Episodes

Thursday Sep 26, 2013
Are You You?
Thursday Sep 26, 2013
Thursday Sep 26, 2013
ದಿನಾಂಕ 22 ಸೆಪ್ಟೆಂಬರ್ 2013
ನೀನು ನೀನೇನಾ?
[ವಿಜಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಪುರವಣಿ ‘ವಿಜಯವಿಹಾರ’ದಲ್ಲಿ ಪ್ರಕಟವಾದ ಲೇಖನ ]* ಶ್ರೀವತ್ಸ ಜೋಶಿ
ಅದು, ಕೆಲ ದಿನಗಳ ಹಿಂದೆ ನನಗೆ ಬಂದಿದ್ದ ಒಂದು ಮಿಂಚಂಚೆಯ ವಿಷಯಸಾಲು (ಸಬ್ಜೆಕ್ಟ್ ಲೈನ್). ನಾನು ಚಂದಾದಾರನಾಗಿರುವ ಇಲ್ಲಿನ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಇ-ಸುದ್ದಿಪತ್ರ ವಿಭಾಗದವರು ಕಳಿಸಿದ ಮಿಂಚಂಚೆಯದು. “Are you, you?” ಎಂದು ಅವರ ಪ್ರಶ್ನೆ. ನಾನು ನಾನೇ (ಅಂದರೆ ಅವರ ದೃಷ್ಟಿಕೋನದಿಂದಾದರೆ ನೀನು ನೀನೇ) ಹೌದೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕಾಗಿ ಆ ಪ್ರಶ್ನೆ. ಹಾಗೆ ಕೇಳುತ್ತಿರುವುದಕ್ಕೆ ಕಾರಣವನ್ನೂ ಮಿಂಚಂಚೆಯಲ್ಲಿ ವಿವರಿಸಿದ್ದರು. ಇ-ಸುದ್ದಿಪತ್ರ ಪಡೆಯಲು ಯಾರೆಲ್ಲ ಯಾಹೂ ಇಮೇಲ್ ವಿಳಾಸ ಬಳಸುತ್ತಾರೋ ಅವರಿಗೆಲ್ಲ ಆ ಪ್ರಶ್ನೆ ಕೇಳಿದ್ದಾರಂತೆ. ಬೇನಾಮಿ ಇಮೇಲ್ ಐಡಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳುತ್ತೇವೆಂದು ಯಾಹೂ ಕಂಪನಿ ಇತ್ತೀಚೆಗೆ ಪ್ರಕಟಣೆ ಹೊರಡಿಸಿದೆ; ನಿಮ್ಮ ಯಾಹೂ ಐಡಿ ಬೇನಾಮಿ ಅಲ್ಲ ತಾನೆ? ನೀವು ಈಗಲೂ ಅದನ್ನು ಬಳಸುತ್ತೀರಿ ತಾನೆ? ಅದೇ ಯಾಹೂ ವಿಳಾಸಕ್ಕೆ ನಾವು ಕಳಿಸುವ ಇ-ಸುದ್ದಿಪತ್ರ ನಿಮಗೆ ನಿಯಮಿತವಾಗಿ ತಲುಪುತ್ತಿದೆ ತಾನೆ? ಎಂದು ಮುಂತಾದ ಉಭಯಕುಶಲೋಪರಿ ವಿಚಾರಣೆ ಅವರ ಉದ್ದೇಶ. ಅಷ್ಟೇಅಲ್ಲ, ನೀನು ನೀನೇ ಹೌದು ಅಂತಾದರೆ ಈ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ ಎಂಬ ಒಕ್ಕಣೆಯೂ ಆ ಮಿಂಚಂಚೆಯಲ್ಲಿತ್ತು.
ನನ್ನ ಯಾಹೂ ವಿಳಾಸ ಬೇನಾಮಿ ಏನಲ್ಲ. ನಾನದನ್ನು ದಿನಾ ಬಳಸುತ್ತೇನೆ. ವಾಷಿಂಗ್ಟನ್ ಪೋಸ್ಟ್ನ ಇ-ಸುದ್ದಿಪತ್ರ ಸಹ ನನ್ನ ಯಾಹೂ ಡಬ್ಬಕ್ಕೆ ಪ್ರತಿದಿನವೂ ಸುಸೂತ್ರವಾಗಿ ಬಂದು ಬೀಳುತ್ತದೆ. ಹಾಗಾಗಿ ಆ ಮಿಂಚಂಚೆಯ ಬಗ್ಗೆ ನಾನು ತಲೆಕೆಡಿಸಿಕೊಳ್ಳಬೇಕಾದ್ದೇನಿಲ್ಲ. ಪರಂತು "Are you, you?" ಎಂಬ ಪ್ರಶ್ನೆ ಮಾತ್ರ ನನಗೆ ಮೊದಲು ಒಂಚೂರು ತಮಾಷೆಯಾಗಿ, ಆಮೇಲೆ ಸ್ವಲ್ಪ ಕೆಣಕು-ತಿಣುಕಾಗಿ, ಮತ್ತೂ ಯೋಚಿಸಿದರೆ ಜಿಜ್ಞಾಸೆಯಾಗಿ, ಆಳಕ್ಕಿಳಿದಂತೆಲ್ಲ ತತ್ತ್ವಜ್ಞಾನದ ಸವಾಲಾಗಿ ಕಂಡುಬಂತು! ಒಮ್ಮೆ ನೀವೂ ಯೋಚಿಸಿ ನೋಡಿ- "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ತತ್ಕ್ಷಣದ ಉತ್ತರ?
ಅಂತರಜಾಲದಲ್ಲಿ, ಕಂಪ್ಯೂಟರ್ ಬಳಕೆಯಲ್ಲಿ ಈ ‘ನೀನು ನೀನೇನಾ?’ ಎನ್ನುವ ಪ್ರಶ್ನೆ ಯಾವಾಗಲೂ ಪ್ರಸ್ತುತವೇ. ಅದಕ್ಕೋಸ್ಕರವೇ ಪಾಸ್ವರ್ಡುಗಳು, ಕಂಪ್ಯೂಟರ್ ಬಳಕೆದಾರನ ಪರಿಚಯವನ್ನು ಸರಿಯಾಗಿ ತಿಳಿದುಕೊಳ್ಳಲು ಪರಿಪರಿಯ ಪರಿಕರಗಳು ವಿಧಾನಗಳೆಲ್ಲ ಇರುವುದು. ಕೆಲವು ಜಾಲತಾಣಗಳಲ್ಲಂತೂ "ನೀನೊಬ್ಬ ರೋಬಾಟ್ ಅಲ್ಲ, ಸಾಮಾನ್ಯ ಮನುಷ್ಯ ಎಂದು ದೃಢಪಡಿಸುವುದಕ್ಕಾಗಿ ಇಂಥದನ್ನು ಮಾಡಿತೋರಿಸು..." ಎಂದು ನಿರ್ದೇಶನವೂ ಇರುತ್ತದೆ! ಕಂಪ್ಯೂಟರ್ ವ್ಯವಸ್ಥೆಯನ್ನು ಅತ್ಯಂತ ಸುಭದ್ರಗೊಳಿಸಿದ್ದೇವೆ ಎಂದು ಯಾರು ಎಷ್ಟು ಹೆಮ್ಮೆಯಿಂದ ಹೇಳಿಕೊಂಡರೂ ರಂಗೋಲಿ ಕೆಳಗೆ ತೂರಬಲ್ಲ ಚೋರಚಾಣಾಕ್ಷರು ಇರುವುದರಿಂದ ಅವೆಲ್ಲ ಅನಿವಾರ್ಯವೂ ಹೌದು. ಮತ್ತೆ, ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯವರು ನನಗೆ ಮಿಂಚಂಚೆ ಬರೆದು ನೀನು ನೀನೇನಾ ಎಂದು ಕೇಳಿದ್ದಾದರೂ ಆ ದಿಸೆಯಲ್ಲೇ.
