದಿಕ್ಕಿಗೆ ಹಾರುತ್ತಿರುತ್ತದೆ?’ ಹೋಗಲಿಬಿಡಿ, ರಾಷ್ಟ್ರಪಿತನ ಬಗ್ಗೆ ತಮಾಷೆ ಸಲ್ಲ. ಬದಲಿಗೆ ಅವರ ಆತ್ಮಚರಿತ್ರೆಯಿಂದ ಒಂದು ಸಣ್ಣ ಪ್ಯಾರಗ್ರಾಫ್ ಓದೋಣ. ಇವತ್ತಿನ ಅಂಕಣಕ್ಕೆ ಸಂಬಂಧಿಸಿದ್ದೇನೋ ಅದರಲ್ಲಿ ನಮಗೆ ಸಿಗುತ್ತದೆ. “ಡಾ.ಮೆಹ್ತಾ ನನ್ನನ್ನು ನೋಡಲಿಕ್ಕೆಂದು ಲಂಡನ್ನ ವಿಕ್ಟೋರಿಯಾ ಹೊಟೇಲ್ಗೆ ಬಂದಿದ್ದರು. ಹೀಗೇ ಮಾತನಾಡುತ್ತಿರುವಾಗ ನಾನು ಅವರ ಟೋಪಿಯನ್ನು ತೆಗೆದುಕೊಂಡು ಅದೆಷ್ಟು ಮೃದುವಾಗಿದೆ ಎಂದು ಸವರಿ ನೋಡಿದೆ. ವಿರುದ್ಧ ದಿಕ್ಕಿನಲ್ಲಿ ಸವರಿದ್ದರಿಂದ ಅದರ ಉಣ್ಣೆಯೆಲ್ಲ ಎದ್ದು ನಿಂತು ಒಂದು ರೀತಿಯಲ್ಲಿ ವಿಕಾರವಾಗಿ ವಿರೂಪವಾಗಿ ಹೋಯ್ತು. ಡಾ.ಮೆಹ್ತಾ ನನ್ನನ್ನು ತಡೆಯುವಷ್ಟರಲ್ಲಿ ತಪ್ಪು ನಡೆದುಹೋಗಿತ್ತು. ಅದು ನನಗೆ ಒಂದು ರೀತಿಯ ಎಚ್ಚರಿಕೆಯೂ ಆಯಿತು...” - ಹದಿನೆಂಟರ ವಯಸ್ಸಿನಲ್ಲಿ ಬ್ಯಾರಿಸ್ಟರ್ ಓದಲಿಕ್ಕೆ ಲಂಡನ್ಗೆ ಹೋಗಿದ್ದ ದಿನಗಳ ಬಗ್ಗೆ ಬಾಪೂ ಬರೆದಿರುವುದರಲ್ಲಿ ಈ ಭಾಗ ಬರುತ್ತದೆ. ಅವರ ವ್ಯಕ್ತಿತ್ವದ ಕುರಿತು ಹೇಳಲಿಕ್ಕೆ ಇದನ್ನಿಲ್ಲಿ ಉಲ್ಲೇಖಿಸಿದ್ದಲ್ಲ. ಟೋಪಿಯನ್ನು ವಿರುದ್ಧ ದಿಕ್ಕಿನಲ್ಲಿ ಸವರಿದಾಗ ಉಣ್ಣೆ ಎಳೆಗಳು ನಿಮಿರಿ ಟೋಪಿ ವಿಕಾರವಾಗುವ ಚಿತ್ರವನ್ನು ಕಲ್ಪಿಸಿಕೊಳ್ಳಿ, ಅಷ್ಟು ಸಾಕು. ಟೋಪಿ ನಿರ್ಜೀವ ವಸ್ತು, ಹಾಗಾಗಿ ಪರವಾಗಿಲ್ಲ. ಒಂದುವೇಳೆ ನಿಮಗೆ ಬೆಕ್ಕನ್ನು ಪ್ರೀತಿಯಿಂದ ನೇವರಿಸುವ ಅಭ್ಯಾಸವಿದ್ದರೆ!? ಅಪ್ಪಿತಪ್ಪಿಯೂ ನೀವು ಬೆಕ್ಕಿನ ಬೆನ್ನನ್ನು ವಿರುದ್ಧ ದಿಕ್ಕಿನಲ್ಲಿ (ಬಾಲದಿಂದ ತಲೆಯ ಕಡೆಗೆ) ಸವರಿದ್ದೇ ಆದರೆ ಬೆಕ್ಕಿಗೆ ಅದು ಸ್ವಲ್ಪವೂ ಇಷ್ಟವಾಗುವುದಿಲ್ಲ. ಸಿಟ್ಟಿನಿಂದ ಅದು ನಿಮ್ಮನ್ನು ಪರಚಲೂಬಹುದು. ತಲೆಯಿಂದ ಬಾಲದ ಕಡೆ ನೇವರಿಸಿನೋಡಿ. ಆರಾಮಾಗಿ ಮುದ್ದು ಮಾಡಿಸಿಕೊಳ್ಳುತ್ತದೆ ಬೆಕ್ಕು. ಅಲ್ಲಿಗೆ ನಾವು ಇವತ್ತಿನ ಮುಖ್ಯ ವಿಷಯಕ್ಕೆ ಬಂದೆವು. ಇದು ಗಣಿತಶಾಸ್ತ್ರದ ಒಂದು ಪ್ರಮೇಯ. ‘ಕೂದಲಿರುವ ಚೆಂಡಿನ ಪ್ರಮೇಯ’ ಎಂದು ಇದರ ಹೆಸರು. ಇಂಗ್ಲಿಷ್ನಲ್ಲಾದರೆ The Hairy Ball theorem. ಇದೇನನ್ನುತ್ತೆಂದರೆ “ಟೆನ್ನಿಸ್ ಬಾಲ್ ಅಥವಾ ಬ್ಯಾಡ್ಮಿಂಟನ್ ಚೆಂಡಿನಂಥ ಕೂದಲಿರುವ ಚೆಂಡನ್ನು ಚಿಕ್ಕದೊಂದು ಬಾಚಣಿಗೆಯಿಂದ ಬಾಚಿದರೆ, ಚೆಂಡಿನ ಮೇಲ್ಮೈಯ ಅಷ್ಟೂ ಕೂದಲನ್ನು ಮಟ್ಟಸವಾಗಿ ಬಾಚುವುದು ಸಾಧ್ಯವಾಗದು. ಎಲ್ಲೋ ಒಂದುಕಡೆ ಒಂದಿಷ್ಟು ಕೂದಲು ನೇರ ನಿಲ್ಲಬೇಕಾಗುತ್ತದೆ. ಇಲ್ಲವೇ ಅಲ್ಲಿ ಪುಟ್ಟದೊಂದು ಬೈತಲೆ ಅಥವಾ ‘ಸುಳಿ’ಯಂಥ ರಚನೆ ಉಂಟಾಗುತ್ತದೆ. ಆ ಭಾಗದಲ್ಲಿ ಕೂದಲಿಲ್ಲದೆ ಚೆಂಡಿನ ಬರಿಮೈ ಕಾಣಿಸಿಕೊಳ್ಳಬೇಕಾಗುತ್ತದೆ.”


Saturday Jul 23, 2011
The joy of reading continues
Saturday Jul 23, 2011
Saturday Jul 23, 2011
ದಿನಾಂಕ 24 ಜುಲೈ 2011ರ ಸಂಚಿಕೆ...
ಪುಸ್ತಕವೆಂದರೆ ಜೇಬಿನೊಳಗಿನ ಉದ್ಯಾನವನ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.]ಕೈಬೀಸಿ ಕರೆದಿಹುದು ಸಾಹಿತ್ಯ ತೋಟ ಕಣ್ಸೆಳೆಯೆ ದಕ್ಕುವುದು ತಂಪಿನ ನೋಟ ಹಣ್ಣುಂಟು ಕಾಯುಂಟು ಹೀಚುಗಾಯಿಗಳು ಕಂಪನ್ನು ಚೆಲ್ಲುವ ಬಗೆಬಗೆಯ ಹೂಗಳು
ಕುವೆಂಪು ಬೇಂದ್ರೆಯಿಹ ಕನ್ನಡವೇ ಚೆನ್ನ ಮಂಕುತಿಮ್ಮನ ನೀನು ಮರೆಯಬೇಡಣ್ಣ ಅನಕೃ ತರಾಸು ತೇಜಸ್ವಿ ಜೊತೆಗೆ ಬಲ್ಲಾಳ ಕಾರಂತ ಚಿತ್ತಾಲರೆಡೆಗೆ
ತ್ರಿವೇಣಿ ಸಾಯಿಸುತೆ ಇಂದಿರೆಯ ನೆನೆದು ವೈದೇಹಿ ಅನುಪಮಾ ಸುಧೆಯನ್ನು ಮೊಗೆದು ಭೈರಪ್ಪ ಪುತಿನ ಮಾಸ್ತಿ ಗೊರೂರು ಸರಸತಿಯ ಮಕ್ಕಳಿಗೆ ಸಾಟಿ ಯಾರಿಹರು
ಬಂಡಾಯ ಕಹಳೆಯ ಸಿದ್ಧಲಿಂಗಯ್ಯ ಗಾಂಧಿಕ್ಲಾಸಿನ ಕುಂವೀ ನಮ್ಮವರೇ ಅಯ್ಯಾ ವಿವೇಕ ಜಯಂತ ವಸುಧೇಂದ್ರ ಇಷ್ಟ ಓದದೇ ಉಳಿದರೆ ನಮಗೆಯೇ ನಷ್ಟ...‘ಸಾಹಿತ್ಯಿಕ ಓದಿನ ಗೀಳನ್ನು ಇನ್ನಾದರೂ ಬೆಳೆಸಿಕೊಳ್ಳಬೇಕು’ ಎಂಬ ನನ್ನ ನಿರ್ಧಾರವನ್ನು ಶಿಕಾಗೋದಲ್ಲಿರುವ ಸ್ನೇಹಿತೆ ತ್ರಿವೇಣಿ ಶ್ರೀನಿವಾಸ ರಾವ್ ಸ್ವಾಗತಿಸಿದ್ದು ಹೀಗೆ! ಕಳೆದ ವಾರದ ಅಂಕಣವನ್ನು ಓದಿದ ಕೂಡಲೇ ಮನದಲ್ಲಿ ಮೂಡಿದ ಆಶುಕವಿತೆಯಾಗಿ ಇದನ್ನವರು ಬರೆದು ಕಳಿಸಿದ್ದಾರೆ. ಬೇಂದ್ರೆಯವರಿಂದ ಹಿಡಿದು ವಸುಧೇಂದ್ರವರೆಗೆ, ಸಾಯಿಸುತೆಯಿಂದ ಹಿಡಿದು ಸುಧಾಮೂರ್ತಿವರೆಗೆ ಕನ್ನಡ ಸಾಹಿತ್ಯಲೋಕದ ಮುತ್ತುಗಳನ್ನು ಪೋಣಿಸಿ ಸೊಗಸಾದ ಮಾಲೆ ಕಟ್ಟಿದ್ದಾರೆ. ಎಷ್ಟು ಚೆನ್ನಾಗಿದೆ ಅಲ್ಲವೇ? ತ್ರಿವೇಣಿ ಇದನ್ನು ಬರೀ ಸ್ತುತಿಗೀತೆಯಾಗಿ ಹೇಳಿದ್ದಲ್ಲ. ಈ ಎಲ್ಲ ಮಹಾನ್ ಸಾಹಿತಿಗಳ ಅನೇಕ ಕೃತಿಗಳನ್ನು ಅವರು ಓದಿ ಆನಂದಿಸಿದ್ದಾರೆ. ಅಷ್ಟೇಅಲ್ಲ, ಅವರು ಸ್ವತಃ ಓರ್ವ ಬರಹಗಾರ್ತಿ. ಹಿರಿಯ ‘ತ್ರಿವೇಣಿ’ಯವರ ಜಾಡಲ್ಲಿ ಹೆಜ್ಜೆಯಿಟ್ಟವರು. ಚಂದದ ಕಥೆ, ಕವಿತೆ, ಲಲಿತಪ್ರಬಂಧಗಳನ್ನೂ ಬರೆಯುತ್ತಾರೆ. ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯಿಕ ಓದು ಅವರ ಚಿಂತನಾಶಕ್ತಿಯನ್ನು ಪಕ್ವವಾಗಿಸಿದೆ. ಬರವಣಿಗೆಯಲ್ಲಿನ ಸತ್ವವನ್ನು ಹೆಚ್ಚಿಸಿದೆ. ಅಂದಮೇಲೆ ಸಾಹಿತ್ಯ ತೋಟಕ್ಕೆ ಸ್ವಾಗತ ಕೋರಿರುವ ತ್ರಿವೇಣಿಯವರ ಆಶಯಕ್ಕೆ ಹೆಚ್ಚು ಬೆಲೆ. ಸಾಹಿತ್ಯಿಕ ಓದನ್ನು ಇನ್ನೂ ಹೆಚ್ಚುಹೆಚ್ಚು ಜನರು ರೂಢಿಸಿಕೊಳ್ಳುವುದಕ್ಕೆ ಅವರ ಈ ಆಶುಕವಿತೆಯೇ ಒಂದು ಸ್ಫೂರ್ತಿ ಸೆಲೆ. ಹಾಂ! ತೋಟ ಎಂದೊಡನೆ ನೆನಪಾಯ್ತು, A book is like a garden carried in the pocket" ಅಂತ ಒಂದು ಚೈನೀಸ್ ನಾಣ್ಣುಡಿಯಿದೆ. ಪುಸ್ತಕವೆಂದರೆ ಜೇಬಿನೊಳಗೇ ಒಂದು ಪುಟ್ಟ ಉದ್ಯಾನವಿದ್ದಂತೆ. ಆಗಾಗ ಓದಿಕೊಂಡರೆ (ವಾಯುವಿಹಾರಕ್ಕೆ ಮನಸ್ಸನ್ನು ಒಡ್ಡಿಕೊಂಡರೆ) ಆಹ್ಲಾದ ಮತ್ತು ಆನಂದ. ಮೆದುಳಿಗೂ ಅಷ್ಟಿಷ್ಟು ವ್ಯಾಯಾಮ. ನಿಜಕ್ಕೂ ಬಹಳ ಅರ್ಥಗರ್ಭಿತವಾಗಿದೆ ಈ ನಾಣ್ಣುಡಿ. ಅದೇನೇ ಇರಲಿ ಓದಿನ ಹಿರಿಮೆಯನ್ನು ಮತ್ತು ಪುಸ್ತಕಗಳ ಗರಿಮೆಯನ್ನು ನಿಮಗೆ, ಅದರಲ್ಲೂ ನಾನು, ತಿಳಿಸುವುದೇನಿದೆ? ಆದರೆ ಭಾರತದಿಂದ ಹಿಂದಿರುಗುವಾಗ ಸೂಟ್ಕೇಸ್ ತುಂಬಾ ಪುಸ್ತಕಗಳನ್ನು ಹೊತ್ತುಕೊಂಡು ಬಂದಿದ್ದೇನೆ, ಅವು ಯಾವುವಂತ ತಿಳಿಸುತ್ತೇನೆ ಎಂದಿದ್ದೆನಷ್ಟೆ, ಅದನ್ನೇ ಈಗ ಮಾಡುತ್ತೇನೆ. ಕನ್ನಡ ಸಾಹಿತ್ಯವನ್ನು ಪ್ರವೇಶಿಸಬಯಸುವ ಹೊಸ ಓದುಗರಿಗೆ ಕನ್ನಡದ ಪ್ರಮುಖ ಲೇಖಕರ ಆಯ್ದ ಬರಹಗಳ ಕಿರುವಾಚಿಕೆಗಳು- ಕೆ.ವಿ.