Episodes
Saturday Feb 25, 2012
Global Gumma
Saturday Feb 25, 2012
Saturday Feb 25, 2012
ದಿನಾಂಕ 26 ಫೆಬ್ರವರಿ 2012ರ ಸಂಚಿಕೆ...
ಗುಮ್ಮನೊಬ್ಬ ನಾಮ ಹಲವು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಭಗವಂತ ಸರ್ವಾಂತರ್ಯಾಮಿ, ಸರ್ವಶಕ್ತ, ಸರ್ವರೂಪಧಾರಿ ಅಂತೆಲ್ಲ ನಮ್ಮ ನಂಬಿಕೆ. ಅವರವರ ಭಾವಕ್ಕೆ ಅವರವರ ಭಕುತಿಗೆ ತೆರನಾಗಿ ಇರುವವನು ಎಂದೂ ಹೇಳುತ್ತೇವೆ. ಆದರೆ ಆ ಸರ್ವಶಕ್ತ ಭಗವಂತನನ್ನೂ ಹದ್ದುಬಸ್ತಿನಲ್ಲಿ ಇಡುವುದಕ್ಕೆ, ಹೆದರಿಸಿ ಸುಮ್ಮನಾಗಿಸುವುದಕ್ಕೆ ಯಶೋದೆ ಅವಲಂಬಿಸಿದ್ದು ಗುಮ್ಮನನ್ನು. ಅಂದರೆ ಭಗವಂತನಿಗಿಂತಲೂ ಗುಮ್ಮ ಮಿಗಿಲಾದವನು ಅಂತಾಯ್ತು! ಬೇಡಾ, ಭಗವಂತನಿಗಿಂತ ಗುಮ್ಮ ಮೇಲು ಎಂದು ವಾದಿಸಿ ಗುಮ್ಮನನ್ನು ಅಟ್ಟಕ್ಕೇರಿಸುವುದು ಸರಿಯಲ್ಲ. ಆದರೂ ಕೆಲವು ಗುಣಲಕ್ಷಣಗಳಲ್ಲಿ ಭಗವಂತನಿಗೂ ಗುಮ್ಮನಿಗೂ ಏಕ್ದಂ ಹೋಲಿಕೆ ಇದೆಯೆಂದರೆ ನೀವೂ ಒಪ್ಪುತ್ತೀರಿ. ಬೇಕಿದ್ದರೆ ಸುಮ್ಮನೆ ಒಮ್ಮೆ ಯೋಚಿಸಿಕೊಳ್ಳಿ: ಒಂದನೆಯದಾಗಿ, ಗುಮ್ಮ ಇದ್ದಾನೆ ಎಂದು ಎಲ್ಲರೂ ನಂಬುತ್ತಾರೆ ಹೇಳುತ್ತಾರೆ, ಆದರೆ ನಿಜಕ್ಕೂ ಅವನನ್ನು ನೋಡಿದವರಿಲ್ಲ. ಎರಡನೆಯದಾಗಿ, ಭಕ್ತರ ಕರೆಗೆ ಭಗವಂತ ಹೇಗೆ ತತ್ಕ್ಷಣ ಒಲಿದುಬರುತ್ತಾನೋ ಗುಮ್ಮನೂ ಅಷ್ಟೇ- ಅಮ್ಮಂದಿರು ಆರ್ಡರ್ ಮಾಡಿದಾಗ ತತ್ಕ್ಷಣ ಓಡೋಡಿ ಬರಬಲ್ಲ. ಇಬ್ಬರದೂ ಪವರ್ಫುಲ್ ವ್ಯಕ್ತಿತ್ವ, ಆದರೂ ಏಕವಚನದಿಂದ ಕರೆಸಿಕೊಳ್ಳುವಷ್ಟು ಸಲುಗೆ. ಇನ್ನೂ ಒಂದು ಹೋಲಿಕೆಯೆಂದರೆ, ಭಗವಂತನನ್ನು ನಾವು ಬೇರೆಬೇರೆ ಹೆಸರುಗಳಿಂದ ಕರೆಯುವಂತೆ ಗುಮ್ಮನನ್ನೂ ಪ್ರಪಂಚದ ಬೇರೆಬೇರೆ ಜನಸಮುದಾಯಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯುತ್ತಾರೆ. ದೇವನೊಬ್ಬ ನಾಮ ಹಲವು ಇದ್ದಂತೆಯೇ ಗುಮ್ಮನೊಬ್ಬ ನಾಮ ಹಲವು. ಗುಮ್ಮನ ಜಗದ್ವ್ಯಾಪಿತನದ ಬಗ್ಗೆ ನನಗೆ ಹೇಗೆ ಕುತೂಹಲ ಬಂತೆಂಬುದನ್ನೂ ಹೇಳುತ್ತೇನೆ. ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರ ಉಪನ್ಯಾಸಮಾಲಿಕೆ ಕಳೆದ ಕೆಲ ತಿಂಗಳುಗಳಿಂದ ಅಮೆರಿಕದ ವಿವಿಧೆಡೆಗಳಲ್ಲಿ ನಡೆಯುತ್ತಿದೆ. ನಮ್ಮ ವಾಷಿಂಗ್ಟನ್ ನಗರದಲ್ಲೂ ಭಾಗವತ ಸಪ್ತಾಹ ಏರ್ಪಾಡಾಗಿತ್ತು. ವಿದ್ಯಾವಾಚಸ್ಪತಿ ಅರಳುಮಲ್ಲಿಗೆಯವರ ಅರಳುಹುರಿದಂಥ ಮಾತುಗಳನ್ನು ಕೇಳುವ ಅವಕಾಶ ನಮಗೆಲ್ಲ. ಒಂದುದಿನ ಪ್ರವಚನದಲ್ಲಿ ಅವರು ಒಂದು ಅದ್ಭುತವಾದ ಮಾತನ್ನು ಹೇಳಿದ್ದರು: “ಜಗತ್ತಿನಲ್ಲಿ ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ (ಹೆಣ್ಣಿರಲಿ ಗಂಡಿರಲಿ) ಒಂದಲ್ಲಒಂದು ಕ್ಷಣದಲ್ಲಿ ಕೃಷ್ಣನನ್ನು ಕಾಣುತ್ತಾಳೆ!” ಇದು ಮೇಲ್ನೋಟಕ್ಕೆ ಮಾತಿನ ಚಂದಕ್ಕೆಂದು ಹೇಳಿದ್ದೆನಿಸಬಹುದು, ಆದರೆ ತಾಯಿಯೆನಿಸಿಕೊಂಡ ಯಾರೇ ಆದರೂ ಇದನ್ನು ಖಂಡಿತ ಒಪ್ಪುತ್ತಾರೆ. ಮಾತ್ರವಲ್ಲ ರೋಮಾಂಚನಗೊಳ್ಳುತ್ತಾರೆ. ಇಲ್ಲಿ ಕೃಷ್ಣ ಎಂದರೆ ಭಗವಂತ ಎಂದು ವಿಶಾಲ ಅರ್ಥ ಮಾಡಿಕೊಂಡರೆ ಜಗತ್ತಿನಲ್ಲಿ ಎಲ್ಲ ತಾಯಂದಿರದೂ ಅದೇ ಅನುಭವ. ಪ್ರವಚನ ಕೇಳುತ್ತ ನನ್ನ ಮನಸ್ಸಿಗೆ ಹೊಳೆದದ್ದಿದು- ಸರಿ, ಪ್ರತಿಯೊಬ್ಬ ತಾಯಿಯೂ ತನ್ನ ಮಗುವಿನಲ್ಲಿ ಕೃಷ್ಣನನ್ನು ಕಾಣುತ್ತಾಳೆ; ಅಂದರೆ, ಮಗು ಕೃಷ್ಣನಂತೆಯೇ ಅಸಾಧ್ಯ ಪೋಕ್ರಿ ಮಾಡಿದಾಗ ಗುಮ್ಮನನ್ನೂ ಕರೆಯುತ್ತಾಳೆ ಅಂತಾಯ್ತು. ಅಂದಮೇಲೆ ಜಗತ್ತಿನಲ್ಲಿ ಎಲ್ಲ ತಾಯಂದಿರಿಗೂ ಗುಮ್ಮ ಗೊತ್ತು! ಹೇಗಿರುತ್ತಾನೆ ಆ ಗ್ಲೋಬಲ್ ಗುಮ್ಮ? ನೀವು ನಂಬುತ್ತೀರೋ ಇಲ್ಲವೋ ಗುಮ್ಮ ಎಂಬ ಕಲ್ಪನೆ ಜಗತ್ತಿನ ಎಲ್ಲಕಡೆಯೂ ಇದೆ. ನಮ್ಮ ಕನ್ನಡ ನಾಡಿನಲ್ಲಂತೂ ಶತಮಾನಗಳ ಹಿಂದೆಯೇ ದಾಸರು ‘ಗುಮ್ಮನ ಕರೆಯದಿರೆ ಅಮ್ಮಾ ನೀನು...’ ಎಂದು ಹಾಡಿರುವುದರಿಂದ ಗುಮ್ಮ ಅನಾದಿಕಾಲದಿಂದಲೂ ಇದ್ದಾನೆ. ಮಗು ಹೇಳಿದ್ಮಾತು ಕೇಳೋದಿಲ್ಲ, ಸರಿಯಾಗಿ ಊಟ ಮಾಡೋದಿಲ್ಲ, ಆಡಲಿಕ್ಕೆ ಹೋದರೆ ಕತ್ತಲಾದ ಮೇಲೂ ಮನೆಗೆ ಬರುವುದಿಲ್ಲ, ರಾತ್ರಿ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡೋದಿಲ್ಲ ಮುಂತಾದ ಎಲ್ಲ ಸಮಸ್ಯೆಗಳಿಗೂ ರಾಮಬಾಣವಾಗಿ ಅಮ್ಮಂದಿರಿಗೆ ಗುಮ್ಮ ನೆರವಾಗಿದ್ದಾನೆ. ಕರ್ನಾಟಕದ ಕೆಲವೆಡೆ ಈತ ‘ಗೊಗ್ಗಯ್ಯ’ ಎಂಬ ಹೆಸರಿನಿಂದಲೂ ಗುರುತಿಸಿಕೊಳ್ಳುತ್ತಾನೆ. ದಾಸರು ಒಂದು ಕೀರ್ತನೆಯಲ್ಲಿ (‘ಇವನ ಪಿಡಿದುಕೊಂಡು ಹೋಗೆಲೋ ಜೋಗಿ ಇವ ನಮ್ಮಮಾತು ಕೇಳದೆ ಪುಂಡನಾದ...’) ‘ಜೋಗಿ’ಯನ್ನೂ ಗುಮ್ಮನಿಗೆ ಸಮಾನಾರ್ಥಕವಾಗಿ ಬಳಸಿದ್ದಾರೆ. ತಮಿಳುನಾಡಿನಲ್ಲಿ ಗುಮ್ಮನನ್ನು ‘ಪೂಚ್ಚಾಂಡಿ’ ಎನ್ನುತ್ತಾರಂತೆ. ತೆಲುಗಿನಲ್ಲಿ ಅವನು ‘ಬೂಚಿವಾಡು’ ಆಗಿದ್ದಾನೆ. ಮಲಯಾಳಂನಲ್ಲಿ ‘ಕೊಕ್ಕಾಯಿ’. ಬಹುಶಃ ಕನ್ನಡದ ಗೊಗ್ಗಯ್ಯನ ದಾಯಾದಿ ಇರಬೇಕು. ಉತ್ತರಭಾರತದಲ್ಲಿ ಚಿಕ್ಕ ಮಕ್ಕಳನ್ನು “ನೋಡು, ನಿನ್ನನ್ನು ಬೋರಿಬಾಬಾ ತಕ್ಕೊಂಡುಹೋಗ್ತಾನೆ!” ಎಂದು ಗದರಿಸುತ್ತಾರಂತೆ. ಬೋರಿ ಎಂದರೆ ಗೋಣಿಚೀಲ. ಶ್ರೀಲಂಕಾದಲ್ಲಿಯೂ ‘ಗೋಣಿ ಬಿಲ್ಲ’ ಎಂದೇ ಗುಮ್ಮನ ಹೆಸರು. ಒಟ್ಟಾರೆಯಾಗಿ ‘ಗೋಣಿಚೀಲ ಹಿಡಕೊಂಡು ಅಡ್ಡಾಡುವ ಕುರೂಪಿ ಮುದುಕ’ - ಇದು ಮುಕ್ಕಾಲುಪಾಲು ಜಗತ್ತಿನಲ್ಲಿ ಗುಮ್ಮನ ಚಹರೆ. ಹಠ ಮಾಡುವ ಮಕ್ಕಳನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಹೋಗ್ತಾನೆ ಎಂಬ ನಂಬಿಕೆ. ಆಮೇಲೆ ಏನು ಮಾಡುತ್ತಾನೆನ್ನುವುದು ಪ್ರಾದೇಶಿಕವಾಗಿ ವ್ಯತ್ಯಾಸವಾಗುತ್ತದೆ. ಕೊಂದು ತಿನ್ನಬಹುದು, ಎಲ್ಲೋ ಅಜ್ಞಾತಸ್ಥಳದಲ್ಲಿ ಅಡಗಿಸಿಡಬಹುದು, ಅಥವಾ ಅಸ್ಸಾಂನವರು ನಂಬುವಂತೆ ಹೊತ್ತೊಯ್ದ ಮಕ್ಕಳ ಕಿವಿಗಳನ್ನಷ್ಟೇ ತಿಂದು ಖುಷಿಪಡಬಹುದು (ಅಸ್ಸಾಮೀಸ್ನಲ್ಲಿ ಗುಮ್ಮನನ್ನು ‘ಕಾನ್ಖೋವಾ’ ಎನ್ನುತ್ತಾರಂತೆ). ಗುಮ್ಮ ಮೊದಲೇ ನೈಟ್ಡ್ಯೂಟಿಯವ, ಕಾರ್ಗತ್ತಲಲ್ಲಿ ಏನು ಮಾಡುತ್ತಾನೆಂದು ನೋಡಿದವರಾರು? ಸ್ಪೈನ್, ಪೋರ್ಚುಗಲ್, ಬ್ರಝಿಲ್ ಮುಂತಾದ ಸ್ಪಾನಿಷ್ ದೇಶಗಳಲ್ಲಿ ಗುಮ್ಮನನ್ನು ‘ಹೊಂಬ್ರೆ-ಡೆಲ್-ಸಾಕೊ’ ಎನ್ನುತ್ತಾರೆ. ಗೋಣಿಚೀಲ ಹಿಡಕೊಂಡ ಮನುಷ್ಯ ಎಂಬರ್ಥದಲ್ಲಿ. ಕ್ರಿಸ್ಮಸ್ತಾತ ಸಾಂತಾಕ್ಲಾಸ್ ಸಹ ಗೋಣಿಚೀಲ ಹಿಡಿದುಕೊಂಡು ಬರುವ ಮುದುಕನೇ. ಆದರೆ ಅವನ ಜೋಳಿಗೆತುಂಬ ಮಕ್ಕಳಿಗೆ ಕೊಡಲಿಕ್ಕೆ ಉಡುಗೊರೆಗಳು. ಗುಮ್ಮ ಹಾಗಲ್ಲ, ಅವನದು ಖಾಲಿ ಗೋಣಿಚೀಲ. ಹಠಮಾರಿ ಮಕ್ಕಳನ್ನು ತುಂಬಿಸಿಕೊಂಡು ಹೋಗಲಿಕ್ಕೆ! ಸ್ಪಾನಿಷ್ ಜನಪದ ಕಥೆಗಳ ಪ್ರಕಾರ ನಾಲ್ಕೈದು ಶತಮಾನಗಳ ಹಿಂದೆ ‘ಹೊಂಬ್ರೆ-ಡೆಲ್-ಸಾಕೊ’ಗಳು ನಿಜವಾಗಿಯೂ ಇದ್ದರಂತೆ. ಅನಾಥ ಮಕ್ಕಳನ್ನು ಎತ್ತಿಕೊಂಡು ಅನಾಥಾಶ್ರಮಗಳಿಗೆ ತಲುಪಿಸುವುದು ಅವರ ಕಾಯಕ. ಗೋಣಿಯಲ್ಲಿ ತುಂಬಿಸಿ ಒಯ್ಯುತ್ತಿದ್ದುದರಿಂದ ಕೆಲವು ಮಕ್ಕಳು ಸತ್ತೇಹೋಗುತ್ತಿದ್ದವೋ ಏನೋ. ಯೂರೋಪ್, ಏಷ್ಯಾ, ಆಫ್ರಿಕಾ ಖಂಡಗಳ ಹೆಚ್ಚಿನೆಲ್ಲ ದೇಶಗಳಲ್ಲೂ ಆಯಾಯ ಪ್ರದೇಶದ ಭಾಷೆಯಲ್ಲಿ ‘ಗೋಣಿಚೀಲ ಹಿಡಿದ ಮನುಷ್ಯ’ ಎಂಬ ಅರ್ಥ ಬರುವ ಪದ ಬಳಕೆಯಾಗುವುದು ಗುಮ್ಮ ಎಂಬ ಕಲ್ಪನೆಗೇ; ಚಿಕ್ಕ ಮಕ್ಕಳನ್ನು ಹೆದರಿಸುವುದಕ್ಕೇ. ಕೊಲಂಬಿಯಾ, ಮೆಕ್ಸಿಕೊ, ಅರ್ಜೆಂಟಿನಾ, ಚಿಲಿ, ಎಲ್ಸಾಲ್ವಡಾರ್ ಮುಂತಾದ ಲ್ಯಾಟಿನ್ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಭಾಗಗಳಲ್ಲಿ ‘ಎಲ್-ಕೊಕೊ’ ಹೆಸರಿನಿಂದ ಗುಮ್ಮನನ್ನು ಗುರುತಿಸುತ್ತಾರೆ. ಅಲ್ಲಿನ ಜೋಗುಳದ ಹಾಡುಗಳಲ್ಲೂ ಎಲ್-ಕೊಕೊ ಬರುತ್ತಾನಂತೆ. “ಮಲಗು ಮಲಗೆನ್ನ ಮರಿಯೇ ಬಣ್ಣದ ನವಿಲಿನ ಗರಿಯೇ... ನಿದ್ದೆ ಮಾಡ್ಲಿಲ್ಲಾದ್ರೆ ಎಲ್-ಕೊಕೊ ಎತ್ಕೊಂಡ್ಹೋಗ್ತಾನೆ ತಿಳಿಯೇ!” ಕೊಕೊ ಎಂದರೆ ಕಂದುಬಣ್ಣದ ಕೂದಲುಳ್ಳ ವಿಕಾರರೂಪಿ ಮನುಷ್ಯ. ದೆವ್ವ ಎಂದರೂ ಸರಿಯೇ. ತೆಂಗಿನಕಾಯಿಗೆ ಕೊಕೊನಟ್ ಎಂಬ ಪದ ಬಂದಿರೋದು ಅದರಿಂದಲೇ. ಕಂದುಕೂದಲು, ಮೂರುಕಣ್ಣುಗಳುಳ್ಳದ್ದು ಇದೆಂಥದಪ್ಪಾ ವಿಚಿತ್ರ ಫಲ ಎಂದು ಪೋರ್ಚುಗೀಸ್ ನಾವಿಕರು ಅಚ್ಚರಿಯಿಂದ ಕೊಕೊನಟ್ ಎಂದರಂತೆ. ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಎಲ್-ಕೊಕೊ ಬಗ್ಗೆ ಎಷ್ಟು ಹೆದರಿಸುತ್ತಾರೆಂದರೆ ಮಕ್ಕಳು ಮಲಗುವ ಮಂಚದಡಿಯಲ್ಲೇ ಅವನು ಅಡಗಿರುತ್ತಾನೆ, ತಂಟೆ ಮಾಡಿದರೆ ಎತ್ತಿಕೊಂಡು ಹೋಗ್ತಾನೆ ಎನ್ನುತ್ತಾರೆ. ಮಕ್ಕಳು ಗಪ್ಚುಪ್ ಆಗಿ ನಿದ್ದೆಗೆ ಜಾರುತ್ತವೆ. ಅಲ್ಲಿಂದ ಉತ್ತರ ಅಮೆರಿಕಕ್ಕೆ ಬಂದರೆ ಗುಮ್ಮನ ಹೆಸರು ‘ಬೂಗಿಮ್ಯಾನ್’ ಎಂದಾಗುತ್ತದೆ. ಅವನೂ ಅಷ್ಟೇ, ವಿಕಾರರೂಪಿ ನಿಶಾಚರಿ. ಕಿಟಕಿಯ ಬಳಿ ಫರಫರ ಸದ್ದು ಮಾಡಬಹುದು. ಹಸಿರು ಹೊಗೆಯಾಗಿ ಕಾಣಿಸಿಕೊಳ್ಳಬಹುದು. ಡಿನ್ನರ್ಟೈಮ್ನಲ್ಲಿ ವಠಾರದಲ್ಲಿ ಸುತ್ತುತ್ತಿರಲು ಅವನಿಗೆ ಹೆತ್ತವರೆಲ್ಲರ ಪರ್ಮಿಶನ್ ಇರುತ್ತದೆ. ಯಾರ ಮನೆಯಲ್ಲಿ ಮಗು ಹಠ ಮಾಡುತ್ತೋ ಅಲ್ಲಿಂದ ರಿಮೋಟ್ಕಂಟ್ರೋಲ್ ಸಿಗ್ನಲ್ ಬರುತ್ತದೆ ಬೂಗಿಮ್ಯಾನ್ನಿಗೆ. ಅವನು ಆ ಮನೆಗೆ ಬರಬೇಕಂತಲೂ ಇಲ್ಲ, ಅಷ್ಟರಲ್ಲಿ ಮಗು ಹಠ ನಿಲ್ಲಿಸಿ ಹಾಯಾಗಿ ಮಲಗಿರುತ್ತದೆ! ಅಮೆರಿಕದಲ್ಲಿ ಬೂಗಿಮ್ಯಾನ್ ಇದ್ದಂತೆ ಇಟಲಿ, ರೊಮಾನಿಯಾ, ಗ್ರೀಸ್, ಈಜಿಪ್ಟ್ ಮೊದಲಾದ ಮೆಡಿಟರೇನಿಯನ್ ದೇಶಗಳಲ್ಲಿ ‘ಬಾಬೌ’ ಅಥವಾ ‘ಬೊವ್ಬೌ’, ಜರ್ಮನಿಯಲ್ಲಿ ‘ಬುಝ್ಮ್ಯಾನ್’, ಡೆನ್ಮಾರ್ಕ್ನಲ್ಲಿ ‘ಬುಸೆಮಾಂಡನ್’, ನೆದರ್ಲ್ಯಾಂಡ್ಸ್ನಲ್ಲಿ ‘ಬೋಮ್ಯಾನ್’... ಗುಮ್ಮನೊಬ್ಬ ನಾಮ ಹಲವು ಎಂದಿದ್ದೇಕಂತ ಈಗ ತಿಳೀತಲ್ಲ? ಆದರೂ ಒಂದುಮಾತು. ಸುಮಾರು ಆರೇಳು ವರ್ಷ ಪ್ರಾಯವಾದಾಗ ಮಗುವಿಗೆ ಗುಮ್ಮನ ಹೆದರಿಕೆ ಇಲ್ಲವಾಗುತ್ತದೆ. ಗುಮ್ಮಇಲ್ಲ ಏನೂಇಲ್ಲ ಅಮ್ಮ ಸುಮ್ಮನೆ ರೈಲುಬಿಟ್ಟದ್ದು ಎಂದು ಮಗುವಿಗೆ ಮನವರಿಕೆಯಾಗುತ್ತದೆ. ಪುರಂದರ ದಾಸರು ಅದನ್ನೇ “ಗುಮ್ಮನೆಲ್ಲಿಹ ತೋರಮ್ಮ ಸುಮ್ಮನಂಜಿಸಬೇಡಮ್ಮ...” ಎಂಬ ಇನ್ನೊಂದು ಕೀರ್ತನೆಯಲ್ಲಿ ಚಂದವಾಗಿ ಬಣ್ಣಿಸಿದ್ದಾರೆ. ಕೃಷ್ಣ ಯಶೋದೆಗೇ ಚಾಲೆಂಜ್ ಹಾಕುತ್ತಾನೆ. ಮೂರುಲೋಕವೆಲ್ಲ ಸುತ್ತಾಡಿ ಬಂದೆ, ಗುಮ್ಮ ಎಲ್ಲೂಇಲ್ಲ, ಸುಮ್ಮನೆ ಬೆದರಿಸಬೇಡಮ್ಮ ಎನ್ನುತ್ತಾನೆ. ನಾವಾದರೂ ಅಷ್ಟೇ, ಚಿಕ್ಕವರಿದ್ದಾಗ ಗುಮ್ಮನಿಗೆ ಹೆದರಿದವರು ಆಮೇಲೆ ಗುಮ್ಮ ಅಲ್ಲ ಅವನಜ್ಜ ಬಂದ್ರೂ ಹೆದರೋದಿಲ್ಲ ಅಂತೇವೆ. ಮತ್ತೆ ನಮ್ಮ ಮಕ್ಕಳನ್ನು ಹೆದರಿಸಲಿಕ್ಕೆ ನಮಗೆ ಗುಮ್ಮನೇ ಬೇಕಾಗುತ್ತಾನೆ. ಗುಮ್ಮ ಚಿರಂಜೀವಿ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Feb 18, 2012
Just a Coincidence
Saturday Feb 18, 2012
Saturday Feb 18, 2012
ದಿನಾಂಕ 19 ಫೆಬ್ರವರಿ 2012ರ ಸಂಚಿಕೆ...
'ಕಾಕತಾಳೀಯ’ದ ಮೂರು ಬಗೆ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವತ್ತು ನಾನು ಇಮೇಲ್ಸ್ ಚೆಕ್ ಮಾಡುತ್ತ ಇದ್ದದ್ದಕ್ಕೂ ಅವರ ಇಮೇಲ್ ನನ್ನ ಇನ್ಬಾಕ್ಸ್ನಲ್ಲಿ ಬಂದುಬೀಳೋದಕ್ಕೂ ಸರಿಹೋಯ್ತು. ಕೂಡಲೇ ಕ್ಲಿಕ್ಕಿಸಿ ಓದಿದೆ. ಆದಿನವೇ ಪ್ರಕಟವಾಗಿದ್ದ ‘ಕಾಗೆಗಳ ಸಮೂಹ...’ ಲೇಖನಕ್ಕೆ ಪ್ರತಿಕ್ರಿಯೆ ಬರೆದಿದ್ದರು. ನನಗವರು ಇದುವರೆಗೂ ಹೆಸರಿನಿಂದಷ್ಟೇ ಗೊತ್ತು. ಮುಖಪರಿಚಯವಿಲ್ಲ, ಭೇಟಿಯಾಗಿಲ್ಲ, ಯಾವರೀತಿಯ ಸಂಪರ್ಕವೂ ಇಲ್ಲ. ಹಾಗಾಗಿಯೇ ಅವರಿಂದ ಇಮೇಲ್ ಬಂದದ್ದು ಒಂಥರ ಸ್ಪೆಷಲ್ ಸಂಭ್ರಮ. ಇಮೇಲ್ನಲ್ಲಿ ಸಿಗ್ನೇಚರ್ ಕೆಳಗಡೆ ಫೋನ್ನಂಬರೂ ಇತ್ತು. ತತ್ಕ್ಷಣ ಫೋನಾಯಿಸಿದೆ, ಅವರೇ ರಿಸೀವರ್ ಎತ್ತಿಕೊಂಡು ಆಶ್ಚರ್ಯಚಕಿತರಾಗಿ “ಈಗತಾನೆ ನಿಮಗೆ ಇಮೇಲ್ ಬರೆದುಕಳಿಸಿದ್ದೆ, ಇಷ್ಟು ಕ್ವಿಕ್ಕಾಗಿ ರೆಸ್ಪಾನ್ಸ್ ನಿರೀಕ್ಷಿಸಿರ್ಲಿಲ್ಲಪ್ಪ!” ಎಂದು ಖುಷಿಪಟ್ಟರು. ನಾನೂ ಅಷ್ಟೇ ಖುಷಿಯಿಂದ, “ಸಾರ್, ನಿಮ್ಮ ಹೆಸರನ್ನು ನಾನಾದರೂ ನಿರರ್ಥಕಗೊಳಿಸ್ಬೇಕು ಅನ್ನೋ ಕಾರಣಕ್ಕೆ ಫೋನ್ ಮಾಡಿದ್ದು” ಎಂದೆ! ಹಹ್ಹಹ್ಹಾ ಎಂದು ಬಾಯ್ತುಂಬ ನಕ್ಕರು. ಆ ವ್ಯಕ್ತಿ ಯಾರು ಗೊತ್ತೇ? ರಿಗ್ರೆಟ್ ಅಯ್ಯರ್! ನೀವು ಪತ್ರಿಕೆಗಳ/ನಿಯತಕಾಲಿಕಗಳ ರೆಗ್ಯುಲರ್ ಓದುಗರಾದರೆ ಆ ಹೆಸರನ್ನು ಗಮನಿಸಿಯೇ ಇರುತ್ತೀರಿ. ಅವರೊಬ್ಬ ಪತ್ರಕರ್ತ, ವ್ಯಂಗ್ಯಚಿತ್ರಕಾರ, ಛಾಯಾಗ್ರಾಹಕ ಮತ್ತು ಅಂಕಣಕಾರ. ಜತೆಯಲ್ಲೇ ಸಮಾಜಸೇವೆ, ಸಂಶೋಧನೆ ಮತ್ತು ಸಂಸ್ಕೃತಿರಕ್ಷಣೆಯ ಕೆಲಸಗಳನ್ನೂ ಮಾಡುತ್ತಿರುವವರು. ಆರಂಭದಲ್ಲಿ (ನಾಲ್ಕೈದು ದಶಕಗಳ ಹಿಂದೆ) ಪತ್ರಿಕೆಗಳ ಸಂಪಾದಕರಿಂದ ‘ತಿರಸ್ಕಾರ ಪತ್ರ’ಗಳನ್ನೇ ಪಡೆದೂಪಡೆದೂ ತನ್ನ ಹೆಸರನ್ನೇ ರಿಗ್ರೆಟ್ ಅಯ್ಯರ್ ಎಂದು ಪರ್ಮನೆಂಟಾಗಿ ಬದಲಾಯಿಸಿಕೊಂಡ ಮಹಾನುಭಾವ (ನಿಜನಾಮಧೇಯ: ಸತ್ಯನಾರಾಯಣ ಅಯ್ಯರ್. ಮೂಲತಃ ಕೋಲಾರದವರು, ಸದ್ಯಕ್ಕೆ ಬೆಂಗಳೂರಿನ ಪ್ರಜೆ). ಈಗ ಪಾಸ್ಪೋರ್ಟ್ ಆದಿಯಾಗಿ ಎಲ್ಲ ದಾಖಲೆಗಳಲ್ಲೂ ಅವರ ಹೆಸರು ರಿಗ್ರೆಟ್ ಅಯ್ಯರ್. ಮುನ್ನೂರೆಪ್ಪತ್ತಕ್ಕೂ ಹೆಚ್ಚು ‘ತಿರಸ್ಕಾರ ಪತ್ರ’ಗಳ ವಾರೀಸುದಾರನಾಗಿ ಲಿಮ್ಕಾ ದಾಖಲೆಯಲ್ಲೂ; ಆಂಧ್ರಪ್ರದೇಶದ ಅನಂತಪುರದಲ್ಲಿ ಜಗತ್ತಿನ ಅತಿದೊಡ್ಡ ಆಲದಮರ ಇರುವುದನ್ನು ಗಿನ್ನೆಸ್ ವರ್ಲ್ಡ್ರೆಕಾರ್ಡ್ಸ್ ಸಂಸ್ಥೆಗೆ ತಿಳಿಸಿ ಆಮೂಲಕ ಗಿನ್ನೆಸ್ ದಾಖಲೆಯಲ್ಲೂ! ಅಂತಹ ದ ಗ್ರೇಟ್ ರಿಗ್ರೆಟ್ ಅಯ್ಯರ್ ನನಗೆ ಇಮೇಲ್ ಕಳಿಸಿದಾಗ ಕಾಕತಾಳೀಯವಾಗಿ ನಾನು ಆಗಷ್ಟೇ ಇಮೇಲ್ಸ್ ಚೆಕ್ ಮಾಡುತ್ತಿದ್ದುದರಿಂದ ತತ್ಕ್ಷಣ ಅವರಿಗೆ ದೂರವಾಣಿಯಲ್ಲೇ ಪ್ರತ್ಯುತ್ತರ ಕೊಡುವುದು ಸಾಧ್ಯವಾಯ್ತು; ನನ್ನೊಂದಿಗಿನ ಸಂಪರ್ಕದಲ್ಲಾದರೂ ಅವರು ‘ರಿಗ್ರೆಟ್’ಪಡುವುದು ತಪ್ಪಿದಂತಾಯ್ತು. ರಿಗ್ರೆಟ್ ಅಯ್ಯರ್ ಅವರ ಇಮೇಲ್ ಬಂದಿರುವುದರ ಬಗ್ಗೆಯೇ ಇಷ್ಟೊತ್ತು ಬಣ್ಣಿಸಿದೆನೇ ಹೊರತು ಅದರಲ್ಲೇನಿತ್ತೆಂದು ಹೇಳಲಿಲ್ಲ. ಅದನ್ನು ನಿಮ್ಮೊಡನೆ ಹಂಚಿಕೊಳ್ಳಲೇಬೇಕು. ಅವರ ಮಗ ಶ್ರವಣ್, ಈಗಿನ್ನೂ ಜರ್ನಲಿಸಂ ಓದುತ್ತಿದ್ದಾನೆ. ಆತ ‘ರೆಕ್ಕೆ ಮುರಿದ ಹಕ್ಕಿ ನಾನು’ ಅಂತೊಂದು ಕಿರುಸಾಕ್ಷ್ಯಚಿತ್ರ ನಿರ್ಮಿಸಿದ್ದಾನೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿ ರೆಕ್ಕೆ ಮುರಿದುಕೊಂಡು ಬದುಕು ಸವೆಸುತ್ತಿರುವ ಕಾಗೆಯೊಂದರ ಕರುಣಾಜನಕ ಆದರೆ ಆತ್ಮವಿಶ್ವಾಸ ತುಂಬಿತುಳುಕುವ ಚಿತ್ರಣ. ಮೊಬೈಲ್ ಫೋನ್ನಲ್ಲಿರುವ ಕ್ಯಾಮೆರಾವನ್ನಷ್ಟೇ ಬಳಸಿ ನಿರ್ಮಿಸಿದ್ದು. ಅದರ ಯೂಟ್ಯೂಬ್ ಲಿಂಕ್ಅನ್ನು ರಿಗ್ರೆಟ್ ಅಯ್ಯರ್ ನನಗೆ ಇಮೇಲ್ನಲ್ಲಿ ಕಳಿಸಿದ್ದಾರೆ ( rekke murida hakki ಎಂದು ಯೂಟ್ಯೂಬ್ನಲ್ಲಿ ಹುಡುಕಿದರೆ ಸಿಗುತ್ತದೆ). ಐದು ನಿಮಿಷಗಳ ಅವಧಿಯ ಈ ಸಾಕ್ಷ್ಯಚಿತ್ರ ಎಂಥವರ ಅಂತಃಕರಣವನ್ನೂ ತಟ್ಟುತ್ತದೆ. ನೋಡಿದಾಗ ವಿಷಾದ ಮಡುಗುಟ್ಟುತ್ತದೆ. ಕಾಗೆಯ ಸ್ವಗತದಂತಿರುವ ಅದರಲ್ಲಿನ ಸಂಭಾಷಣೆಯು ಕೊನೆಯಲ್ಲಿ ಮೂರು ಗಂಭೀರ ಪ್ರಶ್ನೆಗಳೊಂದಿಗೆ ಮುಗಿಯುತ್ತದೆ: ಅಂಕೆಯಿಲ್ಲದ ಅನರ್ಥದ ಅಭಿವೃದ್ಧಿಕಾರ್ಯಗಳಿಗೆ ಎಂದು ಅಂತ್ಯ? ಮೂಲ ವನಸಿರಿಯನ್ನು ಹನನ ಮಾಡಿ ಕಾಂಕ್ರೀಟ್ ಜಂಗಲ್ ನಿರ್ಮಿಸುವ ನಿಮ್ಮ ಕಾರ್ಯ ಎಷ್ಟು ಸರಿ? ನಮ್ಮ ಅಳಿವು-ಉಳಿವಿನ ಬಗ್ಗೆ ನಿಮ್ಮ ಸ್ವಾರ್ಥದಿಂದಾಚೆ ಎಂದಾದರೂ ಯೋಚಿಸಿದ್ದೀರಾ? ಅಂದಹಾಗೆ ‘ಕಾಗೆಗಳ ಸಮೂಹ...’ ಅಂಕಣಬರಹಕ್ಕೆ ಪ್ರತಿಕ್ರಿಯೆಯಾಗಿ ಸುಮಾರಷ್ಟು ಓದುಗರು ಪತ್ರ ಬರೆದಿದ್ದಾರೆ. ಅದರಲ್ಲಿ, ಕಾಗೆಯ ಬುದ್ಧಿವಂತಿಕೆ ಕಣ್ಣಾರೆ ಕಂಡು ಅನುಭವಿಸಿದ್ದನ್ನು ಹಂಚಿಕೊಂಡವರಿದ್ದಾರೆ; ಸಿಪಿಕೆ ಬರೆದ ಪದ್ಯ ಆರನೇ ತರಗತಿಯ ಕನ್ನಡಭಾರತಿ ಪಠ್ಯ ಪುಸ್ತಕದಲ್ಲಿದ್ದ ‘ವಿದ್ಯುದಾಲಿಂಗನಕೆ ಸಿಕ್ಕಿ ಸತ್ತಿದೆ ಕಾಗೆ...’ಯನ್ನು ನೆನೆಸಿಕೊಂಡವರಿದ್ದಾರೆ; ಆರ್.ಕೆ.ಲಕ್ಷ್ಮಣ್ ಅವರ ಕಾರ್ಟೂನ್ಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಗೆಯನ್ನೂ ಉಲ್ಲೇಖಿಸಬಹುದಿತ್ತಲ್ವಾ ಎಂದು ಕೇಳಿದವರಿದ್ದಾರೆ. ಕಾಗೆ ಕುರಿತ ಸಂಸ್ಕೃತ ಸುಭಾಷಿತಗಳನ್ನು, ಮರಾಠಿ ಅಭಂಗಗಳನ್ನು, ‘ಕಾಗೆಯೊಂದಗುಳ ಕಂಡೊಡೆ ಕೂಗಿ ಕರೆಯದೆ ತನ್ನ ಬಳಗನೆಲ್ಲವ...’ ಎಂಬ ಬಸವಣ್ಣನವರ ವಚನವನ್ನು ನೆನಪಿಸಿದವರಿದ್ದಾರೆ. ಶ್ರಾದ್ಧಕರ್ಮಗಳಲ್ಲಿ ಪಿತೃಗಳು ಕಾಗೆಯ ರೂಪದಲ್ಲಿ ಬಂದು ನಾವು ಅರ್ಪಿಸಿದ್ದನ್ನು ಸೇವಿಸುತ್ತಾರೆ ಎಂದು ವಿವರಿಸಿದವರಿದ್ದಾರೆ. ಎಲ್ಲ ಪತ್ರಗಳನ್ನೂ ಇಲ್ಲಿ ಉಲ್ಲೇಖಿಸುವುದು ಸಾಧ್ಯವಾಗದು, ಆದ್ದರಿಂದ ಪತ್ರ ಬರೆದವರೆಲ್ಲರಿಗೂ ಮನದಾಳದ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ‘ಕಾಕತಾಳೀಯ’ ಎಂಬ ವಿಷಯವನ್ನು ಇವತ್ತಿನ ಲೇಖನಕ್ಕೆ ಆಯ್ದುಕೊಂಡಿದ್ದರಿಂದ ಇನ್ನೊಂದು ಪತ್ರವನ್ನು ಮಾತ್ರ ವಿಶೇಷವಾಗಿ ಆಯ್ದುಕೊಳ್ಳುತ್ತಿದ್ದೇನೆ. ಮೈಸೂರಿನಿಂದ ಡಾ.ಕುಮಾರಸ್ವಾಮಿ ಎಂಬುವರು ಬರೆದಿದ್ದಾರೆ. ಅವರು ಮೈಸೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕ ಹುದ್ದೆಯಲ್ಲಿದ್ದಾರೆ. ಒಂದೆರಡು ವಾರಗಳ ಹಿಂದೆಯಷ್ಟೇ ಅವರು ನನಗೆ ಪತ್ರಮಿತ್ರರಾಗಿ ಪರಿಚಯವಾದವರು. ಮೊನ್ನೆ ಸೋಮವಾರದಂದು ಅವರ ತರಬೇತಿ ಕಾರ್ಯಾಗಾರದಲ್ಲಿ ಏನಾಯ್ತು ಎನ್ನುವುದನ್ನು ಆತ್ಮೀಯವಾಗಿ ಬರೆದು ಕಳಿಸಿದ್ದಾರೆ. “ಮೈಸೂರಿನ ಹೊರವಲಯದ ಕೆಲವು ಶಾಲೆಗಳ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಇತ್ತು. ಪ್ರಾಥಮಿಕ ಶಿಕ್ಷಣದಲ್ಲಿ ಬೋಧನೋಪಕರಣಗಳ ಮಹತ್ವದ ಬಗ್ಗೆ ವಿವರಿಸುತ್ತಿದ್ದೆ. ಕಾಗೆಯೂ ಹೇಗೆ ಸಲಕರಣೆಗಳನ್ನು ಬಳಸಿ ಬುದ್ಧಿಶಾಲಿಯೆನಿಸುತ್ತದೆ ಎಂದು ಹಿಂದಿನ ದಿನವಷ್ಟೇ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಲೇಖನವನ್ನೂ ಪ್ರಸ್ತಾಪಿಸಿದ್ದೆ. ಅಲ್ಲಿದ್ದ ಕೆಲವರು ಆ ಲೇಖನವನ್ನು ಓದಿಯೂಇದ್ದರು. ನನ್ನ ಉಪನ್ಯಾಸವನ್ನು ಆಸಕ್ತಿಯಿಂದ ಕೇಳಿಸಿಕೊಂಡಿದ್ದ ಶಿಕ್ಷಕಿಯೊಬ್ಬರು ಆಮೇಲೆ ನನ್ನ ಹತ್ತಿರ ಬಂದು ಆ ಲೇಖನ ಬರೆದವನು ತನ್ನ ಖಾಸಾ ತಮ್ಮ ಎಂದು ಹೇಳಿದರು. ಕ್ಷಣಕಾಲ ನನಗೊಂದು ವಿಶೇಷ ಪುಳಕ ಉಂಟಾಯ್ತು!” ಹೌದು, ಡಾ.ಕುಮಾರಸ್ವಾಮಿಯವರ ಇ-ಪರಿಚಯ ನನಗಾಗಿರುವುದು ನಮ್ಮಕ್ಕನಿಗೆ ಗೊತ್ತಿರಲಿಲ್ಲ; ನಮ್ಮಕ್ಕ ಮೈಸೂರಿನ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕಿ ಎಂಬ ವಿಚಾರ ಕುಮಾರಸ್ವಾಮಿಯವರಿಗೂ ಗೊತ್ತಿರಲಿಲ್ಲ. ಕಾಗೆಗಳ ಕುರಿತ ಲೇಖನದ ಸಂದರ್ಭದಲ್ಲಿ ಇಂಥದೊಂದು ಹೃದಯಸ್ಪರ್ಶಿ ಕಾಕತಾಳೀಯ ಜರುಗಿತು! ಇನ್ನು ಮೂರನೆಯದು ನನ್ನ ದೃಷ್ಟಿಯಲ್ಲಿ ನಿಜಕ್ಕೂ ಅದ್ಭುತ ರೋಮಾಂಚನದ ಕಾಕತಾಳೀಯ. ನಿಮಗೆ ಹಾಗನ್ನಿಸುತ್ತದೋ ಇಲ್ಲವೋ ಗೊತ್ತಿಲ್ಲ. ಓದಿನೋಡಿ. ಕಳೆದ ರವಿವಾರ (ಫೆಬ್ರವರಿ 12) ವಿಜಯ ಕರ್ನಾಟಕ ಪತ್ರಿಕೆಯ ಅಂತರ್ಮುಖಿ ಪುಟದಲ್ಲಿ ಮೇಳೈಸಿದ ಸಂಗತಿಯಿದು. ಅವತ್ತಿನ ನಾಲ್ಕೂ ಅಂಕಣಗಳಲ್ಲಿ ಪ್ರಾಣಿಪಕ್ಷಿಗಳ ಕಲರವ! ಪ್ರಾಣಿಸಂಗ್ರಹಾಲಯಕ್ಕೆ ಭೇಟಿಕೊಟ್ಟ ಅನುಭವ! ಹೇಗಂತೀರಾ? ಅಬ್ದುಲ್ ರಶೀದ್ ಅವರ ‘ಕಾಲುಚಕ್ರ’ ಅಂಕಣದಲ್ಲಿ ಕಾಡುಹಂದಿ, ಎತ್ತು/ಹಸು ಮತ್ತು ಆನೆ ಉಲ್ಲೇಖಗೊಂಡಿದ್ದವು. ಎಂ.ಎಸ್.ನರಸಿಂಹಮೂರ್ತಿಯವರ ‘ಅಧಿಕಪ್ರಸಂಗ’ ಅಂಕಣದಲ್ಲಿ ಶೀರ್ಷಿಕೆಯಲ್ಲಿನ ದನವೂ ಸೇರಿದಂತೆ ಕತ್ತೆ, ಕುದುರೆ ಮತ್ತು ಮಂಗಗಳಿದ್ದವು. ಜಿ.ಪಿ.ಬಸವರಾಜು ಅವರ ‘ನೋಟ-ಪಲ್ಲಟ’ ಅಂಕಣದಲ್ಲಿ ಆನೆ, ಹುಲಿ, ಮಂಗ, ಕೋಳಿ, ಬೆಕ್ಕು, ತೋಳ ಮತ್ತು ಜೇನುನೊಣ. ಹಾಗೆಯೇ ಪರಾಗಸ್ಪರ್ಶ ಅಂಕಣದಲ್ಲಿ ಕಾಗೆ, ಹಂಸ, ನವಿಲು, ಕೋಗಿಲೆ, ಪಾರಿವಾಳ, ಗಿಳಿ, ಗುಬ್ಬಚ್ಚಿ, ಗೊರವಂಕ, ಚಿಂಪಾಂಜಿ, ಹುಳಹುಪ್ಪಟೆ, ಕುರಿ, ಕೋಣ, ಸಿಂಹ, ಇರುವೆ, ಮಂಗ, ಗೂಬೆ - ಇವೆಲ್ಲವೂ ಇದ್ದವು. ಅಂದರೆ ಒಂದೇ ಪತ್ರಿಕೆಯ ಒಂದೇ ಸಂಚಿಕೆಯ ಒಂದೇ ಪುಟದಲ್ಲಿ ಪ್ರಕಟವಾದ ನಾಲ್ಕು ಬೇರೆಬೇರೆ ಅಂಕಣಗಳಲ್ಲಿ ವಿಧವಿಧ ಪ್ರಾಣಿಪಕ್ಷಿಗಳು ಕಾಣಿಸಿಕೊಂಡಿದ್ದವು. ಇದು ನಿಜಕ್ಕೂ ಕಾಕತಾಳೀಯ ಅಂತನ್ನಿಸುವುದಿಲ್ಲವೇ? ಅಷ್ಟೇ ಸಾಲದೆಂಬಂತೆ ಅವತ್ತೇ (ಫೆಬ್ರವರಿ 12) ಜೀವವಿಕಾಸವಾದದ ಮಹಾನ್ ಪ್ರತಿಪಾದಕ ಚಾರ್ಲ್ಸ್ ಡಾರ್ವಿನ್ನ ಜನ್ಮದಿನ ಕೂಡ! ಪತ್ರಿಕೆಯ ಒಂದೇ ಪುಟದಲ್ಲಿ ಪ್ರಾಣಿಪಕ್ಷಿಗಳು ಒಟ್ಟುಸೇರಿದ್ದನ್ನು ಹಿರಿಯ ಸ್ನೇಹಿತರೊಬ್ಬರ ಗಮನಕ್ಕೆ ತಂದಿದ್ದೆ. ಅವರೊಬ್ಬ ಪತ್ರಕರ್ತರೂ ಹೌದು. ಅವರು ತಮಾಷೆಯಿಂದ ಏನಂದ್ರು ಗೊತ್ತೇ? ಪತ್ರಿಕೆಗಳ ಮುಖಪುಟದಲ್ಲಿ ದಿನಾ ರಾರಾಜಿಸುತ್ತವಲ್ಲ ಊಸರವಳ್ಳಿಗಳು, ಗೂಬೆಗಳು, ಕೂಪಮಂಡೂಕಗಳು, ದಪ್ಪಚರ್ಮದ ಹೆಗ್ಗಣಗಳು ಮತ್ತು ಕಣ್ಣೀರಿಡುವ ಮೊಸಳೆಗಳು? ಅವುಗಳ ಮುಂದೆ ಇದೇನು ಮಹಾ? ಹೋಗಲಿಬಿಡಿ ಮುಖಪುಟದವರ ಸುದ್ದಿ ನಮಗೇಕೆ? ನಮಗೆ ಇಂತಹ ಸಣ್ಣಪುಟ್ಟ ಸಂಗತಿಗಳಲ್ಲಿನ ಸಡಗರಗಳು, ಕಾಕತಾಳೀಯಗಳಲ್ಲಿನ ಕೌತುಕಗಳೇ ಹೆಚ್ಚು ಆಪ್ಯಾಯಮಾನ. ಮೊಲದ ಮುಖದಂತೆ ಆಕಾರವುಳ್ಳ ಮರದ ಬೊಡ್ಡೆಯ ಪಕ್ಕದಲ್ಲಿ ಮೊಲವೇ ಕಾಣಿಸಿಕೊಂಡು ಕ್ಯಾಮೆರಾಕ್ಕೆ ಪೋಸ್ ಕೊಟ್ಟ ಕ್ಷಣಗಳಂಥವು! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Feb 11, 2012
Murder of Crows
Saturday Feb 11, 2012
Saturday Feb 11, 2012
ದಿನಾಂಕ 12 ಫೆಬ್ರವರಿ 2012ರ ಸಂಚಿಕೆ...
