Episodes
Saturday Apr 16, 2011
Poetry is like a Jackfruit
Saturday Apr 16, 2011
Saturday Apr 16, 2011
ದಿನಾಂಕ 17 ಏಪ್ರಿಲ್ 2011ರ ಸಂಚಿಕೆ...
ಹಲಸಿನ ಹಣ್ಣಿನಂತೆಯೇ ಕಾವ್ಯದ ರುಚಿಯೂ!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] “ಆ ಕೀರ್ತನಲೋನಿ ಪ್ರತಿ ಅಕ್ಷರಂ ವೆನುಕ ಆರ್ದ್ರತ ನಿಂಡಿಉಂದಿ ದಾಸು..." ಶಂಕರಾಭರಣಂ ಸಿನೆಮಾದಲ್ಲಿ ಶಂಕರಶಾಸ್ತ್ರಿಗಳು ಹೇಳುತ್ತಾರೆ. ಬ್ರೋಚೇವಾರೆವರುರಾ ಕೀರ್ತನೆಯನ್ನು ಅದರ ಅರ್ಥವಾಗಲೀ ಭಾವವಾಗಲೀ ಗೊತ್ತಿಲ್ಲದೆ ಹಿಗ್ಗಾಮುಗ್ಗಾ ತಿರುಚಿ ವಿಚಿತ್ರವಾಗಿ ಹಾಡುತ್ತಿರುತ್ತಾನೆ ಅರೆಬೆಂದ ಸಂಗೀತಪಂಡಿತ ದಾಸು. ಮೇಲಾಗಿ ತನ್ನ ಶಿಷ್ಯಂದಿರಿಗೂ ಅದೇರೀತಿ ಹೇಳಿಕೊಡುತ್ತಾನೆ. ಅವನನ್ನು ಗದರಿಸುತ್ತ ಶಾಸ್ತ್ರಿಗಳು ಹೇಳುವ ಮಾತು. “ಆ ಕೀರ್ತನೆಯ ಒಂದೊಂದು ಅಕ್ಷರವೂ ಆರ್ದ್ರಭಾವದಲ್ಲಿ ಅದ್ದಿ ತೆಗೆದಿರುವಂಥದು. ಭಗವಂತನ ಆಸರೆಯ ಬಾಯಾರಿಕೆಯಿಂದ ಬಳಲಿ ಬೆಂಡಾದ ಭಕ್ತನ ಎದೆಯಾಳದಲ್ಲಿ ತನ್ನಿಂತಾನೇ ಗಂಗಾಜಲವಾಗಿ ಹೊರಹೊಮ್ಮಿದ ಗೀತೆಯದು, ರಾಗವದು. ಅಮೃತದಂಥ ಆ ಸಂಗೀತವನ್ನು ಅಪಭ್ರಂಶ ಮಾಡಬೇಡ!" ಅವಮಾನಕ್ಕೊಳಗಾದ ದಾಸು ಇದನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಆದರೆ ಸಿನೆಮಾ ನೋಡುವ ನಮಗೆ ಶಾಸ್ತ್ರಿಗಳ ಮೇಲೆ ಗೌರವ ಮೂಡುತ್ತದೆ. ಅದಕ್ಕಿಂತ ಹೆಚ್ಚಾಗಿ ಆ ಕೀರ್ತನೆಯ ಬಗ್ಗೆ, ಅದನ್ನು ರಚಿಸಿದ ಕವಿಯ ಬಗ್ಗೆ ಆಸಕ್ತಿ ಹುಟ್ಟುತ್ತದೆ. ಬ್ರೋಚೇವಾ... ಕೀರ್ತನೆ ಮೈಸೂರು ವಾಸುದೇವಾಚಾರ್ಯರ ರಚನೆ. ಅವರು ಒಡೆಯರ ಕಾಲದ ಆಸ್ಥಾನವಿದ್ವಾಂಸರು. ಸಂಸ್ಕೃತ ಮತ್ತು ತೆಲುಗಿನಲ್ಲಿ ಕೃತಿಗಳನ್ನು ರಚಿಸಿದವರು. ಬ್ರೋಚೇವಾರು ಎವರುರಾ ಎಂದರೆ ತೆಲುಗಿನಲ್ಲಿ ‘ಕಾಪಾಡುವವರು ಯಾರಯ್ಯಾ? ಎಂದರ್ಥ. ಶ್ರೀರಾಮನ ಪರಮಭಕ್ತರಾಗಿದ್ದ ವಾಸುದೇವಾಚಾರ್ಯರು ನಿಜವಾಗಿಯೂ ಕಷ್ಟಕಾಲದಲ್ಲಿದ್ದಾಗ ದೇವರಲ್ಲಿ ಮೊರೆಯಿಡುತ್ತ ಇದನ್ನು ಬರೆದರೇ ಗೊತ್ತಿಲ್ಲ. ಆದರೂ ಕವಿ ಎಂದಮೇಲೆ ಹಾಸಿಹೊದೆಯುವಷ್ಟು ಕಷ್ಟಗಳಿದ್ದವರು ಎಂದರೂ ಆಶ್ಚರ್ಯವೇನಿಲ್ಲ. ತ್ಯಾಗರಾಜರು ಪಂಚರತ್ನ ಕೃತಿಗಳನ್ನು ರಚಿಸಿದ್ದು ತಮ್ಮ ಬಾಳಿನ ಅತ್ಯಂತ ಕಷ್ಟದ ದಿನಗಳಲ್ಲಿ ಎಂದು ಎಲ್ಲಿಯೋ ಓದಿದ ನೆನಪು. ಹಾಗೆ ನೋಡಿದರೆ ಹೆಚ್ಚಿನೆಲ್ಲ ಕವಿಗಳ ಬದುಕೇ ಅಂಥದು. ಕನಕ-ಪುರಂದರರು, ಸರ್ವಜ್ಞ-ಅಲ್ಲಮರು, ಕೊನೆಗೆ ಬೇಂದ್ರೆಯವರಾದರೂ ಅಷ್ಟೇ, ನರಸಿಂಹ ಸ್ವಾಮಿಗಳಾದರೂ ಅಷ್ಟೇ. ಅಜರಾಮರವಾದ ಅವರ ಕೃತಿಗಳೆಲ್ಲ ಸುಖದ ಸುಪ್ಪತ್ತಿಗೆಯಿಂದ ಬಂದವಲ್ಲ. ಕಷ್ಟಗಳ ಕುಲುಮೆಯಲ್ಲಿ ನಳನಳಿಸಿದ ರತ್ನಗಳು. ಆದ್ದರಿಂದಲೇ ‘ಹಿಂಡಿದರೂ ಸಿಹಿ ಕೊಡುವ ಕಬ್ಬು, ತೇಯ್ದರೂ ಪರಿಮಳ ಬೀರುವ ಗಂಧ, ಉರಿದರೂ ಬೆಳಕು ಚೆಲ್ಲುವ ದೀಪ...’ ಎಂಬ ಬಣ್ಣನೆ ಇವರಿಗೆಲ್ಲ ಏಕಪ್ರಕಾರವಾಗಿ ಸರಿಹೊಂದುತ್ತದೆ. ಕವಿಗಳ ಬದುಕಿನ ಕಥೆ-ವ್ಯಥೆಗಳನ್ನು ಅರಿತುಕೊಂಡಾಗ ನಮಗೆ ಅವರ ಕಾವ್ಯ ಇನ್ನಷ್ಟು ಹಿಡಿಸುತ್ತದೆ. ಅಬ್ಬಾ ಎಂಥ ಕಷ್ಟಕಾರ್ಪಣ್ಯದಲ್ಲೂ ಇಷ್ಟೊಂದು ಮಧುರವಾದ, ಅರ್ಥವತ್ತಾದ, ಹೃದಯಂಗಮವಾದ ಕೃತಿಗಳನ್ನು ರಚಿಸಿದರಲ್ಲಾ ಎಂದು ಮನಮಿಡಿಯುತ್ತದೆ. ಬೇಂದ್ರೆಯವರ ‘ನೀ ಹೀಂಗ ನೋಡಬ್ಯಾಡ...' ಕವಿತೆಯನ್ನೇ ತೆಗೆದುಕೊಳ್ಳಿ. ಅದನ್ನು ಹಾಗೇಸುಮ್ಮನೆ ಕೇಳಿಸಿಕೊಳ್ಳುವುದೇ ಬೇರೆ, ಎಂಥ ಸನ್ನಿವೇಶದಲ್ಲಿ ಬೇಂದ್ರೆ ಅದನ್ನು ಬರೆದರು ಎಂದು ತಿಳಿದುಕೊಂಡಮೇಲೆ ಕೇಳುವಾಗಿನ ಪರಿಣಾಮವೇ ಬೇರೆ! ಕೆಲವರ್ಷಗಳ ಹಿಂದೆ ಡಾ.ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟರು ಅಮೆರಿಕ ಪ್ರವಾಸದಲ್ಲಿದ್ದಾಗ ಇಲ್ಲಿ ಹಲವೆಡೆಗಳಲ್ಲಿ ಬೇಂದ್ರೆಯವರ ಬಗ್ಗೆ ಉಪನ್ಯಾಸಗಳನ್ನು ಕೊಟ್ಟಿದ್ದರು. ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಅವತ್ತು ‘ನೀ ಹೀಂಗ ನೋಡಬ್ಯಾಡ’ ಕವಿತೆಯ ಕುರಿತು ಹೇಳುವಾಗಂತೂ ಭಟ್ಟರ ಕಂಠ ಗದ್ಗದಿತವಾಗಿತ್ತು. ಸಭಿಕರೆಲ್ಲರ ಕಣ್ಣಾಲಿಗಳು ಒದ್ದೆಯಾಗಿದ್ದವು. ಇತ್ತೀಚೆಗೆ ಕೆಲ ವಾರಗಳ ಹಿಂದೆ ಈ-ಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಬೇಂದ್ರೆ ಸ್ಪೆಷಲ್ (ಹಾಗೆಯೇ ನರಸಿಂಹಸ್ವಾಮಿ ಸ್ಪೆಷಲ್) ‘ಎಂದೂ ಮರೆಯದ ಹಾಡು’ ಕಾರ್ಯಕ್ರಮ ಕೂಡ ನೇರಾನೇರ ಹೃದಯವನ್ನೇ ತಟ್ಟಿತು ಅಂತನಿಸಿದ್ದು ಅದೇ ಕಾರಣಕ್ಕೆ. ಜನಪ್ರಿಯ ಗಾಯಕ-ಗಾಯಕಿಯರಿಂದ ಕವಿಯ ಕೃತಿಗಳ ಸೊಗಸಾದ ಗಾಯನ. ಜತೆಯಲ್ಲಿ ರವಿಯ (ರವಿ ಬೆಳಗೆರೆಯವರ) ಮನೋಜ್ಞ ನಿರೂಪಣೆಯ ರಸಾಯನ. ಒಟ್ಟು ಪರಿಣಾಮ- ಅದ್ಭುತವಾದೊಂದು ಅನುಭವ! ಕಳೆದ ರವಿವಾರ ಅಂಥದೇ ಒಂದು ವಿಶಿಷ್ಟ ಅನುಭವ ದಕ್ಕಿತು. ಅದೂ ಹಾಗೆಯೇ, ಕವಿಯ ಕಾವ್ಯದ ಮೇಲೆ ರವಿಯ ಬೆಳಕು! ಇಲ್ಲಿ ವಾಷಿಂಗ್ಟನ್ನಲ್ಲಿ ಸಾಹಿತ್ಯಾಸಕ್ತ ಕನ್ನಡಿಗರೊಂದಿಷ್ಟು ಮಂದಿ ಸೇರಿ ಕಟ್ಟಿಕೊಂಡಿರುವ ‘ಭೂಮಿಕಾ’ ಚರ್ಚಾಚಾವಡಿಯಲ್ಲಿ ಅವತ್ತು ‘ಗಂಗಾಲಹರಿ’ ಮತ್ತು ‘ಗಂಗಾವತರಣ’ ಕೃತಿಗಳ ತುಲನಾತ್ಮಕ ಪರಿಚಯ ಮತ್ತು ಅನೌಪಚಾರಿಕ ಚರ್ಚೆ, ವಿಚಾರವಿನಿಮಯ. ನಡೆಸಿಕೊಟ್ಟವರು ಡಾ.