Episodes

Saturday Jul 09, 2011
Cow-stopper for the gate
Saturday Jul 09, 2011
Saturday Jul 09, 2011
ದಿನಾಂಕ 10 ಜುಲೈ 2011ರ ಸಂಚಿಕೆ...
‘ಹಸು ತಡೆ’ಯನು ದಾಟಿ ಬಾ ಓ ಅತಿಥಿ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ರವಿಯು ಅಜ್ಜನ ಮನೆಗೆ ಹೋದನು. ಅಂಗಳದಲ್ಲಿ ಕಾರಂಜಿಯನ್ನು ಕಂಡನು. ಹಿರಿಹಿರಿ ಹಿಗ್ಗಿದನು... ಇವು ಎರಡನೇ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಿಂದ ನೆನಪಿಸಿಕೊಂಡ ಸಾಲುಗಳು. ರವಿ ಬಹುಶಃ ಪ್ರತಿವರ್ಷವೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುತ್ತಾನೆ. ಅದರಲ್ಲೇನೂ ವಿಶೇಷವಿಲ್ಲ. ಆ ಸರ್ತಿ ಹೋದಾಗ ಅವನಿಗೆ ಅಲ್ಲಿ ಒಂದು ವಿಶೇಷ ಆಕರ್ಷಣೆ ಇತ್ತು. ಅಜ್ಜನ ಮನೆಯ ಅಂಗಳದಲ್ಲಿ ಹೊಸದಾಗಿ ಕಟ್ಟಿಸಿದ್ದ ಕಾರಂಜಿ. ಜುಳುಜುಳು ಶಬ್ದದೊಂದಿಗೆ ತಣ್ಣನೆಯ ನೀರು ನೊರೆನೊರೆಯಾಗಿ ಚಿಮ್ಮುವ ಕಾರಂಜಿ. ಬಿರುಬೇಸಿಗೆಯಲ್ಲಿ ಅದಕ್ಕೆ ಮೈಯೊಡ್ಡಬಹುದು. ನೀರಿನಲ್ಲಿ ಯಥೇಚ್ಛ ಆಡಬಹುದು. ಅಜ್ಜ-ಅಜ್ಜಿಯ ಪ್ರೀತಿಕಾರಂಜಿಯ ಜತೆಗೆ ಇದರ ಮೋಜನ್ನೂ ಸವಿಯಬಹುದು. ರವಿಯ ಹಿಗ್ಗಿಗೆ ಅದೇ ಕಾರಣ. ಇಲ್ಲಿ ರವಿ ಮತ್ತು ಕಾರಂಜಿಯನ್ನು ಸಾಂಕೇತಿಕವಾಗಿ ತೆಗೆದುಕೊಂಡು ನೋಡಿ. ಅದು ನಮ್ಮ-ನಿಮ್ಮೆಲ್ಲರ ಆನಂದಾನುಭವವೂ ಆಗುತ್ತದೆ! ದೂರದ ಊರಿನಲ್ಲಿದ್ದು ವರ್ಷಕ್ಕೊಮ್ಮೆಯೋ ಮೂರ್ನಾಲ್ಕು ವರ್ಷಗಳಿಗೊಮ್ಮೆಯೋ ತವರೂರಿಗೆ ಹೋದಾಗ, ಹುಟ್ಟಿ ಬೆಳೆದ ಮನೆಗೆ ಭೇಟಿಕೊಟ್ಟಾಗ, ಅಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು, ಹೊಸ ವಸ್ತು ಅಥವಾ ಸೌಲಭ್ಯ-ಸೌಕರ್ಯಗಳನ್ನು ಗಮನಿಸಿದಾಗಿನ ಪುಳಕವಿದೆಯಲ್ಲ ಅದೊಂಥರ ವಿಶೇಷವಾದುದು. ಅದು, ಹಜಾರದಲ್ಲಿನ ಹೊಸ ತೂಗುಮಂಚ ಇರಬಹುದು, ಅಡುಗೆಮನೆಯಲ್ಲಿ ಹೊಸದೊಂದು ಪರಿಕರ ಇರಬಹುದು, ಗೋಡೆಗಳಿಗೆ ಹೊಸ ಸುಣ್ಣಬಣ್ಣ ಇರಬಹುದು, ಅಮ್ಮನೋ ಅಕ್ಕನೋ ಕೈಕರಣದಿಂದ ಮಾಡಿದ ಕಲಾಕೃತಿಯಿರಬಹುದು, ಕೊನೆಗೆ ಹಳೇ ಪೀಠೋಪಕರಣಗಳನ್ನೇ ಹೊಸ ನಮೂನೆಯಲ್ಲಿ ಜೋಡಿಸಿದ್ದಿರಬಹುದು- ಅಂತೂ “ವಾಹ್! ಎಷ್ಟು ಚೆನ್ನಾಗಿದೆ! ಕಳೆದಸಲ ಬಂದಾಗ ಇದು ಇರಲಿಲ್ಲ...” ಎನ್ನಬಹುದಾದ ಯಾವುದಾದರೂ ಸರಿ. ಮಾತಿಗೆ ಸಾಮಗ್ರಿಯಾಗುತ್ತದೆ, ಮನಸ್ಸಿಗೆ ಮುದ ಕೊಡುತ್ತದೆ, ರವಿಗೆ ಕಾರಂಜಿಯಿದ್ದಂತೆ ನಮಗೆ ಹಿಗ್ಗಿನ ಬುಗ್ಗೆಯಾಗುತ್ತದೆ. ಈ ಸಲ ನಾನು ಊರಿಗೆ ಹೋಗಿದ್ದಾಗ ಅಲ್ಲಿ ಅಂಥದೊಂದು ಹೊಸ ಆಕರ್ಷಣೆಯ ಕಾರಂಜಿಯಿತ್ತು. ಅದೇನಂತೀರಾ? ನಮ್ಮ ಮನೆಯ ಗೇಟಿಗೆ ಅಳವಡಿಸಿದ ‘ಹಸು ತಡೆ’! ಇಂಗ್ಲಿಷ್ನಲ್ಲಿ cow-stopper ಅಥವಾ cow-catch ಎನ್ನುತ್ತಾರೆ. ಹಾಗೆಂದರೇನು ಅಂತ ನಿಮಗೆ ತತ್ಕ್ಷಣ ಗೊತ್ತಾಗುವಂತೆ ಇಲ್ಲಿ ಅದರ ಚಿತ್ರವನ್ನು ಕೊಟ್ಟಿದ್ದೇನೆ. ಚಿತ್ರದ ಜತೆಗೆ ಒಂದಿಷ್ಟು ಅಕ್ಷರ-ಚಿತ್ರಣವೂ ಇರಲೆಂದು ಅದನ್ನೂ ಕೊಡುತ್ತಿದ್ದೇನೆ.

Wednesday Jul 06, 2011
Double Decker Airbus A380
Wednesday Jul 06, 2011
Wednesday Jul 06, 2011
ದಿನಾಂಕ 3 ಜುಲೈ 2011ರ ಸಂಚಿಕೆ...
ಎರಡಂತಸ್ತಿನ ಆ ವಿಮಾನದ್ದೇ ಒಂದು ಗತ್ತು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಏರ್ಬಸ್ ಎ-380. ಶಾರ್ಟ್ ಆಗಿ ‘ಎ-ತ್ರೀಎಯ್ಟಿ’. ನಮಗೆಲ್ಲ ಬಿಡಿ, ವಿಮಾನಗಳನ್ನು ಸಿಟಿಬಸ್ಸುಗಳಂತೆ ನೋಡುವ/ಬಳಸುವ ಅಮೆರಿಕನ್ನರಿಗೂ ಅದೊಂದು ಅದ್ಭುತವೆನಿಸುವ ಅಚ್ಚರಿ. ನೋಡಿದೊಡನೆಯೇ ನಿಬ್ಬೆರಗಾಗಿ ವಾಹ್ ಎಂದು ಉದ್ಗಾರ ತರಿಸುವಂಥ ದೈತ್ಯ ವಿಮಾನ. ಈಗ ಪ್ರಪಂಚದ ಅತಿದೊಡ್ಡ ‘ಪ್ಯಾಸೆಂಜರ್ ಫ್ಲೈಟ್’ ಎಂಬ ಹೆಗ್ಗಳಿಕೆ ಅದರದು. ದೊಡ್ಡದೆಂದರೆ ಅಷ್ಟಿಷ್ಟಲ್ಲ, ಒಂದು ಸರಾಸರಿ ಸಾಮಾನ್ಯ ಗಾತ್ರದ ವಿಮಾನಕ್ಕಿಂತ ನಾಲ್ಕು ಪಟ್ಟು ದೊಡ್ಡದು! ರಟ್ಟೆಯ ಬಲದಲ್ಲಿ ಭೀಮನಂಥದು. ಹೊಟ್ಟೆಯೊಳಗೆ ತುಂಬಿಸಿಕೊಳ್ಳುವ ವಿಚಾರದಲ್ಲಿ ಬಕಾಸುರನಂಥದು. ಮಿಕ್ಕೆಲ್ಲ ವಿಮಾನಗಳು ಈ ಗಿಡುಗನೆದುರಿಗೆ ಪುಟ್ಟ ಗುಬ್ಬಚ್ಚಿಗಳಂತೆ ಕಾಣುತ್ತವೆ. ಅಂತಹ ಏರ್ಬಸ್ ಎ-380 ವಿಮಾನದಲ್ಲಿ ಮೊನ್ನೆ ವಾಷಿಂಗ್ಟನ್ನಿಂದ ಪ್ಯಾರಿಸ್ವರೆಗೆ ಪ್ರಯಾಣ ಮಾಡಿದ ಪುಳಕ ನನ್ನದಾಯಿತು. ಅದಿನ್ನೂ ತಾಜಾ ಇರುವಾಗಲೇ ನಿಮ್ಮೊಡನೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಇವತ್ತಿನ ಅಂಕಣ ಏರ್ಬಸ್ ಎ-380 ಸ್ಪೆಷಲ್!