ಸುಬ್ಬಣ್ಣ ನೆನಪಿನಲ್ಲಿ ಅಕ್ಷರ ಪ್ರಕಾಶನ ಹೊರತಂದ ‘ಮೊದಲ ಓದು’ ಪುಸ್ತಕಮಾಲೆ- ನನ್ನಂಥವರಿಗೆ ಹೇಳಿ ಮಾಡಿಸಿದ ಪುಸ್ತಕಗಳಿವು. ಒಂದೊಂದರಲ್ಲೂ ನೂರಎಂಟು ಪುಟಗಳು. ಆ ಸರಣಿಯಲ್ಲಿ ಒಟ್ಟು ಐವತ್ತು ಪುಸ್ತಕಗಳಿವೆಯಂತೆ. ಆದಿಕವಿ ಪಂಪನಿಂದ ಹಿಡಿದು ಈಗಿನ ಅನಂತಮೂರ್ತಿವರೆಗೂ ವಿವಿಧ ಲೇಖಕರ ಬರಹಗಳ ಸಂಗ್ರಹ. ಪ್ರಾತಿನಿಧಿಕವಾಗಿ ನನಗೆ ‘ನಾಗೇಶ ಹೆಗಡೆ ಅವರ ಆಯ್ದ ಬರಹಗಳು’ ಪುಸ್ತಕ ಸಿಕ್ಕಿದೆ. ಬಹಳ ಚೆನ್ನಾಗಿದೆ. ಇನ್ನೊಂದು ಪುಸ್ತಕ ನನ್ನ ಓದಿನ ಆರಂಭಕ್ಕೆ ಸರಿಯಾಗಿಯೇ ಇದೆ ಅಂತನಿಸಿದ್ದು ‘ಗಾಂಧೀಜಿಯವರ ಸಂಕ್ಷಿಪ್ತ ಆತ್ಮಕಥನ’ ಎಂಬ ಪುಸ್ತಕ. ಇದನ್ನು ಸುಮಾರಾಗಿ ಹೈಸ್ಕೂಲ್ ವಿದ್ಯಾರ್ಥಿಗಳ ಮಟ್ಟಕ್ಕಾಗುವಂತೆ ಬರೆಯಲಾಗಿದೆ. ಇದರ ಲೇಖಕಿ ಎಚ್.ಎಲ್.ಸೀತಾದೇವಿ. ಅವರ ಹೆಸರನ್ನು ನೀವೂ ಕೇಳಿಯೇ ಇರುತ್ತೀರಿ- ಎಂಬತ್ತರ ದಶಕದಲ್ಲಿ ಬೆಂಗಳೂರು ಆಕಾಶವಾಣಿಯಲ್ಲಿ ಪ್ರದೇಶ ಸಮಾಚಾರ ಓದುತ್ತಿದ್ದರು. ಆಮೇಲೆ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿಸಂಪಾದಕಿಯೂ ಆಗಿದ್ದರಂತೆ. ನನಗೆ ಪರಾಗಸ್ಪರ್ಶ ಓದುಗರಾಗಿ ಇ-ಪರಿಚಿತರಾದರು, ವಿಶ್ವಾಸಪೂರ್ವಕವಾಗಿ ಪುಸ್ತಕ ಕೊಟ್ಟು ನನ್ನ ಓದಿಗೆ ಪ್ರೇರಕರಾದರು. ಸೀತಾದೇವಿಯ ವಿಚಾರ ಅದಾದರೆ, ಸೀತೆಯನ್ನು ಕುರಿತ ‘ಸೀತಾಂತರಂಗ’ ಎಂಬ ತಮ್ಮ ಕೃತಿಯನ್ನು ಪ್ರೀತಿಯಿಂದ ಕೊಟ್ಟಿದ್ದಾರೆ ಬೆಂಗಳೂರಿನ ಡಾ.ಜಯಂತಿ ಮನೋಹರ್. ಈ ಕಥಾನಕವು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತಂತೆ. ಮತ್ತೆ, ಸುಧಾದಲ್ಲಿಯೇ ತುಂಬ ವರ್ಷಗಳ ಹಿಂದೆ ಬರುತ್ತಿದ್ದ ‘ಕಜ್ಜಾಯ’ದ ಪುಸ್ತಕರೂಪವೂ ನನಗೆ ಉಡುಗೊರೆಯಾಗಿ ಸಿಕ್ಕಿದೆ, ಸ್ವತಃ ಸುನಂದಾ ಬೆಳಗಾಂವಕರ್ ಅವರಿಂದಲೇ!