ರವಿ ಹರಪ್ಪನಹಳ್ಳಿ. ಅವರು ವೃತ್ತಿಯಲ್ಲಿ ಜೀವವಿಜ್ಞಾನಿ, ಪ್ರವೃತ್ತಿಯಲ್ಲಿ ಓರ್ವ ಕಲಾವಿದ, ಸಾಹಿತ್ಯಾಸಕ್ತ. ಗಂಗಾವತರಣ ಎಂದರೆ ಅದೇ- ಬೇಂದ್ರೆಯವರ ಅತಿಪ್ರಸಿದ್ಧವಾದ ‘ಇಳಿದು ಬಾ ತಾಯಿ ಇಳಿದು ಬಾ’ ಕವಿತೆ. ಸ್ವತಃ ಬೇಂದ್ರೆಭಕ್ತರೂ ಆಗಿರುವ ರವಿ ಅದನ್ನು ಆಯ್ದುಕೊಂಡದ್ದು ಸಹಜವೇ. ಆದರೆ ಗಂಗಾಲಹರಿ ಕೃತಿಯ ವಿಚಾರ ನನಗೆ ಹೊಸದು. ಈಮೊದಲು ಕೇಳಿಯೇ ಇರಲಿಲ್ಲ. ಇದು ಬೇಂದ್ರೆಯವರದಲ್ಲ, ಬೇಂದ್ರೆಯವರ ಮೇಲೆ ಗಾಢ ಪರಿಣಾಮ ಬೀರಿದ್ದ ಜಗನ್ನಾಥ ಪಂಡಿತ ಎಂಬ ಮಹಾನ್ ಕವಿಯ ರಚನೆ. ೫೨ ಶ್ಲೋಕಗಳ ಒಂದು ಸಂಸ್ಕೃತ ಸ್ತೋತ್ರ. ಬೇಂದ್ರೆಯವರ ಗಂಗಾವತರಣಕ್ಕೆ ಸ್ಫೂರ್ತಿಯೂ ಹೌದು. ವೈಶಿಷ್ಟ್ಯವಿರುವುದು ಗಂಗಾಲಹರಿ ಸ್ತೋತ್ರದಲ್ಲಲ್ಲ. ದೇವಾಧಿದೇವತೆಗಳ ಲಕ್ಷೋಪಲಕ್ಷ ಸ್ತೋತ್ರಗಳಿದ್ದಂತೆಯೇ ಅದೂ ಒಂದು. ಗಂಗಾನದಿಯ ವರ್ಣನೆ, ಸ್ತುತಿ ಅಷ್ಟೇ. ಆದರೆ ಜಗನ್ನಾಥ ಪಂಡಿತನ ಬದುಕಿನ ಕಥೆ ಬಹಳ ಸ್ವಾರಸ್ಯವಾದ್ದು. ಗಂಗಾಲಹರಿಯನ್ನು ಆತ ಹಾಡಿದ ಸನ್ನಿವೇಶ ಅತ್ಯಂತ ಹೃದಯಸ್ಪರ್ಶಿಯಾದ್ದು. ಅವತ್ತು ನಮ್ಮ ಚರ್ಚೆಗೆ ರಂಗೇರಿದ್ದೇ ಆಎಲ್ಲ ವಿವರಗಳಿಂದ. ಹದಿನೇಳನೇ ಶತಮಾನದಲ್ಲಿ ಬಾಳಿದ್ದ ಜಗನ್ನಾಥ ಪಂಡಿತ ಮೂಲತಃ ಆಂಧ್ರದವನು. ಅತಿಶಯ ಮೇಧಾವಿ, ಆದರೆ ಕಡುಬಡವ. ರಾಜಾಶ್ರಯ ಕೋರಿ ಉತ್ತರಭಾರತಕ್ಕೆ ವಲಸೆ ಹೋಗುತ್ತಾನೆ. ಮೊಘಲ್ ಚಕ್ರವರ್ತಿ ಷಹಜಹಾನನ ಆಸ್ಥಾನವನ್ನು ತಲುಪುತ್ತಾನೆ. ತನ್ನ ಪಾಂಡಿತ್ಯದಿಂದ ಅವನ ಮನಗೆಲ್ಲುತ್ತಾನೆ. ಚಕ್ರವರ್ತಿಯೊಡನೆ ಚದುರಂಗದಾಟ ಆಡುವಷ್ಟು ಸಖ್ಯ-ಸಲುಗೆ ಬೆಳೆಸುತ್ತಾನೆ. ಆಟದಲ್ಲಿ ಷಹಜಹಾನನನ್ನು ಸೋಲಿಸುತ್ತಾನೆ. ಪಣವಾಗಿ ಅಲ್ಲಿ ಸೇವಕಿಯಾಗಿದ್ದ ಸುರಸುಂದರಿ ದಾಸೀಪುತ್ರಿ ಲವಂಗಿಯನ್ನೇ ಕೊಡುವಂತೆ ಕೇಳುತ್ತಾನೆ. ಹಠಹಿಡಿದು ಅವಳನ್ನೇ ಮದುವೆಯಾಗುತ್ತಾನೆ, ಹಾಯಾಗಿರುತ್ತಾನೆ. ಮುಂದೆ ಔರಂಗಜೇಬ ತಂದೆ ಷಹಜಹಾನನನ್ನು ಬಂಧಿಸಿದಾಗ ಜಗನ್ನಾಥ ಪಂಡಿತ ಮತ್ತು ಲವಂಗಿ ಕೂಡ ರಾಜ್ಯದಿಂದ ಹೊರಬೀಳುತ್ತಾರೆ. ಕಾಶೀಕ್ಷೇತ್ರಕ್ಕೆ ಹೋದಾಗ ಅಲ್ಲಿನ ಪಂಡಿತ ಸಮುದಾಯವು ಅವನನ್ನು ಜಾತಿಭ್ರಷ್ಟನೆಂಬ ಕಾರಣಕ್ಕೆ ದೂರವಿಡುತ್ತದೆ. ಬಾಲ್ಯದಿಂದಲೇ ಪ್ರತಿಭಾನ್ವಿತನಾದರೂ ಉದ್ಧಟತನದವನು ಎಂದೂ ಅವನ ಬಗ್ಗೆ ತಿರಸ್ಕಾರವಿರುತ್ತದೆ. ಅಂಥ ಹತಾಶ ಪರಿಸ್ಥಿತಿಯಲ್ಲಿಯೂ ಜಗನ್ನಾಥ ಪಂಡಿತ ಕೆಲವು ಅದ್ಭುತ ಕೃತಿಗಳನ್ನು ರಚಿಸುತ್ತಾನೆ. ಅವುಗಳಲ್ಲೊಂದು ಗಂಗಾಲಹರಿ. ಆದರೆ ಕೊನೆಗೂ ಬದುಕಿನಲ್ಲಿ ಸಾಕಷ್ಟು ರೋಸಿಹೋಗಿ ಪ್ರಾಯಶ್ಚಿತ್ತದ ರೂಪದಲ್ಲಿ ಮಡದಿಯೊಂದಿಗೆ ಜಲಸಮಾಧಿ ಮಾಡಿಕೊಳ್ಳಲು ನಿಶ್ಚಯಿಸುತ್ತಾನೆ. ಕಾಶಿಯಲ್ಲಿ ಗಂಗೆಯ ದಡದಲ್ಲಿ ಕುಳಿತು ಹಂಸಗೀತೆಯೆಂಬಂತೆ ಗಂಗಾಲಹರಿಯನ್ನು ಹಾಡುತ್ತಾನೆ. ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಿಲಿನಷ್ಟು ಏರುವ ಗಂಗೆ, ಐವತ್ತೆರಡನೇ ಶ್ಲೋಕವಾಗುವಾಗ ಅವರಿಬ್ಬರನ್ನೂ ಕೊಚ್ಚಿಕೊಂಡು ಹೋಗುತ್ತಾಳೆ! ಗಂಗಾಲಹರಿ ಸ್ತೋತ್ರಕ್ಕೆ ಇಷ್ಟೊಂದು ರೋಮಾಂಚಕ ಹಿನ್ನೆಲೆ ಇದೆಯೆಂದು ಗೊತ್ತಾದ ಮೇಲೆ ಅದರ ಬಗ್ಗೆ ಅಂತರ್ಜಾಲದಲ್ಲೂ ವಿವರಗಳಿದ್ದೇ ಇರುತ್ತವೆ ಎಂದು ಶೋಧಕ್ಕೆ ತೊಡಗಿದೆ. ಸಿಕ್ಕೇಬಿಡ್ತು ಇನ್ನೊಬ್ಬ ಬೇಂದ್ರೆಭಕ್ತ ಹುಬ್ಬಳ್ಳಿನಿವಾಸಿ ಹಿರಿಯ ಮಿತ್ರ ಸುಧೀಂದ್ರ ದೇಶಪಾಂಡೆಯವರ ‘ಸಲ್ಲಾಪ' ಬ್ಲಾಗ್. ಅದರಲ್ಲಿ ಗಂಗಾಲಹರಿ, ಜಗನ್ನಾಥ ಪಂಡಿತ, ಬೇಂದ್ರೆಯವರ ಮೇಲಾದ ಪರಿಣಾಮ- ಇವೆಲ್ಲದರ ದೊಡ್ಡದೊಂದು ಪ್ರಬಂಧವೇ ಇದೆ. ಓದಿದೆ, ಬಹಳ ರುಚಿಸಿತು. ಅಂತೆಯೇ ಅನಿಸಿತು, ಕಾವ್ಯವೆಂದರೆ ಹೀಗೆಯೇ. ಹಲಸಿನಹಣ್ಣು ಇದ್ದಂತೆ. ಹಿತವಾದ ಪರಿಮಳ. ಆದರೆ ಬಿಡಿಸಿ ಒಳಗಿನ ಸಿಹಿಸಿಹಿ ತೊಳೆಗಳನ್ನು ತಿನ್ನಲಿಕ್ಕೆ ಕಷ್ಟವಿದೆ. ಒಂದೋ ನಾವೇ ಶ್ರಮಪಡಬೇಕು, ಇಲ್ಲ ಯಾರಾದರೂ ಅನುಭವಿಗಳು ಆ ಕೆಲಸ ಮಾಡಿಕೊಡಬೇಕು. ಆಗ, ಆಹಾ! ಏನು ಸವಿ ಏನು ಸೊಗಸು! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Apr 09, 2011
Shashtyabda of Sringeri Jagadguru
Saturday Apr 09, 2011
Saturday Apr 09, 2011
ದಿನಾಂಕ 10 ಏಪ್ರಿಲ್ 2011ರ ಸಂಚಿಕೆ...
ಭಾರತೀಯ ಸಂಸ್ಕೃತಿಯ ತೀರ್ಥ ಸ್ವರೂಪ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಸೀತಾರಾಮ ಆಂಜನೇಯಲು ಎಂದು ಆ ಬಾಲಕನ ಹೆಸರು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ಪೇಟ ಅವನ ಊರು. ತಂದೆ ವೆಂಕಟೇಶ್ವರ ಅವಧಾನಿ, ತಾಯಿ ಅನಂತಲಕ್ಷ್ಮಮ್ಮ. ಧರ್ಮಭೀರುಗಳಾಗಿ ಬಾಳ್ವೆ ನಡೆಸುತ್ತಿದ್ದ ದಂಪತಿಗೆ ದೈವಾನುಗ್ರಹದಿಂದ ಹುಟ್ಟಿದ ಸುಪುತ್ರ. ಪುಟ್ಟ ಮಗುವಾಗಿದ್ದಾಗಿನಿಂದಲೇ ಅಪಾರ ದೈವಭಕ್ತಿ. ಶಾಲೆಯಲ್ಲಿ ಕಲಿಕೆಯಲ್ಲೂ ಅಗ್ರಶ್ರೇಣಿ. ಗಣಿತವೆಂದರೆ ನೀರು ಕುಡಿದಷ್ಟು ಸುಲಭ. ಒಂಬತ್ತು ವರ್ಷಕ್ಕೆಲ್ಲ ಸಂಸ್ಕೃತ ಭಾಷಾಪ್ರವೀಣ. ತಂದೆಯಿಂದಲೇ ವೇದೋಪನಿಷತ್ತುಗಳ ಶಿಕ್ಷಣ. ಸಂಸ್ಕೃತವಿದ್ವಾಂಸರೆಲ್ಲ ನಿಬ್ಬೆರಗಾಗುವಷ್ಟು ಕವಿತ್ವ ಮತ್ತು ಪಾಂಡಿತ್ಯ. ವಿಜಯವಾಡ ಆಕಾಶವಾಣಿ ಕೇಂದ್ರದಿಂದ ಸಂಸ್ಕೃತ ಕಾರ್ಯಕ್ರಮ ನಡೆಸಿಕೊಡುವಂತೆ ಈ ಬಾಲಕನಿಗೆ ಆಹ್ವಾನ. ಹೈಸ್ಕೂಲ್ನಲ್ಲಿದ್ದಾಗ ಒಮ್ಮೆ ವಿಜಯವಾಡದಲ್ಲಿ ಸಂಸ್ಕೃತ ಭಾಷಣಸ್ಪರ್ಧೆ ಏರ್ಪಟ್ಟಿತ್ತು. ಆಗಿನ ಶೃಂಗೇರಿ ಮಠಾಧಿಪತಿಗಳಾಗಿದ್ದ ಶ್ರೀ ಅಭಿನವ ವಿದ್ಯಾತೀರ್ಥರ ಸಮ್ಮುಖದಲ್ಲಿ ಆ ಸ್ಪರ್ಧೆ. ಸೀತಾರಾಮ ಆಂಜನೇಯಲು ನಿರರ್ಗಳವಾಗಿ ಮಾತನಾಡಿ ಪ್ರಥಮ ಬಹುಮಾನ ಗಿಟ್ಟಿಸಿದ. ಅಷ್ಟೇಅಲ್ಲ, ಸ್ವಾಮೀಜಿಯವರ ದಿವ್ಯಸನ್ನಿಧಿಯಲ್ಲಿ, ಅವರ ತೇಜೋಮಯ ಕಂಗಳಲ್ಲಿ ಏನೋ ಒಂದು ಹೊಸ ಬೆಳಕನ್ನು ಕಂಡುಕೊಂಡ. ಅವರೇ ತನ್ನ ಪರಮಗುರು ಎಂದು ಅವತ್ತೇ ನಿರ್ಧರಿಸಿದ. ಹೈಸ್ಕೂಲ್ ಶಿಕ್ಷಣ ಮುಗಿದದ್ದೇ ತಡ ಗುರುವಿನ ಸೆಳೆತ ಪ್ರಬಲವಾಯಿತು. ಮನೆಯಲ್ಲಿ ಹಿರಿಯರ ವಿರೋಧವನ್ನೂ ಲೆಕ್ಕಿಸದೆ ಒಂದುದಿನ ಹೊರಟೇಬಿಟ್ಟ, ನೇರವಾಗಿ ಉಜ್ಜೈನಿಗೆ. ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಅಲ್ಲಿ ಆಗ ಚಾತುರ್ಮಾಸ್ಯ ವ್ರತಾಚರಣೆಯಲ್ಲಿದ್ದರು. ಅವರ ಪಾದಗಳಿಗೆರಗಿ ಶಿಷ್ಯತ್ವವನ್ನು ಬೇಡಿಕೊಂಡ. ಶೃಂಗೇರಿ ಶಾರದೆಯ ಇಚ್ಛೆಯೂ ಅದೇ ಇತ್ತೇನೋ, ಸೀತಾರಾಮ ಆಂಜನೇಯಲು ಅಭಿನವ ವಿದ್ಯಾತೀರ್ಥರ ನೆಚ್ಚಿನ ವಿದ್ಯಾರ್ಥಿಯಾದ. ಪಟ್ಟಶಿಷ್ಯನೂ ಆಗಿ ರೂಪುಗೊಂಡ. ಇದಿಷ್ಟು, ಶೃಂಗೇರಿ ಶಾರದಾಪೀಠದ ಈಗಿನ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಪೂರ್ವಾಶ್ರಮವಿವರ. 1966ರಿಂದ ಎಂಟು ವರ್ಷಕಾಲ ಗುರುಗಳಲ್ಲಿ ವೇದ-ವೇದಾಂತಗಳನ್ನೂ, ನ್ಯಾಯ, ಮೀಮಾಂಸಾ, ವ್ಯಾಕರಣ ಮುಂತಾದ ಶಾಸ್ತ್ರಗಳನ್ನೂ ಕಲಿತು 1974ರಲ್ಲಿ ಸನ್ಯಾಸಸ್ವೀಕಾರ. ಸುಮಾರು 15 ವರ್ಷಗಳವರೆಗೂ ಕಿರಿಯ ಸ್ವಾಮಿಯಾಗಿ ಗುರುಗಳೊಂದಿಗೆ ಶೃಂಗೇರಿಪೀಠದ ಉಸ್ತುವಾರಿ, ದೇಶಪರ್ಯಟನ, ಧರ್ಮಪ್ರಚಾರಕಾರ್ಯ. 1989ರಲ್ಲಿ ಅಭಿನವ ವಿದ್ಯಾತೀರ್ಥರು ಬ್ರಹ್ಮೀಭೂತರಾದ ಮೇಲೆ ಶಾರದಾಪೀಠದ 36ನೇ ಜಗದ್ಗುರುವಾಗಿ ಪಟ್ಟಾಭಿಷೇಕ. ಆದಿಶಂಕರಾಚಾರ್ಯರಿಂದ ಮೊದಲ್ಗೊಂಡು ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಶೃಂಗೇರಿ ಶಾರದಾಪೀಠದ ಗುರುಪರಂಪರೆ ಸಮಗ್ರ ಭಾರತದಲ್ಲೇ ಅದ್ವಿತೀಯವಾದುದು. ಶಂಕರಾಚಾರ್ಯರು ಸಾಕ್ಷಾತ್ ಶಿವನ ಅವತಾರವೆಂದೂ, ತದನಂತರದ ಜಗದ್ಗುರುಗಳೆಲ್ಲರೂ ಶಂಕರಾಂಶಸಂಭೂತರೆಂದೂ ಪ್ರತೀತಿ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪ್ರೇರಕರೆನ್ನಲಾದ ವಿದ್ಯಾರಣ್ಯರು ಈ ಪರಂಪರೆಯಲ್ಲಿ 12ನೆಯವರು. ಆದ್ದರಿಂದಲೇ ಇವತ್ತಿಗೂ ಶೃಂಗೇರಿಪೀಠದ ಜಗದ್ಗುರುಗಳಿಗೆ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ, ಶ್ರೀಮದ್ರಾಜಾಧಿರಾಜಗುರು ಎಂಬ ಬಿರುದು. ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಅನನ್ಯ ಹಿರಿಮೆಯೆಂದರೆ ಅವರ ಅಪ್ರತಿಮ ಪಾಂಡಿತ್ಯ. ಕೆಲವರ್ಷಗಳ ಹಿಂದೆ ಅಮೆರಿಕದ EnlightenNext ಎಂಬ ಒಂದು ನಿಯತಕಾಲಿಕದಲ್ಲಿ ಸ್ವಾಮೀಜಿಯವರ ಸಂದರ್ಶನ ಪ್ರಕಟವಾಗಿತ್ತು. ಧಾರ್ಮಿಕ ವಿಧಿವಿಧಾನಗಳಲ್ಲಿ ಲಿಂಗಭೇದದ ಬಗ್ಗೆ ಹಿಂದೂಧರ್ಮ ಏನನ್ನುತ್ತೆಯೆಂದು ಕಂಡುಕೊಳ್ಳಲು ವಿಶೇಷ ಪ್ರತಿನಿಧಿಯನ್ನು ಭಾರತಕ್ಕೆ (ಶೃಂಗೇರಿಗೆ) ಕಳಿಸಿ ನಡೆಸಿದ್ದ ಸಂದರ್ಶನವದು. ಅದರ ಪೀಠಿಕೆಯಲ್ಲಿ ಪತ್ರಿಕೆ ಹೀಗೆ ಉಲ್ಲೇಖಿಸಿತ್ತು- “ಭಾರತದಲ್ಲಿ ಅಸಂಖ್ಯಾತ ಸ್ವಾಮಿಗಳು, ಸಾಧು-ಸಂತರು ಇದ್ದಾರೆ. ಒಬ್ಬೊಬ್ಬರೂ ಶ್ರೇಷ್ಠರೇ. ಆದರೆ ಹಿಂದೂಧರ್ಮದ ಬಗ್ಗೆ, ಸನಾತನ ಸಂಸ್ಕೃತಿಯ ಬಗ್ಗೆ, ತಲಸ್ಪರ್ಶಿಯಾಗಿ ಮತ್ತು ಅಧಿಕೃತವಾಗಿ ಮಾತನಾಡಬಲ್ಲವರೆಂದರೆ ಭಾರತೀತೀರ್ಥರೊಬ್ಬರೇ. ಜಗತ್ತಿನ ಕ್ಯಾಥೊಲಿಕ್ ಕ್ರಿಶ್ಚಿಯನ್ ಸಮುದಾಯಕ್ಕೆ ಧರ್ಮಗುರು ಪೋಪ್ ಇದ್ದಂತೆ ಪ್ರಸಕ್ತ ಹಿಂದೂಧರ್ಮಕ್ಕೆ ಜಾಗತಿಕ ನೆಲೆಯಲ್ಲಿ ಗುರು ಅಂತಿದ್ದರೆ ಅವರು ಶೃಂಗೇರಿ ಜಗದ್ಗುರು ಭಾರತೀತೀರ್ಥರೇ.” ಇದು ಉತ್ಪ್ರೇಕ್ಷೆಯಲ್ಲ. ಸನಾತನ ಧರ್ಮಕ್ಕೆ ಸಂಬಂಧಿಸಿದ ಎಲ್ಲ ಶ್ರುತಿ-ಸ್ಮೃತಿಗಳನ್ನು ಅರೆದುಕುಡಿದವರು ಸ್ವಾಮೀಜಿ. ಜನಸಾಮಾನ್ಯರಿಗೆ ಎಂತಹ ಧಾರ್ಮಿಕ ಸಂದೇಹ ಸಂದಿಗ್ಧತೆಗಳಿದ್ದರೂ ಅವರ ಬಳಿಗೆ ಹೋದರೆ ಬಗೆಹರಿಯುತ್ತವೆ. ಅವರು ರಾಜಕಾರಣದಲ್ಲಿ ಮುಳುಗಿದ ಸ್ವಾಮೀಜಿಯಲ್ಲ. ವೇದಪಾಠಶಾಲೆಗಳಲ್ಲಿ ಸ್ವತಃ ಬೋಧನೆ ಮಾಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜ್ಞಾನಾರ್ಜನೆಯ ಮಟ್ಟವನ್ನು ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುತ್ತಾರೆ. ಪ್ರತಿವರ್ಷ ಗಣೇಶಚೌತಿಯಿಂದ ಹತ್ತು ದಿನಗಳಕಾಲ ಶೃಂಗೇರಿಯಲ್ಲಿ ಮಹಾಗಣಪತಿ ವಾಕ್ಯಾರ್ಥಸಭೆ ಎಂಬ ವಿದ್ವತ್ಸದಸ್ಸು ನಡೆಯುತ್ತದೆ. ನೇಪಾಳ, ಕಾಶ್ಮೀರ, ಕಾಶಿ ಮುಂತಾದೆಡೆಗಳಿಂದ ವಿದ್ವಾಂಸರು ಬರುತ್ತಾರೆ. ನ್ಯಾಯ, ವೇದಾಂತ, ಮೀಮಾಂಸಾ, ವ್ಯಾಕರಣ ಶಾಸ್ತ್ರಗಳ ಚರ್ಚೆಯಾಗುತ್ತದೆ. ಆ ಸಮಾವೇಶದಲ್ಲಿ ಪಾಲ್ಗೊಳ್ಳುವುದೇ ಒಂದು ಅಗ್ಗಳಿಕೆ. ಅಧ್ಯಕ್ಷತೆ ವಹಿಸುವ ಸ್ವಾಮೀಜಿಗೆ ಎಲ್ಲವೂ ಕರತಲಾಮಲಕ. ಶಾಸ್ತ್ರಗ್ರಂಥಗಳ ವಾಕ್ಯಗಳನ್ನು ಅನಾಯಾಸವಾಗಿ ಉದಾಹರಿಸುತ್ತ ಅವರು ವಾಗ್ವಾದ ಇತ್ಯರ್ಥ ಮಾಡುವ ಪರಿ ಅದ್ಭುತ. ಸಂಸ್ಕೃತವೆಂದರೆ ಮೃತಭಾಷೆ, ಕೆಲವರಿಗಷ್ಟೇ ಸೀಮಿತ ಎಂದೆಲ್ಲ ಸಂಸ್ಕೃತದ ಬಗೆಗಿರುವ ತಪ್ಪುಕಲ್ಪನೆಗಳನ್ನು ಅಳಿಸುವ ಪ್ರಯತ್ನ. ಸಂಸ್ಕೃತ ಕಷ್ಟವೆನ್ನುತ್ತೀರೇಕೆ? ಎಲ್ಲ ವಿಷಯಗಳೂ ಹಾಗೆಯೇ, ಕಲಿಯುವವನಿಗೆ ಎಲ್ಲವೂ ಸುಲಭ, ಕಲಿಯದವನಿಗೆ ಎಲ್ಲವೂ ಕಷ್ಟ ಎನ್ನುತ್ತಾರವರು. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ಅವರದು ಪ್ರಗಲ್ಭ ಪಾಂಡಿತ್ಯ. ಮನುಷ್ಯನ ಜೀವನವೃತ್ತಿಗೆ, ಸನ್ಮಾರ್ಗದಲ್ಲಿ ಮುನ್ನಡೆಗೆ, ಕೊನೆಗೆ ಮೋಕ್ಷಪ್ರಾಪ್ತಿಗೂ ಮೂಲಭೂತವಾದದ್ದು ವಿದ್ಯೆ ಅಥವಾ ಜ್ಞಾನ. ಧರ್ಮದ ದಾರಿಯನ್ನು ನೋಡಲು ಅದು ಕಣ್ಣುಗಳಿದ್ದಂತೆ. ವೇದ-ಶಾಸ್ತ್ರಗಳ ರಕ್ಷಣೆಯಾಗಬೇಕಾದರೆ ವೈದಿಕರ ಪೋಷಣೆಯಾಗಬೇಕು. ಈ ದಿಸೆಯಲ್ಲೊಂದು ಕಿರುಪ್ರಯತ್ನವೆಂಬಂತೆ ಪ್ರತಿ ತಿಂಗಳೂ ಸಾವಿರ ಮಂದಿ ವೃದ್ಧ ವೇದಪಂಡಿತರಿಗೆ ಸಂಭಾವನೆ ಕೊಡಿಸುವ ವ್ಯವಸ್ಥೆ ಮಾಡಿದ್ದಾರೆ ಶ್ರೀಗಳು. ಕೇವಲ ಪಾರಂಪರಿಕ ಶಿಕ್ಷಣಕ್ರಮಕ್ಕಷ್ಟೇ ಅಲ್ಲ, ಆಧುನಿಕ ವಿದ್ಯಾಭ್ಯಾಸಕ್ಕೂ ಶೃಂಗೇರಿ ಮಠದ ಪ್ರೋತ್ಸಾಹವಿದೆ. ಕೊಪ್ಪ, ನರಸಿಂಹರಾಜಪುರ ಮತ್ತು ಶೃಂಗೇರಿ ತಾಲೂಕುಗಳ ಸುಮಾರು ಹತ್ತುಸಾವಿರ ಶಾಲಾವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಶೃಂಗೇರಿ ಮಠದ ಅಡುಗೆಮನೆಯಲ್ಲಿ ತಯಾರಾಗಿ ಸರಬರಾಜಾಗುತ್ತದೆ. ಇನ್ನಿತರ ಸಮಾಜಮುಖಿ ಚಟುವಟಿಕೆಗಳೂ ಮಠದ ವತಿಯಿಂದ ಯಥಾಶಕ್ತಿ ನಡೆಯುತ್ತಿವೆ. ಶೃಂಗೇರಿಯಲ್ಲಿರುವ ಧನ್ವಂತರಿ ಆಸ್ಪತ್ರೆ ಒಂದು ನಿದರ್ಶನವಷ್ಟೇ. ಧರ್ಮಪ್ರಚಾರಕಾರ್ಯವಂತೂ ಅವಿರತವಾಗಿ ನಡೆದೇಇದೆ. ಶಂಕರಾಚಾರ್ಯರು ಹಿಂದೂಧರ್ಮದ ಪುನರುತ್ಥಾನಕ್ಕಾಗಿ ಕಾಲ್ನಡಿಗೆಯಲ್ಲೇ ದೇಶಸುತ್ತಿದವರು. ಅದೇ ಪರಂಪರೆಯನ್ನು ಮುಂದುವರಿಸಿರುವ ಜಗದ್ಗುರುಗಳು ಕಾಲ್ನಡಿಗೆಯಲ್ಲಲ್ಲದಿದ್ದರೂ ದೇಶ-ವಿದೇಶಗಳ ಪರ್ಯಟನೆಮಾಡಿ ಶಿಬಿರಗಳನ್ನು ನಡೆಸಿ ಧರ್ಮಜಾಗ್ರತಿ ಮೂಡಿಸುತ್ತಿದ್ದಾರೆ. ಶೃಂಗೇರಿ ಮಠದ ಶಾಖೆಗಳು ಅಮೆರಿಕದ ಸ್ಟ್ರೌಡ್ಸ್ಬರ್ಗ್ನಲ್ಲಿ ಮತ್ತು ಕೆನಡಾ ದೇಶದ ಟೊರಾಂಟೋ ನಗರದಲ್ಲಿಯೂ ಇದ್ದು ಪಾಶ್ಚಾತ್ಯ ಜಗತ್ತಿನ ಅಧ್ಯಾತ್ಮಪಿಪಾಸುಗಳ ಕ್ಷುಧೆ ತಣಿಸುವ ಕೆಲಸವನ್ನು ಸರಳಸುಂದರ ರೀತಿಯಲ್ಲಿ ಮಾಡುತ್ತಿವೆ. ಚಾಂದ್ರಮಾನ ತಿಥಿಪ್ರಕಾರ ನಿನ್ನೆ (ಚೈತ್ರ ಶುಕ್ಲ ಪಂಚಮಿ), ಸೌರಮಾನ ಕ್ಯಾಲೆಂಡರ್ ಪ್ರಕಾರ ನಾಳೆ (ಏಪ್ರಿಲ್ 11) ಶ್ರೀ ಭಾರತೀತೀರ್ಥ ಸ್ವಾಮೀಜಿಯವರಿಗೆ ಷಷ್ಟ್ಯಬ್ದಪೂರ್ತಿ. ತನ್ನಿಮಿತ್ತ ಕಳೆದೊಂದು ವಾರದಿಂದ ಶೃಂಗೇರಿಯಲ್ಲಿ ಅಭೂತಪೂರ್ವ ಸಂಭ್ರಮ. ಲಕ್ಷಮೋದಕ ಮಹಾಗಣಪತಿ ಹೋಮ, ಅತಿರುದ್ರ ಮಹಾಯಾಗ, ಸಂಹಿತಾಹವನ, ಅಯುತ ಚಂಡಿಕಾಯಾಗ ಮುಂತಾದ ವಿಧಿವಿಧಾನಗಳು. ಅಯುತ ಎಂದರೆ ಹತ್ತುಸಾವಿರ. ಅಷ್ಟು ಸಂಖ್ಯೆಯಲ್ಲಿ ಸಪ್ತಶತೀಪಾರಾಯಣ. ನೂರು ಕುಂಡಗಳಲ್ಲಿ ಸಾವಿರ ಸರ್ತಿ ಹೋಮ. ಶೃಂಗೇರಿಯಲ್ಲಿ ಇದು ಪ್ರಪ್ರಥಮ. ಇವೆಲ್ಲವೂ ಲೋಕಕಲ್ಯಾಣಾರ್ಥ, ಎಲ್ಲ ವರ್ಗದ ಜನರ ಮನಸ್ಸಿನ ಕಲ್ಮಶಗಳೂ ದೂರವಾಗಿ, ಮಳೆ-ಬೆಳೆ ಸಕಾಲದಲ್ಲಿ ಆಗಿ ಸುಖಶಾಂತಿ ಸಮೃದ್ಧಿ ನೆಲೆಸಬೇಕೆಂಬ ಸಂಕಲ್ಪದೊಂದಿಗೆ ನಡೆಯುತ್ತಿರುವ ಧಾರ್ಮಿಕ ಕೆಲಸಗಳು. ಜತೆಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ. ರಾಜಮಹಾರಾಜರ ಕಾಲದಲ್ಲಿ ಯಜ್ಞಯಾಗಾದಿಗಳು, ಗೀತನೃತ್ಯ ಸಾಹಿತ್ಯಗೋಷ್ಠಿಗಳು ವೈಭವೋಪೇತವಾಗಿ ನಡೆಯುತ್ತಿದ್ದವಂತೆ. ಇದರಿಂದ ಋತ್ವಿಜರಿಗೂ, ಕಲಾವಿದರಿಗೂ ಉತ್ತೇಜನ ಕೊಟ್ಟಂತೆಯೂ ಆಯ್ತು, ಪರಂಪರೆಯನ್ನು ಊರ್ಜಿತಸ್ಥಿತಿಯಲ್ಲಿಟ್ಟಂತೆಯೂ ಆಯ್ತು. ಶೃಂಗೇರಿಯಲ್ಲಿ ಇದೀಗ ಜರುಗುತ್ತಿರುವುದೂ ಅದೇ. ನಿಜ, ಪೂರ್ವಾಶ್ರಮವನ್ನೂ ಲೆಕ್ಕಕ್ಕೆ ತಗೊಂಡು ಸ್ವಾಮೀಜಿಯವರಿಗೆ ಈಗ ಷಷ್ಟ್ಯಬ್ದಪೂರ್ತಿ. ಆದರೆ ಇಂತಹ ಮೇರುಸದೃಶ ವ್ಯಕ್ತಿತ್ವವೊಂದು ನಮ್ಮ ನಡುವೆ ನಮ್ಮ ನಾಡಿನಲ್ಲಿಯೇ ಇದೆಯೆನ್ನುವುದು, ಅವರ ಸಮಕಾಲೀನರಾಗಿ ನಾವಿದ್ದೇವೆನ್ನುವುದು ಸಮಸ್ತ ಕನ್ನಡಿಗರಿಗೂ ಹೆಮ್ಮೆ ಮತ್ತು ಸ್ಫೂರ್ತಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Apr 02, 2011
Cricket Craze
Saturday Apr 02, 2011
Saturday Apr 02, 2011
ದಿನಾಂಕ 3 ಏಪ್ರಿಲ್ 2011ರ ಸಂಚಿಕೆ...
