Episodes
Saturday Jun 04, 2011
Digital Diet
Saturday Jun 04, 2011
Saturday Jun 04, 2011
ದಿನಾಂಕ 5 ಜೂನ್ 2011ರ ಸಂಚಿಕೆ...
ನಮಗೂ ಬೇಕಾದೀತು ‘ಡಿಜಿಟಲ್ ಡಯಟ್’
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಇನ್ನೊಬ್ಬರೊಂದಿಗೆ ಆತ್ಮೀಯ ಸಂವಾದದಲ್ಲಿರುವ ಹೊತ್ತಿಗೇ ನಿಮ್ಮ ಮೊಬೈಲ್ ರಿಂಗಣಿಸುವ, ಅಥವಾ ನೀವೇ ಏತಕ್ಕೋ ಮೊಬೈಲನ್ನು ಬಳಸಬೇಕಾಗುವ ಸಂದರ್ಭಗಳು ಆಗಾಗ ಬರುತ್ತಿವೆಯೇ? ನಿಮ್ಮ ಮಗು ಶಾಲೆಯ ಸಮಾಚಾರಗಳನ್ನು ಆಸಕ್ತಿಯಿಂದ ನಿಮ್ಮಲ್ಲಿ ಹೇಳುತ್ತಿರುವಾಗ ನೀವೇನೋ ಮೊಬೈಲ್ನಲ್ಲಿ ಇಮೇಲ್ಸ್ ಚೆಕ್ಮಾಡುತ್ತಿರುವುದು, ಎಸ್ಸೆಮ್ಮೆಸ್ ಕಳಿಸುತ್ತಿರುವುದು ಆಗುತ್ತಿದೆಯೇ? ನೀವು ಫೇಸ್ಬುಕ್ನಲ್ಲಿ ಎನೌನ್ಸ್ ಮಾಡುವವರೆಗೂ, ಟ್ವಿಟ್ಟರ್ನಲ್ಲಿ ಟ್ವೀಟುವವರೆಗೂ, ಯಾವ ಮಹಾನ್ ಘಟನೆಯೇ ಆಗಲಿ ಘಟಿಸಿದಂತೆಯೇ ಅಲ್ಲ ಅಂತನಿಸಿದ್ದಿದೆಯೇ? ಬ್ಲಾಕ್ಬೆರ್ರಿಯ ಕೆಂಪುದೀಪ ಮಿನುಗತೊಡಗುತ್ತಿದ್ದಂತೆ ನಿಮ್ಮ ಎದೆಬಡಿತ ಹೆಚ್ಚುತ್ತದೆಯೇ? ಗಂಡಹೆಂಡತಿ ಅಕ್ಕಪಕ್ಕ ಕುಳಿತಿದ್ದೂ ಇಬ್ಬರೂ ಪರಸ್ಪರ ಹಾಂಹೂಂ ಎನ್ನದೆ ಬೇರೆಬೇರೆ ಇ-ಯಂತ್ರಗಳಲ್ಲಿ ತಾಸುಗಟ್ಟಲೆ ತಲ್ಲೀನರಾಗಿರುತ್ತೀರಾ? - ಈಪೈಕಿ ಯಾವುದೇ ಒಂದೆರಡು ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೂ ನಿಮಗೆ ‘ಟೆಕ್ನಾಲಜಿಯ ಬೊಜ್ಜು’ ಬಂದಿದೆ ಮತ್ತು ನೀವು ‘ಡಿಜಿಟಲ್ ಡಯಟ್’ ಮಾಡಬೇಕಿದೆ ಎಂದು ಅರ್ಥ! ಹೀಗೆನ್ನುತ್ತಾನೆ ಡೇನಿಯಲ್ ಸೀಬರ್ಗ್. ಈತ ಅಮೆರಿಕದ ವಾರ್ತಾವಾಹಿನಿಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ವರದಿಗಾರ. ಕಳೆದ ವರ್ಷದವರೆಗೂ ಸ್ವತಃ ಒಬ್ಬ ಟೆಕ್ನೋ-ಎಡಿಕ್ಟ್ ಆಗಿದ್ದವನು. ಆಮೇಲೆ ಏಕಾಏಕಿ ಜ್ಞಾನೋದಯವಾಗಿ ತಾನೇ ಕಂಡುಕೊಂಡ ‘ಡಿಜಿಟಲ್ ಡಯಟ್’ ಎಂಬ ವ್ರತನೇಮವನ್ನು ಅನುಸರಿಸಿ, ಇದೀಗ ಅದೇ ಹೆಸರಿನ ಪುಸ್ತಕವನ್ನೂ ಬರೆದು ಪ್ರಕಟಿಸಿದವನು. ಈಗ ಈ ಪುಸ್ತಕ ಅಮೆರಿಕದಲ್ಲಿ ಸುದ್ದಿಯಲ್ಲಿದೆ. ವಾಷಿಂಗ್ಟನ್ಪೋಸ್ಟ್ ಪತ್ರಿಕೆಯಲ್ಲಿ ಪುಸ್ತಕದ ಕೆಲ ಭಾಗಗಳು ಮೊನ್ನೆ ಮುಖಪುಟ ಲೇಖನವಾಗಿ ಪ್ರಕಟವಾಗಿವೆ. “ಟೆಕ್ನಾಲಜಿಯಲ್ಲಿ ಎಲ್ಲಿಯವರೆಗೆ ಮುಳುಗಿ ಹೋಗಿದ್ದೆನೆಂದರೆ ವೈಯಕ್ತಿಕ ಜೀವನದಲ್ಲಿ ಅವಿಸ್ಮರಣೀಯವೆನಿಸಬೇಕಿದ್ದ ಚಿಕ್ಕದೊಡ್ಡ ಘಟನೆಗಳೆಲ್ಲ ನನ್ನ ಅರಿವಿಗೆ ಬರಲೇ ಇಲ್ಲ ಎನ್ನುವ ರೀತಿಯಲ್ಲಿ ಗತಿಸಿಹೋದವು. ನಾನು well-connected ಎಂದು ಬೀಗಿಕೊಳ್ಳುತ್ತಿರುವ ಹೊತ್ತಿಗೇ ನಿಜಕ್ಕೂ ನೋಡಿದರೆ most distracted and disconnected ಆಗಿಬಿಟ್ಟಿದ್ದೆ. ಸಕಾಲದಲ್ಲಿ ಎಚ್ಚೆತ್ತು ನನ್ನನ್ನು ಸುತ್ತುವರಿದಿದ್ದ ವಯರುಗಳ ಹುತ್ತವನ್ನು ಕೊಡವಿಕೊಂಡು ಮತ್ತೆ ಬದುಕನ್ನು ಗಳಿಸಿದೆ. ಈಗಲೂ ಟೆಕ್ನಾಲಜಿಯನ್ನು ಬಳಸುತ್ತೇನೆ, ಇಲ್ಲವೆಂದೇನಿಲ್ಲ. ಆದರೆ ಮುಂಚಿನಂತಲ್ಲ, ಹಿತವಾಗಿ ಮಿತವಾಗಿ...” ಎಂದು ಸಾಗುತ್ತದೆ ಡೇನಿಯಲ್ನ ಜ್ಞಾನೋದಯಗಾಥೆ. ಅಮೆರಿಕದಲ್ಲಿ ಲಕ್ಷಾಂತರ ಜನರು ಟೆಕ್ನಾಲಜಿಯ ದಾಸರಾಗಿದ್ದಾರೆ; ಬ್ಲಾಕ್ಬೆರ್ರಿ, ಐಫೋನು, ಐಪ್ಯಾಡು, ಲ್ಯಾಪ್ಟಾಪು ಅದೂಇದೂ ಗ್ಯಾಡ್ಜೆಟ್ಗಳಿಗೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ದೇಶಿಸುವ ಅಧಿಕಾರ ಒಪ್ಪಿಸಿದ್ದಾರೆ. ಹಾಗಂತ ಟೆಕ್ನಾಲಜಿ ವಿರುದ್ಧ ಸಮರ ಸಾರಬೇಕೆಂದಾಗಲೀ, ಎಲ್ಲರೂ ಈಕೂಡಲೇ ಗ್ಯಾಡ್ಜೆಟ್-ಸನ್ಯಾಸ ಸ್ವೀಕರಿಸಬೇಕೆಂದಾಗಲೀ ಡೇನಿಯಲ್ನ ಬೋಧನೆಯಲ್ಲ. ಗ್ಯಾಡ್ಜೆಟ್ಗಳೊಂದಿಗೆ ಒಂಥರದ ಶಾಂತಿ ಒಪ್ಪಂದ ಮಾಡಿಕೊಳ್ಳಬೇಕು. ನಾವು ಹೇಳಿದಂತೆ ಅವು ಕೇಳಬೇಕೇ ಹೊರತು ಅವುಗಳೇ ನಮ್ಮನ್ನು ಆಳಬಾರದು. ಅದಕ್ಕಾಗಿ Re-think, Re-boot, Re-connect, Re-vitalize ಎಂಬ ನಾಲ್ಕು ಹಂತಗಳ ಡಯಟ್ ಪ್ಲಾನ್ಅನ್ನು ಅನುಸರಿಸಬೇಕು ಎನ್ನುತ್ತಾನೆ ಡೇನಿಯಲ್. ದಿನಕ್ಕೆ ಸುಮಾರು ಎರಡು ಗಂಟೆ ಸಮಯವನ್ನು ಉದ್ಯೋಗ ಸಂಬಂಧವಲ್ಲದೆ ಹೀಗೇಸುಮ್ಮನೆ ಅಂತರ್ಜಾಲದಲ್ಲಿ ವಿಹರಿಸುತ್ತ, ಫೇಸ್ಬುಕ್ ಟ್ವಿಟ್ಟರ್ಗಳ ಮೂಲಕ ನಿಮ್ಮದೇ ಒಂದು ಭ್ರಾಮಕ ವ್ಯಕ್ತಿತ್ವವನ್ನು ಕೆತ್ತುತ್ತ್ತ ಕಳೆಯುತ್ತೀರಿ ಎಂದಿಟ್ಟುಕೊಳ್ಳಿ. ಅದೇನೂ ಟೈಮ್ಪಾಸ್ ಅಲ್ಲ, ಜ್ಞಾನಾರ್ಜನೆಯ ಜತೆಗೆ ಒಂದಿಷ್ಟು ಮನರಂಜನೆ ಎಂದು ಸಬೂಬು ಬೇರೆ ಕೊಡುತ್ತೀರಿ. ಆದರೆ ದಿನಕ್ಕೆ ಎರಡು ಗಂಟೆಗಳಂತೆ ಇಡೀವರ್ಷದ ಲೆಕ್ಕ ಹಾಕಿದರೆ ಭರ್ತಿ ಒಂದು ತಿಂಗಳು ಇಂಟರ್ನೆಟ್ ಓತ್ಲಾ ಅಂತಾಯಿತು! ಕೊನೆಗೂ ಏನು ಉಪಯೋಗಕ್ಕೆ ಬಂತು? ಆ ಸಮಯವನ್ನು ಯಾವುದಾದರೂ ರಚನಾತ್ಮಕ ಚಟುವಟಿಕೆಗೆ ಬಳಸಬಹುದಿತ್ತಲ್ವಾ? ಅದೇ, ಡೇನಿಯಲ್ ಹೇಳುವ ‘ರೀ-ಥಿಂಕ್’ ಹಂತ. ಎರಡನೆಯದು ‘ರೀ-ಬೂಟ್’, ಅಂದರೆ ಒಂದೊಮ್ಮೆ ಎಲ್ಲ ಗ್ಯಾಡ್ಜೆಟ್ಗಳಿಗೂ ತಾತ್ಕಾಲಿಕ ವಿರಾಮ ಘೋಷಣೆ. ಐಪ್ಯಾಡು, ಕ್ಯಾಮರಾ, ಲ್ಯಾಪ್ಟಾಪು ಇತ್ಯಾದಿ- ಯಾವುದಕ್ಕೆ ಚಾರ್ಜರ್ ಬೇಕೋ ಅಂಥ ಎಲ್ಲ ಉಪಕರಣಗಳನ್ನೂ- ಒಂದು ಪೆಟ್ಟಿಗೆಯೊಳಗಿಟ್ಟು ಬೀಗಹಾಕಿ. ಫೇಸ್ಬುಕ್ ಮತ್ತಿತರ ವೆಬ್ ಖಾತೆಗಳ ಪಾಸ್ವರ್ಡ್ ಬದಲಾಯಿಸಿ ಬಿಡುವಂತೆ ಯಾರಾದರೂ ಆಪ್ತರಿಗೆ ಹೇಳಿ. ಫೋನ್ ಕರೆ ಮಾಡಿದವರಿಗೆ ‘ಬಳಕೆದಾರರು ಲಭ್ಯರಿಲ್ಲ’ ಎಂಬ ಮೆಸೇಜು ಬರುವಂತೆ ಸೆಟ್ ಮಾಡಿ. ಎಸ್ಸೆಮ್ಮೆಸ್ ವಿನಿಮಯ ನಿಲ್ಲಿಸಿಬಿಡಿ. ದಿನಕ್ಕೆ ಒಂದುಸರ್ತಿ ಮಾತ್ರ ಇಮೇಲ್ ಚೆಕ್ಮಾಡಿ. ಹೀಗೆ ಒಂದೆರಡು ದಿನ ಕಟ್ಟುನಿಟ್ಟಿನ ಟೆಕ್ನೊ-ಉಪವಾಸ ಮಾಡಿನೋಡಿ. ಗ್ಯಾಡ್ಜೆಟ್ಗಳೊಂದಿಗೆ ವ್ಯಯಿಸುತ್ತಿದ್ದ ಸಮಯವನ್ನು ಮಗುವಿಗೆ ಕಥೆಪುಸ್ತಕ ಓದಿ ಹೇಳುವುದಕ್ಕೋ, ಮನೆಯ ಒಳಹೊರ ಸ್ವಚ್ಛ ಮಾಡಲಿಕ್ಕೋ, ಅಟ್ಟದಲ್ಲಿ ಧೂಳು ತಿನ್ನುತ್ತಿರುವ ಗಿಟಾರ್ಅನ್ನು ಹೊರತೆಗೆದು ಒಂದಿಷ್ಟು ಸಂಗೀತ ಅಭ್ಯಸಿಸುವುದಕ್ಕೋ ಉಪಯೋಗಿಸಿ ನೋಡಿ. ಈಗ ಮೂರನೇ ಹಂತದಲ್ಲಿ ನಿಧಾನವಾಗಿ ನಿಮ್ಮ ಗ್ಯಾಡ್ಜೆಟ್ಗಳನ್ನು ಬಳಕೆಗೆ ಹಚ್ಚಿ. ಆದರೆ ಯಾವುದು ಎಷ್ಟು ಅಗತ್ಯವೋ ಅಷ್ಟೇ ಸಾಕು. ರಾತ್ರಿಹೊತ್ತು ಅವನ್ನೆಲ್ಲ ಲಿವಿಂಗ್ರೂಮ್ನಲ್ಲೋ ಅಡುಗೆಮನೆಯಲ್ಲೋ ಚಾರ್ಜ್ ಮಾಡಲಿಕ್ಕಿಡಿ, ಬೆಡ್ರೂಮ್ಗೆ ತರಬೇಡಿ. ಐಫೋನ್/ಬ್ಲಾಕ್ಬೆರ್ರಿಯಲ್ಲಿ ಅಲಾರಂ ಸಹ ಇದೆಯೆಂದು ಅದನ್ನೇ ಬಳಸಬೇಡಿ. ಬೆಳಿಗ್ಗೆ ಅಲಾರಂ ಮಾಡಿಯಷ್ಟೇ ಅವು ಸುಮ್ಮನಿರುವುದಿಲ್ಲ, ನಿಮ್ಮ ಗಮನವನ್ನೂ ಬೇಡುತ್ತವೆ. ಅದಕ್ಕಿಂತ ಒಂದು ಅಲಾರಂ ಗಡಿಯಾರವನ್ನೇ ಉಪಯೋಗಿಸಿ. ದಿನಕ್ಕೆ ಇಂತಿಷ್ಟು ಹೊತ್ತು ಮಾತ್ರ ಆನ್ಲೈನ್ ಇರಬಹುದೆಂದು ನಿಯಮ ಮಾಡಿ ಪಾಲಿಸಿ. ಮನೆಯೊಳಗೂ ಮನದೊಳಗೂ ಕಸ (ಜಂಕ್) ತುಂಬಿಸಿಕೊಳ್ಳಬೇಡಿ. ಕೊನೆಯದಾಗಿ ‘ರೀ-ವೈಟಲೈಜ್’ ಹಂತದಲ್ಲಿ ಟೆಕ್ನಾಲಜಿ ಪ್ರಪಂಚ ಮತ್ತು ಇಷ್ಟಮಿತ್ರ ಬಂಧುಬಾಂಧವರ ಒಡನಾಟದ ಪ್ರಪಂಚ - ಎರಡರ ನಡುವೆ ಆರೋಗ್ಯಕರ ಬ್ಯಾಲೆನ್ಸ್ ತಂದುಕೊಳ್ಳಿ. ಟಿಪಿಕಲ್ ಸೆಲ್ಫ್-ಹೆಲ್ಪ್ ಪುಸ್ತಕಗಳ ಮಾದರಿಯಲ್ಲೇ ಇದೆ ಡೇನಿಯಲ್ನ ಪುಸ್ತಕವೂ. ‘ಮೂರು ವಾರಗಳಲ್ಲಿ ಮೂವತ್ತು ಪೌಂಡ್ ತೂಕ ಇಳಿಸಿ’, ‘ಹದಿನೈದು ದಿನಗಳಲ್ಲಿ ಹಿಂದೀ ಕಲಿಯಿರಿ’ ಅಂತೆಲ್ಲ ಇರುತ್ತವಲ್ಲ ಅದೇ ಧಾಟಿ. ಒಂಚೂರು ಉಪದೇಶ, ಒಂದಿಷ್ಟು ಆಪ್ತಸಲಹೆ, ಮತ್ತೆ ಸ್ವಲ್ಪ ಆತ್ಮಾವಲೋಕನಕ್ಕೆ ಅವಕಾಶ. ಕೆಲವು ಭಾಗಗಳಂತೂ ನಮ್ಮ ಜೀವನಶೈಲಿಯನ್ನು ನೋಡಿಯೇ ಬರೆದದ್ದಿರಬಹುದೇ ಅಂತನ್ನಿಸುವಷ್ಟು ನಾಟುತ್ತವೆ, ಮನಸ್ಸಾಕ್ಷಿಯನ್ನು ತಟ್ಟುತ್ತವೆ. ಹೌದು, ನಾವೆಲ್ಲರೂ ಸ್ವಲ್ಪ ಮಟ್ಟಿಗಾದರೂ ಟೆಕ್ನಾಲಜಿಗೆ ನಮ್ಮತನವನ್ನು ಒಪ್ಪಿಸಿದವರೇ. ಗೊತ್ತಿದ್ದೋ ಗೊತ್ತಿಲ್ಲದೆಯೋ ಗ್ಯಾಡ್ಜೆಟ್ಗಳಿಗೆ ಮಾರುಹೋದವರೇ. ಈಗಲೇ ಎಚ್ಚರ ವಹಿಸದಿದ್ದರೆ ಮುಂದೊಮ್ಮೆ ನಮಗೂ ಡಿಜಿಟಲ್ ಡಯಟ್ನ ಅಗತ್ಯ ಬೀಳಬಹುದು. ಆ ನಿಟ್ಟಿನಲ್ಲಿ ಡೇನಿಯಲ್ ಸೀಬರ್ಗ್ನ ವಿಚಾರಧಾರೆ ಅರ್ಥವುಳ್ಳದ್ದೇ ಆಗಿದೆ. ಜಾಗೃತಿ ಮೂಡಿಸುವಂಥದೇ ಆಗಿದೆ. ಹಾಗೆನ್ನುವಾಗಲೇ, ಸ್ನೇಹಿತ ಮಲ್ಲಿ ಸಣ್ಣಪ್ಪನವರ್ ರಚಿಸಿದ ‘ಫೇಸ್ಬುಕ್ ಇಷ್ಟೇನೇ...’ ಅಣಕುಹಾಡು ನೆನಪಾಗುತ್ತಿದೆ. ತಮಾಷೆಯೆಂದರೆ ಇದರ ಸಾಲುಗಳೂ ಹಾಗೆಯೇ, ತಮಾಷೆಯಾಗೇ ಕಂಡರೂ ಹೌದಲ್ವಾ ಫೇಸ್ಬುಕ್ ಕ್ರೇಜ್ ಹತ್ತಿದರೆ ನಿಜಕ್ಕೂ ಅದೇರೀತಿ ಆಗ್ತದಲ್ವಾ ಎಂದೆನಿಸುತ್ತದೆ. ಫೇಸ್ಬುಕ್ ಖಾತೆ ಇದ್ದವರು ಓದಲೇಬೇಕಾದ ಕವಿತೆ- ಹಲ್ಲು ತಿಕ್ಕದೇ ಮುಖಾನು ತೊಳಿದೇ ಬೆಳಿಗ್ಗೆ ಎದ್ದು ಲಾಗಿನ್ ಆಗಿ ಎಲ್ಲರ ಸ್ಟೇಟಸ್ ಅಪ್ಡೇಟ್ ಮಾಡ್ಕೋ ಫೇಸ್ಬುಕ್ ಇಷ್ಟೇನೇ! ಲೈಕ್ ಬಟನ್ ಒತ್ತು ಸ್ವಾಮಿ ಡಿಸ್ಲೈಕ್ ಬಟನ್ ಇಲ್ಲ ಸ್ವಾಮಿ ಬೇಡಾದವ್ರನ್ ಹೈಡ್ ಮಾಡ್ಕೊ ಫೇಸ್ಬುಕ್ ಇಷ್ಟೇನೇ! ಮಕ್ಕಳ ಜತೆಗೆ ಆಡೋದ್ ಬಿಟ್ಟು ಹೆಂಡ್ತಿ ಮುಖವ ನೋಡೋದ್ ಬಿಟ್ಟು ಸಿಕ್ಕವ್ರ್ ವಿಡಿಯೋ ನೋಡ್ತಾ ಕುತ್ಕೋ ಫೇಸ್ಬುಕ್ ಇಷ್ಟೇನೇ! ಯಾರ್ಯಾರ ಮನೇಲಿ ಏನೇನ್ ಅಡುಗೆ ಯಾರ್ಯಾರ ಮೈಮೇಲ್ ಏನೇನ್ ಉಡುಗೆ ಬರೀ ಕಾಂಪ್ಲಿಮೆಂಟ್ಸು ಇಲ್ಲಿ ಕೊಡುಗೆ ಫೇಸ್ಬುಕ್ ಇಷ್ಟೇನೇ! ಬೇಡಾದವ್ರಿಗು ಕಾಮೆಂಟ್ ಹಾಕು ಬೇಕಾದವ್ರಿಗು ಕಾಮೆಂಟ್ ಹಾಕು ಕಾಮೆಂಟ್ ಹಾಕ್ತಾ ಖುಷಿಯಾಗಿರು ಫೇಸ್ಬುಕ್ ಇಷ್ಟೇನೇ... ಟಣ್ಟಣಾಟಣ್ಟಣ್! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 21, 2011
Curry Leaves Of Barcelona
Saturday May 21, 2011
Saturday May 21, 2011
ದಿನಾಂಕ 22 ಮೇ 2011ರ ಸಂಚಿಕೆ...