Saturday Jul 16, 2011
Need to cultivate Book-Reading habit
Saturday Jul 16, 2011
Saturday Jul 16, 2011
ದಿನಾಂಕ 17 ಜುಲೈ 2011ರ ಸಂಚಿಕೆ...
ಇನ್ನಾದರೂ ಬೆಳೆಸಿಕೊಳ್ಳಬೇಕು ಓದಿನ ಗೀಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅದೊಂದು ಕೊರಗು ನನ್ನನ್ನು ಆಗಾಗ ಕಾಡುವುದಿದೆ. ಏನೆಂದರೆ, ಸಾಹಿತ್ಯಿಕ ಓದಿನ ಒಳ್ಳೆಯ ಹವ್ಯಾಸವನ್ನು ನಾನು ಬೆಳೆಸಿಕೊಳ್ಳಲೇ ಇಲ್ಲ. ಓದು ಕೊಡುವ ಅಮಿತಾನಂದಕ್ಕೆ ನನ್ನನ್ನು ಒಡ್ಡಿಕೊಳ್ಳಲೇ ಇಲ್ಲ. ಇದನ್ನೇಕೆ ಹೇಳುತ್ತಿದ್ದೇನೆಂದರೆ ‘ಇವನು ತುಂಬಾ ಓದಿಕೊಂಡವನಿರಬೇಕು...’ ಎಂದು ನನ್ನ ಬಗ್ಗೆ ಒಂದು ರೀತಿಯ ಸದಭಿಪ್ರಾಯ ಇಟ್ಟುಕೊಂಡವರು ಕೆಲವರಿದ್ದಾರೆ. ಅವರ ಮನಸ್ಸಿನಲ್ಲಿ ಈತ ಸಾಹಿತ್ಯದ ಸರಕನ್ನು ಸಾಕಷ್ಟು ಅರೆದು ಕುಡಿದವನು ಎಂಬ ಭಾವನೆಯಿದೆ. ಪ್ರಾಯಶಃ ನನ್ನ ಅಂಕಣ ಬರವಣಿಗೆಯಲ್ಲಿ ಕಂಡುಬರುವ ವಸ್ತುವೈವಿಧ್ಯವೂ ಅಂಥದೊಂದು ಮಿಥ್ಯೆಗೆ ಕಾರಣವಾಗಿದೆ. ಆದರೆ ವಾಸ್ತವಾಂಶ ಬೇರೆಯೇ ಇದೆ. ಕನ್ನಡದಲ್ಲಾಗಲೀ, ಇಂಗ್ಲಿಷ್ ಅಥವಾ ಬೇರಾವ ಭಾಷೆಯಲ್ಲಾಗಲೀ ನನ್ನ ‘ಸಾಹಿತ್ಯಿಕ’ ಓದು ಸೊನ್ನೆ. ಕಥೆ-ಕಾದಂಬರಿ, ಕಾವ್ಯ-ನಾಟಕ, ಆತ್ಮಚರಿತ್ರೆ ಮುಂತಾದ ಗಂಭೀರ ಸಾಹಿತ್ಯಪ್ರಕಾರಗಳು ಅದೇಕೋ ನನ್ನ ಆಸಕ್ತಿಯ ವ್ಯಾಪ್ತಿಯೊಳಕ್ಕೆ ಇದುವರೆಗೆ ಬಂದೇ ಇಲ್ಲ. Voracious reader ಎನ್ನುವಲ್ಲಿನ voracious ಹಾಗಿರಲಿ, ಒಬ್ಬ ಸಾಮಾನ್ಯ reader ಅಂತನ್ನಿಸಿಕೊಳ್ಳುವಷ್ಟನ್ನೂ ನಾನು