Saturday Jun 25, 2011
Names and Nice Memories
Saturday Jun 25, 2011
Saturday Jun 25, 2011
ದಿನಾಂಕ 26 ಜೂನ್ 2011ರ ಸಂಚಿಕೆ...
ಹೆಸರಿನ ಹಿಂದೆ ಒಂದು ಹಸಿರು ನೆನಪು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಅಮೆರಿಕದ ಸಸ್ಯೋದ್ಯಾನದಲ್ಲಿ ಅಶೋಕ ವೃಕ್ಷವನ್ನು ನೋಡಿದಾಗ ಅದರ ಕೆಳಗೆ ಸೀತಾಮಾತೆ ಕುಳಿತ ಚಿತ್ರ ಕಣ್ಮುಂದೆ ಬಂದುಹೋಯಿತು ಎಂದು ನಿಮ್ಮ ಸ್ನೇಹಿತರೊಬ್ಬರ ಅನುಭವವನ್ನು ಬಣ್ಣಿಸಿದ್ದೀರಷ್ಟೇ? ಅದನ್ನು ಓದಿದಾಗಿನಿಂದ ನನಗೊಂದು ಸಂದೇಹ ಕಾಡುತ್ತಿದೆ. ರಾಮಾಯಣದ ಕಥೆಯಲ್ಲಿ, ರಾವಣನಿಂದ ಅಪಹರಿಸಲ್ಪಟ್ಟ ಸೀತೆ ಲಂಕೆಯಲ್ಲಿ ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಕೆಳಗೆ ಕುಳಿತು ದಿನಕಳೆಯುತ್ತಿದ್ದಳು ಎಂದು ವಿವರಣೆಯಿದೆ. ಅಂದರೆ ವನದ ಹೆಸರು ಅಶೋಕವೇ ಆದರೂ ಸೀತಾಮಾತೆಗೆ ನೆರಳು ನೀಡಿದ್ದ ವೃಕ್ಷದ ಹೆಸರು ಶಿಂಶುಪ ಅಲ್ಲವೇ? ಇದನ್ನು ನಾನು ಚಂದಮಾಮ ಕಥೆಗಳಲ್ಲಿ ಓದಿದ್ದೆ. ಇಷ್ಟು ಚೆನ್ನಾಗಿ ಹೇಗೆ ನನ್ನ ನೆನಪಿನಲ್ಲಿ ಉಳಿದಿದೆ ಎಂಬುದನ್ನೂ ವಿವರಿಸುತ್ತೇನೆ. ಚಂದಮಾಮದಲ್ಲಿ ಆ ಕಥೆಗಳನ್ನು ಓದುತ್ತಿದ್ದ ದಿನಗಳಲ್ಲಿ ನಾನು ಚೊಚ್ಚಲ ಬಸುರಿ. ಸೀತೆಯ ಕಷ್ಟಕಾಲದಲ್ಲಿ ಅವಳಿಗೆ ನೆರಳಿತ್ತ ಶಿಂಶುಪ ವೃಕ್ಷದ ಬಗ್ಗೆ ನನಗೆ ಅಪಾರ ಗೌರವ ಮೂಡಿತ್ತು. ನನಗೇನಾದರೂ ಹೆಣ್ಣು ಮಗುವಾದರೆ ಶಿಂಶುಪಾ ಎಂದೇ ಹೆಸರಿಡುತ್ತೇನೆ ಎಂದು ಆಗಲೇ ಅಂದುಕೊಂಡಿದ್ದೆ. ಅದರಂತೆ ನನಗೆ ಹೆಣ್ಣುಮಗುವೇ ಹುಟ್ಟಿತು. ಶಿಂಶುಪಾ ಎಂದೇ ಹೆಸರಿಟ್ಟೆವು. ಈಗ ಅವಳು ದೊಡ್ಡವಳಾಗಿ ಮದುವೆಯೂ ಆಗಿ ಗಂಡನ ಮನೆ ಸೇರಿದ್ದಾಳೆ...” ಇದು, ಮೇ ೨೨ರ ಅಂಕಣದಲ್ಲಿ ಪ್ರಕಟವಾಗಿದ್ದ ‘ಬಾರ್ಸಿಲೋನಾದಲ್ಲಿ ಕರಿಬೇವು ಸಿಕ್ಕ ಸಂತಸ’ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಬಂದ ಒಂದು