Episodes
Saturday Dec 03, 2011
Bus Drivers Remembered And Respected
Saturday Dec 03, 2011
Saturday Dec 03, 2011
ದಿನಾಂಕ 4 ಡಿಸೆಂಬರ್ 2011ರ ಸಂಚಿಕೆ...
ಬಸ್ ಡ್ರೈವರರ ಗುಣಗಾನ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಮಾಲ್ಗುಡಿ ಡೇಸ್ ಮಾತ್ರವಲ್ಲ, ಆರ್.ಕೆ.ನಾರಾಯಣ್ರ ಎಲ್ಲ ಕಥೆ-ಕಾದಂಬರಿಗಳಲ್ಲಿನ ಪಾತ್ರಗಳದೂ ಒಂದು ವಿಶಿಷ್ಟ ಛಾಪು. ಅವು ಓದುಗನನ್ನು ಆಪ್ಯಾಯಮಾನವಾಗಿ ತಟ್ಟುತ್ತವೆ. ಮುಟ್ಟಿ ಮೈದಡವಿ ಕುಶಲ ಕೇಳುವ ಆಪ್ತತೆ ಅವುಗಳಲ್ಲಿರುತ್ತದೆ. ಅಸಲಿಗೆ ಅವುಗಳನ್ನು ಕಥಾಪಾತ್ರಗಳು ಎನ್ನುವುದಕ್ಕಿಂತ ನಮ್ಮ ಸುತ್ತಲಿನ ಜನಸಾಮಾನ್ಯರಿಂದ ಆಯ್ದುಕೊಂಡ ವ್ಯಕ್ತಿಗಳು ಎಂದರೂ ಸರಿಯೇ. ಒಬ್ಬ ಅಂಚೆಯಣ್ಣ ತಾನಪ್ಪ, ಸಿಹಿತಿಂಡಿ ಅಂಗಡಿಯ ಮಿಠಾಯಿವಾಲಾ ಜಗನ್, ಪ್ರವಾಸಿಗರ ಗೈಡ್ ರಾಜು, ಪ್ರಿಂಟಿಂಗ್ ಪ್ರೆಸ್ನ ನಟರಾಜ್, ಇಂಗ್ಲಿಷ್ ಲೆಕ್ಚರರ್ ಕೃಷ್ಣ, ಬ್ಯಾಂಕರ್ ಮಾರ್ಗಯ್ಯ ಮುಂತಾದವರೆಲ್ಲ ನಮಗೆ ಇವತ್ತಿಗೂ ಅಲ್ಲಲ್ಲಿ ಭೇಟಿಯಾಗುತ್ತಾರೆ. ಅವರ ತದ್ರೂಪಿಗಳು ನಮ್ಮ ಆಸುಪಾಸಿನಲ್ಲಿ ಕಂಡುಬರುತ್ತಾರೆ. ಮತ್ತೆ ತುಂಟ ಹುಡುಗ ಸ್ವಾಮಿನಾಥನ್ (ಚಾಮಿ) ಅಂತೂ ಮನೆಮನೆಯಲ್ಲೂ ಇರುವವನೇ. ಮಾಲ್ಗುಡಿ ಡೇಸ್ ಟಿವಿ ಧಾರಾವಾಹಿಯ ಅಭೂತಪೂರ್ವ ಯಶಸ್ಸಿಗೂ ಮುಖ್ಯ ಕಾರಣ ಅದರಲ್ಲಿನ ಸರಳಾತಿಸರಳ, ಚಿರಪರಿಚಿತ ಎನ್ನುವಂಥ ಪಾತ್ರಗಳೇ. ಇರಲಿ, ನಾನೀಗ ಮಾಡಹೊರಟಿರುವುದು ಆರ್.ಕೆ.ನಾರಾಯಣ್ ಸಾಹಿತ್ಯ ವಿಮರ್ಶೆಯಲ್ಲ. ಅದಕ್ಕೆ ಅರ್ಹತೆಯೂ ನನ್ನಲ್ಲಿಲ್ಲ. ಆದರೆ ಬಹಳ ದಿನಗಳಿಂದ ಅಂದ್ಕೊಳ್ತಿದ್ದೆ ಆರ್.ಕೆ.ನಾರಾಯಣ್ ಕಲ್ಪನೆಯ ಪಾತ್ರಗಳಂತಿರುವ, ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಯಾವುದಾದರೂ ಒಂದು ವೃತ್ತಿಪಾತ್ರವನ್ನು ಆಯ್ದುಕೊಂಡು ಸೋದಾಹರಣವಾಗಿ ಬರೆಯಬೇಕು ಅಂತ. ಹಾಗೆ ಯೋಚಿಸುತ್ತಿದ್ದಾಗ (ಆಕ್ಚುವಲಿ ಬಸ್ನಲ್ಲಿ ಹೋಗುತ್ತಿದ್ದಾಗ) ಹೊಳೆದದ್ದೇ ಬಸ್ ಡ್ರೈವರ್ಗಳ ಬಗ್ಗೆಯೇ ಯಾಕಾಗಬಾರದು ಎಂಬ ಐಡಿಯಾ. ನನಗೆ ತಿಳಿದ ಮಟ್ಟಿಗೆ ಬಸ್ ಡ್ರೈವರ್ ಪಾತ್ರವನ್ನು ಪ್ರಧಾನ ಭೂಮಿಕೆಯಲ್ಲಿಟ್ಟು ಆರ್.ಕೆ.ನಾರಾಯಣ್ ಬರೆದಿಲ್ಲ. ಆ ನಿಟ್ಟಿನಲ್ಲಿ ನನ್ನದೊಂದು ಪುಟ್ಟ ಪ್ರಯತ್ನ. ನನ್ನ ನೆನಪಿಗೆ ಬರುವ ಕೆಲವು ಬಸ್ ಡ್ರೈವರರ ಕುರಿತು ಒಂದೊಂದು ಪ್ಯಾರಗ್ರಾಫ್ ಬರೆದರೂ ಸಾಕು ಒಟ್ಟುಸೇರಿ ಅದೊಂದು ಹಿತಾನುಭವ ನೀಡಬಹುದು, ನಿಮ್ಮ ಚಿತ್ತಭಿತ್ತಿಯಲ್ಲೂ ಬೇರೆಬೇರೆ ಬಸ್ ಡ್ರೈವರರ ಚಿತ್ರ ಮೂಡಬಹುದು ಎಂಬ ಆಶಯ. ಇದು ಬಸ್ ಡ್ರೈವರರ ಗುಣಗಾನ. ಇಲ್ಲಿ ಅಮೆರಿಕದ ಪ್ರಾಥಮಿಕ ಶಾಲೆಗಳಲ್ಲಿ ‘ಬಸ್ ಡ್ರೈವರ್ ಎಪ್ರೀಸಿಯೇಷನ್ ಡೇ’ (ಶೈಕ್ಷಣಿಕ ವರ್ಷದಲ್ಲೊಂದು ದಿನ ಆಯಾಯ ಸ್ಕೂಲ್ಬಸ್ಗಳ ಚಾಲಕರನ್ನು ತರಗತಿಗಳೊಳಗೆ ಕರೆದು ಮಕ್ಕಳಿಂದ ಅವರಿಗೆ ಗೌರವ ಕೃತಜ್ಞತೆ ಸಲ್ಲಿಕೆ) ಇರುವಂತೆ ಒಂದು ವಿಶಿಷ್ಟ ಪ್ರಯೋಗ. ಮೂರ್ನಾಲ್ಕು ದಶಕಗಳ ಹಿಂದಿನ ಮಾತು. ಆಗ ಕಾರ್ಕಳದಿಂದ ನಮ್ಮೂರು ಮಾಳಕ್ಕೆ ‘ವಿನಾಯಕ ಮೋಟರ್ ಸರ್ವೀಸ್’ ಎಂಬ ಬಸ್ಸು ಬಂದುಹೋಗುತ್ತಿತ್ತು. ದಿನಕ್ಕೆ ನಾಲ್ಕು ಟ್ರಿಪ್. ನಮ್ಮೂರಿಗೆ ಬಸ್ ಸರ್ವೀಸ್ ಆರಂಭವಾದಾಗ ಇದ್ದ ಡ್ರೈವರನ ಹೆಸರು ಶಂಕರ. ಆತನ ಮುಖಚಹರೆ ನನಗೆ ಅಷ್ಟು ಸರಿಯಾಗಿ ನೆನಪಿಲ್ಲ. ಆಮೇಲೆ ತುಂಬಾ ವರ್ಷಗಳ ಕಾಲ ಹರಿಯಪ್ಪ ಎಂಬುವವ ವಿನಾಯಕ ಬಸ್ಸಿನ ಡ್ರೈವರ್. ನಮ್ಮೂರಿಗೆ ಹೊರಜಗತ್ತಿನೊಂದಿಗೆ ಕೊಂಡಿಯೆಂದರೆ ಆ ಬಸ್ ಒಂದೇ. ಮಳೆಗಾಲದಲ್ಲಿ ಅದೂ ಇಲ್ಲ. ಹಾಗಾಗಿ ಹರಿಯಪ್ಪನೆಂದರೆ ನಮ್ಮೂರಿಗೆ ದೇವದೂತ ಇದ್ದಂತೆ. ಬೆಳಗ್ಗಿನ ಮೊದಲ ಟ್ರಿಪ್ನಲ್ಲಿ ಕಾರ್ಕಳದಿಂದ ದಿನಪತ್ರಿಕೆಯ ಕಟ್ಟು ತರುವವನೂ ಅವನೇ. ‘ಸಟ್ಟಾ’ ಆಟದ ಓಪನಿಂಗ್ ಕ್ಲೋಸಿಂಗ್ ಅಂಕಿಗಳನ್ನು ತಿಳಿಯಹೇಳುವವನೂ ಅವನೇ. ಊರಿನವರಿಗೆಲ್ಲ ಪರಿಚಿತ, ಆಪ್ತ. ಅಪರೂಪಕ್ಕೆ ರಜೆ ಹಾಕಿದಂದು ಬದಲಿ ಡ್ರೈವರ್ ಬಂದರೆ ಇದು ನಮ್ಮ ಬಸ್ಸು ಹೌದೋಅಲ್ಲವೋ ಎಂದು ಅನುಮಾನ. ಅಂತಹ ಅವಿನಾಭಾವ ಸಂಬಂಧ. ನನ್ನ ಅಜ್ಜನಮನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ. ನಮ್ಮೂರಿಂದ ಅಲ್ಲಿಗೆ ಹೋಗಬೇಕಿದ್ದರೆ ಕಾರ್ಕಳದಿಂದ ಗುರುವಾಯನಕೆರೆಗೆ ಹೋಗುವ ಖಾಸಗಿ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಗವರ್ನ್ಮೆಂಟ್ ಬಸ್ ಹಿಡಿಯಬೇಕು. ಕಾರ್ಕಳ-ಗುರುವಾಯನಕೆರೆ ರೂಟ್ನಲ್ಲಿ ಬೇರೆಬೇರೆ ಕಂಪನಿಗಳ ಪ್ರೈವೇಟ್ ಬಸ್ಸುಗಳಿವೆಯಾದರೂ ‘ರಾಜ್ಶೆಟ್ಟಿಯ ಹನುಮಾನ್ ಬಸ್ಸು’ ನಮಗೆಲ್ಲ ತುಂಬಾ ಇಷ್ಟವಾಗುತ್ತಿದ್ದದ್ದು. ನನಗೆ ನೆನಪಿರುವಂತೆ ರಾಜ್ಶೆಟ್ಟಿ ಅದೇ ಹನುಮಾನ್ ಟ್ರಾನ್ಸ್ಪೋರ್ಟ್ ಕಂಪನಿಯ ಅದೇ ರೂಟ್ನಲ್ಲಿ ತುಂಬಾ ವರ್ಷ ಸೇವೆ ಸಲ್ಲಿಸಿದ ಜನಾನುರಾಗಿ ಡ್ರೈವರ್. ಕಾರ್ಕಳದಿಂದ ಗುರುವಾಯನಕೆರೆ ಮಾರ್ಗದಲ್ಲಿ ಸಿಗುವ ಸಣ್ಣಪುಟ್ಟ ಊರುಗಳಲ್ಲೆಲ್ಲ ರಾಜ್ಶೆಟ್ಟಿ ಸೇವೆಯ ಫಲಾನುಭವಿಗಳು. ಪತ್ರಿಕೆಗಳ ಕಟ್ಟು, ಮಲ್ಲಿಗೆ ದಂಡೆ, ಬೀಡಿ ಪೊಟ್ಟಣ, ಜ್ವರದ ಮಾತ್ರೆ ಇತ್ಯಾದಿ ಚಿಕ್ಕಪುಟ್ಟ ಬುಟ್ಟಿ ಕೆಲಸಗಳಿಂದ ಹಿಡಿದು