ಇದು ಕ್ರಿಕೆಟ್ ‘ನೋಟ’ದ ವೀಕ್ಷಕ ವಿವರಣೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಮೊನ್ನೆ ಮೊಹಾಲಿ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಯಾರೋ ಹಿಡಿದುಕೊಂಡಿದ್ದ ಆ ಬ್ಯಾನರ್ ಎಷ್ಟು ಅರ್ಥಪೂರ್ಣವಾಗಿತ್ತಲ್ವಾ, ‘ಭಾರತೀಯರಿಗೆ ಗೊತ್ತಿರುವುದು ಎರಡೇ ಧರ್ಮಗಳು: ಒಂದು ಸಿನೆಮಾ, ಇನ್ನೊಂದು ಕ್ರಿಕೆಟ್. ಮತ್ತ್ಯಾಕೆ ಜಗಳ?’ ಅಕ್ಷರಶಃ ನಿಜ. ನನಗನಿಸುತ್ತದೆ, ಭಾರತೀಯರೆಲ್ಲರನ್ನೂ ಒಂದೇ ದಾರದಲ್ಲಿ ಪೋಣಿಸುವ ವಿಚಾರದಲ್ಲಿ ಸಿನೆಮಾವನ್ನೂ ಮೀರಿಸಿದ್ದು ಕ್ರಿಕೆಟ್ ಕ್ರೇಜ್. ಶ್ರೀಮಂತ-ಬಡವರೆನ್ನದೆ ಸಮಾನತೆಯನ್ನು ಸಾರುವ ಶ್ರೇಷ್ಠ ಧರ್ಮವೆಂದರೆ ಅದೊಂದೇ. ಬೇರೆಲ್ಲ ಬಿಡಿ, ‘ಸ್ಕೋರ್ ಎಷ್ಟು?’ ಎಂಬ ಒಂದೇಒಂದು ಸಂಭಾಷಣೆ ಸಾಕು ಇಬ್ಬರು ತೀರಾ ಅಪರಿಚಿತರನ್ನು ತತ್ಕ್ಷಣದಲ್ಲಿ ಆತ್ಮೀಯರನ್ನಾಗಿಸುವುದಕ್ಕೆ! ಇದು ದೇಶದೊಳಗಿನ ನೂರಿಪ್ಪತ್ತೊಂದು ಕೋಟಿ ಜನರಿಗಷ್ಟೇ ಅಲ್ಲ, ದೇಶದಿಂದ ದೂರವಿರುವವರಿಗೂ ಅನ್ವಯಿಸುತ್ತದೆ. ವಿದೇಶಗಳಲ್ಲಿ ನೆಲೆಸಿರುವ ಅಷ್ಟೂ ಭಾರತೀಯರಲ್ಲಿ ಯಾರಾದರೂ ಇಬ್ಬರನ್ನು ಆಯ್ದು ಅವರೊಂದಿಗೆ ಮಾತುಕತೆಯಲ್ಲಿ ಭಾರತದ ವಿಷಯವೇನಾದರೂ ಪ್ರಸ್ತಾಪವಾಯ್ತು ಅಂತಿಟ್ಕೊಳ್ಳೋಣ. ಬೇರಾವುದೇ ಸಂದರ್ಭದಲ್ಲಾದರೆ ಅವರಿಬ್ಬರ ಆಸಕ್ತಿಗಳು ಆಲೋಚನೆಗಳು ಒಂದೇರೀತಿ ಇರುತ್ತವೆನ್ನಲಾಗದು. ಆದರೆ ಮೊನ್ನೆ ವರ್ಲ್ಡ್ಕಪ್ ಸೆಮಿಫೈನಲ್ಸ್ನಲ್ಲಿ ಇಂಡೋ-ಪಾಕ್ ಕ್ರಿಕೆಟ್ ಯುದ್ಧ ನಡೆಯಿತಲ್ಲ, ಅವತ್ತಿನ ದಿನವೇನಾದರೂ ವಿಶ್ವದ ಮೂಲೆಮೂಲೆಯಲ್ಲಿರುವ ಭಾರತೀಯರೆಲ್ಲರ ಎದೆಬಡಿತ ಆಲಿಸುವಂತಿದ್ದಿದ್ದರೆ ಅಲ್ಲಿ ಕೇಳಿಬರುತ್ತಿದ್ದದ್ದು ಒಂದೇ- ಕ್ರಿಕೆಟ್ ಮ್ಯಾಚ್ನ ಮಿಡಿತ; ಭಾರತ ಗೆಲ್ಲಬೇಕೆಂಬ ತುಡಿತ. ಕ್ರಿಕೆಟ್ನ ಮೋಡಿಯೇ ಅಂಥದ್ದು. ಕ್ರಿಕೆಟ್ ಆಡುವುದು ತುಂಬಾ ಮಂದಿಗೆ ಇಷ್ಟ. ಕ್ರಿಕೆಟ್ ನೋಡುವುದು ಅದಕ್ಕಿಂತ ಲಕ್ಷ ಪಟ್ಟು ಹೆಚ್ಚು ಜನರಿಗೆ ಇಷ್ಟ. ನನಗೆ ಇವೆರಡಷ್ಟೇ ಅಲ್ಲದೆ ಇನ್ನೂ ಒಂದು ಇಷ್ಟದ ವಿಷಯವಿದೆ, ಅದೇನೆಂದರೆ ಕ್ರಿಕೆಟ್ ಆಡುವವರಿಗಿಂತಲೂ ಹೆಚ್ಚಾಗಿ ನೋಡುವವರನ್ನು ಗಮನಿಸುವುದು. ಅವರ ಕ್ರಿಕೆಟ್ ಆಸಕ್ತಿ ಅಭಿಮಾನಗಳ ವಿಧವಿಧ ನಮೂನೆಗಳನ್ನು ಆನಂದಿಸುವುದು. ‘ನೋಡುವವರು’ ಎಂದರೆ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುವವರೂ ಹೌದು, ನನ್ನ-ನಿಮ್ಮ ಹಾಗೆ ಟಿವಿಯಲ್ಲಿ ಲೈವ್ ನೋಡುವವರೂ ಹೌದು. ರೇಡಿಯೊ ಕಾಮೆಂಟರಿ ಕೇಳುವವರು, ಪತ್ರಿಕೆಗಳಿಂದ ಕ್ರಿಕೆಟ್ ಸುದ್ದಿ ತಿಳಿಯುವವರೂ ಈ ಗುಂಪಿಗೆ ಬರುತ್ತಾರೆ. ಮಾಡರ್ನ್ ಯುಗದಲ್ಲಿ ಫೇಸ್ಬುಕ್ ಟ್ವಿಟ್ಟರ್ಗಳಲ್ಲಿ ಚಿಲಿಪಿಲಿಗುಟ್ಟುವವರೂ ಸೇರಿಕೊಳ್ಳುತ್ತಾರೆ. ಒಟ್ಟಿನಲ್ಲಿ ‘ಕ್ರಿಕೆಟಾಸಕ್ತರು’ ಅನ್ನಿ. ಕ್ರಿಕೆಟ್ ಸೀಸನ್ನಲ್ಲಿ ಇವರ ಉದ್ಗಾರಗಳು, ವ್ಯಾಖ್ಯಾನಗಳು, ನಂಬಿಕೆ-ನಡವಳಿಕೆಗಳು ಸಖತ್ ಮಜಾ ಇರುತ್ತವೆ. ಇವತ್ತಿನ ಅಂಕಣದಲ್ಲಿ ಅಂತಹ ಕೆಲವು ಸ್ವಾರಸ್ಯಗಳನ್ನು ಸೇರಿಸಿಕೊಂಡಿದ್ದೇನೆ. ಇವು ಅಮೆರಿಕದಲ್ಲಿ ನಾನು ಗಮನಿಸಿದ ಮತ್ತು ವಿವಿಧೆಡೆಗಳಲ್ಲಿರುವ ಸ್ನೇಹಿತರನ್ನು ಸಂಪರ್ಕಿಸಿ ಸಂಗ್ರಹಿಸಿದ ಅಂಶಗಳು. ವರ್ಲ್ಡ್ಕಪ್ ಕ್ರಿಕೆಟ್ ಟೂರ್ನಮೆಂಟನ್ನು ಅಮೆರಿಕದಲ್ಲಿರುವ ಭಾರತೀಯರು ಒಟ್ಟಾರೆಯಾಗಿ ಹೇಗೆ ಆನಂದಿಸಿದ್ದಾರೆ ಎನ್ನುವುದಕ್ಕೆ ಒಂದು ಸಣ್ಣ ಸ್ಯಾಂಪಲ್. ‘ಕ್ರಿಕೆಟ್ ಜ್ವರ’ ಎನ್ನುತ್ತೇವೆ, ಮೊನ್ನೆ ಬುಧವಾರ ಇಲ್ಲಿ ಭಾರತೀಯರು ಮತ್ತು ಪಾಕಿಸ್ತಾನದವರ ಪೈಕಿ ಅನೇಕರಿಗೆ ಒಮ್ಮಿಂದೊಮ್ಮೆಲೇ ಸಾಮೂಹಿಕ ಜ್ವರ ಬಂದಿತ್ತು! ಅವತ್ತು ‘ಜ್ವರ ಬಂದಿದೆ, ಕೆಲಸಕ್ಕೆ ಬರುವುದಕ್ಕಾಗುವುದಿಲ್ಲ’ ಎಂದು ಸುಳ್ಳುಸುಳ್ಳೇ ಸಿಕ್ಲೀವ್ ಘೋಷಿಸಿ ಆಫೀಸಿಗೆ ಹೋಗದೆ ಕ್ರಿಕೆಟ್ ಮ್ಯಾಚ್ ನೋಡಿದವರು ಅದೆಷ್ಟೋ! ವಾಷಿಂಗ್ಟನ್ನ ಒಂದು ಎಫ್.ಎಂ ರೇಡಿಯೊ ಸ್ಟೇಷನ್ನಲ್ಲಿ ಅದು ನ್ಯೂಸ್ ಕೂಡ ಆಗಿತ್ತು. ಒಂದುವೇಳೆ ನಿಜವಾಗಿಯೂ ಜ್ವರವಿದ್ದು ವೈದ್ಯರ ಹತ್ತಿರ ಹೋಗುವೆನೆಂದರೆ ಅವರೂ ರಜೆಹಾಕಿ ಕ್ರಿಕೆಟ್ ಮ್ಯಾಚ್ ನೋಡುತ್ತಿರಬೇಕೇ! ಉದಾಹರಣೆಗೆ ಡಾ.ಗುರುಪ್ರಸಾದ್ ಕಾಗಿನೆಲೆ ಕುಟುಂಬಸಮೇತರಾಗಿ ಪೋರ್ಟರಿಕೊ ದ್ವೀಪಕ್ಕೆ ಪ್ರವಾಸಹೋಗಿದ್ದವರು ಅಲ್ಲಿ ಸಮುದ್ರತೀರದಲ್ಲಿ ಲ್ಯಾಪ್ಟಾಪ್ ಮತ್ತು ವಯರ್ಲೆಸ್ ಇಂಟರ್ನೆಟ್ ಬಳಸಿ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದರು. ಕೆಲವು ಆಫೀಸ್ಗಳಲ್ಲಿ (ಮುಖ್ಯವಾಗಿ ಸಾಫ್ಟ್ವೇರ್ ಕಂಪನಿಗಳಲ್ಲಿ) ಭಾರತೀಯ ಉದ್ಯೋಗಿಗಳೆಲ್ಲ ಸೇರಿ ಕಾನ್ಫರೆನ್ಸ್ ರೂಮ್ಗಳಲ್ಲಿ ರಾಜಾರೋಷವಾಗಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದಾರೆ. ಅಮೆರಿಕನ್ ಬಾಸ್ ಮತ್ತು ಸಹೋದ್ಯೋಗಿಗಳನ್ನೂ ಸೇರಿಸಿಕೊಂಡು ಅವರಿಗೆ ಕ್ರಿಕೆಟ್ ನಿಯಮಗಳನ್ನು ವಿವರಿಸಿ ಅವರೂ ಕ್ರಿಕೆಟ್ ಮ್ಯಾಚ್ ಸವಿಯುವಂತೆ ಮಾಡಿದ್ದಾರೆ. ವಾಷಿಂಗ್ಟನ್ನಲ್ಲಿರುವ ವರ್ಲ್ಡ್ಬ್ಯಾಂಕ್ ಕೇಂದ್ರಕಛೇರಿಯ ಕೆಫೆಟೆರಿಯಾದಲ್ಲೇ ಕ್ರಿಕೆಟ್ ವೀಕ್ಷಣೆಯ ಏರ್ಪಾಡು ಮಾಡಲಾಗಿತ್ತು ಎನ್ನುತ್ತಾರೆ ಅಲ್ಲಿ ಕೆಲಸ ಮಾಡುವ ರಾಮಕೃಷ್ಣ ಭಟ್. ಅಮೆರಿಕದಲ್ಲಿ ವರ್ಲ್ಡ್ಕಪ್ ಕ್ರಿಕೆಟ್ನ ಪ್ರಸಾರಸ್ವಾಮ್ಯ ‘ವಿಲ್ಲೋ ಟಿವಿ’ ಕಂಪನಿಯದು. ಕ್ರಿಕೆಟ್ಗೋಸ್ಕರವಷ್ಟೇ ಅದಕ್ಕೆ ಚಂದಾದಾರರಾಗಬೇಕು. ಆದ್ದರಿಂದ ಸ್ನೇಹಿತರ/ನೆರೆಕೆರೆಯವರ ಪೈಕಿ ಯಾರಾದರೊಬ್ಬರು ಪ್ಯಾಕೇಜ್ ಖರೀದಿಸಿ ಕ್ರಿಕೆಟ್ ವೀಕ್ಷಣೆಯ ಪಾರ್ಟಿಗಳನ್ನು ಏರ್ಪಡಿಸಿದ ನಿದರ್ಶನಗಳೇ ಹೆಚ್ಚು. ಷಿಕಾಗೊದಲ್ಲಿ ಸತೀಶ್ ಗೋಪಿನಾಥ್ ಅದನ್ನೇ ಮಾಡಿದರು. ಜತೆಯಲ್ಲೇ ಒಂದು ವಿನೋದ. ಏನೆಂದರೆ ವಿಲ್ಲೋ ಟಿವಿ ಟ್ರಾನ್ಸ್ಮಿಷನ್ನಲ್ಲಿ ಸುಮಾರು ನಾಲ್ಕೈದು ನಿಮಿಷಗಳ ಡಿಲೇ ಇರುತ್ತದೆ. ಮೊಹಾಲಿಯಲ್ಲಿ ವಿಕೆಟ್ ಪತನವಾದರೂ ಷಿಕಾಗೊದಲ್ಲಿ ಅದು ಪ್ರಸಾರವಾಗುವುದು ಸ್ವಲ್ಪ ಹೊತ್ತಿನ ನಂತರ. ಅದರ ಮೊದಲೇ ಬೆಂಗಳೂರಿನಿಂದ ಸತೀಷ್ ಅವರಣ್ಣ ಸೆಲ್ಫೋನ್ನಲ್ಲಿ ಅಪ್ಡೇಟ್ ಕೊಡುತ್ತಿದ್ದರಂತೆ. ಸತೀಷ್ ಮ್ಯಾಜಿಕ್ ಮಾಡುವವರಂತೆ “ನೋಡಿ ಈಗ ವಿಕೆಟ್ ಬೀಳುತ್ತದೆ” ಎನ್ನುವರು, ಅಷ್ಟೊತ್ತಿಗೆ ವಿಕೆಟ್ ಬೀಳುವುದು, ಅಲ್ಲಿದ್ದ ಮಿತ್ರರಿಗೆಲ್ಲ ಆಶ್ಚರ್ಯ! ಆಮೇಲೆ ವಿಲ್ಲೋ ಟಿವಿಯ ಡಿಲೇ ಮತ್ತು ಸೆಲ್ಫೋನ್ ಸಂದೇಶಗಳ ರಹಸ್ಯ ಬಯಲಾಯಿತೆನ್ನಿ. ಇನ್ನು, ‘ನಂಬಿಕೆ’ಗಳೂ ಸಾಕಷ್ಟು ಕೆಲಸಮಾಡಿವೆ. ಕ್ವಾರ್ಟರ್ಫೈನಲ್ನಲ್ಲಿ ಭಾರತ ಗೆದ್ದ ಮೇಲೆ ಸೆಮಿಫೈನಲ್ನಲ್ಲಿಯೂ ಗೆಲ್ಲುವಂತೆ ಮನೆಯಲ್ಲೇ ವಿಶೇಷ ಪೂಜೆ ಏರ್ಪಡಿಸಿದ್ದರಂತೆ ವರ್ಜೀನಿಯಾದಲ್ಲಿ ಸಂಜಯರಾವ್ ಅವರ ಪಕ್ಕದಮನೆಯ ತಮಿಳರೊಬ್ಬರು. ಆದರೆ ನಾಗಶಂಕರ್ ಮಗಳು ಐದು ವರ್ಷದ ನಿಧಿ, ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಸಪೋರ್ಟ್ ಮಾಡುವವಳು. ಏಕೆಂದರೆ ಅವಳ ಕಿಂಡರ್ಗಾರ್ಟನ್ ಫ್ರೆಂಡ್ ಪಾಕಿಸ್ತಾನದವಳು! ಕ್ಯಾಲಿಫೋರ್ನಿಯಾದಲ್ಲಿ ಗೌತಮ್ ಸುದತ್ತ ಅವರ ಪರಿಚಯದವರೊಬ್ಬರು, ಆಸ್ಟ್ರೇಲಿಯಾ ವಿರುದ್ಧ ಭಾರತ ಗೆದ್ದ ಪಂದ್ಯವನ್ನು ನೋಡುವಾಗ ತೊಟ್ಟಿದ್ದ ಪ್ಯಾಂಟ್-ಶರ್ಟ್ ಮತ್ತು ಒಳಉಡುಪುಗಳನ್ನೇ ತೊಟ್ಟುಕೊಂಡು ಪಾಕಿಸ್ತಾನ ವಿರುದ್ಧದ ಪಂದ್ಯ ವೀಕ್ಷಣೆಗೆ ಆಸೀನರಾಗಿದ್ದರಂತೆ! ಹಾಗೆಯೇ ಪಾಕಿಸ್ತಾನಿ ಸಹೋದ್ಯೋಗಿಯೊಬ್ಬರು ‘ನೋಡಿ, ಇವತ್ತು ನಿಮಗೆಲ್ಲ ಗ್ರೀಫ್ ಕೌನ್ಸೆಲಿಂಗ್ ಉಚಿತವಾಗಿ ಏರ್ಪಾಡು ಮಾಡುತ್ತೇನೆ’ ಎಂದು ಭಾರತೀಯರನ್ನು ಕೆಣಕುತ್ತಿದ್ದವರು ಸೆಮಿಫೈನಲ್ಸ್ ಮ್ಯಾಚ್ ಮುಗಿದಾಗ ‘ಅಯ್ಯೋ ಈಗ ನನಗೇ ಕೌನ್ಸೆಲಿಂಗ್ ಬೇಕಾಯ್ತಲ್ಲ’ ಎಂದು ಮರುಕಪಟ್ಟರಂತೆ. ಕೆಲವು ಇಂಡಿಯನ್ ರೆಸ್ಟೋರೆಂಟ್ಗಳು ‘ಬ್ರೇಕ್ಫಾಸ್ಟ್ ವಿದ್ ಕ್ರಿಕೆಟ್’ ಎಂದು ಒಂದೊಂದು ಮ್ಯಾಚ್ಗೆ ಹತ್ತು ಡಾಲರ್ ಟಿಕೆಟ್ ಇಟ್ಟು ವಿಲ್ಲೋ ಟಿವಿ ಪ್ರದರ್ಶನ ವ್ಯವಸ್ಥೆ ಮಾಡಿದ್ದವು. ನಮ್ಮನೆಗೆ ಹತ್ತಿರದಲ್ಲಿರುವ ‘ಟಚ್ ಇಂಡಿಯನ್ ಕ್ಯುಸಿನ್’ ರೆಸ್ಟೋರೆಂಟ್ನಲ್ಲಿ ಅದೇಥರದ ಏರ್ಪಾಡು. ಪ್ರೊಜೆಕ್ಟರ್ನಿಂದ ದೊಡ್ಡ ಸ್ಕ್ರೀನ್ ಮೇಲೆ, ಥಿಯೇಟರ್ನಲ್ಲಿ ಸಿನೆಮಾ ನೋಡಿದ ಅನುಭವ. ಭಾರತ ಆಡಿದ ಬಹುತೇಕ ಮ್ಯಾಚ್ಗಳನ್ನು ನಾನು ನೋಡಿದ್ದು ಅಲ್ಲಿಯೇ. ಭಾರತ-ಪಾಕಿಸ್ತಾನ ಮ್ಯಾಚ್ನ ದಿನವಂತೂ ಅಲ್ಲಿ ಸೇರಿದ್ದವರಿಗೆಲ್ಲ ಉಚಿತ ಊಟ ಉಪಾಹಾರ, ಉಚಿತ ವೀಕ್ಷಣೆ, ಭಾರತ ಗೆದ್ದ ಸಂತಸದಲ್ಲಿ ಹತ್ತು ಡಾಲರ್ಗಳ ಗಿಫ್ಟ್ಕೂಪನ್! ಸರಿ, ನಾವು ಇಷ್ಟೆಲ್ಲ ಮೋಜುಮಸ್ತಿಗಳಿಂದ ಕ್ರಿಕೆಟ್ ನೋಡುತ್ತಿದ್ದೆವಲ್ಲಾ, ಪ್ರಧಾನಿ ಮನಮೋಹನ ಸಿಂಗ್ಜೀ ಬಗ್ಗೆ ನನಗೆ ನಿಜಕ್ಕೂ ಅತ್ಯಂತ ಕನಿಕರವೆನಿಸಿತು. ಕಾರಣ ಇಷ್ಟೇ. ಮೊಹಾಲಿಯಲ್ಲಿ ಉತ್ಸವಮೂರ್ತಿಯ ಹಾಗೆ ಕುಳಿತಿದ್ದರಲ್ಲಾ ಅವರೇನು ಕ್ರಿಕೆಟ್ ಮ್ಯಾಚ್ ನೋಡ್ತಿದ್ರಾ ಇಲ್ಲಾ ಯಾರಾದರೂ ಗಣ್ಯವ್ಯಕ್ತಿಯ ಅಂತ್ಯಸಂಸ್ಕಾರ ವೀಕ್ಷಿಸ್ತಿದ್ರಾ? ಅವರ ಮುಖಚರ್ಯೆಯಿಂದಂತೂ ಖಂಡಿತ ಗೊತ್ತಾಗ್ತಿರ್ಲಿಲ್ಲಪ್ಪಾ! ಅಥವಾ, ‘ಮೇಡಂ’ ಕೂಡ ಅಲ್ಲೇ ಇದ್ದರು ಎಂಬ ಕಾರಣವೂ ಇರಬಹುದು, ತುಟಿಪಿಟಕ್ಕೆನ್ನದೆ ಮ್ಯಾಚ್ ನೋಡಿದರು. ಟಿವಿ ಕಾಮೆಂಟೇಟರ್ಸ್ ಸಹ ಅದನ್ನೇ ಹೇಳುತ್ತಿದ್ದರು. ಗುಂಡುನಿರೋಧಕ ಗಾಜಿನ ಪೆಟ್ಟಿಗೆಯೊಳಗೆ ಸದ್ದುಗದ್ದಲವಿಲ್ಲ. ಬೌಂಡರಿ-ಸಿಕ್ಸರ್ ಹೊಡೆದಾಗಿನ ಸಂಭ್ರಮದ ವಾತಾವರಣವಿಲ್ಲ. ಪಕ್ಕದಲ್ಲಿ ಪಾಕಿಸ್ತಾನದ ಪ್ರಧಾನಿ ಕುಳಿತಿದ್ದರಾದ್ದರಿಂದ ಶಿಷ್ಟಾಚಾರ ಬಿಡುವಂತಿಲ್ಲ. ತಾನು ನೀಲಿ ಟರ್ಬನ್ ಧರಿಸಿದ್ದರಿಂದಲೇ ಭಾರತ ಜಯಗಳಿಸಿತು ಎಂದು ಹುಸಿನಗೆ ಬೀರುವಂತಿಲ್ಲ. ಛೇ! ಇದೂ ಒಂದು ಕ್ರಿಕೆಟ್ ನೋಟದ ಪರಿಯೇ? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Mar 26, 2011
Preventing Dementia
Saturday Mar 26, 2011
Saturday Mar 26, 2011
ದಿನಾಂಕ 27 ಮಾರ್ಚ್ 2011ರ ಸಂಚಿಕೆ...