ಪತ್ರ. ಬರೆದವರು ಮಡಿಕೇರಿಯಿಂದ ಗೀತಾ ಶ್ರೀಧರ ಎಂಬುವರು. ಇದೇ ಮೊದಲ ಸಲ ಅವರು ನನಗೆ ಪತ್ರ ಬರೆದಿರುವುದು. ಅವರೆನ್ನುವುದು ನಿಜ. ಲಂಕೆಯಲ್ಲಿ ಸೀತೆ ಕುಳಿತುಕೊಂಡಿದ್ದದ್ದು ಅಶೋಕ ವನದಲ್ಲಿ ಶಿಂಶುಪ ವೃಕ್ಷದ ಅಡಿಯಲ್ಲಿ. ಶಿಂಶುಪ ವೃಕ್ಷಕ್ಕೆ ಕನ್ನಡದಲ್ಲಿ ಏನಂತಾರೆ, ಅದರ ಸಸ್ಯಶಾಸ್ತ್ರೀಯ ಹೆಸರೇನು, ಅಶೋಕ ವೃಕ್ಷಕ್ಕಿಂತ ಅದು ಹೇಗೆ ಭಿನ್ನ ಎಂಬೆಲ್ಲ ವಿವರಗಳು ನನಗೆ ಸರಿಯಾಗಿ ಗೊತ್ತಿಲ್ಲ. ಆದರೆ ಸುಂದರಕಾಂಡದಲ್ಲಿ ‘ಶಿಂಶುಪ ವೃಕ್ಷವನೇರಿ ಕುಳಿತನವ ಸೀತೆಯ ಹುಡುಕಲು ಹನುಮಂತ... ಮಾಸಿದ ಸೀರೆಯ ಮ್ಲಾನವದನೆಯನು ಕಂಡು ಮರುಗಿದನು ಗುಣವಂತ...’ ಎಂದು ಕೇಳಿದ್ದು ನೆನಪಿದೆ. ನಿಖರವಾದ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ, ಅದಕ್ಕಿಂತಲೂ ಹೆಚ್ಚಾಗಿ ಹೆಸರಿನ ಹಿಂದಿನ ಹಸಿರು ನೆನಪನ್ನು ಹಂಚಿಕೊಂಡದ್ದಕ್ಕಾಗಿ ಗೀತಾ ಅವರಿಗೆ ವಿಶೇಷ ಧನ್ಯವಾದಗಳು. ಟಿವಿ ರಾಮಾಯಣದಲ್ಲಿ ಸೀತೆಯ ಪಾತ್ರ ಮಾಡಿದ್ದ ನಟಿ ನಿಮಗೆ ನೆನಪಿದ್ದಾಳೆಯೇ? ಆಕೆಯ ಹೆಸರು ದೀಪಿಕಾ. ಕೆಲ ದಿನಗಳ ಹಿಂದೆ ನನಗೆ ದ್ವೀಪಿಕಾ ದೇಸಾಯಿ ಎಂಬುವರಿಂದ ಒಂದು ಫೇಸ್ಬುಕ್ ಫ್ರೆಂಡ್ರಿಕ್ವೆಸ್ಟ್ ಬಂದಿತ್ತು. ಅವರ ಹೆಸರು ನೋಡಿ ಕನ್ನಡದವರಲ್ಲವೇನೊ ಎಂದುಕೊಂಡಿದ್ದೆ ನಾನು. ಪರಿಚಯ ತಿಳಿಸುತ್ತೀರಾ ಎಂದು ಅವರಿಗೆ ಬರೆದು ಕೇಳಿದ್ದೆ. ಅದಕ್ಕೆ ಕನ್ನಡದಲ್ಲೇ ಉತ್ತರಿಸಿದ ದ್ವೀಪಿಕಾ, ತಾನು ಕ್ಯಾಲಿಫೋರ್ನಿಯಾದಲ್ಲಿರುವ ಓರ್ವ ಕನ್ನಡತಿ ಗೃಹಿಣಿಯೆಂದೂ ಈಗ ಅಮ್ಮ-ಅಪ್ಪ ತನ್ನನ್ನು ಭೇಟಿಯಾಗಲು ಅಮೆರಿಕೆಗೆ ಬಂದಿದ್ದಾರೆಂದೂ, ಅಮ್ಮ ಪರಾಗಸ್ಪರ್ಶ ಅಂಕಣದ ರೆಗ್ಯುಲರ್ ಓದುಗರೆಂದೂ, ಅಮೆರಿಕದಿಂದ ಹಿಂದಿರುಗುವುದರೊಳಗೆ ನನ್ನೊಡನೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಲು ಬಯಸುತ್ತಾರೆಂದೂ ಬರೆದಿದ್ದರು. ನನ್ನ ಫೋನ್ ನಂಬರ್ ತಿಳಿಸಿದ ಮೇಲೆ ಅವರಮ್ಮನೊಡನೆ ಟೆಲಿಮಾತುಕತೆ ಆಯಿತು. ತಮಾಷೆಗಾಗಿಯೇ ನಾನು ಅವರಲ್ಲಿ “ನಿಮ್ಮ ಮಗಳ ಹೆಸರು ನಿಜವಾಗಿಯೂ ದ್ವೀಪಿಕಾ ಅಂತಲೇ ಇರುವುದಾ ಅಥವಾ ದೀಪಿಕಾ ಅಂತಿದ್ದದ್ದು ಬರೆಯುವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ನಡುವೆ ಡಬ್ಲ್ಯೂ ಸೇರಿಕೊಂಡದ್ದಾ?” ಎಂದು ಕೇಳಿಯೇಬಿಟ್ಟೆ. ಅದಕ್ಕೆ ಅವರ ಉತ್ತರ ಹೀಗಿತ್ತು- “ದ್ವೀಪಿಕಾ ಅಂತಲೇ ಹೆಸರು. ಅವಳ ಅಪ್ಪ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದವರು ಈಗ ನಿವೃತ್ತರಾಗಿದ್ದಾರೆ. ಅವರಿಗೆ ಕೆಲಸದಲ್ಲಿ ಬೇರೆಬೇರೆ ಊರುಗಳಿಗೆ ಟ್ರಾನ್ಸ್ಫರ್ ಆಗುತ್ತಿತ್ತು. ಮಗಳು ಹುಟ್ಟುವಾಗ ನಮ್ಮವರ ಉದ್ಯೋಗ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿತ್ತು. ಆ ನೆನಪಿಗಾಗಿ ದ್ವೀಪಿಕಾ ಎಂದು ಹೆಸರಿಟ್ಟೆವು. ಎಲ್ಲರೂ ಅದೇ ಪ್ರಶ್ನೆ ಕೇಳೋದು- ದೀಪಿಕಾ ಎನ್ನುವ ಹೆಸರು ಸಾಮಾನ್ಯವಾಗಿ ಗೊತ್ತಿರುತ್ತೆ. ಇದೇನಿದು ದ್ವೀಪಿಕಾ ಎಂಬ ಹೆಸರು? ಅವರೆಲ್ಲರಿಗೆ ವಿವರಿಸುವಾಗ ನಮ್ಮ ಅಂಡಮಾನ್ ನಿಕೋಬಾರ್ ದ್ವೀಪವಾಸದ ದಿನಗಳನ್ನು ನೆನೆದು ಖುಷಿಪಡುತ್ತೇವೆ.” ರಾಮಾಯಣದಲ್ಲಿ ಸೀತೆಯ ಅಪಹರಣಕ್ಕೆ ಕಾರಣವಾದದ್ದು ಏನು ಹೇಳಿ? ಮಾರೀಚ ಬಂಗಾರದ ಜಿಂಕೆಯಾಗಿ ಸೀತೆಯ ಕಣ್ಮುಂದೆ ಸುಳಿದಾಡಿದ್ದು. ಹಿಂದೊಮ್ಮೆ ನಾನು ಅಮೆರಿಕದ ರಸ್ತೆಗಳಲ್ಲಿ ಜಿಂಕೆಗಳು ಓಡಾಡುವುದರ ಕುರಿತು ‘ಪಬ್ಲಿಕ್ ರೋಡಿನಲಿ ಜಿಂಕೆ ಬಂದೈತಲ್ಲೋ...’ ಎಂಬ ಲೇಖನ ಬರೆದಿದ್ದೆ. ಅದರಲ್ಲಿ ‘ಕೆಲವೊಮ್ಮೆ ಈ ಜಿಂಕೆಗಳು ಎಚ್ಚರಿಕೆ ಫಲಕಗಳಿರುವಲ್ಲಿಯೇ ರಸ್ತೆ ದಾಟುವ ಸುಭಗತನವನ್ನು ಪ್ರದರ್ಶಿಸುವುದೂ ಇದೆ’ ಎಂದು ಬರೆದಿದ್ದೆ. ಅಮೆರಿಕದ ನಾರ್ತ್ಕೆರೊಲಿನಾದಲ್ಲಿರುವ ಮಲ್ಲಿಕಾ ರಾಜೀವ್ ಎಂಬುವರು ಅದನ್ನೋದಿ, “ನೀವು ಲೇಖನದಲ್ಲಿ ಒಂದುಕಡೆ ಸುಭಗತನ ಎಂಬ ಪದ ಬಳಿಸಿದ್ದೀರಲ್ಲಾ ಅದರ ಅರ್ಥವೇನು? ಏಕೆ ಕೇಳುತ್ತಿದ್ದೇನೆಂದರೆ ನನ್ನ ಮಗನ ಹೆಸರು ಸುಭಗ ಅಂತಲೇ ಇರುವುದು. ಹೆಸರಿನ ನಿಜಾರ್ಥ ನನಗೆ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸುತ್ತೀರಾ?” ಎಂದು ಪತ್ರ ಬರೆದು ಕೇಳಿದ್ದರು. ಸುಭಗ ಎನ್ನುವುದು ಗಣಪತಿಯ ಹೆಸರುಗಳಲ್ಲೊಂದು. ಸುಭಗ ಎಂಬ ಪದದ ವಾಚ್ಯಾರ್ಥವು ಜಾಣ ಅಥವಾ ಬುದ್ಧಿವಂತ (ಇಂಗ್ಲಿಷ್ನಲ್ಲಾದರೆ smart) ಎಂದು. ಇದನ್ನು ಅವರಿಗೆ ವಿವರಿಸಿದ್ದೆ. ಹೌದು ತನ್ನ ಮಗ ನಿಜಕ್ಕೂ ಜಾಣ ಎಂದು ಅವರು ಹೆಮ್ಮೆಪಟ್ಟುಕೊಂಡಿದ್ದರು. ಈ ಮೇಲಿನ ಮೂರು ಹೆಸರಾಯಣಗಳನ್ನು ಒಂದು ಸಾಮಾನ್ಯ ಅಂಶದಿಂದ ಪೋಣಿಸಿರುವುದು ಈಗಾಗಲೇ ನಿಮ್ಮ ಗಮನಕ್ಕೆ ಬಂದಿರಬಹುದು. ಇಲ್ಲವಾದರೂ ನಾನೇ ತಿಳಿಸುತ್ತೇನೆ- ಮೂರಕ್ಕೂ ಪೀಠಿಕೆಯಲ್ಲಿ ಸೀತಾಮಾತೆ ಬರುತ್ತಾಳೆ!

Saturday Jun 18, 2011
Four Colors For Map
Saturday Jun 18, 2011
Saturday Jun 18, 2011
ದಿನಾಂಕ 19 ಜೂನ್ 2011ರ ಸಂಚಿಕೆ...
ನಕ್ಷೆ ಬಿಡಿಸಲು ಸಾಕು ಬಣ್ಣ ಬರಿ ನಾಲ್ಕು?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಬರೆಯಲಿಕ್ಕೆ ಹೊರಟಿರುವುದು ನಕಾಶೆಗಳ ಕುರಿತಾದರೂ ಕಳೆದವಾರದ ‘ಕೌದಿ’ ಮತ್ತೆ ನೆನಪಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಬೇರೆಬೇರೆ ಬಣ್ಣದ ಬಟ್ಟೆತುಂಡುಗಳನ್ನು ಜೋಡಿಸಿ ಹೊಲಿದ ದುಪ್ಪಟ್ಟಿಯನ್ನು ಕೌದಿ ಎನ್ನುತ್ತಾರಷ್ಟೇ? ಹಾಗೆಯೇ ಪ್ರತ್ಯೇಕ ಭೂಭಾಗಗಳನ್ನು ವಿಭಿನ್ನ ಬಣ್ಣಗಳಲ್ಲಿ ತೋರಿಸುವ ನಕಾಶೆಯೂ ಒಂಥರದಲ್ಲಿ ಕೌದಿಯಂತೆ ಕಾಣಿಸುವುದಿಲ್ಲವೇ? ಅದರಲ್ಲೂ ಅಮೆರಿಕ ದೇಶದ ಭೂಪಟವನ್ನು ನೀವು ನೋಡಬೇಕು. ಇಲ್ಲಿ ಸುಮಾರಷ್ಟು ಸಂಸ್ಥಾನಗಳ ಗಡಿಗಳು ಸರಳರೇಖೆಯಲ್ಲಿವೆ. ಕೊಲರಾಡೊ, ವ್ಯೋಮಿಂಗ್, ಕ್ಯಾನ್ಸಸ್ ಮುಂತಾದ ಸಂಸ್ಥಾನಗಳಂತೂ ನೀಟಾಗಿ ಹಲ್ವಾ ಕತ್ತರಿಸಿದಂತೆ ಚತುರ್ಭುಜ ಆಕೃತಿಯಲ್ಲಿವೆ (ಅಲ್ಲಿನ ಎಲಿಮೆಂಟರಿ ಶಾಲೆಯ ಮಕ್ಕಳಿಗೆ ಜಿಯಾಗ್ರಫಿ ಪರೀಕ್ಷೆಯಲ್ಲಿ ‘ನಿಮ್ಮ ರಾಜ್ಯದ ನಕ್ಷೆ ಬರೆಯಿರಿ’ ಪ್ರಶ್ನೆ ತುಂಬ ಸುಲಭ. ಒಂದು ಆಯತ ಬಿಡಿಸಿ ಇದು ನಮ್ಮ ರಾಜ್ಯ ಎಂದರಾಯಿತು). ಹಾಗಾಗಿ ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಕೌದಿಯ ಬಟ್ಟೆತುಂಡುಗಳಿಗೆ ಹೋಲಿಸಿದ ನನ್ನ ಕಲ್ಪನೆ ನಿಮಗೆ ವಿಚಿತ್ರ ಅನಿಸಲಿಕ್ಕಿಲ್ಲ ಎಂದುಕೊಂಡಿದ್ದೇನೆ. ಅಮೆರಿಕ ಮತ್ತು ಕೌದಿಯನ್ನು ಬಿಟ್ಟು ಈಗ ಕಲರಿಂಗ್ ವಿಷಯಕ್ಕೆ ಬರೋಣ. ಏಕೆಂದರೆ ನಕಾಶೆಗೂ ಕಲರಿಂಗ್ಗೂ ಎಲ್ಲಿಲ್ಲದ ನಂಟು. ಪ್ರಪಂಚದ ನಕಾಶೆಯಲ್ಲಿ ದೇಶಗಳು, ದೇಶದ ನಕಾಶೆಯಲ್ಲಿ ರಾಜ್ಯಗಳು, ರಾಜ್ಯದ ನಕಾಶೆಯಲ್ಲಿ ಜಿಲ್ಲೆಗಳು, ಜಿಲ್ಲೆಯದರಲ್ಲಿ ತಾಲೂಕುಗಳು- ಬೇರೆಬೇರೆ ಬಣ್ಣದಲ್ಲಿರುವುದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಪ್ರಾಥಮಿಕ ಶಾಲೆಯ ಸಮಾಜಪರಿಚಯ ಪಾಠದ ಅಭ್ಯಾಸ ಚಟುವಟಿಕೆಯಾಗಿ ನಾವೇ ನಮ್ಮ ರಾಜ್ಯದ/ಜಿಲ್ಲೆಯ ನಕಾಶೆ ಬರೆದಿದ್ದೇವೆ. ಜಿಲ್ಲೆ/ತಾಲೂಕುಗಳನ್ನು ಬೇರೆಬೇರೆ ಬಣ್ಣಗಳಿಂದ ಗುರುತಿಸಿದ್ದೇವೆ. ಒಂದೇ ವ್ಯತ್ಯಾಸವೆಂದರೆ ಆಗ ಕರ್ನಾಟಕದಲ್ಲಿ ಹದಿನೆಂಟೋ ಇಪ್ಪತ್ತೋ ಜಿಲ್ಲೆಗಳಿದ್ದವು; ಈಗ ಒಟ್ಟು ಮೂವತ್ತು ಆಗಿವೆ. ನಕಾಶೆಯಲ್ಲಿ ಬಣ್ಣಗಳ ಪಾತ್ರ ಮಹತ್ವದ್ದು. ಯಾವ ಪ್ರದೇಶಕ್ಕೆ ಯಾವ ಬಣ್ಣ ಎನ್ನುವುದು ಮುಖ್ಯವಲ್ಲ; ಆದರೆ ಅಕ್ಕಪಕ್ಕದ ರಾಜ್ಯ/ಜಿಲ್ಲೆ/ತಾಲೂಕುಗಳು ಒಂದೇ ಬಣ್ಣದಲ್ಲಿದ್ದರೆ ಅವುಗಳ ಗಡಿ ಯಾವುದಂತ ಗೊತ್ತಾಗುವುದಾದರೂ ಹೇಗೆ? ಆದ್ದರಿಂದ, ನಕಾಶೆ ಪರಿಣಾಮಕಾರಿಯಾಗಿ ಇರಬೇಕಾದರೆ ಒಂದಕ್ಕಿಂತ ಹೆಚ್ಚು ಬಣ್ಣಗಳು ಅವಶ್ಯ. ಬರಿ ಒಂದು ದ್ವೀಪದ (ಅದರೊಳಗೆ ಯಾವುದೇ ಉಪವಿಭಾಗಗಳು ಇಲ್ಲ ಎಂದುಕೊಳ್ಳೋಣ) ನಕಾಶೆ ಬಿಡಿಸುವುದಿದ್ದರೂ ಎರಡು ಬಣ್ಣಗಳು ಬೇಕು. ಇಡೀ ದ್ವೀಪಕ್ಕೆ ಒಂದು ಬಣ್ಣ, ಸುತ್ತಲಿನ ಸಮುದ್ರಕ್ಕೆ ಇನ್ನೊಂದು ಬಣ್ಣ. ಒಂದುವೇಳೆ ಆ ದ್ವೀಪವು ರಾಜಕೀಯವಾಗಿ ಎರಡು ಭಿನ್ನ ಪ್ರದೇಶಗಳಾಗಿ ವಿಭಜಿಸಲ್ಪಟ್ಟಿದ್ದರೆ? ಉದಾಹರಣೆಗೆ ಯುರೋಪ್ ಖಂಡದ ಐರ್ಲ್ಯಾಂಡ್ ದ್ವೀಪರಾಷ್ಟ್ರದಲ್ಲಿ ಉತ್ತರ ಭಾಗವು ಗ್ರೇಟ್ ಬ್ರಿಟನ್ಗೆ ಸೇರಿದೆ; ದಕ್ಷಿಣದ ಭಾಗ ಸ್ವತಂತ್ರ ಐರ್ಲ್ಯಾಂಡ್ ದೇಶವಾಗಿದೆ. ಹಾಗಾಗಿ ಐರ್ಲ್ಯಾಂಡ್ ನಕಾಶೆಗೆ ಮೂರು ಬಣ್ಣಗಳು ಬೇಕು. ಇದೇ ತರ್ಕವನ್ನು ಮುಂದುವರಿಸುತ್ತ ಕರ್ನಾಟಕದ ನಕಾಶೆಗೆ ಬಣ್ಣ ತುಂಬಿಸುವುದಾದರೆ ಒಟ್ಟು 31 ಬಣ್ಣಗಳು ಬೇಕು (30 ಜಿಲ್ಲೆಗಳಿಗೆ ಒಂದೊಂದು ಮತ್ತು ಅರಬಿಸಮುದ್ರಕ್ಕೆ ನೀಲಿ ಬಣ್ಣ) ಎಂಬ ತೀರ್ಮಾನಕ್ಕೆ ಬರಬಹುದೇ? ಧಾರಾಳವಾಗಿ! ಆದರೆ ತುಸು ಯೋಚಿಸಿ. ಜಿಲ್ಲೆಗಳಿಗೆ ಬಣ್ಣ ಬಳಿಯುವುದು ಅವು ಒಂದರಿಂದೊಂದು ಪ್ರತ್ಯೇಕವಾಗಿ ಕಾಣಬೇಕೆಂದೇ ಹೊರತು ಇಡೀ ನಕಾಶೆಯು ಕಲರ್ಫುಲ್ ಆಗಿರಬೇಕು ಅಥವಾ ಹೆಚ್ಚು ಕಲರ್ಗಳಿದ್ದಷ್ಟೂ ಹೆಚ್ಚು ಬ್ಯೂಟಿಫುಲ್ ಅಂತೇನಲ್ಲ. ಅಸಲಿಗೆ ಬಣ್ಣಗಳ ಸಂಖ್ಯೆ ಹೆಚ್ಚಿದಂತೆಲ್ಲ ನಕಾಶೆ ತಯಾರಿಕೆಯ ವೆಚ್ಚವೂ ಹೆಚ್ಚುತ್ತದೆ. ನಕಾಶೆ ಮುದ್ರಕರು (Cartographers) ಆದಷ್ಟು ಕಡಿಮೆ ಸಂಖ್ಯೆಯ ಬಣ್ಣಗಳನ್ನು ಬಳಸಲಿಕ್ಕಾಗುತ್ತದೆಯೇ ಎಂದು ಲೆಕ್ಕಹಾಕುತ್ತಾರೆ. ಹಾಂ! ‘ಲೆಕ್ಕ ಹಾಕುವುದು’ ಎಂದಾಗ ಈ ಲೇಖನದ ತಿರುಳಿಗೇ ಬಂದಂತಾಯಿತು. ನಿಮಗೆ ಆಶ್ಚರ್ಯವಾಗಬಹುದು, ನಕಾಶೆಯಲ್ಲಿ ಬಣ್ಣ ತುಂಬುವುದರ ಹಿಂದೆ ಅದ್ಭುತವಾದ ಗಣಿತ ಇದೆ! ಯಾವುದೇ ನಕಾಶೆಯಾದರೂ ಸರಿ ಹೆಚ್ಚೆಂದರೆ ನಾಲ್ಕು ಬೇರೆಬೇರೆ ಬಣ್ಣಗಳು ಸಾಕು ಎನ್ನುತ್ತದೆ ಆ ಗಣಿತ. ಯಾವುದೇ ನಕಾಶೆ ಎಂದರೆ ಯಾವ ದೇಶ/ರಾಜ್ಯ/ಜಿಲ್ಲೆಯದಾದರೂ ಆಗುತ್ತದೆ. ಆದರೆ ನಾವು ನಮ್ಮ ಕರ್ನಾಟಕದ ನಕಾಶೆಯನ್ನೇ ಉದಾಹರಣೆಯಾಗಿಟ್ಟು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

Version: 20241125