ಕಾಗೆಗಳ ಸಮೂಹ ಮರ್ಡರ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅಮೆರಿಕದಲ್ಲಿಯೂ ಕಾಗೆಗಳಿವೆಯೇ!? ಹೀಗೊಂದು ಆಶ್ಚರ್ಯಭರಿತ ಪ್ರಶ್ನೆ ನನ್ನ ಮನಸ್ಸಲ್ಲೂ ಬಂದಿತ್ತು, ಹನ್ನೆರಡು ವರ್ಷಗಳ ಹಿಂದೆ ಮೊದಲಸಲ ಈ ದೇಶಕ್ಕೆ ಬಂದಿಳಿದಾಗ. ಆಗ ನಾನಿದ್ದದ್ದು ಶಿಕಾಗೋದಲ್ಲಿ. ಬಂದ ಒಂದೆರಡು ದಿನಗಳಲ್ಲೇ ಒಂದು ಮುಂಜಾನೆ ಎತ್ತರದ ಮರವೊಂದರ ಮೇಲಿಂದ ‘ಕಾ...ಕಾ...’ ದನಿ ಕೇಳಿ ವಿಚಿತ್ರವೆನಿಸಿತ್ತು. ಈಗ ಯೋಚಿಸಿದರೆ ಅದೊಂದು ಡಬಲ್ ಪೂರ್ವಾಗ್ರಹದ ಪ್ರಶ್ನೆ ಅನಿಸುತ್ತದೆ. ಒಂದನೆಯದಾಗಿ ‘ಅಮೆರಿಕದಲ್ಲಿಯೂ...’ ಎನ್ನಲಿಕ್ಕೆ ಅಮೆರಿಕ ಏನು ಸ್ವರ್ಗದಿಂದ ಬಂದದ್ದೇ? ಆಯ್ತಪ್ಪಾ ಮುಂದುವರಿದ ದೇಶ, ಸ್ವಚ್ಛ ಪರಿಸರ ಎಂದೆಲ್ಲ ಹೇಳಿದರೂ ಕಾಗೆ ಯಾವ ತಪ್ಪು ಮಾಡಿದೆಯಂತ ಅಮೆರಿಕದಲ್ಲಿ ಇರಕೂಡದು? ಸದ್ಯ ಹಾಗೇನೂ ಇಲ್ಲ. ಇಲ್ಲಿಯೂ ನಮ್ಮೂರಿನಂತೆಯೇ ಕಾಗೆಗಳಿವೆ. ನಿಜಕ್ಕಾದರೆ ಅಮೆರಿಕ ಮಾತ್ರವಲ್ಲ, ಅಂಟಾರ್ಕಟಿಕಾ ಒಂದನ್ನು ಬಿಟ್ಟು ಬೇರೆಲ್ಲ ಖಂಡಗಳ ಎಲ್ಲ ದೇಶಗಳಲ್ಲೂ ಕಾಗೆಗಳಿವೆ. ಅಲ್ಲಲ್ಲಿನ ಪರಿಸರ, ಜನಜೀವನ, ನಂಬಿಕೆಗಳು ಮತ್ತು ಆಚಾರವಿಚಾರಗಳಲ್ಲಿ ಹಾಸುಹೊಕ್ಕಾಗಿವೆ. ಆದರೂ ಒಂದು ಮಾತು ನಿಜ. ಕಾಗೆಯೆಂದರೆ ಕೊಳಕು, ಕೆಟ್ಟದು, ಅಪಶಕುನ ಎಂಬ ನಂಬಿಕೆ ಕಾಗೆ ಇರುವಲ್ಲೆಲ್ಲ ಚಾಲ್ತಿಯಲ್ಲಿದೆ. ಕಾಗೆ ಮುಟ್ಟಿದರೆ ಅಪಾಯ ಕಾದಿದೆಯೆಂತಲೋ ಮರಣವೇ ಬಂದೊದಗುತ್ತದೆಯೆಂದೋ ಭಾವನೆ ವ್ಯಾಪಕವಾಗಿದೆ. ಹಾಲಿವುಡ್ ಸಿನೆಮಾಗಳಲ್ಲೂ ಯಾವುದಾದರೂ ಕೆಟ್ಟ ಘಟನೆಯನ್ನು ತೋರಿಸಬೇಕಿದ್ದರೆ ಕಾಗೆಯ ಕೂಗನ್ನು ಸಂಕೇತವಾಗಿ ಬಳಸುತ್ತಾರೆ. ಅದನ್ನು ಕೇಳಿದಾಗ ನೋಡುಗನ ಮನಸ್ಸಿನಲ್ಲಿ ಕರಾಳಛಾಯೆ ಮೂಡುತ್ತದೆ. ಜನಪದದಲ್ಲಿ ಅಥವಾ ಸಾಹಿತ್ಯದಲ್ಲೂ ಬೇಕಿದ್ದರೆ ನೋಡಿ- ಹಂಸ, ನವಿಲು, ಕೋಗಿಲೆ, ಪಾರಿವಾಳ, ಕೋಳಿ, ಗಿಳಿ, ಗುಬ್ಬಚ್ಚಿ ಮುಂತಾದವುಗಳಿಗೆ ಸಿಗುವ ಪ್ರೀತ್ಯಾದರಗಳು ಕಾಗೆಗಿಲ್ಲ. “ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿಬರುತಿರಲಿ...” ಎನ್ನುತ್ತಾರೆ ಕುವೆಂಪು. ಅವರಿಗೂ ಕಾಗೆ ಬೇಕಾಗಿಲ್ಲ. ಯಾರಾದರೂ ಕೆಟ್ಟ ದನಿಯಲ್ಲಿ ಹಾಡಿದರೆ ಕಾಗೆಯ ಹೋಲಿಕೆ. ಕೆಟ್ಟ ಕೈಬರಹವಿದ್ದರೆ ಇದೇನಿದು ಕಾಗೆಕಾಲಿನಂತಿದೆ ಎಂದು ಛೀಮಾರಿ. ಅಂತೂ ಕಾಗೆ ಎಂದರೆ ಕೆಟ್ಟದು. ಪುರಾಣಕಥೆಗಳನ್ನು ಕೆದಕಿದರೂ ಅಷ್ಟೇ, ಕಾಗೆಯನ್ನು ಒಳ್ಳೆಯದಾಗಿ ಚಿತ್ರಿಸಿದ್ದು ಕಾಣಸಿಗುವುದಿಲ್ಲ. ರಾಮಾಯಣದ ಸುಂದರಕಾಂಡದಲ್ಲಿ ಕಾಕಾಸುರನ ಕಥೆ ಬರುತ್ತದೆ. ಸೀತೆ ಹನುಮಂತನ ಮೂಲಕ ರಾಮನಿಗೆ ಕಳಿಸುವ ಅಭಿಜ್ಞಾನ ಸಂದೇಶದಲ್ಲಿ ಹಿಂದೊಮ್ಮೆ ನಡೆದಿದ್ದ ಕಾಗೆಯ ಉಪಟಳದ ಘಟನೆಯನ್ನು ನೆನಪಿಸುತ್ತಾಳೆ. ಅದೆಲ್ಲ ಬೇಡಾ, ಯಾವ ಶನಿಕಾಟದಿಂದ ತಪ್ಪಿಸಬೇಕೆಂದು ನಾವೆಲ್ಲ ಬಯಸುತ್ತೇವೋ ಆ ಶನಿದೇವರ ವಾಹನವೇ ಕಾಗೆ! ಇಂತಿರುವ ಕಾಗೆಯನ್ನು ನಾವು ‘ಬುದ್ಧಿಶಾಲಿ’ ಎಂದು ಗುರುತಿಸಿದ್ದು ಈಸೋಪನ ನೀತಿಕಥೆಯಲ್ಲಿ. ಅದೇ, ಬಾಯಾರಿದ ಕಾಗೆ ಸ್ವಲ್ಪವೇ ನೀರಿದ್ದ ಹೂಜಿಯಲ್ಲಿ ಕಲ್ಲುಗಳನ್ನು ಪೇರಿಸಿ ಮನದಣಿಯೆ ನೀರು ಕುಡಿದುಕೊಂಡು ಹೋದ ಕಥೆ. ನಾವೇನೋ ಅದನ್ನು ಬರಿ ನೀತಿಕಥೆಯಾಗಿ ಓದಿದೆವು. ಆಪತ್ಕಾಲದಲ್ಲೂ ಉಪಾಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಕಲಿತುಕೊಂಡೆವು. ಆದರೆ ಕಾಗೆಯ ಮಟ್ಟಿಗೆ ಅದು ನೈಜತೆಗೆ ತೀರಾ ಸಮೀಪವಾದ ಕಥೆ. ಅಸಲಿಗೆ ಈಸೋಪನ ತಿಳುವಳಿಕೆಯನ್ನು ನಾವು ಮೆಚ್ಚಬೇಕು! ಸಕಲ ಪಕ್ಷಿಸಂಕುಲದಲ್ಲಿ ಕಾಗೆಯೇ ಅತ್ಯಂತ ಬುದ್ಧಿಶಾಲಿ ಪಕ್ಷಿ ಎಂದು ವಿಜ್ಞಾನಿಗಳು ಈಗ ಏನು ಪ್ರತಿಪಾದಿಸುತ್ತಿದ್ದಾರೋ ಈಸೋಪ ಅದನ್ನು ಆಗಲೇ ಹೇಳಿಯಾಗಿತ್ತು. ಇರಲಿ, ಈಸೋಪನನ್ನು ಅಲ್ಲೇಬಿಟ್ಟು ವಿಜ್ಞಾನಿಗಳ ಸಂಶೋಧನೆಗಳೇನು ಎಂದು ತಿಳಿದುಕೊಳ್ಳೋಣ. ಕಾಗಕ್ಕನ ಬಗ್ಗೆ ಅವರೇನು ಹೇಳುತ್ತಾರೆ ಎಂದು ಗಮನಿಸೋಣ. ನಾವು ಕಾಗೆಯ ಬಗೆಗಿನ ತುಚ್ಛ ಭಾವನೆಯಿಂದಾಗಿ ಅದನ್ನು ಅಷ್ಟೇನೂ ಗಮನಿಸುವುದಿಲ್ಲ, ಆದರೆ ಕಾಗೆ ಒಬ್ಬೊಬ್ಬ ಮನುಷ್ಯನನ್ನೂ ಸೂಕ್ಷ್ಮವಾಗಿ ಗಮನಿಸಬಲ್ಲದು, ಗುರುತಿಸಬಲ್ಲದು, ತನಗೆ ಅಪಾಯವಿದೆ ಎಂಬ ಸುಳಿವು ಸಿಕ್ಕರೆ ಸದಾ ನೆನಪಿಟ್ಟುಕೊಂಡು ಎಚ್ಚರವಾಗಿರಬಲ್ಲದು. ಅಪಾಯದ ಮಾಹಿತಿಯನ್ನು ತನ್ನ ಮರಿಗಳಿಗೂ ಕಲಿಸಿಡಬಲ್ಲದು! ಸಿಯಾಟಲ್ ವಿಶ್ವವಿದ್ಯಾಲಯದ ಕೆಲವು ‘ಕಾಕಸಂಶೋಧಕ’ ವಿಜ್ಞಾನಿಗಳು ನಡೆಸಿದ ಪ್ರಯೋಗಗಳು ಇದನ್ನು ಸಾಬೀತುಪಡಿಸಿವೆ. ಕಾಗೆಯ ದೇಹದ ಪ್ರಮಾಣಕ್ಕೆ ಹೋಲಿಸಿದರೆ ಅದರ ಮಿದುಳು ಅಷ್ಟೇನೂ ದೊಡ್ಡದಲ್ಲ, ಆದರೆ ಜೀವಸಂಕುಲದಲ್ಲಿ ಮನುಷ್ಯ ಮತ್ತು ಚಿಂಪಾಂಜಿಯನ್ನು ಬಿಟ್ಟರೆ ಅತ್ಯಂತ ವಿಕಸನಗೊಂಡಿರುವ ಮಿದುಳು ಕಾಗೆಯದು ಎಂದು ವಿಜ್ಞಾನಿಗಳ ಅಭಿಪ್ರಾಯ. ಅದಕ್ಕೆ ಮುಖ್ಯ ಪುರಾವೆಯೆಂದರೆ ಸಲಕರಣೆಗಳ (ಟೂಲ್ಸ್) ಬಳಕೆ. ಹಾಗೆಂದರೇನು? ಮರದ ಕಾಂಡದೊಳಗೆ ಒಂದಿಷ್ಟು ಹುಳಹುಪ್ಪಟೆ ಇರುವುದನ್ನು ಕಾಗೆ ನೋಡುತ್ತದೆನ್ನಿ. ಅದರ ಕೊಕ್ಕಿಗೆ ಅವು ಸಿಗುವುದಿಲ್ಲ. ಆಗ ಕಾಗೆ ಅಲ್ಲೇ ಯಾವುದಾದರೂ ಸಣ್ಣ ಗಿಡದ ಟಿಸಿಲನ್ನು ಮುರಿದು ಆ ಕಡ್ಡಿಯನ್ನು ಕೊಕ್ಕಿನಲ್ಲಿ ಹಿಡಿದು ಹುಳುಗಳನ್ನು