ಅರಳುಮರುಳನ್ನು ಸರಳವಾಗಿ ಉರುಳಿಸಬಹುದು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] ಅರವತ್ತರ ಅರಳುಮರುಳು ಎನ್ನುತ್ತದೆ ಪ್ರಸಿದ್ಧ ನುಡಿಗಟ್ಟು. ಹಾಗಂತ ಎಲ್ಲರಿಗೂ ಅದು ಅನ್ವಯಿಸುತ್ತದೆ ಎಂದೇನಿಲ್ಲ. ಕೆಲವರು ಅರವತ್ತಾದರೂ ಶಾರೀರಿಕವಾಗಿ, ಮಾನಸಿಕವಾಗಿ ನವತರುಣರಂತೆ ಲವಲವಿಕೆಯಿಂದ ಇರುತ್ತಾರೆ. ಅವರಲ್ಲಿ ಜೀವನೋತ್ಸಾಹ ತುಂಬಿ ತುಳುಕುತ್ತಿರುತ್ತದೆ. ಮತ್ತೆ ಕೆಲವರಿಗೆ ಅರವತ್ತಾಗುವುದಕ್ಕೆ ಮೊದಲೇ ವೃದ್ಧಾಪ್ಯ ಆವರಿಸುವುದೂ ಇದೆ. ಆದರೂ ಒಟ್ಟಾರೆಯಾಗಿ ವ್ಯಕ್ತಿಯ ಜೀವನದಲ್ಲಿ ಅರವತ್ತು ವಯಸ್ಸೆಂದರೆ ಒಂದು ಹಂತ. ಬದುಕಿನ ಸಂಕ್ರಮಣ ಘಟ್ಟ. ಅದು ನಿವೃತ್ತಿಯ ವಯಸ್ಸೂ ಆಗಿರುವುದು, ಅಥವಾ ಒಂದು ಸಂವತ್ಸರಚಕ್ರ ಅಷ್ಟೊತ್ತಿಗೆ ಮುಗಿಯುವುದು ಅಂಥದೊಂದು ಸಾರ್ವತ್ರಿಕ ದೃಷ್ಟಿಕೋನಕ್ಕೆ ಕಾರಣವಿರಬಹುದು. ಸರಿಯಾಗಿ ಅರವತ್ತಕ್ಕೇ ಅಂತಲ್ಲದಿದ್ದರೂ ಅರಳುಮರುಳಿನ ಲಕ್ಷಣಗಳು ಅಷ್ಟಿಷ್ಟಾದರೂ ಕಂಡುಬರುವುದು ಸಹಜವೇ. ಕಾರಣವೇನೆಂದರೆ ವಯಸ್ಸಾದಂತೆಲ್ಲ ನಮ್ಮ ಮೆದುಳಿನ ಕ್ರಿಯಾಶೀಲತೆ ಕ್ಷೀಣಿಸುತ್ತದೆ. ಕೆಲವರಲ್ಲಿ ಅಲ್ಪಸ್ವಲ್ಪ, ಇನ್ನುಳಿದವರಲ್ಲಿ ತುಸು ಹೆಚ್ಚು. ಮತ್ತೂ ಅಧಿಕವಾದರೆ ಅದು ಡಿಮೆನ್ಷಾ (Dementia) ಅಂತಲೂ, ತೀರಾ ಗಂಭೀರ ಪರಿಸ್ಥಿತಿಯಾದರೆ ಆಲ್ಝೈಮರ್ಸ್ (Alzheimer's) ಕಾಯಿಲೆ ಎಂದೂ ಗುರುತಿಸಲ್ಪಡುತ್ತದೆ. ಹೆಚ್ಚಾಗಿ ‘ಬೆಂಕಿ ಬಿದ್ದಮೇಲೆ ಬಾವಿ ತೋಡುವ’ ಜಾಯಮಾನ ನಮ್ಮೆಲ್ಲರದು. ಆದರೆ ಡಿಮೆನ್ಷಾ, ಆಲ್ಝೈಮರ್ಸ್ ಮುಂತಾದ ಕಾಯಿಲೆಗಳ ವಿಷಯದಲ್ಲಿ ಹಾಗೆ ಮಾಡುವುದು ಸರ್ವಥಾ ಸಾಧುವಲ್ಲ ಎನ್ನುತ್ತಾರೆ ವಿಜ್ಞಾನಿಗಳು ಮತ್ತು ವೈದ್ಯರು. ಮೂವತ್ತು ಅಥವಾ ನಲ್ವತ್ತರ ವಯಸ್ಸಿನಿಂದಲೇ ಸರಳವಾದ ಕೆಲವು ಜೀವನವಿಧಾನಗಳನ್ನು ಅಳವಡಿಸಿಕೊಂಡರೆ ಮೆದುಳಿನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಕಾಪಾಡಿಕೊಳ್ಳಬಹುದಂತೆ. ಅಮೆರಿಕದ ಪಿಟ್ಸ್ಬರ್ಗ್ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ನ್ಯೂರೊಸೈಕಾಲಜಿಸ್ಟ್ ಆಗಿರುವ ಡಾ. ಪೌಲ್ ನಸ್ಬೌಮ್ ಹೇಳುವಂತೆ ಇಪ್ಪತ್ತು ಅಂಶಗಳನ್ನು ಜೀವನದಲ್ಲಿ ಆದಷ್ಟು ಬೇಗ ಅಳವಡಿಸಿಕೊಂಡರೆ ಅರಳುಮರುಳನ್ನಷ್ಟೇ ಅಲ್ಲ, ಡಿಮೆನ್ಷಾದಂಥ ಕಾಯಿಲೆಗಳನ್ನೂ ಸರಳವಾಗಿ ಉರುಳಿಸಿಬಿಡಬಹುದಂತೆ! ಯಾವುವು ಆ ಇಪ್ಪತ್ತಂಶಗಳು? ಡಾ.ನಸ್ಬೌಮ್ ಅವರದೇ ಮಾತುಗಳಲ್ಲಿ ತಿಳಿದುಕೊಳ್ಳೋಣ (ವೈಯಕ್ತಿಕವಾಗಿ ನಾನು “ಹಾಗೆ ಮಾಡಿ ಹೀಗೆ ಮಾಡಿ... ಅದನ್ನು ಮಾಡಿ, ಇದನ್ನು ಮಾಡಬೇಡಿ...” ರೀತಿಯ ಆದೇಶ/ಉಪದೇಶ ಧಾಟಿಯಲ್ಲಿ ಅಂಕಣ ಬರೆಯುವುದನ್ನು ಇಷ್ಟಪಡುವುದಿಲ್ಲ. ಆದರೆ ಇವು ತಜ್ಞರ ಸಲಹೆಯ ಮಾತುಗಳಾದ್ದರಿಂದ ಪರಿಣಾಮಕಾರಿಯಾಗಿರಬೇಕು ಎಂಬ ದೃಷ್ಟಿಯಿಂದ ಆ ಧಾಟಿಯನ್ನು ಉಳಿಸಿಕೊಂಡಿದ್ದೇನೆ). 1. ಸಂಘಸಂಸ್ಥೆಗಳಲ್ಲಿ ಸ್ವಯಂಸೇವಕರಾಗಿ ಸೇರಿಕೊಳ್ಳಿ. ಈಗಿನಿಂದಲೇ ಸ್ವಯಂಸೇವಕರಾಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಮುಂದೆ ನಿವೃತ್ತಿಯಾದಾಗ ನಿಷ್ಪ್ರಯೋಜಕ ವ್ಯಕ್ತಿ ಎಂದೆನಿಸಿಕೊಳ್ಳುವುದು ತಪ್ಪುತ್ತದೆ. 2. ಒಂದೆರಡು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮೆದುಳನ್ನು ಚುರುಕಾಗಿಟ್ಟುಕೊಳ್ಳುವುದಕ್ಕೆ ಹವ್ಯಾಸಗಳು ತುಂಬಾ ನೆರವಾಗುತ್ತವೆ. 3. ದಿನಕ್ಕೆ ಒಂದಿಷ್ಟು ನಿಮಿಷಗಳವರೆಗಾದರೂ ಸರಿ, ನಿಮ್ಮ ಎಡಗೈಯಿಂದ (ನೀವು ಮೂಲತಃ ಎಡಚರಾದರೆ ಬಲಗೈಯಿಂದ) ಬರೆಯುವ ಅಭ್ಯಾಸ ಶುರುಹಚ್ಚಿ. ಇದರಿಂದ ನಿಮ್ಮ ಮೆದುಳಿನ ಉಳಿದರ್ಧ ಭಾಗದ ಕೋಶಗಳು ಜಾಗ್ರತವಾಗುವುದಕ್ಕೆ ಅನುಕೂಲವಾಗುತ್ತದೆ. 4. ಸಾಧ್ಯವಿದ್ದರೆ ಯಾವುದಾದರೂ ಡ್ಯಾನ್ಸ್ ತರಗತಿಗಳಿಗೆ ಸೇರಿಕೊಳ್ಳಿ. ಡ್ಯಾನ್ಸ್ನಿಂದ ದೈಹಿಕ ವ್ಯಾಯಾಮವೂ ಆಗುತ್ತದೆ, ಮೆದುಳಿಗೂ ಕೆಲಸ ಸಿಗುತ್ತದೆ. ಐನೂರು ಮಂದಿಯನ್ನೊಳಗೊಂಡಿದ್ದ ಒಂದು ಅಧ್ಯಯನದಲ್ಲಿ, ವಾರಕ್ಕೆ ಮೂರು ಅಥವಾ ನಾಲ್ಕು ಸಲ ಡ್ಯಾನ್ಸ್ ಮಾಡುವವರಿಗೆ ಡಿಮೆನ್ಷಾ ರೋಗ ತಗಲುವ ಸಾಧ್ಯತೆಯು ಉಳಿದವರಿಗಿಂತ 75 ಶೇಕಡಾದಷ್ಟು ಕಡಿಮೆ ಎಂದು ಕಂಡುಬಂದಿದೆ. 5. ಹೂತೋಟ ಬೆಳೆಸುವುದು (ಗಾರ್ಡನಿಂಗ್) ಒಂದು ಒಳ್ಳೆಯ ಹವ್ಯಾಸ. ಇದು ದಣಿವನ್ನು ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವುದಷ್ಟೇ ಅಲ್ಲ, ಹೂಗಿಡಗಳ ಪಾತಿಗಳನ್ನು ಹೇಗೆ ವಿನ್ಯಾಸಗೊಳಿಸಬೇಕು ಅಂತೆಲ್ಲ ಮೆದುಳಿಗೂ ಕೆಲಸ ಇರುವುದರಿಂದ ತುಂಬ ಸಹಕಾರಿ. ನ್ಯೂಜಿಲೇಂಡ್ನಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಗಾರ್ಡನಿಂಗ್ ಅಭ್ಯಾಸವುಳ್ಳವರಿಗೆ ಡಿಮೆನ್ಷಾ ಬರುವ ಸಂಭವನೀಯತೆ ಕಡಿಮೆ. 