ದುಡ್ಡಿನ ಲೇವಾದೇವಿಗೂ ಅತ್ಯಂತ ನಂಬುಗೆಯ ಮೆಸ್ಸೆಂಜರ್ ಆಗಿ ರಾಜ್ಶೆಟ್ಟಿ ಸೇವೆಯನ್ನು ಜನ ಬಳಸುತ್ತಿದ್ದರು. ನೆಕ್ಸ್ಟ್ ನೆನಪಾಗುವವರು ಉಮೇಶ ಮತ್ತು ಹವಾಲ್ದಾರ ಎಂಬಿಬ್ಬರು ಡ್ರೈವರರು. ಇವರಿಬ್ಬರು ನನ್ನ ನೆನಪಿನ ಡ್ರೈವರರು ಎನ್ನುವುದಕ್ಕಿಂತಲೂ ನಮ್ಮಕ್ಕನ ಮಗನಿಗೆ ಸ್ಮರಣೀಯರು. ಇದೂ ಅಷ್ಟೇ, ಹತ್ತಿಪ್ಪತ್ತು ವರ್ಷಗಳ ಹಿಂದಿನ ಕಥೆ. ನಮ್ಮಕ್ಕನ ಮನೆ ಇರುವುದು ಸೊರಬದಲ್ಲಿ. ಅಲ್ಲಿಗೆ ಕಾರ್ಕಳದಿಂದ ನೇರ ಬಸ್ ಇಲ್ಲ. ಕಾರ್ಕಳದಿಂದ ಹಾಲಾಡಿ ಎಂಬಲ್ಲಿಗೆ ಹೋಗಿ ಅಲ್ಲಿ ಕುಂದಾಪುರ-ಅಕ್ಕಿಆಲೂರು ನ್ಯಾಷನಲ್ ಕಂಪನಿಯ ಬಸ್ ಹತ್ತಬೇಕು. ಅದು ಸೊರಬದ ಮೂಲಕ ಹೋಗುತ್ತದೆ. ನಮ್ಮಕ್ಕ ತವರುಮನೆ ಭೇಟಿಯ ಪಯಣಕ್ಕೆ ಹೆಚ್ಚಾಗಿ ಆ ಬಸ್ಸನ್ನೇ ಅವಲಂಬಿಸಿದ್ದರು. ಕುಂದಾಪುರದಿಂದ ಅಕ್ಕಿಆಲೂರು ಸಾಕಷ್ಟು ದೂರದ ದಾರಿಯಾದ್ದರಿಂದ, ಬೆಳಗ್ಗೆಯಿಂದ ಸಂಜೆವರೆಗೂ ಪ್ರಯಾಣವಾದ್ದರಿಂದ, ಆಪೋಸಿಟ್ ಡೈರೆಕ್ಷನ್ನಲ್ಲಿ ಎರಡು ಬಸ್ಸುಗಳು. ಅವುಗಳ ಡ್ರೈವರರೇ ಅನುಕ್ರಮವಾಗಿ ಉಮೇಶ ಮತ್ತು ಹವಾಲ್ದಾರ. ನಮ್ಮಕ್ಕನ ಮಗನಿಗೆ ಆಗಿನ್ನೂ ಐದಾರು ವರ್ಷಗಳ ಪ್ರಾಯ ಅಷ್ಟೇ, ಎಲ್ಲೋ ಯಾರೋ ಹೀಗೇ ಮಾತಾಡಿಕೊಳ್ಳುತ್ತಿದ್ದದ್ದನ್ನು ಕೇಳಿಸಿ ಉಮೇಶ-ಹವಾಲ್ದಾರರ ಡ್ರೈವಿಂಗ್ ಚಾಕಚಕ್ಯತೆಯ ವ್ಯತ್ಯಾಸ ಅರಿತುಕೊಂಡಿದ್ದಾನೆ. ಮುದುಕ ಹವಾಲ್ದಾರನಿಗಿಂತ ನವಯುವಕ ಉಮೇಶನೇ ಒಳ್ಳೆಯ ಡ್ರೈವರ್, ಅವನ ಬಸ್ಸೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದಾನೆ. ಎಲ್ಲಿಯವರೆಗೆಂದರೆ, ಸೊರಬದಿಂದ ನಮ್ಮೂರಿಗೆ ಬರುವಾಗ ಉಮೇಶನ ಬಸ್ ಇದ್ದರೆ ಹಿಂದಿರುಗುವಾಗಲೂ ಉಮೇಶನ ಬಸ್ಸೇ ಆಗಬೇಕು, ಅಪ್ಪಿತಪ್ಪಿಯೂ ಹವಾಲ್ದಾರನ ಬಸ್ ಇರುವ ದಿನದಂದು (ಅದನ್ನು ಸರಿಯಾಗಿ ಲೆಕ್ಕಹಾಕಿ) ಹೊರಡಬೇಡವೆಂದು ನಮ್ಮಕ್ಕನಿಗೆ ತಾಕೀತು ಮಾಡುತ್ತಿದ್ದ! ನಾವೆಲ್ಲ ಬೇಕಂತ್ಲೇ ಅವನನ್ನು ರೇಗಿಸುತ್ತಿದ್ದೆವು. ನೀನಿಲ್ಲಿ ಅಜ್ಜನಮನೆಯಲ್ಲಿದ್ದಾಗಲೇ ಉಮೇಶ-ಹವಾಲ್ದಾರ ಇಬ್ಬರೂ ರಜಾ ಹಾಕಿ ಈಗ ಅವರ ಪಾಳಿಯ ದಿನಗಳು ಬದಲಾಗಿವೆ, ನಿನಗೆ ಸೊರಬಕ್ಕೆ ವಾಪಸಾಗೋದಕ್ಕೆ ಹವಾಲ್ದಾರನ ಬಸ್ಸೇ ಸಿಗೋದು ನೋಡ್ತಿರು ಎಂದರೆ ಸಿಟ್ಟು ಬರ್ತಿತ್ತು ಅವನಿಗೆ. ಈಗಿನ್ನು ಒಂದು ಸ್ಯಾಂಪಲ್ ಅಮೆರಿಕದ ಬಸ್ ಡ್ರೈವರರದು. ಕಳೆದೆರಡು ವರ್ಷಗಳಿಂದ ನಾನು ಕೆಲಸಕ್ಕೆ ಹೋಗಿಬರಲು ಬಸ್ ಮತ್ತು ಮೆಟ್ರೋಟ್ರೈನ್ ಬಳಸುತ್ತಿರುವುದರಿಂದ ಒಳ್ಳೊಳ್ಳೆಯ ಅನುಭವಗಳಾಗುತ್ತಿರುತ್ತವೆ. ಕಳೆದವರ್ಷ ಒಮ್ಮೆ ಹವಾಮಾನ ಇಲಾಖೆಯ ಮುನ್ಸೂಚನೆಯನ್ನೂ ಮೀರಿ ವಾಷಿಂಗ್ಟನ್ನಲ್ಲಿ ಹಠಾತ್ತನೆ ಹಿಮಪಾತವಾಗಿತ್ತು. ವಾಹನಗಳ ಓಡಾಟವೆಲ್ಲ ಅಸ್ತವ್ಯಸ್ತಗೊಂಡಿತ್ತು. ಸಂಜೆ ಆಫೀಸಿಂದ ಹಿಂದಿರುಗುವವರಿಗೆ ದೊಡ್ಡ ಫಜೀತಿ. ಮೆಟ್ರೋರೈಲು ಸ್ಟೇಷನ್ನಲ್ಲೇ ರಾತ್ರಿಯಿಡೀ ಕಳೆಯಬೇಕೇನೋ ಎಂಬಂಥ ಪರಿಸ್ಥಿತಿ. ಬಸ್ಸುಗಳೆಲ್ಲ ಸ್ಥಗಿತ. ಕೊನೆಗೂ ನಮ್ಮನೆ ಕಡೆಗೆ ಹೋಗುವ ಒಂದು ಬಸ್ಸು ಬಂತು. ಎಲ್ಲರೂ ಅದರೊಳಕ್ಕೆ ನುಗ್ಗಿದರು. ಹಿಮ ಏಕಪ್ರಕಾರವಾಗಿ ಬೀಳುತ್ತಲೇ ಇತ್ತು. ರಸ್ತೆಯುದ್ದಕ್ಕೂ ಅಲ್ಲಲ್ಲಿ ಹಿಮದಲ್ಲಿ ಹೂತುಹೋದ ಕಾರುಗಳು. ಅಂಥಾದ್ರಲ್ಲಿ ಜೈ ಎಂದು ಹೊರಟಿತು ನಮ್ಮ ಬಸ್ಸು. ಅವತ್ತು ಡ್ರೈವರ್ ಒಬ್ಬ ಸರ್ದಾರ್ಜಿ. ಚಾಲಾಕಿನ ಚಾಲಕ. ಪ್ರತಿಯೊಂದು ಸ್ಟಾಪ್ನಲ್ಲಿ ನಿಂತು ಜನರನ್ನಿಳಿಸಿ ಹೊರಡುವಾಗ ಹಿಮದಿಂದಾಗಿ ತುಂಬಾ ಕಷ್ಟವಾಗುತ್ತಿತ್ತು. ಆದರೂ ಚಾಕಚಕ್ಯತೆಯಿಂದ ಆತ ಬಸ್ಸನ್ನು ಮುನ್ನಡೆಸಿದಾಗ ಎಲ್ಲರಿಂದ ಚಪ್ಪಾಳೆ. ಬೇರಾವ ಅಮೆರಿಕನ್ ಅಥವಾ ಮೆಕ್ಸಿಕನ್ ಡ್ರೈವರನಾಗಿದ್ದರೂ ಜನರನ್ನೆಲ್ಲ ಅರ್ಧದಲ್ಲೇ ಬಿಟ್ಟು ಖಾಲಿ ಬಸ್ಸನ್ನು ಡಿಪೋಗೆ ಓಡಿಸಿ ನಿಟ್ಟುಸಿರು ಬಿಡುತ್ತಿದ್ದನೇನೊ, ನಮ್ಮ ವೀರ ಸರ್ದಾರ್ಜಿ ಮಾತ್ರ ಎಳ್ಳಷ್ಟೂ ಧೃತಿಗೆಡದೆ ಪ್ರತಿಯೊಬ್ಬ ಪ್ರಯಾಣಿಕನನ್ನೂ ಅವರವರ ಸ್ಟಾಪ್ನಲ್ಲಿ ಇಳಿಸಿಯೇ ಮುಂದುವರಿಸಿ ಗ್ರೇಟ್ ಹೀರೊ ಅನ್ನಿಸಿಕೊಂಡ. ಅವತ್ತಿನ ಬಸ್ ಪ್ರಯಾಣವನ್ನು ನೆನೆದರೆ ಈಗಲೂ ಮೈಝುಮ್ಮೆನ್ನುತ್ತದೆ. ಲೇಟೆಸ್ಟ್ ಟಚ್: ಮೊನ್ನೆ ಜುಲೈಯಲ್ಲಿ ಬೆಂಗಳೂರಿನಲ್ಲಿ ‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’ ಪುಸ್ತಕಗಳ ಬಿಡುಗಡೆಯಾಯ್ತಲ್ವಾ? ಅಚ್ಚಾದ ಪುಸ್ತಕಗಳ ಮೊದಲ ಐದೈದು ಪ್ರತಿಗಳ ಕಟ್ಟನ್ನು ಮೈಸೂರಿನಿಂದ ಗೀತಾ ಬುಕ್ ಹೌಸ್ನ ಸತ್ಯನಾರಾಯಣ ರಾಯರು ಬೆಂಗಳೂರಿನಲ್ಲಿದ್ದ ನನಗೆ ತಲುಪುವಂತೆ ಮಾಡಿದ್ದು ಹೇಗೆ ಗೊತ್ತೇ? ಮೈಸೂರು-ಬೆಂಗಳೂರು ಐರಾವತ ಬಸ್ಸೊಂದರ ಡ್ರೈವರ್ ಮೂಲಕ ಪಾರ್ಸೆಲ್ ಕಳಿಸಿ, ನಾನದನ್ನು ಮೆಜೆಸ್ಟಿಕ್ನಲ್ಲಿ ಪಡಕೊಂಡದ್ದು. ಬಸ್ ನಂಬರ್ ಮತ್ತು ಚಾಲಕನ ಮೊಬೈಲ್ ನಂಬರುಗಳೇ ಟ್ರ್ಯಾಕಿಂಗ್ ಮೆಕಾನಿಸಮ್. ಪುಸ್ತಕಗಳು ಸುಸೂತ್ರವಾಗಿ ನನ್ನ ಕೈಸೇರಿದವು! ಎಂದರೋ ಬಸ್-ಡ್ರೈವರುಲು ಅಂದರಿಕಿ ವಂದನಮುಲು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Nov 26, 2011
Laddu And Lavanga
Saturday Nov 26, 2011
Saturday Nov 26, 2011
ದಿನಾಂಕ 27 ನವೆಂಬರ್ 2011ರ ಸಂಚಿಕೆ...