ನನಗೆ ತಮಾಷೆ ಅನಿಸಿದ್ದೇನೆಂದರೆ ಒಂದುವೇಳೆ ಆ ಪ್ರಶ್ನೆಗೆ ಕಡ್ಡಾಯವಾಗಿ (ಹೌದು ಅಂತಾದ್ರೂ, ಅಲ್ಲ ಅಂತಾದ್ರೂ) ಉತ್ತರಿಸಲೇಬೇಕು ಅಂತಿದ್ದಿದ್ದರೆ ಹೇಗೆ ಉತ್ತರಿಸುವುದು? ಪುರಾವೆ ಹೇಗೆ ಒದಗಿಸುವುದು? ನೆನಪಿರಲಿ- ಅವರು ಕೇಳಿದ್ದು ‘ನೀನು ಶ್ರೀವತ್ಸ ಜೋಶಿನಾ?’ ಅಂತಲ್ಲ. ಹಾಗೊಂದು ವೇಳೆ ಕೇಳಿದ್ದಿದ್ದರೆ ನಾನೇ ಶ್ರೀವತ್ಸ ಜೋಶಿ ಎಂದು ಸಾರುವ ಯಾವುದಾದರೂ ಗುರುತುಪತ್ರವನ್ನು- ಡ್ರೈವಿಂಗ್ಲೈಸೆನ್ಸೋ ಪಾಸ್ಪೋರ್ಟೋ ಇನ್ನೊಂದೋ ಮತ್ತೊಂದೋ ಏನನ್ನಾದರೂ ತೋರಿಸಬಹುದಾಗಿತ್ತು. ಭಾರತದಲ್ಲಾಗಿದ್ರೆ ‘ಆಧಾರ್’ ಕಾರ್ಡನ್ನೇ ಆಧಾರವಾಗಿ ತೋರಿಸಬಹುದಾಗಿತ್ತು ಎನ್ನಿ. ಆದರೆ ಸಮಸ್ಯೆ ಇರೋದು ನಾನು ನಾನೇ ಎಂದು, ಅಥವಾ ನಾನು ನಾನಲ್ಲ ಎಂದು ಉತ್ತರಿಸುವುದರಲ್ಲಿ!
ಸಮಸ್ಯೆಯ ವಿಶ್ಲೇಷಣೆಗೆ ಮೊದಲು, ಒಂದೆರಡು ಲಘು ಪ್ರಸಂಗಗಳನ್ನು ಮೆಲುಕುಹಾಕೋಣ.
ನಾನು ಪಿಯುಸಿ ಓದುತ್ತಿದ್ದಾಗ ನಮ್ಮ ತರಗತಿಯಲ್ಲಿ ನಂದಾ ಮತ್ತು ನೀನಾ ಎಂಬ ಹೆಸರಿನ ಇಬ್ಬರು ಹುಡುಗಿಯರಿದ್ದರು. ಹಾಜರಿಪಟ್ಟಿಯಲ್ಲಿ ಅವರಿಬ್ಬರ ಹೆಸರುಗಳು ಅನುಕ್ರಮದಲ್ಲಿದ್ದವು. ನಮ್ಮ ಕೆಮೆಸ್ಟ್ರಿ ಪ್ರೊಫೆಸರರು ಬೇಕಂತಲೇ "ನಂದಾ ನೀನಾ?" ಎಂದು ಪ್ರಶ್ನೆಕೇಳುವ ಧಾಟಿಯಲ್ಲಿ ಹಾಜರಿ ಕರೆಯೋರು. ನಂದಾ ಮತ್ತು ನೀನಾ ಇಬ್ಬರೂ ಒಟ್ಟೊಟ್ಟಿಗೇ ಯಸ್ ಸಾರ್ ಎನ್ನೋರು. "ನಾನು ಒಬ್ಬಳನ್ನೇ ಮಾತಾಡ್ಸಿದ್ದಮ್ಮಾ ಇಬ್ಬರೂ ಯಾಕೆ ಎದ್ದುನಿಂತ್ರಿ?" ಎಂದು ಪ್ರೊಫೆಸರ್ ಪ್ರಶ್ನೆ. ಆಮೇಲೆ ನಂದಾಳನ್ನುದ್ದೇಶಿಸಿ “ನಿನ್ನ ಹೆಸರೇನಮ್ಮಾ?" ಎಂದು ಕೇಳಿದರೆ ಆಕೆ ‘ನಂದಾ’ ಎಂದಾಗ "ಹೌದಮ್ಮ ನಿನ್ನದೇ ಹೆಸರು ಕೇಳಿದ್ದು" ಎನ್ನೋರು. ಅಂತೂ ಒಳ್ಳೇ ತಮಾಷೆ. ನಂದಾ-ನೀನಾಗಳಂತೆಯೇ ಹೆಸರುಗಳಲ್ಲೇ ತರ್ಕ ಹುಟ್ಟಿಸಬಹುದಾದ ಇನ್ನೊಂದು ಪ್ರಸಂಗವೆಂದರೆ(ಇದು ಕಾಲ್ಪನಿಕ)- ಹಿಂದಿ ಚಿತ್ರರಂಗದ ನಾನಾ ಪಾಟೇಕರ್ ಮತ್ತು ನೀನಾ ಗುಪ್ತಾ ಇವರಿಬ್ಬರೂ ಕನ್ನಡದಲ್ಲಿ, ಅದರಲ್ಲೂ ಪರಸ್ಪರ ಹೆಸರು ಕೂಗಿ ಮಾತಾಡಿದರೆ? "ನಾನಾ? ನೀನಾ?" ಎಂಬ ಸಂದೇಹ ನಿವಾರಣೆಯಲ್ಲೇ ಕಾಲ ಕಳೆದುಹೋಗಬಹುದು. ಅವರ ಜತೆ ಮಾಧುರಿ ದೀಕ್ಷಿತ್ ‘ನೇನೆ’ ತೆಲುಗಿನಲ್ಲಿ ಮಾತನಾಡುತ್ತ ಸೇರಿಕೊಂಡರೆ ಕಥೆ ಮುಗೀತು. ಹಿನ್ನೆಲೆಯಲ್ಲಿ ಗಡಿಬಿಡಿ ಗಂಡ ಚಿತ್ರದ ಹಾಡು. ಅದೇ- ರವಿಚಂದ್ರನ್ ಮತ್ತು ತಾಯ್ನಾಗೇಶ್ ಪರಸ್ಪರ ಚಾಲೆಂಜ್ ಹಾಕಿಕೊಳ್ತಾರಲ್ಲ ‘ನೀನು ನೀನೇ ಇಲ್ಲಿ ನಾನು ನಾನೇ... ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯ ದಾಸಾನುದಾಸ...’