ಬಾರ್ಸಿಲೊನಾದಲ್ಲಿ ಕರಿಬೇವು ಸಿಕ್ಕ ಸಂತಸ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಸ್ಪೆಷಲ್ ಏನೂ ಇಲ್ಲಾ ಸರ್, ಬಾರ್ಸಿಲೊನಾದಲ್ಲಿ ಒಳ್ಳೆಯ ಭಾರತೀಯ ರೆಸ್ಟೋರೆಂಟ್ ಇಲ್ಲ, ಹಾಗಾಗಿ ಮನೆ ಊಟವೇ ಇಂದು ಕೂಡ. ಶಾಕಾಹಾರಿಗಳಿಗೆ ಆಯ್ಕೆ ಮಾಡಲು ಇಲ್ಲಿ ಏನೂ ಇಲ್ಲ. ಕರಿಬೇವು ಸಿಕ್ಕ ದಿನವೇ ಸ್ಪೆಷಲ್!” - ಎಂದು ಬರೆದಿದ್ದರು ನನ್ನೊಬ್ಬ ಫೇಸ್ಬುಕ್ ಸ್ನೇಹಿತ. ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ನನ್ನ ಸೌಹಾರ್ದ ಪ್ರಶ್ನೆಗೆ ಉತ್ತರವಾಗಿ. ಅವರ ಹೆಸರು ರಂಗಸ್ವಾಮಿ ಮೂಕನಹಳ್ಳಿ. ಮೂಲತಃ ಬೆಂಗಳೂರಿನವರು, ಈಗ ಬಾರ್ಸಿಲೊನಾದಲ್ಲಿದ್ದಾರೆ. ಫೇಸ್ಬುಕ್ ಮೂಲಕವಷ್ಟೇ ನನಗೆ ಪರಿಚಯ. ಇನ್ನೂ ಫೇಸ್ ನೋಡಿಲ್ಲ, ಮಾತನಾಡಿಲ್ಲ. ಬಹುಶಃ ಸಾಫ್ಟ್ವೇರಿಗರೇ ಇರಬಹುದು ಎಂದುಕೊಳ್ಳುತ್ತೇನೆ. ಕನ್ನಡಾಭಿಮಾನಿ ಎಂದು ಅವರ ಪ್ರೊಫೈಲ್ನಿಂದ ಗೊತ್ತಾಗುತ್ತದೆ. ಜತೆಯಲ್ಲೇ ಸ್ಪಾನಿಷ್, ಪೋರ್ಚುಗೀಸ್ ಮತ್ತು ಇಟಾಲಿಯನ್ ಭಾಷೆಗಳನ್ನು ಕಲಿತಿದ್ದಾರೆಂದೂ ತಿಳಿಯುತ್ತದೆ. ಅಂದರೆ ಕೆಲವರ್ಷಗಳಿಂದ ಅಲ್ಲಿ ವಾಸವಾಗಿದ್ದಾರೆ ಎನ್ನಲಡ್ಡಿಯಿಲ್ಲ. ಫೇಸ್ಬುಕ್ ಕ್ಯಾಲೆಂಡರ್ ಯಾರದೆಲ್ಲ ಬರ್ತ್ಡೇ ಎಂದು ಸೂಚಿಸುತ್ತದೆಯೋ ಅವರಿಗೆಲ್ಲ ಆಯಾಯ ದಿನದಂದೇ ಪುಟ್ಟದೊಂದು ಶುಭಾಶಯ ಸಂದೇಶ ಕಳಿಸುವುದು ನನ್ನ ಕ್ರಮ. ಅದು ತೀರಾ ಔಪಚಾರಿಕವಾಗದಂತೆ ‘ಬರ್ತ್ಡೇಗೆ ಏನು ಸ್ಪೆಷಲ್?’ ಎಂಬ ಪ್ರಶ್ನೆಯನ್ನೂ ಒಂದು ನಗುಮುಖ ಚಿತ್ರವನ್ನೂ ಕೊನೆಯಲ್ಲಿ ಸೇರಿಸುತ್ತೇನೆ. ಅದರಿಂದ ಪ್ರಯೋಜನವಿದೆ- ನನ್ನ ಗ್ರೀಟಿಂಗ್ ಆದರೋ ಎಲ್ಲ ದಿನಗಳಲ್ಲೂ ಎಲ್ಲರಿಗೂ ಒಂದೇ ಮಾದರಿ; ಆದರೆ ಬರುವ ಜವಾಬುಗಳು ಮಾತ್ರ ಸಖತ್ ವೆರೈಟಿಯವು. ವಿಭಿನ್ನ ಅಭಿರುಚಿ, ಖಯಾಲಿ ಮತ್ತು ಜೀವನಶೈಲಿಗಳನ್ನು ಪ್ರತಿಫಲಿಸುವಂಥವು. ರಂಗಸ್ವಾಮಿಯವರದು ಒಂದು ಒಳ್ಳೆಯ ಉದಾಹರಣೆ. ಅವರು ಬರೆದದ್ದರಲ್ಲಿ ಮೊದಲ ಭಾಗ ಅಂಥ ವಿಶೇಷವೇನಲ್ಲ. ಬಾರ್ಸಿಲೊನಾ ಅಷ್ಟೇಅಲ್ಲ ಯುರೋಪ್ನಲ್ಲಿ ಸುಮಾರಷ್ಟು ನಗರಗಳು ಸಸ್ಯಾಹಾರಿಗಳಿಗೆ ಹೇಳಿದಂಥವಲ್ಲ; ಅಲ್ಲಿ ಭಾರತೀಯ ರೆಸ್ಟೋರೆಂಟ್ಗಳಾಗಲೀ ದಿನಸಿ ಅಂಗಡಿಗಳಾಗಲೀ ಇರುವುದಿಲ್ಲವೆಂಬ ವಿಚಾರ ಗೊತ್ತಿದ್ದದ್ದೇ. ಆದರೆ ‘ಕರಿಬೇವು ಸಿಕ್ಕದಿನ ಭರ್ಜರಿ ಸಡಗರ’ ಎಂದಿದ್ದಾರಲ್ಲ ಆ ವಾಕ್ಯವನ್ನು ನಾವು- ತಾಯ್ನಾಡಿನಿಂದ ದೂರವಿರುವವರು- ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲೆವು. ನಮ್ಮ ಜೀವನಕ್ಕೆ ರಿಲೇಟ್ ಮಾಡಿಕೊಳ್ಳಬಲ್ಲೆವು. ಆದರೂ ನನ್ನಂತೆ ಹತ್ತುವರ್ಷಗಳ ಹಿಂದೆಯಷ್ಟೇ ಅಮೆರಿಕಕ್ಕೆ ಬಂದವರ, ವಾಷಿಂಗ್ಟನ್ನಂಥ ದೊಡ್ಡ ನಗರಗಳಲ್ಲಿರುವವರ ಸ್ಥಿತಿ ಎಷ್ಟೋ ವಾಸಿ. ನಮಗೆ ಭಾರತದಿಂದ ದೂರವಿದ್ದೇವೆ ಅನಿಸುವುದಿಲ್ಲ. ಎಪ್ಪತ್ತರ ದಶಕದಲ್ಲಿ ಇಲ್ಲಿಗೆ ಬಂದವರ ಅನುಭವಗಳೇ ಬೇರೆ. ಆಗ ಯಾವುದಾದರೂ ಚೈನಿಸ್/ಕೋರಿಯನ್ ತರಕಾರಿ ಅಂಗಡಿಯಲ್ಲಿ ಅಪರೂಪಕ್ಕೆ ಕೊತ್ತಂಬರಿಸೊಪ್ಪು ಸಿಕ್ಕಿದರೆ ನಿಧಿ ಸಿಕ್ಕಿದಂತೆಯೇ. ಹಿರಿಯಮಿತ್ರ ಮೈಸೂರು ನಟರಾಜ್ ನೆನಪಿಸಿಕೊಳ್ಳುತ್ತಿರುತ್ತಾರೆ, ಕೊತ್ತಂಬರಿಸೊಪ್ಪು ಬಂದಿದೆ ಎಂದು ಪರಸ್ಪರ ದೂರವಾಣಿ ಕರೆಗಳನ್ನು ಮಾಡಿಕೊಂಡು ಅಂಗಡಿಗೆ ಮುತ್ತಿಗೆಯಿಡುತ್ತಿದ್ದರಂತೆ. ತಾಜಾ ಇರುವಾಗ ತಂದು ಸಾರು ಮಾಡಿ ಮನೆಯಲ್ಲಿ ಘಮಘಮ ತುಂಬಿ ಸಂಭ್ರಮಿಸುತ್ತಿದ್ದರಂತೆ. ವಿದೇಶದಲ್ಲಿ ಅಪರೂಪವಾಗಿ ಅನಿರೀಕ್ಷಿತವಾಗಿ ನಮ್ಮ ನೆಲದ ವಸ್ತುವೇನಾದರೂ ಕಣ್ಣಿಗೆಬಿದ್ದಾಗಿನ ಸಂಭ್ರಮವಿದೆಯಲ್ಲ ಅದು ಮಾತಿನಲ್ಲಿ/ಅಕ್ಷರಗಳಲ್ಲಿ ವರ್ಣಿಸಲಾಗದ್ದು. ವಿದೇಶವೆಂದರೆ ವಿದೇಶವೇ ಆಗಬೇಕಂತೇನೂ ಇಲ್ಲ, ಆ ವಸ್ತು ಅಡುಗೆಪದಾರ್ಥವೇ ಆಗಿರಬೇಕಂತನೂ ಇಲ್ಲ. ನನ್ನದೇ ಒಂದು ಅನುಭವವನ್ನು ಹೇಳುತ್ತೇನೆ. ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ ನಾನು ದಿಲ್ಲಿಯಲ್ಲಿ ಉದ್ಯೋಗಕ್ಕೆ ಸೇರಿದ್ದೆ. ಅದೇ ಮೊದಲಬಾರಿಗೆ ಕರ್ನಾಟಕದಿಂದ ಹೊರಗಿದ್ದದ್ದು. ದಿಲ್ಲಿಯಲ್ಲಿ ಆರೇಳು ತಿಂಗಳ ತರಬೇತಿಯ ನಂತರ ಹೈದರಾಬಾದ್ನಲ್ಲಿ ನನ್ನ ಪೋಸ್ಟಿಂಗ್. ದಿಲ್ಲಿಯಿಂದ ನೇರವಾಗಿ ಹೈದರಾಬಾದ್ಗೆ ನನ್ನ ಬಿಡಾರ ವರ್ಗಾಯಿಸಿದ್ದೆ. ರಜೆಯಲ್ಲೂ ಊರಿಗೆ ಹೋಗಿರಲಿಲ್ಲ, ಕರ್ನಾಟಕದೊಳಗೆ ಪ್ರವೇಶಿಸಿರಲಿಲ್ಲ. ಹೀಗಿರಲು ಒಂದುದಿನ ಹೈದರಾಬಾದ್ನಲ್ಲಿ ಸಿಟಿಬಸ್ನಲ್ಲಿ ಹೋಗುತ್ತಿದ್ದಾಗ ಅಲ್ಲಿನ ಮುಖ್ಯ ಬಸ್ನಿಲ್ದಾಣದಲ್ಲಿ ಒಂದೆರಡು ಕೆಎಸ್ಸಾರ್ಟಿಸಿ ಬಸ್ಸುಗಳು ಕಾಣಸಿಕ್ಕವು. ಹೈದರಾಬಾದ್ನಿಂದ ಗುಲ್ಬರ್ಗ ರಾಯಚೂರು ಮುಂತಾದೆಡೆಗಳಿಗೆ ಹೋಗುವ ಕೆಂಪುಬಸ್ಸುಗಳು. ಅವುಗಳನ್ನು ಕಂಡಾಗ ಆ ಕ್ಷಣದಲ್ಲಾಗಿದ್ದ ಒಂದು ಹಿತಕರ ರೋಮಾಂಚನ ನನಗೆ ಈಗಲೂ ನೆನಪಿದೆ. ಇಂಗ್ಲೆಂಡ್ನಲ್ಲಿರುವ ನನ್ನ ಅಣ್ಣ ಕಳೆದವರ್ಷ ತನಗಾದ ಅಂತಹದೇ ಒಂದು ರೋಮಾಂಚಕ ಕ್ಷಣವನ್ನು ಬಣ್ಣಿಸಿದ್ದರು. ಅದಕ್ಕೆ ಕಾರಣವಾದ ವಸ್ತುವಿನ ಚಿತ್ರವನ್ನು ನನಗೆ ಇಮೇಲ್ನಲ್ಲಿ ಕಳಿಸಿದ್ದರು. ಅವರೆಲ್ಲ ಕುಟುಂಬಸಮೇತ ಫಿನ್ಲ್ಯಾಂಡ್ ದೇಶಕ್ಕೆ ಪ್ರವಾಸ ಹೋಗಿದ್ದರಂತೆ. ಅಲ್ಲಿ ಶಾಪಿಂಗ್ ಮಾಡುತ್ತಿದ್ದಾಗ ಒಂದು ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ‘ಲ್ಯಾಂಟರ್ನ್’ ದೀಪಗಳನ್ನು ಕಂಡರಂತೆ. ಥೇಟ್ ನಮ್ಮೂರಿನಲ್ಲಿ ಉಪಯೋಗಿಸುವ ಲಾಟೀನಿನದೇ ಆಕಾರ, ಗಾತ್ರ, ರಚನೆ. ಅದೇಥರ ಸರಿಗೆಗಳ ಬಂಧದೊಳಗೆ ಗಾಜಿನ ಬುರುಡೆ, ಸೀಮೆಎಣ್ಣೆ ಟ್ಯಾಂಕ್, ಬತ್ತಿಯ ಜ್ವಾಲೆ ಚಿಕ್ಕದುದೊಡ್ಡದು ಮಾಡಲು ದುಂಡಗಿನ ಬಿರಡೆ... ಎಲ್ಲವೂ ತದ್ರೂಪಿ ನಮ್ಮೂರಿನ ಲಾಟೀನು. ಜರ್ಮನಿಯಲ್ಲಿ ತಯಾರಾದ ಅದನ್ನು 20 ಯೂರೋ (ಸುಮಾರು 1250 ರೂ.) ಕೊಟ್ಟು ಖರೀದಿಸಿ ನೆನಪಿಗೋಸ್ಕರ ತಂದಿಟ್ಟುಕೊಂಡಿದ್ದಾರಂತೆ. ಶಿಕಾಗೊದಲ್ಲಿರುವ ನನ್ನ ಸ್ನೇಹಿತ ಶ್ರೀನಿವಾಸ ರಾವ್ ಒಮ್ಮೆ ನನಗೆ ಇಮೇಲ್ನಲ್ಲಿ ಅಶೋಕ ವೃಕ್ಷದ ಫೋಟೊ ಕಳಿಸಿದ್ದರು. ಜತೆಯಲ್ಲಿ ಒಂದು ಚಿಕ್ಕ ಟಿಪ್ಪಣಿ- “ಶ್ರೀರಾಮ ನನ್ನ ಆರಾಧ್ಯದೈವ. ದಿನದ 24 ಘಂಟೆಯಲ್ಲಿ ಒಂದೆರಡು ನಿಮಿಷವಾದರೂ ನನ್ನ ರಾಮನ ಬಗ್ಗೆ ಏನಾದರೂ ಮೆಲುಕು ಹಾಕುತ್ತಿರುತ್ತೇನೆ. ಮೊನ್ನೆ ಇಲ್ಲಿ ಶಿಕಾಗೋದ ಬೊಟಾನಿಕಲ್ ಗಾರ್ಡನ್ಸ್ನಲ್ಲಿ ‘ಅಶೋಕ’ ವೃಕ್ಷವನ್ನು ನೋಡಿದಾಗ, ಅದರ ಕೆಳಗಿದ್ದ ಬೋರ್ಡ್ನಲ್ಲಿ ಮುದ್ದಾದ ಅಕ್ಷರಗಳಲ್ಲಿ Ashoka Tree ಎಂದು ಬರೆದದ್ದನ್ನು ಓದಿದಾಗ ಅರೆಕ್ಷಣ ನನ್ನನ್ನೇ ಮರೆತಿದ್ದೆ. ಚಿಕ್ಕ ಮರವಾದರೂ ಅದರ ಬುಡದಲ್ಲಿ ನನ್ನ ಸೀತಾಮಾತೆ ಒಮ್ಮೆ ಮಿಂಚಿಹೋದಳು. ಇಂದಿಗೂ ಆ ಕ್ಷಣವನ್ನು ನೆನೆಸಿಕೊಂಡರೆ ನನ್ನ ಮೈನವಿರೇಳುತ್ತದೆ!” ಆಸ್ಟ್ರೇಲಿಯಾದಲ್ಲಿರುವ ಅನುರಾಧಾ ಶಿವರಾಂ (ಅಂಕಣದ ಓದುಗರಾಗಿ ನನಗೆ ಇ-ಪರಿಚಿತರು) ಸಹ ಇದೇರೀತಿಯ ಒಂದು ಅನುಭವವನ್ನು ಇಮೇಲ್ನಲ್ಲಿ ಬಣ್ಣಿಸಿದ್ದರು. “ಸಿಡ್ನಿಯಲ್ಲಿ ನಮ್ಮನೆ ಹತ್ತಿರ ವಾಕ್ ಹೋಗ್ತಿದ್ದಾಗ ಇದ್ದಕ್ಕಿದ್ದಂತೆ ಕೆಂಡಸಂಪಿಗೆ ಹೂವಿನ ಸುವಾಸನೆ ಗಾಳಿಯಲ್ಲಿ ತೇಲಿಬಂತು. ಆ ಪರಿಮಳದೊಡನೆ, ಊರು, ಬಾಲ್ಯ, ಹಬ್ಬ, ನೆನಪುಗಳ ಮೆರವಣಿಗೆಯೇ ಬಂತು. ಮನಸ್ಸು ತಡೆಯದೆ ಆ ಗಿಡವಿದ್ದ ಮನೆಯ ಬಾಗಿಲು ತಟ್ಟಿ ಗಿಡವನ್ನು ಎಲ್ಲಿಂದ ತಂದಿರಿ ಎಂದು ಕೇಳಿದೆ. ಏಕೆಂದರೆ ಅದುವರೆಗೂ ನನಗೆ ಈದೇಶದಲ್ಲಿ ಸಂಪಿಗೆಹೂ ಕಂಡುಬಂದದ್ದೇ ಇಲ್ಲ. ಸಂಪಿಗೆಹೂ ನಮಗೆ ಭಾರತೀಯರಿಗೆ ಎಷ್ಟು ಪ್ರಿಯವಾದದ್ದು, ಪೂಜ್ಯವಾದದ್ದು ಎಂದು ಅದರ ಹಿಂದಿನ ಕಥೆಯನ್ನೂ ಅವರಿಗೆ ವಿವರಿಸಿದೆ. ಅಪರೂಪದ ನರ್ಸರಿಯ ವಿಳಾಸ ಕೊಟ್ಟ ಆ ಆಸ್ಟ್ರೇಲಿಯನ್ ದಂಪತಿ ನಮಗೆ ಇಂದಿಗೂ ಒಳ್ಳೆಯ ಸ್ನೇಹಿತರಾಗಿ ಉಳಿದಿದ್ದಾರೆ, ಸಂಪಿಗೆಯ ಸುವಾಸನೆಯಂತೆಯೇ!” ಕುವೆಂಪು ಅದನ್ನೇ ತಾನೆ ಹೇಳಿದ್ದು? ‘ತನ್ನ ನಾಡಿನ ನೀಲಿಯಬಾನು... ತನ್ನ ನಾಡಿನ ಹಸುರಿನಕಾನು... ತನ್ನ ನಾಡಿನ ಹೊಳೆ-ಕೆರೆ-ಬೆಟ್ಟ... ತನ್ನ ನಾಡಿನ ಪಶ್ಚಿಮಘಟ್ಟ... ದೂರದೇಶಕೆ ಹೋದ ಸಮಯದಿ ತನ್ನ ನಾಡನು ನೆನೆನೆನೆದುಬ್ಬದ.. ಮಾನವನಿದ್ದರೆ ಲೋಕದಲಿ ತಾವಿಲ್ಲವನಿಗೆ ನಾಕದಲಿ...’ ದಯವಿಟ್ಟು ತಪ್ಪುತಿಳಿಯಬೇಡಿ. ಇದು ಅನಿವಾಸಿಗಳ ಹುಚ್ಚು ಹಳವಂಡ ಎಂದುಕೊಳ್ಳಬೇಡಿ. ಬಾರ್ಸಿಲೊನಾದಲ್ಲಿ ಕರಿಬೇವಿನ ರುಚಿ, ಸಿಡ್ನಿಯಲ್ಲಿ ಸಂಪಿಗೆ ಪರಿಮಳ, ನ್ಯೂಯಾರ್ಕ್ನ ಕೆನಡಿ ಏರ್ಪೋರ್ಟ್ನಲ್ಲಿ ರಾಶಿರಾಶಿ ವಿಮಾನಗಳ ಮಧ್ಯೆ ಏರ್ಇಂಡಿಯಾ ವಿಮಾನ ನಿಂತ ದೃಶ್ಯ, ವಾಷಿಂಗ್ಟನ್ನ ಕೆನಡಿ ಆರ್ಟ್ಸೆಂಟರ್ನಲ್ಲಿ ರಘುದೀಕ್ಷಿತ್ ಬಣ್ಣದ ಲುಂಗಿಯುಟ್ಟು ಹಾಡಿದ ‘ಕೋಡಗನ ಕೋಳಿ ನುಂಗಿತ್ತಾ...’ ಹಾಡಿನ ಕೇಳ್ಮೆ, ಡಿಸ್ನಿಲ್ಯಾಂಡ್ನ ಗೈಡ್ ‘ದಿಸ್ ಈಸ್ ಎಲಿಫೆಂಟ್ ಹೆಡೆಡ್ ಗಾಡ್ ಆಫ್ ಇಂಡಿಯಾ’ ಎಂದು ತೋರಿಸುವ ಕಲ್ಲಿನ ಗಣೇಶನನ್ನು ತಡವಿದಾಗಿನ ಸ್ಪರ್ಶ- ಈರೀತಿ ಪಂಚೇಂದ್ರಿಯಗಳ ಪರಮಾನಂದಗಳು, ರೋಮಾಂಚಕಾರಿ ಹಿತಾನುಭವದ ನಿದರ್ಶನಗಳು ಇನ್ನೂ ತುಂಬಾ ಇವೆ. ಮುಂದಿನವಾರ ನೋಡೋಣ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday May 14, 2011
Capital Bikeshare
Saturday May 14, 2011
Saturday May 14, 2011
ದಿನಾಂಕ 15 ಮೇ 2011ರ ಸಂಚಿಕೆ...
ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಸೈಕಲ್ ಎಂದ ಕೂಡಲೇ ಬಹುಶಃ ನಮ್ಮಲ್ಲಿ ಎಷ್ಟೋ ಜನರಿಗೆ ಹಳೆಯ ನೆನಪುಗಳ ದೊಡ್ಡ ಮೂಟೆಯೇ ಬಿಚ್ಚಿಕೊಳ್ಳುತ್ತದೆ. ಸೈಕಲ್ ಸವಾರಿ ಮಾಡುತ್ತ ನೆನಪಿನ ಓಣಿಗಳಲ್ಲಿ ಸುತ್ತಿಬಂದ ಹಾಯಾದ ಅನುಭವವಾಗುತ್ತದೆ. ಆ ಮಟ್ಟಿಗೆ ಹೇಳುವುದಾದರೆ ‘ಬುಲಂದ್ ಭಾರತ್ಕೀ ಬುಲಂದ್ ತಸ್ವೀರ್...’ ಎಂದು ಬಜಾಜ್ ಸ್ಕೂಟರ್ ಎಷ್ಟೇ ಬೀಗಿಕೊಂಡರೂ ಅದಕ್ಕಿಂತ ನೂರುಪಟ್ಟು ಬುಲಂದ್ ತಸ್ವೀರ್ (ವಿಶಾಲ ಚಿತ್ರಹಾಸು) ಸೈಕಲ್ನದು; ಸೈಕಲ್ ಎಂಬ ಪದದ ಪ್ರಸ್ತಾಪವೊಂದೇ ಹೊತ್ತುತರಬಲ್ಲ ಹಚ್ಚಹಸಿರು ನೆನಪುಗಳದು. ಇರಲಿ, ಈ ಲೇಖನ ಅಂತಹ ಸೈಕಲ್ ನೆನಪುಗಳದಲ್ಲ. ಬರೆಯಬೇಕೆಂದುಕೊಂಡಿರುವುದು ಬಾಡಿಗೆ ಸೈಕಲ್ ಬಗ್ಗೆ. ಆದರೆ ಬಾಡಿಗೆ ಸೈಕಲ್ ಎಂದರೇನು? ಮರೆತೇ ಹೋಗಿರಬಹುದಾದ, ಅಥವಾ ಈಗಿನ ಯುವಪೀಳಿಗೆಗೆ ಗೊತ್ತೇ ಇಲ್ಲದ ವಿಚಾರವಾಗಿರುವ ಸಾಧ್ಯತೆಯೂ ಇದೆ! ಅದಕ್ಕಾಗಿ, ಬಾಡಿಗೆ ಸೈಕಲ್ ನೆನಪುಗಳನ್ನು ತಾಜಾಗೊಳಿಸುವ ಒಂದೆರಡು ಉಲ್ಲೇಖಗಳನ್ನು ಇಲ್ಲಿ ಸೇರಿಸುತ್ತಿದ್ದೇನೆ. ಅಲ್ಲಿಇಲ್ಲಿ ಬ್ಲಾಗುಗಳಲ್ಲಿ ಸಿಕ್ಕಿದ ಈ ರಸಘಟ್ಟಿಗಳನ್ನು ಒಮ್ಮೆ ಹಾಗೇಸುಮ್ಮನೆ ಓದಿಕೊಳ್ಳಿ. ಇವು ನಿಮ್ಮದೇ ಅನುಭವಗಳಂತೆ ಭಾಸವಾದರೂ ಆಶ್ಚರ್ಯವಿಲ್ಲ. “ಬಳ್ಳಾರಿಯಲ್ಲಿ ಆರನೇ ತರಗತಿಯಲ್ಲಿದ್ದಾಗಿನ (1962-63) ಕಥೆ. ಕೌಲ್ಬಜಾರಿನ ಗಿರಣಿಗೆ ಅಕ್ಕಿ-ಗೋಧಿ ಒಯ್ದು ಹಿಟ್ಟು ಮಾಡಿ ತರಬೇಕಾದರೆ ನನಗೆ ಅಮ್ಮ ಬಾಡಿಗೆ ಸೈಕಲ್ಲಿನ ಲಂಚ ಕೊಡಲೇಬೇಕಾಗುತ್ತಿತ್ತು. ಅಕ್ಕಿ-ಗೋಧಿ ಚೀಲ ಹ್ಯಾಂಡಲಿಗೆ ತೂಗುಹಾಕಿ, ಮನೆಯೆದುರಿನ ಕಲ್ಲ ಮಂಚದಿಂದ ಟೇಕ್ಆಫ್ ಆದವನಿಗೆ ಗಿರಣಿಯೆದುರಿನ ಮೋಟುಜಗಲಿಯೇ ಲ್ಯಾಂಡಿಂಗ್ ಸೈಟು. ಗ್ರಹಚಾರಗೆಟ್ಟು ಅದು ಇನ್ಯಾರದೋ ಸೈಕಲ್ಲಿಗೋ ಸೋಮಾರಿಗಳ ಬೈಠಕ್ಕಿನಲ್ಲೋ ಎಂಗೇಜ್ ಆಗಿದ್ದರೆ ನನ್ನದು ಕ್ರ್ಯಾಶ್ಲ್ಯಾಂಡು!” - ಮಂಗಳೂರಿನ ಅತ್ರಿ ಬುಕ್ಸೆಂಟರ್ ಮಾಲೀಕ ಜಿ.ಎನ್.ಅಶೋಕವರ್ಧನ ‘ಅತ್ರಿ ಬುಕ್ ಸೆಂಟರ್’ ಹೆಸರಿನದೇ ಒಂದು ಬ್ಲಾಗ್ ಬರೆಯುತ್ತಾರೆ. ಅದರಲ್ಲಿ ಬಾಡಿಗೆ ಸೈಕಲ್ ಸವಾರಿಯ ಸುಮಾರಷ್ಟು ನೆನಪುಗಳನ್ನು ದಾಖಲಿಸಿದ್ದಾರೆ. ಬೆಂಗಳೂರಿನ ಹರ್ಷ ಎಂಬುವರ ಬ್ಲಾಗಿನಲ್ಲೂ ಅಂತಹದೇ ನೆನಪು- “ಆರನೇ ಕ್ಲಾಸಿನಲ್ಲಿದ್ದಾಗ, ಆ ವಯಸ್ಸಿನ ಬಹಳಷ್ಟು ಹುಡುಗರಿಗೆ (ಆ ಕಾಲದಲ್ಲಿ) ಬರುವ ಬಯಕೆಯಂತೆ, ಸೈಕಲ್ ಹೊಡೆಯುವ ಹುಚ್ಚು. ಅದಕ್ಕಾಗಿ ನಾನು ಮನೆಯಲ್ಲಿ ಸಾಕಷ್ಟು ಅಳು-ಜಗಳದ ಅಪ್ಲಿಕೇಶನ್ನುಗಳನ್ನು ಹಾಕಿದ್ದೆ. ಯಾವುದೂ ವರ್ಕೌಟ್ ಆಗುವುದಿಲ್ಲ ಅನ್ನಿಸಿ ಅನಿರ್ದಿಷ್ಟ ಉಪವಾಸ ಹೂಡಿ ಏಟುಗಳನ್ನೂ ತಿಂದಿದ್ದೆ. ನನ್ನ ಬಯಕೆ ತಡೆಯಲಾಗದೆ ಪಾಕೆಟ್ಮನಿಯನ್ನು ಉಳಿಸಿ ಬಾಡಿಗೆ ಸೈಕಲ್ ಓಡಿಸಿದ್ದೆ. ದೊಡ್ಡ ಅಟ್ಲಾಸ್ ಸೈಕಲನ್ನು ‘ಒಳಗಾಲು’ ಹಾಕಿ ಓಡಿಸುವುದನ್ನು ರೂಢಿ ಮಾಡಿಕೊಂಡಿದ್ದೆ...” ಇನ್ನು, ಚಿಕ್ಕಮಗಳೂರಿನ ಕಾಫಿತೋಟದ ಮಾಲೀಕ ಎಸ್.ಎಂ.ಪೆಜತ್ತಾಯರ ಆತ್ಮಕಥೆ ‘ಕಾಗದದ ದೋಣಿ’ಯಲ್ಲಿ ‘ನಾನೂ ಸೈಕಲ್ ಸವಾರಿ ಕಲಿತೆ’ ಎಂಬ ಅಧ್ಯಾಯ ಬರುತ್ತದೆ. “ನಮ್ಮನೆ ಹತ್ತಿರ ರಾಮ ಎಂಬ ಲೋಕಲ್ ರೌಡಿಯೊಬ್ಬ ಹೊಸದಾಗಿ ಸೈಕಲ್ ಅಂಗಡಿ ತೆರೆದ. ಅವನಲ್ಲಿ ಎಲ್ಲಾ ಸೈಜಿನ ಸೈಕಲ್ಗಳು ಬಾಡಿಗೆಗೆ ಸಿಗುತ್ತಿದ್ದುವು. ಬಾಡಿಗೆ ಒಂದು ಗಂಟೆಗೆ ಎರಡಾಣೆ ಮಾತ್ರ. ಆದರೆ ಪಾಕೆಟ್ಮನಿ ಪದ್ಧತಿ ಇಲ್ಲದ ಆ ಕಾಲದಲ್ಲಿ ಅದು ನಮಗೆ ದೊಡ್ಡ ಮೊತ್ತವೇ ಆಗಿತ್ತು. ಅಲ್ಲದೇ, ರೌಡಿ ರಾಮನು ಸೈಕಲ್ ಹೊಡೆಯಲು ಬರದ ಹುಡುಗರಿಗೆ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ. ಪ್ರತೀ ಬಾಡಿಗೆದಾರ ಹುಡುಗನೂ ರೌಡಿ ರಾಮನೆದುರು ಸೈಕಲ್ಸವಾರಿ ಮಾಡಿ ತೋರಿಸಿಯೇ ಅವನಿಂದ ಸೈಕಲ್ ಪಡೆಯಬೇಕಾಗಿತ್ತು..." ಅಂಥ ನಿರ್ದಯಿ ರಾಮನಿಂದ ಬಾಡಿಗೆ ಸೈಕಲ್ ಪಡೆದು ತನ್ನ ಮಿತ್ರ ರವಿಯ ನೆರವಿನಿಂದ ಸೈಕಲ್ ಕಲಿತ ಸ್ವಾರಸ್ಯಕರ ಪ್ರಸಂಗಗಳನ್ನು ಪೆಜತ್ತಾಯ ಬಣ್ಣಿಸುತ್ತಾರೆ. ಅದೂ ಒಂದು ಕಾಲ. ನಗರಗಳಲ್ಲಿ, ಹದಾ ದೊಡ್ಡ ಎನ್ನಬಹುದಾದ ಪಟ್ಟಣಗಳಲ್ಲಿ ಬಾಡಿಗೆ ಸೈಕಲ್ ಬಳಕೆ ತೀರಾಸಾಮಾನ್ಯ. ಹೆಚ್ಚಾಗಿ ಸೈಕಲ್ ರಿಪೇರಿ ಅಂಗಡಿಗಳಲ್ಲೇ ಸಾಲಾಗಿ ನಿಲ್ಲಿಸಿಟ್ಟ ಬಾಡಿಗೆ ಸೈಕಲ್ಗಳು ಇರುತ್ತಿದ್ದವು. ಗಂಟೆಗೆ ಇಂತಿಷ್ಟು ದುಡ್ಡು ಬಾಡಿಗೆ ಲೆಕ್ಕ. ಸೈಕಲ್ ಪಡೆದು ಉಪಯೋಗದ ನಂತರ ಅಲ್ಲಿಗೇ ಹಿಂದಿರುಗಿಸಬೇಕು. ಬಹುತೇಕ ಮುಖಪರಿಚಯ ಮತ್ತು ನಂಬುಗೆಯಿಂದಲೇ ವ್ಯವಹಾರ. ಕ್ರಮೇಣ ಜನರಲ್ಲಿ ಸ್ವಂತ ವಾಹನ, ಅದರಲ್ಲೂ ಇಂಧನಚಾಲಿತ ವಾಹನ ಬಳಕೆ ಹೆಚ್ಚಿದಂತೆ ಸೈಕಲ್ ರಿಪೇರಿ ಅಂಗಡಿಗಳು ಮುಚ್ಚಿದವು. ಬಾಡಿಗೆ ಸೈಕಲ್ಗಳೂ ಕಣ್ಮರೆಯಾದವು. ಕಾಲಗರ್ಭದಲ್ಲಿ ಹುದುಗಿಹೋದವು. ಕಾಲಾಯ ತಸ್ಮೈನಮಃ. ಆದರೆ ಕಾಲವೂ ಒಂದು ಚಕ್ರ. ಸೈಕಲ್ಚಕ್ರದಂತೆಯೇ ತಿರುಗುತ್ತದೆ. 21ನೇ ಶತಮಾನದ ಮೊದಲ ದಶಕ ಕಳೆಯಿತೆನ್ನುವಾಗ ಇದೀಗ ಮತ್ತೆ ಪ್ರತ್ಯಕ್ಷವಾಗಿವೆ ಬಾಡಿಗೆ ಸೈಕಲ್ಗಳು. ಅದೂ ಎಲ್ಲಿ? ಕಾರ್ ಕಾರ್ ಎಲ್ನೋಡಿದ್ರೂ ಕಾರ್... ನಾಡಾದ ಅಮೆರಿಕದ ರಾಜಧಾನಿ ವಾಷಿಂಗ್ಟನ್ನಲ್ಲಿ! ಕಳೆದವರ್ಷ ಸಪ್ಟೆಂಬರ್ನಲ್ಲಿ ಇಲ್ಲಿ Capital Bikeshare ಎಂಬ ಹೊಸ ವ್ಯವಸ್ಥೆ ಆರಂಭವಾಗಿದೆ. ನಗರದ ವಿವಿಧೆಡೆಗಳಲ್ಲಿ ಬಾಡಿಗೆ ಸೈಕಲ್ ಸ್ಟ್ಯಾಂಡ್ಗಳು. ದಿನದ ೨೪ ಗಂಟೆಗಳೂ ಸಾರ್ವಜನಿಕರ ಸೇವೆಗೆ ತೆರೆದಿರುವ ಈ ಸ್ಟ್ಯಾಂಡ್ಗಳು ಸಂಪೂರ್ಣ ಸ್ವಯಂಚಾಲಿತ. ರೌಡಿರಾಮನೂ ಇಲ್ಲ, ಸೈಕಲ್ ಪಡೆವ ಮುನ್ನ ಅವನಿಂದ ಪರೀಕ್ಷೆಯೂ ಇಲ್ಲ. ಬಾಡಿಗೆ ಸೈಕಲ್ ಬಳಸಲಿಚ್ಛಿಸುವವರು ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯ ಸದಸ್ಯರಾಗಬೇಕು. ವಾರ್ಷಿಕ (75 ಡಾಲರ್), ಮಾಸಿಕ(25 ಡಾಲರ್), ಸಾಪ್ತಾಹಿಕ(15 ಡಾಲರ್) ಅಥವಾ ದೈನಂದಿನ (5 ಡಾಲರ್) ಸದಸ್ಯತ್ವ ಶುಲ್ಕ ಪಾವತಿಸಿ ‘ಕೀ’ ಕಾರ್ಡ್ ಪಡೆದುಕೊಳ್ಳಬೇಕು. ಅದು ಸೈಕಲ್ನ ಬೀಗದಕೈ. ಯಾವುದೇ ಸ್ಟ್ಯಾಂಡ್ಗಾದರೂ ಹೋಗಿ ಅಲ್ಲಿಂದ ಸೈಕಲ್ ಪಡೆದುಕೊಂಡು ಎಷ್ಟು ಸಮಯ ಬೇಕಾದರೂ ಬಳಸಿ ಯಾವುದೇ ಸ್ಟ್ಯಾಂಡ್ನಲ್ಲಾದರೂ ಹಿಂದಿರುಗಿಸಬಹುದು. ಮೊದಲ ಅರ್ಧ ಗಂಟೆ ಬಳಕೆಗೆ ಚಾರ್ಜ್ ಇಲ್ಲ. ಆಮೇಲೆ ಗಂಟೆ ಲೆಕ್ಕದಲ್ಲಿ ಬಳಕೆ ಶುಲ್ಕ. ಇದೀಗ ಆರೇಳು ತಿಂಗಳೊಳಗೇ ಅಪಾರ ಜನಪ್ರಿಯತೆ ಗಳಿಸಿರುವ ಕ್ಯಾಪಿಟಲ್ ಬೈಕ್ಶೇರ್ ವ್ಯವಸ್ಥೆಯಲ್ಲಿ ಸುಮಾರು 11000 ಸದಸ್ಯರಿದ್ದಾರೆ, ನೂರಕ್ಕೂ ಹೆಚ್ಚು ಸ್ಟ್ಯಾಂಡ್ಗಳಲ್ಲಿ ಸಾವಿರಕ್ಕೂ ಹೆಚ್ಚು ಸೈಕಲ್ಗಳಿವೆ. ಗಟ್ಟಿಮುಟ್ಟಾದ ಅಲ್ಯುಮಿನಿಯಂ ಫ್ರೇಮ್, ಕೆಂಪುಬಣ್ಣ, ಮುಂದುಗಡೆ ಕ್ಯಾರಿಯರ್ ಬ್ಯಾಸ್ಕೆಟ್- ಆಕರ್ಷಕ ಸೈಕಲ್ಗಳು. ಗಂಡಸರು-ಹೆಂಗಸರೆನ್ನದೆ, ಸಾಮಾಜಿಕ ಸ್ತರಗಳ ಭೇದವಿಲ್ಲದೆ ಎಲ್ಲ ವರ್ಗದ ಬಳಕೆದಾರರು. ಈಗ ಬೇಸಿಗೆಯ ದಿನಗಳಲ್ಲಂತೂ ಬೈಸಿಕಲ್ಗಳ ಭರಾಟೆ ವಿಪರೀತ. ಮೊನ್ನೆ ಬಿನ್ಲಾಡನ್ ಹತ್ಯೆಯ ವಾರ್ತೆ ಬಂದಾಗ ವಾಷಿಂಗ್ಟನ್ನಲ್ಲಿ ತಡರಾತ್ರೆಯಾಗಿತ್ತು, ಮೆಟ್ರೊರೈಲು/ಸಿಟಿಬಸ್ಸುಗಳ ಸಂಚಾರ ಮುಗಿದಿತ್ತು. ಆ ಅಪರಾತ್ರಿಯಲ್ಲಿ ವ್ಹೈಟ್ಹೌಸ್ ಪ್ರಾಂಗಣದಲ್ಲಿ ಹರ್ಷಾಚರಣೆಗೆ ಬಹಳಷ್ಟು ಜನರು ಹೋದದ್ದು ಬಾಡಿಗೆ ಸೈಕಲ್ ತುಳಿದುಕೊಂಡು! ಮುಂದುವರೆದ ದೇಶಗಳಲ್ಲಿ ಈರೀತಿಯ ಬಾಡಿಗೆ ಸೈಕಲ್ ವ್ಯವಸ್ಥೆ ಶುರುವಾಗುವುದಕ್ಕೆ, ಅತ್ಯಂತ ಜನಪ್ರಿಯವಾಗುವುದಕ್ಕೆ ಪ್ರಬಲ ಕಾರಣಗಳಿವೆ. ತಾಳ್ಮೆಗೆಡಿಸುವ ಸಂಚಾರ ದಟ್ಟಣೆ; ಏರುತ್ತಲೇ ಇರುವ ಇಂಧನ ಬೆಲೆ; ಜತೆಯಲ್ಲೇ ಪರಿಸರ ಮಾಲಿನ್ಯ. ಸಾರ್ವಜನಿಕರು ರೋಸಿಹೋಗಿದ್ದಾರೆ; ಸರಕಾರಗಳು ಸಕಾಲದಲ್ಲಿ ಎಚ್ಚೆತ್ತಿವೆ. ಚೈನಾ ದೇಶದ ಷಾಂಘಾಯ್ನಲ್ಲಿ ಸ್ವಂತ ಕಾರು ಖರೀದಿ ಮತ್ತು ಬಳಕೆ ಬಲುದುಬಾರಿಯಾಗುವಂತೆ ಮಾಡಿದ್ದಾರಂತೆ. ಅಲ್ಲಿ ಮೆಟ್ರೊ ರೈಲ್ವೇನಿಲ್ದಾಣಗಳು ಮತ್ತು ಬಸ್ ನಿಲುಗಡೆ ಸ್ಥಳಗಳ ನಡುವೆ ಜನಸಂಚಾರಕ್ಕೆ ಉಚಿತವಾಗಿ ಬಾಡಿಗೆ ಸೈಕಲ್ ವ್ಯವಸ್ಥೆ ಕಲ್ಪಿಸಿದ್ದಾರೆ. ಯುರೋಪ್ನಲ್ಲೂ ಬಾಡಿಗೆ ಸೈಕಲ್ ವ್ಯವಸ್ಥೆ ಕಳೆದ ನಾಲ್ಕೈದು ವರ್ಷಗಳಿಂದ ಚಾಲ್ತಿಯಲ್ಲಿದೆ. ಪ್ಯಾರಿಸ್ನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. ಅಂತೆಯೇ ಡಬ್ಲಿನ್, ಕೊಪನ್ಹೇಗಾನ್, ಬಾರ್ಸಿಲೊನಾ, ಲಂಡನ್ ಮುಂತಾದ ನಗರಗಳಲ್ಲಿ. ಅಮೆರಿಕಾದಲ್ಲಿ ಸದ್ಯಕ್ಕೆ ವಾಷಿಂಗ್ಟನ್ನಲ್ಲಿ (ಬಿಳಿಮನೆಯೂರಿನಲ್ಲಿ = ವ್ಹೈಟ್ಹೌಸ್ ನಗರದಲ್ಲಿ) ಮಾತ್ರ ಆರಂಭವಾಗಿದ್ದು ಇನ್ನು ನ್ಯೂಯಾರ್ಕ್, ಷಿಕಾಗೊ, ಸ್ಯಾನ್ಫ್ರಾನ್ಸಿಸ್ಕೊ ಮೊದಲಾದ ನಗರಗಳಿಗೂ ವ್ಯಾಪಿಸಲಿದೆ. ಸೈಕ್ಲಿಂಗ್ ಮತ್ತು ರೀಸೈಕ್ಲಿಂಗ್- ಬಹುಶಃ ನಾವು ಮಾಡದಿದ್ದರೂ ಪ್ರಕೃತಿಯೇ ನಮ್ಮಿಂದ ಮಾಡಿಸುತ್ತದೆ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Apr 23, 2011
One Zero One Zero One Zero...
Saturday Apr 23, 2011
Saturday Apr 23, 2011
ದಿನಾಂಕ 24 ಏಪ್ರಿಲ್ 2011ರ ಸಂಚಿಕೆ...
ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅಮೆರಿಕದಲ್ಲಿ ನಾನು ಗಮನಿಸಿದಂತೆ ಪ್ರಾಥಮಿಕ ಶಿಕ್ಷಣದಲ್ಲಿ ಅಕ್ಷರ ಕಲಿಕೆಗಿಂತಲೂ ಮೊದಲು pattern recognition ಕಲಿಸುತ್ತಾರೆ. ಒಂದು ಚಿತ್ರಸರಣಿ ಇರಬಹುದು, ವಿವಿಧ ಆಕೃತಿಗಳ ಜೋಡಣೆಯಿರಬಹುದು, ಬೇರೆಬೇರೆ ಬಣ್ಣದ ಪಟ್ಟೆಗಳಿರಬಹುದು, ಅದರಲ್ಲಿ ಏನಾದರೂ ಪ್ಯಾಟರ್ನ್ ಅಂದರೆ ನಿರ್ದಿಷ್ಟ ಮಾದರಿ ಕಾಣಿಸುತ್ತಿದೆಯೇ - ಉದಾಹರಣೆಗೆ ಪ್ರತೀ ಮೂರು ಕೆಂಪುಪಟ್ಟೆಗಳ ನಂತರ ಒಂದು ಹಳದಿಬಣ್ಣದ ಪಟ್ಟೆ ಇದೆಯೇ - ಎಂದೆಲ್ಲ ಗುರುತಿಸುವುದನ್ನು ಮಗು ಕಲಿತುಕೊಳ್ಳಬೇಕು. ಬುದ್ಧಿ ಬೆಳೆಯುವುದಕ್ಕೆ ಇದು ತುಂಬಾ ಒಳ್ಳೆಯದಂತೆ. ಮುಂದೆ ಅಂಕೆ-ಅಕ್ಷರಗಳನ್ನು ಕಲಿಯುವಾಗಲೂ pattern recognition ಅಭ್ಯಾಸಗಳನ್ನು ಮಾಡಿಸುತ್ತಾರೆ. ಅದರಿಂದ ಬರೀ ಕಲಿಕೆಯಷ್ಟೇ ಅಲ್ಲ, ಮನರಂಜನೆ ಮತ್ತು ಮೆದುಳಿಗೆ ವ್ಯಾಯಾಮ ಸಿಗುತ್ತದೆ ಎಂಬ ಕಾರಣಕ್ಕೆ. ಕಣ್ಮುಂದೆಯೇ ಇದ್ದರೂ ಸುಲಭದಲ್ಲಿ ಕಾಣಿಸಿಕೊಳ್ಳದ ಪ್ಯಾಟರ್ನ್ಅನ್ನು ಕೊನೆಗೂ ಕಂಡುಕೊಂಡಾಗ ಮಗು ಖುಶಿಪಡುತ್ತದೆ. ಅದೇರೀತಿಯ ಮಾದರಿಗಳನ್ನು ಇನ್ನಷ್ಟು ಹುಡುಕುವ, ಸ್ವತಃ ರಚಿಸುವ ಹುಮ್ಮಸ್ಸು ಪಡೆಯುತ್ತದೆ. ಇದಿಷ್ಟನ್ನು ಹಿನ್ನೆಲೆಯಲ್ಲಿಟ್ಟು ಈಗ ಆದಿಶಂಕರಾಚಾರ್ಯ ವಿರಚಿತ ‘ಮಹಾಗಣೇಶ ಪಂಚರತ್ನಂ’ ಎಂಬ ಜನಪ್ರಿಯ ಸ್ತೋತ್ರವನ್ನು ನೆನಪಿಸಿಕೊಳ್ಳೋಣ. ಅದಕ್ಕೂ ಮುನ್ನ, ಬೆಂಗಳೂರಿನಿಂದ ಓದುಗಮಿತ್ರ ಡಿ.ಪಿ.ಸುಹಾಸ್ ಅವರದೊಂದು ಪತ್ರ ಓದೋಣ. ಎಲ್ಲಿಂದೆಲ್ಲಿಗೆ ವಿಷಯಾಂತರ ಎನ್ನಬೇಡಿ, ಇದರಲ್ಲೂ ಒಂದು ಪ್ಯಾಟರ್ನ್ ಇದೆ. ಸುಹಾಸ್ ಬರೆದಿದ್ದಾರೆ- “ಶೃಂಗೇರಿ ಶ್ರೀಗಳ ಕುರಿತು ಲೇಖನ ಓದಿದೆ. ಅವರು ರಚಿಸಿದ ಶ್ರೀ ಶಂಕರ ಭಗವತ್ಪಾದಾಚಾರ್ಯ ಸ್ತುತಿಯನ್ನು ಸ್ಕ್ಯಾನ್ ಮಾಡಿ ಕಳಿಸುತ್ತಿದ್ದೇನೆ. ಇದು ‘ಪ್ರಮಾಣಿಕಾ’ ವೃತ್ತ ಛಂದಸ್ಸಿನಲ್ಲಿರುವ ರಚನೆ. ಶಂಕರಾಚಾರ್ಯರೇ ಬರೆದ ಗಣೇಶಪಂಚರತ್ನಂ, ಯಮುನಾಷ್ಟಕಂ, ನರ್ಮದಾಷ್ಟಕಂ ಮುಂತಾದ ಸ್ತೋತ್ರಗಳೂ ಇದೇ ಛಂದಸ್ಸಿನವು. ಪ್ರಮಾಣಿಕಾ ಎಂದರೆ ಲಘು ಗುರು ಲಘು ಗುರು ಲಘು ಗುರು- ಹೀಗೆ ಆವರ್ತನವಾಗುತ್ತ ಹೋಗುತ್ತದೆ. ಅತಿಸರಳ ಆದರೆ ಅತ್ಯದ್ಭುತ ಎನಿಸುವ ರಚನೆ!" ಗಣೇಶಪಂಚರತ್ನಂ ನಾನು ಬಾಲ್ಯದಲ್ಲೇ ಕಲಿತ, ಈಗಲೂ ಕಂಠಪಾಠವಿರುವ ಸ್ತೋತ್ರ. ಆದರೆ ಅದರಲ್ಲಿ ಪ್ರಮಾಣಿಕಾ ಎಂಬ ಪ್ಯಾಟರ್ನ್ ಇದೆಯಂತ ನನಗೆ ಗಣೇಶನಾಣೆಗೂ ಗೊತ್ತಿರಲಿಲ್ಲ. ಸುಹಾಸ್ ತಿಳಿಸಿದನಂತರ ನೋಡುತ್ತೇನಾದರೆ, ಹೌದಲ್ವಾ ‘ಮುದಾಕರಾತ್ತಮೋದಕಂ ಸದಾವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಂ...’ ವ್ಹಾರೆವಾಹ್! ಸ್ತೋತ್ರದುದ್ದಕ್ಕೂ ಲಘು-ಗುರು-ಲಘು-ಗುರು ಆವರ್ತನ ಎಷ್ಟು ಚಂದವಾಗಿ ಕಾಣಿಸುತ್ತಿದೆ! ಮಾರ್ಚ್ಪಾಸ್ಟ್ ಮಾಡುತ್ತಿರುವ ಸಿಪಾಯಿಗಳಂತೆ. ತಧಿಂ ತಧೀಂ ತಧೀಂ ತಧೀಂ ಮಟ್ಟುಗಳಿಗೆ ಹೆಜ್ಜೆಹಾಕುವ ನರ್ತಕಿಯಂತೆ. ಬ್ರೆಸ್ಟ್ಸ್ಟ್ರೋಕ್ ಈಜುಗಾರನಂತೆ. ತಲೆಯನ್ನು ತುಸುವಷ್ಟೇ ಎಡಕ್ಕೂ ಬಲಕ್ಕೂ ವಾಲಿಸುತ್ತ ಗಂಭೀರವಾಗಿ ನಡೆಯುವ ಆನೆಯಂತೆ! ಹೀಗೆ ಪ್ಯಾಟರ್ನ್ ಇದೆಯಂತ ಗೊತ್ತಾದದ್ದೇ ತಡ, ಆ ಸ್ತೋತ್ರದ ಮತ್ತು ಶಂಕರಾಚಾರ್ಯರ ಬಗೆಗಿನ ನನ್ನ ಅಭಿಮಾನಕ್ಕೆ ಹೊಸ ಮೆರುಗು ಬಂತು. ಇಷ್ಟು ಸುಲಭದ ‘ಪ್ರಮಾಣಿಕಾ’ವನ್ನು ಒಂದು ಕೈ ನೋಡೇಬಿಡುವಾ ಎಂಬ ಹುರುಪು ಬಂತು. ಶಂಕರರ ಅನುಗ್ರಹವಿದ್ದೇ ಇರುತ್ತದೆಂದು ಪ್ರಮಾಣಿಕಾ ವೃತ್ತದಲ್ಲಿ ಎರಡು ತರ್ಲೆಪದ್ಯಗಳ ರಚನೆಯೂ ಆಯ್ತು. ಅವೀಗ ನಿಮ್ಮ ಮುಂದೆ. ಆದರೆ ಮೊದಲೊಮ್ಮೆ ಗುರು-ಲಘು ವಿಚಾರ ಸ್ವಲ್ಪ ಬ್ರಶ್ಅಪ್ ಮಾಡುವುದು ಒಳ್ಳೆಯದು. ದೀರ್ಘಾಕ್ಷರಗಳೆಲ್ಲವೂ ಗುರು. ಅನುಸ್ವಾರ ಮತ್ತು ವಿಸರ್ಗ ಗುರು. ಒತ್ತಕ್ಷರದ ಮೊದಲು ಬರುವ ಅಕ್ಷರ ಗುರು. ಬೇರೆಲ್ಲವೂ ಲಘು- ಇದಿಷ್ಟನ್ನೇ ನೆನಪಿಟ್ಟುಕೊಂಡರಾಯ್ತು. ಉದಾಹರಣೆಗೆ ‘ಸದಾವಿಮುಕ್ತಿಸಾಧಕಂ’ ಎಂಬ ಸಾಲನ್ನು ತೆಗೆದುಕೊಳ್ಳಿ. ಇದರಲ್ಲಿ ದೀರ್ಘಾಕ್ಷರಗಳಾದ ‘ದಾ’ ಮತ್ತು ‘ಸಾ’ ಗುರು. ‘ಕ್ತಿ’ ಒತ್ತಕ್ಷರವಾದ್ದರಿಂದ ಅದರ ಮೊದಲು ಬರುವ ‘ಮು’ ಗುರು. ‘ಕಂ’ ಅನುಸ್ವಾರ ಆದ್ದರಿಂದ ಗುರು. ಮಿಕ್ಕೆಲ್ಲವೂ ಲಘು. ಲಘು-ಗುರುಗಳನ್ನು ಕ್ರಮವಾಗಿ 0 ಮತ್ತು 1 ಎಂದು ಕಂಪ್ಯೂಟರ್ ಅಂಕಿಗಳಂತೆ ಬರೆದರೆ ‘ಸದಾವಿಮುಕ್ತಿಸಾಧಕಂ’ ಸಾಲು 01010101 ಎಂದಾಗುತ್ತದೆ. ಇಡೀ ಸ್ತೋತ್ರವೇ ಸೊನ್ನೆ ಒಂದು ಸೊನ್ನೆ ಒಂದು... ಪ್ಯಾಟರ್ನ್ನಲ್ಲಿ ಮುಂದುವರಿಯುತ್ತದೆ. ಈಗ ನನ್ನ ಪ್ರಮಾಣಿಕಾ ತರ್ಲೆಪದ್ಯಗಳತ್ತ ಕಣ್ಣುಹಾಯಿಸಿ. ನಿಮಗೆ ‘ಮುದಾಕರಾತ್ತಮೋದಕಂ’ ಧಾಟಿ ಗೊತ್ತಿದ್ದರೆ ಅದರಲ್ಲೇ ಇವನ್ನು ಹಾಡಲೂಬಹುದು. ಮೊದಲನೆಯದು ಕರೆಂಟ್ಅಫೇರ್- ಪ್ರಚಲಿತ ಭಾರತದ ಸ್ಥಿತಿಗತಿ. ಎರಡನೆಯದು ಉಂಡಾಡಿಗುಂಡನಿಗೆ ಒಂದು ಪ್ರಶ್ನೆ ಮತ್ತು ಅದಕ್ಕವನ ಉತ್ತರ. ನೆನಪಿಡಿ- ಪ್ರತಿಸಾಲಿನ ಕೊನೆಯಕ್ಷರ ಲಘುವಿದ್ದರೂ ಗುರುವೆಂದೇ ಪರಿಗಣನೆ. ಅದು ಛಂದಸ್ಸಿನ ನಿಯಮ. ಹಾಗಾಗಿ ಅದನ್ನು ದೀರ್ಘಸ್ವರದಲ್ಲೇ ನಮೂದಿಸಲಾಗಿದೆ.* 1 *
ಪುಢಾರಿ ನೀನು ದುಡ್ಡು ತಿಂದು ದೇಶವನ್ನು ಕೊಲ್ಲುವೇ
ವಿನಾಶಕಾರಿ ಬುದ್ಧಿಯಿಂದ ಓಟು ಕಿತ್ತು ಗೆಲ್ಲುವೇ
ಹಜಾರೆ ನೀನು ಸಂಪು ಹೂಡಿ ನಮ್ಮ ಹೀರೊ ಆಗುವೇ
ಮಹಾತ್ಮಗಾಂಧಿ ಹೇಳಿದಂಥ ಸತ್ಯಮಾರ್ಗ ತೋರುವೇ
* 2 *
ಪ್ರಭಾತ ವೇಳೆಯಲ್ಲಿ ನೀನು ಯಾವ ತಿಂಡಿ ತಿನ್ನುವೇ
ಮಸಾಲೆದೋಸೆ ಪೂರಿ ಭಾಜಿ ಇಡ್ಲಿಚಟ್ನಿ ಮೆಲ್ಲುವೇ
ಹಜಾರದಲ್ಲಿ ಆಚೆ ಈಚೆ ನೂರು ಹೆಜ್ಜೆ ಹಾಕುವೇ
ಅದಾದಮೇಲೆ ಕೊಂಚ ಹೊತ್ತು ನಿದ್ದೆಯನ್ನು ಮಾಡುವೇ
ಅದಷ್ಟು ಪ್ರಮಾಣಿಕಾ ವಿಚಾರ. ಪ್ರಮಾಣಿಕಾ ವೃತ್ತಕ್ಕೆ ತದ್ವಿರುದ್ಧವಾದದ್ದೆಂದರೆ ‘ಸಮಾನಿಕಾ’ ಎಂಬ ವೃತ್ತ. ಇದರಲ್ಲಿ ಗುರು-ಲಘು-ಗುರು-ಲಘು ಆವರ್ತನವಾಗುತ್ತ ಹೋಗುತ್ತದೆ. ಕಂಪ್ಯೂಟರ್ ಭಾಷೆಯಲ್ಲಿ ಬರೆದರೆ 10101010 ರೀತಿಯಲ್ಲಿ ಒಂದು ಸೊನ್ನೆ ಒಂದು ಸೊನ್ನೆ ಪ್ಯಾಟರ್ನ್. ಇದಕ್ಕೂ ಶಂಕರಾಚಾರ್ಯರದೇ ಒಂದು ರಚನೆ ಒಳ್ಳೆಯ ಉದಾಹರಣೆ. ಕಾಲಭೈರವಾಷ್ಟಕಂ ಅಂತೊಂದು ಸ್ತೋತ್ರವಿದೆ. ‘ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ| ವ್ಯಾಲಯಜ್ಞ ಸೂತ್ರಮಿಂದುಶೇಖರಂ ಕೃಪಾಕರಂ’ ಎಂದು ಶುರುವಾಗುತ್ತದೆ. ಇದನ್ನು ಗಮನವಿಟ್ಟು ನೋಡಿ- ಗುರು ಲಘು ಗುರು ಲಘು... ಮತ್ತದೇ ಮಾರ್ಚ್ಪಾಸ್ಟ್. ಧೀಂತ ಧೀಂತ ಧೀಂತ ಧೀಂತ ನರ್ತನ. ಇನ್ನೊಂದು ಉದಾಹರಣೆ- ‘ಭಾಗ್ಯವಂತ’ ಚಿತ್ರಕ್ಕಾಗಿ ಪುನೀತ್ ರಾಜಕುಮಾರ್ ಅಭಿನಯಿಸಿ ಹಾಡಿದ್ದ ಗೀತೆಯ ಪಲ್ಲವಿ- ‘ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ... ಮಿನುಗು ತಾರೆ ಅಂದ ನೋಡು ಎಂಥ ಚಂದ ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ’ ಇದರಲ್ಲಿ ಮಿನುಗು ಮತ್ತು ಮಲಗು ಎಂಬೆರಡು ಪದಗಳು ಮಾತ್ರ ಮೂರಕ್ಷರಗಳೂ ಲಘು ಆದ್ದರಿಂದ ಸರಿಹೊಂದುವುದಿಲ್ಲ. ಉಳಿದಂತೆ ಇಡೀ ಪಲ್ಲವಿ ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಪ್ಯಾಟರ್ನ್. ಅದೇ ಪುನೀತ್ ‘ಚಲಿಸುವ ಮೋಡಗಳು’ ಚಿತ್ರದಲ್ಲಿ ಹಾಡಿರುವ ‘ಕಾಣದಂತೆ ಮಾಯವಾದನೂ’ ಸಾಲು ಕೂಡ ಹಾಗೆಯೇ! ನೋಡಿದ್ರಾ? ಸಮಾನಿಕಾ-ಪ್ರಮಾಣಿಕಾ ಎಂದರೆ ಕಷ್ಟವೇನಿಲ್ಲ. ಬಹುಶಃ ಈಗ ನಿಮಗೂ ಇದರ ನಶೆ ಏರತೊಡಗಿರಬಹುದು. ಅಂದಹಾಗೆ ಪದ್ಯವೇ ಆಗಬೇಕಂತಿಲ್ಲ, ಕಥೆ ಬರೆಯುತ್ತ ಹೋಗುವಾಗಲೂ ಒಂದು ಸೊನ್ನೆ ಒಂದು ಸೊನ್ನೆ ಎನ್ನುತ್ತ ಅಕ್ಷರಮಾಲೆ ಕಟ್ಟಬಹುದು- ರಾಮಚಂದ್ರ ಕಾಡಿನಲ್ಲಿ ಜಿಂಕೆಯನ್ನು ಕೊಂದ. ಲಂಕೆರಾಜ ಭಿಕ್ಷೆಗೆಂದು ಸೀಮೆ ದಾಟಿ ಬಂದ. ಸೀತೆಯನ್ನು ಕದ್ದುಕೊಂಡು ದೂರ ಹಾರಿ ಹೋದ. ಯುದ್ಧದಲ್ಲಿ ರಾಮ ಗೆದ್ದು ಸೀತೆಗೆಷ್ಟು ಚಂದ! ಹಾಗಾಗಿ, ಅಮೆರಿಕದವರಿಗಷ್ಟೇ ಅಲ್ಲ pattern recognition ಗೊತ್ತಿರುವುದು. ಭಾರತೀಯರಿಗೆ ಆದಿಶಂಕರರ ಕಾಲದಿಂದಲೇ ಗೊತ್ತಿದೆ. ಬೇರೆಲ್ಲ ಬಿಡಿ, ‘ಎಂಥ ಅಂದ ಎಂಥ ಚಂದ ಶಾರದಮ್ಮ’ ಎಂಬ ಸಾಲಿಗಷ್ಟೇ ಗುರು-ಲಘು ಹಾಕಿನೋಡಿ. ಅಲ್ಲಿಯೂ ನಿಮಗೆ ಕಾಣುವುದು ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ... ಕೊನೆಗೆ ಆ ‘ಒಂದು ಸೊನ್ನೆ ಒಂದು ಸೊನ್ನೆ ಒಂದು ಸೊನ್ನೆ’ ಎಂಬುದಕ್ಕೇ ಗುರು-ಲಘು ಹಾಕಿ ನೋಡಿ. ಅಲ್ಲಿಯೂ ಅದೇ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು. ಅಲ್ಲಿ ಪ್ರಕಟವಾದ ಲೇಖನದಲ್ಲಿ ‘ಸಮಾನಿಕಾ’ ಮತ್ತು ’ಪ್ರಮಾಣಿಕಾ’ಹೆಸರುಗಳು ಅದಲುಬದಲಾಗಿದ್ದವು. ಆ ತಪ್ಪನ್ನು ಹಿರಿಯ ಓದುಗರೊಬ್ಬರು ನನ್ನ ಗಮನಕ್ಕೆ ತಂದ ನಂತರ ಇಲ್ಲಿ ಅದನ್ನು ಸರಿಪಡಿಸಿಕೊಂಡಿದ್ದೇನೆ.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125