6. ದಿನಕ್ಕೆ ಹತ್ತುಸಾವಿರ ಹೆಜ್ಜೆಗಳಾದರೂ ನಡೆಯಿರಿ. ಇದರಿಂದ ಮೆದುಳಿಗೆ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಡಿಮೆನ್ಷಾ ರಿಸ್ಕ್ ಕಡಿಮೆಯಾಗುತ್ತದೆ. 7. ಪ್ರತಿದಿನವೂ ಸ್ವಲ್ಪ ಹೊತ್ತನ್ನು ಓದು ಮತ್ತು ಬರಹಕ್ಕೆ ಮೀಸಲಾಗಿಡಿ. ಓದುವ ಕ್ರಿಯೆಯಲ್ಲಿ ಮೆದುಳಿಗೆ ಸಂಸ್ಕರಣ ಮತ್ತು ಸಂಗ್ರಹಣೆಯ ಕೆಲಸವಾಗುವುದರಿಂದ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಬರವಣಿಗೆಯೂ ಅಷ್ಟೇ. ಕಾಪಿಬರೆಯುವಂತೆ ಬರೆಯುವುದಕ್ಕಿಂತ ಯೋಚಿಸಿ ಬರೆದರೆ ಮತ್ತೂ ಒಳ್ಳೆಯದು. 8. ಹೆಣಿಗೆ (knitting) ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಅದರಲ್ಲಿ ಎರಡೂ ಕೈಗಳಿಗೆ ಕೆಲಸವಾದ್ದರಿಂದ ಮೆದುಳಿನ ಎರಡೂ ಭಾಗಗಳು ಜಾಗ್ರತವಾಗುತ್ತವೆ. ಹೆಣಿಗೆ ಅಥವಾ ಕಸೂತಿಯಿಂದಾದ ರಚನೆಗಳು ಮನಸ್ಸಿಗೆ ಸಂತೋಷವನ್ನೂ ಕೊಡುತ್ತವೆ. 9. ಹೊಸ ಭಾಷೆಯೊಂದನ್ನು ಕಲಿತುಕೊಳ್ಳಿ. ನಿಮ್ಮ ಭಾಷೆಗೂ ಅದಕ್ಕೂ ಹೋಲಿಕೆ ವ್ಯತ್ಯಾಸಗಳನ್ನು ಗುರುತಿಸುವ ಕೆಲಸ ಮೆದುಳಿಗೆ ಒಳ್ಳೆಯದಾಗಿ ಪರಿಣಮಿಸುತ್ತದೆ. ಸಂಜ್ಞೆಗಳ ಭಾಷೆ (sign language) ಕಲಿಕೆ ಮತ್ತಷ್ಟು ಒಳ್ಳೆಯದು. ಹೆಚ್ಚುಹೆಚ್ಚು ಭಾಷೆಗಳನ್ನು ಕಲಿತಷ್ಟೂ ವ್ಯಕ್ತಿಯ ಐ.ಕ್ಯೂ ಹೆಚ್ಚುತ್ತದೆಯೆಂದು ತಿಳಿದುಬಂದಿದೆ. 10. ಚೆಸ್, ಮೊನೊಪಾಲಿ, ಸ್ಕ್ರಾಬಲ್ನಂಥ ಬೋರ್ಡ್ಗೇಮ್ಸ್ ಆಡಿ. ಇದರಿಂದ ಮೆದುಳಿಗೂ ಕೆಲಸ, ಇನ್ನೊಬ್ಬರ ಒಡನಾಟ ಸಿಕ್ಕಿದಂತೆಯೂ ಆಗುತ್ತದೆ. 11. ಯಾವುದಾದರೂ ಹೊಸ ಕೋರ್ಸ್ ಅಥವಾ ತರಬೇತಿ ಪಡೆದುಕೊಳ್ಳಿ. ಕಲಿಕೆಯಿಂದ ಮೆದುಳಿನಲ್ಲಿ ಚೋದಕಗಳ ಸ್ರಾವ ಹೆಚ್ಚುತ್ತದೆ; ಮತ್ತೆ, ಶಿಕ್ಷಣವೆಂದ ಮೇಲೆ ಜೀವನದಲ್ಲಿ ಒಂದಲ್ಲ ಒಂದು ವೇಳೆಯಲ್ಲಿ ಉಪಯೋಗಕ್ಕೂ ಬರುತ್ತದೆ. 12. ಸಂಗೀತ ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಮೆಲುದನಿಯ ಶಾಸ್ತ್ರೀಯ ಸಂಗೀತ ಮತ್ತೂ ಚೆನ್ನ. ಮೆದುಳಿನ ಎರಡೂ ಭಾಗಗಳಿಗೆ ತಾಳಮೇಳ ಮೂಡಿಸುವುದಕ್ಕೆ ಸಂಗೀತಶ್ರವಣ ತುಂಬ ಒಳ್ಳೆಯದು. 13. ಯಾವುದಾದರೂ ಸಂಗೀತವಾದ್ಯ ನುಡಿಸುವುದನ್ನು ಕಲಿಯಿರಿ. ಬಾಲ್ಯದಲ್ಲಾದಷ್ಟು ಸುಲಭವೆನಿಸದಿದ್ದರೂ ಮೆದುಳಿನ ಜಡತ್ವ ನಿವಾರಣೆಗೆ ಒಳ್ಳೆಯ ಉಪಾಯ. 14. ಪ್ರವಾಸ ಮಾಡಿ. ಅದೇನೂ ದೂರದ ಊರು ಅಥವಾ ವಿದೇಶಕ್ಕೇ ಆಗಬೇಕಂತಿಲ್ಲ, ನಿಮ್ಮೂರಿನ ಆಸುಪಾಸಿನಲ್ಲೇ ಹೊಸಹೊಸ ಜಾಗಗಳಿಗೆ ಭೇಟಿಕೊಟ್ಟರೂ ಆಗುತ್ತದೆ. ಅಂತೂ ಮೆದುಳಿಗೆ ಕೆಲಸ ಇರಬೇಕು. ಲಂಡನ್ನ ಟ್ಯಾಕ್ಸಿ ಡ್ರೈವರ್ಗಳ ಮೆದುಳು ಹೆಚ್ಚು ಆರೋಗ್ಯಕರವಾಗಿರುವುದು ಒಂದು ಅಧ್ಯಯನದಿಂದ ತಿಳಿದುಬಂದಿದೆ. ಬೇರೆಬೇರೆ ಜಾಗಗಳ ಮಾಹಿತಿಯನ್ನು ಸಂಗ್ರಹಿಸಿ ಉಪಯೋಗಿಸುವ ಕೆಲಸ ನಿರಂತರ ನಡೆಯುವುದರಿಂದ ಅದು ಅವರ ಮೆದುಳನ್ನು ಸುಪರ್ದಿಯಲ್ಲಿಟ್ಟಿರುತ್ತದೆ. 15. ದೈನಂದಿನ ಪ್ರಾರ್ಥನೆಗೆ ಸ್ವಲ್ಪ ಸಮಯವನ್ನಾದರೂ ಮೀಸಲಿಡಿ. ಮನಸ್ಸಿಗೆ ಶಾಂತಿ ಮತ್ತು ಸಮತೋಲನ, ತನ್ಮೂಲಕ ಆನಂದ ಮತ್ತು ಆರೋಗ್ಯಭಾಗ್ಯ. ಇದಕ್ಕೆ ಪ್ರಾರ್ಥನೆಯಂಥ ಸುಲಭಮಾರ್ಗ ಬೇರೆ ಇಲ್ಲ. 16. ಧ್ಯಾನ (ಮೆಡಿಟೇಷನ್) ಸಹ ಅತ್ಯಗತ್ಯ. ಪ್ರಾಪಂಚಿಕ ಜಂಜಡಗಳಿಂದ ಮನಸ್ಸಿಗೆ ಕಿಂಚಿತ್ತಾದರೂ ಮುಕ್ತಿ ಸಿಗುತ್ತದೆ. 17. ಯಥಾಯೋಗ್ಯ ಪ್ರಮಾಣದಲ್ಲಿ ನಿದ್ದೆ ಮಾಡಿ. ನಿದ್ರಾಹೀನತೆಯು ಡಿಮೆನ್ಷಾ ಸೇರಿದಂತೆ ಹಲವು ರೋಗಗಳ ಕಾರಣವೂ ಹೌದು ಲಕ್ಷಣವೂ ಹೌದು. 18. ಬಾದಾಮಿ ಮತ್ತು ಅಕ್ರೂಟ್ನಂಥ ಪೌಷ್ಟಿಕ ಬೀಜಗಳ ಸೇವನೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಮೀನು ಮತ್ತಿತರ ಸಾಗರೋತ್ಪನ್ನಗಳ ಸೇವನೆಯೂ ಮೆದುಳನ್ನು ಗಟ್ಟಿಮುಟ್ಟಾಗಿ ಇಡುತ್ತದೆ. 19. ಹಣ್ಣು-ತರಕಾರಿಗಳನ್ನು ಯಥೇಚ್ಛ ಸೇವಿಸಿ. ಇದರಿಂದ ಮೆದುಳಿನ ಕೋಶಗಳು ಸವೆಯುವುದು ಮತ್ತು ನಾಶವಾಗುವುದು ಕಡಿಮೆಯಾಗುತ್ತದೆ. 20. ದಿನದಲ್ಲಿ ಒಂದುಹೊತ್ತಾದರೂ ಮನೆಮಂದಿಯೊಟ್ಟಿಗೆ ಅಥವಾ ಸ್ನೇಹಿತರ ಒಟ್ಟಿಗೆ ಸೇರಿ ಊಟ ಮಾಡಿ. ಇದರಿಂದ ನೀವು ಸಾವಕಾಶವಾಗಿ, ಪರಸ್ಪರ ಆತ್ಮೀಯ ಭಾವನೆಯಲ್ಲಿ, ಆರೋಗ್ಯಕರವಾಗಿ ಉಣ್ಣುವುದು ಸಾಧ್ಯವಾಗುತ್ತದೆ. ಮೆದುಳು ಲವಲವಿಕೆಯಿಂದ ಇರುವಂತಾಗುತ್ತದೆ. ಡಾ. ನಸ್ಬೌಮ್ ಉಪದೇಶದ ಇವಿಷ್ಟೂ ಸೂತ್ರಗಳು ಸುಲಭವಾಗಿಯೇ ಇವೆ ಅಂತನಿಸುವುದಿಲ್ಲವೇ? ಇವುಗಳನ್ನು ಪಾಲಿಸಿದರೆ ಆಗುವುದಿದ್ದರೆ ಏನಾದರೂ ಒಳಿತೇ ಹೊರತು ಕೆಟ್ಟದೇನೂ ಅಲ್ಲ. ಅಂದಮೇಲೆ ಅಳವಡಿಸಿಕೊಳ್ಳುವುದಕ್ಕೆ ಹಿಂದೆಮುಂದೆ ನೋಡಬೇಕಾದ್ದಿಲ್ಲ. ಇಪ್ಪತ್ತರಲ್ಲಿ ಹತ್ತನ್ನಾದರೂ ಇವತ್ತಿನಿಂದಲೇ ಶುರುಹಚ್ಚಿಕೊಳ್ಳೋಣ. ಏನಂತೀರಿ? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125