ಕನ್ನಡ-ತೆಲುಗು ಅಷ್ಟೇಅಲ್ಲ. ಇಂಗ್ಲಿಷ್ನ ಮಜಾ ಕೇಳಿ. ಎಂಜಿನಿಯರಿಂಗ್ ಕಾಲೇಜಲ್ಲಿ ಯು.ಆರ್.ಸುಬ್ರಹ್ಮಣ್ಯ ಎಂಬ ಹೆಸರಿನ ಸಹಪಾಠಿಯೊಬ್ಬನಿದ್ದ. ಅವನನ್ನು ನಮ್ಮ ಲೆಕ್ಚರರ್ರು "ಆರ್ ಯೂ ಸುಬ್ರಹ್ಮಣ್ಯ?" ಎಂದು ಕೇಳಿದಾಗಲೆಲ್ಲ ಅವನು "ಯು.ಆರ್.ಸುಬ್ರಹ್ಮಣ್ಯ" ಎಂದು ಉತ್ತರಿಸುತ್ತಿದ್ದ, ತನ್ನ ಇನಿಶಿಯಲ್ಸನ್ನು ಆಚೀಚೆ ಮಾಡಿ ಕೇಳಿದ್ದಕ್ಕೆ ಮುನಿಸಿಕೊಂಡು. "ನನ್ನ ಹೆಸರು ಸುಬ್ರಹ್ಮಣ್ಯ ಅಲ್ಲಪ್ಪಾ, ನೀನು ಸುಬ್ರಹ್ಮಣ್ಯನಾ?" ಎಂದು ಕನ್ನಡದಲ್ಲಿ ಕೇಳಿ ಲೆಕ್ಚರರ್ ಗದರಿಸುತ್ತಿದ್ದರು ಹುಸಿಕೋಪದಿಂದ. "ಯು.ಆರ್" ಎಂಬ ಇನಿಶಿಯಲ್ಸ್ ಇರುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯವರಿಗೂ ಇಂಥದೇ ಸ್ವಾರಸ್ಯಕರ ಪೀಕಲಾಟಗಳು ಒಮ್ಮೆಯಾದರೂ ಎದುರಾಗಿವೆಯಿರಬಹುದು.ಹೆಸರಿನಿಂದಲೇ ಹುಟ್ಟಿಕೊಳ್ಳುವ ‘ಐಡೆಂಟಿಟಿ ಕ್ರೈಸಿಸ್’ ಅದು! ಆದರೂ ನಮ್ಮ ಐಡೆಂಟಿಟಿಗೆ ಮೊದಲನೆಯದಾಗಿ ಜೋಡಣೆಯಾಗುವುದು ನಮ್ಮ ಹೆಸರೇ. ಇಬ್ಬರು ವ್ಯಕ್ತಿಗಳಿಗೆ ಒಂದೇ ಹೆಸರಿದ್ದರೆ ಅಡ್ಡಹೆಸರು, ಊರಿನ ಹೆಸರು, ಇನಿಶಿಯಲ್ಸು ಇತ್ಯಾದಿ. ನಾಮದ ಬಲವೊಂದೇ ಸಾಕಾಗದಿದ್ದರೆ ಭಾವಚಿತ್ರ. ಹಾಗಾಗಿಯೇ "ಯಾವುದಾದರೂ ಫೋಟೊ ಐಡಿ ತೋರಿಸಲೇಬೇಕು" ಎನ್ನುವುದು ಜಾಗತಿಕವಾಗಿ ಒಂದು ರೂಢಿ ಎನ್ನುವುದಕ್ಕಿಂತಲೂ ನಿಯಮವೇ ಆಗಿಬಿಟ್ಟಿದೆ. ಭಾವಚಿತ್ರವೇ ಎಲ್ಲವನ್ನೂ ತಿಳಿಸಬಲ್ಲುದೇ? ನಿಮಗೆ ಒಂದು ಹಳೆಯ ಹಿಂದಿ ಸಿನೆಮಾಹಾಡು, ಕಿನಾರಾ ಚಿತ್ರದ್ದು, ನೆನಪಿರಬಹುದು- "ನಾಮ್ ಗುಮ್ ಜಾಯೇಗಾ... ಚೆಹರಾ ಯೇ ಬದಲ್ ಜಾಯೇಗಾ... ಮೇರೀ ಆವಾಜ್ ಹೀ ಪೆಹಚಾನ್ ಹೈ ಗರ್ ಯಾದ್ ರಹೇ..." ಅಂದರೆ, ಹೆಸರು ಮರೆತು ಹೋಗಬಹುದು; ಮುಖಚರ್ಯೆ ಬದಲಾಗಬಹುದು. ಆದರೆ ನನ್ನ ಧ್ವನಿಯನ್ನು ನೆನಪಿಟ್ಟುಕೊಂಡರೆ ಅದೇ ನನ್ನ ಪರಿಚಯದ ಗುರುತು ಎನ್ನುತ್ತಾಳೆ ಚಿತ್ರದ ನಾಯಕಿ!
ಹೆಸರು, ಮುಖಚರ್ಯೆ, ಧ್ವನಿ ಎಲ್ಲ ಪರಿಚಯವಾಗಿದ್ದರೂ ಶಕುಂತಲೆಯನ್ನು ಮರೆತೇಬಿಟ್ಟನಲ್ಲ ದುಷ್ಯಂತ ಮಹಾರಾಜ? ಅದಕ್ಕೇನನ್ನೋಣ? ಅವನು ಕೊಟ್ಟಿದ್ದ ಉಂಗುರವಾದರೂ ಪರಿಚಯಪ್ರಮಾಣ ಆಗಬಹುದೆಂದು ಆಕೆ ಬಗೆದರೆ ಅದೂ ಕಳೆದುಹೋಗಬೇಕೇ! ವಿಧಿವಿಪರೀತ ವಿಧಿಯಾ ಆಟ. ಮತ್ತದೇ ಪ್ರಶ್ನೆ. ನೀನು ನೀನೇನಾ ಎಂದು ಕೇಳಿದರೆ ಉತ್ತರಿಸುವುದೆಂತು? ನಾನು ನಾನೇ ಎನ್ನಲು ಆಧಾರವೆಂತು? ಈ ಪ್ರಪಂಚದಲ್ಲಿ ಒಬ್ಬೊಬ್ಬ ವ್ಯಕ್ತಿಯ ಬೆರಳಚ್ಚು ವಿನ್ಯಾಸ (ಫಿಂಗರ್ಪ್ರಿಂಟ್)ಗಳು ಅನನ್ಯವಾಗಿರುತ್ತವೆ ಎಂದು ವಿಜ್ಞಾನದಿಂದ ಕಂಡುಕೊಂಡಿದ್ದೇವೆ. ಅಕ್ಷರಸ್ಥರಾಗಿಯೂ ಹೆಬ್ಬೆಟ್ಟು ಒತ್ತುವ ಸಂದರ್ಭಗಳನ್ನು ನಿಯಮಗಳಿಗೋಸ್ಕರ ರೂಪಿಸಿಕೊಂಡಿದ್ದೇವೆ. ಅಮೆರಿಕದಲ್ಲಿ ವಿಮಾನನಿಲ್ದಾಣದಲ್ಲಿ ಇಳಿದೊಡನೆ ಊರಿನೊಳಗೆ ಪ್ರವೇಶಿಸುವ ಮೊದಲು ಫಿಂಗರ್ಪ್ರಿಂಟುಗಳ ತಪಾಸಣೆ ಆಗಲೇಬೇಕು. ಈಗ ಬೆರಳಚ್ಚುಗಳಷ್ಟೇ ಅಲ್ಲ, ಕಣ್ಣಿನ ಪಾಪೆ ಸಹ ಪ್ರತಿಯೊಬ್ಬ ವ್ಯಕ್ತಿಯದೂ ಅನನ್ಯ ವಿನ್ಯಾಸದ್ದಾಗಿರುತ್ತದೆಂದು ತಿಳಿದುಬಂದಿರುವುದರಿಂದ Iris identification ಅಂತಲೂ ಶುರುವಾಗಿದೆ. ಗುರುತಿನ ಅಗತ್ಯ ಮತ್ತಷ್ಟು ಗುರುತರವಾದರೆ ಡಿಎನ್ಎ ಟೆಸ್ಟಿಂಗ್ ಸಹ ಇದ್ದೇಇದೆಯಲ್ಲ?