ಓದಿಲ್ಲ. ಇದನ್ನೇನೂ ನನ್ನ ಹೆಗ್ಗಳಿಕೆ ಎನ್ನುತ್ತಿಲ್ಲ. ಅಥವಾ ತೀರಾ ಕೀಳರಿಮೆಯಿಂದ ಹೇಳುತ್ತಿರುವುದೂ ಅಲ್ಲ. ಹಾಗಂತ, ಏನನ್ನೂ ಓದುವುದೇ ಇಲ್ಲ ಎಂದೇನಿಲ್ಲ. ಪುಸ್ತಕಗಳೆಂದರೆ ನನಗೂ ಇಷ್ಟವೇ; ಸಾಧ್ಯವಾದಾಗೆಲ್ಲ ಗ್ರಂಥಾಲಯಗಳಿಗೂ ಭೇಟಿ ಕೊಡುತ್ತೇನೆ. ಆದರೆ ಏನಿದ್ದರೂ ‘ಆಕರ ಗ್ರಂಥ’ (reference book)ಗಳೇ ಮೊದಲು ನನ್ನ ದೃಷ್ಟಿಗೆ ಬೀಳುವುದು. ಅಟ್ಲಸ್, ಡಿಕ್ಷನರಿ, ಎನ್ಸೈಕ್ಲೊಪೀಡಿಯಾ, ಇಯರ್ಬುಕ್ನಂಥ ಪುಸ್ತಕಗಳನ್ನು ಕೈಗೆತ್ತಿಕೊಂಡು ಕಣ್ಣಾಡಿಸುವುದೆಂದರೆ ಎಲ್ಲಿಲ್ಲದ ಉಮೇದು. ಕೊನೆಗೆ ರೈಲ್ವೇ ಟೈಮ್ಟೇಬಲ್ ಮಾದರಿಯ ಪುಸ್ತಕಗಳಾದರೂ ಸರಿ, ಒಟ್ಟಿನಲ್ಲಿ ಮಾಹಿತಿಯ ಕಣಜ ಆದರಾಯಿತು. ಅಂತಹ ಪುಸ್ತಕಗಳಿಂದ ನಮ್ಮ ಜ್ಞಾನದ ಆಳ ಹೆಚ್ಚುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ಜ್ಞಾನದ ಅಗಲ ಖಂಡಿತ ಹೆಚ್ಚುತ್ತದೆ ಎಂದು ನನ್ನ ಅನಿಸಿಕೆ, ಮತ್ತು ಅನುಭವ ಕೂಡ. ಒಂದು ಚಿಕ್ಕ ಉದಾಹರಣೆ ಕೊಡುತ್ತೇನೆ- ಯಾವುದೋ ಲೇಖನದಲ್ಲಿ ನಾನು ಭೈರಪ್ಪನವರ ಕಾದಂಬರಿಗಳ ಹೆಸರುಗಳನ್ನು ಉಲ್ಲೇಖಿಸುತ್ತೇನೆ ಎಂದುಕೊಳ್ಳಿ. ಆ ಕಾದಂಬರಿಗಳನ್ನು ನಾನು ಅದಾಗಲೇ ಓದಿರುತ್ತೇನೆ ಎಂದು ಅಲ್ಲಿ ಭಾಸವಾಗಬಹುದು. ಆದರೆ ನಿಜಕ್ಕೂ ಓದಿರುವುದಿಲ್ಲ. ಭೈರಪ್ಪನವರ ಎಲ್ಲ ಕಾದಂಬರಿಗಳ ಹೆಸರು, ಪ್ರಕಟಣೆಯ ವರ್ಷ, ಬಂದ ಪ್ರಶಸ್ತಿಗಳು, ಯಾವಯಾವ ಭಾಷೆಗಳಿಗೆ ಅವು ಅನುವಾದಗೊಂಡಿವೆ ಅಂತೆಲ್ಲ ಸಮಗ್ರ ಮಾಹಿತಿ ನನ್ನಲ್ಲಿದೆ. ಅದನ್ನು ಸಂದರ್ಭೋಚಿತವಾಗಿ ಬಳಸುತ್ತೇನೆ ಕೂಡ. ಆದರೆ ಒಂದೇಒಂದು ಕಾದಂಬರಿಯನ್ನೂ ನಾನು ಓದಿಲ್ಲ! ಸಂಗೀತ ಹಾಡಲು ಅರಿಯದವನಾದರೂ ಯಾವ ಕೃತಿ ಯಾರ ರಚನೆ ಯಾವ ರಾಗದಲ್ಲಿದೆ ಎಂಬುದನ್ನೆಲ್ಲ ತಿಳಿದುಕೊಂಡಿರುವಂತೆ. ಇದೊಂಥರ ಕಂಪ್ಯೂಟರ್ ಕ್ಷೇತ್ರದಲ್ಲಿ ಮೆಟಾ-ಡೇಟಾ ಇದ್ದಹಾಗೆ. ಮೆಟಾ-ಡೇಟಾ ಎಂದರೆ ಆಕ್ಚುವಲ್ ಡೇಟಾ ಅಲ್ಲ; ಡೇಟಾ ಕುರಿತಾದ ಡೇಟಾ. ಸಾಹಿತ್ಯಿಕ ಉಲ್ಲೇಖಗಳ ಮಟ್ಟಿಗೆ ನನ್ನ ಬಂಡವಾಳ ಬಹುತೇಕವಾಗಿ ಮೆಟಾ-ಡೇಟಾ ಮಾತ್ರ. ಆದರೆ ಈಗ ಹೊಸತೊಂದು ಹುರುಪು ಬಂದಿದೆ. ನಾನೂ ಸಹ ಸಾಹಿತ್ಯಿಕ ಓದಿನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಒಮ್ಮಿಂದೊಮ್ಮೆಲೇ ಕಾದಂಬರಿ ಅಲ್ಲದಿದ್ದರೂ, ಯಾವ ತೆರನಾದ ಪುಸ್ತಕಗಳಿಂದ ಇದುವರೆವಿಗೂ ದೂರವಿದ್ದೆನೋ ಅಂತಹ ಪುಸ್ತಕಗಳನ್ನು ಓದತೊಡಗಬೇಕು. ಹೇಗೂ ಈ ದಿನಗಳಲ್ಲಿ ನಾನು ಕೆಲಸಕ್ಕೆ ಹೋಗಿ ಬರುವುದು ಕಾರ್ ಡ್ರೈವ್ ಮಾಡಿಕೊಂಡು ಅಲ್ಲ, ಬಸ್ಸು ಮತ್ತು ಮೆಟ್ರೋ ರೈಲಿನಲ್ಲಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ತಗಲುತ್ತದೆ. ನನ್ನ ಸಹಪ್ರಯಾಣಿಕರಲ್ಲಿ ಹೆಚ್ಚಿನವರು ಪುಸ್ತಕದ ಓದಿನಲ್ಲಿ ಮುಳುಗಿರುವುದನ್ನು ಗಮನಿಸಿದ್ದೇನೆ. ಪುಸ್ತಕ ಅಲ್ಲದಿದ್ದರೆ ಕಿಂಡಲ್, ನುಕ್, ಐಪ್ಯಾಡ್ನಂಥ ಇ-ಪುಸ್ತಕಗಳಲ್ಲಿ ಮುಳುಗಿರುತ್ತಾರೆ. ಅಂತೂ ಅಮೆರಿಕನ್ನರು ಸಿಕ್ಕಾಪಟ್ಟೆ ಓದುತ್ತಾರೆ. ಅಂದಮೇಲೆ ನಾನೂ ಕೂಡ ಅವರಂತೆಯೇ ‘ಓಡಾಟ’ದ ವೇಳೆಯನ್ನು ‘ಓದಾಟ’ದ ವೇಳೆಯನ್ನಾಗಿಸಬಹುದು/ ಆಗಿಸಬೇಕು.

Version: 20241125