ಈಚೆಗೆ ತರುತ್ತದೆ. ನೇರವಾದ ಕಡ್ಡಿಗೆ ಅವು ಸಿಗದಿದ್ದರೆ ಕಡ್ಡಿಯ ತುದಿಯನ್ನು ಕಾಲಿನಿಂದ ತುಸುವೇ ಬಗ್ಗಿಸಿ ಕೊಕ್ಕೆಯಂತೆ ಮಾಡಿಕೊಂಡು ಬಳಸುತ್ತದೆ. ಅಂದರೆ ಅಗತ್ಯವಿದ್ದಾಗ ಸಲಕರಣೆಗಳನ್ನು ತಾನೇ ತಯಾರಿಸಿಕೊಳ್ಳುವ ಜಾಣ್ಮೆ ಕಾಗೆಗಿದೆ! ಆಹಾರದ ಹುಡುಕಾಟದಲ್ಲಷ್ಟೇ ಅಲ್ಲ, ಗೂಡು ಕಟ್ಟುವಾಗಲೂ ವಿವಿಧ ರೀತಿಯ ಸಲಕರಣೆಗಳನ್ನು ಅದು ಬಳಸುತ್ತದೆ. ಗಟ್ಟಿಯಾದ ನೆಟ್ಟಗಿರುವ ಎಲೆಗಳಿಂದ ಗರಗಸದಂಥ ಹತ್ಯಾರಗಳನ್ನು ಮಾಡಿಕೊಳ್ಳುತ್ತದೆ. ಬಟ್ಟೆ ಒಣಗಿಸುವ ಹ್ಯಾಂಗರ್ ಎಲ್ಲೋ ಬಿದ್ದಿರುವುದು ಸಿಕ್ಕಿತೆನ್ನಿ, ಅದನ್ನೊಯ್ದು ತನಗೆ ಬೇಕಾದ ಆಕಾರಕ್ಕೆ ಬಗ್ಗಿಸಿ ಗೂಡಿನ ಫ್ರೇಮ್ವರ್ಕ್ ಮಾಡಿಕೊಳ್ಳುತ್ತದೆ. ಒಟ್ಟಿನಲ್ಲಿ ಮಾನವನ ಹೊರತಾಗಿ ನೈಸರ್ಗಿಕವಾಗಿ ಎಂಜಿನಿಯರಿಂಗ್ ಕೌಶಲ್ಯವನ್ನು ಸಾಧಿಸಿದ ಜೀವಿಯಿದ್ದರೆ ಅದು ಕಾಗೆ! ಸಲಕರಣೆಗಳ ಬಳಕೆಯೊಂದೇ ಕಾಗೆಯ ಬುದ್ಧಿಮಟ್ಟದ ಮಾಪಕವಲ್ಲ. ಮನುಷ್ಯ ಆಧುನಿಕನಾದಂತೆಲ್ಲ ಕಾಗೆಯೂ ಜೊತೆಯಾಗಿ ಹೆಜ್ಜೆಯಿಟ್ಟು ಚಾಣಾಕ್ಷತೆಯನ್ನು ಹೆಚ್ಚಿಸಿಕೊಂಡಿದೆ. ಕೆಲದಿನಗಳ ಹಿಂದೆ ಟಿ.ವಿಯಲ್ಲಿ ಒಂದು ಸಾಕ್ಷ್ಯಚಿತ್ರದಲ್ಲಿ ತೋರಿಸಿದ್ದರು- ಜಪಾನ್ನಲ್ಲಿ ಕಾಗೆಗಳು ಟ್ರಾಫಿಕ್ಸಿಗ್ನಲ್ಗಳನ್ನು ಬಳಸಿಕೊಳ್ಳುವ ರೀತಿ! ಜಪಾನ್ ದೇಶದಲ್ಲಿ ಹೇರಳವಾಗಿ ಸಿಗುವ ಅಕ್ರೂಟ್, ವಾಲ್ನಟ್ ಮುಂತಾದ ಹಣ್ಣುಗಳು ಕಾಗೆಯ ಆಹಾರ. ಆದರೆ ಅವು ಗಟ್ಟಿ ಕವಚ ಹೊಂದಿರುತ್ತವಷ್ಟೆ? ಕಾಗೆಗಳು ಅದನ್ನು ಕೊಕ್ಕಿನಲ್ಲಿ ತಂದು ಸಿಗ್ನಲ್ನಲ್ಲಿ ನಿಂತಿರುವ ವಾಹನಗಳ ಮುಂದೆ ಚೆಲ್ಲುತ್ತವೆ. ಹಸಿರುದೀಪ ಬಂದೊಡನೆ ಪಕ್ಕಕ್ಕೆ ಸರಿಯುತ್ತವೆ. ವಾಹನಗಳು ಮುಂದಕ್ಕೋಡುವಾಗ ಚಕ್ರಗಳ ಘರ್ಷಣೆಗೆ ಸಿಕ್ಕಿ ಅಕ್ರೂಟ್ ಕವಚ ಒಡೆಯುತ್ತವೆ. ಮತ್ತೊಮ್ಮೆ ಕೆಂಪುದೀಪ ಹೊತ್ತಿದಾಗ ಹೋಗಿ ಒಡೆದ ಬೀಜಗಳನ್ನು ತಿಂದುಬರುತ್ತವೆ! ಅಮೆರಿಕದಲ್ಲಿ ಪೌರಾಡಳಿತ ಅಧಿಕಾರಿಗಳು ಇನ್ನೂ ಒಂದು ಅಂಶವನ್ನು ಗಮನಿಸಿದ್ದಾರೆ. ಇಲ್ಲಿ ನಗರಪ್ರದೇಶಗಳಲ್ಲಿ ಬೇರೆಬೇರೆ ಬಡಾವಣೆಗಳಲ್ಲಿ ವಾರದ ಬೇರೆಬೇರೆ ದಿನಗಳಲ್ಲಿ ಕಸ ವಿಲೇವಾರಿ ಇರುತ್ತದೆ. ಆಯಾಯ ದಿನಗಳಂದು ನಾಗರಿಕರು ತಂತಮ್ಮ ಮನೆಗಳ ಕಸವನ್ನು ಚೀಲಗಳಲ್ಲಿ ತುಂಬಿಸಿ ರಸ್ತೆಬದಿಯಲ್ಲಿಡಬೇಕು. ಕಾಗೆಗಳು ವೇಳಾಪಟ್ಟಿಯನ್ನು ಬಾಯಿಪಾಠ ಮಾಡಿಕೊಂಡು ಆಯಾಯ ದಿನಗಳಲ್ಲಿ ಆಯಾಯ ಬಡಾವಣೆಗಳಲ್ಲಿ ಠಳಾಯಿಸುತ್ತವೆ. ಗಾರ್ಬೇಜ್ ಟ್ರಕ್ ಬರುವಷ್ಟರಲ್ಲಿ ಚೀಲಗಳಲ್ಲಿ ತಮಗೇನಾದರೂ ಸಿಗುತ್ತದೆಯೇ ಎಂದು ಕೆದಕುತ್ತವೆ. ಕಾಗೆಗಳು ಇಷ್ಟೊಂದು ಬುದ್ಧಿಶಾಲಿಗಳಾಗುವುದಕ್ಕೆ ಕಾರಣಗಳೇನಿರಬಹುದು ಎಂಬುದನ್ನೂ ಸಂಶೋಧಕರು ವಿವರಿಸುತ್ತಾರೆ. ಕುಟುಂಬಜೀವನದ ವಿಷಯದಲ್ಲಿ ಮನುಷ್ಯರಂತೆಯೇ ಕಾಗೆ ಕೂಡ. ಮನುಷ್ಯನಿಗಿಂತಲೂ ಉತ್ತಮ. ಕೂಡುಕುಟುಂಬ ವ್ಯವಸ್ಥೆ, ಆಜನ್ಮಪರ್ಯಂತ ಏಕಪತ್ನೀವ್ರತ. ಮರಿಗಳ ಲಾಲನೆಪಾಲನೆ ಭಾವನಾತ್ಮಕ ನಂಟಿನಿಂದ ನಡೆಯುತ್ತದೆ. ಮೊಟ್ಟೆಯೊಡೆದು ಬಂದ ದಿನದಿಂದಲೇ ಹಿರಿಯರ ಮಾರ್ಗದರ್ಶನದಲ್ಲಿ ಕಲಿಕೆ ಆರಂಭವಾಗುತ್ತದೆ. ಇನ್ನೊಂದು ಕಾರಣ ಕಾಗೆಯ ಆಹಾರಕ್ರಮ. ಸಸ್ಯಾಹಾರ ಮಾಂಸಾಹಾರ ಎಲ್ಲವನ್ನೂ ತಿನ್ನುವುದರಿಂದ ಸಹಜವಾಗಿಯೇ ಯಾವ ಆಹಾರವನ್ನು ಯಾವರೀತಿ ಸಂಗ್ರಹಿಸಬೇಕು ಮತ್ತು ತಿನ್ನಬೇಕು ಎಂಬ ಕಲಿಕೆ ಅಗಾಧವಾಗಿ ಬೇಕಾಗುತ್ತದೆ. ಮಾಂಸವನ್ನಷ್ಟೇ ಅಥವಾ ಹಣ್ಣುಗಳನ್ನಷ್ಟೇ ತಿನ್ನುವ ಜೀವಿಗಳಿಗಿಂತ ಕಾಗೆಯ ಮಿದುಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಮೂರನೆಯದಾಗಿ ಮನುಷ್ಯವಸತಿ ಸಾಧ್ಯವಿರುವಲ್ಲೆಲ್ಲ ಕಾಗೆಗಳೂ ಬದುಕುತ್ತವೆ. ಹೀಗೆ ವಿಶಾಲವ್ಯಾಪ್ತಿಯ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ವಿಕಸಿತ ಮಿದುಳು ಇರಬೇಕಾಗುತ್ತದೆ. ಒಟ್ಟಿನಲ್ಲಿ ಮನುಷ್ಯನಿಗೆ ಇಷ್ಟವೆನಿಸದ ಜೀವಿಯಾಗಿಯೂ ಬೌದ್ಧಿಕವಾಗಿ ಮನುಷ್ಯನ ಮಟ್ಟಕ್ಕೆ ಹತ್ತಿರವಿರುವ ಅಗ್ಗಳಿಕೆ ಕಾಗೆಯದು. ಅದೆಲ್ಲ ಸರಿ, ತಲೆಬರಹದಲ್ಲಿನ ‘ಮರ್ಡರ್’ ವಿಷಯವೇನಂತ ಗೊತ್ತಾಗಿಲ್ಲವಲ್ಲ! ಉದ್ವೇಗಕಾರಿಯಾಗಿ ಸುದ್ದಿ ಬಿತ್ತರಿಸುವ ಮಾಧ್ಯಮಗಳ ರೋಗ ಇಲ್ಲಿಗೂ ಬಂತೇ? ಹಾಗೇನಿಲ್ಲ. ಇಂಗ್ಲೀಷ್ ಭಾಷೆಯಲ್ಲಿ ಬೇರೆಬೇರೆ ಪ್ರಾಣಿ/ಪಕ್ಷಿಗಳ ಸಮೂಹಕ್ಕೆ ಆಯಾಯ ಪ್ರಭೇದವನ್ನನುಸರಿಸಿ ಬೇರೆಬೇರೆ ಪದದ ಬಳಕೆಯಿರುವುದು ನಿಮಗೆ ಗೊತ್ತಿರಬಹುದು. Flock of sheep, Herd of buffaloes ಇತ್ಯಾದಿ ಇದ್ದಂತೆ ಸಿಂಹಗಳ ಗುಂಪು Pride; ಮಂಗಗಳ ಗುಂಪು Barrel; ಇರುವೆಗಳದು Colony. ಗೂಬೆಗಳು ಗುಂಪಾಗಿ ಇದ್ದರೆ ಅದಕ್ಕೆ ಏನು ಹೆಸರು ಗೊತ್ತೇ? Parliament of owls! ಅಂತೆಯೇ ಕಾಗೆಗಳು ಗುಂಪಾಗಿ ಇರುವುದನ್ನು Murder of crows ಎನ್ನುತ್ತಾರೆ. ನೋಡಿದಿರಾ, ಕಾಗೆಯೆಂದರೆ ಕರಾಳದೃಶ್ಯವೇ ಕಣ್ಮುಂದೆ ಬರುವಂತೆ ಮಾಡಿಟ್ಟಿದ್ದಾರೆ ಭಾಷಾಪಂಡಿತರೂ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Feb 04, 2012
Agnimeele Purohitam
Saturday Feb 04, 2012
Saturday Feb 04, 2012
ದಿನಾಂಕ 05 ಫೆಬ್ರವರಿ 2012ರ ಸಂಚಿಕೆ...
ಅಗ್ನಿಮೀಳೇ ಪುರೋಹಿತಂ...