ಆದರೆ ನನ್ನ ಜಿಜ್ಞಾಸೆಗೆ ಅದಾವುದೂ ಸಮರ್ಪಕವಾಗಿ ಉತ್ತರ ಕೊಡಲಾರದು. ಯಾಕೆ ಹೇಳಿ? ದೈಹಿಕ ಲಕ್ಷಣಗಳಿಂದ ನಾನು ನಾನೇ ಎಂದು ನಿರ್ಧರಿಸುವುದೇ ಆದಲ್ಲಿ ನನ್ನ ದೇಹದ ಒಂದೊಂದೇ ಅಂಗವನ್ನು ಬದಲಾಯಿಸುತ್ತಾ ಹೋದರೆ ನಾನು ನಾನಾಗಿಯೇ ಇರುತ್ತೇನೆಯೇ? ‘ಥೀಸಿಯಸ್ನ ಹಡಗಿನ ಕತೆ’ಯನ್ನು ನೀವು ಕೇಳಿರಬಹುದು/ಓದಿರಬಹುದು. ಮೊನ್ನೆಮೊನ್ನೆ ಅದೇ ಹೆಸರಿನ ಒಂದು ಸಿನೆಮಾ ಸಹ ಬಿಡುಗಡೆಯಾಗಿದೆಯಂತೆ. ಥೀಸಿಯಸ್ ಎಂಬ ನಾವಿಕ ಹಡಗಿನಲ್ಲಿ ಹೊರಟವನು ದಾರಿಯುದ್ದಕ್ಕೂ ತನ್ನ ಹಡಗಿನ ಒಂದೊಂದೇ ಭಾಗವನ್ನು ಬದಲಾಯಿಸುತ್ತ ಹೋಗಬೇಕಾಗುತ್ತದೆ. ಗಮ್ಯಸ್ಥಾನ ತಲುಪುವಾಗ ಅವನ ಹಡಗಿನ ಪ್ರತಿಯೊಂದು ಭಾಗವೂ ಹೊಸತು ಜೋಡಿಸಿದ್ದಾಗಿರುತ್ತದೆ. ಆದರೂ ಜನ ಅದನ್ನು ಥೀಸಿಯಸ್ನ ಹಡಗು ಎಂದೇ ಗುರುತಿಸುತ್ತಾರೆ. ಥೀಸಿಯಸ್ ಬಿಸಾಡಿದ ಭಾಗಗಳನ್ನೆಲ್ಲ ಸೇರಿಸಿ ಇನ್ನೊಂದು ಹಡಗನ್ನು ಒಬ್ಬಾತ ನಿರ್ಮಿಸುತ್ತಾನೆ. ಅಸಲಿಗೆ ಅದೇ ಥೀಸಿಯಸ್ನ ಒರಿಜಿನಲ್ ಹಡಗು ಅಲ್ಲವೇ? ಅದೇರೀತಿ ಒಂದುವೇಳೆ ನನ್ನ ದೇಹದ ಅಂಗಗಳನ್ನು (ನನಗೆ ಹೊಸದನ್ನು ಜೋಡಿಸುವಾಗ ಬಿಸಾಡಿದ ಹಳೆಯವನ್ನು) ಜೋಡಿಸಿ ಹೊಸದೊಂದು ವ್ಯಕ್ತಿಯಾದರೆ ಅದೂ ನಾನೇ ಆಗಿರುತ್ತೇನೆಯೇ? ಹಾಗಾದರೆ ನಾನು ಯಾರು? ಕನಕದಾಸರು ‘ನಾನು ಹೋದರೆ ಹೋದೇನು’ ಎಂದು ಹೇಳಿದಾಗಿನ ‘ನಾನು’ ನಾನೇ?
ತರ್ಕ ಮಾಡುತ್ತ ಹೋದರೆ ಈ ಜಿಜ್ಞಾಸೆಯು ದೇಹ-ಆತ್ಮ, ಪ್ರಕೃತಿ-ಪುರುಷ, ದ್ವೈತ-ಅದ್ವೈತ ಸಿದ್ಧಾಂತಗಳನ್ನೆಲ್ಲ ದಾಟಿ ಅಹಂ ಬ್ರಹ್ಮಾಸ್ಮಿ ಎಂದುಕೊಂಡು ಪರಬ್ರಹ್ಮನ ಪದತಲದವರೆಗೂ ಹೋಗಬಹುದೇನೋ. ತತ್ತ್ವಮಸಿ (ತತ್ ತ್ವಮ್ ಅಸಿ = ಅದು ನೀನೇ ಆಗಿರುವಿ) ಎಂಬ ಛಾಂದೋಗ್ಯೋಪನಿಷತ್ತಿನ ಮಹಾವಾಕ್ಯದವರೆಗೂ ತಲುಪಬಹುದೇನೋ. ಅಣೋರಣೀಯನೂ ಮಹತೋಮಹೀಯನೂ ಅಪ್ರಮೇಯನೂ ನಿರಾಕಾರನೂ ಸರ್ವಾಂತರ್ಯಾಮಿಯೂ ಆದ ಪರಬ್ರಹ್ಮನಿಗೇ ನಾವು ತತ್ತ್ವಮಸಿ ಎಂದು ಗುರುತುಪತ್ರ ಕೊಡಬಲ್ಲೆವು, ಆದರೆ ನನಗೆ ನಿಮಗೆ ಸರಿಯಾದ ಗುರುತಿಲ್ಲವೆಂದರೆ ಆ ಪರಬ್ರಹ್ಮನಿಗೂ ನಗು ಬಂದೀತು!
ಅಬ್ಬಾ! ಒಂದು ಇಮೇಲ್ ಸಬ್ಜೆಕ್ಟ್ ಲೈನ್ ನಮ್ಮೆಲ್ಲ ಆಲೋಚನೆಗಳನ್ನು ಬುಡಮೇಲು ಮಾಡಿ ಇಷ್ಟು ಗಹನವಾದ ಸಬ್ಜೆಕ್ಟ್ ಆಗಿಬಿಟ್ಟಿತಲ್ಲ! ಪ್ರಶ್ನೆ ಇರೋದೇ ಸಬ್ಜೆಕ್ಟ್ ಯಾವುದು ಒಬ್ಜೆಕ್ಟ್ ಯಾವುದು ಎನ್ನುವುದಲ್ಲವೇ? ಈಗ ಹೇಳಿ, "ನೀನು ನೀನೇನಾ?" ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ನಿಮ್ಮ ಉತ್ತರ?


["Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಈ ಲೇಖನವನ್ನು ಕೇಳಿ ಆನಂದಿಸಬಹುದು!]

Wednesday Sep 25, 2013
Hasigodeyalli Haralu
Wednesday Sep 25, 2013
Wednesday Sep 25, 2013
ದಿನಾಂಕ 15 ಎಪ್ರಿಲ್ 2012ರ ಸಂಚಿಕೆ...