ಲಡ್ಡುವಿನಲ್ಲಿ ಲವಂಗ ಇಲ್ಲ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕನ್ನಡ ಸಿನಿಮಾದಲ್ಲಿ ಕನ್ನಡತನ ಇಲ್ಲವಂತೆ. ಮೊನ್ನೆ ಬೆಂಗಳೂರಿನಲ್ಲಿ ಒಂದು ವಿಚಾರಗೋಷ್ಠಿಯಲ್ಲಿ ಈರೀತಿ ವಿಷಾದ ವ್ಯಕ್ತವಾಯ್ತೆಂದು ಇದೇ ಪತ್ರಿಕೆಯಲ್ಲಿ ವರದಿಯಾಗಿತ್ತು. ‘ಕನ್ನಡತನ ಎಂಬ ಪದದ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾಗಳಲ್ಲಿ ಈ ಅಂಶವೇ ಇಲ್ಲವಾಗುತ್ತಿದೆ’ - ಇದು ಗೋಷ್ಠಿಯ ವಿಚಾರಮಂಥನದಲ್ಲಿ ಮೂಡಿಬಂದ ಒಟ್ಟಾರೆ ಅಭಿಪ್ರಾಯ. ಸಮುದ್ರಮಥನದ ಹೋಲಿಕೆ ಕೊಡುವುದಾದರೆ ಗೋಷ್ಠಿಯಲ್ಲಿ ಗೋಚರಿಸಿದ ಹಾಲಾಹಲ ಎಂದೂ ಹೇಳಬಹುದು. ಬಹುಶಃ ಒಪ್ಪತಕ್ಕ ವಿಚಾರವೇ. ಕಹಿಸತ್ಯ ಎನ್ನಬಹುದೇನೊ. ಇತ್ತೀಚಿನ ಕನ್ನಡ ಚಿತ್ರಗಳು ಎಷ್ಟು ಕೆಟ್ಟದಾಗಿ ಇವೆ ಎಂಬುದರ ಸರಿಯಾದ ಕಲ್ಪನೆ ನನಗಿಲ್ಲ. ಆದರೆ ಹಳೆಯದೆಲ್ಲ ಒಳ್ಳೆಯದು ಹೊಸತೆಲ್ಲ ಕೆಟ್ಟದು ಎಂದು ಸಾರಾಸಗಟಾಗಿ ತಿರಸ್ಕರಿಸುವ ಧಾಟಿಯಲ್ಲಿ ವಾದ ಮಾಡುವುದೂ ನನಗೆ ಇಷ್ಟವಿಲ್ಲ. ಹಾಗಾಗಿ, ಕನ್ನಡ ಸಿನಿಮಾದಲ್ಲಿ ಕನ್ನಡತನ ಇಲ್ಲವಾಗಿದೆಯೋ ಇನ್ನೂ ಜೀವಂತವಾಗಿ ಇದೆಯೋ ಎಂಬ ಜಿಜ್ಞಾಸೆಯ ಗಹನ ಚಿಂತನೆಯನ್ನು ಬದಿಗಿಟ್ಟು (ಇದು ಪಲಾಯನವಾದ ಅಲ್ಲ, ಇತಿಮಿತಿಗಳ ಅರಿವು) ಇವತ್ತು ಲೈಟಾಗಿ ಒಂದು ಲಹರಿಯನ್ನು ಹರಿಸಬೇಕೆನ್ನುವುದು ನನ್ನ ಯೋಜನೆ. ಏಕೆಂದರೆ ‘ಕನ್ನಡ ಸಿನಿಮಾದಲ್ಲಿ ಕನ್ನಡತನವಿಲ್ಲ’ ಎಂದು ಆ ಸುದ್ದಿಯ ತಲೆಬರಹ ಇತ್ತಲ್ವಾ ಅದು ನನ್ನ ಗಮನವನ್ನು ವಿಶೇಷವಾಗಿ ಸೆಳೆದಿದೆ. ಅದರಲ್ಲಿ ಪರಾಗ ಸ್ಪರ್ಶಿಸಲು ಸಾಕಷ್ಟು ಸರಕು ಇದೆಯೆಂದು ಥಟ್ಟನೆ ಹೊಳೆದಿದೆ. ಆದ್ದರಿಂದ ನೀವು ಸೈ ಎಂದರೆ ಒಂದು ಕಾಡುಹರಟೆಯ ರೂಪದಲ್ಲಿ ಇದನ್ನು ನಿಮ್ಮೊಡನೆ ಹಂಚಿಕೊಳ್ಳುವವನಿದ್ದೇನೆ. ಅಸಲಿಗೆ ಕನ್ನಡ ನಾಡಿನ ರಾಜಧಾನಿಯಲ್ಲೇ ಕನ್ನಡತನ ಕಾಣೆಯಾಗುತ್ತಿದೆ ಎಂಬ ಕೂಗು ಕೇಳಿಕೇಳಿ ಕ್ಲೀಷೆ ಆಗಿಹೋಗಿದೆ. ಅಂದಮೇಲೆ ಕನ್ನಡ ಸಿನಿಮಾಗಳ ಬಗ್ಗೆ ಮಾತ್ರ ಯಾಕೆ ದೂರು? ಬಹುಶಃ ಈಗಿನ ಕಾಲವೇ ಹಾಗೆ. ನೀವು ‘ವೈ ದಿಸ್ ಕೊಲವೆರಿ ಕೊಲವೆರಿ ಕೊಲವೆರಿ ಡಿ...’ ಲೇಟೆಸ್ಟ್ ತಮಿಳು ಹಾಡನ್ನು ಕೇಳಿದ್ದೀರಾ? ರಜನಿಕಾಂತ್ ಅಳಿಯ ಧನುಷ್ ಎಂಬಾತ ಮ್ಯೂಸಿಕ್ ಕಂಪೋಸ್ ಮಾಡಿರೋದಂತೆ. ಅಮಿತಾಭ್ ಬಚ್ಚನ್ ಸೇರಿದಂತೆ ಯುವಪೀಳಿಗೆಗೆಲ್ಲ ಈ ಹಾಡಿನ ಕ್ರೇಜ್ ಹತ್ತಿದೆಯಂತೆ. ಅದನ್ನು ಶುದ್ಧತಮಿಳರು ಯಾರಾದರೂ ಕೇಳಿದರೆ/ನೋಡಿದರೆ ‘ತಮಿಳು ಸಿನಿಮಾದಲ್ಲಿ ತಮಿಳುತನವಿಲ್ಲ’ ಎಂದು ತಳಮಳಗೊಳ್ಳುವುದು ಗ್ಯಾರೆಂಟಿ. ಹೋಗಲಿ, ಅದು ಪ್ಯೂರ್ ಇಂಗ್ಲಿಷ್ನಲ್ಲಾದರೂ ಇದೆಯೇ? ಶೇಕ್ಸ್ಪಿಯರ್ ಏನಾದ್ರೂ ಕೇಳಿಸಿಕೊಂಡರೆ ಟೋಟಲ್ ಶೇಕ್ಆಫ್ ಆಗಿಹೋದಾನು! ಒಟ್ಟಿನಲ್ಲಿ ಯಾವುದರಲ್ಲಿ ಏನನ್ನು ನಿರೀಕ್ಷಿಸುತ್ತೇವೋ ಅದು ಅದರಲ್ಲಿ ಇಲ್ಲ ಮತ್ತು ಇರುವುದಿಲ್ಲ ಎಂದು ತಿಳಿದುಕೊಳ್ಳುವುದೇ ಕ್ಷೇಮ. ಅಷ್ಟಕ್ಕೂ ಕೊಲವೆರಿ ಹಾಡಿನ ಕೊನೆಯ ಸಾಲು ಅದನ್ನೇ ಮಾರ್ಮಿಕವಾಗಿ ಹೇಳುತ್ತದೆ- ವಿ ಡೋಂಟ್ ಹ್ಯಾವ್ ಚಾಯ್ಸ್. ತಮಿಳು ಸಿನಿಮಾ ಪ್ರಸ್ತಾಪ ಬಂತಾದ್ದರಿಂದ ‘ಸಿಂಧುಭೈರವಿ’ ಎಂಬ ಸ್ವಲ್ಪ ಹಳೆಯ ತಮಿಳು ಚಿತ್ರದ ಹಾಡಿನ ಸಾಲು ಇಲ್ಲಿ ನನಗೆ ನೆನಪಾಗುತ್ತಿದೆ. ‘ಪೂಮಾಲೆ ವಾಂಗಿವಂದಾನ್ ಪೂಕ್ಕಳಿಲ್ಲಯೇ...’ - ಇದು 80ರ ದಶಕದಲ್ಲಿ ದೂರದರ್ಶನದಲ್ಲಿ ಭಾನುವಾರ ಮಧ್ಯಾಹ್ನ ಅಮೃತಾಂಜನ್ ಪ್ರಾಯೋಜಕತ್ವದಲ್ಲಿ ಪ್ರಾದೇಶಿಕ ಚಲನಚಿತ್ರ ಪ್ರಸಾರವಾಗುತ್ತಿದ್ದಾಗ ಒಮ್ಮೆ ಬಂದಿತ್ತು. ವಿಶೇಷವಾಗಿ ಆ ಹಾಡಿನ ಆ ಒಂದು ಸಾಲಿನ ಇಂಗ್ಲಿಷ್ ಸಬ್ಟೈಟಲ್ ಒಂಥರ ಕಾಡುವ ಸಾಲಿನಂತೆ ನನ್ನನ್ನು ಕಾಡಿತ್ತು. He was garlanded. Alas! with no flowers! ಬಹುಶಃ ಸಿಂಧುಭೈರವಿ ಚಿತ್ರದ ನಾಯಕನ ಸ್ಥಿತಿಯನ್ನು ಆ ಸಾಲು ಸಮರ್ಥವಾಗಿ ಪ್ರತಿಬಿಂಬಿಸಿದ್ದಿರಬೇಕು. ‘ಹೂಗಳಿಲ್ಲದ ಹೂಮಾಲೆ...’ - ವ್ಹಾಟ್ ಎ ಬ್ಯೂಟಿಫುಲ್ ರೂಪಕಾಲಂಕಾರ! ‘ವಾಂಗಿ ವಂದಾನ್’ ಎನ್ನುವಾಗ ನನಗೆ ವಾಂಗಿಭಾತ್ ನೆನಪಾಗೋದು. ಅದಕ್ಕೆ ವಾಂಗಿಭಾತ್ ಎಂಬ ಹೆಸರು ಬಂದದ್ದೇ ಬದನೆ (ಮರಾಠಿಯಲ್ಲಿ ‘ವಾಂಗಿ’) ಹಾಕಿ ಮಾಡುವುದರಿಂದ. ಬದನೆ ಇಷ್ಟವಿಲ್ಲದವರು (ಅಂಥವರು ತುಂಬಾ ಮಂದಿ ಇದ್ದಾರೆ ಪ್ರಪಂಚದಲ್ಲಿ) ಹೂಕೋಸು, ಚವಳಿಕಾಯಿ ಮುಂತಾದ ಬೇರೆ ತರಕಾರಿ ಹಾಕಿ ವಾಂಗಿಭಾತ್ ಮಾಡುವುದೂ ಇದೆ. ಅದು ‘ವಾಂಗಿ ಇಲ್ಲದ ವಾಂಗಿಭಾತ್’! ನನ್ನ ಸ್ನೇಹಿತನೊಬ್ಬನ ಫೇವರಿಟ್ ‘ಚಿಕನ್ಬಿರ್ಯಾನಿ ವಿದೌಟ್ ಚಿಕನ್’. ಅವನಿಗೆ ಆ ಮಸಾಲೆ ಪರಿಮಳ ಮಾತ್ರ ಇಷ್ಟವಂತೆ, ಅದರಲ್ಲಿ ಚಿಕನ್ ತುಂಡುಗಳು ಅವನಿಗೆ ಹಿಡಿಸೋದಿಲ್ಲವಂತೆ. ಇರಲಿ, ಬ್ಯಾಕ್ ಟು ಬದನೆಗೆ ಬಂದರೆ, ಬ್ರಿಟಿಷ್/ಇಂಡಿಯನ್ ಇಂಗ್ಲಿಷ್ನಲ್ಲಿ ಮಾತ್ರ ಬದನೆಗೆ ಬ್ರಿಂಜಾಲ್ ಎನ್ನುವುದು. ಅಮೆರಿಕನ್ ಇಂಗ್ಲಿಷ್ನಲ್ಲಿ ‘ಎಗ್ಪ್ಲಾಂಟ್’ ಎನ್ನುತ್ತಾರೆ. ಇಲ್ಲಿನ ಅಡುಗೆಯಲ್ಲಿ ಅದು ತುಂಬಾ ಬಳಕೆಯಾಗುತ್ತದೆ. ‘ಎಗ್ಪ್ಲಾಂಟ್ ಪರ್ಮೇಸಾನ್’ ಅಂತೊಂದು ಜನಪ್ರಿಯ ಐಟಂ, ಸಸ್ಯಾಹಾರಿಗಳಿಗೂ ಸಲ್ಲುತ್ತದೆ. ಆದರೆ ಎಗ್ಗನ್ನೂ ತಿನ್ನದ ನನ್ನಂಥವರು ಇಲ್ಲಿಗೆ ಬಂದ ಹೊಸತರಲ್ಲಿ ‘ಎಗ್ಪ್ಲಾಂಟ್ನಲ್ಲಿ ಖಂಡಿತವಾಗಿಯೂ ಎಗ್ ಇಲ್ಲ ತಾನೆ?’ ಎಂದು ಎರಡೆರಡು ಬಾರಿ ಕೇಳಿ ಖಾತ್ರಿಪಡಿಸಿಕೊಳ್ಳುತ್ತಾರೆ. ಅದೇವೇಳೆ ‘ಪೆಪ್ಪರೋನಿ ಪಿಜ್ಜಾ’ವನ್ನು ಪೆಪ್ಪರ್ ಓನ್ಲಿ ಪಿಜ್ಜಾ ಎಂದುಕೊಂಡು ಮೋಸಹೋಗುತ್ತಾರೆ. ಅಮೆರಿಕನ್ ಇಂಗ್ಲಿಷ್ನಲ್ಲಿ ಬೇರೆಯೂ ಸುಮಾರೆಲ್ಲ ವಿಚಿತ್ರಗಳಿವೆ. ಆದರೆ ಈ ಬರಹದಲ್ಲಿ ಅವುಗಳ ಪಟ್ಟಿ ಮಾಡಿದರೆ ವಿಷಯಾಂತರವಾಗುತ್ತದೆ. ಒಂದೇಒಂದು ಎಕ್ಸಾಂಪಲ್ ಹೇಳುತ್ತೇನೆ- ಡ್ರೈವ್ವೇ ಮತ್ತು ಪಾರ್ಕ್ವೇ. ಮನೆಯ ಮುಂದೆ ಕಾರು ಪಾರ್ಕ್ ಮಾಡುವ ಜಾಗಕ್ಕೆ ಡ್ರೈವ್ವೇ ಎನ್ನುತ್ತಾರೆ; ಊರಿನ ಮೂಲಕ ಹಾದುಹೋಗುವ ಎಕ್ಸ್ಪ್ರೆಸ್ ಹೆದ್ದಾರಿಗೆ ಪಾರ್ಕ್ವೇ ಎನ್ನುತ್ತಾರೆ. ಅಂದರೆ ಡ್ರೈವ್ವೇಯಲ್ಲಿ ಪಾರ್ಕ್ ಮಾಡೋದು; ಪಾರ್ಕ್ವೇಯಲ್ಲಿ ಡ್ರೈವ್ ಮಾಡೋದು! ಸರಿ, ಮತ್ತೆ ಅಡುಗೆ-ಊಟದ ವಿಚಾರಕ್ಕೇ ಬರೋಣ. ಎಗ್ಪ್ಲಾಂಟ್ನಲ್ಲಿ ಹೇಗೆ ಎಗ್ ಇಲ್ಲವೋ, ಹಾಗೆಯೇ ಲೇಡಿಸ್ಫಿಂಗರ್ (ಬೆಂಡೆಕಾಯಿ)ನಲ್ಲಿ ಲೇಡಿಯೂ ಇಲ್ಲ ಅವಳ ಫಿಂಗರ್ರೂ ಇರುವುದಿಲ್ಲ. ಮೈಸೂರ್ಪಾಕಿನಲ್ಲೂ ಅಷ್ಟೇ- ಮೈಸೂರೂ ಇಲ್ಲ, ಪಾಕಿಸ್ತಾನವೂ ಇಲ್ಲ. ಅಂತೆಯೇ ‘ಹುಳಿಯಲ್ಲಿ ಹೋಳಿಲ್ಲ’ವನ್ನೂ ಗಮನಿಸಬೇಕು. ಒಳ್ಳೆಯ ರುಚಿಕರ ತರಕಾರಿ ಹಾಕಿ ಮಧ್ಯಾಹ್ನಕ್ಕೂ ಸಂಜೆಗೂ ಆಗುವಂತೆ ಹುಳಿ ಮಾಡಿದರೆ ಕೆಲವೊಮ್ಮೆ ಮಧ್ಯಾಹ್ನವೇ ಹೋಳುಗಳೆಲ್ಲ ಖಾಲಿಯಾಗುವುದಿದೆ. ರಾತ್ರೆಗೆ ಹೋಳುಗಳಿಲ್ಲದ ಹುಳಿ. ಅದನ್ನು ಹುಳಿ ಎನ್ನಬೇಕೇ ಸಾರು ಎನ್ನಬಹುದೇ? ಸಾರಿನಲ್ಲಿ ಬೇಳೆಯೂ ಇಲ್ಲದಿದ್ದರೆ ಅದನ್ನು ಸಾರು ಎನ್ನಬೇಕೇ ಬಗ್ಗಡದ ನೀರು ಎನ್ನಬಹುದೇ? ನಾಲ್ಕೈದು ವರ್ಷಗಳ ಹಿಂದೆ ಒಮ್ಮೆ ಇಲ್ಲಿ ತೊಗರಿ ಬೇಳೆಗೆ ಬಂಗಾರಕ್ಕಿಂತಲೂ ಹೆಚ್ಚು ಬೆಲೆಯಾಗಿದ್ದಾಗ ಬೇಳೆ ಇಲ್ಲದೆ ಸಾರು ಮಾಡುವ ಪದ್ಧತಿ ಶುರು ಆಗಿತ್ತು. ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ‘ಒಂದು ಎರಡು ಬಾಳೆಲೆ ಹರಡು...’ ಪದ್ಯದ ‘ಐದು ಆರು ಬೇಳೆಸಾರು’ ಸಾಲನ್ನು ‘ಐದು ಆರು ಬೇಳೆ ಇಲ್ಲದ ಸಾರು’ ಎಂದು ತಿದ್ದಿಕೊಳ್ಳುವ ನಿರ್ಧಾರವಾಗಿತ್ತು. ಕೊನೆಯದಾಗಿ, ಇವತ್ತಿನ ಶೀರ್ಷಿಕೆಯಲ್ಲಿನ ಲಡ್ಡು-ಲವಂಗ ಸಂಗತಿಯೇನು ಎಂಬ ನಿಮ್ಮ ಕುತೂಹಲಕ್ಕೆ ಈಗ ಉತ್ತರ ಕೊಡುತ್ತೇನೆ. ನನ್ನ ಹಿರಿಯ ಮಿತ್ರರೂ ವಾಷಿಂಗ್ಟನ್ ನಿವಾಸಿಯೂ ಆಗಿರುವ ಡಾ.ಮೈ.ಶ್ರೀ.ನಟರಾಜ ಅವರದೊಂದು ಸುಪ್ರಸಿದ್ಧ ಕಿರುಪ್ರಬಂಧವಿದೆ, ‘ಕೂಟವನ್ನು ಕೊಲ್ಲುವುದು ಹೇಗೆ?’ ಎಂದು ಅದರ ತಲೆಬರಹ. ಕನ್ನಡ ಕೂಟಗಳೂ ಸೇರಿದಂತೆ ಸಾಮಾನ್ಯವಾಗಿ ಅಂತಹ ಕೂಟಗಳಲ್ಲೆಲ್ಲ (ಅಮೆರಿಕದಲ್ಲಿ ಅಂತಷ್ಟೇ ಅಲ್ಲ, ಪ್ರಪಂಚದಲ್ಲಿ ಎಲ್ಲೇ ಆದರೂ) ಸೇರಿಕೊಳ್ಳುವ ಕೆಲವು ಋಣಾತ್ಮಕ ಶಕ್ತಿಗಳ ಬಗ್ಗೆ ಸಖತ್ ತಮಾಷೆಯಾಗಿ ಬರೆದಿರುವ ನಗೆಬರಹ. ಅದರಲ್ಲಿ ಕೂಟವನ್ನು ಕೊಲ್ಲುವ ಹತ್ತು ತಂತ್ರಗಳನ್ನು ವಿವರಿಸಲಾಗಿದೆ. ಪಟ್ಟಿಯಲ್ಲಿನ ಒಂಬತ್ತನೆಯ ಸೂತ್ರದ ಸಾರಾಂಶ(ಹುಳಿಯಂಶ)ವನ್ನಷ್ಟೇ ಇಲ್ಲಿ ಕೊಡುತ್ತಿದ್ದೇನೆ- “ಕೂಟದವರು ಕಾರ್ಯಕ್ರಮ ಏರ್ಪಡಿಸಿದರೆ ಖಂಡಿತ ಹೋಗಿ. ಬಿಟ್ಟಿ ಕೂಳಿದ್ದರೆ ಮಾತ್ರ. ಆದಷ್ಟು ಮಟ್ಟಿಗೆ ಊಟದ ಸಮಯಕ್ಕೆ ಸರಿಯಾಗಿ ಹೋಗಿ. ಬೇರಾವ ಕಾರ್ಯಕ್ರಮದಲ್ಲೂ ನಿಮ್ಮ ಅಮೂಲ್ಯವಾದ ವೇಳೆಯನ್ನು ಹಾಳು ಮಾಡಿಕೊಳ್ಳದೆ ಉಪಾಯವಾಗಿ ಜಾರಿಕೊಳ್ಳಿ. ಅನಂತರ ಹುಳಿಯನ್ನಕ್ಕೆ ಉಪ್ಪು ಕಮ್ಮಿ ಎಂತಲೋ, ಬೋಂಡಾ ವಿಪರೀತ ಎಣ್ಣೆ ಕುಡಿದಿತ್ತು ಅಂತಲೋ, ಲಡ್ಡುವಿನಲ್ಲಿ ಲವಂಗ ಇರಲಿಲ್ಲವೆಂತಲೋ ಟೀಕಿಸುತ್ತಾ ಡರ್ರ್ ಎಂದು ತೇಗಿ.” ಅಂತಹ ಟೀಕಾಕಾರ ಟೀಕ್ವುಡ್ಗಳು, ತೇಗುವ ತೇಗದ ಮರಗಳು ಪ್ರತಿಯೊಂದು ಜನಾರಣ್ಯದಲ್ಲೂ ಒಬ್ಬರಲ್ಲ ಒಬ್ಬರು ಸಿಕ್ಕೇಸಿಗುತ್ತಾರೆ ಅಲ್ಲವೇ? ಆಯ್ತು. ಇನ್ನು ಈ ಕಾಡುಹರಟೆಗೆ ಜನಗಣಮನ ಹಾಡುವ ಸಮಯ. ಹಾಂ, ಒಂದು ಮಾತಂತೂ ನಿಜ. ಲಡ್ಡುವಿನಲ್ಲಿ ಲವಂಗ ಇಲ್ಲದಿದ್ದರೇನಂತೆ, ನಮ್ಮ ರಾಷ್ಟ್ರಗೀತೆಯಲ್ಲಿ ಲವಂಗ ಪರ್ಮನೆಂಟಾಗಿ ಕೂತಿದೆ. ದ್ರಾವಿಡ-ಉತ್ಕ-ಲವಂಗ! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Nov 19, 2011
DC Central Kitchenalli Kannadigaru
Saturday Nov 19, 2011
Saturday Nov 19, 2011
ದಿನಾಂಕ 20 ನವೆಂಬರ್ 2011ರ ಸಂಚಿಕೆ...
