Episodes
Saturday Oct 22, 2011
Naarada Also Uses Deodorant
Saturday Oct 22, 2011
Saturday Oct 22, 2011
ದಿನಾಂಕ 23 ಅಕ್ಟೋಬರ್ 2011ರ ಸಂಚಿಕೆ...
ನಾರದ ಮುನಿ ಪರಿಮಳಕ್ಕೆ ಅತ್ತರು!
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಅವರು ತ್ರಿಲೋಕಸಂಚಾರಿ. ತಂಬೂರಿ ಹಿಡಕೊಂಡು ಹೊರಟರೆಂದರೆ ತಿರುಗಾಟದಲ್ಲೇ ಬಿಜಿಯಾಗುತ್ತಾರೆ. ಒಮ್ಮೆ ಅನಂತನಾಗ್ ರೂಪದಲ್ಲಿ ಭೂಲೋಕಕ್ಕೂ ಬಂದಿದ್ರಲ್ಲ? “ಇದು ಎಂಥಾ ಲೋಕವಯ್ಯಾ...” ಎಂದು ಹಾಡಿಕೊಳ್ಳುತ್ತ ಬೆಂಗಳೂರಿನ ರಸ್ತೆಗಳಲ್ಲಿ ಸೈಕಲ್ ಮೇಲೆ ಓಡಾಡಿದ್ರಲ್ಲ? (ಈಗಾದ್ರೆ ಮೆಟ್ರೊ ರೈಲ್ನಲ್ಲೂ ಕಾಣಿಸಿಕೊಳ್ತಿದ್ರೋ ಏನೊ). ಇಂತಿರ್ಪ ನಾರದ ಮಹರ್ಷಿಗಳ ಒಂದು ಖಾಸಗಿ ವಿಚಾರ ಮಾತ್ರ ನಿಮಗೆ ಗೊತ್ತಿಲ್ಲ ಎಂದುಕೊಳ್ಳುತ್ತೇನೆ. ಯಾವ ಪುರಾಣದಲ್ಲೂ ಉಲ್ಲೇಖಗೊಂಡಿರದ ವಿಚಾರವಿದು. ಏನಪ್ಪಾ ಅಂತಂದ್ರೆ ನಾರದ ಮಹರ್ಷಿಗಳದು ಒಂದು ರೀತಿಯ ವಿಶಿಷ್ಟ ಭೌತಿಕಲಕ್ಷಣ. ಅವರ ಮೈಕೈ ಬೆವರುವುದಿಲ್ಲ. ಮೈಗೆ ಕೊಳೆ ಅಂಟುವುದಿಲ್ಲ. ಹಾಗಾಗಿ ದಿನಾ ಸ್ನಾನ ಮಾಡಬೇಕಂತಲೂ ಇಲ್ಲ (ಟೂರ್ನಲ್ಲಿ ಇರುವಾಗ ಟೈಮೂ ಸಿಗಲಿಕ್ಕಿಲ್ಲ, ಕೆಲವೊಮ್ಮೆ ಅನುಕೂಲವೂ ಆಗಲಿಕ್ಕಿಲ್ಲ ಎನ್ನಿ). ಯಾವಾಗ ನೋಡಿದರೂ ತಾಜಾ ಮೈ ಕಾಂತಿ. ಕೊಳೆತು ನಾರುವ ಚಾನ್ಸೇ ಇಲ್ಲ. ಅದಕ್ಕೇ ಅವರಿಗೆ ‘ನಾರದ’ ಮಹರ್ಷಿ ಎಂದು ಹೆಸರು! ಅದ್ಸರಿ, ಅವರು ಅತ್ತದ್ದಾದ್ದರೂ ಏಕೆ? ಕಲಹಪ್ರಿಯನಾಗಿ ಬೇರೆಯವರನ್ನು ಅಳಿಸುವವರು ತಾವೇ ಕಣ್ಣೀರುಗರೆದದ್ದೇಕೆ? ಅದು ಹಾಗಲ್ಲ. ನಾರದ ಮಹರ್ಷಿಗೂ ನಮ್ಮೆಲ್ಲರಂತೆಯೇ ಸೆಂಟಿನ ಶೋಕಿ. ಮೂರು ಲೋಕಗಳಲ್ಲಿ ಸಂಗ್ರಹಿಸಿದ ಒಳ್ಳೊಳ್ಳೆಯ ಹೂವುಗಳಿಂದ ಭಟ್ಟಿಯಿಳಿಸಿ ತೆಗೆದ ಸುಗಂಧದ್ರವ್ಯ ‘ಅತ್ತರು’ ತುಂಬಿಸಿದ ಸಣ್ಣಸಣ್ಣ ಬಾಟ್ಲಿಗಳ ದೊಡ್ಡ ಸಂಗ್ರಹ ಅವರಲ್ಲಿದೆ. ತಮ್ಮದು ನಾರದ ಶರೀರವಾದರೂ ನಾರಾಯಣ ನಾರಾಯಣ ಎನ್ನುತ್ತ ಅತ್ತರು ಸ್ಪ್ರೇ ಮಾಡಿಕೊಳ್ಳುತ್ತಾರೆ. ನಾರಾಯಣ ನಾರಾಯಣ! ಇದೊಂದು ಕಪೋಲಕಲ್ಪಿತ ಕಟ್ಟುಕಥೆಯಂತ ನಿಮಗಾಗಲೇ ಗೊತ್ತಾಗಿರುತ್ತದೆ. ಹೌದು, ಶೀರ್ಷಿಕೆಯಲ್ಲಿನ ಶ್ಲೇಷೆ ವಿ‘ಶ್ಲೇಷ’ಣೆಗೆಂದೇ ನಾನಿದನ್ನು ಕಟ್ಟಿದ್ದು. ಆದರೆ ಒಂದು ಕಿವಿಮಾತು. ‘ನಾರದ’ ಮಹರ್ಷಿಯೇ ಅತ್ತರು ಚಿಮುಕಿಸಿಕೊಳ್ಳುತ್ತಾರಾದರೆ ಭೂಲೋಕದ ‘ನಾರಿ’ಯರು ಇಷ್ಟೆಲ್ಲ ಪ್ರಸಾಧನ ಸಾಮಗ್ರಿ ಬಳಸಿಕೊಳ್ಳುವುದು, ಸೆಂಟು ಸಿಂಪಡಿಸಿಕೊಳ್ಳುವುದು, ಹೂ ಮುಡಿದುಕೊಳ್ಳುವುದು ಯಾಕಂತ ಈಗ ತಿಳಿಯಿತು ಎಂಬ ಹೊಸ ಲಾಜಿಕ್ ಮಾತ್ರ ಶುರುಮಾಡಬೇಡಿ! ಯುರೇಕಾ ಎಂದು ಬಚ್ಚಲುಮನೆಯಿಂದ ಹಾಗೆಯೇ ಓಡಬೇಡಿ! ಹೂವಿನಿಂದಲೇ ನಾರಿಗೂ ಮನ್ನಣೆ ಸಿಗುವುದು, ಸ್ವರ್ಗಪ್ರಾಪ್ತಿ ಆಗುವುದು ಇತ್ಯಾದಿ ಹೌದಾದರೂ ನಾರಿ ಮುನಿದರೆ ಮಾರಿ ಎಂದು ಕಳೆದವಾರ ವ್ಯಾಖ್ಯಾನಿಸಿದ್ದು ನೆನಪಿದೆ ತಾನೆ? ಶ್ಲೇಷೆಯನ್ನು ಬಣ್ಣಿಸುತ್ತ ಛಂದೋಮಿತ್ರ ಪುಸ್ತಕದಲ್ಲಿ ಪ್ರೊ.ಅ.ರಾ.ಮಿತ್ರ ಹೇಳಿರುವುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅವರೆನ್ನುತ್ತಾರೆ, ‘ಶ್ಲೇಷೋದ್ಯಾನದಿ ಶಬ್ದವ ಕಸಿಮಾಡಿ ಹೊಸತು ಪದಾರ್ಥವ ಬೆಳೆಸುವರು...’ ಹೇಗೆಂದು ಒಂದು ಚಂದದ ಉದಾಹರಣೆಯನ್ನು ತಾವೇ ಹೊಸೆದು ಕೊಡುತ್ತಾರೆ- ಪೀತವರ್ಣಪ್ರೀತೆ ಗೃಹಪತ್ರಕರ್ತೆ ದೋಷದ ಕರಡು ತಿದ್ದದ ಮನೆಯ ಸಂಪಾದಕ ಇಬ್ಬರಿಂ ಹಾಳಾಯ್ತು ಮನೆಯಚ್ಚುಕೂಟ ಬತ್ತಿ ಹೋಯಿತು ಕೇಳು ಅರ್ಥ ಜೀವನದಿ. ಈ ಪದ್ಯದಲ್ಲಿ ಪ್ರತಿಯೊಂದು ಪದವೂ ಎನ್ನುವಮಟ್ಟಿಗೆ ದ್ವಂದ್ವಾರ್ಥ. ಪೀತವರ್ಣಪ್ರೀತೆ ಎಂದರೆ ಹಳದಿ ಲೋಹವನ್ನು (ಚಿನ್ನವನ್ನು) ಬಯಸುವವಳು. ಪೀತಪತ್ರಿಕೋದ್ಯಮ (yellow journalism, useless gossip) ನಡೆಸುವವಳು ಎಂಬ ಅರ್ಥವೂ ಬಂತು. ಗೃಹಪತ್ರಕರ್ತೆ ಎಂದರೆ ಗೃಹಿಣಿಯೆಂಬ ಪತ್ರಕರ್ತೆ; ಗೃಹಪತ್ರ (ಮನೆಯ ಖರ್ಚುವೆಚ್ಚ ಜವಾಬ್ದಾರಿ) ನೋಡುವವಳು ಕೂಡ. ಸಂಪಾದಕ ಎಂದರೆ ಪತ್ರಿಕಾ ಸಂಪಾದಕ ಅಂತನೂ ಆಗುತ್ತದೆ, ಹಣ ಸಂಪಾದಿಸುವವನು (ಯಜಮಾನ) ಎಂಬರ್ಥವೂ ಬರುತ್ತದೆ. ಅಚ್ಚುಕೂಟ ಎಂದರೆ ಅಚ್ಚುಕಟ್ಟುತನ. ಪ್ರಿಂಟಿಂಗ್ ಪ್ರೆಸ್ ಸಹ. ಅರ್ಥ = ಸ್ವಾರಸ್ಯ, ಹಣ ಕೂಡ. ಜೀವನದಿ = ಜೀವನದಲ್ಲಿ. ಜೀವವೆಂಬ ನದಿ ಎಂದೂ ಅರ್ಥೈಸಬಹುದು. ಅರ್ಥ(ಹಣ)ವೆಂಬ ಜೀವನದಿಯು ದುಂದುವೆಚ್ಚದಿಂದ ಬತ್ತಿಹೋಯಿತು ಎಂದೂ ಅರ್ಥ. ಇಷ್ಟು ಸಂಕೀರ್ಣವಿದ್ದೂ ಸ್ವಾರಸ್ಯಕರವಾದ ದ್ವಂದ್ವಾರ್ಥ ರಚನೆಗಳು ಅ.ರಾ.ಮಿತ್ರರಂಥ ಚತುರೋಕ್ತಿಪಂಡಿತರಿಗಷ್ಟೇ ಸಾಧ್ಯ. ನಮಗೆಲ್ಲ ಏನಿದ್ದರೂ ಆಗಲೇ ರಚಿತವಾದ ವಾಕ್ಯಗಳಲ್ಲಿ, ಮಾತುಗಳಲ್ಲಿ, ಹಾಡಿನ ಸಾಲುಗಳಲ್ಲಿ ಅಡಗಿರುವ ಶ್ಲೇಷೆಯನ್ನು ಪತ್ತೆಹಚ್ಚಿ ಆನಂದಿಸುವುದೇ ದೊಡ್ಡ ರೋಮಾಂಚನ. ಅದೂ ಉದ್ದೇಶಪೂರ್ವಕವಾಗಿ ಶ್ಲೇಷೆಯಾಗಬೇಕೆಂದೇ ಹೆಣೆದ ಶ್ಲೇಷೆಗಿಂತಲೂ ತನ್ನಿಂತಾನೇ ರೂಪುಗೊಂಡ ಶ್ಲೇಷೆ ಪತ್ತೆಯಾದಾಗ ಬಾಳೆಗೊನೆಯಲ್ಲಿ ಅವಳಿಬಾಳೆಹಣ್ಣು ಕಂಡಾಗ ಆಗುವಷ್ಟೇ ಖುಷಿ. ಒಂದು ಉದಾಹರಣೆ ಹೇಳುತ್ತೇನೆ. ‘ಶ್ರಾವಣ ಬಂತು ಕಾಡಿಗೆ... ಬಂತು ನಾಡಿಗೆ... ಬಂತು ಬೀಡಿಗೆ...’ ಕವಿತೆ ಕೇಳಿದ್ದೀರಲ್ವಾ? ದ.ರಾ.ಬೇಂದ್ರೆಯವರದು. ಬೇಂದ್ರೆ ಶ್ಲೇಷಾಲಂಕಾರಪ್ರಿಯರು, ಪರಂತು ಈ ಪದ್ಯದಲ್ಲಿ ಖಂಡಿತವಾಗಿಯೂ ಶ್ಲೇಷೆಯ ಉದ್ದೇಶ ಇಟ್ಟುಕೊಂಡಿರಲಾರರು. ಆದರೇನಂತೆ? ನಾವು ಪದ್ಯವನ್ನು ‘ಶ್ರಾವಣ ಬಂತು ನಾಡಿಗೆ... ಬಂತು ಬೀಡಿಗೆ’ ಎಂದು ಓದಿಕೊಂಡು ಮನಸ್ಸಿನಲ್ಲೇ ‘ಸಿಗರೇಟಿಗೆ ಅಲ್ಲಾ’ ಎಂದು ಹೇಳಿಕೊಂಡರೆ ಸೂಪರ್ ಶ್ಲೇಷೆ! ಎಲ್.ಆರ್.ಈಶ್ವರಿ ಹಾಡಿದ ‘ದೂರದಿಂದ ಬಂದಂಥ ಸುಂದರಾಂಗ ಜಾಣ...’ ಹಾಡಿನಲ್ಲಿ ‘ನಾಕಾಣೆ ನಾಕಾಣೆ ನನ್ನದೇವರಾಣೆ ಭಲಾರೇ...’ ಎನ್ನುವಾಗ ಎರಡೂ ನಾಕಾಣೆಗಳನ್ನು ಎಂಟಾಣೆ ಮಾಡಿಕೊಂಡರೆ ಒಟ್ಟು ಹದಿನಾರಾಣೆ ಶ್ಲೇಷೆ! ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಸಂಭಾಷಣೆಯಲ್ಲಿ ಹಾಸ್ಯರಸೋತ್ಪನ್ನವಾಗುವುದು ಹೆಚ್ಚಾಗಿ ಶ್ಲೇಷೆಯಿಂದಲೇ. ದೂತ, ಕಾವಲುಗಾರ, ಸೇವಕ ಮುಂತಾದ ಚಿಲ್ಲರೆ ಪಾತ್ರಗಳು ರಸವತ್ತಾದ, ಸಮಯಸ್ಫೂರ್ತಿಯ ಶ್ಲೇಷೆಯಿಂದ ಪ್ರೇಕ್ಷಕರನ್ನು ನಗಿಸುತ್ತವೆ. ಕೃಷ್ಣಸಂಧಾನ ಪ್ರಸಂಗದಲ್ಲಿ ಕೃಷ್ಣನ ಪಾತ್ರವನ್ನು ಯಕ್ಷಗಾನದ ಶ್ರೇಷ್ಠ ಕಲಾವಿದರಲ್ಲೊಬ್ಬರಾದ ವಾಸುದೇವ ಸಾಮಗರು ನಿರ್ವಹಿಸಿದರೆನ್ನಿ, ಆಗ ದೂತನ ಪಾತ್ರಧಾರಿ ಒಮ್ಮೆಯಾದರೂ “ವಾಸುದೇವಾ ನಿನಗೆ ಗೊತ್ತಿಲ್ಲದ್ದು ಏನಿದೆ ಈ ಪ್ರಪಂಚದಲ್ಲಿ? ಎಲ್ಲದಕ್ಕೂ ನೀನೇ ಕಾರಣ” ಎಂದು ಶ್ಲೇಷೆ ಮಾಡದೆ ಇರುವುದಿಲ್ಲ. ಸಾಮಗರಂಥ ಹಿರಿಯರನ್ನು ಹೆಸರು ಹಿಡಿದು ಏಕವಚನದಲ್ಲಿ ಕರೆಯುವ ಅವಕಾಶದಿಂದ ತಪ್ಪಿಸಿಕೊಳ್ಳುವುದಿಲ್ಲ. ಕೃಷ್ಣನ ಪಾತ್ರ ವಾಸುದೇವ ಸಾಮಗರದ್ದೆಂದು ಗೊತ್ತೇ ಇರುವುದರಿಂದ ಪ್ರೇಕ್ಷಕರಿಗೂ ರೋಮಾಂಚನ. ಕೆಲವೊಮ್ಮೆ ವಿದೂಷಕನ ಪ್ರತ್ಯುತ್ಪನ್ನಮತಿಗೆ ಅನುವಾಗಲೆಂದೇ ರಾಜ/ರಕ್ಕಸ ಪಾತ್ರಗಳು ಸಂಭಾಷಣೆಯಲ್ಲಿ ಕಿಡಿಹಚ್ಚುವುದೂ ಇದೆ. ಆಗ ವಿದೂಷಕನಿದ್ದವನು ಪ್ರಸಂಗ ಪೌರಾಣಿಕವಾದರೂ ಪ್ರಸ್ತುತ ವಿದ್ಯಮಾನದ, ಈಗಿನ ಕಾಲಘಟ್ಟದ ನುಡಿಮತ್ತುಗಳನ್ನು ಶ್ಲೇಷೆಯಾಗಿ ಉದುರಿಸುವುದೂ ಉಂಟು. ಉದಾಹರಣೆಗೆ, “ಆಹಾ! ಅಲ್ಲಿ ನೋಡು. ಸುಂದರ ಸರೋವರದಲ್ಲಿ ನೀರಿನ ತರಂಗಗಳನ್ನು ಕಂಡೆಯಾ?” ಎಂದು ಕೇಳುತ್ತಾನೆ ಅರ್ಜುನ. “ತರಂಗ!? ನಮ್ಮ ಮನೆಯಲ್ಲಿ ಪ್ರತಿ ವಾರ ತರಿಸ್ತೇವೆ. ಈ ವಾರದ್ದು ಇನ್ನೂ ಓದಿ ಆಗಿಲ್ಲ ಅಷ್ಟೇ” ಎನ್ನುತ್ತಾನೆ ದೂತ! “ಅದಲ್ವೋ ನಾನು ಹೇಳಿದ್ದು. ಸುಭದ್ರೆಯ ಚೆಲುವಿನಿಂದ ನನ್ನ ಹೃದಯದಲ್ಲೆದ್ದಿರುವ ಪ್ರೇಮತರಂಗಗಳನ್ನು ಗಮನಿಸಿದೆಯಾ ಎಂದು ನಿನ್ನನ್ನು ಕೇಳಿದ್ದು!” ಅರ್ಜುನ ಉವಾಚ. ಪ್ರೇಕ್ಷಕರ ಚಪ್ಪಾಳೆ. ಬುದ್ಧಿ ಹರಿತಗೊಳಿಸುವುದಕ್ಕೆ ಶ್ಲೇಷೆ ಖಂಡಿತವಾಗಿಯೂ ಸಹಾಯಕವಾಗುತ್ತದೆ. ನಮ್ಮ ಜನಪದ ಕಾವ್ಯಗಳಲ್ಲಿನ ಒಗಟುಗಳು, ದಾಸಸಾಹಿತ್ಯದಲ್ಲಿನ ‘ಮುಂಡಿಗೆ’ಗಳು ಮುಂತಾದವೆಲ್ಲ ಶ್ಲೇಷೆಯಲ್ಲದೆ ಬೇರೇನಲ್ಲ. ಶಿಶುನಾಳ ಶರೀಫರ ರಚನೆಗಳೂ ಪಾರಮಾರ್ಥಿಕ ತತ್ತ್ವಗಳನ್ನು ಶ್ಲೇಷೆಯಾಗಿ ಒಗಟಿನ ರೂಪದಲ್ಲಿ ತಿಳಿಯಹೇಳುತ್ತವೆ. ಹಾಡಲು ಬಂದ ಪಾತರದವಳ ಮದ್ದಳೆ ನುಂಗಿತ್ತಾ ತಂಗಿ ಕೋಡಗನ ಕೋಳಿ ನುಂಗಿತ್ತಾ. ಅದೇರೀತಿ, ಆತ್ಮವು ಶರೀರವನ್ನು ತೊರೆದು ಹೋಗುವ ಪ್ರಕ್ರಿಯೆಯನ್ನು ಪುರಂದರದಾಸರು ಮಾರ್ಮಿಕವಾಗಿ ಬಣ್ಣಿಸುತ್ತಾರೆ- “ಒಂಬತ್ತು ಬಾಗಿಲ ಮನೆಯಲ್ಲಿ ತುಂಬಿತುಂಬಿ ಮಂದಿಯಿರಲು ಕಂಬ ಮುರಿದು ಡಿಂಬ ಬಿದ್ದು ಅಂಬರಕ್ಕೆ ಹಾರಿತಲ್ಲೋ... ರಾಮಾ... ಗಿಳಿಯು ಪಂಜರದೊಳಿಲ್ಲ...” ಕನಕದಾಸರು ಒಂದು ಕೀರ್ತನೆಯಲ್ಲಿ ತರಕಾರಿ ಮಾರುತ್ತಿದ್ದಾರೇನೊ ಅನ್ನಿಸುವಂತೆ “ಪರಮಪುರುಷ ನೀನೆಲ್ಲಿಕಾಯಿ/ ಸರಸಿಯೊಳಗೆ ಕರಿಕೂಗಲುಕಾಯಿ/ ಹಿರಿದು ಮಾಡಿದ ಪಾಪ ನುಗ್ಗೇಕಾಯಿ/ ಹರಿ ನಿನ್ನ ಧ್ಯಾನ ಬಾಳೇಕಾಯಿ/ ಸರುವ ಜೀವರ್ಗುಣಿಸಿಯುಂ ಬದನೆಕಾಯಿ/ ಅರಿಷಡ್ವರ್ಗಗಳೊದಗಿಲಿಕಾಯಿ” ಎನ್ನುತ್ತಾರೆ. ಇಲ್ಲಿ ‘ಕಾಯಿ’ ಎಂದರೆ ಭಗವಂತನಲ್ಲಿ ಮೊರೆ,“ನೀನೇ ಕಾಪಾಡಬೇಕಪ್ಪಾ” ಎಂದು. ಅದೆಲ್ಲ ಇರಲಿ. ಈ ಸಿಂಪಲ್ ಶ್ಲೇಷೆಯೊಗಟು ಗೊತ್ತಾ ನಿಮಗೆ? ‘ಕಾವಲಿಯಿಂದ ಏಳು ದೋಸೆ; ತಟ್ಟೆಯಲ್ಲಿ ಆರು ದೋಸೆ; ಬಾಯಿಗೆ ಹತ್ತು ದೋಸೆ. ಒಟ್ಟು ಎಷ್ಟು ದೋಸೆ?’ ಉತ್ತರ: ಒಂದೇ ದೋಸೆ. ಅದನ್ನು ನಾನೇ ತಿಂದುಬಿಟ್ಟೆ, ನಿಮಗೆ ಒಂಚೂರೂ ಉಳಿಸಿಲ್ಲ! ದೋಸೆಯಷ್ಟೇ ಅಲ್ಲ, ಎರಡು ಕಂತುಗಳಲ್ಲಿ ಹರಿದುಬಂದ ಶ್ಲೇಷ ರಸಾಯನವೂ ನಿಶ್ಶೇಷವಾಯಿತು. ಬೇರೆ ಭಾಷೆಯ ಪದಗಳನ್ನೂ ಸೇರಿಸಿ, ಕಸಿ ಕಟ್ಟಿ ಇನ್ನೂ ಗಮ್ಮತ್ತಿನ ಶ್ಲೇಷೆಗಳನ್ನು ರಚಿಸಬಹುದು, ಹುಡುಕಬಹುದು. ಆದರೆ ನನ್ನ ಉದ್ದೇಶವಿದ್ದದ್ದು ಕಸ್ತೂರಿಕನ್ನಡದಲ್ಲಿ ಶ್ಲೇಷೆ ಎಷ್ಟು ಚೆನ್ನಾಗಿದೆ ಎಂದು ಪರಿಚಯಿಸುವುದು. ಅದಕ್ಕೋಸ್ಕರ ಅಚ್ಚಕನ್ನಡ ಶ್ಲೇಷೆಗಳನ್ನಷ್ಟೇ ಅಳವಡಿಸಿಕೊಂಡೆ. ಅಂದಹಾಗೆ ಕನ್ನಡಪ್ರೇಮ ಎರಡು ವಿಧ : ಎಂದಿಗೂ ಮಾಸದ ಕನ್ನಡಪ್ರೇಮ; ನವೆಂಬರ್ ಮಾಸದ ಕನ್ನಡಪ್ರೇಮ. ನಿಮ್ಮದು ಯಾವುದು? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Oct 08, 2011
An Affectionate Obituary to Matturu Krishnamurthy
Saturday Oct 08, 2011
Saturday Oct 08, 2011
ದಿನಾಂಕ 9 ಅಕ್ಟೋಬರ್ 2011ರ ಸಂಚಿಕೆ...