ಹಸಿ ಗೋಡೆಯಲಿ ನೆಟ್ಟ ಹರಳು
* ಶ್ರೀವತ್ಸ ಜೋಶಿ
[ಈ ಲೇಖನವನ್ನು ನೀವು ವಿಜಯ ಕರ್ನಾಟಕ ಇ-ಪೇಪರ್ನಲ್ಲಿಯೂ ಓದಬಹುದು.] * * * ‘ಹಳಗನ್ನಡ ಕಾವ್ಯದ ಪದ್ಯಭಾಗಗಳು ನಿಮ್ಮ ಸಂಗ್ರಹದಲ್ಲಿ ಯಾವುದಾದರೂ ಇವೆಯೇ, ಅಂತರ್ಜಾಲದಲ್ಲಿ ಸಿಕ್ಕಿದ್ದೂ ಆಗುತ್ತದೆ, ಅಥವಾ ನಿಮ್ಮ ಬಳಿ ಹಳೆಯ ಗ್ರಂಥಗಳಾವುದಾದರೂ ಇದ್ದರೆ ಅದರ ಒಂದೆರಡು ಪುಟಗಳನ್ನು ಸ್ಕ್ಯಾನ್ ಮಾಡಿದ್ದೂ ಆದೀತು. ಅರ್ಥಸಹಿತ ವಿವರಣೆಯಿದ್ದರೆ ಮತ್ತೂ ಒಳ್ಳೆಯದು. ಕಳಿಸಿಕೊಡಲಿಕ್ಕಾಗುತ್ತದೆಯೇ?’ - ಎಂಬ ಒಕ್ಕಣೆಯ ಪತ್ರವನ್ನು ಅಮೆರಿಕನ್ನಡಿಗ ಸ್ನೇಹಿತರೊಬ್ಬರು ಒಮ್ಮೆ ನನಗೆ ಬರೆದಿದ್ದರು. ಅವರಿರುವ ಊರಿನ ಕನ್ನಡಸಂಘದಲ್ಲಿ ಸಾಹಿತ್ಯಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದರಂತೆ. ಹೆಚ್ಚುಹೆಚ್ಚು ಜನ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು ಎಲ್ಲರನ್ನೂ ಉತ್ತೇಜಿಸಿದ್ದರಂತೆ (ಪ್ರೀತಿಯಿಂದ ಒತ್ತಾಯಿಸಿದ್ದರು ಅಂತಿಟ್ಕೊಳ್ಳಿ). ಅದಕ್ಕೆ ನನ್ನ ಸ್ನೇಹಿತ ಭರ್ಜರಿ ತಯಾರಿ ನಡೆಸಿದ್ದರು. ‘ಹಳಗನ್ನಡದ ಕಾವ್ಯವಾಚನ ಮಾಡಬೇಕೆಂಬ ಉಮೇದು ಬಂದಿದೆ. ನಿಮ್ಮಿಂದ ನೆರವು ಸಿಗಬಹುದೆಂದು ಊಹಿಸಿ ನಾನೂ ಹೆಸರು ಕೊಟ್ಟಿದ್ದೇನೆ’ ಎಂದು ಪತ್ರದಲ್ಲಿ ಸೇರಿಸಿದ್ದರು. ನನ್ನತ್ರ ಹಳಗನ್ನಡ ಕಾವ್ಯ ಸಿಕ್ಕೀತೆಂದು ಅವರಿಗೇಕೆ ಅನಿಸಿತೋ. ನಿಜಕ್ಕೂ ನನ್ನ ಬಳಿ ಅಂಥ ಪುಸ್ತಕಗಳಾವುವೂ ಇಲ್ಲ. ಆದರೆ ಅವರ ಉತ್ಸಾಹಭಂಗ ಮಾಡುವ ಮನಸ್ಸಾಗಲಿಲ್ಲ. ‘ಕನ್ನಡಭಾರತಿ ಪಠ್ಯಪುಸ್ತಕದಲ್ಲಿ ಇದ್ದ ಕೆಲವು ಪದ್ಯಗಳು ಬಹುಶಃ ಹಳಗನ್ನಡ ಕ್ಯಾಟೆಗರಿಗೆ ಸೇರುವಂಥವು; ಅವುಗಳ ಸಾಲುಗಳೇನಾದ್ರೂ ಸರಿಯಾಗಿ ನೆನಪಿಗೆ ಬಂದರೆ, ಅಥವಾ ಇಂಟರ್ನೆಟ್ನಲ್ಲಿ ಸಿಕ್ಕಿದ್ರೆ ಇಮೇಲ್ ಮಾಡ್ತೇನೆ’ ಎಂದು ಉತ್ತರ ಬರೆದೆ. ತತ್ಕ್ಷಣಕ್ಕೆ ಹೊಳೆದದ್ದು ಸೋಮೇಶ್ವರ ಶತಕದಿಂದಾಯ್ದ ಪದ್ಯಗಳು. ಹಾಗೆಯೇ ‘ಲೋಹಿತಾಶ್ವನ ಸಾವು’ ಎಂಬ ಪದ್ಯ. ಅವೆರಡೂ ನಮಗೆ ಐದನೇ ತರಗತಿಯ ಪಠ್ಯದಲ್ಲಿ ಇದ್ದವು. ಸೋಮೇಶ್ವರ ಶತಕದ ಪದ್ಯಗಳು ಇಂಟರ್ನೆಟ್ನಲ್ಲಿ ಸುಲಭವಾಗೇ ಸಿಕ್ಕಿದವು. ‘ಪ್ರಜೆಯಂ ಪಾಲಿಸಬಲ್ಲೊಡಾತನರಸಂ...’, ‘ಉಡುರಾಜಂ ಕಳೆಗುಂದಿ ಪೆರ್ಚದಿಹನೆ...’, ಮತ್ತು ‘ರವಿಯಾಕಾಶಕೆ ಭೂಷಣಂ...’ ಮುಂತಾದ ಚೌಪದಿಗಳಿಗಂತೂ ಪ್ರತಿಯೊಂದು ಪದದ ಅರ್ಥವಿವರಣೆಯೂ ಇತ್ತು. ಕಾವ್ಯವಾಚನ ಕಾರ್ಯಕ್ರಮಕ್ಕೆ ಇದು ಧಾರಾಳವಾಯ್ತು. ಅಲ್ಲದೇ ಸೋಮೇಶ್ವರ ಶತಕ ಬರೆದ ಕವಿಯ ಬಗ್ಗೆಯೂ ನನ್ನ ಸ್ನೇಹಿತರಿಗೆ ಹೆಮ್ಮೆಯಿಂದ ತಿಳಿಸಬಹುದು ಎಂದುಕೊಂಡೆ. ‘ಸದ್ಯಕ್ಕೆ ಇದನ್ನು ನೋಡಿಟ್ಟುಕೊಳ್ಳಿ. ನಿಮಗೆ ವಾಚನಕ್ಕೆ ಸರಳವಾಗಿ ಅನುಕೂಲಕರವಾಗಿ ಇದೆ. ಅರ್ಥವಿವರಣೆಯೂ ಇದೆ. ಆದರೂ, ಲೋಹಿತಾಶ್ವನ ಸಾವು ಪದ್ಯವನ್ನು ಹೇಗಾದರೂ ಸಂಗ್ರಹಿಸಿ ನಿಮಗೆ ಕಳಿಸಿಕೊಡಬೇಕೆಂದೇ ನನಗೆ ಆಸೆ ಇರುವುದು. ನಿಮ್ಮ ಕಾರ್ಯಕ್ರಮದಲ್ಲಿ ನೀವು ಅದನ್ನೇನಾದ್ರೂ ವಾಚಿಸಿ ವ್ಯಾಖ್ಯಾನಿಸಿದ್ದೇ ಆದರೆ ಭಾರೀ ಮೆಚ್ಚುಗೆ ಗಳಿಸ್ತೀರಿ. ಒಂದೆರಡು ದಿನ ಕಾಲಾವಕಾಶ ಕೊಡಿ, ಹುಡುಕುತ್ತೇನೆ’ ಎಂದು ಅವರಿಗೆ ಪತ್ರಿಸಿದೆ. ‘ಲೋಹಿತಾಶ್ವನ ಸಾವು’ ಒಂದು ಅವಿಸ್ಮರಣೀಯ ಪದ್ಯ. ಕರುಳು ಕಿತ್ತುಬರುವಂತೆ ವಿಷಾದ ಮಡುಗಟ್ಟುವ ಪದ್ಯ. ನಾನು ಕಲಿತ ಏಕೋಪಾಧ್ಯಾಯ ಏಕಕೊಠಡಿಯ ಪ್ರಾಥಮಿಕ ಶಾಲೆಯಲ್ಲಿ, ಇಡೀ ಶಾಲೆಯೇ ಬಳಬಳನೆ ಕಣ್ಣೀರುಗರೆಯುತ್ತಿದ್ದ ಪದ್ಯಗಳೆಂದರೆ ಮೂರನೇ ತರಗತಿಯ ಪಠ್ಯದಲ್ಲಿದ್ದ ‘ಪುಣ್ಯಕೋಟಿ’ ಮತ್ತು ಐದನೇ ತರಗತಿಯ ಪಠ್ಯದಲ್ಲಿದ್ದ ‘ಲೋಹಿತಾಶ್ವನ ಸಾವು’. ಏಕೋಪಾಧ್ಯಾಯ ಏಕಕೊಠಡಿಯ ಶಾಲೆಯಾದ್ದರಿಂದ, ಆ ಪದ್ಯಗಳನ್ನು ಮಾಸ್ತರರು ಕಥೆಯಂತೆ ಬಣ್ಣಿಸುತ್ತಿದ್ದದ್ದನ್ನು ನಾವೆಲ್ಲ ಐದೈದು ವರ್ಷ ಕೇಳಿಸಿಕೊಂಡು ಕಣ್ಣೀರು ಸುರಿಸಿದ್ದೇವೆ. ಪುಣ್ಯಕೋಟಿಯದಾದರೂ ಸುಖಾಂತ್ಯ, ಆದರೆ ಲೋಹಿತಾಶ್ವ ಸತ್ತಾಗಿನ ಚಂದ್ರಮತಿಯ ಸಂಕಟವಂತೂ ವರ್ಣನಾತೀತ. ಈಗಲೂ ನೆನೆಸಿಕೊಂಡರೆ ಮನಸ್ಸು ಮಮ್ಮಲಮರುಗುತ್ತದೆ. ‘ತನಯನೆಂದುಂಬಪ್ಪ ಹೊತ್ತಿಂಗೆ ಬಾರದಿರೆ...’ ಎಂದು ಶುರುವಾಗುವ ಸಾಲುಗಳಿಂದ ಮೈಝುಮ್ಮೆನ್ನುತ್ತದೆ. ಅದು ನೆನಪುಳಿಯುವುದಕ್ಕೆ ಇನ್ನೊಂದು ಕಾರಣವೂ ಇದೆ. ಚಿಕ್ಕಂದಿನಲ್ಲಿ ಅಂತ್ಯಾಕ್ಷರಿ ಆಡುವಾಗ ನಾವು ಚಿತ್ರೇತರ ಗೀತೆಗಳನ್ನೂ ಸೇರಿಸಿಕೊಳ್ತಿದ್ವಿ. ‘ತ’ ಅಕ್ಷರ ಬಂದಾಗ ಮೊದಲು ನೆನಪಾಗ್ತಿದ್ದದ್ದು ಅದೇ ಪದ್ಯ. ಎಷ್ಟೆಂದರೂ ಶಾಲೆಯಲ್ಲಿ ಕಂಠಪಾಠ ಮಾಡಿದ್ದಲ್ವಾ? ಆದರೆ ಈಗ ಸರಿಯಾಗಿ ನೆನಪಿಗೆ ಬರ್ತಾ ಇಲ್ಲ! ಅರ್ಧಂಬರ್ಧವಾಗಿ, ತಪ್ಪುತಪ್ಪಾಗಿ ಬರೆದು ಕಳಿಸಿಕೊಡೋದು ತರವಲ್ಲ. ಅದು ಪದ್ಯಕ್ಕೆ, ಕವಿಗೆ ಅವಮಾನ. ಏನು ಮಾಡಲಿ? ಪದ್ಯದ ಸರಿಯಾದ ಸಾಹಿತ್ಯ ದೊರಕಿಸಿಕೊಳ್ಳುವ ಬಗೆಯೆಂತು? ಆಗ ನೆನಪಾದವರೇ ಜೆ.ಕೆ.ಮೋಹನ್ ರಾವ್ ಎಂಬೊಬ್ಬ ಹಿರಿಯ ಅಮೆರಿಕನ್ನಡಿಗರು. ಅವರು ಇಲ್ಲೇ ವಾಷಿಂಗ್ಟನ್ ಪ್ರದೇಶದಲ್ಲಿರುವವರು. ಒಂದೆರಡು ಸರ್ತಿ ಕನ್ನಡಸಂಘದಲ್ಲಿ ಭೇಟಿಯಾಗಿದ್ದೇನೆ. ಅವರೊಬ್ಬ ಕನ್ನಡ ಸಾಹಿತ್ಯದ ಹೈ-ಟೆಕ್ ಅಭಿಮಾನಿ ಎಂದೂ ಕೇಳ್ಪಟ್ಟಿದ್ದೇನೆ. ಹೈ-ಟೆಕ್ ಏಕೆಂದರೆ ಕನ್ನಡದ ಕೆಲವು ಹಳೆಯ ಗ್ರಂಥಗಳನ್ನು ಅವರು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಟ್ಟಿದ್ದಾರೆ. ಅವರತ್ರ ‘ಲೋಹಿತಾಶ್ವನ ಸಾವು’ ಸಿಕ್ಕರೂ ಸಿಗಬಹುದು. ಒಮ್ಮೆ ಫೋನಾಯಿಸಿ ಕೇಳಲಿಕ್ಕೇನೂ ಅಡ್ಡಿಯಿಲ್ಲವಲ್ಲ. ಆ ಪದ್ಯವು ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಕೃತಿಯಲ್ಲಿ ಬರುತ್ತದೆ ಎನ್ನುವ ಪ್ರಾಥಮಿಕ ಮಾಹಿತಿಯನ್ನು ಆಗಲೇ ಗುರುತುಮಾಡಿಟ್ಟಿದ್ದೆ. ಸ್ವಲ್ಪ ಅಳುಕುತ್ತಲೇ ದೂರವಾಣಿ ಕರೆಮಾಡಿ ‘ರಾಘವಾಂಕನ ಹರಿಶ್ಚಂದ್ರ ಕಾವ್ಯದ ಡಿಜಿಟಲ್ ಪ್ರತಿ ನಿಮ್ಮ ಸಂಗ್ರಹದಲ್ಲಿ ಇದೆಯೇ?’ ಎಂದು ಕೇಳಿದೆ. ‘ಖಂಡಿತವಾಗಿಯೂ ಇದೆ, ಈಗಲೇ ಕಳಿಸಿಕೊಡ್ತೇನೆ’ ಮೋಹನರಾಯರ ಉತ್ತರ. ಅದಾದ ಒಂದು ನಿಮಿಷದೊಳಗೆ ನನ್ನ ಇಮೇಲ್ ಇನ್ಬಾಕ್ಸ್ನಲ್ಲಿ ಹರಿಶ್ಚಂದ್ರ ಕಾವ್ಯ ಪಿಡಿಎಫ್ ಕಡತ ಪ್ರತ್ಯಕ್ಷ. ಇಂಟರ್ನೆಟ್ಟನ್ನು ಇನ್ವೆಂಟಿಸಿದ ಟಿಮ್ ಬರ್ನರ್ಸ್ಗೆ ಜೈ ಹೋ! ಖುಷಿಯಿಂದಲೇ ಪಿಡಿಎಫ್ ತೆರೆದೆ. ಸುಮಾರು ೨೦೦ ಪುಟಗಳ ಗ್ರಂಥ. ಮೈಸೂರು ವಿಶ್ವವಿದ್ಯಾನಿಲಯದಿಂದ ೧೯೩೧ರಲ್ಲಿ ಪ್ರಕಟವಾದದ್ದು. ಬಿ.ಎಂ.ಶ್ರೀಕಂಠಯ್ಯನವರ ಪ್ರಧಾನ ಸಂಪಾದಕತ್ವದಲ್ಲಿ ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿಗಳು ಸಂಪಾದಿಸಿದ ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಸಂಗ್ರಹ. ಮೊದಲ ಐವತ್ತು ಪುಟಗಳಲ್ಲಿ ಪೀಠಿಕೆ, ಕವಿ-ಕಾವ್ಯ ಪರಿಚಯ, ರಾಘವಾಂಕನ ಗುಣಗಾನ ಇತ್ಯಾದಿ. ರಸವತ್ತಾದ ಕಥನಕ್ರಮ, ಸ್ಫುಟವಾದ ಪಾತ್ರಪ್ರದರ್ಶನ, ಸಹಜತೆಯುಳ್ಳ ಸಂಭಾಷಣೆ, ಭಾವಪ್ರಪಂಚ ಬಾಹ್ಯಪ್ರಪಂಚಗಳ ಖಚಿತವಾದ ವರ್ಣನೆಗಳು ಹೇಗೆ ಈ ಕಾವ್ಯವನ್ನು ಕನ್ನಡದ ಮೇರುಕೃತಿಗಳ ಸಾಲಲ್ಲಿ ನಿಲ್ಲಿಸಿವೆಯೆಂಬ ಸೋದಾಹರಣ ವಿವರಗಳು. ಅದಾದಮೇಲೆ ಒಂಬತ್ತು ಕಾಂಡಗಳಿರುವ ಹರಿಶ್ಚಂದ್ರ ಕಾವ್ಯ ಶುರುವಾಗುತ್ತದೆ, ‘ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು...’ ಎಂದು ರಾಘವಾಂಕ ತನ್ನ ಅಧಿದೇವತೆ ಹಂಪೆಯ ವಿರೂಪಾಕ್ಷನನ್ನು ಸ್ತುತಿಸುವುದರ ಮೂಲಕ.

Sunday Sep 23, 2012
Vedhadhyayana Vismaya
Sunday Sep 23, 2012
Sunday Sep 23, 2012
ದಿನಾಂಕ 23 ಸೆಪ್ಟೆಂಬರ್ 2012
ವೇದಾಧ್ಯಯನ ವಿಧಾನದ ವಿಸ್ಮಯ
* ಶ್ರೀವತ್ಸ ಜೋಶಿ
* * * ಹದಿಮೂರ್ ಹದಿನೇಳ್ಲ ಎಷ್ಟು ಎಂದು ಕೇಳಿದರೆ ಬೆಚ್ಚಿಬಿದ್ದು ಕಾಲ್ಕ್ಯುಲೇಟರ್ಗೆ ತಡಕಾಡುವ ಪರಿಸ್ಥಿತಿ ನಮ್ಮದು. ಒಂದರಿಂದ ಹತ್ತರವರೆಗೆ, ಅದರಲ್ಲೂ ಹತ್ತ್ ಹತ್ಲೆ ನೂರು... ವರೆಗೆ ಮಾತ್ರ ಮಗ್ಗಿ ಕಲಿತ (ಈಗ ಅದನ್ನೂ ಮರೆತ) ಪ್ರಭಾವ. ಹಿಂದಿನ ಕಾಲದಲ್ಲಿ ಒಂದರಿಂದ ಇಪ್ಪತ್ತರವರೆಗಿನ ಸಂಖ್ಯೆಗಳ, ಪ್ರತಿಯೊಂದು ಸಂಖ್ಯೆಯದೂ ಇಪ್ಪತ್ತರವರೆಗೆ ಮಗ್ಗಿ ಬಾಯಿಪಾಠ ಕಲಿಯುವುದಿತ್ತು. ಅದೂ ರಿವರ್ಸ್ ಆರ್ಡರ್, ಡಯಾಗನಲ್ ಆರ್ಡರ್ ಹೀಗೆ ಯಾವ ನಮೂನೆಯಲ್ಲಿ ಬೇಕೊ ಹಾಗೆ ಮಗ್ಗಿಯನ್ನು ಒಪ್ಪಿಸುವ ಜಾಣರಿರುತ್ತಿದ್ದರು. ಯಾಕೆ ಆ ಜಾಣ್ಮೆ ಇರುತ್ತಿತ್ತೆಂದರೆ ಆಗ ಕ್ಯಾಲ್ಕುಲೇಟರ್ಗಳು ಇರಲಿಲ್ಲ, ಅದಕ್ಕೂ ಹಿಂದೆ ಮಗ್ಗಿ ಪುಸ್ತಕಗಳೂ ಇರುತ್ತಿರಲಿಲ್ಲವೇನೊ. ಎಲ್ಲವೂ ಬಾಯಿಪಾಠದ ಕಲಿಕೆ. ಹಸಿಗೋಡೆಯಲ್ಲಿ ಹರಳು ನೆಟ್ಟಂತೆ ಚಿಕ್ಕಂದಿನಲ್ಲೇ ಮಗ್ಗಿ-ಕೋಷ್ಟಕಗಳ, ಗಣಿತ ಸೂತ್ರಗಳ ಕಂಠಪಾಠದ ಅಭ್ಯಾಸ. ಅದರ ಒಳಿತು-ಕೆಡುಕುಗಳು ಏನೇ ಇರಲಿ ಆಗಿನ ಕಾಲದಲ್ಲಿ ಅದು ಅನಿವಾರ್ಯವೆಂಬ ವಿಷಯವೂ ಗಮನಾರ್ಹ. ಮಗ್ಗಿ-ಕೋಷ್ಟಕ, ಸೂತ್ರ-ಸ್ತೋತ್ರಗಳದೇ ಮಾತು ಅನ್ವಯವಾಗುತ್ತದೆ ವೇದಗಳಿಗೂ ಕೂಡ! ವೇದಗಳು ಭಗವಂತನ ಉಸಿರಿನಿಂದ ಉದ್ಭವವಾದುವು (“ಯಸ್ಯ ನಿಶ್ವಸಿತಂ ವೇದಾ:") ಎಂಬ ನಂಬಿಕೆಯಿದೆ. ಅದೇ ಕಾರಣಕ್ಕೆ ಋಷಿಮುನಿಗಳು ವೇದಗಳನ್ನು ಅವುಗಳ ಮೂಲ ಸ್ವರೂಪದಲ್ಲಿ, ಒಂದಿನಿತೂ ಬದಲಾವಣೆ ಇಲ್ಲದಂತೆ ಜತನವಾಗಿ ಇರಿಸುವಲ್ಲಿ ಬಹಳ ಎಚ್ಚರ ಮತ್ತು ಶ್ರಮ ವಹಿಸಿದ್ದಾರೆ. ಲಿಖಿತ ದಾಖಲೆಗಳಿಲ್ಲದೆ ಬಾಯಿಂದ ಬಾಯಿಗೆ ಮಾತ್ರ (ತಂದೆಯಿಂದ ಮಗನಿಗೆ ಅಥವಾ ಗುರುವಿನಿಂದ ಶಿಷ್ಯನಿಗೆ) ವರ್ಗಾವಣೆ ಹೊಂದುತ್ತ ಸಹಸ್ರಾರು ವರ್ಷಗಳ ಕಾಲದಿಂದಲೂ ವೇದಗಳು ಅಸ್ತಿತ್ವದಲ್ಲಿ ಇವೆಯೆಂದರೆ ಈ ಮೂಲಸ್ವರೂಪ ರಕ್ಷಣೆಯ ಮಹತ್ವ ಮತ್ತು ಅದರ ವಿಸ್ಮಯಕರವಾದ ತಂತ್ರ ನಿಜಕ್ಕೂ ಅದ್ಭುತವಾದುದು!




Thursday Sep 20, 2012
nanna baravaNige beLeda bage
Thursday Sep 20, 2012
Thursday Sep 20, 2012
ದಿನಾಂಕ 21 ಸೆಪ್ಟೆಂಬರ್ 2012
ನನ್ನ ಬರವಣಿಗೆ ಬೆಳೆದ ಬಗೆ
* ಶ್ರೀವತ್ಸ ಜೋಶಿ
[ಖ್ಯಾತ ಲೇಖಕ, ಪತ್ರಕರ್ತ, ನನ್ನ ಆತ್ಮೀಯ ಸ್ನೇಹಿತ ‘ಜೋಗಿ’ (ಗಿರೀಶ್ ಹತ್ವಾರ್) ಅವರ ಪುಸ್ತಕ "ಹಲಗೆ ಬಳಪ- ಹೊಸ ಬರಹಗಾರರಿಗೆ ಪಾಠಗಳು" ಪುಸ್ತಕಕ್ಕೆಂದು ಬರೆದ ವಿಶೇಷ ಲೇಖನ ] [ಲೇಖನದ ಕೊನೆಯಲ್ಲಿರುವ "Listen Now" ಮೇಲೆ ಕ್ಲಿಕ್ಕಿಸಿದರೆ ನೀವು ಇದನ್ನು ಧ್ವನಿಮಾಧ್ಯಮದಲ್ಲಿಯೂ ಆನಂದಿಸಬಹುದು!] * * * ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ’ ಎನ್ನುತ್ತಾನೆ ಎದೆತುಂಬಿ ಹಾಡುವ, ಸ್ವಲ್ಪ ಫಿಲಾಸಫಿಕಲ್ ರೀತಿಯಲ್ಲಿ ಚಿಂತಿಸುವ ಹಾಡುಗಾರ. ಅವನು ಕೇವಲ ತನ್ನ ಆತ್ಮಸಂತೋಷಕ್ಕೆಂದು ಹಾಡುವವನು. ಅದೇ ಧಾಟಿಯಲ್ಲಿ ಒಬ್ಬ ಬರಹಗಾರನೂ ಹೇಳಬಹುದು- ‘ಎಲ್ಲ ಓದಲಿ ಎಂದು ನಾನು ಬರೆಯುವುದಿಲ್ಲ, ಯಾರು ಓದದಿದ್ದರೂ ನನಗಿಲ್ಲ ಚಿಂತೆ...’ - ಅವನದೂ ಹೆಚ್ಚೂಕಡಿಮೆ ಫಿಲಾಸಫಿ ಕ್ಯಾಟಗರಿಯೇ. ‘ಯಾರಾದರೂ ಓದಲಿ ಎಂದು ನಾನು ಬರೆಯುವುದಿಲ್ಲ; ನನ್ನ ಸಂತೋಷಕ್ಕಷ್ಟೇ ಬರೆಯುತ್ತೇನೆ’ ಎಂದು ಪ್ರಪಂಚದ ಪ್ರತಿಯೊಬ್ಬ ಬರಹಗಾರನೂ ಹೇಳಿದ್ದೇ ಆದರೆ ಬರಹಗಳೆಲ್ಲ ಬರೀ ಪರ್ಸನಲ್ ಡೈರಿಗಳಷ್ಟೇ ಆಗಬೇಕಿತ್ತಲ್ಲವೇ? ಪುಣ್ಯಕ್ಕೆ ಹಾಗಿಲ್ಲ ಪರಿಸ್ಥಿತಿ. ಪರ್ಸನಲ್ ಡೈರಿ ಮಾತ್ರ ನಮ್ಮ ಸಂತೋಷಕ್ಕೆ, ನಮ್ಮೊಳಗಿನ ಸ್ವಗತದ ರೂಪದಲ್ಲಿ, ನಮಗೋಸ್ಕರವಷ್ಟೇ ಬರೆಯುವುದು. ಮಿಕ್ಕೆಲ್ಲ ಬರಹಗಳೂ ಯಾರಾದರೂ ಓದಲಿ ಎಂದೇ ಬರೆಯುವಂಥವು. ಅಂದಮೇಲೆ ಅದರಲ್ಲಿ ಮುಚ್ಚುಮರೆ ಏಕೆ? ನಾನೇನೂ ಮಹಾನ್ ಬರಹಗಾರ ಅಲ್ಲ. ಆದರೆ ಬರೆದದ್ದಷ್ಟನ್ನು ನಾನು ಬೇರೆಯವರು ಓದಲೆಂದೇ ಬರೆದಿದ್ದೇನೆ ಎಂದು ಎದೆತಟ್ಟಿ ಹೇಳಬಲ್ಲೆ! ನನ್ನ ಬರವಣಿಗೆ ಹೇಗೆ ಆರಂಭವಾಯಿತು, ಹೇಗೆ ಮುಂದುವರಿಯಿತು ಎಂದು ನಾನೀಗ ವಿವರಿಸುವವನಿದ್ದೇನಲ್ಲ, ಆಗ ಈ ಮಾತು ಪುಷ್ಟಿಗೊಳ್ಳುತ್ತ ಹೋಗುತ್ತದೆ. ನೀವೇ ನೋಡುವಿರಂತೆ. ಕಡೆಗೆ ಈ ಬರಹವನ್ನಾದರೂ ನೀವು ಓದಬೇಕಂತಲೇ ತಾನೆ ನಾನು ಬರೆಯುತ್ತಿರುವುದು? ದೊಡ್ಡ ಕುಟುಂಬದಲ್ಲಿ ಅತಿ ಕಿರಿಯವನಾಗಿ ಹುಟ್ಟಿ ಬೆಳೆದ ನಾನು, ಸುಮಾರಾಗಿ ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ನನ್ನ ಅಣ್ಣಂದಿರು ವಿದ್ಯಾಭ್ಯಾಸ ಅಥವಾ ವೃತ್ತಿಗಾಗಿ, ಮತ್ತು ಅಕ್ಕಂದಿರು ಮದುವೆಯಾಗಿ, ಪರವೂರಿನಲ್ಲಿದ್ದರು. ಅವರಿಗೆಲ್ಲ ತಿಂಗಳಿಗೊಮ್ಮೆ ಕ್ಷೇಮಸಮಾಚಾರದ ಪತ್ರ ಬರೆಯುವ ಕೆಲಸವನ್ನು ನಮ್ಮ ತಂದೆಯವರು ಹೆಚ್ಚಾಗಿ ನನ್ನ ಕೈಯಿಂದಲೇ ಮಾಡಿಸುತ್ತಿದ್ದರು. ಆ ಕಾಲದಲ್ಲಿ ಮೊಬೈಲ್ ಬಿಡಿ, ಲ್ಯಾಂಡ್ಲೈನ್ ಟೆಲಿಫೋನ್ ಸಹ ನಮ್ಮಲ್ಲಿರಲಿಲ್ಲ. ಪೋಸ್ಟ್ಕಾರ್ಡ್, ಇನ್ಲ್ಯಾಂಡ್ ಲೆಟರ್ ಮತ್ತು ಕವರ್ಗಳೇ ಸಂದೇಶವಾಹಕಗಳು. ಹಾಗಾಗಿ ಶಾಲಾದಿನಗಳಲ್ಲಿ ಪಠ್ಯೇತರವಾಗಿ ನಾನೇನಾದರೂ ಬರೆದದ್ದಿದ್ದರೆ ಆ ಪತ್ರಗಳು ಮಾತ್ರ. ಆದರೆ, ವಿಷಯ-ವಿಚಾರಗಳನ್ನು, ಸಮಾಚಾರ-ಸ್ವಾರಸ್ಯಗಳನ್ನು ಇನ್ನೊಬ್ಬರೊಡನೆ ಎದುರು ಕುಳಿತು ಮಾತನಾಡುತ್ತಿರುವಂತೆ ವಿನಿಮಯ ಮಾಡಿಕೊಳ್ಳುವ ಧಾಟಿ ನನ್ನ ಬರವಣಿಗೆಯಲ್ಲಿ ಕಾಣಿಸಿಕೊಂಡಿದೆಯಾದರೆ ಅದು ಆ ಪತ್ರವ್ಯವಹಾರದಿಂದಲೇ ಎಂದು ನಾನು ದೃಢವಾಗಿ ನಂಬಿದ್ದೇನೆ. ಮತ್ತು ಅದಕ್ಕಾಗಿ ನನ್ನ ದಿ.ತೀರ್ಥರೂಪರವರಿಗೆ ಎಂದೆಂದಿಗೂ ಋಣಿಯಾಗಿದ್ದೇನೆ.




Version: 20241125