ಅನಾಥರಿಗೆ ಅಡುಗೆ ಮಾಡಿದೆವು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಟೂ ಮೆನಿ ಕುಕ್ಸ್ ಸೇರಿದರೆ ಅಡುಗೆ ಹಾಳಾಗಿ ಹೋಗುತ್ತದಂತೆ- ಇಂಗ್ಲಿಷ್ ಗಾದೆ ಪ್ರಕಾರ. ಇರಬಹುದು, ಅದು ಇಂಗ್ಲಿಷ್ ಗಾದೆ. ಇಂಗ್ಲಿಷ್ ಕುಕ್ಕುಗಳಿಗೆ ಸರಿಹೊಂದುವಂಥದು. ಆದರೆ ನಾವು ಅವತ್ತು ಸುಮಾರು ನಲ್ವತ್ತು ಮಂದಿ ಕನ್ನಡಿಗರು ಸೇರಿ ಅಡುಗೆ ಮಾಡಿದೆವು, ಅದೂ ಹೇಗೆಂದರೆ ಪಕ್ಕಾ ಇಂಗ್ಲಿಷ್ ಕಿಚನ್ನಲ್ಲಿ. ನಮ್ಮ ಅಡುಗೆ ಕೆಟ್ಟದಾಗೋದು ಬಿಡಿ, ಯಾರಾದರೂ ರುಚಿ ನೋಡಿರುತ್ತಿದ್ದರೆ ಅಮೃತ ಸಮಾನ ಎಂದು ಶಭಾಷ್ಗಿರಿ ಕೊಡುತ್ತಿದ್ದರು. ನಲ್ವತ್ತು ಮಂದಿಯಲ್ಲಿ ಎಲ್ಲರೂ ಗಂಡಸರೇ ಹಾಗಾಗಿ ನಮ್ಮದು ನಳಪಾಕ ಎಂದು ಜಂಬ ಕೊಚ್ಚಿಕೊಳ್ಳಲು ಹೀಗೆನ್ನುತ್ತಿರುವುದಲ್ಲ. ನಮ್ಮ ತಂಡದಲ್ಲಿ ಹೆಂಗಸರೂ ಇದ್ದರು. ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳೂ ಇದ್ದರು. ಅಷ್ಟಕ್ಕೂ ನಾವು ಅಡುಗೆ ತಯಾರಿಸಿದ್ದು ಶ್ವೇತಭವನದಲ್ಲಿ ಒಬಾಮಾ ಮತ್ತಿತರ ಗಣ್ಯರ ಊಟೋಪಚಾರಕ್ಕೇನೂ ಅಲ್ಲ. ವಾಷಿಂಗ್ಟನ್ ನಗರದ ಸುತ್ತಮುತ್ತಲಿನ ಅನಾಥಾಶ್ರಮಗಳಿಗೆ ಸರಬರಾಜು ಮಾಡುವುದಕ್ಕೆ. ಅಲ್ಲಿರುವ ಹಸಿದ ಹೊಟ್ಟೆಗಳಿಗೆ ಒಪ್ಪೊತ್ತಿನ ಊಟವಾಗಿ ಬಡಿಸುವುದಕ್ಕೆ. ಅದು ಆಡಂಬರದ ಅಡುಗೆ ಪ್ರದರ್ಶನವಲ್ಲ, ಆರ್ದ್ರ ಹೃದಯಗಳ ಅನುರಾಗದ ರಂಧನ. ನಮ್ಮ ಪಾಕಪ್ರಯೋಗವನ್ನು ವ್ಯಾಖ್ಯಾನಿಸುವ ಮೊದಲು ನಿಮಗೆ ‘ಡಿ.ಸಿ ಸೆಂಟ್ರಲ್ ಕಿಚನ್’ನ ಕಿರುಪರಿಚಯ ಮಾಡಿ ಕೊಡಬೇಕು. ಇದು, ವಾಷಿಂಗ್ಟನ್ ನಗರದ ಹೃದಯಭಾಗದಲ್ಲಿ ಇರುವ ಒಂದು ಬೃಹತ್ ಪಾಕಶಾಲೆ. ವಾಷಿಂಗ್ಟನ್ನ ಪ್ರಧಾನ ಆಕರ್ಷಣೆಗಳಾದ ವೈಟ್ಹೌಸ್, ಕ್ಯಾಪಿಟೊಲ್ ಮುಂತಾದುವುಗಳಿಗೆ ಕೂಗಳತೆಯ ದೂರದಲ್ಲಿರುವ ಒಂದು ಸಾಮಾನ್ಯ ಮಟ್ಟದ ಕಟ್ಟಡ. ಎಷ್ಟು ವ್ಯತ್ಯಾಸ ನೋಡಿ- ವೈಟ್ಹೌಸ್ ಕ್ಯಾಪಿಟೊಲ್ಗಳೆಲ್ಲ ಸಿರಿವಂತಿಕೆಯ, ಪ್ರಪಂಚದ ಮೇಲೆ ಪ್ರಭಾವ ಬೀರುವ ಅಧಿಕಾರಶಾಹಿಯ ಆಡುಂಬೊಲಗಳಾದರೆ ಡಿ.ಸಿ ಸೆಂಟ್ರಲ್ ಕಿಚನ್ ಅನ್ನೋದು ನಿರ್ಗತಿಕರಿಗೆ, ಬಡಬಗ್ಗರಿಗೆ ಆಹಾರ ತಯಾರಾಗುವ ಅಡುಗೆಮನೆ. ಅಲ್ಲಿ ಮೆರೆಯುವುದು ಅಧಿಕಾರದ ದರ್ಪವಲ್ಲ, ಅನುಕಂಪದ ಮಾನವೀಯತೆ. ಹಾಗೆ ನೋಡಿದರೆ ಡಿ.ಸಿ ಸೆಂಟ್ರಲ್ ಕಿಚನ್ ಬರಿ ಒಂದು ಅಡುಗೆಮನೆಯಷ್ಟೇ ಅಲ್ಲ. ಅದೊಂದು ಸೇವಾನಿರತ ಸಂಸ್ಥೆ. ಅದರ ಚಟುವಟಿಕೆಗಳ ಹರಹು ದೊಡ್ಡದು. ವರ್ಷದ ೩೬೫ ದಿನಗಳಲ್ಲೂ ಅನಾಥಾಶ್ರಮಗಳಿಗೆ ಊಟ ಸರಬರಾಜು ಮಾಡುವುದು ಮುಖ್ಯ ಉದ್ದೇಶ ಹೌದಾದರೂ ಆಹಾರ ಎನ್ನುವ ಮೂಲಭೂತ ಅವಶ್ಯಕತೆಯನ್ನೇ ಸಮಾಜಸೇವೆಯ ಬಹುರೂಪಗಳಿಗೆ ಒಂದು ಸಾಧನವಾಗಿ ಬಳಸಿರುವುದು ಡಿ.ಸಿ ಸೆಂಟ್ರಲ್ ಕಿಚನ್ನ ವಿಶಿಷ್ಟತೆ. ಅದು ಪಾಕಶಾಸ್ತ್ರ ವಿದ್ಯಾರ್ಥಿಗಳಿಗೆ ಕಲಿಕೆಯ ತಾಣವೂ ಹೌದು. ರೆಸ್ಟೊರೆಂಟ್ಗಳು, ಔತಣಕೂಟಗಳು ಮುಂತಾಗಿ ವಿವಿಧೆಡೆಗಳಲ್ಲಿ ತಿಂದುಂಡು ಮಿಕ್ಕುಳಿದ, ವೃಥಾ ಪೋಲಾಗುವ ಆಹಾರವನ್ನು ಸಂಗ್ರಹಿಸಿ ಅದನ್ನು ಊಟದ ಪೊಟ್ಟಣಗಳನ್ನಾಗಿಸುವ ಫುಡ್-ರೀಸೈಕ್ಲಿಂಗ್ ಫ್ಯಾಕ್ಟರಿಯೂ ಹೌದು. ತಾತ್ಕಾಲಿಕವಾಗಿ ನಿರುದ್ಯೋಗಿಗಳಾದವರಿಗೆ ಸ್ವಯಂಸೇವಕರಾಗಿ ಅಥವಾ ಅಲ್ಪ ಸಂಬಳಕ್ಕಾಗಿ ದುಡಿಯಲು ಸೌಲಭ್ಯವೀಯುವ ಉದ್ಯಮವೂ ಹೌದು. ಈ ದೇಶದಲ್ಲಿ ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ವರ್ಷಕ್ಕೆ ಇಂತಿಷ್ಟು ಗಂಟೆಗಳ ‘ಸಮಾಜಸೇವೆ’ ದಾಖಲಿಸಲೇಬೇಕು ಎಂದು ನಿಯಮವಿರುವ ಹಿನ್ನೆಲೆಯಲ್ಲಿ ಅಂಥವರಿಗೆ, ಸಂಚಾರಿ ನಿಯಮ ಉಲ್ಲಂಘನೆ ಅಥವಾ ಸಣ್ಣಪುಟ್ಟ ಅಪರಾಧಗಳ ಶಿಕ್ಷೆಯ ರೂಪದಲ್ಲಿ ಇಂತಿಷ್ಟು ದಿನ ಸಮಾಜಸೇವೆ ಮಾಡಬೇಕೆಂಬ ಆಜ್ಞೆ ಪಡೆದವರಿಗೆ, ಸಮಾಜಸೇವೆಯ ಅವಕಾಶ ಕಲ್ಪಿಸುವ ತಾಣವೂ ಹೌದು. ಪ್ರತಿದಿನವೂ, ಪ್ರತಿ ಹೊತ್ತಿಗೂ ಸುಮಾರು ಐದು ಸಾವಿರ ಊಟಗಳು ಡಿ.ಸಿ ಸೆಂಟ್ರಲ್ ಕಿಚನ್ನಲ್ಲಿ ತಯಾರಾಗುತ್ತವೆ. ಅಲ್ಲಿ ಅದಕ್ಕಾಗಿಯೇ ಸುಮಾರು ನೂರಕ್ಕೂ ಹೆಚ್ಚು ಅಡುಗೆಯವರು, ಸಹಾಯಕರು, ನಿರ್ವಹಣಕಾರರು ಇತ್ಯಾದಿ ಸಿಬಂದಿಯಿದ್ದಾರೆ. ತಯಾರಾದ ಆಹಾರದ ಪೊಟ್ಟಣಗಳನ್ನು ಅನಾಥಾಶ್ರಮಗಳಿಗೆ ಸರಬರಾಜು ಮಾಡಲು ಡೆಲಿವರಿ-ಟ್ರಕ್ಗಳಿವೆ. ಕಚ್ಚಾ ಸಾಮಗ್ರಿಗಳು ಬಹುತೇಕವಾಗಿ ಸ್ಥಳೀಯ ರೈತರ ಬೆಳೆಗಳಿಂದಲೇ ಬರುತ್ತವೆ. ಖರ್ಚುವೆಚ್ಚಗಳಿಗೆ ಸರಕಾರದ ಅನುದಾನ ಇದೆಯಾದರೂ ಸಾಧ್ಯವಾದಷ್ಟು ಮಟ್ಟಿಗೆ ಸ್ವಯಂಸೇವಕರ, ಸೇವಾಸಂಸ್ಥೆಗಳ ನೆರವನ್ನು ಸೆಂಟ್ರಲ್ ಕಿಚನ್ ಕೃತಜ್ಞತಾಪೂರ್ವಕ ಸ್ವೀಕರಿಸುತ್ತದೆ. ಆಹಾರ ತಯಾರಿ ಮತ್ತು ಬಟವಾಡೆಯ ಒಂದು ದಿನದ ಖರ್ಚನ್ನು ಪ್ರಾಯೋಜಿಸುವುದಿರಬಹುದು, ಸೆಂಟ್ರಲ್ ಕಿಚನ್ಗೆ ಹೋಗಿ ಅಡುಗೆ ಕೆಲಸಕ್ಕೆ ನೆರವಾಗುವುದಿರಬಹುದು, ಅಥವಾ ಸೆಂಟ್ರಲ್ ಕಿಚನ್ನ ಯಾವುದೇ ಚಟುವಟಿಕೆಗಳಲ್ಲಿ ಯಾವುದೇ ತೆರನಾದ ಪಾಲ್ಗೊಳ್ಳುವಿಕೆಯಿರಬಹುದು ಒಟ್ಟಿನಲ್ಲಿ ಸಾರ್ವಜನಿಕರ ತನು-ಮನ-ಧನ ಸಹಾಯವೇ ಸೆಂಟ್ರಲ್ ಕಿಚನ್ನ ಜೀವನಾಡಿ. ವಾಷಿಂಗ್ಟನ್ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರಷ್ಟು