ಮತ್ತೂಮತ್ತೂ ಮನಸ್ಸಲ್ಲುಳಿವ ಮತ್ತೂರಜ್ಜ
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದಂತೆ. ಮಹಾಭಾರತ ಕಣ್ಣಲಿ ಕುಣಿಯುವುದಂತೆ. ಮೈಯಲಿ ಮಿಂಚಿನ ಹೊಳೆ ತುಳುಕಾಡುವುದಂತೆ. ಅಂತಹ ಕುಮಾರವ್ಯಾಸನನ್ನು ಮತ್ತವನ ಕಾವ್ಯವನ್ನು ಮತ್ತೂರು ಕೃಷ್ಣಮೂರ್ತಿಯವರು ರಸವತ್ತಾಗಿ ಬಣ್ಣಿಸಿದರೆಂದರೆ? ಆಗಲೂ ಅಷ್ಟೇ. ಅದ್ಭುತವಾದ ಅನುಭವ! ‘ತಿಳಿಯಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂದದಿ’ ಎನ್ನುತ್ತಾನೆ ಕುಮಾರವ್ಯಾಸ. ಮತ್ತೂರರ ಪ್ರವಚನವಾದರೋ ಜಾಣರಿಗಷ್ಟೇ ಅಲ್ಲ, ನಮ್ಮಂಥ ಪರಮ ಪಾಮರರಿಗೂ ಸುಲಭದಲ್ಲಿ ಅರ್ಥವಾಗುವಂಥ ದ್ರಾಕ್ಷಾಪಾಕ. ಕಣ್ಮುಂದೆ ತೆರೆದುಕೊಳ್ಳುವ ದೇವ ದಾನವ ಯಕ್ಷ ಗಂಧರ್ವ ಕಿನ್ನರ ಲೋಕ. ಕಥೆಯಲ್ಲಿನ ಒಂದೊಂದು ಪಾತ್ರಕ್ಕೂ ಜೀವ ತುಂಬಿ ತಾವೇ ಆ ಪಾತ್ರವೇನೋ ಎಂಬ ಭಾವಾಭಿವ್ಯಕ್ತಿಯಿಂದ ಬಣ್ಣಿಸುವ ಅಸಾಮಾನ್ಯ ಚಳಕ. ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದರೆ ನಮ್ಮ ಮನೆಯ ಅಜ್ಜನೇ ಕಥೆ ಹೇಳುತ್ತಿದ್ದಾನೇನೋ ಅನ್ನಿಸುವ ಆಪ್ತತೆಯ ಪುಳಕ. ಮತ್ತೂರು ಕೃಷ್ಣಮೂರ್ತಿ ವಿಧಿವಶರಾದರೆಂಬ ಸುದ್ದಿ ಬಂದಾಗ ನಂಬಲಿಕ್ಕೇ ಆಗಲಿಲ್ಲ. ಅರ್ರೆ! ನಿನ್ನೆ ಬೆಳಿಗ್ಗೆ ಬಂದಿದ್ದರು ನಮ್ಮನೆಗೆ. ಮೊನ್ನೆಯೂ ಬಂದಿದ್ರು. ದಿನಾ ಬೆಳಿಗ್ಗೆ ಏಳು ಗಂಟೆಗೆ ತಪ್ಪದೇ ಬರುತ್ತಿದ್ದವರು ಇನ್ನುಮುಂದೆ ಬರೋದೇ ಇಲ್ಲ ಕಾಣಸಿಗುವುದೇ ಇಲ್ಲ ಎಂದರೆ ನಂಬುವುದಾದರೂ ಹೇಗೆ? ಆ ಆಘಾತಕರ ಸುದ್ದಿಯನ್ನು ಅರಗಿಸಿಕೊಳ್ಳುವುದಾದರೂ ಹೇಗೆ? ಉದಯ ಟಿವಿಯಲ್ಲಿ ಅವರು ಇನ್ನೊಬ್ಬ ವಿದ್ವಾಂಸ ಹೊಸಹಳ್ಳಿ ಕೇಶವಮೂರ್ತಿಯವರ ಜೊತೆಗೂಡಿ ನಡೆಸಿಕೊಡುತ್ತಿದ್ದ ಪ್ರಭಾತಸಮಯ ಪುರಾಣ ಪ್ರವಚನ ಕಾರ್ಯಕ್ರಮವನ್ನು ನಿತ್ಯಪ್ರಾರ್ಥನೆಯೆಂಬಂತೆ ವೀಕ್ಷಿಸಿ ಪುನೀತರಾದವರಿಗೆಲ್ಲ ಬಹುಶಃ ಹಾಗೆಯೇ ಅನಿಸಿದೆ. ಸಾವಿನ ಸುದ್ದಿಯಿಂದ ಗರಬಡಿದಿದೆ. ಕುಟುಂಬದ ಹಿರಿಯರೊಬ್ಬರು ದೈವಾಧೀನರಾದಾಗಿನ ವಿಷಾದ, ವ್ಯಾಕುಲತೆ ಮತ್ತು ಅನಾಥಪ್ರಜ್ಞೆ ಕಾಡಿದೆ. ೨೦೦೮ರಲ್ಲಿ ಶಿಕಾಗೋದಲ್ಲಿ ನಡೆದ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಮತ್ತೂರು ಕೃಷ್ಣಮೂರ್ತಿಯವರೂ ಬಂದಿದ್ದರು. ಅವರ ಉಪಸ್ಥಿತಿ ಸಮ್ಮೇಳನಕ್ಕೊಂದು ಅರ್ಥಪೂರ್ಣ ಮೆರುಗನ್ನು ತಂದಿತ್ತು. ಉದಯ ಟಿವಿಯಿಂದಾಗಿ ಅದಾಗಲೇ ಬಹಳಷ್ಟು ಅಮೆರಿಕನ್ನಡಿಗರಿಗೆ ಮತ್ತೂರರ ಪರಿಚಯವಾಗಿದ್ದರೂ ಸಮ್ಮೇಳನದಲ್ಲಿ ಮುಖತಃ ಭೇಟಿಯಾಗುವ ಅವಕಾಶ. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದ್ದರು. ಅವರದು ಎಷ್ಟು ಆತ್ಮೀಯ ವ್ಯಕ್ತಿತ್ವವೆಂದರೆ ಇದೇ ಮೊದಲಸಲ ಅವರನ್ನು ನೋಡಿದವರಿಗೂ ತಮ್ಮ ತಾತನನ್ನೋ ದೊಡ್ಡಪ್ಪನನ್ನೋ ಕಂಡಂಥ ಹಿಗ್ಗು. ಸಮ್ಮೇಳನ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕಿಯರಲ್ಲೊಬ್ಬರಾಗಿ ಅತ್ತಿಂದಿತ್ತ ಓಡಾಡಿಕೊಂಡಿದ್ದ ಅನುಪಮಾ ಅವರಿಗೆ ಹಾಗೇಆಯ್ತು. ಮತ್ತೂರರ ಕಾಲುಮುಟ್ಟಿ ನಮಸ್ಕರಿಸಿದಾಗ ‘ತುಂಬ ಲಕ್ಷಣವಾಗಿ ಕಾಣ್ತಿದ್ದಿಯಮ್ಮಾ ಚೆನ್ನಾಗಿ ನಿರೂಪಣೆ ಮಾಡ್ತಿದ್ದೀ!’ ಎಂದು ನೆಟಿಕೆ ಮುರಿದು ಹರಸಿದ್ದರು. ಸವಿತಾ ರವಿಶಂಕರ್ ಅವರದು ಅದಕ್ಕಿಂತಲೂ ಹೃದಯಸ್ಪರ್ಶಿ ಅನುಭವ. ಮೊನ್ನೆ ಮತ್ತೂರರ ನಿಧನವಾರ್ತೆ ಕೇಳಿದೊಡನೆ ಅವರು ಮತ್ತೆಮತ್ತೆ ನೆನಪಿಸಿಕೊಂಡದ್ದು ಅದನ್ನೇ. ‘ಅಕ್ಕ’ ಸಮ್ಮೇಳನಕ್ಕೆ ಸವಿತಾ ಮೈಸೂರಿನಿಂದ ತನ್ನ ತಂದೆ-ತಾಯಿಯರನ್ನೂ ಕರೆಸಿದ್ದರು. ಅವರ ತಾಯಿಗೆ ಅದೇನೋ ಅನಾರೋಗ್ಯದಿಂದ ಓಡಾಡುವ ಶಕ್ತಿ ಇರಲಿಲ್ಲವಾಗಿ ವ್ಹೀಲ್ಚೇರ್ನಲ್ಲೇ ಎಲ್ಲಕಡೆಗೂ ಕರಕೊಂಡು ಹೋಗ್ತಿದ್ರು ಸವಿತಾ. ಜತೆಯಲ್ಲೇ ಅವರ ಇಬ್ಬರು ಹೆಣ್ಮಕ್ಕಳೂ ಇರ್ತಿದ್ರು. ಹಾಗೆ ಅವರೆಲ್ಲ ಒಟ್ಟೊಟ್ಟಿಗೇ ಇರುತ್ತಿದ್ದುದನ್ನು ಗಮನಿಸಿದ ಮತ್ತೂರರು ಸವಿತಾ ಬಳಿ ಹೇಳಿದ್ದರಂತೆ- “ಪರವಾಇಲ್ವೇ! ಮುಂದೆ ನಿನ್ನ ಮಕ್ಕಳೂ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳೋದನ್ನು ಈಗಲೇ ಗ್ಯಾರಂಟಿ ಮಾಡಿಟ್ಟಿದ್ದೀಯಾ. ಒಳ್ಳೆಯದಾಗಲಿ ನಿನಗೂ ನಿನ್ನ ಮಕ್ಕಳಿಗೂ!” ಆಮೇಲೆ ಮಾರನೆವರ್ಷ ಮೈಸೂರಿನಲ್ಲಿ ಯಾವುದೋ ಪ್ರವಚನಮಾಲೆಯಲ್ಲಿ ಸವಿತಾ ಭೇಟಿಯಾದಾಗ “ಓಹ್ ನೀವು ವ್ಹೀಲ್ಚೇರ್ ಸೇವೆಯವರಲ್ವಾ?” ಎಂದು ಪರಿಚಯ ನೆನಪಿಟ್ಟುಕೊಂಡಿದ್ದರಂತೆ! ಮತ್ತೂರರ ಶೈಲಿಯಲ್ಲೇ ಹೇಳುವುದಾದರೆ- ಗಮನಿಸಬೇಕು... ಇದನ್ನು ನಾವು ಮುಖ್ಯವಾಗಿ ಗಮನಿಸಬೇಕು. ಸದ್ಗುಣಗಳನ್ನು, ಸದ್ವಿಚಾರಗಳನ್ನು ಅದೆಷ್ಟು ಸೂಕ್ಷ್ಮವಾಗಿ ಗಮನಿಸಿ ಪುರಸ್ಕರಿಸುವ ಪರಿಪಾಠ ಮತ್ತೂರರದು! ಅದಕ್ಕಿಂತಲೂ ಹೆಚ್ಚಾಗಿ, ಮುಂದಿನ ಪೀಳಿಗೆಗೂ ಈ ಜೀವನಮೌಲ್ಯಗಳ ಅರಿವಾಗಬೇಕು. ಅದೂ ಕೇವಲ ಒಣ ಉಪದೇಶಗಳಿಂದಲ್ಲ. ಒಳ್ಳೆಯ ಕೆಲಸವನ್ನು ಈರೀತಿ ಮಾಡಿ ತೋರಿಸುವುದರಿಂದ ಒಳ್ಳೆಯ ಪರಿಣಾಮವಾಗಬೇಕು. ಅದಕ್ಕೆ ಅತ್ಯಂತ ಸೂಕ್ತ ನಿದರ್ಶನವನ್ನು