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಹತ್ತೊಂಬತ್ತನೆಯ ಶತಮಾನದಲ್ಲಿ ಮಹತ್ವದ ಸಂಶೋಧನೆಗಳಿಂದ ಮನುಕುಲದ ಯಶೋಗಾಥೆಗೆ ಹೊಸ ಅಧ್ಯಾಯಗಳನ್ನು ಸೇರಿಸಿದ ವಿಜ್ಞಾನಿಗಳಲ್ಲಿ ಥಾಮಸ್ ಆಲ್ವಾ ಎಡಿಸನ್ ಅತಿ ಪ್ರಮುಖ ಹೆಸರು. ಸಾವಿರಕ್ಕೂ ಹೆಚ್ಚು ಪೇಟಂಟ್ಗಳ ಸರದಾರ. ಇವತ್ತು ನಾವು ವಿದ್ಯುದ್ದೀಪದ ಸ್ವಿಚ್ ಆನ್ ಮಾಡಿದಾಗಲೆಲ್ಲ ಎಡಿಸನ್ ಸ್ಮರಣೆ ನಮಗರಿವಿಲ್ಲದಂತೆಯೇ ಆಗಿರುತ್ತದೆ. ಚಲನಚಿತ್ರ ಬಿಂಬಗ್ರಾಹಿ (ಮೋಷನ್ ಪಿಕ್ಚರ್ ಕ್ಯಾಮೆರಾ) ಸಹ ಎಡಿಸನ್ನದೇ ಕೊಡುಗೆ. ಹಾಗೆಯೇ ಧ್ವನಿಮುದ್ರಕ ಯಂತ್ರ (ಫೋನೊಗ್ರಾಫ್) ಕೂಡ. 1877ರಲ್ಲಿ ಅದರ ಆವಿಷ್ಕಾರವಾದಾಗಂತೂ ಜನ ಎಷ್ಟು ನಿಬ್ಬೆರಗಾಗಿದ್ದರೆಂದರೆ ಎಡಿಸನ್ ಒಬ್ಬ ಮಾಂತ್ರಿಕ ಶಕ್ತಿಯುಳ್ಳ ವ್ಯಕ್ತಿ ಎಂದೇ ನಂಬಲಾಗಿತ್ತು. ಆರಂಭದ ಆವೃತ್ತಿಯಲ್ಲಿ ಎಡಿಸನ್ನ ಫೋನೊಗ್ರಾಫ್ ಯಂತ್ರವು ಸಿಲಿಂಡರ್ ಆಕೃತಿಯ ರಚನೆಯನ್ನು ಹೊಂದಿತ್ತು. ಆಮೇಲಷ್ಟೇ ತಟ್ಟೆ(ಡಿಸ್ಕ್)ಗಳ ಮೇಲೆ ಧ್ವನಿಮುದ್ರಣ ಶುರುವಾದದ್ದು. ಎಡಿಸನ್ ಮೊಟ್ಟಮೊದಲಿಗೆ ರೆಕಾರ್ಡ್ ಮಾಡಿದ್ದು ತನ್ನದೇ ಧ್ವನಿಯಲ್ಲಿ ‘ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್...’ ನರ್ಸರಿ ರೈಮ್ ಅಥವಾ ಶಿಶುಗೀತೆಯ ಸಾಲುಗಳನ್ನು. ಅದೇನಿದ್ದರೂ ಪ್ರಯೋಗಕ್ಕಷ್ಟೇ. ಏಕೆಂದರೆ ಫೋನೊಗ್ರಾಫ್ ಆವಿಷ್ಕಾರದ ಹಿಂದೆ ಎಡಿಸನ್ಗಿದ್ದ ಮುಖ್ಯ ಉದ್ದೇಶ ಮನರಂಜನೆಯದಲ್ಲ. ಬದಲಿಗೆ ಆ ಕಾಲದ ಪ್ರಾಜ್ಞರ, ಪ್ರಖ್ಯಾತರ, ಸಮಾಜದ ಗಣ್ಯರ ಧ್ವನಿಯನ್ನು ಮುದ್ರಿಸಿಟ್ಟುಕೊಂಡು ಅದು ಮುಂದಿನ ತಲೆಮಾರಿಗೂ ಸುಲಭವಾಗಿ ಸಿಗುವಂತೆ ಮಾಡುವುದು. ಹೀಗೆ ನುಡಿಮುತ್ತುಗಳಿಗಾಗಿ, ಉಪದೇಶಾಮೃತಗಳಿಗಾಗಿ ವಿದ್ವಾಂಸರ ಹುಡುಕಾಟದಲ್ಲಿದ್ದಾಗ ಎಡಿಸನ್ಗೆ ನೆನಪಾದವರೇ ಜರ್ಮನಿಯ ಪ್ರಖ್ಯಾತ ವಿದ್ವಾಂಸ ಮ್ಯಾಕ್ಸ್ಮುಲ್ಲರ್. ಹತ್ತೊಂಬತ್ತನೆಯ ಶತಮಾನದಲ್ಲಿ ಯುರೋಪ್ನಲ್ಲಿ ಬಾಳಿದ ಪ್ರಖರ ವರ್ಚಸ್ಸಿನ ಪ್ರಕಾಂಡ ಪಂಡಿತ. ಅವರಿಗೆ ಎಡಿಸನ್ ಪತ್ರ ಬರೆದು ತನ್ನ ಫೋನೊಗ್ರಾಫ್ ಆವಿಷ್ಕಾರದ ಬಗ್ಗೆ ವಿವರಿಸಿ, ತಾನು ಅವರನ್ನು ಒಮ್ಮೆ ಭೇಟಿಯಾಗಲು ಇಚ್ಛಿಸುವುದಾಗಿ ಕೋರಿಕೆ ಸಲ್ಲಿಸಿದ. ಎಡಿಸನ್ ಬಗ್ಗೆ ಆಗಲೇ ಸಾಕಷ್ಟು ತಿಳಿದುಕೊಂಡಿದ್ದ ಮ್ಯಾಕ್ಸ್ಮುಲ್ಲರ್ ಸಂತೋಷದಿಂದ ಒಪ್ಪಿದರು. ಅದೇ ವರ್ಷ ಲಂಡನ್ನಲ್ಲಿ ವಿದ್ವಾಂಸರ ಸಭೆಯೊಂದರಲ್ಲಿ ತಾನು ಭಾಗವಹಿಸುತ್ತಿದ್ದು ಅಲ್ಲಿಗೆ ಬಂದು ಭೇಟಿಯಾಗುವಂತೆ ಎಡಿಸನ್ಗೆ ತಿಳಿಸಿದರು. ಆಗಿನ್ನೂ ಹತ್ತೊಂಬತ್ತನೇ ಶತಮಾನ. ವಿಮಾನಯಾನ ಆರಂಭವಾಗಿರಲಿಲ್ಲವಲ್ಲ? ವಿದೇಶಪ್ರಯಾಣ ಏನಿದ್ದರೂ ಹಡಗಿನ ಮೂಲಕವೇ. ಅಮೆರಿಕದಿಂದ ಯುರೋಪ್ಗೆ ಹೋಗುವ ಪ್ಯಾಸೆಂಜರ್ ಹಡಗಿನಲ್ಲಿ ಟಿಕೇಟ್ ಬುಕ್ ಮಾಡಿ ಎಡಿಸನ್ ತನ್ನ ಪ್ರವಾಸವನ್ನು ನಿಗದಿಪಡಿಸಿಕೊಂಡ. ಫೋನೊಗ್ರಾಫ್ ಮತ್ತಿತರ ಪ್ರಯೋಗ ಸಲಕರಣೆಗಳನ್ನು ಪೇರಿಸಿಕೊಂಡು ಹೊರಟ. ಇಂಗ್ಲೇಂಡ್ನಲ್ಲಿ ಅವನಿಗೆ ಭವ್ಯವಾದ ಸ್ವಾಗತ ಸಿಕ್ಕಿತು. ಮ್ಯಾಕ್ಸ್ಮುಲ್ಲರ್ ಹೇಳಿದ್ದ ವಿದ್ವತ್ಸಭೆ ನಡೆದದ್ದು ಲಂಡನ್ನಲ್ಲಿ ಫ್ರೆಡೆರಿಕ್ ಮೌಲ್ಟನ್ ಎಂಬಾತನ ನಿವಾಸದಲ್ಲಿ. ಅಲ್ಲಿಗೆ ಬಿಜಯಂಗೈದ ತರುಣ ವಿಜ್ಞಾನಿ ಎಡಿಸನ್. ವಿದ್ವತ್ಸಭೆಯಲ್ಲಿ ಅವನನ್ನು ಪರಿಚಯಿಸಲಾಯ್ತು. ಆಮೇಲೆ ಮ್ಯಾಕ್ಸ್ಮುಲ್ಲರ್ರನ್ನು ವೇದಿಕೆಯ ಮೇಲಕ್ಕೆ ಕರೆದ ಎಡಿಸನ್ ತನ್ನ ಫೋನೊಗ್ರಾಫ್ ಯಂತ್ರದ ಕಿವಿಯಲ್ಲಿ ಏನನ್ನಾದರೂ ಮಾತನಾಡುವಂತೆ ಅವರನ್ನು ಕೇಳಿಕೊಂಡ. ಮ್ಯಾಕ್ಸ್ಮುಲ್ಲರ್ ಹಾಗೆಯೇ ಮಾಡಿದರು. ಅದನ್ನು ರೆಕಾರ್ಡ್ ಮಾಡಿಕೊಂಡ ಎಡಿಸನ್ ಮಧ್ಯಾಹ್ನದ ನಂತರ ಸಭೆಯಲ್ಲಿ ಅದನ್ನು ಎಲ್ಲರಿಗೂ ಕೇಳಿಸುವುದಾಗಿ ತಿಳಿಸಿ ತನ್ನ ಸಂಚಾರಿ ಪ್ರಯೋಗಾಲಯಕ್ಕೆ ಹಿಂದಿರುಗಿದ. ಮ್ಯಾಕ್ಸ್ಮುಲ್ಲರ್ ಮಾತುಗಳು ಧ್ವನಿಮುದ್ರಿತವಾಗಿದ್ದ ಫೋನೋಗ್ರಾಫ್ ಯಂತ್ರದ ಸಿಲಿಂಡರ್ಅನ್ನು ಸಂಸ್ಕರಿಸಿದ. ಸಂಜೆ ಸಭೆಯಲ್ಲಿ ಆ ಧ್ವನಿಮುದ್ರಣವನ್ನು ಪ್ಲೇ ಮಾಡಲಾಯಿತು. ಸಭಿಕರೆಲ್ಲ ಅದೇಮೊದಲ ಬಾರಿಗೆ ಫೋನೊಗ್ರಾಫ್ನ ಕಾರ್ಯವೈಖರಿಯನ್ನು ನೋಡಿ ಬೆಕ್ಕಸಬೆರಗಾದರು. ಮ್ಯಾಕ್ಸ್ಮುಲ್ಲರ್ರಂಥ ವಿದ್ವಾಂಸರ ಧ್ವನಿ ಈರೀತಿ ಮುದ್ರಿತವಾಗಿ ಮುಂದಿನ ತಲೆಮಾರಿನವರೂ ಕೇಳುವಂತಾದ್ದನ್ನು ನೋಡಿ ತುಂಬಾ ಖುಷಿಪಟ್ಟರು. ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ವಿಜ್ಞಾನಿ ಎಡಿಸನ್ನ ಕಾರ್ಯಕೌಶಲ್ಯವನ್ನು ಕೊಂಡಾಡಿದರು. ಮತ್ತೆ ವೇದಿಕೆಗೆ ಬಂದ ಮ್ಯಾಕ್ಸ್ಮುಲ್ಲರ್ ಸಭೆಯನ್ನುದ್ದೇಶಿಸಿ ಹೇಳಿದರು- “ಬೆಳಿಗ್ಗೆ ನಾನು ಈ ಯಂತ್ರದ ಕಿವಿಯಲ್ಲಿ ಮಾತಾಡಿದ್ದನ್ನು ನೀವು ಕೇಳಿಸಿಕೊಂಡಿದ್ರಿ. ಈಗ ಅದು ನನ್ನ ಧ್ವನಿಯನ್ನು ಯಥಾವತ್ತಾಗಿ ಹೊರಗೆಡಹಿದ್ದನ್ನೂ ಕೇಳಿದಿರಿ. ಬೆಳಿಗ್ಗೆ ನಾನು ಹೇಳಿದ್ದಾಗಲೀ ಈಗ ಈ ಯಂತ್ರ ಹೇಳಿದ್ದಾಗಲೀ ನಿಮಗೇನಾದರೂ ಅರ್ಥವಾಯ್ತೇ?” ಸಭೆಯಲ್ಲಿ ನೀರವ ಮೌನ. ನಿಜಕ್ಕೂ ಮ್ಯಾಕ್ಸ್ಮುಲ್ಲರ್ ಏನು ಮಾತಾಡಿದ್ದರೆಂದು ಸಭಿಕರಿಗೆ ಅರ್ಥವಾಗಿರಲಿಲ್ಲ. ಎಡಿಸನ್ನ ಯಂತ್ರವೂ ಅದನ್ನೇ ಪುನರುಚ್ಚರಿಸಿದ್ದರಿಂದ ಅದೂ ಅರ್ಥವಾಗಿರಲಿಲ್ಲ ಬಿಡಿ. ಅವರಿಗೆಲ್ಲ ಅದು ಗ್ರೀಕ್ ಏಂಡ್ ಲ್ಯಾಟಿನ್ ಆದಂತಾಯ್ತು ಎನ್ನುವಂತೆಯೂ ಇರಲಿಲ್ಲ. ಏಕೆಂದರೆ ಯುರೋಪ್ನ ವಿವಿಧೆಡೆಗಳಿಂದ ಬಂದಿದ್ದ ಆ ವಿದ್ವಾಂಸರಲ್ಲಿ ಅನೇಕರಿಗೆ ಗ್ರೀಕ್ ಅಥವಾ ಲ್ಯಾಟಿನ್ ಭಾಷೆ ಗೊತ್ತಿತ್ತು. ಅಂಥವರೂ ಮ್ಯಾಕ್ಸ್ಮುಲ್ಲರ್ ಹೇಳಿದ್ದೇನೆಂದು ಅರಿಯದಾದರು. ಕೊನೆಗೆ ಮ್ಯಾಕ್ಸ್ಮುಲ್ಲರ್ ಮಾತು ಮುಂದುವರಿಸಿದರು- “ನಾನು ಆಗ ಮಾತಾಡಿದ್ದ ಭಾಷೆ ಸಂಸ್ಕೃತ! ನಾನು ಹೇಳಿದ್ದು ಋಗ್ವೇದದ ಮೊಟ್ಟಮೊದಲ ಶ್ಲೋಕ- ಅಗ್ನಿಮೀಳೇ ಪುರೋಹಿತಂ... ಯಜ್ಞಸ್ಯ ದೇವಂ ಋತ್ವಿಜಂ... ಹೋತಾರಂ ರತ್ನಧಾತಮಂ... ಇದು ಮನುಕುಲದ ಅತ್ಯಂತ ಪುರಾತನ ಪಠ್ಯವೆನಿಸಿರುವ ವೇದಗಳ ಪೈಕಿ ಮೊದಲನೆಯದಾದ ಋಗ್ವೇದದ ಮೊಟ್ಟಮೊದಲ ಸಾಲು. ಮನುಷ್ಯನ ಧ್ವನಿಯನ್ನು ಸಂಗ್ರಹಿಸಿಡಲು ಎಡಿಸನ್ ಆವಿಷ್ಕರಿಸಿರುವ ಯಂತ್ರದಲ್ಲಿ ನನ್ನ ಧ್ವನಿಯೂ ಮುದ್ರಿತವಾಗಬೇಕೆಂದಾದರೆ ಅದು ವೇದಪಾಠವೇ ಆಗಿರಲಿ ಎಂದುಕೊಂಡು ಉದ್ದೇಶಪೂರ್ವಕವಾಗಿ ಇದನ್ನು ಆಯ್ದುಕೊಂಡೆ!” ‘ದ ಲೈಫ್ ಏಂಡ್ ಲೆಟರ್ಸ್ ಆಫ್ ಮ್ಯಾಕ್ಸ್ಮುಲ್ಲರ್’ ಎಂಬ ಪುಸ್ತಕದಲ್ಲಿ ಈ ಘಟನೆಯ ವಿವರಣೆ ಬರುತ್ತದೆ. ಅವತ್ತಿನ ಸಭೆಯಲ್ಲಿ ಪಾಲ್ಗೊಂಡಿದ್ದ ವಿದ್ವಾಂಸ ಮಾನ್ಕ್ಯೂರ್ ಕಾನ್ವೆ ಎಂಬಾತನ ಪತ್ರವನ್ನು ಉಲ್ಲೇಖಿಸಿ ಪುಸ್ತಕದಲ್ಲಿ ಹೀಗೆ ಬರೆಯಲಾಗಿದೆ- “ಮ್ಯಾಕ್ಸ್ಮುಲ್ಲರ್ ಆ ಸಂಸ್ಕೃತ ಶ್ಲೋಕದ ಅರ್ಥವನ್ನು ಸಭಿಕರಿಗೆ ವಿವರಿಸಿದರು. ‘ಅಗ್ನಿದೇವನೇ ನಿನ್ನನ್ನು ಪ್ರಾರ್ಥಿಸುತ್ತಿದ್ದೇವೆ. ಅಂಧಕಾರವನ್ನು ಕರಗಿಸಿ ಬೆಳಗುವವನೇ ನಿನ್ನೆಡೆಗೆ ಅನುದಿನವೂ ಬರುತ್ತಿದ್ದೇವೆ, ಭಕ್ತಿಯಿಂದ ಮತ್ತು ಕೃತಜ್ಞತಾಭಾವದಿಂದ. ಯಜ್ಞದ ದೈವಿಕ ಪುರೋಹಿತನಾದ ನಿನಗಿದೋ ವಂದನೆ.’ ಮ್ಯಾಕ್ಸ್ಮುಲ್ಲರ್ ಮಾತುಗಳನ್ನು ಎಲ್ಲರೂ ತದೇಕಚಿತ್ತದಿಂದ ಕೇಳುತ್ತಿದ್ದರು. ಈ ಶ್ಲೋಕಗಳು ಭರತಭೂಮಿಯಲ್ಲಿ ಸಹಸ್ರಾರು ವರ್ಷಗಳಿಂದಲೂ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಅನೂಚಾನವಾಗಿ ವರ್ಗಾವಣೆಯಾಗುತ್ತ ಬಂದಿವೆ. ಇವತ್ತೀಗ ಎಡಿಸನ್ನ ಫೋನೊಗ್ರಾಫ್ ಯಂತ್ರ ಏನು ಚಮತ್ಕಾರವನ್ನು ತೋರಿಸಿದೆಯೋ ವೇದಾಧ್ಯಯನಗೈದ ಭಾರತೀಯರು ಅದನ್ನು, ಅಂದರೆ ಕೇಳಿಸಿಕೊಂಡದ್ದನ್ನು ಸ್ಮೃತಿಪಟಲದಲ್ಲಿ ಸಂಗ್ರಹಿಸಿಟ್ಟು ಬೇಕಾದಾಗ ಪುನರುಚ್ಚರಿಸುವುದನ್ನು, ಶ್ರದ್ಧೆ ಭಯಭಕ್ತಿಗಳಿಂದ ಒಂದು ಪರಂಪರೆಯಾಗಿ ಮಾಡಿಕೊಂಡು ಬಂದಿದ್ದಾರೆ. ವಿಶ್ವಕ್ಕೆಲ್ಲ ಅನ್ವಯವಾಗುವಂಥ ಅಧ್ಯಾತ್ಮ ತತ್ತ್ವಗಳನ್ನು ವೇದಗಳ ರೂಪದಲ್ಲಿ ನೀಡಿದ್ದಾರೆ... ಮ್ಯಾಕ್ಸ್ಮುಲ್ಲರ್ ವಿವರಣೆ ಸಾಗುತ್ತಿದ್ದಂತೆ ಸಭಿಕರಿಗೆಲ್ಲ ರೋಮಾಂಚನ. ಮ್ಯಾಕ್ಸ್ಮುಲ್ಲರ್ ಕೋರಿಕೆಯ ಮೇರೆಗೆ ‘ಅಗ್ನಿಮೀಳೇ ಪುರೋಹಿತಂ...’ ಧ್ವನಿಮುದ್ರಣವನ್ನು ಮತ್ತೊಮ್ಮೆ ಪ್ಲೇ ಮಾಡಲಾಯಿತು. ಈಗ ಎಡಿಸನ್ ಆದಿಯಾಗಿ ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದ್ದು ಮ್ಯಾಕ್ಸ್ಮುಲ್ಲರ್ನ ನಿರರ್ಗಳ ವಾಗ್ಝರಿಗೆ. ಅವರು ವಿವರಿಸಿದ ಸನಾತನ ಭಾರತೀಯ ಸಂಸ್ಕೃತಿಯ ಹಿರಿಮೆಗೆ.” ಅಮೆರಿಕದ ವಿಜ್ಞಾನಿ ಎಡಿಸನ್ ರಚಿಸಿದ ಫೋನೊಗ್ರಾಫ್ ಯಂತ್ರದಲ್ಲಿ ಜರ್ಮನಿಯ ವಿದ್ವಾಂಸ ಮ್ಯಾಕ್ಸ್ಮುಲ್ಲರ್ ಭಾರತದ ವೇದಭಾಗವನ್ನು ಪಠಣ ಮಾಡಿದ ಸತ್ಯಕತೆ ಇದು. ಕೊಲ್ಕೊತ್ತಾದ ರಾಮಕೃಷ್ಣ ಮಿಷನ್ನ ಸ್ವಾಮಿ ರಂಗನಾಥಾನಂದರು 2000ದಲ್ಲಿ ಮ್ಯಾಕ್ಸ್ಮುಲ್ಲರ್ ಮತ್ತು ಸಮಕಾಲೀನರ ಕುರಿತ ವಿಚಾರಸಂಕಿರಣವೊಂದರಲ್ಲಿ ಮಾಡಿದ ಆಶಯ ಭಾಷಣದಲ್ಲಿಯೂ ಇದು ಪ್ರಸ್ತಾಪವಾಗಿತ್ತಂತೆ. ಹಾಗೆಯೇ ಎಚ್ಎಂವಿ ಕಂಪನಿಯು ಹಿಂದೊಮ್ಮೆ ಪ್ರಕಟಿಸಿದ್ದ ಗ್ರಾಮೊಫೋನ್ ರೆಕಾರ್ಡ್ಗಳ ಚರಿತ್ರೆಯನ್ನೊಳಗೊಂಡಿದ್ದ ಕರಪತ್ರಗಳಲ್ಲೂ. ಮ್ಯಾಕ್ಸ್ಮುಲ್ಲರ್ ಸನಾತನ ಹಿಂದೂ ಸಂಸ್ಕೃತಿಯನ್ನು, ವೇದೋಪನಿಷತ್ತುಗಳ ಸಾರಸತ್ವವನ್ನು, ಭಗವದ್ಗೀತೆಯ ಭವ್ಯತೆಯನ್ನು, ಸಂಸ್ಕೃತ ಭಾಷೆಯ ಶ್ರೇಷ್ಠತೆಯನ್ನು ಜಗತ್ತಿಗೆ ಪರಿಚಯಿಸಿದ ಮಹಾತ್ಮ. ಅವರ ಸಮಕಾಲೀನ ವಿದ್ವಾಂಸರೂ ವಿಜ್ಞಾನಿಗಳೂ ಅದನ್ನು ಸಾದರದಿಂದ ಸ್ವೀಕರಿಸಿದ್ದರು. ಉದಾಹರಣೆಗೆ ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಸಹ ಭಗವದ್ಗೀತೆಯನ್ನು, ಭಾರತೀಯ ಸಂಸ್ಕೃತಿಯು ಜಗತ್ತಿಗೆ ಹಂಚಿದ ಜ್ಞಾನಸುಧೆಯನ್ನು ಬಹಳವಾಗಿ ಗೌರವವಿಸಿದವನೇ. ಅವರೆಲ್ಲ ಸನಾತನ ಹಿಂದೂ ಸಂಸ್ಕೃತಿಯನ್ನು ಮೆಚ್ಚಿದರು, ಗೌರವಿಸಿದರು, ಅದರಿಂದ ಪ್ರಭಾವಿತರಾದರು, ಪ್ರಯೋಜನ ಪಡಕೊಂಡರು. ಏಕೆಂದರೆ ಅವರು ಅದನ್ನು ಮನುಕುಲದ ಒಳಿತಿನ ವಿಶಾಲ ದೃಷ್ಟಿಯಿಂದ ನೋಡಿದರು; ಜಾತಿ-ಮತ-ಧರ್ಮಗಳ ರಾಜಕೀಯ ಬಣ್ಣದ ಕನ್ನಡಕದಿಂದಲ್ಲ. ಅವರು ಅದರಲ್ಲಿ ಸಾರ್ವತ್ರಿಕ ಸಾರ್ವಕಾಲಿಕ ಸತ್ಯವನ್ನು ಕಂಡುಕೊಂಡರು; ಸ್ವಾರ್ಥದ ಬೇಳೆಬೇಯಿಸಿಕೊಳ್ಳುವ ಸದವಕಾಶವನ್ನಲ್ಲ. ಆನೋ ಭದ್ರಾಃ ಕೃತವೋಯಂತು ವಿಶ್ವತಃ ಎಂಬುದನ್ನೇ ಅವರು ಪಾಲಿಸಿದರು; ನೈತಿಕ ದಿವಾಳಿತನದ ಢೋಂಗಿ ವಿಚಾರವಾದವನ್ನಲ್ಲ. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125