ಕನ್ನಡ ಕುಟುಂಬಗಳು ನೆಲೆಸಿವೆ. ತಂತಮ್ಮ ವೃತ್ತಿ-ಪ್ರವೃತ್ತಿಗಳಿಂದ ವಿವಿಧ ಕ್ಷೇತ್ರಗಳಲ್ಲಿ ಮಿಂಚಿರುವ ಕನ್ನಡಿಗರಿದ್ದಾರೆ. ಸುಮಾರು ೩೫ ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದ ‘ಕಾವೇರಿ’ ಕನ್ನಡ ಸಂಘವೂ ಇದೆ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ, ಸಾಕಷ್ಟು ಕ್ರಿಯಾಶೀಲವಾದ ಕನ್ನಡಸಂಘವೆಂದು ಹೆಸರನ್ನೂ ಗಳಿಸಿದೆ. ಕನ್ನಡ ನಾಡು-ನುಡಿಯ ಕೀರ್ತಿಯನ್ನು ಈ ದೇಶದಲ್ಲಿ ಪಸರಿಸುವ ಕೆಲಸವನ್ನು ಕನ್ನಡಿಗರು ವೈಯಕ್ತಿಕ ನೆಲೆಯಲ್ಲಿ, ಅಥವಾ ‘ಕಾವೇರಿ’ಯಂಥ ಕನ್ನಡಕೂಟಗಳ ರೂಪದಲ್ಲಿ ಹೇರಳವಾಗಿ ಮಾಡಿದ್ದಿದೆ. ಇಲ್ಲಿ ಸಂಪಾದನೆ ಮಾಡಿದ್ದರಲ್ಲಿ ಸ್ವಲ್ಪಾಂಶವಾದರೂ ಕರ್ನಾಟಕಕ್ಕೆ ವಿನಿಯೋಗವಾಗುವಂತೆ ವೈಯಕ್ತಿಕ ನೆಲೆಯಲ್ಲಿ, ಅಥವಾ ಕನ್ನಡಕೂಟಗಳ ಮುಖಾಂತರ ದಾನದತ್ತಿಯಲ್ಲಿ ವಿನಿಯೋಗಿಸಿದ್ದೂ ಸಾಕಷ್ಟಿದೆ (ಎರಡು ವರ್ಷಗಳ ಹಿಂದೆ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಮರುವಸತಿ ಯೋಜನೆಗೆ ಸಾವಿರಾರು ಡಾಲರ್ ಧನಸಂಗ್ರಹ ನಮ್ಮ ಕಾವೇರಿ ಕನ್ನಡ ಸಂಘದಲ್ಲಾದದ್ದು ಒಂದು ಚಿಕ್ಕ ಉದಾಹರಣೆ ಅಷ್ಟೇ). ಇವೆರಡಕ್ಕಿಂತ ಭಿನ್ನವಾಗಿ ಇನ್ನೂ ಒಂದು ಆಯಾಮವನ್ನು ಪ್ರತಿಯೊಬ್ಬ ಅನಿವಾಸಿಯೂ ಯೋಚಿಸಬೇಕು ಎಂದು ನನಗನಿಸುತ್ತದೆ. ಅದೇನೆಂದರೆ, ‘ಅನ್ನಕ್ಕಾಗಿ ಈ ದೇಶಕ್ಕೆ ವಲಸೆ ಬಂದಿರುವ ನಾನು ಈ ದೇಶದಿಂದ ಏನೋ ಅಷ್ಟಿಷ್ಟನ್ನು ಪಡೆದೆ ನಿಜ; ಆದರೆ ಈ ದೇಶಕ್ಕೆ, ಈ ದೇಶದ ಜನತೆಗೆ ನಾನೇನು ಕೊಟ್ಟಿದ್ದೇನೆ?’ ಎಂಬ ಆತ್ಮಸಾಕ್ಷಿಯ ಪ್ರಶ್ನೆ. ಅಮೆರಿಕಾಧ್ಯಕ್ಷನಾಗಿದ್ದಾಗ ಜಾನ್ ಎಫ್ ಕೆನಡಿ ಹೇಳಿದ್ದ ಫೇಮಸ್ ಮಾತುಗಳು ಬಹುಶಃ ಈ ಸಂದರ್ಭದಲ್ಲಿ ಪ್ರಸ್ತುತವೆನಿಸುತ್ತವೆ. ಮೊನ್ನೆ ನವೆಂಬರ್ ಮೊದಲ ಶನಿವಾರದಂದು ನಾವೊಂದಿಷ್ಟು ಮಂದಿ ‘ಕಾವೇರಿ’ ಕನ್ನಡಿಗರು ಒಟ್ಟುಗೂಡಿ ಡಿ.ಸಿ.ಸೆಂಟ್ರಲ್ ಕಿಚನ್ಗೆ ಹೋಗಿ ಐದು ಸಾವಿರ ಊಟದ ಪೊಟ್ಟಣಗಳಿಗಾಗುವಷ್ಟು ಅಡುಗೆ ತಯಾರಿಸಿದ್ದು, ಒಂದು ದಿನದ ಅಡುಗೆ/ಬಟವಾಡೆಗೆ ತಗಲುವ ಸಾಮಗ್ರಿ-ಸಾಗಾಟಗಳ ಖರ್ಚನ್ನು ವಂತಿಗೆ ರೂಪದಲ್ಲಿ ಸಂಗ್ರಹಿಸಿ ಸಲ್ಲಿಸಿದ್ದು ಈ ನಿಟ್ಟಿನಲ್ಲಿ ನಿಜಕ್ಕೂ ಹೆಮ್ಮೆಯೆನಿಸುವ ವಿಚಾರ. ಕಾವೇರಿಯ ಹಿರಿಯ ಸದಸ್ಯರಲ್ಲೊಬ್ಬರಾದ ಎಸ್.ಕೃಷ್ಣಮೂರ್ತಿ (ಕಾವೇರಿ ಕೃಷ್ಣಮೂರ್ತಿ ಎಂದೇ ಇಲ್ಲಿ ಎಲ್ಲರ ಪ್ರೀತಿಪಾತ್ರ) ಇಂಥದಕ್ಕೆಲ್ಲ ನಮ್ಮ ಮುಂದಾಳು. ನಿವೃತ್ತ ವಯಸ್ಸಿನಲ್ಲೂ ಪಾದರಸದಂತೆ ಅತ್ತಿಂದಿತ್ತ ಓಡಾಡಿ, ಜನರ ಮನ ಓಲೈಸಿ ಇಂಥ ಒಳ್ಳೇಕೆಲಸಗಳಿಗೆ ಸಾರಥಿಯಾಗುವವರು. ಕನ್ನಡ ರಾಜ್ಯೋತ್ಸವವನ್ನು ನೆನಪಿಸಿಕೊಂಡಂತೆಯೂ ಆಗುತ್ತದೆ, ನವೆಂಬರ್ ತಿಂಗಳಲ್ಲೇ ‘ಥ್ಯಾಂಕ್ಸ್ಗಿವಿಂಗ್’ ಅಮೆರಿಕನ್ ಹಬ್ಬವೂ ಇರುತ್ತದೆ, ಆದ್ದರಿಂದ ನವೆಂಬರ್ ತಿಂಗಳ ಮೊದಲ ವಾರಾಂತ್ಯದ ದಿನವನ್ನೇ ಈ ಶ್ರಮದಾನ ಚಟುವಟಿಕೆಗೆ ಸೂಕ್ತ ದಿನವೆಂದು ನಿಗದಿಪಡಿಸಿದವರೂ ಅವರೇ. ಬೆಳಿಗ್ಗೆ ಎಂಟುವರೆಗೆಲ್ಲ ಸೆಂಟ್ರಲ್ ಕಿಚನ್ನಲ್ಲಿ ಸೇರಿದ ನಮ್ಮ ಟೀಮ್ ಮಧ್ಯಾಹ್ನ ಹನ್ನೆರಡಾಗುವಷ್ಟರಲ್ಲಿ ಅಡುಗೆ ಮಾಡಿ ಮುಗಿಸಿ ಡೆಲಿವರಿ ಟ್ರಕ್ಗಳವರು ಕೊಂಡೊಯ್ಯುವುದಕ್ಕೆ ಅನುಕೂಲವಾಗುವಂತೆ ಅದರ ಪ್ಯಾಕಿಂಗ್ ಸಹ ಮಾಡಿ ಆಗಿತ್ತು! ನಮ್ಮ ಮೆನುದಲ್ಲಿ ಎರಡೇ ಐಟಮ್ಗಳು. ಒಂದು ಅನ್ನ, ಇನ್ನೊಂದು ‘ಮಿಕ್ಸೆಡ್ ವೆಜಿಟೆಬಲ್ ಕರ್ರಿ’ ಎನ್ನಬಹುದಾಗಿದ್ದ ಒಂದು ಅತ್ಯಮೋಘ ಪದಾರ್ಥ. ಈರುಳ್ಳಿ, ಕ್ಯಾರೆಟ್, ಕಾಲಿಫ್ಲವರ್, ಸೌತೆಕಾಯಿ, ದೊಣ್ಣೆಮೆಣಸು ಮುಂತಾದ ತರಕಾರಿಗಳನ್ನು ಹೆಚ್ಚಿ ದೊಡ್ಡದೊಡ್ಡ ಸ್ಟೀಮ್ ಬಾಯ್ಲರ್ಗಳಲ್ಲಿ ಬೇಯಿಸಿ ತಯಾರಿಸಿದ್ದು. ಅಮೆರಿಕನ್ ಪದಾರ್ಥಗಳೊಂದಿಗೆ ಪಕ್ಕಾ ಕರ್ನಾಟಕ ಪಾಕಶೈಲಿಯಲ್ಲಿ ಅದಕ್ಕೊಂದಿಷ್ಟು ಮಸಾಲೆಪುಡಿಗಳನ್ನೂ ಬೆರೆಸಿದ್ದರಿಂದ ಒಂಥರ ಬಿಸಿಬೇಳೆಭಾತ್ನಂತೆಯೇ ಕಂಗೊಳಿಸುತ್ತಿತ್ತು. ಅದರಲ್ಲೇ ಕಡಲೆ ಮತ್ತು ರಾಜ್ಮಾ ಬೀಜಗಳನ್ನೂ ಸೇರಿಸಿದ್ದರಿಂದ ‘ರಾಜಮ್ಮಾ ಪಲ್ಯ’ ಎಂದು ಹೆಸರು ಬೇರೆ ಕೊಟ್ಟಿದ್ದೆವು. ಅಂತೂ ಜೋಕುಗಳು, ತಮಾಷೆ, ಹರಟೆ, ನಗು, ಅಟ್ಟಹಾಸಗಳ ಖುಷಿಯನ್ನೂ ಸೇರಿಸಿ ರುಚಿರುಚಿಯಾದ ರಸಪಾಕ ಸಿದ್ಧವಾಗಿತ್ತು. ಟೀಮ್ವರ್ಕ್ನಿಂದಾಗಿ ಅಷ್ಟು ಕ್ಷಿಪ್ರಗತಿಯಲ್ಲಿ ಅದು ಸಾಧ್ಯವಾದದ್ದು ಎಲ್ಲರಿಗೂ ಖುಷಿ ತಂದಿತ್ತು. ಅನ್ನಬ್ರಹ್ಮನ ದೇಗುಲದಲ್ಲಿ ಪರಿಚಾರಿಕೆ ನಡೆಸಿಬಂದ ಧನ್ಯತಾಭಾವ ಎಲ್ಲರಲ್ಲೂ ಮೂಡಿತ್ತು. ವಾರಾಂತ್ಯದ ದಿನವನ್ನು ಒಂದು ಸತ್ಕಾರ್ಯದಲ್ಲಿ ತೊಡಗಿಸಿದ, ಅಮೆರಿಕನ್ ಅನಾಥಾಶ್ರಮವಾಸಿಗಳ ಅನ್ನದಾಸೋಹಕ್ಕೆ ನೆರವಾದ ತೃಪ್ತಿಯಂತೂ ಖಂಡಿತವಾಗಿಯೂ ಇತ್ತು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Nov 05, 2011
Alliteration Everywhere
Saturday Nov 05, 2011
Saturday Nov 05, 2011
ದಿನಾಂಕ 06 ನವೆಂಬರ್ 2011ರ ಸಂಚಿಕೆ...