ಅವರು ಸವಿತಾ ಕುಟುಂಬದ ದೃಶ್ಯದಿಂದ ಹೇಗೆ ಸೆರೆಹಿಡಿದಿದ್ದರು ಎನ್ನುವುದನ್ನು ನಾವು ಗಮನಿಸಬೇಕು. ‘ಪರಗುಣ ಪರಮಾಣೂನ್ ಪರ್ವತೀಕೃತ್ಯನಿತ್ಯ ನಿಜಹೃದಿ ವಿಕಸಂತಃ ಸಂತಿ ಸಂತಃ ಕಿಯಂತಃ’ (ಇನ್ನೊಬ್ಬರ ಒಳ್ಳೆಯ ಗುಣವನ್ನೇ ದೊಡ್ಡದು ಮಾಡಿ ಸಂತೋಷಪಟ್ಟುಕೊಳ್ಳುವ ಸಂತರು ನಿಜಕ್ಕೂ ಎಷ್ಟು ಜನರಿದ್ದಾರೆ?) ಎಂಬ ಸಂಸ್ಕೃತ ಸುಭಾಷಿತ ಬಹುಶಃ ಮತ್ತೂರರಂಥ ಮಹಾತ್ಮರನ್ನೇ ಉದ್ದೇಶಿಸಿದ್ದಿರಬೇಕು. ಶಿಕಾಗೋ ಸಮ್ಮೇಳನದಲ್ಲಿ ಮತ್ತೂರರನ್ನು ನಾನೂ ಭೇಟಿಯಾಗಿದ್ದೆ. ‘ಶ್ರೀವತ್ಸ ಜೋಶಿ ಅಂದ್ರೆ ನೀವೇ ಅಲ್ವಾ? ಪತ್ರಿಕೆಯಲ್ಲಿ ನಿಮ್ಮ ಬರಹಗಳನ್ನು ಓದ್ತಿರ್ತೇನೆ’ ಎಂದು ಅವರೇ ಹೇಳಿದಾಗಂತೂ ಮೂಕವಿಸ್ಮಿತನಾಗಿದ್ದೆ. ಆಮೇಲೆ ನನ್ನ ಪುಸ್ತಕಗಳ ಗೌರವಪ್ರತಿ ಕೊಟ್ಟು ಅವರಿಗೆ ನಮಸ್ಕರಿಸಿದ್ದೆ. ಉದಯ ಟಿವಿಯಲ್ಲಿ ಅವರ ಪ್ರವಚನವನ್ನು ನಮ್ಮನೆಯಲ್ಲೂ ನಾವು ತಪ್ಪದೇ ನೋಡುತ್ತೇವೆ. ಸುಶ್ರಾವ್ಯವಾಗಿ ಗಮಕ ವಾಚಿಸುವ ಕೇಶವಮೂರ್ತಿಯವರು; ಆಗಾಗ ಅವರ ಬೆನ್ನುತಟ್ಟಿ ಪ್ರಶಂಸಿಸುವ, ಉತ್ತೇಜಿಸುವ ಕೃಷ್ಣಮೂರ್ತಿಯವರು. ಇಬ್ಬರ ಮುಖದಲ್ಲೂ ಅದೆಂಥ ಬ್ರಹ್ಮತೇಜಸ್ಸು! ತುಂಬಿದ ಕೊಡ ತುಳುಕುವುದಿಲ್ಲ ಎನ್ನುವಂತೆ ಅದೆಂಥ ವಿನೀತಭಾವ! ಈ ಜೋಡಿಯ ವಿದ್ವತ್ ವಿಶೇಷವನ್ನೇ ವಿಷಯವಾಗಿಸಿ ಒಂದು ಅಂಕಣ ಬರೆಯಬೇಕೆಂದು ನಾನು ಎಷ್ಟೋಸರ್ತಿ ಅಂದುಕೊಂಡದ್ದಿದೆ. ಕೆಲ ದಿನಗಳ ಹಿಂದಿನ ಒಂದು ಪ್ರವಚನದಲ್ಲಿ ಒಂದು ಸುಂದರವಾದ ಸಂಸ್ಕೃತ ಶ್ಲೋಕದ ವ್ಯಾಖ್ಯಾನ ನಡೆದಿತ್ತು. ಅದು, ಅಪ್ಪಯ್ಯ ದೀಕ್ಷಿತರ್ ಎಂಬ ಪುರಾತನ ಕವಿ ಶಿವವನ್ನು ಕುರಿತು ಬರೆದ ಶ್ಲೋಕ. ಅದನ್ನು ಅವತ್ತೇ ಗುರುತು ಹಾಕಿಟ್ಟುಕೊಂಡು ಅದರ ಅರ್ಥವನ್ನೂ ಸಂಗ್ರಹಿಸಿ ಶಿವರಾತ್ರಿಯ ಆಸುಪಾಸಿನಲ್ಲಿ ಅಂಕಣಕ್ಕೆ ಆಯ್ದುಕೊಂಡರೆ ಚೆನ್ನಾಗಿರುತ್ತೆ ಎಂದುಕೊಂಡಿದ್ದೆ. ಮೌಳೌ ಗಂಗಾ ಶಶಾಂಕೌ ಕರಚರಣತಲೇ ಶೀತಲಾಂಗಾ ಭುಜಂಗಾಃ ವಾಮೇ ಭಾಗೇ ದಯಾರ್ದ್ರಾ ಹಿಮಗಿರಿತನಯಾ ಚಂದನಂ ಸರ್ವಗಾತ್ರೇ ಇತ್ಥಂ ಶೀತಂ ಪ್ರಭೂತಂ ತವ ಕನಕಸಭಾನಾಥ ಸೋಢುಂ ಕ್ವಶಕ್ತಿಃ ಚಿತ್ತೇ ನಿರ್ವೇದ ತಪ್ತೇ ಯದಿ ಭವತಿ ನ ತೇ ನಿತ್ಯವಾಸೋ ಮದೀಯೇ ಇದೇ ಆ ಶ್ಲೋಕ. ಕೇಶವಮೂರ್ತಿಯವರಿಂದ ಸೊಗಸಾಗಿ ರಾಗಬದ್ಧವಾಗಿ ಅದರ ವಾಚನ. ಕೃಷ್ಣಮೂರ್ತಿಯವರಿಂದ ಎಂದಿನಂತೆಯೇ ಅನನ್ಯ ಅಸದೃಶ ಶೈಲಿಯಲ್ಲಿ ವ್ಯಾಖ್ಯಾನ. ಶಿವಭಕ್ತನೊಬ್ಬ ಶಿವನಿಗೆ ಹೇಳುತ್ತಿದ್ದಾನೆ- “ನಿನ್ನ ಜಟೆಯಲ್ಲಿ ಜುಳುಜುಳು ಹರಿಯುವ ಗಂಗೆ ಮತ್ತು ತಣ್ಣಗಿನ ಚಂದಿರ; ನಿನ್ನ ಮೈಕೈ ಮೇಲೆ ತಣ್ಣಗಿನ ದೇಹವುಳ್ಳ ಸರ್ಪಗಳು; ಎಡಗಡೆಯಲ್ಲಿ ಹಿಮವಂತನ ಮಗಳು. ನಿನ್ನ ಸರ್ವಾಂಗಗಳಿಗೂ ತಣ್ಣನೆಯ ಚಂದನ ಲೇಪನ. ಅಲ್ಲಯ್ಯಾ, ಇಷ್ಟೆಲ್ಲ ತಣ್ಣನೆಯ ವಸ್ತುಗಳೊಡನೆ ಇರುವಾಗ ನಿನಗೆ ಚಳಿಯಾಗುವುದಿಲ್ಲವೇ? ಅದಕ್ಕಿಂತ ನನ್ನ ಎದೆಯೊಳಗೆ ಬಂದು ನೆಲೆಸು. ಇಲ್ಲಿರುವುದು ಚಳಿಯಲ್ಲ. ನಾ ಮಾಡಿದ ಪಾಪಫಲದ ಸುಡುಬಿಸಿ!” ಎಷ್ಟು ಮಾರ್ಮಿಕ ಅರ್ಥವುಳ್ಳ ಶ್ಲೋಕ! ಅಷ್ಟೇ ಸುಂದರವಾದ ವ್ಯಾಖ್ಯಾನ! ಭಕ್ತನಿಗೆ ಶಿವನಲ್ಲಿ ಭಕ್ತಿ-ಪ್ರೀತಿಗಳು ಬೆಳೆದೂ ಬೆಳೆದೂ ಒಂಥರದಲ್ಲಿ ಸಲುಗೆ ಬಂದುಬಿಟ್ಟಿದೆ. ಬೇರೆಡೆಯ ಕಷ್ಟಗಳಿಗಿಂತ ತನ್ನ ಮನಮಂದಿರದಲ್ಲೇ ಸದಾ ನೆಲೆಸುವಂತೆ ಶಿವನಿಗೆ ಆಹ್ವಾನ ಕೊಡುವಷ್ಟೂ ಸಲುಗೆ ಅದು. ಶಿವಭಕ್ತ ಶಿವನನ್ನು ಕೇಳಿಕೊಂಡಂತೆ ಬಹುಶಃ ನಾವೂ ಈಗ ಮತ್ತೂರರ ಆತ್ಮವನ್ನು ಕೇಳಿಕೊಳ್ಳುವುದರಲ್ಲಿ ಅರ್ಥವಿದೆ. ನಮ್ಮೆಲ್ಲರ ಮನಸ್ಸು ಹೃದಯಗಳಲ್ಲೇ ಅವರ ನೆನಪು ಚಿರಕಾಲ ನೆಲೆಸಬೇಕು; ನೆಲೆಸುತ್ತದೆ. ಮೊನ್ನೆ ಫೇಸ್ಬುಕ್ನಲ್ಲ್ ಒಬ್ಬರು ಬರೆದಿದ್ರು- “ಸಾವು ಎಂಥ ಮಾಂತ್ರಿಕ ಅಲ್ವೇನ್ರಿ? ಮುಂದಿನ ನೂರು ವರ್ಷಗಳಿಗೆ ಬೇಕಾದ್ದನ್ನ ಕೊಟ್ಟ ಸ್ಟೀವ್ ಜಾಬ್ಸ್, ಹಿಂದಿನ ಸಾವಿರ ವರ್ಷಗಳ ಸಂಸ್ಕೃತಿ ಸಂಸ್ಕಾರ ಇವತ್ತಿಗೂ ಉಳಿಸಿ ಬೆಳೆಸುವುದಕ್ಕೆ ದುಡಿದ ಮತ್ತೂರು ಕೃಷ್ಣಮೂರ್ತಿ- ಇಬ್ಬರನ್ನೂ ಒಂದೇದಿನ ಮಾಯ ಮಾಡ್ಬಿಡ್ತು!” ಅದಕ್ಕಿಂತಲೂ ನನಗೆ ಅನಿಸುವುದೇನೆಂದರೆ ಮಹಾನ್ (ಸ್ವಾರ್ಥ) ಸಾಧನೆ ಮಾಡಿದ ರಾಜಕಾರಣಿಗಳು ಸತ್ತಾಗ ‘ತುಂಬಲಾರದ ನಷ್ಟ’ ಅಂತೇವಲ್ಲ ಅದು ಆ ಪದಪುಂಜಕ್ಕೆ ನಾವು ಮಾಡುವ ಅವಮಾನ. ನಿಜವಾದ ಅರ್ಥದಲ್ಲಿ ‘ತುಂಬಲಾರದ ನಷ್ಟ’ ಅನಿಸೋದು ಸ್ಟೀವ್ ಜಾಬ್ಸ್, ಮತ್ತೂರು ಕೃಷ್ಣಮೂರ್ತಿಯವರಂಥ ಸಂತರ ನಿಧನದಲ್ಲಿ. ಆದರೂ ಒಂದು ಮಾತು- ‘ತುಂಬಲಾರದ’ ಎಂದೇಕೆ ಅಂದುಕೊಳ್ಳಬೇಕು? ಅಂಥ ಮಹಾತ್ಮರ ಜೀವನವನ್ನೇ ಆದರ್ಶವಾಗಿಟ್ಟುಕೊಂಡು, ಮನಸ್ಸು-ಹೃದಯಗಳಲ್ಲಿ ಅವರ ಚಿಂತನೆಗಳನ್ನೇ ತುಂಬಿಸಿಕೊಂಡು ನಾವೆಲ್ಲರೂ ಮುನ್ನಡೆದರೆ ‘ತುಂಬಲಾರದ್ದು’ ತುಂಬಿಯೇ ತುಂಬುತ್ತದಲ್ಲ!? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Oct 01, 2011
Honesty under watchful eyes
Saturday Oct 01, 2011
Saturday Oct 01, 2011
ದಿನಾಂಕ 2 ಅಕ್ಟೋಬರ್ 2011ರ ಸಂಚಿಕೆ...