ಎಲ್ಲಿಂದ ಎಲ್ಲಿಗೆ ಎಲ್ಲಿಟರೇಷನ್!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕಳೆದವಾರ ವೇಸ್ಟ್ ಲೇಖನದ ಕೊನೆಯ ವಾಕ್ಯ ಬೇರೆಬೇರೆ ಓದುಗರನ್ನು ಬೇರೆಬೇರೆ ಕಾರಣಗಳಿಂದ ಆಕರ್ಷಿಸಿದೆ. ಅದೊಂಥರ ಪಂಚ್ಲೈನ್ ರೀತಿಯಲ್ಲಿ ಖುಷಿಕೊಡ್ತು ಎಂದು ಬಹಳಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಬೂಕಿನಕೆರೆ ಅಲ್ಲ ಬೂಕನಕೆರೆ ಅಂತಿರಬೇಕಿತ್ತು ಎಂದು ತಿದ್ದುಪಡಿ ತಿಳಿಸಿದವರಿದ್ದಾರೆ. ಯಡ್ಯೂರಪ್ಪನವರನ್ನು ಏಕವಚನದಲ್ಲಿ ಗುರುತಿಸಿದ್ದು ಒಳ್ಳೆಯದೆನಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದವರೂ ಇದ್ದಾರೆ. ಸೊರಬದಿಂದ ರಂಗನಾಥ ಬಾಪಟ್ ಬರೆದಿದ್ದಾರೆ- “ತೀರಾ ಬೂಕನಕೆರೆಯವನ ಅಂತ ಬರೆಯುವುದು ವಿಕದಂಥ ಪತ್ರಿಕೆಗೆ, ಪರಾಗಸ್ಪರ್ಶದಂಥ ಅಂಕಣಕ್ಕೆ ಚೆನ್ನಾಗಿ ಕಾಣೋಲ್ಲ. ಹಾಗೆ ಬರೆಯಲು ಬೇರೆ ಪತ್ರಿಕೆಗಳಿದ್ದಾವೆ. ನಿಮಗೆ ಗೊತ್ತಿರಬಹುದು, ಕಾರ್ಯದರ್ಶಿ ಬರೆದುಕೊಟ್ಟ ಮೆಮೊರಾಂಡಮ್ನಲ್ಲಿ ‘ಇಂದಿರಾ, ಜವಾಬ್ ದೋ’ ಅಂತಿದ್ದದ್ದನ್ನು ವಾಜಪೇಯಿಯವರು ಓದುವಾಗ ‘ಇಂದಿರಾಜೀ ಜವಾಬ್ ದೀಜಿಯೇ’ ಎಂದು ತಿದ್ದಿಕೊಂಡು ಓದಿದ್ದರಂತೆ.” ಹಾಗೆ ನೀವೂ ತಿದ್ದಿಕೊಂಡು ಓದಿ ಎಂದು ನಾನಿಲ್ಲಿ ಹೇಳುತ್ತಿಲ್ಲ. ಏಕವಚನದಲ್ಲಿ ಬರೆದದ್ದೇ ಸರಿ ಎಂದು ಉಡಾಫೆ ತೋರಿಸುತ್ತಲೂ ಇಲ್ಲ. ನಾನು ಆ ವಾಕ್ಯವನ್ನು ಬರೆದದ್ದು ಯಡ್ಯೂರಪ್ಪನವರಿಗೆ ಅಗೌರವ ಸೂಚಿಸಬೇಕೆಂಬ ಅಜೆಂಡಾ ಇಟ್ಟುಕೊಂಡು ಅಲ್ಲ. ಅಲ್ಲೊಂದು ಪದವಿನೋದ ಇತ್ತು. ಬಾಕ್ಸ್ಟರ್, ಬಿಜಿನೆಸ್, ಬೂಕನಕೆರೆ ಮತ್ತು ಬೆರಳಸಂಕೇತ ಈ ನಾಲ್ಕೂ ಪದಗಳು ಬಕಾರದಿಂದಲೇ (ಬಾ ಬಿ ಬೂ ಬೇ) ಆರಂಭವಾಗಿದ್ದವು. ಹೀಗೆ ವಾಕ್ಯದ ಎಲ್ಲ ಪದಗಳೂ ಒಂದೇ ಅಕ್ಷರ/ಉಚ್ಚಾರದಿಂದ ಆರಂಭವಾದರೆ ಅದನ್ನು ‘ಅನುಪ್ರಾಸ’ ಎನ್ನುತ್ತಾರೆ. ಇಂಗ್ಲಿಷ್ನಲ್ಲಿ alliteration ಎಂದು ಹೆಸರು. ತತ್ಕ್ಷಣಕ್ಕೆ ನೆನಪಾಗುವುದೆಂದರೆ ಅತಿಪ್ರಸಿದ್ಧ ಇಂಗ್ಲಿಷ್ ಎಲ್ಲಿಟರೇಷನ್ ವಾಕ್ಯ Peter piper picked a peck of pickled peppers. ಇನ್ನೊಂದು, ಎಲ್ಲಿಟರೇಷನ್ ಆಗಿದ್ದರೂ ಹೃಸ್ವ ರೂಪದಲ್ಲೇ ಪ್ರಖ್ಯಾತವಾಗಿ ಜಗದಗಲ ಹರಡಿರುವ world wide web (www). ಅದರ ಕೃಪೆಯಿಂದಲೇ ನನಗೆ ಗೊತ್ತಾದದ್ದು, ಏನೆಂದರೆ ಆ ‘ಪೀಪಿಯೂದುವ ಪೀಟರನ ಪಚ್ಚಡಿ ಪೀಕಲಾಟದ ಪದವಿನೋದ’ ಹುಟ್ಟಿದ್ದು ಜಾನ್ ಹಾರ್ರಿಸ್ (1756-1846) ಎಂಬಾತ ಬರೆದ Peter Piper's Practical Principles of Plain and Perfect Pronunciation ಪುಸ್ತಕದಲ್ಲಿ! ಅನುಪ್ರಾಸ ನನಗೆ ತುಂಬಾ ಇಷ್ಟ. ಅಂಕಣದ ತಲೆಬರಹ ಅಲಂಕರಣಕ್ಕೆ ನಾನು ಆಗಾಗ ಅನುಪ್ರಾಸ ಬಳಸುತ್ತೇನೆ. ‘ತವರೂರಿಂದ ತಿಂಡಿ ತರುವಾಗ ತರಾವರಿ ತೊಂದರೆ’, ‘ಬಿಳಿಮನೆಯೂರಿನಲ್ಲಿ ಬಾಡಿಗೆ ಬೈಸಿಕಲ್’, ‘ಮಧ್ಯರಾತ್ರಿ ಮೈಸೂರುಪಾಕ್ ಮೆಲ್ಲುವಾಸೆ’, ‘ಚೆಲುವಗನ್ನಡದಲ್ಲಿ ಚಿತ್ರಕಾವ್ಯದ ಚಮತ್ಕಾರ’, ಮತ್ತು ಇತ್ತೀಚೆಗಿನ ‘ಮತ್ತೂಮತ್ತೂ ಮನಸ್ಸಲ್ಲುಳಿವ ಮತ್ತೂರಜ್ಜ’ ಮುಂತಾದ ಶೀರ್ಷಿಕೆಗಳು ನಿಮಗೆ ನೆನಪಿರಬಹುದು. ಈರೀತಿ ಎಲ್ಲಿಟರೇಷನ್ ರಚಿಸುವುದೊಂದೇ ಅಲ್ಲ, ಸಾಹಿತ್ಯದಲ್ಲಿ, ಆಡುಮಾತಿನಲ್ಲಿ ಅಲ್ಲಲ್ಲಿ ಕಾಣಸಿಗುವ ಎಲ್ಲಿಟರೇಷನ್ಅನ್ನು ಗುರುತಿಸಿ ಆನಂದಿಸುವುದು ಸಹ ನನಗೆ ಇಷ್ಟವೇ. ಇವತ್ತು ಆ ‘ಚಟ’ವನ್ನು ನಿಮಗೂ ತಗುಲಿಸಬೇಕೆಂದು ಒಂದು ಚಿಕ್ಕ ಬಯಕೆ. ಅದಕ್ಕೋಸ್ಕರ ಅಂಕಣವಿಡೀ ಅನುಪ್ರಾಸದ ಅಳವಡಿಕೆ. ಎಲ್ಲಿಟರೇಷನ್ ಎಲ್ಲಿದೆ ಎಂಬ ಹುಡುಕಾಟವನ್ನು ನೀವು ಕನ್ನಡ ಸಿನೆಮಾ ಹೆಸರುಗಳ ಮೇಲೊಮ್ಮೆ ಕಣ್ಣಾಡಿಸಿ ಆರಂಭಿಸಬೇಕು. ಚೂರಿ ಚಿಕ್ಕಣ್ಣ, ಬೀದಿ ಬಸವಣ್ಣ, ಸರ್ವರ್ ಸೋಮಣ್ಣ, ಬೇಡಿ ಬಂದವಳು, ಪಾಯಿಂಟ್ ಪರಿಮಳ, ಬೆಳದಿಂಗಳ ಬಾಲೆ, ಜನುಮದ ಜೋಡಿ, ಗಜಪತಿ ಗರ್ವಭಂಗ, ಪಡುವಾರಳ್ಳಿ ಪಾಂಡವರು, ತಿಪ್ಪಾರಳ್ಳಿ ತರ್ಲೆಗಳು, ದೇವರ ದುಡ್ಡು, ಸಂಪತ್ತಿಗೆ ಸವಾಲ್, ಮಲಯ ಮಾರುತ, ಮುಂಗಾರು ಮಳೆ, ಮನೆಯೇ ಮಂತ್ರಾಲಯ... ಒಂದೇ ಎರಡೇ! ಹೌದು ಬರೀ ಎರಡೇ ಪದಗಳಾದರೂ ಅವು ಅನುಪ್ರಾಸಬದ್ಧ. ಮುಂದೆ ಮೂರು ಪದಗಳ ಹೆಸರುಗಳನ್ನೂ ಗಮನಿಸಬಹುದು. ಕರುಣೆಯೇ ಕುಟುಂಬದ ಕಣ್ಣು, ಪ್ರೀತಿ ಪ್ರೇಮ ಪ್ರಣಯ, ಮನ ಮೆಚ್ಚಿದ ಮಡದಿ, ಮಸ್ತ್ ಮಜಾ ಮಾಡಿ, ಸುಬ್ಬಿ ಸುಬ್ಬಕ್ಕ ಸುವ್ವಲಾಲಿ. ಸಿನೆಮಾ ಹೆಸರುಗಳ ನಂತರ ಚಿತ್ರಗೀತೆಗಳ ಸಾಲುಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಅವುಗಳಲ್ಲಿನ ಅನುಪ್ರಾಸ ಆಲಿಸಿದರೆ ಮುಖದಲ್ಲಿ ಮಂದಹಾಸ. ಬಂಕಾಪುರದ ಬೆಂಕಿಚೆಂಡು ಬಹದ್ದೂರ್ಗಂಡು, ತುಂಬುತ ತುಳುಕುತ ತೀಡುತ ತನ್ನೊಳು ತಾನೇ, ತರವಲ್ಲ ತಗಿನಿನ್ನ ತಂಬೂರಿ, ಕಂಡೊಡನೆ ಕರಪಿಡಿದು ಕಲ್ಪಿಸದಾಸುಖ ಕೊಡುವ, ನಾನಿರುವುದೇ ನಿಮಗಾಗಿ ನಾಡಿರುವುದು ನಮಗಾಗಿ, ಪಂಚರಂಗಿ ಪೊಂವ್ ಪೊಂವ್! ಒಂದೇ ಹಾಡಿನ ಎಲ್ಲಿಟರೇಷನ್ ಸಾಲದಿದ್ದರೆ ಎರಡು ಹಾಡುಗಳನ್ನು ಕಸಿ ಕಟ್ಟಿ ನೋಡಿ. ಆಗ ಡಬಲ್ ಧಮಾಕಾ- ಕನ್ನಡದ ಕುಲದೇವಿ ಕಾಪಾಡು ಬಾತಾಯೆ ಭಾರತಿಯೆ ಭಾವ ಭಾಗೀರಥಿಯೆ! ಇನ್ನು, ಕನ್ನಡ ಸಾಹಿತ್ಯದತ್ತ ಹೊರಳಿದರೆ ಅಲ್ಲಿಯೂ ನಮಗೆ ಅನುಪ್ರಾಸದ ಸುಗ್ರಾಸ ಸಿಗುತ್ತದೆ. ರಾಜರತ್ನಂ ತುತ್ತೂರಿ ‘ಕಾಸಿಗೆ ಕೊಂಡನು ಕಸ್ತೂರಿ’, ಸಿದ್ದಯ್ಯ ಪುರಾಣಿಕರ ಅಜ್ಜನ ಕೋಲು ‘ಕಾಥೇವಾಡದಿ ಕಾಣದ ಕುದುರೆ’. ಕಯ್ಯಾರ ಕಿಞಣ್ಣನವರ ‘ಕಾಮನಬಿಲ್ಲು ಕಮಾನು ಕಟ್ಟಿದೆ’. ಬೇಂದ್ರೆಯವರ ‘ಕರಿಮರಿನಾಯಿ ಕುಂಯಿಗುಡುತ್ತಿತ್ತು’, ‘ಕುರುಡು ಕಾಂಚಾಣ ಕುಣಿಯುತಲಿತ್ತು’. ಕರಡಿ ಕುಣಿತದಲ್ಲಂತೂ ‘ಕಬ್ಬಿಣ ಕೈಕಡಗ ಕುಣಿಗೋಲು ಕೂದಲು ಕಂಬಳಿ (ಹೊದ್ದಾಂವ ಬಂದಾನ...)’ ಸರದಿಯಲ್ಲಿ ಐದು ಪದಗಳು ಕಕಾರದವು. ಎಷ್ಟೆಂದರೂ ಬದುಕಲ್ಲಿ ಬೆಂದರೆ ಬೇಂದ್ರೆ, ಹಾಗಾಗಿ ಅವರ ಕುಲುಮೆಯಲ್ಲಿ ಎಂತೆಂಥ ಪದಗಳೂ ಥಳಥಳನೆ ಹೊಳೆಯುತ್ತವೆ. ಕವಿಶೈಲದ ಕವಿಋಷಿ ಕುವೆಂಪು ಕೂಡ ಕಮ್ಮಿಯೇನಲ್ಲ, ‘ಕುರಿನೆಗೆದಾಟ ಕುರುಬರ ಕೊಳಲಿನೂದಾಟ’ದಿಂದ ವಸಂತನನ್ನು ಸ್ವಾಗತಿಸಿದವರು. ‘ಮೂಡಣದಾದಿಗಂತದಿ ಮೂಡುವೆಣ್ಣಿನ ಮೈಸಿರಿ’ಯನ್ನು ಮೆರೆಸಿದವರು. ಆದರೆ ಕನ್ನಡದ ಸಂದರ್ಭದಲ್ಲಿ ಅನುಪ್ರಾಸದ ಅನಭಿಷಿಕ್ತ ಅರಸ ಎನ್ನಬೇಕಾದ್ದು ಟಿಪಿಕಲ್ ಟಿ.ಪಿ.ಕೈಲಾಸಂ ಅವರನ್ನು. ಪ್ರಹಸನ ಪ್ರಪಿತಾಮಹ ಕನ್ನಡಕ್ಕೊಬ್ಬರೇ ಕೈಲಾಸಂ ಎನಿಸಿದ ಗ್ರೇಟ್ ಮನುಷ್ಯನನ್ನು. ಅವರ ನಾಟಕಗಳ ಹೆಸರಿನಿಂದ ಹಿಡಿದು ಪಾತ್ರಗಳು, ಡೈಲಾಗುಗಳು ಎಲ್ಲ ಎಲ್ಲಿಟರೇಷನ್ಮಯ. ಬಂಡ್ವಾಳ್ವಿಲ್ಲದ್ ಬಡಾಯಿ, ಸೀಕರ್ಣೆ ಸಾವಿತ್ರಿ, ಹರಿಶ್ಚಂದ್ರನ ಹಿಂಸಾ, ಮೊಮ್ಮಗಳ ಮುಯ್ಯಿ, ವೈದ್ಯನ ವ್ಯಾಧಿ. ಟೆರ್ರಿಬಲ್ ಟಂಗು... ಮೆಟಾಲಿಕ್ ಮೌತು... ನನ್ ನಾಲ್ಗೆಗ್ ನರವೇಇಲ್ಲ... ಕಾಪಿ ಕುಡ್ಯೋದು ಕಾದಾಡೋದು... ಕಿರಾತಕಿ! ಕುಟುಂಬ ಕುಟುಂಬಗಳ್ನೇ ಕುಲ ಕುಲಗಳ್ನೇ ಕೊಂಪೆ ಕೊಂಪೆಗಳ್ನೇ ಕಿಚ್ಚಿಗಾಕ್ದ್ಲು! ಹದ್ದಿನ್ ಹೊಟ್ಟೇಲ್ ಹುಟ್ಸಿದ್ರಿ... ನೋಡಿವ್ರಾ ನಮ್ ನಂಜೀನವ ನಮ್ಗಜ ನಿಂಬೇ ನಂಜೀನವ? ಹೀಗೆ ಹುಡುಕಿದರೆ ಎಲ್ಲೆಲ್ಲೂ ಇದೆ ಎಲ್ಲಿಟರೇಷನ್. ಚಹಾದಜೋಡಿ ಚೂಡಾದ್ಹಂಗ ರುಚಿರುಚಿಯಾಗಿದೆ, ಚೂಡಾ ಮಾತ್ರ ಸಾಕಾಗದಿದ್ದರೆ ಚಕ್ಕುಲಿ ಚಿರೋಟಿ ಚುರುಮುರಿ ಚೌಚೌ ಚಂಪಾಕಲಿಯಂತೆಯೂ ಚಪ್ಪರಿಸಬಹುದಾಗಿದೆ. ಏಕೆಂದರೆ ಎಲ್ಲಿಟರೇಷನ್ ‘ಕಪ್ಪು ಕಾಗೆ ಕೆಂಪು ಕುಂಕುಮ’ದಂಥ ನಾಲಿಗೆಹೊರಳು (ಟಂಗ್ಟ್ವಿಸ್ಟರ್)ಗಳಲ್ಲೂ ಇದೆ, ‘ಎರಡೆತ್ತೆಮ್ಮೆಯಮರಿ ಎರಡೆರಡಾಡಿನಮರಿ ಎರಡು’ ಮಾದರಿಯ ಜನಪದ ಒಡಪುಗಳಲ್ಲೂ ಇದೆ. ‘ರಾಜಾಜಿನಗರದ ರಾಜ್ಕುಮಾರ್ ರಸ್ತೆಯಲ್ಲಿ ರೋಡ್ ರೋಲರ್ ರಂಪಾಟ’ದಲ್ಲೂ ಇದೆ, ‘ಹೊಸನಗರದ ಹತ್ತಿರ ಹಾಲ್ಕೊಳವೆಂಬ ಹೋಬಳಿಯ ಹಟ್ಟಿ ಹನುಮಪ್ಪ ಹೆಂಡತಿ ಹೂವಮ್ಮನ ಹಾಳು ಹರಟೆಗೆ ಹೂಂಗುಟ್ಟು’ವುದರಲ್ಲೂ ಇದೆ. ‘ಪರೋಪಕಾರಾಯ ಪುಣ್ಯಾಯ ಪಾಪಾಯ ಪರಪೀಡನಂ’ನಂಥ ಉಪದೇಶಾಮೃತದಲ್ಲೂ ಇದೆ, ಕೊನೆಗೆ ಭಗವಂತನ ನಾಮಸ್ಮರಣೆಯ ವಿಷ್ಣುಸಹಸ್ರನಾಮ ಸ್ತೋತ್ರದಲ್ಲೂ ಇದೆ- ‘ಸುವ್ರತ ಸುಮುಖ ಸೂಕ್ಷ್ಮಃ ಸುಘೋಷ ಸುಖದ ಸುಹೃತ್..., ವೃಷಾಹೀ ವೃಷಭೋ ವಿಷ್ಣುಃ ವೃಷಪರ್ವ ವೃಷೋದರಃ ವರ್ಧನೋ ವರ್ಧಮಾನಶ್ಚ ವಿವಿಕ್ತಶ್ರುತಿಸಾಗರಃ||’ ನನಗೀಗ ಕೊಂಚ ಭಯವೂ ಆಗುತ್ತಿದೆ. ಎಲ್ಲಿಟರೇಷನ್ ಹೆಸರಿನಲ್ಲಿ ಇವತ್ತಿನ ಲೇಖನದಲ್ಲಿ ಸಿಕ್ಕಾಪಟ್ಟೆ ಕನ್ನಡೇತರ ಪದಗಳೂ ಸೇರಿಕೊಂಡಿವೆ. ನವೆಂಬರ್ ತಿಂಗಳು ಬೇರೆ. “ಕರುನಾಡಲಿ ಕಾಲಿಟ್ಟು ಕಪಟಾಟ್ಟಹಾಸದಿ ಕನ್ನಡವ ಕೊಲ್ಲುವ ಕುನ್ನಿಗಳು. ಕಸ್ತೂರಿ ಕನ್ನಡದ ಕಂಪನರಿಯದ ಕಣ್ಣಿರುವ ಕುರುಡರು. ಕನ್ನಡಾಂಬೆ ಕೇಳಲಾರೆನೀ ಕರ್ಕಷ ಕಹಳೆ ಕಾಪಾಡು ಕಾಪಾಡು!” ಎಂದು ಯಾರಾದರೂ ಕನ್ನಡಾಭಿಮಾನಿಗಳು ಕೂಗೆಬ್ಬಿಸಿದರೆ ಕಷ್ಟ. ಆದರೂ, ಇವತ್ತಿನ ಶೀರ್ಷಿಕೆ ಆ ರೀತಿ ಇರುವುದಕ್ಕೆ ನ್ಯಾಯ ಸಲ್ಲಿಸಬೇಕೆಂದು ಒಂದು ಚಂದದ ಎಲ್ಲಿಟರೇಷನ್ ಇಂಗ್ಲಿಷ್ನದನ್ನೇ ಉಲ್ಲೇಖಿಸಿ ಮುಗಿಸುತ್ತೇನೆ. ಇದು ಇಂಗ್ಲಿಷ್ ಅಕ್ಷರ ಎಲ್ಇಂದ ಎಲ್ಇಗೆ ಎಲ್ಲಿಟರೇಷನ್: Low lying land lets leaking liquid linger longer. ಈಗಿನ್ನು ನಿಮ್ಮ ತಲೆಯಲ್ಲಿ ಎಲ್ಲಿಟರೇಷನ್ ಗುಂಗಿಹುಳ ಎಷ್ಟು ದಿನ ಗುಂಯ್ಗುಟ್ಟುತ್ತಿರುತ್ತದೋ ನೋಡಬೇಕು! * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125