ಕನಕದಾಸರೇಕೆ ಬಾಳೆಹಣ್ಣು ತಿನ್ನಲಿಲ್ಲ?
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ. ತುಂಡು ಬಟ್ಟೆ ಮಾನ ಮುಚ್ಚೋಕೆ. ಅಂಗೈಯಗಲದಷ್ಟು ಜಾಗ ಹಾಯಾಗಿ ಇರೋದಕ್ಕೆ. ಇವು ‘ಜಿಮ್ಮಿಗಲ್ಲು’ ವಿಷ್ಣುವರ್ಧನ್ಗಷ್ಟೇ ಅಲ್ಲ, ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಮೂಲಭೂತ ಅಗತ್ಯಗಳು. ಇದೇನೂ ನಿನ್ನೆಮೊನ್ನೆ ಕಂಡುಕೊಂಡ ಹೊಸ ಸಂಶೋಧನೆಯಲ್ಲ. ಆದರೆ, ಒಂದುವೇಳೆ ಪ್ರತಿಯೊಬ್ಬ ಮನುಷ್ಯನೂ ಕೇವಲ ಸ್ವಾರ್ಥಿಯಾಗಿ, ತನ್ನೊಬ್ಬನ ಉಳಿವು-ಅಳಿವಿನ ಬಗ್ಗೆಯಷ್ಟೇ ಚಿಂತಿಸುವವನಾಗಿದ್ದರೆ ಹೇಗಿರುತ್ತಿತ್ತು? ಪರಸ್ಪರ ವಿಶ್ವಾಸ, ಸಹಾಯ, ಸಹಕಾರ ಅಂತೆಲ್ಲ ಏನೂ ಇಲ್ಲ. ಕುಟುಂಬ, ಸಮಾಜ ಅನ್ನೋದಕ್ಕೆಲ್ಲ ಅರ್ಥವೇ ಇಲ್ಲ. ಮಾನವೀಯ ಸಂಬಂಧಗಳ ಒಂದೊಂದು ಎಳೆಯೂ ಛಿದ್ರಛಿದ್ರ. ಕಾಡಿನಲ್ಲಾದರೂ ಪ್ರಾಣಿಗಳೆಲ್ಲ ಒಂದು ಅಲಿಖಿತ ನೀತಿನಿಯಮ ಪಾಲಿಸಿ ಸಹಬಾಳ್ವೆ ನಡೆಸುತ್ತಿರುವಾಗ ನಾಡಿನ ಮನುಷ್ಯಪ್ರಾಣಿ ಅವುಗಳಿಗಿಂತಲೂ ಕಡೆ ಎನ್ನಿಸಿಕೊಳ್ಳುವಂಥ ಸನ್ನಿವೇಶ. ಪುಣ್ಯಕ್ಕೆ ಹಾಗೆ ಇಲ್ಲ ಪರಿಸ್ಥಿತಿ. ಎಷ್ಟೋ ಸಂದರ್ಭಗಳಲ್ಲಿ ನಮಗೆ ಗುರುತು-ಪರಿಚಯ ಇಲ್ಲದವರ ಬಗ್ಗೆ ಸಮೇತ ನಾವು ಉದಾರಿಗಳಾಗುತ್ತೇವೆ. ಮುಂದೆ ಅವರು ಭೇಟಿಯಾಗುತ್ತಾರೋ ಇಲ್ಲವೋ, ಮಾಡಿದ ಉಪಕಾರಕ್ಕೆ ಪ್ರತಿಫಲ ದೊರಕುತ್ತದೋ ಇಲ್ಲವೋ ಮುಂತಾಗಿ ಯಾವೊಂದು ಆಲೋಚನೆಯೂ ಇಲ್ಲದೆ ಆಕ್ಷಣಕ್ಕೆ ಏನು ಸಾಧ್ಯವಾಯ್ತೋ ಅಷ್ಟನ್ನು ಮಾಡುತ್ತೇವೆ. ಕಣ್ಣು ಕಾಣದ ಮುದುಕನನ್ನು ಕೈಹಿಡಿದು ರಸ್ತೆ ದಾಟಿಸುತ್ತೇವೆ. ಕಂಕುಳಲ್ಲಿ ಮಗು, ಕೈಯಲ್ಲೊಂದು ಭಾರದ ಚೀಲ ಹಿಡಿದುಕೊಂಡು ಬಸ್ ಹತ್ತುವ ಹೆಂಗಸಿಗೆ ಸೀಟ್ ಬಿಟ್ಟುಕೊಡುತ್ತೇವೆ. ನೆರೆ-ಬರ-ಭೂಕಂಪಗಳಿಂದ ತತ್ತರಿಸಿದವರ ಜಾತಿಮತ ಲೆಕ್ಕಿಸದೆ ಮನಮಿಡಿಯುತ್ತೇವೆ, ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬಂಥ ಸರಳ ಸಂದೇಶಗಳಿಂದಿರಬಹುದು, ಪರೋಪಕಾರಾರ್ಥಮಿದಂ ಶರೀರಂ ಎಂದುಕೊಂಡೇ ಗಂಧದ ಕೊರಡಿನಂತೆ ಬಾಳು ಸವೆಸುವವರನ್ನು ಆದರ್ಶವಾಗಿಟ್ಟುಕೊಂಡು ಇರಬಹುದು, ಸಂತರ ಸದ್ಬೋಧೆಯಿಂದಿರಬಹುದು ಅಂತೂ ಅನಾಮಧೇಯ ಒಳ್ಳೆತನ ಮತ್ತು ಔದಾರ್ಯಗಳು ಈ ಪ್ರಪಂಚದಲ್ಲಿ ಇನ್ನೂ ಜೀವಂತವಾಗಿಯೇ ಇವೆ ಎನ್ನುವುದು ಹದಿನಾರಾಣೆ ಸತ್ಯ. ಈಬಗ್ಗೆ ಮನಃಶಾಸ್ತ್ರಜ್ಞರು ಇನ್ನಷ್ಟು ಬೆಳಕು ಚೆಲ್ಲುತ್ತಾರೆ. ಮನುಷ್ಯನಲ್ಲಿ ಒಳ್ಳೆತನವೂ ಸುಖಾಸುಮ್ಮನೆ ಇರುವುದಿಲ್ಲ. ತನ್ನ ವಾಂಛೆಗಳಿಗಾಗಿ ಏನನ್ನೂ ಮಾಡಬಲ್ಲನಾದರೂ ‘ಸಮಾಜದ ದೃಷ್ಟಿ’ಯಲ್ಲಿ ತನ್ನ ಗೌರವಕ್ಕೆ ಚ್ಯುತಿ ಬರಬಾರದೆಂದು ಸಾಮಾನ್ಯವಾಗಿ ಪ್ರತಿಯೊಬ್ಬನಿಗೂ ಕಾಳಜಿ ಇರುತ್ತದೆ. ಸ್ವಾರ್ಥ, ಮೋಸ, ವಂಚನೆಗಳಲ್ಲಿ ತೊಡಗಿರುವವರು ಒಂದೊಮ್ಮೆ ಸಿರಿವಂತರಾದರೂ ಅದು ಶಾಶ್ವತವಲ್ಲ ಎಂದು ಇತಿಹಾಸದುದ್ದಕ್ಕೂ (ಇದೀಗ ತಿಹಾರ, ಪರಪ್ಪನ ಅಗ್ರಹಾರ, ಚಂಚಲಗೂಡ ಜೈಲುಗಳಲ್ಲೂ) ಸಾಕ್ಷಿಗಳೇ ಇವೆಯಲ್ಲ? ಹಾಗಾಗಿ ‘ಸಮಾಜದ ದೃಷ್ಟಿ’ ತನ್ನ ಮೇಲಿರುತ್ತದೆ ಎಂಬ ಹೆದರಿಕೆ, ಲಜ್ಜೆಗೆಟ್ಟ ದಗಾಕೋರರಿಗೆ ಇಲ್ಲದಿದ್ದರೂ ಸರಳ ಮನಸ್ಸಿನ ಶ್ರೀಸಾಮಾನ್ಯನಿಗೆ ಇದ್ದೇ ಇರುತ್ತದೆ. ಆ ಹೆದರಿಕೆಯೇ ಒಳ್ಳೆತನಕ್ಕೆ, ಸಹಕಾರಯುತ ಸಹಬಾಳ್ವೆಗೆ ಸಹಾಯಕವಾಗುತ್ತದೆ. ಯಾರಾದರೂ ತನ್ನನ್ನು ನೋಡುತ್ತಿದ್ದಾರೆ/ಗಮನಿಸುತ್ತಿದ್ದಾರೆ ಎಂಬ ಅರಿವು ಇದ್ದಾಗ ಮನುಷ್ಯನ ವರ್ತನೆಯ ಖದರೇ ಬೇರೆ. ಅದು ಎಲ್ಲಿಯವರೆಗೆಂದರೆ ಆ ‘ನೋಡುವ ಕಣ್ಣು’ಗಳು ನಿಜವೇ ಆಗಿರಬೇಕಾದ್ದಿಲ್ಲ. ಸರ್ವೈಲೆನ್ಸ್ ಕ್ಯಾಮರಾ/ ಕ್ಲೋಸ್ಸರ್ಕ್ಯೂಟ್ ಟಿವಿ ಕಣ್ಣುಗಳಾಗಿರಬೇಕಂತನೂ ಇಲ್ಲ. ಕಣ್ಣುಗಳನ್ನು ಹೋಲುವ ಚಿತ್ರವಿದ್ದರೂ ಸಾಕು, ಅದನ್ನು ನೋಡಿ ಮೆದುಳು ಜಾಗ್ರತವಾಗುತ್ತದಂತೆ. ಒಂದು ಪ್ರಯೋಗದಲ್ಲಿ, ಹಾಳೆ-ಪೆನ್ನಿನ ಬದಲು ಕಂಪ್ಯೂಟರ್ನಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ವಿದ್ಯಾರ್ಥಿಗಳು ಪರದೆಯ ಮೇಲೆ ಪುಟ್ಟದಾದ ಜೋಡಿಕಣ್ಣುಗಳ ಚಿತ್ರವಿದ್ದುದರಿಂದ ಹೆಚ್ಚಿನ ಪ್ರಾಮಾಣಿಕತೆ ತೋರಿದ್ದನ್ನು ಪರೀಕ್ಷಕರು ಗಮನಿಸಿದ್ದಾರಂತೆ. ಇಂಗ್ಲೇಂಡ್ನ ವಿಶ್ವವಿದ್ಯಾಲಯವೊಂದರ ಸೈಕಾಲಜಿ ವಿಭಾಗದವರು ನಡೆಸಿದ ಒಂದು ವಿಶಿಷ್ಟ ಸಮೀಕ್ಷೆಯ ಫಲಿತಾಂಶ ಕೂಡ ಕಣ್ಗಾವಲಿನ ಹಿರಿಮೆಯನ್ನು ಪುಷ್ಟೀಕರಿಸಿದೆ. ಅಲ್ಲಿ ಸೈಕಾಲಜಿ ವಿಭಾಗದ ‘ಟೀ ರೂಮ್’ನಲ್ಲಿ ಕಾಲೇಜಿನ ಸಿಬ್ಬಂದಿಗೆ, ವಿದ್ಯಾರ್ಥಿಗಳಿಗೆ, ಅಧ್ಯಯನವಸ್ತುವಾಗಿ ಸ್ವಯಂಸ್ಫೂರ್ತಿಯಿಂದ ಬರುವ ಸಾರ್ವಜನಿಕರಿಗೆಂದು ಟೀ/ಕಾಫಿ ಒದಗಿಸುವ ವ್ಯವಸ್ಥೆಯಿತ್ತು. ದುಡ್ಡು ವಸೂಲಿಗೆ ಅಲ್ಲಿ ಯಾರೂ ಇರುತ್ತಿರಲಿಲ್ಲ. ನಾಣ್ಯ ಹಾಕಿದರೆ ಮಾತ್ರ ಕಾಫಿ ಸುರಿಸುವ ಯಂತ್ರ ಇದ್ದದ್ದೂ ಅಲ್ಲ. ಬಿಸಿನೀರು, ಹಾಲು, ಸಕ್ಕರೆ, ಟೀ-ಬ್ಯಾಗ್/ ಕಾಫಿಪುಡಿ ಇಟ್ಟಿದ್ದನ್ನು ಬಳಸಿ ಸ್ವಂತ ಟೀ/ಕಾಫಿ ಮಾಡಿಕೊಳ್ಳಬೇಕು. ಅಲ್ಲೇ ಪಕ್ಕದಲ್ಲಿಟ್ಟಿದ್ದ ‘ಪ್ರಾಮಾಣಿಕತೆ ಪೆಟ್ಟಿಗೆ’ಯಲ್ಲಿ ದುಡ್ಡು ಹಾಕಬೇಕು. ಒಂದು ಕಪ್ ಕಾಫಿಗಾದರೆ ಇಂತಿಷ್ಟು, ಟೀಗಾದರೆ ಇಂತಿಷ್ಟು, ಚಾಕೊಲೇಟ್ ಮಿಲ್ಕ್ಗೆ ಇಂತಿಷ್ಟು ಅಂತೆಲ್ಲ ಬರೆದ ಬೋರ್ಡ್ಅನ್ನು ಕಣ್ಣಿಗೆ ಕಾಣುವಂತೆ, ಕಣ್ಣಿನ ಎತ್ತರಕ್ಕೆ ಬರುವಂತೆ ಇಡಲಾಗಿತ್ತು. ಗುಪ್ತವಾಗಿ ಸಮೀಕ್ಷಾರ್ಥಿಗಳಿಗೆ ತಿಳಿಯದಂತೆ ಸಮೀಕ್ಷೆ ನಡೆಸಿದ್ದ ಸೈಕಾಲಜಿ ವಿಭಾಗದ ಮುಖ್ಯಸ್ಥೆ ಏನು ಮಾಡುತ್ತಿದ್ದರೆಂದರೆ ಪ್ರತಿವಾರವೂ ದರ ಪಟ್ಟಿಯ ಬೋರ್ಡ್ಅನ್ನು ಬದಲಾಯಿಸುತ್ತಿದ್ದರು. ದರಗಳು ಅವೇ ಆದರೂ ಅದನ್ನು ಬರೆದ ಕಾಗದದ ಹಾಳೆ ಪ್ರತಿವಾರ ಹೊಸತು. ದರ ಪಟ್ಟಿಯ ಮೇಲ್ಗಡೆ ಪುಟ್ಟದಾದ ಚಿತ್ರ. ಒಂದು ವಾರ ಜೋಡಿ ಕಣ್ಣುಗಳ ಚಿತ್ರ; ಮುಂದಿನವಾರ ಹೂವಿನ ಚಿತ್ರ; ಅದರ ನಂತರದ ವಾರ ಮತ್ತೆ ಜೋಡಿ ಕಣ್ಣುಗಳ ಚಿತ್ರ. ಮತ್ತೊಮ್ಮೆ ಹೂವಿನ ಚಿತ್ರ... ಹೀಗೆ ಆವರ್ತನ. ಜೋಡಿ ಕಣ್ಣುಗಳ ಚಿತ್ರವನ್ನು ದೃಷ್ಟಿಸಿದರೆ ನಿಜವಾಗಿಯೂ ಆ ಕಣ್ಣುಗಳು ನಮ್ಮನ್ನೇ ನೋಡುತ್ತಿವೆಯೇನೋ ಎಂಬಂತಿರುತ್ತಿತ್ತು, ಅಷ್ಟು ಚಾಕಚಕ್ಯತೆಯಿಂದ ಚಿತ್ರಗಳನ್ನು ಆಯ್ದುಕೊಳ್ಳುತ್ತಿದ್ದರು ಆ ಸಮೀಕ್ಷಕಿ. ಹತ್ತು ವಾರಗಳ ಕಾಲ ಸಮೀಕ್ಷೆ ನಡೆಯಿತು. ಒಂದು ಆಶ್ಚರ್ಯಕರ ಸತ್ಯಾಂಶ ಅದರಿಂದ ಹೊರಬಂತು. ದರ ಪಟ್ಟಿಯ ಮೇಲೆ ಕಣ್ಣುಗಳ ಚಿತ್ರವಿದ್ದ ವಾರಗಳಲ್ಲಿ ಮೂರುಪಟ್ಟು ಹಣ ಜಮೆಯಾಗುತ್ತಿತ್ತು! ನೈಜವಾದರೂ ಅಷ್ಟೇ ಚಿತ್ರದಲ್ಲಾದರೂ ಅಷ್ಟೇ, ಕಣ್ಣು ಮುಖ ಇತ್ಯಾದಿಗಳನ್ನು ಕಂಡಾಗ ನಮ್ಮ ಮೆದುಳಿನ ನರಗಳು ತೀವ್ರವಾಗಿ ಸಂವೇದಿಸುವುದನ್ನು ಮನಃಶಾಸ್ತ್ರಜ್ಞರು ತುಂಬಾ ಹಿಂದೆಯೇ ಕಂಡುಕೊಂಡಿದ್ದಾರೆ. ಹಾಗಾಗಿ ಟೀ-ರೂಮ್ನಲ್ಲಿ ದರ ಪಟ್ಟಿಯ ಮೇಲೆ ಕಣ್ಣುಗಳ ಚಿತ್ರವನ್ನು ನೋಡಿ ಗಿರಾಕಿಗಳ ಮೆದುಳಿನಲ್ಲಿ ವಿಶೇಷ ಸಂವೇದನೆ ಆಗಿರುವುದು ಹೌದು. ಪ್ರಾಮಾಣಿಕ ಪೆಟ್ಟಿಗೆಯೊಳಗೆ ತಾನು ಕರಾರುವಾಕ್ಕಾಗಿ ದುಡ್ಡು ಹಾಕಬೇಕು ಎಂಬ ಜಾಗೃತಿ ಉಂಟಾಗಿರುವುದೂ ಹೌದು. ಆ ಪ್ರಕಾರ ದುಡ್ಡು ಜಮೆಯಾಗಿರುವುದೂ ಹೌದು. ಕನಕದಾಸರ ಕಥೆಯಲ್ಲಿಯೂ ಹಾಗೆಯೇ ಅಲ್ಲವೇ ಆದದ್ದು? ಕನಕನ ಗುರುಗಳು ತಮ್ಮ ಶಿಷ್ಯವೃಂದಕ್ಕೆ ಬಾಳೆಹಣ್ಣುಗಳನ್ನು ಹಂಚಿ ಯಾರೂ ನೋಡದೇ ಇರುವಲ್ಲಿ ಹೋಗಿ ತಿಂದುಕೊಂಡು ಬನ್ನಿ ಎಂದರು. ಒಬ್ಬೊಬ್ಬರು ಒಂದೊಂದು ಜಾಗವನ್ನು, ಯಾರೂ ನೋಡುತ್ತಿಲ್ಲ ಎಂದು ತಮಗೆ ಸಮಾಧಾನವೆನಿಸಿದ ಆಯಕಟ್ಟಿನ ಸ್ಥಳವನ್ನು ಆಯ್ದುಕೊಂಡು ಅಲ್ಲಿ ಬಾಳೆಹಣ್ಣು ಭಕ್ಷ್ಯಣ ಮಾಡಿ ಬಂದರು. ಕನಕನಿಗಾದರೋ ಎಲ್ಲಿ ಹೋದರೂ ‘ದೇವರ ಕಣ್ಣು’ ಕಾಣಿಸುತ್ತಿದೆ. ಅಪ್ಪಟ ಪ್ರಾಮಾಣಿಕತೆ ಹೆಡೆಯೆತ್ತಿ ನಿಂತಿದೆ. ನೋಡುವ/ಗಮನಿಸುವ ಮನುಷ್ಯರು ಇಲ್ಲದೇ ಇರಬಹುದು, ಆದರೆ ದೇವರು ಇಲ್ಲದ ಸ್ಥಳವೇ ಸಿಗುತ್ತಿಲ್ಲವಲ್ಲ ಎಂಬ ದಿವ್ಯ ಸತ್ಯದ ಮನವರಿಕೆಯಾಗಿದೆ. ಬಾಳೆಹಣ್ಣನ್ನು ಹಾಗೇ ಕೈಯಲ್ಲಿ ಹಿಡಿದುಕೊಂಡು ಗುರುಗಳ ಬಳಿಗೆ ವಾಪಸಾಗಿದ್ದಾನೆ ಕನಕ. ಇಂಗ್ಲೇಂಡ್ನ ಸೈಕಾಲಜಿ ವಿಭಾಗದವರು ನಾಲ್ಕು ವರ್ಷಗಳ ಹಿಂದೆಯಷ್ಟೇ ಕಂಡುಕೊಂಡದ್ದನ್ನು ನಾಲ್ಕುನೂರು ವರ್ಷಗಳ ಹಿಂದೆ ಪ್ರತಿಪಾದಿಸಿದ್ದರು ಕನಕದಾಸರು. ಅಷ್ಟೆಅಲ್ಲ, ಅವರೇನೂ ಕಣ್ಣುಗಳ ಚಿತ್ರ ನೋಡಿ ಜಾಗ್ರತರಾದವರಲ್ಲ. ಸತ್ಯಸಂಧತೆ ಮತ್ತು ಪ್ರಾಮಾಣಿಕತೆಗಳೆಂಬ ತನ್ನ ಒಳಗಣ್ಣುಗಳಿಂದ ಭಗವಂತನನ್ನು ನೋಡಿ ಎಚ್ಚರಗೊಂಡವರು. ಭಗವಂತನಿಲ್ಲದ ಸ್ಥಳವೇ ಇಲ್ಲ ಎಂದು ಎಚ್ಚರಿಸಿದವರು. ಆ ಎಚ್ಚರದಿಂದಲೇ ಉಚ್ಚ ಮಟ್ಟಕ್ಕೇರಿದವರು. ಸತ್ಯಸಂಧತೆ, ಸರಳತೆ ಮತ್ತು ಪ್ರಾಮಾಣಿಕತೆಗಳು ಮೂರ್ತಿವೆತ್ತಂತಿದ್ದ ಮಹಾತ್ಮ ಗಾಂಧೀಜಿ ಮತ್ತು ಲಾಲ ಬಹಾದೂರ ಶಾಸ್ತ್ರೀಜಿ - ಇವರಿಬ್ಬರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಇವತ್ತಿನ ಅಂಕಣದಲ್ಲಿ ಎಂದಿಗಿಂತ ತುಸು ಭಿನ್ನವಾಗಿ ಹೀಗೊಂದು ವಿಚಾರ ಲಹರಿಯನ್ನು ಹರಿಸಿರುವುದು. ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ಆದರ್ಶಗಳನ್ನು ಪಾಲಿಸುವ ಸದ್ಬುದ್ಧಿ ನಮಗೆಲ್ಲರಿಗೂ ಕರುಣಿಸುವಂತೆ ಶಾರದಾಂಬೆಯನ್ನು ಬೇಡುತ್ತಿರುವುದು. ಪರಾಗಸ್ಪರ್ಶ ಓದುಗರೆಲ್ಲರಿಗೂ ನವರಾತ್ರಿ ಮತ್ತು ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Saturday Sep 17, 2011
Biggest Nitpicker Literally
Saturday Sep 17, 2011
Saturday Sep 17, 2011
ದಿನಾಂಕ 18 ಸೆಪ್ಟೆಂಬರ್ 2011ರ ಸಂಚಿಕೆ...
ಹೇನು ಹೆಕ್ಕೋ ಹೆಂಗಸಿಗೆ ಡಿಮಾಂಡಪ್ಪೊ ಡಿಮಾಂಡು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ಕನ್ನಡದ ಪತ್ರಿಕೆಗಳೇನಾದರೂ ಆಕೆಯ ಕುರಿತು ನುಡಿಚಿತ್ರ ಬರೆಯುತ್ತಿದ್ದರೆ ತಲೆಬರಹ ಹಾಗೆ ಇರುತ್ತಿತ್ತು. ಆದರೆ ಆ ನ್ಯೂಸ್ಸ್ಟೋರಿ ಪ್ರಕಟವಾದದ್ದು ಇಲ್ಲಿನ ‘ವಾಷಿಂಗ್ಟನ್ ಪೋಸ್ಟ್’ ಆಂಗ್ಲ ಪತ್ರಿಕೆಯಲ್ಲಿ. ಅದೇನು ಪದಚಮತ್ಕಾರದಲ್ಲಿ ಕಮ್ಮಿ ಅಂದುಕೊಂಡ್ರಾ? ಲೇಖನದ ಓಪನಿಂಗ್ ಪ್ಯಾರಗ್ರಾಫ್ ಹೇಗಿದೆ ನೋಡಿ- The world is full of lousy jobs, but Karen Franco just might have one of the lousiest. As a professional nitpicker, the 45-year-old Washington woman spends a good part of her week searching for live lice and their tiny eggs, called nits, in hair. Majority of her customers are school-going girls… ಇಂಗ್ಲಿಷ್ನಲ್ಲಿ lice ಎಂದರೆ ಹೇನು. ಅದು ಬಹುವಚನ ಅಥವಾ ಸಮೂಹವಾಚಕ ಪದ. ಒಂದೇ ಹೇನಾದರೆ louse ಎನ್ನಬೇಕು (mice ಮತ್ತು mouse ಇದ್ದಹಾಗೆ). ಅದನ್ನೇ ಶ್ಲೇಷೆಯಿಂದ ಬಳಸಿಕೊಂಡಿದೆ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ. ಇರಲಿ, ವಿಷಯ ಪದಚಮತ್ಕಾರದ್ದಲ್ಲ; ಕೆರೆನ್ ಫ್ರಾಂಕೊ ಎಂಬ ಹೆಸರಿನ ಒಬ್ಬ ಸ್ವಉದ್ಯೋಗಿ ಮಹಿಳೆಯದು. ವಾಷಿಂಗ್ಟನ್ ನಿವಾಸಿಯಾಗಿರುವ ಈಕೆಯ ಸ್ಪೆಷಾಲಿಟಿ ಏನೆಂದರೆ ಹೇನು ಹೆಕ್ಕುವುದು. ಅದು ಅವಳ ಫುಲ್ಟೈಮ್ ದಂಧೆ. ಅಷ್ಟೇಅಲ್ಲ, ಈಗ ಅವಳ ಗಂಡನೂ ಸೇರಿಕೊಂಡು lice and advice ಎಂಬ ಕನ್ಸಲ್ಟೆನ್ಸಿ ಕಂಪನಿ ಆರಂಭಿಸಿದ್ದಾರೆ. ಅಮೆರಿಕದ ಆರ್ಥಿಕತೆ ಅಲ್ಲೋಲಕಲ್ಲೋಲವಾಗಿ ಅದೆಷ್ಟೋ ಜನ ಉದ್ಯೋಗ ಕಳಕೊಂಡು ಒದ್ದಾಡುತ್ತಿದ್ದರೆ ಇವರಿಬ್ಬರ ‘ಹೇನುಗಾರಿಕೆ’ ಉದ್ಯಮ ಹುಲುಸಾಗಿ ಬೆಳೆದಿದೆ! ಪತ್ರಿಕೆಯ ಪಾತ್ರವೂ ಇದೆ ಈ ಸ್ವಾರಸ್ಯಕರ ಬೆಳವಣಿಗೆಯಲ್ಲಿ. ನಾಲ್ಕು ವರ್ಷಗಳ ಹಿಂದೆ 2007ರಲ್ಲಿ ಕೆರೆನ್ಳ ಬಗ್ಗೆ ನ್ಯೂಸ್ಐಟಮ್ ಪ್ರಕಟವಾದಾಗ ಆಕೆಯಿನ್ನೂ ಒಬ್ಬ ಆರ್ಟ್ ಟೀಚರ್ ಆಗಿದ್ದಳು. ಬಿಡುವಿನ ಅವಧಿಯಲ್ಲಿ ಪಾರ್ಟ್ಟೈಮ್ ಕೆಲಸ ಅಂತ ಅವರಿವರ ಮನೆಗಳಿಗೆ ಹೆಣ್ಮಕ್ಕಳ ತಲೆಯಲ್ಲಿನ ಹೇನು ಹೆಕ್ಕಲಿಕ್ಕೆ ಹೋಗುತ್ತಿದ್ದಳು. ಅದನ್ನೂ ಅವಳೇನು ದುಡ್ಡಿಗಾಗಿ ಶುರುಮಾಡಿದ್ದಲ್ಲವಂತೆ. ತನ್ನ ಮಗಳ ಶಾಲೆಯಲ್ಲಿ ಹುಡುಗಿಯರಿಗೆ ಹೇನಿನ ಕಾಟ ವಿಪರೀತವಾದಾಗ ಶಾಲೆಯಿಂದ ಅನುಮತಿ ಪಡೆದು ಅವರೆಲ್ಲರ ತಲೆಯ ಹೇನು ನಾಶದ ದೀಕ್ಷೆ ತೊಟ್ಟಳು. ಅದರಲ್ಲಿ ಯಶಸ್ವಿಯಾಗಿ ನೆರೆಕೆರೆಯಲ್ಲೆಲ್ಲ ಪ್ರಸಿದ್ಧಳಾದಳು. ಹೇನು ನಿವಾರಣೆಗೆಂದು ಕೆರೆನ್ಗೆ ತಲೆಯೊಪ್ಪಿಸುವವರ ಸಂಖ್ಯೆ ಹೆಚ್ಚಾದಾಗ ‘ತಲಾ’ 18 ಡಾಲರ್ (ಜುಯಿಶ್ ಸಂಪ್ರದಾಯದ ಕೆರೆನ್ಗೆ ಆ ಸಂಖ್ಯೆ ಪವಿತ್ರ) ಶುಲ್ಕ ವಸೂಲಿ ಮಾಡತೊಡಗಿದಳು. ಜಮೆಯಾದ ಹಣವನ್ನು ದತ್ತಿನಿಧಿಗೆ ದಾನಮಾಡಿದಳು. ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಒಂದು ಇಂಟರೆಸ್ಟಿಂಗ್ ಸ್ಥಿರಶೀರ್ಷಿಕೆ ಇರುತ್ತದೆ, Whatever Happened To... ಅಂತ ಅದರ ಹೆಸರು. ಪತ್ರಿಕೆಯಲ್ಲಿ ಈಹಿಂದೆ ಯಾವಾಗಲೋ ಪ್ರಕಟವಾಗಿದ್ದ, ತುಸು ವಿಲಕ್ಷಣ ರೀತಿಯಲ್ಲಿ ಸುದ್ದಿಯಾಗಿದ್ದ ವ್ಯಕ್ತಿ ಈಗೇನು ಮಾಡುತ್ತಿದ್ದಾರೆ ಎಂದು ಬೆಳಕು ಚೆಲ್ಲುವ ಪುಟ್ಟ ಅಪ್ಡೇಟ್ ಮಾದರಿಯ ಬರಹ. ವಾರಕ್ಕೊಬ್ಬ ವ್ಯಕ್ತಿಯ ಕುರಿತು ಬರುತ್ತದೆ, ತುಂಬಾ ಚೆನ್ನಾಗಿರುತ್ತದೆ. ಮೊನ್ನೆ ಕೆರೆನ್ಳ ಸಮಾಚಾರ ಪ್ರಕಟವಾಗಿತ್ತು. 2007ರಲ್ಲಿ ಪತ್ರಿಕೆಯಲ್ಲಿ ಕೆರೆನ್ ಹೇನುಗಾರಿಕೆಯ ಬಗ್ಗೆ ಲೇಖನ ಪ್ರಕಟವಾದದ್ದೇ ತಡ ಅವಳಿಗೆ ದೂರವಾಣಿ ಕರೆಗಳು ಮತ್ತು ಇಮೇಲ್ಗಳು ಪ್ರವಾಹದೋಪಾದಿ ಬರತೊಡಗಿದವಂತೆ. “ನಮ್ಮ ಮಗಳಿಗೆ ಸಿಕ್ಕಾಪಟ್ಟೆ ಹೇನಿದೆ, ನಿಮ್ಮತ್ರ ಕರ್ಕೊಂಡು ಬರಬಹುದೇ?”, “ನಮ್ಮ ಮಗಳ ತಲೆಯಲ್ಲಿ ಹೇನಿದೆಯಂತ ಸ್ಕೂಲಿಂದ ಮನೆಗೆ ಕಳಿಸ್ತಾರೆ. ಈ ಸಮಸ್ಯೆ ನಿವಾರಣೆಗೆ ದಯವಿಟ್ಟು ನೆರವಾಗ್ತೀರಾ?”... ಹೀಗೆ ಭರಪೂರ ಬೇಡಿಕೆಗಳು. ಲೇಖನ ಪ್ರಕಟವಾಗಿ ಒಂದೆರಡು ತಿಂಗಳಿಗೆಲ್ಲ ಕೆರೆನ್ ತನ್ನ ಆರ್ಟ್ ಟೀಚಿಂಗ್ ವೃತ್ತಿಯನ್ನು ಬಿಟ್ಟು ಪೂರ್ಣಾವಧಿ ಹೇನುಗಾರಿಕೆ ಆರಂಭಿಸಿದಳು. ಪುಟ್ಟದೊಂದು ಆಫೀಸ್-ಕಮ್-ಕ್ಲಿನಿಕ್ ತೆರೆದಳು. ಅಪಾಯಿಂಟ್ಮೆಂಟ್ಗಳನ್ನು ನಿರ್ವಹಿಸಲಿಕ್ಕೆ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಗಂಡ ಮುಂದಾದ. ಮೂವತ್ತು ವರ್ಷಗಳಿಂದ ಮಾಡಿಕೊಂಡು ಬಂದಿದ್ದ ಸೇಲ್ಸ್ಮನ್ ವೃತ್ತಿಗೆ ತಿಲಾಂಜಲಿಯಿತ್ತು ಕೆರೆನ್ಳ ವಹಿವಾಟಿನಲ್ಲಿ ಆತ ಪಾಲುದಾರನಾದ. ನಾಲ್ಕೈದು ನಮೂನೆಯ ಬಾಚಣಿಗೆಗಳು, ಒಂದು ಭೂತಗನ್ನಡಿ, ತಲೆಗೆ ಸಿಕ್ಕಿಸಿಕೊಳ್ಳಲು ಒಂದು ಟಾರ್ಚ್, ಗಿರಾಕಿಯ ಹೇನುಗಳು ತನ್ನ ತಲೆಯೊಳಗೆ ಸೇರಿಕೊಳ್ಳದಂತೆ ರಕ್ಷಣಾಕವಚ- ಇವಿಷ್ಟು ಪರಿಕರಗಳೊಂದಿಗೆ ಸನ್ನದ್ಧಳಾದರೆ ಕೆರೆನ್ಳ ‘ಆಪರೇಷನ್ ಹೇನುನಾಶ’ ಸಕ್ಸೆಸ್ಫುಲ್. ಮುಂದೆ ಹೇನುದಾಳಿ ನಡೆಯದಂತೆ ಗಿರಾಕಿಗೆ ಮುಂಜಾಗ್ರತಾ ಕ್ರಮಗಳ ಪಾಠ. ಅಷ್ಟಿಷ್ಟು ಔಷಧೋಪಚಾರಗಳು. ಗಂಟೆಗೆ 85 ಡಾಲರ್ (ಸುಮಾರು 4000 ರೂಪಾಯಿ) ಶುಲ್ಕ. ಮನೆಗೆ ಬಂದು ಸೇವೆ ಒದಗಿಸುವುದಾದರೆ ಗಂಟೆಗೆ 100 ಡಾಲರ್ ಮತ್ತು ಪ್ರಯಾಣವೆಚ್ಚ ಪ್ರತ್ಯೇಕ. ಪೀಕ್ ಸೀಸನ್ನಲ್ಲಿ ದಿನಕ್ಕೆ ಐದರಿಂದ ಆರು ಸೆಷನ್ಗಳು. ಸಪ್ಟೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ ತುಂಬಾ ಡಿಮಾಂಡು. ಆಗಷ್ಟೇ ಬೇಸಿಗೆರಜೆ ಮುಗಿದು ಹೊಸ ಶೈಕ್ಷಣಿಕ ವರ್ಷ ಆರಂಭವಾಗಿರುತ್ತದೆ. ರಜೆಯಲ್ಲಿ ಸಮ್ಮರ್ಕ್ಯಾಂಪ್, ನೆಂಟರಮನೆ ಅಲ್ಲಿಇಲ್ಲಿ ಅಂತ ಹೋಗಿರುವ ಮಕ್ಕಳ ತಲೆ ಹೇನುಗಳಿಗೆ ಅಭಯಾರಣ್ಯ ಆಗಿರುತ್ತದೆ; ಅದರಿಂದ ಮುಕ್ತಿಹೊಂದಲು ಹೆತ್ತವರು ಕೆರೆನ್ ಮೊರೆಹೋಗುತ್ತಾರೆ. ಕೆರೆನ್ಳ ಯಶಸ್ಸಿನಿಂದ ಪ್ರೇರಿತರಾಗಿ ಈಗ ಅಮೆರಿಕದ ಬೇರೆ ನಗರಗಳಲ್ಲೂ ಹೇನುಗಾರಿಕೆ ಆರಂಭಿಸಿದವರಿದ್ದಾರೆ. Hairy fairies ಎಂಬ ಕಂಪನಿಯಂತೂ ಲಾಸ್ಏಂಜಲೀಸ್, ಸ್ಯಾನ್ಫ್ರಾನ್ಸಿಸ್ಕೊ, ಶಿಕಾಗೊ, ನ್ಯೂಯಾರ್ಕ್ ನಗರಗಳಲ್ಲಿ ಶಾಖೆಗಳನ್ನೂ ಹೊಂದಿ ಸ್ಟೋರ್ಚೈನ್ನಂತೆ ಕಾರ್ಯವೆಸಗುತ್ತಿದೆ. ಅದಕ್ಕೇ ಹೇಳಿದ್ದು ಅಮೆರಿಕವನ್ನು ‘ಅವಕಾಶಗಳ ಅಮರಾವತಿ’ ಎಂದು ಬಣ್ಣಿಸುವುದು ಸುಮ್ಮನೆ ಅಲ್ಲ. ಇಲ್ಲಿ ಯಃಕಶ್ಚಿತ್ ಹೇನುಗಳಿಂದಲೂ- ಯಾವ ಕೀಳರಿಮೆ ಅಥವಾ ಹೇಸಿಗೆಯಿಲ್ಲದೆ- ಹಣ ಮಾಡಬಹುದೆಂದರೆ ಆಶ್ಚರ್ಯದಿಂದಲೇ ತಲೆಕೆರೆದುಕೊಳ್ಳಬೇಕು (ಹೇನಿಲ್ಲದೆಯೂ)! ನಾನಿದನ್ನು ಇವತ್ತಿನ ಅಂಕಣದಲ್ಲಿ ಬರೆದದ್ದು ಕೇವಲ ಸುದ್ದಿಸ್ವಾರಸ್ಯ ರೀತಿಯಲ್ಲಿ. ನನಗೆ ಚೆನ್ನಾಗಿ ಗೊತ್ತು, ಸುಮಾರಷ್ಟು ಓದುಗರಿಗೆ ಇದರಲ್ಲಿನ ಕೆರೆನ್ ಫ್ರಾಂಕೊ ಆಗಲೀ, ಅವಳ ಹೇನುದ್ಯಮ ಅಥವಾ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಲೇಖನ ಆಗಲೀ ಯಾವುದೂ ರೆಲವೆಂಟ್ ಆಗೋದಿಲ್ಲ, ರಿಲೇಟ್ ಆಗೋದಿಲ್ಲ. ಆದರೆ ‘ಹೇನು’ ಎಂಬ ಪದವಿದೆಯಲ್ಲ ಅದೊಂದೇ ಸಾಕು, ಎಷ್ಟೋ ಓದುಗರಿಗೆ ಕೈಜಗ್ಗಿ ಹಿಡಿದೆಳೆದು ನೆನಪಿನಂಗಳಕ್ಕೆ ಒಯ್ದ ಅನುಭವವಾಗುತ್ತದೆ. ಕ್ಯಾಲಿಫೋರ್ನಿಯಾದಲ್ಲಿರುವ ಸರಸ್ವತಿ ವಟ್ಟಮ್ ಅವರಿಂದ ಫರ್ಸ್ಟ್ ಇಮೇಲ್ ಬರುತ್ತದೆ- “ಜೋಶಿಯವರೇ, ಹೇನುಪುರಾಣವನ್ನು ಓದಿದ ಕೂಡಲೇ ಬಾಲ್ಯ ನೆನಪಾಗಿ ದಳದಳ ಕಣ್ಣೀರುಬಂತು. ಫ್ರಾಕ್ ತೊಡುತ್ತಿದ್ದ ವಯಸ್ಸಿನಲ್ಲಿ ನನ್ನೊಬ್ಬ ಗೆಳತಿ ಮಹಾನ್ ಹೇನುಬುರುಕಿ ಇದ್ದಳು. ಅವಳ ಮನೆಗೆ ಒಮ್ಮೆ ಸ್ಲೀಪ್ಓವರ್ಗೆ ಹೋಗಿ ನಾನೂ ಹೇನುಗಳನ್ನು ರಖಂ ಆಗಿ ಆಮದುಮಾಡಿಕೊಂಡಿದ್ದೆ...” ಅಂತೆಲ್ಲ ಬರೆಯುತ್ತಾರೆ. ಇನ್ನೊಬ್ಬರಿಗೆ ಅಮ್ಮನ ನೆನಪು ಒತ್ತರಿಸಿ ಬರುತ್ತದೆ. ಕೂದಲು ಬಾಚುವಾಗ ಸ್ಸ್... ಎಂದು ಬಾಯಿಂದ ಶಬ್ದಹೊರಡಿಸಿ ಹೇನುಗಳಿಗೆ ಪಂಥಾಹ್ವಾನ ನೀಡಿ ಅವುಗಳನ್ನು ಹೊರಬರುವಂತೆ ಮಾಡುತ್ತಿದ್ದ ಅಮ್ಮ, ಬಾಚಣಿಗೆಯನ್ನು ನೆಲಕ್ಕೆ ಕೊಡವಿ ಉದುರಿದ ಹೇನುಗಳನ್ನು ಉಗುರುಗಳಿಂದ ಚಟ್ ಚಟ್ ಎಂದು ಸಶಬ್ದವಾಗಿ ಸಂಹರಿಸುತ್ತಿದ್ದ ಅಕ್ಕ, ತುಳಸಿ ಎಲೆಯ ರಸವನ್ನು ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಿಕೊಳ್ಳುವುದೇ ಮೊದಲಾದ ಹೇನು ನಿವಾರಣೆಯ ಅಜ್ಜಿಮದ್ದುಗಳನ್ನು ಉಪದೇಶಿಸುತ್ತಿದ್ದ ಅಜ್ಜಿ ನೆನಪಾಗುತ್ತಾರೆ. ಹೇನು ತಲೆಯಿಂದ ತಲೆಗಷ್ಟೇ ಅಲ್ಲ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗಿದೆಯೇನೋ ಅಂತನಿಸುವಷ್ಟು ಕೌಟುಂಬಿಕ ಭಾವಬಂಧದಲ್ಲಿ ಪಾತ್ರವಹಿಸುತ್ತದೆ ಎಂದು ಅಚ್ಚರಿಯೂ ಆಗುತ್ತದೆ. ಇನ್ನು ಕೆಲವರಿಗೆ ಈ ಹೇನುಪುರಾಣವು ವಸುಧೇಂದ್ರ ಬರೆದ ಒಂದು ಚಂದದ ಕಥೆಯನ್ನು, ಅದರಲ್ಲಿ ಮಂಗನಿಂದ ಹೇನು ಹೆಕ್ಕಿಸಿಕೊಳ್ಳುವ ಬಳ್ಳಾರಿ ಹೆಂಗಸರ ಚಿತ್ರಣ, ಒಬ್ಬ ಹೆಂಗಸನ್ನು ಹೇನು ಹೆಕ್ಕುತ್ತಿರುವಾಗ ಸುಮ್ಮನೆ ಕೂಡಲಿಲ್ಲವೆಂದು ಮಂಗ ಹೊಡೆದದ್ದು, ಪ್ರತಿಯಾಗಿ ಅವಳೂ ಮಂಗನನ್ನು ಥಳಿಸಿದ್ದು... ಇವನ್ನೆಲ್ಲ ನೆನಪಿಸಬಹುದು. ಮಗದೊಬ್ಬರಿಗೆ ತಮ್ಮ ಪ್ರಾಥಮಿಕ ಶಾಲೆಯಲ್ಲಿ ಒಬ್ಬಿಬ್ಬರು ಹೇನುಬುರುಕಿ ಸಹಪಾಠಿಗಳಿದ್ದದ್ದು, ‘ಜೇನು ಬೇಕೇ ಜೇನು?’ ಕನ್ನಡ ಪಾಠದ ಶೀರ್ಷಿಕೆಯನ್ನು ಉಪಾಧ್ಯಾಯರು ಬೇಕಂತಲೇ ‘ಹೇನು ಬೇಕೇ ಹೇನು?’ ಎಂದು ಓದಿ ತಮಾಷೆಮಾಡಿದ್ದು ನೆನಪಾಗಬಹುದು. ಬಹುಶಃ ನೆನಪುಗಳದು ಅದೊಂದು ಅದ್ಭುತಶಕ್ತಿ. ಅವುಗಳ ನಾಗಾಲೋಟಕ್ಕೆ ಕುದುರೆಗಳೇ ಬೇಕಂತಿಲ್ಲ. ಹೇನುಗಳ ಸಾರೋಟಿನಲ್ಲೂ ಅವು ಮೆರವಣಿಗೆ ಹೊರಡಬಲ್ಲವು. ನೀವು ಹೇನಂತೀರಿ? * * * [ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] "Listen Now" ಮೇಲೆ ಕ್ಲಿಕ್ಕಿಸಿದರೆ ಕೇಳಿ ಆನಂದಿಸಬಹುದು!Version: 20241125